ಡಾ. ವೈ.ವಿ.  ಅವರು ತೆಲುಗಿನಲ್ಲಿ ಬರೆದ  ‘ನಾ ಜ್ಞಾಪಕಾಲು’ ಅನ್ನುವ ಆತ್ಮಕಥೆಯಲ್ಲಿ ತಮ್ಮ ಜೀವನದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದ್ದಾರೆ. ಆಂಗ್ಲ ಭಾಷೆಯಲ್ಲಿ ಬರೆದ ಪುಸ್ತಕವು, ದೇಶದ ಆರ್ಥಿಕತೆಯ ಬಗೆಗಿನ ಸಂಕೀರ್ಣ ವಿಷಯಗಳನ್ನು ಒಳಗೊಂಡಿದೆ. ಇವೆರಡನ್ನು ಒಟ್ಟುಗೂಡಿಸಿ, ಹಣಕಾಸು ವಿಷಯದಲ್ಲಿ ಜ್ಞಾನ ಇಲ್ಲದವರಿಗೂ ಅರ್ಥವಾಗುವಂತೆ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದು ಖಂಡಿತವಾಗಿಯೂ ಸುಲಭದ ವಿಷಯವಲ್ಲ. ಎಂ.ಎಸ್. ಶ್ರೀರಾಮ್ ಈ ಕೆಲಸವನ್ನುಯಶಸ್ವಿಯಾಗಿ ಮಾಡಿದ್ದಾರೆ.  ಅವರ ಈ ಪ್ರಯತ್ನವನ್ನು ವೈವಿ ರೆಡ್ಡಿಯವರು ಕನ್ನಡ ಅವತರಣಿಕೆಗಾಗಿಯೇ ಬರೆದ ವಿಶೇಷ ಮುನ್ನುಡಿಯಲ್ಲಿ ತುಂಬು ಹೃದಯದಿಂದ ಪ್ರಶಂಸಿಸಿದ್ದಾರೆ. ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ

ಕನ್ನಡದಲ್ಲಿ ಅನೇಕ ಅತ್ಯುತ್ತಮ ಆತ್ಮಕಥೆಗಳು ಬಂದಿವೆ. ಕುವೆಂಪು ಅವರ ನೆನಪಿನ ದೋಣಿಯಲ್ಲಿ, ಕುಂವೀಯವರ ಗಾಂಧಿಕ್ಲಾಸು, ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು, ಬಿಎ ಮೊಹಿದೀನ್ ಅವರ ನನ್ನೊಳಗಿನ ನಾನು, ಭೈರಪ್ಪನವರ ಭಿತ್ತಿ, ಬೊಳುವಾರು ಅವರ ಮೋನು ಸ್ಮೃತಿ ಇತ್ಯಾದಿಗಳು ನನಗಿಷ್ಟವಾದವುಗಳು. ಇವುಗಳೆಲ್ಲದರ ಬಗ್ಗೆ ಬರೆಯುವ ಮನಸ್ಸಿದೆ. ಆದರೆ ನಾನೀಗ ಬರೆಯಹೊರಟಿರುವುದು ಕನ್ನಡಿಗರೊಬ್ಬರ ಆತ್ಮಚರಿತ್ರೆಯ ಬಗ್ಗೆ ಅಲ್ಲ. ಭಾರತ ಕಂಡ ಅತ್ತುತ್ತಮ ಐಎಎಸ್ ಅಧಿಕಾರಿಗಳಲ್ಲೊಬ್ಬರಾದ, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಆದ ಡಾ. ವೈ.ವಿ. ರೆಡ್ಡಿ ಎಂದೇ ಜನಜನಿತರಾದ ಡಾಕ್ಟರ್ ಯಾಗಾ ವೇಣುಗೋಪಾಲ ರೆಡ್ಡಿ ಅವರ ಬಗ್ಗೆ.

