ಮಳೆ
ಮಳೆ ಹೊಯ್ಯುತ್ತಿದೆ
ಭರಭರನೆ
ಎಲ್ಲ ಮರೆಯುತ್ತಿದೆ
ಒಂದೇ ಸವನೆ!
ಹಕ್ಕಿಗಳು ಮುದುಡಿ ಕುಳಿತಿವೆ
ಚುಕ್ಕೆ ನಾಪತ್ತೆ
ಚಂದ್ರನ ಕುರಿತು
ಕೇಳುವುದು ಬೇಡ
ಮಾಡಿನ ಮೇಲೆ
ಮಳೆಯ ಮಾತು
ಗಾಳಿಯ ಜೊತೆಗೆ
ಕೂತು…..
ಹೈರಾಣಾಗಿದೆ ಎಲ್ಲಾ
ಹೆದರುವುದು ಬೇಡ
ಪ್ರಳಯವಾದರೆ
ಯಾರೂ ಇರುವುದಿಲ್ಲ!
ಆಕಾಶ ಬಿದ್ದವರ ಹಾಗೆ
ಕೂರಬೇಡಿ
ನಾಳೆ
ಮಳೆಯಲ್ಲಿ ಒದ್ದೆಯಾಗಿ
ಬರುವ ಪೇಪರ್ ಹಾಕುವವನನ್ನು
ಕಾಯೋಣ…..
ಸ್ಥಿತ
ತಂಪು ಕಂಪನವನ್ನು ಮಾಡಿದ
ಆ ಜಾಗಗಳೆಲ್ಲ
ಒಣಗಿಹೋದಂತಿವೆ
ಅಲ್ಲಿ
ಹಸಿರು ಹೂಗಳನ್ನು
ಹೊದೆದುಕೊಂಡಿದ್ದೆ
ಸಂಜೆಯ ಮಂಜಿನಲ್ಲಿ
ಮುಂಜಾನೆಯಾಗಿದ್ದೆ!
ನೋವು ನಲಿವಿನ ಅವಳ
ಒದ್ದೆಯಾದ
ಮಾತುಗಳನ್ನು ಆಲಿಸಿದ್ದೆ
ಈಗ ಅವೆಲ್ಲ
ಅಪಘಾತವಾದ ಜಾಗದಂತೆ
ತಣ್ಣಗೆ ಮಲಗಿವೆ
ಯಾವ ಕಂಪನವಾಗಲಿ
ಮಾರುತ ಚಂಡನಾಗಲಿ
ಧಗಧಗ ಉರಿಯಾಗಲಿ….
ಏನಾದರೂ
ಏನೂ ಆಗುವುದಿಲ್ಲ
ಮತ್ತೆ
ನಗು ಅಳು ಆಸೆ ಕನಸು
ಎಲ್ಲ ಅಲ್ಲಿ ಹಾದುಹೋಗುತ್ತವೆ
ನಾನು ಹೋಗುವ ಹಾಗೆ.
ಕವಿಗಳು, ಲೇಖಕರು ಮತ್ತು ಸಿರಸಿಯ ಎಂ ಎಂ ಕಾಲೇಜಿನಲ್ಲಿ ಉಪನ್ಯಾಸಕರು.