ನನಗಿಂತ ಎಷ್ಟೋ ವರ್ಷಗಳು ಕಿರಿಯನಾಗಿದ್ದರೂ ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿಂದ ಮಾತಾಡುತ್ತಿದ್ದ. ಒಳ್ಳೆಯ ಹೃದಯದವನೂ ಹೌದು. ಅವನ ಹೆಂಡತಿ ನಮ್ಮ ಹುಬ್ಬಳ್ಳಿಯವಳು.. ಹೀಗೆ ಗುಂಡಿನ ಹೊರತಾದ ಹಲವಾರು ಅಂಶಗಳೂ ನಮ್ಮನ್ನು ಬೆಸೆದಿದ್ದವು. ಚಾ ಕುಡಿಯೋಣ ಬಾ ಗುರಣ್ಣ ಅಂತ ಕರೆದರೆ ಟಕ್ ಅಂತ ಅವರ ಮನೆಗೆ ಹೋಗಿಬಿಡುತ್ತಿದ್ದೆವು. ಇಲ್ಲವೇ ಅವರು ನಮ್ಮ ಮನೆಗೆ ಬಂದುಬಿಡುತ್ತಿದ್ದರು. ಅಷ್ಟು ಆತ್ಮೀಯತೆ ನಮ್ಮಿಬ್ಬರ ಕುಟುಂಬದ ಮಧ್ಯ ಬೆಳೆದಿತ್ತು. ಚಾ ಕುಡಿಯುತ್ತಾ, ಎಷ್ಟೋ ಜನುಮಗಳ ಸ್ನೇಹಿತರೇನೋ ಎಂಬಂತೆ ಹರಟೆ ಹೊಡೆಯುತ್ತಾ ಸಂಜೆ ಆಗಿಬಿಡುತ್ತಿತ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಹತ್ತನೆಯ ಬರಹ

ಅಮೆರಿಕೆಯಲ್ಲಿ ಗುಂಡು ತೀರಾ ಸುಲಭದಲ್ಲಿ ದೊರೆಯುತ್ತದೆ. ಮೊದಲನೆಯದು ಹೊಟ್ಟೆಗೆ ಸೇರಿಸಿಕೊಳ್ಳುವ ಗುಂಡು! ಕುಡುಕರಿಗೆ ಅಲ್ಲಿ ಸ್ವರ್ಗ. ಯಾವುದೇ departmental store ಗೆ ಹೋದರೂ ಕೂಡ ತರತರಹದ ಎಣ್ಣೆ ಬಾಟಲಿಗಳು ಅಲ್ಲಿ ದೊರಕುತ್ತವೆ. ಸ್ನೇಹಿತರ ಭೇಟಿಗೆ ಹೋದಾಗ ಅವರ ಮನೆಯಲ್ಲಿ ಒಂದಿಷ್ಟು ಚಂದದ, ಕೈ ಬಿಸಿ ಆಹ್ವಾನಿಸುವ ಬಾಟಲಿಗಳು ಇದ್ದೆ ಇರುತ್ತಿದ್ದವು. ಅಥವಾ ನನಗೆ ಪರಿಚಯವಾದ ಕೆಲವರ ಮನೆಯಲ್ಲಿ ಇದ್ದವೇನೋ. Tell me who your friends are; I will tell you what you are ಅನ್ನೋ ಹಾಗೆ. ಹಾಗಂತ ನನ್ನ ಮಿತ್ರರು ಎಲ್ಲಾ ತರದವರೂ ಇದ್ದರು. ಆದರೆ ಹೆಚ್ಚಿನ ಬಾಂಧವ್ಯ, ಸಲುಗೆ “ಗುಂಡು ಗೆಳೆಯರ” ಜೊತೆಗೆ ಇತ್ತೇನೋ!

