ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ. ಪ್ಯಾಬ್ಲೊ ನೆರೂಡ ಹೇಳುತ್ತಾನೆ. ಒಂದು ಮರದ ತುಂಡು, ಪಿಂಗಾಣಿ ತಟ್ಟೆ, ಬ್ರೆಡ್ಡು ಇಂಥವು ಕಾವ್ಯಕ್ಕೆ ಅತಿ ಹತ್ತಿರವಾಗಬೇಕಂತೆ. ಕವಿ ಮುಟ್ಟಿದನೆಂದರೆ ಅವಕ್ಕೆ ಪ್ರಾಶಸ್ತ್ಯ ಸಿಕ್ಕಿಬಿಡುತ್ತದೆ. ‘ಆರದ ಕೆಂಡ’ ಅಂತಹ ಒಂದು ಪ್ರಯೋಗ.
ಕವಿ ದಿಲೀಪ್ ಕುಮಾರ್ ಅವರ ಚೊಚ್ಚಲ ಕವನ ಸಂಕಲನ “ಹಾರುವ ಹಂಸೆ”ಗೆ ಡಾ. ಮೂಡ್ನಾಕೂಡು ಚಿನ್ನಸ್ವಾಮಿಯವರು ಬರೆದ ಮಾತುಗಳು

 

ಈ ಹುಡುಗ ಎಷ್ಟು ಹಠಮಾರಿ ಎಂದರೆ ನಾನು ಬರೆಯುವುದಿಲ್ಲ ಎಂದರೆ ಕೇಳುವವನಲ್ಲ. ನೀವು ನಮ್ಮ ಊರಿನ ಕವಿ, ನನ್ನ ಕವಿತೆಗಳ ಬಗ್ಗೆ ಯಾಕೆ ಬರೆಯೋಲ್ಲ? ಎಂದು ಮತ್ತೆ ಪ್ರಶ್ನೆ ಮಾಡುತ್ತಾನೆ! ಹೀಗೆ ಎರಡು ವರ್ಷಗಳಿಂದ ಜಗಳ ಮಾಡುತ್ತಿದ್ದಾನೆ. ಹಾಗೆಂದು ಈತ ಯಾವುದೇ ಬಗೆಯ ವಿನಾಯಿತಿ ಬಯಸುವ ಕವಿಯಲ್ಲ. ನಮ್ಮೂರಿನ ಈ ಯುವಕನ ಬಗ್ಗೆ ನನಗೆ ಹೆಮ್ಮೆ ಇದೆ. ಈತನ ಓದಿನ ಹರವು ಅಚ್ಚರಿ ಮೂಡಿಸುತ್ತದೆ. ಈ ವಯಸ್ಸಿಗೆ ತನ್ನ ಸರೀಕರಿಗಿಂತ ಹೆಚ್ಚು ಓದಿಕೊಂಡಿದ್ದಾನೆ ಎನ್ನಬಹುದು.

ಹೊಸ ತಲೆಮಾರಿನ ಲೇಖಕರಿಗೆ ಹಳಗನ್ನಡ ಪಥ್ಯವಾಗುವುದಿಲ್ಲ ಎನ್ನುತ್ತಿರುವಾಗಲೇ ಈತ ಪಂಪ, ಲಕ್ಷ್ಮೀಶ, ಕುಮಾರವ್ಯಾಸ ಮುಂತಾದ ಪೂರ್ವಸೂರಿ ಕವಿಗಳನ್ನು ತಳಸ್ಪರ್ಶಿಯಾಗಿ ವಿಶ್ಲೇಷಿಸಬಲ್ಲ. ಮೊದಲಿಗೆ ವಿಮರ್ಶೆಯಲ್ಲಿ ತೊಡಗಿದ್ದವನು ಈಗ ಕವಿತೆಗೆ ಹೊರಳಿದ್ದಾನೆ. ವಿದ್ವತ್ತಿನ ಬೆನ್ನು ಹತ್ತಿದ ನಿನಗೆ ಅದು ಸೂಕ್ತ ಕ್ಷೇತ್ರ ಎಂದು ನಾನು ಹರಸಿ, ಹಾರೈಸಿದ್ದೂ ಉಂಟು. ಆದರೆ ಈಗ ಕವಿತೆಗಳ ಗುಚ್ಛವೊಂದು ‘ಹಾರುವ ಹಂಸೆ’ ಯಾಗಿ ಕೊರಳಿಗೆ ನುಡಿಹಾರ ಬಯಸಿ ನನ್ನ ಮೇಜಿನ ಮೇಲೆ ಬಂದು ಕೂತಿದೆ.

