ಇದು ಸಂದಿಗ್ಧತೆಯೊಂದನ್ನು ಎಬ್ಬಿಸುತ್ತದೆ: ಈನಿಡ್ ಅನ್ನು ಹೊತ್ತಿ ಉರಿಸಬೇಕು, ಯಾಕೆಂದರೆ ಅದು ಹಳೆಯ ಜಗತ್ತಿಗೆ ಸೇರಿದ್ದು ಎಂಬ ವರ್ಜಿಲನ ಅಭಿಪ್ರಾಯವನ್ನು ಕಾದಂಬರಿ ಎತ್ತಿ ಹಿಡಿಯುತ್ತದೆಯೇ, ಅಥವಾ ಈ ಬ್ರಾಖ್ ನ ಈ ಕೃತಿಗೆ ಬೇರೇನಾದರೂ ಅರ್ಥವಿದೆಯೇ? ಈನಿಡ್ ಅನ್ನು ನಾಶಗೊಳಿಸಿದರೆ ಅದು ಸಾಂಸ್ಕೃತಿಕ ಲೋಕಕ್ಕೆ ನಷ್ಟ ಎನ್ನುವುದರಲ್ಲಿ ಎರಡು ಮಾತಿರಲಾರದು; ಆದ್ದರಿಂದ ವರ್ಜಿಲನ ಈ ಕೃತಿದಹನದ ಬಯಕೆಯನ್ನು ಕಾದಂಬರಿ ಪುರಸ್ಕರಿಸುತ್ತದೆ ಎನ್ನುವಂತಿಲ್ಲ. ಆದರೆ ವರ್ಜಿಲ್ ನೀಡುವ ಕಾರಣಗಳನ್ನು ಓದುಗರಾದ ನಾವು ವಾದರಹಿತವಾಗಿ ತತ್ವಶಃ ಒಪ್ಪುತ್ತೇವೆ ಯಾಕೆ? ಗತಕಾಲದ ಇತಿಹಾಸದ ಕುರಿತು ಕಾದಂಬರಿ ಹೆಚ್ಚು ಹರವಿನ ದೃಷ್ಟಿಕೋನವನ್ನು ತೆಗೆದುಕೊಳ್ಳುತ್ತದೆ ಎಂದು ನನಗನಿಸುತ್ತದೆ.
ಕೆ. ವಿ. ತಿರುಮಲೇಶ್ ಬರೆದ ಲೇಖನ
ನಾನು ಓದಿದ ಅತ್ಯುತ್ತಮ ಪುಸ್ತಕದ ಬಗ್ಗೆ ಹೇಳೆಂದರೆ ನನ್ನಿಂದ ಅದು ಅಸಾಧ್ಯವೇ ಸರಿ. ನಾನು ಪುಸ್ತಕಗಳ (ಬಹುವಚನ) ಜಗತ್ತಿನಲ್ಲಿ ಬದುಕುತ್ತಿದ್ದೇನೆ ಮತ್ತು ಅವು ಪರ್ಯಾಯವಾಗಿ ನನ್ನಲ್ಲಿ ನೆಲಸುತ್ತವೆ. ನಾನೊಬ್ಬ ಅಜ್ಞೇಯವಾದಿ ಮತ್ತು ಬಹು ದೈವಾರಾಧಕ ಪರಂಪರೆಯವ, ಬಹು ಭಾಷಿ ಹಾಗೂ ಸಂಕರ ಸಂಸ್ಕೃತಿಯವ, ವರ್ತಮಾನದಲ್ಲಿ ಬದುಕುತ್ತಲೇ ಭೂತ ಭವಿಷ್ಯಗಳಲ್ಲೂ ಇರುವವ. ನನಗಿದೆಲ್ಲ ಖುಷಿ ಕೊಡುವ ವಿಚಾರ. ಏಕತ್ರ ಜಗತ್ತಿನಲ್ಲಿ ನಾನು ಕಾಫ್ಕಾನ “ಮೊದಲ ದುಃಖ” (ಫಸ್ಟ್ ಸೋರೋ) ಕತೆಯಲ್ಲಿನ ತೂಗುಯ್ಯಾಲೆ ಕಲಾವಿದನಷ್ಟೇ ಅಸುಖಿಯಾಗುತ್ತಿದ್ದೆ. ನಿಮಗೆ ನೆನಪಿರಬಹುದು, ಆ ಕತೆಯಲ್ಲಿ ತೂಗುಯ್ಯಾಲೆ ಕಲಾವಿದನಿಗೆ(ಟ್ರಪೀಝ್ ಆರ್ಟಿಸ್ಟ್) ಒಂದು ದಿನ ಗೊತ್ತಾಗುತ್ತದೆ, ತನಗೆ ಒಂದೇ ತೂಗುಯ್ಯಾಲೆಯನ್ನು ಕೊಟ್ಟಿದ್ದಾರೆ ಎನ್ನುವುದು. ಅಂದಿನಿಂದ ಸುರುವಾಗುತ್ತದೆ ಇನ್ನೊಂದು ಉಯ್ಯಾಲೆಗೋಸ್ಕರ ಅವನ ಅಳಲು. ಅದುವೇ ಮೊದಲ ದುಃಖ. ನಾನು ಬೇರೆ ಬೇರೆ ಭಾಷೆಗಳ ಹಲವಾರು ಅತ್ಯುತ್ತಮ ಕೃತಿಗಳಿಂದ ಮಾಡಲ್ಪಟ್ಟಿದ್ದೇನೆ, ಹಾಗಿರುತ್ತ ಯಾವುದೇ ಒಂದನ್ನು ‘ಅತ್ಯುತ್ತಮ’ವೆಂದು ಆರಿಸುವುದು ಸರಿಯಾಗಲಾರದು.
ಆದರೂ ಈವತ್ತಿನ ಭಾಷಣದ ಉದ್ದೇಶಕ್ಕೋಸ್ಕರ ಈ ವರೆಗೆ ನಾನು ಓದಿದ ಅತ್ಯುತ್ತಮ ಪುಸ್ತಕಗಳಲ್ಲಿ ಹರ್ಮನ್ನ್ ಬ್ರಾಖ್ ನ 1940ರ ದಶಕದ ಕಾದಂಬರಿ “ವರ್ಜಿಲನ ಮರಣ”ವನ್ನು (ದ ಡೆತ್ ಆಫ್ ವರ್ಜಿಲ್) ಎತ್ತಿಕೊಳ್ಳುತ್ತೇನೆ. ಜರ್ಮನ್ ಮೂಲದಿಂದ ಜೀನ್ ಸ್ಟರ್ ಉಂಟರ್ ಮೇಯರ್ ಇಂಗ್ಲೀಷಿಗೆ ಅನುವಾದಿಸಿದ ಕೃತಿ ಇದು. ಮೂಲ ಮತ್ತು ಅನುವಾದ ಎರಡೂ ಪ್ರಕಟವಾದ್ದು 1945ರಲ್ಲಿ, ಎಂದರೆ ದ್ವಿತೀಯ ಮಹಾಯುದ್ಧ ಕೊನೆಗೊಂಡ ವರ್ಷ.