ಗುಂಡಿನ ಮಹಿಮೆಯೆ ಅಂಥದ್ದು. ಅದೂ ಅಲ್ಲದೆ ಅಲ್ಲಿನ ಚಳಿ ವಾತಾವರಣ ನನಗೊಂದು ಅದ್ಭುತ ನೆಪವಾಗಿತ್ತು. ಅಲ್ಲಿದ್ದ ಗೆಳೆಯರಲ್ಲೇ ಚಂದ್ರುನನ್ನು ಬಿಟ್ಟರೆ ಗಜನಿ ಜೊತೆಗೆ ನನ್ನ ಸಲುಗೆ ಹೆಚ್ಚು ಇತ್ತು. ಅವನೂ ಸಾಹಿತ್ಯಾಸಕ್ತ ಆಗಿದ್ದ. ನನಗಿಂತ ಎಷ್ಟೋ ವರ್ಷಗಳು ಕಿರಿಯನಾಗಿದ್ದರೂ ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆಯಿಂದ ಮಾತಾಡುತ್ತಿದ್ದ. ಒಳ್ಳೆಯ ಹೃದಯದವನೂ ಹೌದು. ಅವನ ಹೆಂಡತಿ ನಮ್ಮ ಹುಬ್ಬಳ್ಳಿಯವಳು.. ಹೀಗೆ ಗುಂಡಿನ ಹೊರತಾದ ಹಲವಾರು ಅಂಶಗಳೂ ನಮ್ಮನ್ನು ಬೆಸೆದಿದ್ದವು. ಚಾ ಕುಡಿಯೋಣ ಬಾ ಗುರಣ್ಣ ಅಂತ ಕರೆದರೆ ಟಕ್ ಅಂತ ಅವರ ಮನೆಗೆ ಹೋಗಿಬಿಡುತ್ತಿದ್ದೆವು. ಇಲ್ಲವೇ ಅವರು ನಮ್ಮ ಮನೆಗೆ ಬಂದುಬಿಡುತ್ತಿದ್ದರು. ಅಷ್ಟು ಆತ್ಮೀಯತೆ ನಮ್ಮಿಬ್ಬರ ಕುಟುಂಬದ ಮಧ್ಯ ಬೆಳೆದಿತ್ತು. ಚಾ ಕುಡಿಯುತ್ತಾ, ಎಷ್ಟೋ ಜನುಮಗಳ ಸ್ನೇಹಿತರೇನೋ ಎಂಬಂತೆ ಹರಟೆ ಹೊಡೆಯುತ್ತಾ ಸಂಜೆ ಆಗಿಬಿಡುತ್ತಿತ್ತು.

