ತೋರುದತ್ತಳ ಕವಿತೆಗಳಲ್ಲಿ ಭಾರತದ ಆತ್ಮ ವ್ಯಕ್ತವಾಗುತ್ತದೆ. ರಾಮಾಯಣ, ಮಹಾಭಾರತ ಮತ್ತು ಪುರಾಣಪುಣ್ಯ ಕತೆಗಳ ವಸ್ತು, ನಾಯಕ, ನಾಯಕಿಯರು ಅವಳ ಕೈಯಲ್ಲಿ ಹೊಸದೇ ದೃಷ್ಟಿಯಿಂದ ಪುನರ್ವ್ಯಾಖ್ಯಾನಿಸಲ್ಪಡುತ್ತಾರೆ. ಅವಳು ತನ್ನ ಕಾವ್ಯ ಜೀವನದ ಪ್ರಾರಂಭದಲ್ಲಿ ಫ್ರೆಂಚ್ ಕವಿತೆಗಳನ್ನು ಅನುವಾದಿಸುತ್ತಾಳೆ. ಆಗ ಅವಳಿಗೆ ಬರೀ ಹತ್ತೊಂಬತ್ತು ವರ್ಷ. ಅವುಗಳಲ್ಲಿ ಎಷ್ಟೊ ಕವಿತೆಗಳು ಅವಳ ಸಾವಿನ ನಂತರ ಪ್ರಕಟಗೊಳ್ಳುತ್ತವೆ. ಅದನ್ನು ಒಣ ಅನುವಾದ ಎನ್ನುವುದಕ್ಕಿಂತಲೂ ಮರುಸೃಷ್ಟಿ ಎಂದರೇ ಹೆಚ್ಚು ಸರಿ ಹೊಂದುತ್ತದೇನೊ. ನಾವು ಇಂದು ಅನುವಾದದ ಬಗ್ಗೆ ಬಹಳಷ್ಟು ಪೂರ್ವಾಗ್ರಹಗಳೊಟ್ಟಿಗೆ, ಸಾಕಷ್ಟು ಗ್ರಹಿಕೆಗಳನ್ನೂ ಇಟ್ಟುಕೊಂಡು ಮುನ್ನಡೆಯುತ್ತಿರುವಾಗ ಈ ಹುಡುಗಿ ಅನುವಾದವನ್ನು ಹೇಗೆ ತಾನೆ ಗ್ರಹಿಸಿದ್ದಿರಬಹುದು ಎನ್ನುವುದೇ ನಮ್ಮನ್ನು ಮತ್ತಷ್ಟು ಚಕಿತಗೊಳಿಸುತ್ತದೆ.
ಆಶಾ ಜಗದೀಶ್ ಅಂಕಣ
“ಘೋರ ಪ್ರಮಾಣಗಳು ಯಾವಾಗಲೂ ದುರಂತದಲ್ಲಿ ಕೊನೆಗೊಳ್ಳುತ್ತವೆ”
ಹೀಗೆ ಹೇಳಿದವಳು ತೋರು ದತ್. ಭಾರತೀಯ ಇಂಗ್ಲಿಷ್ ಸಾಹಿತ್ಯ ಬೆಳೆದು ಬಂದ ಹಾದಿಯಲ್ಲಿ ತೋರು ದತ್ ಎನ್ನುವ ಈ ಮಣ್ಣಿನ ಪರಿಮಳ ಭರಿತ ಅಪರಂಜಿಯೊಂದು ಸಾಹಿತ್ಯವೆಂಬ ವಜ್ರಕ್ಕಾಗಿಯೆ ಜನ್ಮತಳೆಯುತ್ತದೆ. ಮಾರ್ಚ್ ೪, ೧೮೫೬ ರಲ್ಲಿ ಬಂಗಾಳದಲ್ಲಿ ತೋರು ದತ್ ಜನಿಸುತ್ತಾಳೆ. ತೋರು ದತ್ ತನ್ನ ಸಹಜ ಕವಿತೆಗಳಿಂದ ಎಲ್ಲರ ಗಮನ ಸೆಳೆಯುತ್ತಾಳೆ. ಭಾಷೆಯ ಮೇಲೆ ಅವಳಿಗೆ ಅತಿ ಸ್ವಾಭಾವಿಕವೆನಿಸುವಂತಹ ಹಿಡಿತವಿರುತ್ತದೆ. ಹಾಗಾಗಿಯೇ ನೋಡನೋಡುತ್ತಿದ್ದಂತೆಯೇ ಬಹುಬೇಗ ಬೆಂಗಾಲಿ, ಇಂಗ್ಲಿಷ್, ಫ್ರೆಂಚ್ ಕೊನೆಗೆ ಸಂಸ್ಕೃತದ ಮೇಲೂ ಹಿಡಿತ ಸಾಧಿಸಿಬಿಡುತ್ತಾಳೆ. ತಾನು ಕಲಿತ ಭಾಷೆಗಳಲ್ಲೆಲ್ಲ ಸಾಹಿತ್ಯ ರಚಿಸುವಷ್ಟು ನೈಪುಣ್ಯತೆ ಅವಳದ್ದು.
