ಯೋಗಾನರಸಿಂಹ ದೇವಾಲಯ ಸುಮಾರು ಹದಿಮೂರನೆಯ ಶತಮಾನದಷ್ಟು ಪ್ರಾಚೀನವಾದುದು. ವಿಶಾಲವಾದ ಮುಖಮಂಟಪ, ನವರಂಗ, ಗರ್ಭಗೃಹಗಳಿರುವ ದೊಡ್ಡ ಕಟ್ಟಡ. ಗರ್ಭಗುಡಿಯಲ್ಲಿ ಚತುರ್ಭುಜಧಾರಿ ನರಸಿಂಹ . ಮೇಲಿನೆರಡು ಕೈಗಳಲ್ಲಿ ಚಕ್ರಶಂಖಗಳನ್ನು ಧರಿಸಿದ್ದು ಮುಂದಿನ ಎರಡು ಕೈಗಳನ್ನು ಮಂಡಿಯ ಮೇಲಿರಿಸಿಕೊಂಡು ಯೋಗಸ್ಥಿತಿಯಲ್ಲಿ ಕುಳಿತ ಭಂಗಿ. ಈ ದೇಗುಲದಲ್ಲಿ ನೀವು ಗಮನಿಸಬೇಕಾದ ಇನ್ನೊಂದು ಮುಖ್ಯಶಿಲ್ಪವೆಂದರೆ ಸುದರ್ಶನ-ನರಸಿಂಹ ವಿಗ್ರಹ. ಸುದರ್ಶನಚಕ್ರದ ಮುಂಭಾಗದಲ್ಲಿ ಚಕ್ರಮಧ್ಯದಲ್ಲಿ ಸುದರ್ಶನದೇವತೆಯ ರೂಪವನ್ನು ಚಿತ್ರಿಸಿದ್ದರೆ ಹಿಂಭಾಗದಲ್ಲಿ ಷಟ್ಕೋನದ ಮಧ್ಯೆ ಉಗ್ರನರಸಿಂಹರೂಪವನ್ನು ರೂಪಿಸಲಾಗಿದೆ. ಕಾಲಾಂತರದಲ್ಲಿ ದೇವಾಲಯದ ಆವರಣದಲ್ಲಿ ಇನ್ನೂ ಹಲವಾರು ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ಟಿ. ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಂಟನೆಯ ಕಂತು
ಪುರಾತನ ದೇಗುಲಗಳನ್ನು ಕುರಿತ ಈ ಸರಣಿಯಲ್ಲಿ ನಾವು ಪರಿಚಯಮಾಡಿಕೊಳ್ಳುತ್ತಿರುವ ಹಲವು ದೇಗುಲಗಳು ಸಾವಿರ ವರುಷಗಳಿಗೂ ಹಿಂದಿನವು ಎಂಬುದೇ ಒಂದು ಅಚ್ಚರಿ. ತೀರಾ ಇತ್ತೀಚಿನ ಕಟ್ಟಡಗಳೇ ಗಾಳಿಮಳೆ ಮತ್ತಿತರ ವಿಕೋಪಗಳಿಗೆ ಗುರಿಯಾಗಿ ನೆಲಕಚ್ಚುತ್ತಿರುವುದನ್ನು ಕಾಣುವಾಗ ನೂರಾರು ವರುಷಗಳಷ್ಟು ಹಿಂದಿನ ಕಲ್ಲುಕಟ್ಟಡಗಳೂ ಶಿಲ್ಪಗಳೂ ಅಚ್ಚಳಿಯದೆ ಉಳಿದು ಬರುವುದು ಅಸಂಭವವೆಂದೇ ತೋರಬಹುದಲ್ಲವೇ? ನಿಜ. ಇಂಥ ಗುಡಿಗಳನ್ನೂ ಶಿಲ್ಪಗಳನ್ನೂ ಮುಂದಿನ ರಾಜವಂಶದವರೂ ಸ್ಥಳೀಯ ಆಡಳಿತಗಾರರೂ ಸಂರಕ್ಷಿಸಿ ಜೀರ್ಣೋದ್ಧಾರ ಮಾಡದೇ ಸುಮ್ಮನಾಗಿದ್ದಲ್ಲಿ ಇವತ್ತು ನಾವು ನೋಡಿ ಬೆರಗುಗೊಳ್ಳುತ್ತಿರುವ ಈ ದೇಗುಲಗಳಲ್ಲಿ ಒಂದಾದರೂ ವರ್ತಮಾನದವರೆಗೆ ಉಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಕಾರಣಕ್ಕಾಗಿ ನಾವು ಮುಖ್ಯವಾಗಿ ವಿಜಯನಗರದ ಅರಸರನ್ನೂ ಅವರ ಅಧೀನ ಮಾಂಡಳಿಕರನ್ನೂ ಕೃತಜ್ಞತೆಯಿಂದ ಸ್ಮರಿಸಬೇಕು.
