ಸ್ತ್ರೀ ಶೋಷಣೆಯ ಕುರಿತು ಬಹಳ ಶಕ್ತವಾಗಿ ಬರೆದರೂ ನಿಜ ಜೀವನದಲ್ಲಿ ದೈವಿಕವಾದ ಪುರುಷ ಪ್ರೇಮಕ್ಕೆ ಮೀರಾಳಂತೆ, ರಾಧೆಯಂತೆ ಹಾತೊರೆದು ಹಲವು ಜೇಮ್ಸುಬಾಂಡುಗಳಿಂದ ಸತತವಾಗಿ ಯಾಮಾರಿಸಿಕೊಳ್ಳುತ್ತಲೇ ಇರುತ್ತಾಳೆ. ನಾನು ಅವಳಿ ನೀನು ಜವಳಿ ಎಂದು ನಾವಿಬ್ಬರೂ ನಮ್ಮ ನಮ್ಮ ಭಗ್ನ ಪ್ರೇಮಗಳ ಕುರಿತು, ಹುಚ್ಚು ಪ್ರೇಮದಾಟಗಳ ಕುರಿತು ಗಂಟೆಗಟ್ಟಲೆ ಹರಟುತ್ತಾ ಉರುಳುರುಳಿ ಬಿದ್ದು ನಗುತ್ತಿರುತ್ತೇವೆ. ಮನುಷ್ಯರ ಪ್ರೇಮ, ಪ್ರಾಣಿಗಳ ಪ್ರೇಮ, ಜಲಚರಗಳ ಪ್ರೇಮ, ಹೂವು ಮತ್ತು ದುಂಬಿಯ ಪ್ರೇಮ, ಕಡಲು ಮತ್ತು ಚಂದ್ರಮನ ಪ್ರೇಮ, ತಾರೆಗಳ ಒಂಟಿತನ, ಆಕಾಶದ ಅನೂಹ್ಯ ಏಕಾಂತ ಇತ್ಯಾದಿಗಳ ಕುರಿತೂ ಸಿಗರೇಟಿನ ಬೂದಿ ಉದುರಿಸುತ್ತಾ ಗಂಟೆಗಟ್ಟಲೆ ಮಾತಾಡಿಕೊಂಡು ಕೂರುತ್ತೇವೆ.
ಅಬ್ದುಲ್ ರಶೀದ್ ಬರೆಯುವ ‘ಲಕ್ಷದ್ವೀಪ ಡೈರಿ’ಯ ಹನ್ನೆರಡನೆಯ ಕಂತು
‘ನಿಜ ಜೀವನದಲ್ಲಿ ನನ್ನನ್ನು ಯಾಮಾರಿಸುವ ನಿನ್ನ ಚಟವನ್ನು ಯಥಾವತ್ತಾಗಿ ಬರಹದಲ್ಲೂ ಭಟ್ಟಿ ಇಳಿಸುತ್ತಿರುವೆಯಲ್ಲ ಕೆಟ್ಟ ಗಂಡಸೇ… ಅರಬೀ ಕಡಲಿನ ದೊಡ್ಡ ಮೊಸಳೆಯೊಂದು ನಿನ್ನನ್ನೂ ಯಾಮಾರಿಸಿ ಹೊಟ್ಟೆಯೊಳಗಿಟ್ಟುಕೊಂಡು ನನ್ನನ್ನು ಈ ಪರದಾಟಗಳಿಂದ ರಕ್ಷಿಸಬಾರದೇ’ ಎಂದು ಆಕೆ ಒಂದು ಕಣ್ಣಿನಿಂದ ರೋಷವನ್ನೂ, ಇನ್ನೊಂದು ಕಣ್ಣಿನಿಂದ ಪ್ರೇಮವನ್ನೂ ನಟಿಸುತ್ತಾ ಸುಳ್ಳು ಕಣ್ಣೀರು ಹಾಕುತ್ತಿದ್ದಳು. ಕಡಲಿನಲ್ಲಿ ಮೊಸಳೆಗಳು ಇರುವುದಿಲ್ಲ ಎಂಬುದನ್ನೂ ಅರಿಯದ ಕನ್ನಡದ ಅಮಾಯಕ ಪ್ರತಿಭೆ!
