ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ. ಮತ್ತೆ ಬರಹಗಾರನಾದವನು ತಾನು ಬದುಕಿದ ಕಾಲಮಾನದ ಸಾಕ್ಷಿಯಾಗಿರುತ್ತಾನೆ. ಮತ್ತೆ ಅವನ ಬರಹ ಅದನ್ನು ಪ್ರತಿಬಿಂಬಿಸಲೂ ಬೇಕಿರುತ್ತದೆ. ಇಲ್ಲದೇ ಹೋದರೆ ಒಂದಿಡೀ ಕಾಲಮಾನದ ಕಂದಕ ಸೃಷ್ಟಿಯಾಗಿಬಿಡುತ್ತದೆ. ಹಾಗಾಗಿ ಬರಹಗಾರ ತನ್ನ ಸುತ್ತಲೂ ನಡೆಯುವ ವಿದ್ಯಮಾನಗಳೊಂದಿಗೆ ಸೂಕ್ಷ್ಮಗ್ರಾಹಿಯಾಗಿ ವ್ಯವಹರಿಸಬೇಕಿರುತ್ತದೆ ಮತ್ತು ಅದನ್ನು ದಾಖಲಿಸಲೂ ಬೇಕಿರುತ್ತದೆ.
ಆಶಾ ಜಗದೀಶ್ ಅಂಕಣ
ಒಂದು ಹನಿ ಕಣ್ಣೀರು ತುಂಬಿದ ಮೇಲೆಯೇ ಭಾವಸಮುದ್ರವೊಂದು ಉಕ್ಕಿ ಹರಿಯುತ್ತದೆ. ತೀವ್ರ ಭಾವವೊಂದು ಭಾವನೆಗಳ ಉರಿಯ ಮೇಲೆ ಕುದ್ದ ಮೇಲೆಯೇ ಅಕ್ಷರಗಳು ಸ್ಪುಟಗೊಳ್ಳುತ್ತವೆ. ಮತ್ತದು ಏನಾಗಬೇಕು?! ಕಥೆಯಾ? ಕವನವಾ? ಪ್ರಬಂಧವಾ? ಯಾವುದೂ ನಮ್ಮ ಕೈಲಿರುವುದಿಲ್ಲ. ಕಾಣುವ, ಕೈಗೆ ಸಿಗುವ ನೀರಿನ ಕಣವೊಂದು ಕುದಿಗೆ ಸಿಕ್ಕು ಉರಿದು ಬೆಂದು ಕಾಣದ, ಕೈಗೆ ಸಿಗದ ನೀರಾವಿ ರೂಪ ಪಡೆದು ಮುಕ್ತಿ ಹೊಂದುವ ಹಾಗೆ ಬರಹವೊಂದು ತನ್ನ ಹಾದಿಯನ್ನು ತಾನೇ ಹುಡುಕಿಕೊಳ್ಳುತ್ತದೆ. ಸ್ವತಃ ಲೇಖಕನಿಗೂ ಅದು ಅರಿವಾಗುವುದಿಲ್ಲ. ಯೋಜಿಸಿ ಬರೆಯುವ ಬರಹ ಒಂದು ನಿರ್ಜೀವ ಲೇಖನವಾಗಬಲ್ಲದೇ ಹೊರತು ಆತ್ಮವಿರುವ ಸಾಹಿತ್ಯವಾಗುವುದು ಸಾಧ್ಯವಿಲ್ಲ. ಅದಕ್ಕೇ ಅದು ಕವಿಸಮಯಕ್ಕೆ ದಕ್ಕುತ್ತದೆ.
