ಮಾನವ ಜಾತಿಗೆ ಲಕ್ಷಾಂತರ ವರ್ಷಗಳ ಇತಿಹಾಸ ಇರುವುದಾದರೂ, ನಾವು ಬರೆಯಲು ಪ್ರಾರಂಭಿಸಿದ್ದು ತೀರಾ ಇತ್ತೀಚೆಗೆ; ಐದು-ಆರು ಸಾವಿರ ವರ್ಷಗಳ ಹಿಂದೆ. ಈ ಬರಹದ ತಂತ್ರಜ್ಞಾನ ಎಲ್ಲರಿಗೂ ದೊರಕತೊಡಗಿದ್ದು ಇನ್ನೂ ಇತ್ತೀಚೆಗೆ; ಸುಮಾರು ಐನೂರು ವರ್ಷಗಳ ಹಿಂದೆ ಪ್ರಿಂಟಿಂಗ್ ಪ್ರೆಸ್‌ ನ ಅವಿಷ್ಕಾರವಾದ ನಂತರ. ಅಲ್ಲಿಯವರೆಗೆ, ನಮ್ಮೆಲ್ಲಾ ಕಲಿಕೆಗಳೂ, ಅನುಭವಗಳೂ ಬಹು ಮಟ್ಟಿಗೆ ನಮ್ಮ ಮಿದುಳಿನಲ್ಲಷ್ಟೇ ಉಳಿದಿರುತ್ತಿದ್ದ ನೆನಪುಗಳಷ್ಟೇ. ಹೀಗಾಗಿ ಈ “ನೆನಪಿನ ಶಕ್ತಿ”ಗೆ ತನ್ನದೇ ಆದ ಪ್ರಾಮುಖ್ಯತೆ ಇತ್ತು. ಕೆಲವೊಂದು ಸಂಸ್ಕೃತಿಗಳು ಈ ಪ್ರಾಮುಖ್ಯತೆಯನ್ನು ಸೂಚ್ಯವಾಗಷ್ಟೇ ಗುರುತಿಸಿದರೆ, ಇನ್ನೂ ಕೆಲವು ಸಂಸ್ಕೃತಿಗಳು ಅದಕ್ಕೊಂದು ನಿರ್ದಿಷ್ಟತೆಯನ್ನು ನೀಡಿವೆ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಇದು “ಅಪರಿಚಿತ” ಚಲನಚಿತ್ರದಲ್ಲಿ, ಅದರ ನಾಯಕಿಯ ಮೇಲೆ ಚಿತ್ರೀಕರಿಸಲಾದ ಗೀತೆ. ಆ ಚಿತ್ರ ಬಿಡುಗಡೆಯಾದಾಗ ನಾನಿನ್ನೂ ಸಣ್ಣ ಹುಡುಗ. ನನಗೆ ನೆನಪಿರುವಂತೆ, “ಅಪರಿಚಿತ” ನಾನು ನೋಡಿದ ಪ್ರಪ್ರಥಮ “ದೊಡ್ಡವರು ನೋಡೋ ಪಿಕ್ಚರ್”. ಅದಕ್ಕೆ ಮುಂಚೆಯೇ “ಆಂಧಿ” ಇತ್ಯಾದಿ ಹಲವಾರು ಹಿಂದಿ ಚಲನ ಚಿತ್ರಗಳನ್ನು ನೋಡಿದ್ದೆನಾದರೂ, ಹಿಂದಿ ಭಾಷೆ ಬರದಿದ್ದ ನನಗೆ ಅವುಗಳು “ದೊಡ್ಡವರ ಪಿಕ್ಚರ್” ಎನ್ನಿಸಿರಲಿಲ್ಲ; ನನಗೆ ಅರ್ಥವಾಗದ ಪಿಕ್ಚರ್‌ ಗಳು ಅಷ್ಟೇ ಆಗಿದ್ದವು. ಡಾ.ರಾಜಕುಮಾರ್ ಚಿತ್ರಗಳು ಮತ್ತು ನಮ್ಮೂರಿನಲ್ಲಿ ಅವಕ್ಕಿಂತ ಹೆಚ್ಚು ಚಾಲ್ತಿಯಲ್ಲಿದ್ದ ಎನ್.ಟಿ.ಆರ್. ಅವರ ತೆಲುಗು ಚಿತ್ರಗಳು ನನಗೆಂದೂ “ದೊಡ್ಡವರ ಪಿಕ್ಚರ್” ಆಗಿರಲೇ ಇಲ್ಲ.