ತನ್ನ ಜನ್ಮಸ್ಥಳವಾದ ಆಸ್ಟ್ರಿಯಾದಲ್ಲಿ ಸುರುಮಾಡಿ, ಇಂಗ್ಲೆಂಡಿನಲ್ಲಿ ನಿರಾಶ್ರಿತನಾಗಿ ಮುಂದುವರಿಸಿ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಪೂರ್ತಿಗೊಳಿಸಿದ ಈ ಮಹದ್ ಕೃತಿಯನ್ನು ಬ್ರಾಖ್ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಬರೆದನೆಂದು ಬೇರೆ ಹೇಳಬೇಕಾಗಿಲ್ಲ. ಈ ಕೃತಿಯ ಮೂಲ ಕೆಲವು ಶೋಕಗೀತೆಗಳೆಂದು ಹೇಳಲಾಗುತ್ತದೆ, ನಾಝಿಗಳು ಆಸ್ಟ್ರಿಯಾವನ್ನು ಕೈವಶಪಡಿಸಿದ ಬೆನ್ನಲ್ಲೇ ತಾನು ಬಂಧನದಲ್ಲಿ ಇರಿಸಲ್ಪಟ್ಟು ಸ್ವಂತ ಸಾವಿನ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಬರೆದಂಥವು ಅವು. ಜೇಮ್ಸ್ ಜಾಯ್ಸ್ ನ ಹಸ್ತಕ್ಷೇಪದ ಕಾರಣ ಸೆರೆಯಿಂದ ಅವನ ಬಿಡುಗಡೆಯಾಯಿತಲ್ಲದೆ ದೇಶ ತೊರೆದು ಇಂಗ್ಲೆಂಡಿಗೆ ವಲಸೆ ಹೋಗುವುದು ಸಾಧ್ಯವಾಯಿತು. ಆಮೇಲೆ ಬ್ರಾಖ್ ಅಮೇರಿಕಗೆ ತೆರಳಿ, ಪ್ರಿನ್ಸ್ಟನ್ ನಲ್ಲಿ ನೆಲಸಿ ಅಲ್ಲಿ ಸಾಹಿತ್ಯ ರಚನೆ ಮಾಡುತ್ತಲೂ, ನಾಝಿ ಜರ್ಮನಿಯಿಂದ ಪಾರಾಗಲು ಜನರಿಗೆ ಸಹಾಯ ಮಾಡುತ್ತಲೂ ಇದ್ದ. ಅವನು ಕಾರಾಗೃಹದಲ್ಲಿ ಬರೆದಿದ್ದ ಶೋಕಗೀತೆಗಳು “ವರ್ಜಿಲನ ಮರಣ”ದಲ್ಲಿ ಸೇರಿಕೊಂಡುವು.
ಈ ಉತ್ಕೃಷ್ಟ ಕಾದಂಬರಿಯ ಪರಿಚಯ ನನಗೆ ಯಾವಾಗ ಆಯಿತು ಎನ್ನುವುದು ನನಗೆ ನೆನಪಿಲ್ಲ, ಆದರೆ ಅದು ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಏಂಡ್ ಫಾರಿನ್ ಲ್ಯಾಂಗ್ವೇಜಸ್ ನ ಲೈಬ್ರರಿಯಲ್ಲಿ, ಕೆಲವು ವರ್ಷಗಳ ಮೊದಲು, ಎನ್ನುವುದು ಮಾತ್ರ ಚೆನ್ನಾಗಿ ನೆನಪಿದೆ. ಮೊದಲ ನೋಟದಲ್ಲೇ ನನ್ನನ್ನು ಕಾದಂಬರಿಯತ್ತ ಆಕರ್ಷಿಸಿದುದು ವರ್ಜಿಲನ ಹೆಸರು ಹೊತ್ತ ಅದರ ಶೀರ್ಷಿಕೆ. ನನ್ನ ಬಳಿ ಕೆಲವು ವರ್ಷಗಳಿಂದ ಡ್ರೈಡನ್ ನ ಈನಿಡ್ ಕಾವ್ಯದ ಇಂಗ್ಲಿಷ್ ಅನುವಾದದ ನನ್ನದೇ ಒಂದು ಪ್ರತಿ ಇತ್ತು, ಹಾಗೂ ನಾನದನ್ನು ಆಗಿಂದಾಗ್ಗೆ ಪುಟ ತಿರುವಿ ನೋಡುವ ಕ್ರಮ ಇತ್ತು. ಅದರ ರಾಜಗಂಭೀರವಾದ –
Arms, and the man I sing, who, forc’d by fate,
And haughty Juno’s unrelenting hate,
Expell’d and exil’d, left the Trojan shore.
‘ಆಯುಧಗಳ ಬಗ್ಗೆ ಮತ್ತು ಮನುಷ್ಯನ ಬಗ್ಗೆ ಹಾಡುವುದು ನಾನು
ಯಾರು ವಿಧಿಯ ಅಟ್ಟಹಾಸಕ್ಕೆ ಮತ್ತು ಅಹಂಕಾರಿ ಜೂನೋಳ
ಅವ್ಯಾಹತ ದ್ವೇಷಕ್ಕೆ ಹೊರದೂಡಲ್ಪಟ್ಟನೋ ಮತ್ತು
ದೇಶಭ್ರಷ್ಟನಾದನೋ ಟ್ರೋಜನ್ ತೀರದಿಂದ, ಅಂಥವನ ಬಗ್ಗೆ.’