ಬಹಳಷ್ಟು ಕವಿತೆಗಳಲ್ಲಿ ಗಂಡಸನ್ನು ಅಕ್ಟೋಪಸ್ಸಿಗೆ ಹೋಲಿಸಿ ಅದರ ಕಬಂದ ಬಾಹುಗಳಲ್ಲಿ ನಲುಗುವ ಹೆಣ್ಣಿನ ಅವ್ಯಕ್ತ ನೋವುಗಳನ್ನು ಬಹಳ ಶಕ್ತಿಯುತವಾಗಿ ತನ್ನ ಕವಿತೆಗಳಲ್ಲಿ ಬರೆದಿರುವ ಕವಯತ್ರಿ. ಆದರೆ ನಾನು ದೇಶಾಂತರ ವಾಸಿಯಾಗಿ, ಈ ದ್ವೀಪವನ್ನು ತಲುಪಿ ಇಲ್ಲಿನ ಕಡಲ ಒಡಲೊಳಗೂ ಇಳಿದು, ಒಳಗೆ ಸಾಕಷ್ಟು ಸಮಯವನ್ನೂ ಕಳೆದು, ಅಚಾನಕ್ಕಾಗಿ ಅಕ್ಟೋಪಸ್ಸುಗಳನ್ನು ಭೇಟೆಯಾಡುವವರ ಜೊತೆ ಬೇಟೆಗೂ ತೆರಳಿ, ಬೇಟೆಯಾದ ಅಕ್ಟೋಪಸ್ಸುಗಳನ್ನು ಅಡುಗೆ ಮನೆಗೆ ತಂದು ಎಣ್ಣೆಯಲ್ಲಿ ಹುರಿದು ಅವುಗಳ ಮನೋಹರವಾದ ರುಚಿಯನ್ನೂ ಸವಿದು ಬಿಟ್ಟಿದ್ದೆ.
‘ನೀನು ಬರೆದಿರುವ ಹಾಗೆ ಅಕ್ಟೋಪಸ್ಸುಗಳು ಅಂತಹ ದುಷ್ಟ ಜೀವಿಗಳೇನೂ ಅಲ್ಲ. ಅವುಗಳು ಬಹಳ ಸೌಮ್ಯ ಸ್ವಭಾವದ, ಸಂಕೋಚದ, ತಮ್ಮಷ್ಟಕ್ಕೆ ತಾವು ಕಡಲೊಳಗೆ ಕನಸು ಕಾಣುತ್ತಾ ಬದುಕುವ ಒಂಟಿ ಜೀವಿಗಳು. ಪ್ರೇಮಿಸುವ ಸಮಯದಲ್ಲಿ ಮಾತ್ರ ಒಂದನ್ನೊಂದು ಸ್ವಲ್ಪ ಸಮಯ ರಮಿಸುತ್ತವೆ ಅಷ್ಟೇ. ಪ್ರೇಮಿಸುವ ಸಮಯದಲ್ಲೂ ಅಷ್ಟೇ, ಗಂಡು ಅಕ್ಟೋಪಸ್ಸು ಬಹಳ ಜಾಗರೂಕವಾಗಿರುತ್ತವೆ. ಏಕೆಂದರೆ ಪ್ರೇಮಕ್ರಿಯೆಯ ನಂತರ ಹೆಣ್ಣು ಅಕ್ಟೋಪಸ್ಸು ಗಂಡು ಅಕ್ಟೋಪಸ್ಸನ್ನು ತಿನ್ನುತ್ತದೆ. ಏಕೆಂದರೆ ಪ್ರೇಮಿಸಿದ ನಂತರ ಆಕೆಗೆ ಭಯಂಕರ ಹಸಿವಾಗುತ್ತದೆ. ಮೊಟ್ಟೆಯಿಡಲು ಆಕೆಗೆ ಶಕ್ತಿ ಬೇಕಾಗುತ್ತದೆ. ಹಾಗಾಗಿ ಹೆಣ್ಣು ಅಕ್ಟೋಪಸ್ಸು ಗಂಡು ಅಕ್ಟೋಪಸ್ಸನ್ನು ನುಂಗಬೇಕಾಗುತ್ತದೆ. ಎಲ್ಲೋ ಕೆಲವು ಗಂಡುಗಳು ಮಾತ್ರ ಬಹಳ ಜಾಗರೂಕತೆಯಿಂದ ತಮ್ಮ ಮೋಹನಬಾಹುವನ್ನು ಅನತಿ ದೂರದಿಂದಲೇ ಹೆಣ್ಣಿನ ದೇಹಕ್ಕೆ ಅತಿ ಕ್ಲುಪ್ತವಾಗಿ ಸೋಕಿಸಿ, ಗರ್ಭವತಿ ಮಾಡಿ ಪಲಾಯನ ಮೂಡುತ್ತವೆ. ಆಕೆಯ ಸ್ಪರ್ಶಕ್ಕೆ ಹಾತೊರೆದು ಬಳಿಯಲ್ಲೇನಾದರೂ ಉಳಿದು ಬಿಟ್ಟರೆ ಆಕೆಗೇ ಆಹಾರವಾಗಬೇಕಾಗುತ್ತದೆ. ಹಾಗಾಗಿ ನಶ್ವರವೂ, ಅಲ್ಪಕಾಲೀನವೂ ಆದ ಅಕ್ಟೋಪಸ್ಸಿನ ಕುರಿತು ಕನ್ನಡ ಕಾವ್ಯದಲ್ಲಿ ನೀನು ಬರೆದಿರುವ ಅಪದ್ದವಾದ ಸಾಲುಗಳನ್ನು ಮುಂದಿನ ಆವೃತ್ತಿಯಲ್ಲಾದರೂ ಬದಲಿಸಬೇಕಾಗುತ್ತದೆ, ಇಲ್ಲದಿದ್ದರೆ ಲಿಂಗ ಪಕ್ಷಪಾತಿಯಾದ ನಿನ್ನ ಕಾವ್ಯವನ್ನು ನಾನು ದ್ವೇಷಿಸಬೇಕಾಗುತ್ತದೆ’ ಎಂದು ದೂರದಿಂದಲೇ ಆಕೆಯ ಚಂದದ ಕಣ್ಣೀರನ್ನು ಒರೆಸಲು ನಾನು ಪ್ರಯತ್ನಿಸುತ್ತಿದ್ದೆ.
