ನನ್ನ ಸಂಶಯಕ್ಕೂ ಕಾರಣವುಂಟು. ನಾನು ಕಾಡಿನಲ್ಲಿ ಅದೆಷ್ಟೋ ಹಕ್ಕಿಗಳನ್ನು ನೋಡಿದ್ದರೂ ಅಂತಹ ಅಗಲ ರೆಕ್ಕೆಯ ಬೀಸುತ್ತಾ ಹಾರುವ ಹಕ್ಕಿಯನ್ನು ನೋಡಿರಲೇ ಇಲ್ಲ. ಇದಾಗಿ ಸುಮಾರು ದಿನ ಕಳೆದಿರಬಹುದು. ಅವರಿವರಲ್ಲಿ ನಾನೂ ಸ್ವಲ್ಪ ಉಪ್ಪು ಖಾರ ಬೆರೆಸಿ ನನಗೆ ಕಂಡ ಪ್ರೇತದ ಬಗ್ಗೆ ಮಜಬೂತಾಗಿ ಹೇಳುತ್ತಿದ್ದೆ. ಅವರೆಲ್ಲರಿಗೂ ನಾನು ಪ್ರೇತ ನೋಡಿದವನೆಂಬ ನಂಬಿಕೆಯೂ ಹುಟ್ಟಿಸಿಬಿಟ್ಟಿದ್ದೆ. ಒಂದು ಸಂಜೆ ಆಟ ಮುಗಿಸಿ ಗೆಳೆಯರೊಂದಿಗೆ ಬರುತ್ತಿದ್ದಾಗ, ನಿಶ್ಯಬ್ದವಾಗಿದ್ದ ಒಂದು ಧೂಪದ ಮರ ಜೀವ ಬಂದಂತೆ ಒಮ್ಮೆಲೆ ಅದುರಿ ನಾಲ್ಕೈದು ಸಣ್ಣ ಹಕ್ಕಿಯಾಕೃತಿಗಳು ನನ್ನ ತಲೆಗೆ ನೇರ ಹಾರಿಬಿಟ್ಟವು.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ
“ಮಧ್ಯಾಹ್ನ ನಂತರ ಕೆಲಸವಿದೆ, ಹತ್ತಿರದವರು ನಿಲ್ಲಿ” ಅಂತ ಸರ್ ಹೇಳಿ ಹೋಗಿದ್ದರು. “ಅಯ್ಯೋ ಮನೆ ಹತ್ತಿರದವರಾದ ಕಾರಣ ನಾವೂ ಉಳಿಯಬೇಕಲ್ವಾ” ಅಂತ ಆ ಶನಿವಾರ ಶಾಲೆಯ ಮಧ್ಯಾಹ್ನದ ಬಿಸಿಯೂಟವೂ ಸೇರದೆ ಅರ್ಧ ದಿನದ ರಜೆ ಹಾಳಾಯಿತಲ್ಲ ಎಂದು ನಾವೆಲ್ಲ ಮರುಗತೊಡಗಿದ್ದೆವು. ಕೆಲಸ ಅಂದ್ರೆ ಎಲ್ಲರೂ ಶಾಲೆ ಬಿಟ್ಟು ಹೊರಟಾದ ಮೇಲೆ ಶಾಲೆಯ ಬಾವಿಯ ಹೂಳೆತ್ತುವುದು. ನಮಗಂತೂ ಬಾವಿಗೆ ಇಳಿಯಲು ಬರುವುದಿಲ್ಲ. “ಮತ್ತೇನು ಕೆಲಸವಿದೆ, ಈ ಸರ್ ಗೆ ಬೇರೆ ಕೆಲಸವಿಲ್ಲ, ಅದಕ್ಕೆ ನಮ್ಮನ್ನೂ ಗೋಳು ಹೊಯ್ಯಿಸಿಕೊಳ್ತಾರೆ” ಎಂದು ಹೇಳಿದ್ದನ್ನೇ ಹೇಳಿಕೊಂಡು ಬರುವ ಸಿಟ್ಟು, ಬೇಸರ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳತೊಡಗಿದ್ದೆವು.
