ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು. ಪರ್ವತಗಳ ಹೃದಯಭಾಗದಲ್ಲಿ ಮನುಷ್ಯರ ಸುಳಿವೇ ಇರದ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಗೆನ್ಜಾಬುರೊನಂತೆ ವೇಷಧರಿಸಿದವನು ಎದುರಾದರೆ ನೀವು ಕೂಡ ಓಡಿಹೋಗುವಿರಿ.
ಹೇಮಾ ಎಸ್ ಅನುವಾದಿಸಿರುವ ಅಕಿರ ಕುರಸೋವಾನ ಆತ್ಮಕತೆಯ ಮತ್ತೊಂದು ಕಂತು
ಸುಗತ ಸಂಶಿರೊ ಹಿಟ್ ಆಯಿತು. ಸ್ಟುಡಿಯೋದವರು ಅದರ ಮುಂದುವರೆದ ಭಾಗ ಸಿನೆಮಾ ತೆಗೆದುಕೊಡಲು ಕೇಳಿದರು. ಇದು ಕಮರ್ಷಿಯಲಿಸಂನ ಕೆಟ್ಟ ಗುಣಗಳಲ್ಲೊಂದು. ಹರಿಯುವ ತೊರೆಯಲ್ಲಿ ಯಾವಾಗಲೋ ಒಮ್ಮೆ ಎಲ್ಲೋ ಒಂದು ಕಡೆ ಹೆಚ್ಚು ಮೀನು ಸಿಕ್ಕಿತು ಎಂದರೆ ಪ್ರತಿ ಬಾರಿಯೂ ಹಾಗೆ ಆಗಬೇಕು ಅಂತಿಲ್ಲ. ಇದು ಜಪಾನ್ ಫಿಲಂ ಪ್ರೊಡಕ್ಷನ್ ಕಂಪನಿಗಳ ಮನರಂಜನಾ ವಿಭಾಗದವರಿಗೆ ಗೊತ್ತಿಲ್ಲ ಅಂತ ಕಾಣುತ್ತೆ.
ಇವರುಗಳು ಯಾವುದಾದರೂ ಒಂದು ಸಿನಿಮಾ ಹಿಟ್ ಆದರೆ ಸಾಕು ಅದನ್ನೇ ರಿಮೇಕ್ ಮಾಡುತ್ತಾರೆ. ಹೊಸ ಕನಸುಗಳನ್ನು ಕಾಣಲು ಪ್ರಯತ್ನ ಕೂಡ ಪಡೋದಿಲ್ಲ. ಹಳೆಯ ಸರಕನ್ನೇ ಮತ್ತೆ ಮತ್ತೆ ತಿರುವಿಹಾಕುತ್ತಿರುತ್ತಾರೆ. ಮೂಲಕ್ಕೆ ರಿಮೇಕ್ ಎಂದೂ ಸರಿಸಾಟಿಯಲ್ಲ ಅಂತ ಗೊತ್ತಿದ್ದರೂ ತಮ್ಮ ಮೂರ್ಖತನವನ್ನು ಬಿಡುವುದಿಲ್ಲ. ನನ್ನ ಪ್ರಕಾರ ಇದು ಶುದ್ಧ ಮೂರ್ಖತನ. ರಿಮೇಕ್ ಮಾಡುವ ನಿರ್ದೇಶಕ ಮೂಲಕೃತಿಯನ್ನು ಅನುಸರಿಸುತ್ತಾನೆ. ಇದೊಂದು ತರಹ ಉಳಿದದ್ದರಲ್ಲಿ ಏನೋ ಒಂದು ಅಡುಗೆ ಮಾಡುವ ಹಾಗಿರುತ್ತದೆ. ಈ ಅಡುಗೆಯನ್ನು ತಿನ್ನಬೇಕಾದ ಪ್ರೇಕ್ಷಕನ ಪಾಡು ಕೂಡ ಅಯ್ಯೋಪಾಪ ಎನಿಸುವಂತದ್ದು.
ಸುಗತ ಸಂಶಿರೋ ಭಾಗ I ರಿಮೇಕ್ ಅಲ್ಲ. ಹಾಗಾಗಿ ಪರಿಸ್ಥಿತಿ ಇನ್ನೂ ಕೆಟ್ಟದ್ದು. ಆದರೂ ಅದಕ್ಕೆ ಸರಿಹೊಂದಿಸಬೇಕಾದ ಅನಿವಾರ್ಯತೆ ಇತ್ತು. ಆ ಸಿನೆಮಾವನ್ನು ಮತ್ತೆ ಮುಂದುವರೆಸುವ ಇಚ್ಛೆಯನ್ನು ನನ್ನೊಳಗೆ ಬಲವಂತವಾಗಿ ಹುಟ್ಟಿಸಿಕೊಳ್ಳಬೇಕಿತ್ತು. ಕತೆಯಲ್ಲಿ ಹಿಗಾಕಿ ಗೆನೊಸ್ಕೆಯ ತಮ್ಮಂದಿರು ಸಂಶಿರೊನ ವಿರುದ್ಧ ಸೇಡು ತೀರಿಸಿಕೊಳ್ಳಲು ತುಡಿಯುತ್ತಿದ್ದ ಅಂಶ ನನ್ನಲ್ಲಿ ಆಸಕ್ತಿ ಹುಟ್ಟಿಸಿತ್ತು. ಗೆನೊಸ್ಕೆ ತನ್ನ ತಮ್ಮ ತೆಶ್ಶಿನ್ ನಲ್ಲಿ ತನ್ನ ಯೌವನದ ದಿನಗಳ ಪ್ರತಿರೂಪವನ್ನು ಕಾಣುತ್ತಾನೆ. ಅದು ಅವನಲ್ಲಿ ಹಳೆಯ ನೆನಪುಗಳನ್ನು ಕೆದಕಿ ನರಳುವಂತೆ ಮಾಡುತ್ತದೆ.
ಹಿಮಾಚ್ಛಾದಿತ ಪರ್ವತದ ಮೇಲೆ ಸಂಶಿರೊದ ಮುಂದುವರೆದ ಭಾಗದ ಕ್ಲೈಮ್ಯಾಕ್ಸ್ ನಲ್ಲಿ ತೆಶಿನ್ ಮತ್ತು ಸಂಶಿರೊನ ಮುಖಾಮುಖಿಯಾಗುತ್ತದೆ. ಇದರ ಚಿತ್ರೀಕರಣ ನಡೆದ ಸ್ಥಳದ ಹೆಸರು ಹೊಪ್ಪೊ. ಇಲ್ಲಿ ಬಿಸಿನೀರಿನ ಚಿಲುಮೆ ಮತ್ತು ಸ್ಕೀ ರೆಸಾರ್ಟ್ ಇತ್ತು. ಈ ಶೂಟಿಂಗ್ ನಡೆಯುವಾಗ ಎರಡು ತಮಾಷೆಯ ಸಂಗತಿಗಳು ನಡೆದವು. ಅಣ್ಣತಮ್ಮಂದಿರು ವಾಸವಿದ್ದ ಗುಡಿಸಲನ್ನು ಕಟ್ಟಲು ನಮ್ಮ ಕಲಾ ನಿರ್ದೇಶನ ತಂಡದವರಿಗೆ ಸಹಾಯ ಮಾಡುತ್ತಿದ್ದೆ. ಅಲ್ಲಿನ ಅಂಟು ಹಿಮ ನನ್ನ ಕೈಗವಸುಗಳಿಗೆ ಅಂಟಿಕೊಂಡು ಬಿಟ್ಟವು. ಬೆಂಕಿಯ ಮೇಲೆ ಕೈಕಾಯಿಸಿ ಅದನ್ನು ಕರಗಿಸಬೇಕಾಯಿತು. ಸಂಜೆಯಾಗುತ್ತಿದ್ದಂತೆ ಉಷ್ಣಾಂಶ ದಿಢೀರ್ ಅಂತ ಕಡಿಮೆಯಾಗಿ ಹೋಯಿತು. ಒದ್ದೆಯಾಗಿದ್ದ ಕೈಗಳು ಸೆಟೆದುಕೊಂಡು ಸಂವೇದನೆಯನ್ನೇ ಕಳೆದುಕೊಂಡುಬಿಟ್ಟವು. ಎಲ್ಲರೊಂದಿಗೆ ಬಿಸಿ ನೀರಿನ ಚಿಲುಮೆಗೆ ಹೋದೆ.
