ನಮ್ಮ ತಂದೆಯ ಅಕ್ಷರಗಳ ಚರ್ಚೆ ನಮ್ಮ ಬಹುದೂರದ ಸಂಬಂಧಿಕರಲ್ಲೂ ಹರಡಿತ್ತು. ಒಮ್ಮೊಮ್ಮೆ ಕೆಲವರು ನನಗೆ ನಮ್ಮಪ್ಪನ ಪತ್ರಗಳನ್ನು ತೋರಿಸಿ “ನಿಮ್ಮಪ್ಪ ಏನೋ ಬರದಾನ.. ಸಲ್ಪ ಓದಿ ಹೇಳಪ್ಪಾ” ಅಂತ ಕೇಳುತ್ತಿದ್ದರು. ನಾನು ಆ ಪತ್ರದಲ್ಲಿ ಬರೆದಿರುವುದು ಕನ್ನಡವೋ ಇಂಗ್ಲೀಷೋ ಎಂದು ಗುರುತಿಸಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೆ. ನಮ್ಮ ತಂದೆ ಒಂದೊಂದು ಸಾರಿ ನನ್ನ ಕೈಲಿ ನನ್ನ ಪಕ್ಕ ಕೂತು ಪತ್ರ ಬರೆಸುತ್ತಿದ್ದರು. ಒಂದು ಇನ್ಲ್ಯಾಂಡ್ ಲೆಟರ್ ತುಂಬುವಷ್ಟರಲ್ಲಿ ಇಡಿ ಅಕ್ಷರಗಳ ಸೌಂದರ್ಯವರ್ಧನೆಯ ಪ್ರೇರೇಪಣೆಯ ಭಾಗವಾಗಿ ಇಡಿಯ ತಿಂಗಳಿಗಾಗುವಷ್ಟು ಹೊಡೆತ ತಿಂದಿರುತ್ತಿದ್ದೆ.
ಶ್ರೀಹರ್ಷ ಸಾಲಿಮಠ ಅಂಕಣ

 

ಕಳೆದ ವಾರ ನನ್ನ ಸಹವರ್ತಿಯೊಬ್ಬಳು ತನ್ನನ್ನು ಮನೆಗೆ ಕಾರಲ್ಲಿ ಡ್ರಾಪ್ ಕೊಡಬೇಕೆಂದು ಕೇಳಿಕೊಂಡಳು. ಸರಿ ಎಂದು ಒಪ್ಪಿದೆ. ದಾರಿಯಲ್ಲಿ ಆಕೆಯ ಮಗಳನ್ನು ಶಾಲೆಯಿಂದ ಕರೆದುಕೊಂಡು ಹೋಗಬೇಕಿತ್ತು. ಮಗಳನ್ನು ಕಾರಿನ ಹಿಂದಿನ “ಚೈಲ್ಡ್ ಸೀಟ್” ನಲ್ಲಿ ಕೂರಿಸಿ ಬೆಲ್ಟ್ ನಿಂದ ಬಿಗಿಯಬೇಕಿತ್ತು. ಇಷ್ಟು ಬೆಲ್ಟ್ ಬಿಗಿದು ಕ್ಲಿಪ್ ಹಾಕಲು ಆಕೆ ಮೂರು ನಿಮಿಷ ತೆಗೆದುಕೊಂಡಳು. ನಾನು ಎಣಿಸಿಕೊಂಡಂತೆ ಈ ಮೂರು ನಿಮಿಷಗಳಲ್ಲಿ ಹದಿನೇಳು ಬಾರಿ ಮಗಳಿಗೆ ಸಾರಿ ಹೇಳಿದ್ದಳು. ಬೆಲ್ಟ್ ಹಾಕುವಾಗ ಮುಂಬದಿ ಮಗಳ ತೊಡೆಗೆ ತಾಗಿದರೆ ಒಮ್ಮೆ ಸಾರಿ, ಬೆಲ್ಟ್ ಎಳೆಯುವಾದ ಚರ್ಮಕ್ಕೆ ತಾಗಿದರೆ ಸಾರಿ, ಕ್ಲಿಪ್ ಸಿಗಿಸುವಾಗ ಕೈ ಬಡಿದಿದ್ದಕ್ಕೆ ಸಾರಿ… ಹೀಗೆ ಮೂರು ನಿಮಿಷಗಳಲ್ಲಿ ಬರೋಬ್ಬರಿ ಹದಿನೇಳು ಸಾರಿ ಸಾರಿಗಳು!

