ಒಮ್ಮೆ ಸೈಕಲ್ ಕೊಳ್ಳಲು ಹೋಗಿದ್ದಾಗ ನಾನು ಒಂದು ಸೈಕಲ್ಲನ್ನು ತೊರಿಸಿ “ಇದು ಎಷ್ಟು” ಅಂತ ಕೇಳಿದೆ. ಸೇಲ್ಸ್ ಮನ್ ಬಿಳಿಯ. ಆತ ಬೆಲೆ ಎಷ್ಟು ಅಂತ ಹೇಳದೆ “ಅದು ದುಬಾರಿ” ಎಂದಷ್ಟೇ ಹೇಳಿದ. ನೀನು ಕಂದುಬಣ್ಣದವನು ನಿನಗೆ ಅದನ್ನು ಕೊಳ್ಳುವ ಯೋಗ್ಯತೆಯಿಲ್ಲ ಎಂದು ಆತ ಪರೋಕ್ಷವಾಗಿ ಹೇಳಿದ್ದ. ಅಸಲಿಯತ್ತೆಂದರೆ ನಾನು ಕಟ್ಟುವ ತೆರಿಗೆಯೇ ಆತನ ಆದಾಯಕ್ಕಿಂತ ಹೆಚ್ಚಿತ್ತು! ಅದು ಬಿಳಿ ಬಣ್ಣದವನ ಬಣ್ಣದ ಸೊಕ್ಕು! ಇಂತಹ ಕೆಲ ಗಳಿಗೆಗಳನ್ನು ನಾನು ಕೆಲಸ ಮಾಡುವ ಕಡೆ ಎದುರಿಸಬೇಕಾಗಿ ಬಂದಾಗ ಇವರಿಗೆ ಬುದ್ದಿ ಕಲಿಸಬೇಕೆಂದು ನಾನು ಶೇಕ್ಸ್ ಪಿಯರ್ ಮಟ್ಟದ ಇಂಗ್ಲೀಷ್ ಬಳಸತೊಡಗಿದೆ.
ದಾವಣಗೆರೆ ಮೂಲದ ಆಸ್ಟ್ರೇಲಿಯಾ ನಿವಾಸಿ ಶ್ರೀಹರ್ಷ ಸಾಲೀಮಠ ಬರೆಯುವ ಹೊಸ ಅಂಕಣ

 

ಬಹುಷಃ ಒಂದೋ ಎರಡನೆಯ ತರಗತಿಯಲ್ಲಿದ್ದೆ. ಮೈಸೂರಲ್ಲಿ ಸ್ಕೌಟ್ ನ ಜಾಂಬುರೇಟ್ ನಡೆಯುತ್ತಿತ್ತು. ನಾನು ದಾವಣಗೆರೆಯ ಮುಂದಾಳಾಗಿದ್ದೆ. ಅಗಾಧ ವಿಸ್ತಾರದ ಬನುಮಯ್ಯ ಛತ್ರದಲ್ಲಿ ನಮ್ಮ ಮತ್ತು ರಾಜ್ಯದ ಬೇರೆಬೇರೆಡೆಯಿಂದ ಬಂದ ಸ್ಕೌಟ್ ವಟುಗಳ ವಸತಿಗೆ ವ್ಯವಸ್ಥೆಯಾಗಿತ್ತು. ಮೇಲ್ಛಾವಣಿಯಲ್ಲಿ ಒಂದು ಮೂಲೆಯಲ್ಲಿ ಮುದುರಿಕೊಂಡಿದ್ದ ಕೋಣೆಯಲ್ಲಿ ನಮಗೆ ವಸತಿಯಾಗಿತ್ತು. ಒಂದು ಗೋಡೆಗೆ ತಲೆ ಅಂಟಿಸಿಕೊಂಡು ನಾವು ಮಲಗುವ ಸಾಲಿದ್ದರೆ ಎದುರುಗಡೆ ಗೋಡೆಗೆ ಬೆಂಗಳೂರು ಕಡೆಯಿಂದ ಬಂದ ಹುಡುಗಿಯರ ಸಾಲಿತ್ತು. ಆ ಹುಡುಗಿಯರು ಸ್ಪಷ್ಟವಾಗಿ ಇಂಗ್ಲೀಷ್ ಮಾತನಾಡುತ್ತಿದ್ದರು. ಅವರ ಜೊತೆ ನಮ್ಮ ಮೇಷ್ಟ್ರು ಇಂಗ್ಲೀಷ್ ಮಾತನಾಡುತ್ತಿದ್ದರು. ಅವರೊಡನೆ ಇಂಗ್ಲೀಷ್ ಮಾತನಾಡುತ್ತಿದ್ದಂತೆ ನಮಗೆ ಮೇಷ್ಟ್ರ ಬಗೆಗಿದ್ದ ಗೌರವ ನೂರ್ಮಡಿಯಾಯಿತು. ನಮ್ಮ ಮೇಷ್ಟ್ರಿಗೆ ಪರಿಚಯವೇ ಇಲ್ಲದವರ ಜೊತೆಗೆ ಇಂಗ್ಲೀಷ್ ಮಾತನಾಡಲು ಬರುತ್ತದಲ್ಲ ಅಂತ!

ನಾನು ನಮ್ಮಪ್ಪನ ಬಗ್ಗೆ ಮೆಚ್ಚುಗೆ ಇಟ್ಟುಕೊಂಡಿದ್ದ ಅತಿ ಮುಖ್ಯ ಕಾರಣಗಳಲ್ಲೊಂದೆಂದರೆ ಅವರಿಗೆ ಇಂಗ್ಲೀಷ್ ಮಾತನಾಡಲು ಬರುತ್ತಿದ್ದುದು! ಒಮ್ಮೆ ಮಂಗಳೂರಿಗೆ ಪ್ರವಾಸಕ್ಕೆ ಅಂತ ಹೋದಾಗ ಅಲ್ಲಿನ ಬಂದರಿಗೆ ಭೇಟಿ ಕೊಟ್ಟಿದ್ದೆವು. ಆಗೆಲ್ಲ ಲಿಂಗನಮಕ್ಕಿಯ ಮಿಂಚು ಉತ್ಪಾದನಾ ಕೇಂದ್ರದಲ್ಲಿ, ಮಂಗಳೂರಿನ ಬಂದರುಗಳಲ್ಲಿ, ವಿಧಾನಸೌಧದಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶವಿರುತ್ತಿತ್ತು. ಬಂದರಿನೊಳಗೆ ಹೆಬ್ಬಡಗೊಂದನ್ನು ಪರಿಚಯಿಸಲು ನಮ್ಮ ಗೈಡ್ ನಮ್ಮನ್ನು ಕರೆದುಕೊಂಡು ಹೋದ. ಅದೊಂದು ಚೈನೀಸ್ ಹಡಗಾಗಿತ್ತು. ಕಿರುಗಣ್ಣಿನ ಕೆಂಪಿರುವೆಗಳಂತೆ ಶಿಸ್ತಿನಿಂದ ಕೆಲಸದಲ್ಲಿ ತೊಡಗಿದ್ದ ಚೈನೀಸರ ನಡುವೆ ನಾವು ಹಡಗನ್ನು ತಿರುಗುತ್ತಾ ಹಡಗಿನ ಪರಿಚಯ ಮಾಡಿಕೊಳ್ಳುತ್ತಿದ್ದೆವು. ನಮ್ಮ ಜೊತೆಗೆ ಬಂದಿದ್ದ ಮತ್ತೊಬ್ಬ ಪ್ರವಾಸಿಯೊಬ್ಬ ಒಬ್ಬ ಚೈನೀಸ್ ಕೆಲಸಗಾರನೊಡನೆ ಅದು ಹೆಂಗೋ ಪರಿಚಯ ಮಾಡಿಕೊಂಡು ಮಾತಿಗೆ ತೊಡಗಿದ್ದ.