ಈ ಸಮಯ ಕವಿಗೆ ಅದೃಷ್ಟವಶಾತ್ ದಕ್ಕಿದ್ದು. ಕವಿತೆಯೇ ಮನಸುಮಾಡಿ ಆ ಕ್ಷಣ ಅವನಿಗೆ ಸಾಕ್ಷಾತ್ಕಾರಗೊಂಡಿದ್ದು. ಇದೊಂದು ನಿರಾಳ. ಇದೊಂದು ಬಿಡುಗಡೆ. ಈ ಬಿಡುಗಡೆ ಆತ್ಯಂತಿಕ. ಸಾಹಿತ್ಯದ ಸ್ವರೂಪ ಯಾವುದೇ ಇರಲಿ ಅದು ಬಿಡುಗಡೆಯ ದಾರಿ. ಒಳಗಿನ ತುಡಿತವೊಂದು ಹೊರಬರಲಾಗದೆ ತೊಳಲಾಡುವ ಪರಿಸ್ಥಿತಿಯ ತೀವ್ರತೆ ಪ್ರತಿಯೊಬ್ಬ ಬರಹಗಾರನಿಗೂ ಗೊತ್ತು. ಮತ್ತದು ಹೊರಬಂದ ಮೇಲಿನ ನಿಟ್ಟುಸಿರು ಮತ್ತದರ ಪರಮಾನಂದವೂ ಅವನಿಗೆ ಮಾತ್ರ ಅನುಭವ ವೇದ್ಯ.
ಒಮ್ಮೊಮ್ಮೆ ಎಂತಹ ಸೋಜಿಗವೆನಿಸುತ್ತದೆ. ಬರೆಯಲು ಕುಳಿತ ವೇಳೆ ಬಾರದ ಸಾಲೊಂದು ಎಲ್ಲೋ ಪ್ರಯಾಣಿಸುತ್ತಿರುವಾಗಲೋ, ಕಮೋಡಿನ ಮೇಲೆ ಕುಳಿತಿರುವಾಗಲೋ, ದೇವರ ದೀಪ ಹಚ್ಚುವಾಗಲೋ ಅಚಾನಕ್ ನೆನಪಾಗಿ ಮನಸು ಕುಣಿಯುವುದುಂಟು. ಆಗ ಒಂದು ಸಣ್ಣ ಪೇಪರ್ ಮತ್ತೆ ಪೆನ್ನು ಸಿಗದೆ ಹೋದರೆ ಆಗುವ ಇರಿಸು ಮುರಿಸು ಭಗವಂತನೇ ಬಲ್ಲ (ಈಗಾದರೆ ಮೊಬೈಲ್ ಸಿಕ್ಕರೂ ಸಾಕು… ಪೆನ್ನು ಪೇಪರೇ ಬೇಕಂತೇನಿಲ್ಲ…) ಅಡಿಗರು ತಮ್ಮ ಕವಿತೆಗೆ ಬೇಕಾಗುವ ಒಂದೇ ಒಂದು ಪದಕ್ಕಾಗಿ ಅದೆಷ್ಟೋ ತಿಂಗಳುಗಳ ಕಾಲ ಕಾಯುತ್ತಿದ್ದರಂತೆ. ಅವರಿಗೆ ಸಮಾಧಾನ ಕೊಡದ ಪದವನ್ನು ಮುಲಾಜಿಲ್ಲದೇ ಕಿತ್ತೊಗೆಯುತ್ತಿದ್ದರಂತೆ. ಇದು ಕಾವ್ಯದ ಶಕ್ತಿ, ಮಹಾ ಕವಿಯೊಬ್ಬನ ಬದ್ಧತೆ. ಆದರೆ ಬರಹದ ಮಾಧ್ಯಮ ಯಾವುದಾದರೇನು ಮುಖ್ಯ ಆಶಯ ಮತ್ತು ಅದರ ಭಾವವಾಗಿರುತ್ತದೆ.
