ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ, ಆಯತಪ್ಪಿ ಬಿದ್ದ ಏಟಿಗೆ ಎಡ ಭುಜದ ಮೂಳೆ ಪಟ್ ಅಂದಿತ್ತು.
ದರ್ಶನ್ ಜೆ ಬರೆದ ಈ ವಾರದ ಕತೆ ಭಾನುವಾರದ ನಿಮ್ಮ ಓದಿಗೆ

 

ಡಿಸೆಂಬರ್ ತಿಂಗಳ ಕೊನೆ, ಚಳಿಯ ತೀವ್ರತೆ ಹೆಚ್ಚಾಗುತ್ತಿತ್ತು. ಒಂದರ ಬದಲು ಎರಡು ಹೊದಿಕೆ, ಮೈಗೆ ಸ್ವೆಟರ್, ತಲೆಗೆ ಟೊಪ್ಪಿ ಕಾಲಿಗೆ ಬಾಣಂತಿಯಂತೆ ಕಾಲುಚೀಲ ಹಾಕಿ ಮಲಗಿದರೂ ಚಿಟಿಕೆಯಷ್ಟು ಚಳಿ ಎಲ್ಲಿಂದಲೋ ನುಸುಳಿ ಮೈ ಬಿಗಿಸಿ ಬಿಡುತ್ತಿತ್ತು! ಅಂಥ ದಿನಗಳಲ್ಲೇ ಮೂರ್ತಣ್ಣ ಅನಾಥನಾದದ್ದು! ಬಹುಷಃ ಅವನಿಗೆ ಚಳಿಗಿಂತಾ ಅನಾಥಪ್ರಜ್ಞೆ ತೀವ್ರವಾಗಿ ಕಾಡಿರಬಹುದಾ? ಅದಕ್ಕೋ ಏನೋ ರುದ್ರಯ್ಯನವರ ಮನೆಯ ಮುಂದೆಯೇ ಕುಕ್ಕರಗಾಲು ಹಾಕಿ ಕುಂತವನು ಹೊತ್ತು ಮುಳುಗಿ ಕತ್ತಲಾಗಹೊರಟರೂ ಅಳ್ಳಾಡಲಿಲ್ಲ.

fರುದ್ರಪ್ಪನವರಿಗೆ ಕೆಲವು ತಿಂಗಳ ಹಿಂದಷ್ಟೇ ರಿಟೈರ್ಮೆಂಟ್ ಆಗಿತ್ತು. ಇದ್ದ ಎರಡು ಹೆಣ್ಣುಮಕ್ಕಳಲ್ಲಿ ದೊಡ್ಡವಳನ್ನು ಸಿರಾ ತಾಲ್ಲೂಕಿನ ಪರಮೇಶ್ ಎಂಬ ಲಾಯರಿಗೂ, ಚಿಕ್ಕವಳನ್ನು ಗುಬ್ಬಿಯ ಚನ್ನಬಸವಯ್ಯ ಎಂಬ ಹಿಸ್ಟರಿ ಲೆಕ್ಚರರ್ರಿಗೂ ಕೊಟ್ಟು ಮದುವೆ ಮಾಡಿ ವರ್ಷಗಳು ಸಂದಿದ್ದವು. ವೃತ್ತಿಯಿಂದ ಹೈ ಸ್ಕೂಲ್ ಮಾಸ್ಟರ್ ಆಗಿದ್ದ ರುದ್ರಪ್ಪನವರು ತುಮಕೂರು ಜಿಲ್ಲೆ, ಹಾಸನ ಜಿಲ್ಲೆ ಮತ್ತು ಕೋಲಾರದ ಕೆಲವು ಕಡೆಗಳಲ್ಲಿ ಕಲಿಸಿದವರು ತಮ್ಮ ಹಿರಿಯರಿಂದ ಬಂದ ಜಮೀನಿನಲ್ಲಿ ಗದ್ದೆ, ತೋಟ ಮಾಡಿಕೊಂಡು ತಾವಿರುತ್ತಿದ್ದ ಊರಿನಿಂದ ನಿಟ್ಟೂರಿಗೂ ಮತ್ತು ಅಲ್ಲಿಂದ ತಾವಿರುತ್ತಿದ್ದ ಊರಿಗೂ ಓಡಾಡಿ ಸೈ ಅನಿಸಿಕೊಂಡವರು.

ಮಕ್ಕಳಿಬ್ಬರನ್ನು ಮದುವೆ ಮಾಡಿ ಕಳಿಸಿದಮೇಲೆ ಮನೆಯೆಲ್ಲ ಬಿಕೋ ಅನ್ನಿಸುತ್ತಿತ್ತು. ಆಗಲೇ ಅವರ ಮನಸ್ಸು ತಮ್ಮ ತೋಟದ ಬಾಳೆ, ತೆಂಗು, ಬತ್ತ, ರಾಗಿ, ಆಕಳು ಸೀತಾರತ್ತ ವಾಲಿದ್ದು.

