“ದೇವರ ವಿಳಾಸ ಹುಡುಕಿದ್ದೇನೆ”
ಆ ತೋಟದಲಿ ಯಾರದು
ಅಷ್ಟು ಮಿಂಚು ಹುಳುಗಳ ಬಿಟ್ಟವರು
ಲಾಂದ್ರ ಕಟ್ಟಿಹರೇನು ಬಾಲಕ್ಕೆ?!
ಒಡೆದ ಹಣತೆಗಳ ಬತ್ತಿಯ ತುಂಡೋ
ಅದೆಷ್ಟೋ ಸಾವಿರ, ಹಚ್ಚಿದವರಾರು
ಅದಕೆ ಎಣ್ಣೆ ಇಕ್ಕಿದವರಾರು
ಅದ್ಯಾರೋ ಅಂದರು ದೇವರು..
ಒಡೆಯಾ, ನನಗೆ ನೀವೇ ದೇವರು
ಬೀರ, ನಮ್ಮನೆಯ ಹೊಳ್ಳಿಯಲಿ ಕೂತು ಅಂದ..
ಅವನೊಡೆಯ ನನಗೆ ಅಪ್ಪ ಮಾತ್ರ..
ದೇವಸ್ಥಾನದಲಿ ಸಿಗಬಹುದೆಂದು
ವಿಳಾಸ ಕೊಟ್ಟರು ತಿಳಿದವರು..
ಅಲ್ಲಿ ಇದ್ದುದು ಬರೀ ವಿಶೇಷ ಪೂಜೆ..
ಕೈ ಮುಗಿದರೂ ಮುಖದ ಮೇಲೆ ಬೀಳದ ನೆರಳು..
ಕಾಡಿನಲಿ ಕರೆದೆ ದೇವರನು, ಭುಸ್ಸೆಂದಿತು ಹಾವು
ಕೂತು ಕೂಗಿದೆ ಊರ ಮಧ್ಯದಲಿ
ಒಂದಿಬ್ಬರು ಕರೆದೆಯಾ ಅಂದರು
ದೇವರಾಗುವುದಿಲ್ಲವಲ್ಲಾ ಹೆಸರಿಟ್ಟುಕೊಂಡ ಮಾತ್ರಕ್ಕೆ !
ನಗರದ ಎದೆಯಲ್ಲೇನಾದರೂ ಕೂತಿರಬಹುದಾ
ನೋಡಲಿಕ್ಕೆ ಇಲ್ಲಿ ಕಣ್ಣುಗಳು ಸಂಧಿಸುವುದಿಲ್ಲ..
ಬರೀ ಬೆಳಕಿನ ವ್ಯಾಪಾರ, ದೇವರು ತೇಜಿಯಾಗಿದ್ದಾನೆ..
ಕಾಲವನು ಮತ್ತೆ ಜೋಡಿಸಿದೆ ಅಂಗೈಲಿಟ್ಟು
ದೇವರು ಸಿಗುವುದಿಲ್ಲ ಬಿಡು ಇಂಥ ಹುಡುಕಾಟದಲಿ
ಆತನೋ ಆಕೆಯೋ; ನಮ್ಮಂತೆಯೇ ದೇವರು?!..
ಇರಬಹುದು ಪೂರ ವಿರಾಗಿ, ಭೈರಾಗಿ
ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು
ಕಳೆದುಹೋದವ ಇದೇ ಜಂಗುಳಿಯ ಮಧ್ಯ..
ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ
ಮುಂದೇನಾಗುವರು ?!..
ಶ್ರೀ ತಲಗೇರಿ ಉತ್ತರ ಕನ್ನಡ ಜಿಲ್ಲೆಯ ತಲಗೇರಿ ಎನ್ನುವ ಪುಟ್ಟ ಹಳ್ಳಿಯವರು.
ಸದ್ಯಕ್ಕೆ ಬೆಂಗಳೂರಿನ ನಿವಾಸಿ
ಸಾಫ್ಟ್ವೇರ್ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಶ್ರೀ ತಲಗೇರಿ
“ದೇವರು ತೇಜಿಯಾಗಿದ್ದಾನೆ”
ಮಂದಿಯೇ ತೇಜಿ ಮಾಡಿದರು ನೋಡಿ
ಓಟಿಗೂ ನೋಟಿಗೂ ದೇವರು ಬಳಕೆಯಾಗಿ
ಏಟಿಗೆ ಬಂದು ತಲುಪಿರುವದು ದುರಂತ
ಡಿ. ಎಮ್. ನದಾಫ್.
ಅಫಜಲಪುರ
ಧನ್ಯವಾದಗಳು !