ತೆಲುಗು ಭಾಷೆಯೇ ಮುಖ್ಯ ಸಂವಹನ ಭಾಷೆಯಾಗಿದ್ದ ನಮ್ಮ ಊರಿಗೆ ಕನ್ನಡ ಚಿತ್ರಗಳು ಬರುತ್ತಿದ್ದುದೇ ಅಪರೂಪ. ಬಂದರೂ, ಬೆಂಗಳೂರಿನಲ್ಲಿ ಬಿಡುಗಡೆಯಾದ ಒಂದು ವರ್ಷದ ನಂತರ ಬರುತ್ತಿದ್ದವು.

(ಶೋಭಾ)

ನಾನು “ಅಪರಿಚಿತ” ನೋಡುವ ಮುಂಚೆಯೇ, ವಿವಿಧ ಭಾರತೀಯ ಚಿತ್ರ ಗೀತೆಗಳ ಕಾರ್ಯಕ್ರಮದಲ್ಲಿ “ಸವಿ ನೆನಪುಗಳು ಬೇಕು..” ಹಾಡನ್ನು ಹಲವಾರು ಬಾರಿ ಕೇಳಿದ್ದೆ. ಶೋಕದ ಗೀತೆಯಾದರೂ, ನನ್ನ ಮನ ಮುಟ್ಟಿತೆಂದೇನೂ ಹೇಳಲಾರೆ. ಆದರೆ, ನಾನು ಆ ಚಿತ್ರ ನೋಡಿದ ಕೆಲವೇ ಸಮಯದಲ್ಲಿ, ಆ ಚಿತ್ರದ ನಾಯಕಿಯ ಪಾತ್ರದಲ್ಲಿ ನಟಿಸಿದ್ದ ಶೋಭಾ ಎಂಬ ನಟಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿಷಯ ತಿಳಿದಾಗ, ಆ ಹಾಡಿಗೆ ನನ್ನ ಮನಸ್ಸಿನಲ್ಲಿ ಮತ್ತೆಷ್ಟೋ ಅರ್ಥಗಳು ಮೂಡತೊಡಗಿದವು. ಶೋಭಾ ಆತ್ಮಹತ್ಯೆ ಮಾಡಿಕೊಂಡಾಗ, ಆಕೆಗೆ ಇನ್ನೂ ಕೇವಲ ಹದಿನೇಳೇ ವರ್ಷ ವಯಸ್ಸು; ನನಗಿಂತ ಅಷ್ಟೇನೂ ದೊಡ್ಡವಳಾಗಿರಲಿಲ್ಲ.

ಯಾವ ನೆನಪುಗಳು ಆಕೆಯನ್ನು ಆತ್ಮಹತ್ಯೆಗೆ ದೂಡುವಷ್ಟು ಕಾಡಿರಬಹುದು ಎಂದೆಲ್ಲಾ ಯೋಚಿಸುತ್ತಿದ್ದೆ. ನಮ್ಮ ಗತ ಕಾಲದ ಸಂತೋಷದ ಅನುಭವಗಳ ನೆನಪುಗಳು, ವರ್ತಮಾನದಲ್ಲಿ ಸಂತಸವನ್ನುಂಟು ಮಾಡುತ್ತವೋ, ಇಲ್ಲಾ, ಅವೆಲ್ಲಾ ಈಗ ನೆನಪುಗಳಷ್ಟೇ ಆಗಿರುವ ಪ್ರಜ್ಞೆ ಮೂಡಿ ನಮ್ಮನ್ನು ದುಃಖದೆಡೆಗೆ ಕೊಂಡೊಯ್ಯುವವೋ ಇಂತಹ ಆಲೋಚನೆಗಳೂ ಬರುತ್ತಿದ್ದವು.

