ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ ಲಿಂಗ ಮನೆಗೆ ಬರುತ್ತಾನೆ. ಸುಬ್ಬಣ್ಣ ಗೌಡರು ಏನಾಯ್ತೋ ಎಂದು ಕೇಳುತ್ತಾರೆ. ತಾನು ತನ್ನ ಪ್ರಾಣದ ಹಂಗು ತೊರೆದು ಅವರೆಲ್ಲರ ಪ್ರಾಣ ಉಳಿಸಿದ್ದರೂ ಅದನ್ನು ಮುಚ್ಚಿಟ್ಟು “ಯಾರೂ ಅರಿಯದ ವೀರ”ನಾಗಿ ಉಳಿಯುತ್ತಾನೆ.
ಆಶಾ ಜಗದೀಶ್ ಅಂಕಣ

 

ಕುವೆಂಪುರವರ ಬರಹ ನನ್ನ ಅನುಗಾಲದ ಓದಿನ ಸಂಗಾತಿ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಮಾತಿನಂತೆ ಕುವೆಂಪುರವರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೇನೋ. ಅವರ ಬಹಳಷ್ಟು ಕವಿತೆಗಳು, ಪ್ರಬಂಧ, ವಿಮರ್ಶೆ, ನಾಟಕ, ಕಾದಂಬರಿಗಳನ್ನು ಓದಿದ್ದೆ. ಆದರೆ ಅವರ ಕಥೆಗಳ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿರಲಿಲ್ಲ. ನಿಜಕ್ಕೂ ಓದಿಯೇ ಇರಲಿಲ್ಲ. ಹಾಗಾಗಿ ಕಥೆಗಾರ ಕುವೆಂಪುರವರ ಬಗ್ಗೆ ಸಹಜ ಕುತೂಹಲವೊಂದು ಜೀವಂತವಿತ್ತು.

ಅವರ ಸಣ್ಣ ಕಥೆಗಳನ್ನು ಓದುವ ಸಂದರ್ಭ ಬಂದಾಗ ಬಹಳ ಖುಷಿಯಾಗಿತ್ತು. ಕುವೆಂಪುರವರು ಹೆಚ್ಚು ಕಥೆಗಳನ್ನು ಬರೆದವರಲ್ಲ. ಅವರ ಎರಡೇ ಎರೆಡು ಕಥಾಸಂಕಲನಗಳು ಬಂದಿವೆ. ಒಂದು “ನನ್ನ ದೇವರು ಮತ್ತು ಇತರೆ ಕಥೆಗಳು”, ಮತ್ತೊಂದು “ಸನ್ಯಾಸಿ ಮತ್ತು ಇತರ ಕಥೆಗಳು”. ಎರೆಡೂ ಪುಸ್ತಕಗಳಿಂದ ಒಟ್ಟು ಹದಿನೇಳು ಕಥೆಗಳಿವೆ ಎಂದು ಎಣಿಸಿಡಬಹುದಷ್ಟೇ. ಆದರೆ ಅವರ ಸಣ್ಣ ಕಥೆಗಳನ್ನು ಓದುತ್ತಾ ಹೋದಂತೆ ಇವರು ಇನ್ನಷ್ಟು ಕಥೆಗಳನ್ನು ಬರೆಯಬೇಕಿತ್ತು ಎಂದು ಅನಿಸಲು ಶುರುವಾಯ್ತು ನನಗೆ.

ಅವರ ಕಥೆಗಳಲ್ಲಿ ಒಂದು ವೈವಿಧ್ಯತೆ ಇದೆ, ಉದಾರತೆ ಉದಾತ್ತತೆಯೂ ಇದೆ, ಒಂದು ಶೋಧನೆ ಇದೆ ಆತ್ಮಶೋಧನೆಯೂ ಇದೆ, ಸಮಾಜೋದ್ಧಾರ ಚಿಂತನೆಗಳಿವೆ, ಆ ಸಂದರ್ಭದ ಸಾಮಾಜಿಕ ಸಮಸ್ಯೆಗಳಿಗೆ ಹಿಡಿದ ಕನ್ನಡಿಯೂ ಇದೆ. ಆದರೆ ಆ ಹದಿನೇಳು ಕಥೆಗಳು ನಮಗೆ ಕೊಡುವ ಅನುಭವ ಅನನ್ಯ.

