‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ. ಸುಧಾಳ ಹಿತಬೋಧನೆ, ನನ್ನ ನಿರ್ಧಾರಗಳು, ಅವಳು ಓದುತ್ತಿಲ್ಲವೆಂಬ ಭಯ, ಆವೇಶ…. ಎಲ್ಲವೂ ಅವಳ ಕಣ್ಣೀರಿಗೆ ಕರಗಿ, ನನ್ನ ಕಣ್ಣು ತುಂಬಿಬಂದವು. ಅವಳನ್ನು ಬಿಗಿಯಾಗಿ ಎದೆಗಪ್ಪಿಕೊಂಡೆ. ಚೆನ್ನಾಗಿ ಓದದಿದ್ದರೆ ಹಾಸ್ಟೆಲಿಗೆ ಹಾಕುತ್ತೇನೆಂದು, ಹಾಸ್ಟೆಲಿನ ಜೀವನ ಭಯಂಕರವಾಗಿರುತ್ತದೆಂದು ಈಗಾಗಲೇ ಸುಧಾ ಅವಳಿಗೆ ಹೇಳಿ ಭಯಪಡಿಸಿದ್ದಾಳೆ. ನಾನು ಸಮಾಧಾನಪಡಿಸುತ್ತಿದ್ದೇನೆ.
ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ತೆಲುಗು ಕತೆ “ಪ್ರೋಗ್ರೆಸ್”
ನಾನು ಮನೆಗೆ ಬರುವ ವೇಳೆಗಾಗಲೇ ನಿರ್ಧಾರ ಮಾಡಿದಂತಿದೆ. ಇದಕ್ಕೆ ಮೊದಲು ಇಲ್ಲಿ ಯಾವುದೋ ಯುದ್ಧ ನಡೆದಂತೆ ಭಾಸವಾಗುತ್ತಿದೆ. ನನ್ನ ಭಾವಮೈದುನ ಕೂಡಾ ಇಲ್ಲೇ ಇದ್ದಾನೆ. ಆತನ ಮುಖದಲ್ಲಿ ಏನೋ ಸಾಧಿಸಿದಂತಹ ತೃಪ್ತಿ ಎದ್ದುಕಾಣುತ್ತಿದೆ. ಸುಧಾ ಮಾತ್ರ ಆತಂಕದಿಂದಿದ್ದಾಳೆ. ನನ್ನ ಚಿಕ್ಕ ಮಗಳು ಶೃತಿ ರಾಜನ ಕೈಲಿ ಸಿಕ್ಕಿಹಾಕಿಕೊಂಡ ಸೈನಿಕನಂತಿದ್ದಾಳೆ. ಅವಳು ಗೋಡೆಗೆ ಅಂಟಿಕೊಂಡು ಭಯದಿಂದ ಮುದುರಿ ಕುಳಿತಿದ್ದಾಳೆ.
ನನ್ನನ್ನು ನೋಡಿದ ಮೇಲೆ ವಾತಾವರಣ ಮತ್ತಷ್ಟು ಗಂಭೀರವಾಯಿತು. ಏನು ನಡೆಯಿತೆಂದು ನಾನು ಕೇಳಲಿಲ್ಲ. ನನಗೆ ಕೇಳಬೇಕೆನಿಸಲಿಲ್ಲ. ಮೂವರು ನನ್ನತ್ತ ವಿಚಿತ್ರವಾಗಿ ನೋಡಿದರು.
ನನ್ನ ಮೌನ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾದಂತಿದೆ. ಶೃತಿ ತಲೆ ಬಗ್ಗಿಸಿದಳು. ನನ್ನ ಮೈದುನನ ಮುಖದಲ್ಲಿ ಕೋಪ ಎದ್ದು ಕಾಣುತ್ತಿದೆ.
ಸುಧಾ ಮಾತ್ರ ತನ್ನ ದುಃಖವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತ ‘ಹೊರಗೆ ಹೋದರೆ ತಲೆಯೆತ್ತಿ ಮಾತನಾಡದ ಹಾಗಾಗಿದೆ. ಯಾರಿಗೆ ಏನು ಹೇಳಲಿ?ʼ ಎಂದಳು ನೋವಿನಿಂದ.
ನನ್ನ ಪಾಡಿಗೆ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದೆ. ಮೈದುನ ಜೋರಾಗಿ, ‘ಅಕ್ಕಾ ನಾನು ಹೋಗುತ್ತಿದ್ದೇನೆ. ಯಾವುದಕ್ಕೂ ನನಗೆ ಫೋನ್ ಮಾಡಿ ಹೇಳು. ಒಂದು ಮಾತ್ರ ನೆನಪಿಟ್ಟುಕೋ.. ಕೈ ಮೀರಿದ ಮೇಲೆ ಬಾಧೆಪಟ್ಟರೆ ಪ್ರಯೋಜನವಿಲ್ಲ. ಕೆಲವು ನಿರ್ಧಾರಗಳನ್ನು ನೀನು ಮಾತ್ರ ತೆಗೆದುಕೊಳ್ಳಬೇಕುʼ ಒತ್ತಿ ಹೇಳುತ್ತ ಹೊರಟನು.
ಆ ನಿರ್ಧಾರ ಏನೆಂದು ತಿಳಿಯದಿದ್ದರೂ ಏನೋ ತಲೆ ಮೇಲೆ ಚಪ್ಪಡಿ ಎಳೆಯುವಂತಹುದೇ ಇರುತ್ತದೆ ಎಂದು ಮಾತ್ರ ಗ್ರಹಿಸಿದೆ. ನನ್ನ ಜೀವನದಲ್ಲಿ ನನಗಿಂತಲೂ ಅವನಿಗೇ ಅಧಿಕಾರ ಜಾಸ್ತಿ. ಈ ವಿಷಯ ನನಗೆ ತಿಳಿಯುವ ವೇಳೆಗೆ ಪರಿಸ್ಥಿತಿ ನನ್ನ ಕೈ ಜಾರಿತ್ತು.
ಹಿಂದೆ ಒಮ್ಮೆ ಇವನು ಇದೇ ರೀತಿ ನನ್ನನ್ನು ನೋಡಿ, ಸುಧಾಳಿಗೆ ಹೀಗೇ ಗಟ್ಟಿಯಾಗಿ ಕೂಗಿ ಹೇಳಿ ಹೋಗಿದ್ದನು.
‘ಇವನ ಮುಖ.. ನನ್ನನ್ನು ಬಿಟ್ಟು ಇವನೇನು ನಿರ್ಧಾರ ತೆಗೆದುಕೊಳ್ಳುವುದುʼ ಎಂದುಕೊಂಡೆ. ಆದರೆ ನನ್ನ ಅನಿಸಿಕೆ ತಲೆಕೆಳಗಾಗಿ ಅವನ ನಿರ್ಧಾರದಂತೆಯೇ ನಮ್ಮ ಸಂಸಾರದ ದಿಕ್ಕು ಬದಲಾಯಿತು. ಶೃತಿಯನ್ನು ಖಾಸಗಿ ಶಾಲೆಗೆ, ದೊಡ್ಡ ಮಗಳನ್ನು ಕಾರ್ಪೊರೇಟ್ ಕಾಲೇಜಿಗೆ ಸೇರಿಸಲಾಯಿತು. ನನ್ನ ಏಳು ಕಿಲೋಮೀಟರ್ ಪ್ರಯಾಣ ಮೂವತ್ತು ಕಿಲೋಮೀಟರ್ ಗೆ ಏರಿತು.
ತಕ್ಷಣ ಎಲ್ಲ ನೆನಪಾಯಿತು. ಗಾಬರಿಯಿಂದ ಆತುರಾತುರವಾಗಿ ಲುಂಗಿ ಸುತ್ತಿಕೊಂಡು ‘ಸುಧಾ.. ಏನಾಯಿತು? ಅವನೇನೋ ನಿರ್ಧಾರವೆನ್ನುತ್ತಿದ್ದಾನೆʼ ಎನ್ನುತ್ತ ಹೊರಗೆ ಬಂದೆ.
ಸುಧಾ ಏನೂ ಹೇಳಲಿಲ್ಲ, ಮತ್ತೊಮ್ಮೆ ಒತ್ತಿ ಕೇಳಿದೆನು.
ಪ್ರೋಗ್ರೆಸ್ ಕಾರ್ಡ್ ನನ್ನ ಮುಂದೆ ಇಟ್ಟಳು.
ನಾನು ವಿಚಿತ್ರವಾಗಿ ನೋಡಿದೆನು. ಸುಧಾ ನನ್ನತ್ತ ನೋಡುತ್ತ, ‘ಥರ್ಟಿ ಫಿಫ್ತ್ ರಾಂಕ್… ಔಟ್ ಆಫ್ ಫಾರ್ಟಿ.. ಹೀಗಾದರೆ ಹೇಗೆ? ಹೋದ ವರ್ಷ ಹೇಗೋ ಆಯಿತು. ಈಗ ಎಸ್.ಎಸ್.ಎಲ್.ಸಿʼ ಬೇಸರದಿಂದ ಹೇಳಿದಳು.
ಶೃತಿ ಒಮ್ಮೆ ನನ್ನತ್ತ, ಮತ್ತೊಮ್ಮೆ ಪ್ರೋಗ್ರೆಸ್ ಕಾರ್ಡ್ ನತ್ತ ಭಯದಿಂದ ನೋಡುತ್ತಿದ್ದಾಳೆ.