ಎಂಬ ಮೊದಲ ಸಾಲುಗಳನ್ನು ಮರೆಯುವುದು ಅಸಾಧ್ಯ. ಅದೇ ರೀತಿ, ಡೈಡೋಳಿಗೆ ಸಂಬಂಧಿಸಿದ ಪ್ರಸಂಗ ಕೂಡ. ಲೈಬ್ರರಿಯಿಂದ ಇಸಿದುಕೊಂಡು ಓದತೊಡಗಿದೆ. ಅನುಭವ ಮನಸ್ಸಿಗೆ ನಾಟುವಂತಿತ್ತು. ಓದಿ ಮುಗಿಸಲು ಸಾಕಷ್ಟು ಸಮಯ ಹಿಡಿಯಿತು – ಮುಖ್ಯವಾಗಿ ಎರಡು ಕಾರಣಗಳಿಗೆ. ಓದಿದ್ದು ಮುಖ್ಯವೆನಿಸಿದರೆ, ಮನಸ್ಸು ಯೋಚನೆಗೆ ಬೀಳುತ್ತ ಓದು ನಿಧಾನವಾಗುತ್ತದೆ; ಎರಡನೆಯದಾಗಿ, ಮತ್ತು ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಮುಖ್ಯವಾಗಿ, ಲೇಖಕ ಬಳಸುವ ಶೈಲಿ ದುರ್ಗಮ ಎನ್ನುವಷ್ಟು ಕ್ಲಿಷ್ಟವಾಗಿತ್ತು.
ನೀವೊಂದು ಕೃತಿಯನ್ನು ಕೇವಲ ನಿಮಗೋಸ್ಕರ ಓದುತ್ತೀರಿ ಎಂದಾದರೆ, ಅದು ಯಾಕೆ ಶ್ರೇಷ್ಠವಾಗಿ ಅನಿಸುತ್ತದೆ ಎಂದು ನೀವು ನಿಮ್ಮನ್ನು ಕೇಳಿಕೊಳ್ಳುವುದಿಲ್ಲ. ಆದರೆ ಪ್ರಕೃತ ಸಂದರ್ಭದಲ್ಲಿ ಓದುಗ ಕೃತಿಯ ಗುಣದ ಕುರಿತು ಕೆಲವು ಮಾತುಗಳನ್ನು ಹೇಳುವುದು ಅಗತ್ಯವಾಗುತ್ತದೆ. ಹೀಗೆ, ನನಗೆ ಯಾಕೆ “ವರ್ಜಿಲನ ಮರಣ” ಶ್ರೇಷ್ಠವಾಗಿ ಕಾಣಿಸುತ್ತದೆ ಎಂದು ನನ್ನನ್ನು ನಾನೇ ಕೇಳಿಕೊಂಡರೆ ನಾನು ಈ ‘ಯಾಕೆ’ ಪ್ರಶ್ನೆಯನ್ನು ಎಲ್ಲಿಯ ತನಕ ಕೊಂಡೊಯ್ಯಬಹುದು? ಮೊದಲಲ್ಲಿ ಹೇಳುವುದಿದ್ದರೆ, ನನಗಿದು ನಾನು ಓದಿದ ಇತರ ಹೆಚ್ಚಿನ ಕಾದಂಬರಿಗಳಿಗಿಂತ ತೀರ ಭಿನ್ನವಾಗಿ ಅನಿಸುತ್ತದೆ ಎಂದು ಹೇಳಬಯಸುತ್ತೇನೆ. ಭಿನ್ನ ಎನ್ನುವುದರಿಂದ ನಾನು ಅರ್ಥೈಸುವುದೇನು?
ಕಾದಂಬರಿಯ ಪರಿಕಲ್ಪನೆಯನ್ನೇ ತೆಗೆದುಕೊಳ್ಳೋಣ, ಅದ್ಭುತವಾಗಿದೆ ಅನಿಸುತ್ತದೆ ನನಗೆ. ವರ್ಜಿಲ್ (ಕ್ರಿ.ಪೂ. 70 – ಕ್ರಿ.ಶ. 19) ಯೇಸು ಕ್ರಿಸ್ತನು ಹುಟ್ಟುವುದಕ್ಕೆ ಬರೇ ಹತ್ತೊಂಭತ್ತು ವರ್ಷಗಳ ಹಿಂದೆಯಷ್ಟೆ ತೀರಿಕೊಂಡ ಎನ್ನುವುದನ್ನು ನೆನಪಿಸಿಕೊಳ್ಳೋಣ. ಕವಿ ವರ್ಜಿಲಿಗೆ ಸಾಯುವ ವಯಸ್ಸಲ್ಲದೆ ಇದ್ದರೂ, ಆರೋಗ್ಯವಿರದೆ, ತನ್ನ ಮಹಾಕಾವ್ಯವಾದ ಈನಿಡ್ ನ್ನು ನಿಜಕ್ಕೂ ಮುಗಿಸುವ ಮೊದಲೇ ಸತ್ತನೆಂದೂ, ಸಾಯುವ ವೇಳೆ ಆ ಕಾವ್ಯವನ್ನು ನಾಶಪಡಿಸಲು ಪಕ್ಕದಲ್ಲಿದ್ದವರನ್ನು ಕೋರಿದ್ದನೆಂದೂ ದಂತಕತೆಯೊಂದು ಹೇಳುತ್ತದೆ. ಅವನಿಗೆ ಯಾಕೆ ತನ್ನ ಕಾವ್ಯದ ಕುರಿತು ಅಷ್ಟು ಅಸಮಾಧಾನವಿತ್ತು? ಯಾರಿಗೂ ತಿಳಿಯದು. ಬ್ರಾಖ್ ತನ್ನ ಕಾದಂಬರಿಯ ಕಾಲದ ವ್ಯಾಪ್ತಿಯನ್ನು ವರ್ಜಿಲನ ಜೀವಿತದ ಕೊನೆ ದಿವಸಕ್ಕೆ ಸೀಮಿತಗೊಳಿಸುತ್ತಾನೆ.