ತೋರುದತ್ತಳ ಕವಿತೆಗಳಲ್ಲಿ ಭಾರತದ ಆತ್ಮ ವ್ಯಕ್ತವಾಗುತ್ತದೆ. ರಾಮಾಯಣ, ಮಹಾಭಾರತ ಮತ್ತು ಪುರಾಣಪುಣ್ಯ ಕತೆಗಳ ವಸ್ತು, ನಾಯಕ, ನಾಯಕಿಯರು ಅವಳ ಕೈಯಲ್ಲಿ ಹೊಸದೇ ದೃಷ್ಟಿಯಿಂದ ಪುನರ್ವ್ಯಾಖ್ಯಾನಿಸಲ್ಪಡುತ್ತಾರೆ. ಅವಳು ತನ್ನ ಕಾವ್ಯ ಜೀವನದ ಪ್ರಾರಂಭದಲ್ಲಿ ಫ್ರೆಂಚ್ ಕವಿತೆಗಳನ್ನು ಅನುವಾದಿಸುತ್ತಾಳೆ. ಆಗ ಅವಳಿಗೆ ಬರೀ ಹತ್ತೊಂಬತ್ತು ವರ್ಷ. ಅವುಗಳಲ್ಲಿ ಎಷ್ಟೊ ಕವಿತೆಗಳು ಅವಳ ಸಾವಿನ ನಂತರ ಪ್ರಕಟಗೊಳ್ಳುತ್ತವೆ. ಅದನ್ನು ಒಣ ಅನುವಾದ ಎನ್ನುವುದಕ್ಕಿಂತಲೂ ಮರುಸೃಷ್ಟಿ ಎಂದರೇ ಹೆಚ್ಚು ಸರಿ ಹೊಂದುತ್ತದೇನೊ.
ನಾವು ಇಂದು ಅನುವಾದದ ಬಗ್ಗೆ ಬಹಳಷ್ಟು ಪೂರ್ವಾಗ್ರಹಗಳೊಟ್ಟಿಗೆ, ಸಾಕಷ್ಟು ಗ್ರಹಿಕೆಗಳನ್ನೂ ಇಟ್ಟುಕೊಂಡು ಮುನ್ನಡೆಯುತ್ತಿರುವಾಗ ಈ ಹುಡುಗಿ ಅನುವಾದವನ್ನು ಹೇಗೆ ತಾನೆ ಗ್ರಹಿಸಿದ್ದಿರಬಹುದು ಎನ್ನುವುದೇ ನಮ್ಮನ್ನು ಮತ್ತಷ್ಟು ಚಕಿತಗೊಳಿಸುತ್ತದೆ. ಅವಳ ಪುಟ್ಟ ಅನುವಾದಿತ ಕವಿತೆಗಳ ಸಂಕಲನ ಜಗತ್ತಿನೆದುರು ಅವಳ ಪಾಂಡಿತ್ಯ, ಪ್ರೌಢಿಮೆ, ಮೇಧಾವಿತನವನ್ನು ಜಗಜ್ಜಾಹೀರುಗೊಳಿಸುತ್ತದೆ.
ತೋರುದತ್ತಳ ಮುಖ್ಯ ಆಸ್ತಿ ಎಂದರೆ ಅವಳ ಕವನ ಸಂಕಲನಗಳಾದ “ಏನ್ಷಿಯೆಂಟ್ ಬ್ಯಾಲೆಡ್ಸ್” ಮತ್ತು “ಲೆಜೆಂಡ್ಸ್ ಆಫ್ ಹಿಂದುಸ್ಥಾನ್”(೧೮೮೩) . ಇವುಗಳಲ್ಲಿ ಮುಖ್ಯವಾಗಿ ಹಿಂದು ಪುರಾಣ-ಪುಣ್ಯ ಕಥೆಗಳ ಪ್ರಮುಖ ಪಾತ್ರಗಳಾದ ಸಾವಿತ್ರಿ, ಸೀತ, ಪ್ರಹ್ಲಾದ, ದೃವ, ಏಕಲವ್ಯ ಮುಂತಾದ ಪಾತ್ರಗಳನ್ನು ವಸ್ತುವಾಗಿ ಬಳಸಿದ್ದಾಳೆ. ಯಾವುದನ್ನು ಹಳೆಯದು ಎನ್ನುವ ಕಾರಣ ಕೊಟ್ಟು ಬದಿಗೆ ಸರಿಸಲು ಆರಂಭಿಸಿದ್ದೆವೋ ಅಂತಹ ಸಂದರ್ಭದಲ್ಲಿ ಅದರ ಮರು ಸೃಷ್ಟಿ ಮತ್ತು ಮೌಲ್ಯಗಳ ಪ್ರಸ್ತುತತೆ ಮತ್ತು ಔಚಿತ್ಯತೆಯ ಬಗ್ಗೆ ಆಲೋಚನೆಗೆ ಹಚ್ಚುವಂತೆ ಬಂದ ಅವಳ ಕವಿತೆಗಳು ಇಂದಿಗೂ ಅವುಗಳ ತಾಜಾತನ ಮತ್ತು ಮುಗ್ಧ ಪ್ರಬುದ್ಧ ಮಾಂತ್ರಿಕತೆಯಿಂದಾಗಿ ಅದ್ಭುತವೆನಿಸುವಂತೆ ಕಂಗೊಳಿಸುತ್ತವೆ.