“ಏನ್ ತೊಗೋತೀ ಗುರಣ್ಣ?” ಅಂತ ಕಣ್ಣು ಮೀಟುಕಿಸುತ್ತಾ ಕೇಳುತ್ತಿದ್ದ ಗಜನಿ. ಎದುರಿನ cupboard ಮೇಲೆ ಒಪ್ಪವಾಗಿ ಜೋಡಿಸಿ ಇಟ್ಟಿರುತ್ತಿದ್ದ single malt ವ್ಹಿಸ್ಕಿ ಬಾಟಲಿಗಳು ಕೈ ಬೀಸಿ ಕರೆಯುತ್ತಿದ್ದವು. ಅಲ್ಲಿಗೆ ಹೋದ ಮೊದಮೊದಲು ಆಶಾ ಅದಕ್ಕೆಲ್ಲ ಆಸ್ಪದ ಕೊಡುತ್ತಿರಲಿಲ್ಲ. “No ಅಂದರೆ No!” ಅಂತ ಹೇಳಿಬಿಟ್ಟಿದ್ದಳು. ಕ್ರಮೇಣ ಅಲ್ಲಿನ ಗೆಳೆಯರ ಜೊತೆಗೆ ಬಾಂಧವ್ಯ ಬೆಳೆದಂತೆ ಸ್ವಲ್ಪ ಸ್ವಲ್ಪ ಅಂತ ಒಂದೆರಡು, ಮೂರು ಪೆಗ್ ಕುಡಿಯುವವರೆಗೆ ಹಂತ ಹಂತವಾಗಿ ಕಠಿಣ ಸಾಧನೆ ಮಾಡಿ ಅವಳನ್ನು ಒಪ್ಪಿಸಿದ್ದೆ! ಅವಳು ಹಾಗೆ ನನಗೆ ಅನುಮತಿಸಲು ಇನ್ನೊಂದು ಕಾರಣ ಏನಿತ್ತು ಅಂದರೆ, ರಾತ್ರಿ ವಾಪಸ್ಸು ನಮ್ಮ ಮನೆಗೆ ಹೋಗುವಾಗ ತಾನೇ ಕಾರ್ ಓಡಿಸಿಕೊಂಡು ಹೋಗುತ್ತಿದ್ದಳು. ಅವಳಿಗೆ ಲರ್ನಿಂಗ್ license ಇತ್ತು. ಅಂದರೆ license ಇರುವ ಒಬ್ಬರು ಪಕ್ಕಕ್ಕೆ ಕೂತರೆ ಅವಳು ಕಾರ್ ಓಡಿಸಬಹುದಿತ್ತು. ಡ್ರೈವರ್ ಪಕ್ಕಕ್ಕೆ ಕೂತವನು ಕುಡಿದಿರಬಾರದು ಎಂಬ ನಿಯಮ ಇರಲಿಲ್ಲವಲ್ಲ! ಹೀಗಾಗಿ ನನಗೆ ಗುಂಡು ಹೊಡೆಯುವ ಅವಕಾಶ ಸಿಕ್ಕಾಗಲೆಲ್ಲ ಅವಳಿಗೆ ಕಾರ್ ಓಡಿಸುವ ಅವಕಾಶ ಸಿಗುತ್ತಿತ್ತು! ಅಲ್ಲಿನ ರಸ್ತೆಗಳಲ್ಲಿ ಹೀಗೆ ಕಾರ್ ಓಡಿಸಿ ರೂಡಿಯಾದ ಮೇಲೆ ಅವಳಿಗೆ ಒಳ್ಳೆಯ ಬ್ಯಾಲೆನ್ಸ್ ಕರಗತ ಆಯ್ತು.

ಎಣ್ಣೆ ಸೇವನೆ ಸಿಕ್ಕಾಪಟ್ಟೆ ಅಲ್ಲದಿದ್ದರೂ ಆಗಾಗ ನಡೆದೇ ಇರುತ್ತಿತ್ತು. ನಾವೇನು ವಾಂತಿ ಮಾಡುವಷ್ಟು ಕುಡಿಯುತ್ತಿರಲಿಲ್ಲ ಬಿಡಿ. ಆದರೆ ಆಗ ನಡೆಯುವ ನಮ್ಮ get-to-gather ಗಳಲ್ಲಿ ಕುಡಿಯುವುದರ ಜೊತೆಗೆ ತಿನ್ನುವುದು ಸ್ವಲ್ಪ ಜಾಸ್ತಿ ಆಯ್ತು. ಅದೂ ಬೇರೆ ಅಲ್ಲಿ processed food ಗಳ ಹಾವಳಿ ಜಾಸ್ತಿ. ಅದೆಲ್ಲದರ ಕಾರಣವೋ ಏನೋ ನನ್ನ ದೇಹ ಗಣನೀಯವಾಗಿ ದಪ್ಪವಾಗತೊಡಗಿತು. ನನ್ನ ಹಲವು ಹೊಟ್ಟೆ ಗಳಿಸಿದ್ದ ಸ್ನೇಹಿತರೆಲ್ಲ ಅಸೂಯೆ ಪಡುವಂತಿದ್ದ ನನಗೂ ಹೊಟ್ಟೆ ಹೊರಗೆ ಇಣುಕಿ ಕಣ್ಣು ಮಿಟುಕಿಸತೊಡಗಿತು.

