ಒಳಗುಡಿಯಿಂದ ಹೊರಭಾಗದಲ್ಲಿರುವ ತೆರೆದ ಮುಖಮಂಟಪದ ಕಂಬಗಳು ಸಪಾಟಾಗಿದ್ದರೂ ಕಂಬಗಳ ಕೆಳಭಾಗದಲ್ಲಿ ಅಲ್ಲಲ್ಲಿ ಕೆಲವು ಶಿಲ್ಪಗಳನ್ನು ಕಾಣಬಹುದು. ಶಿವದೇಗುಲದ ಬಲಬದಿಯ ಗುಡಿಯಲ್ಲಿ ಪಾರ್ವತೀದೇವಿಯ ಸುಂದರವಾದ ವಿಗ್ರಹವಿದೆ. ಐದು ಅಡಿಗೂ ಮೀರಿದ ಎತ್ತರವಾದ ನಿಲುವು, ಹಸನ್ಮುಖ, ವರದಹಸ್ತಗಳುಳ್ಳ ಚತುರ್ಭುಜಳಾದ ದೇವಿಯ ಶಿಲ್ಪ ಸೊಗಸಾದ ಕೆತ್ತನೆಯ ಮಾದರಿಯಾಗಿದೆ. ಗುಡಿಯ ಎದುರಿನ ದೇಗುಲದಲ್ಲಿ ಸತ್ಯನಾರಾಯಣಸ್ವಾಮಿಯ ಮೂರ್ತಿ. ಮೇಲಿನ ಕೈಗಳಲ್ಲಿ ಚಕ್ರ, ಶಂಖಗಳನ್ನೂ ಬಲಗೈಯಲ್ಲಿ ಪದ್ಮ, ಎಡಗೈಯಲ್ಲಿ ಗದೆಗಳನ್ನೂ ಧರಿಸಿರುವ ನಾರಾಯಣನ ವಿಗ್ರಹವಿದು. ಇಲ್ಲಿನ ಛಾವಣಿ ಕಿರುಗೂಡುಗಳ ವಿನ್ಯಾಸದಿಂದ ಗಮನಸೆಳೆಯುತ್ತದೆ. ಇವೆಲ್ಲ ಗುಡಿಗಳ ಶಿಖರಗಳು ಗಾರೆಯಿಂದ ಮಾಡಲ್ಪಟ್ಟಿದ್ದು ಸುಸ್ಥಿತಿಯಲ್ಲಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

 

ಬೆಂಗಳೂರಿನಿಂದ ನಲವತ್ತೆಂಟು ಕಿ.ಮೀ. ದೂರದಲ್ಲಿರುವ ಮಾಗಡಿ ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಹನ್ನೊಂದನೆಯ ಶತಮಾನದ ಚೋಳರ ಆಳ್ವಿಕೆಯ ಕಾಲದಲ್ಲೇ ಪ್ರಸಿದ್ಧಿಗೆ ಬಂದಿರಬಹುದಾದ ಈ ನಾಡು ವಿಜಯನಗರ ಅರಸರ ಕಾಲದಲ್ಲಿ ಹೆಚ್ಚಿನ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಯಿತು. ಬೆಂಗಳೂರು ಸ್ಥಾಪಕನಾದ ಕೆಂಪೇಗೌಡನೂ ಅವನ ಹೆಸರಿನಿಂದಲೇ ಗುರುತಿಸಲ್ಪಟ್ಟ ಆತನ ವಂಶಜರೂ ಶತ್ರುಧಾಳಿಯಿಂದ ಸುರಕ್ಷಿತವಾಗಿರುವ ಉದ್ದೇಶದಿಂದ ಮಾಗಡಿಯನ್ನೇ ತಮ್ಮ ಮುಖ್ಯಕೇಂದ್ರವಾಗಿ ಮಾಡಿಕೊಂಡು ರಾಜ್ಯವಾಳಿದರು.

ಮಾಗಡಿಯಲ್ಲಿರುವ ಮುಖ್ಯ ದೇವಾಲಯಗಳಾದ ರಂಗನಾಥಸ್ವಾಮಿಯ ಗುಡಿಯ ಜೀರ್ಣೋದ್ಧಾರವನ್ನೂ ಹಾಗೂ ಸೋಮೇಶ್ವರ ದೇಗುಲದ ನಿರ್ಮಾಣವನ್ನೂ ಕೆಂಪೇಗೌಡರ ವಂಶಸ್ಥರೇ ಕೈಗೊಂಡರು. ಸೋಮೇಶ್ವರ ದೇವಾಲಯದ ನಿರ್ಮಾಣವು ಎರಡನೆಯ ಕೆಂಪೇಗೌಡನ ಕಾಲದಲ್ಲಿ ಎಂದರೆ 1569ರ ವೇಳೆಗೆ ಆಗಿರಬೇಕೆಂಬ ಊಹೆಯಿದ್ದರೂ ಶಾಸನಾದಿಗಳ ಆಧಾರದ ಮೇರೆಗೆ 1712 ರಲ್ಲಿ ಈ ರಾಜಮನೆತನದ ಅರಸನಾಗಿದ್ದ ಕೆಂಪವೀರಗೌಡನೇ ಸೋಮೇಶ್ವರ ದೇವಾಲಯದ ನಿರ್ಮಾತೃವೆಂದು ಹೇಳಲಾಗುತ್ತದೆ.