ಅವಳ ಕಾವ್ಯದ ಮೂಲ ದ್ರವ್ಯವೇ ಮಾನವ ಸಹಜ ಪ್ರೀತಿ, ಎಳೆತನದ ದೈವಭಕ್ತಿ, ಮುಗ್ಧತೆ, ಕೃತಜ್ಞತೆ, ಸತ್ಯಸಂಧತೆ, ಪ್ರಾಮಾಣಿಕತೆ… ಹೀಗೆ ಮನುಷ್ಯನನ್ನು ಮನುಷ್ಯನೊಟ್ಟಿಗೆ ಬೆಸೆಯಬಹುದಾದಂಥ ಮೌಲ್ಯಗಳೆಂಬ ಗೋಂದು. ಸಾವಿರಾರು ವರ್ಷಗಳ ಧಾರ್ಮಿಕ ಹಿನ್ನಲೆಯಿದ್ದ ಭಾರತದಂಥ ದೇಶ ಅವಳ ಮೃದು ಭಾವುಕ ಮನಸ್ಸನ್ನು ಪ್ರಭಾವಿಸಿರಲಿಕ್ಕು ಸಾಕು. ಅವಳ ಕಾವ್ಯ ಇದೇ ಮೊದಲ ಬಾರಿಗೆ ಭಾರತದ ಮೂಲ ಹಿನ್ನಲೆಯಲ್ಲಿ ಅಚ್ಚ ಭಾರತೀಯ ಪಾತ್ರಗಳನ್ನು ಸಮರ್ಥಿಸಿಕೊಂಡಿದ್ದು ಎಂಬುದಾಗಿ ಭಾರತೀಯ ಇಂಗ್ಲಿಷ್ ಸಾಹಿತ್ಯ ಚರಿತ್ರೆಯಲ್ಲಿ ಇತಿಹಾಸವಾಗಿ ನಿಲ್ಲುತ್ತದೆ.
ಆತ್ಮ ಕಥನದ ರೂಪದಲ್ಲಿದ್ದಂಥ ಅವಳ ಬರವಣಿಗೆಗಳು ಕೆಲವೊಮ್ಮೆ ತೀರ ವೈಯಕ್ತಿಕ ಅನುಭವಗಳಾಗಿದ್ದವು. ಅದು ತೋರುವಿನ ಅತ್ಯುತ್ತಮ ಸೃಜನಾತ್ಮಕ ಅಭಿವ್ಯಕ್ತಿಯ ಕಾಲವಾಗಿತ್ತು. ಕ್ರಿಶ್ಚಿಯನ್ ಮೂಲದವಳಾಗಿದ್ದರೂ, ಅವಳ ಕಾವ್ಯದ ಬೇರುಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬಿಳಲು ಬಿಟ್ಟಿದ್ದವು. ಅವಳು ಸಂಸ್ಕೃತವನ್ನು ಕಲಿತಳು, ಸಂಸ್ಕೃತಿಯನ್ನೂ ಕಲಿತಳು. ಅವಳಲ್ಲಿ ಸೂಕ್ಷ್ಮವಾಗಿ ಗ್ರಹಿಸುವ, ಅವಲೋಕಿಸುವ ವರವೆನ್ನಬಹುದಾದ ಕುಶಾಗ್ರಮತಿಯಿತ್ತು, ಅಮೂರ್ತ ಅನುಭವಗಳನ್ನು ಸುಲಲಿತವಾಗಿ ಕಟ್ಟಿಕೊಡುವುದು ಅವಳ ವಿಶಿಷ್ಟ ಪ್ರತಿಭೆಯಾಗಿತ್ತು.
ಇಂತಹ ಜಾಣ ಹುಡುಗಿ, ಯುವ ಬರಹಗಾರ್ತಿ, ಪ್ರತಿಭಾವಂತೆ, ಭರವಸೆಯ ಕವಿಯತ್ರಿ ೩೦ ಆಗಸ್ಟ, ೧೮೭೭ ರಂದು ತನ್ನ ಇಪ್ಪತ್ತೊಂದರ ಮೇರು ಯವ್ವನದಲ್ಲಿ ಕ್ಷಯ ರೋಗದ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳಲಾಗದೆ ನಂದಿಹೋದಳು. ಭಾರತೀಯ ಇಂಗ್ಲಿಷ್ ಕಾವ್ಯ ತುಂಬಲಾರದ ನಷ್ಟವನ್ನನುಭವಿಸಿತು. ಅವಳನ್ನು ಭಾರತೀಯ ಇಂಗ್ಲಿಷ್ ಸಾಹಿತ್ಯದ ಕೀಟ್ಸ್ ಎಂದೂ ಕರೆಯಲಾಗುತ್ತದೆ.
ಅವಳ ಪದ್ಯಗಳು ಇಂದಿಗೂ ಸೃಜನಾತ್ಮಕತೆ, ತನ್ಮಯತೆ, ಸೂಕ್ಷ್ಮತೆ ಹಾಗೂ ಮೂಲಸತ್ವಗಳೊಂದಿಗೆ ಎಲ್ಲರ ಮನ ಮುಟ್ಟುತ್ತವೆ. ತೋರು ಎಲ್ಲೂ ಅಲ್ಲ ನಮ್ಮೊಳಗೇ ಇದ್ದಾಳೆ ಎನಿಸಿಬಿಡುವಷ್ಟು ಆಪ್ತಳಾಗುತ್ತಾಳೆ.