ಅಷ್ಟೊತ್ತಿಗೆ ನಮ್ಮ ಮೈಗಳ್ಳತನವನ್ನು ಗುರ್ತಿಸಿದ ಅಧ್ಯಾಪಕರು ಹೂಳು ಬಾವಿಯಿಂದ ಎಳೆಯೋ ಕೆಲಸಕ್ಕೆ ಮಾತ್ರ ನೀವು ಲಾಯಕ್ಕೆಂದು ಅದನ್ನೇ ವಹಿಸಿಕೊಟ್ಟಿದ್ದರು. ಕೆಳಗಿಳಿದಿದ್ದವರು ಅರ್ಧ ಬುಟ್ಟಿ ತುಂಬಿಸುವುದರೊಳಗೆ ಹಗ್ಗ ಎಳೆಯುವುದು, ಸ್ವಲ್ಪ ಎಳೆದು ಹಗ್ಗ ಮತ್ತೆ ಬಾವಿಗೆ ಬಿಡುವುದು ತರಹೇವಾರಿ ಉಪದ್ರಗಳನ್ನು ನೀಡುತ್ತಾ ಕೆಲಸ ಕೊಟ್ಟ ಕೋಪಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿದ್ದೆವು. ಈ ನಡುವೆ ಬಾವಿಯೊಳಗಿಂದ ನಾವು ಕೊಡುವ ಕೀಟಲೆಗಳಿಂದ ಬೇಸತ್ತು ಹೊರಗೆ ಕೇಳಿಸಿಕೊಳ್ಳದಷ್ಟು ಕ್ಷೀಣವಾದ ಬೈಗುಳಗಳೂ ಕೇಳಿ ಬರುತ್ತಿದ್ದವು. ಹೂಳಿನ ಜೊತೆಗೆ ಕ್ರಿಕೆಟ್ ಬಾಲ್, ಆಟಿಕೆಗಳೇನಾದರೂ ಸಿಗುತ್ತವೆಂದು ಆಗಾಗ್ಗೆ ಉತ್ಖನನ ಮಾಡುತ್ತಲೂ ಇದ್ದೆವು. ಈತನ್ಮಧ್ಯೆ ಹೂಳು ಎಸೆದು ರಾಶಿ ಹಾಕಿದ ಕಡೆ ಫುಟ್ಬಾಲ್ ಚೆಂಡಿನಾಕೃತಿಯ ತುಂಡೊಂದು ಮಿಸುಕಾಡಲಾರಂಭಿಸಿತು. ಯಾರೋ ಒಬ್ಬ ಜೋರಾಗಿ “ಆಮೆ ಆಮೆ” ಎಂದು ಕಿರುಚತೊಡಗಿದ.
ಆಮೆ ಹೆಸರು ಕೇಳಿದ್ದೇ ತಡ, ಅರ್ಧ ಎಳೆದಿದ್ದ ಹೂಳು ಬುಟ್ಟಿ ಬಾವಿಗೆ ಬಿಟ್ಟು ಆಮೆ ನೋಡಲು ಓಡಿದೆವು. ಬುಟ್ಟಿ ಧಡಾಲ್ ಎಂದು ಶಬ್ಧ ಮಾಡುತ್ತಾ ಕೆಳಗೆ ಬಿತ್ತು. ಒಳಗಿನಿಂದ ಬುಟ್ಟಿ ತುಂಬಿಸಿಕೊಡುವವನ ಬಾಯಿಯಿಂದ “ಎಂಥ ಸಾವು ಮಾರಾಯ” ಎಂಬ ಉದ್ಗಾರವೂ ಕೇಳಿತು. ಕೆಸರಿನಿಂದ ಮೇಲೆದ್ದ ಆಮೆ ಮೆಲ್ಲಮೆಲ್ಲನೆ ಅಲುಗಾಡುವಂತೆ ಕಂಡಿತು. ಯಾರೋ ಒಂದಿಬ್ಬರು ಹತ್ತಿರ ಹೋದರು. ಅಷ್ಟರಲ್ಲೇ ಆಮೆ ಹೊರ ಹಾಕಿದ್ದ ಕುತ್ತಿಗೆ ಕೈ ಕಾಲನ್ನು ಚಿಪ್ಪಿನೊಳಗೆಳೆದುಕೊಂಡು ನಿಶ್ಚಲವಾಯಿತು. ನಮಗೆ ಮಾತ್ರ ತುಂಬಾ ನಿರಾಶೆ, ಆಮೆಯನ್ನು ಎತ್ತಿಕೊಂಡು ಬಂದು ಶಾಲೆಯ ವರಾಂಡದಲ್ಲಿರಿಸಿ ಚಿಪ್ಪಿನ ಮೇಲೆ ನೀರು ಸುರಿದೆವು. ಕೆಸರು ತುಂಬಿ ಹೋಗಿದ್ದ ಚಿಪ್ಪು ತೊಳೆದಂತೆ ಅದರ ಚಿಪ್ಪಿನ ಬಣ್ಣ ಕಪ್ಪೆಂದು ತಿಳಿದದ್ದೇ ಸುಮಾರು ಹೊತ್ತು ಅದರ ಕುರಿತೇ ಮಾತಾಯಿತು. ಅಷ್ಟರವರೆಗೆ ಕೆಲಸವೂ ನಡೆಯಲಿಲ್ಲ. ಈ ಮಧ್ಯೆ ಆಮೆ ನಾಲ್ಕೈದು ಬಾರಿ ಕತ್ತು ಹೊರ ಹಾಕಿ, ನಮ್ಮ ಗದ್ದಲ ಕೇಳಿಸಿಕೊಂಡು ಮತ್ತೆ ಅಂತರ್ಧಾನವಾಗುತ್ತಿತ್ತು. ಅಷ್ಟರಲ್ಲೇ ಅಲ್ಲೇ ಗುಂಪಾಗಿದ್ದ ವಿದ್ಯಾರ್ಥಿ ಸಮೂಹವನ್ನು ಚದುರಿಸಲು ಅಧ್ಯಾಪಕರು ಬೆತ್ತದ ಮೊರೆ ಹೋಗಬೇಕಾಯಿತು.