“ಅಳಿಯಲರಂ ಗಿಳಿ ಪಣ್ಣಂ
ತಳಿರಂ ಪಿಕನೊಲ್ವ ತೆರೆದ ಕುಜದೋಳ್ ಕೃತಿಯೋಳ್
ವಿಳಸಿತ ಪದಮುಮನರ್ಥಂ
ಆಳಂಕೃತಿಪ್ರಹಿತಭಾವಮಂ ಕೆಲರೋಲ್ವರ್”
-ಕನ್ನಡದ ಷಡಕ್ಷರಿ
ಎನ್ನುವ ಕನ್ನಡದ ಷಡಕ್ಷರಿಯ ಮಾತಿನಂತೆ ಎಲ್ಲವೂ ಅವರವರ ಭಾವಕ್ಕೆ. ಕವಿಯಾದವನು ಅಂತರ್ಮುಖಿಯಾಗಿರುತ್ತಾನೆ. ಅವನೊಳಗೆ ನಡೆದ ಮಂಥನವೊಂದರ ಫಲ ಕವಿತೆಯಾಗಿ ಹೊರಬರುತ್ತದೆ. ಕವಿಯಾದವನಿಗೆ ಇರಬೇಕಾದ ಲಕ್ಷಣಗಳೇನು, ಅವನಿಗೆ ಭಾಷೆಯ ಮೇಲೆ ಇರಬೇಕಾದ ಪ್ರಭುತ್ವ ಎಂಥದ್ದು… ಎನ್ನುವ ಅಂಶಗಳ ಸುತ್ತಲೂ ಸುತ್ತುವ ರಾಚನಿಕ ಸಿದ್ಧಾಂತಗಳು, ಗಮನಿಸಬೇಕಾದ ಮುಖ್ಯಾಂಶಗಳ (ಪ್ರತಿಭೆ, ವ್ಯುತ್ಪತ್ತಿ, ಧ್ವನಿ…. ಇತ್ಯಾದಿ) ಬಗ್ಗೆ ಒಂದು ಮಟ್ಟಿಗಿನ ತಿಳುವಳಿಕೆ ಪ್ರತಿಯೊಬ್ಬ ಬರಹಗಾರನಿಗೂ ಇರಬೇಕಿರುತ್ತದೆ. ಹಾಗಂತ ಅದಿಲ್ಲದ ಮಾತ್ರಕ್ಕೆ ಅವನನ್ನು ಬರಹಗಾರನೆನ್ನದಿರಲು ಸಾಧ್ಯವಿಲ್ಲ. ಬರಹಕ್ಕೆ ಪ್ರತಿಭೆಯೇ ಮುಖ್ಯ. ಅದರಲ್ಲೂ ಪ್ರತಿಭೆ ಇಲ್ಲದೆ ಸೃಜನಾತ್ಮಕತೆ ಜೀವ ಪಡೆಯುವುದಾದರೂ ಹೇಗೆ… ಮತ್ತೆ ಪ್ರತಿಯೊಂದು ಬರಹದ ಮೂಲದ್ರವ್ಯ ಆಯಾ ವ್ಯಕ್ತಿಯ ಜೀವನಾನುಭವವೇ ಆಗಿರುತ್ತದೆ. ಯಾವ ವ್ಯಕ್ತಿ ತನ್ನ ಸುತ್ತಲ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸಬಲ್ಲವನಾಗಿರುತ್ತಾನೋ ಅವನೇ ಆ ಭಾವವನ್ನು ತನ್ನ ಬರಹಕ್ಕಾಗಿ ಬಳಸಿಕೊಳ್ಳಬಲ್ಲ. ಮತ್ತೆ ಕಥೆ ಕಾವ್ಯ ಪ್ರಬಂಧ… ಯಾವುದೇ ಇರಲಿ ಆ ಮಾದರಿಯ ಅರಿವು ಕೊಂಚವಾದರೂ ಬೇಕು.