ಅವಳ “ಕ್ಯಾಶುರಿನ ಟ್ರೀ” ಕವಿತೆ ಕಾವ್ಯಲೋಕದಲ್ಲೊಂದು ಮೈಲುಗಲ್ಲನ್ನೇ ಸೃಷ್ಟಿಸಿದ ಕವಿತೆ.
Like a huge python, winding round and round…. ಎಂದು ಶುರುವಾಗುವ ಈ ಕವಿತೆ ತನ್ನ ರೂಪಕೋಪಮೆಗಳ ವಿಶೇಷತೆ ಮತ್ತು ಕಣ್ಣ ಮುಂದೆ ತಂದಿಡುವಂತಹ ಚಿತ್ರಣದಿಂದ ಬಹು ಆಕರ್ಷಕವಾಗುತ್ತದೆ. ಮೊದಲ ಸಾಲು ಹಿಡಿದವರು ಮುಂದೆ ಹೋಗದೆ ಇರಲಾರರು. ಮುಂದುವರಿದು casuarina ಮರದ ಸುತ್ತಲೂ ಅವಳ ಗತ ಕಾಲದ ವೈಭವ ಈ ಕ್ಷಣದ ಅನುಭವದಂತೆ ಮೆರೆಯತೊಡಗುತ್ತದೆ. ಅದೇ ವೇಳೆ ಅವಳಲ್ಲೊಂದು ವಿಷಾದ ಹೊಗೆಯಾಡುತ್ತದೆ. ಗೊತ್ತು ಅವಳಿಗೆ ಅದು ಬರಿದೆ ಮರವಲ್ಲ. ತನ್ನ ಗತಿಸಿ ಹೋಗಿರುವ ಪ್ರೀತಿ ಪಾತ್ರರ ಒಂದೇ ಒಂದು ಉಸಿರನ್ನು ಈ ಮರ ತನ್ನೊಳಗೆ ಹಿಡಿದಿಟ್ಟುಕೊಂಡಿರಬಹುದು ಎನ್ನುವ ಉಮ್ಮೇದಿಯಷ್ಟೇ ತೀವ್ರವಾಗಿ ಆ ಮರ ಅವಳ ಆಳಕ್ಕಿಳಿದಿದೆ. ಬಾಲ್ಯದ ಗ್ರಹಿಕೆಯೊಟ್ಟಿಗೆ ಬೆರೆತ ಸವಿನೆನಪುಗಳ ಗುರುತಾಗಿ ಕ್ಯಾಶುರಿನ ಮರ ಚಿತ್ರಿತವಾಗುತ್ತದೆ.
“But not because of its magnificence
Dear is the casuarina to my soul
beneath it we have played though years may roll
O sweet companions loved with love intense
for your sakes shall the tree be ever dear!”
ಅಂದಾಗ ಒಂದು ಸಣ್ಣ ನೋವಿನೆಳೆ ಸಿಬಿರಾಗಿ ಚುಚ್ಚುತ್ತದೆಯಾದರೂ ತನ್ನ ಸಹೋದರರು ಮತ್ತು ಗೆಳೆಯರೊಂದಿಗೆ ಕಳೆದ ಆಪ್ತ ಕ್ಷಣಗಳ ತಿಜೋರಿಯಿದೆನಿಸಿ ಇಂತಹದೊಂದು ಪುಟಕ್ಕಿಟ್ಟ ನವಿಲುಗರಿ ಆ ನೆನಪುಗಳನ್ನು ಜತನವಾಗಿಟ್ಟುಕೊಳ್ಳಲಿಕ್ಕಾದರೂ ಬೇಕಿದೆ ಅನಿಸಿಬಿಡುತ್ತದೆ. ನಂತರ ಕವಿತೆಯ ಕೊನೆಯ ಸಾಲುಗಳು ಕವಿತೆಯನ್ನು ಮತ್ತೊಂದೇ ಎತ್ತರಕ್ಕೆ ಕೊಂಡೊಯ್ಯುತ್ತವೆ….
“With deathless trees like those in borrow dale
Under whose awful branches lingered pale
Fear trembling Hope and Death The skeleton
And time the shadow and though week the verse
That would thy beauty fain oh fain rehearse
May love defend thee from oblivion’s curse”
ಕೊನೆಗೆ ನಶ್ವರ ಬದುಕಿನ ಅಮೂಲ್ಯ ನೆನಪುಗಳನ್ನು ಶಾಶ್ವತಗೊಳಿಸುವ casuarina ಮರ ಗೋಳು ಎನಿಸದಂತೆ ಲವಲವಿಕೆಯಿಂದ ಕಂಗೊಳಿಸುತ್ತದೆ.