ಆ ಚೈನಿಸ್ ಮನುಷ್ಯ ನಮ್ಮ ಗೆಳೆಯನ ಜೊತೆಗೆ ಅದೇನೋ ಮಾತನಾಡುತ್ತಿದ್ದ. ಈತ “ಯೆಸ್ಯೆಸ್..ಯೆಸ್…ಯೆಸ್… ಯೆಸ್. ಯೆಸ್” ಅಂತ ಆತನ ಮಾತುಗಳಿಗೆ ಸ್ವೀಕೃತಿ ಸೂಚಿಸುತ್ತಿದ್ದ. ಆಗ ಜಗತ್ತಿನ ಫಾರಿನ್ನರುಗಳೆಲ್ಲ ಇಂಗ್ಲೀಷನ್ನೇ ಹಾಗೂ ಮುಸ್ಲಿಂ ಜನರೆಲ್ಲ ಹಿಂದಿಯನ್ನೆ ಮಾತನಾಡುತ್ತಿದ್ದಾರೆ ಅಂತ ಅಂದುಕೊಂಡಿದ್ದ ನಾನು ಈ ಚೈನೀಸ್ ಮನುಷ್ಯ ಇಂಗ್ಲೀಷನ್ನೇ ಮಾತನಾಡುತ್ತಿದ್ದಾನೆ ಅಂತ ಊಹಿಸಿದೆ. ಈಗ ನಮ್ಮ ಗೆಳೆಯನ ಬಗ್ಗೆ ನನಗೆ ಭಯಂಕರ ಗೌರವ ಹುಟ್ಟಿಕೊಂಡಿತ್ತು. ಎಷ್ಟೋ ದಿನಗಳ ನಂತರ ನನಗೆ ಗೊತ್ತಾದದ್ದೇನೆಂದರೆ ಚೈನೀಸರು ಇಂಗ್ಲೀಷನ್ನೇ ಮಾತನಾಡುವುದಿಲ್ಲ ಅಂತ. ಎಂತೆಂತ ದೊಡ್ಡ ದೊಡ್ಡ ವಿಜ್ಞಾನಿಗಳಿಗಳಿಗೇ ಇಂಗ್ಲೀಷ್ ಮಾತನಾಡಲು ಬರುತ್ತಿರಲಿಲ್ಲ, ಇನ್ನು ಸಾಧಾರಣ ನೆಲ ಚೊಕ್ಕ ಮಾಡುವವನಿಗೆ ಬರಲು ಸಾಧ್ಯವಿತ್ತೆ? ನಮ್ಮ ಗೆಳೆಯ ಅವನು ಹೇಳಿದ್ದಕ್ಕೆಲ್ಲ ಸುಮ್ಮನೆ “ಯೆಸ್ ಯೆಸ್..” ಅನ್ನುತ್ತಿದ್ದ. ಅಸಲಿಗೆ ಇವನಿಗೂ ಇಂಗ್ಲೀಷ್ ಬರುತ್ತಿರಲಿಲ್ಲ! ಅನ್ಯಾಯವಾಗಿ ಅವನ ಬಗ್ಗೆ ಗೌರವ ಬೆಳೆಸಿಕೊಂಡೆ ಅಂತ ನನಗೆ ನಂತರ ವಿಷಾದವಾಗಿತ್ತು.

ಈ ಮೈಸೂರಿನ ಜಾಂಬುರೇಟ್ ನಲ್ಲಿ ಈ ಹುಡುಗಿಯರು ನಾನು ನನ್ನ ಜೀವನದಲ್ಲಿ ಅಲ್ಲಿಯವರೆಗೆ ಕೇಳಿದುದರಲ್ಲೇ ಅತ್ಯಂತ ಸುಂದರವಾಗಿ ಇಂಗ್ಲೀಷ್ ಮಾತನಾಡುತ್ತಿದ್ದರು. I am damn sure now.. ನಮ್ಮ ಮೇಷ್ಟ್ರು ಅವರ ಜೊತೆಗೆ ಬಟ್ಲರ್ ಇಂಗ್ಲೀಷ್ ನಲ್ಲೆ ಮಾತನಾಡುತ್ತಿದ್ದರು! ಯಾಕೆಂದರೆ ಅವರು ದೈಹಿಕ ಶಿಕ್ಷಣವನ್ನು ಕನ್ನಡ ಮಿಡಿಯಮ್ ನಲ್ಲಿ ಓದಿದ್ದವರು. ನಮ್ಮ ಇಂಗ್ಲೀಷ್ ಟೀಚರುಗಳೇ ತೊದಲು ಇಂಗ್ಲೀಷಲ್ಲಿ ಮಾತನಾಡುವಾಗ ಇವರು ಮಾತನಾಡುವುದು ಕಷ್ಟಸಾಧ್ಯವೇ ಸರಿ ಅಂತ ತೋರುತ್ತಿದೆ ನನಗೆ! ಕನ್ನಡ ಮಾತನಾಡಿಕೊಂಡು ಅಸಡ್ಡಾಳವಾಗಿ ಓಡಾಡಿಕೊಂಡಿದ್ದ ನಮ್ಮನ್ನು ನೋಡಿ ಅದೇನನ್ನಿಸಿತೊ, ನಮ್ಮ ಮೇಷ್ಟ್ರು ನಮ್ಮನ್ನು ಕರೆದು ಸಾಲಾಗಿ ನಿಲ್ಲಿಸಿ ‘ನೀವೆಲ್ಲ ಇನ್ನು ಮುಂದೆ ಇಂಗ್ಲೀಷ್ ಮಾತನಾಡಿ’ ಅಂತ ಅಪ್ಪಣೆಯಿತ್ತರು. ನನ್ನ ಗೆಳೆಯರೆಲ್ಲ ಈ ಅನಿರೀಕ್ಷಿತಹೊಸ ಸಂವಿಧಾನದಿಂದಾಗಿ ಗಾಭರಿ ಬಿದ್ದು ಹೋದರು! ಅಪ್ಪಣೆ ಕೇಳಿ ಜೋಲುಬಿದ್ದ ನಮ್ಮ ಮುದ್ದಾದ ಮುಸುಡಿಗಳನ್ನು ಕಂಡು ಕನಿಷ್ಟ ಪಕ್ಷ “ಟ್ರೈ” ಮಾಡಿ ಅಂತ ಮೇಷ್ಟ್ರು ಸ್ವಲ್ಪ ರಿಯಾಯಿತಿ ತೋರಿದರು. ಆದರೆ ನನ್ನ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿತ್ತು. ತಂಡದ ಮುಂದಾಳು ನಾನಾಗಿದ್ದುದರಿಂದ ಮತ್ತು ಶಾಲೆಯಲ್ಲಿ ಮೊದಲ ರ್ಯಾಂಕ್ ಪಡೆಯುತ್ತಿದ್ದುದವನಾದುದರಿಂದ ಅವರೆಲ್ಲರಿಗಿಂತ ಮೊದಲು ಇಂಗ್ಲೀಷನ್ನು ಮಾತನಾಡುವ ಜವಾಬ್ದಾರಿ ನನ್ನ ನಾಜೂಕು ಹೆಗಲುಗಳ ಮೇಲೆ ಬಿದ್ದಿತ್ತು.

