ಬಡತನ ಎನ್ನುವುದೊಂದೇ ದೊಡ್ಡ ಅಡ್ಡಗಾಲಲ್ಲ. ಅತಿ ದೊಡ್ಡ ತೊಡರುಗಾಲಿರುವುದು ಮನುಷ್ಯನ ಘನತೆಯದ್ದು! ಇಂಡಿಯಾದಂತಹ ದೇಶಗಳಲ್ಲಿ ಆರ್ಥಿಕವಾಗಿ ಒಂದೇ ದಾರ್ಢ್ಯವಿದ್ದರೂ ಸಾಮಾಜಿಕವಾಗಿ ಅಂತಸ್ತು ಬೇರೆ. ಅವು ವೃತ್ತಿಯಾಧಾರಿತವಾಗಿರಬಹುದು, ಜಾತಿಯಾಧಾರಿತವಾಗಿರಬಹುದು, ಧರ್ಮಾಧಾರಿತವಾಗಿರಬಹುದು…. ಆಸ್ಟ್ರೇಲಿಯದಂತಹ ದೇಶಗಳಲ್ಲಿ ಆರ್ಥಿಕವಾಗಿ ಮೇಲು ಕೆಳಗುಗಳಿದ್ದರೂ ಸಾಮಾಜಿಕ ಅಂತಸ್ತು ಒಂದೇ. ಹೋಟೆಲ್ ನ ಮಾಲಿಕರಿಗೆ ಎಷ್ಟು ಮರ್ಯಾದೆಯೋ ಸಪ್ಲಯರ್ ಗೂ ಅದೇ ಮರ್ಯಾದೆ! ಆಫೀಸರ್ ಗೆ ಕೊಡುವಷ್ಟೇ ಮರ್ಯಾದೆ ಶೌಚಾಲಯವನ್ನು ತೊಳೆಯುವವನಿಗೂ ಸಹ. ಲಾರಿ ಡ್ರೈವರ್ ವೈದ್ಯರನ್ನು ಮದುವೆಯಾಗಬಹುದು. ಆರ್ಥಿಕವಾಗಿ ಇವರೆಲ್ಲ ಬೇರೆ ಬೇರೆಯಾಗಿದ್ದರೂ ಸಾಮಾಜಿಕ ಘನತೆ ಮಾತ್ರ ಒಂದೇ! ಮೊದಲ ಬಾರಿಗೆ ವಿದೇಶಕ್ಕೆ ಬಂದಾಗ ಬಸವಣ್ಣ ಕನಸು ಕಂಡ ಸಮಾಜದ ಪ್ರಾಯೋಗಿಕ ಸಾಕ್ಷಾತ್ಕಾರವಾದಂತಾಯಿತು!
ಶ್ರೀಹರ್ಷ ಸಾಲಿಮಠ ಅಂಕಣ
ನಾನು ಚಿಕ್ಕವನಾಗಿದ್ದಾಗ ನನ್ನ ತಾಯ್ತಂದೆಯರು ಬಹಳ ಬಡವರಾಗಿದ್ದರಂತೆ. ಇದನ್ನು ಸಾಕಷ್ಟು ಬಾರಿ “ಎಮೋಷನಲ್ ಬ್ಲಾಕ್ ಮೇಲ್” ಮೂಲಕ ಸದ್ಯದ ಜನ್ಮದಲ್ಲೆಂದೂ ಮರೆಯದಿರುವಷ್ಟು ಮನದಟ್ಟು ಮಾಡಿಸಲಾಗಿದೆ. ನನ್ನ ತಾಯಿ ಪರಿಚಿತರು ಅಪರಿಚಿತರು ಮಿತಪರಿಚಿತರು ಎಂಬ ಯಾವುದೇ ಬೇಧಬಾವವಿಲ್ಲದೇ ತಮ್ಮ ಕಳೆದು ಹೋದ ಬಡತನದ ಬಗ್ಗೆ ಹೇಳಿಕೊಂಡದ್ದನ್ನು ನೋಡಿದ್ದೇನೆ. ನನ್ನನ್ನು ತೋರಿಸಿ “ಈ ಕೂಸು ಎರಡು ವರ್ಸದ್ದಿತ್ತು… ಒಣಾ ರೊಟ್ಟಿ ಖಾರ ಪುಡಿ ತಿಂತಿತ್ತು. ಅಪ್ಪಾ ಯಾವಾಗ ಅಕ್ಕಿ ತರ್ತಾರೆ ಯಾವಾಗ ಅನ್ನ ಉಣ್ತೀವಮ್ಮಾ ಅಂತ ಕೇಳ್ತಿತ್ತು” ಎಂದೆಲ್ಲ ನಮ್ಮಮ್ಮ ಎದುರಿಗೆ ಕೂತವರ ಭಾವತೀವ್ರತೆಯ ಷಡ್ಜದ ತಂತಿಯನ್ನು ಮೀಟಿದಾಗ ಎದುರಿಗೆ ಕೂತವರು ಅದರಲ್ಲೂ ಹದಿಹರೆಯದ ಹುಡುಗಿಯರ ಆರ್ದ್ರತೆಯ ಕೋಡಿಬಿದ್ದು “ಕಿಹಕ್… ಕಿಹಕ್” ಎಂದು ಗಂಟಲಿನ ನಳಿಕೆಯಿಂದ ಸದ್ದು ಹೊರಡಿಸುತ್ತಾ ಕಣ್ಣೀರೊರೆಸಿಕೊಳ್ಳುತ್ತಾ ನನ್ನನ್ನು ತಬ್ಬಿಕೊಳ್ಳುತ್ತಿದ್ದರು. ಮುಂದೆ ಎಂಟನೆಯ ತರಗತಿಯಲ್ಲಿ ಕುಮಾರವ್ಯಾಸನ
“ಕೊರಳ ಸೆರೆ ಹಿಗ್ಗಿದವು ದೃಗುಜಲವುರವಣಿಸಿ
ಕಡುನೊಂದನಕಟಾ |”
ಎಂಬ ಸಾಲನ್ನು ವರ್ಣಿಸುವಾಗ ನನಗೆ ನೆನಪಾದದ್ದು ಇದೇ ಹುಡುಗಿಯರು.
