ಸಕಲ ಜೀವಿಗಳಿಗೂ ಭೂಮಿಯ ನೆಲ ವಾಸಯೋಗ್ಯವಾದ ಕಾಲದಿಂದಲೂ ಭೂಮಿಯ ಬಂಧುಗಳಾಗಿದ್ದವರು ಯಾರು? ಮರವೆ, ಮನುಷ್ಯನೆ, ಮೃಗವೆ, ಪಕ್ಷಿಯೆ? ಅಲ್ಲ, ಕಡಲೆ? ಯಾವುದೂ ಅಲ್ಲ. ಭೂಮಿಯ ಶಾಶ್ವತ ಬಂಧುಗಳಾಗಿದ್ದವರು ಮಳೆ ಮತ್ತು ಮಿಂಚು. ಮಳೆ ಹೇಗೆ ಭೂಮಿಯ ಬಂಧು ಎಂದು ಎಲ್ಲರಿಗೂ ಸ್ಪಷ್ಟ. ಮಿಂಚು ಹೇಗೆ ಬಂಧು ಎನ್ನುವುದನ್ನು ಅರಿತುಕೊಳ್ಳಲು ಸ್ವಲ್ಪ ವಿಜ್ಞಾನ ಜ್ಞಾನ ಅಗತ್ಯ. ಈ ಎರಡು ಭೂಮಿಯ ಬಂಧುಗಳು ಈಗ ಎರಡು ಮೂರು ವರ್ಷಗಳಿಂದ ನಡೆದುಕೊಳ್ಳುವ ರೀತಿ ನೋಡಿದರೆ ಯಾಕೋ ಭಯವಾಗ್ತಾ ಇದೆ. ನಾಳೆಯೇ ಅಲ್ಲದಿದ್ದರೂ ಐವತ್ತು ವರ್ಷಗಳ ನಂತರ ಅಲ್ಲ, ಕೇವಲ ಹತ್ತು ಹದಿನೈದು ವರ್ಷಗಳಲ್ಲೇ ಭೂಮಿಗೆ ಏನೋ ಸಂಭವಿಸಿ ಎಲ್ಲಾ ‘ಸಾರ್ವತ್ರಿಕ ಮೌಲ್ಯ’ಗಳೂ ಇನ್ನಿಲ್ಲದಾಗುವವೇನೋ ಎನ್ನುವ ಆತಂಕವುಂಟಾಗುತ್ತಿದೆ.
ಈ ಆತಂಕಕ್ಕೆ ಕಾರಣ? ಮುಂಬಯಿಯಲ್ಲಿ ಮತ್ತೆ ಮತ್ತೆ ಉಂಟಾಗುತ್ತಿರುವ ‘ಜಲಪ್ರಳಯ’ವೆ? ಬೆಂಗಳೂರಿನಲ್ಲಿ ಆಗಾಗ ಸಂಭವಿಸುವ ಮೇಘಸ್ಫೋಟಗಳೆ? ಸಮುದ್ರ ತನ್ನ ನಿಲ್ಲದ ಕೊರೆತಕ್ಕೆ ಹೊಸ ಹೊಸ ಕಿನಾರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದೆ? ಮೊನ್ನೆ ಮೊನ್ನೆ ನಡೆದ ಸುನಾಮಿಯೆ? ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಜನ ಮಿಂಚಿಗೆ ಬಲಿಯಾಗಿ ಸಾಯುತ್ತಿದ್ದಾರೆ ಎನ್ನಲು ಅಂಕಿ ಅಂಶಗಳ ಆಧಾರ ಸಿಗುತ್ತಿಲ್ಲವಾದರೂ ಯಾಕೋ ಹಾಗೆ ಅನಿಸುತ್ತಿದೆ! ಭೂಮಿಯ ಮೇಲೆ ಪಾಪಿಷ್ಟರ ಸಂಖ್ಯೆ ಜಾಸ್ತಿಯಾಗುತ್ತಿದೆ; ನಾನಾ ವಿಧ ಅನ್ಯಾಯ ಅಧರ್ಮ ಜಾಸ್ತಿಯಾಗುತ್ತಿದೆ ಆದ್ದರಿಂದ ಮಳೆ ಮತ್ತು ಮಿಂಚು ಭೂಮಿಯ ಎದೆಗೆ ಗುದ್ದುತ್ತಿದೆ ಎಂದು ಬಡ ಅದೃಷ್ಟವಾದಿಗಳು ಹೇಳಿಯಾರು. ಸಿರಿವಂತ ಅದೃಷ್ಟವಾದಿಗಳು ಹೇಗೂ ಭೂಮಿ ಬೇಗನೆ ಖಲಾಸ್ ಆಗುತ್ತಿದೆ ಆದಷ್ಟು ಎಂಜಾಯ್ ಮಾಡಿ ಸಾಯೋಣ ಅಂತ ತೀರ್ಮಾನಿಸಿರಲೂ ಬಹುದು. ಆದರೆ ಆರು ತಲೆಮಾರುಗಳಿಗೆ ಮತ್ತು ಏಳು ಪುನರ್ಜನ್ಮಗಳಿಗೆ ಬೇಕಾದಷ್ಟು ಸಂಗ್ರಹಿಸಿಟ್ಟವರ ಹೊರತು ಬೇರೆ ಯಾರನ್ನೂ ಭೂಮಿಗುಂಟಾಗಲಿರುವ ಆಪತ್ತಿನ ಚಿಂತೆ ಕಾಡುವ ಹಾಗೆ ಕಾಣಿಸುತ್ತಿಲ್ಲ! ಭೂಮಿಯ ಭವಿಷ್ಯದ ಬಗ್ಗೆ ಆತಂಕವುಂಟಾಗಿರುವುದು ಒಂದೇ ಒಂದು ಕಾರಣಕ್ಕೆ; ಭೂಮಿ ಬಿಸಿಯಾಗುತ್ತಿದೆ! ಭೂಮಿ ಇನ್ನು ಕೇವಲ ಒಂದೆರಡು ಡಿಗ್ರಿ ಸೆಲ್ಸಿಯಸ್ ಜಾಸ್ತಿ ಬಿಸಿಯಾದರೆ ಏನಾದೀತು? ಸ್ವಲ್ಪ ಯೋಚನೆ ಮಾಡಬೇಕು. ಧ್ರುವ ಪ್ರದೇಶದಲ್ಲಿ ಈಗಾಗಲೇ ಅರ್ಧ ಕರಗಿ ಆಧುನಿಕ ನಾಗರಿಕತೆಯ ಅಸ್ಥಿಪಂಜರಗಳಂತೆ ಕಾಣಿಸುತ್ತಿರುವ ಮಂಜುಬೆಟ್ಟಗಳು ಪೂರ್ತಿ ಕರಗುತ್ತವೆ. ಸಾಗರದ ನೀರಿನ ಮಟ್ಟದಲ್ಲಿ ಒಂದು ಸೆಂಟಿಮೀಟರ್ ಹೆಚ್ಚಳವಾದರೂ ಕಡಲು ಕೊರೆತ ಇನ್ನಷ್ಟು ಜಾಸ್ತಿಯಾಗುತ್ತದೆ. ಅದು ಮುಂಬಯಿ, ಕೊಲ್ಕತ್ತ, ಚೆನ್ನೈ, ಲಂಡನ್, ಆಮ್‌ಸ್ಟರ್‌ಡ್ಯಾಮ್, ನ್ಯೂಯೋರ್ಕ್, ರೋಮ್ ಮುಂತಾದ ನಗರಗಳಲ್ಲಿ ಮುಂದೇನಾಗುತ್ತದೆ ಎನ್ನುವುದರ ಮುನ್ಸೂಚನೆಯಾದೀತು! ಹಾಗಾದರೆ ಉಳಿದಲ್ಲಿ ಏನಾದೀತು? ‘ಗ್ಲೋಬಲ್ ವಾರ್ಮಿಂಗ್’ನಿಂದಾಗಿ ಕಡಲು ಹೆಚ್ಚು ಬಿಸಿಯಾಗುವುದರಿಂದ, ಹೆಚ್ಚು ಮೋಡಗಳುಂಟಾಗಿ, ಆಕಾಶದಲ್ಲಿ ಹೆಚ್ಚು ಮೋಡ ಶೇಖರಣೆಯಾಗಿ ಹೆಚ್ಚು ಮಳೆ ಸುರಿಯುತ್ತದೆ, ಹೆಚ್ಚು ಸಿಡಿಲು ಮಿಂಚು ಭೂಮಿಗೆ ಬಡಿಯುತ್ತದೆ. ಹಾಗಾದರೆ ಎತ್ತರದಲ್ಲಿ ಮನೆ ಕಟ್ಟಿ, ಮನೆಗೆ ಭದ್ರವಾದ ಗೋಡೆ ಕಟ್ಟಿ, ಹೆಚ್ಚು ಅರ್ಥಿಂಗ್ ಮತ್ತು ಲೈಟ್ನಿಂಗ್ ಅರೆಸ್ಟರ್ ಹಾಕಿಕೊಂಡು ಬಚಾವಾಗಬಹುದೆ? ಆಗಬಹುದೇನೊ ಸ್ವಲ್ಪ ಕಾಲ! ಆದರೆ ಜಾಗತಿಕ ತಾಪಮಾನ ಇನ್ನೂ ಕೆಲವು ಡಿಗ್ರಿ ಮೇಲಕ್ಕೆ ಹೋದರೆ? ಏನಾಗುತ್ತದೆ ಅಂತ ನಿಖರವಾಗಿ ವಿಜ್ಞಾನಿಗಳಿಂದಲೂ ಹೇಳಲಾಗುತ್ತಿಲ್ಲ. ಹೀಗಾಗಬಹುದು: ಭೂಮಿಯ ತಾಪಮಾನ ಏರಿದಾಗ ಮನುಷ್ಯ ಕೆಲಕಾಲ ತನ್ನನ್ನು ಹೇಗೋ ರಕ್ಷಿಸಿಕೊಂಡಾನು. ಆದರೆ ಅಷ್ಟರಲ್ಲಿ ಒಂದು ನಿರ್ದಿಷ್ಟ ತಾಪಮಾನಕ್ಕೆ ಹೊಂದಿಕೊಂಡಿದ್ದ ಹಲವು ಸಸ್ಯಗಳು, ಮೃಗ ಪಕ್ಷಿ ಮತ್ತಿತರ ಜೀವಿಗಳು ನಾಶವಾಗುತ್ತವೆ. ಎಷ್ಟು ಕಾಯಿಪಲ್ಲೆ ಮತ್ತು ಮೀನು ಉಳಿದೀತು ಎಂದು ಇನ್ನೂ ಯಾರೂ ಲೆಕ್ಕ ಹಾಕಿಲ್ಲ! ಬಿಸಿ ಇನ್ನೂ ಒಂದೆರಡು ಡಿಗ್ರಿ ಹೆಚ್ಚಾದಾಗ ಸಮುದ್ರದಿಂದ ಅಪಾರ ಪ್ರಮಾಣದ ಮೋಡ ಮೇಲಕ್ಕೇಳುವುದನ್ನು ಕಾಣಬಹುದು. ಅದು ಸುಮಾರು ಒಂದು ಸಾವಿರ ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಸುತ್ತ ಒಂದು ಚಾದರದಂತೆ ಹೊದೆಯುತ್ತದೆ. ಅಷ್ಟರೊಳಗೆ ಭೂಮಿಯ ಮೇಲೆ ನದಿ, ಕೊಳ್ಳ ಕೆರೆ ಕುಂಟೆಗಳು ಬತ್ತಿಹೋಗಿರುತ್ತವೆ. ಕೆಲವೇ ದಿನಗಳಲ್ಲಿ ಬೋರ್‌ವೆಲ್ ಕೂಡ ಖಾಲಿಯಾಗುತ್ತದೆ. ಮೇಘಪರ್ವತಗಳ ತಡೆಯಿಂದಾಗಿ ಸೂರ್ಯನ ಶಾಖ ಭೂಮಿಯನ್ನು ತಲಪುವುದಿಲ್ಲ. ಆವಾಗಲೇ ನಮ್ಮಲ್ಲಿ ಉಳಿದಿರುವ ರೇಡಿಯೇಶನ್ ಶಾಖ ಮೋಡದ ಹೊದಿಕೆಯಿಂದಾಗಿ ಹೊರಹೋಗದಂತಾಗುತ್ತದೆ. ನಾವು ತಂಪಿನ ಜಾಗ ಹುಡುಕುತ್ತೇವೆ. ಮೇಘಾವರಣದ ಕೆಳಮುಖ ಒತ್ತಡ ಅಧಿಕವಾದಂತೆ ಉಷ್ಣ ಜಾಸ್ತಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ತಂಪು ಜಾಗ ಎಲ್ಲಿಯೂ ಇರುವುದಿಲ್ಲ. ಒಂದೇ ಸವನೆ ಸಮುದ್ರದಿಂದ ಮೇಲಕ್ಕೇರಿದ ಮೋಡ ಅನಾದಿ ಕಾಲದಿಂದಲೂ ಆಕಾಶದಲ್ಲಿದ್ದ ಮೋಡವನ್ನು ಸೇರಿಕೊಂಡು ಒಟ್ಟು ಎಷ್ಟಾಗುತ್ತದೆ ಎಂದರೆ ಅದೆಲ್ಲ ಮಳೆಯಾಗಿ ಸುರಿದರೆ ಭೂಮಿ ಒಂದು ಜಲಗೋಳವಾಗುತ್ತದೆ. ಎತ್ತರೆತ್ತರದ ಪರ್ವತಗಳ ಮೇಲೆ ಕೂಡ ಹಲವು ಮೀಟರ್ ನೀರು ನಿಲ್ಲಬಹುದು. ಹಾಗಾದೀತಾ? ಆದೀತು. ಹೇಗೆಂದರೆ, ಭೂಮಿಯ ಮೇಲೆ ‘ಸಿಕ್ಕಿಬಿದ್ದ’ ಉಷ್ಣತೆ, ಜ್ವಾಲಾಮುಖಿಗಳ ಉಷ್ಣತೆ ಎಲ್ಲ ಸೇರಿ ಭೂಮಿಯ ತಾಪಮಾನ ತಡಿಮೆಯಾಗುವ ಸಂಭವವಿಲ್ಲ. ಅಷ್ಟರಲ್ಲಿ ಸಸ್ಯ, ಮೃಗ ಪಕ್ಷಿ ಮತ್ತು ಮನುಷ್ಯರ ಸಾವುಗಳಿಂದಾಗಿ ಹಸಿರುಮನೆ ಅನಿಲದ ಮಟ್ಟ ಬಹಳ ಏರಿರುತ್ತದೆ. ಆದರೂ ಆಕಾಶದಲ್ಲಿ ನಿರಂತರವಾಗಿ ಶೇಖರಣೆಗೊಳ್ಳುತ್ತಿರುವ ಮೋಡಗಳ ಬೆಟ್ಟದ ಭಾರ ಅಧಿಕವಾಗಿ ಅದರ ಕೆಳಮುಖ ಒತ್ತಡ ಮತ್ತು ಭೂಮಿಯ ಮೇಲಿನ ಉಷ್ಣತೆಯ ಮೆಲ್ಮುಖ ಒತ್ತಡದ ನಡುವೆ ಪೈಪೋಟಿ ನಡೆದು ಮೇಘಪರ್ವತಗಳ ಮಹಾ ಕವಚ ಎಲ್ಲೋ ಕೆಲವು ಕಡೆ ಬಿರುಕು ಬಿಡಬಹುದು. ಆಗ ಭೂಮಿಯ ಮೇಲೆ ಬೀಳುವುದು ಬರೀ ಮಳೆಯಲ್ಲ, ಮಂಜಿನ ಕೋಟಿ ಕೋಟಿ ಬೆಟ್ಟಗಳು! ಎಷ್ಟು ಕಾಲ? ಯಾರಿಗೆ ಗೊತ್ತು? ಎಲ್ಲ ಮೇಘರ್ವತಗಳು ಕರಗುವ ವರೆಗೆ ಎಂದಾದರೆ ಹೇಳುವವರು ಯಾರು? ಕೇಳುವವರು ಯಾರು? ಮೇಘಪರ್ವತಗಳ ಪತನದ ಆಘಾತಕ್ಕೆ ಪರ್ವತಗಳೇ ನುಚ್ಚು ನೂರಾದಾವು. ಕೆಲವಂತೂ ನೇರ ಭೂಗರ್ಭ ಸೇರಿಯಾವು! ಉಳಿದಾರೇ ಯಾರಾದರೂ? ಉಹುಂ. ಒಂದು ಕಲ್ಪ ಮುಗಿಯುತ್ತದೆ. ಬ್ರಹ್ಮನ ಮತ್ತೊಂದು ಎಚ್ಚರದ ಹಗಲು ಮುಗಿದು ಮತ್ತೊಂದು ನಿದ್ರೆಯ ರಾತ್ರಿ ಆರಂಭವಾಗುತ್ತದೆ. ಮತ್ತೆ ಕೃತ, ತ್ರೇತ, ದ್ವಾಪರ, ಕಲಿ. ಮತ್ತೆ ರೈಲು, ವಿಮಾನ, ಟೀವಿ, ಕಂಪ್ಯೂಟರ್, ಮೊಬೈಲು…. ಅಥವಾ ಸರಳವಾಗಿ ಹೀಗಾಗಬಹುದು: ಕೆಲವೇ ದಿನಗಳಲ್ಲಿ ಭೂಮಿಯನ್ನು ಹೊದ್ದ ಮೇಘಕವಚ ಭೂಮಿಯ ಮೇಲಿನ ಉಷ್ಣತೆಯನ್ನೆಲ್ಲ ಹೀರಿಬಿಟ್ಟು ಭೂಮಿ ಕೋಟಿ ಕೋಟಿ ವರ್ಷ ಬ್ರಹ್ಮನ ಜೊತೆ ಗಾಡಾಂಧಕಾರದಲ್ಲಿ ಇನ್ನಿಲ್ಲದಷ್ಟು ತಣ್ಣಗೆ ಮಲಗಬಹುದು. ಇಲ್ಲ ಇಲ್ಲ. ಹಾಗಾಗುವುದಿಲ್ಲ. ದೈವ ಕೃಪೆಯಿಂದ ನಿಸರ್ಗದಲ್ಲೇ ಏನೋ ಸಂಭವಿಸಿ ನಮ್ಮ ಭೂಮಿ, ನಮ್ಮ ಸೈಟು, ನಮ್ಮ ಮನೆ, ನಮ್ಮ ಬ್ಯಾಂಕ್ ಬ್ಯಾಲೆನ್ಸ್ ಬಚಾವ್ ಆಗಬಹುದು ಎನ್ನುವ ‘ಹೋಪ್’ ಇಟ್ಟುಕೊಂಡವರೂ ನಮ್ಮ ಜೊತೆ ಇದ್ದಾರೆ. ‘ಹೋಪ್’ ಏನೇ ಇರಲಿ, ಬಚಾವ್ ಆಗಲು ಇರುವುದು ಒಂದೇ ದಾರಿ. ಈಗಿಂದೀಗಲೇ ಭೂಮಿಯ ತಾಪಮಾನ ಏರುವುದನ್ನು ತಡೆಯಬೇಕು. ತಾಪಮಾನವನ್ನು ಏರಿಸುತ್ತಿರುವ ಕಾರ್ಬನ್ ಡೈಆಕ್ಸೈಡ್ ಉಗುಳುವಿಕೆಯನ್ನು ನಿಸರ್ಗ ಒಪ್ಪಿಕೊಳ್ಳುವ ಮಟ್ಟಕ್ಕೆ ಹೇಗೆ ತರಬಹುದು ಎಂದು ವಿಜ್ಞಾನಿಗಳು ಮಾತ್ರವಲ್ಲ, ಎಲ್ಲರೂ ಯೋಚಿಸಬೇಕಾದ ಕಾಲ ಹತ್ತಿರ ಬಂದಾಗಿದೆ. ಟಂಗ್‌ಸ್ಟನ್ ಬಲ್ಬುಗಳನ್ನು ನಿವಾರಿಸುವ, ವಾಹನಗಳು ಗ್ಯಾಸ್ ಉಗುಳದಂತೆ ಮಾಡುವ ಅಥವಾ ವಾಹನಗಳನ್ನೇ ಕೈಬಿಡುವ, ಫ್ಯಾಕ್ಟರಿಗಳ ಕಾರ್ಯವೈಖರಿಯನ್ನು ನಿಯಂತ್ರಣದಲ್ಲಿಡುವ, ಉಸಿರಾಟದ ಕಾರ್ಬನ್ ಡೈಆಕ್ಸೈಡೊಂದನ್ನು ಹೊರತು ಪಡಿಸಿ, ಕಾರ್ಬನ್ ಡೈಆಕ್ಸೈಡ್ ಉಗುಳುವ ಇತರ ಎಲ್ಲಾ ಉರಿಸುವಿಕೆಯನ್ನು ನಾವೇ ನಿಲ್ಲಿಸಬೇಕಾಗುತ್ತದೆ. |
ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