ನಿಜ ಹೇಳಬೇಕೆಂದರೆ ಇಂಗ್ಲೀಷ್ ನ ಈಸು ವಾಸುಗಳು ಕೆಲ ಮತ್ತೊಂದಷ್ಟು ಶಬ್ದಗಳನ್ನು ಬಿಟ್ಟು ಮತ್ತೇನೂ ನಮಗಾರಿಗೂ ಬರುತ್ತಿರಲಿಲ್ಲ. ಆದರೆ ನನಗೆ ಮರ್ಯಾದೆ ಪ್ರಶ್ನೆಯಾದುದರಿಂದ ಎಲ್ಲ ಗೆಳೆಯರೆದುರಿಗೆ ಅತ್ಯಂತ ನಿಷ್ಕರುಣೆಯಿಂದ ಗೊತ್ತಿದ್ದಷ್ಟು ಪದಗಳ ಇಂಗ್ಲೀಷ್ ಝಾಡಿಸತೊಡಗಿದೆ. ಈ ನನ್ನ ರೌದ್ರಾವತಾರದಲ್ಲಿ ನನ್ನ ಬಾಯಿಂದ ಹೊರಡುವ ಪದಗಳಾವವು ಎಂಬುದು ಬಹುತೇಕ ನನ್ನ ಗಮನಕ್ಕೇ ಬರುತ್ತಿರಲಿಲ್ಲ! ನಾನು ಹಿಂಗೆ ಇಂಗ್ಲೀಷನ್ನು ಕಾರಿಕೊಳ್ಳುವಾಗ ಬೆಪ್ಪು ಮುಖದಿಂದ ನನ್ನ ಗೆಳೆಯರು ನನ್ನನ್ನೆ ಬಿರುಗಣ್ಣು ಬಿಟ್ಟು ನೋಡುತ್ತಿದ್ದರು. ನೀವೆಲ್ಲ ಇಂಗ್ಲೀಷ್ ತಿಳಿಯದ ಮುಠ್ಠಾಳರು ಅಂತ ಹಿಯಾಳಿಸುತ್ತಾ ಅವರಿಗೇನೋ ಉಪಕಾರ ಮಾಡುತ್ತಿರುವವನಂತೆ ಕನ್ನಡ ಮಾತನಾಡತೊಡಗುತ್ತಿದ್ದೆ. ಹೀಗೆ ನನ್ನ ಇಂಗ್ಲೀಷ್ ಅವತಾರ ಅರ್ಧ ದಿನದ ಮಟ್ಟಿಗೆ ನಡೆಯಿತು.

ಈ ಎಲ್ಲಾ ಸಮಯದಲ್ಲೂ ಅಕ್ಕಪಕ್ಕದಲ್ಲೆಲ್ಲೂ ಆ ಯಾವ ಇಂಗ್ಲೀಷ್ ಮಾತನಾಡುವ ಹುಡುಗಿಯರೂ ಇರದಂತೆ ಎಚ್ಚರಿಕೆ ವಹಿಸಿದ್ದೆ. ನನ್ನ ಪ್ರತಿಷ್ಟೆಯನ್ನು ಉಳಿಸಿಕೊಳ್ಳಲು ಇದೊಂದು ಸಾಹಸವನ್ನೇನೋ ಮಾಡಿ ಗೆದ್ದಿದ್ದೆ. ಸಂಜೆಗೆ ನನ್ನ ತಂಡದ ಗೆಳೆಯನೊಬ್ಬ ಬಂದು “ಹರ್ಷಾ.. ಆ ಹುಡುಗಿಯರಿದ್ದಾರಲ್ಲ. ಅವರೇನೋ ಕೇಳ್ತಿದಾರೆ. ಏನು ಕೇಳು ಬಾ” ಅಂದ.

ನಾನು ಗತ್ತಿನಿಂದ “ಏನಂತೆ ?” ಅಂದೆ.

“ಗೊತ್ತಿಲ್ಲ.. ಇಂಗ್ಲೀಷಲ್ಲಿ ಕೇಳ್ತಿದಾರೆ” ಅಂದ.

ನನಗೊಳ್ಳೆ ಪೀಕಲಾಟಕ್ಕಿಟ್ಟುಕೊಂಡಿತು. ಅವರು ನಮ್ಮ ಮೇಷ್ಟ್ರೊಂದಿಗೆ ಮಾತನಾಡುವಾಗ ಅವರು ಮಾತನಾಡಿದ್ದು ಏನೆಂದರೆ ಏನೂ ಗೊತ್ತಾಗುತ್ತಿರಲಿಲ್ಲ. ನೇರವಾಗಿ ಮಾತನಾಡಿದರೆ ಗ್ಯಾರಂಟಿ ಅವರ ಮುಂದೆ ಬೆಪ್ಪು ತಕ್ಕಡಿಯಾಗಿ ನಿಂತು ನನ್ನ ಕಣ್ಣಲ್ಲಿ ನಾನೇ ನಿಕೃಷ್ಟನಾಗಿ ಹೋಗಿಬಿಡುತ್ತಿದ್ದೆ. ಅಷ್ಟರಲ್ಲಿ “ಲೀಡರ್ಸ್ ರಿಪೋರ್ಟ್ ಟು ಕಿಚನ್..” ಅಂತ ಕರೆ ಬಂತು. ನಾನು ಅದನ್ನೇ ನೆಪ ಹೇಳಿ ತಪ್ಪಿಸಿಕೊಂಡೆ.