ಅಲ್ಲಿ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕಿತ್ತು. ಅಲ್ಲಿನ ಆಸ್ಪತ್ರೆ/ ವೈದ್ಯಕೀಯ ಸೇವೆಗಳು ತುಂಬಾ ದುಬಾರಿ. ಎಲ್ಲದಕ್ಕೂ ಅಲ್ಲಿ ವಿಮೆ ಮಾಡಿಸಲೇಬೇಕು. ಆರೋಗ್ಯಕ್ಕೆ, ಮನೆಗೆ, ವಾಹನಗಳಿಗೆ, ಪೀಠೋಪಕರಣಗಳಿಗೆ ಇತ್ಯಾದಿ.. ಇಲ್ಲಿಯೂ ಮಾಡಿಸುತ್ತೇವೆಯಾದರೂ ಅಲ್ಲಿ ಅದಿಲ್ಲದಿದ್ದರೆ ನಡೆಯೋದೆ ಇಲ್ಲ. ಇಲ್ಲಿ ಯಾವುದೋ ಒಂದು ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷದಿ ಅಂಗಡಿಗೆ ಹೋಗಿ ನಮಗೆ ಬೇಕಾದ್ದನ್ನು ತೆಗೆದುಕೊಳ್ಳಬಹುದು. ಆದರೆ ಅಲ್ಲಿ ಡಾಕ್ಟರ್ prescription ಬೇಕೆ ಬೇಕು. ಆ prescription ಗೂ ಕೂಡ ಒಂದು validity ಇರುತ್ತದೆ. ಅದಾದ ಮೇಲೆ ಮತ್ತೆ ಡಾಕ್ಟರ್ ಹತ್ತಿರ ಹೋಗಲೇಬೇಕು!

ನಮ್ಮ ಅದೃಷ್ಟಕ್ಕೆ ಅಲ್ಲಿ ಇರುವವರೆಗೂ ಯಾವುದೇ ತರಹದ ಗಂಭೀರ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡಲಿಲ್ಲ. ಚಳಿಗಾಲದ ಪ್ರಾರಂಭದ ದಿನಗಳಲ್ಲಿ ಒಂದು ದಿನ ಬೆಳಿಗ್ಗೆ ಎದ್ದ ಕೂಡಲೇ ದಬಕ್ಕಂತ ಹಾಸಿಗೆ ಮೇಲೆ ಬಿದ್ದುಬಿಟ್ಟೆ! ತಲೆ ತಿರುಗಿ ಹಾಗೆ ಆಯ್ತು. ನನಗೆ ಸ್ವಲ್ಪ ಕಳವಳ ಆಯ್ತು. ಇದು ಖಂಡಿತ ಹೃದಯಕ್ಕೆ ಸಂಬಂಧ ಪಟ್ಟಿದ್ದೆ ಇರಬೇಕು ಅಂತ ಕೂಡ ಅನಿಸಿ ಇನ್ನೂ ದಿಗಿಲಾಯಿತು. ಅಲ್ಲೇ ಮನೆಯ ಹತ್ತಿರದಲ್ಲೇ ಇದ್ದ ಒಂದು ಡಾಕ್ಟರ್ ಬಳಿ ಹೋದೆ. ಅವರು ಭಾರತೀಯ ಮೂಲದ ಅಗರವಾಲ ಎಂಬುವವರು. ದೇಸಿ ಡಾಕ್ಟರ್ ಅಂತ ಒಂದು ಸಮಾಧಾನ ಇತ್ತು.

ಅಲ್ಲಿ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕಿತ್ತು. ಅಲ್ಲಿನ ಆಸ್ಪತ್ರೆ/ ವೈದ್ಯಕೀಯ ಸೇವೆಗಳು ತುಂಬಾ ದುಬಾರಿ. ಎಲ್ಲದಕ್ಕೂ ಅಲ್ಲಿ ವಿಮೆ ಮಾಡಿಸಲೇಬೇಕು. ಆರೋಗ್ಯಕ್ಕೆ, ಮನೆಗೆ, ವಾಹನಗಳಿಗೆ, ಪೀಠೋಪಕರಣಗಳಿಗೆ ಇತ್ಯಾದಿ.. ಇಲ್ಲಿಯೂ ಮಾಡಿಸುತ್ತೇವೆಯಾದರೂ ಅಲ್ಲಿ ಅದಿಲ್ಲದಿದ್ದರೆ ನಡೆಯೋದೆ ಇಲ್ಲ.