ನನ್ನ ಮನೆಗೆ ಭೇಟಿಕೊಡುತ್ತಿದ್ದ ಬಂಧುಗಳು ತಮ್ಮ ಮನೆಯಲ್ಲಿ ನಮ್ಮ ಮನೆ ವಿಸ್ತೀರ್ಣವನ್ನು ವರ್ಣಿಸುವಾಗ “ನಮ್ಮನೆಯ ಹಾಲಿನಷ್ಟು ಅವರ ಇಡಿಯ ಮನೆ. ಆ ಮೂಲೆ ಅಡುಗೆಮನೆ ಆ ಕಡೆ ಮೂಲೆಯಲ್ಲಿ ಸ್ನಾನಕ್ಕೆ, ಹೊರಗೆ ಕಕ್ಕಸ ರೂಮು.” ಅಂತ ಆಡಿಕೊಂಡದ್ದು ನನಗೆ ನೆನಪಿದೆ. ಅವರೆಲ್ಲ ಅದೆಷ್ಟು ಬಾರಿ ಆಡಿಕೊಂಡಿದ್ದರೆಂದರೆ ನನಗೆ ಕಣ್ಣು ಕಟ್ಟಿದಂತೆ ಆ ಸನ್ನಿವೇಶಗಳು ಮತ್ತು ಸಂಭಾಷಣೆಗಳು ಯಥಾವತ್ ನೆನಪಿವೆ. ಯಾವತ್ತಾದರೊಮ್ಮೆ ಎದುರಿಗೆ ಸಿಗುವ ತಂದೆಯ ಗೆಳೆಯರು “ನಿಮ್ಮಪ್ಪ ಭಾಳ ಕಷ್ಟ ಪಟ್ಟಿದ್ದಾರಪ್ಪ, ನೀನು ಚನ್ನಾಗಿ ಓದಿ ಅವರ ಹೆಸರು ಉಳಿಸಬೇಕು” ಅಂತ ದೈನ್ಯದಿಂದ ಕೊಟ್ಟ ಸಲಹೆಯನ್ನು ಅಷ್ಟೇ ರಾಜಗಾಂಭೀರ್ಯದಿಂದ ನಾನು ಯಾವತ್ತೂ ಕಡೆಗಣಿಸಿದ್ದಿದೆ. ಪ್ರತಿ ಬಾರಿ ನಮ್ಮ ಮನೆಗೆ ದೂರದ ಬಂಧುಗಳು ಭೇಟಿ ಕೊಟ್ಟಾಗ ನಮ್ಮ ತಾಯ್ತಂದೆಯರು ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ಮನದಟ್ಟುಮಾಡಿಸುವುದಕ್ಕಾಗಿಯೇ ಒಂದು ಅವಧಿಯ ಅಧಿವೇಶನವನ್ನು ಮೀಸಲಾಗಿಟ್ಟಿರುತ್ತಿದ್ದರು. ನನಗೆ ಅವರೆಲ್ಲ ಬಂದಾಗ ಖುಷಿಯಾಗುತ್ತಿತ್ತಾದರೂ ಈ ಸೆಶನ್ ಅನ್ನು ಎದುರು ನೋಡುವುದೊಂದು ದೊಡ್ಡ ಕಿರಿಕಿರಿಯಾಗಿರುತ್ತಿತ್ತು.
ಈ ಬಡತನದ ಬಗ್ಗೆ ನನಗೆ ಅಸಡ್ಡೆ ಹುಟ್ಟಲು ಕಾರಣಗಳಿಲ್ಲದಿರಲಿಲ್ಲ. ಮೊದಲನೆಯ ಕಾರಣ ನನ್ನ ತಂದೆ ತಾಯಿ ನನ್ನವರೆಗೆ ಈ ಬಡತನದ ಕಾವು ಬರಗೊಡಲಿಲ್ಲದ್ದು. ಅದೇನು ಅನುಭವಿಸಿದರೋ ಅವರಗಳು ಮಾತ್ರ ಅನುಭವಿಸಿದರು. ನನ್ನವರೆಗೆ ಅದು ತಟ್ಟಲಿಲ್ಲ. ಎರಡನೆಯದನ್ನು ಕೊಂಚ ವಿವರವಾಗಿ ಹೇಳಬೇಕು. ನಾನು ನಾಲ್ಕನೆಯ ತರಗತಿಯವರೆಗೆ ಓದಿದ್ದು ಗುರುಬಸಮ್ಮ ವಿ ಚಿಗಟೇರಿ ಕಿರಿಯ ಪ್ರಾಥಮಿಕ ಶಾಲೆ ಎಂಬ ಹಳೆಯ ದಾವಣಗೆರೆಯ ಚಿಕ್ಕ ಶಾಲೆಯಲ್ಲಿ. ನಾನೂರು ರೂಪಾಯಿ ಶುಲ್ಕವನ್ನೇ ನನ್ನ ತಂದೆ ನಾಲ್ಕೈದು ಕಂತುಗಳಲ್ಲಿ ಒದ್ದಾಡಿ ಕಟ್ಟುತ್ತಿದ್ದರು. ಆರ್ಥಿಕ ಅನುಕೂಲದ ವಿಷಯಕ್ಕೆ ಬಂದರೆ ನಮಗಿಂತ ಕೆಲಪಾಲು ಉತ್ತಮರು ಸಾಕಷ್ಟು ಜನರಿದ್ದರೂ ಇಲ್ಲಿ ಬರುತ್ತಿದ್ದವರಲ್ಲಿ ಬಹುಪಾಲು ಮಕ್ಕಳು ಅಂತಹ ಸ್ಥಿತಿವಂತರ ಮಕ್ಕಳೇನಲ್ಲ. ಸೈಕಲ್ ಪಂಚರ್ ಹಾಕುವವರ ಮಕ್ಕಳು, ಗಾಡಿ ಎಳೆಯುವವರ ಮಕ್ಕಳು, ನಾಪಿತನ ಮಕ್ಕಳು ಇತ್ಯಾದಿ. ನಾನು ಲಾಯರರ ಮಗ, ಇನ್ನೊಬ್ಬ ಪೋಲೀಸ್ ಪೇದೆಯ ಮಗ, ಫೋಟೊಗ್ರಾಫರ್ ಮಗ, ಬ್ಯಾಂಕ್ ಪಿಗ್ಮಿ ಕಲೆಕ್ಟರ್ ಮಗ ಪ್ರತಿಷ್ಟಿತ ಮಕ್ಕಳ ಸಾಲಿಗೆ ಸೇರಿದ್ದೆವು. ನನ್ನ ಮತ್ತು ಪೋಲೀಸ್ ಪೇದೆಯ ಮಗನ ನಡುವೆ ಆಗಾಗ ಯಾರ ಅಪ್ಪ ಹೆಚ್ಚು ಎಂಬುದರ ಬಗ್ಗೆ ಆಗಾಗ ವಾಗ್ವಾದಗಳಾಗುತ್ತಿದ್ದವಾದರೂ ಉಳಿದ ಹುಡುಗರೆಲ್ಲ ಶಾಲೆಯಲ್ಲಿ ನಮ್ಮ ಮೇಲ್ಗಾರಿಕೆಯನ್ನು ಮರುಮಾತಿಲ್ಲದೇ ಒಪ್ಪಿಕೊಂಡಿದ್ದರು.
