ರಾಮನಾಥಪುರದ ದೇಗುಲಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಮಾಡಿ ನವೀಕರಿಸಿರುವುದರಿಂದ ಈ ನಿರ್ಮಿತಿಗಳು ಯಾವ ಯಾವ ಕಾಲದ್ದೆಂದು ನಿರ್ಣಯಿಸುವುದು ಕಷ್ಟ. ರಾಮೇಶ್ವರ ದೇವಾಲಯವೊಂದು ಹೊಯ್ಸಳಕಾಲದ್ದಾಗಿದ್ದು ಇದನ್ನೂ ಉಳಿದ ದೇಗುಲಗಳನ್ನೂ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಎಲ್ಲ ದೇಗುಲಗಳಿಗೂ ಪೌರಾಣಿಕ ಹಿನ್ನೆಲೆ ತಳುಕುಹಾಕಿಕೊಂಡಿದೆ. ಮಹಾಭಕ್ತನಾದ ರಾವಣನನ್ನು ಕೊಂದ ದೆಸೆಯಿಂದ ಒದಗಿದ ಬ್ರಹ್ಮಹತ್ಯಾದೋಷವನ್ನು ಪರಿಹರಿಸಿಕೊಳ್ಳಲು ಶ್ರೀರಾಮನು ಇಲ್ಲಿ ಸ್ಥಾಪಿಸಿದ ಶಿವಲಿಂಗವೇ ರಾಮೇಶ್ವರನೆಂದು ಹೆಸರಾಯಿತಂತೆ. ಪಟ್ಟಾಭಿರಾಮ ದೇವಾಲಯದಲ್ಲಿ ಸೀತಾದೇವಿಯು ಶ್ರೀರಾಮನ ತೊಡೆಯ ಮೇಲೆ ಕುಳಿತಿರುವಂತೆ ಶಿಲ್ಪವನ್ನು ರೂಪಿಸಿರುವುದು ಒಂದು ವಿಶೇಷ. ಪುರಾಣಕಾಲದಲ್ಲಿ ಸೌಭರಿಮಹರ್ಷಿಗಳು ಈ ವಿಗ್ರಹವನ್ನು ಪ್ರತಿಷ್ಠಾಪಿಸಿರುವರೆಂದು ಮತ್ತೊಂದು ಐತಿಹ್ಯ ಹೇಳುತ್ತದೆ.
ಟಿ.ಎಸ್ ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹದಿನೈದನೆಯ ಕಂತು
ನಮ್ಮ ನಾಡಿನ ದೇವಾಲಯಗಳಲ್ಲಿ ಹಲವು ಇತಿಹಾಸದ ವೈಭವಕ್ಕೆ ಸಾಕ್ಷಿಯಾಗಿದ್ದರೆ, ಇನ್ನು ಹಲವು ಪಾರಂಪರಿಕ ಶಿಲ್ಪಕಲಾಪ್ರೌಢಿಮೆಯನ್ನು ಮೆರೆಸುವಂಥವು. ಕೆಲವು ದೇಗುಲಗಳು ಜನಸಾಮಾನ್ಯರ ಭಕ್ತಿಶ್ರದ್ಧೆಗಳ ಕಾರಣದಿಂದಾಗಿಯೇ ಉಳಿದುಬಂದಿದ್ದರೆ, ಇನ್ನು ಕೆಲವು ದೇವಾಲಯಗಳು ಪೌರಾಣಿಕ ಐತಿಹ್ಯಗಳ ಬಲದಿಂದ ಇಂದಿಗೂ ಮಹತ್ವವನ್ನು ಪಡೆದುಕೊಂಡಿವೆ. ಹೀಗೆ ಪೌರಾಣಿಕ ಮಹತ್ವವುಳ್ಳ ದೇಗುಲಗಳನ್ನು ಕುರಿತು ಹೇಳುವಾಗ ಹಾಸನ ಜಿಲ್ಲೆಯ ರಾಮನಾಥಪುರದ ಪಟ್ಟಾಭಿರಾಮ ದೇವಾಲಯ ಮತ್ತಿತರ ದೇವಾಲಯಗಳನ್ನು ಹೆಸರಿಸಬಹುದು.