ಸುಧಾ ಸ್ವಲ್ಪ ಸಮಾಧಾನ ಮಾಡಿಕೊಂಡು ‘ಹೋದ ಸಲ ಏನು ಪ್ರಾಮಿಸ್ ಮಾಡಿದ್ದಳು..? ಸೆಕೆಂಡ್ ಯುನಿಟ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆಯುತ್ತೀನೆಂದು ಹೇಳಿರಲಿಲ್ಲವಾ..! ಎಲ್ಲಿ..? ಈಗಲೂ ಅಷ್ಟೆ! ಯಾವುದರಲ್ಲೂ ಹತ್ತು ದಾಟಿಲ್ಲʼ ಎಂದಳು.
ನಾನು ಮಾರ್ಕ್ಸ್ ನೋಡಿದೆ. ಅದು ನಿಜವೇ!
ಒಂದು ಕ್ಷಣಕ್ಕೆ ನನಗೆ ಕೋಪ ನೆತ್ತಿಗೇರಿ ತೆಗದು ಕೆನ್ನೆಗೆ ಬಾರಿಸಬೇಕೆನಿಸಿತು. ಈಗಾಗಲೇ ಆ ಕೆಲಸ ಆದಂತಿದೆ. ಅವಳು ಕಣ್ಣೀರಿನಿಂದ ತೊಪ್ಪೆಯಾಗಿದ್ದಾಳೆ. ನನ್ನಲ್ಲಾದ ಬದಲಾವಣೆ ಕಂಡು ಮತ್ತಷ್ಟು ಬೆದರುತ್ತಿದ್ದಾಳೆ.
ಸುಧಾ ‘ಈ ವಾರವೇ ಪೇರೆಂಟ್ಸ್ ಮೀಟಿಂಗ್. ಫಸ್ಟ್ ಮೀಟಿಂಗ್ ನಲ್ಲಿ ಹೇಗೋ ನಿಭಾಯಿಸಿದೆ. ಮಗಳನ್ನು ಏಕೆ ಓದಿಸಲಿಲ್ಲವೆಂದು ಮುಖಕ್ಕೆ ಹೊಡೆದಂತೆ ಕೇಳುತ್ತಾರೆ. ಏನೆಂದು ಹೇಳೋದು? ಎಲ್ಲರೆದುರು ಮರ್ಯಾದೆ ಹೋಗುತ್ತದೆʼ ಎಂದಳು.
ಮೊದಲ ಮೀಟಿಂಗ್ ದಿನವೂ ಹೀಗೇ ಗಲಾಟೆ.
‘ನಾನು ಒಂದು ತೊಟ್ಟು ನೀರೂ ಮುಟ್ಟುವುದಿಲ್ಲ. ಮರ್ಯಾದೆ ಹೋದಮೇಲೆ ಜೀವನವೇಕೆ.. ನಮ್ಮ ಅಣ್ಣನ ಮಗಳು ಐಶ್ವರ್ಯ ಸ್ಕೂಲಿಗೇ ಫಸ್ಟ್ ಅಂತೆ. ಅವರು ಎಷ್ಟು ಸಂತೋಷವಾಗಿದ್ದಾರೆ ಗೊತ್ತಾ. ಎರಡು ದಿನ ಅತ್ತಿಗೆ ಹಬ್ಬಕ್ಕೆ ಊರಿಗೆ ಹೋಗಿದ್ದರೂ ಅವಳು ಮನೆಯಲ್ಲಿ ಒಬ್ಬಳೇ ಇದ್ದು ಓದಿಕೊಂಡಳಂತೆ. ಮತ್ತೆ ಇವಳು.. ನಾನು ಯಾವಾಗಲಾದರೂ ಊರಿಗೆ ಹೋಗುತ್ತೇನೆಂದರೆ ಸಾಕು.. ನನಗಿಂತ ಮೊದಲು ರೆಡಿಯಾಗಿರುತ್ತಾಳೆʼ ಎಂದಳು ಕೋಪದಿಂದ.
‘ಅಮ್ಮ ಪ್ಲೀಸ್.. ತಿನ್ನಮ್ಮಾ! ನೀನು ತಿನ್ನದಿದ್ದರೆ ಅಪ್ಪ ಕೂಡ ತಿನ್ನುವುದಿಲ್ಲ.. ನಾನೂ ತಿನ್ನುವುದಿಲ್ಲʼ ಶೃತಿ ಗೋಗರೆದಳು.
‘ತಿನ್ನದಿದ್ದರೆ ಸಾಯಿ.. ನಿನಗೆ ಓದಲ್ಲ, ತಿನ್ನೋದು ಮಖ್ಯ.. ನನಗೆ ಓದೇ ಮುಖ್ಯ. ನಿನಗೇನು ಕಡಿಮೆ ಮಾಡಿದ್ದೇನೆ..? ಕೇಳಿದ್ದೆಲ್ಲ ಕ್ಷಣದಲ್ಲಿ ನಿನ್ನೆದುರಿಗಿಡುತ್ತಿದ್ದೇನೆʼ ಸುಧಾ ಕೋಪದಿಂದ ಮತ್ತಷ್ಟು ಕೂಗಾಡಿದಳು.
ಶೃತಿ ಅಳುತ್ತಾ ‘ಅಮ್ಮ.. ಪ್ಲೀಸ್ ಅಮ್ಮಾ.. ನೆಕ್ಸ್ಟ್ ಟೆಸ್ಟ್ ಗೆ ಚೆನ್ನಾಗಿ ಓದುತ್ತೀನಮ್ಮಾ..ʼ ಎಂದಳು.
‘ಪ್ರಾಮಿಸ್ʼ ಎನ್ನುತ್ತ ಶೃತಿಯತ್ತ ಕೈ ಚಾಚಿದಳು ಸುಧಾ.
ನಡುಗುತ್ತಿದ್ದ ಕೈಗಳಿಂದ ಶೃತಿ ‘ಪ್ರಾಮಿಸ್ʼ ಎನ್ನುತ್ತ ಕಣ್ಣೀರು ಒರೆಸಿಕೊಂಡಳು. ಅವಳು ಸ್ವಲ್ಪವಾದರೂ ಬದಲಾಗುತ್ತಾಳೆಂದು ಸುಧಾ, ಅಮ್ಮನಿಗೆ ಸಮಾಧಾನವಾಗಿದೆಯೆಂದು ಶೃತಿ ಸ್ವಲ್ಪ ಹೊತ್ತಿಗೆ ಮಾಮೂಲಾಗಿಬಿಟ್ಟರು. ನನಗೆ ಆ ರಾತ್ರಿಯಿಡೀ ನಿದ್ದೆ ಹತ್ತಲಿಲ್ಲ.
ಈಗ ಶೃತಿಯನ್ನು ನೋಡಿದ ಮೇಲೆ ನನ್ನ ಕೋಪ ಇಳಿಯಿತು. ಅವಳ ಎಳೆ ಕೆನ್ನೆಗಳು ಕಣ್ಣೀರ ಕರೆಗಟ್ಟಿವೆ. ಸುಧಾಳ ಮಾತುಗಳಿಗೆ ನಗಬೇಕೋ ಅಳಬೇಕೋ ಅರ್ಥವಾಗಲಿಲ್ಲ.
ಏನೋ ಒಂದು ಹೇಳಬೇಕೆಂದು ‘ಸರಿ ಬಿಡು! ಕ್ವಾರ್ಟರ್ಲಿ ವೇಳೆಗೆ ಚೆನ್ನಾಗಿ ಓದುತ್ತಾಳೆʼ ಎಂದೆನು.
ಅಷ್ಟೇ! ಸುಧಾ ಕಣ್ಣುಗಳು ಕೆಂಡದುಂಡೆಗಳಾದವು. ನಾನು ಸುಧಾಳಿಂದ ಶೃತಿಯತ್ತ ದೃಷ್ಠಿ ಹರಿಸಿದೆ. ಒಂದು ಕ್ಷಣ ಹೊಳೆದಂತಿದ್ದ ಅವಳ ಮುಖ ಮತ್ತೆ ಬಾಡಿತು.
ಸುಧಾ ಕೋಪದಿಂದ ಒಳಗೆ ಹೋದಳು. ಶೃತಿ ಈಗ ಸ್ವಲ್ಪ ಭಯ ಬಿಟ್ಟು ಕುಳಿತಳು. ಹೋಗುವಾಗ ನನ್ನತ್ತ ದುರುಗುಟ್ಟಿಕೊಂಡು ನೋಡುತ್ತ ಹೋದಳು ಸುಧಾ. ಅದುವರೆಗೂ ಅವಳಿಗೆ ಈ ಮೊದಲು ಕೊಟ್ಟಿದ್ದ ಮಾತು ನೆನಪಾಗಲಿಲ್ಲ ನನಗೆ.
‘ಮಕ್ಕಳನ್ನು ಮುದ್ದುಮಾಡುವುದಕ್ಕೂ ಒಂದು ಸಮಯವಿದೆ. ಯಾವಾಗಲೂ ಮುದ್ದುಮಾಡಿದರೆ ತಲೆ ಮೇಲೆ ಕುಳಿತುಕೊಳ್ಳುತ್ತಾರೆʼ ಒಮ್ಮೆ ಸುಧಾ ನನ್ನನ್ನು ದಂಡಿಸುತ್ತ ಹೇಳಿದಳು.
‘ನನಗೆ ಇನ್ಯಾರಿದ್ದಾರೆ ಸುಧಾ.. ದೊಡ್ಡವಳು ಹಾಸ್ಟೆಲಿನಲ್ಲಿದ್ದಾಳೆ! ಇನ್ನೊಂದು ವರ್ಷವಾದರೆ ಇವಳು ಕೂಡಾ ಹೊರಟುಹೋಗುತ್ತಾಳೆ. ಅದುವರೆಗಾದರೂ ಖುಷಿಯಾಗಿರಲಿʼ ನಾನು ಹೇಳಿದೆ.
