ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ. ಹೋಗಿ ನೋಡೋಣವೆಂದರೆ ಈ ಹುಡುಗಿ ಯಾವ ದಾರಿಯಲ್ಲಿ ಬರುವಳೋ ಯಾರಿಗೆ ಗೊತ್ತು? ಇದೊಂದು ಪರಾಮಶಿಯ ಯಾಪಾರವಾಯಿತು ಎಂದುಕೊಳ್ಳುತ್ತ ಅಮ್ಮ ತನ್ನನ್ನೇ ಬೈದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ ದೂರದಲ್ಲಿ ಹೂವಿನ ರಾಶಿಯೊಂದು ನಡೆದುಬರುವುದು ಕಂಡಿತು. ನೀಲಿಯ ಅಮ್ಮನಿಗೆ ನಿರಾಳವಾಯಿತು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ನಾಲ್ಕನೆಯ ಕಂತಿನಲ್ಲಿ ನೀಲಿಯ ಓದುವ ಹುಚ್ಚಿನ ಕತೆ

ಹೊಳೆಸಾಲ ಬಾನಿನಲ್ಲಿ ಮಿಂಚಿನ ಸೆಳಕೊಂದು ಸುಳಿಯಿತೆಂದರೆ ಇಡಿಯ ಊರಿಗೆ ಚಲನೆಯೊಂದು ತನ್ನಷ್ಟಕ್ಕೆ ಬಂದುಬಿಡುತ್ತಿತ್ತು. ಅಲ್ಲೆಲ್ಲೋ ಅಡಗಿಕೊಂಡಿದ್ದ ಕಪ್ಪೆಗಳು ಎಚ್ಚರಗೊಂಡು ವಟರ್ ವಟರ್ ಎಂದು ವದರುತ್ತಿದ್ದವು. ಕಪ್ಪೆಯ ಕೂಗು ಕೇಳಿದ್ದೇ ಜನರೆಲ್ಲರೂ ಜಾಗೃತರಾಗಿ ಗಡಿಗಾಲದ ಕೆಲಸಕ್ಕೆ ಅನುವಾಗುತ್ತಿದ್ದರು. ಸುಡುವ ಬೇಸಿಗೆ ಕಳೆದು ಮಳೆಗಾಲ ಪ್ರಾರಂಭವಾಗುವ ನಡುವಿನ ಕಾಲಕ್ಕೆ ಅವರು ಗಡಿಗಾಲವೆಂದು ಕರೆಯುತ್ತಿದ್ದರು. ಈ ಕಾಲದಲ್ಲಿಯೇ ಅನಿರೀಕ್ಷಿತವಾಗಿ ಸುರಿಯುವ ಕಳ್ಳ ಮಳೆಯೊಂದು ಬೇಸಿಗೆಯ ಬಿಸಿಲಿಗೆ ಸಾಣಿಗೆಯಂತೆ ತೂತಾದ ಮುಳಿಹುಲ್ಲಿನ ಮಾಡಿನಿಂದ ಒಸರಿ, ಮನೆಯೊಳಗೆ ಬಂದು ಎಲ್ಲವನ್ನೂ ತೋಯಿಸಿ ತನ್ನ ಪರಾಕ್ರಮದ ಮುನ್ಸೂಚನೆಯನ್ನು ನೀಡುತ್ತಿತ್ತು. ಇನ್ನು ಸುಮ್ಮನೆ ಕುಳಿತರೆ ಸಾಧ್ಯವಿಲ್ಲವೆಂದು ತುಸು ಉದಾಸೀನದ ಗಂಡುಸಂಕುಲವೂ ಸೊಂಟಕ್ಕೆ ಟುವಾಲು ಬಿಗಿದು ಗಡಿಗಾಲದ ಕೆಲಸಕ್ಕೆ ಅಣಿಯಾಗುತ್ತಿತ್ತು.