ಆಕೆ ಅಮಾಯಕಿ. ಸ್ತ್ರೀ ಶೋಷಣೆಯ ಕುರಿತು ಬಹಳ ಶಕ್ತವಾಗಿ ಬರೆದರೂ ನಿಜ ಜೀವನದಲ್ಲಿ ದೈವಿಕವಾದ ಪುರುಷ ಪ್ರೇಮಕ್ಕೆ ಮೀರಾಳಂತೆ, ರಾಧೆಯಂತೆ ಹಾತೊರೆದು ಹಲವು ಜೇಮ್ಸುಬಾಂಡುಗಳಿಂದ ಸತತವಾಗಿ ಯಾಮಾರಿಸಿಕೊಳ್ಳುತ್ತಲೇ ಇರುತ್ತಾಳೆ. ಒಂದು ತರಹ ನನ್ನ ಹಾಗೆಯೇ ಇರುವವಳು. ನಾನು ಅವಳಿ ನೀನು ಜವಳಿ ಎಂದು ನಾವಿಬ್ಬರೂ ನಮ್ಮ ನಮ್ಮ ಭಗ್ನ ಪ್ರೇಮಗಳ ಕುರಿತು, ಹುಚ್ಚು ಪ್ರೇಮದಾಟಗಳ ಕುರಿತು ಗಂಟೆಗಟ್ಟಲೆ ಹರಟುತ್ತಾ ಉರುಳುರುಳಿ ಬಿದ್ದು ನಗುತ್ತಿರುತ್ತೇವೆ. ಮನುಷ್ಯರ ಪ್ರೇಮ, ಪ್ರಾಣಿಗಳ ಪ್ರೇಮ, ಜಲಚರಗಳ ಪ್ರೇಮ, ಹೂವು ಮತ್ತು ದುಂಬಿಯ ಪ್ರೇಮ, ಕಡಲು ಮತ್ತು ಚಂದ್ರಮನ ಪ್ರೇಮ, ತಾರೆಗಳ ಒಂಟಿತನ, ಆಕಾಶದ ಅನೂಹ್ಯ ಏಕಾಂತ ಇತ್ಯಾದಿಗಳ ಕುರಿತೂ ಸಿಗರೇಟಿನ ಬೂದಿ ಉದುರಿಸುತ್ತಾ ಗಂಟೆಗಟ್ಟಲೆ ಮಾತಾಡಿಕೊಂಡು ಕೂರುತ್ತೇವೆ. ನಾವಿಬ್ಬರು ಒಬ್ಬರನ್ನೊಬ್ಬರು ಪ್ರೇಮಿಸುತ್ತೇವಾ ಎಂದು ಕೇಳಿಕೊಂಡು ಸಾಧ್ಯವೇ ಇಲ್ಲ ಎಂದು ಆಕಾಶಕ್ಕೆ ಕೇಳಿಸುವಂತೆ ಏಕಕಂಠದಿಂದ ಇಬ್ಬರೂ ಉತ್ತರಿಸುತ್ತೇವೆ. ನಾವಿಬ್ಬರೂ ಒಬ್ಬರನ್ನೊಬ್ಬರು ದ್ವೇಷಿಸುತ್ತೇವೆ ಎಂದು ನಂಬಿಕೊಂಡು ಒಬ್ಬರನ್ನೊಬ್ಬರು ಅಗಲಲೂ ಆಗದೆ ಎರಡು ಗಂಡುಗೂಳಿಗಳಂತೆ ಬದುಕುತ್ತಿದ್ದೇವೆ.