ತೋರುದತ್ತಳ ಈ ಕವಿತೆಯನ್ನು ಕೀಟ್ಸನ “ಓಡ್ ಟು ದ ನೈಟಿಂಗೇಲ್” ನೊಂದಿಗೆ ಹೋಲಿಸಲಾಗುತ್ತದೆ. ಅವರಿಬ್ಬರ ಸಣ್ಣ, ಅರ್ಥಪೂರ್ಣ ಬದುಕಿನಷ್ಟೇ ಸಾಮ್ಯತೆ ಅವರ ಈ ಎರೆಡು ಕವಿತೆಗಳಲ್ಲೂ ಕಾಣಬಹುದು. ಇಬ್ಬರೂ ಪರಿಸರ ಪ್ರೇಮಿಗಳು, ಅಂತೇ ಈ ಎರೆಡೂ ಕವಿತೆಗಳಲ್ಲೂ ಪ್ರಕೃತಿಯ ವರ್ಣನೆ ಅಭೂತಪೂರ್ವವಾಗಿ ಮೂಡಿ ಬಂದಿದೆ.
ಇಂಗ್ಲೀಷಯ ರೊಮ್ಯಾಂಟಿಕ್ ಕಾಲದ ತ್ರಿಮೂರ್ತಿಗಳ ವಿಶೇಷತೆಯೊಂದಿದೆ. ಅದೆಂದರೆ ಹಿರಿಯ ಮೂರು ಕವಿಗಳ ಮತ್ತು ಕಿರಿಯ ಮೂವರು ಕವಿಗಳ ವಿಶಿಷ್ಟ ಗುಂಪುಗಳು. ವರ್ಡ್ಸ್ ವರ್ತ್, ಕೋಲರಿಜ್ ಮತ್ತು ಸ್ಕಾಟ್- ಈ ಮೂವರೂ ಅರವತ್ತು ದಾಟಿದವರು, ಮೂವರೂ ಬದುಕಿದ್ದಾಗಲೇ ಪ್ರಸಿದ್ಧಿಯ ಶಿಖರವನ್ನೇರಿ ಎಲ್ಲ ಮಾನ ಸಮ್ಮಾನಗಳನ್ನು ಪಡೆದವರು ಮತ್ತು ಮೂವರೂ ಇಂಗ್ಲೆಂಡಿನಲ್ಲಿಯೇ ನಿಧನರಾದವರು. ಮತ್ತು ಕೀಟ್ಸ್, ಶೆಲ್ಲಿ ಮತ್ತು ಬೈರನ್ ಮೂವರೂ ಅಲ್ಪಾಯುಷಿಗಳು (ಬೈರನ್-ಮೂವತ್ತಾರು ವರ್ಷ, ಶೆಲ್ಲಿ-ಮೂವತ್ತು ವರ್ಷ, ಕೀಟ್ಸ್-ಇಪ್ಪತ್ತಾರು ವರ್ಷದಲ್ಲಿ ಮರಣಿಸಿದರು), ತಮ್ಮ ಬದುಕಿನಲ್ಲಿ ತೀವ್ರ ಟೀಕೆಗೆ ಗುರಿಯಾದವರು ಮತ್ತು ಮೂವರೂ ಇಂಗ್ಲೆಂಡಿನಾಚೆ ತೀರಿಕೊಂಡರು.
ಆಗ ರೊಮ್ಯಾಂಟಿಕ್ ಸಂದರ್ಭದಲ್ಲಿ ತರುಣ ಕವಿಗಳಿಗೆ ಒಬ್ಬೊಬ್ಬರಿಗೆ ಒಂದೊಂದು ಮಹಾತತ್ವದಲ್ಲಿ ನಂಬಿಕೆ ಇತ್ತು. ಆ ತತ್ವವೇ ಮನುಷ್ಯನನ್ನು ಅವನ ಎಲ್ಲ ದುಃಖದಿಂದ ಪಾರು ಮಾಡುತ್ತದೆ ಎಂದು ನಂಬಿದ್ದವರು. ಬೈರನ್ ಸ್ವಾತಂತ್ರ್ಯವನ್ನು, ಶೆಲ್ಲಿ ಪ್ರೇಮವನ್ನು ಮತ್ತು ಕೀಟ್ಸ್ ಸೌಂದರ್ಯವನ್ನು ಪರಮತತ್ವಗಳನ್ನಾಗಿಸಿಕೊಂಡಿದ್ದರು (ಬೈರನ್ ಗ್ರೀಸಿನ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಹೋಗಿ ಮರಣಿಸಿದ).