“ನೋಡೇ ಇವಳೇ, ರಿಟೈರ್ ಆದಮೇಲೆ ಎಲ್ಲ ಕಟ್ಕೊಂಡು ನಿಟ್ಟೂರಿಗೆ ಹೋಗಿಬಿಡಾಣ… ನಂಗೆ ಇವಾಗ್ಲೆ ಮನೆಯೆಲ್ಲ ಖಾಲಿ ಖಾಲಿ ಅಂತ ಅನ್ಸೋಕೆ ಶುರುವಾಗೈತೆ, ಆಮೇಲೆ ಪೂರ್ತಿ ದಿನಾ ನಂಕೈಲಂತೂ ಇಲ್ಲಿ ಇರಕಾಗಲ್ಲ ನೋಡು..” ಅನ್ನುತ್ತಿದ್ದವರು ರಿಟೈರ್ ಆದ ಎರಡು ತಿಂಗಳಲ್ಲೇ ತೋಟದ ಮನೆಯ ರಂಗಣ್ಣನಿಗೆ ಹೇಳಿ ಕಳುಹಿಸಿ ಟ್ರ್ಯಾಕ್ಟರ್ ತರಿಸಿದ್ದರು.

ಸಾಮಾನು ಸರಂಜಾಮು ಕಟ್ಟುವ ಹಿಂದಿನ ರಾತ್ರಿ ದೇವಿರಮ್ಮ ,
“ಏನ್ರಿ ನಮ್ಮ ಜೊತೆಗೆ ಮೂರ್ತಣ್ಣನ್ನು ಕರ್ಕೊಂಡೋಗನಾ? ಪಾಪ ಅವ್ನಿಗಾದ್ರು ಯಾರವ್ರೆ!” ಅಂದಾಗ ಅದರ ಬಗ್ಗೆಯೇ ಯೋಚಿಸುತ್ತಿದ್ದವರಂತೆ ರುದ್ರಪ್ಪನೋರು,
“ನೋಡು ಮೂರ್ತಣ್ಣ ಬರಾದಿದ್ರೆ ನಂಗೂ ಸಂತೋಷಾನೆ, ಅವ್ನಿದ್ರೆ ಒಂದಾನೆ ಬಲ ಇದ್ದಂಗೆ ನಂಗೆ, ಜೊತೆಗೆ ನಮಗೂ ಹಿರೀಕ್ರು ಅಂತ ಯಾರಾದ್ರೂ ಇರ್ಬೇಕಲ್ಲ” ಅಂದಿದ್ದರು.

*****

ಮೂರ್ತಣ್ಣ ಅನಾಥನಲ್ಲ. ಅವನಿಗೆ ಅಣ್ಣ ತಮ್ಮಂದಿರಿದ್ದರು. ಸ್ಥಿತಿವಂತರ ಕುಟುಂಬವಾಗಿದ್ದಿದ್ದರಿಂದ ಅಕ್ಕಿ, ಬೇಳೆ, ಎಣ್ಣೆಗೆ ಎಂದೂ ಕುಂದಿರಲಿಲ್ಲ. ಅಣ್ಣಂದಿರ ಮದುವೆಯಾಯಿತು, ಅತ್ತಿಗೆಯರು ಬಂದರು. ತಮ್ಮಂದಿರಿಗೂ ಆಯಿತು ಅವರ ಹೆಂಡಿರೂ ಬಂದರು. ತುಂಬಿದ ಮನೆ ಭಾಗವಾಗಿ, ಒಂದು ಬಾಗಿಲು ನಾಲ್ಕಾಯಿತು. ಮೂರ್ತಣ್ಣ ಎಲ್ಲರ ಮದುವೆಯಲ್ಲಿಯೂ ಓಡಾಡಿದ, ತೋರಣ ಕಟ್ಟಿದ, ಮೂಟೆ ಹೊತ್ತ, ಸುಣ್ಣ-ಬಣ್ಣ ಮಾಡಿದ, ಚಪ್ಪರ ಹಾಕಿದ. ಅದ್ಯಾಕೋ ಅಣ್ಣಂದಿರಾಗಲಿ, ತಮ್ಮಂದಿರಾಗಲಿ ಇವನಿಗೊಂದು ಮದುವೆ ಮಾಡುವ ಯೋಚನೆಯನ್ನೇ ಮಾಡಲಿಲ್ಲ. ಇವನೂ ಕೇಳಲಿಲ್ಲ. ಮದುವೆಯಾದವರಿಗೆಲ್ಲ ಮಕ್ಕಳಾದವು. ಅವು ಬೆಳೆದು ಶಾಲೆಗೆ ಹೋಗಲು ಶುರುವಿಟ್ಟವು. ಅವರ ಜವಾಬ್ದಾರಿಯೂ ಇವನ ಮೇಲೆಯೇ ಬಿತ್ತು. ಅಥವಾ ಇವನೇ ವಹಿಸಿಕೊಂಡ. ಒಟ್ಟಿನಲ್ಲಿ ಮೂರ್ತಣ್ಣ ವ್ಯಾವಹಾರಿಕವಾಗಿ ದಡ್ಡ!