ನಾವು ಕೆಲಸದ ಮಧ್ಯೆ ಆಗೊಮ್ಮೆ ಈಗೊಮ್ಮೆ ಆಮೆಯ ಚಲನವಲನಗಳನ್ನು ನೋಡುವುದನ್ನು ಬಿಡಲಿಲ್ಲ. ಕೆಲಸ ಮುಗಿದು ಹೊರಡುವಾಗ ಆಮೆಯನ್ನು ಏನು ಮಾಡಬೇಕೆನ್ನುವುದು ಚರ್ಚೆಗೆ ಬಂತು. ಕೊನೆಗೂ ಹುಡುಗನೊಬ್ಬ ಮನೆಗೆ ತೆಗೆದುಕೊಂಡು ಹೋಗುವುದಾಗಿ ಹೇಳಿ ದೊಡ್ಡ ಪ್ಲಾಸ್ಟಿಕ್ ಲಕೋಟೆಯೊಂದರಲ್ಲಿ ಅದನ್ನು ತುರುಕಿಕೊಂಡು ಹೊರಟ. ಯಾರೋ ಒಬ್ಬ, “ಮನೆಗೆ ಕೊಂಡು ಹೋಗಿ ಸಾರು ಮಾಡುತ್ತಾರಂತೆ” ಅಂದರು. ಅಷ್ಟು ಗಟ್ಟಿ ಚಿಪ್ಪನ್ನು ಅದು ಹೇಗೆ ಬೇಯಿಸುತ್ತಾರೆಂದು ತಿಳಿಯದೆ ಕುತೂಹಲಕ್ಕೆ ಬಿದ್ದು ತಲೆ ಹುಣ್ಣು ಮಾಡಿಕೊಂಡು ನಾನು ಮನೆಯ ದಾರಿ ಹಿಡಿದೆ. ಆಗಲೇ ಸಂಜೆಯಾಗಿತ್ತು. ಪಡುವಣ ಕಡಲಲ್ಲಿ ಸೂರ್ಯ ಕಂತುತ್ತಿದ್ದ. ಮನೆಯ ದಾರಿಯಲ್ಲೇ ಒಬ್ಬನೇ ಸಾಗಬೇಕಾಗಿತ್ತು. ಹಳೆಯ ಹಾಡೊಂದು ಗುನುಗುನಿಸುತ್ತಾ ದಾರಿ ಸಶಬ್ಧವಾಗುತ್ತಾ ಒಂಟಿತನದ ಹೆದರಿಕೆ ಮರೆಸುತ್ತಾ ನಡೆದು ಬರುತ್ತಿದ್ದೆ. ತೊರೆಯ ದಾರಿಯಲ್ಲಿ ಬರಬೇಕಾದರೆ ತರಗಲೆ ಬರಬರನೆ ಸದ್ದು ಮಾಡಿತು, ಹೆದರಿ ಗಕ್ಕನೆ ನಿಂತೆ. ಪ್ರಾಣ ಬಾಯಿಗೆ ಬಂದಿತ್ತು. ನರಪಿಳ್ಳೆಯೂ ಇರದ ಕತ್ತಲಾವರಿಸಿದ ಆ ದಾರಿ ನಿಜಕ್ಕೂ ಭಯ ಹುಟ್ಟಿಸುತ್ತಿತ್ತು.
ಇನ್ನೊಮ್ಮೆ ಸದ್ದಾಯಿತು. ಹೆದರಿಕೊಂಡೆ ಪೊದೆಗಳೆಡೆಗೆ ಇಣುಕಿದೆ. ಮರ ಹಾವೊಂದು ತಲೆ ಎತ್ತಿ, “ಹೆದರಿಸಿ ಬಿಟ್ಟೆ ನೋಡು ನಿನ್ನನ್ನು” ಎಂದು ಹಲ್ಲು ಕಿಸಿಯುತ್ತಿರುವಂತೆ ಕಂಡಿತು. ಹೆದರುತ್ತಲೇ ಒಮ್ಮೆ ಮನೆ ತಲುಪಿದರೆ ಸಾಕೆಂದು ಬೇಗಬೇಗ ಓಡುತ್ತಲೇ ಬಂದೆ. ಇನ್ನೇನು ಮನೆ ಕಾಣುತ್ತಿತ್ತು. ನಾನು ಹಳೆಯ ಹುಣಸೆ ಮರದಡಿಯಿಂದ ನಡೆದು ಬರುತ್ತಿದ್ದೆ. ತಕ್ಷಣವೇ ರಪ್ಪೆಂದು ಕಣ್ಣ ಮುಂದೇನೋ ಬೀಸಿದಂತಾಯಿತು. ಅಕ್ಷರಶಃ ಬೆಚ್ಚಿ ಬಿದ್ದೆ. ಕಣ್ಣೆದುರಿಂದ ಕೈಗೆಟಕುವ ಎತ್ತರದಿಂದ ಬುರ್ಖಾ ತೊಟ್ಟಂತಿದ್ದ ಆ ಹಕ್ಕಿ ಹಾರಿ ಹೋಗಿತ್ತು. ನಾನು ಹೆದರಿ ಪ್ರಜ್ಞೆ ತಪ್ಪುವುದೊಂದೇ ಬಾಕಿ. ಆ ಹಕ್ಕಿ ಯಾವುದೆಂದು ತಿಳಿಯುವ ಸಮಯವೂ ಬಾಕಿಯುಳಿಸದೆ ಅದು ಹಾರಿ ಹೋಗಿತ್ತು. ಹಿಂದಿರುಗಿ ನೋಡಲೂ ಧೈರ್ಯ ಬರಲಿಲ್ಲ. ಕಪ್ಪಗಿನ ಅಗಲ ರೆಕ್ಕೆಗಳು ನನ್ನನ್ನು ಮತ್ತೆ ಮತ್ತೆ ಬೆಚ್ಚಿ ಬೀಳಿಸುತ್ತಲೇ ಇದ್ದವು. ಇದ್ಯಾರಿಗೂ ಹೇಳಿಕೊಳ್ಳದೆ ನನಗೆ ಕಂಡದ್ದು ಪ್ರೇತವಾಗಿರಬಹುದೆಂಬ ಅಂದಾಜಿಗೆ ಬಂದೆ.