ವರ್ಡ್ಸ್ ವರ್ತ್ ಮತ್ತು ಕಾಲಿರಿಜ್ ರವರು “ಲಿರಿಕಲ್ ಬ್ಯಾಲೆಡ್ಸ್” ಗಳನ್ನು ಪ್ರಕಟಿಸುವ ಮೂಲಕ ಶುರುಮಾಡಿದ್ದ ರೊಮ್ಯಾಂಟಿಕ್ ಮೂಮೆಂಟ್ ಎರಡನೇ ಜನರೇಶನ್ನಿಗೆ ಮುಂದುವರಿದಾಗ ಕೀಟ್ಸ್, ಶೆಲ್ಲಿ, ಬೈರನ್ ಮುಂಚೂಣಿಯಲ್ಲಿದ್ದರು. ಕೀಟ್ಸ್. ಸಣ್ಣ ವಯಸ್ಸಿನಲ್ಲೆ ತನ್ನ ವೈದ್ಯಕೀಯ ಅಧ್ಯಯನವನ್ನು ಕಾವ್ಯಕ್ಕಾಗಿ ತೊರೆದು ಬಂದ ಅಪ್ಪಟ ಕಾವ್ಯಪ್ರೇಮಿ (31.10.1795 – 23.02.1821). ವಿಮರ್ಷಕನಾಗಿಯೂ ಹೆಸರಾದವನು. ಕೀಟ್ಸ್ ತನ್ನ ಕವನಗಳ ಪ್ರಥಮ ಸಂಕಲನ “ಎಂಡಿಮಿಯನ್” ನ್ನು 1817 ರಲ್ಲಿ ಹೊರತರುತ್ತಾನೆ. ಈತನ ವಿಮರ್ಶೆ ಆದರ್ಶ ಸೌಂದರ್ಯದ ಅನ್ವೇಷಣೆಗೆ ಸಂಬಂಧಿಸಿದುದಾಗಿದೆ.
ಆತ್ಮ ಕಥನದ ರೂಪದಲ್ಲಿದ್ದಂಥ ಅವಳ ಬರವಣಿಗೆಗಳು ಕೆಲವೊಮ್ಮೆ ತೀರ ವೈಯಕ್ತಿಕ ಅನುಭವಗಳಾಗಿದ್ದವು. ಅದು ತೋರುವಿನ ಅತ್ಯುತ್ತಮ ಸೃಜನಾತ್ಮಕ ಅಭಿವ್ಯಕ್ತಿಯ ಕಾಲವಾಗಿತ್ತು. ಕ್ರಿಶ್ಚಿಯನ್ ಮೂಲದವಳಾಗಿದ್ದರೂ, ಅವಳ ಕಾವ್ಯದ ಬೇರುಗಳು ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬಿಳಲು ಬಿಟ್ಟಿದ್ದವು.
ಕೀಟ್ಸ್ ಒಬ್ಬ ರಸ ಋಷಿ. ಪ್ರಗಾಥಗಳ ಮೂಲಕ ಪ್ರಸಿದ್ಧಿ ಸಾಧಿಸಿದ ಕವಿ. ಈತನು ಸತ್ಯಾನ್ವೇಷಕ ಹಾಗೂ ಕನಸುಗಾರಿಕೆಯ ಕವಿ. Principle of beauty in all things, in all its manifestations in nature ಎನ್ನುವುದನ್ನು ಪ್ರೀತಿಸಿದವನು ಕೀಟ್ಸ್. ಮತ್ತೆ ಕೀಟ್ಸ್ ಹೇಳುತ್ತಾನೆ with a great poet the sense of beauty overcomes every other consideration or rather obliterates all consideration ಎಂದು. ಕೀಟ್ಸನ ಚಿತ್ರಕ ಶಕ್ತಿ ಬಹು ಆಕರ್ಷಕ. ಅವನ ಕಾವ್ಯ, ಸುಖ ಮತ್ತು ಅದರ ವರ್ಣನೆಯ ಆಳವಲ್ಲದ ರಚನೆಗೆ ಸಿಕ್ಕಿಹಾಕಿಕೊಳ್ಳದೆ, ಬದುಕಿನ ಕಷ್ಟ ಮತ್ತು ಸುಖ ಎರೆಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವದಲ್ಲಿ ಪ್ರಬುದ್ಧವೆನ್ನಿಸುತ್ತದೆ. Beauty is truth, truth is beauty… (thing of beauty is joy forever ಎಂದೂ ಸಹ ಹೇಳಿರುವ) ಎನ್ನುವ ಕೀಟ್ಸ್ ಸೌಂದರ್ಯ ತನ್ನ ಆಸಕ್ತಿ ಮತ್ತು ಕಾಳಜಿಯಾದರೂ ಅದು ತನ್ನ ಚೌಕಟ್ಟಲ್ಲ ಎನ್ನುವುದನ್ನು ಋಜುವಾತು ಮಾಡಿರುವುದು ಮೆಚ್ಚುವಂಥದ್ದು.
ಕೀಟ್ಸನ “ಓಡ್ ಟು ಎ ನೈಟಿಂಗೇಲ್” ಪದ್ಯದಲ್ಲಿ ಜ್ವರದಿಂದ ಬಳಲುತ್ತಿರುವ ಕವಿ ಜ್ವರದ ಕಾವಿನ ನಡುವೆಯೂ ಪಕ್ಷಿಯೊಂದರ ಇನಿದನಿಗೆ ಸೋಲುವುದು ಮನೋಜ್ಞವಾಗಿದೆ. My heart aches and a drowsy numbness pains
My sense….ಎಂದು ಯಾವುದೋ ಒಂದು ಸುಪ್ತ ಅವ್ಯಕ್ತ ನೋವಿಟ್ಟುಕೊಂಡೇ ಶುರುವಾಗುತ್ತದೆ ಕವಿತೆ…
“The weariness the fever and the fret”
ಪಕ್ಷಿಗೇನು ಗೊತ್ತು ಜ್ವರವೆಂದರೇನೆಂದು ಎಂದು ಕೇಳುವ ಮಾತಿನ ಹಿಂದಿನ ಹತಾಶೆ, ನೋವು ನಮ್ಮನ್ನು ತಟ್ಟುತ್ತದೆ.