ಮಕ್ಕಳೂ ಬೆಳೆದವು, ಇವನಿಗೂ ಐವತ್ತು ದಾಟಿತು. ಅವರೂ ಇವನನ್ನು ಚಿಕ್ಕಪ್ಪ ದೊಡ್ಡಪ್ಪ ಅನ್ನದೆ ಮೂರ್ತಣ್ಣ ಎಂದೇ ಅನ್ನತೊಡಗಿದರು. ಸುತ್ತಮುತ್ತಲಿನವರಿಗೆ ಇದರಲ್ಲೆಲ್ಲಾ ಸ್ವಾರ್ಥ ಕಾರಣ ತಿಳಿದರೂ, ಮೂರ್ತಣ್ಣ ಎಂದಿಗೂ ಕಂಗೆಡಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದುಬಿಟ್ಟ.

ಆದರೆ, ಆಗಾಗ ಇವ ಖಾಯಿಲೆ ಬೀಳತೊಡಗಿದ. ಆಗಾಗೊಂದು ಬೀಡಿ ಸೇದುತ್ತಿದ್ದವನಿಗೆ ಕೆಮ್ಮು ಆವರಿಸಿಬಿಟ್ಟರೆ ವಾರಗಳಗಟ್ಟಲೆ ಹೋಗುತ್ತಿರಲಿಲ್ಲ. ದಿನಕ್ಕೊಂದು ಬಾಗಿಲ ಬಳಿ ಮಲಗುತ್ತಿದ್ದವನಿಗೆ ಬಾಗಿಲ ಹೊರಗಡೆ ಮಲಗಲು ಹೇಳಿದರು.

“ನಿಮಗೆ ಬೆಳಿಗ್ಗೆ ಕಸ ಗುಡಿಸಲಿಕ್ಕೆ ರಂಗೋಲಿ ಹಾಕಲಿಕ್ಕೆ ತೊಂದರೆಯಾದರೆ… ಅಟ್ಟದಲ್ಲೇ ಮಲಗುವೆ” ಎಂದ.

ಆದರೆ ಅಟ್ಟದಿಂದ ಕೆಮ್ಮಿದರೆ ಮನೆಮಂದಿಯೆಲ್ಲ ನಿದ್ರಿಸಲು ತೊಂದರೆಯಾಗುವುದೆಂದು ಮನೆ ಹೊರಗಡೆಯೇ ಮಲಗಲು ಹೇಳಿದರು. ಎಲ್ಲರಿಗಾಗಿ ಹುಚ್ಚನಂತೆ ದುಡಿದ ಮೂರ್ತಣ್ಣನಿಗೆ ಚಳಿಗಾಲದ ತೀವ್ರತೆ ಎಷ್ಟೋ ವಿಷಯಗಳನ್ನು ಹೇಳಿಕೊಟ್ಟಿತು.

ಮನೆಯ ಹೊರಗೆ ಬಿದ್ದವನನಿಗೆ ದಿನನಿತ್ಯದ ಕಾಫಿ ತಿಂಡಿಗಳೂ ಕಡಿಮೆಯಾದವು. ಮೂರ್ತಣ್ಣ ಮೊದಲಬಾರಿ ಕಂಗಾಲಾಗಿದ್ದ. ಸ್ವಾಭಿಮಾನಿಯಾಗಿದ್ದರಿಂದ ಮನೆಯವರ ಮೇಲೆ ಹಕ್ಕು ಚಲಾಯಿಸಲಿಲ್ಲ. ಪಾಲು ಕೇಳಲು ಏನೂ ಉಳಿದಿರಲಿಲ್ಲ. ಮುಂದೇನು ಎಂದು ಯೋಚಿಸುತ್ತಿರುವಾಗಲೇ ಜಿಲ್ಲೆಯಲ್ಲೆಲ್ಲಾ ನೀರಿನ ಅಭಾವ ಶುರುವಾಯಿತು. ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಗಳಲ್ಲಿ ದಿನಕ್ಕೆರೆಡು ಬಿಂದಿಗೆಯಂತೆಯೂ, ಬಳಸುವ ನೀರನ್ನು ಮೂರುದಿನಕ್ಕೊಮ್ಮೆ ಅರ್ಧಗಂಟೆಗಳ ಕಾಲ ಬಿಡತೊಡಗಿದರು.