ಕುವೆಂಪುರವರ ಕಥೆಗಳು ಎಂದ ಮೇಲೆ ಅಲ್ಲಿ ಮಲೆನಾಡಿನ ವರ್ಣನೆ ಇರಲೇಬೇಕು. ಖಂಡಿತ ಆ ದೃಷ್ಟಿಯಿಂದ ಯಾವ ಓದುಗರಿಗೂ ನಿರಾಸೆಯಾಗುವುದಿಲ್ಲ. ನವೋದಯ ಕಾಲದ ಬರಹಗಾರರಲ್ಲಿ ಕಂಡುಬರುವ ತತ್ವ ಆದರ್ಶಗಳು ಇಲ್ಲಿಯೂ ಕಂಡುಬರುತ್ತವೆ. ಕುವೆಂಪುರವರು ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಪ್ರಭಾವಕ್ಕೊಳಗಾಗಿದ್ದವರು. ಒಂದು ಹಂತದಲ್ಲಿ ಸನ್ಯಾಸಿಯಾಗ ಹೊರಟಿದ್ದವರು. ನಂತರ ಸಂಸಾರಕ್ಕೆ ಮರಳಿದವರು. ಈ ಎಲ್ಲ ಸಂದರ್ಭದಲ್ಲಿ ಅವರು ಮಾನಸಿಕವಾಗಿ ಅನುಭವಿಸಿದ್ದ ಸಂಘರ್ಷವೇನಿದ್ದಿರಬಹುದು, ಆತ್ಮಸಾಕ್ಷಿಗೆ ಉತ್ತರಿಸಬೇಕಾಗಿ ಬಂದಾಗ ಯಾವ ರೀತಿಯಲ್ಲಿ ಸಮರ್ಥನೆಯನ್ನು ಕಂಡುಕೊಂಡಿದ್ದಿರಬಹುದು ಎಂದೆಲ್ಲ ಅನಿಸುವಾಗ ಅವರ ಒಂದಷ್ಟು ಸಣ್ಣ ಕಥೆಗಳು ಒಂದು ಮಟ್ಟಿಗೆ ಉತ್ತರವಾಗಿ ದಕ್ಕುತ್ತವೆ.

ಉದಾಹರಣೆಗೆ: ಸನ್ಯಾಸಿ, ಕ್ರಿಸ್ತನಲ್ಲ ಪಾದ್ರಿ, ನನ್ನ ದೇವರು, ಆದರ್ಶ ಸಾಧನೆ, ವೈರಾಗ್ಯದ ಮಹಿಮೆ… ಈ ಕಥೆಗಳ ಕಥಾನಾಯಕರು ಸನ್ಯಾಸಿಗಳಾಗ ಹೊರಟವರು. ಸನ್ಯಾಸವನ್ನು ಆದರ್ಶವೆಂದು ತಿಳಿದವರು. ಸನ್ಯಾಸತ್ವ ಸಹಜವಾದುದಲ್ಲ. ನೈಸರ್ಗಿಕವಲ್ಲ. ಹಾಗಾಗಿ ನಿಸರ್ಗದ ವಿರುದ್ಧ ಹೊರಡಬಾರದು ಎನ್ನುವ ಸತ್ಯ ಕಂಡುಕೊಂಡು ಮತ್ತೆ ಸಂಸಾರಿಗಳಾಗುವವರು. ಅವರಲ್ಲಿ ಸನ್ಯಾಸ ಮತ್ತು ಆಧ್ಯಾತ್ಮದ ನಡುವೆ ಗೊಂದಲ ಹುಟ್ಟಿ ಅದರ ಶೋಧನೆ ಇಲ್ಲಿ ನಡೆಯುತ್ತದೆ. ಇದನ್ನು ವೈಚಾರಿಕ ನೆಲೆಯಲ್ಲಿ ಸಮರ್ಥಿಸುವ ಕುವೆಂಪುರವರ ಬಗ್ಗೆ ಮೆಚ್ಚುಗೆ ಹುಟ್ಟುತ್ತದೆ.

ನಾವದಕ್ಕೆ ಗುರಿಯಾಗದೆ ಒಳಗಾಗದೇ ಹೇಳುವುದೆಂದರೆ ಕುರುಡ ಆನೆಯನ್ನು ವರ್ಣಿಸಿದಂತಾಗುತ್ತದೆ. ಆದರೆ ತಮ್ಮನ್ನು ತಾವು ನಿಕಷಕ್ಕೆ ಒಡ್ಡಿಕೊಂಡು ಅದು ಹೀಗೆ ಎಂದು ಹೇಳುವ ಕುವೆಂಪುರವರ ಆಧ್ಯಾತ್ಮದ ಬಗೆಗಿನ ನಿಲುವು ಪ್ರಮಾಣಾತ್ಮಕವೆನಿಸುತ್ತದೆ.

ಇಲ್ಲಿನ “ಕ್ರಿಸ್ತನಲ್ಲ, ಪಾದ್ರಿ” ಎನ್ನುವ ಕಥೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವ ಪ್ರಕ್ರಿಯೆಯ ಪ್ರಸ್ತಾಪ ಬರುತ್ತದೆ. ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿಯಲ್ಲಿಯೂ ಅದರ ಪ್ರಸ್ತಾಪವಿದೆ. ಇಂತಹ ಅನೈತಿಕ ಮತಾಂತರದ ಬಗ್ಗೆ ಮತ್ತು ಅದಕ್ಕಾಗಿ ಒಡ್ಡಲಾಗುವ ಆಮಿಷಗಳ ಬಗ್ಗೆ ಕುವೆಂಪುರವರು ತಮ್ಮ ಕಥೆಗಳಲ್ಲಿ ವಿರೋಧವೆತ್ತುತ್ತಾರೆ.