ಏಕಾಂತದಲ್ಲಿ ಬದುಕುವುದು ನನ್ನ ಜನ್ಮಸಿದ್ಧ ಹಕ್ಕು ಎಂದು ನಾನೂ ನಿನ್ನ ಏಕಾಂತವನ್ನು ಭಗ್ನಗೊಳಿಸುವ ಹಕ್ಕು ನನ್ನದೊಬ್ಬಳದು ಮಾತ್ರ ಎಂದು ಅವಳೂ ನಂಬಿಕೊಂಡಿದ್ದೇವೆ. ಏಕಾಂತವೂ ಅಸಹನೀಯವಾದಾಗ ಎಲ್ಲೋ ಹೇಗೋ ಜಗಳವಾಡಲು ತಾವು ಮಾಡಿಕೊಂಡು ಮತ್ತೆ ರಂಪ ಎಬ್ಬಿಸಿಕೊಳ್ಳುತ್ತೇವೆ.
ಹಾಗೆ ನೋಡಿದರೆ ನಾನು ದೇಶಾಂತರ ಕೈಗೊಂಡು ಹವಳ ದ್ವೀಪವೊಂದರಲ್ಲಿ ಅಜ್ಞಾತವಾಸಿಯಾಗಲು ಹಲವು ಕಾರಣಗಳಿವೆ. ಅವುಗಳಲ್ಲಿ ಈಕೆಯೂ ಒಂದು. ಮೈಮೇಲೆ ಒಂದು ಉಡದಾರ ಅಂಟಿಕೊಂಡರೂ ಅನ್ಯಜೀವಿಯೊಂದು ಆತ್ಮವನ್ನು ಹೊಕ್ಕಿರುವಂತೆ ಕಳವಳ ಪಡುವ ನಾನು ನನಗೆ ಗೊತ್ತಿಲ್ಲದೆಯೇ ಹಲವರ ಉದರದೊಳಗೆ ಕಾರ್ಕೋಟಕದಂತೆ ಹಾಸು ಹೊಕ್ಕಾಗಿ ವ್ಯಾಪಿಸಿರುವೆನಲ್ಲಾ ಎಂದು ಅನಿಸಲು ತೊಡಗಿ ಪಿಚ್ಚೆನಿಸಿತ್ತು. ಹಲವು ಅವತಾರಗಳಲ್ಲಿ ಅವರವರ ಲೋಕದಲ್ಲಿ ಮೈಮರೆತಿರುವವರ ಸೆರಗನ್ನು ರಚ್ಚೆ ಹಿಡಿದ ಬಾಲಕನ ಹಾಗೆ ಹಿಡಿದು ಕಂಗಾಲು ಮಾಡುವ ನಾನು, ಏಕಾಂತ ಬೇಕಾದಾಗ ನನ್ನಿಷ್ಟದ ಮಡುವೊಳಕ್ಕೆ ಹೊಕ್ಕುಬಿಡುವುದು, ಹೊರಬಂದು ಮತ್ತೆ ಅವರನ್ನು ಕಾಡಿಸುವುದು ಇನ್ನು ಸಾಕು ಅನಿಸಿಬಿಟ್ಟಿತ್ತು. ಜೊತೆಗೆ ಬಾಲಕನಾಗಿರುವಾಗಿನಿಂದಲೇ ಕಾಡುತ್ತಿರುವ ಬಾಲ್ಯಕಾಲದ ಮಹಾನುಭಾವರ ಜೀವಿತ ಕಥೆಗಳು. ಎಲ್ಲ ನೋವುಗಳಿಗೂ ನನ್ನ ಪಿಂಗಾಣಿ ತಟ್ಟೆಯಲ್ಲಿ ಪರಿಹಾರವಿದೆ ಎಂದು ಬೆಳ್ಳಗಿನ ಪಿಂಗಾಣಿ ಬಟ್ಟಲಿನಲ್ಲಿ ಮಸಿಯಿಂದ ಅರಬಿ ಅಕ್ಷರಗಳನ್ನು ಬರೆದು ಅದನ್ನು ತೊಳೆದ ನೀರನ್ನು ಕುಡಿಯಲು ಕೊಡುತ್ತಿದ್ದ ಅವರು ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಿಗೆ ಎಂದು ಗೊತ್ತಿಲ್ಲದೆ ಕಾಣೆಯಾಗಿದ್ದರು. ‘ಎಲ್ಲಿಂದ ಬಂದೆ ಎಲ್ಲಿಗೆ ಹೊರಟೆ ಎಂದು ಕೇಳಬಾರದು’ ಎಂದು ಅವರು ಹೋಗುವ ಕೆಲವು ಕಾಲದ ಮೊದಲು ಫರ್ಮಾನು ಹೊರಡಿಸಿ ಮಾಯವಾಗಿದ್ದರು.