ರಾಮನಾಥಪುರ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನಲ್ಲಿದೆ. ಅರಕಲಗೂಡಿನಿಂದ ಹತ್ತು ಕಿಮೀ ದೂರದಲ್ಲಿರುವ ರಾಮನಾಥಪುರವು ಮುಂದೆ ಕೊಣನೂರು ಮಾರ್ಗವಾಗಿ ಕೊಡಗು ಜಿಲ್ಲೆಯನ್ನೂ ಬೆಟ್ಟದಪುರದ ಮೂಲಕ ಮೈಸೂರು ಜಿಲ್ಲೆಯನ್ನೂ ಸಂಪರ್ಕಿಸುತ್ತದೆ. ಕಾವೇರಿ ನದೀತೀರದಲ್ಲಿರುವ ರಾಮನಾಥಪುರ ನಾಡಿನ ರಮಣೀಯ ಸ್ಥಳಗಳಲ್ಲೊಂದು. ಪಟ್ಟಾಭಿರಾಮ ದೇವಾಲಯವೇ ಅಲ್ಲದೆ, ಅಗಸ್ತ್ಯೇಶ್ವರ, ರಾಮೇಶ್ವರ, ಸುಬ್ರಹ್ಮಣ್ಯೇಶ್ವರ, ನರಸಿಂಹ ಮತ್ತಿತರ ಅನೇಕ ದೇವಾಲಯಗಳ ನೆಲೆಯಾಗಿರುವ ಈ ಕ್ಷೇತ್ರದ ಮಹಿಮೆ ಇಲ್ಲಿ ಹರಿಯುವ ಕಾವೇರಿನದಿಯಿಂದಾಗಿ ಮತ್ತಷ್ಟು ಪಾವಿತ್ರ್ಯವನ್ನು ಪಡೆದುಕೊಳ್ಳುತ್ತದೆ. ಶಂಕರಾಚಾರ್ಯರು, ರಾಮಾನುಜರು, ವ್ಯಾಸರಾಯರೇ ಮೊದಲಾದ ಮಹನೀಯರು ಇಲ್ಲಿಗೆ ಭೇಟಿನೀಡಿ ಈ ಕ್ಷೇತ್ರವನ್ನು ಪಾವನಗೊಳಿಸಿದ್ದಾರೆ.
ರಾಮನಾಥಪುರದ ದೇಗುಲಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಮಾಡಿ ನವೀಕರಿಸಿರುವುದರಿಂದ ಈ ನಿರ್ಮಿತಿಗಳು ಯಾವ ಯಾವ ಕಾಲದ್ದೆಂದು ನಿರ್ಣಯಿಸುವುದು ಕಷ್ಟ. ರಾಮೇಶ್ವರ ದೇವಾಲಯವೊಂದು ಹೊಯ್ಸಳಕಾಲದ್ದಾಗಿದ್ದು ಇದನ್ನೂ ಉಳಿದ ದೇಗುಲಗಳನ್ನೂ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ.
ಎಲ್ಲ ದೇಗುಲಗಳಿಗೂ ಪೌರಾಣಿಕ ಹಿನ್ನೆಲೆ ತಳುಕುಹಾಕಿಕೊಂಡಿದೆ. ಮಹಾಭಕ್ತನಾದ ರಾವಣನನ್ನು ಕೊಂದ ದೆಸೆಯಿಂದ ಒದಗಿದ ಬ್ರಹ್ಮಹತ್ಯಾದೋಷವನ್ನು ಪರಿಹರಿಸಿಕೊಳ್ಳಲು ಶ್ರೀರಾಮನು ಇಲ್ಲಿ ಸ್ಥಾಪಿಸಿದ ಶಿವಲಿಂಗವೇ ರಾಮೇಶ್ವರನೆಂದು ಹೆಸರಾಯಿತಂತೆ. ಪಟ್ಟಾಭಿರಾಮ ದೇವಾಲಯದಲ್ಲಿ ಸೀತಾದೇವಿಯು ಶ್ರೀರಾಮನ ತೊಡೆಯ ಮೇಲೆ ಕುಳಿತಿರುವಂತೆ ಶಿಲ್ಪವನ್ನು ರೂಪಿಸಿರುವುದು ಒಂದು ವಿಶೇಷ. ಪುರಾಣಕಾಲದಲ್ಲಿ ಸೌಭರಿಮಹರ್ಷಿಗಳು ಈ ವಿಗ್ರಹವನ್ನು ಪ್ರತಿಷ್ಠಾಪಿಸಿರುವರೆಂದು