ಪಾಪಪ್ರಜ್ಞೆಯಿಂದ ಅತೀತರಾಗಿ ಹಿರಿಯರು ತಮ್ಮ ಮಕ್ಕಳಿಗೆ ಒದೆ ಕೊಡುತ್ತಿದ್ದ ಕಾಲವೊಂದರಲ್ಲಿ ನಾವು ಬಾಲ್ಯ ಕಳೆದಿದ್ದೆವು ಎಂಬುದನ್ನು ನೆನೆಸಿಕೊಂಡೇ ನಗು ಬಂತು. ಪ್ರತಿದಿನ ಕಛೇರಿಯಿಂದ ಮನೆಗೆ ಬಂದು ದೂರುಗಳನ್ನು ಕೇಳಲು ಸಮಯವಿಲ್ಲದಿದ್ದರೆ ಮೊದಲು ನಾಲ್ಕು ಬಡಿದು ನಂತರ ಸಮಯವಾದಾಗ ದೂರುಗಳ ಪಟ್ಟಿಯನ್ನು ಕೇಳಿ ಆ ದಿನ ಹೊಡೆದದ್ದು ಅವತ್ತಿನ ನಮ್ಮ ಸಾಹಸಗಳಿಗೆ ತಾಳೆಯಾಗುವುದೋ ಅಂತ ಲೆಕ್ಕ ಹಾಕಲಾಗುತ್ತಿತ್ತು. ಕಡಿಮೆ ಬಿದ್ದಿದ್ದರೆ ಉಳಿದ ಲೆಕ್ಕ ಚುಕ್ತಾ ಆಗುತ್ತಿತ್ತು. ಹೆಚ್ಚು ಬಿದ್ದಿದ್ದರೆ ಮರುದಿನಕ್ಕೆ ಅದೇನೂ “ಕ್ಯಾರಿ” ಆಗುತ್ತಿರಲಿಲ್ಲ. ಮರುದಿನದ್ದು “ಫ್ರೆಶ್ ಕೋಟಾ”. ಹಿಂದೊಮ್ಮೆ ಮಕ್ಕಳನ್ನು ಬೇಕಾದಷ್ಟು ಥಳಿಸಬಹುದಾಗಿದ್ದ ಸುವರ್ಣ ಯುಗವೊಂದಿತ್ತು ಅಂತ ಮುಂಬರುವ ಪೀಳಿಗೆ ನಂಬಲಿಕ್ಕಿಲ್ಲವೇನೋ!

ಒಮ್ಮೆ ನಮ್ಮ ಸಹಪಾಠಿ ಹೇಮಂತ ಎಂಬುವವನ ತಂದೆ ನಮ್ಮ ತರಗತಿಗೆ ಬಂದು ನಮ್ಮ ಟೀಚರ್ ಜೊತೆಗೆ ಜಗಳ ತೆಗೆದರು. ಟೀಚರ್ ಸರಿಯಾಗಿ ಹೊಡೆಯದಿದ್ದುದೇ ತಮ್ಮ ಮಗ ಜಾಣನಾಗದಿರುವುದಕ್ಕೆ ಕಾರಣ ಎಂಬುದು ಅವರ ದೂರಾಗಿತ್ತು. ಆ ದಿನ “ಎಲ್ಲಿ ಒಮ್ಮೆ ಹೊಡೆದು ತೋರಿಸಿ ನೋಡೋಣ?” ಎಂದು ತಮ್ಮ ಕೌಶಲ್ಯವನ್ನು ತೋರಿಸಲು ಟೀಚರ್ ಗೆ ಸವಾಲು ಹಾಕಿದರು. ಮೆದುವಾದ ನಾಜೂಕು ಕೈಗಳಿಂದ ನಮ್ಮ ಟೀಚರಮ್ಮ ಹೊಡೆದ ಏಟಾದರೂ ಎಷ್ಟು ಬಿದ್ದೀತು? ಹೇಮಂತನ ತಂದೆ ರೇಗಿ “ಹಾಗಲ್ಲ ಹೊಡೆಯೋದು, ಹೀಗೆ… ನೋಡಿಕೊಳ್ಳಿ” ಅಂತ ಹೇಳಿ ಮಗನ ಕಿವಿ ಹಿಂಡಿ ಎಳೆದು ಧೊಪ್ಪನೆ ಬೆನ್ನಿನ ಮೇಲೆ ಗುದ್ದಿ ತೋರಿಸಿದರು. ಆ ಹೊಡೆತಕ್ಕೆ ಹೇಮಂತನೇನೋ ದಿನಚರಿಯಂತೆ ಅಲ್ಲಾಡದಂತೆ ನಿಂತಿದ್ದರೂ ಟೀಚರಮ್ಮನ ಕಣ್ಣಲ್ಲಿ ನೀರು ಜಿನುಗಿತು. ಆ ಮಟ್ಟದ ಹೊಡೆತ ಕೊಡಲು ಟೀಚರಮ್ಮ ಇಡಿಇಡಿಯಾಗಿ ಡಬ್ಲು ಡಬ್ಲು ಎಫ್ ಪೈಲ್ವಾನರಂತೆ ಆತನ ಮೇಲೆ ಹಾರಿ ಬಿದ್ದಿದ್ದರೂ ಸಾಧ್ಯವಾಗುತ್ತಿರಲಿಲ್ಲ.