ಸ್ನಾನದ ಟಬ್ಬಿನೊಳಗೆ ನೇರವಾಗಿ ಧುಮುಕಿ ಮೈಕಾಯಿಸಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ನೀರು ತುಂಬಾ ಬಿಸಿಯಾಗಿದ್ದರಿಂದ ಅದಕ್ಕೆ ತಣ್ಣೀರು ಬೆರೆಸಲು ತಣ್ಣೀರಿನ್ನು ಬಕೆಟಿನಲ್ಲಿ ತರಲು ಹೋದೆ. ನೀರಿನ ಬಕೆಟ್ ತರುತ್ತಿರುವಾಗ ಸ್ನಾನದ ಮನೆಯ ಹಿಮದ ನೆಲದ ಮೇಲೆ ಜಾರಿಬಿದ್ದೆ. ಹಿಡಿದಿದ್ದ ಬಕೆಟ್ ಮೇಲೆ ಹಾರಿ ತಣ್ಣೀರೆಲ್ಲ ನನ್ನ ತಲೆ ಮೇಲೆ ಸುರಿಯಿತು. ಇಡೀ ನನ್ನ ಜೀವನದಲ್ಲೇ ಅಷ್ಟು ಚಳಿ ಎಂದೂ ಆಗಿರಲಿಲ್ಲ. ಯಮಾ ಸಾನರ ಸಣ್ಣ ಕತೆ ಬಿಸಿಗೆ ಹೋಲಿಸಿದಲ್ಲಿ ನನ್ನ ಕತೆ ಅದಕ್ಕೆ ತದ್ವಿರುದ್ಧವಾಗಿ ತಂಪು ಎಂದಾಗುತ್ತದೆ.
ಇವರುಗಳು ಯಾವುದಾದರೂ ಒಂದು ಸಿನಿಮಾ ಹಿಟ್ ಆದರೆ ಸಾಕು ಅದನ್ನೇ ರಿಮೇಕ್ ಮಾಡುತ್ತಾರೆ. ಹೊಸ ಕನಸುಗಳನ್ನು ಕಾಣಲು ಪ್ರಯತ್ನ ಕೂಡ ಪಡೋದಿಲ್ಲ. ಹಳೆಯ ಸರಕನ್ನೇ ಮತ್ತೆ ಮತ್ತೆ ತಿರುವಿಹಾಕುತ್ತಿರುತ್ತಾರೆ. ಮೂಲಕ್ಕೆ ರಿಮೇಕ್ ಎಂದೂ ಸರಿಸಾಟಿಯಲ್ಲ ಅಂತ ಗೊತ್ತಿದ್ದರೂ ತಮ್ಮ ಮೂರ್ಖತನವನ್ನು ಬಿಡುವುದಿಲ್ಲ. ನನ್ನ ಪ್ರಕಾರ ಇದು ಶುದ್ಧ ಮೂರ್ಖತನ. ರಿಮೇಕ್ ಮಾಡುವ ನಿರ್ದೇಶಕ ಮೂಲಕೃತಿಯನ್ನು ಅನುಸರಿಸುತ್ತಾನೆ. ಇದೊಂದು ತರಹ ಉಳಿದದ್ದರಲ್ಲಿ ಏನೋ ಒಂದು ಅಡುಗೆ ಮಾಡುವ ಹಾಗಿರುತ್ತದೆ.
ಅರೆಬೆತ್ತಲೆಯಾಗಿ ಒದ್ದಾಡುತ್ತಾ ಎಲೆಯಂತೆ ನಡುಗುತ್ತಾ ತಣ್ಣೀರನ್ನು ಸ್ನಾನದ ಟಬ್ಬಿನೊಳಗೆ ಸುರಿಯುತ್ತಿರುವಾಗ ಚಿತ್ರತಂಡದವರು ಒಳಗೆ ಬರಲಾರಂಭಿಸಿದರು. ನಡುಗುತ್ತಿದ್ದ ನನ್ನನ್ನು ನೋಡಿ ಅವರು ಟಬ್ಬಿನಿಂದ ಬಿಸಿನೀರನ್ನು ಬಕೆಟುಗಳಲ್ಲಿ ಎತ್ತಿ ತಣ್ಣೀರು ಬೆರೆಸಿ ನನ್ನ ತಲೆ ಮೇಲೆ ಸುರಿದರು. ಹೋದ ಜೀವ ಬಂದಂತಾಯಿತು. ಅಯ್ಯೋ ಇದು ನನಗೆ ಯಾಕೆ ಮೊದಲೇ ಹೊಳೆಯಲಿಲ್ಲ ಅನ್ನಿಸಿತು. ಮನುಷ್ಯಪ್ರಾಣಿ ಹೆದರಿಕೊಂಡಾಗ ಶುದ್ಧ ಮುಟ್ಠಾಳನಂತೆ ವರ್ತಿಸುತ್ತಾನೆ.