ಚಾಲುಕ್ಯ, ಹೊಯ್ಸಳ ಮತ್ತಿತರ ಪೂರ್ವರಾಜರಿಗೂ 21ನೆಯ ಶತಮಾನದ ನಮಗೂ ನಡುವಿನ ಕಾಲಘಟ್ಟದಲ್ಲಿದ್ದ ವಿಜಯನಗರದ ಅರಸರೂ ಸಾಮಂತರೂ ತಂತಮ್ಮ ಪ್ರಾಂತ್ಯಗಳಲ್ಲಿದ್ದ ಎಲ್ಲ ಪೂರ್ವಕಾಲದ ದೇಗುಲಗಳನ್ನೂ ಸಂರಕ್ಷಿಸುವ ಮಹತ್ವದ ಕೆಲಸ ಮಾಡಿದರು. ಹೊಯ್ಸಳ ಕಾಲದ ನಾಗಮಂಗಲದ ಗುಡಿಗಳು ಇವತ್ತಿನವರೆಗೆ ಉಳಿದುಬಂದದ್ದೂ ವಿಜಯನಗರದ ಅರಸರ ಪ್ರಯತ್ನದಿಂದಲೇ. ಅಂದಿನ ಅರಸರ ಸತ್ಕಾರ್ಯವನ್ನು ಇಂದಿನ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪುರಾತತ್ತ್ವ ಇಲಾಖೆಗಳು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.
ಇಂದು ನಾವು ಪರಿಚಯಿಸಿಕೊಳ್ಳಲಿರುವ ದೇಗುಲಗಳು ಮಂಡ್ಯಜಿಲ್ಲೆಯ ನಾಗಮಂಗಲದಲ್ಲಿ ಕಂಡುಬರುವಂಥವು. ನಾಗಮಂಗಲ ಪೂರ್ವಕಾಲದಲ್ಲಿ ಪ್ರಸಿದ್ಧ ಅಗ್ರಹಾರವಾಗಿತ್ತು. ಆಗ ಚತುರ್ವೇದ ಭಟ್ಟ ರತ್ನಾಕರ ಅಗ್ರಹಾರ ಎಂದು ಇದು ಪ್ರಸಿದ್ಧವಾಗಿತ್ತಂತೆ. ಸಹಜವಾಗಿಯೇ ಇಲ್ಲಿ ಅನೇಕ ದೇವಾಲಯಗಳಿವೆ. ವಿವಿಧ ಕಾಲಘಟ್ಟಗಳಲ್ಲಿ ಗಂಗ, ಹೊಯ್ಸಳ, ವಿಜಯನಗರ ಮೊದಲಾದ ರಾಜವಂಶಗಳ ಆಳ್ವಿಕೆಗೆ ಒಳಪಟ್ಟಿದ್ದ ಈ ಪಟ್ಟಣದಲ್ಲಿ ಸೌಮ್ಯಕೇಶವ, ಯೋಗಾನರಸಿಂಹ, ಭುವನೇಶ್ವರ ಅಥವಾ ಶಂಕರನಾರಾಯಣ ಮತ್ತಿತರ ಹಲವಾರು ಪ್ರಾಚೀನ ಗುಡಿಗಳಿವೆ.
ಇತ್ತೀಚಿನ ವರ್ಷಗಳಲ್ಲಿ ಪುರಾತತ್ತ್ವ ಇಲಾಖೆಯ ಪ್ರಯತ್ನದಿಂದ ಜೀರ್ಣೋದ್ಧಾರಗೊಂಡಿರುವ ಸೌಮ್ಯಕೇಶವ ದೇಗುಲ ತ್ರಿಕೂಟಾಚಲ ಎಂದರೆ ಮೂರು ಗರ್ಭಗುಡಿಗಳುಳ್ಳ ದೇಗುಲ. ನಕ್ಷತ್ರಾಕಾರದ ಜಗುಲಿಯ ಮೇಲೆ ನಿರ್ಮಾಣಗೊಂಡಿರುವ ಈ ದೇಗುಲ ಹೊಯ್ಸಳ ಅರಸ ಮೊದಲನೇ ನರಸಿಂಹನ ಆಳ್ವಿಕೆಯ ಕಾಲದಲ್ಲಿ 1171ರಲ್ಲಿ ನಿರ್ಮಾಣವಾಯಿತು. ಮುಖ್ಯಗರ್ಭಗುಡಿಯಲ್ಲಿ ಗರುಡಪೀಠದ ಮೇಲೆ ಆರು ಅಡಿ ಎತ್ತರದ ಕೇಶವನ ಭವ್ಯವಾದ ಶಿಲ್ಪವಿದೆ.