ಬಹುತೇಕರು ತಮ್ಮ ಅಪ್ಪನ ಉದ್ಯೋಗದ ಹೆಸರನ್ನೂ ಹೇಳಿಕೊಳ್ಳುತ್ತಿರಲಿಲ್ಲ. ತರಗತಿಯ ಮೊದಲ ನಾಲ್ಕು ರ್ಯಾಂಕ್ ಗಳು ನಮ್ಮನಮ್ಮಲ್ಲೇ ಹಂಚಿಕೆಯಾಗುತ್ತಿದ್ದವು. ಇಷ್ಟು ಹುಡುಗರ ಪೈಕಿ ನನ್ನ ತಂದೆ ಮತ್ತು ಪಿಗ್ಮಿ ಕಲೆಕ್ಟರ್ ಗಳಲ್ಲಿ ಒಂದು ಲೂನಾ ಇತ್ತು. ನಮ್ಮನ್ನು ಬಿಟ್ಟರೆ ಚಂಬು ಅಲಿಯಾಸ್ ಶಂಬುಲಿಂಗ ಬಿನ್ ಶಂಕರಪ್ಪ ಎಂಬುವವನ ತಂದೆಯ ಬಳಿ ಒಂದು ಇಂಡ್ ಸುಝುಕಿ ಬೈಕ್ ಇತ್ತು. ನಂತರ ನಮ್ಮ ಗುಂಪನ್ನು ಸೇರಬೇಕೆಂಬ ಮಹತ್ವಾಕಾಂಕ್ಷೆಯಿಂದ ಆತನೂ ಕಷ್ಟಪಟ್ಟು ಓದಿ ಒಳ್ಳೆಯ ಅಂಕಗಳನ್ನು ತೆಗೆದು ಸೇರಿಕೊಂಡ. ಬಂಬೂ ಬಜಾರ್ ನ ಸೌದೆ ವ್ಯಾಪಾರಿಯ ಮಕ್ಕಳೂ ನಮ್ಮ ತರಗತಿಯವರೇ ಆಗಿದ್ದರೂ ಅವರು ಓದಿನಲ್ಲಿ ಹಿಂದೆ ಬಿದ್ದು ಪದೇ ಪದೇ ಒದೆ ತಿನ್ನುತ್ತಿದ್ದುದರಿಂದ ನಮ್ಮ ಗುಂಪಿನಿಂದ ದೂರವೇ ಇಟ್ಟಿದ್ದೆವು.
ನಮ್ಮ ಗುಂಪಿಗೆ ಸೇರಬಯಸುವವನು ನಿಷ್ಕಳಂಕ ವ್ಯಕ್ತಿತ್ವದವನಾಗಿರಬೇಕು ಎಂಬುದು ಅಂಕಗಳ ಆಧಾರದ ಮೇಲೆಯೇ ಚಾರಿತ್ರ್ಯವನ್ನು ನಿರ್ಧರಿಸುತ್ತಿದ್ದ ನಮ್ಮ ಅಲಿಖಿತ ನಿಯಮವಾಗಿತ್ತು. ಇಷ್ಟು ಜನರನ್ನು ಹೊರತುಪಡಿಸಿದರೆ ಉಳಿದವರ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೇ! ಅನೇಕರ ಮನೆಗಳಿಗೆ ಭದ್ರವಾದ ಸೂರಿರಲಿಲ್ಲ. ಮಳೆಗಾಗದಲ್ಲಿ ಸೋರುತ್ತಿತ್ತು. ಛಾವಣಿಯನ್ನು ಹುಲ್ಲಿನಿಂದ ಮುಚ್ಚಲಾಗಿರುತ್ತಿತ್ತು. ನೆಲಕ್ಕೆ ಸಗಣಿ ಸಾರಿಸಲಾಗುತ್ತಿತ್ತು. ಹೆಬ್ಬೆರಳಿನಿಂದ ಎಬ್ಬಿದರೆ ಪಕಳೆ ಪಕಳೆಯಾಗಿ ಒಣಗಿದ ಸಗಣಿ ಎದ್ದು ಬರುತ್ತಿತ್ತು. ಸಾಕಷ್ಟು ಜನ ಹರಿದ ಬಟ್ಟೆ ಹಾಕಿಕೊಂಡು ಬಂದಿರುತ್ತಿದ್ದರು. ಹೋಲಿಸಿದರೆ ನಮ್ಮ ಮನೆ ರೆಡ್ಡಾಕ್ಸೈಡ್ ನೆಲದ್ದಾಗಿತ್ತು ಸೂರು ಆರ್ ಸಿ ಸಿಯದಾಗಿತ್ತು. ನನ್ನ ತಾಯ್ತಂದೆಯರ ಬಡತನ ನನಗೆ ಯಾವ ಕೋನದಲ್ಲೂ ಬಡತನ ಎನ್ನಿಸುತ್ತಿರಲಿಲ್ಲ. ಇದಕ್ಕಿಂದ ಸೂಕ್ಷ್ಮ ವಿಷಯವೆಂದರೆ ನನ್ನನ್ನು “ಲಾಯರ್ ಮಗ” ಎಂದು ಗುರುತಿಸುತ್ತಿದ್ದರು. ಮತ್ತೊಬ್ಬ ಗೆಳೆಯನನ್ನು “ಪೋಲೀಸರ ಮಗ” ಅಂತ ಗುರುತಿಸುತ್ತಿದ್ದರು. ನಮ್ಮನ್ನು ನಮ್ಮ ನಮ್ಮ ತಂದೆಯರ ವೃತ್ತಿಯೊಂದಿಗೆ ಗುರುತಿಸುವಾಗ ಒಂದು ಗೌರವಭಾವ ಇದ್ದರೆ ಬೇರೆಯವರ ಮಕ್ಕಳನ್ನು ಮೊದಲನೆಯದಾಗಿ ಸೈಕಲ್ ಪಂಚರ್ ನವನ ಮಗ, ನಾಪಿತನ ಮಗ ಎಂದೆಲ್ಲ ಗುರುತಿಸುತ್ತಿರಲಿಲ್ಲ. ಗುರುತಿಸುತ್ತಿದ್ದರೂ “ನೀನೂ ನಿಮ್ಮಪ್ಪನಂಗೆ ಇಂತಿಂತ ಕೆಲಸ ಮಾಡಿಕೊಂಡು ಜೀವನ ಕಳೆದುಬಿಡು” ಎಂದು ಹಂಗಿಸುತ್ತಿದ್ದರು. ಅವರ ಆರ್ಥಿಕ ಸ್ಥಿತಿ ನಮ್ಮ ತಂದೆಗಿಂತ ಉತ್ತಮವಾಗಿದ್ದರೂ ನಮಗೆ ಸಿಕ್ಕಂತಹ ವೃತ್ತಿ ಆಧಾರಿತ ಮೆಚ್ಚುಗೆಯ ಮಾತುಗಳು ಅವರಿಗೆ ದಕ್ಕುತ್ತಿರಲಿಲ್ಲ.
ನಮಗೆಲ್ಲ ನಾವು ನಮ್ಮ ತಂದೆಯರಂತೆ ಆಗಬೇಕೆಂದೂ ಅವರಾರೂ ಅವರ ತಂದೆಯರಂತೆ ಆಗಬಾರದೆಂದೂ ಸಲಹೆ ಉಪದೇಶಗಳು ಆಗಾಗ ಬರುತ್ತಿದ್ದವು. ಆಗ ನಾವು ಬದುಕಿದ್ದ ಮನೆಯ ಅಕ್ಕಪಕ್ಕದವರ ಜೀವನ ಶೈಲಿಯೂ ನಮ್ಮಂತೆಯೇ ಇತ್ತಾದರೂ ಅಥವಾ ನಮಗಿಂತ ಅವರ ಸ್ಥಿತಿ ಕೊಂಚ ಉತ್ತಮವಾಗಿತ್ತಾದರೂ ಹಬ್ಬ ಹರಿದಿನಗಳಲ್ಲಿ ಅವರುಗಳಲ್ಲನೇಕರು ನಮ್ಮ ಮನೆಗೆ ಬಂದು ನಮ್ಮ ತಂದೆ ತಾಯಿಗೆ ದಕ್ಷಿಣೆ ಕೊಟ್ಟು ಕಾಲಿಗೆ ಬೀಳುತ್ತಿದ್ದರು. ಒಮ್ಮೊಮ್ಮೆ ನನ್ನ ಕಾಲಿಗೂ ಬೀಳುತ್ತಿದ್ದುದುಂಟು.
ಎಲ್ಲ ಮಧ್ಯಮ ವರ್ಗದ ತಾಯ್ತಂದೆಯರಂತೆ ನನ್ನನ್ನೂ ಸಹ ಬಹಳ ಸುರಕ್ಷಿತ ವಾತಾವರಣದಲ್ಲೇ ಬೆಳೆಸಲಾಯಿತು. ಉಸಿರುಗಟ್ಟಿ ಪಿಯುಸಿಯವರೆಗೆ ಹೇಗೋ ಬದುಕಿಕೊಂಡೆನಾದರೂ ಕಾಲೇಜಿಗೆ ಬಂದ ಮೇಲೆ ತಾಯ್ತಂದೆಯರ ಕಣ್ಗಾವಲಿನಿಂದ ಸ್ವಂತ್ರವಾಗಿ ಊರೂರು ಸುತ್ತತೊಡಗಿದೆ. ಕೆಲವು ಬಂಡವಾಳಶಾಹಿ ವಿರೋಧಿ, ಜಾಗತೀಕರಣ ವಿರೋಧಿ ಚಳವಳಿಗಳಲ್ಲಿ ತೊಡಗಿಕೊಂಡಿದ್ದೆ. ಈ ಕಾರಣದಿಂದಾಗಿ ನಾನು ಊರೂರು ಸುತ್ತಬೇಕಾಗಿತ್ತು. ಈ ಅವಧಿ ನನ್ನ ಚಿಂತನೆಯನ್ನು ರೂಪಿಸುವಲ್ಲಿ ಬಹಳ ನಿರ್ಣಾಯಕವಾಯಿತೆಂದೇ ಹೇಳಬೆಕು. ಸುತ್ತಾಡುವಾಗ ಚಳುವಳಿಗಳಲ್ಲಿ ಸಮಾಜದ ಎಲ್ಲಾ ಸ್ಥರಗಳ ಜನರನ್ನು ಭೇಟಿ ಮಾಡಬೇಕಾಗುತ್ತಿತ್ತು. ಆಗ ಸಮಾಜದಲ್ಲಿ ಎರಡು ವರ್ಗಗಳ ನಡುವೆ ಇದ್ದ ಭಯಂಕರ ದೊಡ್ಡ ಕಂದಕವೊಂದು ನನ್ನ ಕಣ್ಣಿಗೆ ಗೋಚರಿಸತೊಡಗಿತು.