ಹೀಗೆ ಜೇಮ್ಸ್ ಜಾಯ್ಸ್ ನ “ಯೂಲಿಸಿಸ್”ನಂತೆಯೇ “ದ ಡೆತ್ ಆಫ್ ವರ್ಜಿಲ್” ಸಹಾ ಇಪ್ಪತ್ತನಾಲ್ಕು ಗಂಟೆಗಳ ಕಾಲಾವಧಿಯಲ್ಲಿ ಸಂಭವಿಸುತ್ತದೆ. ಕಾದಂಬರಿ ಮೊದಲಾದಾಗ ನಾವು ವರ್ಜಿಲನ್ನ ಒಂದು ನೌಕೆಯಲ್ಲಿ ಕಾಣುತ್ತೇವೆ, ಅದು ಬ್ರುಂಡೀಸಿಯಂನ ಸಮೀಪಕ್ಕೆ ಬರುತ್ತಿರುತ್ತದೆ. ಸೈನಿಕ ಕಾರ್ಯಾಚರಣೆಯ ನಂತರ ಏಥೆನ್ಸ್ ನಿಂದ ಇಟೆಲಿಗೆ ಮರಳುತ್ತಿದ್ದ ನೌಕಾಪಡೆಗೆ ಸೇರಿದ ಒಂದು ನೌಕೆ ಅದು. ನೌಕಾಸಮುಚ್ಚಯದ ಮುಂಚೂಣಿಯಲ್ಲೇ ವರ್ಜಿಲನ ಮಿತ್ರನೂ ರೋಮನ್ ಸಾಮ್ರಾಟನೂ ಆದ ಸೀಸರ್ ಒಕ್ಟೇವಿಯಾನಸ್ ಅಗಸ್ಟಸ್ ಇದ್ದಾನೆ. ವರ್ಜಿಲ್ ಗೆ ತುಂಬಾ ಅನಾರೋಗ್ಯವಿದ್ದು ಅವನನ್ನು ಕೈಮಂಚದಲ್ಲಿ ಮಲಗಿಸಿ ಕರೆದೊಯ್ಯಬೇಕಾಗುತ್ತದೆ. ಅವನ ಪಕ್ಕದಲ್ಲೆ ಒಂದು ಪೆಟ್ಟಿಗೆಯಿದೆ, ಅದರಲ್ಲಿ ಈನಿಡ್ ನ ಹಸ್ತಪ್ರತಿಯಿದೆ. ಇಡೀ ಕಾದಂಬರಿ – ವಿವರಣೆಗಳು, ವಿಚಾರಗಳು, ನೆನಪುಗಳು, ಭಯಭೀತಿಗಳು, ಮತ್ತು ಮುನ್ಸೂಚನೆಗಳು ಬಹುಪಾಲು ವರ್ಜಿಲನ ದೃಷ್ಟಿಕೋನದಿಂದ ನಿರೂಪಿತವಾಗಿವೆ.
ವರ್ಜಿಲ್ ಪ್ರೀತಿಯಿಂದ ಒಕ್ಟೇವಿಯನ್ ಎಂದು ಕರೆಯುವ ಸೀಸರ್ ಕವಿಯನ್ನು ಕಾಣಲು ಬರುತ್ತಾನೆ. ಬಹಳ ಮಹತ್ವದ ಸಂಭಾಷಣೆಯೊಂದು ಸಾಮ್ರಾಟ ಮತ್ತು ಕವಿಯ ಮಧ್ಯೆ ನಡೆಯುತ್ತದೆ; ಅದರಲ್ಲಿ ಚರ್ಚೆಗೆ ಬರದ ವಿಷಯಗಳಿಲ್ಲ, ಮುಖ್ಯವಾಗಿ ಈನಿಡ್ ಕುರಿತಾದ ವಿಷಯಗಳ ಬಗ್ಗೆ ಮಾತುಕತೆ ನಡೆಯುತ್ತದೆ. ವರ್ಜಿಲ್ ಯಾಕೆ ತನ್ನ ಜೀವಮಾನದ ಕೃತಿಯನ್ನು ನಾಶಮಾಡಲು ಬಯಸುತ್ತಾನೆ? ನಮಗೆ ಅದಕ್ಕೆ ಸರಿಯಾದ ಉತ್ತರ ಸಿಗುವುದಿಲ್ಲ; ಆದರೆ ಅವನ ಸ್ವಗತಗಳಿಂದಲೂ ಸಂಭಾಷಣೆಗಳಿಂದಲೂ ನಾವು ಊಹಿಸಿಕೊಳ್ಳಬಹುದಾದರೆ, ತಾನು ಬರೆದುದಕ್ಕೆ ಹೊಸ ಯುಗದಲ್ಲಿ ಯಾವ ಪ್ರಸ್ತುತತೆಯೂ ಇಲ್ಲವೆಂದು ಅವನಿಗೆ ಅನಿಸುತ್ತದೆ – ಅಂಥದೊಂದು ಯುಗ ದಿಗಂತದಲ್ಲಿ ಮೂಡಿಬರುವುದನ್ನು ಅವನು ಗಮನಿಸಿದ್ದಾನೆ. ರಾಜನ ಜತೆಗಿನ ಸಂದರ್ಶನ ಸ್ನೇಹಪೂರ್ಣವಾದ್ದು, ಆದರೆ ಬಿಗುವಿಗೆ ಹೊರತಾದ್ದೂ ಅಲ್ಲ, ಯಾಕೆಂದರೆ ಅದು ಭಾಗಶಃ ತಾತ್ವಿಕ, ಭಾಗಶಃ ವೈಯಕ್ತಿಕ, ಆದರೆ ಭಾಗಶಃ ರಾಜಕೀಯವೂ ಹೌದು. ಉದಾಹರಣೆಗೆ:
“ಸಂಪೂರ್ಣತೆ ಎಂದೂ ಸಾಧ್ಯವಾಗುತ್ತಿರಲಿಲ್ಲ, ವೈಯಕ್ತಿಕ ಆತ್ಮಅಪೌರುಷೇಯದ ಜತೆ ತಕ್ಷಣದ ಸಂಬಂಧವನ್ನು ಕಂಡುಕೊಳ್ಳದೆ ಇರುತ್ತಿದ್ದರೆ; ಅಪೌರುಷೇಯದ ನೇರ ಸೇವೆಗೆ ಉದ್ದೇಶಿತವಾದ ಕೆಲಸ ಮಾತ್ರವೇ ಎಲ್ಲಾ ಪೃಥವೀ-ಬದ್ಧ ಮನುಕುಲಕ್ಕೂ ಉಪಯೋಗವಾಗುತ್ತದೆ.”
“ಇವು ಅತ್ಯಂತ ಅಪಾಯಕಾರಿಯೂ ನವೀನವೂ ಆದ ವಿಚಾರಗಳು, ವರ್ಜಿಲ್: ಇವು ದೇಶಕ್ಕೆ ಅವಹೇಳನಕಾರಿ.”
“ಅವುಗಳ ಮೂಲಕ ದೇಶವು ಒಂದು ರಾಜ್ಯವಾಗಿ ಪರಿಪೂರ್ಣಗೊಂಡೀತು, ಪ್ರಜೆಗಳ ಒಂದು ದೇಶವಿದ್ದುದು ಮನುಷ್ಯರ ಒಂದು ರಾಜ್ಯವಾಗಿ ಆದೀತು.”
“ನೀವು ದೇಶದ ರಚನೆಯನ್ನು ಪುಡಿ ಪುಡಿ ಮಾಡುತ್ತಿದ್ದೀರಿ, ಅದನ್ನೊಂದು ಆಕಾರ ರಹಿತ ಸಮಾನತೆಯಾಗಿ ಛಿದ್ರಗೊಳಿಸುತ್ತಿದ್ದೀರಿ, ನೀವದರ ಆಜ್ಞೆಗಳನ್ನು ಒಡೆದುಹಾಕಿ ಜನರ ಭದ್ರವಾದ ಬುನಾದಿಯನ್ನು ನಾಶಗೊಳಿಸುತ್ತಿದ್ದೀರಿ” (ಪು. 377).
ಕವಿ ವರ್ಜಿಲಿಗೆ ಸಾಯುವ ವಯಸ್ಸಲ್ಲದೆ ಇದ್ದರೂ, ಆರೋಗ್ಯವಿರದೆ, ತನ್ನ ಮಹಾಕಾವ್ಯವಾದ ಈನಿಡ್ ನ್ನು ನಿಜಕ್ಕೂ ಮುಗಿಸುವ ಮೊದಲೇ ಸತ್ತನೆಂದೂ, ಸಾಯುವ ವೇಳೆ ಆ ಕಾವ್ಯವನ್ನು ನಾಶಪಡಿಸಲು ಪಕ್ಕದಲ್ಲಿದ್ದವರನ್ನು ಕೋರಿದ್ದನೆಂದೂ ದಂತಕತೆಯೊಂದು ಹೇಳುತ್ತದೆ. ಅವನಿಗೆ ಯಾಕೆ ತನ್ನ ಕಾವ್ಯದ ಕುರಿತು ಅಷ್ಟು ಅಸಮಾಧಾನವಿತ್ತು? ಯಾರಿಗೂ ತಿಳಿಯದು.
ಈನಿಡ್ ನ ಆದ್ಯಂತ ವರ್ಜಿಲ್ ಸೀಸರನಲ್ಲಿ ಈನಿಯಾಸ್ ನನ್ನು ಗುರುತಿಸಿದ್ದಾನೆ, ಒಕ್ಟೇವಿಯಸ್ ನ ಸಾಧನೆಗಳಲ್ಲಿ ಅವನು ರೋಮಿನ ಸಂಸ್ಥಾಪನೆಯ ಕೀರ್ತಿಯನ್ನೂ ರೋಮನ್ ರಾಷ್ಟ್ರದ ಪುನರುದಯವನ್ನೂ ಕಂಡಿದ್ದಾನೆ. ಹೀಗೆ ಕಾವ್ಯ ಮತ್ತು ರಾಷ್ಟ್ರ ಒಂದೇ ಆಗಿವೆ. ಇದು – ಕಾವ್ಯವೇ ರಾಷ್ಟ್ರ ಎಂದು – ಗೊತ್ತಿರುತ್ತ ಒಕ್ಟೇವಿಯಸ್ ಕಾವ್ಯ ನಾಶವಾಗುವುದಕ್ಕೆ ಬಿಡಲಾರನು, ಬದಲು ರೋಮನ್ ಪ್ರಜೆಗಳ ಪರವಾಗಿ ಅದನ್ನು ಕಾಪಾಡಲು ಬಯಸುವನು. ಇದರರ್ಥ ಕವಿ ತನ್ನದೇ ಕೃತಿಯ ಮೇಲಿನ ಸ್ವಾಮ್ಯವನ್ನು ಕೃತಿಯಲ್ಲಿ ಆರಾಧನೆಗೊಂಡ ಇನ್ನೂ ಮಿಗಿಲಾದ ಶಕ್ತಿಯೊಂದಕ್ಕೆ, ಅರ್ಥಾತ್ ಸೀಸರನ ರೂಪದಲ್ಲಿ ಕೃತಿಯಲ್ಲಿ ಪೂಜೆಗೊಳ್ಳುವ ರಾಷ್ಟ್ರಶಕ್ತಿಗೆ, ಕಳೆದುಕೊಂಡಿದ್ದಾನೆ ಎಂದಾಯಿತು. ಈಗ ಒಂದಂತೂ ಹೆಚ್ಚೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ: ವರ್ಜಿಲ್ ತನ್ನ ಕಾವ್ಯವನ್ನು ಕೈಬಿಡುವುದು ಒಕ್ಟೇವಿಯಸ್ ಅದನ್ನು ಯಾವ ಕಾರಣಗಳಿಗೋಸ್ಕರ ಕಾಪಾಡಲು ಬಯಸುತ್ತಾನೋ ಅವೇ ಕಾರಣಗಳಿಗೆ –ಜನಾಂಗೀಯತೆ ಮತ್ತು ರಾಷ್ಟ್ರೀಯತೆಯ ನಡುವಣ ಸಮೀಕರಣ ಒಂದೆಡೆ, ಕೀರ್ತಿ ಮತ್ತು ಮಿಲಿಟರಿ ಪರಾಕ್ರಮಗಳ ನಡುವಣದ್ದು ಇನ್ನೊಂದೆಡೆ.
ಕಾದಂಬರಿಯ ಆರಂಭದಲ್ಲೇ ರಾಜನನ್ನು ಮತ್ತು ತನ್ನನ್ನೂ ಒಳಗೊಂಡ ರಾಜನ ಪರಿವಾರವನ್ನು ಸ್ವಾಗತಿಸಲು ಕಿನಾರೆಯಲ್ಲಿ ನೆರೆದ ಜನರ ಸಮೂಹ ಸನ್ನಿಯನ್ನು ಕಂಡು ವರ್ಜಿಲ್ ಅಸ್ವಸ್ಥನಾಗುತ್ತಾನೆ, ತನ್ನ ಇಡೀ ಕಾವ್ಯದಲ್ಲಿ ತಾನು ಸಮೂಹ ಕ್ರೌರ್ಯದ ಬಗ್ಗೆ ಏನನ್ನೂ ಹೇಳಲೇ ಇಲ್ಲವಲ್ಲ ಎಂದು ಅವನು ಚಿಂತಿತನಾಗುತ್ತಾನೆ. ಆಧುನಿಕ ಇತಿಹಾಸದತ್ತ ಕಡೆಗಣ್ಣು ಹಾಯಿಸಿದರೆ ನಮಗೆ ಗೊತ್ತಾಗುತ್ತದೆ, ಬ್ರಾಖ್ ಇಲ್ಲಿ ಏನನ್ನು ಉದ್ದೇಶಿಸುತ್ತಿದ್ದಾನೆ ಎನ್ನುವುದು – ಎಲ್ಲಾ ತರದ ಸಮೂಹ ಸನ್ನಿಯನ್ನು– ಜನಾಂಗ, ಧರ್ಮ, ರಾಷ್ಟ್ರೀಯತೆಯೇ ಮುಂತಾದ ಐಡಿಯಾಲಜಿಗಳು ಬಡಿದೆಬ್ಬಿಸುವಂಥವನ್ನು. ಲೂಸಿಯಸ್ ನ ಜತೆಗಿನ ಒಂದು ವಾದದಲ್ಲಿ ವರ್ಜಿಲ್ ಅನ್ನುತ್ತಾನೆ: “ಅನುಮೋದನೆಯಿಲ್ಲದೆ ಸೌಂದರ್ಯ ಬದುಕಲಾರದು, ಸತ್ಯವು ಕೈಚಪ್ಪಾಳೆಗೆ ಅಭೇದ್ಯವಾಗಿರುತ್ತದೆ” (ಪು. 247).