ಇನ್ನು ಬರಹಕ್ಕೆ ಬಳಸಬೇಕಾದ ಭಾಷೆಯ ಬಗ್ಗೆ ಹೇಳುವುದಾದರೆ ಎಲ್ಲರೂ ಬಳಸುವ, ಎಲ್ಲರಿಗೂ ಅರ್ಥವಾಗುವ, ಗ್ರಾಂಥಿಕ ಭಾಷೆ ಉತ್ತಮ ಎನಿಸಿದರೂ ಜನರು ಬಳಸುವ ಆಡುಭಾಷೆ ಓದುಗರಿಗೆ ಹತ್ತಿರವಾಗುತ್ತದೆ. ದೇವನೂರು ಮಹದೇವರ “ಕುಸುಮಬಾಲೆ”ಯ ಮಂಡ್ಯ ಭಾಗದ ಗ್ರಾಮೀಣ ಕನ್ನಡ, ವೈದೇಹಿಯವರ ಕಥೆಗಳ ಕುಂದಾಪುರ ಕನ್ನಡ, ಬೇಂದ್ರೆಯವರ ಧಾರವಾಡದ ಕನ್ನಡ… ಹೀಗೆ ಪ್ರಾದೇಶಿಕ ಆಡುಭಾಷೆ ಇಂದಿಗೂ ಪ್ರಚಲಿತ. ಇತ್ತೀಚೆಗೆ ನಮ್ಮ ಭಾಷೆ ಕಂಗ್ಲೀಷುಮಯವಾಗಿರುವ ಈ ಹೊತ್ತಿನಲ್ಲಿ ಬರಹದಲ್ಲೂ ಕಂಗ್ಲೀಷಿನ ಬಳಕೆ ಒಪ್ಪಿತವಾಗುತ್ತಿದೆ. ಇಂಗ್ಲೀಷ್ ಪದಗಳ ಬಳಕೆ ಹೊಸದೇನಲ್ಲ. ಅಡಿಗರ ಕಾಲದಿಂದಲೂ ಆ ಪ್ರಯೋಗ ನಡೆದಿದೆ. ಆದರೆ ಅರ್ಥ ಮತ್ತು ಭಾವಕ್ಕೆ ಅನಿವಾರ್ಯವಲ್ಲದೇ ಪ್ರತಿಷ್ಠೆಗಾಗಿ ಇಂಗ್ಲೀಷ್ ಪದಗಳನ್ನು ತಂದು ತುರುಕುವ ಕೆಲಸ ಯಾವುದೇ ಕಾರಣಕ್ಕೂ ಆಗಬಾರದು. ಇಂಗ್ಲಿಷಿನಿಂದಲೇ ಕನ್ನಡಕ್ಕೆ ಅನುವಾದಿಸಿ ತಂದ ಪದ್ಯಗಳಾದರೂ ಅವನ್ನು ಅಚ್ಚಕನ್ನಡವಾಗಿಸಿದ ಶ್ರೇಯಸ್ಸು ಬಿ.ಎಮ್.ಶ್ರೀ. ಯವರಿಗೆ ಸಲ್ಲುತ್ತದೆ.
ಎಂತೆಂತಹಾ ಕಷ್ಟಾರ್ಥದ ಕವಿತೆಗಳನ್ನೂ ಅದೆಷ್ಟು ಸುಂದರವಾಗಿ ಅನುವಾದಿಸಿ ತಂದಿದ್ದಾರೆ ಅವರು! ಒಂದೊಂದು ಅನುವಾದವೂ ಒಂದೊಂದು ತಪಸ್ಸೇ ಸರಿ. ಅವರೂ ಬಯಸಿದ್ದರೆ ಇಂಗ್ಲೀಷ್ ಪದಗಳನ್ನು ಬಳಸಬಹುದಿತ್ತು. ಆದರೆ ನಾವು ಒಂದು ಭಾಷೆಯಲ್ಲಿ ಬರೆಯುವಾಗ ಆ ಭಾಷೆಯ ಸಾಂಸ್ಕೃತಿಕ ಹಿನ್ನಲೆ, ಇತಿಹಾಸ, ಅಳಿವು ಉಳಿವು… ಎಂಬೆಲ್ಲಾ ಅಂಶಗಳನ್ನು ಭಾವನಾತ್ಮಕವಾಗಿ ಅನುನಯಿಸಿಕೊಂಡು ಬರಹಕ್ಕಿಳಿಯಬೇಕಿರುತ್ತದೆ. ಭಾಷೆಯ ಉಳಿವು ಮತ್ತು ಬರಹಗಾರನ ಉಳಿವು ಬೇರೆ ಬೇರೆ ಅಲ್ಲ. ಭಾಷೆಯಿಲ್ಲದೇ ಬರಹಗಾರನಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಮತ್ತು ನಮ್ಮ ಅನುಪಸ್ಥಿತಿಯಲ್ಲಿ ಹುಟ್ಟುವ ಎಲ್ಲ ಪ್ರಶ್ನೆಗಳಿಗೂ ನಮ್ಮ ಬರಹವೊಂದೇ ಉತ್ತರವಾಗಬೇಕಿರುತ್ತದೆ. ಅದೇ ನಾವು ಬರಹವೆನ್ನುವ ಮೂರ್ತಿಯಲ್ಲಿ ಆವಾಹಿಸಬೇಕಿರುವ ಪ್ರಾಣ. ಹಾಗಾಗಿ ಭಾಷೆ ಪ್ರತಿಯೊಬ್ಬ ಬರಹಗಾರನ ಪರಮಾಸ್ತ್ರವಾಗಬೇಕು.