ಒಂದು ಕಡೆ ಲಕ್ಷ ಲಕ್ಷಗಳನ್ನು ಲೆಕ್ಕವೇ ಅಲ್ಲವೆಂಬಂತೆ ಸುರಿಯುವ ಜನರು ಇನ್ನೊಂದು ಕಡೆ ಹತ್ತು ರೂಪಾಯಿಗೂ ಒದ್ದಾಡುವ ಜನರು! ಎಷ್ಟೋ ಜನರಿಗೆ ಮಕ್ಕಳನ್ನು ಶಾಲೆಗೆ ಏಕೆ ಕಳಿಸಬೇಕು ಎನ್ನುವುದೇ ಗೊತ್ತಿರಲಿಲ್ಲ! ಅದೆಲ್ಲೋ ಶಾಲೆಯಲ್ಲಿ ಹೋಗಿ ಇಡೀ ದಿನ ಕಲಿಯುವುದರ ಬದಲು ಎಲ್ಲಾದರೂ ಕೂಲಿ ಕೆಲಸ ಮಾಡಿದರೆ ಹೊಟ್ಟೆಯಾದರೂ ತುಂಬುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಹತ್ತು ವರ್ಷ ಕೊಂಚ ಕಷ್ಟ ಪಟ್ಟು ಶಾಲೆಗೆ ಸೇರಿಸಿಬಿಟ್ಟರೆ ಮುಂಬರುವ ಎಲ್ಲಾ ಪೀಳಿಗೆಗಳು ಹಸಿವಿಲ್ಲದೆ ಬದುಕಬಹುದು ಎಂಬುದು ಅವರ ಊಹೆಗೂ ನಿಲುಕದ್ದಾಗಿತ್ತು. ನಾವು ಅವರಿಗೆ ಶಿಕ್ಷಣದ ಮಹತ್ವ ವಿವರಿಸುತ್ತಾ ನಿಮ್ಮ ಮಕ್ಕಳು ವೈದ್ಯರೂ, ಆಫೀಸರ್ ಗಳೂ ಆಗಬಹುದು ಎಂಬ ಉದಾಹರಣೆ ಕೊಟ್ಟರೆ “ನಮಗೆಲ್ಲಾ ಅದೆಲ್ಲಾ ಸಾಧ್ಯ ಆಯ್ತದಾ ಸಾಮಿ? ನಮಗೆ ದಿನಕ್ಕೆ ಊಟ ಸಿಕ್ರೆ ಸಾಕಾಗೇತಿ” ಅಂತ ತೇಲಿಸಿಬಿಡುತ್ತಿದ್ದರು.
ಈ ನಡುವೆ ಸರಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯ ಘೋಷಣೆಯಾಯಿತು. ಇದೇ ಜನರು ತಮ್ಮ ಮಕ್ಕಳು ಒಂದು ಹೊತ್ತಾದರೂ ಸುಖವಾಗಿ ಊಟ ಮಾಡುತ್ತಾರಲ್ಲಾ ಎಂಬ ನೆಪದಿಂದ ಶಾಲೆಗಳಿಗೆ ಕಳಿಸತೊಡಗಿದರು. ಊಟದ ನೆಪದಲ್ಲಾದರೂ ಅಷ್ಟೊಂದು ಕುಟುಂಬಗಳಲ್ಲಿ ಒಂದೆರಡು ಕುಟುಂಬಗಳಾದರೂ ಶಿಕ್ಷಿತವಾಗಿ ಬರಲಿರುವ ತಲೆಮಾರು ಬಡತನದಿಂದ ಹೊರಬರಲು ಸಾಧ್ಯವಾಗುವ ಲಕ್ಷಣಗಳು ಗೋಚರಿಸತೊಡಗಿದವು!
ನಾವು ರಾಜಕಾರಣಿಗಳನ್ನು ಅವರ ಬ್ರಷ್ಟಾಚಾರಕ್ಕೆ, ಕುತಂತ್ರಗಳಿಗೆ ಬೈದುಕೊಳ್ಳಬಹುದು ಆದರೆ ಇಷ್ಟು ವಿವರವಾಗಿ ಯೋಚಿಸಿ ಯೋಜನೆಗಳನ್ನು ಜಾರಿಗೆ ತರುವಷ್ಟು ಸೂಕ್ಷ್ಮ ಮನಸ್ಸು ಅವರಲ್ಲಿದೆಯಲ್ಲಾ ಎಂದು ಅಚ್ಚರಿಯುಂಟಾಯಿತು. ನಮ್ಮ ತಂದೆಗಾದರೋ ತಮಗಿದ್ದ ವಿದ್ಯೆಯ ದೆಸೆಯಿಂದಾಗಿ, ಸಾಮಾಜಿಕ ಬಂಡವಾಳದ ದೆಸೆಯಿಂದಾಗಿ ಮೇಲ್ವರ್ಗದ ಹಿನ್ನೆಲೆಯಿಂದಾಗಿ ಅವರಿಗಿದ್ದ ಸಾಮಾಜಿಕ ಸಬಲತೆ ಆರ್ಥಿಕ ಸಬಲತೆಗೆ ದಾರಿ ಮಾಡಿಕೊಡುವ ಎಲ್ಲಾ ಸಾಧ್ಯತೆಗಳಿದ್ದವು. ಆದರೆ ಈ ಜನರಿಗೆ ಆ ಸಾಧ್ಯತೆಗಳೇ ಇರಲಿಲ್ಲ. ಅವರಿಗೊಂದು ಸಾಮಾಜಿಕ ಪ್ರಾತಿನಿಧ್ಯವೇ ಇರಲಿಲ್ಲ. ಎಷ್ಟು ದಿನ ಅಂತ ದಿನಗೂಲಿ ಮಾಡಿಕೊಂಡು ಭೂಮಾಲಿಕರಾಗಲು ಸಾಧ್ಯವಿದೆ? ನಾನು ಈ ದಿನ ತಲುಪಿರುವ ಹಂತಕ್ಕೆ ನನ್ನ ತಂದೆಯಿಂದ ಬಳುವಳಿಯಾಗಿ ಬಂದ ಆರ್ಥಿಕ ಮತ್ತು ಸಾಮಾಜಿಕ ಸಬಲತೆಯೂ ಒಂದು ಪ್ರಮುಖ ಕಾರಣ ಎಂದು ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಹಾಗಾಗಿ ನಾನು ಸಮಾಜದ ಪ್ರಬಲ ವರ್ಗದ ಬಡತನವನ್ನು ಬಡತನ ಎಂದು ಪರಿಗಣಿಸುವುದೇ ಇಲ್ಲ. ಹಾಗೆ ಹೇಳಿಕೊಳ್ಳುವುದೇನಿದ್ದರೂ ಅತಿಯಾಗಿ ತಿಂದು ದೇಹ ಬೆಳೆಸಿಕೊಂಡವನೊಬ್ಬ ತೂಕ ಇಳಿಸಿಕೊಳ್ಳಲು ಪಥ್ಯ ಮಾಡುತ್ತಾ ನಾನು ಅಷ್ಟೊಂದು ದಿನದಿಂದ ಉಪವಾಸ ಇದ್ದೇನೆ ಅಂತ ಗೋಳಾಡಿಕೊಂಡಂತೆ ಆಗುತ್ತದೆ ಅಷ್ಟೇ!