ನನ್ನ ಸಂಶಯಕ್ಕೂ ಕಾರಣವುಂಟು. ನಾನು ಕಾಡಿನಲ್ಲಿ ಅದೆಷ್ಟೋ ಹಕ್ಕಿಗಳನ್ನು ನೋಡಿದ್ದರೂ ಅಂತಹ ಅಗಲ ರೆಕ್ಕೆಯ ಬೀಸುತ್ತಾ ಹಾರುವ ಹಕ್ಕಿಯನ್ನು ನೋಡಿರಲೇ ಇಲ್ಲ. ಇದಾಗಿ ಸುಮಾರು ದಿನ ಕಳೆದಿರಬಹುದು. ಅವರಿವರಲ್ಲಿ ನಾನೂ ಸ್ವಲ್ಪ ಉಪ್ಪು ಖಾರ ಬೆರೆಸಿ ನನಗೆ ಕಂಡ ಪ್ರೇತದ ಬಗ್ಗೆ ಮಜಬೂತಾಗಿ ಹೇಳುತ್ತಿದ್ದೆ. ಅವರೆಲ್ಲರಿಗೂ ನಾನು ಪ್ರೇತ ನೋಡಿದವನೆಂಬ ನಂಬಿಕೆಯೂ ಹುಟ್ಟಿಸಿಬಿಟ್ಟಿದ್ದೆ. ಒಂದು ಸಂಜೆ ಆಟ ಮುಗಿಸಿ ಗೆಳೆಯರೊಂದಿಗೆ ಬರುತ್ತಿದ್ದಾಗ, ನಿಶ್ಯಬ್ದವಾಗಿದ್ದ ಒಂದು ಧೂಪದ ಮರ ಜೀವ ಬಂದಂತೆ ಒಮ್ಮೆಲೆ ಅದುರಿ ನಾಲ್ಕೈದು ಸಣ್ಣ ಹಕ್ಕಿಯಾಕೃತಿಗಳು ನನ್ನ ತಲೆಗೆ ನೇರ ಹಾರಿಬಿಟ್ಟವು. ನಮ್ಮ ಬಾಲ್ಯದ ಗುರು ಶರೀಫ್ ನಮ್ಮ ಜೊತೆಗಿದ್ದ. ಅವುಗಳು ಎಲೆ ಬಾವಲಿಗಳೆಂದು ಹೇಳಿ ಕೊಟ್ಟ.
ಆಮೆ ಹೆಸರು ಕೇಳಿದ್ದೇ ತಡ, ಅರ್ಧ ಎಳೆದಿದ್ದ ಹೂಳು ಬುಟ್ಟಿ ಬಾವಿಗೆ ಬಿಟ್ಟು ಆಮೆ ನೋಡಲು ಓಡಿದೆವು. ಬುಟ್ಟಿ ಧಡಾಲ್ ಎಂದು ಶಬ್ಧ ಮಾಡುತ್ತಾ ಕೆಳಗೆ ಬಿತ್ತು. ಒಳಗಿನಿಂದ ಬುಟ್ಟಿ ತುಂಬಿಸಿಕೊಡುವವನ ಬಾಯಿಯಿಂದ “ಎಂಥ ಸಾವು ಮಾರಾಯ” ಎಂಬ ಉದ್ಗಾರವೂ ಕೇಳಿತು. ಕೆಸರಿನಿಂದ ಮೇಲೆದ್ದ ಆಮೆ ಮೆಲ್ಲಮೆಲ್ಲನೆ ಅಲುಗಾಡುವಂತೆ ಕಂಡಿತು.
ಅವು ‘ತಲೆ ಮೇಲೆ ಹಾರಿದರೆ ಅಪ್ಪ ಅಮ್ಮ ಇಲ್ಲದೆ ತಬ್ಬಲಿಗಳಾಗುತ್ತಾರೆಂದು’ ಹೇಳಿಬಿಟ್ಟ. ಶುರುವಾಯಿತು ನೋಡಿ, ಹೊಟ್ಟೆಯೊಳಗಿನಿಂದ ತಳಮಳ. ನಾನೂ ಅವರೆಲ್ಲರಲ್ಲೂ ನನ್ನ ತಲೆ ಮೇಲಿಂದ ಅಲ್ಲ ಭುಜದ ನೇರ ಸಾಗಿದ್ದೆಂದು ಹೇಳಿಕೊಳ್ಳಲು ಪಟ್ಟ ಪಾಡು ನನಗೆ ಗೊತ್ತು. ಅವರಲ್ಲಿ ಅಷ್ಟೂ ಸಮರ್ಥಿಸಿ ಗೆದ್ದರೂ ನನ್ನ ತಲೆಯ ಮೇಲಿನಿಂದಲೇ ಅವು ಸಾಗಿದ್ದೆಂಬುವುದು ನನಗೆ ಖಾತ್ರಿಯಿತ್ತು. ಆ ರಾತ್ರಿ ಪೂರ್ತಿ ಆಗಾಗ ಎಚ್ಚರಗೊಂಡು ಉಮ್ಮನನ್ನು ಮುಟ್ಟಿ ಎಬ್ಬಿಸಿ, ‘ಅದು ಬೇಕು, ಇದು ಬೇಕೆಂದು’ ಸುಮ್ಮನೆ ಈಗಲೂ ಜೀವಂತವಿದ್ದಾರಲ್ಲ ಅಂತ ಖಚಿತ ಪಡಿಸಿಕೊಳ್ಳುತ್ತಿದ್ದೆ. ಹಾಗೆಯೇ ಮೂರು ದಿನ ಕಳೆಯುವುದರೊಳಗೆ ನನಗೆ ಅದು ಮರೆತು ಹೋಯಿತು.
ಒಂದು ದಿನ ನಮ್ಮೂರಲ್ಲಿ ಕರೆಂಟು ಕೈಕೊಟ್ಟಿತ್ತು. ಸಣ್ಣ ಗಾಳಿಗೂ ಫೀಸು ತೆಗೆದಿಡುವ ನಮ್ಮೂರ ಲೈನ್ ಮ್ಯಾನ್ ಗಳಿಗೆ ಆ ದಿನ ಯಾವ ಸಬೂಬು ಹೇಳುವಂತಿರಲಿಲ್ಲ. ಕಾರಣ, ಅದೊಂದು ರುದ್ರ ಬೇಸಿಗೆ. ಮಳೆ ಬಿಟ್ಟು, ಎಲೆ ಕೂಡಾ ಅಲುಗಾಡುವ ಗಾಳಿ ಬೀಸದ ದಿನಗಳಲ್ಲಿ ಕರೆಂಟು ಹೋಗುವ ಯಾವ ಕಾರಣವನ್ನು ಅವರಿಗೆ ಹೇಳುವಂತಿರಲಿಲ್ಲ. ಲೈನ್ ಮ್ಯಾನ್ ಸುರೇಶ್ ಗೆ ಫೋನ್ ಮಾಡಿ ಊರವರು ಕರೆಸಿಕೊಂಡಿದ್ದರು. ಅವನು ನಾಲ್ಕು ಬಾರಿ ಅತ್ತಿಂದಿತ್ತ ಬೈಕಲ್ಲಿ ಸುತ್ತಿ ಕೊನೆಗೆ ನಮ್ಮನೆಯ ಎದುರಿನ ಕಂಬದ ವೈರಿನಲ್ಲಿ ಬಾವಲಿಯೊಂದು ನೇತಾಡುವುದನ್ನು ಕಂಡು ಹಿಡಿದ. ಕರೆಂಟು ವೈರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಆ ಬಾವಲಿ, ಬಟ್ಟೆಯಿಂದ ಕಟ್ಟಿದ ತೊಟ್ಟಿಲಲ್ಲಿ ತೂಗುವ ಮಗುವಿನಂತೆಯೇ ಕಾಣುತ್ತಿತ್ತು. ಲೈನ್ ಆಫ್ ಮಾಡಿ ಸರಸರನೆ ಕಂಬವನ್ನೇರಿ ಕೋಲಿನಿಂದ ತೆಗೆದು ಅದನ್ನು ನೆಲಕ್ಕೆ ಹಾಕಿದ. ಮತ್ತೆ ಲೈನ್ ಹಾಕುವುದರೊಳಗೆ ನಮ್ಮನೆಯ ಹೊರಗಿನ ಬಲ್ಪ್ ನಗುತ್ತಿತ್ತು. “ಉಸ್ಸಪ್ಪಾ ಕರೆಂಟು ಬಂತು” ಎಂದು ಊರ ಒಂದಿಬ್ಬರು ಲೈನ್ ಮ್ಯಾನ್ ಕೈಗೆ ನೋಟು ತುರುಕಿ “ಮಸ್ತ್ ಉಪಕಾರ ಆಯ್ತು” ಎನ್ನುತ್ತಾ ಹೊರಟು ಹೋದರು. ಲೈನ್ ಮ್ಯಾನ್ ಚೌಕಾಸಿ ಮಾಡದೆ ಬೈಕ್ ಹತ್ತಿ ಹೊರಟು ಹೋದ. ನಾನು ಮಾತ್ರ ಕುತೂಹಲದಿಂದ ಬಾವಲಿ ಬಿದ್ದಲ್ಲಿಗೆ ಬಂದೆ.