ಅವತ್ತು ರಾತ್ರಿ ಎಲ್ಲರೂ ಮಲಗಿದ್ದಾಗ ನಡುರಾತ್ರಿಯಲ್ಲಿ ನನಗೆ ಇದ್ದಕ್ಕಿದ್ದಂತೆ ಉಸಿರಾಡಲು ತೊಂದರೆಯಾಗತೊಡಗಿತು. ಗಂಟಲು ಕಟ್ಟಿದಂತಾಗಿ ಕೆಮ್ಮು ಬರತೊಡಗಿತು. ಅಕ್ಕಪಕ್ಕದಲ್ಲಿ ನನ್ನ ಗೆಳೆಯರೆಲ್ಲ ಕುಂಭಕರ್ಣ ನಿದ್ದೆಯಲ್ಲಿ ತೊಡಗಿದ್ದರು. ಪಕ್ಕದವನನ್ನು ಜೋರಾಗಿ ಚಿವುಟಿದರೂ ಆತ ಎಚ್ಚರಗೊಳ್ಳಲಿಲ್ಲ. ನನ್ನ ಕೆಮ್ಮು ಜೋರಾಗುತ್ತಲೇ ಇತ್ತು. ನನ್ನ ಕೆಮ್ಮಿನ ಶಬ್ದ ಕೇಳಿದ ಎದುರು ಗೋಡೆಗೆ ತಲೆಗೊಟ್ಟು ಮಲಗಿದ್ದ ಆ ಇಂಗ್ಲೀಷ್ ಮಾತನಾಡುತ್ತಿದ್ದ ಹುಡುಗಿಯರಲ್ಲಿ ಒಂದಿಬ್ಬರು ಎದ್ದು ಬಂದರು. ಬಂದು “ವಾಟ್ ಹ್ಯಾಪನ್ಡ್ ? ” ಅಂತ ಕೇಳಿದರು.

ನನಗೆ ಹೆದರಿಕೆಯಾಯಿತು. ಮಾತನಾಡಲೂ ಆಗದಷ್ಟು ಒತ್ತರಿಸಿ ಕೆಮ್ಮು ಬರುತ್ತಿತ್ತು. ಒಬ್ಬ ಹುಡುಗಿ ಬಂದು ಬೆನ್ನು ಸವರತೊಡಗಿದಳು. ನನಗೆ ರೋಮಾಂಚನವಾಯಿತು! ಹುಡುಗಿ ಮುಟ್ಟಿದಳು ಅಂತ ಅಲ್ಲ. ನಮ್ಮಷ್ಟೇ ವಯಸ್ಸಿನವರಾಗಿದ್ದ ಅಷ್ಟು ಸ್ಪಷ್ಟ ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದ ಅವರು ಧರೆಗಿಳಿದು ಬಂದ ದೈವಕನ್ನಿಕೆಯರಿಗಿಂತ ಕಡಿಮೆಯಾಗಿ ನಮಗೆ ಕಾಣುತ್ತಿರಲಿಲ್ಲ. ಸಾಕ್ಷಾತ್ ವಿದ್ಯಾಧಿದೇವತೆಯೇ ಬಂದು ಬೆನ್ನು ಸವರಿದಂತಾಗಿತ್ತು ನನಗೆ! ಬಹುಷಃ ನನಗೆ ಇಂಗ್ಲೀಷ್ ಮಾತನಾಡಲು ಬರುವುದಿಲ್ಲ ಅಂತ ಅವರಿಗೆ ತಿಳಿಯಿತೇನೋ “ಏನು ಆಗ್ತಾ ಇದೆ?” ಅಂತ ಕೇಳಿದರು.

ಆ ಕನ್ನಡವಾದರೂ ನಮ್ಮ ಕನ್ನಡದ ತರ ಇರಲಿಲ್ಲ. ಸಿನಿಮಾದಲ್ಲಿ ಮಾತನಾಡುವ ಕನ್ನಡದ ತರಾನೂ ಇರಲಿಲ್ಲ. ನಮ್ಮ ಪಠ್ಯಪುಸ್ತಕದಲ್ಲಿ ಬರೆದಿರುತ್ತಲ್ಲ, ಆ ರೀತಿಯ ಕನ್ನಡದಥರ ಇತ್ತು! ಮತ್ತೆ “ಏನಾಗ್ತಿದೆ..” ಅಂತ ಸಿಹಿ ಸಿಹಿ ಕನ್ನಡದಲ್ಲಿ ಕೇಳಿದರು. ನಾನು ಕೆಮ್ಮುವುದನ್ನು ಮುಂದುವರಿಸಿದ್ದೆ.

“ವಾಮಿಟ್ ಬರ್ತಾ ಇದೆಯಾ?” ಅಂತ ಕೇಳಿದರು.

ನನಗೆ “ವಾಮಿಟ್” ಅಂದರೇನು ಅಂತ ಗೊತ್ತಿರಲಿಲ್ಲ. ಸುಮ್ಮನೆ ತಲೆ ಅಲ್ಲಾಡಿಸುತ್ತಾ ಮತ್ತಷ್ಟು ಕೆಮ್ಮತೊಡಗಿದೆ. ಗಲಿಬಿಲಿಗೊಂಡ ವಿದ್ಯಾಧಿದೇವತೆಗಳು “ಏ ವಾಮಿಟ್ ಅಂದರೆ ಕನ್ನಡದಲ್ಲಿ ಏನೇ?” ಅಂತ ತಮ್ಮಲ್ಲೇ ಚರ್ಚಿಸಿದರು.

ತಮ್ಮ ಬಾಟಲಿಯಲ್ಲಿದ್ದ ನೀರು ತಂದು ಕೊಟ್ಟರು. ನಾನು ಬಾಟಲಿ ಎತ್ತಿ ಕುಡಿಯಲು ಹೋದಾಗ “ಪರವಾಗಿಲ್ಲ ಕಚ್ಚಿ ಕುಡಿ” ಅಂತ ಹೇಳಿದರು. ಒಬ್ಬ ವಿದ್ಯಾಧಿದೇವತೆ ಬೆನ್ನು ಸವರುತ್ತಲೇ ಇದ್ದಳು. ನೀರು ಕುಡಿದ ಮೇಲೆ ಸ್ವಲ್ಪ ಸಮಾಧಾನವಾಯಿತು. “ಈಗ ಪರವಾಗಿಲ್ಲವಾ? ಚನ್ನಾಗಿ ಅನ್ನಿಸ್ತಿದೆಯಾ?” ಅಂತ ಕೇಳಿದರು.

ನಿಜ ಹೇಳಬೇಕೆಂದರೆ ಇಂಗ್ಲೀಷ್ ನ ಈಸು ವಾಸುಗಳು ಕೆಲ ಮತ್ತೊಂದಷ್ಟು ಶಬ್ದಗಳನ್ನು ಬಿಟ್ಟು ಮತ್ತೇನೂ ನಮಗಾರಿಗೂ ಬರುತ್ತಿರಲಿಲ್ಲ. ಆದರೆ ನನಗೆ ಮರ್ಯಾದೆ ಪ್ರಶ್ನೆಯಾದುದರಿಂದ ಎಲ್ಲ ಗೆಳೆಯರೆದುರಿಗೆ ಅತ್ಯಂತ ನಿಷ್ಕರುಣೆಯಿಂದ ಗೊತ್ತಿದ್ದಷ್ಟು ಪದಗಳ ಇಂಗ್ಲೀಷ್ ಝಾಡಿಸತೊಡಗಿದೆ. 

ನಾನು ಹೌದೆಂಬಂತೆ ತಲೆಯಾಡಿಸಿದೆ. ಸರಿ ಅಂತ ಮಾತಾಡಿಕೊಂಡು,
“ಈಗ ನೀನು ಮಲಕ್ಕೋ..! ನಾವು ಇಲ್ಲೇ ಎದುರಿಗೆ ಮಲಗಿರ್ತೇವೆ. ಮತ್ತೆ ಏನಾದರೂ ತೊಂದರೆ ಆದರೆ ನಮ್ಮನ್ನು ಎಬ್ಬಿಸು ಆಯ್ತಾ? ನನ್ನ ಹೆಸರು ಲತಾ ಅಂತ .. ಇವಳು ರಾಣಿ ಅಂತಾ.. ಅಲ್ಲಿ ಕೂತಿದ್ದಾಳಲ್ಲ ಅವಳು ನಮ್ಮ ಲೀಡರು ಸರಿತಾ ಅಂತ.. ಆಯ್ತಾ? ಏನಾದ್ರೂ ಬೇಕಾದ್ರೆ ನಮ್ಮನ್ನು ಯಾರನ್ನಾದರೂ ಎಬ್ಬಿಸು ಆಯ್ತಾ?” ಅಂತ ಅಕ್ಕರೆಯಿಂದ ಹೇಳಿ ತಮ್ಮ ತಮ್ಮ ಹಾಸಿಗೆಯನ್ನು ತೋರಿಸಿದರು. ನಾನು ಸರಿ ಎಂಬಂತೆ ಸೂಚಿಸಿ ಮತ್ತೆ ತಲೆ ಅಲ್ಲಾಡಿಸಿದೆ.

ನಾನು ಅದೆಂತಹ ಮಬ್ಬ ಮತ್ತು ಕೃತಘ್ನನಾಗಿದ್ದೆನೆಂದರೆ ಅವರಿಗೆ ಥ್ಯಾಂಕ್ಸ್ ಕೂಡ ಹೇಳಲಿಲ್ಲ. ನನಗಾಗಿ ಅವರು ಲೈಟ್ ಆಫ್ ಮಾಡದೆ ತುಂಬ ಹೊತ್ತುಕೊಂಡು ಮಲಗಿದರು. ಇಷ್ಟೆಲ್ಲಾ ನಡೆದರೂ ನನ್ನ ಜೊತೆಗಾರೂ ಗಂಡಸು ಖಡವಾಗಳಲ್ಲಿ ಒಬ್ಬರೂ ಎದ್ದೇಳಲೇ ಇಲ್ಲ! ಭಾಷೆ ಯಾವುದಾದರಿರಲಿ ನೆಲ ಯಾವುದಾದರಿರಲಿ ಹೆಣ್ಣುಮಕ್ಕಳ ತಾಯಿಹೃದಯ ಎಂಬುದು ಸರ್ವಕಾಲಿಕ ಮತ್ತು ಸಾರ್ವತ್ರಿಕ ಸತ್ಯ! ಈಗ ಆ ಹುಡುಗಿಯರು ದೇಶವಿದೇಶಗಳಲ್ಲಿ ನೆಲೆಸಿರಬಹುದು. ಮದುವೆಯಾಗಿ ತಮ್ಮ ಮಕ್ಕಳನ್ನು ಬೆಳೆಸುತ್ತಿರಬಹುದು. ಬಹುಷಃ ನನ್ನ ಎದುರಿಗೆ ಬಂದರೆ ನಾವು ಒಬ್ಬರನ್ನೊಬ್ಬರು ಗುರುತಿಸಲಿಕ್ಕಿಲ್ಲ. ಅವರಿಗೆ ಇದೆಲ್ಲ ನೆನಪೂ ಇರಲಿಕ್ಕಿಲ್ಲ. ಅವರು ಎಲ್ಲೇ ಇರಲಿ ಹೇಗೇ ಇರಲಿ ಅವರ ಹೊಟ್ಟೆ ತಣ್ಣಗಿರಲಿ! ಅವರನ್ನು ಈ ಬರಹದಲ್ಲಿ ನೆನೆಸಿಕೊಳ್ಳುವುದೊಂದೇ ನಾನು ಅವರಿಗೆ ಸಲ್ಲಿಸಬಹುದಾದ ಕೃತಜ್ಞತೆ.

ಇಂಗ್ಲೀಷೆಂಬುದು ಒಂದು ಕಾಲದಲ್ಲಿ ಯಾವ ಪರಿ ಕಾಡಿದ್ದ ಭೂತ ಎಂಬುದನ್ನ ಈವಾಗ ನೆನಸಿಕೊಂಡರೆ ನಗು ಬರುತ್ತದೆ. ಇಷ್ಟು ದೇಶಗಳನ್ನು ಸುತ್ತಿದ ಮೇಲೆ ಕಂಡುಕೊಂಡದ್ದೇನೆಂದರೆ ವಿಶ್ವದ ಅತ್ಯುತ್ತಮ ಬುದ್ಧಿವಂತ ಜನರಿಗಾರಿಗೂ ಇಂಗ್ಲೀಷ್ ನೆಟ್ಟಗೆ ಬರುವುದಿಲ್ಲ! ಸ್ವತಃ ಬ್ರಿಟಿಷರೇ ಹೇಳುವಂತೆ ಇಂಗ್ಲೀಷನ್ನು ಅಧಿಕೃತ ಮತ್ತು ಶಿಕ್ಷಣದ ಮಾಧ್ಯಮವಾಗಿ ಹೊಂದಿರುವ ಇಂಗ್ಲೀಷನ್ನೇ ತಮ್ಮ ಮಾತೃಭಾಷೆಯಾಗಿ ಪಡೆದಿರುವ ಅಮೇರಿಕಾ, ಆಸ್ಟ್ರೇಲಿಯಾದಂತಹ ದೇಶಗಳ ಜನರಿಗೂ ಸರಿಯಾಗಿ ಇಂಗ್ಲೀಷ್ ಬರುವುದಿಲ್ಲ. ಅದಾಗ್ಯೂ ಕನ್ನಡ ಮಾಧ್ಯಮದಲ್ಲಿ ಓದಿದವನೊಬ್ಬ ತನ್ನ ಇಂಗ್ಲೀಷ್ ಭಾಷೆಯಲ್ಲಿ ವಿಷಯ ಮಂಡನೆಗಾಗಿ ಇಂಗ್ಲೀಷ್ ಜನರಿಂದಲೇ ಮೆಚ್ಚುಗೆ ಪಡೆದು ಅವರಿಂದ ಬಹುಮಾನ ಸ್ವೀಕರಿಸಿದ್ದು ದೊಡ್ಡ ಅಚ್ಚರಿಯಾಗಿ ನನಗೆ ಕಾಣುವುದಿಲ್ಲ. ಏಕೆಂದರೆ ಇಂಗ್ಲೀಷ್ ಎಂಬುದು ಒಂದು ಭಾಷೆಯಷ್ಟೇ! ಸತತವಾಗಿ ಮಾತನಾಡುತ್ತಿದ್ದರೆ ತಾನಾಗಿಯೇ ಸುಲಲಿತವಾಗಿ ಬಾಯಿಯಿಂದ ಹೊರಡುತ್ತದೆ. ಆದರೆ ಅಚ್ಚರಿಯೆಂದರೆ ಇಂಗ್ಲೀಷ್ ಮಯ ದೇಶಗಳಲ್ಲಿ ಸಾಕಷ್ಟು ಜನರಿಗೆ ಇಂಗ್ಲೀಷ್ ಕಲಿಯುವ ಸಂದರ್ಭವೇ ಬರುವುದಿಲ್ಲ. ಸಿಡ್ನಿಯಲ್ಲಿ ನೆಲೆಸಿರುವ ಮುಕ್ಕಾಲು ಪಾಲು ಚೈನೀಸ್ ಜನಗಳು ಕಳೆದ ನಲವತ್ತು ವರ್ಷಗಳಿಂದ ಇಲ್ಲಿ ನೆಲೆಸಿದ್ದರೂ ಇಂಗ್ಲೀಷ್ ಮಾತನಾಡುವುದನ್ನು ಕಲಿತಿಲ್ಲ.

