ಒಣ ನೆಲ್ಲಿಕಾಯಿ ಗಿಡ

ಮೈತುಂಬ ಹಣ್ಣು ತೊಟ್ಟು
ನಳನಳಿಸುತ್ತಿದ್ದ ಗಿಡ
ಪ್ರತಿ ವರ್ಷವೂ ಎರಡು ಸಲ

ಎಲೆ ಉದುರಿ
ಮೈಯಲ್ಲಾ ಕರ್ರಗಾಗಿ
ಒರಟು ಬರೀ ಬೋಳಾದ
ಟೊಂಗೆಗಳು ಕಾಣಿಸಿ
ಭೂಮಿಯೂ ಆಶ್ಚರ್ಯಪಟ್ಟಿತ್ತು
ಅಕ್ಕಪಕ್ಕದ ಗಿಡಗಳೂ

ಮತ್ತೆ ಚಿಗುರಬಹುದೆಂದು
ಗಾಳಿ ಮಾತಾಡಿತ್ತು ಭೂಮಿಯೊಂದಿಗೆ

ತೊಗಟೆಯ ಮೇಲ್ಮೈ
ಉದುರಿ, ಟೊಂಗೆಗಳು
ಕಟ್ ಕಡಲ್ ಎಂದು ಬಿದ್ದು
ಸೂಚಿಸಲಿಲ್ಲ ಮತ್ತೆ
ಚಿಗುರುವ ಸಂದೇಶ

ಮನೆ ಮಾಲೀಕ
ಕಾಯ್ದು, ಬೇಸರಿಸಿ,
ಕಡಿಸಿದ ಒಣಗಿದ
ಗಿಡ, ಮತ್ತೊಂದನ್ನು
ಹಚ್ಚಲು

ಅನುಭವಿಸಿ, ತೃಪ್ತಿ
ಹೊಂದಿದ ನಂತರ
ಜಾಗ ಖಾಲಿ
ಮಾಡುತ್ತಲಿರಬೇಕು
ಹೊಸದಕ್ಕಾಗಿ ಚಿಗುರಲು