ಸಿಂದಘಟ್ಟದ ಶಾಸನವೊಂದರಲ್ಲಿ ಬರುವ ವಿವರದಂತೆ, ಸಿಂದಘಟ್ಟದ ಮಹಾಜನರು ಗಂಡಸಿಯ ಮಾದಂಣ ಹಾಗೂ ಬೊಮ್ಮಣ್ಣ ಎಂಬುವರಿಂದ 46 ವರಾಹ ಗದ್ಯಾಣಗಳನ್ನು ಪಡೆದು ಲಕ್ಷ್ಮೀನಾರಾಯಣ ದೇವರ ಪೂಜಾಕಾರ್ಯವನ್ನು ನಡೆಸುವ ಹಕ್ಕನ್ನು ಒಪ್ಪಿಸಿಕೊಟ್ಟರಂತೆ. ನಿತ್ಯಪೂಜಾದಿಗಳನ್ನು ನಡೆಸುವ ಹೊಣೆ ಅವರಿಬ್ಬರಿಗೆ ಸೇರಿದ್ದು, ದೇವಸ್ಥಾನದ ಜೀರ್ಣೋದ್ಧಾರ ಮಾಡಿಸುವ ಜವಾಬ್ದಾರಿ ಮಾತ್ರ ಮಹಾಜನಗಳಿಗೇ ಸೇರಿತ್ತೆಂದು ಈ ಶಾಸನ ವರ್ಣಿಸುತ್ತದೆ. ಈ ದೇವಾಲಯಕ್ಕಿಂತ ಸೊಗಸಿನ ಶಿಲ್ಪಾಲಂಕರಣವನ್ನು ಸಂಗಮೇಶ್ವರ ದೇಗುಲದಲ್ಲಿ ಕಾಣಬಹುದು. ಹೊಯ್ಸಳ ದೇವಾಲಯಗಳಲ್ಲಿ ತ್ರಿಕೂಟ ಎಂದರೆ ಮೂರು ಗರ್ಭಗುಡಿಗಳಿರುವ ಕಟ್ಟಡಗಳೇ ಹೆಚ್ಚು. ಇಲ್ಲಿ ಸಂಗಮೇಶ್ವರ ದೇವಾಲಯದಲ್ಲಿ ವಿಶೇಷವೆಂದರೆ, ದ್ವಿಕೂಟ ಎಂದರೆ ಎರಡು ಶಿಖರಗಳನ್ನು ಕಾಣಬಹುದು.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಅರವತ್ತೊಂಭತ್ತನೆಯ ಕಂತು
ಸಿಂದಘಟ್ಟವು ಜಿಲ್ಲಾ ಕೇಂದ್ರವಾದ ಮಂಡ್ಯದಿಂದ 54 ಕಿ.ಮೀ. ದೂರದಲ್ಲಿದ್ದು, ಪುರಾಣಪ್ರಸಿದ್ಧವಾದ ಮೇಲುಕೋಟೆ ಮಾರ್ಗವಾಗಿ ಇಲ್ಲಿಗೆ ತಲುಪಬಹುದು. ಮತ್ತೊಂದೆಡೆ ಕೆ.ಆರ್. ಪೇಟೆಯಿಂದ ಹದಿನೈದು ಕಿಮೀಗಳ ಅಂತರದಲ್ಲಿರುವ ಈ ಊರು ವಿವಿಧ ಶತಮಾನಗಳಲ್ಲಿ ಅನೇಕ ರಾಜವಂಶಗಳ ಆಳ್ವಿಕೆಗೊಳಪಟ್ಟಂತೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಸ್ಥಳ. ಹೊಯ್ಸಳರ ಕಾಲಕ್ಕೆ ಅಗ್ರಹಾರವಾಗಿ ಖ್ಯಾತವಾಗಿದ್ದ ಸಿಂದಘಟ್ಟದ ಹೆಸರು ಶಾಸನಗಳಲ್ಲಿ ಸಂಗಮೇಶ್ವರಪುರ ಎಂಬ ಹೆಸರಿನಿಂದಲೂ ಪರಿಚಿತವಾಗಿತ್ತು.