*****

ಯಾವುದೇ ಟೈಮ್ ಮಷೀನ್ ಸಹಾಯವಿಲ್ಲದೆ ಕಾಲ-ಪ್ರಯಾಣ ಮಾಡಬೇಕಿಂದಿದ್ದರೆ, “ನೆನಪು”ಗಳಿಗಿಂತ ಸುಲಭ ಸಾಧನ ಬೇರೊಂದಿಲ್ಲ. ನೆನಪುಗಳ ಮೂಲಕ ಮಾಡುವ ಟೈಮ್ ಟ್ರಾವೆಲ್‌ನಲ್ಲಿ, ಎಚ್.ಜಿ.ವೆಲ್ಸ್‌ ನ ತರ್ಕಕ್ಕೆ ಸಿಗದ ಪ್ಯಾರಡಾಕ್ಸ್ ಇಲ್ಲ. ಅಥವಾ, ಅತಿ ವೇಗದಲ್ಲಿ ಗಗನಯಾನ ಮಾಡುವ ಅಸ್ಟ್ರೊನಾಟ್‌ ಒಬ್ಬಳು ತನ್ನ ತಂಗಿಗಿಂತ ವಯಸ್ಸಿನಲ್ಲಿ ಚಿಕ್ಕವಳಾಗುವಂತಹ ವೈರುಧ್ಯವೂ ಇಲ್ಲ. ಎಲ್ಲವೂ ಸುಸಂಬದ್ಧ, ಸುಸೂತ್ರ.

ಟೈಮ್ ಮಷೀನಿನಲ್ಲಿ ಕುಳಿತು ನಿಮ್ಮ ಗತಕಾಲಕ್ಕೆ ಮರಳಿದರೆ, ಅಲ್ಲಿ ನಿಮ್ಮನ್ನು ನೀವೇ ಕಾಣುವ ಸಾಧ್ಯತೆ ಇರಬಹುದು. ಆದರೆ, ಟೈಮ್ ಮಷೀನ್ ನಿಮ್ಮನ್ನು ನೀವಾಗಿಸುವುದಿಲ್ಲ; ನಿಮ್ಮನ್ನು ನೀವಾಗಿಸುವುದು ನಿಮ್ಮ ನೆನಪುಗಳೇ. ನಮ್ಮ ಜೀವನದ ಅನುಭವ, ಕಲಿಕೆಗಳ ಉಳಿಕೆಗಳೇ ಉಳಿಗಳಾಗಿ ನಮ್ಮ ವ್ಯಕ್ತಿತ್ವದ ಶಿಲ್ಪವನ್ನು ಕಡೆದು ನಮ್ಮನ್ನು ರೂಪಿಸುವುದು ನಿಜವಲ್ಲವೇ?! ನಮ್ಮ ನೆನಪುಗಳೇ ನಮ್ಮ ಅಸ್ಮಿತೆ (identity). ನಮ್ಮೆಲ್ಲಾ ಭಾವಗಳ, ನೋವು-ನಲಿವುಗಳ ಒಳ ಉದ್ದೇಶ ನೆನಪುಗಳಾಗಿ ಉಳಿಯುವುದಷ್ಟೇ. ಉದಾಹರಣೆಗೆ, ನಾವು ಅನುಭವಿಸುವ ಅತ್ಯಂತ “ಅಥೆಂಟಿಕ್” ಭಾವವೊಂದಿದ್ದರೆ, ಅದು “ನೋವು”. ಆದರೆ, ಈ “ನೋವು” ಎಂಬುದು ಸಹ ನಮ್ಮ ಮಿದುಳು ಸೃಷ್ಟಿಸುವ ಕಟ್ಟುಕತೆ (fiction). ಆದರೆ ಈ ಕಟ್ಟುಕತೆಗಳ ನೆನಪುಗಳು ನಮ್ಮನ್ನು ಬದುಕುಳಿಸುತ್ತವೆ. ಹಾಗೆಯೇ, ನೆನಪುಗಳೇ ನೋವಾಗತೊಡಗಿದಾಗ ಕೆಲವೊಮ್ಮೆ ನಮ್ಮನ್ನು ಸಾವಿನೆಡೆಗೂ ದೂಡುತ್ತವೆ.

