ಎರಡು ವರ್ಷಗಳ ಹಿಂದೆ, ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿಯ ಜತೆ ಸೇರಿಕೊಂಡು ಸರ್ಕಾರ ರಚಿಸುವಾಗ, ಮಾಧ್ಯಮಗಳು ಅನೇಕ ಬಗೆಯ ದೃಶ್ಯಗಳನ್ನು ತೋರಿಸಿದವು. ಶಾಸಕರ ಸಭೆ, ಗಾಂಧಿ ಪ್ರತಿಮೆ ಮುಂದೆ ಧರಣಿ, ಪತ್ರಿಕಾಗೋಷ್ಠಿ, ಅನುಯಾಯಿಗಳಿಂದ ನಾಯಕರ ಭೇಟಿ, ರೆಸಾರ್ಟುಗಳಿಗೆ ಬಸ್ಸುಗಳಲ್ಲಿ ಹೋಗುತ್ತ ‘ವಿ’ ಆಕಾರದಲ್ಲಿ ಬೆರಳು ಮಾಡಿತೋರುವುದು-ಇತ್ಯಾದಿ ದೃಶ್ಯಗಳವು. ಇವುಗಳಲ್ಲಿ ಕಾಣಿಸುತ್ತಿದ್ದವರೆಲ್ಲ ಶ್ವೇತವಸ್ತ್ರಧಾರಿಗಳಾದ ಗಂಡಸರೇ. ಮಹಿಳೆಯರು ಅಪ್ಪಿತಪ್ಪಿಯೂ ಕಾಣುತ್ತಿರಲಿಲ್ಲ. ಈ ದೃಶ್ಯಗಳು ಶಕ್ತಿರಾಜಕಾರಣದ ಸಂಸ್ಕೃತಿಯೇ ಸಾರ್ವಜನಿಕ ಬದುಕಿನ ಬಹಳ ಮುಖ್ಯವಾದ ಕ್ಷೇತ್ರವಾಗಿರುವ ರಾಜಕಾರಣದಿಂದ ಜನಸಂಖ್ಯೆಯ ಅರ್ಧದಷ್ಟಿರುವ ಸ್ತ್ರೀಯರನ್ನು ಹೇಗೆ ಹೊರಗಿಟ್ಟಿದೆ ಎಂಬುದನ್ನು ಸೂಚಿಸುವ ಸ್ಯಾಂಪಲ್ಲುಗಳಂತೆ ಇದ್ದವು. ಇದಕ್ಕೆ ತಕ್ಕಂತೆ ನಾಟಕೀಯ ಬೆಳವಣಿಗೆಗಳ ಬಳಿಕ ಅಸ್ತಿತ್ವಕ್ಕೆ ಬಂದ ಕುಮಾರಸ್ವಾಮಿ ಸರ್ಕಾರದಲ್ಲಿ ಕೂಡ ಒಬ್ಬ ಮಹಿಳೆಯೂ ಇರಲಿಲ್ಲ. ಶಾಸನಸಭೆ ಲೋಕಸಭೆಗಳಲ್ಲಿ ೩೩%ರಷ್ಟು ಮಹಿಳಾ ಪ್ರಾತಿನಿಧ್ಯ ಇರಬೇಕೆಂಬ ಮಸೂದೆಯ ಬಗ್ಗೆ ದೇಶದಾದ್ಯಂತ ಒತ್ತಾಯ ನಡೆಯುತ್ತಿದೆ. ಇಂತಹ ಹೊತ್ತಲ್ಲಿ, ಮಹಿಳೆಯರಿಗೆ ಅವಕಾಶ ಕೊಡದೆಯೇ ಕರ್ನಾಟಕದಲ್ಲಿ ಒಂದು ಮಂತ್ರಿಮಂಡಲ ಆಳ್ವಿಕೆ ನಡೆಸಿತು. ಈ ರಾಜಕೀಯ ಸಂಸ್ಕೃತಿಯು ಮೂಲತಃ ನಮ್ಮ ಸಾಮಾಜಿಕ ಮನೋಧರ್ಮದ ಫಲಶೃತಿಯಾಗಿದೆ.
ವಿಚಿತ್ರವೆಂದರೆ ಭಾರತದ ಈ ಪುರುಷ ಪ್ರಧಾನ ರಾಜಕಾರಣದಲ್ಲಿ ಬಹುಕಾಲ ದೊಡ್ಡ ನಾಯಕಿಯಾಗಿ ಮೆರೆದವರು ಇಂದಿರಾಗಾಂಧಿ ಎಂಬ ಮಹಿಳೆ. ಈ ಹೊತ್ತು ಕೂಡ ಪ್ರಧಾನಮಂತ್ರಿಯನ್ನೂ ಒಳಗೊಂಡಂತೆ ಕೇಂದ್ರ ಮತ್ತು ಅನೇಕ ರಾಜ್ಯ ಸರ್ಕಾರಗಳನ್ನೂ ನಿಯಂತ್ರಿಸುತ್ತಿರುವವರು ಒಬ್ಬ ಮಹಿಳೆಯೇ ಆಗಿದ್ದಾರೆ. ತಮ್ಮ ದೃಢನಿರ್ಧಾರಗಳಿಗೆ ಹೆಸರಾದ ಇಂದಿರಾಗಾಂಧಿಯನ್ನು ಶಕ್ತಿಯ ಸಂಕೇತವೆಂದೂ, ಕಾಳಿಯ ಅವತಾರವೆಂದೂ ಕೆಲವರು ಭಾವಿಸಿದ್ದರು. (ಇಂದಿರಾ ಸಮಾಧಿಯನ್ನು ಶಕ್ತಿಸ್ಥಲವೆಂದೇ ಕರೆಯುವುದು ಮಾರ್ಮಿಕವಾಗಿದೆ.) ಶಕ್ತಿಯು (ಪವರ್) ನಮ್ಮ ಪುರಾಣಗಳಲ್ಲಿ ಸ್ತ್ರೀರೂಪದ ದೇವತೆ. ಪುರುಷ ಶಿವನು ಶಕ್ತಿಯ ಸಹವಾಸವಿಲ್ಲದೆ ಶವಕ್ಕೆ ಸಮಾನ ಎಂದು ದರ್ಶನಗಳು ಹೇಳುತ್ತವೆ. ಮುಖಮೇಲಾಗಿ ಬಿದ್ದ ಶಿವನ ಎದೆಯ ಮೇಲೆ ಕಾಲಿಟ್ಟು ನಾಲಗೆ ಚಾಚಿ ನಿಂತಿರುವ ಶಕ್ತಿದೇವತೆಯ ಚಿತ್ರವು ಪ್ರಸಿದ್ಧವಾಗಿದೆ. ಹಿಂದೆ ಯುದ್ಧಕ್ಕೆ ಹೋಗುವ ಮೊದಲು ಶಕ್ತಿದೇವತೆಗಳ ಆರಾಧನೆ ಕಡ್ಡಾಯವಾಗಿತ್ತು. ಈಗಲೂ ಶಕ್ತಿಯ ಸಂಕೇತವಾದ ಆಯುಧಗಳ ಪೂಜೆ ನಡೆಯುತ್ತದೆ. ಆದರೆ ಹೆಣ್ಣನ್ನು ಶಕ್ತಿಯ ಸಂಕೇತವಾಗಿ ಆರಾಧಿಸುವುದು ಮತ್ತು ಸಾಮಾಜಿಕ ಬದುಕಿನಲ್ಲಿ ಅವಳ ಶಕ್ತಿಗಳೆಲ್ಲವೂ ಸೀಮಿತ ನೆಲೆಯಲ್ಲಿ ಕ್ರಿಯಾಶೀಲವಾಗುವಂತೆ ನಡೆಸಿಕೊಳ್ಳುವುದು ನಮ್ಮ ಸಮಾಜದ ಹಿಪಾಕ್ರಸಿಯಾಗಿದೆ; ಶಕ್ತಿಯ ದೈವಿಕ ರೂಪವು ಹೆಂಗಸಾದರೂ, ಶಕ್ತಿಪ್ರದರ್ಶನವುಳ್ಳ ಇಡೀ ಯುದ್ಧಕ್ರಿಯೆ ಪುರುಷ ಪ್ರಧಾನವಾದುದು. ಯುದ್ಧದ ಪರಿಭಾಷೆಯೇ ಸ್ತ್ರೀನಿಂದಕವಾದುದು. ರಣದಿಂದ ಓಡಿಬಂದವರಿಗೆ ಬಳೆಕುಂಕಮ ಕೊಟ್ಟು ಅಪಮಾನಿಸಲಾಗುತ್ತಿತ್ತು. ದಿಟ್ಟ ಮಹಿಳೆಯರನ್ನು ಗಂಡಸೆಂದು ಕರೆಯುವ ಪರಿಭಾಷೆಯಲ್ಲೂ ಇದೇ ದನಿಯಿದೆ. ಕಠಿಣ ನಿಲುವಿಗೆ ಹೆಸರಾದ ಇಂಗ್ಲೆಂಡಿನ ಪ್ರಧಾನಮಂತ್ರಿ ಮಾರ್ಗರೇಟ್ ಥ್ಯಾಚರ್ ಅವರನ್ನು ‘ಬ್ರಿಟಿಷ್ ಪಾರ್ಲಿಮೆಂಟಿನ ಏಕೈಕ ಗಂಡಸು’ ಎಂದು ಕರೆಯಲಾಗುತ್ತಿತ್ತು. ತನ್ನ ವಿರುದ್ಧ ಬಂಡೆದ್ದ ನಿಜಲಿಂಗಪ್ಪ, ದೇವರಾಜ ಅರಸು ಮುಂತಾದವರನ್ನು ದಮನಿಸಿದ ಇಂದಿರಾರ ಗಡಸು ನಿಲುವನ್ನು, ಬಾಂಗ್ಲಾದೇಶವನ್ನು ಪಾಕಿಸ್ತಾನದ ಹಿಡಿತದಿಂದ ಪಾರುಗಾಣಿಸಲು ಆಕೆ ಕೈಗೊಂಡ ಸೈನಿಕ ಕಾರ್ಯಾಚರಣೆಯನ್ನು ಅಥವಾ ಪ್ರಥಮ ಪರಮಾಣು ಆಸ್ಪೋಟ ಮಾಡಿದ್ದನ್ನು ಆಹೊತ್ತಲ್ಲಿ ಗಂಡು ನಿರ್ಧಾರಗಳೆಂದೇ ಕರೆಯಲಾಯಿತು.
ಕಠಿಣ ನಿಲುವು ಗಂಡಸರಿಗೆ ಮಾತ್ರ ಸಾಧ್ಯ ಎಂಬ ಅರ್ಥವುಳ್ಳ ಇದು ಮೂಲತಃ ಪುರುಷನಿಷ್ಟ ನುಡಿಗಟ್ಟಾಗಿದೆ. ಈ ನುಡಿಗಟ್ಟು ನಮ್ಮ ಶಕ್ತಿರಾಜಕಾರಣದ ಎಲ್ಲ ಪಕ್ಷಗಳಲ್ಲೂ ಇದೆ. ಅದರಲ್ಲೂ ದೇಶವನ್ನು ಭಾರತಮಾತೆ ಎಂದು ಸ್ತ್ರೀರೂಪದಲ್ಲಿ ಪೂಜಿಸುವ ಸಂಘಪರಿವಾರದವರಲ್ಲಿ ಕೊಂಚ ಜಾಸ್ತಿಯಿದ್ದಂತಿದೆ. ಯಡಿಯೂರಪ್ಪನವರು ‘ಶಿಕಾರಿಪುರದಲ್ಲಿ ನನ್ನ ವಿರುದ್ಧ ನಿಲ್ಲಿಸಲು ಕಾಂಗ್ರೆಸ್ಸಿನಲ್ಲಿ ಯಾರೂ ಗಂಡಸರಿರಲಲ್ಲವೇ?’ ಎಂದು ಮಾಡಿದ ಲೇವಡಿ ಇದಕ್ಕೆ ಸಾಕ್ಷಿ. ಮಹಿಳೆಯು ಸಾರ್ವಜನಿಕ ಬದುಕಿಗೆ ಬರಬೇಕಾಗಿಲ್ಲವೆಂದೂ ಆಕೆಯು ಪತಿ ಮತ್ತು ಮಕ್ಕಳನ್ನು ಸತ್ಪ್ರಜೆಯಾಗಿ ರೂಪಿಸುವ ಕೆಲಸಕ್ಕೆ ಮನೆಯಲ್ಲುಳಿದು ಶ್ರಮಿಸಬೇಕೆಂದೂ ಎಲ್ಲ ಧರ್ಮಗಳ ಬಲಪಂಥೀಯರು ಹೇಳುತ್ತಾರೆ. ಇಂತಹುದೇ ದನಿಯಲ್ಲಿ ಕುವೆಂಪು ಅವರು ಹೇಮಾವತಿಯನ್ನು ಕುರಿತು ಒಂದು ಪದ್ಯವನ್ನೂ ಬರೆದಿದ್ದಾರೆ.