ಮತ್ತೆ ಆಡುಭಾಷೆ/ಜನರ ಭಾಷೆ/ಪ್ರಾದೇಶಿಕ ಭಾಷೆ ಅಂತೆಲ್ಲ ಯಾವುದು ಕರೆಸಿಕೊಳ್ಳುತ್ತದೋ ಅದಕ್ಕೂ ಒಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾವನಾತ್ಮಕ ಹಿನ್ನಲೆ ಇರುತ್ತದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಬರಹ ಜನರ ಭಾಷೆಯಲ್ಲಿದ್ದಷ್ಟೂ ಜನರಿಗೆ ಹತ್ತಿರವಾಗುತ್ತದೆ. ಜನರಿಗೆ ಹತ್ತಿರವಾದಾಗ ಮಾತ್ರ ಸಾಹಿತ್ಯ ನಿಜವಾದ ಉದ್ದೇಶವನ್ನು ಪೂರ್ಣಗೊಳಿಸಿದಂತಾಗುತ್ತದೆ.
“ಕನ್ನಡ ಪಿಲಿಯಲಿ ಏನಿದು ಸಂಸ್ಕೃತ
ಪದಗಳ ಮೆರವಣಿಗೆ
ಕಡೆಯಲಿ ಒಂದೇ ಕನ್ನಡದ ವ್ಯಯ
ತೂಕದ ಬರವಣಿಗೆ
ತೂಕಡಿಸುವ ಕಣ್ಣಿಗೆ
ಕನ್ನಡದಾಸೆಯ ಕವಿತಾರಚನೆಗೆ
ಒದಗದೆ ನಮ್ಮ ನುಡಿ?
ಹೂವಿಗೆ ಹೂವೆ- ಕಲ್ಲಿಗೆ ಕಲ್ಲೆ,
ಕನ್ನಡ ಮುತ್ತು ನುಡಿ
ಜನತೆಯ ಬಳಕೆ ನುಡಿ”
–ಕನ್ನಡ ಮಾಧ್ಯಮ, ಕೆ.ಎಸ್.ನರಸಿಂಹಸ್ವಾಮಿ
ಕೆ.ಎಸ್.ನರಸಿಂಹಸ್ವಾಮಿಯವರ “ಕನ್ನಡ ಮಾಧ್ಯಮ” ಎನ್ನುವ ಈ ಕವಿತೆ ಎಷ್ಟು ಸುಲಲಿತವಾಗಿ ಭಾಷೆಯೊಂದರ ಉದ್ದೇಶ ಮತ್ತು ಪ್ರಾಮುಖ್ಯತೆಯನ್ನು ಮಂಡಿಸುತ್ತದೆ ನೋಡಿ. ಇಂದಿಗೂ ಬಗೆಹರಿಯದ ಕನ್ನಡ ಮಾಧ್ಯಮದ ವಿಚಾರ ಅಂದೇ ಈ ಮಟ್ಟಿಗೆ ಚರ್ಚೆಯಾಗಿತ್ತು ಎನ್ನುವ ಕುತೂಹಲ ಮತ್ತು ದೊರೆತ ಆಧಾರವೆನ್ನಿಸುವ ಹೊತ್ತಲ್ಲೇ ಭಾಷೆಯೊಂದು ಮಾಧ್ಯಮವಾಗಬೇಕಾದ ಅನಿವಾರ್ಯತೆಯನ್ನು ತೋರಿಸಿಕೊಡುತ್ತದೆ.