ಮೊದಲು ಮನೆಯ ಮಾಡಿಗೆ ಹೊದಿಕೆಯಾಗಬೇಕು. ಅದೇನೂ ಸುಲಭದ ಕೆಲಸವಲ್ಲ. ಮಾಡಿನ ಮೇಲೆ ನಾಲ್ಕಾರು ಜನ ಹತ್ತಿ ಕಳೆದ ವರ್ಷ ಹೊದೆಸಿದ ಹುಲ್ಲನ್ನೋ, ಸೋಗೆಯನ್ನೋ ತೆಗೆಯಬೇಕು. ಅದನ್ನು ಏಣಿಯ ಮೂಲಕ ಕೆಳಗಿಳಿಸಿ ರಾಶಿ ಹಾಕಬೇಕು. ಅದು ತೋಟಕ್ಕೆ ಈ ವರ್ಷದ ಗೊಬ್ಬರವಾದೀತು. ಮತ್ತೆ ನಿಧಾನವಾಗಿ ಮಾಡಿಗೆ ಹುಲ್ಲಿನ ಅಥವಾ ಸೋಗೆಯ ಹೊದಿಕೆ ಮಾಡಲು ಪ್ರಾರಂಭಿಸಬೇಕು. ಇವೆಲ್ಲವೂ ಗಂಡಸರು ಮಾಡುವ ಕೆಲಸವಾದರೆ ಹೆಂಗಸರಿಗೆ ಮನೆಹೊದಿಕೆಯೆಂದರೆ ಚಳಿಜ್ವರ. ಮನೆಯೊಳಗಿರುವ ಸಕಲ ವಸ್ತುಗಳನ್ನೂ ಬೆಳಕು ಹರಿಯುವ ಮೊದಲೇ ಹೊರಗೆ ಸಾಗಿಸಬೇಕು. ಮನೆಯವರಿಗೆ, ಬರುವವರಿಗೆ ತಿಂಡಿಯ ವ್ಯವಸ್ಥೆಯಾಗಬೇಕು. ಮಾಡಿನ ಮೇಲೆ ಗಂಡಸರು ಹತ್ತುವ ಮೊದಲೇ ಇಡಿಯ ದಿನದ ಅಡುಗೆ ಕೆಲಸ ಮುಗಿಯಬೇಕು. ಮಳೆಗಾಲಕ್ಕೆಂದು ಉಪ್ಪಿಗೆ ಹಾಕಿದ ಮಾವಿನ ಮಿಡಿಯ ಭರಣಿಯಿಂದ ಹಿಡಿದು ಅಕ್ಕಿ, ಬೇಳೆ, ಸಕ್ಕರೆ, ಚಾಪುಡಿಯ ಡಬ್ಬವನ್ನು ಒಳಗೊಂಡು ಬಟ್ಟೆ ತುಂಬಿದ ಟ್ರಂಕಿನವರೆಗೆ ಎಲ್ಲವನ್ನೂ ಹೊರಗೆ ಸಾಗಿಸಿ, ಅಂಗಳದಲ್ಲಿ ಜೋಡಿಸುವುದೆಂದರೆ ಅದೇನು ಸಾಮಾನ್ಯ ಕೆಲಸವೆ? ಮನೆಯ ಹೊದಿಕೆ ಮುಗಿದೊಡನೆ ಮನೆತುಂಬ ತುಂಬಿರುವ ಕಸವನ್ನು ಹೊಡೆದು, ಮತ್ತೆಲ್ಲ ಅಣಿಗೊಳಿಸಬೇಕು. ಹೊಳೆಸಾಲ ಊರಿನ ಪ್ರತಿ ಹೆಂಗಸರೂ ಮನೆಹೊದಿಕೆಯ ದಿನ, “ಓ ದೇವರೇ, ನಮ್ಮ ಮನೆಗೊಂದು ಹಂಚಿನ ಹೊದಿಕೆಯಾಗುವಂತೆ ಮಾಡಪ್ಪ” ಎಂದು ಅಲವತ್ತುಕೊಳ್ಳುತ್ತಿದ್ದರು. ಮನೆಯ ಮೇಲೇರಿ ಸೋಗೆಯನ್ನೋ, ಹುಲ್ಲನ್ನೋ ಜೋಡಿಸಿ ಒಂದಿನಿತು ನೀರು ಒಳಸೋರದಂತೆ ಹೊದಿಕೆ ಮಾಡುವ ಗಂಡಸರು ಮೈಕೈ ನೋವನ್ನು ಹೋಗಿಸಲಿಕ್ಕೆಂದು ಒಂಚೂರು ಪರಮಾತ್ಮನನ್ನು ತಮ್ಮೊಳಗೆ ತುಂಬಿಸಿಕೊಂಡು, ಹೊಳೆಯಲ್ಲಿ ಮುಳುಗಿ ಸ್ನಾನದ ಶಾಸ್ತ್ರ ಮುಗಿಸಿ ಮನೆಯವರು ನೀಡುವ ಔತಣಕ್ಕಾಗಿ ಕಾಯುತ್ತಿದ್ದರು. ಬೆಳಗಿನಿಂದ ಮಾಡಿದ ಘನಂದಾರಿ ಕೆಲಸಕ್ಕೆ ಪಾಯಸದೂಟವೋ, ಕೋಳಿಯಾಸೆಯೋ ಆಗಲೇಬೇಕು.