ಪ್ರಾಚೀನ ಕಾಲದಲ್ಲಿ ವೇದಾಧ್ಯಯನ, ವಿದ್ಯಾಪ್ರಸಾರ ಮೊದಲಾದ ಉದ್ದೇಶಗಳಿಗಾಗಿ ಕೆಲವು ಕೇಂದ್ರಗಳನ್ನು ಅಗ್ರಹಾರಗಳೆಂದು ಗುರುತಿಸಿ, ಅಗತ್ಯವಾದ ದಾನದತ್ತಿಗಳನ್ನು ಒದಗಿಸಲಾಗುತ್ತಿತ್ತು. ಅಂತಹ ಊರುಗಳಲ್ಲಿ ಊರಿನ ನಡುಭಾಗದಲ್ಲಿ ವಿಷ್ಣು ದೇವಾಲಯವೊಂದನ್ನೂ ಈಶಾನ್ಯದಿಕ್ಕಿನಲ್ಲಿ ಶಿವದೇಗುಲವನ್ನೂ ನಿರ್ಮಿಸಲಾಗುತ್ತಿತ್ತು. ಶಿವಾಲಯದ ಒಂದು ಬದಿಗೆ ಕೆರೆಯೋ ಕೊಳವೋ ಇರುವುದು. ಈ ಬಗೆಯ ವ್ಯವಸ್ಥೆಯಿದ್ದ ಊರುಗಳಲ್ಲಿ ಸಿಂದಘಟ್ಟವೂ ಒಂದು. ಸಿಂದಘಟ್ಟದ ಊರ ನಡುವೆ ಲಕ್ಷ್ಮೀನಾರಾಯಣ ದೇವಾಲಯವಿದೆ. ಈ ದೇವಾಲಯದ ಈಶಾನ್ಯದಿಕ್ಕಿಗೆ ಸ್ವಲ್ಪ ದೂರದಲ್ಲಿ ಸಂಗಮೇಶ್ವರ ದೇವಾಲಯ. ಅಲ್ಲೇ ಮುಂದೆ ವಿಶಾಲವಾದ ಕೆರೆ. ದೊಡ್ಡ ಬೆಟ್ಟವೊಂದರ ಹಿನ್ನೆಲೆಯಲ್ಲಿ ಕೆರೆಯ ನೋಟ ಮನೋಹರವಾಗಿ ಕಾಣುತ್ತದೆ.
ಲಕ್ಷ್ಮೀನಾರಾಯಣ ದೇವಾಲಯ ಹೊಯ್ಸಳರ ಕಾಲದ ನಿರ್ಮಾಣ. 1179ರ ವೇಳೆಗೆ ನಿರ್ಮಾಣವಾಗಿರುವ ದೇಗುಲವೆಂದು ಶಾಸನದಲ್ಲಿ ಹೇಳಿದೆ. ನಕ್ಷತ್ರಾಕಾರದ ಎತ್ತರದ ಜಗಲಿಯ ಮೇಲೆ ನಿರ್ಮಾಣಗೊಂಡಿರುವ ದೇವಾಲಯದ ಹೊರಗೋಡೆ ಶಿಲ್ಪಾಲಂಕಾರಗಳೇನೂ ಇಲ್ಲದೆ ಸರಳವಾಗಿದೆ. ಕೆಳಹಂತದಲ್ಲಿ ಪಟ್ಟಿಕೆಗಳಿದ್ದರೂ ಚಿತ್ತಾರವೇನೂ ಇಲ್ಲ. ಮೇಲಿನ ಶಿಖರ ದ್ರಾವಿಡ ಶೈಲಿಯಲ್ಲಿದ್ದು ಸರಳ-ಸುಂದರವಾಗಿದೆ. ಅದರ ಸುತ್ತ ಚಿಕ್ಕ ಚಿಕ್ಕ ಕಳಸಗಳನ್ನುಳ್ಳ ಕಿರುಗೋಪುರಗಳು ಶಿಖರದ ಅಂದವನ್ನು ಮಿಗಿಲುಗೊಳಿಸಿವೆ.
ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ ಹಾಗೂ ಮುಖಮಂಟಪಗಳನ್ನು ಒಳಗೊಂಡಿರುವ ಕಟ್ಟಡವಾಗಿದೆ. ದೇಗುಲದ ಮುಂದೆ ದೊಡ್ಡ ಧ್ವಜಸ್ತಂಭವಿದೆ. ಒಳಗುಡಿಯಲ್ಲಿರುವ ಲಕ್ಷ್ಮೀನಾರಾಯಣ ವಿಗ್ರಹವು ಹೊಯ್ಸಳ ಶೈಲಿಯ ಸುಂದರವಾದ ಶಿಲ್ಪ. ಒಳಗುಡಿಯ ದ್ವಾರಬಂಧದಲ್ಲಿ ಚಿತ್ರಿಸಿರುವ ದ್ವಾರಪಾಲಕರು, ಚೌಕಟ್ಟಿನ ಮೇಲಿನ ಮಕರತೋರಣ ಹಾಗೂ ಗಜಲಕ್ಷ್ಮಿಯರ ಚಿತ್ರಣ ಸರಳಸುಂದರವಾಗಿದೆ. ನಡುಮಂಟಪದ ಭುವನೇಶ್ವರಿಯ ವಿನ್ಯಾಸ ಆಕರ್ಷಕವಾಗಿದೆ. ಸರಸ್ವತಿ, ರಾಮಾನುಜಾಚಾರ್ಯ ಮೊದಲಾದ ಕಿರುವಿಗ್ರಹಗಳೂ ಇವೆ.
ಸಿಂದಘಟ್ಟದ ಶಾಸನವೊಂದರಲ್ಲಿ ಬರುವ ವಿವರದಂತೆ, ಸಿಂದಘಟ್ಟದ ಮಹಾಜನರು ಗಂಡಸಿಯ ಮಾದಂಣ ಹಾಗೂ ಬೊಮ್ಮಣ್ಣ ಎಂಬುವರಿಂದ 46 ವರಾಹ ಗದ್ಯಾಣಗಳನ್ನು ಪಡೆದು ಲಕ್ಷ್ಮೀನಾರಾಯಣ ದೇವರ ಪೂಜಾಕಾರ್ಯವನ್ನು ನಡೆಸುವ ಹಕ್ಕನ್ನು ಒಪ್ಪಿಸಿಕೊಟ್ಟರಂತೆ. ನಿತ್ಯಪೂಜಾದಿಗಳನ್ನು ನಡೆಸುವ ಹೊಣೆ ಅವರಿಬ್ಬರಿಗೆ ಸೇರಿದ್ದು, ದೇವಸ್ಥಾನದ ಜೀರ್ಣೋದ್ಧಾರ ಮಾಡಿಸುವ ಜವಾಬ್ದಾರಿ ಮಾತ್ರ ಮಹಾಜನಗಳಿಗೇ ಸೇರಿತ್ತೆಂದು ಈ ಶಾಸನ ವರ್ಣಿಸುತ್ತದೆ.