ಕಾಗೆಯ ಕೂಗು ಮತ್ತು ಕೋಗಿಲೆಯ ಕೂಗು ಎರೆಡೂ ಭಿನ್ನ ಮತ್ತು ಅನನ್ಯ. ಆದರೆ ಕೂಗದ(ಧ್ವನಿ) ವಿನಃ ಗುರುತಿಸುವುದು ಕಷ್ಟ. ಅವುಗಳ ಮೊಟ್ಟೆಗಳ ನಡುವೆಯೂ ವ್ಯತ್ಯಾಸ ಕಾಣಿಸುವುದಿಲ್ಲ. ಹಾಗಾಗಿಯೇ ಕೋಗಿಲೆ ಪರಪುಟ್ಟ. ಆದರೆ ಧ್ವನಿ, ಬಣ್ಣ, ಆಕಾರಗಳಲ್ಲಿ ಕಂಡುಬರುವ ಅತಿ ಸೂಕ್ಷ್ಮ ವ್ಯತ್ಯಾಸಗಳನ್ನು ಗುರುತಿಸದೇ ಹೋದರೆ ಅವುಗಳ ಅನನ್ಯತೆಗೆ ಉಳಿವೆಲ್ಲಿ? ಕೋಗಿಲೆ ಹಾಡುವ ಮೂಲಕ ತನ್ನ ಭಿನ್ನತೆಯನ್ನು ತೋರಿಸಿಕೊಳ್ಳುತ್ತದೆ. ಕಾಗೆ ಕೂಗುವ ಮೂಲಕ ತನ್ನ ಭಿನ್ನತೆಯನ್ನು ತೋರಿಸಿಕೊಳ್ಳುತ್ತದೆ. ಅವೆರಡಕ್ಕೂ ಯಾವುದೇ ಮುಜುಗರ ಮೇಲರಿಮೆ ಕೀಳರಿಮೆ ಎಂಥದ್ದೂ ಇಲ್ಲ. ಆದರೆ ನಾವು ಕನಿಷ್ಟತಮರಂತೆ ಅವುಗಳನ್ನು ಮೇಲು ಕೀಳೆಂದು ವಿಶ್ಲೇಷಿಸತೊಡಗುತ್ತೇವೆ. ಇದು ನಮ್ಮ ಬುದ್ಧಿಮಟ್ಟವಷ್ಟೇ. ಇಂತಹ ಮಿತಿಗಳಿಂದ ನಾವು ಹೊರಬರಬೇಕಿದೆ. ನಮ್ಮದೇ ಭಾಷೆಯ ಉಳಿವಿನ ದೃಷ್ಟಿಯಿಂದಲೂ ಸಾಹಿತ್ಯದ ಭಾಷೆಯ ಬಗ್ಗೆ ಜಾಗರೂಕತೆ ವಹಿಸಬೇಕಾದ ಅವಶ್ಯಕತೆ ಇದೆ.
ಬರಹ ಬರೆಯುವವರೆಗೆ ಮಾತ್ರ ಬರಹಗಾರನ ಸ್ವತ್ತು. ಬರೆದ ನಂತರ ಅದು ಓದುಗನ ಸ್ವತ್ತು. ಈಗ ಅದರ ನಡುವೆ ಸ್ವತಃ ಬರಹಗಾರನೂ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ಪ್ರತಿ ಬರಹಗಾನಿಗೂ ಶ್ರೇಷ್ಠತೆಯ ವ್ಯಸನ ತಪ್ಪಿದ್ದಲ್ಲ. ಅದಕ್ಕೆ ಕನ್ನಡಿ ಹಿಡಿದಂತಿದೆ ಚನ್ನವೀರ ಕಣವಿಯವರ ಈ ಕವಿತೆ…
“ಚೊಕ್ಕ ಬಂಗಾರವೇ ಬೇಕೆಂಬ ಹಟವೇಕೆ ನಿನಗೆ
ಈ ಲೋಕದಲಿ ನಾನಾ ನಮೂನೆ ಲೋಹವಿರುವಾಗ?