ಇದನ್ನೆಲ್ಲಾ ನೋಡಿದ ಮೂರ್ತಣ್ಣ ಒಂದು ನಿರ್ಧಾರಕ್ಕೆ ಬಂದ. ಬಿಂದಿಗೆಯೊಂದಕ್ಕೆ ಐವತ್ತು ಪೈಸೆಯಂತೆ ನೀರು ತುಂಬಿಸಿ ಮನೆಗಳಿಗೆ ಹಾಕತೊಡಗಿದ. ಆದರೆ ನೀರಿಗಾಗಿ ಬೋರು ಒತ್ತಬೇಕಿತ್ತು. ಅಂತರ್ಜಲ ತೀವ್ರವಾಗಿ ಕುಸಿದಿದ್ದರಿಂದ ಒಂದು ಬಿಂದಿಗೆ ನೀರು ತುಂಬಿಸಲು ತುಂಬಾ ಕಷ್ಟಪಡಬೇಕಿತ್ತು. ಅಂಗಡಿ ಮುಗ್ಗಟ್ಟಿನವರು, ಹೋಟೆಲ್ಲಿನವರು ಮತ್ತು ಅನುಕೂಲಸ್ಥ ಮನೆಯವರು ಇವನಿಂದ ಹತ್ತಾರು ಬಿಂದಿಗೆ ನೀರು ತುಂಬಿಸಿಕೊಂಡು, ಕಾಸೂಕೊಟ್ಟು, ತಿನ್ನಲು ತಿಂಡಿಯೊ, ಊಟವೋ ಅಥವಾ ಸಮಯಕ್ಕೆ ತಕ್ಕಂತೆ ಕಾಫಿಯನ್ನೂ ಕೊಟ್ಟರು. ಜೀಕುತ್ತಿದ್ದ ಮೂರ್ತಣ್ಣನ ಜೀವನ ಸಮತೋಲನಕ್ಕೆ ಬರಲಾರಂಭಿಸಿತ್ತು.

ಒಮ್ಮೆ ರುದ್ರಪ್ಪನವರ ಮನೆಗೂ ನೀರು ತುಂಬಿಸಿ ಕೊಡುವಾಗ ಅದೇನಾಯಿತೋ ಎಲೆ ಅಡಿಕೆ ಹಾಕಿ ಕುಂತ ಪತಿ ಪತ್ನಿಯರ ಮುಂದೆ ತನ್ನ ದುಮ್ಮಾನವೆಲ್ಲ ತೋಡಿಕೊಂಡ. ಆಗಾಗ ನಿಟ್ಟೂರಿಗೂ, ತುಮಕೂರಿಗೂ ಮತ್ತು ತಾವು ಕೆಲಸಮಾಡುತ್ತಿದ್ದ ಊರಿಗೂ ತಿರುಗಾಡಬೇಕಿದ್ದ ರುದ್ರಯ್ಯನವರಿಗೆ, ಹೆಣ್ಣುಮಕ್ಕಳೇ ಇದ್ದ ಮನೆಗೆ ಮೂರ್ತಣ್ಣ ದೇವರಾಗಿ ಕಂಡ. ಹಿರಿಯ, ನಂಬಿಕಸ್ತ, ಮೇಲಾಗಿ ಅವರದ್ದೇ ಜನ.

ಹಿಂದೂ ಮುಂದೂ ಹೆಚ್ಚು ಯೋಚಿಸದೆ “ಮೂರ್ತಣ್ಣ, ಅಲ್ಲಿ ಇಲ್ಲಿ ಯಾಕ್ ಮಲ್ಕಂತಿಯಾ? ಇವತ್ತಿಂದ ನಮ್ ಕಾಯಿ ರೂಮ್ ಕ್ಲೀನ್ ಮಾಡ್ಕಂಡು ಅಲ್ಲೇ ಇದ್ದು ಬಿಡಪ್ಪ, ನಾನು ಓನರ್ ಗೆ ಹೇಳ್ಕಣ್ತೀನಿ” ಅ೦ದರು. ಮೂರ್ತಣ್ಣನೂ ಆ ಮಾತಿಗೆ ಸುಲಭವಾಗಿ ಒಪ್ಪಿಬಿಟ್ಟ. ರುದ್ರಯ್ಯನವರು ಇರಲಿಕ್ಕೆ ಜಾಗ ಮಾಡಿಕೊಟ್ಟದಲ್ಲದೆ, ನೀರು ಹೊಡೆಯಲು ಒಂದು ಹಳೆಯ ರಾಲಿಸ್ ಸೈಕಲ್ ಕೊಂಡುಕೊಟ್ಟಾಗ ಅವನ ಖುಷಿಗೆ ಪಾರವೇ ಇರಲಿಲ್ಲ. ಅದನ್ನು ತುಳಿವಾಗೆಲ್ಲ ಮೂರ್ತಣ್ಣ ತನ್ನಿಂದ ತಾನೇ ಬಿಡುಗಡೆಯಾಗುತ್ತಿದ್ದ!

ಇದು ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ, ಆಯತಪ್ಪಿ ಬಿದ್ದ ಏಟಿಗೆ ಎಡ ಭುಜದ ಮೂಳೆ ಪಟ್ ಅಂದಿತ್ತು.

ಡಾಕ್ಟರ್ ಪಟ್ಟು ಹಾಕಿ “ಇನ್ನು ಮೂರು ತಿಂಗಳು ಏನೂ ಮಾಡುವಹಾಗಿಲ್ಲ” ಅಂದು ಬಿಟ್ಟರು.