ಈ ಪುರುಷಪ್ರಧಾನ ನುಡಿಗಟ್ಟು ಇತಿಹಾಸ ಬರವಣಿಗೆಯಲ್ಲೂ ಕೆಲಸ ಮಾಡಿದೆ. ರಾಜಪ್ರಭುತ್ವವಿದ್ದ ಕಾಲದಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ ಅನೇಕ ಮಹಿಳೆಯರ ಬಗ್ಗೆ ನಮ್ಮ ಚರಿತ್ರೆಯಲ್ಲಿ ಸರಿಯಾದ ಮಾಹಿತಿಯಿಲ್ಲ. ಶಿವಾಜಿಯನ್ನು ಸೋಲಿಸಿದ್ದ ಬೆಳವಡಿ ಮಲ್ಲಮ್ಮನ ಬಗ್ಗೆಯಾಗಲಿ, ಆದಿಲಶಾಹಿ ರಾಜ್ಯವು ಬಿಕ್ಕಟ್ಟಿನಲ್ಲಿದ್ದಾಗ ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದ ಚಾಂದ್ಬೀಬಿಯ ಬಗ್ಗೆಯಾಗಲಿ ಸಿಗುವ ಮಾಹಿತಿ ಅತಿಕಡಿಮೆ; ಅಶ್ವಾರೋಹಿಯಾಗಿ ಕೈಮೇಲೆ ಬೇಟೆಯ ಗಿಡುಗನನ್ನು ಕೂರಿಸಿಕೊಂಡು ಕುದುರೆ ಓಡಿಸುತ್ತಿರುವ ಚಾಂದಬೀಬಿಯ ವರ್ಣಚಿತ್ರವು ಮಧ್ಯಯುಗದ ರಾಜಕೀಯ ಚರಿತ್ರೆಯಲ್ಲಿ ಕುತೂಹಲ ಹುಟ್ಟಿಸುತ್ತದೆ. ಸುರಪುರದ ನಾಯಕರಲ್ಲೂ, ಮೈಸೂರ ಒಡೆಯರಲ್ಲೂ ಇಂತಹ ರಾಜಕೀಯ ಜಾಣ್ಮೆಯನ್ನು ಪ್ರದರ್ಶಿಸಿದ ಮಹಿಳೆಯರನ್ನು ಕಾಣುತ್ತೇವೆ. ಇವರಿಗೆ ಹೋಲಿಸಿದರೆ ಕಿತ್ತೂರು ಚೆನ್ನಮ್ಮ ಅದೃಷ್ಟವಂತೆ. ಅವಳನ್ನಾದರೂ ವಸಾಹತುಶಾಹಿ ವಿರೋಧಿ ಹೋರಾಟದ ಸಂಕೇತವಾಗಿ ವೈಭವೀಕರಿಸಲಾಗಿದೆಯೆ ಹೊರತು ಅವಳ ರಾಜಕೀಯ ಕ್ರಿಯಾಶೀಲತೆಯ ಚರ್ಚೆ ಮಾಡಿಲ್ಲ. ಮಹಿಳೆಯ ವೈಭವೀಕರಣವು ಆಕೆಯ ಕ್ರಿಯಾಶೀಲತೆಯನ್ನು ನಿರಾಕರಿಸುವ ಮತ್ತು ನಿರ್ಬಂಧಿಸುವ ರಾಜಕಾರಣದ ಹುನ್ನಾರವಿರಬೇಕು. ಆಧುನಿಕ ರಾಜಕಾರಣದಲ್ಲೂ ಅದ್ಭುತ ಕಿಯಾಶೀಲತೆ ಪ್ರಕಟಿಸಿದ ಎಷ್ಟೋ ಮಹಿಳೆಯರ ಚರಿತ್ರೆ ಮರವೆಗೆ ಸಂದಿದೆ. ಶಿವಮೊಗ್ಗೆಯಲ್ಲಿ ರತ್ನಮ್ಮ ಮಾಧವರಾವ್ ಎಂಬುವವರು ಶಾಸಕರಾಗಿದ್ದರು. ಸಮಾಜವಾದಿ ಹೋರಾಟಗಾರ್ತಿಯಾಗಿದ್ದ ಆಕೆಯನ್ನು ಸರ್ಕಾರ ಜೈಲಿಗೆ ಹಾಕಿತು. ಎಳೆಗೂಸಿನ ತಾಯಿಯಾಗಿದ್ದ ಆಕೆ ಜೈಲಲ್ಲೇ ಮಗುವನ್ನು ಸಾಕಿಕೊಂಡಿದ್ದರು. ಕಡೆಗೆ ತಾಯಿ-ಮಗುವನ್ನು ಅಗಲಿಸಲಾಯಿತು. ತಾಯಿಯ ಅಗಲಿಕೆಯಿಂದ ಮಗು ಕಾಯಿಲೆಬಿದ್ದು ತೀರಿಹೋಯಿತು. ಅದರ ಸಂಸ್ಕಾರಕ್ಕೆ ಹೋಗಲು ಆಕೆಗೆ ಅವಕಾಶ ಕೊಡಲಿಲ್ಲ. ಅವರ ಜತೆ ಚಳುವಳಿಯಲ್ಲಿ ಸಂಗಾತಿಯಾಗಿ ಕೆಲಸಮಾಡಿದ ಕರ್ನಾಟಕ ಕಂಡ ಧೀಮಂತ ಮಹಿಳೆಯರಲ್ಲಿ ಒಬ್ಬರಾದ ಪೊನ್ನಮ್ಮಾಳ್ ಇದನ್ನು ತಮ್ಮ ಸಂದರ್ಶನದಲ್ಲಿ ಒಮ್ಮೆ ಹೇಳಿದರು.
ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರು ಹೆಚ್ಚು ಜಾಗವನ್ನು ಆಕ್ರಮಿಸಿಕೊಳ್ಳದಂತೆ ಒಳಗೇ ನಿಯಂತ್ರಿಸುವ ಸಾಮಾಜಿಕ ಮನೋಭಾವದ ವಿಷಯದಲ್ಲಿ ಎಡಪಂಥಗಳೂ ಹೊರತಾಗಿಲ್ಲ. ಇದು ಗೊತ್ತಾಗಿದ್ದು ಬೃಂದಾಕಾರಟ್ ಅವರು ಸಿಪಿಎಂ ಪಕ್ಷದ ಪಾಲಿಟ್ಬ್ಯೂರೋ ಪ್ರವೇಶಿಸಿದ ಪ್ರಥಮ ಮಹಿಳೆ ಎಂದು ತಿಳಿದಾಗ. ಕನ್ನಡಕ ಧರಿಸಿದ ವಯೋವೃದ್ಧ ಪುರುಷರ ಕೂಟಗಳಂತೆ ಕಾಣುವ ಕಮ್ಯುನಿಸ್ಟರ ಮಂತ್ರಾಲೋಚಕ ಸಭೆಗಳಿಗೆ ಒಬ್ಬ ಹೆಣ್ಣು ಪ್ರವೇಶಿಸುವುದು ಕೆಲಮಟ್ಟಿಗೆ ಸಂಚಲನೆ ತಂದಿರಬಹುದು. ಸಮಾನತೆಯನ್ನು ಒಂದು ತತ್ವವಾಗಿ ಪ್ರತಿಪಾದಿಸುವ ಪಕ್ಷಗಳಲ್ಲೇ ಈ ಸ್ಥಿತಿಯಿದೆ ಎಂದ ಬಳಿಕ ಉಳಿದವರ ಬಗ್ಗೆ ಏನು ಹೇಳುವುದು? ಗೌರಿ ಎಂಬ ಮಹಿಳೆ ಕೇರಳದ ಕಮ್ಯುನಿಸ್ಟ್ ಪಕ್ಷದಲ್ಲಿ ಹಿರಿಯ ನಾಯಕರಲ್ಲಿ ಒಬ್ಬರು. ವಾಸ್ತವದಲ್ಲಿ ಅವರು ಮುಖ್ಯಮಂತ್ರಿ ಆಗಬೇಕಾಗಿದ್ದವರು. ಆದರೆ ಅವರಿಗೆ ಆ ಅವಕಾಶ ತಪ್ಪಿಸಲಾಯಿತು.