ರೆಡ್ಡಿಯವರು ೨೩ರ ವಯಸ್ಸಿನಲ್ಲೇ ಐಎಎಸ್ ಅಧಿಕಾರಿಯಾಗಿ ಆಂಧ್ರಪ್ರದೇಶ ಕೇಡರಿನಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿ, ಕೇಂದ್ರ ಸೇವೆಯಲ್ಲೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ಅದರಲ್ಲೂ ಹಣಕಾಸಿಗೆ ಸಂಬಂಧಪಟ್ಟಂತೆ ಅತ್ಯಂತ ಮಹತ್ವದ ಜವಾಬ್ದಾರಿಗಳನ್ನು ದಕ್ಷತೆಯಿಂದ ನಿರ್ವಹಿಸಿ, ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ನಲ್ಲಿಯೂ ಕಾರ್ಯ ನಿರ್ವಹಿಸಿದವರು. ತದನಂತರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಉಪ ಗವರ್ನರ್ ಮತ್ತು ಗವರ್ನರ್ ಆಗಿ ನಿವೃತ್ತರಾದವರು.

ರೆಡ್ಡಿಯವರ ತಾಯ್ನುಡಿಯಾದ ತೆಲುಗಿನಲ್ಲಿ ಬರೆದ ‘ನಾ ಜ್ಞಾಪಕಾಲು’ ಅನ್ನುವ ಆತ್ಮಕಥೆ ಮತ್ತು ಅದರ ಬಹುಮುಖ್ಯ ಅಂಶಗಳನ್ನೊಳಗೊಂಡ ‘Advice and Dissent’ ಅನ್ನುವ ಆಂಗ್ಲ ಹೊತ್ತಿಗೆಗಳೆರಡನ್ನೂ ಮಧ್ಯೆ ಮಧ್ಯೆ ರೆಡ್ಡಿಯವರಿಂದಲೂ ಸಲಹೆ ಸೂಚನೆ ತೆಗೆದುಕೊಂಡು ಅದ್ಭುತವಾಗಿ ಬ್ಲೆಂಡ್ ಮಾಡಿ, ಕನ್ನಡದ ಖ್ಯಾತ ಬರಹಗಾರ ಮತ್ತು ಆರ್ಥಿಕ ತಜ್ಞ ಮತ್ತು ಭಾರತಿಯ ನಿರ್ವಹಣಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾದ ಎಂ.ಎಸ್ ಶ್ರೀರಾಮ್ ಅವರು  ಕನ್ನಡದಲ್ಲಿ ಪುಸ್ತಕ ತಂದಿದ್ದಾರೆ.

ಪುಸ್ತಕ ಬರೆದ ನುಡಿಯಿಂದ ಆಂಗ್ಲ, ಆಂಗ್ಲದಿಂದ ಬೇರೆ ಭಾಷೆಗೆ ಅನುವಾದ ಮಾಡುವುದಕ್ಕಿಂತಲೂ ಮೂಲ ನುಡಿಯಿಂದ ನೇರ ಅನುವಾದ ಯಾವಾಗಲೂ ಉತ್ತಮ. ಶ್ರೀರಾಂ ಅವರು ತೆಲುಗಿನಲ್ಲೂ ಪರಿಣಿತರಾಗಿರುವುದು ಕೂಡಾ ಇಲ್ಲಿ ಬಹು ಮುಖ್ಯವಾದ ಅನುಕೂಲತೆಯಾಗಿದೆ. ಇದರಿಂದ ಕನ್ನಡಕ್ಕೆ ರೆಡ್ಡಿಯವರ ಎರಡು ಪುಸ್ತಕಗಳ ಸಾರವನ್ನೊಳಗೊಂಡ ಒಂದೇ ಪುಸ್ತಕ ದಕ್ಕಿದೆ. ಇದು ಯಾಕೆ ಬಹುಮುಖ್ಯ ಅಂದರೆ ಅವರ ತೆಲುಗು ಪುಸ್ತಕ ಅವರ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದರೆ, ಆಂಗ್ಲ ಪುಸ್ತಕ ಆರ್ಥಿಕತೆಯ ಬಗೆಗಿನ ಸಂಕೀರ್ಣ ವಿಷಯಗಳನ್ನು ಕೂಡಾ ಒಳಗೊಂಡಿದೆ. ಇವೆರಡನ್ನು ಒಟ್ಟುಗೂಡಿಸಿ, ಹಣಕಾಸು ವಿಷಯದಲ್ಲಿ ಜ್ಞಾನ ಇಲ್ಲದವರಿಗೂ ಅರ್ಥವಾಗುವಂತೆ ತರುವುದು ಖಂಡಿತವಾಗಿಯೂ ಸುಲಭದ ವಿಷಯವಲ್ಲ. ಅವರ ಈ ಪ್ರಯತ್ನವನ್ನು ವೈವಿ ರೆಡ್ಡಿಯವರು ಕನ್ನಡ ಅವತರಣಿಕೆಗಾಗಿಯೇ ಬರೆದ ವಿಶೇಷ ಮುನ್ನುಡಿಯಲ್ಲಿ ತುಂಬು ಹೃದಯದಿಂದ ಪ್ರಶಂಸಿಸಿದ್ದಾರೆ.

ತಕ್ಕಮಟ್ಟಿಗೆ ಅನುಕೂಲಸ್ಥ ಕುಟುಂಬದಲ್ಲಿ ಹುಟ್ಟಿಬೆಳೆದ ರೆಡ್ಡಿಯವರು ಬಾಲ್ಯದಿಂದಲೂ ಅಗಾಧವಾದ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದರು. ಜೊತೆಗೆ ಸಾಮಾಜಿಕ ಅಸಮಾನತೆಯ ಬಗ್ಗೆ ಸೂಕ್ಷವಾದ ದೃಷ್ಟಿಕೋನ ಹೊಂದಿದ್ದರು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಾ ಅರ್ಥಶಾಸ್ತ್ರದಲ್ಲಿ ಆಳವಾದ ಜ್ಞಾನ ಸಂಪಾದಿಸಿದ್ದ ಅವರಿಗೆ ಆ ಕ್ಷೇತ್ರದಲ್ಲೇ ಮುನ್ನಡೆಯುವ ಆಸೆ ಇದ್ದಿತ್ತಾದರೂ ಅವರ ಅಂದೆಯ ಆಸೆಯಂತೆ ಆಡಳಿತ ಸೇವೆಗೆ ಬಂದವರು. ಅತ್ಯಂತ ಕಠಿಣವಾಗಿದ್ದ UPSC ಪರೀಕ್ಷೆಯನ್ನು ಮೊದಲ ಯತ್ನದಲ್ಲೇ ಹನ್ನೆರಡನೇ ರ್ಯಾಂಕಿನೊಂದಿಗೆ ಪಾಸು ಮಾಡಿದವರು. ಆ ನಂತರದಲ್ಲಿ ಅವರ ಆಂಧ್ರ ಕೇಡರಿನ ಐಎಎಸ್ ಜೀವನದಲ್ಲಿ ವಿಶಾಖಪಟ್ಟಣಂ ಜಿಲ್ಲೆಯ ಸಹಾಯಕ ಆಯುಕ್ತರಾಗಿ, ಚಿತ್ತೂರು ಜಿಲ್ಲಾ ಪಂಚಾಯತ್ ಕಾರ್ಯದರ್ಶಿಯಾಗಿ, ಓಂಗೋಲ್ (ಅಥವಾ ಪ್ರಕಾಶಂ), ನೆಲ್ಲೂರು ಜಿಲ್ಲೆಗಳ ಉಪ ಜಿಲ್ಲಾಧಿಕಾರಿಯಾಗಿ, ಗುಂಟೂರು ಜಿಲ್ಲೆಯ ಕಂದಾಯಾಧಿಕಾರಿಯಾಗಿ, ಯೋಜನಾ ಇಲಾಖಾಧಿಕಾರಿಯಾಗಿನ ಘಟನೆಗಳು ಮತ್ತು ಅವರ ಅನುಭವ ಸಾರಗಳು ಬಹಳ ಸ್ಪೂರ್ತಿದಾಯಕವಾಗಿವೆ. ಅವರ ಆರಂಭಿಕ ವೃತ್ತಿಜೀವನದಲ್ಲಿ ಎದುರಿಸಿದ್ದ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಅಹಂಕಾರದ ಗೆರೆ ದಾಟದಂತೆ ವಿವರಿಸಿದ್ದಾರೆ. ಜೊತೆಗೆ ಅವರು ಒಡನಾಡಿದ ಮಂತ್ರಿ, ಮುಖ್ಯಮಂತ್ರಿಗಳ ಬಗ್ಗೆ ನಿಷ್ಪಕ್ಷಪಾತವಾಗಿ ಅವರ ಅನಿಸಿಕೆಗಳನ್ನು ಬರೆದಿದ್ದಾರೆ.

ವೈ.ವಿ. ರೆಡ್ಡಿ ಅವರ ಅನುಭವ ಸಾರಗಳು ಬಹಳ ಸ್ಪೂರ್ತಿದಾಯಕವಾಗಿವೆ. ಅವರ ಆರಂಭಿಕ ವೃತ್ತಿಜೀವನದಲ್ಲಿ ಎದುರಿಸಿದ್ದ ಸವಾಲುಗಳು ಮತ್ತು ಸಾಧನೆಗಳ ಬಗ್ಗೆ ಅಹಂಕಾರದ ಗೆರೆ ದಾಟದಂತೆ ವಿವರಿಸಿದ್ದಾರೆ.

ಆದರೆ ಪುಸ್ತಕದ ಅತ್ಯಂತ ಪ್ರಮುಖ ಘಟ್ಟ ಆರಂಭವಾಗುವುದು ಅವರು ಕೇಂದ್ರ ಸೇವೆಗೆ ಸೇರಿದ ನಂತರ ನಡೆದ ಘಟನೆಗಳ ವಿವರಿಸುವಾಗ. ಭಾರತದ ವಿತ್ತ ವ್ಯವಸ್ಥೆಯ ಬಗ್ಗೆ, ಆರ್ಬಿಐ ಬಗ್ಗೆ, ಅಲ್ಲಿನ ಗುಣಾವಗುಣಗಳ ಬಗ್ಗೆ, ಐಎಂಎಫ್ ಮುಂತಾದ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳೆಡೆಗಿನ ನಡುವಿನ ಸಂಬಂಧದ ಬಗ್ಗೆ ರೆಡ್ಡಿಯವರು ಅವರ ಅನುಭವಗಳನ್ನು ಆಮೂಲಾಗ್ರವಾಗಿ ವಿವರಿಸಲು ಆರಂಭಿಸಿದಾಗ. ೧೯೯೧ ರ ವಿತ್ತೀಯ ಸಮಸ್ಯೆ ಬಗ್ಗೆ ವಿವರಿಸುವಾಗ ಭಾರತ ಎದುರಿಸಿದ ಕಠಿಣ ಸಮಸ್ಯೆಗಳ ಕುರಿತು (ದೇಶದ ಕಾಯ್ದಿಟ್ಟ ಚಿನ್ನವನ್ನು ಅಡವಿಡಬೇಕಾದ ಪರಿಸ್ಥಿತಿ ಕೂಡಾ ಬಂದಿದ್ದನ್ನು ನೆನಪಿಸಿಕೊಳ್ಳಿ), ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ಒಬ್ಬ ವಿತ್ತಮಂತ್ರಿಯ ಕರ್ತವ್ಯಗಳ ಕುರಿತು ಬಹಳ ಚಂದಕ್ಕೆ ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ೨೦೦೮ ರ ಜಾಗತಿಕ ಆರ್ಥಿಕ ಹಿಂಜರಿತದ ಸಮಯದಲ್ಲಿ ಇವರು ತೆಗೆದುಕೊಂಡ ಕ್ರಮಗಳು ದೇಶಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿವೆ. ಇದನ್ನು ಹೇಳಬೇಕಾದರೂ ಎಲ್ಲೂ ಅವರು ಅಹಂಕಾರ ಇಲ್ಲದೇ, ಆತ್ಮ ಪ್ರಶಂಸೆಯ ಗೆರೆ ದಾಟದೇ ಹೇಳಿದ್ದಾರೆ. ಓದುತ್ತಾ ಓದುತ್ತಾ ಅನೇಕ ಹಣಕಾಸಿನ ಟರ್ಮ್ಗಳ ಕುರಿತು, ಪಾಲಿಸಿಗಳ ಕುರಿತು, ನಿರ್ಧಾರ ತೆಗೆದುಕೊಳ್ಳುವಿಕೆಯ ಕುರಿತು, ಕಠಿಣ ಸಂದರ್ಭಗಳ ನಿರ್ವಹಣೆ ಕುರಿತು ಗೊತ್ತಿಲ್ಲದೇ ಕಲಿಯುತ್ತೀರಿ. ಕಳೆದ ಮೂರ್ನಾಲ್ಕು ದಶಕಗಳಲ್ಲಿ ಬ್ಯಾಂಕಿಗ್ ಸೇರಿ ಇತರೇ ಹಣಕಾಸಿಗೆ ಸಂಬಂಧಪಟ್ಟ ಬಹುಮೂಲ್ಯವಾದ ಮಾಹಿತಿಗಳು ನಿಮಗೆ ಸಿಗುತ್ತವೆ. ವಿವಿಧ ವಿತ್ತ ಮಂತ್ರಿಗಳ, ಮಾಜಿ ಗವರ್ನರ್ ಗಳ,  ಉನ್ನತಾಧಿಕಾರಿಗಳ ಕಾರ್ಯವೈಖರಿ ಪರಿಣಿತಿಗಳ ಪರಿಚಯವೂ ಆಗಯತ್ತದೆ. ಮತ್ತೊಂದು ಸಂಗತಿ, ಇವರು ಎಲ್ಲೂ ಸರಕಾರದ ವಿರುದ್ಧ ಬಂಡೆದ್ದವರಲ್ಲ, ಹಾಗಂತ ಓಲೈಸಿಕೊಂಡು ಕೂತವರೂ ಅಲ್ಲ. ಒಬ್ಬ ಸಮರ್ಥ ಸಲಗೆಗಾರರಾಗಿ, ವಿಷಯ ಪರಿಣಿತರಾಗಿ ಸೂಕ್ಷ್ಮವಾಗಿಯೇ ತಿಳಿಹೇಳಿದವರು. ಈ ಪುಸ್ತಕದ ಉತ್ತರಾರ್ಧದಲ್ಲಿ ಬರುವ ವಿಷಯ ಅತ್ಯಂತ ಆಳವಾಗಿರುವುದರಿಂದ ಗಂಭೀರವಾದ ಓದನ್ನು ಬೇಡುತ್ತದೆ. ನೆನಪಿಡಿ, ಇದು ಹಣಕಾಸು, ಆಡಳಿತ ಮುಂತಾದ ವಿಷಯಗಳಲ್ಲಿ ನಮ್ಮ ಜ್ಞಾನದ  ಸ್ತರವನ್ನು ಹೆಚ್ಚಿಸುವ ಪುಸ್ತಕಗಳಲ್ಲಿ ಒಂದು.

ಒಂದು ವಿನಮ್ರ ಸಲಹೆ, ಇದು ಒಮ್ಮೆ ಓದಿ ಮಡಚಿಡುವ ಪುಸ್ತಕವಲ್ಲ ಅಲ್ಲ. ಅವರು ಹಣಕಾಸಿನ ಬಗೆಗೆ ಕ್ಲಿಷ್ಟಕರ ವಿಚಾರವನ್ನು ಹೇಳುತ್ತಿರುವಾಗ ಮನಸ್ಸು ಓದಲು ಆಲಸಿತನ ಮಾಡುತ್ತದೆ, ಪದೇ ಪದೇ ಪುಟಗಳ ಹಾರಿಸಿ ಮುನ್ನಡೆಯಲು ಹೇಳುತ್ತದೆ. ಅದಕ್ಕೇ ಕನಿಷ್ಠ ಎರಡು-ಮೂರು ಬಾರಿ ಓದುವ ತಾಳ್ಮೆ ಬೇಕು (ನನ್ನ ಮಟ್ಟಿಗೆ). ಮೊದಲ ಬಾರಿಯ ಓದಿನಿಂದ ಪುಸ್ತಕದ ಕಾಲು ಭಾಗ ಅಂಶಗಳನ್ನು ಮಾತ್ರ ಗ್ರಹಿಸಲು ನನ್ನಿಂದ ಸಾಧ್ಯವಾಯಿತು. ಆದರೆ ಇತ್ತೀಚೆಗೆ ನಾನು ಓದಿದ ಅತ್ಯುತ್ತಮ ಅಧ್ಯಯನ ಯೋಗ್ಯ ಪುಸ್ತಕಗಳಲ್ಲಿ ಒಂದೆಂದು ಹೇಳಬಲ್ಲೆ.

ಅತ್ಯಂತ ಸಶಕ್ತವಾಗಿ ಅನುವಾದಿಸಲು ಶ್ರೀರಾಂ ಅವರು ಸಫಲರಾಗಿದ್ದರೂ ಒಂದು ಚಿಕ್ಕ ಕೊರತೆ ಕಂಡಿತು. ಈ ಪುಸ್ತಕದ ಹೆಚ್ಚಿನ ಓದುಗರು ಇಲ್ಲಿ ಬರುವ ಫೈನಾನ್ಶಿಯಲ್ ಟರ್ಮ್ಗಳನ್ನು ಕಲಿತಿದ್ದು ಇಂಗ್ಲಿಷನಲ್ಲಿ. ಆದರೆ ಪದಗಳ ಕನ್ನಡಾನುವಾದ ಸಂಸ್ಕೃತ ಪ್ರಭಾವಿತ ಕನ್ನಡದಲ್ಲಾಗಿದೆ. ಅದರ ಬದಲು ಆಂಗ್ಲದಲ್ಲೇ ಕೊಟ್ಟಿದ್ದರೆ ಗ್ರಹಿಸಲು ಅನುಕೂಲಕರವಾಗುತ್ತಿತ್ತು. ಕಡೆಪಕ್ಷ ಕನ್ನಡ ಪದಗಳ ಜೊತೆಗೆ ಕಂಸದೊಳಗೆ ಆಂಗ್ಲ ಪದಗಳೂ ಇರಬೇಕಿತ್ತು. ಉದಾಹರಣೆಗೆ – ‘ಶಾಸನಬದ್ಧ ದ್ರವ್ಯತಾ ಅನುಪಾತ’ ಇಂತಹ ಪದ ಬಂದಕೂಡಲೇ ಓದಿನ ಓಘ ಒಂದು ಕ್ಷಣಕ್ಕೆ ನಿಧಾನವಾಗುತ್ತದೆ. ಅದನ್ನು ನಮಗೆ ಸುಲಭವಾದ ಅಥವಾ ಈಗ ವ್ಯಾಪಕಾಗಿ ಬಳಸಲ್ಪಡುತ್ತಿರುವ Statuttory Liquidity Ratio ಗೆ ಮನಸೊಳಗೇ ಅನುವಾದಿಸಿ ಮುನ್ನಡೆಯಲು ಸಮಯ ಬೇಡುತ್ತದೆ. ಆದ್ದರಿಂದ ಇಂಗ್ಲಿಷ್ ಟರ್ಮ್ಗಳ ಬಳಕೆ ಉತ್ತಮವಾಗಿತ್ತೇನೋ.

ಏನೇ ಆಗಲಿ ಶ್ರೀರಾಂ ಅವರು ಕನ್ನಡಕ್ಕೆ ಒಂದು ಅತ್ಯುತ್ತಮ ಪುಸ್ತಕ ಕೊಟ್ಟಿದ್ದಾರೆ. ಡಾ. ವೈವಿ ರೆಡ್ಡಿಯವರ ಆಡಳಿತಾನುಭವ, ಆರ್ಥಿಕ ಜ್ಞಾನ, ತಾಯ್ನುಡಿಯ ಪ್ರೇಮ ಇತ್ಯಾದಿಗಳ ಬಗ್ಗೆ ಓದುತ್ತಾ ಓದುತ್ತಾ ನಮ್ಮ ಜ್ಞಾನದ ಮಟ್ಟವನ್ನು ಚೂರಾದರೂ ಏರಿಸಿಕೊಳ್ಳಬಹುದು. ಈ ಪುಸ್ತಕ ದೊಡ್ಡ ಪ್ರಮಾಣದ ಓದುಗ ವರ್ಗಕ್ಕೆ ಅತೀ ಅವಶ್ಯವಾದ ಮಾಹಿತಿಗಳನ್ನು ಒಳಗೊಂಡಿದೆ. ಇದು ನಾನು ಓದಲೇಬೇಕೆಂದು ಒತ್ತಾಯಿಸುವ ಪುಸ್ತಕಗಳಲ್ಲಿ ಒಂದು.

 

ವೈ.ವಿ. ರೆಡ್ಡಿ ಅವರ ಪುಸ್ತಕದ ಕುರಿತ  ಇತರ ಬರಹಗಳು: 

ಭಿನ್ನ ಕೃತಿಗಳಿಂದ ಮರುನಿರೂಪಣೆಗೊಂಡ ಸ್ವತಂತ್ರ ಪುಸ್ತಕ
ವಿತ್ತಮಂತ್ರಿಗಳ ಜೊತೆ ಸೃಜನಾತ್ಮಕ ತಲ್ಲಣಗಳು
ಮಹಾಲಕ್ಷ್ಮಿಯ ಮಡಿಲಿಗೆ ಸೇರಿದೆನಾದರೂ…