ಮೂರ್ತಣ್ಣ ಎಲ್ಲರ ಮದುವೆಯಲ್ಲಿಯೂ ಓಡಾಡಿದ, ತೋರಣ ಕಟ್ಟಿದ, ಮೂಟೆ ಹೊತ್ತ, ಸುಣ್ಣ-ಬಣ್ಣ ಮಾಡಿದ, ಚಪ್ಪರ ಹಾಕಿದ. ಅದ್ಯಾಕೋ ಅಣ್ಣಂದಿರಾಗಲಿ, ತಮ್ಮಂದಿರಾಗಲಿ ಇವನಿಗೊಂದು ಮದುವೆ ಮಾಡುವ ಯೋಚನೆಯನ್ನೇ ಮಾಡಲಿಲ್ಲ. ಇವನೂ ಕೇಳಲಿಲ್ಲ. ಮದುವೆಯಾದವರಿಗೆಲ್ಲ ಮಕ್ಕಳಾದವು. ಅವರ ಜವಾಬ್ದಾರಿಯೂ ಇವನ ಮೇಲೆಯೇ ಬಿತ್ತು. ಅಥವಾ ಇವನೇ ವಹಿಸಿಕೊಂಡ.

ಮೂರ್ತಣ್ಣನ ತಲೆಯ ಮೇಲೆ ಬೆಟ್ಟ ಬಿದ್ದ ಹಾಗಾಯ್ತು. ತಾನು ಹೆಚ್ಚು ಸಂಭ್ರಮಿಸಿಬಿಟ್ಟೆನಾ? ಎಂದು ತನ್ನ ಮೇಲೆ ತನಗೇ ಜಿಗುಪ್ಸೆಯಾಯ್ತು. ಅವನ ಅತ್ತಿಗೆಯರು ಆಗೊಮ್ಮೆ ಈಗೊಮ್ಮೆ ತಿಂಡಿಯೊ ಕಾಪಿಯೋ ಕೊಟ್ಟು ಸುಮ್ಮನಾದರು. ಅವನ ಒಬ್ಬ ಅಣ್ಣ “ಏನಾದರೂ ದುಡ್ಡು ಕಾಸು ಬೇಕಿದ್ದರೆ ಕೇಳು” ಎಂದಷ್ಟೇ ಹೇಳಿ ಒಂದು ಬಿಡಿಗಾಸೂ ಕೊಡದೆ ಹೋದನು.

ಆದರೆ ರುದ್ರಪ್ಪ ಮತ್ತು ದೇವಿರಮ್ಮನವರು ಮಾತ್ರ ಮೂರ್ತಣ್ಣನ ಕೈಬಿಡಲಿಲ್ಲ. ಅವನ ಕೈ ಸರಿಹೋಗುವವರೆಗೂ ಅವನ ಊಟ-ತಿಂಡಿ ನೋಡಿಕೊಂಡರು. ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದರಿಂದ ಮಾತ್ರೆ ಕೊಡಿಸುವುದರವರೆಗೆ, ಪಟ್ಟು ಬಿಚ್ಚಿದಮೇಲೆ ಇಸ್ಮಾಯಿಲ್ ನ ಕರೆಸಿ ಎಣ್ಣೆ ನೀವಿಸುವವರೆಗೆ, ಅವನ ಶುಶ್ರೂಷೆ ಮಾಡಿಸಿದರು. ಅವನನ್ನು ಯಾವತ್ತೂ ಅವರು ಹೊರಗಿನವನಂತೆ ನೋಡಲೇ ಇಲ್ಲ. ಆದ್ದರಿಂದಲೇ ಅವನು ತನಗಿಂತಾ ಚಿಕ್ಕವರಾಗಿದ್ದ ರುದ್ರಪ್ಪನವರನ್ನು “ಅಯ್ಯ” ಅಂತಲೂ ದೇವೀರಮ್ಮನವರನ್ನು “ಅಮ್ಮಾ” ಅಂತಲೂ ತುಂಬು ಕಂಠದಿಂದ ಕರೆಯಲು ಶುರುಮಾಡಿದ್ದು.