ಅದಕ್ಕವಳು ‘ನಿಮಗೆ ಗೊತ್ತಿಲ್ಲ, ಇದು ಶಿಸ್ತಿಗೆ ಸಂಬಂಧಪಟ್ಟ ವಿಚಾರ. ಮಕ್ಕಳ ಒಳಿತನ್ನು ಬಯಸುವ ಪಾಲಕರು ಹಾಗೆ ಯೋಚಿಸುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಕುರಿತು ನೀವು ಜವಾಬ್ದಾರಿ ತೆಗೆದುಕೊಳ್ಳಿ, ನಾನು ಮೌನವಾಗಿರುತ್ತೇನೆ. ಇಲ್ಲವೇ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ, ನೀವು ಮೌನವಾಗಿರಬೇಕುʼ ಕಡ್ಡಿ ಮುರಿದಂತೆ ಹೇಳಿದ್ದಳು.
ಆಕೆ ಬಹಳ ಗಂಭೀರವಾಗಿ ಹೇಳಿದಾಗ ಯಾಕಪ್ಪ ಇಲ್ಲದ ಫಜೀತಿಯೆಂದು ‘ಸರಿ.. ನಾನೇ ಮೌನವಾಗಿರುತ್ತೇನೆʼ ಎಂದು ಹೇಳಿದೆ.
‘ಮೌನವಾಗಿ ಅಲ್ಲ ಓದಿನ ವಿಚಾರವಾಗಿ ಬೈಯ್ಯುವಾಗ ನೀವು ನನ್ನನ್ನು ಬೆಂಬಲಿಸಬೇಕುʼ ಮಾತು ತೆಗೆದುಕೊಂಡಿದ್ದಳು. ಈಗ ನಾನು ಆ ಮಾತು ತಪ್ಪಿದ್ದಕ್ಕಾಗಿ ಅವಳ ಕೋಪ ಮತ್ತಷ್ಟು ಹೆಚ್ಚಾಗಿದೆ.
ಸುಧಾಳನ್ನು ಈಗ ಸಮಾಧಾನ ಪಡಿಸುವುದು ಹೇಗೆಂದು ಯೋಚಿಸುತ್ತಿರುವಾಗಲೇ ಹೊರಗಿನಿಂದ ಹಾರನ್ ಸದ್ದು. ನನ್ನ ಸ್ನೇಹಿತ ವಾಸು ಒಳಗೆ ಹೆಜ್ಜೆಯಿಡುತ್ತಲೇ ‘ಹೋರಾಟಗಳ ಕಾಲವೆಲ್ಲ ಹೋಗುತ್ತಿದೆ ಕಣೋ.. ಹೆಸರಿಗೆ ಫೆಡರೇಷನ್… ಸದಸ್ಯರು.. ಕೈಮಗ್ಗದ ಕಾರ್ಮಿಕರಿಗೆ ನೈತಿಕ ಬೆಂಬಲವಾಗಿ ರ್ಯಾಲಿ ಮಾಡೋಣವೆಂದುಕೊಂಡೆ. ಬೇಕೆಂದಾಗ ಯಾರೂ ಮುಂದೆ ಬರುವುದಿಲ್ಲ.. ಕೇಬಲ್ ಟಿ.ವಿ. ಹಾಕು ನೋಡೋಣ’ ಎನ್ನುತ್ತ ರಿಮೋಟ್ ತೆಗೆದುಕೊಂಡು ಚಾನೆಲ್ ಬದಲಾಯಿಸಿದನು.
ನ್ಯೂಸ್ ಗೆ ಸ್ವಲ್ಪ ಸಮಯವಿತ್ತು.
‘ಅಬ್ಬಾ ಸರಿಯಾದ ಸಮಯಕ್ಕೇ ಬಂದೆʼ ಮನಸಿನಲ್ಲಿ ಅಂದುಕೊಳ್ಳುತ್ತ ಅವನೊಂದಿಗೆ ಮಾತಿಗಿಳಿದೆ. ಶೃತಿ ಒಳಗೆ ಹೋದಳು.
‘ನಾವು ಒಂದು ದೃಢ ನಿರ್ಧಾರ ತೆಗೆದುಕೊಂಡಿದ್ದೇವೆ..ʼ ಟಿ.ವಿ. ನೋಡುತ್ತ ಹೇಳಿದನು ವಾಸು.
ಏನೆಂದು ನಾನು ಕೇಳುವ ಮೊದಲೇ ‘ರಾಜು ಪರೀಕ್ಷೆ ಮುಗಿಯುವವರೆಗೂ ಎಲ್ಲಿಗೂ ಹೋಗಬಾರದು, ಯಾರನ್ನೂ ಮನೆಗೆ ಕರೆಯಬಾರದು ಎಂದುಕೊಂಡಿದ್ದೇವೆ. ಅವನಿಗೆ ತ್ರಿಬಲ್ ಐಟಿ ಟಾರ್ಗೆಟ್ ಇಟ್ಟಿದ್ದೇವೆ. ಹೋಂ ಟ್ಯೂಷನ್ ವ್ಯವಸ್ಥೆ ಮಾಡಿದ್ದೇವೆ..’ ಎಂದನು.
ಆ ಮಾತು ಕೇಳಿ ‘ಹಾಗೆ ಹೇಳಿ ಅಣ್ಣಾ..ʼ ಎನ್ನುತ್ತ ಅವನೆದುರೇ ಸುಧಾ ಎಲ್ಲಿ ನನಗೆ ಕ್ಲಾಸ್ ತೆಗೆದುಕೊಳ್ಳುವಳೋ ಎಂದುಕೊಂಡೆನು. ಸದ್ಯ ಹಾಗೇನೂ ಆಗಲಿಲ್ಲ. ನಮ್ಮಿಬ್ಬರಿಗೂ ಟೀ ತಂದಿಟ್ಟು ಒಳಗೆ ಹೋದಳು.
‘ನಿಮಗೇನಪ್ಪಾ.. ನೀನೇ ಒಬ್ಬ ಮೇಷ್ಟ್ರು.. ಅದೃಷ್ಟ. ಏನು, ಹೇಗೆ, ಎಲ್ಲಿ ಓದಿಸಬೇಕು ಎಲ್ಲ ತಿಳಿದಿರುತ್ತದೆ. ನಮಗೆ ಅವೆಲ್ಲ ಹೇಗೆ ತಿಳೀಬೇಕು ಹೇಳು..’ ಎಂದೆ.
‘ತಿಳಿದವರು ಹೇಳಿದರೆ ಕೇಳಬೇಕಲ್ಲವಾ!ʼ ಸುಧಾ ಗೊಣಗಿದಳು.
ವಾಸು ನಗುತ್ತ ‘ರೆವಿನ್ಯೂ ಡಿಪಾರ್ಟ್ಮೆಂಟ್ ಚೆನ್ನಾಗಿ ಸಂಪಾದಿಸುತ್ತೀರಿ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿಯೇ ಅಲ್ಲವಾ, ಜೀವನವಿಡೀ ಹಾಯಾಗಿರಬಹುದು!ʼ ಎಂದು ಕೊಂಕಾಗಿ ಹೇಳಿದನು.
‘ಹಾಗಾದರೂ ಇದ್ದಿದ್ದರೆ ಚೆನ್ನಾಗಿತ್ತುʼ ಎಂದಳು ಸುಧಾ.
ಟೀ ಕುಡಿಯುತ್ತ ಅವನು ಚಾನೆಲ್ ಬದಲಾಯಿಸುತ್ತಿದ್ದಾನೆ.
ಸುಧಾ ಅಡುಗೆ ಮಾಡುತ್ತಿದ್ದಾಳೆ.
ವಾಸು ನಾನು ಅದೂ ಇದೂ ಹರಟುತ್ತಿದ್ದಾಗ ಮಾತು ನಮ್ಮ ಸ್ನೇಹಿತ ಸುರೇಂದ್ರನ ಮಗನತ್ತ ಹೊರಳಿತು.
‘ಅವನು ತುಂಬಾ ದೊಡ್ಡವನಾಗಿಬಿಟ್ಟನಪ್ಪಾ.. ಕಾಲೇಜಿನಲ್ಲಿ ಯಾವುದೋ ಹುಡುಗಿಗೆ ಲೆಟರ್ ಬರೆದು, ಅದೇ ದೊಡ್ಡ ಗಲಾಟೆಯಾಯಿತು…ʼ ಎಂದನು.
ನನಗೆ ತಕ್ಷಣ ಸುರೇಂದ್ರ ಸಿಕ್ಕಾಗೆಲ್ಗ, ‘ಈ ಕಂಡಕ್ಟರ್ ಕೆಲಸದಲ್ಲಿ ಏನೂ ಉಳಿತಾಯ ಮಾಡಲಾಗಲಿಲ್ಲ ಕಣೋ.. ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಅದೊಂದೇʼ ಎಂದು ಹೇಳುವುದು ನೆನಪಾಯಿತು.
‘ಪಾಪ ಸುರೇಂದ್ರ ಅಮಾಯಕ ಕಣೋ.. ಅವನು ಎಷ್ಟೋ ಆಸೆ ಇಟ್ಟುಕೊಂಡಿದ್ದ. ತಂದೆ ಮಾನ ಕಳೆಯೋ ಮಕ್ಕಳು ಯಾಕಾದರೂ ಹುಟ್ಟುತ್ತಾರೋʼ ವಾಸು ಬೇಸರದಿಂದ ಹೇಳಿದ.