ಆದರೆ, ಈ “ನೆನಪು”, “ಜ್ಞಾಪಕ”, “ಸ್ಮೃತಿ”, “ಸ್ಮರಣೆ”ಗಳೆಂದರೆ ಏನು? ಅವು ನಮ್ಮ ಮಿದುಳಿನ ಉಗ್ರಾಣದೊಳಗೆ ಸೇರುವುದಾದರೂ ಹೇಗೆ? ಇವಕ್ಕೆ ನಮ್ಮ ದೇಹವನ್ನೂ ಮೀರಿದ ಆಯಾಮವೊಂದಿದೆಯೇ? ದೇಹದ ಸಾವಿನೊಂದಿಗೆ, ಜೀವದ ನೆನಪುಗಳೂ ಸತ್ತು ಹೋಗುವವೆ? ಧಾರ್ಮಿಕ ನಂಬಿಕೆಗಳು ತಿಳಿಸುವ “ಆತ್ಮ” ಎನ್ನುವುದು ಇದ್ದರೆ, ಅದಕ್ಕೂ ನೆನಪುಗಳು ಇರುತ್ತದೆಯೇ?

ಇಂತಹ ಪ್ರಶ್ನೆಗಳು ಯಾವುವೂ ಹೊಸವಲ್ಲ. ಇವೆಲ್ಲಾ ಅನಾದಿಕಾಲದಿಂದ ಮಾನವರು ಕೇಳಿಕೊಳ್ಳುತ್ತಿರುವ ಪ್ರಶ್ನೆಗಳೇ. ಸಹಸ್ರಾರು ವರ್ಷಗಳಿಂದ ತತ್ವಶಾಸ್ತ್ರಜ್ಞರ ಚರ್ಚೆಯ ವಿಷಯಗಳಾಗಿದ್ದ ಇಂತಹ ಪ್ರಶ್ನೆಗಳಿಗೆ, ಈಗ ಆಧುನಿಕ ವಿಜ್ಞಾನ ಉತ್ತರ ನೀಡುವ ಸಮಯ ಹತ್ತಿರವಾಗುತ್ತಿದೆ. ತನ್ನದೇ ಮಿತಿಗಳೊಂದಿಗೆ.

ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ವಿಚಾರಧಾರೆಗಳ ತೈತ್ತೀರಿಯ ಉಪನಿಷತ್ತಿನಲ್ಲಿ ನಮ್ಮ ಆತ್ಮವನ್ನು ಶರೀರದ ಐದು ಕೋಶಗಳು ಆವೃತಗೊಳಿಸುವ ವಿಷಯವಿದೆ. ಆ ಐದು ಕೋಶಗಳಲ್ಲಿ, “ಮನೋಮಯ” ಮತ್ತು “ವಿಜ್ಞಾನಮಯ” ಕೋಶಗಳು ನಮ್ಮ “ಮನಸ್ಸು” ಮತ್ತು “ಬುದ್ಧಿ”ಗೆ ಸಂಬಂಧಿಸುವಂತಹಗಳು. ಈ ವಿಚಾರಗಳ ಚರ್ಚೆಯಲ್ಲಿ, “ನೆನಪು”ಗಳ ಬಗೆಗೆ ಸ್ಪಷ್ಟ (explicit) ಚಿಂತನೆ ಇಲ್ಲವಾದರೂ, ಅದು ಅಂತರ್ಗತವಾಗಿದೆ.