ರಾಜನ ಹತ್ತಿರದಿಂದ ವರ್ಜಿಲ್ ಎರಡು ಉಪಕಾರಗಳನ್ನು ಅಪೇಕ್ಷಿಸುತ್ತಾನೆ: ತನ್ನ ಜೀತದ ಹುಡುಗನ ಬಿಡುಗಡೆ ಮತ್ತು ಸೋಲಿಸಲ್ಪಟ್ಟವರಿಗೆ ಕ್ಷಮಾದಾನ – ಸೋಲಿಸಲ್ಪಟ್ಟವರಿಗೆ ದಯಾಮಯವಾಗಿರಿ ಹಾಗೂ ನಿಮ್ಮ ದರ್ಪವನ್ನು ಆ ಉದ್ದೇಶದ ಕಡೆಗೆ ಪಳಗಿಸಿರಿ” (ಪು. 396). ಇವೆರಡೂ ಭವಿಷ್ಯದ ಕಡೆ ಬೊಟ್ಟು ಮಾಡುತ್ತವೆ– ಜೀತದ ನಿರ್ಮೂಲನ ಮತ್ತು ರಕ್ತಕ್ಕೆ ರಕ್ತ ಎಂಬ ಪ್ರತೀಕಾರ ತತ್ವ. ಈನಿಡ್ ಹೇಗೆ ಕೊನೆಗೊಳ್ಳುತ್ತದೆ ಎನ್ನುವುದನ್ನು ನೆನಪು ಮಾಡಿಕೊಳ್ಳೋಣ: ಟರ್ನಸ್ ನೆಲದ ಮೇಲೆ ಬಿದ್ದಿದ್ದಾನೆ. ಈನಿಯಸ್ ಗೆ ಗೊತ್ತಿಲ್ಲ ಅವನನ್ನು ಕೊಲ್ಲಬೇಕೋ ಬೇಡವೋ ಎಂದು; ಆಗ ಅವನ ಗಮನಕ್ಕೆ ಬರುತ್ತದೆ ಆತ ತನ್ನ (ಈನಿಯಸ್ನ) ಮಿತ್ರನಾದ ಪಾಲಸ್ ನನ್ನ ಕೊಂದುದು ಮಾತ್ರವೇ ಅಲ್ಲ, ಅವನ ವಿಜಯ ಸಂಕೇತವನ್ನೂ (ಟ್ರೋಫಿ) ಕಸಿದುಕೊಂಡ ಎನ್ನುವುದು. ಕೋಪ ಉದ್ರೇಕಗೊಂಡ ಆ ನಿಮಿಷದಲ್ಲಿ ಈನಿಯಾಸ್ ತನ್ನ ಖಡ್ಗದ ಮೊನೆಯನ್ನು ಟರ್ನಸ್ ನ ಎದೆಗೆ ಊರುತ್ತಾನೆ. ಒಕ್ಟೇವಿಯನ್ ‘ಬದಲಾದ ಯುಗಧರ್ಮ’ವನ್ನು ಪ್ರತಿನಿಧೀಕರಿಸಲು ವರ್ಜಿಲ್ ಬಯಸುತ್ತಾನೆ.
ಆದರೆ ಇದು ಸಂದಿಗ್ಧತೆಯೊಂದನ್ನು ಎಬ್ಬಿಸುತ್ತದೆ: ಈನಿಡ್ ಅನ್ನು ಹೊತ್ತಿ ಉರಿಸಬೇಕು, ಯಾಕೆಂದರೆ ಅದು ಹಳೆಯ ಜಗತ್ತಿಗೆ ಸೇರಿದ್ದು ಎಂಬ ವರ್ಜಿಲನ ಅಭಿಪ್ರಾಯವನ್ನು ಕಾದಂಬರಿ ಎತ್ತಿ ಹಿಡಿಯುತ್ತದೆಯೇ, ಅಥವಾ ಈ ಬ್ರಾಖ್ ನ ಈ ಕೃತಿಗೆ ಬೇರೇನಾದರೂ ಅರ್ಥವಿದೆಯೇ? ಈನಿಡ್ ಅನ್ನು ನಾಶಗೊಳಿಸಿದರೆ ಅದು ಸಾಂಸ್ಕೃತಿಕ ಲೋಕಕ್ಕೆ ನಷ್ಟ ಎನ್ನುವುದರಲ್ಲಿ ಎರಡು ಮಾತಿರಲಾರದು; ಆದ್ದರಿಂದ ವರ್ಜಿಲನ ಈ ಕೃತಿದಹನದ ಬಯಕೆಯನ್ನು ಕಾದಂಬರಿ ಪುರಸ್ಕರಿಸುತ್ತದೆ ಎನ್ನುವಂತಿಲ್ಲ. ಆದರೆ ವರ್ಜಿಲ್ ನೀಡುವ ಕಾರಣಗಳನ್ನು ಓದುಗರಾದ ನಾವು ವಾದರಹಿತವಾಗಿ ತತ್ವಶಃ ಒಪ್ಪುತ್ತೇವೆ ಯಾಕೆ? ಗತಕಾಲದ ಇತಿಹಾಸದ ಕುರಿತು ಕಾದಂಬರಿ ಹೆಚ್ಚು ಹರವಿನ ದೃಷ್ಟಿಕೋನವನ್ನು ತೆಗೆದುಕೊಳ್ಳುತ್ತದೆ ಎಂದು ನನಗನಿಸುತ್ತದೆ. ಕಾಲ ಬದಲಾಗುತ್ತದೆ ಎಂದ ಮಾತ್ರಕ್ಕೆ ಗತದ ನೆನಪನ್ನು ನಾಶಮಾಡಬೇಕೆಂದಲ್ಲ, ಅದರ ಸತ್ಯವನ್ನು ಬಿಡಿಸಿಕೊಳ್ಳಬೇಕು ಎಂದು. ಇತಿಹಾಸವೆಂದರೆ ಸತ್ಯದ ಮರುಗಳಿಕೆ. ಕಾದಂಬರಿ ಬಯಸುವುದು ಈನಿಡ್ ನ ಐತಿಹಾಸಿಕತೆಯನ್ನು. “ವರ್ಜಿಲನ ಮರಣ” ಅದರ ವಿವರಣೆಗಳಲ್ಲಿ ಬಹಳ ಸಾಂದ್ರವಾದುದು – ಇದಕ್ಕೆ ಅದರ ಆರಂಭಿಕ ಪ್ಯಾರಾಗಳೇ ಉದಾಹರಣೆ. ಈ ಪ್ಯಾರಾಗಳಲ್ಲಿ ರೋಮನ್ ನೌಕಾಪಡೆ ಬ್ರುಂಡೀಸಿಯಮ್ ರೇವಿಗೆ ಬರುವ ಗೃಹಾಗಮನವನ್ನು ವಿವರಿಸಲಾಗಿದೆ. ಈ ವೇಳೆ ಕಣ್ಣಿಗೆಸೆಯುವ ಭೂದೃಶ್ಯವನ್ನು ವರ್ಜಿಲನ ದೃಷ್ಟಿಕೋನದಿಂದ ಕಾಣಿಸಲಾಗಿದೆ, ಹಾಗೂ ವಿವರಣೆ ಹಲವಾರು ದೀರ್ಘ ಪ್ಯಾರಾಗಳ ಉದ್ದಕ್ಕೂ ಸಾಗುತ್ತದೆ, ಪ್ರತಿ ಪ್ಯಾರಾದಲ್ಲೂ ಬಹು ದೀರ್ಘ ವಾಕ್ಯಗಳು. ಈ ಒಂದು ಉದಾಹರಣೆಯನ್ನು ನೋಡಿ:
Oh, unbridled became the desire to stretch the hand toward those still so distant shores, to reach into the darkness of the shrubbery, to feel the earth-born leaf between his fingers, to hold it tightly there forevermore—, the wish quivered in his hands, quivered in his fingers with uncontrollable desire toward the leafy branches, toward the flexible leaf-stems, toward the sharp-soft leaf edges, toward the firm living leaf-flesh, yearningly he felt it when he closed his eyes, and it was almost a sensual desire, sensually simple and grasping like his masculine, raw-boned peasant’s fist, sensually savoring and sensitive like the slender-wristed nervousness of this same hand…” (p.18).
‘ಓಹ್, ಅದಮ್ಯವಾಯಿತು, ಕೈಯನ್ನು ದೂರದ ಆ ತಟಸ್ಥ ತೀರಗಳತ್ತಚಾಚಬೇಕೆನ್ನುವ ಬಯಕೆ, ಆ ಅಂಚಿನ ಪೊದೆಗಳ ಕತ್ತಲಿನತ್ತ ಕೈಹಾಕುವ,
ಭೂಜನ್ಯ ಎಲೆಯನ್ನು ತನ್ನ ಬೆರಳುಗಳ ಸಂದಿಯಲ್ಲಿ ತಡವುವ, ಯಾವತ್ತೂ ಅದನ್ನು ಗಟ್ಟಿಯಾಗಿ ಇನ್ನಷ್ಟು ಹಿಡಿದುಕೊಂಡೇ ಇರಬೇಕೆನ್ನುವ ಆಸೆ – , ಬಯಕೆಯಾಗಿ ಅವನ ಹಸ್ತಗಳಲ್ಲಿ ನಡುಗಿತು, ಅಂಗುಲಿಗಳಲ್ಲಿ ನಡುಗಿತು, ಎಲೆಭರಿತ ಕಾಂಡಗಳ ಮತ್ತು ಬಳುಕುವ ಎಲೆತೊಟ್ಟುಗಳ ಮತ್ತು ಮಿದು-ಹರಿತವಾದ ಎಲೆಯಂಚುಗಳ ಮತ್ತು
ಆ ಭದ್ರ ಜೀವಂತ ಪರ್ಣಮಾಂಸಲದ ಕಡೆಗಾಗಿ, ನಿಯಂತ್ರಣ ರಹಿತವಾಗಿ, ಆರ್ತವಾಗಿ ಅವನದನ್ನು ಅನುಭವಿಸಿದ, ತನ್ನ ಕಣ್ಣುಗಳನ್ನು ಮುಚ್ಚಿದಾಗ, ಅದೊಂದು ಐಂದ್ರಿಯ ಬಯಕೆಯಂತೆಯೇ ಇತ್ತು,
ಐಂದ್ರಿಕವಾಗಿ ಸರಳವಾಗಿ, ಮತ್ತು ಬರಸೆಳೆಯುವ ಮಟ್ಟಿಗೆ ತನ್ನ ಒರಟು ಮೂಳೆಯ ರೈತ ಮುಷ್ಟಿಯ ಪೌರುಷವಾಗಿ, ಐಂದ್ರಿಕವಾಗಿ ಸವಿಯುತ್ತ,
ಇದೇ ಕೈಯ ಕೋಮಲ ಮಣಿಕಟ್ಟಿನ ಅದುರುವಿಕೆಯಂತೆ
ಸಂವೇದನಾಶೀಲವಾಗಿ ….’(ಪು. 18).
ಅನಂತರ ಬರುವುದು ಕೈಯ ಈ ವಿಚಿತ್ರ ನಾಡಿಬಡಿತದ ಬಗ್ಗೆ ಪುಟ ಉದ್ದದ ಒಂದು ಪ್ಯಾರಾಗ್ರಾಫು.