ಎರಡನೆಯ ತಮಾಷೆಯ ಸಂಗತಿ ಹೊಪ್ಪೊ ಚಿತ್ರೀಕರಣ ಸ್ಥಳದಲ್ಲಿ ನಡೆಯಿತು. ಹಿಗಾಕಿ ಗೆನೊಸ್ಕೆಯ ತಮ್ಮ ಗೆನ್ಜಾಬುರೊ ಸ್ವಲ್ಪಮಟ್ಟಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರ. ಆ ಪಾತ್ರದ ವೇಷ ಹಾಗೂ ಮೇಕಪ್ ಮಾಡಲು ಬಹಳ ಶ್ರಮವಹಿಸಿದ್ದೆ. *ನೊಹ ನಾಟಕಗಳಲ್ಲಿ ಬಳಸುವಂತೆ ಒರಟೊರಟಾಗಿ ಉದ್ದವಾಗಿ ಕೆದರಿದ ಕೂದಲಿನ ವಿಗ್ ಹಾಕಿ ಬಿಳಿಬಣ್ಣವನ್ನು ಅವನ ಮುಖಕ್ಕೆ ಬಳಿದು, ಕೆಂಪು ಲಿಪ್ಸ್ಟಿಕ್ ಹಚ್ಚಿದ್ದೆವು. ಅವನಿಗೆ ಬಿಳಿಯ ಬಟ್ಟೆ ಹಾಕಿಸಿ ನೊಹ ನಾಟಕಗಳಲ್ಲಿಯಂತೆ ಹುಚ್ಚುತನವನ್ನು ತೋರಿಸುವ ಸಲುವಾಗಿ ಅವನ ಕೈಯಲ್ಲಿ ಬಿದಿರಿನ ಹುಲ್ಲು ಕಡ್ಡಿ ಕೊಟ್ಟಿದ್ದೆವು.
ಗೆನ್ಜಾಬುರೊನ ಪಾತ್ರವನ್ನು ಕೊನೊ ಅಕಿಟಕೆ ನಿರ್ವಹಿಸುತ್ತಿದ್ದ.
ಒಂದು ದಿನ ಆತನ ದೃಶ್ಯಗಳು ಬೇಗ ಮುಗಿದಿದ್ದರಿಂದ ಆತನನ್ನು ಒಬ್ಬನೇ ಹೋಗಲು ಕಳುಹಿಸಿಕೊಟ್ಟೆವು. ಹಿಮಾಚ್ಛಾದಿತ ಕಣಿವೆಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಕಣಿವೆಯತ್ತ ಬರುತ್ತಿದ್ದ ಏರುಹಾದಿಯಲ್ಲಿ ಬರುತ್ತಿದ್ದ ಏಳು ಮಂದಿ ಸ್ಕೀಯರ್ಗಳು ಇದ್ದಕ್ಕಿದ್ದಂತೆ ನಿಂತುಬಿಟ್ಟವರು ಕ್ಷಣಮಾತ್ರದಲ್ಲಿ ಹಿಂದಕ್ಕೆ ತಿರುಗಿ ಬೆಟ್ಟದ ಕೆಳದಾರಿಯಲ್ಲಿ ವೇಗವಾಗಿ ಹೋಗಿಬಿಟ್ಟರು. ಇದನ್ನೆಲ್ಲ ನಾನು ಮೇಲೆ ನಿಂತು ನೋಡುತ್ತಿದ್ದೆ. ಅವರಿಗೆ ಆಶ್ಚರ್ಯವಾಗಿತ್ತು. ಪರ್ವತಗಳ ಹೃದಯಭಾಗದಲ್ಲಿ ಮನುಷ್ಯರ ಸುಳಿವೇ ಇರದ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಗೆನ್ಜಾಬುರೊನಂತೆ ವೇಷಧರಿಸಿದವನು ಎದುರಾದರೆ ನೀವು ಕೂಡ ಓಡಿಹೋಗುವಿರಿ.