ನಾನು ವೇದಾಂತಿ ಅಥವಾ ತತ್ವಶಾಸ್ತ್ರಜ್ಞನಲ್ಲ. ಬದಲಿಗೆ, ನಾನು, ದೈಹಿಕ ಶರೀರವನ್ನು ಮೀರಿದ ಆತ್ಮದಲ್ಲಿ ನಂಬುಗೆ ಇರದ, ಆಧುನಿಕ ವಿಜ್ಞಾನದಲ್ಲಿ ಆಸಕ್ತಿ ಉಳ್ಳ ನಾಸ್ತಿಕ. ಹೀಗಾಗಿ, “ಆತ್ಮ” ಮತ್ತು ಆಧ್ಯಾತ್ಮದ ವಿಚಾರಗಳನ್ನು ಇಲ್ಲಿ ಇನ್ನಷ್ಟು ಉಲ್ಲೇಖಿಸುವುದು ಸೂಕ್ತವಲ್ಲ ಎನ್ನಿಸುತ್ತದೆ.

“ನೆನಪು” ಅಥವಾ ಇಂಗ್ಲೀಷಿನ “ಮೆಮರಿ” ಎಂದರೆ, ಮಾಹಿತಿಯ ಸಂಪಾದನೆ, ಸಂಗ್ರಹ ಮತ್ತು ಅದನ್ನು ಮರು-ಪಡೆಯುವಿಕೆಯ ಪ್ರಕ್ರಿಯೆ ಎಂಬ ಅರ್ಥದ ಮಿತಿಯೊಳಗೇ ಈ ಲೇಖನವನ್ನು ಮುಂದುವರೆಸುವುದು ಸರಿ ಎನ್ನಿಸುತ್ತದೆ.

******

(ಪ್ಲೇಟೋ)

ಮಾನವ ಜಾತಿಗೆ ಲಕ್ಷಾಂತರ ವರ್ಷಗಳ ಇತಿಹಾಸ ಇರುವುದಾದರೂ, ನಾವು ಬರೆಯಲು ಪ್ರಾರಂಭಿಸಿದ್ದು ತೀರಾ ಇತ್ತೀಚೆಗೆ; ಐದು-ಆರು ಸಾವಿರ ವರ್ಷಗಳ ಹಿಂದೆ. ಈ ಬರಹದ ತಂತ್ರಜ್ಞಾನ ಎಲ್ಲರಿಗೂ ದೊರಕತೊಡಗಿದ್ದು ಇನ್ನೂ ಇತ್ತೀಚೆಗೆ; ಸುಮಾರು ಐನೂರು ವರ್ಷಗಳ ಹಿಂದೆ ಪ್ರಿಂಟಿಂಗ್ ಪ್ರೆಸ್‌ ನ ಅವಿಷ್ಕಾರವಾದ ನಂತರ. ಅಲ್ಲಿಯವರೆಗೆ, ನಮ್ಮೆಲ್ಲಾ ಕಲಿಕೆಗಳೂ, ಅನುಭವಗಳೂ ಬಹು ಮಟ್ಟಿಗೆ ನಮ್ಮ ಮಿದುಳಿನಲ್ಲಷ್ಟೇ ಉಳಿದಿರುತ್ತಿದ್ದ ನೆನಪುಗಳಷ್ಟೇ. ಹೀಗಾಗಿ ಈ “ನೆನಪಿನ ಶಕ್ತಿ”ಗೆ ತನ್ನದೇ ಆದ ಪ್ರಾಮುಖ್ಯತೆ ಇತ್ತು. ಕೆಲವೊಂದು ಸಂಸ್ಕೃತಿಗಳು ಈ ಪ್ರಾಮುಖ್ಯತೆಯನ್ನು ಸೂಚ್ಯವಾಗಷ್ಟೇ ಗುರುತಿಸಿದರೆ, ಇನ್ನೂ ಕೆಲವು ಸಂಸ್ಕೃತಿಗಳು ಅದಕ್ಕೊಂದು ನಿರ್ದಿಷ್ಟತೆಯನ್ನು ನೀಡಿವೆ. ಉದಾಹರಣೆಗೆ, ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ “ಶ್ರುತಿ – ಸ್ಮೃತಿ”ಗಳು ಪ್ರಾಮುಖ್ಯವಾಗಿದ್ದರೂ, ಪುರಾತನ ಗ್ರೀಕರಂತೆ ನೆನಪಿನ ಶಕ್ತಿಗೇ ಸಂಬಂಧಿಸಿದ ದೇವ/ದೇವತೆ ಇಲ್ಲ.