ಅಲ್ಲಿನ ದವಾಖಾನೆಯಲ್ಲಿ ಡಾಕ್ಟರ್ ನಮ್ಮವನು ಅಲ್ಲಿನ ಕೆಲಸಗಾರರು ಅಲ್ಲಿಯವರು. ಅದು ಒಂಥರಾ ನೋಡೋಕೆ ಮಜವಾಗಿತ್ತು. ಹೋದ ಕೂಡಲೇ ನನ್ನ ದೇಹದ ಉಷ್ಣಾಂಶ, BP ಎಲ್ಲವನ್ನೂ ನೋಟ್ ಮಾಡಿಕೊಂಡ ಮೇಲೆ, ಡಾಕ್ಟರ್ ಬಂದು ನನ್ನ ಸಮಸ್ಯೆ ಏನು ಅಂತ ಕೇಳಿದರು. ನಾನು ಬೆಳಿಗ್ಗೆ ಎದ್ದು – ಬಿದ್ದ ವಿಷಯ ತಿಳಿಸಿದೆ. ನನ್ನ ಮುಖದಲ್ಲಿ ಅವ್ಯಕ್ತ ಭಯ ಇದ್ದುದನ್ನು ಗಮನಿಸಿದ ಡಾಕ್ಟರ್,
“ಏ ಅದಕ್ಕೆಲ್ಲ ತಲೆ ಕೆಡಿಸಿಕೋಬೇಡ, ಇಲ್ಲಿನ ಹವಾಗುಣಕ್ಕೆ ನೀನು ಇನ್ನೂ ಒಗ್ಗಿಕೊಂಡಿಲ್ಲ. ಹೀಗಾಗಿ ಹಾಗೆ ಆಗಿದೆ. ಅದೇನು ಹೃದಯಕ್ಕೆ ಸಂಬಂಧಿಸಿದ್ದು ಅಲ್ಲ” ಅಂತ ಹೇಳಿ ಧೈರ್ಯ ತುಂಬಿದರು. ಅರೆ ಎಷ್ಟೊಂದು ಹೆದರಿಬಿಟ್ಟೆನಲ್ಲ ಅಂತ ನನಗೆ ನಾಚಿಕೆ ಆಯ್ತು. ಆದರೂ ಅಲಕ್ಷ್ಯ ಮಾಡೋಕೆ ಆಗುತ್ತೆಯೇ?

ಅವರು ಮುಂದುವರಿದು, “ಆದರೂ ಒಂದು ಸಲ ರಕ್ತ ಪರೀಕ್ಷೆ ಮಾಡಿಸಿಬಿಡು. ಅದು ನಿನ್ನ insurance ನಲ್ಲಿ ಉಚಿತವಾಗಿ ಕವರ್ ಆಗುತ್ತೆ” ಅಂದರು. ಆಯ್ತು ಅಂತ ರಕ್ತ ಕೊಟ್ಟು ಬಂದೆ.