ಹೀಗೆ ಕೆಲತಿಂಗಳ ಹಿಂದೆ ನನಗೆ ಕಂಪನಿಯ ಪ್ರೆಸೆಂಟೇಶನ್ ಒಂದರಲ್ಲಿ ಬೆಸ್ಟ್ ಪ್ರೆಸೆಂಟೇಶನ್ ಅಂತ ಬಹುಮಾನ ಬಂತು. ಸ್ವತಃ ಇಂಗ್ಲೀಷರೇ ಭಾಗವಹಿಸಿದ್ದ ಪ್ರೆಸೆಂಟೇಶನ್ ಗಳಲ್ಲಿ ನನಗೆ ಮೊದಲ ಬಹುಮಾನ ಬಂದದ್ದು ಅವರಿಗೆಲ್ಲ ಅಚ್ಚರಿಯಾಗಿತ್ತು. ನನಗೆ ಬಹುಮಾನ ಘೋಷಣೆಯಾದಾಗ ಮೊಟ್ಟಮೊದಲು ಜ್ಞಾಪಕಕ್ಕೆ ಬಂದದ್ದೇ ಗಂಗಾಧರ ಭಟ್ಟರು ಎಂಬ ನಮ್ಮ ಇತಿಹಾಸದ ಮೇಸ್ಟ್ರು. ಇಂಗ್ಲೀಷಲ್ಲಿ ವಾಕ್ಯದ ಮೊದಲ ಅಕ್ಷರವಾಗಿ ಕ್ಯಾಪಿಟಲ್ ಲೆಟರ್ ಗಳನ್ನು ಬಳಸುತ್ತಾರಷ್ಟೇ. ಇದಕ್ಕೆ ಇನ್ನೂ ಕೆಲವು ನಿಯಮಗಳಿವೆ.

ನಾಮಪದ ಇದ್ದಾಗಲೂ ಕ್ಯಾಪಿಟಲ್ ಲೆಟರ್ ಬಳಸಲಾಗುತ್ತದೆ. ಹಾಗೆಯೇ ವಾಕ್ಯದ ನಡುವೆ he ಪದಕ್ಕೆ ಬದಲು He ಅಂದರೆ H ಅನ್ನು ಕ್ಯಾಪಿಟಲ್ ಆಗಿ ಬಳಸಿದರೆ ಅದು ದೇವರಿಗೆ ಬಳಸಿದ ಹಾಗಾಗುತ್ತದಂತೆ. ಅಂದರೆ ದೇವರನ್ನು ಕುರಿತು he ಬಳಸಬೇಕಾದರೆ ಮೊದಲಕ್ಷರ H ಕ್ಯಾಪಿಟಲ್ ಆಗಿರಬೆಕು. ನಾನು ತಿಂಗಳ ಟೆಸ್ಟ್ ನಲ್ಲಿ ಯಾವುದೋ ಉತ್ತರ ಬರೆಯುವಾಗ ಅಕಸ್ಮಾತಾಗಿ ಅರಿವಿಲ್ಲದೆ ಹೀಗೆ ಕ್ಯಾಪಿಟಲ್ H ಬಳಸಿ He ಅಂತ ಬಿಟ್ಟಿದ್ದೆ. ಟೆಸ್ಟ್ ನ ಪೇಪರ್ ಗಳನ್ನು ನಮಗೆ ಕೊಡುವಾಗ ನನ್ನ ಪೇಪರ್ ಅನ್ನು ತಮ್ಮ ಕೈಗೆ ಎತ್ತಿಕೊಂಡು ಗಂಗಾಧರ ಭಟ್ಟರು “ಸಾಲಿಮಠ ಎದ್ದೇಳಪ್ಪಾ!” ಅಂತ ವ್ಯಂಗ್ಯವಾಗಿ ಕರೆದು ಎಬ್ಬಿಸಿದರು. ನಾನು ಎದ್ದುನಿಂತೆ. ಬರೀ ಅದೊಂದು ತಪ್ಪನ್ನು ಹಿಡಿದುಕೊಂಡು ಸರಿಯಾಗಿ ನಲವತ್ತು ನಿಮಿಷಗಳ ಕಾಲ ನನ್ನನ್ನು ಎಲ್ಲರ ಎದುರಿಗೆ ಟ್ರೋಲ್ ಮಾಡಿದರು. ಆ ಇಡಿಯ ಪಿರಿಯಡ್ಡನ್ನು ಅವರು ನನ್ನ ಟೀಕೆಗೇ ಮೀಸಲಾಗಿಟ್ಟಂಗಿತ್ತು.

“ಏನಪ್ಪಾ! ಜಾರ್ಜ್ ವಾಷಿಂಗ್ಟನ್ ಅನ್ನು ಅಮೇರಿಕಾದವರು ದೇವರು ಅಂತ ಕರೀತಾರೋ ಇಲ್ಲವೋ, ನೀನು ದೆವರು ಅಂತ ಕರೆದುಬಿಟ್ಟೆ. ಗ್ರೇಟ್ ಕಣಪ್ಪಾ ನೀನು ಅಮೇರಿಕದವರಿಗೆ ತಮ್ಮ ದೇಶದ ಸ್ಥಾಪಕನ ಬಗ್ಗೆ ಇಲ್ಲದ ಅಭಿಮಾನ ನಿನಗೆ ಇದೆ.” ಅಂತ ವಿವಿಧ ವ್ಯಂಗ್ಯಗಳನ್ನು ಬಳಸಿ ಅಣಕವಾಡುತ್ತಿದ್ದರೆ ಕುಳಿತ ಹುಡುಗರೆಲ್ಲ ಬಿದ್ದು ಬಿದ್ದು ನಗುತ್ತಿದ್ದರು. ನಾನು ಎಲ್ಲರ ನಡುವೆ ‘ಈ ದೇಹ ನನ್ನದಲ್ಲ’ ಎಂಬ ಭಾವದೊಂದಿಗೆ ಅವರ ಟ್ರೋಲನ್ನು ಸುಖಿಸುತ್ತಾ ನಿಂತಿದ್ದೆ. ಕನ್ನಡ ಮಾಧ್ಯಮದಿಂದ ಬಂದ ನನಗೆ ಈ ರೀತಿಯ ಗುರಿಯಾಗಿ ಬಳಕೆಯಾಗುವ ಅಭ್ಯಾಸವಾಗಿ ಹೋಗಿತ್ತು. ಆದರೆ ನನ್ನಲ್ಲಿದ್ದ ಒಂದು ಪ್ರಜ್ಞೆಯೆಂದರೆ ನಮ್ಮ ಮೇಷ್ಟ್ರು ಮುಂದಿನ ಜೀವನ ಮೇಷ್ಟ್ರಾಗಿಯೇ ಕಳೆಯಲಿದ್ದಾರೆ. ನನಗೆ ಇಡಿಯ ಜೀವನ ಬಾಕಿ ಇದೆ. ನನಗೆ ಏನು ಬೇಕಾದರೂ ಆಗುವ ಅವಕಾಶ ಇದೆ. ಹಾಗಾಗಿ ಇಂತಹದ್ದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೆ.