ಪುರಾತನ ಗ್ರೀಕರಿಗೆ “ನಿಮೋಸಿನೆ” ನೆನಪಿನ ಶಕ್ತಿಯ ದೇವತೆ. ಅವರ ನಂಬಿಕೆಯ ಪ್ರಕಾರ, “ಸ್ತೋತ್ರ”, “ಇತಿಹಾಸ”, “ಕಾವ್ಯ”, “ಸಂಗೀತ”, “ನೃತ್ಯ”, ಇತ್ಯಾದಿ ಕಲೆಗಳು ಆಕೆಯ ಮಕ್ಕಳು. ಆಕೆ, ಒಬ್ಬ ಟೈಟಾನಳಾಗಿದ್ದರಿಂದ, ನಿಮೋಸಿನೆಯನ್ನು ಪುರಾತನ ಗ್ರೀಕರು ಪೂಜಿಸುತ್ತಿರಲಿಲ್ಲವಾದರೂ, ಬರಹಗಳು ಸಾಮಾನ್ಯವಾಗಿರದಿದ್ದ, ಮಹಾಕಾವ್ಯಗಳೂ ಮೌಖಿಕವಾಗಿಯೇ (oral) ಸಂವಹಿಸಬೇಕಿದ್ದ, ಆ ಕಾಲದಲ್ಲಿ, ಕಾವ್ಯಗಳ ಮೊದಲ ಸಾಲುಗಳಲ್ಲಿ ಆಕೆಯ ಹೆಸರನ್ನು (ಕೊಂಚ ಮಟ್ಟಿಗೆ ನಮ್ಮ “ಶ್ರೀ ಗಣೇಶ”ದಂತೆ) ಉಲ್ಲೇಖಿಸುವುದು ಪ್ರಚಲಿತವಿತ್ತು. ಮಹಾಕವಿ ಹೋಮರ್‌ ನ ಇಲಿಯಡ್ ಮತ್ತು ಒಡಿಸಿಗಳೂ ಸೇರಿದಂತೆ, ಗ್ರೀಕ್ ಕಾವ್ಯಗಳಲ್ಲಿ ಇದನ್ನು ನೋಡಬಹುದು.

ನೆನಪಿನ ಶಕ್ತಿಯ ಕುರಿತು ಒಂದು ನಿರ್ದಿಷ್ಟ ಚಿಂತನೆ ಮಾಡಿ, ಅದಕ್ಕೊಂದು ಸ್ವರೂಪ ನೀಡಿದವರಲ್ಲಿ ಮೊದಲಿಗನೆಂದರೆ, ಗ್ರೀಕ್ ತತ್ವಶಾಸ್ತ್ರಜ್ಞ ಪ್ಲೇಟೋ. ಅವನು ತನ್ನ ಥಿಯಾಟೆಟಸ್ ಕೃತಿಯಲ್ಲಿ, ಸಾಕ್ರೆಟೆಸ್‌ ನ ಮೂಲಕ ಈ ಮಾತುಗಳನ್ನಾಡಿಸುತ್ತಾನೆ: “ಪ್ರತಿ ಮನುಷ್ಯನ ಮನದಲ್ಲೂ ಒಂದು ಮೇಣದ ಸ್ಲೇಟ್ ಇದೆ. ಇದು ನಿಮೋಸಿನೇಳ ಕೊಡುಗೆ. ಅದರ ಗಾತ್ರ ಮಾತ್ರ ಪ್ರತಿಯೊಬ್ಬರಿಗೂ ಬೇರೆ-ಬೇರೆ. ಹಾಗೆಯೇ, ಮೇಣದ ನುಣುಪು, ಆದ್ರತೆ, ಶುದ್ಧತೆಗಳೂ ಸಹ. ನಮ್ಮೆಲ್ಲಾ ಅನುಭವಗಳು, ಕಲಿಕೆಗಳು ಅದರಲ್ಲಿ ಅಚ್ಚೊತ್ತುತ್ತವೆ. ಆ ಅಚ್ಚುಗಳು ಮಾಸದವರೆಗೂ, ಅವು ನೆನಪಿನಲ್ಲಿರುತ್ತವೆ. ಅವು ಮಾಸತೊಡಗಿದಂತೆ, ನಾವೂ ಅವನ್ನು ಮರೆಯತೊಡಗುತ್ತೇವೆ.”