ಮಾಗಡಿಯ ಹೊರವಲಯದಲ್ಲಿ ಕುಣಿಗಲ್ಲಿನತ್ತ ಸಾಗುವ ಮುಖ್ಯರಸ್ತೆಯ ಬದಿಯಲ್ಲಿ ಸೋಮೇಶ್ವರ ದೇವಾಲಯದ ಎತ್ತರದ ರಾಜಗೋಪುರ ನಿಮ್ಮನ್ನು ಸ್ವಾಗತಿಸುತ್ತದೆ. ಸಿಡಿಲಿನ ದೆಸೆಯಿಂದಾಗಿ ಹಿಂದಿನ ಗೋಪುರವು ಕುಸಿದ ಮೇಲೆ ನೂರು ವರ್ಷಗಳಿಗೂ ಹಿಂದೆ ಈಗಿರುವ ರಾಜಗೋಪುರವನ್ನು ಪುನರ್ನಿಮಿಸಲಾಗಿದೆ.

ಪ್ರವೇಶದ್ವಾರದ ಕಂಬಗಳಲ್ಲಿ ವಿಜಯನಗರ ಶೈಲಿಯ ಇತರ ದೇಗುಲಗಳಲ್ಲಿ ಕಾಣಬಹುದಾದಂತೆ ಹೂಬಳ್ಳಿಗಳನ್ನು ಆಧರಿಸಿ ನಿಂತ ಶಿಲಾಸುಂದರಿಯರು. ಆವರಣದ ಒಳಪ್ರವೇಶಿಸುತ್ತಿರುವಂತೆ ವಿಶಾಲವಾದ ವೇದಿಕೆಯ ಮೇಲಿನ ಧ್ವಜಸ್ತಂಭ, ಕಲ್ಯಾಣಮಂಟಪ, ಸಭಾಮಂಟಪ, ವಿವಿಧ ದೇವತೆಗಳ ಗುಡಿಗಳು ಮೊದಲಾದವನ್ನೊಳಗೊಂಡ ವಿಸ್ತಾರವಾದ ಆವರಣ ಕಣ್ಸೆಳೆಯುತ್ತದೆ. ಎತ್ತರವಾದ ಪಾಣಿಪೀಠದ ಮೇಲಿನ ಸೋಮೇಶ್ವರ ಲಿಂಗ ಇಲ್ಲಿನ ಮುಖ್ಯ ಪೂಜಾದೈವ. ಶಿವಲಿಂಗದ ಎದುರಿಗೆ ಸಾಲಂಕೃತ ನಂದಿ. ಒಳಗುಡಿಯ ಕಂಬಗಳ ಮೇಲೆಲ್ಲ ವಿಜಯನಗರ ಶೈಲಿಯ ಅನೇಕ ಉಬ್ಬುಶಿಲ್ಪಗಳು. ವೀರಭದ್ರ, ಭೈರವ, ನರ್ತಕಿ, ವಾದ್ಯಗಾರರು, ಚಾಮರಧಾರಿಣಿ, ಯಕ್ಷರು, ಯೋಧರು, ಮಹಿಷಮರ್ದಿನಿ, ಋಷಿ, ವೃಷಭಾರೂಢ ಶಿವಪಾರ್ವತಿಯರು, ಭೃಂಗಿ, ನಂದಿ,ಹಂಸ, ಪುರುಷಾಮೃಗ, ಗಣಪತಿ ಮೊದಲಾದ ಶಿಲ್ಪಗಳು ಸುಸ್ಥಿತಿಯಲ್ಲಿದ್ದು ಗಮನಸೆಳೆಯುತ್ತವೆ.

ಒಳಗುಡಿಯಿಂದ ಹೊರಭಾಗದಲ್ಲಿರುವ ತೆರೆದ ಮುಖಮಂಟಪದ ಕಂಬಗಳು ಸಪಾಟಾಗಿದ್ದರೂ ಕಂಬಗಳ ಕೆಳಭಾಗದಲ್ಲಿ ಅಲ್ಲಲ್ಲಿ ಕೆಲವು ಶಿಲ್ಪಗಳನ್ನು ಕಾಣಬಹುದು. ಶಿವದೇಗುಲದ ಬಲಬದಿಯ ಗುಡಿಯಲ್ಲಿ ಪಾರ್ವತೀದೇವಿಯ ಸುಂದರವಾದ ವಿಗ್ರಹವಿದೆ. ಐದು ಅಡಿಗೂ ಮೀರಿದ ಎತ್ತರವಾದ ನಿಲುವು, ಹಸನ್ಮುಖ, ವರದಹಸ್ತಗಳುಳ್ಳ ಚತುರ್ಭುಜಳಾದ ದೇವಿಯ ಶಿಲ್ಪ ಸೊಗಸಾದ ಕೆತ್ತನೆಯ ಮಾದರಿಯಾಗಿದೆ.