ನನಗೆ ಬಹುಮಾನ ಪಡೆದ ಕ್ಷಣಕ್ಕೆ ಗಂಗಾಧರ ಭಟ್ಟರು ನೆನಪಿಗೆ ಬಂದದ್ದೇಕೆಂದರೆ ಇದು ಹೀಗಲ್ಲ ಹೀಗೆ ಅಂತ ಒಂದು ಮಾತು ಹೇಳಿದ್ದರೆ ಸಾಕಿತ್ತು, ತಿದ್ದಿಕೊಳ್ಳುತ್ತಿದ್ದೆ. ಅಷ್ಟು ತೀಕ್ಷ್ಣ ಧಾಳಿ ಮಾಡುವ ಹಾಗು ನಲವತ್ತು ನಿಮಿಷ ಮೀಸಲಿಡುವ ಅವಶ್ಯಕತೆ ಏನಿತ್ತೆಂಬುದು ಇಂದಿಗೂ ಅರ್ಥವಾಗುತ್ತಿಲ್ಲ. ಅವರ ಈ ಧಾಳಿ ವಿದ್ಯಾರ್ಥಿಯಲ್ಲಿ ಕೀಳರಿಮೆಯನ್ನು ಬಿತ್ತುವ ಆತ್ಮಘಾತುಕ ಅಂಶವಾಗಬಹುದಿತ್ತು. ಈಗಲೂ ನನಗೆ ಗಂಗಾಧರ ಭಟ್ಟರ ಮೇಲೆ ಯಾವುದೇ ಸಿಟ್ಟಿಲ್ಲ. ಎದುರಿಗೆ ಸಿಕ್ಕರೆ ಈ ವಿಷಯದ ಬಗ್ಗೆ ಪ್ರಸ್ಥಾಪಿಸದೇ ಅಷ್ಟೇ ಗೌರವದಿಂದ ಮಾತನಾಡುತ್ತೇನೆ. ಅವರ ಈ ವರ್ತನೆಯಿಂದ ನನ್ನಲ್ಲಿ ಯಾವ ಛಲವೂ ಹುಟ್ಟಲಿಲ್ಲ, ಕೀಳರಿಮೆಯೂ ಬೆಳೆಯಲಿಲ್ಲ. ಆದರೆ ಆ ಘಟನೆ ಒಂದು ವ್ಯಕ್ತಿತ್ವಕ್ಕೆ ಮಾಡಬಹುದಾಗಿದ್ದ ಹಾನಿಯನ್ನು ನೆನೆಸಿಕೊಂಡರೆ ದಿಗಿಲೆನಿಸುತ್ತದೆ.

ವಿದೇಶದಲ್ಲಿ ಕೆಲಸ ಮಾಡಲು ಶುರು ಮಾಡಿದಾಗ ಬಣ್ಣದ ಕಾರಣದಿಂದಾಗಿ ಕೊಂಚ ಹಿಂದಕ್ಕೆ ತಳ್ಳಿದ್ದಿದೆ. ಬಹಳ ಬಿಗಿಯಾದ ಕಾನೂನುಗಳು ಇತ್ತೀಚೆಗೆ ವರ್ಣಬೇಧ ಮಾಡುವವರು ಮೊದಲಿನಂತೆ ನೇರವಾಗಿ ಮಾಡದೆ ಸುತ್ತುಬಳಸು ಮಾರ್ಗವನ್ನು ಅನುಸರಿಸುತ್ತಾರೆ. ಒಮ್ಮೆ ಸೈಕಲ್ ಕೊಳ್ಳಲು ಹೋಗಿದ್ದಾಗ ನಾನು ಒಂದು ಸೈಕಲ್ಲನ್ನು ತೊರಿಸಿ “ಇದು ಎಷ್ಟು” ಅಂತ ಕೇಳಿದೆ. ಸೇಲ್ಸ್ ಮನ್ ಬಿಳಿಯ. ಆತ ಬೆಲೆ ಎಷ್ಟು ಅಂತ ಹೇಳದೆ “ಅದು ದುಬಾರಿ” ಎಂದಷ್ಟೇ ಹೇಳಿದ. ನೀನು ಕಂದುಬಣ್ಣದವನು ನಿನಗೆ ಅದನ್ನು ಕೊಳ್ಳುವ ಯೋಗ್ಯತೆಯಿಲ್ಲ ಎಂದು ಆತ ಪರೋಕ್ಷವಾಗಿ ಹೇಳಿದ್ದ. ಅಸಲಿಯತ್ತೆಂದರೆ ನಾನು ಕಟ್ಟುವ ತೆರಿಗೆಯೇ ಆತನ ಆದಾಯಕ್ಕಿಂತ ಹೆಚ್ಚಿತ್ತು! ಅದು ಬಿಳಿ ಬಣ್ಣದವನ ಬಣ್ಣದ ಸೊಕ್ಕು! ಇಂತಹ ಕೆಲ ಗಳಿಗೆಗಳನ್ನು ನಾನು ಕೆಲಸ ಮಾಡುವ ಕಡೆ ಎದುರಿಸಬೇಕಾಗಿ ಬಂದಾಗ ಇವರಿಗೆ ಬುದ್ದಿ ಕಲಿಸಬೇಕೆಂದು ನಾನು ಶೇಕ್ಸ್ ಪಿಯರ್ ಮಟ್ಟದ ಇಂಗ್ಲೀಷ್ ಬಳಸತೊಡಗಿದೆ. ಈ ಮಟ್ಟದ ಇಂಗ್ಲೀಷನ್ನು ಅಭಿವೃದ್ಧಿ ಪಡಿಸಿಕೊಳ್ಳಲು ನಾನು ಸಾಕಷ್ಟು ಪುಸ್ತಕಗಳನ್ನು ಓದಿ ಭಾಷೆಯ ಆಳ ಹರಿವುಗಳನ್ನು ಅರ್ಥ ಮಾಡಿಕೊಳ್ಳಬೇಕಾಯಿತು. ನಾನು ಬಳಸುತ್ತಿದ್ದ ಇಂಗ್ಲೀಷ್ ಭಾಷೆ ಅದೆಷ್ಟು ಮೇಲ್ದರ್ಜೆಯದಾಗಿ ಹೋಗಿತ್ತೆಂದರೆ ಮೇಲ್ ಗಳನ್ನು ಓದಿದವರು ಪದೇ ಪದೇ ನನ್ನ ಬಳಿ ಬಂದು ವಿವರಗಳನ್ನು ಕೇಳಿ ತಿಳಿದುಕೊಂಡು ಹೋಗತೊಡಗಿದರು. ನಾನು ತಂಡದ ನಾಯಕನಾಗಿ ಭಡ್ತಿ ಪಡೆದು ಹೆಚ್ಚಿನ ಜನರೊಡನೆ ಸಂವಹನಕ್ಕೆ ತೊಡಗಿದಂತೆ ಎಲ್ಲರಿಗೂ ಇದೊಂದು ದೊಡ್ಡ ತಲೆನೋವಾಗಿ ಪರಿಣಮಿಸತೊಡಗಿತು.