(ದಿಲೀಪ್ ಕುಮಾರ್)

ಹೆಚ್ಚಿನವರಲ್ಲಿ ಶಾಸ್ತ್ರಾಧ್ಯಯನವು ಸೃಜನಶೀಲತೆಗೆ ತೊಡಕಾಗಿ ಪರಿಣಮಿಸುತ್ತದೆ. ಅದು ತನ್ನನ್ನು ತಾನೆ ಒರೆಗೆ ಹಚ್ಚಿ ನೋಡಿಕೊಳ್ಳುವುದನ್ನು ಕಲಿಸುವುದರಿಂದ ಹಾಗಾಗುತ್ತದೆ. ಹಾಗೆಂದ ಮಾತ್ರಕ್ಕೆ ಸೃಜನಶೀಲನಾದವನಿಗೆ ಅಧ್ಯಯನದ ಅವಶ್ಯಕತೆ ಇಲ್ಲವೆಂದಲ್ಲ. ಅದಿಲ್ಲದಿದ್ದರೆ ಅಭಿವ್ಯಕ್ತಿಯು ಸೊರಗುತ್ತದೆ. ಕಾವ್ಯವನ್ನು ಸತ್ಯ ಮತ್ತು ಸೌಂದರ್ಯಗಳ ಯುಗಳ ದರ್ಶನ ಎಂದು ನಾನು ತಿಳಿದಿದ್ದೇನೆ. ಸತ್ಯ ಅಂದರೆ ಕಣ್ಣು ಕಂಡದ್ದು ಮತ್ತು ಮನಸ್ಸು ಉಂಡದ್ದು. ಇದನ್ನೆ ಅನುಭವ ಪ್ರಾಮಾಣಿಕತೆ ಎಂದು ಕರೆಯುತ್ತಾರೆ. ಸೌಂದರ್ಯ ಅದರ ಅಭಿವ್ಯಕ್ತಿ. ಅದೊಂದು ಕುಸುರಿ ಕೆಲಸ. ಕಾವ್ಯದ ಶಿಲ್ಪವನ್ನು ಕೆತ್ತುವುದು ಅಷ್ಟು ಸುಲಭವಲ್ಲ. ಭಾಷೆಯನ್ನು ರಸಾತ್ಮಕವಾಗಿ ಕುಟ್ಟಿ ಹದಮಾಡಿ ಎರಕ ಹೊಯ್ದು ನಿಲ್ಲಿಸಬೇಕು. ಅನುಗಾಲವೂ ನಿಲ್ಲುವಂತೆ ನಿಲ್ಲಿಸಬೇಕು. ಆದ್ದರಿಂದ ಮೂಲವಸ್ತುವೂ (ಅನುಭವವೂ) ಮುಖ್ಯ, ಕುಸುರಿಕಲೆಯೂ (ಅಭಿವ್ಯಕ್ತಿಯೂ) ಮುಖ್ಯ. ಶಬ್ದಾರ್ಥಸಹಿತವಾಗಿಯೂ ಕಾವ್ಯ ದಕ್ಕದೇ ಹೋಗಬಹುದು.

ಆದರೆ ಸತ್ಯ ಮತ್ತು ಸೌಂದರ್ಯಗಳ ದರ್ಶನವಿಲ್ಲದೇ ಕಾವ್ಯವಿಲ್ಲ. ಬೇಂದ್ರೆ ಅದನ್ನು ಇನ್ನೊಂದು ಬಗೆಯಲ್ಲಿ “ಸ್ಫೂರ್ತಾ, ಅಮೂರ್ತಾ, ಆವಿರ್ಭೂತಾ ಭವಮಂಥನ ಮಂತ್ರಾ” ಎಂದು ಹೇಳುತ್ತಾರೆ. ನುಡಿಗಾರುಡಿಗ, ಎಂದಿಗೂ ಕಾವ್ಯಪ್ರೇಮಿಯ ಸಖ, ಸ್ಫೂರ್ತಿ ಮಂತ್ರವಾಗುವ ಬಗೆಯನ್ನು ಅನನ್ಯವಾಗಿ ವರ್ಣಿಸಿದ್ದಾರೆ. ಅದು ಅಮೂರ್ತವೂ ಆಗಿರಬೇಕು, ಭವಮಂಥನವೂ ಆಗಿರಬೇಕು!