ಶ್ರೀದೇವಿಭೂದೇವಿ ಸಹಿತನಾದ ವಿಷ್ಣುವಿನ ಮೊಗದ ಸೌಮ್ಯ ಮಂದಹಾಸವೇ ಸೌಮ್ಯಕೇಶವ ಎಂಬ ಹೆಸರು ತಂದಿದೆ. ಬಲಮೇಲುಗೈಯಲ್ಲಿ ಶಂಖ, ಎಡ ಮೇಲುಗೈಯಲ್ಲಿ ಚಕ್ರ, ಎಡಗೈಯಲ್ಲಿ ಗದೆ ಹಾಗೂ ಬಲಗೈಯಲ್ಲಿ ಪದ್ಮವನ್ನು ಹಿಡಿದ ಕೇಶವನ ಶಿಲ್ಪದ ಪ್ರಭಾವಳಿಯಲ್ಲಿ ದಶಾವತಾರಗಳನ್ನು ಕೆತ್ತಲಾಗಿದೆ. ಹೊಯ್ಸಳರ ಕಾಲದ ಗರ್ಭಗೃಹ, ನವರಂಗಗಳಿಗೆ ವಿಜಯನಗರದ ಕಾಲದಲ್ಲಿ ದೊಡ್ಡ ಮುಖಮಂಟಪ, ಮಹಾದ್ವಾರ, ಗೋಪುರ ಮೊದಲಾದವುಗಳ ಸೇರ್ಪಡೆಯಾಗಿದೆ.
ಕೇಶವನ ಇಕ್ಕೆಲದ ಗರ್ಭಗುಡಿಗಳಲ್ಲಿ ಕ್ರಮವಾಗಿ ವೇಣುಗೋಪಾಲ ಹಾಗೂ ಲಕ್ಷ್ಮೀನರಸಿಂಹ ವಿಗ್ರಹಗಳನ್ನು ಕಾಣಬಹುದು. ಇವು ಹೊಯ್ಸಳಕಾಲದ ಶಿಲ್ಪಗಳಲ್ಲ. ಆದರೆ ಆ ಕಾಲದ ಶಿಲ್ಪಕಲಾನೈಪುಣ್ಯವನ್ನು ಪ್ರಕಟಿಸುವಂಥವು. ಲಕ್ಷ್ಮಿಯನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡ ನರಸಿಂಹ ಶಂಖಚಕ್ರಧಾರಿಯಾಗಿ ಅಭಯಹಸ್ತ ತೋರುತ್ತ ಸುಖಾಸನದಲ್ಲಿ ಕುಳಿತಿರುವ ರೀತಿ ಮನಸೆಳೆಯುತ್ತದೆ. ಹಾಗೆಯೇ ದಕ್ಷಿಣಗರ್ಭಗುಡಿಯಲ್ಲಿರುವ ವೇಣುಗೋಪಾಲನ ವಿಗ್ರಹವೂ ಆಕರ್ಷಕವಾಗಿದೆ. ಎಡಬಲಗಳಲ್ಲಿ ರುಕ್ಮಿಣಿ ಸತ್ಯಭಾಮೆಯರೊಡನೆ ನಿಂತ ಕೃಷ್ಣ ಕೊಳಲನ್ನು ನುಡಿಸುತ್ತಿರುವ ಭಂಗಿ ಮೋಹಕವಾಗಿದೆ. ದೇಗುಲದಲ್ಲಿ ವಿಷ್ವಕ್ಸೇನ, ವೈಕುಂಠನಾರಾಯಣ ಮೊದಲಾದ ಮೂರ್ತಿಗಳಲ್ಲದೆ ಆಳ್ವಾರರ ಪ್ರತಿಮೆಗಳೂ ಇವೆ. ಸೌಮ್ಯನಾಯಕಿ ಎಂದು ಹೆಸರುಪಡೆದ ಲಕ್ಷ್ಮೀದೇವಿಯ ದೇಗುಲವೂ ಪಕ್ಕದಲ್ಲಿದೆ. ತಿರುಗಣೆಯ ಸಾಧನವನ್ನು ಬಳಸಿ ರೂಪಿಸಿರುವ ನವರಂಗದ ಕಂಬಗಳು ಆಕರ್ಷಕವಾಗಿವೆ. ನವರಂಗದ ಒಳಛಾವಣಿ ಎಂದರೆ ಭುವನೇಶ್ವರಿಯಲ್ಲಿ ಅನೇಕ ಶಂಖುಗಳನ್ನು ಚಿತ್ರಿಸಲಾಗಿದ್ದು ಶಂಖವೊಂದನ್ನು ಮಂಡಲಾಕಾರದಲ್ಲಿ ಬಳಸಿದ ಸರ್ಪದ ಚಿತ್ರಣವಿದೆ. ಇದೇ ಕಾರಣಕ್ಕೆ ಊರಿಗೆ ನಾಗಮಂಡಲ ಎಂಬ ಹೆಸರು ಬಂದಿತೆಂದು ಹೇಳುವುದಿದೆ.
