ಪಿತೃಪ್ರಧಾನ ವ್ಯವಸ್ಥೆಯ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತಲೇ ಅದಕ್ಕೆ ವಿಭಿನ್ನವಾದ ಇನ್ನೊಂದು ಮುಖವೂ ಸಾಧ್ಯವಿದೆ ಎನ್ನುವ ಪಿಸುನುಡಿಯೊಂದಿಗೆ ಹೊರಡುವ ಕೃತಿ ನಿಧಾನವಾಗಿ ಅದರ ಸಾಧ್ಯತೆಯನ್ನು ಅನಾವರಣಗೊಳಿಸುತ್ತ, ಸರಿಯಾದ ದಾರಿ ಹೀಗಿರಬೇಕು ಎನ್ನುವಂತೆ ಮುಂದುವರಿಯುತ್ತದೆ. ರಾಜಸತ್ತೆಯಲ್ಲಿ ಹಿರಿಮಗನಿಗೆ ಪಟ್ಟಗಟ್ಟಿದ ಮೇಲೆ ಉಳಿದ ಅಣ್ಣತಮ್ಮಂದಿರು, ಪರಿವಾರದವರು ರಾಜನನ್ನು ಅವಲಂಬಿಸಿಯೇ ಇರಬೇಕೆನ್ನುವ ತಥಾಗತ ನಂಬಿಕೆಯಲ್ಲಿ ಉಳಿದವರ ಮನಃಸ್ಥಿತಿ ಏನಿದ್ದೀತು? ಹೇಗಿದ್ದೀತು? ಎನ್ನುವುದನ್ನು ಅರ್ಥೈಸಿಕೊಳ್ಳುತ್ತಲೇ, ಭರತನ ನಡವಳಿಕೆಯ ಮೂಲಕ ಎಲ್ಲರ ಅಸ್ಮಿತೆಗೂ ಅವಕಾಶ ಇರಬೇಕೆನ್ನುವುದು ಕೃತಿಯ ಪ್ರತಿಪಾದನೆ.
ಡಾ. ಆರ್ ಸುನಂದಮ್ಮ ಬರೆದ “ಭರತಕಲ್ಪ” ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ ನಿಮ್ಮ ಓದಿಗೆ

‘ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ’ ಇದು ಕುಮಾರವ್ಯಾಸ ಕವಿ ರಾಮಾಯಣವನ್ನು ಕುರಿತು ಏಳು ಶತಮಾನಗಳ ಹಿಂದೆ ನುಡಿದಿದ್ದನು. ಆದಾಗ್ಯೂ,  ರಾಮಾಯಣವು ಕಾಲಕಾಲಕ್ಕೆ  ಮತ್ತೆ ಮತ್ತೆ ವಿಭಿನ್ನ ರೂಪದಲ್ಲಿ ಮೈಪಡೆಯುತ್ತಲೇ ಇದೆ. ರಾಮಾಯಣವನ್ನು ಕುರಿತ ಕೃತಿಗಳ ಕೇಂದ್ರಬಿಂದು ರಾಮನೇ. ಅದಕ್ಕೆ ವಿಭಿನ್ನವಾದ ಒಂದು ವಿಶಿಷ್ಟ ಸೇರ್ಪಡೆ ಡಾ. ಆರ್ ಸುನಂದಮ್ಮ ಅವರ ಕಾದಂಬರಿ ಭರತಕಲ್ಪ.