ಮತ್ತೊಂದು ಐತಿಹ್ಯ ಹೇಳುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಿರ್ಮಿಸಲಾಗಿರುವ ಐದು ಸ್ತರಗಳ ರಾಜಗೋಪುರವು ಗಮನಸೆಳೆಯುವಂತಿದೆ. ಮುಖ್ಯದ್ವಾರದ ಒಳಬದಿಯಲ್ಲಿ ಇಕ್ಕೆಲಗಳಲ್ಲಿ ಒಳಗುಡಿಗೆ ಅಭಿಮುಖವಾಗಿ ನಿಂತ ಗರುಡ ಹಾಗೂ ಆಂಜನೇಯರ ಆಧುನಿಕಶಿಲ್ಪಗಳು ಆಕರ್ಷಕವಾಗಿವೆ. ನಿತ್ಯಪೂಜಾದಿಗಳೂ ವೈಶಾಖಮಾಸದ ವಾರ್ಷಿಕ ರಥೋತ್ಸವಾದಿಗಳೂ ಸಾಂಗವಾಗಿ ಜರುಗುತ್ತಿವೆ.
ರಾಮನಾಥಪುರದ ಕ್ಷೇತ್ರಮಹಿಮೆಗೆ ಕಾರಣವಾಗಿರುವ ಇನ್ನೊಂದು ದೇಗುಲ ಸುಬ್ರಹ್ಮಣ್ಯೇಶ್ವರ ದೇವಾಲಯ. ಈ ದೇವಾಲಯದ ಸೇವಾಕಾರ್ಯಗಳಿಗೆ ಒದಗುವಂತೆ ಕ್ರಿ.ಶ. 1660ರಲ್ಲಿ ನರಸಿಂಹ ನಾಯಕನೆಂಬ ಜನಪ್ರಮುಖರು ಗ್ರಾಮವೊಂದನ್ನು ಕಾಣಿಕೆಯಾಗಿ ಅರ್ಪಿಸಿದ ತಾಮ್ರಶಾಸನವಿದೆ. ಏಳುಹೆಡೆಗಳ ನಾಗವಿಗ್ರಹವಿರುವ ಈ ಗುಡಿಯ ಪೂಜಾದಿ ಕೈಂಕರ್ಯಗಳನ್ನೂ ವಾರ್ಷಿಕ ರಥೋತ್ಸವಾದಿ ಸೇವೆಗಳನ್ನೂ ಇದೀಗ ಸುಬ್ರಹ್ಮಣ್ಯಕ್ಷೇತ್ರದ ಮಠವು ನಿರ್ವಹಿಸುತ್ತಿದೆ.
ಕ್ರಿ.ಶ. 1250-1275ರ ಅವಧಿಯಲ್ಲಿ ಹೊಯ್ಸಳ ಸೋಮೇಶ್ವರ, ನರಸಿಂಹ ಮತ್ತಿತರರ ಆಳ್ವಿಕೆಯ ಕಾಲದಲ್ಲಿ ಮಾಂಡಳಿಕರೂ, ರಾಜಪ್ರಮುಖರೂ ರಾಮನಾಥಪುರದ ರಾಮೇಶ್ವರ ದೇವಾಲಯಕ್ಕೆ ಹಲವು ದತ್ತಿದಾನಗಳನ್ನು ಒದಗಿಸಿದ ಉಲ್ಲೇಖಗಳನ್ನು ಶಾಸನಗಳಲ್ಲಿ ಕಾಣಬಹುದು. ಈ ಪರಂಪರೆಯನ್ನು ಮುಂದುವರೆಸಿದಂತೆ ವಿಜಯನಗರದ ಅರಸರು, ಚಂಗಾಳ್ವರು, ಮೈಸೂರು ಅರಸರು ಮೊದಲಾದವರ ಆಡಳಿತಕಾಲದಲ್ಲಿ ರಾಮನಾಥದೇವರ ಪೂಜಾಕೈಂಕರ್ಯಕ್ಕೆ ಅರ್ಪಿಸಿದ ದತ್ತಿಗಳನ್ನು ಹಲವು ಶಾಸನಗಳು ವಿವರಿಸುತ್ತವೆ. ರಾಮೇಶ್ವರ ದೇವಾಲಯದ ಗರ್ಭಗುಡಿಯ ಶಿಖರಭಾಗವು ಹೊಯ್ಸಳಕಾಲದ ತನ್ನ ಮೂಲರೂಪವನ್ನು ಉಳಿಸಿಕೊಂಡಿದೆ. ಶುಕನಾಸಿಯ ಮೇಲುಭಾಗದಲ್ಲಿ ಹೊಯ್ಸಳಲಾಂಛನವಿದ್ದು ಶಿಖರದ ಮುಂದಿನ ಮಹಾನಾಸದಲ್ಲಿ ಕೀರ್ತಿಮುಖದೊಳಗೆ ನಟರಾಜನ ಶಿಲ್ಪವನ್ನು ಕಾಣಬಹುದು.