ಇನ್ನು ಯೋಗಾನರಸಿಂಹ ದೇವಾಲಯ ಸುಮಾರು ಹದಿಮೂರನೆಯ ಶತಮಾನದಷ್ಟು ಪ್ರಾಚೀನವಾದುದು. ವಿಶಾಲವಾದ ಮುಖಮಂಟಪ, ನವರಂಗ, ಗರ್ಭಗೃಹಗಳಿರುವ ದೊಡ್ಡ ಕಟ್ಟಡ. ಗರ್ಭಗುಡಿಯಲ್ಲಿ ಚತುರ್ಭುಜಧಾರಿ ನರಸಿಂಹ . ಮೇಲಿನೆರಡು ಕೈಗಳಲ್ಲಿ ಚಕ್ರಶಂಖಗಳನ್ನು ಧರಿಸಿದ್ದು ಮುಂದಿನ ಎರಡು ಕೈಗಳನ್ನು ಮಂಡಿಯ ಮೇಲಿರಿಸಿಕೊಂಡು ಯೋಗಸ್ಥಿತಿಯಲ್ಲಿ ಕುಳಿತ ಭಂಗಿ. ಈ ದೇಗುಲದಲ್ಲಿ ನೀವು ಗಮನಿಸಬೇಕಾದ ಇನ್ನೊಂದು ಮುಖ್ಯಶಿಲ್ಪವೆಂದರೆ ಸುದರ್ಶನ-ನರಸಿಂಹ ವಿಗ್ರಹ. ಸುದರ್ಶನಚಕ್ರದ ಮುಂಭಾಗದಲ್ಲಿ ಚಕ್ರಮಧ್ಯದಲ್ಲಿ ಸುದರ್ಶನದೇವತೆಯ ರೂಪವನ್ನು ಚಿತ್ರಿಸಿದ್ದರೆ ಹಿಂಭಾಗದಲ್ಲಿ ಷಟ್ಕೋನದ ಮಧ್ಯೆ ಉಗ್ರನರಸಿಂಹರೂಪವನ್ನು ರೂಪಿಸಲಾಗಿದೆ. ಕಾಲಾಂತರದಲ್ಲಿ ದೇವಾಲಯದ ಆವರಣದಲ್ಲಿ ಇನ್ನೂ ಹಲವಾರು ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
1134ರ ಶಾಸನವೊಂದರಲ್ಲಿ ಸೂಚಿತವಾಗಿರುವಂತೆ, ಹೊಯ್ಸಳ ರಾಣಿ ಬೊಮ್ಮಲಾದೇವಿಯ ಕೊಡುಗೆಯಿಂದ ಜೀರ್ಣೋದ್ಧಾರಗೊಂಡ ನಾಗಮಂಗಲದ ಭುವನೇಶ್ವರ ದೇವಾಲಯವು ಶಂಕರನಾರಾಯಣ ಗುಡಿಯೆಂದೂ ಪ್ರಸಿದ್ಧಿಪಡೆದಿದೆ. ಈ ಗುಡಿಯ ಆವರಣದಲ್ಲಿ ಇರಿಸಿದ ಸೂರ್ಯ, ಮಹಿಷಮರ್ದಿನಿ, ಗಣಪತಿ, ಷಣ್ಮುಖ ಮೊದಲಾದ ದೇವತಾಶಿಲ್ಪಗಳು ದರ್ಶನಕ್ಕೆ ಮಾತ್ರವಲ್ಲದೆ ಅಧ್ಯಯನದೃಷ್ಟಿಯಿಂದಲೂ ಗಮನಾರ್ಹವಾಗಿವೆ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.