ಮನೆಹೊದಿಕೆಯೆಂದರೆ ಅತ್ಯಂತ ಖುಶಿಪಡುವ ಜೀವಗಳೆಂದರೆ ಮಕ್ಕಳು. ಆ ದಿನ ಇಡಿಯ ಕೇರಿಯ ಮಕ್ಕಳಿಗೆಲ್ಲ ಶಾಲೆಗೆ ಅಘೋಷಿತ ರಜೆ. ಬೆಳ್ಳಂಬೆಳಿಗ್ಗೆಯೇ ಮನೆಯ ಸಾಮಾನು ಹೊರಗಿಡಲು ಪರದಾಡುವ ಮಹಿಳೆಯರ ಕೈಗೆ ಈ ಮಕ್ಕಳ ತೋಳುಗಳು ಬೆಸೆದುಕೊಳ್ಳುವವು. ‘ಸಿದ್ದೆಯಂತಹ ಮಕ್ಕಳಿದ್ದರೆ ಎದ್ದೆದ್ದು ಗೆಯ್ತಾರೆ’ ಎಂಬ ತಾಯಂದಿರ ಹೊಗಳಿಕೆಗೆ ಉಬ್ಬುತ್ತ, ಜಾರುವ ಚಡ್ಡಿಯನ್ನು, ಸ್ಕರ್ಟನ್ನು ಮೇಲಕ್ಕೆ ಏರಿಸಿಕೊಳ್ಳುತ್ತ ಎರಡೂ ಕೈಯ್ಯಲ್ಲಿ ಡಬ್ಬ ಹಿಡಿದು ದಡಬಡನೆ ಓಡುವುದೇನು? ಡಬ್ಬದ ಮುಚ್ಚಳದ ಮೇಲೆ ತಬಲಾ ಬಾರಿಸುವುದೇನು? ತಾಸಿಗೊಮ್ಮೆ ಮನೆಯ ಮಾಡಿನ ಮೇಲೆ ನಿಂತವರಿಗೆ ಕುಡಿಯಲು ಉದ್ದಿನ ಪಾನಕ, ಅವಲಕ್ಕಿ ಪಾನಕ ನೀಡಲು ಏಣಿಯೇರಿ ಹೋಗುವುದೇನು? ಮಧ್ಯಾಹ್ನದ ಹೊತ್ತಿಗೆ ಹೊಟ್ಟೆ ಹಸಿದಾಗ ಅಲ್ಲಿಯೇ ಇದ್ದ ಸಕ್ಕರೆ ಡಬ್ಬಕ್ಕೆ, ಕಾಳಿನ ಬಾಟಲಿಗೆ, ಉಪ್ಪಿನಕಾಯಿಯ ಭರಣಿಗೆ ದೊಡ್ಡವರ ಕಣ್ತಪ್ಪಿಸಿ ಕೈಹಾಕಿ ಕಬಳಿಸುವುದೇನು? ಒಟ್ಟಿನಲ್ಲಿ ಅವರಿಗೆ ಆ ದಿನ ಹೆಸರಿಲ್ಲದ ಹಬ್ಬ. ನೀಲಿ ಪ್ರತಿ ವರ್ಷವೂ ಗಡಿಗಾಲ ಬಂತೆಂದರೆ ಅಮ್ಮನಲ್ಲಿ ಯಾವಾಗ ಮನೆಹೊದಿಕೆ ಎಂದು ವಿಚಾರಿಸುತ್ತಿದ್ದುದು ಇದೇ ಕಾರಣಕ್ಕೆ.

ಮನೆಹೊದಿಕೆಯಾಗಿ ಉಸಿರು ತೆಗೆಯುವ ಮೊದಲೇ ದನಗಳ ಕೊಟ್ಟಿಗೆಗೆ ಹೊದಿಕೆಯಾಗಬೇಕು. ನಾವು ಮಾತ್ರ ಬೆಚ್ಚಗಿದ್ದು ಮೂಕಪ್ರಾಣಿಗಳನ್ನು ಮಳೆಯಲ್ಲಿ ತೋಯಿಸಲಾದೀತೆ? ಅದು ಮುಗಿಯಿತೆಂದರೆ ಬಚ್ಚಲು ಮನೆಗೆ ಹೊದಿಕೆಯಾಗಬೇಕು. ಬಚ್ಚಲು ಮನೆಯೆಂದರೆ ಅದು ಮಳೆಗಾಲದ ಕಟ್ಟಿಗೆ ಸಂಗ್ರಹದ ಗೋಡಾನವೂ ಹೌದು, ಮಳೆಗಾಲದಲ್ಲಿ ಬಟ್ಟೆಯೊಣಗಿಸುವ ವೆಟ್ ರೂಮ್ ಕೂಡಾ ಹೌದು. ಹಾಗಾಗಿ ಅದೂ ಒಂದು ಚಿಕ್ಕ ಮನೆಯೆ. ಎಲ್ಲ ಮುಗಿದರೆ ಮಳೆಗಾಲಕ್ಕೆಂದು ಕಟ್ಟಿಗೆ ಸಂಗ್ರಹಿಸುವ ಸಂಭ್ರಮ. ಕಾಡಿನಲ್ಲಿ ತಾನೇ ತಾನಾಗಿ ಒಣಗಿದ ಮರವೊಂದನ್ನು ಕೊಡಲಿಯಿಂದ ಕಡಿದು ತುಂಡಾಗಿಸಬೇಕು. ರೆಂಬೆ, ಕೊಂಬೆಗಳನ್ನೆಲ್ಲ ಸವರಿ ಪುಟ್ಟ, ಪುಟ್ಟ ಹೊರೆ ಮಾಡಿ ಮಕ್ಕಳ ತಲೆಯ ಮೇಲಿಡಬೇಕು. ದೊಡ್ಡ ತುಂಡುಗಳನ್ನು ದೊಡ್ಡವರು ಹೊತ್ತು ಮನೆಸೇರಿಸಬೇಕು. ಪೂರ್ತಿ ಒಣಗಿದ ಮೇಲೆ ಕೊಡಲಿಯಿಂದ ಸೀಳಿ ಸಪೂರ ಚಕ್ಕೆಗಳನ್ನಾಗಿಸಬೇಕು. ಕೊಡಲಿಗೂ ಬಗ್ಗದವುಗಳನ್ನು ಬಚ್ಚಲೊಲೆಗೆಂದು ತೆಗೆದಿಡಬೇಕು. ಇವೆಲ್ಲ ಗಂಡಸರು, ಹೆಂಗಸರು ಕೂಡಿ ಮಾಡುವ ಕೆಲಸವಾದರೆ ಮನೆಯೊಳಗೆ ಹೆಂಗಸರಿಗೇ ಮೀಸಲಾದ ಹತ್ತಾರು ಕೆಲಸಗಳು ಕಾದು ಕುಳಿತಿರುತ್ತಿದ್ದವು.