(ಡಾ. ಆರ್ ಸುನಂದಮ್ಮ)

ಕಾದಂಬರಿ ಪ್ರಾರಂಭವಾಗುವುದೇ ಪಿತೃವಾಕ್ಯ ಪರಿಪಾಲನೆಗಾಗಿ ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಡುವಲ್ಲಿಂದ. ಹಿರಿಯ ಮಗನಾದ ರಾಮನಿಗೆ ಪಟ್ಟಕಟ್ಟಬೇಕೆನ್ನುವ ಸಂಭ್ರಮದಲ್ಲಿದ್ದ ಅಯೋಧ್ಯೆ ಮತ್ತು ಅರಮನೆಗೆ ರಾಮನು ವನವಾಸಕ್ಕೆ ಹೊರಟಿರುವುದು ಅರಗಿಸಿಕೊಳ್ಳಲಾರದ ನೋವಿಗೆ ದಿಗಿಲಿಗೆ ಕಾರಣವಾಗುತ್ತದೆ. ಹಿಂದೆ ಕೈಕೆ ದಶರಥನಿಂದ ಪಡೆದ ವರದ ಕಾರಣದಿಂದ ರಾಮನು ವನವಾಸಕ್ಕೆ ಹೋಗುವ ಸನ್ನಿವೇಶದಲ್ಲಿ, ತಾಯಿ ಕೈಕೆಯು ವರ ಪಡೆದಿರುವ ಪ್ರಕಾರ ಭರತ ಅಯೋಧ್ಯೆಯ ರಾಜನಾಗಿ ಅಧಿಕಾರದಲ್ಲಿ ಇರಬೇಕಿತ್ತು. ಆದರೆ ಅವನು ಹಾಗೆ ಮಾಡದೆ ಅಣ್ಣನ ಆಣತಿಯಂತೆ ಅವನ ಪರವಾಗಿ ಹದಿನಾಲ್ಕು ವರ್ಷಗಳ ಕಾಲ ಅಧಿಕಾರ ಇದ್ದೂ ಇಲ್ಲದ ಹಾಗೆ ರಾಜ್ಯವನ್ನು ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಎದುರಾದ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಭರತ ವಿಚಲಿತನಾದರೂ ಎದೆಗುಂದದೆ, ಅರಮನೆಯಿಂದ ಹೊರಗಿದ್ದು, ನಂದಿಗ್ರಾಮದಿಂದ ರಾಜ್ಯದ ಜವಾಬ್ದಾರಿಯನ್ನು ನಿಭಾಯಿಸುತ್ತಾನೆ. ಈ ಹದಿನಾಲ್ಕು ವರ್ಷ ಅವನು ಎದುರಿಸಿದ ಸವಾಲು, ಇಕ್ಕಟ್ಟು ಯಾವುವು ? ಅವನ್ನೆಲ್ಲ  ತಾಳ್ಮೆಯಿಂದ, ತನ್ನ ಸಾಮರ್ಥ್ಯದಿಂದ, ಹೇಗೆ ಎದುರಿಸಿ ಜಯಿಸುತ್ತಾನೆ ಹಾಗೂ ಎಲ್ಲರನ್ನು ಒಡಗೂಡಿಕೊಂಡು ರಾಜ್ಯವನ್ನು ಮುನ್ನಡೆಸುತ್ತಾನೆ ಎನ್ನುವುದೇ ಕಾದಂಬರಿಯ ಹೂರಣ.

ರಾಮನೇ ರಾಜನಾಗುತ್ತಾನೆ ಎನ್ನುವ ನಿರೀಕ್ಷೆಯಲ್ಲಿದ್ದ ಪ್ರಜೆಗಳಿಗೆ ಅವನು ವನವಾಸಕ್ಕೆ ಹೋಗಿದ್ದುದೇ ಒಂದು ದಿಗಿಲಾದ ಸನ್ನಿವೇಶದಲ್ಲಿ, ರಾಮನ ವನವಾಸಕ್ಕೆ ಕಾರಣಳಾಗಿದ್ದ ಕೈಕೆಯ ಮಗ ಭರತನೇ ರಾಮನ ಅನುಪಸ್ಥಿತಿಯಲ್ಲಿ ರಾಜ್ಯವನ್ನು ಮುನ್ನಡೆಸುವುದು ಪ್ರಜೆಗಳಿಗೆ ಒಪ್ಪಿತವಲ್ಲದ, ಅಸಹನೆಗೆ ಕಾರಣವಾಗಿರುವ ಸಂದರ್ಭ. ಪ್ರಭುತ್ವದ ಬಗೆಗೆ ಆಸಕ್ತಿಯೇ ಇಲ್ಲದಿದ್ದ ಭರತ ಅನೇಕ ಬಗೆಯಲ್ಲಿ ಸವಾಲುಗಳನ್ನು ಅರಮನೆಯ ಒಳಗೆ ಮತ್ತು ಹೊರಗೆ ಎದುರಿಸುತ್ತ, ರಾಜಸತ್ತೆಯು ಜನಸ್ನೇಹಿಯಾಗಿಯೂ ಆಡಳಿತವನ್ನು ನಡೆಸಬಹುದು ಎನ್ನುವುದಕ್ಕೆ ಭರತ ಸಾಕ್ಷಿಯಾಗುವಂತೆ ಕೃತಿಯ ಸಂವಿಧಾನವನ್ನು ಲೇಖಕಿ ರೂಪಿಸಿದ್ದಾರೆ. ಅಧಿಕಾರದ ಒಳಗಿನವರು ಮತ್ತು ಹೊರಗಿನ ಜನಸಾಮಾನ್ಯರನ್ನು ತನ್ನ ನಿಲುವು, ನಿರ್ಧಾರಗಳಿಂದ ತನ್ನತ್ತ ವಾಲುವಂತೆ ಮಾಡುವುದರಲ್ಲಿ ಸಫಲನಾಗುವ ಭರತನ ಪಯಣ ದೀರ್ಘವಾದುದು ಮತ್ತು ನಿರಂತರತೆಯನ್ನು ಕಾಪಾಡಿಕೊಳ್ಳುವಂತಹುದು. ಪ್ರಿಯಪತ್ನಿ ಮಂಡೋದರಿಯನ್ನೂ ತನ್ನ ನಡವಳಿಕೆಯ ಪಾಲುದಾರಳನ್ನಾಗಿ ಮಾಡಿಕೊಳ್ಳುವ ಅವನ ಪ್ರಯತ್ನ, ಊರ್ಮಿಳೆ, ಶ್ರುತಕೀರ್ತಿಯರ ಅಸ್ಮಿತೆಯನ್ನು ಪ್ರೋತ್ಸಾಹಿಸುವ ಅವನ ಮನೋಧರ್ಮ ಎಲ್ಲವೂ ಒಬ್ಬ ರಾಜನಿಗಿರಬೇಕಾದ ಗುಣವನ್ನು ಕಾಣಿಸುವಂತಹುದು. ರಾಜ್ಯದ ವಿಸ್ತರಣೆಯಲ್ಲಿ, ಯಾವುದೇ ಬಗೆಯಲ್ಲಿ ಯುದ್ಧ ಅಥವಾ ಹಿಂಸೆಯ ಮೂಲಕ ಅಮಾಯಕರು ಜೀವ ಕಳೆದುಕೊಳ್ಳದಂತೆ ಉಪಾಯದಿಂದ ಅದನ್ನು ಆಗುಮಾಡುವ ಪರಿ ಓದುಗರಲ್ಲಿ ಒಂದು ನಿರಾಳಭಾವ ಮೂಡಿಸಲು ಸಹಕಾರಿಯಾಗುತ್ತದೆ.
ಒಳಮನೆಗೆ ಹೆಚ್ಚಿನ ಪ್ರಾಧಾನ್ಯ ನೀಡದೆ ರಾಜ್ಯದ ಪ್ರಜೆಗಳ ಅದರಲ್ಲಿಯೂ ಅಂಚಿನಲ್ಲಿರುವ ಜನರ ಮನೋಧರ್ಮವನ್ನು ಅರ್ಥಮಾಡಿಕೊಂಡು ಅವರಲ್ಲಿ ಕೆಲಮಟ್ಟಿನ ಸುಧಾರಣೆ ತರುವಲ್ಲಿಯೂ ಶ್ರಮಿಸುವ ಭರತನ ಧೋರಣೆ ನಿಧಾನವಾಗಿ ಅವನ ಆಡಳಿತದ ಮೇಲೆ ಪ್ರಭಾವ ಬೀರುವುದ ಮೂಲಕ ಅವನು ಎಲ್ಲರ ಆದರಕ್ಕೆ ಪಾತ್ರವಾಗುತ್ತ ರಾಜ್ಯವನ್ನು ತನ್ನ ದೃಷ್ಟಿಯಿಂದ ಮುನ್ನಡೆಸುವಲ್ಲಿ ಸಫಲನಾಗುವುದು ಕೃತಿಯ ಗೆಲುವೂ ಹೌದು. ಪಿತೃಪ್ರಧಾನ ವ್ಯವಸ್ಥೆಯ ದೌರ್ಬಲ್ಯಗಳನ್ನು ಸೂಕ್ಷ್ಮವಾಗಿ ಎತ್ತಿ ತೋರಿಸುತ್ತಲೇ ಅದಕ್ಕೆ ವಿಭಿನ್ನವಾದ ಇನ್ನೊಂದು ಮುಖವೂ ಸಾಧ್ಯವಿದೆ ಎನ್ನುವ ಪಿಸುನುಡಿಯೊಂದಿಗೆ ಹೊರಡುವ ಕೃತಿ ನಿಧಾನವಾಗಿ ಅದರ ಸಾಧ್ಯತೆಯನ್ನು ಅನಾವರಣಗೊಳಿಸುತ್ತ, ಸರಿಯಾದ ದಾರಿ ಹೀಗಿರಬೇಕು ಎನ್ನುವಂತೆ ಮುಂದುವರಿಯುತ್ತದೆ. ರಾಜಸತ್ತೆಯಲ್ಲಿ ಹಿರಿಮಗನಿಗೆ ಪಟ್ಟಗಟ್ಟಿದ ಮೇಲೆ ಉಳಿದ  ಅಣ್ಣತಮ್ಮಂದಿರು, ಪರಿವಾರದವರು ರಾಜನನ್ನು ಅವಲಂಬಿಸಿಯೇ ಇರಬೇಕೆನ್ನುವ ತಥಾಗತ ನಂಬಿಕೆಯಲ್ಲಿ ಉಳಿದವರ ಮನಃಸ್ಥಿತಿ ಏನಿದ್ದೀತು? ಹೇಗಿದ್ದೀತು? ಎನ್ನುವುದನ್ನು ಅರ್ಥೈಸಿಕೊಳ್ಳುತ್ತಲೇ, ಭರತನ ನಡವಳಿಕೆಯ ಮೂಲಕ ಎಲ್ಲರ ಅಸ್ಮಿತೆಗೂ ಅವಕಾಶ ಇರಬೇಕೆನ್ನುವುದು ಕೃತಿಯ ಪ್ರತಿಪಾದನೆ.