‘ಕಷ್ಟಪಟ್ಟು ಓದುವ ನಮ್ಮ ಮಕ್ಕಳು ಹೇಗೆ ಕೆಟ್ಟವರಾಗುತ್ತಾರೆ’ ಎಂದು ನಾನು ಬಾಯಿ ತೆಗೆಯುವಷ್ಟರಲ್ಲೇ ಸುಧಾ ಹೊರಗೆ ಬಂದು ‘ಓದು.. ಓದು ಮುಖ್ಯ..ಯಾರಾದರೂ ಎಷ್ಟು ಪರ್ಸೆಂಟ್ ಬಂದಿದೆಯೆಂದು ಕೇಳುತ್ತಾರೇ ಹೊರತು ಏನು ಮಾಡಿದನೆಂದು ಕೇಳುವುದಿಲ್ಲ ಅಲ್ಲವಾ..ʼ ಎಂದಳು.
ಇನ್ನು ನಾನು ಈಗ ಮಾತನಾಡಿದರೆ ಜಾಡಿಸಿಬಿಡುತ್ತಾಳೆಂದುಕೊಂಡು ತೆಪ್ಪಗಾದೆ.
ಈಗ ಮತ್ತೆ ವಾಸು ಶಂಕರನ ಕತೆ ತೆಗೆದ. ‘ನಮ್ಮ ಶಂಕರ್ ಮಗ ಕೂಡ ಅಷ್ಟೇ! ಅವನ ಕಣ್ಣಿಗೆ ಬಿದ್ದದ್ದೆಲ್ಲ ಮಾಯ. ನೆಂಟರಿಷ್ಟರ ಮನೆಗೆ ಹೋದಾಗ ಎಲ್ಲರೂ ನೇರವಾಗಿಯೇ ಹೇಳುತ್ತಾರಂತೆ. ಅವರ ಅಪ್ಪನ ಪರ್ಸಿನಲ್ಲಿರುವ ಹಣ ಕೂಡಾ…’
ಒಮ್ಮೆ ಶಂಕರ್ ಅಮ್ಮನಿಗೆ ದುಡ್ಡು ಕೊಡಲು ಮಗನ ಕೈಲಿ ಕೊಟ್ಟು ಕಳುಹಿಸಿದರೆ ಆ ದುಡ್ಡಿನಿಂದ ಅವನು ಪಟ್ಟಣದ ಬಸ್ ಹತ್ತಿದ ಘಟನೆ ನೆನಪಾಯಿತು. ಪಾಪವೆನಿಸಿ ‘ಈಗ ಅವನು ಚಿಕ್ಕವನಲ್ಲ, ಇಂಟರ್ ಓದುತ್ತಿದ್ದಾನೆ. ಇನ್ನೂ ಅವನು ಆ ಗುಣ ಬಿಟ್ಟಿಲ್ಲವೆಂದರೆ ಅವನ ಭವಿಷ್ಯತ್ತನ್ನು ಊಹಿಸಿಕೊಂಡರೆ ಭಯವಾಗುತ್ತದೆʼ, ಎಂದೆನು.
ಆದರೆ ವಾಸು ನನ್ನನ್ನು ಹುಚ್ಚನನ್ನು ನೋಡಿದಂತೆ ನೋಡಿ ‘ಅವನು ಕಾಲೇಜಿಗೇ ಫಸ್ಟ್ ಕಣೋ.. ದಟ್ ಈಸ್ ಗ್ರೇಟ್’ ಎಂದನು. ಹಾಗಲ್ಲವೆಂದು ನಾನು ಏನು ಹೇಳಿದರೂ ವಾಸುವಿನ ವಾದದ ಮುಂದೆ ನನ್ನ ವಿಶ್ಲೇಷಣೆ ಬಿದ್ದುಹೋಯಿತು.
ಟಿವಿಯಲ್ಲಿ ಜಾಹೀರಾತು ಮುಗಿದು ಹುಟ್ಟಿದ ಹಬ್ಬದ ಶುಭಾಶಯಗಳ ಕಾರ್ಯಕ್ರಮ ಪ್ರಸಾರ ಶುರುವಾಯಿತು.
ಸುಧಾಳ ಅಕ್ಕನ ವಿಚಾರದಲ್ಲಿ ತಿಂಗಳ ಹಿಂದೆ ನಮ್ಮಿಬ್ಬರಿಗೆ ಹೀಗೆ ವಾದ ಮೊದಲಾಯಿತು. ಅವಳ ಅಕ್ಕ ಬಾತ್ ರೂಮಿನಲ್ಲಿ ಜಾರಿ ಬಿದ್ದು ಮಂಚ ಹಿಡಿದಾಗ ಇಂಜಿನಿಯರಿಂಗ್ ಓದುತ್ತಿದ್ದ ಅವರ ಮಗಳು ಅಮ್ಮನ ಸೇವೆ ಮಾಡಿಕೊಂಡು ಇಲ್ಲೇ ಇದ್ದಳು.
‘ನನಗೇನೂ ಪರವಾಗಿಲ್ಲ ನೀನು ಹಾಸ್ಟೆಲಿಗೆ ಹೋಗು..ʼ ಎಂದು ಅವಳ ಅಮ್ಮ ಹೇಳಿದರೂ, ಮಗಳು ‘ಅಮ್ಮಾ ನನಗೆ ನೀನು ಮುಖ್ಯ.. ನೀನು ಚೇತರಿಸಿಕೊಂಡ ಮೇಲೆ ನಾನು ಹೋಗುತ್ತೇನೆʼ ಎಂದು ಹಠ ಹಿಡಿದಿದ್ದಳಂತೆ.
ಕೂಡಲೇ ಅಕ್ಕನಿಂದ ಸುಧಾಳಿಗೆ ಫೋನ್. ಅವರ ಮಗಳು ಸರಿಯಾಗಿಯೇ ಯೋಚಿಸಿದ್ದಾಳೆ ಎಂದು ನಾನು ಸುಧಾಳಿಗೆ ಹೇಳಿದೆ. ಇತ್ತ ನನ್ನ ಬಾಯಿ ಮುಚ್ಚಿಸಿ, ಅಕ್ಕನ ಮಗಳನ್ನು ತರಾಟೆಗೆ ತೆಗೆದುಕೊಂಡು ಹಾಸ್ಟೆಲಿನಲ್ಲಿ ಬಿಟ್ಟುಬಂದಳು.
ವಾರ್ತೆಗಳು ಶುರುವಾಗಿ ಎಲ್ಲರ ಗಮನ ಅತ್ತ ಹರಿಯಿತು.
ಕೈಮಗ್ಗ ಕಾರ್ಮಿಕರ ರ್ಯಾಲಿ ಪ್ರಸಾರವಾಯಿತು. ವಾಸು ಬ್ಯಾನರ್ ಹಿಡಿದು ಮುಂದೆ ನಿಂತಿದ್ದಾನೆ. ನಂತರ ಸೆಪ್ಟೆಂಬರ್ ೫ರ ಉಪವಾಸ ಕುರಿತ ವಾಸು ಹೇಳಿಕೆ, ಶಿಕ್ಷಕರ ಬೇಡಿಕೆಗಳನ್ನು ನೆರವೇರಿಸದಿದ್ದರೆ ಪ್ರತಿಭಟನೆ ಖಚಿತ ಎಂದು ಎಚ್ಚರಿಸುತ್ತಿದ್ದಾನೆ.
ವಾಸು ಟಿ.ವಿ. ಯಲ್ಲಿ ತನ್ನನ್ನು ನೋಡಿಕೊಂಡು ಹುಮ್ಮಸ್ಸಿನಿಂದ ಬೀಗಿ ಹೊರಟನು.
ಆ ವೇಳೆಗೆ ಸುಧಾ ಸಮಾಧಾನವಾಗಿದ್ದಳು. ‘ನಾವು ಕೂಡ ಟಿ.ವಿ. ಕಟ್ಟಿ ಹಾಕಿಬಿಡೋಣ. ಇವಳೂ ಎಸ್.ಎಸ್. ಎಲ್. ಸಿ ಅಲ್ಲವಾ, ನಮಗೆ ಮಾತ್ರ ಟಾರ್ಗೆಟ್ ಇರುವುದಿಲ್ಲವಾ.. ತ್ರಿಬಲ್ ಐ.ಟಿ. ಅಲ್ಲದಿದ್ದರೂ ಕನಿಷ್ಠ ಪಕ್ಷ ೫೦೦ ಅಂಕ ದಾಟಿದರೆ ಫೀಸ್ ಕನ್ಸೆಷನ್ ಸಿಗುತ್ತದೆ. ಒಂದು ಟೈಮ್ ಟೇಬಲ್ ಇಟ್ಟುಕೊಳ್ಳೋಣ. ನೀವು ಇಂಗ್ಲಿಷ್ ಹೇಳಿಕೊಡಿ, ಸೈನ್ಸ್, ಮ್ಯಾಥ್ಸ್ ಗೆ ನಾನು ಸಹಾಯ ಮಾಡುತ್ತೇನೆ. ನೀವೇನು ಮಾಡುವಿರೊ ನನಗೆ ಗೊತ್ತಿಲ್ಲ, ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ಇಂಗ್ಲಿಷ್ ೫೦ ಪರ್ಸೆಂಟ್ ಬರಬೇಕು. ಸೈನ್ಸ್, ಮ್ಯಾಥ್ಸ್ ನನಗೆ ಬಿಡಿ. ಅರ್ಧವಾರ್ಷಿಕ ಪರೀಕ್ಷೆ ವೇಳೆಗೆ ಎಲ್ಲ ಸಬ್ಜೆಕ್ಟ್ ಕವರ್ ಮಾಡೋಣʼ ಎನ್ನುತ್ತ ಎಮರ್ಜೆನ್ಸಿ ಘೋಷಿಸುವ ನಿಬಂಧನೆಗಳನ್ನು ಹೇಳಿದಳು. ಆದರೆ ಅದು ಜಾರಿಯಾಗಲಿಲ್ಲ.