‘ಹೊರಟಿದ್ದ ಹಡಗೊಂದನ್ನು ಹತ್ತಿದ್ದೆ. ತಲುಪಿದಾಗ ಅದರಿಂದ ಇಳಿದೆ’ ಎನ್ನುವುದು ಅವರು ಕೊಟ್ಟಿದ್ದ ಉತ್ತರ. ಇದೊಂದು ಗಹನವಾದ ಮಾತು ಎಂದೂ ಗೊತ್ತಾಗದ ವಯಸ್ಸು ನಮ್ಮದು. ಹಡಗನ್ನೂ ಕಡಲನ್ನೂ ಶಾಲೆಯ ಪುಸ್ತಕದ ಚಿತ್ರಗಳಲ್ಲಿ ಮಾತ್ರ ನೋಡಿದ್ದವರು. ಹಾಳೆಯ ಮೇಲೆ ಒಂದಿಷ್ಟು ನೀಲ ಮಸಿ ಚೆಲ್ಲಿದರೆ ಅದು ಕಡಲು. ಅದರ ಮೇಲೆ ಅಡ್ಡಾದಿಡ್ಡಿ ಕಪ್ಪನೆಯ ಅಸ್ಪಷ್ಟ ಚೌಕಗಳನ್ನು ಬರೆದರೆ ಅದು ಹಡಗು. ಕೆಂಪಗಿನ ಉಂಡೆಯೊಂದನ್ನು ಮೆತ್ತಿದರೆ ಅದು ಸೂರ್ಯ. ಗಾಳಿಯೂ ಇಲ್ಲದ ಅಲೆಗಳ ಸದ್ದೂ ಕೇಳಿರದ ಬಾಲ್ಯದ ದಿನಗಳಲ್ಲಿ ಒಬ್ಬ ಹುಚ್ಚು ಮುದುಕನಂತೆ ನಮ್ಮ ನಡುವಲ್ಲಿ ಬಂದು ಸೇರಿದ್ದ ಮಹಾನುಭಾವರು ನಿಧಾನಕ್ಕೆ ಒಬ್ಬ ಮಂತ್ರವಾದಿಯಂತೆ, ವೈದ್ಯನಂತೆ, ಮತಪಂಡಿತನಂತೆ, ಹಾಡುಗಾರನಂತೆ, ದೇವರ ಜೊತೆ ನೇರಸಂಪರ್ಕವಿರುವ ಫಕೀರನಂತೆ ಹರಡಿಕೊಂಡಿದ್ದರು.
ಎಲ್ಲ ನೋವುಗಳಿಗೂ ನನ್ನ ಪಿಂಗಾಣಿ ತಟ್ಟೆಯಲ್ಲಿ ಪರಿಹಾರವಿದೆ ಎಂದು ಬೆಳ್ಳಗಿನ ಪಿಂಗಾಣಿ ಬಟ್ಟಲಿನಲ್ಲಿ ಮಸಿಯಿಂದ ಅರಬಿ ಅಕ್ಷರಗಳನ್ನು ಬರೆದು ಅದನ್ನು ತೊಳೆದ ನೀರನ್ನು ಕುಡಿಯಲು ಕೊಡುತ್ತಿದ್ದ ಅವರು ಒಂದು ದಿನ ಇದ್ದಕ್ಕಿದ್ದಂತೆ ಎಲ್ಲಿಗೆ ಎಂದು ಗೊತ್ತಿಲ್ಲದೆ ಕಾಣೆಯಾಗಿದ್ದರು.
ಅಪಾ ಪೋಲಿಯಂತೆ ಕಾಡುಮೇಡು ನದಿ ಕೊಳ್ಳಗಳನ್ನು ಅಲೆಯುತ್ತಿದ್ದ ನಮಗೆ ಇದೂ ಗೊತ್ತಾಗುತ್ತಿರಲಿಲ್ಲ. ಏನು ಕೇಳಿದರೂ ‘ಮಕ್ಕಳಿಗ್ಯಾಕೆ ಉಪ್ಪಿನಕಾಯಿ, ದೊಡ್ಡವರಿಗ್ಯಾಕೆ ಮಕ್ಕಳಾಟ’ ಎಂದು ಎಲ್ಲವನ್ನೂ ನಟಿಕೆ ಮುರಿದಂತೆ ಮಾತನಾಡಿ ದೂರಕ್ಕೆ ಎಸೆದುಬಿಡುತ್ತಿದ್ದ ದೊಡ್ಡವರ ಲೋಕ. ಆ ಸಣ್ಣಸಣ್ಣ ಪ್ರಾಯಕಾಲದಲ್ಲಿ ಕುಡಿಯೊಡುತ್ತಿದ್ದ ಸಣ್ಣಸಣ್ಣ ಪ್ರೇಮಗಳೂ, ಕಾಮದ ಬಯಕೆಗಳೂ ನಮಗೇ ಭಯ ಹುಟ್ಟಿಸುತ್ತಿರುವಂತಿತ್ತು. ತಮ್ಮ ತಮ್ಮ ಕಂಕುಳಲ್ಲಿ ಕುಡಿಯೊಡೆಯುತ್ತಿದ್ದ ರೋಮಕೂಪಗಳ ಅಚ್ಚರಿಗೂ, ಅವ್ಯಕ್ತ ಕಾಮನೆಗಳಿಗೂ ಕಂಗಾಲಾಗುವ ಕಂದಮ್ಮಗಳಿಗೆ ಮಹಾನುಭಾವರ ಆಧ್ಯಾತ್ಮಗಳು ಅರಿವಾಗುವುದುಂಟೇ? ಹೋಗಲಿ ಬಿಡಿ. ಈಗಲೂ ಅರ್ಥವಾಗಿದೆ ಎಂದು ಹೇಗೆ ಹೇಳುವುದು?