ಈ ದೇವಾಲಯಕ್ಕಿಂತ ಸೊಗಸಿನ ಶಿಲ್ಪಾಲಂಕರಣವನ್ನು ಸಂಗಮೇಶ್ವರ ದೇಗುಲದಲ್ಲಿ ಕಾಣಬಹುದು. ಹೊಯ್ಸಳ ದೇವಾಲಯಗಳಲ್ಲಿ ತ್ರಿಕೂಟ ಎಂದರೆ ಮೂರು ಗರ್ಭಗುಡಿಗಳಿರುವ ಕಟ್ಟಡಗಳೇ ಹೆಚ್ಚು. ಇಲ್ಲಿ ಸಂಗಮೇಶ್ವರ ದೇವಾಲಯದಲ್ಲಿ ವಿಶೇಷವೆಂದರೆ, ದ್ವಿಕೂಟ ಎಂದರೆ ಎರಡು ಶಿಖರಗಳನ್ನು ಕಾಣಬಹುದು. ಒಂದು ಗರ್ಭಗುಡಿಯಲ್ಲಿ ಸಂಗಮೇಶ್ವರನಿದ್ದರೆ ಮತ್ತೊಂದರಲ್ಲಿ ಜಂಗಮೇಶ್ವರ.
ದೇವಸ್ಥಾನದ ಒಳಗೆ ಕಾಲಿರಿಸುವಾಗಲೇ ಎರಡೂ ಬದಿಗಳಲ್ಲಿ ಒರಗುಪೀಠ ಅಥವಾ ಕಕ್ಷಾಸನವಿರುವ ಚಿಕ್ಕ ಮುಖಮಂಟಪವೂ ಅದರ ಒಳಛಾವಣಿಯ ಚಿತ್ತಾರದ ವಿನ್ಯಾಸವೂ ಗಮನಸೆಳೆಯುತ್ತವೆ. ದ್ವಾರಬಂಧದ ಆಚೀಚೆಗೆ ದ್ವಾರಪಾಲಕರು; ಚೌಕಟ್ಟಿನ ಮೇಲಿನ ಲಲಾಟದಲ್ಲಿ ಗಜಲಕ್ಷ್ಮಿ ವಿಗ್ರಹವಿದೆ. ಇದೇ ಬಗೆಯ ದ್ವಾರಬಂಧವು ಒಳಗುಡಿಯಲ್ಲೂ ಕಂಡುಬರುತ್ತದೆ. ಎರಡೂ ಗರ್ಭಗುಡಿಗಳೆದುರಿಗೆ ಕುಳಿತ ನಂದಿಯ ಶಿಲ್ಪಗಳು ಸಾಲಂಕೃತವಾಗಿವೆ. ನವರಂಗದ ಕಂಬಗಳ ಕೆತ್ತನೆಯೂ ಒಳಛಾವಣಿಯ ಭುವನೇಶ್ವರಿಯ ವಿನ್ಯಾಸಗಳೂ ವಿಭಿನ್ನ ಶೈಲಿಯಿಂದ ಕಣ್ಸೆಳೆಯುವಂತಿವೆ.
ನಡುಮಂಟಪದಲ್ಲಿರಿಸಿರುವ ಚನ್ನಕೇಶವ, ಮಯೂರವಾಹನ ಕಾರ್ತಿಕೇಯ, ಸಪ್ತಮಾತೃಕೆಯರು ಹಾಗೂ ಗಣಪತಿ ಮೊದಲಾದ ಪ್ರಾಚೀನ ವಿಗ್ರಹಗಳು ಭಗ್ನವಾಗಿದ್ದರೂ ಆಕರ್ಷಕವಾಗಿವೆ. ಇವೆಲ್ಲಕ್ಕಿಂತ ಮಿಗಿಲಾದ ಶಿಲ್ಪವೆಂದರೆ ಸೂರ್ಯನ ವಿಗ್ರಹ. ಎರಡೂ ಕೈಗಳಲ್ಲಿ ಕಮಲಗಳನ್ನು ಹಿಡಿದು ನಿಂತ ಸೂರ್ಯನ ಆಚೀಚೆಗೆ ಬಿಲ್ಲುಬಾಣಗಳನ್ನು ಹಿಡಿದ ಉಷೆ-ಪ್ರತ್ಯೂಷೆಯರಿದ್ದಾರೆ. ಒಳಗುಡಿಯ ಬಾಗಿಲ ಚೌಕಟ್ಟಿನ ಮೇಲಿನ ಪಟ್ಟಿಯಲ್ಲಿ ಉಮೆಯೊಡನೆ ಕುಳಿತ ಶಿವ ಹಾಗೂ ಆಚೀಚೆಗೆ ನಿಂತ ಗಣಪ, ಸುಬ್ರಹ್ಮಣ್ಯರ ಚಿತ್ರಣವಿದೆ.
