ಯಾರು ಬಡವರು?

ಒಳಗೊಳಗೆ ಅನ್ನಿಸುತ್ತದೆ
ಸ್ವಾಮಿ ಬಡವರೆಂದರೆ ಯಾರು?
ಹಣವಿಲ್ಲದವರು
ಗುಣವಿಲ್ಲದವರು
ಅನೂಚಾನವಾಗಿ ಬದುಕನ್ನು
ಹೊಲಿಯುತ್ತ ಬಂದವರು
ಯಾರು ಬಡವರು?

ಬೆವರಿನ ಘಮಲಿನಲಿ
ಭಟ್ಟಿ ಇಳಿಸಿದ ಕಮಾಯಿಯನು
ಹರಿದ ಕಿಸೆಯೊಳಗೆ ತುಂಬುತ್ತ
ತೇಪೆಗಾಗಿ ಸೂಜಿದಾರ ಹುಡುಕುವವರು
ಸಿಟ್ಟನ್ನು ದವಡೆಗೆ ಸೀಮಿತಗೊಳಿಸಿದ
ನಿಶ್ಶಸ್ತ್ರ ಯೋಧರು

ಗಂಜಿ‌ ಅಂಬಲಿಯೊಳಗೂ ಮುಗುಳು ನಕ್ಕವರು
ಮುಗಿಲ ನೋಡಿ ಭವಿಷ್ಯ ಹೇಳುವವರು
ಉಳ್ಳವರ ಮನೆಯ ಸೈಜುಗಲ್ಲುಗಳಿಗೆ
ಶ್ರಮದ ಮಾಲು ಸವರಿ
ನಿತ್ಯ ದೇವರ ಮೊರೆ ಬೇಡುವ ವಿಹಂಗಮರು
ಇರುಳ ಹೆರಳಲಿ ಶಯನಗೈಯುವ
ಸುಖದವರು

ದೇಹದ ಮೇಲೆ ಎದೆಯ ಗೂಡಿನ ಚಿತ್ರವುಳ್ಳವರು
ಹೆಪ್ಪು ಮೊಸರನು ಹಂಚಿ ತುಪ್ಪ ತಿಂದವರು
ಹೆಗಲು ಕೊಟ್ಟು ಹೆಗಲಾದವರು
ಎಲ್ಲದಕೂ ಮಿಗಿಲಾದವರು..

ಹೀಗೀರುವಾಗ
ಯಾರು ಬಡವರು?
ಇಲ್ಲದೆಯೂ ಎಲ್ಲವನು ಉಳ್ಳವರೇ?
ಉಳ್ಳವರಾಗಿ ಇಲ್ಲದವರೇ?

ಸಚಿನ್‌ಕುಮಾರ ಬ. ಹಿರೇಮಠ ಬಾಗಲಕೋಟೆ ಜಿಲ್ಲೆಯ ರನ್ನ ಮುಧೋಳದವರು.
ಸದ್ಯ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕವಿತೆ, ಕತೆ ಹಾಗೂ ಬಿಡಿಬರಹಗಳ ಲೇಖನಗಳ ಬರೆಹದ ಜೊತೆಗೆ ಓದು ಇವರ ಆಸಕ್ತಿ ಕ್ಷೇತ್ರ.