ಇಂತಹ ಹೊತ್ತಲ್ಲೇ ಅನರ್ಘ್ಯ ರತ್ನವೊಂದರಂತೆ ನನ್ನ ಬಾಳಲ್ಲಿ ಹೊಕ್ಕಿದ್ದ ಆತ್ಮಸಖಿಯ ಸಾವು ಸಂಭವಿಸಿತ್ತು. ಬದುಕೆಂದರೆ ಸೌಂದರ್ಯೋಪಾಸನೆ ಮತ್ತು ಪ್ರೇಮಿಸುವ ಸುಖದ ಉತ್ತುಂಗದಲ್ಲಿ ಸದಾ ಶೇಷಶಯನಂತೆ ಪವಡಿಸಿಕೊಂಡಿರುವುದು ಎಂದುಕೊಂಡಿದ್ದವನನ್ನು ಆಕೆಯ ಅಕಾಲ ಮರಣ ಶೀತಲ ಮಂಜುಗಡ್ಡೆಯೊಂದರ ಕೂರಲಗಿನಂತೆ ಇರಿದಿತ್ತು. ‘ಪ್ರೇಮಸುಖದ ಉತ್ತುಂಗವೆಂದರೆ ಸಾವಂತೆ ಅನಂತದಲ್ಲಿ ಲೀನವಾಗುವುದು’ ಅನ್ನುತ್ತಿದ್ದವಳು ನೋವಿನ ಅಸಾಧ್ಯ ಮಡುವಲ್ಲಿ ಸಿಲುಕಿ ನನ್ನನ್ನು ಯಾರಾದರೂ ಬದುಕಿಸಿ ಎಂದು ಮೊರೆಯಿಡುತ್ತಾ ಯಾವ ದೈವಿಕ ಸಹಾಯವೂ ಸಿಗದೆ ಲೋಕಕ್ಕೊಂದು ಶಾಪವಿಟ್ಟು ವಿರಮಿಸಿದ್ದಳು. ಕಟೀಲಿನ ದುರ್ಗಾಪರಮೇಶ್ವರಿ, ಗುಲ್ಬರ್ಗದ ಬಂದೇ ನವಾಜರು, ಹಿಮಾಲಯ ಶೃಂಗದ ಬೌದ್ಧ ಗುರು ಪದ್ಮಸಂಭವ, ಕೊಡಗಿನ ಕುಟ್ಟದ ಮಾಂಕಾಳಿ ಈ ಎಲ್ಲರ ಅಪರಿಮಿತ ದೈವ ಶಕ್ತಿಯ ಕಥೆಗಳನ್ನು ನನ್ನಿಂದ ಕೇಳಿದ್ದ ಆಕೆ ಇವರಲ್ಲಿ ಯಾರಾದರೂ ಅವಳನ್ನು ಕೊನೆಗಾದರೂ ಬದುಕಿಸಬಹುದು ಎಂದುಕೊಂಡಿದ್ದಳು. ಕೊನೆಗೆ, ‘ನಿನ್ನ ಮಹಾನುಭಾವರ ಪಿಂಗಾಣಿ ಬಟ್ಟಲನ್ನಾದರೂ ಹುಡುಕಿ ತಾ ಬದುಕಿಕೊಳ್ಳುತ್ತೇನೆ’ ಎಂದು ಅತ್ತಿದ್ದಳು. ಅವಳ ಕೊನೆಗಾಲದಲ್ಲಿ ಮತ್ತು ಬರಿಸುವ ನೋವು ನಿವಾರಕ ತೈಲವೊಂದನ್ನು ಕೊಡುವ ದೈನೇಶಿ ಪರಿಸ್ಥಿತಿ ನನ್ನದಾಗಿತ್ತು. ‘ನಿನ್ನ ದೈವಿಕ ಶಕ್ತಿಗಳ ಕಥೆಗಳು ಬರೀ ಲೊಟ್ಟೆ. ನೀನೊಬ್ಬ ಕಥೆ ಮಾತ್ರ ಹೇಳಬಲ್ಲ ವಿಧೂಷಕ’ ಎನ್ನುವುದು ಅವಳು ನನ್ನೊಡನೆ ಬರೆದು ಹೇಳಿದ ಕೊನೆಯ ಮಾತಾಗಿತ್ತು. ನನ್ನ ಸೌಂದರ್ಯವನ್ನು ಕಂಡಿರುವ ನೀನು ನನ್ನ ಮೃತದೇಹವನ್ನು ಕಾಣಬಾರದು ಎನ್ನುವುದು ಅವಳ ಆಸೆಯಾಗಿತ್ತು. ಅದನ್ನೂ ಈಡೇರಿಸಿಕೊಂಡಿದ್ದಳು ಆಕೆ.