ಕೌಸಲ್ಯೆ, ಸುಮಿತ್ರೆ, ಕೈಕೆ, ಊರ್ಮಿಳೆ, ಮಾಂಡವಿ, ಶ್ರತಕೀರ್ತಿ ಮುಂತಾದ ಅರಮನೆಯ ಜನರಿರಲಿ, ಸುಮಂತ್ರ, ಜಾಬಾಲಿ ಮುಂತಾದ ಅಧಿಕಾರದ ನೆಲೆಯವರಿರಲಿ ಅವರೆಲ್ಲರೂ ಭರತನ ಆಡಳಿತವನ್ನು ನಿಧಾನವಾಗಿ ಒಪ್ಪುವ ಹಂತಕ್ಕೆ ಅವರ ಮನಃಸ್ಥಿತಿಯಲ್ಲಿ ಬದಲಾವಣೆ ತರುವುದರಲ್ಲಿ ಯಶಸ್ವಿಯಾಗುವ ಕೃತಿ ಚೀರಿಣಿಯ ಕ್ರಿಯಾಶೀಲ ವ್ಯಕ್ತಿತ್ವದ ಮೂಲಕ ಹೆಣ್ಣಿನಲ್ಲಿರುವ ಕಾರ್ಯಸಾಧ್ಯತೆಯನ್ನು ಕಂಡರಿಸುತ್ತದೆ. ಅಷ್ಟೇ ಅಲ್ಲ, ಅರಮನೆಯ ಭಾಗವಾಗಿರುವ ಊರ್ಮಿಳೆಯ ಕೃಷಿಯ ಆಸಕ್ತಿ, ಶ್ರುತಕೀರ್ತಿಯ ಕೌಶಲ್ಯ, ಮಾಂಡವಿಯ ಕರ್ತೃತ್ವಶಕ್ತಿಯನ್ನು ಅನಾವರಣಗೊಳಿಸುತ್ತ ಮಹಿಳೆಯ ಅಸ್ಮಿತೆಗೆ ಮುಕ್ತವಾದ ಅವಕಾಶವನ್ನು ಕಲ್ಪಿಸಬೇಕೆನ್ನುವ ಕಡೆಗೆ ಒತ್ತುನೀಡುತ್ತದೆ.
ಆಸ್ತಿ, ಧರ್ಮ, ಜಾತಿ, ಲಿಂಗತಾರತಮ್ಯ ಎಲ್ಲವನ್ನು ಅರ್ಥಮಾಡಿಕೊಳ್ಳುವ ಭರತ ಆಧುನಿಕ ಮನೋಧರ್ಮದ ಹಿನ್ನೆಲೆಯುಳ್ಳವನಾಗಿ ಚಿತ್ರಿತನಾಗಿದ್ದಾನೆ. ತಾಯಿಯ ತವರಿನಲ್ಲಿ ಬಾಲ್ಯವನ್ನು ಕಳೆದಿರುವ ಅವನದು ತಾಯ್ತನದ,  ಹೆಣ್ಣನ್ನು ಸಮಾನನೆಲೆಯಲ್ಲಿ ಕಾಣಬೇಕು ಎನ್ನುವ ಮನೋಧರ್ಮ. ಹಾಗಾಗಿ ತನ್ನೊಂದಿಗೆ ಇರುವವರನ್ನು, ಸೈನಿಕರನ್ನು ಮಾನವೀಯ ನೆಲೆಯಿಂದ ನಡೆಸಿಕೊಳ್ಳಲು ಸಾಧ್ಯವಾಗುತ್ತದೆ. ಶ್ರೀರಾಮನಿಗೆ ʻವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿʼ ಎನ್ನುತ್ತ ಬರಲಾಗಿದೆ. ಈ ಕೃತಿಯಲ್ಲಿ ಭರತನಿಗೂ ಈ ಹೋಲಿಕೆ ಸರಿಯಾಗಿ ಒಪ್ಪುತ್ತದೆ. ರಾಜ್ಯದ ಹಿತಕ್ಕೆ ಧಕ್ಕೆ ತರುವವರನ್ನು,  ದಂಗೆಕೋರರನ್ನು ಶಿಕ್ಷಿಸುವುದರಲ್ಲಿ ತುಸುವೂ ಹಿಂಜರಿಯದೆ ಕಠಿಣವಾಗಿ ನಡೆದುಕೊಳ್ಳಬಲ್ಲ. ಸುತ್ತಲಿನ ರಾಜರನ್ನು ಎದುರಿಸುವಲ್ಲಿ ಉಪಾಯ ಮತ್ತು ಸಾಹಸ ಎರಡನ್ನೂ ತೋರಬಲ್ಲವನು.