ವಿಜಯನಗರದ ಕಾಲದಲ್ಲಿ ದೇವಾಲಯದ ಮಂಟಪ, ಗೋಪುರ, ಆವರಣ, ಪ್ರಾಕಾರಮಂಟಪಗಳನ್ನು ಕಟ್ಟಲಾಗಿದ್ದು ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿವೆ. ಪ್ರಾಕಾರದ ಸುತ್ತುಮಂಟಪದ ಅನೇಕ ಕೋಷ್ಠಗಳಲ್ಲಿ ಶಿವಲಿಂಗಗಳನ್ನೂ ಅವಕ್ಕೆ ಅಭಿಮುಖವಾಗಿ ನಂದಿಗಳನ್ನೂ ಸ್ಥಾಪಿಸಲಾಗಿದೆ. ಪ್ರಾಕಾರದ ಸೂರಿನ ಮೇಲಂಚಿಗೆ ಗಾರೆಯಿಂದ ಮಾಡಿದ ಅಲಂಕರಣ ಮನಸೆಳೆಯುತ್ತದೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ನಡುಮಂಟಪದಲ್ಲಿ ಶಿವಲಿಂಗಕ್ಕೆ ಅಭಿಮುಖವಾಗಿ ಸಾಲಂಕೃತ ನಂದಿಯ ವಿಗ್ರಹವಿದೆ. ಸೂಕ್ತ ರಕ್ಷಣೆಯಿಲ್ಲದೆ ಗಿಡಗಂಟಿ ಬೆಳೆದು ಶಿಥಿಲವಾಗಿರುವ ಈ ದೇವಾಲಯದ ರಕ್ಷಣೆಯತ್ತ ಸರ್ಕಾರವಾಗಲಿ ಸ್ಥಳೀಯ ಸಂಸ್ಥೆಗಳಾಗಲಿ ತುರ್ತಾಗಿ ಗಮನಹರಿಸುವುದು ಅವಶ್ಯವಾಗಿದೆ.
ರಾಮೇಶ್ವರ ಗುಡಿಯ ಹಿಂದೆಯೇ ಕಾವೇರಿನದಿಯ ಹರಿವು. ಸೋಪಾನಘಟ್ಟವಿಳಿದರೆ ನಿಮ್ಮನ್ನು ಸ್ವಾಗತಿಸುವ ಮತ್ಸ್ಯಸಂಕುಲ ರಾಮನಾಥಪುರದ ಇನ್ನೊಂದು ಪ್ರಮುಖ ಆಕರ್ಷಣೆ. ಸಂರಕ್ಷಿತ ಪರಿಸರದಲ್ಲಿ ಅಪಾರಸಂಖ್ಯೆಯಿಂದಲೂ ದೊಡ್ಡಗಾತ್ರದಿಂದಲೂ ಅಚ್ಚರಿಮೂಡಿಸುವ ಮಹಶೀರ್ ಮೀನುಗಳು ತಮ್ಮ ಹೊರಳಾಟ, ಬಳುಕಾಟಗಳಿಂದ ಪ್ರವಾಸಿಗರಿಗೆ ಮುದವುಂಟುಮಾಡುತ್ತವೆ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.