‘ಅನರ್ಘ್ಯ ಪ್ರೇಮಿಯಾಗಿದ್ದವನು ಕಥೆ ಮಾತ್ರ ಬರೆಯಬಲ್ಲ, ಸಾವಿಂದ ಮರಳಿ ತರಲಾರದ ವಿಧೂಷಕನಾಗಿ ಪರಿಣಮಿಸಿಬಿಟ್ಟೆಯಲ್ಲಾ’ ಎಂದು ಈಕೆ ಸಿಗರೇಟಿನ ಬೂದಿ ಉದುರಿಸುತ್ತಾ ಚುಚ್ಚಿದ್ದಳು. ಅದು ಒಂದು ರೀತಿಯ ಈರ್ಷ್ಯೆಯ ಮಾತು. ಜೊತೆಗೆ ಇವನ ಜೊತೆ ಅವಳು ಇನ್ನಿಲ್ಲವೆಂಬ ನಿರಾಳತೆಯ ಉದ್ಘಾರವದು. ‘ಇನ್ನಾದರೂ ಮರಳಿ ಬರೆಯಲು ತೊಡಗು ಸುಂದರಾಂಗ. ನೀನು ಹುಟ್ಟಿರುವುದು ಬರೆದು ಆನಂದಿಸಲು. ಅರಿಷಡ್ವರ್ಗಗಳಲ್ಲಿ ಮುಳುಗೇಳಲಲ್ಲ’ ಎಂದೂ ಅಂದಿದ್ದಳು. ಇದೊಂದು ಸುಮ್ಮನೆ ಸಮಾಧಾನಿಸುವ ವ್ಯರ್ಥ ಮಾತು ಇವಳದು. ಆದರೂ ಇರಲಿ, ಇದನ್ನು ನಾನೇಕೆ ಗಂಭೀರವಾಗಿ ಪ್ರಯತ್ನಿಸಬಾರದು ಎಂದು ಹೇಳದೇ ಕೇಳದೇ ಹಡಗು ಹತ್ತಿ ಹೊರಟಿದ್ದೆ. ಎರಡು ಹಗಲು ಎರಡು ರಾತ್ರಿ ಸಂಪರ್ಕವೇ ಇಲ್ಲದ ನನ್ನನ್ನು ಮೂರನೇ ಇರುಳು, ‘ಎಲ್ಲಿರುವೆ ಧೀರಾ ರಾಜಗಂಭೀರಾ’ ಎಂದು ಕೇಳಿದ್ದಳು. ‘ಏಳು ಕಡಲಿನ ಆಚೆ, ಏಳು ಆಕಾಶದ ಈಚೆ ಹಸಿರು ಗಿಣಿಯ ಒಡಲಲ್ಲಿ ಮಾಣಿಕ್ಯ ಹುಡುಕುತ್ತಿರುವೆ’ ಎಂದು ಉತ್ತರಿಸಿದ್ದೆ. ‘ನೀನು ಪ್ರಯೋಜನವಿಲ್ಲ, ಬರುವಾಗ ನನಗೆ ಇನ್ನೊಬ್ಬ ರಾಜಕುಮಾರನನ್ನು ಹುಡುಕಿ ತಾ’ ಅಂದಿದ್ದಳು. ‘ಇನ್ನು ಹಾಗೆಲ್ಲಾ ಹುಡುಗಾಟಿಕೆ ಇಲ್ಲ. ಮಹಾನುಭಾವರೊಬ್ಬರ ಪಿಂಗಾಣಿ ಬಟ್ಟಲನ್ನು ಹುಡುಕುತ್ತ ದ್ವೀಪವೊಂದನ್ನು ತಲುಪಿರುವೆ. ಇನ್ನು ಕೆಲವು ಕಾಲದ ನಂತರ ಮತ್ತೆ ಸಿಗುವೆ’ ಎಂದು ಮತ್ತೂ ಹಲವು ಕಾಲ ಅವಳಿಂದ ಅಜ್ಞಾತನಾಗಿದ್ದೆ.
ಈಗ ನೋಡಿದರೆ ನಾನು ಬರೆಯುತ್ತಿರುವ ಈ ಅಂಕಣವನ್ನು ವಾರವಾರವೂ ಮುಂದಿಟ್ಟುಕೊಂಡು, ಟೀಕೆಟಿಪ್ಪಣಿಗಳನ್ನು ಬರೆದಿಟ್ಟುಕೊಂಡು ಕ್ಲುಪ್ತವಾಗಿ ಆದರೆ ಮುಲಾಜಿಲ್ಲದೆ ವಿಮರ್ಶಿಸುತ್ತಾಳೆ.