ಈ ಸಲದ ಕರ್ನಾಟಕದ ಚುನಾವಣೆಯಲ್ಲಿ ಮಹಿಳೆಯರಿಗೆ ವಿವಿಧ ಪಕ್ಷಗಳು ಕೊಟ್ಟಿದ್ದ ಪ್ರಾತಿನಿಧ್ಯವನ್ನು ಕಂಡರೂ (ಕಾಂಗ್ರೆಸ್-೧೧; ಬಿಎಸ್ಪಿ-೧೦; ಜೆಡಿಎಸ್-೧೦; ಬಿಜೆಪಿ-೧೦) ಅವು ಎಷ್ಟು ಪುರುಷವಾದಿ ಎಂದು ಗೊತ್ತಾಗುತ್ತದೆ. ವ್ಯಂಗ್ಯವೆಂದರೆ, ಮೊದಲೆರಡು ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ಮಹಿಳೆಯರು! ಬಿಜೆಪಿಯು ಮಹಿಳೆಯರಿಗೆ ಸರಿಯಾಗಿ ಪ್ರಾತಿನಿಧ್ಯ ಕೊಟ್ಟಿಲ್ಲವೆಂದು ಸ್ವತಃ ಸುಷ್ಮಾ ಸ್ವರಾಜ್ ಕೂಡ ಬಹಿರಂಗವಾಗಿ ಆಕ್ಷೇಪಿಸಿದರು.
ಮಹಿಳೆಯರ ರಾಜಕೀಯ ಪ್ರಾತಿನಿಧ್ಯದ ವಿಷಯವನ್ನು ಸಮುದಾಯ ಅಥವಾ ಜಾತಿವಾರು ನೋಡಿದಾಗಲೂ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ. ಉದಾಹರಣೆಗೆ ಭಾರತದ ರಾಜಕಾರಣದಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆ. ಅದರಲ್ಲಿ ಮಹಿಳೆಯರದು ಇನ್ನೂಕಡಿಮೆ. ಕರ್ನಾಟಕದಲ್ಲಿ ಇವತ್ತಿಗೂ ಒಬ್ಬ ಮುಸ್ಲಿಂ ಮಹಿಳೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಚುನಾಯಿತರಾದಂತಿಲ್ಲ. ನಫೀಜಾ ಫಜಲ್ ಎಂಬ ಬೆಂಗಳೂರಿನ ಎಲೈಟ್ ವರ್ಗದಿಂದ ಪಾಶ್ಚಿಮಾತ್ಯ ಜೀವನಶೈಲಿಯ ಆಧುನಿಕ ಮನಸ್ಸಿನ ಮಹಿಳೆಯೊಬ್ಬರು ಕಾಂಗ್ರೆಸ್ಸಿನಿಂದ ಎಂಎಲ್ಸಿಯಾಗಿದ್ದರು. ಅವರು ಎಸ್.ಎಂ.ಕೃಷ್ಣ ಸಂಪುಟದಲ್ಲಿ ರಾಜ್ಯಸಚಿವೆಯೂ ಆಗಿದ್ದರು. ಇಂಗ್ಲಿಷು ತಮಿಳು ಬೆರೆತಂತಹ ಕನ್ನಡದಲ್ಲಿ ಮಾತಾಡುತ್ತಿದ್ದ ಅವರನ್ನು ವಿಧಾನಸಭೆಯಲ್ಲಿ ಎಲ್ಲರೂ ತಮಾಶೆಯ ವಸ್ತುವನ್ನಾಗಿ ಮಾಡಿಕೊಂಡು ಗೋಳುಹಾಕಿಕೊಳ್ಳುತ್ತಿದ್ದರು. ದಲಿತ ರಾಜಕಾರಣಿಗಳಲ್ಲೂ ಮೋಟಮ್ಮ ಮತ್ತು ಮಲ್ಲಾಜಮ್ಮ ಬಿಟ್ಟರೆ ಮೂರನೇ ಹೆಸರು ಕಾಣುವುದಿಲ್ಲ. ಪ್ರತಿಭಾವಂತರಾದ ಮೋಟಮ್ಮನವರನ್ನು ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಮೂಲೆಗುಂಪು ಮಾಡಲಾಯಿತು. ಮಹಿಳೆಯರನ್ನು ಮುಂಚೂಣಿಗೆ ಬಾರದಂತೆ ಎಲ್ಲ ಪಕ್ಷಗಳು ಕೆಲಸ ಮಾಡಿವೆ. ಒಂದೊಮ್ಮೆ ಪ್ರಾತಿನಿಧಿಕವಾಗಿಯೊ ಸಾಂಕೇತಿಕವಾಗಿಯೊ ಮಹಿಳೆಯರಿಗೆ ಅಧಿಕಾರ ಸಿಕ್ಕರೆ, ಅದನ್ನು ಅವರು ಸ್ವಂತವಾಗಿ ಚಲಾಯಿಸದಂತೆ ನೂರಾರು ಅಡಚಣೆಗಳನ್ನು ಒಡ್ಡಲಾಗುತ್ತದೆ.