*****

ಮರುದಿನ ಬೆಳಿಗ್ಗೆ ಬೇಗನೆದ್ದ ದಂಪತಿಗಳು ಸ್ನಾನ ಮಾಡಿ, ಮನೆದೇವರಾದ ಗುಬ್ಬಿ ಚನ್ನಬಸವೇಶ್ವರನಿಗೆ ಪೂಜೆ ಮಾಡಿ, ಆರತಿ ಬೆಳಗಿ, ಅಡ್ಡಬಿದ್ದೆದ್ದು ಜೋಡಿಸಿದ್ದ ಕೈಗಳಿಂದ….
“ಇಷ್ಟುದಿನ ನಮ್ಮ ಕುಟುಂಬಾನ ಈ ಮನೆಯಲ್ಲಿ ಸಲಹಿದ್ದಿಯಾ ನಮ್ಮಪ್ಪ… ಹಿಂಗೇನೆ ನಮ್ಮನಾ ಮುಂದೇನೂ ಕಾಪಾಡು” ಅನ್ನುತ್ತಾ ರಾತ್ರಿ ಕಟ್ಟಿಟ್ಟಿದ್ದ ಸರಂಜಾಮುಗಳನ್ನು ಒಂದೊಂದಾಗಿ ಟ್ರ್ಯಾಕ್ಟರ್ ಗೆ ಜೋಡಿಸುತ್ತಿರುವಾಗಲೇ……. ಅದೆಲ್ಲಿದ್ದನೋ ಒಣಕಲು ದೇಹದ, ಬಿಳಿತಲೆ ಗಡ್ಡದ, ಚೂಪು ಮೂಗಿನ, ನೆಡೆಯುವಾಗ ಸ್ವಲ್ಪ ಗೂನು ಅನ್ನಿಸುವ ಬೆನ್ನಿನ, ಬರಿಗಾಲಿನ ಮೂರ್ತಣ್ಣ ಬರ ಬರ ನಡೆದು ಬಂದು,
“ಎನ್ರಪ್ಪ ನೆನ್ನೆಗ್ಲಿನ್ನ ವೋಗ್ಬೇಕು ಅಂದ್ಕಂಡ್ ಇದ್ದಿವಿ ಅಂದ್ರಿ, ಇವತ್ತಾಲೆ ಗಂಟು ಮೂಟೆನಾ? ಸಾಮಾನೆಲ್ಲ ನಂಗೇಳಿದ್ರೆ ನಾನ್ ಇಟ್ಟು ಕೊಡ್ತಿರ್ಲಿಲ್ವೇ? ಎ ಬಿಡು ದೇವಮ್ಮ” ಎಂದು ಅವರ ಕೈಯಲ್ಲಿದ್ದ ಪುಟ್ಟ ಟೀಪಾಯಿಯನ್ನು ಎತ್ತಿ ಒಂದೇ ಉಸಿರಿಗೆ ಓಡಿ, ಟ್ರ್ಯಾಕ್ಟರ್ ನ ಮಧ್ಯೆ ಜಾಗ ಮಾಡಿ ಇಟ್ಟ. ತೋಟದ ಮನೆಯ ರಂಗಣ್ಣ, ಮೂರ್ತಣ್ಣ, ರುದ್ರಪ್ಪನೋರು ಎಲ್ಲರೂ ಸೇರಿ ಒಂದೆರಡು ಗಂಟೆಗಳಲ್ಲಿ ಮನೆ ಬರಿದು ಮಾಡಿದರು!

ರುದ್ರಪ್ಪನೋರು “ದೇವಿ ಹಂಗೆ ನೋಡಿ ಬಾರೆ.. ಏನಾದ್ರು ಬಿಟ್ಟುಗಿಟ್ಟಿದೀಯಾ ಒಳಗೆ ಒಂದು ಸಲಿ” ಅಂದದಕ್ಕೆ
“ನಾನು ಓಗಲ್ಲಪ್ಪ, ಕೈಕಾಲು ಬಿದ್ದಂಗಾಗುತ್ತೆ” ಅಂದರು.

ಊರೂರಿಗೆ ವರ್ಗವಾಗುತ್ತಿದ್ದ ರಾಯರು ಮಕ್ಕಳು ಸ್ವಲ್ಪ ದೊಡ್ಡವರಾಗತೊಡಗಿದ ಮೇಲೆ ತುಮಕೂರಿನಲ್ಲಿಯೇ ಬಾಡಿಗೆ ಮನೆ ಮಾಡಿ ಹೆಂಡತಿ ಮಕ್ಕಳನ್ನು ಅಲ್ಲಿಯೇ ಇರಿಸಿ, ತಾವು ಮಾತ್ರ ಪಾಠದೂರಿಗೂ, ತೋಟದೂರಿಗೂ ಮತ್ತು ಸಂಸಾರವಿದ್ದ ಊರಿಗೂ ಓಡಾಡುತ್ತಿದ್ದರು! ಇವರ ಪರ್ಯಟನೆ ಕಂಡು ಸುತ್ತಮುತ್ತಲಿನ ಕೆಲವರು ಆಡಿಕೊಂಡರು, ಕೆಲವರು ಭೇಷ್ ಎಂದರು. ಈಗ್ಗೆ ಐದು ವರ್ಷದ ಕೆಳಗೆ ಸಿಟಿಗೇ ವರ್ಗವಾದ ಮೇಲೆಯೇ ಮತ್ತೆ ಪೂರ್ಣವಾಗಿ ಸಂಸಾರದೊಡನೆ ನೆಲೆ ನಿಂತದ್ದು ರುದ್ರಪ್ಪನೋರು.