ತನ್ನ ಈ ಮೇಣದ ಸ್ಲೇಟ್ ಮೂಲಕ, ಪ್ಲೇಟೋ, ನೆನಪಿನ ಶಕ್ತಿಯ ವೈವಿಧ್ಯತೆಯನ್ನೂ ವಿವರಿಸುತ್ತಾನೆ. ಅವನ ಪ್ರಕಾರ: “ಈ ಮೇಣದ ಸ್ಲೇಟು ಆಳವಾಗಿಯೂ, ನುಣುಪಾಗಿಯೂ, ವಿಶಾಲವಾಗಿಯೂ, ಉತ್ತಮ ಗುಣಮಟ್ಟದ್ದಾಗಿಯೂ ಇದ್ದರೆ, ಅಂತಹವರ ಮನದಲ್ಲಿ ನೆನಪುಗಳು ಬಹು ಬೇಗನೆ ಮನೆ ಮಾಡುತ್ತವೆ, ಹಾಗೆಯೇ ಬಹುಕಾಲ ಇರುತ್ತದೆ. ಆ ಮೇಣದ ಆದ್ರತೆ ಹೆಚ್ಚಿದ್ದರೆ, ಅಂತಹವರ ಮನದಲ್ಲಿ ನೆನಪುಗಳು ಬೇಗನೆ ನೆಲೆಸುವವಾದರೂ, ಅವು ಬೇಗನೆ ಮಾಸಿಯೂ ಹೋಗುತ್ತವೆ. ಆದರೆ, ಮೇಣ ಗಟ್ಟಿ ಇದ್ದರೆ, ಅಂತಹವರ ಮನಸ್ಸಿನಲ್ಲಿ ನೆನಪುಗಳು ಮೂಡಲು ಹೆಚ್ಚಿನ ಸಮಯ ಬೇಕು. ಆದರೆ, ಆ ನೆನಪುಗಳು ಬಹಳಕಾಲ ಉಳಿದಿರುತ್ತವೆ. ಮೇಣದ ಶುದ್ಧತೆ ಸರಿ ಇರದಿದ್ದರೆ, ನೆನಪುಗಳಲ್ಲೂ ತಪ್ಪುಗಳು ಸೇರಿಕೊಳ್ಳುತ್ತವೆ.”

ನೆನಪಿನ ಶಕ್ತಿಯನ್ನು ವಿವರಿಸಲು ಪ್ಲೇಟೋ ಉಪಯೋಗಿಸುವ ಈ ಮೇಣದ ಸ್ಲೇಟ್ ಒಂದು ರೂಪಕವಷ್ಟೇ. ಮುಂದೆ, ಅವನು ಇನ್ನೊಂದು ರೂಪಕವನ್ನೂ ಉಪಯೋಗಿಸುತ್ತಾನೆ. ಅದು, ಹಕ್ಕಿಗಳ ಗೂಡು.. ಪ್ಲೇಟೋನ ಈ ವಿವರಣೆಯಲ್ಲಿ, ನಾವು ಹುಟ್ಟಿದಾಗ ಈ ಗೂಡು ಖಾಲಿ ಇರುತ್ತದೆ. ಜ್ಞಾನಾರ್ಜನೆ ಎನ್ನುವುದನ್ನು ಹಕ್ಕಿಗಳನ್ನು ಈ ಗೂಡಿನಲ್ಲಿ ಹಿಡಿದಿಡುವ ಪ್ರಯತ್ನಕ್ಕೆ ಹೋಲಿಸುತ್ತಾನೆ ಅವನು. ಹಾಗೆಯೇ, ಅವನ ದೃಷ್ಟಿಯಲ್ಲಿ, ನೆನಪೆಂದರೆ, ಹಿಡಿದಿಟ್ಟ ಹಕ್ಕಿಗಳನ್ನು ಗೂಡಿನಿಂದ ಹೊರ ತೆರೆಯುವುದು.