“This not through envy of thy happy lot
but being too happy in thine happiness”
ಮನುಷ್ಯನಿಗೆ ದುಃಖದ ಮೂಲಕವೇ ಸುಖ ಹೆಚ್ಚು ಪರಿಚಯ. ಆದರೆ ಈ ಹಕ್ಕಿಗೆ ದುಃಖದ ಪರಿಚಯವೇ ಇದ್ದಂತಿಲ್ಲ ಎನಿಸುತ್ತದೆ ಆ ಕ್ಷಣ ಕವಿಗೆ… ಹಾಗಾಗಿಯೇ ತನ್ನ ದೈಹಿಕ ಅಸ್ವಸ್ಥತೆಯನ್ನು ಆ ಹಕ್ಕಿಯ ಸ್ವಚ್ಛಂದ ಖುಷಿಯಲ್ಲಿ ಮರೆಯಲು ಯತ್ನಿಸುತ್ತಾನೆ.
“Thou wasn’t not born for death, immortal bird”
ಬಹಳ ಮುಖ್ಯವೆಂದರೆ ಈ ಪಕ್ಷಿ ಸಾಯುವುದಿಲ್ಲ ಅಥವಾ ಹುಟ್ಟು ಸಾವನ್ನು ಮೀರಿದ ಹಕ್ಕಿ ಇದು ಎಂದು ಕವಿಗೆ ಬಲವಾಗಿ ಅನ್ನಿಸಿಬಿಡುತ್ತದೆ. ಇಲ್ಲಿ ಬರುವ ಕೋಗಿಲೆ ಚಿರಂಜೀವಿಯೇ ಇರಬೇಕು. ಕಾರಣ ಇತಿಹಾಸದುದ್ದಕ್ಕೂ ಅದರ ದನಿಯನ್ನು ಕೇಳಿದವರಿದ್ದಾರೆ ಎನ್ನುತ್ತಾನೆ ಕೀಟ್ಸ್.
ಆದರೆ ಕೊನೆಯಲ್ಲಿ ಇಷ್ಟು ಹೊತ್ತೂ ಅವನ ಜೊತೆ ಇದ್ದ ಕೋಗಿಲೆ ಇದ್ದಕ್ಕಿದ್ದಂತೆ ಅವನೆಲ್ಲ ಕಲ್ಪನೆಗಳಿಗೆ ತಿಲಾಂಜಲಿಯಿಟ್ಟು ಅವನನ್ನು ಒಂಟಿ ಮಾಡಿ ಹಾರಿ ಹೋದಾಗ ಕವಿಗೆ ಆಶಾಭಂಗವಾದಂತಾಗುತ್ತದೆ. ತನ್ನ ಕಾಲ್ಪನಿಕತೆಗೆ ಸತ್ಯವನ್ನು ಸೃಷ್ಟಿಸುವ ಶಕ್ತಿ ಇಲ್ಲವಲ್ಲ ಎಂದು ಭ್ರಮನಿರಸನಕ್ಕೊಳಗಾಗುತ್ತಾನೆ ಕೀಟ್ಸ್. ಮತ್ತು ಸತ್ಯ ಮತ್ತು ಮಿಥ್ಯದ ಪೆಂಡ್ಯುಲಮ್ಮುಗಳ ತಾಕಲಾಟಕ್ಕೆ ಸಿಕ್ಕಂಥ ಸ್ಥಿತಿಯಲ್ಲಿ ಆಘಾತಕ್ಕೊಳಗಾಗುತ್ತಾನೆ. ಅದೇ ದನಿಯಲ್ಲಿ “fled that music, do I wake or sleep?” ಎನ್ನುತ್ತಾ ಕವಿತೆ ಮುಗಿಯುತ್ತದೆ.
ಇದರೊಂದಿಗೆ ಹೋಲಿಸಬಹುದಾದ ಮತ್ತೊಂದು ಕವಿತೆ ಶೆಲ್ಲಿಯ “To the skylark” ಕವಿತೆ. ಶೆಲ್ಲಿ ಪ್ರೇಮ ಕವಿ. ನಾಸ್ತಿಕತೆಯ ಪ್ರತಿಪಾದಕ, ಹುಂಬ, ಮೇಲಾಗಿ ಬಿಸಿರಕ್ತದ ಯುಕವಕನಿಗಿರಬಹುದಾದ ಎಲ್ಲಾ ಲಕ್ಷಣಗಳು ಅವನಲ್ಲಿದ್ದವು. ಸುತ್ತಮುತ್ತಲಿನವರನ್ನು ಅರ್ಥಮಾಡಿಕೊಳ್ಳುವ ಶಕ್ತಿ ಅವನಿಗಿರಲಿಲ್ಲ. ಹಾಗಾಗಿ ತಾನೂ ನೋವುಂಡು ತನ್ನ ಸುತ್ತಲಿದ್ದವರಿಗೂ ನೋವನ್ನೇ ಉಣಿಸಿದ. ಯುರೋಪಿನಲ್ಲಿ ದೋಣಿಯಲ್ಲಿ ಹೋಗುತ್ತಿರುವಾಗ ದೋಣಿ ಮುಳುಗಿ ಸತ್ತ. ಅವನ ಸಮಾಧಿ ಕೀಟ್ಸನ ಸಮಾಧಿಯ ಬಳಿಯೇ ಇದೆ.