ಬೇರೆ ದೇಶದ ಕ್ಲೇಂಟ್ ಗಳೂ ಇದರ ಬಗ್ಗೆ ದೂರತೊಡಗಿದರು. ಕಡೆಗೆ ಒಂದು ಮ್ಯಾನೇಜ್ ಮೆಂಟ್ ಮೀಟಿಂಗನ್ನು ಕರೆದು ಮೇಲ್ ಗಳಿಗಾಗಿ ಯಾವ ರೀತಿಯ ಭಾಷೆಗಳನ್ನು ಬಳಸಬೇಕೆಂದು ಗೊತ್ತುವಳಿಯ ಡ್ರಾಫ್ಟನ್ನು ತಯಾರು ಮಾಡಬೇಕೆಂದು ಒಂದು ಸಮಿತಿ ರಚಿಸಿ ಅವರು ಸೂಚಿಸಿದ ಗೊತ್ತುವಳಿಗಳ ಪ್ರಕಾರ ಮೇಲ್ ಇರಬೇಕೆಂದು ಕಂಪನಿಯ ಎಲ್ಲರಿಗೂ ಸೂಚಿಸಲಾಯಿತು. ಈ ಮ್ಯಾನೇಜ್ ಮೆಂಟ್ ಮೀಟಿಂಗ್ ನಲ್ಲಿ ಮುಖ್ಯವಾಗಿ ನನ್ನ ಮೇಲ್ ಗಳ ಬಗ್ಗೆಯೇ ಚರ್ಚಿಸಲಾಯಿತು ಅಂತ ನಂತರ ಗೊತ್ತಾಯಿತು. ಬಿಳಿಯರಿಗೆ ಬುದ್ದಿ ಕಲಿಸಬೇಕೆಂದುಕೊಂಡ ನನ್ನ ಆಸೆ ಪೂರೈಸಿತ್ತು.

ತುಳಿತಗಳನ್ನು ಕೀಳರಿಮೆಗಳನ್ನು ಹಿಮ್ಮೆಟ್ಟಿಸಲು ಶಿಕ್ಷಣವೇ ದೊಡ್ಡ ಆಯುಧ ಅಂತ ಸಾಕಷ್ಟು ಬಾರಿ ಕೇಳಿದ್ದೇವೆ. ನಾನೂ ಅದನ್ನೇ ಹೇಳುತ್ತಾ ಬಂದಿದ್ದೇನೆ. ನನ್ನ ಜೀವನದಲ್ಲೇ ನಾನು ಜಗತ್ತಿನ ಅತಿದೊಡ್ಡ ಸಾಮಾಜಿಕ ಬಂಡವಾಳವನ್ನು ಹೊಂದಿದ ಸಮುದಾಯದ ಮುಂದೆ ನಾನು ತಲೆಯೆತ್ತಿ ನಿಲ್ಲು ಸಾಧ್ಯವಾಗಿದ್ದೇ ಈ ಶಿಕ್ಷಣದಿಂದ.

ಅಡಿಲೇಡ್ ನ ವಿಮಾನ ನಿಲ್ದಾಣದಲ್ಲಿ ಒಮ್ಮೆ ನನ್ನ ಗೇಟ್ ತೆರೆಯುವ ದಾರಿ ಕಾಯುತ್ತಾ ಕುಳಿತಿದ್ದಾಗ ನ್ಯೂಜಿಲೆಂಡ್ ನ ಕಡೆಯಿಂದ ಬಂದ ಮಹಿಳೆಯೊಬ್ಬಳು ನನ್ನನ್ನು ಮಾತಿಗೆಳೆದಳು. ಆಕೆಯ ಜೊತೆ ದೇಶಾವರಿ ಮಾತನಾಡುತ್ತ ನಾವು ಹೊರಡಲನುವಾದಾಗ “ನಾನು ನಿನ್ನ ರೀತಿಯ ಇಂಗ್ಲೀಷ್ ಮಾತನಾಡುವುದನ್ನು ಎಲ್ಲೂ ಕೇಳಿಲ್ಲ. ಒಂದು ರೀತಿ ನೀನು ಸಹಜವಾಗಿ ಮಾತನಾಡುವುದೇ ಕಾವ್ಯಮಯವಾಗಿದೆ. ಇಷ್ಟು ವೈವಿಧ್ಯಮಯವಾಗಿ ವಾಕ್ಯ ಕಟ್ಟುವುದು ನಾನು ಈ ಮೊದಲು ಕಂಡಿಲ್ಲ.” ಅಂದಳು. ಅದಕ್ಕೆ ನಾನು “ನನ್ನ ತಾಯಿ ನುಡಿ ಕನ್ನಡ. ನಾನು ಕನ್ನಡದಲ್ಲೇ ಯೋಚಿಸುತ್ತೇನೆ. ವಾಕ್ಯಗಳು ನನ್ನ ಮೆದುಳಲ್ಲಿ ಕನ್ನಡದಲ್ಲೇ ರೂಪುಗೊಳ್ಳುತ್ತವೆ. ನಾನು ಅದನ್ನು ಇಂಗ್ಲೀಷಿಗೆ ಭಾಷಾಂತರಿಸುತ್ತೇನೆ.” ಎಂದು ವಿವರಿಸಿದೆ.

ಹಾಗೆ ನೋಡಿದರೆ ನಾನು ಅವಳೊಡನೆ ವಿಶೇಷವಾಗಿ ಏನೂ ಮಾತನಾಡಿರಲಿಲ್ಲ. ಸಹಜವಾಗಿ ನಾನು ಕನ್ನಡದಲ್ಲಿ ಬಂದ ವಾಕ್ಯಗಳನ್ನೇ ಭಾಷಾಂತರಿಸಿ ಇಂಗ್ಲೀಷಿನಲ್ಲಿ ಸಂವಾದಿಸಿದ್ದೆ. “ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್” ಎಂಬುದರ ನಿಜವಾದ ಅರ್ಥ ಕನ್ನಡನಾಡಿನಿಂದ ಎಂಟು ಸಾವಿ ಕಿಮೀ ದೂರದಲ್ಲಿ ನನಗೆ ಸಾಕ್ಷಾತ್ಕಾರವಾಗಿತ್ತು!