ಸುರಿವ ಮಳೆಯಲ್ಲಿ ಚಪ್ಪೆಯಾಡುವ ಬಾಯಿಗಳನ್ನು ಚುರುಕಾಗಿಸಲು ತರಾವರಿ ಹಪ್ಪಳ, ಸಂಡಿಗೆಗಳ ದಾಸ್ತಾನು ಮಾಡಬೇಕು. ಮೀನು ಮಾರಲು ಬರುವ ಬಾಯೆಯಲ್ಲಿ ಏನಾದರೂ ಚೌಕಾಸಿ ಮಾಡಿ ಕೊನೆಯಲ್ಲಿ ಉಳಿಯುವ ಮೀನುಗಳನ್ನೆಲ್ಲ ಸಗಟಾಗಿ ಕೊಂಡು ಒಣಜಬ್ಬು ಮಾಡಿಟ್ಟುಕೊಳ್ಳಬೇಕು. ಹಲಸಿನ ಬೇಳೆಯನ್ನೂ ಬಿಡದೇ ಒಣಗಿಸಿ, ಬೂದಿಯಲ್ಲಿ ಹುಗಿದಿಟ್ಟು ಜೋಪಾನ ಮಾಡಬೇಕು. ಕರಚಲ ಕಾಯಿ, ವಾಟೆಹುಳಿ, ಬಿಂಬುಳಿ, ಹುಣಸೆಹಣ್ಣುಗಳನ್ನೆಲ್ಲ ಬಿಸಿಲಿಗೆ ಬಾಡಿಸಿ ತುಂಬಿಡಬೇಕು. ಮಾವಿನ ಮಿಡಿ, ಮಾವಿನ ಕಾಯಿಗಳನ್ನು ಉಪ್ಪುನೀರಲ್ಲಿ ಶೇಖರಿಸಬೇಕು. ಮಳೆಗಾಲಕ್ಕಾಗುವಷ್ಟು ಅಕ್ಕಿ, ದಿನಸಿಗಳನ್ನು ದಾಸ್ತಾನು ಮಾಡಬೇಕು. ಉರಿಯದೇ ಹೊಗೆಯಾಡುವ ಕಟ್ಟಿಗೆಯನ್ನು ಬೆಳಗಿಸಲು ಮಡಲಿನ ಪಿಂಡಿಯನ್ನು ತಂದಿಟ್ಟುಕೊಳ್ಳಬೇಕು. ಅಂತೂ ಗಡಿಗಾಲವೆಂದರೆ ಮಾಡಿದಷ್ಟೂ ಮುಗಿಯದ ಕೆಲಸಗಳು.

ಈ ಕಾಲದಲ್ಲಿಯೇ ಅನಿರೀಕ್ಷಿತವಾಗಿ ಸುರಿಯುವ ಕಳ್ಳ ಮಳೆಯೊಂದು ಬೇಸಿಗೆಯ ಬಿಸಿಲಿಗೆ ಸಾಣಿಗೆಯಂತೆ ತೂತಾದ ಮುಳಿಹುಲ್ಲಿನ ಮಾಡಿನಿಂದ ಒಸರಿ, ಮನೆಯೊಳಗೆ ಬಂದು ಎಲ್ಲವನ್ನೂ ತೋಯಿಸಿ ತನ್ನ ಪರಾಕ್ರಮದ ಮುನ್ಸೂಚನೆಯನ್ನು ನೀಡುತ್ತಿತ್ತು. ಇನ್ನು ಸುಮ್ಮನೆ ಕುಳಿತರೆ ಸಾಧ್ಯವಿಲ್ಲವೆಂದು ತುಸು ಉದಾಸೀನದ ಗಂಡುಸಂಕುಲವೂ ಸೊಂಟಕ್ಕೆ ಟುವಾಲು ಬಿಗಿದು ಗಡಿಗಾಲದ ಕೆಲಸಕ್ಕೆ ಅಣಿಯಾಗುತ್ತಿತ್ತು.