ನನಗೆ ಯಾವುದೇ ದುರುದ್ದೇಶವಿಲ್ಲದಿದ್ದರೂ ಬಹಳಷ್ಟು ಜನರನ್ನು ಈ ರೀತಿ ಹೆದರಿಸಿದ್ದೆ. ಆಮೇಲೆ ಈ ಸ್ಕೀಯರ್ಗಳನ್ನು ಭೇಟಿಮಾಡಿ ನಾವು ಏನು ಮಾಡುತ್ತಿದ್ದೆವು ಎನ್ನುವುದನ್ನು ವಿವರಿಸಿ ಅವರ ಹತ್ತಿರ ಕ್ಷಮೆಕೇಳಿದೆ.
ಇದೇ ಸ್ಥಳದಲ್ಲಿ ಹಿಮದ ನಡುವಲ್ಲಿ ಸಂಶಿರೊ ಮತ್ತು ತೆಶಿನ್ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಎದುರುಬದುರಾಗಬೇಕಿತ್ತು. ಅವರಿಬ್ಬರೂ ಬರಿಗಾಲಲ್ಲಿ ಇರಬೇಕಿತ್ತು. ನಿಜಕ್ಕೂ ಇದು ಅವರ ತಾಳಿಕೊಳ್ಳುವಿಕೆಗೆ ಕಠಿಣ ಪರೀಕ್ಷೆಯಾಗಿತ್ತು. ಇಂದಿಗೂ ಫುಜಿತಾ ಸುಸುಮು (ಸಂಶಿರೊ ಪಾತ್ರ ವಹಿಸಿದ ನಟ) ನನ್ನ ಮುಖ ಕಂಡಕೂಡಲೇ 1944ರಲ್ಲಿ ಆ ಸ್ಥಳದಲ್ಲಿ ಅವನ ಪಾದಗಳ ಗತಿ ಏನಾಗಿತ್ತು ಅಂತ ಮಾತಾಡಲು ಶುರುಮಾಡುತ್ತಾನೆ. ಆವತ್ತು ಅವರ ಪಾದಗಳಿಗೆ ಎಷ್ಟು ಥಂಡಿ ಹತ್ತಿತ್ತು. ಅದನ್ನು ಹೇಗೆ ತಡೆದುಕೊಂಡರು ಎಂದು ಹೇಳುತ್ತಾನೆ. ಸುಗತ ಸಂಶಿರೊದ ಮೊದಲ ಭಾಗದಲ್ಲಿ ಫುಜಿತ ಫೆಬ್ರವರಿ ತಿಂಗಳಲ್ಲಿ ತಾವರೆ ಕೊಳಕ್ಕೆ ಧುಮುಕಿದ್ದ. ಅದು ಆತನ ತಾಳಿಕೊಳ್ಳುವಿಕೆಯ ಶಕ್ತಿಯನ್ನು ಹೆಚ್ಚಿಸಿತ್ತು. ನನಗವನಿಷ್ಟವಿಲ್ಲ ಎಂದು ಇವುಗಳನ್ನು ಆತನಿಂದ ಮಾಡಿಸಲಿಲ್ಲ. ಈ ಚಿತ್ರಗಳು ಆತನನ್ನು ಸ್ಟಾರ್ ಆಗಿಸಿದ್ದರಿಂದ ಬಹುಶಃ ಆತ ನನ್ನ ಬಗ್ಗೆ ಅಷ್ಟು ಕಟುವಾಗಲಾರ ಅನ್ನಿಸುತ್ತದೆ.
ಸುಗತ ಸಂಶಿರೊ ಭಾಗ II ಅಂತಹ ಒಳ್ಳೆಯ ಚಿತ್ರವಲ್ಲ. “ಚಿತ್ರದ ತುಂಬಾ ಕುರಸೊವನೇ ತುಂಬಿಕೊಂಡಂತಿದೆ” ಎಂದು ಒಂದು ವಿಮರ್ಶೆ ಹೇಳಿತ್ತು. ಆದರೆ ನನ್ನೆಲ್ಲ ಸಾಮರ್ಥ್ಯ ಹಾಕಿ ಅದನ್ನು ಮಾಡಲು ಸಾಧ್ಯವಾಗಲಿಲ್ಲವೆಂದು ನನಗನ್ನಿಸಿತು.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..