ತಾನು ಸೀತೆ-ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವಾಗ ಕಂಡಿರುವ ಅಯೋಧ್ಯೆಯ ಪರಿಸರವು, ತಾವು ಅರಣ್ಯವಾಸ ಮುಗಿಸಿ ಹಿಂದಿರುಗುವ ಹೊತ್ತಿಗೆ ಕೃಷಿಪ್ರಧಾನವಾಗಿ ಬದಲಾಗಿರುವುದನ್ನು ಕಾಣುತ್ತಲೇ ತುಸುಮಟ್ಟಿಗೆ ಚಿಂತಿತನಾಗುವ ರಾಮನ ಪ್ರತಿಕ್ರಿಯೆಯ ಮೂಲಕ ಭರತನ ಆಳ್ವಿಕೆಯ ವಿಧಾನದ ಇತ್ಯಾತ್ಮಕ ಮುಖವನ್ನು ಅನಾವರಣಗೊಳಿಸುತ್ತದೆ ಕೃತಿ. ʻರಾಮರಾಜ್ಯʼ ಎನ್ನುವ ಪ್ರಚಲಿತ ಕಲ್ಪನೆಗೆ ವಿಭಿನ್ನವಾದ ಒಂದು ಪರಿಕಲ್ಪನೆಯನ್ನು ಸಕಾರಣವಾಗಿ ಮಂಡಿಸಿರುವ ಕೃತಿಯು ಪ್ರಭುತ್ವವು ಇರಬೇಕಾಗಿರುವ ನೆಲೆಯನ್ನು ಶೋಧಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎನಿಸುತ್ತದೆ.

ಸಂಬಂಧಗಳನ್ನು ಉಳಿಸಿಕೊಳ್ಳುವತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗದುದಕ್ಕೆ ಭರತನಿಗೆ ನೋವಿದೆ. ಆದರೂ ಎಲ್ಲರನ್ನೂ ಒಡಗೊಂಡು ರಾಜ್ಯವನ್ನು ಮುನ್ನಡೆಸಿರುವುದರ ಬಗ್ಗೆ ತೃಪ್ತಿ ಇರುವುದನ್ನು ಅವನ ಆಲೋಚನೆಯ ಮೂಲಕ ಕೃತಿ ಸೂಚಿಸುತ್ತದೆ. ಭರತನು ರಾಜ್ಯದ ವಿಸ್ತರಣೆಯನ್ನು ನೆವವಾಗಿಟ್ಟುಕೊಂಡು ಭವಿಷ್ಯದ ಬಗೆಗೆ ತೆಗೆದುಕೊಂಡ ನಿರ್ಧಾರವನ್ನು ʻಇದಮಿತ್ಥಂʼ ಎಂದು ಹೇಳದಿರುವ ಕೃತಿಯ ಮುಕ್ತಾಯವು ಓದುಗರ ವಿವೇಚನೆಯಂತೆ, ಗ್ರಹಿಸುವ ಅವಕಾಶವನ್ನು ನೀಡುತ್ತದೆ.
(ಕೃತಿ: ‘ಭರತಕಲ್ಪ’ (ಕಾದಂಬರಿ), ಲೇಖಕಿ: ಡಾ. ಆರ್ ಸುನಂದಮ್ಮ, ಪ್ರಕಾಶಕರು: ಸಪ್ನ ಬುಕ್ ಹೌಸ್, ಬೆಲೆ ರೂಂ.392.  ಪುಟ ಸಂಖ್ಯೆ 444)