*****

ದಿಲೀಪ್ ಕುಮಾರ್ ಅವರ ಈ ಚೊಚ್ಚಲ ಕವಿತಾಸಂಕಲನ ಕಾದ ಭೂಮಿಯ ಮೇಲೆ ಬಿದ್ದ ಮೊದಲ ಮಳೆಯಂತೆ ಚೈತನ್ಯದಾಯಕವಾಗಿದೆ ಎಂದು ನನಗನಿಸುತ್ತಿದೆ. ಹಸಿ ಮಣ್ಣಿನ ಕಂಪು ಸೂಸುತ್ತಿದೆ. ‘ತದ್ವಿದಹ್ಲಾದಕಾರಿಣಿ’ ಯಾಗಿದೆ. ಇದಕ್ಕಿಂತ ಇನ್ನೇನು ಬೇಕು? ಪ್ರತಿಯೊಬ್ಬ ಕವಿಯ ಅಂತರಂಗದಲ್ಲಿಯೂ ಒಳದನಿಯೊಂದು ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ಅದನ್ನೆ ಸ್ಥಾಯಿಭಾವ ಎಂದು ಅಲಂಕಾರಿಕರು ಕರೆದಿದ್ದಾರೆ. ಕವಿಯೊಬ್ಬನ ಸ್ಥಾಯಿಭಾವ ಏನೆಂಬುದು ಮೊದಲ ಸಂಕಲನದಲ್ಲಿ ಸಿಕ್ಕುವುದಿಲ್ಲ. ಅದನ್ನು ನಿರೀಕ್ಷಿಸಲೂಬಾರದು. ಆದ್ದರಿಂದ ವಿಭಾವಾನುಭಾವ ಸಂಚಾರಿ ಭಾವಗಳ ಕುರಿತ ಜಿಜ್ಞಾಸೆ ಇಲ್ಲಿ ಅನಗತ್ಯ. ಹರೆಯದ ಸೌಮ್ಯ ಉನ್ಮಾದದಲ್ಲಿ ಕವಿಮನಸ್ಸು ಇಲ್ಲಿ ಸ್ವೈರವಿಹಾರ ನಡೆಸಿದೆ. ಕವಿ ನನಗೆ ‘ಕಟ್ಟುವಿಕೆ’ಯ ಸಾಮರ್ಥ್ಯವಿದೆ ಎಂಬುದನ್ನು ದಾಷ್ಟ್ರ್ಯದಿಂದಲೇ ನಿರೂಪಿಸಿದ್ದಾನೆ.

ಜನಪದ ಸಂಸ್ಕೃತಿಯ ತವರೂರಾದ ಚಾಮರಾಜನಗರ ಜಿಲ್ಲೆಯ ಹೈಕಳು ಹಾಡುತ್ತಾ, ಕಟ್ಟುತ್ತಾ ಬೆಳೆಯುತ್ತಾರೆ. ಮಲೆಮಹಾದೇಶ್ವರ ಮತ್ತು ಮಂಟೇಲಿಂಗಯ್ಯ ಎಲ್ಲ ಜಾತಿ, ವರ್ಗದ ಜನರಿಗೂ ಅದ್ಭುತ ರೂಪಕಗಳಾಗಿ ಕಾಡುತ್ತಾರೆ. ಸಂವೇದನಾಶೀಲನಾದ ಸಾಹಿತ್ಯದ ವಿದ್ಯಾರ್ಥಿಗೆ ಅದೊಂದು ಫಲವತ್ತು ನೆಲ, ಮುಗಿಯದ ಹಾಡುಗಬ್ಬದ ರಸದೌತಣ. ಈ ಸಂಕಲನದ ಕವಿತೆ ‘ಉರಿಗದ್ದಿಗೆ’ ಅದನ್ನು ಹೇಳುತ್ತಿದೆ. ‘ಸಿದ್ದಯ್ಯಾ ಸ್ವಾಮಿ ಬನ್ನಿ, ಮಂಟೇದಾ ನಿಂಗಯ್ಯಾ ನೀವು ಬನ್ಯೋ’ ಎಂಬ ಸಾಲುಗಳನ್ನು ಗುನುಗದ ನಮ್ಮ ಕತ್ತಲ ರಾಜ್ಯದ ಪ್ರಜೆಯೇ ಇಲ್ಲ ಎನ್ನಬಹುದು.