ಮರುದಿನ ನನ್ನ ರಕ್ತ ಪರೀಕ್ಷೆಯ ಫಲಿತಾಂಶ ಬಂದಿದೆ ಅಂತ ಡಾಕ್ಟರ್ ಕಡೆಯಿಂದ ಫೋನ್ ಬಂತು. ಮತ್ತೆ ಹೋದೆ. ನನ್ನ ಒಂದು parameter ತುಂಬಾ ಜಾಸ್ತಿ ಆಗಿತ್ತು. ಅದು ಕೊಲೆಷ್ಟರಾಲ್. ಮೂರು ತಿಂಗಳು ಗುಳಿಗೆ ನುಂಗಬೇಕು ಅಂತ ಹೇಳಿದರು. ಬಹುಶಃ ನನ್ನ ಆಹಾರ, ಪಾನೀಯಗಳ ದೆಸೆಯಿಂದಲೇ ಅದು ಹೆಚ್ಚಾಗಿರಬೇಕು ಅಂತ ಅನಿಸಿತು. ನನಗೆ ಗುಳಿಗೆ ತೆಗೆದುಕೊಳ್ಳುವುದು ಬೇಡವಾಗಿತ್ತು. ಒಂದು ಸಲ ಅದು ಶುರುವಾದರೆ ಒಂದರ ಹಿಂದೆ ಇನ್ನೊಂದು ಸಮಸ್ಯೆಗಳು ಶುರುವಾಗುತ್ತವೆ ಅಂದುಕೊಂಡು, “ಡಾಕ್ಟರ್, ನನಗೆ ಗುಳಿಗೆ ಬೇಡ, ಇನ್ನು ಮುಂದೆ ದಿನಾಲೂ exercise ಮಾಡ್ತೀನಿ, ಜಿಮ್‌ಗೆ ಹೋಗ್ತೀನಿ. ಹಾಗೆಯೇ natural ಆಗಿ ಅದನ್ನ ಕಡಿಮೆ ಮಾಡಿಕೋತಿನಿ” ಅಂತೆಲ್ಲ ಬಡಬಡಿಸಿದೆ. ಅವರಿಗೆ ಕೋಪ ಬಂತು.

“ನೀನೇನು ದೇಸಿಗಳ ತರಹ ಮಾತಾಡುತ್ತೀಯಾ? ಹಾಗೆಲ್ಲಾ ಇಗ್ನೋರ್ ಮಾಡಬಾರದು. ಗುಳಿಗೆ ತೆಗೆದುಕೊಳ್ಳಲೆಬೇಕು.” ಅಂತ ಹೇಳುತ್ತಾ, ದೇಸಿಗಳು ಅಂದರೆ ಗಮಾರರು ಹಾಗೂ ಎಷ್ಟೋ ವರ್ಷಗಳಿಂದ ಅಲ್ಲಿ ಇದ್ದ ತಾನು ಭಾರತೀಯನಾದರೂ “ದೇಸೀ” ಅಲ್ಲ ಎಂಬುದನ್ನು ನೇರವಾಗಿಯೇ ಹೇಳಿದ! ಒಟ್ಟಿನಲ್ಲಿ ಅಲ್ಲಿನ medicine ಗೆ ಮೊದಲ ಬಾರಿಗೆ ಅನಿವಾರ್ಯವಾಗಿ ನನ್ನನ್ನು ನಾನೇ ಒಡ್ಡಿಕೊಂಡೆ.

ಅಲ್ಲಿ procedure ಪ್ರಕಾರ ಎಲ್ಲವೂ ನಡೆಯಲೇ ಬೇಕು. ಹೀಗೆ ಆಗಿದೆ ಅಂದರೆ ಇಂಥದ್ದೇ ಔಷಧಿ ಎಂಬ ತುಂಬಾ strict ನಿಯಮಗಳು. ಅದು ಡಾಕ್ಟರ್‌ಗಳ ತಪ್ಪು ಅಂತಲೂ ಹೇಳಲು ಆಗದು. ಏನಾದರೂ ಹೆಚ್ಚು ಕಡಿಮೆ ಆದರೆ ಅವರ ಮೇಲೆಯೇ ಕೇಸ್ ಹಾಕಿ ಬಿಡುತ್ತಾರಂತೆ. ಅದಕ್ಕೆ ವೈದ್ಯರಿಗೆ ಅಷ್ಟೊಂದು ಹೆದರಿಕೆ ಅಲ್ಲಿ. ಆದರೆ ನಮ್ಮಲ್ಲಿ ಡಾಕ್ಟರ್ ಅನ್ನು ಕಂಡರೆ ರೋಗಿಗಳಿಗೆ ಹೆದರಿಕೆ!