ನಮ್ಮ ಗುಂಪಿಗೆ ಸೇರಬಯಸುವವನು ನಿಷ್ಕಳಂಕ ವ್ಯಕ್ತಿತ್ವದವನಾಗಿರಬೇಕು ಎಂಬುದು ಅಂಕಗಳ ಆಧಾರದ ಮೇಲೆಯೇ ಚಾರಿತ್ರ್ಯವನ್ನು ನಿರ್ಧರಿಸುತ್ತಿದ್ದ ನಮ್ಮ ಅಲಿಖಿತ ನಿಯಮವಾಗಿತ್ತು. ಇಷ್ಟು ಜನರನ್ನು ಹೊರತುಪಡಿಸಿದರೆ ಉಳಿದವರ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೇ! ಅನೇಕರ ಮನೆಗಳಿಗೆ ಭದ್ರವಾದ ಸೂರಿರಲಿಲ್ಲ.
ಬಡತನ ಎನ್ನುವುದೊಂದೇ ದೊಡ್ಡ ಅಡ್ಡಗಾಲಲ್ಲ. ಅತಿ ದೊಡ್ಡ ತೊಡರುಗಾಲಿರುವುದು ಮನುಷ್ಯನ ಘನತೆಯದ್ದು! ಇಂಡಿಯಾದಂತಹ ದೇಶಗಳಲ್ಲಿ ಆರ್ಥಿಕವಾಗಿ ಒಂದೇ ದಾರ್ಢ್ಯವಿದ್ದರೂ ಸಾಮಾಜಿಕವಾಗಿ ಅಂತಸ್ತು ಬೇರೆ. ಅವು ವೃತ್ತಿಯಾಧಾರಿತವಾಗಿರಬಹುದು, ಜಾತಿಯಾಧಾರಿತವಾಗಿರಬಹುದು, ಧರ್ಮಾಧಾರಿತವಾಗಿರಬಹುದು…. ಆಸ್ಟ್ರೇಲಿಯದಂತಹ ದೇಶಗಳಲ್ಲಿ ಆರ್ಥಿಕವಾಗಿ ಮೇಲು ಕೆಳಗುಗಳಿದ್ದರೂ ಸಾಮಾಜಿಕ ಅಂತಸ್ತು ಒಂದೇ. ಹೋಟೆಲ್ ನ ಮಾಲಿಕರಿಗೆ ಎಷ್ಟು ಮರ್ಯಾದೆಯೋ ಸಪ್ಲಯರ್ ಗೂ ಅದೇ ಮರ್ಯಾದೆ! ಆಫೀಸರ್ ಗೆ ಕೊಡುವಷ್ಟೇ ಮರ್ಯಾದೆ ಶೌಚಾಲಯವನ್ನು ತೊಳೆಯುವವನಿಗೂ ಸಹ. ಲಾರಿ ಡ್ರೈವರ್ ವೈದ್ಯರನ್ನು ಮದುವೆಯಾಗಬಹುದು. ಆರ್ಥಿಕವಾಗಿ ಇವರೆಲ್ಲ ಬೇರೆ ಬೇರೆಯಾಗಿದ್ದರೂ ಸಾಮಾಜಿಕ ಘನತೆ ಮಾತ್ರ ಒಂದೇ! ಮೊದಲ ಬಾರಿಗೆ ವಿದೇಶಕ್ಕೆ ಬಂದಾಗ ಬಸವಣ್ಣ ಕನಸು ಕಂಡ ಸಮಾಜದ ಪ್ರಾಯೋಗಿಕ ಸಾಕ್ಷಾತ್ಕಾರವಾದಂತಾಯಿತು!
ಈ ದೇಶಗಳಲ್ಲಿ ಬಡತನವಿಲ್ಲವೆಂದಲ್ಲ, ಭಿಕ್ಷುಕರಿಲ್ಲವೆಂದಲ್ಲ. ಇದ್ದಾರೆ! ಇವರಿಗಾಗಿ ಸೇವೆ ನೀಡುವ ಸಂಸ್ಥೆಗಳೂ ಇವೆ. ಚರ್ಚ್ ಗಳ ವತಿಯಿಂದ ಬಡತವರೆಂದು ಗುರುತಿಸಿಕೊಂಡವರಿಗೆ ಪ್ರತಿದಿನ ಊಟದ ವ್ಯವಸ್ಥೆ ಇರುತ್ತದೆ.
ನಾವೊಂದಷ್ಟು ಜನ ಸಮಾಜಸೇವೆ ಮಾಡುವ ತೆವಲಿರುವವರು ಒಂದು ಚರ್ಚ್ ಗೆ ಹೋಗಿ ನಾವೂ ಸಹ ನಿಮ್ಮ ಜೊತೆಗೆ ಸೇವೆಗೆ ಕೈಜೋಡಿಬಹುದೇ ಎಂದು ಕೇಳಕೊಂಡೆವು. ಅವರು ಬಹಳ ಸಂತೋಷದಿಂದ ನಮ್ಮನ್ನು ಬರಮಾಡಿಕೊಂಡು ತಾವು ಯಾವ ರೀತಿ ಸಹಾಯ ಮಾಡಬಲ್ಲಿರಿ ಎಂದು ಕೇಳಿದರು. ನಾವು ನಮ್ಮ ಟಿಪಿಕಲ್ ಮನಃಸ್ಥಿತಿಯಂತೆ ಪ್ರತೀ ವಾರ ಇಷ್ಟು ಊಟ ತಂದುಕೊಡುತ್ತೇವೆ ಅಂತ ಹೇಳಿದೆವು. ಮುಂದೆ ಅವರು ನಮಗೆ ವಿವರಿಸಿ ನಮ್ಮ ಯೋಗ್ಯತೆಯನ್ನು ನಮಗೆ ತೋರಿಸಿದ್ದು ಬಹಳ ಮಾರ್ಮಿಕವಾಗಿತ್ತು.