ದಿಲೀಪ್ ಗಂಭೀರ ಕಾವ್ಯಾಭ್ಯಾಸಿಯಾಗಿರುವುದರಿಂದ ಭಾಷೆಯು ಸಲಿಲವಾಗಿ ಹರಿದಿದೆ ಮತ್ತು ಒಂದು ರೀತಿಯ ನವಿರುತನ ಪ್ರಾಪ್ತವಾಗಿದೆ. ಕೆಲವು ಸಾಲುಗಳು ರೇಶಿಮೆಯನ್ನು ತುದಿಬೆರಳಿನಲ್ಲಿ ಸ್ಪರ್ಶಿಸಿದ ಹಾಗೆ ಭಾಸವಾಗುತ್ತವೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಬಹುದು.

ಅವಳಂಥ ಬಳ್ಳಿಯೊಂದು ತೊಡರಿದಾಗ
ಒಳಗೆಲ್ಲಾ ನಾಗಲಿಂಗ ಪುಷ್ಪದ ಘಮಲು – ಒಂದು ಸಂಜೆ

ಅವಳು ಬಳಿ ಸುಳಿದಂತೆಲ್ಲಾ
ಒಳಗೊಳಗೆ ಕ್ಷೀರಸಾಗರ ಮಥನ
ಪಾರಿಜಾತದ ಪರಿಮಳ
ಕೊಳ್ಳದ ತುಂಬ ತುಂಬಿ ಹರಿವ ನೀರು – ಹರಿವ ನೀರು

ಎಲ್ಲವೂ ಇದೆ ಈ ಹಾಳು ಎದೆಯಲ್ಲಿ
ನಿನ್ನ ಬಗೆಗಿನ ಕೋಪವೊಂದನ್ನು ಬಿಟ್ಟು – ಕೊಡು

ಹೆಚ್ಚಿನವರಲ್ಲಿ ಶಾಸ್ತ್ರಾಧ್ಯಯನವು ಸೃಜನಶೀಲತೆಗೆ ತೊಡಕಾಗಿ ಪರಿಣಮಿಸುತ್ತದೆ. ಅದು ತನ್ನನ್ನು ತಾನೆ ಒರೆಗೆ ಹಚ್ಚಿ ನೋಡಿಕೊಳ್ಳುವುದನ್ನು ಕಲಿಸುವುದರಿಂದ ಹಾಗಾಗುತ್ತದೆ. ಹಾಗೆಂದ ಮಾತ್ರಕ್ಕೆ ಸೃಜನಶೀಲನಾದವನಿಗೆ ಅಧ್ಯಯನದ ಅವಶ್ಯಕತೆ ಇಲ್ಲವೆಂದಲ್ಲ. ಅದಿಲ್ಲದಿದ್ದರೆ ಅಭಿವ್ಯಕ್ತಿಯು ಸೊರಗುತ್ತದೆ. ಕಾವ್ಯವನ್ನು ಸತ್ಯ ಮತ್ತು ಸೌಂದರ್ಯಗಳ ಯುಗಳ ದರ್ಶನ ಎಂದು ನಾನು ತಿಳಿದಿದ್ದೇನೆ.

ನಾನು ಆಗಲೇ ಹೇಳಿದ ಹಾಗೆ ಈತ ಮುಗ್ಧನಲ್ಲ. ಕಾವ್ಯದ ಒಳ ಹೊರಗನ್ನು ಬಲ್ಲವನು. ಆದ್ದರಿಂದ ಭಾವಕ್ಕಿಂತ ಬುದ್ಧಿಯ ತೂಕ ಸ್ವಲ್ಪ ಹೆಚ್ಚಾಗಿರುವುದು ಸಹಜವೇ ಆಗಿದೆ. ‘ಬೆಂಕಿ ಹೊರಗಿಲ್ಲ’ ಕವಿತೆ ಇಲ್ಲಿನ ಉತ್ತಮ ರಚನೆಗಳಲ್ಲೊಂದು. ಅದು ಹೀಗೆ ಶುರುವಾಗುತ್ತದೆ.