ಧೋ ಎಂದು ಸುರಿವ ಮುಂಗಾರು ಮಳೆ ಮೊದಮೊದಲು ಹೊಳೆಸಾಲಿನವರಿಗೆ ಕಣ್ಣಿಗೆ ಹಬ್ಬ. ಮರಗಿಡಗಳೆಲ್ಲ ಚಿಗುರಿ ಹಸಿರುಟ್ಟ ಭೂಮಿ ನಳನಳಿಸುವಾಗ ಮನಸ್ಸೂ ತಂಪಾಗುವುದು. ಮಳೆಗಾಲದ ಬಗೆಬಗೆಯ ತಿಂಡಿಗಳ ಸಾಲು ಮೈಮನಗಳನ್ನು ಬೆಚ್ಚಗಿಡುವುದು. ವಾರವೊಂದಾಗುವುದರೊಳಗೆ ತುಂಬಿ ಹರಿಯುವ ಹೊಳೆ ಯೌವ್ವನವುಕ್ಕಿದ ಹೆಣ್ಣಿನಂತೆ ಕೆಂಪಗೆ ಹೊಳೆಯತೊಡಗುವುದು. ಹೊಳೆಯಾಚೆಗಿನ ಊರು ವಿದೇಶವಾಗಿ, ಈಚೆಗೆ ನೋಡಿದರೆ ಬರಿಯ ಬೆಟ್ಟಗಳೇ ಕಂಡು ಕಣ್ರೆಪ್ಪೆಗಳಿಗೆ ಆಯಾಸವಾಗುವುದು. ಇಡೀ ದಿನ ಸುರಿವ ಮಳೆಯ ನೀರು ಅಂಗಳದಲ್ಲಿ ಸೃಷ್ಟಿಸುವ ನೀರಗುಳ್ಳೆಗಳು ಒಡೆಯುವುದನ್ನೇ ನೋಡುತ್ತ ಕುಳಿತುಕೊಳ್ಳುವ ನೀಲಿ ಶಾಲೆಯ ನೆನಪಾಗಿ ದುಗುಡಗೊಳ್ಳುವಳು. ಶಾಲೆಗೆ ಹೋಗಬೇಕೆಂದರೆ ಹೊಳೆ ದಾಟಬೇಕು. ಹೊಳೆದಾಟಬೇಕೆಂದರೆ ನೀರಿಳಿಯಬೇಕು. ದಿನವೂ ಊರಿಗೆ ಬಂದ ನೆಗಸು ಇಳಿದುಹೋಗಲೆಂದು ಕಾಯುವುದು ಅದೆಷ್ಟು ಕಷ್ಟ! ಶಾಲೆಯ ನೆನಪು ಮುತ್ತಿ ನೀಲಿ ಮನೆಯೆದುರಿನ ಗುಡ್ಡವೇರುವಳು. ಅಲ್ಲಿಂದ ಹೊಳೆಯಾಚೆಗೆ ದೂರದ ದಿಬ್ಬದಲ್ಲಿ ಕಾಣುವ ಶಾಲೆಯನ್ನೇ ದಿಟ್ಟಿಸುವಳು. ಅಲ್ಲಿ ಶಾಲೆಯ ಅಂಗಳದಲ್ಲಿ ಓಡಾಡುವ ಮಕ್ಕಳು ಚಿಕ್ಕ ಚುಕ್ಕೆಗಳಂತೆ ಕಾಣುವರು. ಮಳೆಯಲ್ಲಿ ಬಣ್ಣಬಣ್ಣದ ಕೊಪ್ಪೆಯನ್ನು ಸೂಡಿಕೊಂಡು ಬರುವವರು ಚಲಿಸುವ ಹೂಗಳಂತೆ ಕಾಣುವರು. ಕಪ್ಪು ಕೊಡೆಯನ್ನು ಒಂದು ಕೈಯ್ಯಲ್ಲಿ ಹಿಡಿದು, ಇನ್ನೊಂದು ಕೈಯ್ಯಲ್ಲಿ ಮಕ್ಕಳಿಗೆ ಕೊಡುವ ಉಪ್ಪಿಟ್ಟಿನ ಕೊಟ್ಟೆಗಳ ಚೀಲವನ್ನು ಹೊತ್ತು ಬರುವ ಮಾಸ್ತರರನ್ನು ಕಂಡಾಗ ನೀಲಿಯ ಕಣ್ಣಿನಲ್ಲಿ ನೀರೂರುವುದು. ಗೌಡಮಾಸ್ತ್ರು ಈಗ ಗೋವಿನ ಹಾಡಿನ ಪಾಠವನ್ನು ಮುಗಿಸಿಬಿಟ್ಟಿರಬಹುದೆ? ಎಂದು ಯೋಚಿಸುವಳು. ಸುತ್ತ ಅರಳಿರುವ ಹೂಗಳ ಮೇಲಾಡುವ ಚಿಟ್ಟೆಗಳನ್ನು ನೋಡುತ್ತಾ ಅಂದುಕೊಳ್ಳುವಳು ನನಗೂ ರೆಕ್ಕೆಯಿರಬಾರದಿತ್ತೆ? ಅಂದು ಸಂಜೆ ಹೊತ್ತು ಕಳೆಯಲೆಂದು ಅಪ್ಪ ಕೇಳಿದ ಒಗಟಿಗೆ ಉತ್ತರವಾಗಿ ತಾನು ಕಂಡುದನ್ನೇ ಹೇಳಿದ್ದಳು. ‘ಕಣ್ಣಿಗೆ ಕಾಣುವುದು, ಕೈಗೆ ಸಿಗದು’ ಯಾವುದು ಹೇಳು ಕಾಂಬ ಎಂದಾಗ ನನ್ನ ಶಾಲೆ ಎಂದು ಹೇಳಿ ಮೌನವಾಗಿದ್ದಳು. ದೈನಂದಿನ ಜೀವನದ ಜಂಜಡಗಳಲ್ಲಿ ಮುಳುಗಿರುವ ದೊಡ್ಡವರ ಲೋಕಕ್ಕೆ ಅವಳ ದುಗುಡ ಕಾಣುತ್ತಲೇ ಇರಲಿಲ್ಲ.