ಪುತ್ತೂರಿನ ಶಕುಂತಲಾಶೆಟ್ಟಿ ಪ್ರಕರಣವನ್ನು ಗಮನಿಸಬೇಕು. ಆಕೆ ಮೂರು ಸಲ ಶಾಸಕಿಯಾದವರು. ‘ಪ್ರಾಮಾಣಿಕ’ ಕೆಲಸಗಾರ್ತಿ ಎಂದು ಹೆಸರಾದವರು. (ಧರ್ಮದ ಹೆಸರಲ್ಲಿ ಜನರನ್ನು ವಿಭಜಿಸುವುದನ್ನು ತತ್ವವಾಗಿಸಿಕೊಂಡ ಪಕ್ಷದಲ್ಲಿದ್ದವರ ವೈಯಕ್ತಿಕ ಪ್ರಾಮಾಣಿಕತೆಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕೊ ತಿಳಿಯುವುದಿಲ್ಲ.) ಶಕುಂತಲಾ ಅವರಿಗೆ ಮಂತ್ರಿಸ್ಥಾನ ಕೊಡುವ ಅವಕಾಶ ಬಂದಾಗ ತಪ್ಪಿಸಲಾಯಿತು. ಸ್ವತಂತ್ರ ಪ್ರವೃತ್ತಿ ತೋರುತ್ತಿದ್ದ ಆಕೆಗೆ ಈಬಾರಿ ಪಕ್ಷದ ಟಿಕೇಟನ್ನು ಕೂಡ ನಿರಾಕರಿಸಲಾಯಿತು. ನಂತರ ಆಕೆಯ ಬೆನ್ನುಕಟ್ಟಿದವರು ಜನಸಂಘ ಕಾಲದ ಶಾಸಕರಾಗಿದ್ದ ರಾಮಭಟ್ಟ ಎನ್ನುವ ಮತ್ತೊಬ್ಬ ಆರೆಸ್ಸೆಸ್ ಆದರ್ಶವಾದಿ ವ್ಯಕ್ತಿ. ಒಂದು ಹಂತದಲ್ಲಿ ಸದಾನಂದಗೌಡ ಮತ್ತು ರಾಮಭಟ್ಟರ ಸಂಘರ್ಷಗಳ ನಡುವೆ ಶಕುಂತಲಾ ಸಿಕ್ಕಿಕೊಂಡಂತೆ ಕಾಣುತ್ತಿತ್ತು. ತನ್ನ ಬೆಂಬಲಕ್ಕೆ ನಿಂತ ರಾಮಭಟ್ಟರ ಮೇಲೆ ಶಕುಂತಲಾ ಎಷ್ಟು ಅವಲಂಬಿತರಾದರು ಎಂದರೆ, ಏನು ಕೇಳಿದರೂ ‘ರಾಮಭಟ್ಟರು ಹೇಳಿದಂತೆ ಮಾಡುತ್ತೇನೆ’ ಎನ್ನತೊಡಗಿದರು. ಇದು ರಾಮಭಟ್ಟರಿಗೆ ಅವರು ಕೊಟ್ಟ ಗೌರವವಿರಬಹುದು. ಪರಿಣಾಮದಲ್ಲಿ ಮಹಿಳೆಯರು ಗಂಡಸರ ನೆರವಿಲ್ಲದೆ ರಾಜಕಾರಣ ಮಾಡುವುದು ಸಾಧ್ಯವಿಲ್ಲ ಎಂಬ ಅರ್ಥವೇ ಹೊರಡುತ್ತಿತ್ತು.
ಇನ್ನೊಂದು ನಿದರ್ಶನ ಬಿ.ಟಿ.ಲಿಲಿತಾನಾಯಕರದು. ಅವರು ಕರ್ನಾಟಕದ ಅತ್ಯಂತ ಹಿಂದುಳಿದ ತಾಲೂಕಾಗಿರುವ ದೇವದುರ್ಗಕ್ಕೆ ಒಮ್ಮೆ ಶಾಸಕಿಯಾಗಿದ್ದರು. ದಮನಿತರ ಮೇಲೆ ಕಾಳಜಿಯಿಂದ ಬರೆಯುವ ಈ ಲೇಖಕಿ ಶಾಸಕಿ ಸ್ಥಾನದ ಪರಿಮಿತಿಯಲ್ಲೇ ಒಳ್ಳೆಯ ಕೆಲಸ ಮಾಡುವ ಸಾಧ್ಯತೆಯಿತ್ತು. ಆದರವರು ಮಾಡಲಿಲ್ಲ. ಅದಿರಲಿ. ಅವರನ್ನು, ಅವರ ಮಗ ಅಂಬೇಡ್ಕರ್ ಪ್ರತಿಮೆಗೆ ಕುಡಿದ ಮತ್ತಿನಲ್ಲಿ ಮದ್ಯ ಸುರಿದನೆಂದು ಮಂತ್ರಿಸ್ಥಾನದಿಂದ ತೆಗೆದುಹಾಕಲಾಯಿತು. ಆ ಪ್ರಕರಣದಲ್ಲಿ ಅವರನ್ನು ಕೈಬಿಡಲು ಅವರ ಪುರುಷ ಸಂಗಾತಿಗಳು ಸಾಕಷ್ಟು ಶ್ರಮವಹಿಸಿದರು. ಲಲಿತಾ ಅವರಿಗೆ ಕ್ಯಾಬಿನೆಟ್ ಸ್ಥಾನಮಾನವಿಲ್ಲದ ಸಂಸ್ಕೃತಿ ಇಲಾಖೆಯನ್ನು ಕೊಡಲಾಗಿತ್ತು. ಅದರಲ್ಲಿ ಅವರ ಪುರುಷ ಸಹೋದ್ಯೋಗಿಗಳು ಬಹಳ ಹಸ್ತಕ್ಷೇಪ ಮಾಡುತ್ತಿದ್ದುದನ್ನು ಲಲಿತಾ ಹೇಳಿಕೊಳ್ಳುತ್ತಿದ್ದರು. ಇಲ್ಲಿ ಒಬ್ಬ ಲಂಬಾಣಿ ಹೆಂಗಸಿಗೆ ಏನು ಕೇಳಬೇಕು ಎಂಬ ಸವರ್ಣೀಯ ಜಾತಿಪ್ರಜ್ಞೆಯೂ, ಒಂದು ಹೆಣ್ಣುಹೆಂಗಸಿಗೆ ಏನು ತಿಳಿಯುತ್ತೆ ಎಂಬ ಪುರುಷಾಹಂಕಾರವೂ ಕೂಡಿ ಕೆಲಸ ಮಾಡಿರಬಹುದು. ಪಾಕಿಸ್ತಾನದಲ್ಲಿ ಭೂಮಾಲಿಕ ಮತ್ತು ಪ್ರತಿಷ್ಠಿತ ಕುಟುಂಬಗಳಿಂದ ಮಹಿಳೆಯರು ರಾಜಕಾರಣಕ್ಕೆ ಬರುವ ಪದ್ಧತಿಯಿದ್ದು ಅವರನ್ನು ಸಾರ್ವಜನಿಕ ಜೀವನಕ್ಕೆ ಬಂದರೆಂಬ ಒಂದೇ ಕಾರಣದಿಂದ ಮೂಲಭೂತವಾದಿಗಳು ಕೊಂದುಹಾಕುತ್ತಿದ್ದಾರೆ. ಕಳೆದ ವರ್ಷ ಪಾಕಿಸ್ತಾನದಲ್ಲಿ ಮಂತ್ರಿಯಾಗಿದ್ದ ಆಧುನಿಕ ಮನಸ್ಸಿನ ಮಹಿಳೆಯಾದ ಹುಮಾ ಉಸ್ಮಾನರನ್ನು (೩೫) ಒಬ್ಬ ಕೊಂದನು. ವಿಚಾರಣೆಯ ವೇಳೆಯಲ್ಲಿ ಆತ ಹೇಳಿದ: “ಆಕೆ ಇಸ್ಲಾಮಿಕ್ ರೀತಿಯ ಉಡುಪನ್ನು ಧರಿಸುತ್ತಿರಲಿಲ್ಲ. ಆಕೆ ಪಾಶ್ಚಾತ್ಯ ಜೀವನಶೈಲಿ ಅಳವಡಿಸಿಕೊಂಡಿದ್ದಳು. ಆಕೆಯನ್ನು ಕೊಂದು ಧರ್ಮರಕ್ಷಣೆ ಮಾಡಿದೆ”;
ಒಬ್ಬ ಮಹಿಳೆಯನ್ನು ಕೊಲ್ಲಲು ಧರ್ಮವೊಂದು ನೆಪ. ಹಿಂದೆ ಇರುವುದು ಪುರುಷರ ಇಗೊಗಳು. ಬೆನಜೀರ್ ಸಾವಿನ ಹಿಂದೆ, ಮ್ಯಾನ್ಮಾರಿನಲ್ಲಿ ಸೂಕಿಯನ್ನು ಮನೆಬಂಧನದಲ್ಲಿ ಇಟ್ಟಿರುವಲ್ಲಿ ಇಂತಹುದೇ ಮನೋಭಾವ ಕೆಲಸ ಮಾಡಿರಬಹುದು.