ಇಲಿ ಸತ್ತಂತೆ ಅಸಹ್ಯ ವಾಸನೆ, ಮೂಗು ಮುಚ್ಚಿಕೊಂಡು ಬೇಲಿ ಗಿಡದ ಕೋಲೊಂದನ್ನು ಕಿತ್ತು ತಂದೆ. ಈಗದು ಸಣ್ಣ ಮಗುವೊಂದು ಕಪ್ಪು ಕಂಬಳಿ ಹೊದ್ದು ಮಲಗಿರುವಂತೆ ಕಾಣುತ್ತಿತ್ತು. ಕಪ್ಪು ಖುರ್ಖಾದಂತಹ ಆ ರೆಕ್ಕೆಗಳು ಕಂಡಂತೆಯೇ ನನ್ನ ನೆನಪು ಹಿಂದಕ್ಕೋಡಿತು. “ಓಹ್! ಆ ದಿನ ಸಂಜೆ ಹೆದರಿದ್ದು ಇದೇ ಬಾವಲಿಗಾ?” ಎಂದು ನಗುವೂ ಬಂತು. ರೆಕ್ಕೆ ಕೋಲಿನಿಂದ ಬಿಡಿಸಿ ಅದರ ಮುಖವನ್ನೊಮ್ಮೆ ದಿಟ್ಟಿಸಿದೆ. ಥೇಟ್ ನಾಯಿಯಂತ ಸಣ್ಣ ಮುಖ, ಹಲ್ಲುಗಳು ಹೊರ ಬಂದು ರಾತ್ರಿಯಲ್ಲಿ ಎಂಥವನನ್ನು ಹೆದರಿಸುವಂತಿತ್ತು. ಕಪ್ಪಗಿನ ಕಾಲುಗಳು ಕೊಡೆಯ ಕಡ್ಡಿಗಳಂತೆ ಚೂಪು ಮತ್ತು ಗಟ್ಟಿಯಾಗಿದ್ದವು. ‘ಮತ್ತೆ ಇಷ್ಟು ಭೀಕರಾಕೃತಿಯನ್ನು ರಾತ್ರಿ ಕಂಡು ಪ್ರೇತವೆಂದು ಭಾವಿಸುವುದರಲ್ಲೇನು ತಪ್ಪು ಬಂತು’ ಎಂದು ನನ್ನನ್ನ ನಾನೇ ಸಮರ್ಥಿಸಿಕೊಂಡೆ. ಆಗಲೇ ಹುಳ ಬಿದ್ದು ದೇಹವಿಡೀ ಕೊಳೆಯಲಾರಂಭಿಸಿತ್ತು. ಊರಿಡೀ ವಾಸನೆಯೆಬ್ಬಿಸುತ್ತಿದ್ದರಿಂದ ಆ ಬಾವಲಿಯನ್ನು ಹೂಳದೆ ವಿಧಿಯಿರಲಿಲ್ಲ. ಅದನ್ನು ಹೇಗೋ ಮಣ್ಣು ಮಾಡಿ ಬರುವ ಹೊತ್ತಿಗೆ ಅಣ್ಣನ ದೂರು ಉಮ್ಮನಲ್ಲಿ ಹೋಗಿಯಾಗಿತ್ತು.
“ಯಾಕೆ ಆ ಹುಳ ಬಿದ್ದ ಬಾವಲಿಯನ್ನು ಕೋಲಿನಲ್ಲಿ ಮುಟ್ಟಿದ್ದು” ಎಂದು ಕಣ್ಣರಳಿಸಿ ಅವನ ಚಾಡಿ ಮಾತಿಗೂ ಮನ್ನಣೆ ಕೊಟ್ಟಿದ್ದರು. ‘ಬರಿಗೈಯಲ್ಲಿ ಮುಟ್ಟದ್ದು ನಿಮ್ಮ ಭಾಗ್ಯ’ ಮೆಲ್ಲಗೆ ಗುನುಗುನಿಸುತ್ತಾ ನಾನು ಜಾಗ ಖಾಲಿ ಮಾಡಿದ್ದೆ. ಆ ಬಳಿಕ ಬಾವಲಿಯ ಹೆದರಿಕೆ ಹೊರಟು ಹೋಗಿತ್ತು.