ಮನೆಯ ಮುಂದಿನ ಚಪ್ಪಲಿಯ ಹಾಗೆ
ಕಾದು ಕೂತಿದೆ ಅದುವೂ ನನ್ನಂತೆ
ಗಮ್ಯದ ಗಮನ ನೀಡುತ್ತಾ

ಮೊದಲೆರಡು ಸಾಲುಗಳು ರೂಪಕವಾಗಿ ಗಮನ ಸೆಳೆಯುತ್ತವೆ. ಮೂರನೆಯ ಸಾಲು ಬುದ್ಧಿಪೂರ್ವಕವಾಗಿದೆ. ಅದರ ಮುಂದಿನ ಸ್ಟ್ಯಾಂಜಾ ನೋಡಿ.

ಬೆಂಕಿಯ ಮುಂದೆ ಚಳಿ ಕಾಯುವ ಹಾಗೆ
ಕಾಯುತ್ತಿದ್ದೇನೆ ನಿನಗಾಗಿ
ಬೆಂಕಿ ಹೊರಗಿಲ್ಲ

ಇದೊಂದು ಮಾತನಾಡುತ್ತಿರುವ ಚಿತ್ರ. ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ.

ಕವಿಗೆ ದಕ್ಕದ ವಸ್ತುವೇ ಇಲ್ಲ. ಪ್ಯಾಬ್ಲೊ ನೆರೂಡ ಹೇಳುತ್ತಾನೆ. ಒಂದು ಮರದ ತುಂಡು, ಪಿಂಗಾಣಿ ತಟ್ಟೆ, ಬ್ರೆಡ್ಡು ಇಂಥವು ಕಾವ್ಯಕ್ಕೆ ಅತಿ ಹತ್ತಿರವಾಗಬೇಕಂತೆ. ಕವಿ ಮುಟ್ಟಿದನೆಂದರೆ ಅವಕ್ಕೆ ಪ್ರಾಶಸ್ತ್ಯ ಸಿಕ್ಕಿಬಿಡುತ್ತದೆ. ‘ಆರದ ಕೆಂಡ’ ಅಂತಹ ಒಂದು ಪ್ರಯೋಗ.

ಇಲ್ಲೆ ಈ ಜಾಗದಲ್ಲೆ ಆರದೆಲೆ ಉಳಿದಿದ್ದ
ಸಿಗರೇಟಿನ ಕೆಂಡ ಆರಿದ್ದು
ಮೂಗಿಗೆ ಘಮಟು ಹಿಡಿವಂತೆ ಉಲಿದಿದ್ದು
ಬೆರಳುಗಳ ಮಧ್ಯೆ ನಲಿದಿದ್ದ
ಕೆಂಡ ಆರಿದ್ದು ಅಲ್ಲೆ

ಕವಿತೆಯ ಹೊರಮೈಯಲ್ಲಿ ಸಿಗರೇಟಿನ ಕೊನೆಯ ತುಂಡಿನ ಕೆಂಡ ಆರದೆ ಹೊಗೆಯಾಡಿಸುತ್ತಿದೆ (ನಾನಾಗಿದ್ದರೆ ಮೋಟು ಬೀಡಿಯ ಚಿತ್ರ ಕೊಡುತ್ತಿದ್ದೆ. ನನ್ನ ಹಳ್ಳಿಗಾಡಿನ ಬಂಧುಗಳು ಬೀಡಿಯನ್ನು ಅರ್ಧ ಸೇದಿ ಆರಿಸಿ, ಸ್ಟೈಲಾಗಿ ಹೂವಿಡುವಂತೆ ಕಿವಿಯ ಮೇಲಿಟ್ಟುಕೊಂಡು ಮತ್ತೊಮ್ಮೆ ಧಮ್ಮೆಳೆದು ಆರಿಸಲು ಕಷ್ಟ ಪಡುತ್ತಿದ್ದುದನ್ನು ನಾನು ನೋಡಿದ್ದೇನೆ.) ಆದರೆ ಒಳಮೈಯಲ್ಲಿ ಅವಳ ಚಿತ್ರವಿದೆ. ಆದ್ದರಿಂದ ‘ಹೊರಗೆಲ್ಲಾ ಹೊಗೆಯಾಡುವ ಕೆಂಡ/ ಒಳಗೆಲ್ಲಾ ತಂಪಾದ ಹಿಮಾಲಯ’. ಎಂದು ಕವಿಗನಿಸುತ್ತದೆ. ಇಂತಹ ಸುಕೋಮಲ ಚಿತ್ರಗಳನ್ನು ಕಟ್ಟಿಕೊಡುವುದರಲ್ಲಿ ದಿಲೀಪ್ ಯಶಸ್ವಿಯಾಗಿದ್ದಾರೆ.