ಡಾಕ್ಟರ್ ಒಂದು prescription print ಮಾಡಿ ಕೊಟ್ಟರು. ಅದರಲ್ಲಿ ಮೂರು ತಿಂಗಳಿಗೆ ಅಂತ ಒಂದು ಔಷಧಿ ಬರೆದಿದ್ದರು. ಮೂರು ತಿಂಗಳ validity ದಿನಾಂಕ ಕೂಡ ಅದರ ಮೇಲೆ ಮುದ್ರಿತವಾಗಿತ್ತು. ಅಲ್ಲಿನ ಔಷಧಾಲಯ ಮಳಿಗೆ ಒಂದಕ್ಕೆ ಹೋಗಿ ಔಷಧಿಯನ್ನು ಖರೀದಿಸಿದೆ. Insurance ಇದ್ದ ಕಾರಣ, ಒಂದು ತಿಂಗಳಿನ ಡಬ್ಬಿಗೆ 20 ಡಾಲರ್ ಆಯ್ತು. ಅದರ ಮೂಲ ಬೆಲೆ 200 ಡಾಲರ್! ಅಂದರೆ ನನ್ನ ಬಳಿ insurance ಇಲ್ಲ ಅಂದರೆ 200 ಡಾಲರ್ ನಂತೆ 3 ತಿಂಗಳು ಕೊಡಬೇಕಿತ್ತು. ಅದು 600 ಡಾಲರ್ ಅಥವಾ 42000 ರೂಪಾಯಿ. Insurance – medicine ಗಳ ಈ ವಿಷವರ್ತುಲ ಅಲ್ಲಿನ ಒಂದು ದೊಡ್ಡ ಮಾಫಿಯಾ ಅಂತ ಅನಿಸಿತು. ಆಗಿನ್ನೂ ಭಾರತ ಸರ್ಕಾರದ ಜನಔಷಧಿ ಎಂಬ generic medicine ಭಾರತದಲ್ಲಿ ಆಗಿನ್ನೂ ಬಂದಿರಲಿಲ್ಲ. ಅದು ಬಂದ ಮೇಲಂತೂ ನಮ್ಮ ದೇಶದಲ್ಲಿ ಔಷಧಿ ಮತ್ತಷ್ಟು ಸೋವಿ ಆಗಿದೆ. ನಮ್ಮ ದೇಶದ ಬಗ್ಗೆ ಮತ್ತಷ್ಟು ಹೆಮ್ಮೆ ಮೂಡಬೇಕು ಅಂತಾದರೆ ಹೀಗೆ ಅಮೆರಿಕೆಯಲ್ಲಿ ಒಂದು ಸಲ ಔಷಧಿ ತೆಗೆದುಕೊಳ್ಳಬೇಕು!