ಬೆಳಗ್ಗಿನ ಹೊತ್ತು ಅವುಗಳಿಗೆ ಕಣ್ಣು ಕಾಣದು. ಅದಕ್ಕಾಗಿ ರಾತ್ರಿ ಹೊತ್ತು ಹಾರಾಡುತ್ತಾ ಹಣ್ಣು ಹಂಪಲು ತಿನ್ನುತ್ತಾ ನಿಶಾಚರಿಯಾಗಿ ಕಾಲ ಕಳೆಯುತ್ತವೆ. ಬೇಸಿಗೆ ರಜೆಯಲ್ಲಿ ತಿಂಗಳುಗಟ್ಟಲೆ ಮುಚ್ಚಿರುತ್ತಿದ್ದ ನಮ್ಮ ಶಾಲೆಯಲ್ಲಿ ಬಾವಲಿಗಳು ವಾಸ ಹೂಡುವುದುಂಟು. ರಜಾ ದಿನಗಳಲ್ಲಿ ಶಾಲಾ ಮೈದಾನಕ್ಕೆ ಆಡಲು ಹೋಗುತ್ತಿದ್ದ ನಾವು, ಕಿಟಕಿಯ ಕಡೆಗೆ ಮುಖ ಮಾಡಿ ಜೋರಾಗಿ ಕೂಗಿಕೊಳ್ಳುತ್ತಿದ್ದೆವು. ಆಗ ನಮಗಿದ್ದ ಗೋಲ್ ಗುಂಬಜ್ ಅದೊಂದೇ. ಅನುರಣಿಸುವ ನಮ್ಮದೇ ಸದ್ದಿಗೆ ಖುಷಿ ಪಡುತ್ತಿದ್ದೆವು. ಆಗಿನ ಶಾಲೆ ಹಳೆಯ ಹೆಂಚು ಕಟ್ಟಡ. ಒಮ್ಮೆ ಹೀಗೆ ಬೊಬ್ಬೆ ಹಾಕುತ್ತಿದ್ದಂತೆ ಕತ್ತಲಲ್ಲಿ ಪಟಪಟನೆ ರೆಕ್ಕೆ ಬಡಿವ ಸದ್ದು ಕೇಳಿ ಬಂತು. ನಮಗೂ ಕುತೂಹಲ ತಾಳಲಾರದೆ ಆ ಬದಿಯಿಂದೊಮ್ಮೆ ಈ ಬದಿಯಿಂದೊಮ್ಮೆ ಬೊಬ್ಬೆ ಹೊಡೆಯುತ್ತಿದ್ದೆವು. ಆಗ ಸದ್ದು ಬರುವ ವಿರುದ್ಧ ದಿಕ್ಕಿಗೆ ರೆಕ್ಕೆ ಬಡಿಯುವ ಸದ್ದು ಕೇಳುತ್ತಿತ್ತು. ಹಾಗೇ ಮೂರ್ನಾಲ್ಕು ಬಾರಿ ರೆಕ್ಕೆ ಬಡಿಯುವ ಸದ್ದು ಕೇಳಿಸಿಕೊಂಡ ಬಳಿಕ ದಢ್ ಎಂದು ಗೋಡೆಗೆ ಬಡಿವ ಶಬ್ಧ ಬರುತ್ತಿತ್ತು. ಕೊನೆಗೊಮ್ಮೆ ಕಿಟಕಿಯ ಬಳಿಗೆ ಬಂದು ಬಡಿದು ಬಿದ್ದ ಬಾವಲಿಯನ್ನು ಕಂಡಾಗಲೇ ಗೊತ್ತಾಗಿದ್ದು, ಅಷ್ಟೊತ್ತು ನಮಗೆ ಕುತೂಹಲ ಹುಟ್ಟಿಸಿದ್ದು ಇವುಗಳೇ ಎಂದು.
ಸಾಮಾನ್ಯವಾಗಿ ಅವುಗಳು ಬಾಯಿಂದ ಹೊರಡಿಸಿದ ಸದ್ದಿನ ತರಂಗದ ಪ್ರತಿಫಲನದ ಸಮಯವನ್ನು ಕೆಂದ್ರೀಕರಿಸಿ ಅತೀ ವೇಗವಾಗಿ ಮೆದುಳಿನಲ್ಲಿ ಡಿಕೋಡಿಂಗ್ ಮಾಡಿಕೊಂಡು ಅಡೆತಡೆಗಳನ್ನು ತಪ್ಪಿಸಿಕೊಂಡು ಹಾರುತ್ತವೆಯಂತೆ. ಬಹುಶಃ ಕಣ್ಣು ಕಾಣದ ಬಾವಲಿಗೆ ನಾವು ಹೊರಡಿಸಿದ ಸದ್ದು ಹೊಸ ತರಂಗಗಳಂತೆ ಗೋಚರಿಸಿ ಯದ್ವಾ ತದ್ವಾ ಓಡುವ ಪ್ರಯತ್ನವಿರಲೂಬಹುದು, ಅಂತೂ ನಾವದನ್ನು ಗೋಡೆಗೆ ಬಡಿಸಿ ಸಖತ್ ಮಜಾ ತೆಗೆದುಕೊಂಡಿದ್ದೆವು. ಆ ದಿನಗಳಲ್ಲಿ ದಿನಕ್ಕೊಂದರಂತೆ ಬಾವಲಿಗಳು ವೈರು ಕಂಬದಲ್ಲಿ ನೇತಾಡುವುದನ್ನ ನಾವು ನೋಡುತ್ತಿದ್ದೆವು. ಈಗ ನಮ್ಮಲ್ಲಿ ಅವುಗಳನ್ನು ಆಕರ್ಷಿಸುವಷ್ಟು ಹಣ್ಣುಗಳಿಲ್ಲ, ಕಾಡುಗಳಿಲ್ಲ. ಹುಡುಕಿ ನಡೆದರೂ ಕಾಣದಂತೆ ಅವುಗಳ ಸಂತತಿಗಳೂ ಅಂತರ್ಧಾನವಾಗಿದೆ.