ಕುವೆಂಪುರವರ ಕಥೆಗಳ ವಿಸ್ತಾರ ನೋಡುವಾಗ ಅದು ಆಲಯದಿಂದ ಬಯಲಿನವರೆಗೂ ಹಬ್ಬಿರುವುದು ಕಂಡು ಬರುತ್ತದೆ. ಒಂದು ಕಡೆ ಮನೆಯೊಳಗೆ ನಲುಗುವ ಮನಸುಗಳ ಕಥೆ ಹೇಳುತ್ತಲೇ ಹೊರಗಿನ ವ್ಯವಹಾರಿಕ ಪ್ರಪಂಚದ ತಲ್ಲಣಗಳನ್ನೂ ಕಥೆಗೆ ಹೊತ್ತು ತರುತ್ತಾರೆ. ಇನ್ನು ತಮ್ಮ ಕಥೆಗಳಲ್ಲಿ ಅವರು ಸೃಷ್ಟಿಸುವ ಹೆಣ್ಣು ಪಾತ್ರಗಳಂತೂ ಕಾಡುವಂಥವು. “ಸನ್ಯಾಸಿ” ಮತ್ತು “ನನ್ನ ದೇವರು” ಕಥೆಗಳ ಹೆಣ್ಣುಮಕ್ಕಳು ಬಹಳ ಕಾಲ ಮನಸಿನಲ್ಲುಳಿಯುವಂಥವರು.

ಇನ್ನು ಆಗಿನ ಫ್ಯೂಡಲ್ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಹೊತ್ತ ಕಥೆಗಳೂ ಇವೆ. (ಆ ಮನಸ್ಥಿತಿ ಇವತ್ತಿಗಾದರೂ ನಾಮಾವಶೇಷವಾಗಿದೆಯಾ ಎಂದು ಪ್ರಶ್ನಿಸಿಕೊಂಡರೆ ಅದು ಮತ್ತೊಂದೇ ರೂಪದಲ್ಲಿ ಇವತ್ತಿಗೂ ಇದೆ ಎಂದೇ ಉತ್ತರ ಕೊಟ್ಟುಕೊಳ್ಳಬೇಕಾಗುತ್ತದೇನೋ). ಉದಾಹರಣೆ: ಸಾಲದ ಮಗು, ಯಾರು ಅರಿಯದ ವೀರ, ಧನ್ವಂತರಿಯ ಚಿಕಿತ್ಸೆ… ಈ ಕತೆಗಳಲ್ಲಿ ಒಡೆಯನಲ್ಲಿ ಜೀತಕ್ಕಿರುವ ಆಳುಮಂದಿಯ ಸ್ಥಿತಿಯ ಬಗ್ಗೆ ಬಹಳ ಚಂದ ನಿರೂಪಿಸುತ್ತಾರೆ. ಈ ಮೂರೂ ಕಥೆಗಳೂ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿರುವ ಮತ್ತು ಗಾಢ ವಿಷಾದವನ್ನೂ ಹುಟ್ಟಿಸುವ ಕಥೆಗಳು.

“ಯಾರೂ ಅರಿಯದ ವೀರ” ಕಥೆ ಹೀಗೆ ಸಾಗುತ್ತದೆ… ತುಂಗಾ ಹೊಳೆ ಬದಿಯಲ್ಲಿ ಇದ್ದ ಸುಬ್ಬಣ್ಣ ಗೌಡರ ಮನೆ ಮೇರೆಗೆ ಬಲಿಯಾದಾಗ ಮನೆಯ ಆಳುಮಗ ಲಿಂಗ ಮತ್ತು ಸುಬ್ಬಣ್ಣ ಗೌಡರು ಮನೆಮಂದಿಯನ್ನೆಲ್ಲಾ ದೋಣಿಯಲ್ಲಿ ಕುಳ್ಳರಿಸಿಕೊಂಡು ಸುರಕ್ಷಿತವಾಗಿ ದಡ ಮುಟ್ಟಬೇಕು ಎಂದುಕೊಳ್ಳುವ ಹೊತ್ತಿಗೆ ಏಳುಮಂದಿ ಪ್ರಯಾಣಿಕರು ಮತ್ತು ಎರೆಡು ಬೆಲೆಬಾಳುವ ಪೆಟ್ಟಿಗೆಗಳ ತೂಕದಿಂದಾಗಿ ತಾವು ದಡ ಸೇರುತ್ತೇವಾ ಎನ್ನುವ ಅನುಮಾನ ಕಾಡುತ್ತದೆ. ಆಗ ಸುಬ್ಬಣ್ಣ ಗೌಡರು ತಮ್ಮ ಆ ಎರೆಡು ಪೆಟ್ಟಿಗೆಗಳನ್ನು ಪ್ರಾಣ ಉಳಿದರೆ ಸಾಕು ಎಂದು ಹೊಳೆಗೆ ಎಸೆಯುತ್ತಾರೆ. ಆದರೂ ಭಾರಕಡಿಮೆಯಾಗದೆ ಹೊಳೆ ನೀರು ದೋಣಿಗೆ ನುಗ್ಗತೊಡಗುತ್ತದೆ. ಸುತ್ತಲೂ ಕಗ್ಗತ್ತಲು, ಮಳೆ ಮತ್ತು ಜೋರಾಗಿ ಬೀಸುತ್ತಿರುವ ಗಾಳಿ. ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ.

ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ ಲಿಂಗ ಮನೆಗೆ ಬರುತ್ತಾನೆ. ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಸುಬ್ಬಣ್ಣ ಗೌಡರು ಏನಾಯ್ತೋ ಎಂದು ಕೇಳುತ್ತಾರೆ. ಆಗ ಲಿಂಗ ದೋಣಿ ಒಮ್ಮೆ ಜೋರಾಗಿ ಹಾಯಿತಲ್ಲ ಆಗ ಮುಗ್ಗರಿಸಿ ಹೊಳೆಗೆ ಬಿದ್ದೆ ಎಂದು ಸುಳ್ಳು ಹೇಳುತ್ತಾನೆ. ತಾನು ತನ್ನ ಪ್ರಾಣದ ಹಂಗು ತೊರೆದು ಅವರೆಲ್ಲರ ಪ್ರಾಣ ಉಳಿಸಿದ್ದರೂ ಅದನ್ನು ಮುಚ್ಚಿಟ್ಟು “ಯಾರೂ ಅರಿಯದ ವೀರ”ನಾಗಿ ಉಳಿಯುತ್ತಾನೆ.

ಕಥೆಯಲ್ಲಿ ಆಳು ಧಣಿಯೆಂಬ ಭೇದವಿಲ್ಲದೆ ಪ್ರಾಣ ಸ್ನೇಹಿತರಂತೆ ಕಂಡುಬರುವ ಸುಬ್ಬಣ್ಣ ಗೌಡರು ಮತ್ತು ಲಿಂಗನ ಬಾಂಧವ್ಯ, ಲಿಂಗನ ಸ್ವಾಮಿ ನಿಷ್ಠೆ, ಇಡೀ ಮನೆಯವರೊಂದಿಗೆ ಲಿಂಗ ಮತ್ತು ಅವನ ಮಗನಿಗಿದ್ದ ಒಡನಾಟ ಓದುಗರನ್ನು ತಟ್ಟಿಬಿಡುತ್ತವೆ. ಯಾವ ಮೌಲ್ಯಗಳನ್ನು ನಾವಿಂದು ಕಳೆದುಕೊಳ್ಳುತ್ತಾ ಹೊರಟಿದ್ದೇವೋ ಅವನ್ನು ಸಚಿತ್ರವಾಗಿ ಕಾಣಿಸುತ್ತದೆ ಈ ಕಥೆ.

ಒಂದು ಹಂತದಲ್ಲಿ ಸನ್ಯಾಸಿಯಾಗ ಹೊರಟಿದ್ದವರು. ನಂತರ ಸಂಸಾರಕ್ಕೆ ಮರಳಿದವರು. ಈ ಎಲ್ಲ ಸಂದರ್ಭದಲ್ಲಿ ಅವರು ಮಾನಸಿಕವಾಗಿ ಅನುಭವಿಸಿದ್ದ ಸಂಘರ್ಷವೇನಿದ್ದಿರಬಹುದು, ಆತ್ಮಸಾಕ್ಷಿಗೆ ಉತ್ತರಿಸಬೇಕಾಗಿ ಬಂದಾಗ ಯಾವ ರೀತಿಯಲ್ಲಿ ಸಮರ್ಥನೆಯನ್ನು ಕಂಡುಕೊಂಡಿದ್ದಿರಬಹುದು ಎಂದೆಲ್ಲ ಅನಿಸುವಾಗ ಅವರ ಒಂದಷ್ಟು ಸಣ್ಣ ಕಥೆಗಳು ಒಂದು ಮಟ್ಟಿಗೆ ಉತ್ತರವಾಗಿ ದಕ್ಕುತ್ತವೆ.

ಇನ್ನು “ಸಾಲದ ಮಗು” ಕಥೆಯಲ್ಲಿ ಸುಬ್ಬನೆನ್ನುವ ತಂದೆ ತಾಯಂದಿರಿಲ್ಲದ ತಬ್ಬಲಿ ಮಗು, ತಂದೆಯ ಸಾಲಕ್ಕೆ ಜೀತದಾಳಾಗಿ ಒಡೆಯನಲ್ಲಿ ಉಳಿದುಕೊಂಡಿರುತ್ತದೆ. ಆ ನಿರ್ದಯಿ ಒಡೆಯನಿಗೋ ಅವನ ರಕ್ತ ಹೀರಿಯಾದರೂ ಸರಿ ತನ್ನ ಸಾಲ ತೀರಿಸಿಕೊಳ್ಳಬೇಕು. ಅದಕ್ಕೆ ಅವನು ಮಾಡಿಸುವ ಕೆಲಸಗಳಾದರೂ ಸುಬ್ಬನ ಸಾಮರ್ಥ್ಯ ಮೀರಿದಂಥವು. ಇಂತಹುದೇ ಒಂದು ತನ್ನ ಸಾಮರ್ಥ್ಯ ಮೀರಿದ ಕೆಲಸವೊಂದನ್ನು ಮಾಡಲು ಹೋಗಿ ಆ ಮಗು ತನ್ನ ಪ್ರಾಣವನ್ನೇ ಕಳೆದುಕೊಂಡುಬಿಡುತ್ತದೆ. ಅವನು ಸತ್ತದ್ದು ತಿಳಿದಾಗಲೂ ಒಡೆಯನಿಗೆ ಕಾಡುವುದು ತನ್ನ ಸಾಲದ ಚಿಂತೆಯೇ ಹೊರತು ಆ ಮಗುವಿನ ಸಾವಲ್ಲ…