ಸಿಂದಘಟ್ಟದ ಹೆಸರನ್ನು ಹೇಳುವಾಗ ಸಾಮಾನ್ಯವಾಗಿ ನೆನಪಿಗೆ ಬರುವ ಗಾದೆಮಾತೊಂದಿದೆ. ಸಿಂದಘಟ್ಟದ ದೇವರು ಹಿಂದುಮುಂದಾದ ಹಾಗೆ ಎನ್ನುವುದೊಂದು ಜನಪ್ರಿಯ ನಾಣ್ಣುಡಿ. ಇದರ ಹಿನ್ನೆಲೆಯನ್ನು ತಿಳಿಯುವ ಕುತೂಹಲದಿಂದ ಸ್ಥಳೀಯರನ್ನು ಕೇಳುವಾಗ ಅವರು ವಿವರಿಸಿದ್ದು ಹೀಗೆ: ಊರ ಹೊರಗಿನ ಗುಡ್ಡವೊಂದರ ಸಮೀಪ ಕಲ್ಲಿನ ಗುಡಿಯಿದೆ. ಅಲ್ಲಿ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದ್ದು ನಿತ್ಯ ಪೂಜೆಯೂ ನಡೆಯುತ್ತಿತ್ತು. ಒಂದು ರಾತ್ರಿ ಸಮೀಪದ ಕಾಡಿನಿಂದ ಬಂದ ಕಾಡುಹಂದಿಯೊಂದು ವಿಗ್ರಹದ ಪಾಣಿಪೀಠಕ್ಕೆ ಮೈಯುಜ್ಜಿಕೊಳ್ಳತೊಡಗಿತಂತೆ. ಆಗ ಪಾಣಿಪೀಠದ ಮೇಲಿರಿಸಿದ ವಿಗ್ರಹ ಸಡಿಲವಾಗಿ ಹಿಂದಕ್ಕೆ ತಿರುಗತೊಡಗಿತು. ಮಾರನೆಯ ದಿನ ಪೂಜೆಗೆಂದು ಅರ್ಚಕರು ಬಂದಾಗ ಅವರಿಗೆ ಕಾಣಿಸಿದ್ದು ದೇವರ ಬೆನ್ನು! ವಿಷಯ ತಿಳಿದು ಧಾವಿಸಿ ಬಂದ ಊರವರಿಗೆ ಪವಾಡಕ್ಕಿಂತ ವರಾಹನ ಕೈವಾಡವೇ ಗೋಚರಿಸಿ, ಗಾದೆಮಾತೊಂದು ಹುಟ್ಟಿಕೊಳ್ಳಲು ಆಸ್ಪದವಾಯಿತು.
ಸಿಂದಘಟ್ಟಕ್ಕೆ ಬರುವವರು ಸಮೀಪದ ಹೊಸಹೊಳಲು, ಸಾಸಲು ಮೊದಲಾದ ಸ್ಥಳಗಳಲ್ಲಿರುವ ಹಳೆಯ ದೇವಾಲಯಗಳನ್ನೂ ನೋಡಿಕೊಂಡು ಬರಬಹುದು. ಮೇಲುಕೋಟೆಯೂ ಇಲ್ಲಿಗೆ ಸಮೀಪದ ಇನ್ನೊಂದು ಪ್ರೇಕ್ಷಣೀಯ ಸ್ಥಳ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.