ಕರ್ನಾಟಕದಲ್ಲಿ ಪಂಚಾಯತ್ ರಾಜ್ ಕಾಯ್ದೆಯ ಬಳಿಕ, ಮೀಸಲಾತಿ ಮೇಲೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರು ಅಧ್ಯಕ್ಷ ಉಪಾಧ್ಯಕ್ಷರಾಗತೊಡಗಿದರು. ಆಗ ಅವರ ಪರವಾಗಿ ಅವರ ಗಂಡಂದಿರು ತಾವೇ ಅಧಿಕಾರ ನಡೆಸುವ ಪ್ರಕರಣಗಳು ನಡೆದವು. ಈ ಕುರಿತು ವರದಿ ಮಾಡುತ್ತಿದ್ದ ಹೆಚ್ಚಿನ ಮಾಧ್ಯಮಗಳಲ್ಲಿ “ಹೀಗಾಗಬಾರದು, ಮಹಿಳೆಯರು ತಮ್ಮ ಅಧಿಕಾರವನ್ನು ತಾವೇ ಚಲಾಯಿಸಬೇಕು” ಎಂಬ ಕಾಳಜಿಗಿಂತ, ಮಹಿಳೆಯರಿಗೆ ಅಧಿಕಾರ ಕೊಟ್ಟರೆ ಹೀಗೇ ಆಗುವುದು ಎಂಬ ದನಿಯೇ ಹೆಚ್ಚಾಗಿತ್ತು. ಬಿಹಾರದಲ್ಲಿ ಕೋಟ್ ತೀರ್ಪಿನ ಪ್ರಕಾರ ಲಾಲೂಪ್ರಸಾದ್ ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾದಾಗ, ತಮ್ಮ ಅಮಾಯಕ ಮಡದಿಗೆ ಅಧಿಕಾರ ವಹಿಸಿದರು. ರಾಬ್ಡಿದೇವಿಯವರಿಗೆ ಪತ್ರಕರ್ತರು ‘ನಿಮಗೆ ಅನುಭವವಿಲ್ಲ. ನೀವು ಹೇಗೆ ರಾಜಕೀಯ ನಿರ್ಣಯ ಕೈಗೊಳ್ಳುತ್ತೀರಿ?’ ಎಂದು ಪ್ರಶ್ನಿಸಿದರು. ಆಕೆ ಅಮಾಯಕವಾಗಿ ‘ನಮ್ಮ ಯಜಮಾನರು ಹೇಳಿದ ಹಾಗೆ ಮಾಡುತ್ತೇನೆ’ ಎಂದರು. ಮಾಧ್ಯಮಗಳು ಈ ಪ್ರಕರಣವನ್ನು ಕುಟುಂಬ ರಾಜಕಾರಣದ ಪ್ರಶ್ನೆಯಾಗಿ ನೋಡುವುದಕ್ಕಿಂತ ಹೆಚ್ಚಾಗಿ ‘ಪಾಪದ ಹೆಂಗಸು’ ಎಂದೇ ನೋಡಿದವು. ಸಾರ್ವಜನಿಕ ಜೀವನದಲ್ಲಿ ಕೆಲಸಮಾಡಿದ ಹಿನ್ನೆಲೆಯಿಲ್ಲದ ಮಹಿಳೆಯರು ಇದಕ್ಕಿದ್ದಂತೆ ರಾಜಕಾರಣಕ್ಕೆ ಪ್ರವೇಶ ಮಾಡಿದರೆ ಅದನ್ನು ಹೇಗೆ ಪರಿಭಾವಿಸಬೇಕು ಎಂಬ ಸೂಕ್ಷ್ಮ ಸಂವೇದನೆ ಬಹುತೇಕ ಮಾಧ್ಯಮಗಳಿಗಿಲ್ಲ. ಜನಸಂಖ್ಯೆ ಆಧಾರದಲ್ಲಿ ಬೇರೆಬೇರೆ ಜಾತಿಗಳಿಗೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯ ಕುರಿತು ಚರ್ಚಿಸುವ ನಾವು, ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಈತನಕ ಕರ್ನಾಟಕದ ಮುಖ್ಯಮಂತ್ರಿಯಾಗಿಲ್ಲ ಎಂಬ ಪ್ರಶ್ನೆಯನ್ನೇ ಪ್ರಜ್ಞೆಯೊಳಗೆ ಬಿಟ್ಟುಕೊಂಡಿರುವುದಿಲ್ಲ. ಮಹಿಳೆಯರಿಗೆ ಮೀಸಲಾತಿ ಮಸೂದೆಯು ಇನ್ನೂ ಪಾಸಾಗದಿರಲು ಕಾರಣ, ಭಾರತದ ಶಕ್ತಿ ರಾಜಕಾರಣದಲ್ಲಿ ತುಂಬಿರುವ ಪುರುಷವಾದಿ ಮನಸ್ಸು ಮುಖ್ಯವೆಂದು ತೋರುತ್ತದೆ.