ದೇವೀರಮ್ಮನವರಷ್ಟು ಮನೆಯನ್ನು ಭಾವನಾತ್ಮಕವಾಗಿ ಹಚ್ಚಿಕೊಳ್ಳದಿದ್ದರೂ ಆಗಾಗ ಅವರು ಆಡುತ್ತಿದ್ದ,
“ಮಕ್ಳು ಆಡಿ ಬೆಳೆದ ಮನೆ ಬಿಟ್ಟೋಬೇಕು ಅಂದ್ರೆ ಸಂಕ್ಟ ಆಗತೈತೆ” ಅನ್ನುವ ಮಾತನ್ನು ನೆನಪಿಸಿಕೊಂಡು ಒಳಗೆ ಕಾಲಿಡಲು ರುದ್ರಪ್ಪನವರೂ ಹಿಂಜರಿದರು!
ಕಡೆಗೆ ಮೂರ್ತಣ್ಣನೇ “ಇರ್ರಮ್ಮ ನಾನೇ ನೋಡ್ಕೊಂಡ್ ಬತ್ತೀನಿ” ಅಂದವನು ಅಟ್ಟ, ಹಿತ್ತಲು, ರೂಮು ಎಲ್ಲಾ ತಡಕಾಡಿ ಬಂದು” ಏನಮ್ಮ ಗುಬ್ಬಿಯಪ್ಪನ್ ಫೋಟಾನೂ, ಹಿತ್ತಾಳೆ ದೀಪಾನೂ ಹಂಗೆ ಬಿಟ್ಟಿದೀರಾ?” ಎಂದು ಕೇಳಿದ.

ದೇವೀರಮ್ಮ ಗಂಡನ ಮುಖವನ್ನೊಮ್ಮೆ ನೋಡಿದರು.

ರುದ್ರಪ್ಪನೋರು “ಮೂರ್ತಣ್ಣ ಇಷ್ಟು ದಿನ ಮನೇನಾ, ಮಕ್ಳನ್ನಾ, ನಮ್ಮನ್ನೆಲ್ಲ ಕಾದವ್ನೆ ನಮ್ಮಪ್ಪ, ಇವಾಗ ಎತ್ಕೊಂಡೋಗೋದು ಸರಿಯಲ್ಲ, ಇನ್ನು ಮುಂದೇನೂ ಈ ಮನೆನಾ ಅವ್ನೆ ಕಾಯ್ಲಿ ಬಿಡು” ಅ೦ದರು.
ಮೂರ್ತಣ್ಣ ತಲೆಯಾಡಿಸಿದ.

ದೇವೀರಮ್ಮ ಮನೆಗೆ ಬೀಗ ಹಾಕಿ, ಹೊಸ್ತಿಲು ಮುಟ್ಟಿ ನಮಸ್ಕರಿಸಿ, ಎದುರು ಮನೆಯವರಿಗೆ ಕೀಲಿಕೈ ಕೊಡಲು ಹೋದಾಗ ಅವರು ಕುಂಕುಮಕ್ಕೆ ಒಳಗೆ ಕರೆದರು. ಎಲೆ-ಅಡಿಕೆ-ಕಾಯಿ-ಬಾಳೆಹಣ್ಣು ದೇವೀರಮ್ಮನ ಮಡಿಲು ತುಂಬಿದವು.

“ಆಗಾಗ ಇತ್ಲಾಗೆ ಬರ್ತಾ ಇರಿ ದೇವಿರಮ್ಮ.. ಮರೀಬೇಡಿ” ಎಂದರು ಮನೆಯವರು.

ಹೀಗೆ ನಾಲ್ಕಾರು ಮನೆಯಲ್ಲಿ ನಡೆದು, ದೇವಿರಮ್ಮ ನವರ ಮನಸ್ಸು ತುಂಬಿ ಬಂದು ಕಂಗಳು ಒದ್ದೆಯಾದವು. ಭಾರವಾದ ಮನಸ್ಸಿನಿಂದ ಎಲ್ಲರಿಗೂ ವಂದಿಸಿ, ಸಿಕ್ಕ ಮಕ್ಕಳ ಕೆನ್ನೆ ಸವರಿ ತಮ್ಮ ಮನೆಯ ಹತ್ತಿರ ಬ೦ದರು.

ಎಲ್ಲವೂ ಸಮೀಪಿಸುತ್ತಿರುವಂತೆ ಅನ್ನಿಸಿ ‘ಮೂರ್ತಣ್ಣ’ ಮತ್ತಷ್ಟು ನಿಶಬ್ಧನಾದ!

ರುದ್ರಪ್ಪನೋರು ಸರಾಗವಾಗಿ ಮೊದಲೇ ನಿರ್ಧರಿಸಿರುವಂತೆ “ಹೋಗಪ್ಪಾ ಮೂರ್ತಣ್ಣ ನಿನ್ನ ಗಂಟು ಮೂಟೆ ತಗಂಬಾ ಹೊರಟು ಬಿಡಾಣ” ಅಂದರು. ಮೂರ್ತಣ್ಣ ಮಾತನಾಡಲಿಲ್ಲ!

ದೇವಿರಮ್ಮನವರೂ ಅದೇ ಮಾತು ಹೇಳಿದಮೇಲೆ ತಗ್ಗಿಸಿದ ತಲೆಯನ್ನು ನಿಧಾನವಾಗಿ ಮೇಲೆತ್ತಿದ ಮೂರ್ತಣ್ಣ…
” ಅಮ್ಮಾ ಇಷ್ಟು ದಿನಾ ನಿಮ್ಮ ಮನೆಯವನಂಗೇ ನೋಡ್ಕಂಡಿರಾ, ಅವ್ರಿವ್ರ ಮನೇಲಿ ನೀರು ತುಂಬಿಕಂಡು, ಸೌದೆ ಒಡ್ಕಂಡು, ಕಾಯಿ ಸುಲ್ಕಂಡು ಎಂಗೊ ಹೊಟ್ಟೆ ಹೊರ್ಕೊಂತಾ ಇದ್ದೋವ್ನಿಗೆ ನಾಲ್ಕಾರು ವರ್ಷ ಅನ್ನ, ನೆಳ್ಳು ಕೊಟ್ಟಿದ್ದೀರಾ, ಸಾಕು ಬಿಡಮ್ಮ! ಅದೂ ಅಲ್ದೆ ಅಲ್ಲಿ ನಂಗೆ ಹಿಂದೂ ಮುಂದೂ ಯಾರೂ ಗೊತ್ತಿಲ್ಲ, ಕಾಲ ಕಳಿಯಾಕೆ ಆಗಕಿಲ್ಲ , ಇಲ್ಲಾದ್ರೆ ಎಲ್ಲಾ ಗೊತ್ತಿರೋರೇಯಾ ಎಂಗೊ ನೆಡ್ಕೊಂಡು ಒಗತೈತೆ ” ಅ೦ದ.

ಮೂರ್ತಣ್ಣನ ಸ್ವಾಭಿಮಾನದ ಅರಿವಿದ್ದ ದೇವೀರಮ್ಮನವರು ಒತ್ತಾಯಿಸಲಿಲ್ಲ. ರುದ್ರಪ್ಪನವರೇ ಹತ್ತಿರಕ್ಕೆ ಬಂದು
“ಮೂರ್ತಣ್ಣ ನಮಗೆಲ್ಲಾ ಹಿರಿಯ ನೀನು, ಸುಮ್ನೆ ನಮ್ಮ ಜೊತಿಗೆ ಬಾ, ಕೈಲಾದ ಕೆಲಸ ಮಾಡು, ಆಗದಿದ್ರೆ ಬಿಡು, ಆಳು ಕಾಳು ಇರತೈತೆ, ನೀನೂ ಇದ್ರೆ ನಮಗೂ ಒಂದ್ ಧೈರ್ಯ” ಅಂದರೂ ಮೂರ್ತಣ್ಣ ಮಾತನಾಡಲಿಲ್ಲ!

ರುದ್ರಪ್ಪನೋರು ಪುನಹಾ ಮಾತನಾಡದೆ, ನೂರು ರುಪಾಯಿಯ ನೋಟೊಂದನ್ನು ಜೇಬಿನಿಂದ ತೆಗೆದು ಮೂರ್ತಣ್ಣನ ಪ್ರತಿರೋಧದ ನಡುವೆಯೇ ಮಾಸಿದ ಅವನ ಅಂಗಿ ಜೇಬಿಗೆ ಇಟ್ಟರು. ಮೂರ್ತಣ್ಣ ಕಸಿವಿಸಿಗೊಂಡರೂ ಸುಮ್ಮನಿದ್ದ!

ರಂಗಣ್ಣನಿಗೆ ರಾಯರು ಸನ್ನೆ ಮಾಡಿದರು. ಟ್ರ್ಯಾಕ್ಟರ್ ಸದ್ದು ಮಾಡತೊಡಗಿತು. ಅಮ್ಮನವರು ಹಿಂದೆ ಟ್ರೇಲರ್ ನಲ್ಲಿ ಕುಳಿತರು, ರಾಯರು ರಂಗಣ್ಣನ ಎಡಗಡೆಯ ದೊಡ್ಡ ಟೈರಿನ ಗಾರ್ಡ್ ನ ಮೇಲೆ ಕುಳಿತರು. ಟ್ರ್ಯಾಕ್ಟರ್ ಚಲಿಸತೊಡಗಿತು, ಮೂರ್ತಣ್ಣ ತಲೆಬಗ್ಗಿಸಿಯೇ ನಿಂತವನು ಗಾಡಿಯ ಶಬ್ದ ಕ್ಷೀಣಿಸವಾಗುತ್ತಾ ಬಂದಾಗ ಆತಂಕದಿಂದ ತಲೆ ಎತ್ತಿದ. ದೂರದಲ್ಲಿ ದೇವೀರಮ್ಮನವರು ಕೈಬೀಸಿದಂತಾಯ್ತು! ಮೂರ್ತಣ್ಣ ಕೈ ಎತ್ತುವಷ್ಟರಲ್ಲಿ ಟ್ರ್ಯಾಕ್ಟರ್ ಬಲಗಡೆಗೆ ತಿರುಗಿತ್ತು!