ಶೆಲ್ಲಿ ಆದರ್ಶವಾದಕ್ಕೆ ಮತ್ತೊಂದು ಹೆಸರು ಮತ್ತು ಲಿರಿಸಿಸಂ ಗೆ ಮತ್ತೊಂದು ಹೆಸರು. ಶೆಲ್ಲಿ ಮುಖ್ಯವಾಗಿ ಪ್ರೇಮ ಕವಿ. ಹಾಗಾಗಿ ಅವನು ಬರೆದದ್ದು ಬಹುಪಾಲು ಪ್ರೇಮ ಗೀತೆಗಳನ್ನೇ. ಅವನ skylark ಕವಿತೆ ಬದುಕಿನ ನಶ್ವರತೆಯನ್ನು ಪುಟ್ಟ ಹಕ್ಕಿಯ ಸ್ವಚ್ಛಂದತೆಯಲ್ಲಿ ಕಾಣಿಸಿತ್ತಾ ಅಂತಿಮ ಸತ್ಯವನ್ನು ಮನಗಾಣಿಸುತ್ತದೆ.
ಒಮ್ಮೆ ಕವಿ ಹೆಂಡತಿಯೊಂದಿಗೆ ವಾಯು ವಿಹಾರಕ್ಕೆ ಹೋದಾಗ skylark ನ ಇಂಪಾದ ಗಾಯನವನ್ನು ಕೇಳಿ ಪರವಶನಾಗುತ್ತಾನೆ.
“Higher still and higher
From the earth thou springest
Like a cloud of fire
The blue deep thou wingest
And singing still dost soar and soaring ever singest”
ಒಂದು ಕ್ಷಣ ಪಕ್ಷಿಗಿರುವ ಸ್ವಾತಂತ್ರ್ಯ ಅವನನ್ನು ಬಹಳಷ್ಟು ಯೋಚಿಸುವಂತೆ ಮಾಡಿಬಿಡುತ್ತದೆ. ಅದು ಭೂಮಿಯಿಂದ ಹಾರಿದ ಪಕ್ಷಿ ಎನಿಸುವುದೇ ಇಲ್ಲ ಅವನಿಗೆ. ಅದು ಬಹುಶಃ ಸ್ವರ್ಗಲೋಕದಿಂದಲೋ ಅಥವಾ ಅಲ್ಲಿಯೇ ಅಕ್ಕಪಕ್ಕದ ದೈವೀಕ ನೆಲದಿಂದಲೋ ಬಂದಿರಬೇಕು ಎಂದು ಭಾವಿಸುತ್ತಾನೆ.
“What love of thine own kind? What ignorance of pain?”
“We look before and after
and pine for what is not
Our sweetest songs are those that tell of saddest thought”
“Yes if we could scorn
Hate and pride and fear
If we were things born
Not to shed a tear
I know not how thy we ever should come near”
“Teach me half the gladness
That thy brain must know
Such harmonious madness
From harmonious madness
From my lips would flow
The world should listen then as I am listening now”
ಎನ್ನುವ ಈ ಸಾಲುಗಳನ್ನು ಓದುವಾಗ ನಾವು ಸರ್ವಸ್ವ ಎನ್ನುವಷ್ಟು ತೀವ್ರವಾಗಿ ಬದುಕುವ ಈ ಬದುಕು ಎಷ್ಟು ಕ್ಷಣಿಕ ಎನಿಸಿಬಿಡುತ್ತದೆ. ಹಾಗೆಯೇ ಶೆಲ್ಲಿಗೂ ಈ ಒಂದು ಪುಟ್ಟ ಪಕ್ಷಿಯೆದುರು ಮನುಷ್ಯನ ಬುದ್ಧಿವಂತಿಕೆ ಸಾಮರ್ಥ್ಯ ವ್ಯರ್ಥವೆನಿಸಿದೆ. ಕಷ್ಟ ಸುಖದಿಂದ ಕೂಡಿದ ಈ ಭವಸಾಗರವನ್ನು ದಾಟಲು ವ್ಯರ್ಥ ಹಂಬಲಿಸುತ್ತಾ ಅದೇ ಕೂಪದಲ್ಲಿ ಬಿದ್ದು ನರಳುವ ಮನುಷ್ಯ ಆ ಪುಟ್ಟ ಸ್ಕೈಲಾರ್ಕಿನೆದುರು ಏನೂ ಅಲ್ಲದವನು ಎನಿಸಿಬಿಡುತ್ತಾನೆ ಕವಿ ಶೆಲ್ಲಿಗೆ. ಇದೇ ಈ ಕವಿತೆಯ ಜೀವಾಳ ಮತ್ತು ಕವಿತೆಯನ್ನು ಬಾಳಿಸುವ ಶಕ್ತಿ.
ಇದೇ ಸಾಲಿಗೆ ಸೇರುವ ಬೈರನ್ನನ ಬಗ್ಗೆಯೂ ಹೇಳದಿರಲು ಹೇಗೆ ತಾನೆ ಸಾಧ್ಯ…
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”