(ಡಾ. ಮೂಡ್ನಾಕೂಡು ಚಿನ್ನಸ್ವಾಮಿ)

ಗಮ್ಯ, ನಿನ್ನ ನೆನಪು, ಕಣಿವೆಯ ದಾರಿ, ಸತ್ತಿಗೆ, ವಸುಂಧರೆ, ಮುಗುಳು ನಗಳು, ಅಲ್ಲಮನಿಗೆ, ಹಾರುವ ಹಂಸೆ ಮುಂತಾದ ಉತ್ತಮ ರಚನೆಗಳು ಈ ಸಂಕಲನದಲ್ಲಿವೆ. ಬುದ್ಧ, ಸಾಕ್ರೆಟಿಸ್ ರಿಂದ ಹಿಡಿದು ಕನಕ, ಪುರಂದರ, ಅಕ್ಕ, ಅಲ್ಲಮನವರೆಗೂ ಕವಿತೆಗಳಿವೆ. ಹೊಳೆದಂಡೆಯಲ್ಲಿ ಭೇಟಿಯಾದ ತಾವೋ ಹೆಗಲ ಮೇಲೆ ಕೈಯಿಟ್ಟು ‘ಬಿಡಬಾರದು ಹೆಜ್ಜೆ ಗುರುತು’ ಎಂದು ಉಪದೇಶಿಸಿದರೆ ಈತ ಬಸವನಹುಳುವನ್ನು ಪರಿಚಯಿಸಿ ತಾನು ಗೆದ್ದೆನೆಂದು ಬೀಗುತ್ತಾನೆ! ಇಲ್ಲಿ ಕವಿಯ ಆತ್ಮವಿಶ್ವಾಸವೂ ಗೆಲ್ಲುತ್ತದೆ. ಕವಿ ಮಹತ್ವಾಕಾಂಕ್ಷಿಯಾಗಿದ್ದಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದಿಲೀಪ್ ತನ್ನನ್ನು ತಾನೇ ಪ್ರಯೋಗಕ್ಕೆ ಒಡ್ಡಿಕೊಂಡಿರುವುದು ಇಲ್ಲಿನ ಕೆಲವು ಕವಿತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

‘ಉಪ್ಪು ಸಮುದ್ರದ ತುಂಬ ಸಕ್ಕರೆಯ ಸ್ವಾದ ಅರಸಿ ನಡೆದಿದ್ದೇನೆ’ ಎಂಬ ಬೆಡಗಿನ ಸಾಲು ಇವರ ಕಾವ್ಯ ದೃಷ್ಟಿಯನ್ನು, ಲೋಕದೃಷ್ಟಿಯನ್ನು ಹೇಳತ್ತಿದೆ.

ಆಡದೆ ಹೋದರೂ ಮಾತಿನ ಗಂಧವ ತೇಯುತ ಹೋದವ ನಾನು
ಒಲವಿನ ಚಿತ್ರಕೆ ಭಾವದ ಗೆರೆಗಳ ಎಳೆಯುತ ಹೋದವ ನಾನು – ಒಂದು ಭಾವ

ಕಾವ್ಯವನ್ನು ಕುರಿತು ಇಷ್ಟು ಸ್ಪಷ್ಟವಾದ ಗ್ರಹಿಕೆ ಇರುವ ಕವಿಯ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವೇನಿದೆ? ವಿದ್ವತ್ತು ಮತ್ತು ಪ್ರತಿಭೆಯ ಜೋಡೆತ್ತಿನ ಬಂಡಿಯನೇರಿ ಸವಾರಿ ನಡೆಸಿರುವ ದಿಲೀಪ್ ಕುಮಾರ್ಗೆ ಎಲ್ಲ ಶ್ರೇಯಸ್ಸು ಒದಗಿ ಬರಲಿ ಎಂದಷ್ಟೆ ಹಾರೈಸುತ್ತೇನೆ.