ಹೊಳೆಸಾಲಿನ ಹೊಳೆ ಊರಿನಿಂದ ಮೇಲೆ ಹೋದಂತೆ ಅಗಲವಾಗುತ್ತ ಹೋಗುವುದು. ಹೊಳೆದಾಟಬೇಕಾದ ಅನಿವಾರ್ಯವಿರುವವರೆಲ್ಲ ಕಾಡಿನ ದಾರಿ ಹಿಡಿದು ಮೇಲಕ್ಕೆ ಹೋಗಿ ಹೊಳೆ ದಾಟುವುದು ವಾಡಿಕೆ. ತವರಿಗೆ ಬಂದ ನಾಗಿ ಇನ್ನಿಲ್ಲಿಂದ ಹೊರಡದಿದ್ದರೆ ತನ್ನ ಗಂಡ ಮನೆಯಿಂದ ಹೊರಗೇ ಹಾಕಿಬಿಡುವ ಎಂಬ ಹೆದರಿಕೆಯಲ್ಲಿ ಸುರಿವ ಮಳೆಯಲ್ಲಿಯೇ ಹೊಳೆದಾಟಿ ಮನೆಸೇರಲು ಹೊರಟವಳು ಹೊರಡುವ ಮುನ್ನ ನೀಲಿಯ ಅಮ್ಮನಿಗೊಂದು ವಿದಾಯ ಹೇಳಲು ಬಂದಿದ್ದಳು. ನೀಲಿ ಅವಳೊಂದಿಗೆ ಹೊಳೆದಾಟಿ ತಾನೂ ಶಾಲೆಗೆ ಹೋಗುವೆನೆಂದು ಅಮ್ಮನಿಗೆ ದುಂಬಾಲು ಬಿದ್ದಳು. ಹೋಗುವುದೇನೋ ಸರಾಗ, ಬರುವಾಗ ಹೇಗೆ? ಎಂಬುದು ಅಮ್ಮನ ಚಿಂತೆ. ಕೊನೆಗೆ ಮಗುವಿನ ಆಸೆಗೆ ಸೋತ ನಾಗಿಯೇ ಅಮ್ಮನಿಗೆ ಸಮಾಧಾನ ಹೇಳಿದಳು, “ಅಲ್ಲೀಗ ಮಕ್ಕಿಗೆದ್ದೆ ನೆಟ್ಟಿ ನಡೀತದೀರಾ. ಒಬ್ರಲ್ಲ ಒಬ್ರು ಹೊಳೆದಂಡೆಯ ಮೇಲೆ ಇದ್ದೇ ಇರ್ತಾರೆ. ಈ ಶಣ್ಣ ಮಗೂನ ದಾಟಿಸದೇ ಇರೂರಾ? ಕಳ್ಸಿ ನನ್ನ ಜತೆ” ಎಂದಳು. ನೀಲಿ ತನಗೆರಡು ರೆಕ್ಕೆ ಬಂದಂತೆ ಕುಣಿಯುತ್ತಾ, ತನ್ನ ಬಗಲಿಗೆ ಗಾಳದ ನೂಲಿನ ಚೀಲವನ್ನು ಇಳಿಬಿಟ್ಟು, ಅಪ್ಪ ತಂದ ಹೂವು, ಹೂವಿನ ಕೊಪ್ಪೆಯನ್ನು ಹೊದ್ದುಕೊಂಡು ನಾಗಿಯೊಂದಿಗೆ ಶಾಲೆಗೆ ಹೊರಟೇಬಿಟ್ಟಳು.