ಗಟ್ಟಿ ಕಾಳುಗಳನ್ನೆ ಮುಟ್ಟಿಗೆಯಲ್ಲಿ ಹಿಡಿಯಬೇಕೆಂದೇಕೆ ಚಪಲ
ಎಲ್ಲವೂ ಹೊಟ್ಟೆಗೇ ಹೋಗುವಾಗ?
ಇಗೋ
ನಮ್ಮ ಮನದಂಗಳದಿ ಬೆಳೆದಷ್ಟು ಕವಿತೆಗಳ
‘ನಿನ್ನ ಮಡಿಲೊಳಗಿಡಲು ತಂದಿರುವೆವು’_
ತುಂಬಿ ಹರಿಯುವ ಹೊಳೆಯ ನೀರಿನಲಿ
ಇವುಗಳನು ಹಾಯಾಗಿ ತೇಲಿಸಪ್ಪ
ಸ್ವಾಮಿ ನನ್ನಪ್ಪ.
ನಮ್ಮ ಕಣ್ಮರೆಯಲ್ಲಿ ಬೇಕಾದ್ದು ಮಾಡಿಕೊ
ನಾವಂತು ಪಾರಾದೆವು.
ಸರಿ, ನೀನಿಷ್ಟು ಮಾಡಿದರೆ, ನಿನ್ನ ಮೇಲೊಂದು
ಪದ್ಯವ ಬರೆದು, ಕನ್ನಡಿ ಕಟ್ಟು ಹಾಕಿ
ತುಂಬು ಸಭೆಯೊಳು ಮಾನಪತ್ರ ಸಲಿಸುವೆವು.
ಇಲ್ಲದಿದ್ದರೆ ವೃಥಾ ತಲೆದಂಡ
ಅಲ್ಲವೇ? ಅದಕಾಗಿ ಆಯುಷ್ಯದುದ್ದಕೂ ಚಿಂತೆ ಬೇಡ.
ಕಾಲಾಯ ತುಭ್ಯಂ ನಮಃ”
-ಕಾಲಪುರುಷನಲ್ಲಿ ಕವಿಗಳ ಕೋರಿಕೆ, ಚನ್ನವೀರ ಕಣವಿ
ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ. ಮತ್ತೆ ಬರಹಗಾರನಾದವನು ತಾನು ಬದುಕಿದ ಕಾಲಮಾನದ ಸಾಕ್ಷಿಯಾಗಿರುತ್ತಾನೆ. ಮತ್ತೆ ಅವನ ಬರಹ ಅದನ್ನು ಪ್ರತಿಬಿಂಬಿಸಲೂ ಬೇಕಿರುತ್ತದೆ. ಇಲ್ಲದೇ ಹೋದರೆ ಒಂದಿಡೀ ಕಾಲಮಾನದ ಕಂದಕ ಸೃಷ್ಟಿಯಾಗಿಬಿಡುತ್ತದೆ. ಹಾಗಾಗಿ ಬರಹಗಾರ ತನ್ನ ಸುತ್ತಲೂ ನಡೆಯುವ ವಿದ್ಯಮಾನಗಳೊಂದಿಗೆ ಸೂಕ್ಷ್ಮಗ್ರಾಹಿಯಾಗಿ ವ್ಯವಹರಿಸಬೇಕಿರುತ್ತದೆ ಮತ್ತು ಅದನ್ನು ದಾಖಲಿಸಲೂ ಬೇಕಿರುತ್ತದೆ. ಇದು ಮುಂದಿನ ಪೀಳಿಗೆ ನಮ್ಮನ್ನು ಗ್ರಹಿಸಲು ಸಹಾಯಕಾರಿ.