ಆದರೆ ಅಲ್ಲಿ ಇನ್ನೊಂದು ವಸ್ತು ಎಲ್ಲಕ್ಕಿಂತ ಚೀಪ್ ಆಗಿ ಹಾಗೂ ಸುಲಭವಾಗಿ ದೊರಕುತ್ತದೆ. ಅದು ಪಿಸ್ತೂಲು ಹಾಗೂ ಅದಕ್ಕೆ ಹಾಕುವ ಗುಂಡು. ಅದಕ್ಕೂ ಒಂದಿಷ್ಟು ಲೈಸೆನ್ಸ್ ಬೇಕಿತ್ತಾದರೂ ಬಂದೂಕನ್ನು ಹೊಂದುವುದು ಅವರ ಸಾಂವಿಧಾನಿಕ ಹಕ್ಕು. ಅಲ್ಲಿನ ಜನಸಂಖೆಯ ಮೂರನೆಯ ಒಂದು ಭಾಗದಷ್ಟು ಜನರ ಬಳಿ ಬಂದೂಕು ಇದೆಯಂತೆ. ತಮ್ಮ ಆತ್ಮರಕ್ಷಣೆಗೆ ಯಾರ ಮೇಲಾದರೂ ಗುಂಡು ಹಾರಿಸಬಹುದಂತೆ. ಅಲ್ಲೊಬ್ಬರು ನನ್ನ ಸಹೋದ್ಯೋಗಿ ಇದ್ದರು. ಅವರ ಹೆಸರು ಸೂಸನ್ ಅಂತ. ಅವರು ಅಲ್ಲೇ ಹತ್ತಿರದಲ್ಲಿದ್ದ ಆಯೋವಾ ಎಂಬ ರಾಜ್ಯದ ಹಳ್ಳಿಯಿಂದ ಬರುತ್ತಿದ್ದರು. ಅವರ ಹಳ್ಳಿಯನ್ನು ನೋಡಲು ನಾನು ಬರಬಹುದೆ ಅಂತ ಕೇಳಿದೆ. ಅವಳು ಸ್ವಲ್ಪ ಹೊತ್ತು ವಿಚಾರ ಮಾಡಿ, ಬರಬಹುದು ಆದರೆ ತಲೆಗೆ ಟರ್ಬನ್ ಹಾಕಿಕೊಂಡು ಮಾತ್ರ ಬರಬೇಡ. ನಿನಗೆ ಗುಂಡು ಹೊಡೆದುಬಿಡುತ್ತಾರೆ ಅಂತ ಜೋರಾಗಿ ನಕ್ಕಳು. ಅಮೆರಿಕನ್ನರು ತುಂಬಾ ಸಂಶಯ ಪಿಶಾಚಿಗಳು. ಟರ್ಬನ್ ಹಾಕಿದವರೆಲ್ಲ ಲಾಡೆನ್‌ಗಳು ಅಂತಲೇ ತಿಳಿಯುತ್ತಾರೋ ಏನೋ! ಅವರ ಸಹವಾಸವೆ ಬೇಡ ಅಂತ ಅಲ್ಲಿಗೆ ಹೋಗಲೆ ಇಲ್ಲ. ಮುಂದೆಯೂ ಕೂಡ ಆಗಾಗ ಅಲ್ಲಲ್ಲಿ ಶೂಟೌಟ್ ಆಯ್ತು; ಎಷ್ಟೋ ಜನರು ಸತ್ತರು ಅಂತೆಲ್ಲ ಸುದ್ದಿ ಕೇಳುತ್ತಿದ್ದೆವು. ಇಂತಹ ಸುದ್ದಿಗಳನ್ನು ಕೇಳಿದಾಗಲೆಲ್ಲ ನನಗೆ ವಾಪಸ್ಸು ನಮ್ಮ ದೇಶಕ್ಕೆ ಹೋಗಬೇಕು ಅನಿಸುತ್ತಿತ್ತು. ಹಾಗಂತ ನಮ್ಮ ದೇಶದಲ್ಲಿ ಕೂಡ ಕ್ಷುಲ್ಲಕ ಕಾರಣಗಳಿಗೆ ಕೊಲೆಗಳು ಆಗುತ್ತವೆ ಎಂಬದೂ ಕೂಡ ಅಷ್ಟೇ ನಿಜ. ಆದರೂ ಬೇರೊಂದು ದೇಶದಲ್ಲಿನ ಕೊಲೆಗಳೆ ನಮ್ಮನ್ನ ಹೆಚ್ಚು ಬೆಚ್ಚಿ ಬೀಳಿಸುತ್ತವೆ ಅಲ್ಲವೇ? ಅದೂ ಅಲ್ಲದೆ ಬೇರೊಂದು ದೇಶದಲ್ಲಿ ಹೀಗೇನಾದರೂ ಆಗಿ ಅನಾಥವಾಗಿ ಸತ್ತು ಹೋದರೆ ಅಂತ ಭಯವಾಗುತ್ತಿತ್ತು…

(ಮುಂದುವರಿಯುವುದು..)
(ಹಿಂದಿನ ಕಂತು: ವಿದೇಶಗಳಲ್ಲಿ ಸ್ವದೇಶಿ ಭಾವಸಂಚಾರ)