ಆ ದಿನವೂ ಮಳೆಗೆ ಇನಿತೂ ಬಿಡುವಿಲ್ಲ. ಸಂಜೆಯಾಗುತ್ತಲೇ ರಾತ್ರಿಯಿಳಿದಂತ ಕತ್ತಲು. ನೀಲಿಯ ಅಮ್ಮ ಅಂಗಳಕ್ಕೆ ಇಣುಕಿ ಕ್ಷಣಕ್ಷಣವೂ ನೀಲಿ ಬಂದಳೆ? ಎಂದು ನಿರುಕಿಸುತ್ತಾಳೆ. ಈ ಹುಡುಗಿಗೆ ಯಾಕಿಷ್ಟು ಶಾಲೆಯ ಹುಚ್ಚೋ ಎಂದು ಮನದಲ್ಲಿಯೇ ಶಪಿಸುತ್ತಾಳೆ. ಹೊಳೆಯಂತೂ ಹುಚ್ಚುಹಿಡಿದು ಹರಿಯುತ್ತಿದೆ. ಹೋಗಿ ನೋಡೋಣವೆಂದರೆ ಈ ಹುಡುಗಿ ಯಾವ ದಾರಿಯಲ್ಲಿ ಬರುವಳೋ ಯಾರಿಗೆ ಗೊತ್ತು? ಇದೊಂದು ಪರಾಮಶಿಯ ಯಾಪಾರವಾಯಿತು ಎಂದುಕೊಳ್ಳುತ್ತ ಅಮ್ಮ ತನ್ನನ್ನೇ ಬೈದುಕೊಳ್ಳುತ್ತಿದ್ದಳು. ಅಷ್ಟೊತ್ತಿಗೆ ದೂರದಲ್ಲಿ ಹೂವಿನ ರಾಶಿಯೊಂದು ನಡೆದುಬರುವುದು ಕಂಡಿತು. ನೀಲಿಯ ಅಮ್ಮನಿಗೆ ನಿರಾಳವಾಯಿತು. ನೀಲಿ ಮನೆಯೊಳಗೆ ಬಂದವಳೇ ಅಮ್ಮನನ್ನು ಅಪ್ಪಿ ಗೋಳೋ ಎಂದು ಅಳತೊಡಗಿದಳು. ಕೂಸು ಮಳೆಯಲ್ಲೆಲ್ಲೋ ಹೆದರಿರಬೇಕೆಂದು ತಬ್ಬಿ, ತಲೆಯೊರೆಸಿ ಸಮಾಧಾನ ಮಾಡಿದರೂ ಅಳು ನಿಲ್ಲಲೊಲ್ಲದು. ಏನಾಯಿತೆಂದು ವಿಚಾರಿಸಿದರೆ ಖಾಲಿಯಾದ ತನ್ನ ಪಾಟಿಚೀಲ ತೋರಿಸಿದಳು. ಹೊಳೆದಾಟುವ ಭರದಲ್ಲಿ ಚೀಲ ಕೈಜಾರಿ ಬಿದ್ದು ಪುಸ್ತಕಗಳೆಲ್ಲವೂ ಹೊಳೆಯ ಪಾಲಾಗಿದ್ದವು. ಚೀಲ ಹಿಡಿಯಲೆಂದು ಓಡಿ ಇವಳೂ ಜಾರಿ ಬೀಳದ್ದಕ್ಕೆ ಅಮ್ಮನಿಗೆ ಖುಶಿಯಾಗಿ ನೀಲಿಯನ್ನೆತ್ತಿ ಮುತ್ತಿಟ್ಟಳು. “ನನ್ನ ಪುಸ್ತಕ, ನಂಗೆ ಇಡೀ ವರ್ಷ ಓದಲು ಇಲ್ಲ. ಹೊಸದು ಸಿಗುವುದಿಲ್ಲ” ನೀಲಿಯ ಅಳುರಾಗ ಮುಂದುವರೆದಿತ್ತು. ನೀಲಿಯನ್ನು ಒಲೆಯ ಮುಂದೆ ಬೆಚ್ಚಗೆ ಕೂರಿಸಿಕೊಂಡು ಹಪ್ಪಳವನ್ನು ಸುಡುತ್ತಾ ಅಮ್ಮ ನೀಲಿಗೆ ಸಮಾಧಾನ ಹೇಳಿದಳು.