“ಸೇವೆ ಮಾಡುವುದು ಎಂದರೆ ಯಾವತ್ತೋ ನಿಮ್ಮ ಇಷ್ಟಕ್ಕೆ ಮಾಡುವ ಹವ್ಯಾಸವಲ್ಲ. ಅದೊಂದು ಸಾಮಾಜಿಕ ಬದ್ಧತೆ. ನಾವು ಇಲ್ಲಿ ಕೊಡುವ ಆಹಾರಕ್ಕೆ ಸರಕಾರದ ವತಿಯಿಂದ ನಿರ್ದೇಶನಗಳಿವೆ. ಆಹಾರದಲ್ಲಿ ಇಷ್ಟು ಪ್ರೋಟೀನು ಇರಬೇಕು, ಇಷ್ಟು ಕಾರ್ಬೋ ಹೈಡ್ರೇಟುಗಳು, ಇಷ್ಟು ಕೊಬ್ಬು, ಇಷ್ಟು ವಿಟಮಿನ್ ಗಳು ಇರಬೇಕು ಎಂಬ ಸೂಚನೆಗಳಿವೆ. ನಾವು ಅದೇ ರೀತಿ ಲೆಕ್ಕ ಹಾಕಿ ಆಹಾರ ತಯಾರಿಸಬೇಕು. ಅದು ಶುಚಿಯಾಗಿರಬೇಕು. ಸಾಧ್ಯವಾದಷ್ಟು ತಾಜಾ ಆಗಿರಬೇಕು. ನೀವು ಮನೆಯಲ್ಲಿ ಅಕ್ಕಿ ಬೇಯಿಸಿಕೊಂಡು ತಂದು ಹಾಕಲು ಸಾಧ್ಯವಿಲ್ಲ.
ನಮ್ಮ ಬಳಿ ಆಹಾರ ಪಡೆಯುವವನು ಬಡವನೇ ಇರಬಹುದು, ಆದರೆ ಆತ ಮನುಷ್ಯ, ಆತನ ವ್ಯಕ್ತಿತ್ವಕ್ಕೊಂದು ಘನತೆಯಿದೆ. ಅವರನ್ನು ನಿಕೃಷ್ಟವಾಗಿ ಪರಿಗಣಿಸಲಾಗದು. ಬೇಕಿದ್ದರೆ ನಿಮಗೆ ಬಿಡುವಾದಾಗ ಬಂದು ನಮಗೆ ಅಡುಗೆ ಮಾಡಲು, ಸಾಮಾನು ತೊಳೆಯಲು, ಬಡಿಸಲು ಇತ್ಯಾದಿ ಸಹಾಯ ಮಾಡಬಹುದು” ಎಂದರು. ಹಸು ಹಂದಿಯ ಮಾಂಸಗಳನ್ನು ಅವರು ಅಡುಗೆಗೆ ಬಳಸುತ್ತಿದ್ದರಿಂದ ನಮ್ಮ ಕೈಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿಕೊಂಡು ವಾಪಸು ಬಂದೆವು. ಆ ದಿನ ನಾವು ಚಿಕ್ಕಂದಿನಿಂದ ಕಲಿತುಕೊಂಡು ಬಂದ ಎರಡು ರೀತಿಯ ಕ್ರೌರ್ಯದ ಬಗ್ಗೆ ನನಗೆ ಅರಿವಾಯಿತು.
ಒಂದು ನಮ್ಮಿಂದ ದಾನ ಪಡೆಯಬೇಕಿದ್ದರೆ ಆತ ನಮ್ಮ ಇಷ್ಟದಂತೆ ಬದುಕಬೇಕು ಎಂಬ ನಮ್ಮ ದುರಹಂಕಾರ. “ಸಸ್ಯಾಹಾರಿಗಳಾಗಿ ಮಾಂಸ ಬಡಿಸುವುದೇ?” ಎಂಬ ಜಿಜ್ಞಾಸೆ ನಮ್ಮನ್ನು ನಾವು ಸಲ್ಲಿಸಬಹುದಾದ ಸೇವೆಯಿಂದ ದೂರ ಇರಿಸಿತ್ತು! ಅವಶ್ಯಕತೆ ಇರುವವನೊಬ್ಬ ಮಾಂಸ ತಿನ್ನುತ್ತಿದ್ದುದರಿಂದ ಅವನಿಗೆ ನಮ್ಮ ಸಹಾಯ ದೊರೆಯಲಿಲ್ಲ. ಇನ್ನೊಂದು ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಒಂದಷ್ಟು ಕೂಳು ಬಿಸಾಕಿದರಾಯಿತು ಅಲ್ಲಿಗೆ ನಮ್ಮ ಪಾಲಿನ ಸೇವೆ ಈ ಸಮಾಜಕ್ಕೆ ಮುಗಿದು ಹೋಯಿತು ಎಂಬ ಯೋಚನೆ. ಸಮಾಜ ಸೇವೆ ಎಂಬುದು ಬದ್ಧತೆಗಿಂದ ನಮ್ಮ ಪಾಲಿಗೆ ಒಂದು ತೆವಲು ಮಾತ್ರ ಎಂಬುದು ಅರಿತು ನಮ್ಮ ಸಂಸ್ಕಾರದ ಬಗ್ಗೆ ನನಗೆ ನಾಚಿಕೆಯಾಯಿತು.
ಒಂದು ದಿನ ತರಕಾರಿ ತರಲು ಮಾರುಕಟ್ಟೆಗೆ ಹೊಗಿದ್ದಾಗ ಒಬ್ಬ ಕ್ವಿಂಟಾಲುಗಟ್ಟಲೆ ತರಕಾರಿ ಗುಡ್ಡೆ ಹಾಕಿಕೊಂಡು ನಿಂತಿದ್ದ. ನನ್ನ ನೋಡಿ ಮುಗುಳ್ನಕ್ಕ. ನಾನೂ ನಕ್ಕೆ.