ಸದ್ಯ ಸುಮ್ಮನಿದ್ದಾಳಲ್ಲ ಎಂಬಂತೆ ನಾನು ಗಾಢ ಮೌನಕ್ಕೆ ಶರಣಾದೆ. ಆದರೆ ಮನಸ್ಸಿನಲ್ಲಿ ಶೃತಿಯದೇ ಚಿಂತೆ. ಶೃತಿ ಹಾಸಿಗೆ ಮೇಲೆ ಮುದುರಿಕೊಂಡು ಮಲಗಿದ್ದಾಳೆ. ಅವಳು ಹುಟ್ಟಿದ ಮೇಲೆ ಉದ್ಯೋಗ ಸಿಕ್ಕಿದ್ದು, ಜೀವನ ಒಂದು ಸ್ಥಿರ ಹಂತಕ್ಕೆ ಬಂದದ್ದು ನನಗೆ ಭಾವನಾತ್ಮಕವಾಗಿ ಉಳಿದುಹೋಗಿದೆ. ಎಲ್ಲ ನನ್ನ ಅಪ್ಪನ ಹೋಲಿಕೆಯೇ ಅವಳಿಗೆ! ನಮ್ಮ ಕುಟುಂಬದಲ್ಲಿ ಯಾರೇ ನೋವಿನಲ್ಲಿದ್ದರೂ ಮೊದಲು ಸಂಕಟ ಪಡುವವಳು ಅವಳೇ! ಸುಧಾ ಹಾಸ್ಟೆಲಿಗೆ ಸೇರಿಸೋಣ ಎಂದು ನಿಧಾನವಾಗಿ ಪ್ರಸ್ತಾಪ ಮಾಡಿದಳು.
ನನ್ನ ಉತ್ತರಕ್ಕಾಗಿ ಎದುರು ನೋಡುತ್ತಿದ್ದಾಳೆ. ನಾನು ಊಂ, ಉಹುಂ ಏನೂ ಹೇಳಲಿಲ್ಲ. ಏನೂ ಹೇಳಬೇಕೆನಿಸಲಿಲ್ಲ. ಹೋಗಿ ಶೃತಿಯನ್ನು ಊಟಕ್ಕೆ ಎಬ್ಬಿಸಿದೆನು.
ಸುಧಾ ನನ್ನನ್ನು ಗಮನಿಸುತ್ತಲೇ ಇದ್ದಾಳೆ. ಕೋಪದಿಂದ ‘ಒಂದು ಹೊತ್ತು ತಿನ್ನದಿದ್ದರೆ ಏನೂ ಆಗುವುದಿಲ್ಲʼ ಎಂದಳು.
ಶೃತಿ ಮತ್ತಷ್ಷು ಮುದುರಿ ಮಲಗಿದಳು.
ಸುಧಾ ಸ್ವಲ್ಪ ಸಮಾಧಾನ ಮಾಡಿಕೊಂಡು ‘ಹೋದ ಸಲ ಏನು ಪ್ರಾಮಿಸ್ ಮಾಡಿದ್ದಳು..? ಸೆಕೆಂಡ್ ಯುನಿಟ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆಯುತ್ತೀನೆಂದು ಹೇಳಿರಲಿಲ್ಲವಾ..! ಎಲ್ಲಿ..? ಈಗಲೂ ಅಷ್ಟೆ! ಯಾವುದರಲ್ಲೂ ಹತ್ತು ದಾಟಿಲ್ಲʼ ಎಂದಳು.
ಆ ರಾತ್ರಿ ಶೃತಿ ನನ್ನ ಎದೆಗೊರಗಿ ನಿದ್ರಿಸಿದಳು. ಸುಧಾ ಮುಖ ಗಂಟಿಕ್ಕಿಕೊಂಡು ಚಾಪೆ ಹಾಸಿ ಕೆಳಗೆ ಮಲಗಿದಳು.
ಮಧ್ಯರಾತ್ರಿ ನನ್ನ ಕೆನ್ನೆ ತೇವವಾದಂತಾಗಿ ಲೈಟ್ ಆನ್ ಮಾಡಿ ನೋಡಿದರೆ ಶೃತಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುತ್ತಿನಂತೆ ಉದುರುತ್ತಿವೆ.
‘ನನ್ನನ್ನು ಹಾಸ್ಟೆಲಿಗೆ ಕಳುಹಿಸ ಬೇಡಪ್ಪಾ… ರಾತ್ರಿ ನೀನು ಪಕ್ಕದಲ್ಲಿಲ್ಲದಿದ್ದರೆ ನನಗೆ ಭಯವಾಗುತ್ತದೆ. ಪ್ರಾಮಿಸ್ ಅಪ್ಪಾ.. ಕ್ವಾರ್ಟರ್ಲಿ ಯಲ್ಲಿ ತೊಂಭತ್ತು ಅಂಕ ತೆಗೆದುಕೊಳ್ಳುತ್ತೇನೆ.. ಪ್ಲೀಸ್ ಅಪ್ಪಾ..’ ಬಿಕ್ಕುತ್ತಾ ಹೇಳಿದಳು.
ಅವಳ ಕಣ್ಣಿನಲ್ಲಿ ಭಯ. ಮಾತಿನಲ್ಲಿ ನಡುಕ.
ಅವಳು ಗೋಗರೆಯುತ್ತಿದ್ದರೆ ನನ್ನ ಹೃದಯ ಕಲಕಿದಂತಾಗಿ ಭಾರವಾಗುತ್ತಿದೆ. ‘ಇದೇ ನಿಮ್ಮ ಬಲಹೀನತೆʼ ಎಂದು ಸುಧಾ ಹೇಳಿದ ಮಾತುಗಳು ನೆನಪಾಗಿ ಕಟುವಾಗಿರಲು ಪ್ರಯತ್ನಿಸಿದೆನು.
‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ. ಸುಧಾಳ ಹಿತಬೋಧನೆ, ನನ್ನ ನಿರ್ಧಾರಗಳು, ಅವಳು ಓದುತ್ತಿಲ್ಲವೆಂಬ ಭಯ, ಆವೇಶ…. ಎಲ್ಲವೂ ಅವಳ ಕಣ್ಣೀರಿಗೆ ಕರಗಿ, ನನ್ನ ಕಣ್ಣು ತುಂಬಿಬಂದವು. ಅವಳನ್ನು ಬಿಗಿಯಾಗಿ ಎದೆಗಪ್ಪಿಕೊಂಡೆ. ಚೆನ್ನಾಗಿ ಓದದಿದ್ದರೆ ಹಾಸ್ಟೆಲಿಗೆ ಹಾಕುತ್ತೇನೆಂದು, ಹಾಸ್ಟೆಲಿನ ಜೀವನ ಭಯಂಕರವಾಗಿರುತ್ತದೆಂದು ಈಗಾಗಲೇ ಸುಧಾ ಅವಳಿಗೆ ಹೇಳಿ ಭಯಪಡಿಸಿದ್ದಾಳೆ.
ನಾನು ಸಮಾಧಾನಪಡಿಸುತ್ತಿದ್ದೇನೆ. ಶೃತಿ ಅಳುತ್ತಿದ್ದಾಳೆ. ಸುಧಾ ಎಚ್ಚರಗೊಂಡು ಕೋಪದಿಂದ ಹೊದಿಕೆ ಜಾಡಿಸಿ ಪಕ್ಕಕ್ಕೆ ತಿರುಗಿ ಮಲಗಿದಳು. ಪೇರೆಂಟ್ಸ್ ಮೀಟಿಂಗಿಗೆ ನಾನು ಬರುತ್ತೇನೆಂದು ಮಾತು ಕೊಡುವವರೆಗೂ ಶೃತಿ ಅಳು ನಿಲ್ಲಿಸಲಿಲ್ಲ.
ಬೆಳಗಾಯಿತು. ಸುಧಾಳ ಮುಖದಲ್ಲಿ ಗಂಭೀರ, ಆತಂಕ ಎದ್ದು ಕಾಣುತ್ತಿದೆ. ರಾತ್ರಿ ನಾನು ಕೊಟ್ಟ ಮಾತಿನಿಂದ ಶೃತಿ ಸ್ವಲ್ಪ ಧೈರ್ಯವಾಗಿದ್ದಾಳೆ. ಅಮ್ಮನೊಂದಿಗೆ ಮಾತನಾಡಲಿಲ್ಲ. ಬ್ಯಾಗ್ ಸಿದ್ಧಪಡಿಸಿಕೊಂಡು, ಜಡೆ ಹಾಕಿಕೊಂಡು ಅಮ್ಮನ ಕಡೆ ತಲೆಯೆತ್ತಿಯೂ ನೋಡದೆ ತನ್ನ ಪಾಡಿಗೆ ರೆಡಿಯಾಗುತ್ತಿದ್ದಾಳೆ.
ಇದೆಲ್ಲವನ್ನೂ ಗಮನಿಸಿದ ಸುಧಾ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದಾಳೆ. ನಾನು ರೆಡಿಯಾಗಿ ‘ಸುಧಾ ಪೇರೆಂಟ್ಸ್ ಮೀಟಿಂಗಿಗೆ ನೀನು ಹೋಗುತ್ತೀಯಾ.. ನಾನು ಹೋಗಲಾ..?ʼ ಕೇಳಿದೆ.
ನನ್ನತ್ತ ನೋಡದೆಯೇ ‘ಅಗತ್ಯವಿಲ್ಲ. ನಾಳೆ ಹೋಗಿ ಟಿ.ಸಿ. ತರುತ್ತೇನೆ. ಕರೀಂನಗರ್ ಹಾಸ್ಟೆಲಿಗೆ ಹಾಕೋಣ. ಒಳ್ಳೆ ರ್ಯಾಂಕ್ ಸ್ಕೂಲ್ʼ ಎಂದಳು ಸುಧಾ.