ಇನ್ನು “ಧನ್ವಂತರಿಯ ಚಿಕೆತ್ಸೆ” ಮೇಲ್ವರ್ಗ ಮತ್ತು ಕೆಳವರ್ಗದವರ ನಡುವಿನ ಕಂದಕ, ಮೇಲ್ವರ್ಗದವರ ಪ್ರಭಾವ ಕೆಳವರ್ಗದ ಮೇಲೆ ಉಂಟು ಮಾಡುತ್ತಿರುವ ಪರಿಣಾಮವನ್ನು ವಿಡಂಬನಾತ್ಮಕವಾಗಿ ಚಿತ್ರಿಸಿರುವ ರೀತಿ ಅವರ ಕಲಾತ್ಮಕತೆಗೆ ನಿದರ್ಶನ. ಸಾಮಾನ್ಯ ರೈತನೊಬ್ಬನ ನೋವಿನ ಕೂಗು ಸ್ವರ್ಗಕ್ಕೆ ಮುಟ್ಟಿ ಅದಕ್ಕೆ ಕಾರಣ ಹುಡುಕುತ್ತ ಅಲ್ಲಿಂದ ಸಾಕ್ಷಾತ್ ವಿಶ್ವಾಮಿತ್ರನೇ ಭೂಮಿಗಿಳಿದು ಬರುತ್ತಾನೆ. ಬಂದು ನೋಡಿದರೆ ಅದಕ್ಕೆ ಕಾರಣ ಅವನಿಗೆ ತಿಳಿಯುವುದೇ ಇಲ್ಲ! ಕೊನೆಗೆ ದೇವ ವೈದ್ಯ ಧನ್ವಂತರಿಯನ್ನೇ ಕರೆಸುತ್ತಾನೆ ವಿಶ್ವಾಮಿತ್ರ. ಆದರೆ ಧನ್ವಂತರಿಗೂ ಅದು ತಿಳಿಯದೇ ಕಂಗಾಲಾಗುತ್ತಾನೆ. ಕೊನೆಗೆ ಧನ್ವಂತರಿಯೇ ಒಂದು ಉಪಾಯ ಕಂಡುಹಿಡಿಯುತ್ತಾನೆ. ಸಮಸ್ಯೆ ಏನಿತ್ತು ಮತ್ತು ಹೇಗೆ ಪರಿಹಾರವಾಯಿತು ಎನ್ನುವುದೇ ಕಥೆಯ ರಹಸ್ಯ.

ಒಮ್ಮೆ ಪುರೋಹಿತಶಾಹಿ ವ್ಯವಸ್ಥೆಯನ್ನು (ಬರೀ ಹಿಂದೂ ಧರ್ಮಕ್ಕೆ ಸಂಬಂಧಪಟ್ಟಂತೆ ಅಲ್ಲ. ಕ್ರೈಸ್ತ ಮತ್ತು ಮುಸಲ್ಮಾನ ಧರ್ಮದಲ್ಲೂ ಕಂಡುಬರುವ ಪುರೋಹಿತಶಾಹಿ ವ್ಯವಸ್ಥೆಯೂ ಸೇರಿದಂತೆ) ವಿರೋಧಿಸುತ್ತಾ, ರಾಮಾಯಣ ಮತ್ತು ಮಹಾಭಾರತವನ್ನು ತಿರಸ್ಕರಿಸಿ ಸುಡಲು ಹೊರಟ ಯುವ ಸಮೂಹವನ್ನು ಉದ್ದೇಶಿಸಿ ಕುವೆಂಪುರವರು ಒಂದು ಮಾತು ಹೇಳುತ್ತಾರೆ. “ನಿಮ್ಮ ಹೆಂಡತಿ ಬಹಳ ಆಧುನಿಕಳು ಎಂದಿಟ್ಟುಕೊಳ್ಳೋಣ. ನಿಮ್ಮ ಮನೆಯಲ್ಲಿ ತಾತ ಮುತ್ತಾತನ ಕಾಲದ ಒಂದಷ್ಟು ಚಿನ್ನದ ಒಡವೆಗಳಿರುತ್ತವೆ. ಅವಳು ಆಧುನಿಕಳು ಎನ್ನುವ ಕಾರಣಕ್ಕೆ ಹಳೆಯ ಒಡವೆಗಳನ್ನು ಒಲೆಗೆ ಹಾಕಿದಿರಾ? ಎಂದು ಕೇಳುತ್ತಾರೆ ಕುವೆಂಪು. ಇಲ್ಲ ಅದನ್ನು ಕರಗಿಸಿ ಬೇರೆ ಒಡವೆ ಮಾಡಿಸಿಕೊಳ್ಳುತ್ತೇವೆ ಎನ್ನುತ್ತಾರೆ ಎದುರಿಗಿದ್ದವರು. ಆಗ ಕುವೆಂಪು “ಅದನ್ನೇ ಈಗ ನಾವು ಮಾಡಬೇಕಿರುವುದು. ಅದು ನಿಮ್ಮಂಥಹ ಯುವ ಬರಹಗಾರರ ಕೆಲಸ. ಆ ಕಥೆಗಳನ್ನು ಬಳಸಿಕೊಂಡು ಸಮಕಾಲೀನ ಚಿಂತನೆಗಳನ್ನು ಅದರಲ್ಲಿ ತನ್ನಿ ಎನ್ನುತ್ತಾರೆ. ನಾನೂ ಸಹ ಶ್ರೀರಾಮಾಯಣ ದರ್ಶನಂ ನಲ್ಲಿ ಅದನ್ನೇ ಮಾಡಿದ್ದು ಎಂದು ಹೇಳುತ್ತಾರೆ. “ನಾನು ಯಾರ ಪರವೂ ಅಲ್ಲ ವಿರುದ್ಧವೂ ಅಲ್ಲ. ನಾನು ಮಾನವತಾವಾದಿ, ಸಮಾನತಾವಾದಿ” ಎಂದು ತಮ್ಮ ಬಗ್ಗೆ ತಾವು ಹೇಳಿಕೊಳ್ಳುತ್ತಾರೆ. ಈ ಹಿನ್ನಲೆಯಲ್ಲಿ ಈ ಕಥೆಗಳೆಲ್ಲ ಸಾರ್ವಕಾಲಿಕತೆಯನ್ನು ಪಡೆದುಕೊಂಡಿವೆ ಎನಿಸುತ್ತದೆ ನನಗೆ.

“ಹೋಳಿಗೆ ಪ್ರತಿಜ್ಞೆ” ಎನ್ನುವ ಬಾಲ್ಯದ ಸೊಗಡಿನ ಕಥೆಯೊಂದು ಈ ಸಂಕಲನಗಳಲ್ಲಿದೆ. ಇಲ್ಲಿ ಬರುವ ಕತೆಗಾರರ ಮಿತ್ರರೊಬ್ಬರು ಬಾಲ್ಯದಲ್ಲಿ ನಡೆದ ಒಂದು ಘಟನೆಯಿಂದಾಗಿ ಹೋಳಿಗೆ ತಿನ್ನುವುದೇ ಇಲ್ಲವೆನ್ನುವ ಪ್ರತಿಜ್ಞೆಯನ್ನು ಮಾಡಿರುತ್ತಾರೆ. ಅದನ್ನು ಜೀವನ ಪರ್ಯಂತ ಪಾಲಿಸಿಕೊಂಡು ಬಂದಿರುತ್ತಾರೆ. ಆ ಕಥೆ ಕೇಳಿದ ಕಥೆಗಾರ ಚಿಕ್ಕವಯಸ್ಸಿನಲ್ಲಿ ಮಾಡಿದ ಪ್ರತಿಜ್ಞೆಯಿಂದ ಆದ ಪ್ರಯೋಜನವಾದರೂ ಏನು? ಅದನ್ನು ಪಾಲಿಸಿಕೊಂಡು ಬರಬೇಕಾದ ಅಗತ್ಯವಾದರೂ ಏನು ಎಂದು ಕೇಳುತ್ತಾರೆ. ಆಗ ಮಿತ್ರರು ಹೇಳುವ ಮಾತು ಸೊಗಸಾಗಿದೆ. “ಹೋಳಿಗೆ ತಿನ್ನುವುದು ಬಿಡುವುದರಲ್ಲಿ ಯಾವ ಮಹತ್ತೂ ಇಲ್ಲ. ಆದರೆ ಇಂದಿನವರೆಗೆ ಪ್ರತಿಜ್ಞೆಯನ್ನು ಪಾಲಿಸಿರುವೆನೆಂಬ ಮನೋಭಾವ ನನ್ನ ಧರ್ಮ ಬುದ್ಧಿಗೆ ಬಲಕಾರಿಯಾಗಿರುತ್ತದೆ, ನನ್ನ ಚಿತ್ತಶುದ್ಧಿಗೆ ಸಹಕಾರಿಯಾಗಿರುತ್ತದೆ, ದೊಡ್ಡ ಮನಸ್ಸಿನಿಂದ ಮಾಡಿದ ಸಣ್ಣ ಕಾರ್ಯಗಳು ಸಣ್ಣ ಮನಸ್ಸಿನಿಂದ ಮಾಡಿದ ದೊಡ್ಡ ಕಾರ್ಯಗಳಿಗಿಂತಲೂ ಎಷ್ಟೋ ಶ್ರೇಷ್ಠವಾದವುಗಳೆಂದು ನನ್ನ ನಿಶ್ಚಲವಾದ ಅಭಿಪ್ರಾಯ. ಮಹಿಮೆ ಕಾರ್ಯಗಳಲ್ಲಿಲ್ಲ, ಕಾರ್ಯ ಮಾಡಿರುವ ಚಿತ್ತವೃತ್ತಿಯಲ್ಲಿದೆ” ಎಂದು ಹೇಳುತ್ತಾರೆ. ಈ ಮಾತನ್ನು ಹೇಳಿಸಿರುವ ಕುವೆಂಪುರವರನ್ನು ಮನಸಾರೆ ಪ್ರಶಂಸಿಸಬೇಕೆನಿಸುತ್ತದೆ.

ಕುವೆಂಪುರವರು ಕೆಲವು ರೋಚಕ ಮತ್ತು ಕುತೂಹಲಭರಿತ ಕಥೆಗಳನ್ನೂ ಬರೆಯುತ್ತಾರೆ. ದೆವ್ವದ ಕಾಟ, ಮಾಯದ ಮನೆ, ಗಂಟು ಅಥವಾ ಗುಪ್ತಧನ… ಇವುಗಳಲ್ಲಿ “ಮಾಯದ ಮನೆ” ಒಂದು ದೆವ್ವದ ಕಥೆಯಾದರೆ, “ದೆವ್ವದ ಕಾಟ” ಮನುಷ್ಯನೇ ತನ್ನ ದುರಾಸೆಗೆ ಸೃಷ್ಟಿಸುವ ಕಟ್ಟು ಕಥೆ. ಇನ್ನು “ಗಂಟು ಅಥವಾ ಗುಪ್ತಧನ”ದಲ್ಲಿ ಸುಲಭವಾಗಿ ಶ್ರೀಮಂತನಾಗಲು ಬಯಸುವ ವ್ಯಕ್ತಿಯೊಬ್ಬ ಹೇಗೆ “ಗಂಟು ಅಥವಾ ಗುಪ್ತ ಧನ”ದ ಆಸೆಗೆ ಮೋಸದ ಮಾಂತ್ರಿಕನೊಬ್ಬನನ್ನು ನಂಬಿ ಇದ್ದ ಬದ್ದ ನಗ ನಾಣ್ಯವನ್ನೂ ಕಳೆದುಕೊಂಡು ಮೋಸಹೋಗುತ್ತಾನೆ ಎನ್ನುವುದು ಇದರ ಸಾರಾಂಶ.

ಇಷ್ಟೂ ಕಥೆಗಳಲ್ಲಿ ‘ಮೀನಾಕ್ಷಿಯ ಮನೆ ಮೇಷ್ಟ್ರು’ ಮತ್ತು ‘ಈಶ್ವರನೂ ನಕ್ಕಿರಬೇಕು’ ಕಥೆಗಳು ಭಿನ್ನವಾಗಿ ನಿಲ್ಲುತ್ತವೆ. ಲಘು ಹಾಸ್ಯವೂ ಬೆರೆತು ಲವಲವಿಕೆಯಿಂದ ಕಥೆ ಹೇಳುತ್ತವೆ. ಮೀನಾಕ್ಷಿಯ ಮನೆ ಮೇಷ್ಟ್ರು ಮೀನಾಕ್ಷಿಯನ್ನು ಬಯಸುವುದು, ಅವಳ ಮದುವೆಯನ್ನು ತಡೆಯಲು ಪ್ರಯತ್ನಿಸುವುದು, ಅವಳ ಮದುವೆಯ ನಂತರವೂ ಅವಳಲ್ಲಿ ಕಷ್ಟ ಪಡುತ್ತಿದ್ದಾಳೆ ಎನ್ನುವ ಭ್ರಮೆಯಲ್ಲಿ ಅವಳ ಗಂಡನನ್ನು ಕೊಲ್ಲಲು ಪ್ರಯತ್ನಿಸುವುದು… ಎಲ್ಲವನ್ನೂ ಬಹಳ ಚಂದ ನಿರೂಪಿಸುತ್ತಾರೆ ಕುವೆಂಪು. ನಂತರ ಮೀನಾಕ್ಷಿಯ ಗಂಡನ ಒಳ್ಳೆಯ ನಡತೆ ಅವಳ ಮೇಷ್ಟರ ಮನಸ್ಸನ್ನು ಬದಲಾಯಿಸುತ್ತದೆ. ಮತ್ತೆ ಮೇಷ್ಟ್ರು ಅವಳನ್ನು ಹರಸಿ ಅಲ್ಲಿಂದ ತೆರಳುತ್ತಾರೆ.

ಇನ್ನು ‘ಈಶ್ವರನೂ ನಕ್ಕಿರಬೇಕು’ ಎನ್ನುವ ಕಥೆಯಲ್ಲಿ ತಮ್ಮ ತಮ್ಮ ನ್ಯೂನತೆಗಳನ್ನು ಮುಚ್ಚಿಟ್ಟು ಮದುವೆಯಾಗುವ ಹೆಣ್ಣು ಗಂಡುಗಳಿಬ್ಬರು ತಮ್ಮ ಮೊದಲ ರಾತ್ರಿಯಲ್ಲಿ ಮುಖಾಮುಖಿಯಾಗುತ್ತಾರೆ. ಅಲ್ಲಿಯವರೆಗೂ ಅವರವರ ಮನೆಯವರು ಅದನ್ನು ಬಹಳ ಜಾಗರೂಕತೆಯಿಂದ ಮುಚ್ಚಿಟ್ಟಿರುತ್ತಾರೆ. ಆದರೆ ಗುಟ್ಟು ರಟ್ಟಾದಾಗ ಆ ಇಬ್ಬರೂ ಕೋಪಗೊಳ್ಳುವುದಿಲ್ಲ. ಒಂದು ಬಗೆಯ ಬಿಡುಗಡೆಯ ನಿರಾಳತೆಯನ್ನು ಅನುಭವಿಸುತ್ತಾರೆ ಮತ್ತು ಒಬ್ಬರಿನ್ನೊಬ್ಬರ ಮುಖ ನೋಡಿಕೊಂಡು ನಗತೊಡಗುತ್ತಾರೆ. ಇದೇ ಕಥೆಯ ಅಂತ್ಯ. ಅಂದರೆ ಆ ಇಬ್ಬರೂ ಆ ಕ್ಷಣ ಅನುಭವಿಸುವುದು ತಾವು ಮೋಸ ಮಾಡಿದೆವೆಂಬ ಪಾಪಪ್ರಜ್ಞೆಯ ಕುಲುಮೆಯಿಂದ ಹೊರಬಂದೆವೆನ್ನುವ ಬಿಡುಗಡೆ. ಈಗ ನಿಜಕ್ಕೂ ಅವರಿಬ್ಬರಿಗೂ ಖುಷಿಯಾಗಿದೆ. ಇನ್ನು ಯಾವ ಮುಚ್ಚುಮರೆ ಅವರಿಬ್ಬರ ನಡುವೆ ಉಳಿದಿಲ್ಲ. ಈಗ ಅವರ ನಗು ನಿರ್ಮಲವಾಗಿದೆ. ಬಹುಶಃ ಈ ನಗುವನ್ನು ಕಂಡ ಈಶ್ವರನು ನಕ್ಕಿರಬೇಕು.

ವಿಶಿಷ್ಟ ತಿರುವುಗಳಿಂದಾಗಿ “ಆರಾಣೆ ಮೂರು ಕಾಸು” ಕಥೆಯೂ ಒಂದೊಳ್ಳೆಯ ಕಥೆ ಎಂದೆನಿಸುತ್ತದೆ. ಈ ಕಥೆಯ ಕಥಾನಾಯಕ ಪ್ರಾಮಾಣಿಕವಾಗಿ ತನ್ನ ಸ್ವಾರ್ಥವನ್ನು ಒಪ್ಪಿಕೊಳ್ಳುವುದು, ಸೋಗಲಾಡಿತನವನ್ನು ತಿರಸ್ಕರಿಸುವುದು ಬಹಳ ಕಾಡುತ್ತದೆ. ರಾಜನೊಬ್ಬ ತಿರುಕನಾಗಿ ಮತ್ತೆ ಧನಿಕನಾಗುವ ಕಥೆಯನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ ಕುವೆಂಪು. ಕೆಲವೊಮ್ಮೆ ನಿಜಕ್ಕೂ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಉದ್ದೇಶ ಯಾವುದೇ ಇರಲಿ ಸಹಾಯ ಮಾಡಿದಾಗ ಅದು ಅಷ್ಟೇ ಒಳ್ಳೆಯ ರೀತಿಯಲ್ಲಿ ನಮ್ಮ ಬಳಿಗೆ ತಿರುಗಿ ಬರುತ್ತದೆ ಎನ್ನುವ ನಂಬಿಕೆಯನ್ನು ಈ ಕಥೆ ಹುಟ್ಟಿಸುತ್ತದೆ. ಮನುಷ್ಯನನ್ನು ಮನುಷ್ಯ ನಂಬಬೇಕು ಅನ್ನುವ ಸಂದೇಶವು ಈ ಕಥೆಯಲ್ಲಿದೆ.

ಈ ಎಲ್ಲ ಕಥೆಗಳನ್ನೂ ಓದಿಯಾದ ನಂತರ ಕುವೆಂಪುರವರು ತಾವು ಬರೆದ ಬೆರಳೆಣಿಕೆಯಷ್ಟು ಕಥೆಗಳಲ್ಲಿ ತಂದ ವಸ್ತು ವೈವಿಧ್ಯತೆ, ಬಳಸಿದ ತಂತ್ರಗಾರಿಕೆ, ಆಶಯ, ವಿಚಾರ, ಚಿಂತನೆ, ಬಯಕೆ, ನಿರೀಕ್ಷೆ, ಒಲವು ಎಲ್ಲವೂ ಮಂಥನ ಯೋಗ್ಯವೆನಿಸುತ್ತವೆ. ಒಬ್ಬ ಬರಹಗಾರನ ಮನೋಧರ್ಮ ಮತ್ತು ವ್ಯಕ್ತಿತ್ವ ಅವನ ಕಥೆಯ ಭೂಮಿಕೆಯನ್ನು ನಿರ್ದೇಶಿಸುತ್ತದೆ ಎನ್ನುವುದು ಕುವೆಂಪು ಅವರಿಂದಲೂ ವೇದ್ಯವಾಗುತ್ತದೆ.