“ಇದೆಂತಹ ಇಷ್ಟೊಂದು ದೊಡ್ಡ ಗುಡ್ಡೆ? ನಿನ್ನದು ಅಷ್ಟು ದೊಡ್ಡ ಕುಟುಂಬವೇ?” ಅಂತ ಕೇಳಿದೆ.
ಆತ ಜೋರಾಗಿ ಒಮ್ಮೆ ನಕ್ಕು “ಇದು ಚರ್ಚ್ ನಲ್ಲಿ ಹೋಮ್ ಲೆಸ್ ಗಳಿಗಾಗಿ ಅಡುಗೆ ಮಾಡಲು ತೆಗೆದುಕೊಂಡು ಹೋಗುತ್ತಿರುವುದು.” ಅಂದ.
“ನೀವು ಪುಕ್ಕಟೆಯಾಗಿ ಆಹಾರ ಹಂಚುತ್ತೀರಲ್ಲ ಜನ ಕೆಲಸ ಮಾಡುವುದು ಬಿಟ್ಟು ನಿಮ್ಮ ಅಡುಗೆಯ ಮೇಲೆಯೇ ಬದುಕಲು ಶುರು ಮಾಡುವುದಿಲ್ಲವೆ?” ಅಂತ ಕೇಳಿದೆ.
“ನಿನಗೆ ಚರ್ಚ್ ನಲ್ಲಿ ಊಟ ಸಿಗುತ್ತದೆ ಅಂತ ಗೊತ್ತು, ನಾಳೆಯಿಂದ ಕೆಲಸ ಬಿಟ್ಟು ಬರಲು ಶುರು ಮಾಡುತ್ತೀಯಾ? ಇಲ್ಲಿರುವ ನೂರಾರು ಜನರಿಗೆ ಗೊತ್ತಿದೆ. ಅವರೆಲ್ಲಾ ಬರುತ್ತಾರೆಯೆ?” ಅಂತ ಕೇಳಿದ.
ನಾನು ಏನೂ ಹೇಳಲಿಲ್ಲ. ಆತ ಮುಂದುವರೆಸಿದ
“ಇಲ್ಲಿ ನೋಡು. ಅಷ್ಟು ಜನ ಹಸಿವಿನಿಂದ ಸಾಯುತ್ತಾರೆ ಅಂತ ಇಟ್ಟುಕೊ. ಆಗ ವಿಶ್ವ ಮಟ್ಟದಲ್ಲಿ ಎಲ್ಲರೂ ಆಸ್ಟ್ರೇಲಿಯಾದಲ್ಲಿ ಜನರು ಹಸಿವಿನಿಂದ ಸಾಯುತ್ತಾರೆ ಅಂತ ಮಾತನಾಡಿಕೊಳ್ಳುತ್ತಾರೆ. ಆಗ ನಮ್ಮ ದೇಶದ ಮರ್ಯಾದೆ ಹೊಗುವುದಿಲ್ಲವೇ?” ಅಂತ ಹೇಳುತ್ತಾ ನೂರಾರು ಸಂಖ್ಯೆಯಲ್ಲಿದ್ದ ಸಿರಿಂಜ್ ಗಳನ್ನು ಒಂದು ಚೀಲದಿಂದ ತೋರಿಸಿದ.
ನಾನು ಅದೇನೆಂದು ಕೇಳಿದೆ.
“ನಮ್ಮಲ್ಲಿ ಊಟಕ್ಕೆ ಬರುವವರಲ್ಲಿ ಮಾದಕ ವ್ಯಸನಿಗಳೇ ಹೆಚ್ಚು. ಅವರಿಗೆ ಅನುಕೂಲವಾಗಲಿ ಅಂತ”
“ಊಟ ಕೊಡುವುದೇನೋ ಒಪ್ಪಿದೆ. ಆದರೆ ಮಾದಕವ್ಯಸನಿಗಳಿಗೆ ಸಿರಿಂಜ್ ಕೊಡುವುದು ತಪ್ಪಲ್ಲವೇ?”
“ನಾವು ಸಿರಿಂಜ್ ಒದಗಿಸದಿದ್ದರೆ ತುಕ್ಕು ಹಿಡಿದ, ಬೇರೆಯವರು ಬಳಸಿದ ಸಿರಿಂಜ್ ಗಳನ್ನು ಬಳಸುತ್ತಾರೆ. ಅದರಿಂದ ರೋಗಗಳು ಹರಡಬಹುದು, ಇನ್ ಫೆಕ್ಷನ್ ಆಗಿ ಸಾಯಬಹುದು. ಹಾಗೆ ಸಾಯಲು ಬಿಡುವುದಕ್ಕಿಂದ ಹೇಗಾದರೂ ಮಾಡಿ ಅವರನ್ನು ಬದುಕಿಸಿಕೊಂಡರೆ ಒಂದಲ್ಲ ಒಂದು ದಿನ ಅವರನ್ನು ಡ್ರಗ್ ವ್ಯಸನದಿಂದ ಬಿಡಿಸಿ ಸರಿದಾರಿಗೆ ತರಬಹುದು. ಸತ್ತು ಹೋದರೆ ಆ ಸಾಧ್ಯತೆ ಇಲ್ಲವಾಗುತ್ತದೆ” ಎಂದ.
ಮನುಷ್ಯನ ಬದುಕಿಗೆ, ಪ್ರಾಣಕ್ಕೆ, ಘನತೆಗೆ ಇವರುಗಳು ಕೊಡುವ ಬೆಲೆಯನ್ನು ಕಂಡು ಮೂಕನಾಗಿ ನಿಂತೆ!
ಶ್ರೀಹರ್ಷ ಎಂ ಟೆಕ್ ಪದವೀಧರ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಬಾಲ್ಯ ಮತ್ತು ಇಂಜಿನಿಯರಿಂಗ್ ಪದವಿಯವರೆಗೆ ಓದಿದ್ದು ದಾವಣಗೆರೆಯಲ್ಲಿ. ಸಧ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ವಾಸ.
ಹವ್ಯಾಸಗಳು, ಓದು, ಸುತ್ತಾಟ, ಸಂಗೀತ.