ಆವತ್ತಿನ ದಿನ ಏನೂ ನಡೆಯುತ್ತಿಲ್ಲ, ಸುಖವಾಗಿದೆ. ಯಾವ ಒದೆಯೂ ಬಿದ್ದಿಲ್ಲ ಎಂದುಕೊಳ್ಳುತ್ತಲೇ ಇರುವಾಗ ಸಂಜೆ ಟಿವಿಯಲ್ಲಿ ಇದ್ದಕ್ಕಿದ್ದಂತೆ ಅಯೋಗ್ಯನೊಬ್ಬ ಬಂದು ಕೆಲಸಕ್ಕೆ ಬಾರದ ಮತ್ತು ನಾವೆಂದೂ ಉಪಯೋಗಿಸುವ ಸಾಧ್ಯತೆಯಿಲ್ಲದ ಮನೆ ಔಷಧಿ ಹೇಳುವನು. ಅದು ಬಂದ ಕೂಡಲೇ ನಾನು ಪೇಪರ್ ಪೆನ್ ಹಿಡಿದುಕೊಂಡು ಅದನ್ನು ಬರೆದುಕೊಳ್ಳಬೇಕಿತ್ತು. ಮಧ್ಯಮ ವರ್ಗದವರ ಅಭಧ್ರತೆಯ ಭಾವನೆ ಎಂಬುದು ಜಗತ್ತಿನ ಯಾವ ಚರಾಚರಗಳಿಗೂ ನಿಲುಕದ್ದು. ಇದು ಯಾವತ್ತೂ ಉಪಯೋಗಕ್ಕೆ ಬರುವುದಿಲ್ಲ ಎಂದು ಗೊತ್ತಿದ್ದೂ ಸಂಗ್ರಹಿಸಿಡುವ ಚಾಳಿ. ಹಳೆಯ ಬಿಲ್ ಗಳು ಮ್ಯಾಗಝಿನ್ ಗಳು ಪೇಪರ್ ಗಳು, ಕೆಲವರು ಕೆಟ್ಟು ಹೋದ ಟ್ಯೂಬ್ ಲೈಟ್ ಗಳನ್ನೂ ಸಂಗ್ರಹಿಸಿಟ್ಟುಕೊಂಡಿದ್ದನ್ನು ನೋಡಿದ್ದೇನೆ. ಹಾಗೆಯೇ ಈ ಮನೆ ಔಷಧಿಗಳು, ಅಡುಗೆಯ ಶೋಗಳೂ ಸಹ. ಸುಮ್ಮನೆ ಮೂಲೆಯಲ್ಲಿ ಬಿದ್ದಿರುತ್ತವೆ. ತಪ್ಪದೇ ಮನೆ ಬದಲಾಯಿಸುವಾಗ ಇವೂ ವರ್ಗಾವಣೆಯಾಗುತ್ತವೆ. ಇಂತಹದ್ದೊಂದನ್ನು ಬರೆದುಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಬೀಳುತ್ತಿತ್ತು. ಕಾರ್ಯಕ್ರಮ ಮುಗಿದ ಮೇಲೆ ನಾನು ಬರೆದದ್ದನ್ನು ಪರಿಶೀಲಿಸಲಾಗುತ್ತಿತ್ತು. ಬರೀ ವಸ್ತುವಿಷಯವನ್ನು ನೋಡಿ ತೃಪ್ತಿಪಟ್ಟುಕೊಂಡಿದ್ದರೆ ತೊಂದರೆ ಇರಲಿಲ್ಲ, ನಾನು ಬರೆದಿರುವ ಅಕ್ಷರಗಳು ಚೆನ್ನಾಗಿಲ್ಲ ಅಂತ ಆವತ್ತಿನ ಕೋಟಾದಲ್ಲಿ ಒದೆ ಬೀಳುವವು! ಆವತ್ತಿನ ದಿನ ನಾನು ಒದೆ ತಿಂದಿಲ್ಲ ಎಂಬುದು ಯಾವುದೋ ಮಾಯೆಯಲ್ಲಿ ಟಿವಿಯವರಿಗೆ ತಿಳಿದು ಮುದ್ದಾಂ ಆ ದಿನ ಪ್ರಸಾರ ಮಾಡುತ್ತಿದ್ದರೇನೋ ಎಂಬುದು ನನಗೆ ಅನುಮಾನ ಮೂಡುತ್ತಿತ್ತು. ಅವತ್ತು ಬೆಳಿಗ್ಗೆ ದೇವರಿಗೆ ಕೈಮುಗಿಯುವಾಗ ನನ್ನ ಭಕ್ತಿ ದೇವರಿಗೆ ತೃಪ್ತಿಯಾಗುವಷ್ಟು ಆಳವನ್ನು ಹೊಂದಿರದೇ ಆತನೇ ಟಿವಿಯವರಿಗೆ ಚಾಡಿ ಚುಚ್ಚಿದ್ದಾನೇನೋ ಎಂದು ಅನ್ನಿಸುತ್ತಿದ್ದುದುಂಟು.

ನನ್ನ ಸಹಪಾಠಿ ಫರೀದ ಎಂಬುವವನಿದ್ದ. ಫರೀದ ತನ್ನ ಕೆಟ್ಟ ಅಕ್ಷರಗಳಿಂದಾಗಿ ಶಾಲೆಯಾದ್ಯಂತ ಕುಖ್ಯಾತನಾಗಿದ್ದ. ಎಂದಿನಂತೆ ಅವನ ತಂದೆ ಪದೇ ಪದೇ ಬಂದು ಟೀಚರ್ ಗಳನ್ನು ತರಾಟೆಗೆ ತೆಗೆದುಕೊಳ್ಳುವರು. ನೀವು ಅವನ ಅಕ್ಷರಗಳ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಟೀಚರನ್ನು ಮಗನ ವಿರುದ್ಧ ರೊಚ್ಚಿಗೆಬ್ಬಿಸುವರು. ಫರೀದ ಅಕ್ಷರಗಳ ವಿಷಯವಾಗಿ ಅದೆಷ್ಟು ಬಾರಿ ಒದೆ ಮತ್ತು ಬೈಗುಳಗಳನ್ನು ಭಕ್ಷಿಸಿದ್ದನೆಂದರೆ ಆತ ಅವರಪ್ಪನ ವಯಸ್ಸಿಗೆ ಬರುವಷ್ಟರ ಹೊತ್ತಿಗೆ ಅಕ್ಷರಗಳ ಸೌಂದರ್ಯವನ್ನು ವರ್ಧಿಸಿಕೊಳ್ಳದೇ ಹೋದರೆ ಆತ ಸತ್ತೇ ಹೋಗುತ್ತಾನೇನೋ ಅಂತ ನಂಬಿಕೊಂಡಿದ್ದೆ. ಒಮ್ಮೊಮ್ಮೆ ಅವರಪ್ಪನ ಕೈಬರಹ ಹೇಗಿದ್ದಿರಬಹುದು? ಅವರದ್ದೂ ಇವನಷ್ಟೇ ಕೆಟ್ಟ ಕೈಬರಹವಾಗಿದ್ದರೆ ಇನ್ನೂ ಹೇಗೆ ಈ ಭೂಮಿಯ ಮೇಲೆ ಬದುಕಿದ್ದಾರೆ ಎಂಬ ಪ್ರಶ್ನೆಗಳು ಹುಟ್ಟುತ್ತಿದ್ದವು. ಫರೀದನ ಮೇಲೆ ನನಗೆ ಈಗಲೂ ಕೃತಜ್ಞತೆ ಇರುವುದೇಕೆಂದರೆ ಅವನ ಕೆಟ್ಟ ಅಕ್ಷರಗಳ ಫಲವಾಗಿ ನಮ್ಮೆಲ್ಲರ ಕೆಟ್ಟ ಅಕ್ಷರಗಳ ಅವಗುಣ ಮುಸುಕಾಗಿ ಹೋಗಿ ಟೀಚರುಗಳ ಗಮನಕ್ಕೆ ಬರುತ್ತಿರಲಿಲ್ಲ. ಹಾಗಾಗಿ ನಮ್ಮ ಅಕ್ಷರಗಳೆಲ್ಲ ಅದ್ಭುತವಾಗಿವೆ ಎಂದೇ ನಾವೆಲ್ಲರೂ ಬಗೆದಿದ್ದೆವು.

ಇದು ನನ್ನ ಗಮನಕ್ಕೆ ಬಂದದ್ದು ಯಾವಾಗ ಎಂದರೆ ನಮ್ಮ ಶಾಲೆಯಲ್ಲಿ ಪುಂಡಲೀಕ ಎಂಬ ಮೇಷ್ಟ್ರರಿದ್ದರು. ಒಮ್ಮೆ ನಮ್ಮಮ್ಮ ನನ್ನ ಬಗ್ಗೆ ದೂರು ಕೊಡಲು ಶಾಲೆಗೆ ಬಂದಾಗ ಇವರೇ ತರಗತಿ ತೆಗೆದುಕೊಳ್ಳುತ್ತಿದ್ದರು. ಹಾಗಾಗಿ ಇವರಿಗೇ ನಮ್ಮಮ್ಮ “ಇವನು ಅಕ್ಷರ ದುಂಡಗೆ ಬರೆಯುತ್ತಿಲ್ಲ. ದುಂಡಗೆ ಬರೆಯಲು ಹೇಳಿರಿ” ಅಂತ ಚಾಡಿ ಚುಚ್ಚಿ ಹೋದರು. ಆಗ ಮೇಷ್ಟ್ರು ಸರಿಯಾಗಿ ನನ್ನ ಮುಖ ನೆನಪಿಟ್ಟುಕೊಂಡರು ಎಂದು ಕಾಣುತ್ತದೆ. ಮರುದಿನದಿಂದ ನಾನು ಸಾಲಿನಲ್ಲಿ ನಿಂತು ಹೋಮ್ ವರ್ಕ್ ತೋರಿಸಲು ಹೋದಾಗ ಒಮ್ಮೆ ನನ್ನ ಮುಸುಡಿ ನೋಡಿ ಅತ್ಯಂತ ನಿರ್ಲಿಪ್ತವಾಗಿ “ಅಕ್ಷರ ದುಂಡಗೆ ಬರೆ” ಅಂತ ಕೆಂಪು ಇಂಕಲ್ಲಿ ಬರೆದು ಅದನ್ನೇ ಆಡು ಭಾಷೆಯಲ್ಲಿ ನನ್ನ ಮುಂದೆ ಪುನರಾವರ್ತಿಸಿ ತಲೆಗೆ ಕೋಲಿನಿಂದ ಒಮ್ಮೆ ಮೊಟಕಿ ಕಳಿಸುತ್ತಿದ್ದರು.

ನಾನು ನಾಳೆ ಮೇಷ್ಟ್ರು ನನ್ನ ಅಕ್ಷರಗಳನ್ನು ಮೆಚ್ಚಬೇಕು ಅಂತ ಎಷ್ಟೇ ನೀಟಾಗಿ ದುಂಡಕೆ ಬರೆದುಕೊಂಡು ಅಪ್ಪ ಅಮ್ಮನ ಹತ್ತಿರವೆಲ್ಲ ‘ಸೈ’ ಅನ್ನಿಸಿಕೊಂಡು ಹೋದರೂ ಮತ್ತೆ ಅದೇ ರೀತಿ ಬರೆದು ಅದೇ ರೀತಿ ಹೇಳಿ ಮೊಟಕಿ ಕಳಿಸಿ ನನಗೆ ನಿರಾಶೆ ಉಂಟುಮಾಡುತ್ತಿದ್ದರು. ಅವರಿಗೆ ನಿಜವಾಗಿ ನನ್ನನ್ನು ತಿದ್ದುವುದಕ್ಕಿಂತ ತಾವು ಕೆಲಸ ಮಾಡುತ್ತಿದ್ದೇನೆ ಎಂಬುದರ ದಾಖಲೀಕರಣವೇ ಮುಖ್ಯವಾಗಿತ್ತು ಎನ್ನಿಸುತ್ತದೆ. ಪುಂಡಲೀಕ ಮಾಸ್ತರರನ್ನು ಹೊರತು ಪಡಿಸಿದರೆ ಮತ್ತಾವ ಟೀಚರ್ ಗಳೂ ಮೇಷ್ಟ್ರುಗಳೂ ನನ್ನ ಅಕ್ಷರಗಳ ಬಗ್ಗೆ ಶರಾ ಬರೆಯುತ್ತಿರಲಿಲ್ಲ. ಒಂದು ಪೂರ್ವಾಗ್ರಹ ಎಷ್ಟು ಬಲವಾಗಿ ಮನುಷ್ಯನ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತದೆ ಎಂಬುದು ನೆನೆಸಿಕೊಂಡು ಈಗಲೂ ಸೋಜಿಗವೆನಿಸುತ್ತದೆ.

ಟೀಚರ್ ಸರಿಯಾಗಿ ಹೊಡೆಯದಿದ್ದುದೇ ತಮ್ಮ ಮಗ ಜಾಣನಾಗದಿರುವುದಕ್ಕೆ ಕಾರಣ ಎಂಬುದು ಅವರ ದೂರಾಗಿತ್ತು. ಆ ದಿನ “ಎಲ್ಲಿ ಒಮ್ಮೆ ಹೊಡೆದು ತೋರಿಸಿ ನೋಡೋಣ?” ಎಂದು ತಮ್ಮ ಕೌಶಲ್ಯವನ್ನು ತೋರಿಸಲು ಟೀಚರ್ ಗೆ ಸವಾಲು ಹಾಕಿದರು. ಮೆದುವಾದ ನಾಜೂಕು ಕೈಗಳಿಂದ ನಮ್ಮ ಟೀಚರಮ್ಮ ಹೊಡೆದ ಏಟಾದರೂ ಎಷ್ಟು ಬಿದ್ದೀತು?

ಹಾಗಂತ ನನ್ನ ತಂದೆ ತಾಯಿಗಳರಾರದ್ದೂ ಅಕ್ಷರಗಳು ಅದ್ಭುತ ಅಂತ ಏನು ಇರಲಿಲ್ಲ. ನನ್ನ ತಂದೆ ಅಲ್ಲಲ್ಲಿ ಕೊಂಕುಗಳಿರುವ ಎಡದಿಂದ ಬಲಕ್ಕೆ ಸಾಗಿರುವ ಕೆಲವು ಸರಳರೇಖೆಗಳನ್ನು ಒಂದರ ಕೆಳಗೊಂದು ಬರೆದುಬಿಟ್ಟರೆ ಅದೇ ಅವರ ಅಕ್ಷರಗಳು. ನಮ್ಮ ತಂದೆಯ ಅಕ್ಷರಗಳ ಚರ್ಚೆ ನಮ್ಮ ಬಹುದೂರದ ಸಂಬಂಧಿಕರಲ್ಲೂ ಹರಡಿತ್ತು. ಒಮ್ಮೊಮ್ಮೆ ಕೆಲವರು ನನಗೆ ನಮ್ಮಪ್ಪನ ಪತ್ರಗಳನ್ನು ತೋರಿಸಿ “ನಿಮ್ಮಪ್ಪ ಏನೋ ಬರದಾನ.. ಸಲ್ಪ ಓದಿ ಹೇಳಪ್ಪಾ” ಅಂತ ಕೇಳುತ್ತಿದ್ದರು. ನಾನು ಆ ಪತ್ರದಲ್ಲಿ ಬರೆದಿರುವುದು ಕನ್ನಡವೋ ಇಂಗ್ಲೀಷೋ ಎಂದು ಗುರುತಿಸಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದ್ದೆ. ನಮ್ಮ ತಂದೆ ಒಂದೊಂದು ಸಾರಿ ನನ್ನ ಕೈಲಿ ನನ್ನ ಪಕ್ಕ ಕೂತು ಪತ್ರ ಬರೆಸುತ್ತಿದ್ದರು. ಒಂದು ಇನ್ಲ್ಯಾಂಡ್ ಲೆಟರ್ ತುಂಬುವಷ್ಟರಲ್ಲಿ ಇಡಿ ಅಕ್ಷರಗಳ ಸೌಂದರ್ಯವರ್ಧನೆಯ ಪ್ರೇರೇಪಣೆಯ ಭಾಗವಾಗಿ ಇಡಿಯ ತಿಂಗಳಿಗಾಗುವಷ್ಟು ಹೊಡೆತ ತಿಂದಿರುತ್ತಿದ್ದೆ.

ಆ ದಿನ ಹೊಡೆತ ಬಿದ್ದುದರ ಪಶ್ಚಾತ್ತಾಪ ಪರಿಹಾರಕ್ಕಾಗಿ ಬೆಣ್ಣೆದೋಸೆ ತಿನ್ನಿಸಿಕೊಂಡು ಕರೆದುಕೊಂಡು ಬರುತ್ತಿದ್ದರು. ನಮ್ಮಮ್ಮನ ಅಕ್ಷರಗಳಾದರೂ ಒಂದು ಗೊದ್ದವನ್ನು ಅದರ ಸೊಂಟಕ್ಕೆ ಹಿಚುಕಿ ಸಾಯಿಸಿ ನೆಲದ ಮೇಲೆ ಎಸೆದರೆ ಹೇಗೆ ಕಾಣುತ್ತೋ ಹಾಗೆ ಕಾಣುತ್ತಿದ್ದವು. ಜಗತ್ತಿನ ಎಲ್ಲಾ ತಾಯ್ತಂದೆಯರುಗಳ ಆತ್ಮಸಾಕ್ಷಿಗಳಿಗೆ ದೇಹರೂಪವೇನಾದರೂ ಇದ್ದಿದ್ದರೆ ಅವುಗಳು ತಮ್ಮ ಮಾಲಿಕರುಗಳ ವಿರುದ್ಧವೇ ಕೂರುವ ಧರಣಿ ಇತಿಹಾಸದ ದೊಡ್ಡ ಕ್ರಾಂತಿ ಎನ್ನಿಸಿಕೊಳ್ಳುತ್ತಿತ್ತು.

ಈಗ ಸುಮಾರು ಹತ್ತು ವರ್ಷಗಳ ಮೇಲಾದವು, ಒಂದು ಪೂರ್ತಿ ವಾಕ್ಯವನ್ನು ನಾನು ಲೇಖನಿಯಲ್ಲಿ ಬರೆದು! ಲೇಖನಗಳು, ಕೋಡ್ ಗಳು, ಕವಿತೆಗಳು ಎಲ್ಲವೂ ನೇರವಾಗಿ ಕಂಪ್ಯೂಟರ್ ನಲ್ಲೇ ಟೈಪಾಗುತ್ತವೆ. ನನಗೆ ಬೇಕಾದ ಅಕ್ಷರಗಳಿಗೆ ನನ್ನ ಬರಹವನ್ನು ಹೊಂದಿಸಿಕೊಳ್ಳಬಹುದು. ಅಕಸ್ಮಾತ್ ಕಂಪ್ಯೂಟರ್ ಇರಲಿಲ್ಲ ಎಂದರೂ ಏನೂ ವ್ಯತ್ಯಾಸವಾಗುವಂತೆ ಕಾಣುತ್ತಿರಲಿಲ್ಲ. ಇವನ ಅಕ್ಷರ ಚನ್ನಾಗಿದೆ ಅನ್ನುವ ಕಾರಣಕ್ಕಾಗಿ ಯಾವ ಸಂಸ್ಥೆ ಹೆಚ್ಚು ಸಂಬಳ ಕೊಡುತ್ತದೆ? ಯಾವ ಇಂಟರ್ ವ್ಯೂ ನಲ್ಲಿ “ನಿನ್ನ ಅಕ್ಷರ ಚೆನ್ನಾಗಿದೆಯಾ? ಬರೆದು ತೋರಿಸಪ್ಪಾ ಎಂದು ಕೇಳುತ್ತಾರೆ?” ಹಾಳಾಗಿ ಹೋಗಲಿ ಇತಿಹಾಸದಲ್ಲಿ ದಂತಕತೆಯಾದ ಕವಿಗಳಿದ್ದಾರೆ ಮಹಾಕವಿಗಳಿದ್ದಾರೆ, ಉದ್ಯಮಿಗಳಿದ್ದಾರೆ, ರಾಜರುಗಳಿದ್ದಾರೆ, ಸಮಾಜಸುಧಾರಕರುಗಳಿದ್ದಾರೆ, ಇಂಜಿನಿಯರುಗಳಿದ್ದಾರೆ. ಆದರೆ ಕೈಬರಹದ ಲೆಜೆಂಡ್ ಅಂತ ಯಾರಾದರೂ ಇದ್ದಾರೆಯೇ? ಹದಿನಾರನೆಯ ಶತಮಾನದಲ್ಲಿ ಬದುಕಿದ್ದ ಶ್ರೀ ಶ್ರೀ ತಿಮ್ಮಪ್ಪನವರು ಅತ್ಯುತ್ತಮ ಕೈಬರಹ ಹೊಂದಿದ್ದ ಮಹಾನ್ ಲಿಪಿಕಾರ ಅಂತ ಎಲ್ಲಾದರೂ ಇತಿಹಾಸದಲ್ಲಿ ಓದಿದ್ದೇವೆಯೇ? ಹುಡುಗಿ ನೋಡಲು ಹೋದಾಗ ಮಾತ್ರ ಆಕೆಯ ಬಳಿ ಓದಿಸುವ, ದನಿ ಪರೀಕ್ಷೆ ಮಾಡಿಸುವ, ಬರೆಸಿ ಅಕ್ಷರಗಳನ್ನು ಪರೀಕ್ಷಿಸುವ “ಚೀಪ್” ಕೆಲಸ ಮಾಡುತ್ತಿದ್ದರು. ಜಗತ್ತು ಯಾವತ್ತೂ ತಲೆಕೆಡಿಸಿಕೊಳ್ಳದೊಂದು ವಿಷಯಕ್ಕೆ ಯಾಕೆ ಎಲ್ಲ ಜನರೂ ಇಷ್ಟು ಮಹತ್ವ ಕೊಡುತ್ತಾರೆ ಎಂಬುದೇ ನನಗಿನ್ನೂ ಅರ್ಥವಾಗದ ವಿಷಯ.

ಕೆಲವೊಂದು ಇತಿಹಾಸದ ಪ್ರತಿಗಳ ಅಧ್ಯಯನ ಮಾಡುವ ಸಮಯದಲ್ಲಿ ನನಗೆ ಸಾಕಷ್ಟು ಆಧುನಿಕ ಜಗತ್ತಿನ ಐತಿಹಾಸಿಕ ಪುರುಷರ ಕೈಬರಹಗಳನ್ನು ಓದುವ ಅವಕಾಶ ಸಿಕ್ಕಿತು. ಗಾಂಧಿಜಿಯ ಕೈಬರಹ ಓದಲು ನಿಜವಾಗಿಯೂ ಒಂದು ವಿಶೇಷ ನೈಪುಣ್ಯ ಬೇಕು. ನೆಹರೂ ಕೈಬರಹವೂ ಅಷ್ಟಕ್ಕಷ್ಟೇ. ಮುನ್ಷಿ ಪ್ರೇಮ್ ಚಂದ್ ಕೈಬರಹ ಓದಬೇಕೆಂದರೆ ಹಳೆಯ ಶಿಲಾಶಾಸನಗಳನ್ನು ಓದಿದಷ್ಟು ಆಯಾಸವಾಗುತ್ತದೆ. ಸೌಂದರ್ಯ ಅನ್ನುವುದು ವ್ಯಕ್ತಿಗತ ಅಭಿಪ್ರಾಯದ ಮೇಲೆ ನಿಂತಿರುವುದು. ಅದು ಸಬ್ಜೆಕ್ಟಿವ್. ಅದಕ್ಕೊಂದು ವಿಶ್ವಮಾನ್ಯ ಮಾನದಂಡ ಅಂತ ಇಲ್ಲ. ಅಕ್ಷರಗಳ ಸೌಂದರ್ಯವೂ ಇದೇ ರೀತಿ! ಇಲ್ಲಿ ನಾನು ಇತಿಹಾಸ ಪುರುಷರ ಕೈಬರಹದ ಸೌಂದರ್ಯವನ್ನು ವ್ಯಾಖ್ಯಾನ ಮಾಡುತ್ತಿರುವುದು ಅದು ಓದಲು ಸಾಮಾನ್ಯರಿಗೆ ಎಷ್ಟು ಸುಲಭ ಎನ್ನುವುದರ ಮೇಲೆ. ಫಾಂಟ್ ಗಳನ್ನು ತಯಾರು ಮಾಡುವಾಗಲೂ ಸಹ ಸೌಂದರ್ಯದ ಮಾನದಂಡ ಎಲ್ಲ ಕಡೆಗೂ ಒಂದೇ ರೀತಿ ನಡೆಯುವುದಿಲ್ಲ. ಕಣ್ಣಿಗೆ ಎಷ್ಟು ಬೇಗ ತಲುಪುತ್ತದೆ ಎಂಬುದರ ಮೇಲೆ ಫಾಂಟ್ ಗಳ ಪ್ರಭಾವ ನಿಂತಿರುತ್ತದೆ.

ಬ್ಯಾನರ್ ಗಳ ಮೇಲೆ ಬರೆಯುವ ಅಕ್ಷರಗಳನ್ನೇ ಪುಸ್ತಕಗಳಲ್ಲಿ ಬಳಸಲಾಗುವುದಿಲ್ಲ. ನಾವು ಜಾಲತಾಣಗಳಲ್ಲಿ ಬಳಸುವ ಅಕ್ಷರಗಳ ಬಣ್ಣ ಪೂರ್ತಿ ಕಡುಗಪ್ಪು ಅಲ್ಲ. ಹಳದಿ ಅಥವಾ ಕೆಂಪು ಅಕ್ಷರಗಳನ್ನು ಬ್ಲಾಗ್ ಲೇಖನಗಳಲ್ಲಿ ಬಳಸಲಾಗುವುದಿಲ್ಲ. ಕಣ್ಣಿಗೆ ತನ್ನದೇ ಇತಿಮಿತಿಗಳಿರುತ್ತವೆ. ಅದಕ್ಕೆ ಕಡಿಮೆ ಆಯಾಸವಾದಷ್ಟೂ ಮೆದುಳಿಗೆ ಹಿತ ನೀಡುತ್ತದೆ. ಈ ಹಿತವೇ ನಾವು ಪದಗಳಲ್ಲಿ ಹೇಳುವ ಸೌಂದರ್ಯ. ಇವೆಲ್ಲವೂ ನಮ್ಮ ಹಿನ್ನೆಲೆ ಪೂರ್ವಾಗ್ರಹಗಳ ಆಧಾರದ ಮೇಲೂ ನಿರ್ಧಾರವಾಗುತ್ತವೆ.

ಕೆಲವು ಜನರಿಗೆ ಬಿಳಿ ಬಣ್ಣ ಎಂದರೆ ಬಹಳ ಇಷ್ಟ. ಆದರೆ ಯಾವುದೇ ಕಾರಣಕ್ಕೂ ಅವರು ತಲೆ ಕೂದಲು ಬಿಳಿಯಾಗಿರುವುದನ್ನು ಸಹಿಸುವುದಿಲ್ಲ. ಅದಕ್ಕೇ ಸೌಂದರ್ಯವರ್ಧಕಗಳ ಪಟ್ಟಿಯಲ್ಲಿ ಕಪ್ಪಾದ ಕಾಡಿಗೆಯೂ ಇರುತ್ತದೆ, ಬಿಳಿ ಬಣ್ಣದ ಪೌಡರೂ ಸಹ ಇರುತ್ತದೆ. ಇಂತಹ ವೈವಿಧ್ಯಗಳೇ ಜಗತ್ತಿಗೆ ಸೌಂದರ್ಯವನ್ನು ತಂದುಕೊಡುವುದು.

ಒಮ್ಮೆ ನನ್ನ ಟೀಚರೊಬ್ಬರು ನನ್ನ ನೋಟ್ಸ್ ನೋಡಿ “ಎಷ್ಟು ಕೆಟ್ಟದಾಗಿ ಬರೆಯಲು ಸಾಧ್ಯವಿದೆಯೋ ನೀನು ಅದಕ್ಕಿಂತ ಕೆಟ್ಟದಾಗಿ ಬರೆಯುತ್ತೀಯಾ ಕಣಯ್ಯ” ಎಂದಿದ್ದರು. ನಾನು ಬೇಕಿದ್ದರೆ ಪಂದ್ಯ ಕಟ್ಟಬಲ್ಲೆ, ನನ್ನ ಜೊತೆಗೆ ಓದಿದ್ದ ಅತ್ಯುತ್ತಮ ಕೈಬರಹವುಳ್ಳ ವಿದ್ಯಾರ್ಥಿಯು ಈಗ ಅವರ ಎದುರಿಗೆ ಸಿಕ್ಕರೆ ಗ್ಯಾರಂಟಿ ಅವರು “ಓಹೋ.. ನೀನ್ನ ಕೈಬರಹ ಅದ್ಭುತವಾಗಿತ್ತು. ನನಗೆ ನೆನಪಿದೆ” ಅಂತ ಖಂಡಿತಾ ಕೇಳುವುದಿಲ್ಲ. ಅಸಲಿಗೆ ಅವರಿಗೆ ನನ್ನ ಕೈಬರಹ ಕೆಟ್ಟದಾಗಿದ್ದುದೂ ನೆನಪಿರುವುದಿಲ್ಲ, ಮತ್ತೊಬ್ಬನ ಅತ್ಯುತ್ತಮ ಕೈಬರಹವೂ ನೆನಪಿರುವುದಿಲ್ಲ. ನಾವು ಈಗ ಜೀವನದಲ್ಲಿ ಏನು ಕಡಿದು ಕಟ್ಟಿ ಹಾಕಿದ್ದೇವೆ ಎಂಬುದರ ಕಡೆಗೆ ಅವರ ಗಮನ ಇರುತ್ತದೆ. ನೋಡಿದರೆ ಇಬ್ಬರ ಸಾಧನೆಯಲ್ಲೂ ಅಂತಹ ವ್ಯತ್ಯಾಸವೇನೂ ಇರುವುದಿಲ್ಲ.

ಒಬ್ಬ ಹುಡುಗಿ ತುಂಬಾ ಮುದ್ದಾದ ಅಕ್ಷರಗಳನ್ನು ಬರೆಯುತ್ತಿದ್ದಳು. ಎಷ್ಟು ಮುದ್ದಾಗಿ ಎಂದರೆ ಆಕೆಯ ಅಕ್ಷರಗಳಿಂದ ಸುವಾಸನೆ ಬರುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಆಕೆಗೆ ವೈದ್ಯೆಯಾಗಬೇಕೆಂಬ ಆಸೆಯಿತ್ತು. ನಾನು ಆಕೆಯೊಡನೆ ನೀನು ವೈದ್ಯೆಯಾಗಲು ಸಾಧ್ಯವೇ ಇಲ್ಲ ಎಂದು ಪಂದ್ಯ ಕಟ್ಟಿದ್ದೆ. ಮೆಡಿಕಲ್ ಶಾಪ್ ನವರಿಗೆ ಮಾತ್ರ ಅರ್ಥವಾಗುವಷ್ಟು ಕೌಶಲ್ಯದಿಂದ ಬರೆಯುವುದೂ ಸಹ ವೈದ್ಯನಾಗಲು ಬೇಕಾದ ಮುಂಪರಿಣಿತಿ ಎಂದೇ ನನ್ನ ಭಾವನೆಯಾಗಿತ್ತು. ಇಷ್ಟು ಚೆಂದದ ಕೈಬರಹವಿರುವ ಕಾರಣ ನೀನು ವೈದ್ಯೆಯಾಗಲು ಸಾಧ್ಯವಿಲ್ಲ. ನಾನು ಇನ್ನಷ್ಟು ಹಾಳು ಮಾಡಿಕೊಂಡರೆ ನಾನು ವೈದ್ಯನಾಗಬಲ್ಲೆ ಎಂಬುದು ನನ್ನ ತರ್ಕವಾಗಿತ್ತು. ನಾನು ಪಂದ್ಯ ಸೋತೆ. ಆಕೆ ವೈದ್ಯೆಯಾಗಿ ವೈದ್ಯಕೀಯ ಪದವಿಯಲ್ಲೂ ಮೇಲ್ದರ್ಜೆಯಲ್ಲಿ ತೇರ್ಗಡೆಯಾಗಿ ಈಗ ಸೇವೆ ಸಲ್ಲಿಸುತ್ತಿದ್ದಾಳೆ.


ನನಗೆ ಆಕೆಯ ಪ್ರಿಸ್ಕ್ರಿಪ್ಷನ್ ನೋಡುವ ಆಸೆಯಿದೆ. ಔಷಧಿ ಅಂಗಡಿಯವರು ಮಾತ್ರ ಓದಬಲ್ಲ ಕೈಬರಹವನ್ನು ಆಕೆ ವಿಕಸನ ಮಾಡಿಕೊಂಡಿದ್ದಾಳೆಯೇ ಅಂತ. ಇಲ್ಲವಾದರೆ ಔಷಧಿ ಅಂಗಡಿಯವರು ಇದು ಯಾವುದೋ ಸುಳ್ಳು ಪ್ರಿಸ್ಕ್ರಿಪ್ಷನ್ ಎಂದು ದೂರಿ ವಾಪಸು ಕಳಿಸಿದರೂ ಅಚ್ಚರಿಯಿಲ್ಲ!