ಇನ್ನು ಬರಹದ ವಸ್ತುವಿನ ವಿಚಾರಕ್ಕೆ ಬಂದಾಗ ವೈವಿಧ್ಯತೆ ಬಹಳ ಮುಖ್ಯ. ಬದುಕಿಗೆ ನವರಸಗಳಿವೆ. ಆ ನವರಸಗಳು ಬರಹಕ್ಕೂ ಬೇಕಿದೆ. ಆದರೆ ಸಿಕ್ಕು ನುಣುಚಿಕೊಳ್ಳುವ ಮೀನು ಬರಹ. ಒಮ್ಮೊಮ್ಮೆ ಸಿಕ್ಕೇ ಬಿಡುತ್ತದೆ. ಇನ್ನೇನು ಸಿಕ್ಕಿತು ಎಂದುಕೊಳ್ಳುವ ಹೊತ್ತಿಗೆ ಹಿಡಿದ ಮುಷ್ಟಿಯ ಬೆರಳ ಸಂದಿಯಿಂದಲೇ ನುಣುಚಿಕೊಂಡುಬಿಟ್ಟಿರುತ್ತದೆ. ಬರಹ ಬರಹಗಾರನನ್ನು ಕಾಡುತ್ತದೆ. ಪರಿತಪಿಸುವಂತೆ ಮಾಡುತ್ತದೆ. ಕೊನೇ…ಗೆ ಕೈಗೆ ಸಿಕ್ಕು ಪರಮಾನಂದವನ್ನೂ ಉಂಟುಮಾಡುತ್ತದೆ. ಬರಹಗಾರ ಆ ಆನಂದಕ್ಕಾಗಿಯೇ ಗರ್ಭಧಾರಣೆ ಮತ್ತು ಪ್ರಸವ ವೇದನೆಯೆಲ್ಲವನ್ನೂ ಪ್ರೀತಿ, ನಿರೀಕ್ಷೆ, ಕಾತರ, ಕುತೂಹಲದಿಂದ ತಾಳಿಕೊಳ್ಳುತ್ತಾನೆ. ಕೊನೆಗೊಂದು ದಿನ ಬರಹ ಹುಟ್ಟುತ್ತದೆ. ಅದು ಕವಿಯ ಮಮತೆಯ ಕೂಸು, ಕರುಳ ಬಳ್ಳಿ. ಬರಹಗಾರನಿಗೆ ತನ್ನ ಪ್ರತಿ ಬರಹದ ಬಗ್ಗೆ ಅದೇ ತಾಯಿ ಮಮತೆ ಇರುತ್ತದೆ. ಆದರೆ ಅದು ಮೋಹಕ್ಕೆ ತಿರುಗಬಾರದು. ಆ ಮೋಹದಿಂದ ಪಾರಾಗುವುದೂ ತಪಸ್ಸೇ.
ಹೀಗೆ ಬರಹದ ಬಗ್ಗೆ, ಬರಹದ ಸಾಧ್ಯತೆಗಳ ಬಗ್ಗೆ ಪುಟಗಟ್ಟಲೇ ಚರ್ಚಿಸುತ್ತಲೇ ಇರಬಹುದು. ಬಹುಶಃ ಅದು ಮುಗಿಯುವುದೇ ಇಲ್ಲ. ಇದೆಲ್ಲವೂ ಹೀಗೇ ಇಂತೇ ಇಷ್ಟೇ ಎಂದು ಗೆರೆ ಗೀಚಿ ಹೇಳಬಹುದಾದಷ್ಟು ಸರಳ ವಿಷಯವಲ್ಲ. ಮತ್ತೆ ಯಾವ ಕ್ಷಣದ ವಿಧಿಗೆ ಒಲಿವ ಅದೃಷ್ಟವೋ ಯಾರಿಗೂ ಗೊತ್ತಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”