ಶೃತಿ ಗಾಬರಿಯಿಂದ ನನ್ನನ್ನು ನೋಡಿದಳು.
‘ಸುಧಾ.. ಅಗತ್ಯವಾ.. ಅದಲ್ಲದೆ ಫೀಸು ಜಾಸ್ತಿʼ ಗೊಣಗಿದೆ.
ಇಷ್ಟುಹೊತ್ತು ತಡೆದುಕೊಂಡಿದ್ದ ಕೋಪ ಒಮ್ಮೆಗೇ ಕಟ್ಟೆಯೊಡೆದು ಆವೇಶದಿಂದ ‘ನಿಮಗೆ ವಿದ್ಯೆ ಮುಖ್ಯವಾ.. ಹಣ ಮುಖ್ಯವಾ. ಈಗಾಗಲೇ ನಿಮ್ಮಿಂದಾಗಿ ಮಕ್ಕಳು ಸಾಕಷ್ಟು ನಷ್ಟ ಹೊಂದಿದ್ದಾರೆ. ಮನೆ, ಅಮ್ಮ ಎಂದುಕೊಂಡು ಊರು ಬಿಟ್ಟು ಕದಲಲಿಲ್ಲ. ಅವಳು ಹತ್ತನೇ ತರಗತಿಯಲ್ಲಿ ಸಾಧಾರಣವಾಗಿ ಪಾಸಾದಳು. ಇವಳು ಹೀಗೆ ತಯಾರಾಗುತ್ತಿದ್ದಾಳೆ. ಅದೇನೇ ಆಗಲಿ ಇವಳನ್ನು ಹಾಸ್ಟೆಲಿಗೆ ಸೇರಿಸುವುದು ಗ್ಯಾರಂಟಿ’ ಎಂದು ಕಡ್ಡಿ ಮುರಿದಂತೆ ಹೇಳಿದಳು.
ಶೃತಿ ನನ್ನನ್ನೇ ನಂಬಿ ಅವಳ ಭಾರವೆಲ್ಲ ನನ್ನ ಮೇಲೆ ಹಾಕಿ ಭಯಭೀತಳಾಗಿ ದಿಕ್ಕುಗಳನ್ನು ನೋಡುತ್ತಿದ್ದಾಳೆ.
ಸುಧಾ ಹೋದ ವರ್ಷ ಹೀಗೇ ‘ನಿಮಗೆ ಮಕ್ಕಳ ವಿದ್ಯೆ ಮುಖ್ಯವಾ ಮನೆ ಮುಖ್ಯವಾʼ ಎಂದು ಹಠ ಸಾಧಿಸಿದ್ದಳು. ಈಗಲೂ ಅದೇ ನಂಬಿಕೆಯಲ್ಲಿದ್ದಾಳೆ.
ನಾನು ತಿಂಡಿಗೆ ಕುಳಿತೆ. ಸುಧಾ ಎದ್ದು ಹೊರಗೆ ಹೋದಳು. ಶೃತಿಯೇ ನನಗೆ ತಿಂಡಿ ಹಾಕಿಕೊಟ್ಟಳು. ತಿನ್ನುವಾಗ ನೆತ್ತಿ ಹತ್ತಿದರೆ ಶೃತಿ ಓಡಿ ಬಂದು ನೀರು ಕೊಟ್ಟು ತಲೆ ತಟ್ಟಿದಳು.
ಇಬ್ಬರೂ ಶಾಲೆಗೆ ಹೋದೆವು. ಇದುವರೆಗೂ ಶಾಲೆಯ ಆಯ್ಕೆಯಿಂದ ಹಿಡಿದು ಮೀಟಿಂಗ್ ವರೆಗೂ ಎಲ್ಲವೂ ಸುಧಾಳೇ ನೋಡಿಕೊಂಡು ಬಂದಿದ್ದಾಳೆ. ಇಂದು ನನಗೆ ಇದೆಲ್ಲ ಹೊಸದಾಗಿದೆ. ಪ್ರಾಂಶುಪಾಲರ ಕೊಠಡಿಗೆ ಹೋಗಿ ನನ್ನನ್ನು ನಾನು ಪರಿಚಯಿಸಿಕೊಂಡೆ. ಅವರು ನನ್ನತ್ತ ನಿರಾಸಕ್ತಿಯಿಂದ ನೋಡಿ ‘ಜಾಸ್ತಿ ಕಷ್ಟಪಡಬೇಕು ಸರ್.. ನಿಮ್ಮ ಮಗಳು ಸ್ವಲ್ಪವೂ ಇಂಪ್ರೂವ್ ಆಗಿಲ್ಲ..’ ಎಂದರು.
ಶೃತಿ ಪೆಚ್ಚುಮೋರೆ ಹಾಕಿದಳು. ಏನು ಹೇಳಬೇಕೋ ನನಗೆ ತೋಚದೆ ಸುಮ್ಮನೆ ನಿಂತೆ.
ನಂತರ ಬಂದ ಪೋಷಕರನ್ನು ಪ್ರಾಂಶುಪಾಲರು ನಗುತ್ತಾ ಆಹ್ವಾನಿಸಿ ಕುಳಿತುಕೊಳ್ಳಲು ಹೇಳಿದರು. ಆ ವಿದ್ಯಾರ್ಥಿಯ ತಂದೆ ತನ್ನ ಮಗನನ್ನು ಹೇಗೆ ಓದಿಸುತ್ತಿದ್ದೇನೆಂದು ಹೇಳುತ್ತಿದ್ದರೆ, ಪ್ರಾಂಶುಪಾಲರು ತಮ್ಮ ಶಾಲೆಯ ಕೋಚಿಂಗ್ ವಿವರ ನೀಡುತ್ತಿದ್ದಾರೆ.
ನಾವು ಹೊರಗೆ ಬಂದೆವು. ಅಲ್ಲಿ ಪೋಷಕರು ಎರಡು ಗುಂಪುಗಳಾಗಿ ಕಂಡರು. ಕೆಲವರು ಹೆಮ್ಮೆಯಿಂದ ಓಡಾಡುತ್ತಿದ್ದರೆ, ಕೆಲವರು ಗಾಬರಿಯಿಂದಿದ್ದಾರೆ.
ಶೃತಿ ನನ್ನ ಹಿಂದೆ ಬೆಕ್ಕಿನ ಮರಿಯಂತೆ ಓಡಾಡುತ್ತಿದ್ದಾಳೆ. ಅವಳಿಗೆ ಹೆಚ್ಚು ಫ್ರೆಂಡ್ಸ್ ಇದ್ದಂತೆ ಕಾಣಲಿಲ್ಲ. ಒಂದಿಬ್ಬರು ಮಾತನಾಡಿದರಷ್ಟೆ! ಕೆಲವು ಮಕ್ಕಳು ಇಡೀ ಶಾಲೆ ತಮ್ಮದೆಂಬಂತೆ ಗುಂಪುಕಟ್ಟಿಕೊಂಡು ಓಡಾಡುತ್ತಿದ್ದರೆ, ಇನ್ನು ಕೆಲವರು ಪೋಷಕರ ಹಿಂದೆಯೇ ಬಾಲವಾಗಿದ್ದಾರೆ.
ಎಲ್ಲರೂ ಕುಳಿತುಕೊಳ್ಳಬೇಕೆಂದು ಮೈಕಿನಲ್ಲಿ ಘೋಷಣೆ ಕೇಳಿಸಿತು. ನಾನು ಶೃತಿ ಕುಳಿತುಕೊಂಡೆವು. ಪ್ರಿನ್ಸಿಪಲ್ ಮೈಕ್ ಬಳಿ ಬಂದು ‘ಈ ಬಾರಿ ಪೇರೆಂಟ್ಸ್ ಮೀಟಿಂಗ್ ನ್ನು ವಿನೂತನವಾಗಿ ಆಚರಿಸಬೇಕೆಂದುಕೊಂಡಿದ್ದೇವೆ. ನೀವು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದೀರ. ಆದರೂ ಕೆಲವರು ಓದುತ್ತಿಲ್ಲ. ನಿಮಗೂ, ಮಕ್ಕಳಿಗೂ ಮಾರ್ಗದರ್ಶನ ಅಗತ್ಯವಿದೆ. ಇಂದು ವ್ಯಕ್ತಿತ್ವ ವಿಕಸನ ಕೋರ್ಸ್ ನ ನಿಷ್ಣಾತರಾದ ಇಬ್ಬರು ಪ್ರೊಫೆಸರ್ ಗಳನ್ನು ಕರೆಸಿದ್ದೇವೆ,’ ಹೇಳುತ್ತ ಹೋಗುತ್ತಿದ್ದಾರೆ ಪ್ರಾಂಶುಪಾಲರು…
ನನಗೆ ಇತ್ತೀಚೆಗೆ ನಡೆದ ಲೀಡ್ ಇಂಡಿಯಾ ೨೦೨೦ ಕಾರ್ಯಕ್ರಮ ನೆನಪಾಯಿತು. ಜಿಲ್ಲಾಧಿಕಾರಿಗಳ ಆದೇಶದನ್ವಯ ವಿಭಾಗೀಯ ಶಿಕ್ಷಕರಿಗೆ ರೆಸಿಡೆನ್ಷಿಯಲ್ ಕಾರ್ಯಕ್ರಮವಾಗಿ ರೆವಿನ್ಯೂ ಇಲಾಖೆಯ ಪರವಾಗಿ ನಾವೇ ಆ ಕಾರ್ಯಕ್ರಮವನ್ನು ನಿರ್ವಹಿಸಿದೆವು. ಅಬ್ದುಲ್ ಕಲಾಂ ಪರಿಕಲ್ಪನೆಯದೆಂದು ನನಗೂ ಆಸಕ್ತಿ ಮೂಡಿತು. ತಪ್ಪದೆ ಕೇಳಬೇಕೆಂದುಕೊಂಡೆನು. ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸುತ್ತ ಒಬ್ಬ ಉಪನ್ಯಾಸಕ ‘ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳನ್ನು ಹೆರುವ ತಾಳ್ಮೆ, ಸಮಯ ಇಲ್ಲವೆಂದು, ಮಾನವ ಸಂಪನ್ಮೂಲಕ್ಕಾಗಿ ಅವರೆಲ್ಲ ಭಾರತವನ್ನೇ ಅವಲಂಬಿಸುವರು. ಮುಂಬರುವ ದಿನಗಳಲ್ಲಿ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಭಾರತದ ಮಕ್ಕಳಿಗೆ ಸಾಕಷ್ಟು ಅವಕಾಶಗಳಿರಲಿದ್ದು, ಮಕ್ಕಳು ಚೆನ್ನಾಗಿ ಓದಿ ಬೆಳೆಯಬೇಕೆಂದುʼ ಹೇಳಿದರು.
ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು.
ನನಗೂ ನನ್ನಿಬ್ಬರು ಮಕ್ಕಳನ್ನು ದೊಡ್ಡಉದ್ಯೋಗ ಸಿಗುವಂತೆ ಚೆನ್ನಾಗಿ ಓದಿಸಬೇಕೆಂಬ ಉತ್ಸಾಹ ಮೂಡಿತು.
ಆಗ ಶಿಕ್ಷಕರೊಬ್ಬರು ಎದ್ದು ನಿಂತು ‘ಬಹು ರಾಷ್ಟ್ರೀಯ ಕಂಪನಿಗಳ ಕೈಗೊಂಬೆಗಳನ್ನು ತಯಾರು ಮಾಡುವುದಕ್ಕಾ ನಮ್ಮ ಶಿಕ್ಷಣ. ಇದು ಲೀಡ್ ಇಂಡಿಯಾನಾ.. ಲಿವ್ ಇಂಡಿಯಾನಾ..’ ಎಂದು ಪ್ರಶ್ನಿಸಿದರು.
ಆ ಕುರಿತೇ ಬಹಳ ದೊಡ್ಡ ಚರ್ಚೆ ನಡೆಯಿತು. ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ.
‘ದೊಡ್ಡ ಉದ್ಯೋಗ ಸಿಗುತ್ತದೆಂದರೆ ಕೈಗೊಂಬೆ ಎನ್ನುತ್ತಿದ್ದಾನಲ್ಲʼ ಎಂದು ಆ ಶಿಕ್ಷಕನ ಮೇಲೆ ನನಗೆ ಕೋಪ ಬಂದಿತು.
ಎರಡನೆ ದಿನ ‘ಆಪ್.. ಬಡೋ… ದೇಶ್ಕೋ ಬಡಾವೋʼ ಎಂದು ಘೋಷಣೆ ಕೂಗಿದನು ಆ ಪ್ರೊಫೆಸರ್.
‘ಬಡೋʼ ಎಂಬ ಪದದ ಕುರಿತು ಶಿಕ್ಷಕರಲ್ಲಿ ಚರ್ಚೆ ಆರಂಭವಾಯಿತು. ಬೆಳೆಯುವುದು ಎಂದರೇನು..? ತಿಂಗಳಿಗೆ ಎರಡು ಮೂರು ಲಕ್ಷ ಸಂಪಾದಿಸುವುದೇ ಬೆಳವಣಿಗೆಯಾ..? ಎಂಬುದು ಅವರ ವಾದ. ಕೆಲವರು ಹೌದು ಎಂದು, ಕೆಲವರು ಅಲ್ಲವೆಂದರು. ಹೌದು-ಅಲ್ಲವೆಂಬ ವಾದ ಪ್ರತಿವಾದಗಳ ಗೊಂದಲದಿಂದಲೇ ಆ ಕಾರ್ಯಕ್ರಮ ಮುಗಿಯಿತು.
ಈಗ ಮೊದಲಿಗೆ ವ್ಯಕ್ತಿತ್ವ ವಿಕಸನದ ಹಿರಿಯ ಪರಿಣಿತರು ಭಾಷಣ ಮಾಡುತ್ತ ಏನು ಓದಿದರೆ ಯಾವ ಉದ್ಯೋಗಾವಕಾಶವಿದೆ.. ಎಷ್ಟು ಸಂಪಾದಿಸಬಹುದೆಂದು ಹೇಳುತ್ತಿದ್ದಾರೆ. ಹೇಗೆ ಕಷ್ಟಪಟ್ಟು ಓದಬೇಕು.. ಹಾಗೆ ಓದಿ ಪ್ರಸಿದ್ಧರಾದವರು ಏನನ್ನು ಕಳೆದುಕೊಂಡು ಏನನ್ನು ಸಾಧಿಸಿದರೆಂದು ಉದಾಹರಣೆ ನೀಡುತ್ತಿದ್ದಾರೆ.
ಶೃತಿಯನ್ನು ನೋಡಿದೆನು. ಶ್ರದ್ಧೆಯಿಂದ ಕೇಳುತ್ತಿದ್ದಾಳೆ. ಪೋಷಕರು, ಮಕ್ಕಳು ನಿಶ್ಯಬ್ಧವಾಗಿದ್ದಾರೆ. ಆಸಕ್ತಿಯಿಂದ ಕೇಳುತ್ತಿದ್ದಾರೆ. ಪ್ರೊಫೆಸರ್ ಮಾತುಗಳು ಹಣ, ಅವಕಾಶಗಳ ಸುತ್ತಲೂ ಗಿರಕಿ ಹೊಡೆಯುತ್ತಿವೆ.
ನನಗೆ ಕಿರಿಕಿರಿಯೆನಿಸಿ ಪಕ್ಕದಲ್ಲಿದ್ದ ವ್ಯಕ್ತಿಯತ್ತ ತಿರುಗಿ ‘ಯಾವ ಓದು ಓದಿದರೆ ಎಷ್ಟು ಸಂಪಾದಿಸಬಹುದೆಂದು ಹೇಳುತ್ತಿರುವರೇ ವಿನಃ ಪ್ರಜೆಗಳಿಗೆ ಹೇಗೆ ಒಳ್ಳೆಯದನ್ನು ಮಾಡಬಹುದೋ ಒಂದು ಮಾತು ಹೇಳಲಿಲ್ಲʼ ಎಂದೆನು.
ಆತ ನನ್ನತ್ತ ಅಸಡ್ಡೆಯಿಂದ ನೋಡಿದನು.
ಕೊನೆಯದಾಗಿ ಎಷ್ಟು ಮಕ್ಕಳು ವೈದ್ಯರಾಗಬೇಕೆಂದುಕೊಳ್ಳುತ್ತಿರುವಿರೋ ಕೈಯೆತ್ತಿ ಎಂದರು. ಬಹಳ ಮಕ್ಕಳು ಕೈ ಎತ್ತಿದರು. ಶೃತಿ ನನ್ನತ್ತ ನೋಡಿ ತಲೆ ತಗ್ಗಿಸಿದಳು.
ನಂತರ ಮಕ್ಕಳ ಪರೀಕ್ಷಾ ತಯಾರಿಗೆ ಪೋಷಕರು ತೆಗೆದುಕೊಳ್ಳಬೇಕಾದ ಕಾಳಜಿಯ ಕುರಿತು ಮಾತನಾಡಿದರು.
ಸಭೆ ಮುಗಿದು ವಾಪಸು ಬರುವಾಗ ಪ್ರಾಂಶುಪಾಲರು ಕರೆದರೆಂದು ಒಳಗೆ ಹೋದೆನು. ಶೃತಿ ಹೊರಗೆ ನಿಂತಳು. ತಪ್ಪೆಲ್ಲ ನನ್ನದೆಂಬಂತೆ ಹಿತಬೋಧನೆ ಮಾಡಿದ ಪ್ರಾಂಶುಪಾಲರು, ಕ್ವಾರ್ಟರ್ಲಿ ಯಲ್ಲಿ ಸೆಕೆಂಡ್ ಕ್ಲಾಸ್ ಬರದಿದ್ದರೆ ಮುಂಗಡವಾಗಿ ಪ್ರೈವೇಟ್ ಶುಲ್ಕ ಕಟ್ಟಬೇಕೆಂದು ಎಚ್ಚರಿಸಿದರು. ನನಗೆ ಅವಮಾನವೆನಿಸಿತು.
ಹೊರಗೆ ಬಂದೆನು. ಮಕ್ಕಳು, ಪೋಷಕರು ಆತ್ಮಸ್ಥೈರ್ಯ ತುಂಬಿಕೊಂಡು ಹೋಗುತ್ತಿದ್ದಾರೆ. ಶೃತಿ ಭಯದಿಂದ ನನ್ನತ್ತ ನೋಡಿದಳು.
ಮನೆಗೆ ಬರುವ ವೇಳೆಗೆ ಗಂಟೆ ಮೂರು ದಾಟಿತ್ತು. ನನಗೆ ಸಣ್ಣದಾಗಿ ತಲೆ ನೋಯತೊಡಗಿತು. ಸುಧಾ ನಮ್ಮ ಮುಖ ನೋಡಲೇ ಇಲ್ಲ. ಯಾರೂ ಯಾರನ್ನೂ ಮಾತನಾಡಿಕೊಳ್ಳಲಿಲ್ಲ. ನನ್ನ ಒದ್ದಾಟ ನೋಡಿ ಶೃತಿ ಟೀ ಮಾಡಿಕೊಟ್ಟಳು.