‘ನನ್ನನ್ನು ಯಾಮಾರಿಸಿದ ಹಾಗೆ ಓದುಗರನ್ನೂ ಯಾಕೆ ಯಾಮಾರಿಸುತ್ತೀಯಾ? ಪಿಂಗಾಣಿ ಬಟ್ಟಲ ರಹಸ್ಯದ ಬದಲು ನಿನ್ನ ಪ್ರೇಮಪ್ರಲಾಪಗಳನ್ನು ಬರೆಯುತ್ತೀಯಾ, ಆಡು ಮಾರುವವರ ಮೊದಲ ವಿವಾಹ ವೈಫಲ್ಯದ ಕಥೆಯನ್ನು ಹೇಳಬೇಕಾದವನು ಮಕ್ಕಾ ಯಾತ್ರೆಯ ಪುರಾಣ ಬರೆಯುತ್ತೀಯಾ, ಕನ್ನಡನಾಡಿನ ಸೂಫಿ ಸಂತನ ಜೀವನ ಕಥೆಯನ್ನು ಹೇಳಬೇಕಾದವನು ನಿನ್ನ ಲಡಾಸು ಪೆಠಾರಿಯ ಪ್ರವರವನ್ನು ಬರೆಯುತ್ತೀಯಾ. ಅಕ್ಟೋಪಸ್ ಬೇಟೆಯ ಕಥೆ ಹೇಳಬೇಕಾದವನು ನಕ್ಷತ್ರಗಳ ವಿರಹದ ಕಥೆಯನ್ನು ವಿವರಿಸುತ್ತೀಯಾ. ನೀನು ಬರೆದಿದ್ದನ್ನು ಏನೆಂದು ಪರಿಭಾವಿಸುವುದು? ಎಂದು ಇನ್ನೊಂದು ಸಿಗರೇಟು ಹಚ್ಚುತ್ತಾಳೆ. ಫೋನಿನ ಆಚೆ ತುದಿಯಲ್ಲಿ ಆಕೆ ಲೈಟರ್ ಹಚ್ಚುವ ತೀಕ್ಷ್ಣ ಸದ್ದು.
‘ಏನು ಗೊತ್ತಾ. ಇಲ್ಲಿ ನಾನು ಇಲ್ಲಿ ವೀಳ್ಯದೆಲೆ ಜಗಿಯುವುದನ್ನು ಕಲಿತಿದ್ದೇನೆ. ಪುರಾಣಗಳನ್ನು ಹಾಡಾಗಿ ಹೇಳುವ ವೃದ್ಧೆಯೊಬ್ಬಳ ಸ್ನೇಹವಾಗಿದೆ. ಆಕೆಯ ಎಲೆ ಅಡಿಕೆಯ ಸಣ್ಣ ಸಂಚಿ, ಬೆಳ್ಳಿಯ ಸಣ್ಣ ಕರಂಡಿಕೆಯಲ್ಲಿ ಕಡಲ ಹವಳಗಳ ಪುಡಿಯಿಂದ ಮಾಡಿದ ಸುಣ್ಣ ಮತ್ತು ಮಂಗಳೂರಿಂದ ಹಡಗಲ್ಲಿ ಬರುವ ನೀರಲ್ಲಿ ನೆನೆಸಿದ ಗೋಟಡಿಕೆ. ಅವಳು ಹಾಡು ಹೇಳುವುದನ್ನು ಕೇಳಿ ಮುಗಿಸಿ ಸೈಕಲ್ಲು ಹೊಡೆಯುತ್ತಾ ದ್ವೀಪಕ್ಕೊಂದು ಸುತ್ತು ಹಾಕುತ್ತೇನೆ. ಚೂರುಪಾರಾಗಿರುವ ಜೀವನದ ಬಗ್ಗೆ ಒಂಚೂರು ಒಂಟಿಯಾಗಿ ಚಿಂತಿಸಬೇಕು. ಈಗ ದಯವಿಟ್ಟು ಫೋನ್ ಇಡು ಎಂದು ವೀಳ್ಯದೆಲೆ ಬಾಯಿಗೆ ಹಾಕುತ್ತಿದ್ದೇನೆ’ ಎಂದು ಬಾಯ್ ಹೇಳುತ್ತೇನೆ.
(ಮುಂದಿನ ವಾರ: ಕನಸಲ್ಲಿ ತಿವಿದು ಎಬ್ಬಿಸಿದ ಚೇರಮಾನ್ ಮಹಾರಾಜ)
(ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾಗುತ್ತಿದ್ದ ಅಂಕಣದ ಪರಿಷ್ಕೃತ ರೂಪ)
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.