ಈ ಗುಡಿಯ ಎದುರಿನ ದೇಗುಲದಲ್ಲಿ ಸತ್ಯನಾರಾಯಣಸ್ವಾಮಿಯ ಮೂರ್ತಿ. ಮೇಲಿನ ಕೈಗಳಲ್ಲಿ ಚಕ್ರ, ಶಂಖಗಳನ್ನೂ ಬಲಗೈಯಲ್ಲಿ ಪದ್ಮ, ಎಡಗೈಯಲ್ಲಿ ಗದೆಗಳನ್ನೂ ಧರಿಸಿರುವ ನಾರಾಯಣನ ವಿಗ್ರಹವಿದು. ಇಲ್ಲಿನ ಛಾವಣಿ ಕಿರುಗೂಡುಗಳ ವಿನ್ಯಾಸದಿಂದ ಗಮನಸೆಳೆಯುತ್ತದೆ. ಇವೆಲ್ಲ ಗುಡಿಗಳ ಶಿಖರಗಳು ಗಾರೆಯಿಂದ ಮಾಡಲ್ಪಟ್ಟಿದ್ದು ಸುಸ್ಥಿತಿಯಲ್ಲಿವೆ.

ದೇವಾಲಯದ ಎಡಬದಿಯಲ್ಲಿರುವ ಸಭಾಮಂಟಪವು ವಿಸ್ತಾರದಲ್ಲಿ ಚಿಕ್ಕದಾಗಿದ್ದರೂ ಇಲ್ಲಿನ ಕಂಬಗಳ ಮೇಲಿನ ಶಿಲ್ಪಗಳು ಸೊಗಸಾಗಿವೆ. ಕೆಂಪೇಗೌಡ ಹಜಾರ ಎಂದು ಕರೆಯಲಾಗುವ ಈ ಮಂಟಪದ ಕಂಬಗಳ ಮೇಲೆ ಅನೇಕ ಶಿಲ್ಪಗಳನ್ನು ಚಿತ್ರಿಸಲಾಗಿದೆ. ಹಂಸ, ಆನೆ, ಸಿಂಹದಂತಹ ಪ್ರಾಣಿಗಳು, ತಳೆಕೆಳಕಾಗಿ ಘೋರ ತಪಸ್ಸಿಗೆ ನಿಂತ ಋಷಿ, ( ಹಂಪೆಯಲ್ಲಿ ಕಂಡುಬರುವ ಶಿಲ್ಪದಂತೆಯೇ) ಕೋಲೂರಿ ನಿಂತ ಕುರುಬ, ಮಹಿಷಮರ್ದಿನಿ ಮೊದಲಾದವುಗಳನ್ನು ಈ ಕಂಬಗಳ ಮೇಲೆ ಕಾಣಬಹುದು.

ಕಂಬಗಳ ವಿನ್ಯಾಸವೂ ಹಂಪೆಯ ಕೆಲವು ದೇಗುಲಗಳನ್ನು ಹೋಲುತ್ತದೆ. ದೇವಾಲಯದ ಹಿಂಬದಿಯತ್ತ ಕಟ್ಟಲಾಗಿರುವ ತೆರೆದ ಕಲ್ಯಾಣಮಂಟಪದ ಕಂಬಗಳ ಮೇಲೂ ಹಲವು ಸಾಧಾರಣ ಕೆತ್ತನೆಯ ರೂಪಗಳಿವೆ. ಈ ಮಂಟಪದಲ್ಲಿ ಕೆಂಪೇಗೌಡರು ಕುಳಿತು ನ್ಯಾಯತೀರ್ಪು ಹೇಳುತ್ತಿದ್ದರೆಂದು ಐತಿಹ್ಯ. ದೇಗುಲದ ಹಿಂಭಾಗಕ್ಕೆ ಬಂದರೆ ಅಲ್ಲೊಂದು ಪ್ರವೇಶದ್ವಾರ. ಮೇಲೊಂದು ಗೋಪುರ. ಇಲ್ಲಿಂದ ಹೊರಗೆ ಅನತಿದೂರದಲ್ಲಿ ಕಲ್ಲುಬಂಡೆಯೊಂದರ ಮೇಲೆ ಚೆಂದದ ಕಿರುಗೋಪುರ; ಅದರಲ್ಲೊಂದು ನಂದಿಯ ಶಿಲ್ಪವಿದೆ.

ದೇವಾಲಯದಲ್ಲಿ ನಿತ್ಯಪೂಜಾದಿಗಳು ಸಾಂಗವಾಗಿ ಜರುಗುತ್ತಿವೆ. ಮಾಘಶುದ್ಧ ಸಪ್ತಮಿ ಎಂದರೆ ರಥಸಪ್ತಮಿಯಂದು ಬ್ರಹ್ಮೋತ್ಸವವೂ ನಡೆಯುತ್ತದೆ. ನೂರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯಾಗಿ ನಿಂತು ಈಗಲೂ ಸುಸ್ಥಿತಿಯಲ್ಲಿರುವ ಈ ದೇವಾಲಯವನ್ನು ಮರೆಯದೆ ನೋಡಿಬನ್ನಿ.