ಇತ್ತೀಚೆಗೆ ಕೇರಳದಲ್ಲಿ ಕಂಡಿದ್ದ ಭೀಕರ ವೈರಸ್ ‘ನಿಫಾ’ದ ಹೆದರಿಕೆಯಲ್ಲಿ ಜನ ಲಕ್ಷಕ್ಕೂ ಹೆಚ್ಚು ಬಾವಲಿಗಳನ್ನು ಕೊಂದು ಹಾಕಿದ್ದರು. ಪರಿಣಾಮ ಅಳಿವಿನಂಚಿನಲ್ಲಿದ್ದ ಬಾವಲಿಗಳ ಸಂಖ್ಯೆ ಗಣನೀಯವಾಗಿ ಕುಗ್ಗಿ ಹೋಯಿತು. ಬಾವಲಿಗಳು ಕಾಡಿನ ಸಮೋತಲನಕ್ಕೆ, ಮತ್ತು ಸಸ್ಯ ಸಂಪತ್ತಿಗೆ ಬಹಳಷ್ಟು ಉಪಕಾರಿ. ತಾನು ತಿಂದು ಯಾವುದೋ ಕಾಡಿನ ಮಧ್ಯೆ ಹಿಕ್ಕೆ ಹಾಕಿ ಅಗಮ್ಯ ಕಾಡಿನ ಮಧ್ಯೆಯೂ ಹಲಸು, ಮಾವನ್ನು ಬೆಳೆಸುವ ಕೀರ್ತಿ ಅವುಗಳಿಗೆ ಸಲ್ಲಬೇಕು.
ನಮ್ಮ ಹಿತ್ತಲಿನಲ್ಲಿ ಪೇರಳೆ ಮರವಿತ್ತು. ಪೇರಳೆಯೆಂದರೆ ನನ್ನ ಸಣ್ಣ ತಂಗಿಗೆ ಹುಚ್ಚು ಪ್ರೀತಿ. ಅದೊಂದು ಸಂಜೆ ಮರದ ತುತ್ತ ತುದಿಯಲ್ಲೊಂದು ಹಣ್ಣಾಗಿದ್ದ ಪೇರಳೆಯೊಂದನ್ನು ಗುರ್ತಿಸಿದ್ದಳು. ನನಗೂ ತೋರಿಸಿ ಕೊಯ್ದು ಕೊಡಬೇಕೆಂದು ಹೇಳಿದ್ದಳು. ಶತ ಪ್ರಯತ್ನಪಟ್ಟರೂ ನನಗಾಗದೆ ಕತ್ತಲಾದ್ದರಿಂದ ನಾಳೆ ದೋಟಿ ತಂದು ಕೊಯ್ಯೋಣವೆಂದು ಸಮಾಧಾನ ಪಡಿಸಿ ಮನೆಗೆ ಕರೆದುಕೊಂಡು ಬಂದಿದ್ದೆ. ಮರು ದಿನ ಬೆಳಗ್ಗೆ ಎದ್ದವಳೇ ತಥಾಕಥಿತ ಹಣ್ಣು ಹುಡುಕಿಕೊಂಡು ಹೊರ ಬಂದಿದ್ದಳು. ಹಣ್ಣು ಕಾಣದೆ ಅವಳಿಗೂ ಹೈರಾಣಾಗಿದೆ. ‘ಎಲ್ಲಿ ಹಣ್ಣು’ ಎಂದು ಕೇಳುತ್ತಾ ಸುಮಾರು ಬಾರಿ ಹುಡುಕಿದ ನಂತರ ಎಲೆಗಳ ಮಧ್ಯೆ ಅರ್ಧ ತಿಂದಿದ್ದ ಅದೇ ಹಣ್ಣು ಕಂಡು ಅವಳಿಗೆ ಕೋಪ ನೆತ್ತಿಗೇರಿದೆ. ಅಳುತ್ತಾ ಬಂದವಳೇ, ಇನ್ನು ಇದೇ ಕಾರಣ ಹಿಡಿದು ಉಪವಾಸ ಸತ್ಯಾಗ್ರಹಕ್ಕೆ ಕೂರುತ್ತಾಳೆಂದು ಗೊತ್ತಾದಾಗ ಉಮ್ಮ ಸಮಾಧಾನ ಪಡಿಸಿ ‘ಅದು ಬಾವಲಿ ತಿಂದದ್ದಿರಬಹುದು, ಬೇರೆ ಹಣ್ಣು ಸಿಗುತ್ತದಲ್ವಾ’ ಅಂದಿದ್ದರು. ಅವಳಿಗೆ ಸಿಟ್ಟು ಎಲ್ಲಿತ್ತೋ ಗೊತ್ತಿಲ್ಲ, ‘ಆ ಬಾವಲಿಯನ್ನು ಹುಲಿ ಹಿಡಿಯಲಿಕ್ಕೆ, ನನಗದೇ ಹಣ್ಣು ಬೇಕು’ ಎಂದು ಮತ್ತೆ ಜೋರಾಗಿ ಅಳತೊಡಗಿದ್ದಳು.
ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ..