“ನಂ ಬದಿ ತ್ವಾಟದಾಗೆ ಮರದ ಮ್ಯಾಲೆ ಕೂತಂಗೇ ಮಂಗ ತೂಕಡಿಸ್ತಾ ಇದಾವ್ರೋ ಅಮ. ಜ್ವರ ಬಂದು ಸ್ವಲ್ಪ ಮಂಗ ಅಲ್ಲ ಸತ್ತು ಬಿದ್ದಿದ್ದು. ಹಿಂಡುಗಟ್ಲೆ ಖಾಲಿಯಾಗಿರಬೌದು. ನೀರಬದಿಯೇ ಬಂದು ಸಾವುದು ಹೆಚ್ಚು ಅವು. ಇನ್ನು ಶುರುವಾಯ್ತು ಕಾಂತದೆ ಮಂಗನ ಕಾಯ್ಲೆ. ಇದೊಂದು ಸೀಕು ನಮ್ಮೂರ್‍ನ ಅದೇನ ಹಿಡ್ದುಬಿಟ್ಟಿದೆಯೋ ಏನೋ! ಬದುಕು ಆಟವೇ ಇಲ್ಲ. ಮಂಗನ ಕಾಯ್ಲೆ ಆಗಿ ಬರೀ ಮಂಗ ಸಾಯುದಾಗಿದ್ರೆ ಏನೂ ತೊಂದ್ರೆ ಇರ್‍ಲಿಲ್ಲ, ನಮ್ ತ್ವಾಟನೂ ಉಳಿತಿತ್ತು. ಆದ್ರೆ ಮಂಗನ ಜತೆ ನಾವೂ ಸಾಯುದಾಗಿದೆಯಲ, ಅದೇ ಕಷ್ಟಕ್ ಬಂದುಂದು. ಮಂಗ ಸಾಯುದು ನಿಲ್ಲು ತನ ಸೊಪ್ಪು, ಕಟ್ಟಿಗೆ, ದರಕು- ಯಾದಕ್ಕೂ ಬೆಟ್ಟಕ್ಕೋಗಂಗಿಲ್ಲ. ಇನ್ನು ಕಷ್ಟ ಕಾಲ ಬಂತು.”
ರಸ್ತೆಯಿಂದ ಏಳೆಂಟು ಮೈಲು ಒಳಗಿನ ದಟ್ಟ ಅರಣ್ಯದ ನಡುವೆ ಇರುವ ‘ನೀರು’ವಿನ ಪ್ರಲಾಪ ಇದು.
*******
“ಈ ಸರ್ಕಾರಿ ಆಸ್ಪತ್ರಿ ಜನ ಜೀಪ್ನ ಮ್ಯಾಲೆ ಬಂದು ಯಮನದುಃಖ ಕೊಡ್ತಾರಿರೋ. ಮನೆಯಾಗಿದ್ದೋರ್‍ನೆಲ್ಲಾ ಹೊರಕರ್‍ದು, ಇಂಜೆಕ್ಷನ್ ತಗಳಿ ತಗಳಿ, ತಗಳಿ ತಗಳಿ ಅಂತ ಬಂದು ಬಂದು ಹೆಟ್ಟತಾರೆ. ಸಾಲಿ ಮಕ್ಳನೂ ಬಿಡಿವುದಿಲ್ಲ. ಸಾಲಿಗೋದ್ರೆ ಇಂಜೆಕ್ಷನ್ ಹಾಕ್ತಾರೆ ಅಂತ ನಮ್ಮುಡುಗ್ರು ಸಾಲಿಗೆ ಹೋಗ್ದೆ ಎಂಟತ್ತು ದಿನಾಗೋಯ್ತು.
ಆ ಇಂಜೆಕ್ಷನ್ ಆದ್ರೂ ಅದ್ಯಾವ ಪರಿ ನೋವಿಂದೋ ಏನೋ, ತಗಂಡು ನಾಕು ದಿನ ಕೈ ರಟ್ಟೆ ಮೇಲೆತ್ತು ಕೆಲ್ಸ ಇಲ್ಲ. ನಮ್ಮೂರ್‍ನಾಗೆ ಕಾಯ್ಲೆ ಗೀಯ್ಲೆ ಏನೂ ಇಲ್ದೇ ಆರಾಮಿದ್ದ ನಾಕೈದು ಜನ, ಆ ಇಂಜೆಕ್ಷನ್ ತಗಂಡಿದ್ದೇ ಜ್ವರ ಬಂದು ಮಲಗಿಬಿಟ್ರು. ಆಚೆ ಕೇರಿ ವೆಂಕ್ಟನಿಗೆ ಇಂಜೆಕ್ಷನ್ ಹಾಕಿದ್ದೆ ರಿಯಾಕ್ಷನ್ ಆಗಿ, ಕಣ್ಣು ಕತ್ತಲೆ ಬಂದು ಕೆಳಗೆ ಬಿದ್ದು ಒಂದರ್ಧ ತಾಸು ಜೀವಾಂನೇ ಇರ್‍ಲಿಲ್ಲ. ಕಡೆಗೆ ತಲೆಗೆ ನೀರು, ಕಾಲಿಗೆ ಬೂದಿ ತಿಕ್ಕಿ ತಿಕ್ಕಿ, ಆಮೇಲೆ ಸರಿಯಾಯ್ತು,ಅದ್ಕೇ ನಾನು ಸತ್ರೆ ಸಾಯ್ತೆ ಹೊರ್‍ತ ಆ ಇಂಜೆಕ್ಷನ ತಗಬಾರ್‍ದು ಹೇಳಿ ಮಾಡಿದ್ದೇ.”
ಸರ್ಕಾರಿ ಆಸ್ಪತ್ರೆಯ ವ್ಯಾಕ್ಸಿನೇಷನ್ ಬಗ್ಗೆ ನಾಗಪ್ಪನ ತಕರಾರು.
********
“ಮಾರುತಿ ಸಿಟ್ಟಾಗಿದ್ದಾನೆ. ಮುಂಚಿನ ವರ್ಷ ತೋಟಕ್ಕೆ ಮಂಗನ ಹಾವಳಿ ಅಂತ ಎಲ್ಲೆಲ್ಲಿಂದಲೋ ಕಿಳ್ಳೇ ಕ್ಯಾತರನ್ನು ದುಡ್ಡುಕೊಟ್ಟು ಕರೆಸಿ ಮಂಗನ್ನ ಹಿಡಿಸಿದ್ರಿ. ಹಿಡಿದ ಆ ಜನಗಳು, ಮಂಗನ್ನ ಕಾಡಿಗೆ ಬಿಟ್ಟರೋ ಅಥವಾ ತಾವೇ ಹರ್‍ಕಂಡು ತಿಂದರೋ ಕಂಡವರು ಯಾರು? ಅವ್ರೇನಾದ್ರು ಕೊಂದು ತಿಂದಿದ್ರೆ ದುಡ್ಡುಕೊಟ್ಟು ಮಂಗನ ಹಿಡಿಸಿದ ನಿಮಗೇ ಬ್ರಹ್ಮಹತ್ಯಾದೋಷ ಹೊರತಾಗಿ, ಅವ್ರಿಗಲ್ಲ.
ಗ್ರಾಮಸ್ಥರೆಲ್ಲ ಮಾರುತಿಯಲ್ಲಿ ಪ್ರಾರ್ಥನೆ ಮಾಡಿ. ಇಷ್ಟಿಷ್ಟು ಅಂತ ಹಮ್ಮಿಣಿ ಹಾಕಿ ದೇವಸ್ಥಾನದಲ್ಲಿ ಒಂದು ದೇವಕಾರ್ಯ ಹಾಗೂ ಅನ್ನ ಸಂತರ್ಪಣೆ ಮಾಡಿ. ತಪ್ಪುಗಾಣಿಕೆ ಹಾಕಬೇಕು. ಕಣ್ಣೆದುರು ಸತ್ತ ಮಂಗ ಕಂಡು ಬಂದಲ್ಲಿ ಅದನ್ನು ಸುಟ್ಟು, ಕರ್ಮಾದಿಗಳನ್ನು ಮಾಡಬೇಕು. ಅಲ್ಲಿಯವರೆಗೆ ಈ ಪ್ರದೇಶಕ್ಕೆ ಈ ಕಾಯಿಲೆಯಿಂದ ಮುಕ್ತಿ ಇಲ್ಲ. ಏಕ ಮನಸ್ಸಿನಿಂದ ಶ್ರೀ ದೇವರ ಸೇವೆ ಮಾಡಿದರೆ ‘ನಾನು ಕೈ ಬಿಡುವುದಿಲ್ಲ’ ಎಂಬ ಸೂಚನೆ ಕೊಟ್ಟಿದ್ದಾನೆ”
ಬೆಟ್ಟದ ಕಾಡಿನ ನಡುವಿರುವ ಒಂಟಿ ಮಾರುತಿ ದೇವಸ್ಥಾನದ ಅರ್ಚಕರಿಂದ ಭಕ್ತಾದಿಗಳಿಗೆ ಹಿತನುಡಿ. ಹೋದವರ್ಷ ಮೂರುತಿಗೆ ಬಂಗಾರದ ಮೂತಿ ಮಾಡಿಸಿ ಕೊಟ್ಟರೂ ಈ ವರ್ಷ ಮತ್ತ್ಯಾಕೆ ಸಿಟ್ಟಾದ ಎಂಬುದು ಭಕ್ತರ ಅಚ್ಚರಿ.
*******
ಹದಿನೈದಿಪ್ಪತ್ತು ವರ್ಷಕೆಳಗೇ ಮೂಲ ಮನೆಯಿಂದ ಪಾಲು ಪಡೆದು, ಬೆಟ್ಟಕ್ಕೆ ಹೋಗಿ ಕಾಡು ಸವರಿ ಏಳುಎಕರೆ ಒಳ್ಳೆಯ ಅಡಿಕೆ ತೋಟ ಮಾಡಿದ ಗಪ್ಪತಿ ಹೆಗಡೇರಿಗೆ ಇಬ್ಬರೇ ಮಕ್ಕಳು. ಅವು ತಮ್ಮ ತರಹ ಜಮೀನು ಕೆಲಸದ ಕಷ್ಟಕ್ಕೆ ಬೀಳದಿರಲಿ ಅಂತ ಚೆನ್ನಾಗಿ ಓದಿಸಿದರು. ಹಿರಿಯ ಮಗಳು ಇಂಜಿನಿಯರಿಂಗ್ ಕಲಿತು, ಕೆಲಸ ಸೇರಿ, ಮದುವೆಯಾಗಿ ಗಂಡನ ಜತೆ ಅಮೆರಿಕಾಕ್ಕೆ ಹಾರಿ ಆರು ತಿಂಗಳಾಯ್ತು ಅಷ್ಟೇ. ಮಗನೂ ಇಂಜಿನಿಯರಿಂಗ್ ಮುಗಿಸಿ, ಎಂಬಿಎ ಮಾಡುವುದಾಗಿ ಬ್ಯಾಂಕಿನಲ್ಲಿ ಸಾಲ ತೆಗೆದು, ಮದರಾಸಿನಲ್ಲಿ ಓದುತ್ತಿದ್ದಾನೆ. ಮನೇಲಿ ಹೆಗಡೇರು ಮತ್ತು ಕಾವೇರಮ್ಮ ಇಬ್ಬರೇ. ನೆಂಟರಿಷ್ಟರು ಮನೆಗೂ ದೂರ, ಮನಕ್ಕೂ ದೂರ.
ಹಂದಿ ಹಾವಳಿಯಿಂದ ಬೇಸತ್ತ ಹೆಗಡೇರು, ಈಗ ಹದಿನೈದು ದಿನದಿಂದ ತೋಟದ ಸುತ್ತ ಇರೋ ಮರಗಿಡ ಕಡಿಸಿ, ಐಬೆಕ್ಸ್ ಬೇಲಿ ಎಳೆಸಿ, ಅಲ್ಲೇ ಹತ್ತಿರ ಇರುವ ಕರೆಂಟು ಕಂಬದಿಂದ ರಾತ್ರಿ ಹೊತ್ತು ಬೇಲಿಗೆ ಕರೆಂಟು ಹರಿಸುವ ವ್ವವಸ್ಥೆ ಮಾಡಿಕೊಂಡಿದ್ದಾರೆ. ಕರೆಂಟು ತಾಗಿಯೋ, ಹೇಗೋ, ಅವರ ಬೇಲಿ ಹಾರಿಸಿದ್ದೆ ದಿನಾ ಮೂರು ನಾಕು ಮಂಗ ಸತ್ತು ಬೀಳತೊಡಗಿದವು. ಮೂವತ್ತು ಕೆ.ಜಿ. ಹತ್ತಿರವಿರುವ ಒಳ್ಳೆ ಗಟ್ಟಿಮುಟ್ಟಾದ ಮಂಗಗಳು! ಐಬೆಕ್ಸ್ ಬೇಲಿ ತಾಗಿಸಿಕೊಳ್ಳುವಷ್ಟು ದಡ್ಡ ಪ್ರಾಣಿಗಳೆಲ್ಲ ಮಂಗಗಳು ಎಂದುಕೊಳ್ಳುತ್ತಿರುವಾಗಲೇ, ಹೆಗಡೇರಿಗೆ ವಿಪರೀತ ಜ್ವರ ಬಂತು. ಕಂಗಾಲಾಗುತ್ತಾಳೆಂದು ಮೊದಲು ಹೆಂಡತಿಗೆ ಹೇಳದೇ, ಮನೆಯಲ್ಲಿದ್ದ ಕ್ರೋಸಿನ್, ವಿಕ್ಸ್ ಆಕ್ಷನ್ ನುಂಗುತ್ತ ಉಳಿದರು. ಊಂಹೂಂ. ಜ್ವರ ಹೆಚ್ಚುತ್ತಾ ವಾಂತಿ, ತಲೆನೋವು ಎಲ್ಲ ಶುರುವಾದದ್ದೇ, ಕಾವೇಮ್ಮ ಮರಾಠಿ ಆಳಿನ ಜತೆಗೆ ಆಸ್ಪತ್ರೆಗೆ ಕಳಿಸಿದರು.
ಆಸ್ಪತ್ರೆಯಲ್ಲಿ ಅಡ್ಮಿಟ್ ಆದರೂ ಪರಿಸ್ಥತಿ ಬಿಗಡಾಯಿಸುತ್ತಾ ಹೋಯಿತು. ಮಂಗಳೂರಿಗೆ ಒಯ್ದದ್ದೂ ಅವರಿಗೆ ಗೊತ್ತಾಗಲಾರದು, ಪ್ರಜ್ಞೆ ಶೂನ್ಯರಾಗಿಬಿಟ್ಟಿದ್ದರು. ಯಾವ ಚಿಕಿತ್ಸೆಗೂ ಜಗ್ಗದೇ, ಅವರ ಮಗ ಮದ್ರಾಸಿನಿಂದ ಬಂದಿಳಿದ ದಿನವೇ ಕೊನೆಯುಸಿರೆಳೆದರು. ಟಿಕೇಟು ಸಿಗದೇ ಮಗಳಿಗೆ ಬರಲಾಗಲಿಲ್ಲ. ಈಗ ಮಗ ಎಂಬಿಎ ಬಿಟ್ಟು ಮನೆಯಲ್ಲಿರುವುದೋ, ಅಥವಾ ಜಮೀನನ್ನು ಮಾರಿ ಆಯಿಯನ್ನು ಕರೆದುಕೊಂಡು ಮದರಾಸಿನಲ್ಲಿ ರೂಮು ಮಾಡಲೋ ಎಂಬ ದ್ವಂದ್ವದಲ್ಲಿದ್ದಾನೆ.
ಮಂಗಳೂರಿನಲ್ಲಿ ಹೆಗಡೇರ ಕಾಯಿಲೆ ಪತ್ತೆಯಾಗಿತ್ತು. ಅದು ‘ಮಂಗನ ಕಾಯಿಲೆ.’!
******
ಬೇಸಿಗೆಯ ತಿಂಗಳುಗಳಲ್ಲಿ ಇಂತಹ ಚಿತ್ರಗಳನ್ನು ಈ ಭಾಗದಲ್ಲಿ ಪ್ರತಿವರ್ಷವೂ ಕಾಣಬಹುದಾಗಿದೆ. ಪ್ರಪಂಚದ ಬೇರೆ ಯಾವ ಭಾಗದಲ್ಲೂ ಕಂಡುಬರದ, ಕೇವಲ ಕರ್ನಾಟಕದ ಪಶ್ಚಿಮಘಟ್ಟಗಳ ಮಲೆನಾಡಿಗಷ್ಟೇ ಸೀಮಿತವಾದ ಈ ‘ಮಂಗನ ಕಾಯಿಲೆ’ ಎಂದರೇನು? ಮಂಗನಿರುವೆಡೆಯಲ್ಲೆಲ್ಲ ಮನುಷ್ಯ ಹೋಗಿ ನೆಲೆಸಿದ್ದಕ್ಕೆ ಡಾರ್ವಿನ್ನನ ವಿಕಾಸವಾದ ತಿರುವುಮುರುವಾಗಿ ಮನುಷ್ಯ ಮಂಗನಾಗುವುದೇ ಮಂಗನಕಾಯಿಲೆಯೋ? ಮಂಗನಿಂದ ಮನುಷ್ಯನಿಗೆ ಬರುವ ಕಾಯಿಲೆಯೋ?
ಎರಡೂ ಹೌದು.
೧೯೫೭ನೇ ಇಸವಿ. ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕ್ಯಾಸನೂರು ಎಂಬ ಹಳ್ಳಿಯ ಜನ ಕಾಡಿನಲ್ಲಿ ಮಂಗ ಹಿಂಡುಹಿಂಡಾಗಿ ಸಾಯುವುದನ್ನು ಗಮನಿಸಿದರು. ಜೊತೆಗೇ ಯಾವುದೆಂದು ಪತ್ತೆಯಾಗದ ಒಂದು ವಿಚಿತ್ರ ಜ್ವರವೊಂದು ಊರ ಜನರನ್ನೂ ಕಾಡತೊಡಗಿತು. ಬರೀ ಜ್ವರವೆಂದು ಶುರುವಾದದ್ದು ಕಡೆಗೆ ಮಿದುಳು ಜ್ವರದ ಲಕ್ಷಣವನ್ನೂ ಪಡೆಯಿತು. ನೂರಾರು ಜನ ಕಾಯಿಲೆಯಿಂದ ಪೀಡಿತರಾಗಿ ಹಲವು ಜನ ಜೀವವನ್ನೂ ತೆತ್ತರು. ಆಗ ಆ ಪ್ರದೇಶಕ್ಕೆ ಭೇಟಿ ನೀಡಿದ ವೈದ್ಯವಿಜ್ಞಾನಿಗಳ ತಂಡವೊಂದು ಸತ್ತ ಮಂಗಗಳ ಶವಪರೀಕ್ಷೆ, ರೋಗಿಗಳ ರಕ್ತಪರೀಕ್ಷೆ ನಡೆಸಿತು. ಆರ್ ಎನ್ ಎ ವೈರಸ್ ಒಂದು ಆ ನಿಗೂಢ ಜ್ವರಕ್ಕೆ ಕಾರಣವೆಂದು ತಿಳಿಸಿತು. ಮೊದಲು ಕ್ಯಾಸನೂರಿನಲ್ಲಿ ಪತ್ತೆಯಾದ ವೈರಸ್ ಕಾಯಿಲೆಗೆ ‘ಕ್ಯಾಸನೂರು ಕಾಡಿನ ಕಾಯಿಲೆ’(ಕೆ ಎಫ್ ಡಿ) ಎಂದು ನಾಮಕರಣ ಮಾಡಲಾಯ್ತು. ಕೆ.ಎಫ್.ಡಿ.ರೋಗಪತ್ತೆ ಹಾಗೂ ಸಂಶೋಧನಾ ಕೇಂದ್ರವೊಂದು ಶಿವಮೊಗ್ಗದಲ್ಲಿ ಸ್ಥಾಪನೆಯಾಯ್ತು.
ಹೀಗೆ ಐವತ್ತು ವರ್ಷಗಳ ಕೆಳಗೆ ಮಲೆನಾಡಿನ ಹಳ್ಳಿಯೊಂದಕ್ಕಷ್ಟೇ ಸೀಮಿತವಾಗಿದ್ದ ಈ ಕಾಯಿಲೆ, ಕ್ರಮೇಣ ಪಶ್ಚಿಮ ಘಟ್ಟ ಪ್ರದೇಶದ ಪಕ್ಕದ ಜಿಲ್ಲೆಗಳಿಗೂ ಹರಡಿತು. ಈಗ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ,ದಕ್ಷಿಣಕನ್ನಡ-ಈ ಐದು ಜಿಲ್ಲೆಗಳಿಗೂ ವ್ಯಾಪಿಸಿದೆ. ಶೇ.೮೦% ಅರಣ್ಯ ಹೊಂದಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಇದರ ಹಾವಳಿ ಬಹಳವಾಗಿದೆ. ಸಾವಿರಾರು ಜನ ನರಳಿ, ನೂರಾರು ಜನ ಪ್ರಾಣ ತೆತ್ತಿದ್ದಾರೆ.
ಹೇಗೆ ಬರುತ್ತದೆ?
ಮಂಗ ಕೆ ಎಫ್ ಡಿ. ವೈರಸ್ಸಿನ ಆಶ್ರಯದಾತ. ಮಂಗಗಳಿಗೆ ಕಚ್ಚಿದ ಉಣ್ಣೆಗಳು ಮನುಷ್ಯರಿಗೂ ಕಚ್ಚಿದಾಗ ಮಾನವ ರಕ್ತದಲ್ಲಿ ವೈರಸ್ ವೃದ್ಧಿಯಾಗುತ್ತದೆ. ಆದರೆ ಮನುಷ್ಯರಿಂದ ಮನುಷ್ಯರಿಗೆ ಹರಡುವ ಕಾಯಿಲೆ ಇದಲ್ಲ. ವೈರಸ್ ಸರಪಳಿಯಲ್ಲಿ ಮನುಷ್ಯ ಕೊನೆಯ ಆಶ್ರಯದಾತ-ಡೆಡ್ ಎಂಡ್ ಹೋಸ್ಟ್.
ಸಾಧಾರಣವಾಗಿ ಬೇಸಿಗೆ ಮುಂಚಿನ ದಿನಗಳಲ್ಲಿ ಅರಣ್ಯದ ಉಪಉತ್ಪನ್ನಗಳಿಗಾಗಿ, ಸೊಪ್ಪು-ದರಕು-ಕಟ್ಟಿಗೆಯಂತಹ ದೈನಂದಿನ ಅಗತ್ಯಗಳಿಗಾಗಿ, ಅರಣ್ಯಕ್ಕೆ ಹೋಗುವವರ ಸಂಖ್ಯೆ ಜಾಸ್ತಿ. ಈಗೆಲ್ಲ ಕಾಡು ಸವರಿ ಅದರ ಮಡಿಲಲ್ಲೇ ತೋಟ ಮಾಡಿಕೊಂಡ ಹಲವರಿದ್ದಾರೆ. ದನಕಾಯಲು, ಬೇಟೆಯಾಡಲು-ಹೀಗೆ ನಾನಾ ಕಾರಣಗಳಿಗಾಗಿ ಕಾಡಿನ ನಿರಂತರ ಸಂಪರ್ಕದಲ್ಲಿರುವವರೇ ಈ ಜ್ವರಕ್ಕೆ ಹೆಚ್ಚು ತುತ್ತಾಗುವರು.
ರೋಗ ಲಕ್ಷಣಗಳು
ಸೋಂಕುಳ್ಳ ಉಣ್ಣೆ ಕಚ್ಚಿದ ಮೂರರಿಂದ ಎಂಟು ದಿನದೊಳಗಾಗಿ ರೋಗಲಕ್ಷಣ ಗೋಚರಿಸುತ್ತದೆ. ಹೆಚ್ಚಾಗಿ ಎರಡು ಹಂತಗಳಲ್ಲಿ ಈ ರೋಗ ಪ್ರಕಟವಾಗುತ್ತದೆ.
ಮೊದಲನೆಯ ಹಂತ: ಇದ್ದಕ್ಕಿದ್ದಂತೆ ಬರುವ ಸಿಕ್ಕಾಪಟ್ಟೆ ಜ್ವರ, ತಲೆನೋವು, ಮೈಕೈನೋವು, ಕೆಂಡದಂತೆ ಕಾಣುವ ಕಣ್ಣುಗಳು, ವಾಂತಿ, ಬಳಲಿಕೆ-ಇವೆಲ್ಲ ಮೊದಲು ಕಾಣಿಸಿಕೊಳ್ಳುತ್ತವೆ. ಒಂದೆರೆಡು ವಾರ ಇರಬಹುದಾದ ಈ ಲಕ್ಷಣಗಳಲ್ಲದೆ ಕೆಲ ರೋಗಿಗಳಿಗೆ ಆಂತರಿಕ ರಕ್ತಸ್ರಾವ, ಮೈಮೇಲೆ ದಡಸಲು ಗುಳ್ಳೆ ಕಂಡುಬರುವುದು, ಕಂಕಳು ಕುತ್ತಿಗೆಯಲ್ಲಿ ದುಗ್ಧ ಬೀಜ ಕಂಡುಬರುವುದೂ ಉಂಟು.
ಎರಡನೆಯ ಹಂತ: ಕೆಲವು ರೋಗಿಗಳು ಎರಡನೇ ಹಂತದ ರೋಗಲಕ್ಷಣಗಳನ್ನು ತೋರುತ್ತಾರೆ. ಒಂದರಿಂದ ಮೂರು ವಾರಗಳ ಕಾಲದ ಜ್ವರರಹಿತ ಅವಧಿಯ ನಂತರ ಮತ್ತೆ ಜ್ವರ ಕಾಣಿಸಿಕೊಂಡು ಮೆದುಳು ಜ್ವರದ ಲಕ್ಷಣಗಳು ಕಾಣತೊಡಗುತ್ತವೆ. ಜ್ವರದ ಜತೆಗೇ ಅತೀ ತಲೆನೋವು, ದೇಹನಡುಗುವಿಕೆ, ಕುತ್ತಿಗೆ ಸೆಟೆದುಕೊಳ್ಳುವುದು, ಅಸಹಜ ದೇಹದ ಚಲನೆಗಳಲ್ಲದೇ ರೋಗಿಯ ಮಾನಸಿಕ ಸ್ಥಿತಿಯೂ ಏರುಪೇರಾಗುತ್ತದೆ. ಈ ಸಮಯದಲ್ಲೇ ಏನೇನೋ ಹಲುಬುವ ರೋಗಿಗಳು ಬಾಹ್ಯ ಪರಿಸರ ಜ್ಞಾನವೇ ಇಲ್ಲದೇ ತಲೆ ಕೆರೆದುಕೊಳ್ಳುವುದು, ಉಟ್ಟಬಟ್ಟೆಯ ತುದಿ ಎಳೆದುಕೊಳ್ಳುವುದು, ಸುಮ್ಮಸುಮ್ಮನೇ ನಗುವ ಅಳುವ ‘ಮಂಗ’ನ ತರಹದ ಲಕ್ಷಣಗಳನ್ನೂ ತೋರಿಸುತ್ತಾರೆ. ತುಂಬ ಇಳಿದು ಹೋಗುವ ರಕ್ತದೊತ್ತಡ ಹಾಗು ನಾಡಿಮಿಡಿತದಿಂದ ಏನೇ ಚಿಕಿತ್ಸೆ ನೀಡಿದರೂ ಫಲಿಸದೇ ಶೇ.೫ ರಷ್ಟು ರೋಗಿಗಳು ಸಾವನ್ನಪ್ಪುತ್ತಾರೆ. ಉಳಿದವರು ತಿಂಗಳುಗಟ್ಟಲೇ ಆಸ್ಪತ್ರೆಯಲ್ಲುಳಿದು ಅಂತೂ ಬದುಕಿ ಬರುತ್ತಾರೆ. ಮೊದಲಿನ ಮಾಮೂಲಿ ಸ್ಥಿತಿಗೆ ಮರಳಲು ವರ್ಷಗಳೇ ಹಿಡಿಯುತ್ತವೆ.
ರೋಗ ಪತ್ತೆ ಹೇಗೆ?
ರೋಗದ ದೈಹಿಕ ಲಕ್ಷಣಗಳ ಜೊತೆಗೆ ಸುತ್ತಮುತ್ತ ಮಂಗಗಳು ಸಾಯತೊಡಗಿದ್ದರೆ ಕೆ.ಎಫ್.ಡಿ. ಬಂದಿತೆಂದೇ ಲೆಕ್ಕ. ಆದರೂ ನಿಖರವಾಗಿ ರೋಗಪತ್ತೆಯಾಗುವುದು ರಕ್ತಪರೀಕ್ಷೆಯ ಬಳಿಕ. ರೋಗಿಯ ರಕ್ತವನ್ನು ಇಲಿಗೆ ಚುಚ್ಚಿದಾಗ ಇಲಿಯು ರೋಗಬಂದು ಸತ್ತುಹೋದರೆ ಆ ರೋಗಿಗೆ ಕೆ.ಎಫ್. ಡಿ. ಬಂದದ್ದು ಖಚಿತ. ಈ ಹಳೇ ವಿಧಾನವಲ್ಲದೇ ಈಗ ಎಲಿಸಾ, ಕಾಂಪ್ಲಿಮೆಂಟ್ ಫಿಕ್ಸೇಶನ್ ನಂತಹ ಹೊಸ ರೋಗ ಪತ್ತೆ ವಿಧಾನಗಳೂ ಬಂದಿವೆ.
ಸಮುದಾಯ ಆರೋಗ್ಯ ದೃಷ್ಟಿಯಿಂದ ರೋಗಪತ್ತೆ ಅವಶ್ಯವೇ ಹೊರತು ರೋಗಿಯ ಚಿಕಿತ್ಸೆಗೆ ಅದೇನೂ ಅಷ್ಟು ಮುಖ್ಯವಲ್ಲ.
ನಿಯಂತ್ರಣ
ಒಂದು ತಿಂಗಳ ಅವಧಿಯಲ್ಲಿ ಕೆ.ಎಫ್.ಡಿ. ಚುಚ್ಚುಮದ್ದನ್ನು ಎರಡು ಬಾರಿ ತೆಗೆದುಕೊಳ್ಳುವುದರಿಂದ ಹಾಗೂ ಪ್ರತಿ ೯ರಿಂದ ೧೨ ತಿಂಗಳಿಗೊಮ್ಮೆ ಬೂಸ್ಟರ್ ಡೋಸ್ ಚುಚ್ಚುಮದ್ದು ತೆಗೆದುಕೊಳ್ಳಬೇಕು. ರೋಗ ತಡೆಗೆ ಇದು ಅತಿ ಮುಖ್ಯ. ೬ ವರ್ಷದ ಮೇಲ್ಪಟ್ಟ ಎಲ್ಲರೂ ಚುಚ್ಚುಮದ್ದು ತೆಗೆದುಕೊಳ್ಳಬೆಕು. ವ್ಯಾಕ್ಸಿನ್ ಸ್ವಲ್ಪ ನೋವುಂಟುಮಾಡುವುದರಿಂದ ಹಾಗೂ ತೆಗೆದುಕೊಂಡ ಕೆಲವರಿಗೂ ಕಾಯಿಲೆ ಬರುವುದರಿಂದ, ಅದರ ಬಗ್ಗೆ ಹತ್ತಾರು ತಪ್ಪು ಕಲ್ಪನೆಗಳು, ಕಟ್ಟುಕತೆಗಳು ಹುಟ್ಟಿವೆ. ವೈದ್ಯರ ಇಂದಿನ ಸವಾಲು ಗುಡ್ಡಗಾಡಿನ ಜನರನ್ನು ಚುಚ್ಚುಮದ್ದು ತೆಗೆದುಕೊಳ್ಳುವಂತೆ ಮನವೊಲಿಸುವುದೇ ಆಗಿದೆ.
ಇಷ್ಟೇ ಅಲ್ಲದೇ ಈ ಜ್ವರದ ಪ್ರದೇಶವೆಂದು ಗುರುತಿಸಲ್ಪಟ್ಟ ಸ್ಥಳಗಳಲ್ಲಿರುವ ಜನರು ಕೆಲವು ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅವರ ಮನವೊಲಿಸಬೇಕಿದೆ. ಅರಣ್ಯ ಪ್ರವೇಶಿಸುವ ಮುನ್ನ ಮೈಕೈಗಳಿಗೆ ಉಣ್ಣೆ ಹತ್ತದಂತಹ ವಿಕರ್ಷಕ ಕ್ರೀಮುಗಳನ್ನು ಬಳಸುವುದು; ಕಾಡಿನ ನೆಲದ ಮೇಲೆ, ಮರದ ದಿಮ್ಮಿಯ ಮೇಲೆ ಬರೀ ಮೈಯಲ್ಲಿ ಕುಳಿತುಕೊಳ್ಳದಿರುವುದು; ಉಣ್ಣೆ ಕಚ್ಚಿದ ಕೂಡಲೇ ತೆಗೆಯುವುದು; ದನಕರುಗಳನ್ನು ಬೇಕಾಬಿಟ್ಟಿಯಾಗಿ ಎಲ್ಲ ಕಡೆ ಮೇಯಲು ಕಳಿಸದಿರುವುದು-ಇತ್ಯಾದಿ. ಉಣ್ಣೆಯ ಕಡಿತದಿಂದ ತಪ್ಪಿಸಿಕೊಂಡರೆ ಕೆ.ಎಫ್.ಡಿ.ಯಿಂದಲೂ ತಪ್ಪಿಸಿಕೊಂಡಂತೆ. ಕರಾವಳಿಯಲ್ಲಂತೂ ಅರೆನಗ್ನತೆ ಬೇಸಿಗೆಯ ಯೂನಿಫಾರ್ಮ್! ಕೆಲಸಗಾರರು ಬರೀ ಒಂದು ಪಾಣಿಪಂಚೆಯಲ್ಲೇ ದಿನದೂಡಿಬಿಡುತ್ತಾರೆ. ಅವರನ್ನೆಲ್ಲ, ‘ಬೆವರಿದರೂ ಅಡ್ಡಿಯಿಲ್ಲ, ಮೈತುಂಬಾ ಬಟ್ಟೆ ಧರಿಸಿ ಕಾಡಿಗೆ ಹೋಗಿ’ ಎಂದು ಒಪ್ಪಿಸುವುದು ಸುಲಭವಲ್ಲ.
ಅಲ್ಲದೇ, ಕಾಯಿಲೆಯ ಕಾರಣ-ಲಕ್ಷಣ-ಪರಿಹಾರದ ಬಗ್ಗೆ ಜನರಲ್ಲಿ ವೈಜ್ಞಾನಿಕ ತಿಳುವಳಿಕೆಯನ್ನು ಬೆಳೆಸಬೇಕಿದೆ. ಕಾಯಿಲೆ ಕಷ್ಟಗಳಿಗೆ ದೇವರ ಕೋಪ ಭೂತದ ಕಾಟ-ದೈವದ ಚೇಷ್ಟೆಗಳಷ್ಟೇ ಕಾರಣವಲ್ಲ, ಪೂಜೆ-ಯಂತ್ರ ಮಾಟಗಳಷ್ಟೇ ಪರಿಹಾರವೂ ಅಲ್ಲ ಎಂದು ಹೇಳಬೇಕಿದೆ. ಗುಡ್ಡಗಾಡುಗಳಲ್ಲಿ ವಾಸಿಸುವುದು ಬಹುಪಾಲು ಬುಡಕಟ್ಟು ಜನರೇ ಆಗಿದ್ದು, ಅವರಿಗೆ ವೈಜ್ಞಾನಿಕ ಮಾಹಿತಿ ರವಾನಿಸುವುದು ಈ ಬರಹ ಬರೆದಷ್ಟು ಸುಲಭವಲ್ಲದಾದರೂ ನಿರಂತರವಾಗಿ ಪ್ರಯತ್ನಿಸಬೇಕಿದೆ.
ಇಲ್ಲದಿದ್ದಲ್ಲಿ, ಐದು ಮಕ್ಕಳನ್ನು ತಬ್ಬಲಿ ಬಿಟ್ಟು ಹೋದ ವಿಧವೆ ‘ಪುರುಷಿ’, ‘ಮದಿ’ಯ ವೇಳೆಗೆ ಕಾಯಿಲೆ ಬಿದ್ದು ಕಾಲ್ಗುಣ ಸರಿಯಿಲ್ಲದವಳೆಂಬ ಬಿರುದು ಹೊತ್ತ ಸಾವಿತ್ರಿ, ಕುಟುಂಬಕ್ಕೆ ದುಡಿಯುವ ಏಕೈಕ ವೈಕ್ತಿಯಾಗಿದ್ದು, ತನ್ನ ಕಾಯಿಲೆಗೆ ಮಾಡಿದ ಲಕ್ಷಲಕ್ಷ ಸಾಲು ಹೇಗೆ ತೀರಿಸುವುದೆಂಬ ಚಿಂತೆಯಲ್ಲಿ ಕೆ.ಎಫ್.ಡಿ ಗುಣವಾಗಿ ಮನೆಗೆ ಮರಳಿದರೂ ನೇಣಿಗೆ ಶರಣಾದ ಸುಬ್ರಾಯ; ಇಂತವರ ಕತೆಗಳು ಬೆಳೆಯುತ್ತ, ಕಾಡಿನಲ್ಲಿ ಅನುರಣಿಸುತ್ತ ಹೋಗುತ್ತದೆ.
[ಚಿತ್ರಗಳು- ಚಂದ್ರಶೇಖರ ಐಜೂರು ಮತ್ತು ಸಂಗ್ರಹದಿಂದ]
ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಕವಿತೆ. ವೈಚಾರಿಕ ಚಿಂತನೆ ಮತ್ತು ವೈದ್ಯಕೀಯ ಬರಹಗಳು ಇವರ ವಿಶೇಷ.