“ಪುಸ್ತಕ ಹೋದರೆ ಏನಾಯ್ತು? ತಿಂಗಳೋ, ಎರಡು ತಿಂಗಳೋ ಕಳೆದು ಅಪ್ಪ ದೂರದ ಪೇಟೆಗೆ ಹೋದಾಗ ಮತ್ತೆ ತರಿಸಿದರಾಯಿತು. ನನ್ನ ಬಂಗಾರಿ ನೀನೆಲ್ಲಾದರೂ ನೀರಿನಲ್ಲಿ ಮುಳುಗಿದ್ರೆ ಎಲ್ಲಿಂದ ತರಬಹುದಿತ್ತು?” ನೀಲಿಗೆ ತುಸುವೂ ಸಮಾಧಾನವಾಗಲಿಲ್ಲ. “ಮತ್ತೀಗ ಓದಲು ಏನು ಮಾಡುವುದು? ಮಾಸ್ತರದ್ರು ಪ್ರಶ್ನೆ ಉತ್ತರ ಬರೆಯಲು ಕೊಟ್ಟರೆ ಹೇಗೆ ಬರೆಯೋದು?” ನೀಲಿಯ ಪ್ರಶ್ನೆಗೆ ಉತ್ತರವಾಗಿ ಅಮ್ಮ ಕಥೆಯನ್ನು ಹೇಳಿದಳು. “ನೋಡು ನೀಲಿ, ನಿಂಗೆ ಆಮೆ ಮತ್ತು ಮೊಲದ ಕಥೆ ಗೊತ್ತಲ್ವಾ? ಅದನ್ನು ನಾ ನಿಂಗೆ ಹಿಂದಿಯಲ್ಲಿ ಹೇಳ್ತೇನೆ. ಏಕ ಸರೋವರ್ ಮೇ ಏಕ ಕಚವಾ ರಹತಾ ಥಾ. ಉಸೀ ಸರೋವರ್ ಕೆ ಪಾಸ್ ಏಕ್ ಖರಗೋಶ್ ಭೀ ರಹತೆ ಥೇ” ಹೀಗೆ ಪ್ರಾರಂಭಿಸಿ ಇಡಿಯ ಕಥೆಯನ್ನು ಹಿಂದಿಯಲ್ಲಿ ಹೇಳಿದಾಗ ಆ ಭಾಷೆ ತಿಳಿಯದ ನೀಲಿ ಅಮ್ಮನ ಬಾಯನ್ನೇ ನೋಡುತ್ತ ಕುಳಿತಿದ್ದಳು. “ಇಷ್ಟೆಲ್ಲ ನೀನು ಎಲ್ಲಿ ಕಲಿತದ್ದು? ಇವೆಲ್ಲ ನಿನಗೆ ಹೇಗೆ ನೆನಪಿವೆ?” ಅಮ್ಮ ನೀಲಿಯನ್ನು ತನ್ನ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾ ಹೇಳಿದಳು, “ನಾನು ಕಲಿಯೋದರಲ್ಲಿ ಯಾವಾಗಲೂ ಚುರುಕಿದ್ದೆ. ಆದರೆ ನಮ್ಮನೆಯಲ್ಲಿ ಪುಸ್ತಕ ತೆಗೆಸಿಕೊಡಲು ಹಣವೇ ಇರಲಿಲ್ಲ. ಅದಕ್ಕಾಗಿ ನಾನು ಶಾಲೆಯಲ್ಲಿ ಮಾಸ್ತರರು ಪಾಠ ಮಾಡುವಾಗ ಗಮನವಿಟ್ಟು ಕೇಳ್ತಿದ್ದೆ. ಗೆಳತಿಯರ ಪುಸ್ತಕವನ್ನು ತಿಂಗಳಿಗೊಂದು ದಿನ ತಂದು ಎಲ್ಲ ಪಾಠಗಳನ್ನು ಬಾಯಿಪಾಠ ಮಾಡಿಬಿಡ್ತಿದ್ದೆ. ಅದಕ್ಕೇ ನನಗೆ ಇಂದಿಗೂ ಎಲ್ಲ ಪಾಠಗಳು ಬಾಯಲ್ಲೇ ಇವೆ. ಈಗ ಹೇಳಿದೆ ನೋಡು ಕಚುವಾ ಮತ್ತು ಖರಗೋಶ್ ಕಥೆ. ಅದನ್ನೂ ಹೀಗೆನೇ ಕಲಿತಿದ್ದೆ. ಮನಸ್ಸಿದ್ರೆ ಯಾವುದೂ ಅಸಾಧ್ಯವಲ್ಲ. ಪುಸ್ತಕ ಇಲ್ಲ ಅಂತ ಯಾರಾದ್ರೂ ಅಳ್ತಾರಾ? ತಲೆ ಇದ್ಯಲ್ಲಾ ನಮ್ಮ ಪುಟ್ಟೀದು” ಎಂದು ತಲೆಯ ಮೇಲೊಂದು ಮೊಟಕಿದಳು.

ನೀಲಿ ಅಮ್ಮನ ಮಡಿಲಿನಲ್ಲಿ ಬೆಚ್ಚಗೆ ಹಾಯೆಂದು ಮಲಗಿ ಬಿಸಿ, ಬಿಸಿ ಹಪ್ಪಳ ತಿನ್ನತೊಡಗಿದಳು. ಅಮ್ಮನ ಕಥೆಯ ಆಮೆ ನೀಲಿಯೊಳಗೆ ಮೆಲ್ಲಮೆಲ್ಲನೆ ಸರಿಯತೊಡಗಿತು. ಹುಚ್ಚುಗಟ್ಟಿದ ಹೊಳೆ ಇದ್ಯಾವುದರ ಪರಿವೆಯಿಲ್ಲದೇ ಇಡಿಯ ಊರನ್ನೇ ಆವರಿಸಿಕೊಂಡು ಹರಿಯತೊಡಗಿತ್ತು. ಕೆಂಪಾದವೋ ಎಲ್ಲ ಕೆಂಪಾದವೋ……