ಇದನ್ನು ಹೇಳುವಾಗ, ಮಹಿಳೆಯರು ರಾಜಕೀಯಕ್ಕೆ ಬಂದರೆ ಮಹಿಳೆಯರ ಹಿತ ರಕ್ಷಿಸುತ್ತಾರೆ, ಸಮಾಜದಲ್ಲಿ ಕ್ರಾಂತಿಯಾಗುತ್ತದೆ, ಶತಮಾನಗಳಿಂದ ಬಂದ ಸಾಮಾಜಿಕ ಮನೋಭಾವ ತಟ್ಟನೆ ಬದಲಾಗುತ್ತದೆ ಎಂದೇನು ಭಾವಿಸಬೇಕಿಲ್ಲ. ಹಸೀನಾ-ಖಾಲಿದಾ ಎಂಬ ಇಬ್ಬರು ಹೆಂಗಸರು ಆಳ್ವಿಕೆ ನಡೆಸಿರುವ ಬಾಂಗ್ಲಾದೇಶದಲ್ಲಿ ಮಹಿಳೆಯರ ಪರಿಸ್ಥಿತಿ ಏನೂ ಉತ್ತಮವಾಗಿಲ್ಲ. ಅಲ್ಲಿ ತಸ್ಲೀಮಾಳ ಮೇಲಣ ಹಲ್ಲೆಯನ್ನು ತಡೆಯಲೂ ಆಗಲಿಲ್ಲ. ಇಡೀ ಸಮಾಜದ ಮನೋಭಾವದ ವಿರುದ್ಧ ಕೆಲವೇ ಮಹಿಳೆಯರೂ ತಾನೇ ಏನು ಮಾಡಬಲ್ಲರು. ಮಹಿಳೆಯರ ಮನೋಭಾವದಲ್ಲಿ ಮಹಿಳಾಸಂವೇದನೆ ಇಲ್ಲದಿದ್ದರೂ ಅಥವಾ ಪುರುಷ ನುಡಿಗಟ್ಟಿದ್ದರೂ, ಅವರು ಅಧಿಕಾರಕ್ಕೆ ಬರುವುದರಿಂದ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಮಮತಾ ಬ್ಯಾನರ್ಜಿ, ಜಯಲಲಿತಾ, ಮಾಯಾವತಿ, ಉಮಾಭಾರತಿ, ವಿಜಯರಾಜೆ ಸಿಂಧ್ಯಾ, ಪ್ರಮೀಳಾ ನೇಸರ್ಗಿ- ಇವರೆಲ್ಲ ರಾಜಕಾರಣದಲ್ಲಿ ಇರುವ ಕೆಲವು ಮಹಿಳೆಯರು. ಆದರೆ ಇವರಲ್ಲಿ ಅನೇಕರ ಜೀವನಶೈಲಿ, ಸರ್ವಾಧಿಕಾರಿ ಧೋರಣೆ, ಆರ್ಥಿಕ ನೀತಿ, ಚಿಂತನೆಯ ಕ್ರಮ ಕಂಡರೆ ಅವು ಮಹಿಳಾ ಕಾಳಜಿಗಳನ್ನೇನೂ ಸಾಬೀತು ಪಡಿಸುವುದಿಲ್ಲ. ತನ್ನ ಪಕ್ಷವು ಮಹಿಳೆಯರಿಗೆ ಸೂಕ್ತ ಟಿಕೇಟು ಕೊಟ್ಟಿಲ್ಲ ಎಂದು ಅವಲತ್ತುಕೊಂಡ ಇದೇ ಸುಷ್ಮಾ ಸ್ವರಾಜ್, ಸೋನಿಯಾ ಪ್ರಧಾನಿಯಾಗುವ ಸನ್ನಿವೇಶ ಬಂದಾಗ, ಪ್ರಾಣಹೋದವರಂತೆ ವಿರೋಧ ಮಾಡಿದರು. ಸೋನಿಯಾ ಪ್ರಧಾನಿಯಾದರೆ ತಾನು ವಿಧವೆಯಂತೆ ಬಿಳಿಸೀರೆಯುಟ್ಟು ನೆನೆದ ಕಡಲೆ ತಿಂದುಕೊಂಡು ಸನ್ಯಾಸಿಯ ಬದುಕನ್ನು ಬದುಕುತ್ತಿದ್ದೆ ಎಂದು ಪ್ರತಿಜ್ಞೆ ಮಾಡಿದರು. ಉರಿನಾಲಗೆಯ ಉಮಾಭಾರತಿ ತನ್ನ ಅರ್ಧಶಕ್ತಿಯನ್ನು ಸೋನಿಯಾ ನಿಂದನೆಯಲ್ಲಿ ಕಳೆದರು.
ಆದ್ದರಿಂದ ಮಹಿಳೆಯರಿಗೆ ರಾಜಕೀಯ ಪಾಲುಗಾರಿಕೆ ಇರಬೇಕು ಮತ್ತು ರಾಜಕೀಯ ಪ್ರಾತಿನಿಧ್ಯ ಇರಬೇಕು ಎನ್ನುವಾಗ, ಅದು ಯಾವ ವರ್ಗದ ಹಿತಾಸಕ್ತಿ ರಕ್ಷಿಸುತ್ತದೆ, ಯಾವ ಮೌಲ್ಯಗಳಿಗಾಗಿ ಅವರ ರಾಜಕಾರಣ ಬಳಕೆಯಾಗುತ್ತದೆ ಎಂದು ಪ್ರಶ್ನೆ ಕೇಳಿಕೊಳ್ಳಲೇಬೇಕು. ಅಮೆರಿಕದ ರಾಜಕಾರಣದಲ್ಲಿ ಪ್ರಮುಖ ಖಾತೆ ನಿರ್ವಹಿಸುತ್ತಿರುವ ಕಪ್ಪುಮಹಿಳೆ ರೈಸ್ ಅವರ ಬಗ್ಗೆ ಲೇಖಕಿ ಅರುಂಧತಿ ರಾಯ್ ತಮ್ಮದೊಂದು ಲೇಖನದಲ್ಲಿ ಈ ಪ್ರಶ್ನೆ ಎತ್ತಿದ್ದರು. ಜನರಿಗೆ ಬಣ್ಣದನೀರು ಕುಡಿಸಿ ಕಾಸು ಹೆಕ್ಕುತ್ತಿರುವ ಪೆಪ್ಸಿಕೋಲಾ ಕಂಪನಿಯ ಭಾರತದ ನಿರ್ದೇಶಕಿಯಾದ ಇಂದ್ರಾನೂಯಿಯವರ ಆಡಳಿತ ದಕ್ಷತೆ ಕೇಳುವಾಗಲೂ ಈ ಪ್ರಶ್ನೆ ಎತ್ತಬೇಕೆನಿಸುತ್ತದೆ. ಸದ್ಯದ ಕರ್ನಾಟಕದ ಚುನಾವಣೆಯಲ್ಲಿ ಪಕ್ಷಗಳು ಒಂದೊಮ್ಮೆ ಮಹಿಳೆಯರಿಗೆ ಸಾಕಷ್ಟು ಟಿಕೇಟು ಕೊಟ್ಟಿದ್ದರೂ, ಅವರು ಗೆದ್ದರೆ ಯಾರ ನಿಯಂತ್ರಣದಲ್ಲಿ ಇರುತ್ತಾರೆ ಎಂಬ ಪ್ರಶ್ನೆ ಉಳಿಯುತ್ತದೆ.
ಆದರೂ ಮಹಿಳೆಯೊಬ್ಬರು ಅಧಿಕಾರಕ್ಕೆ ಬರುವುದು, ಅನೇಕ ರೀತಿಯಲ್ಲಿ ಸಾಮಾಜಿಕ ಸಂಚಲನೆಯನ್ನು ಉಂಟುಮಾಡುವ ಮತ್ತು ಅನೇಕರಿಗೆ ಅದು ಪ್ರೇರಣೆಯನ್ನು ಕೊಡುವ ಸಂಗತಿ ಕೂಡ ಯಾಗುತ್ತದೆ. ಇದನ್ನು ಮರೆಯುವಂತಿಲ್ಲ. ಮಹಿಳೆಯರು ರಾಜಕಾರಣಕ್ಕೆ ಪ್ರವೇಶಿಸಲು ಕಾರಣ ಯಾವುದೇ ಇರಲಿ, ಅದು ಕ್ರಮೇಣ ನಮ್ಮ ಸಾಮಾಜಿಕ ಗ್ರಹಿಕೆಗಳನ್ನು ಬದಲಿಸುವ ಕೆಲಸ ಮಾಡುತ್ತದೆ. ಗ್ರಾಮೀಣ ಮಹಿಳೆಯರು ಪಂಚಾಯಿತ್ ಸಭೆಗಳಲ್ಲಿ ಜಿಲ್ಲಾಧಿಕಾರಿಗಳ ಜತೆ ಸಮಾನಸ್ಕಂಧರಾಗಿ ಕೂರುವುದನ್ನು ನೋಡುವಾಗ, ಅವರು ಯಾರ ಪರ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆಯನ್ನು ಪಕ್ಕಕ್ಕಿಟ್ಟು ಸಂತೋಷಪಡುವಂತಾಗುತ್ತದೆ. ಈ ಬಗೆಯ ಭಾಗವಹಿಸುವಿಕೆಯು ಒಂದು ಪ್ರಕ್ರಿಯೆಯಾಗಿದ್ದು ಅದನ್ನು ನಮ್ಮೆಲ್ಲ ಸಂಶಯಗಳ ಜತೆಗೆ ಪಾಸಿಟಿವ್ ಆಗಿ ನೋಡಬೇಕು ಅನಿಸುತ್ತದೆ.
ಆದರೆ ಭಾರತದ ಮಹಿಳೆಯರು ಸಾರ್ವಜನಿಕ ಬದುಕಿಗೆ ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆಯುತ್ತಿರುವ ಒಂದು ರೀತಿ ಮಾತ್ರ ವಿಚಿತ್ರವಾಗಿದೆ. ಸಾಮಾನ್ಯವಾಗಿ ಗಂಡ ಇಲ್ಲವೇ ಅಪ್ಪ ಸತ್ತ ಬಳಿಕ ಅವರ ಪ್ರತಿನಿಧಿಯಾಗಿ ಅವರ ಪ್ರವೇಶವಾಗುತ್ತಿದೆ. ‘ಅಪ್ಪ ಸಾಯುವ ತನಕ ಮಗ ಜವಾಬ್ದಾರನಾಗುವುದಿಲ್ಲ’ ಎಂಬ ಮಾತನ್ನು ನಮ್ಮ ರಾಜಕಾರಣದ ಸಂದರ್ಭದಲ್ಲಿ ‘ಗಂಡಸಾಯದೆ ಮಹಿಳೆ ಪಾಲಿಟಿಕ್ಸಿಗೆ ಇಳಿಯುವುದು ಸಾಧ್ಯವಿಲ್ಲ’ ಎಂದು ಬೇಕಾದರೆ ಬದಲಿಸಬಹುದು. ಹನೂರಿನ ನಾಗಪ್ಪ, ಶ್ರೀರಂಗಪಟ್ಟಣದ ಬಂಡಿಸಿದ್ದೇಗೌಡ, ಕೊಟ್ಟೂರಿನ ಮರುಳಸಿದ್ಧನಗೌಡ, ಹುನಗುಂದದ ಕಾಶಪ್ಪನವರ್ ಮುಂತಾದವರ ಪತ್ನಿಯರು ಕರ್ನಾಟಕ ಶಾಸನಸಭೆಗೆ ಪ್ರವೇಶ ಪಡೆದಿದ್ದು ಹೀಗೆ. ಸುನೀಲ್ದತ್ ಮಗಳು ಪ್ರಿಯಾ ಪಾರ್ಲಿಮೆಂಟಿಗೆ ಹೋಗಿದ್ದು ಹೀಗೆ. ಪಾಕಿಸ್ತಾನದಲ್ಲಿ ತನ್ನಪ್ಪನ ಕೊಲೆಯಾದ ಬಳಿಕ ಬೆನಜೀರ್ ಭುಟ್ಟೊ ರಾಜಕಾರಣಕ್ಕೆ ಬಂದರು. ಬಾಂಗ್ಲಾದೇಶದಲ್ಲಿ ತಮ್ಮ ಗಂಡ ಮತ್ತು ಅಪ್ಪಂದಿರ ಕೊಲೆಗಳ ಬಳಿಕ ಖಾಲಿಯಾದ ಜಾಗಕ್ಕೆ ಇಬ್ಬರು ಮಹಿಳೆಯರು ರಾಜಕೀಯಕ್ಕೆ ಬಂದು ಪ್ರಧಾನಮಂತ್ರಿಗಳಾದರು. ಸೋನಿಯಾ ಕೂಡ ವಿಧವೆಯಾದ ಬಳಿಕವೇ ರಾಜಕಾರಣಕ್ಕೆ ಬಂದವರು. ಗಂಡ ಅಥವಾ ತಂದೆಯ ಸಾವಿನ ಅನುಕಂಪೆಯ ಪ್ರಯೋಜನ ಪಡೆಯುವ ರಾಜಕೀಯದ ಭಾಗವಾಗಿ ಈ ಮಹಿಳೆಯರಿಗೆ ಸ್ಥಾನ ಸಿಕ್ಕುತ್ತಿರುವುದು ನಮ್ಮ ಸಾಮಾಜಿಕ ಆಲೋಚನ ಕ್ರಮ ಹಾಗೂ ರಾಜಕೀಯ ಸಂಸ್ಕೃತಿಯ ವಿಷಮತೆಯನ್ನು ಸಾಬೀತುಪಡಿಸುತ್ತದೆ. ಅಧಿಕಾರಕ್ಕೆ ಬಂದರೆ ಸಾವು ಎರಗುವುದು ಒಂದೆಡೆಯಿದೆ. ಸಾವೆರಗಿದ ಬಳಿಕ ಅಧಿಕಾರಕ್ಕೆ ಬರುವುದು ಇನ್ನೊಂದೆಡೆಯಿದೆ.
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.