ನಾನು ಹೊರಗೆ ಹೋಗಿ ಸಣ್ಣಪುಟ್ಟ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದೆನು. ವಾತಾವರಣದಲ್ಲಿ ಏನೋ ಬದಲಾವಣೆ, ಟೀ ಗ್ಲಾಸುಗಳು, ನೀರಿನ ಬಾಟಲ್ ನೋಡಿ ನನ್ನ ಭಾವಮೈದುನ ಬಂದಿರಬಹುದೆಂದು ಊಹಿಸಿದೆನು.
ಸುಧಾ ಗೆಲುವಾಗಿದ್ದಾಳೆ. ನೋಡಿದರೆ ನಗುತ್ತಾ ಮಾತನಾಡುವ ಉತ್ಸಾಹದಲ್ಲಿರುವಂತಿದೆ. ಶೃತಿ ಮಾತ್ರ ಭಯದಿಂದ ಹೋಂವರ್ಕ್ ಮಾಡಿಕೊಳ್ಳುತ್ತಿದ್ದಾಳೆ. ಕಾರಣ ತಿಳಿಯಲಿಲ್ಲ.
ನನಗೆ ತಲೆ ನೋವು ಇನ್ನೂ ಕಡಿಮೆಯಾಗಿರಲಿಲ್ಲ. ಜಂಡೂ ಬಾಂ ಹುಡುಕತೊಡಗಿದಾಗ ಶೃತಿ ಹುಡುಕಿಕೊಟ್ಟಳು. ಆ ರಾತ್ರಿ ಸುಧಾ ಏನಾದರೂ ಮಾತು ತೆಗೆಯುತ್ತಾಳೆಂದುಕೊಂಡೆ. ಹಾಗೇನೂ ಆಗಲಿಲ್ಲ. ಅವರಷ್ಟಕ್ಕೆ ಅವರು ಊಟ ಮುಗಿಸಿ ಮಲಗಿದೆವು. ಶೃತಿ ನನ್ನ ಪಕ್ಕ ಮಲಗಿ ಕಣ್ಣು ಮುಚ್ಚಿದಳು, ಆದರೆ ನಿದ್ದೆ ಮಾಡಲಿಲ್ಲ. ತಲೆನೋವಿನಿಂದಾಗಿ ನನಗೆ ನಿದ್ದೆ ಬರುತ್ತಿಲ್ಲ. ಸುಧಾ ಮಾತ್ರ ಗೊರಕೆ ಹೊಡೆಯುತ್ತಿದ್ದಾಳೆ.
ಸುಧಾ ನಿದ್ದೆ ಮಾಡಿದ ಮೇಲೆ ಮೆಲ್ಲನೆ ‘ಅಪ್ಪಾʼ ಎಂದಳು ಶೃತಿ.
ಬಹಳ ವೇದನೆಯಿಂದ ಕರೆದಂತಾಗಿ ಎದೆ ಕಲುಕಿದಂತಾಯ್ತು. ಏನೆಂಬಂತೆ ನೋಡಿದೆನು.
‘ಚೆನ್ನಾಗಿ ಓದುತ್ತಿದ್ದೀನಪ್ಪಾ.. ಯಾಕೋ ನೆನಪಿರುವುದಿಲ್ಲʼ ಎಂದಳು, ದುಃಖವನ್ನು ಅದುಮಿಟ್ಟುಕೊಂಡಂತಿತ್ತು ಅವಳ ಧ್ವನಿ.
ನಾನು ಮೌನವಾಗಿ ಹತ್ತಿರಕ್ಕೆ ಕರೆದು ತಲೆ ನೇವರಿಸಿದೆನು. ಮಾತನಾಡಲು ನನ್ನ ಬಳಿ ಮಾತುಗಳಿರಲಿಲ್ಲ. ಅವಳು ಸ್ವಲ್ಪ ಹೊತ್ತು ಮೌನವಾಗಿ ನನ್ನ ಎದೆ ಮೇಲೆ ಹಾಗೇ ಮಲಗಿ, ನಂತರ ಸಮಾಧಾನದಿಂದ ‘ಅಪ್ಪಾ.. ನಾನು ಹಾಸ್ಟೆಲಿಗೆ ಹೋಗುತ್ತೇನೆ. ನಾಳೆ ಮಾವ ಕರೆದುಕೊಂಡು ಹೋಗುತ್ತಾರಂತೆʼ ಎಂದಳು.
ನನ್ನ ಎದೆ ಧಸಕ್ಕೆಂದಿತು, ಕ್ಷಣಕ್ಕೆ ಚಡಪಡಿಕೆಯಿಂದ ಕಣ್ಣು ತುಂಬಿ ಬಂತು. ಅವಳನ್ನು ಬಿಗಿದಪ್ಪಿದೆ, ಜೀವನದಲ್ಲಿ ಮತ್ತೊಮ್ಮೆ ಆ ಅವಕಾಶ ಬರುವುದಿಲ್ಲವೆಂಬಂತೆ ಅವಳ ಕೈಗಳು ನನ್ನನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದವು. ಅಕ್ಕರೆಯಿಂದ ಅವಳು ನನ್ನ ಕೆನ್ನೆ ನೇವರಿಸುತ್ತ ‘ನನ್ನಿಂದ ನಿನಗೆ ಅವಮಾನ, ಇಕ್ಕಟ್ಟು ಅಲ್ಲವಾ ಅಪ್ಪಾʼ ಎಂದಳು.
ಇಲ್ಲಮ್ಮಾ, ಏಕೆ ಹಾಗೆ… ಎಂದು ಕೇಳುವಷ್ಟರಲ್ಲಿ ‘ಅಮ್ಮ ಇನ್ನು ಮೇಲೆ ಶಾಲೆಗೂ ಬರುವುದಿಲ್ಲ, ಮನೆಯಲ್ಲಿ ಕೂಡ ಇರುವುದಿಲ್ಲ ಎಂದಳು. ನಮ್ಮಿಬ್ಬರನ್ನೂ ಮಾತನಾಡಿಸುವುದಿಲ್ಲವಂತೆʼ ನೋವಿನಿಂದ ಹೇಳಿದಳು.
ಅಮ್ಮನ ಮಾತು ಗಂಭೀರವಾಗಿ ಯೋಚಿಸಿ ನಿರ್ಧರಿಸಿದಂತಿತ್ತು ಶೃತಿಯ ಧ್ವನಿ. ಒಂದೊಂದು ಮಾತು ನನ್ನ ಹೃದಯ ಚುಚ್ಚಿದಂತಾಯಿತು. ಮೈ ಜುಮ್ಮೆಂದಿತು. ಅವಳನ್ನು ಎರಡು ಕೈಗಳಿಂದ ಬಿಗಿದಪ್ಪಿ ‘ನೀನೆಲ್ಲೂ ಹೋಗುವ ಅಗತ್ಯವಿಲ್ಲ ಪುಟ್ಟೀ… ಇಲ್ಲೇ ಇರುತ್ತೀಯʼ ಎಂದೆನು ಆದರದಿಂದ.
ಯಾವಾಗ ಎದ್ದಳೋ ಸುಧಾ. ನನ್ನ ಮಾತಿಗೆ ‘ನಿಮಗೆ ವಿದ್ಯೆಯ ಬೆಲೆ ಗೊತ್ತಿಲ್ಲ. ನನಗೆ ಮಾತ್ರ ಅವಳ ಮೇಲೆ ಪ್ರೀತಿಯಿಲ್ಲವಾ! ನಮಗೆ ಮಕ್ಕಳ ಭವಿಷ್ಯತ್ತು ಮುಖ್ಯ. ವಿದ್ಯೆ ಇಲ್ಲದೆ ಅವರಿಗೆ ಭವಿಷ್ಯತ್ತೆಲ್ಲಿಯದು. ಹುಚ್ಚು ಹುಚ್ಚಾಗಿ ಮಾತನಾಡಿ ಅವಳ ಮನಸ್ಸು ಕೆಡಿಸಬೇಡಿ. ಅವಳನ್ನು ಒಪ್ಪಿಸಲು ಪ್ರಾಣ ಹೋಗಿ ಪ್ರಾಣ ಬಂದಂತಾಯಿತುʼ ಎಂದಳು ಕೋಪದಿಂದ.
ತಕ್ಷಣ ಬೆಚ್ಚಿಬಿದ್ದರೂ, ಶೃತಿ ತನ್ನ ನಿರ್ಧಾರಕ್ಕೆ ಬದ್ದಳಾದಂತಿದೆ.
ನಾನು ಸುಧಾಳತ್ತ ನೋಡಿದೆ. ಕೋಪದಿಂದ ಎದ್ದು ಕೂತಳು. ನಾನೂ ಎದ್ದು ಕುಳಿತೆ.
‘ನಾಳೆ ನಮ್ಮ ಮಗಳು ದೊಡ್ಡ ದೊಡ್ಡ ಉದ್ಯೋಗ ಮಾಡದಿರಬಹುದು. ಒಬ್ಬ ಒಳ್ಳೆಯ ಮನುಷ್ಯಳಾಗಿ ಬದುಕುತ್ತಾಳೆ. ನೀನಂದಂತೆ ಸ್ಕೂಲ್ ಪ್ರೋಗ್ರೆಸ್ನಲ್ಲಿ ಸಬ್ಜೆಕ್ಟ್ ಗಳ ಜೊತೆ ಸ್ಪಂದನೆಗೆ, ಮೌಲ್ಯಗಳಿಗೆ ಕೂಡ ಅಂಕಗಳಿದ್ದಿದ್ದರೆ ಶೃತಿಗೆ ಮೊದಲ ರ್ಯಾಂಕ್ ಬರುತ್ತಿತ್ತುʼ ಎಂದೆನು.
ಅವಳನ್ನು ಹಿಡಿದಿದ್ದ ನನ್ನ ಕೈಗಳು ಮತ್ತಷ್ಟು ಬಿಗಿದುಕೊಂಡವು.
ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ.