ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ. ನಮಗೇ ಅರ್ಥವಾಗದ ಯಾವುದೋ ಒಂದು ತಿರುವಿಗೆ ನಮ್ಮನ್ನ ಎಳೆದುಕೊಂಡು ಹೋಗಿಬಿಡುತ್ತದೆ. ಈ ಕಾರಣಕ್ಕೆ ಯಾವುದೋ ಪಕ್ಷ, ಸಿದ್ಧಾಂತಗಳಿಗೆ ಪೀಡಿತರಾಗಿ ಬರೆಯುವುದು ಸೃಜನಶೀಲತೆಗೆ ದೊಡ್ಡ ಅಪಾಯ.
ಗುರುಗಣೇಶ ಭಟ್ ಡಬ್ಗುಳಿ ನಡೆಸಿದ ಕತೆಗಾರ ಶ್ರೀಧರ ಬಳಗಾರ ಅವರ ಸಂದರ್ಶನ

 

ಅಳಿವಿನಂಚಿನಲ್ಲಿರುವ ಸಂಗತಿಗಳನ್ನು ಮುನ್ನೆಲೆಯಲ್ಲಿರಿಸಿಕೊಂಡು ಬರೆಯುವ ಕನ್ನಡದ ಬಹುಮುಖ್ಯ ಕಥೆಗಾರ ಶ್ರೀಧರ ಬಳಗಾರ. ಪುಟ್ಟ ಪಟ್ಟಣ ಕುಮಟೆಯಿಂದ ಜಾಗತಿಕ ದರ್ಶನ ಮಾಡಿಸುವ ಅವರು ಗ್ರಾಮ್ಯ ಸಂಸ್ಕೃತಿ ಮತ್ತು ವ್ಯಕ್ತಿಯ ಮೂಲಕ ಸಮುದಾಯದ ಕಥನವನ್ನು ಕಟ್ಟಿಕೊಡುವುದರಲ್ಲಿ ನಿಸ್ಸೀಮರು. ರೂಪಕಗಳ ಮೂಲಕ ಜಗತ್ತಿನ ಆಗುಹೋಗುಗಳು ಮಲೆನಾಡಿನ ಹಳ್ಳಿ ಮತ್ತು ಸಂಬಂಧಗಳ ಮೇಲೆ ಉಂಟುಮಾಡುವ ಸೂಕ್ಷ್ಮ ಪರಿಣಾಮಗಳು ಅವರ ಕಥೆಗಳ ಕೇಂದ್ರಬಿಂದು. ಅವರ ಹೊಸ ಕಾದಂಬರಿ “ಮೃಗಶಿರ” ಡಿಸೆಂಬರಿನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮತ್ತು ಕಥೆಯ ವೈವಿಧ್ಯಮಯ ಆಯಾಮಗಳ ಕುರಿತು ಅವರ ಜೊತೆಗಿನ ಮಾತುಕತೆ ಇಲ್ಲಿದೆ.

ನಿರೂಪಕ: ನಿಮ್ಮ ಕಥಾಜಗತ್ತಿನ ಶುರು ಹೇಗೆ?

ಶ್ರೀಧರ ಬಳಗಾರ: ನಮ್ಮ ಮನೆ, ಕೇರಿಯ ಕೊನೆಯ ಮನೆಯಾಗಿತ್ತು. ಸುಡುಗಾಡು ಸಿದ್ಧರು, ಘಟ್ಟದ ಕೆಳಗಿನ ಸಂಭಾವನೆ ಭಟ್ಟರು, ಹಾನಗಲ್ಲಿಂದ ಬರುತ್ತಿದ್ದ ಪಿಯಾನು ನುಡಿಸುವವರು, ಹಾವುಗೊಲ್ಲರು, ಬಳೆಮಾರುವವರು, ಕಲಘಟಗಿಯಿಂದ ಕುದುರೆ ಮೇಲೆ ಬರ್ತಿದ್ದ ಸಾಮಾನು ಮಾರುವವರು.. ಎಲ್ಲರೂ ನಮ್ಮ ಮನೆಗೆ ಬರುವಾಗ ಸಂಜೆಯಾಗುತ್ತಿತ್ತು. ಕತ್ತಲೆಯಲ್ಲಿ ವಾಪಸ್ಸಾಗಲು ಆಗುತ್ತಿರಲಿಲ್ಲ. ಒಂದು ಚಾಪೆ ಕೇಳಿಕೊಂಡು ನಮ್ಮನೆಯಲ್ಲಿ ರಾತ್ರಿ ಕಳೆಯುತ್ತಿದ್ದರು. ಅವರಾಗಿಯೇ ಬೇರೆ ಬೇರೆ ರೀತಿಯ ಕಥೆ ಹೇಳುತ್ತಿದ್ದರು. ವಿಚಿತ್ರ ಸಂಗತಿಗಳನ್ನು ವಿವರಿಸುತ್ತಿದ್ದರು.

ಮತ್ತೊಂದು ಘಟನೆಯನ್ನ ನಾನು ಹೇಳಲೇಬೇಕು; ನನ್ನ ಅಕ್ಕನ ಮನೆಯಲ್ಲಿ ‘ಚಂದಮಾಮ’ ತರಿಸುತ್ತಿದ್ದರು. ಬೇತಾಳನ ಕಥೆಗಳ ಪರಿಸರ ನನಗೆ ಹತ್ತಿರವಾಗಿತ್ತು. ಅಲ್ಲಿನ ಸ್ಮಶಾನದಂತಹ ಕಾಡು.. ವಿಕ್ರಮಾದಿತ್ಯನ ಹೆಗಲ ಮೇಲಿನ ಬೇತಾಳ.. ಬೇತಾಳನ ಕಥೆಗೆ ಮಾರುಹೋಗಿ ವಿಕ್ರಮಾದಿತ್ಯ ಮಾತಾಡುವುದು.. ಇದೆಲ್ಲ ನಿಜವಾಗಿಯೂ ನಡೆದ ಕಥೆ ಎಂದು ಭಾವಿಸಿದ್ದೆ. ಕಾಡಿನಿಂದ ಸುತ್ತುವರೆದ ಒಂಟಿ ಮನೆಯ ಅಟ್ಟದ ಮೇಲೆ ‘ಚಂದಮಾಮ’ದ ಕಥೆ ಓದುತ್ತ.. ಮನೆಯ ಜಗುಲಿಯಲ್ಲಿ ಬೀಡು ಬಿಡುತ್ತಿದ್ದ ಅಲೆಮಾರಿಗಳ ಅನುಭವದ ಕಥೆ ಕೇಳುತ್ತ ನನ್ನಲ್ಲಿ ಕಥನದ ನೇಯ್ಗೆ ಶುರುವಾಯಿತು. ಕಥೆ ಬರೆಯದಿದ್ರೆ ಸಾಧ್ಯವೇ ಇಲ್ಲ ಎಂಬಂಥ ಒತ್ತಡದ ಪರಿಸ್ಥಿತಿಯದು. ಬಾಲ್ಯದ ವಾತಾವರಣವೇ ನನಗೆ ಕಥೆ ಬರೆಯಲು ಹೇಳಿಕೊಟ್ಟಿತು.

ನಿರೂಪಕ: ನಿಮ್ಮ ಕಥೆಗಳ ಬಹುಮುಖ್ಯ ಅಂಶ ಕಾಡು, ಒಂದು ಥರದ ಸೆಂಟ್ರಲ್ ಥೀಮ್ ಇದ್ದಹಾಗೆ.. ‘ಕಾಡು’ ಎಂಬ ಅನನ್ಯ ಅಂಶದ ಗುಟ್ಟೇನು!?

ಶ್ರೀಧರ ಬಳಗಾರ: ಹೌದು.. ನನ್ನ ಕಥೆಗಳಲ್ಲಿ ಕಾಡು ಮುಖ್ಯವಾದ ನಿರೂಪಣಾ ಅಂಶ. ನನಗೆ ಕಾಡು ಕೇವಲ ನಿರ್ಜನ, ನಿರ್ಜೀವ ಪ್ರದೇಶ ಅಲ್ಲ. ಮನೆಯ ಎದುರಿನ ಕಾಡಲ್ಲಿ ಸ್ಮಶಾನ.. ಕಾಡುಪ್ರಾಣಿಗಳು.. ಒಂದು ನಮೂನೆಯ ನಿಗೂಢ, ವಿಸ್ಮಯದ ಪ್ರಪಂಚವಾಗಿತ್ತು. ಒಂದು ಕಡೆ ಸೌಂದರ್ಯ, ಇನ್ನೊಂದು ಕಡೆ ಕ್ರೌರ್ಯ. ಎಲ್ಲವೂ ಸೇರಿ ಒಂದು ಆಪ್ತವಾದ ಅನುಭವದ ಪ್ರಪಂಚದಂತೆ ಅನಿಸುತ್ತಿತ್ತು. ಭೌತಿಕ ವಿವರಣೆಯ ವಸ್ತುವಾಗಷ್ಟೆ ಅಲ್ಲದೆ ನಿಧಾನವಾಗಿ ಅನುಭವದ ರೂಪಕವಾಗಿ ಸಿಗತೊಡಗಿತು. ಕಾಡು, ಕಡಲು ನನ್ನ ಸುತ್ತಲಿನ ಪರಿಸರವನ್ನು ಬಿಟ್ಟು ಬರೆಯಲು ಆಗುತ್ತಿರಲಿಲ್ಲ. ಕಥೆಯನ್ನು ಕೇವಲ ಮನುಷ್ಯಕೇಂದ್ರಿತವಾಗಿ ಬರೆಯುವುದಲ್ಲಿ ನನಗೆ ವಿಶ್ವಾಸ ಇಲ್ಲ. ಅದೊಂದು ಜೀವಜಗತ್ತು. ಅದರಲ್ಲಿ ಮನುಷ್ಯ ಒಂದು ಭಾಗ. ಹಾಗೇ ಮರಗಳು ಸಹ ಒಂದು ಭಾಗ.

ಕಪ್ಪೆ, ನಾಯಿ, ಹುಲಿ, ಹಕ್ಕಿ, ನವಿಲು, ಇಂಬಳ….. ಇವೆಲ್ಲ ಬಿಡಿಭಾಗಗಳು ಸೇರಿಯೇ ನನ್ನ ಕಥನ ಪ್ರಪಂಚದ ಒಂದು ರೂಪಕವಾಗಿತ್ತು. ಈ ಪರಂಪರೆ ಕನ್ನಡದಲ್ಲಿ ಕುವೆಂಪು ಅವರ ಕಾದಂಬರಿಗಳಲ್ಲಿ…. ತೇಜಸ್ವಿಯವರ ಕಥೆಗಳಲ್ಲಿ ಮೊದಲಿಂದಲೂ ಇತ್ತು. ಕಾಡು ನನ್ನ ಕಥೆಗಳಲ್ಲಿನ ಭೌತ ಪ್ರಪಂಚ ಮತ್ತು ಅದನ್ನು ದಾಟಿ ಒಂದು ರೂಪಕ.

ನಿರೂಪಕ: ಕಥನವೇ ನಿಮ್ಮ ಅಭಿವ್ಯಕ್ತಿಯ ಸಾಧನ ಎನಿಸಿದ್ದು ಯಾವಾಗ ಮತ್ತು ಏಕೆ?

ಶ್ರೀಧರ ಬಳಗಾರ: ನನ್ನ ಪರಿಸರವೇ ಹಾಗಿತ್ತು. ಅನುಭವವನ್ನ ನಿರೂಪಣೆಯ ಮಾದರಿಯಲ್ಲಿ ವ್ಯಕ್ತಪಡಿಸುವ ಸ್ಥಿತಿಯದು. ಅಲೆಮಾರಿಗಳು ಹೇಳುವ ಕಥೆಗೆ ವಿಚಿತ್ರವಾದ ಆಕರ್ಷಕ ಶಕ್ತಿಯಿತ್ತು. ಅದು ನಿಜವೋ.. ಕಲ್ಪನೆಯೋ.. ಎಂಬುದಕ್ಕಿಂತ ಅವರು ಕಥೆ ಹೇಳುವ ಶೈಲಿ ‘ಹೌದು’ ಅನಿಸುತ್ತಿತ್ತು. ಅವರದ್ದು ನಿಜವಾದ ಕಥನದ ಶಕ್ತಿ. ಹಲವರು ಯಾವುದೋ ಕಥೆ ಓದಿ ನಿಜವಾಗಿ ಘಟಿಸಿದ್ದಾ ಅಥವಾ ಕಲ್ಪನೆಯೆ ಎಂದು ಕೇಳುತ್ತಾರೆ. ಹೀಗೆ ಒಂದು ಕಥೆಯ ಅನುಭವ ಓದುಗನಿಗೆ ಸತ್ಯ ಎನಿಸುವಂತೆ ನಿರೂಪಣೆ ಮಾಡುವುದು ಕಥನಕ್ಕಿರುವ ದೊಡ್ಡ ಶಕ್ತಿ. ಕಥೆ ನನಗೆ ಒಲಿದ ಭಾಷೆ. ಆಮೇಲೆ ಕಥೆಯೊಳಗೆ ಪದ್ಯವೋ.. ನಾಟಕವೋ ಅಥವಾ ಇನ್ಯಾವುದೋ ಮಾಯಾಲೋಕವಿದೆಯೋ ಎಂದೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಇರಬಹುದು ಅಥವಾ ಇಲ್ಲದಿರಬಹುದು..

ಅನಂತಮೂರ್ತಿಯವರು ನನ್ನ ಸಂಕಲನಕ್ಕೆ ಮುನ್ನುಡಿ ಬರೆಯುತ್ತ ‘ಕಾವ್ಯಾತ್ಮಕ ಗುಣವಿರುವ ಕಥನ ವಿಧಾನ’ ಎಂದಿದ್ದರು. ಹಲವರು ಹೇಳುವಂತೆ ನನ್ನ ಕಥೆಯಲ್ಲಿ ಕಾವ್ಯವಿರಬಹುದು. ಆದರೆ ಶುದ್ಧಾಂಗವಾಗಿ ಕಾವ್ಯವನ್ನು ಬರೆಯಲಿಲ್ಲ ಎಂದು ನನಗನಿಸಿದೆ.

ನಿರೂಪಕ: ಉತ್ತರ ಕನ್ನಡದ ಗ್ರಾಮ್ಯ ಕೇಂದ್ರಿತ ಕಥೆಗಳು ‘ಪ್ರಾದೇಶಿಕತೆ’ ಎಂಬ ಲಿಮಿಟ್ ಆಗಿವೆಯಾ..

ಶ್ರೀಧರ ಬಳಗಾರ: ನೋಡಿ.. ಪ್ರಾದೇಶಿಕತೆ ಎಂಬುದು ಭೌಗೋಳಿಕ ಚೌಕಟ್ಟು ಎಂದು ತಿಳಿದುಕೊಳ್ಳುವುದು ಸರಿಯಾದ ವ್ಯಾಖ್ಯಾನ ಅಲ್ಲ. ಯಾವುದು ಪ್ರಾದೇಶಿಕ ಯಾವುದು ಜಾಗತಿಕ ಎಂದು ಸುಲಭವಾಗಿ ಗೆರೆ ಎಳೆದ ಹಾಗೆ ಹೇಳಲಾಗುವುದಿಲ್ಲ. ಕನ್ನಡದಲ್ಲಿ ಬರೆದದ್ದು ಇಂಗ್ಲೀಷಿನವರಿಗೆ ಪ್ರಾದೇಶಿಕವಾಗಿ ಕಾಣಬಹುದು.. ಹವ್ಯಕ ಕನ್ನಡದಲ್ಲಿ ಬರೆದರೆ ಕನ್ನಡದವರಿಗೆ ಪ್ರಾದೇಶಿಕ ಅನಿಸಬಹುದು. ಪ್ರಾದೇಶಿಕತೆಯನ್ನು ಕೇವಲ ಭೌತಿಕ ನಕಾಶೆ ಅಥವಾ ಬಳಸುವ ಭಾಷೆಯ ಚೌಕಟ್ಟಿನಲ್ಲಿ ಗುರ್ತಿಸಲಾಗದು. ನನ್ನ ಅನುಭವದಲ್ಲಿ, ನಾನು ಬಳಸುವ ಭಾಷೆಯಲ್ಲಿ ಜಾಗತಿಕ ದರ್ಶನವನ್ನು ಕಂಡಿದ್ದೇನೋ ಇಲ್ಲವೋ.. ಕನ್ನಡ ಜಾಗತಿಕ ಭಾಷೆಯೋ ಪ್ರಾದೇಶಿಕ ಭಾಷೆಯೋ.. ಕನ್ನಡದ ಮೂಲಕವಾಗಿ ಜಗತ್ತನ್ನು ಕಂಡುಕೊಳ್ಳುವುದು ಮುಖ್ಯ. ಇಂಗ್ಲೀಷಿನಲ್ಲಿ ಬರೆದರೆ ಮಾತ್ರ ಪ್ರಾದೇಶಿಕತೆಯನ್ನ ಮೀರಿ ಜಾಗತಿಕ ಮಟ್ಟಕ್ಕೇರಿದ ಹಾಗೆ ಅಂತ ಅರ್ಥವಾ? ಅಥವಾ ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗಿಯಾದರೆ ಜಾಗತಿಕ ಮಟ್ಟಕ್ಕೇರಿದೆ ಎಂದಾ? ಇಡೀ ಜಗತ್ತನ್ನು ಸುತ್ತಾಡಿ ಆ ಅನುಭವವನ್ನು ನಿರೂಪಣೆಯಲ್ಲಿ ಬಳಸಿದರೆ ಅದು ಜಾಗತಿಕವಾ?

ಹಾಗಲ್ಲ ಅದು.. ಪ್ರಾದೇಶಿಕತೆ ಎಂಬುದು ನಾವು ಜಗತ್ತನ್ನು ನೋಡುವ ಕನ್ನಡಿ. ಹಾಗೇ ನಾನು ಬರೆಯುವ ಕನ್ನಡ ಭಾಷೆ ಸಹ ಜಗತ್ತನ್ನು ನೋಡುವ ಕನ್ನಡಿ. ಅದರ ಮೂಲಕವೇ ಹೊರಜಗತ್ತನ್ನು ನೋಡುವುದು ಅನುಭವಿಸುವುದು ಎಲ್ಲ.. ಅದರಲ್ಲಿ ನನ್ನ ಬ್ರಹ್ಮಾಂಡವಿದೆ.. ನನಗೆ ನಿಜವಾದ ಅನುಭವದಲ್ಲಿ ನನ್ನದೇ ಆದ ಜಗತ್ತನ್ನ ಕಾಣುತ್ತೇನೆ ನಾನು.. ನನ್ನ ಜಗತ್ತು ಅದು..

ನಿರೂಪಕ: ಅಂದರೆ ಬಳಸುವ ಭಾಷೆ, ಪರಿಸರ ಜಗತ್ತಿನ ದರ್ಶನ ಮಾಡಿಸುವ ಕನ್ನಡಿ..

ಶ್ರೀಧರ ಬಳಗಾರ: ಹೌದು.. ಕನ್ನಡಿ ಇದ್ದಂತೆ. ಅದರ ಮೂಲಕವೇ ಬ್ರಹ್ಮಾಂಡವನ್ನು ನಾನು ವಿಲೀನ ಮಾಡಿಕೊಳ್ಳುವುದು ಅಥವಾ ವಿಸ್ತಾರ ಮಾಡಿಕೊಳ್ಳುವುದು. ಹಾಗೆ ನೋಡಿದರೆ ಚಿತ್ತಾಲರ ‘ಹನೇಹಳ್ಳಿ’ ಕುರಿತ ಕಥೆಗಳಿಗೆ ಪ್ರಾದೇಶಿಕತೆಯ ಹಣೆಪಟ್ಟಿ ಹಚ್ಚಬಹುದಾ? ದ್ಯಾವನೂರಿನ ಪರಿಸರ ಇಟ್ಟುಕೊಂಡು ಮಹಾದೇವ ಅವರು ಬರೀತಾರೆ. ಅವರಿಗೆ ಪ್ರಾದೇಶಿಕ ಕಥೆಗಾರ ಎನ್ನಬಹುದಾ? ಅನಂತಮೂರ್ತಿಯವರು ತೀರ್ಥಹಳ್ಳಿಯ ಕಥೆ ಬರೆದುದಕ್ಕೆ ಹಾಗೆ ಹೇಳಬಹುದಾ? ಕಲ್ಪನೆಯ ಶಿವಪುರ ಇಟ್ಟುಕೊಂಡು ಕಂಬಾರರು ಬರೀತಾರೆ, ಅದಕ್ಕೆ ಪ್ರಾದೇಶಿಕ ಎಂದು ಹೇಳಲು ಸಾಧ್ಯವಾ?

ಎಲ್ಲರಿಗೂ ಕೂಡ ಅವರದ್ದೇ ಆದ ಅತ್ಯಂತ ಆಪ್ತವಾದ ಖಾಸಗಿಯಾದ ಸೀಮಿತ ಅನಿಸುವ ಬಾಲ್ಯದ ಅನುಭವದ ಒಂದು ಲೋಕ ಇರುತ್ತದೆ. ಅದರ ಜೊತೆಗೆ ಬೆಳೆಯುತ್ತೇವೆ. ಅದಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿ ಬರೆಯಬೇಕೆ ವಿನಃ ಜಾಗತಿಕವಾಗಿ ಬರೀಬೇಕು. ಪ್ರಾದೇಶಿಕತೆ ಮಿತಿ ಎಂದುಕೊಂಡು ಊಹಾತ್ಮಕವಾಗಿ ಬರೆದರೆ? ಅದು ಅಲ್ಲ.. ನನಗನಿಸಿದಂತೆ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಪ್ರಾದೇಶಿಕತೆ ಎಂಬುದೇ ದೊಡ್ಡ ಶಕ್ತಿ.

ನಿರೂಪಕ: ಹಾಗಾದ್ರೆ ಇಂದಿನ ಬರಹಗಾರರು ತಾವು ವಾಸವಿರುವ ಪರಿಸರ ಕೇಂದ್ರೀಕರಿಸಿಕೊಂಡು ಜಾಗತಿಕ ದರ್ಶನ ಮಾಡಿಕೊಳ್ಳಬೇಕು ಎಂದಾ?

ಶ್ರೀಧರ ಬಳಗಾರ: ಹಾಗಲ್ಲ ಅದು.. ಇಂದು ಯಾವುದೇ ಊರು ಹೊರಗಿನ ಪ್ರಭಾವವನ್ನು ಅಂತರ್ಗತ ಮಾಡಿಕೊಳ್ಳದೆ ದ್ವೀಪವಾಗಿ ಉಳಿದಿಲ್ಲ. ನೋಡಿ, ಕನ್ನಡದಲ್ಲಿ ಸಂಸ್ಕೃತದ ಸ್ಮೃತಿಯಿದೆ. ಸಹವರ್ತಿಯಾದ ಇಂಗ್ಲೀಷಿನ ಸ್ಮೃತಿಯಿದೆ. ಶುದ್ಧವಾದ ಕನ್ನಡದಲ್ಲಿ ಒಂದು ಮಾತನಾಡುತ್ತೇವಾ ನಾವು? ಎಲ್ಲ ರೀತಿಯ ಸಂಕರಗಳೂ ಇವೆ. ಜಗತ್ತಿನ ಅತ್ಯುತ್ತಮ ಅನುಭವಗಳು ಭಾಷೆಯ ಒಳಗೆ ಸ್ಮೃತಿಯ ರೂಪದಲ್ಲಿ ಹಾಸುಹೊಕ್ಕಾಗಿ ಇರುತ್ತವೆ. ಯಾವುದೇ ಒಂದು ಪ್ರದೇಶ ದ್ವೀಪವಾಗಿ ಹೊರಗಿನ ಗುಣಗಳನ್ನ ಒಳಗೆ ಬಿಟ್ಟುಕೊಳ್ಳದೇ ಶುದ್ಧಾಂಗವಾಗಿ ಐಸೋಲೇಟೆಡ್ ದ್ವೀಪವಾಗಿ ಇರುತ್ತೇನೆ ಎಂದು ಹೇಳಲುಬರುವುದಿಲ್ಲ. ಚೋಮನ ಅಥವಾ ಪ್ರಾಣೇಶಾಚಾರ್ಯರ ಅಥವಾ ಮಂದಣ್ಣನ ಪಾತ್ರಗಳು ಜೀವಿಸಿದ ಪ್ರದೇಶಕ್ಕೆ ಮಾತ್ರ ಸೀಮಿತವಾಗುತ್ತವೆಯೋ..? ಆ ಪಾತ್ರಗಳ ಸಂವೇದನೆಯ ಮೂಲಕ ಜಗತ್ತಿನ ದರ್ಶನ ಆಗೋದು ಮುಖ್ಯ.

ನಿರೂಪಕ: ಇಳೆ ಎಂಬ ಕವನ ಸಂಕಲನದಲ್ಲಿ ಜಿ ರಾಜಶೇಖರ್ ಅವರು-
“ಸಿದ್ಧಾಂತಿಗಳು, ವಿವಿಧ ಪಕ್ಷ ಪಂಥಗಳವರು, ರಾಷ್ಟ್ರೀಯವಾದಿಗಳು, ಅಭಿವೃದ್ಧಿವಾದಿಗಳು, ಪರಿಸರವಾದಿಗಳು, ಎಲ್ಲರೂ ಈಗ ಲೇಖಕರನ್ನು ತಿದ್ದಿ ಸರಿದಾರಿಗೆ ಹಚ್ಚುವ ಯತ್ನದಲ್ಲಿ ತೊಡಗಿದ್ದಾರೆ. ಬಳಗಾರ ಇಂಥವರನ್ನು ಹತ್ತಿರ ಬಿಟ್ಟುಕೊಳ್ಳಬಾರದು.” ಎಂದು ಬರೆಯುತ್ತಾರೆ. ಹೊಸಕಾಲದ ಕಥೆಗಾರರಿಗೆ ಈ ಎಚ್ಚರದ ಅನಿವಾರ್ಯತೆ ಇಂದು ಎಷ್ಟಿದೆ?

ಶ್ರೀಧರ ಬಳಗಾರ: ಅವರು ಹೇಳಿರುವುದೇನೆಂದರೆ, ಸಿದ್ಧಾಂತಗಳ ಶಾಲೆ, ಸಿಲೇಬಸ್ಸು, ವ್ಯಾಕರಣ ಪುಸ್ತಕ, ನಿಘಂಟು ಇಟ್ಟುಕೊಂಡು ಬರೆದು ಉದ್ಧಾರವಾದ ಲೇಖಕನಿಲ್ಲ. ಏಕೆಂದರೆ ಬರೆಯುವವನಿಗೆ ಅನುಭವ ಮುಖ್ಯ, ಆ ಅನುಭವದ ಕಲಾತ್ಮಕವಾದ ಸ್ವರೂಪ ಮುಖ್ಯ. ಅದನ್ನು ಬಿಟ್ಟು ರಕ್ತಮಾಂಸವೇ ಇರದ ವಿಚಾರ, ತರ್ಕಬದ್ಧವಾದ ಸಿದ್ಧಾಂತ ಇಟ್ಟುಕೊಂಡು ಬರೆದರೆ ಅದೊಂದು ಸುಂದರ ಯೋಚನೆ ಅಥವಾ ಆಲೋಚನೆ ಆಗಬಹುದು. ಅದು ಅನುಭವದಿಂದ ವಂಚಿತವಾದದ್ದಾಗಬಹುದು. ಅದಕ್ಕಾಗಿ ಕಥೆಯನ್ನ ಬರೆಯಬೇಕಾದರೆ ಸುತ್ತಮುತ್ತಲು ಇರಬಹುದಾದ, ಕಾಡಬಹುದಾದ ಸಿದ್ಧಾಂತಗಳ ಜಗಳ, ರಾಜಕೀಯ ಆಮಿಷ, ಅಥವಾ ಇನ್ನೂ ಬೇರೆಬೇರೆ ಪ್ರಭಾವಗಳಿಂದ ಎಚ್ಚರಿಕೆಯಿರಬೇಕು. ಕಥೆ ಬರೆಯುವವರಿಗೆ ಇರಬೇಕಾದ ಮುಖ್ಯವಾದ ತಿಳಿವಳಿಕೆ ಏನೆಂದರೆ ಪರೀಕ್ಷೆಯಲ್ಲಿ ಪ್ರಶ್ನೆಗೆ ಉತ್ತರ ಬರೆದ ಹಾಗೆ ಬರೆಯಲು ಸಾಧ್ಯವಿಲ್ಲ. ಮುಂಚೆಯೆ ಎಲ್ಲವನ್ನು ತಿಳಿದುಕೊಂಡು ಬರೆಯುತ್ತೇನೆ ಎಂದರೆ ಆಗುವುದಿಲ್ಲ.

ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ. ನಮಗೇ ಅರ್ಥವಾಗದ ಯಾವುದೋ ಒಂದು ತಿರುವಿಗೆ ನಮ್ಮನ್ನ ಎಳೆದುಕೊಂಡು ಹೋಗಿಬಿಡುತ್ತದೆ. ಈ ಕಾರಣಕ್ಕೆ ಯಾವುದೋ ಪಕ್ಷ, ಸಿದ್ಧಾಂತಗಳಿಗೆ ಪೀಡಿತರಾಗಿ ಬರೆಯುವುದು ಸೃಜನಶೀಲತೆಗೆ ದೊಡ್ಡ ಅಪಾಯ.

ನಿರೂಪಕ: ಹಾಗಾದರೆ ಹೊಸಕಾಲದ ಬರಹಗಾರರು ಇಂಥ ಅಪಾಯಗಳಿಂದ ಹೇಗೆ ದೂರವಿರಬೇಕು?

ಶ್ರೀಧರ ಬಳಗಾರ: ನೋಡಿ… ಸಿದ್ಧಾಂತಗಳನ್ನ ಓದದೇ ಅರ್ಥಮಾಡಿಕೊಳ್ಳದೇ ತಿರಸ್ಕಾರ ಮಾಡಿ ಅನ್ನಲ್ಲ. ಓದಿ ಅರ್ಥಮಾಡಿಕೊಳ್ಳಿ. ಆದರೆ ಸಿದ್ಧಾಂತಗಳೇ ಕಥೆ ಕಟ್ಟುವ ಕ್ರಮ ಅಲ್ಲ ಎಂಬ ವಿವೇಕ ಇರಬೇಕು. ಯಾಕೆಂದರೆ ಸಿದ್ಧಾಂತ ಯಾರದೋ ಅನುಭವ ಆಗಿರಬಹುದು. ಸಿದ್ಧಾಂತವನ್ನ ಸಿದ್ಧಾಂತವಾಗಿ ಓದಿದವರಿಗೆ ಅದು ಅನುಭವ ಆಗಿರುವುದಿಲ್ಲ. ಅದು ಸುಂದರವಾದ ಆಲೋಚನೆ ಆಗಿರುತ್ತದೆ. ಸಿದ್ಧಾಂತಗಳನ್ನು ಕಥೆಯ ಸಂವೇದನೆಯಾಗಿ ಬಳಸಿಕೊಳ್ಳುವುದು ಬೇರೆ. ‘ಸಿದ್ಧಾಂತ ಎಂಬುದು ಮನುಷ್ಯನ ದೇಹ. ಅದಕ್ಕೆ ಕಥೆಯ ಅಂಗಿಯನ್ನ ಹೊಲಿಯುತ್ತೇನೆ ಎಂಬುದು ತಪ್ಪು.’ ಇಂದು ಹೊಸಗಾಲದ ಲೇಖಕರ ಒಂದು ಸವಾಲೆಂದರೆ, ಅದು ಯಾವ ಭಾಷೆಯೇ ಆಗಿರಲಿ.. ಕಥೆಗೇ ಒಂದು ಭಾಷೆಯಿದೆ. ಕಥೆಯೇ ಒಂದು ಭಾಷೆ.. ಆ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ನಮ್ಮ ಮುಗ್ಧತೆಯನ್ನ ಕಳೆದುಕೊಳ್ಳಬಾರದು. ನಮ್ಮ ಅನುಭವವನ್ನು ಅರ್ಥಮಾಡಿಕೊಳ್ಳುವಾಗ ಸೃಜನಶೀಲತೆಯ ಆಯಾಮವನ್ನು ಕಳೆದುಕೊಳ್ಳಬಾರದು.

ಒಂದು ಸಿದ್ಧಾಂತ, ಪಕ್ಷ, ಚಳವಳಿ ಅಥವಾ ತರ್ಕಕ್ಕೆ ಹಠದಿಂದ ಕಟ್ಟುಬಿದ್ದರೆ ಸಂವೇದನೆ ಸೃಜನಶೀಲತೆಯ ಆಯಾಮವನ್ನು ಕಳೆದುಕೊಳ್ಳುತ್ತದೆ. ಆ ವಿಚಾರಕ್ಕೆ ಅದು ಅಡಿಯಾಳಾಗುತ್ತದೆ. ಎಷ್ಟು ಸೃಜನಶೀಲತೆಯಿದ್ದರೂ ಆಲೋಚನೆಗಳು ಒಂದು ಸಿದ್ಧಾಂತದ ಗುಲಾಮನಾದರೆ ಅಲ್ಲಿ ಕಥೆ ಹುಟ್ಟುವುದಿಲ್ಲ. ಈ ಎಚ್ಚರದಲ್ಲಿ ನಾವಿರಬೇಕು. ಯಾವತ್ತೂ ಕೂಡ ಸೃಜನಶೀಲ ಅನುಭವ ಆಲೋಚನೆಯನ್ನು ನಿರ್ದೇಶನ ಮಾಡುವಂತಿರಬೇಕೇ ವಿನಃ ಯಾವುದೋ ಆಲೋಚನಾಕ್ರಿಯೆಗೆ ನಮ್ಮ ಸಂವೇದನೆ ಗುಲಾಮನಾಗದಂತೆ ಎಚ್ಚರದಲ್ಲಿರಬೇಕು.

ನಿರೂಪಕ: ಕಥೆಗಳು ಏನನ್ನು ಮಾಡಬೇಕು..

ಶ್ರೀಧರ ಬಳಗಾರ: ಕಥೆಗಳು ಕೇವಲ ಆತ್ಮರಂಜನೆಗಾಗಿ ಅಥವಾ ಯಾವುದರಿಂದಲೋ ಬಿಡುಗಡೆಗಾಗಿ ಎಂಬ ಮಾತುಗಳೆಲ್ಲ ನನಗೆ ಅರ್ಥವಾಗುವುದಿಲ್ಲ. ಕಥೆಗಳಿಂದ ನನ್ನ ಸುತ್ತಲಿನ ಜೀವಿಗಳನ್ನು ಭಿನ್ನವಾಗಿ ನೋಡುವ ಕಣ್ಣು ನನಗೆ ಪ್ರಾಪ್ತವಾಯಿತು. ಒಂದು ಒಳ್ಳೆಯ ಕಥೆಯನ್ನು ಓದಿದಾಗ ಸುತ್ತಲಿನ ಪರಿಸರ ಭಿನ್ನ ಅನುಭವವಾಗಿ, ದರ್ಶನವಾಗಿ ಕಾಣಿಸಲು ಶುರುವಾಯಿತು. ಒಂದು ವಾಸ್ತವವನ್ನು, ಪದಾರ್ಥ ಪ್ರಪಂಚವನ್ನು ಬೇರೆ ರೀತಿಯಲ್ಲಿ ನೋಡುವ ದಾರಿಯನ್ನು ಕಾಣಿಸುವುದು ಕಥನಕ್ಕೆ ಮಾತ್ರ ಸಾಧ್ಯ. ಅದು ಬಿಟ್ಟು ಸಾಮಾಜಿಕ ಸುಧಾರಣೆ ಮಾಡುತ್ತೇನೆ.. ಆತ್ಮೋದ್ಧಾರ ಮಾಡಿಕೊಳ್ಳುತ್ತೇನೆ ಎಂಬಂಥ ಘೋಷಣೆಗಳೆಲ್ಲ ನನಗೆ ಅರ್ಥವಾಗಲ್ಲ. ಕಥೆ ಅಂದರೆ ನಮ್ಮ ನಿತ್ಯಜೀವನದ ಪರಿಸರವನ್ನ ಹೊಸ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತ ಹೋಗುವುದು. ಅದು ನಿರಂತರವಾದ ಪಯಣ..

ನಿರೂಪಕ: ಇಂದಿನ ಕಥೆಗಾರರ ಸವಾಲುಗಳು ಯಾವುದು..

(ಹತ್ತು ಸೆಕೆಂಡುಗಳ ಮೌನದ ನಂತರ)…..
ಶ್ರೀಧರ ಬಳಗಾರ: ಕಥೆ ಬರೆಯುವುದೇ ಒಂದು ಸವಾಲು. ಜೀವನದಲ್ಲಿ ನಿಜವಾಗಿಯೂ ಪ್ರೀತಿ ಇದ್ದವರಿಗೆ, ಅಭಿವ್ಯಕ್ತಿಯ ಮಾಧ್ಯಮದಲ್ಲಿ ಆಸಕ್ತಿ ಇದ್ದವರಿಗೆ ಕಥೆ ಬರೆಯದಿರುವುದೇ ಒಂದು ದೊಡ್ಡ ಸವಾಲು. ಅವರೆಲ್ಲ ಬರೀಬೇಕು. ಬರೆಯುವವರಿಗೆ ಇರಬೇಕಾದ ಸಹಜ ಗುಣ ಮುಗ್ಧತೆ. ಒಂದು ಬೆರಗಲ್ಲಿ ನೋಡುವ ಕಥೆಗಾರನ ವಿಧಾನದಲ್ಲಿ ಯಾವ ಮೋಸವೂ ಇರುವುದಿಲ್ಲ. ಕಥೆ ಆಗಿರಲಿ, ಕವಿತೆ, ಚಿತ್ರಕಲೆ ಅಥವಾ ಹಾಡುವ ಆ ಉತ್ಕಟ ಕ್ಷಣದಲ್ಲಿ ಅವನು ಏನಾಗಿರುತ್ತಾನೆ? ಜಾತಿ, ಭಾಷೆ, ಧರ್ಮ, ಪ್ರದೇಶ ಎಲ್ಲವನ್ನು ಕಳಚಿಕೊಂಡ ಮುಗ್ಧ ಸ್ಥಿತಿಯಲ್ಲಿರುವಾಗ ಕಥೆಗಾರನಿಗೆ ಎಲ್ಲ ಪಾತ್ರಗಳೂ ಸಮಾನವಾಗಿರುತ್ತದೆ. ಪಾತ್ರಗಳಲ್ಲಿ ತಾರತಮ್ಯ ಮಾಡಲು ಆಗುವುದಿಲ್ಲ..

ನಾವು ಏನನ್ನ ಅರ್ಥ ಮಾಡಿಕೊಳ್ಳಬೇಕೆಂದರೆ, ಸಾಹಿತ್ಯ ನಮ್ಮಲ್ಲಿದ್ದಾಗ ಚೋಮನೂ ಇರುತ್ತಾನೆ, ಪ್ರಾಣೇಶಾಚಾರ್ಯನೂ ಇರುತ್ತಾನೆ. ಶ್ರೇಣೀಕೃತ ಸಮಾಜದ ವಿಂಗಡಣೆಗಳು ಕಥಾಪ್ರಪಂಚದಲ್ಲಿ ಇರುವುದಿಲ್ಲ. ಒಂದು ರೀತಿಯ ಐಡಿಯಲ್ ವಿಲೇಜನ್ನು ನಮ್ಮೊಳಗೆ ಇದು ಸೃಷ್ಟಿಸುತ್ತದೆ. ಬೇರೆ ಬೇರೆ ಜಾತಿಯ ಪ್ರದೇಶದ ಪಾತ್ರಗಳು ನಮ್ಮೊಳಗೆ ಕರಗಿ ಒಂದಾಗಿರುತ್ತವೆ.. ಇದು ನಾವೆಲ್ಲ ಒಂದು ಎಂದು ಅನಿಸುವಂತೆ ಮಾಡುತ್ತದೆ. ಇದು ಕಥನ ಮಾಡುವ ದೊಡ್ಡ ಕೆಲಸ. ಯಾವಾಗಲೂ ನಾವು ಎಲ್ಲವನ್ನೂ ಮೀರಿದವರಾಗಿರಲ್ಲ. ಆದ್ರೆ ಕಥೆ ಓದಬೇಕಾದರೆ ಬರೆಯಬೇಕಾದರೆ ಒಳ್ಳೆಯವರಾಗಿರ್ತೀವಲ್ಲ.. ಅದು ಮಿನಿಮಮ್ ಕ್ವಾಲಿಫಿಕೇಶನ್. ಅದು ಎಲ್ಲರಲ್ಲೂ ಇರುತ್ತದೆ. ಆಮೇಲೆ ಅದನ್ನು ನಿಧಾನವಾಗಿ ವಿಸ್ತಾರ ಮಾಡಿಕೊಳ್ಳಬೇಕು.

ನಿರೂಪಕ: ಈ ದಶಕದ ಅತ್ಯುತ್ತಮ ಕಾದಂಬರಿ ‘ಆಡುಕಳ’ ಎಂಬ ವಿಮರ್ಶೆಯಿದೆ. ಆಡುಕಳ ಕಾದಂಬರಿ ಬರೆಯುವಾಗಿನ ನಿಮ್ಮ ಮನೋಪಲ್ಲಟಗಳು.. ಅನುಭವಗಳು..

ಶ್ರೀಧರ ಬಳಗಾರ: ಅದು ಹಾಗೆ ಕರೆಸಿಕೊಂಡಿದೆಯೋ ಇಲ್ಲವೋ ಎಂದೆಲ್ಲ ಗೊತ್ತಿಲ್ಲ ನನಗೆ.. ಆದರೆ ಆ ಕಾದಂಬರಿ ಬರೆಯುವಾಗ ನನಗಾದ ಅನುಭವ ಅಂದ್ರೆ.. ಆರಂಭದಲ್ಲಿ ನೀವು ಕೇಳಿದ ಒಂದು ಪ್ರಶ್ನೆ, ಈ ಪ್ರಾದೇಶಿಕತೆ ಬಗ್ಗೆ…. ದಟ್ಟವಾದ, ಸಾಂದ್ರವಾದ ಮತ್ತು ಉತ್ಕಟವಾದ ಅತ್ಯಂತ ಸೀಮಿತವಾದ ಒಂದು ಭೌಗೋಳಿಕ ಪ್ರದೇಶ ಆಡುಕಳ. ಅಲ್ಲಿ ನಡೆಯುವ ವಿದ್ಯಮಾನ ಎಷ್ಟರಮಟ್ಟಿಗೆ ಜಾಗತಿಕ ವಿರಾಟ್ ವಿದ್ಯಮಾನವಾಗಬಹುದು ಎಂಬ ಪ್ರಯತ್ನ ಮಾಡಿದ್ದೆ . ಇಂದು ಕಾಣುತ್ತಿರುವ ಜಾಗತಿಕ ಜೀವನಕ್ಕೆ ಸಂವಾದಿಯಾಗಿ ಆಡುಕಳದ ಆಶಯಗಳು ಇರಬಹುದು ಎಂದುಕೊಂಡಿದ್ದೇನೆ. ನನಗೆ ಆಡುಕಳ ಯಾಕೆ ಮುಖ್ಯ ಎಂದರೆ ಆಡುಕಳ ಎಂಬುದು ಒಂದು ಹಳ್ಳಿಯ ಹೆಸರು ಜೊತೆಗೆ ರೂಪಕವೂ ಹೌದು.. ಕಳ ಎಂದರೆ a field of game. ಅಲ್ಲಿ ಎಲ್ಲ ಆಟಗಳನ್ನೂ ಆಡುತ್ತಾರೆ. ಧಾರ್ಮಿಕ, ಲೈಂಗಿಕ, ಶೋಷಣೆ, ಮೋಸದ ಆಟ ಎಲ್ಲವನ್ನೂ ಆಡುತ್ತಾರೆ. ಆಡುವ ಜಾಗ ಸಣ್ಣದು ಎಂದರೆ ಅದು ಅಷ್ಟಕ್ಕೆ ಸೀಮಿತ ಅಂತಲ್ಲ ಅದು ಜಗತ್ತಿನ ಎಲ್ಲ ಪ್ರದೇಶದಲ್ಲಿ ಎಲ್ಲ ಕಾಲದಲ್ಲಿ ಜೀವನದ ಯಾವುದೋ ಒಂದು ಘಟ್ಟದಲ್ಲಿ ಆಡಲೇಬೇಕಾದ ಆಟ ಎಂದೇ ನಾನು ಬರೆದುಕೊಂಡು ಹೋಗಿದ್ದು. ಹಾಗಾಗಿ ಪ್ರಾದೇಶಿಕವಾದದ್ದು ತೀವ್ರವಾದಾಗ ಜಾಗತಿಕವಾಗುತ್ತದೆ ಎಂದು ನಂಬಿ ಬರೆದದ್ದು ಅದು.

ನಿರೂಪಕ: ಹೊಸ ಕಾದಂಬರಿಯ ನಿರೀಕ್ಷೆಯಲ್ಲಿ ನಿಮ್ಮ ಓದುಗರಿದ್ದಾರೆ..

ಶ್ರೀಧರ ಬಳಗಾರ: ಹೊಸ ಕಾದಂಬರಿ ‘ಮೃಗಶಿರ’ ಈ ತಿಂಗಳು (ಡಿಸೆಂಬರ್) ಬಿಡುಗಡೆ ಆಗುತ್ತಿದೆ, ಅದನ್ನು ಓದಿ ಎನ್ನಬಲ್ಲೆ. ನಮ್ಮ ಚರಿತ್ರೆಯುದ್ದಕ್ಕೂ ಇರುವುದು ಗೆದ್ದವರ ಕಥೆಗಳು. ಅಲ್ಲಿ ಸೋತವರ ಕಥೆಯಿಲ್ಲ. ಮೃಗಶಿರದಲ್ಲಿ ಇರುವುದು ಸೋತವರ ಕಥೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಇದ್ದಾನೆ. ಅವನು ಜೈಲಿಗೆ ಹೋಗುತ್ತಾನೆ, ಸಂಸಾರ ಬಿಟ್ಟು ಜೀವನವನ್ನು ಹೋರಾಟಕ್ಕೆ ಮೀಸಲಿಡುತ್ತಾನೆ. ಅವನ ಹೋರಾಟ ಮಾತ್ರ ಜಗತ್ತಿಗೆ ಕಾಣಿಸುತ್ತದೆ. ಅದರ ಮುಂದೆ ಅವನ ಹೆಂಡತಿ ಮನೆ ನಡೆಸಲು ಮಾಡುವ ಹೋರಾಟ ಯಕಶ್ಚಿತ್ ಅನಿಸಿಬಿಡುತ್ತದೆ. ಅದು ಯಾರಿಗೂ ಕಾಣುವುದಿಲ್ಲ. ಮೃಗಶಿರದಲ್ಲಿ ಇದನ್ನು ಬರೆಯುವ ಪ್ರಯತ್ನ ಮಾಡಿದ್ದೇನೆ, ಓದಿ..

ನಿರೂಪಕ: ಹೊಸಗಾಲದ ಕಥೆಗಾರರಿಗೆ ಏನಾದರೂ ಸಲಹೆ ಕೊಡಲು ಇಚ್ಛಿಸುತ್ತೀರಾ..

ಬಳಗಾರ: ಈಗ ಯಾರಿಗೂ ಸಲಹೆಗಳು ಬೇಕಾಗಿಲ್ಲ. ಅದು ಕಥೆಯ ವಿಷಯದಲ್ಲಿ ಒಂದೇ ಅಲ್ಲ, ಜೀವನದಲ್ಲೂ. ತಂದೆ ತಾಯಿಗಳಿಂದಲೂ ಗೈಡೆನ್ಸ್ ಪಡೆಯುವ ಕಾಲದಲ್ಲಿ ನಾವಿಲ್ಲ. ಇಂದು ಸಂವೇದನೆ, ಆದ್ಯತೆಗಳನ್ನು ಸುತ್ತಲಿನ ಪರಿಸರದಿಂದಲೆ ಕಲಿಯುತ್ತಾರೆ. ಕಥೆ ಬರೆಯುತ್ತ ಹೋದಂತೆ ಅವರೇ ಅರ್ಥ ಮಾಡಿಕೊಳ್ಳಬೇಕು. ಕಥಾ ಬರವಣಿಗೆಯೇ ತಿಳಿವಳಿಕೆಯ ದಾರಿಯನ್ನು ತೋರಿಸುತ್ತದೆ. ಕಥೆಯೇ ಬೇಕಾದ ಎಲ್ಲ ಉಪದೇಶ ನೀಡುತ್ತದೆ. ಆ ನಂಬಿಕೆ ಮತ್ತು ವಿಶ್ವಾಸ ಕಥೆ ಬರವಣಿಗೆಯಲ್ಲಿ ಬೇಕು. ಕಥೆಗಾರ ಹೆಚ್ಚೆಚ್ಚು ಓದಬೇಕು, ಬರೀಬೇಕು..