ಇಂಥ ಪುಸ್ತಕವನ್ನು ಬಹು ಹೊತ್ತಿನ ವರೆಗೆ ನಿರಂತರವಾಗಿ ಓದುವುದಕ್ಕೆ ಸಾಧ್ಯವಿಲ್ಲ. ಒಂದು ಬಾರಿಗೆ ಕೆಲವು ಪುಟಗಳನ್ನಷ್ಟೇ ಓದುವುದು ಸಾಧ್ಯ. ಒಂದು ಕತೆ ಇದೆಯಾದರೂ, ನಿಮಗೆ ಬೇಗನೆ ಗೊತ್ತಾಗುತ್ತದೆ ನಿಮ್ಮನ್ನು ಮುಂದಕ್ಕೆ ಒಯ್ಯುವುದು ಕತೆಯಲ್ಲ ಎನ್ನುವುದು, ಕತೆಗಿಂತ ಮಿಗಿಲಾದ ಹೆದ್ದೆರೆಯಂತೆ ಸೆಳೆಯುವ ಅದಾವುದೋ ತನಗೆ ತಾನೇ ಆದ ಇನ್ನೊಂದು ನಿರೂಪಣಾಶಕ್ತಿಯಿದೆ. ಕಾದಂಬರಿಯ ಮಹಾ ವ್ಯಾಪ್ತಿಯ ಕ್ಯಾನ್ವಾಸಿನ ಮೇಲೆ ಅದೊಂದು ಮೇಳವಾದ್ಯವಾಗುತ್ತದೆ, ತೈಲಚಿತ್ರವಾಗುತ್ತದೆ. ಕಾದಂಬರಿಯಲ್ಲಿ ನಾಲ್ಕು ಭಾಗಗಳಿವೆ: ಜಲ – ಆಗಮನ; ಅಗ್ನಿ –ಅವರೋಹಣ; ನೆಲ – ನಿರೀಕ್ಷೆ; ಮತ್ತು ಗಾಳಿ – ಮನೆಗೆ ಮರಳುವಿಕೆ. ಇದು ಕಾದಂಬರಿಗೆ ಚತುಷ್ಕದ ಆಕೃತಿಯೊಂದನ್ನು ಕೊಡುತ್ತದೆ: (1) ವರ್ಜಿಲನ ಇಟೆಲಿ ಆಗಮನ, (2) ನರಕದ ಕುರಿತಾದ ಅವನ ಕರಾಳ ವಿಚಾರಗಳು, (3) ಜಗತ್ತಿನ ಕುರಿತಾದ ಅವನ ಚಿಂತನೆಗಳು, ಅದರಲ್ಲೂ ಮುಖ್ಯವಾಗಿ ಸೀಸರನ ಜೊತೆಗಿನ ಅವನಸಂಭಾಷಣೆ, ಮತ್ತು ಭವಿಷ್ಯದ ಬಗೆಗಿನ ಅವನ (ವರ್ಜಿಲನ) ದರ್ಶನ, ಮತ್ತು ಕೊನೆಯದಾಗಿ (4) ಶೂನ್ಯದ ಕಡೆಗೆ ಅವನ ನಿಷ್ಕ್ರಮಣ, ಅರ್ಥಾತ್ ಅವನ ಸಾವು. ಆದರೆ ಕೃತಿಯ ಓದು ಮಾತ್ರ ಭರತ ಇಳಿತಗಳ, ಅಳುಕಾಡುವ, ತುಳುಕಾಡುವ, ನಿರಂತರ ಚಲನೆಯ ಇಡಿಯಾದ ಸಾಗರಾನುಭವ, ‘ಸಾಗರಿಕ’ವಾಗುತ್ತದೆ (ಓಶಿಯಾನಿಕ್).
ಕಾದಂಬರಿಯನ್ನು ಈ ರೀತಿ ಕಲ್ಪಿಸಿರುತ್ತ, ಇದನ್ನು ಮತ್ತೆ ಮತ್ತೆ ಓದುವುದು ಸಾಧ್ಯ. ನಿಜ, ಅದು ಸುಸ್ತಾಗಿಸುತ್ತದೆ, ಆದರೆ ಎಂದೂ ಬೋರೆನಿಸುವುದಿಲ್ಲ. ವಾಸ್ತವದಲ್ಲಿ ಅದು ಪುನಃ ಪುನಃ ಓದನ್ನು ಬಯಸುತ್ತದೆ. ಪ್ರತಿಯೊಂದು ಪುಟದಲ್ಲೂ ಗಹನವಾದುದೇನೋ ಇರುತ್ತದೆ. ಪ್ರತಿ ಭಾಗವೂ ಸಮಸ್ತದ ಅಂಗವಾಗಿದ್ದೂ ಸ್ವಾಯತ್ತವೂ ಆಗಿರುವುದರಿಂದ ಯಾವತ್ತು ಬೇಕಾದರೂ ಓದುಗರು ಬೇಕಾದಲ್ಲಿಗೆ ಮರಳಬಹುದಾಗಿದೆ. ಈ ಅರ್ಥದಲ್ಲಿ ಕಾದಂಬರಿ (“ವರ್ಜಿಲನ ಮರಣ”) ಪೌಂಡ್ನ “ಕ್ಯಾಂಟೋಸ್”, ಜಾಯ್ಸ್ನ “ಯೂಲಿಸಿಸ್” ಮತ್ತು “ಫಿನೆಗನ್ಸ್ ವೇಕ್” ಮುಂತಾದ ದೈತ್ಯ ಕೃತಿಗಳ ಜೊತೆ ಹೋಲಿಕೆಗೆ ಅರ್ಹವಾದುದು. ಅಲ್ಲಿ ಯಾವತ್ತೂ ಹೊಸ ಶೋಧನೆಗೆ, ಹೊಸ ಬೆಳಕಿಗೆ ಅವಕಾಶಗಳಿವೆ, ಇಂಥ ಕೃತಿಗಳ ಕ್ಲಿಷ್ಟತೆಯೇ ಒಂದು ಆಕರ್ಷಣೆ.
ಇನ್ನು ದ್ವಿತೀಯ ಮಹಾಯುದ್ಧ ಕಾಲದಲ್ಲಿ ರಚಿತವಾದ ಈ ಕೃತಿ ಹೇಗೆ ಕಾಲಿಕವೂ ಸರ್ವಕಾಲಿಕವೂ ಆಗಿದೆ ಎಂಬ ವಿಚಾರವನ್ನು ನಾನು ಚರ್ಚಿಸಬೇಕಾದ ಅಗತ್ಯವಿಲ್ಲ.
ಟಿಪ್ಪಣಿಗಳು:
ಅಯೋವಾದ ಇಂಟರ್ನ್ಯಾಶನಲ್ ರೈಟರ್ಸ್ ವರ್ಕ್ಶಾಪಿನಲ್ಲಿ, ಬಹುಶಃ 2004/5ರಲ್ಲಿ, ನೀಡಿದ ಇಂಗ್ಲಿಷ್ ಭಾಷಣದ ಕನ್ನಡ ಅನುವಾದ.
ಹರ್ಮನ್ ಬ್ರಾಖ್ (1886 – 1951) ಆಸ್ಟ್ರಿಯನ್ ಜರ್ಮನ್ ಯೆಹೂದಿ ಕಾದಂಬರಿಕಾರ. ನಾಝಿಗಳ ಕಾಲದಲ್ಲಿ ಇಂಗ್ಲೆಂಡ್, ಯು. ಎಸ್. ಎ. ಗಳಲ್ಲಿ ಆಶ್ರಯ ಪಡೆದ. The Death of Virgil ಮೂಲ ಜರ್ಮನ್ ನಲ್ಲಿ ಮತ್ತು ಇಂಗ್ಲಿಷ್ ಅನುವಾದದಲ್ಲಿ 1945ರಲ್ಲಿ ಏಕ ಕಾಲಕ್ಕೆ ಪ್ರಕಟವಾಯಿತು.
All page references are to The Death of Virgil, trans. Jean Starr Untermeyer. New York: Grosset & Dunlap, 1965.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.