ಪ್ಲೇಟೋ ನೆನಪಿನ ಶಕ್ತಿಯ ಕುರಿತು ಚಿಂತಿಸಿದ್ದರೂ, ಅವನ ಆ ಚಿಂತನೆಗಳು ಆತ್ಮ ಮತ್ತು ಜ್ಞಾನದ ಚರ್ಚೆಯ ಪ್ರವಾಹಕ್ಕೆ ಸೇರುವ ಉಪನದಿಗಳು ಮಾತ್ರ. ಪ್ಲೇಟೋ, ನೆನಪಿನ ಶಕ್ತಿಯನ್ನು ಆತ್ಮದೊಂದಿಗೆ ಒಂದಾಗಿಸಿ, ಅದಕ್ಕೆ ಭೌತಿಕ ಶರೀರವನ್ನೂ ಮೀರಿದ ಆಯಾಮವೊಂದನ್ನು ಕೊಡುತ್ತಾನೆ. ಅವನ ವಾದದಂತೆ ಅದು ಆತ್ಮದಂತೆಯೇ ಅನಾದಿಯೂ ಅನಂತವೂ ಸಹ.

(ಅರಿಸ್ಟಾಟಲ್)

ಟೈಮ್ ಮಷೀನಿನಲ್ಲಿ ಕುಳಿತು ನಿಮ್ಮ ಗತಕಾಲಕ್ಕೆ ಮರಳಿದರೆ, ಅಲ್ಲಿ ನಿಮ್ಮನ್ನು ನೀವೇ ಕಾಣುವ ಸಾಧ್ಯತೆ ಇರಬಹುದು. ಆದರೆ, ಟೈಮ್ ಮಷೀನ್ ನಿಮ್ಮನ್ನು ನೀವಾಗಿಸುವುದಿಲ್ಲ; ನಿಮ್ಮನ್ನು ನೀವಾಗಿಸುವುದು ನಿಮ್ಮ ನೆನಪುಗಳೇ. ನಮ್ಮ ಜೀವನದ ಅನುಭವ, ಕಲಿಕೆಗಳ ಉಳಿಕೆಗಳೇ ಉಳಿಗಳಾಗಿ ನಮ್ಮ ವ್ಯಕ್ತಿತ್ವದ ಶಿಲ್ಪವನ್ನು ಕಡೆದು ನಮ್ಮನ್ನು ರೂಪಿಸುವುದು ನಿಜವಲ್ಲವೇ?!

ಪ್ಲೇಟೋನ ಶಿಷ್ಯ ಅರಿಸ್ಟಾಟಲ್ ನೆನಪಿನ ಶಕ್ತಿಗೆ ಅನಾದಿ-ಅನಂತಗಳ ವೈಶಿಷ್ಟ್ಯವನ್ನು ನೀಡುವುದಿಲ್ಲ. ಮನಃಶಾಸ್ತ್ರಜ್ಞದ ಬಗೆಗೆ ವಿಸ್ತೃತವಾಗಿ ಬರೆದವರಲ್ಲಿ ಅರಿಸ್ಟಾಟಲ್ ಮೊದಲಿಗ. ಹಾಗೆಯೇ, ನೆನಪಿನ ಶಕ್ತಿಯನ್ನು ಆತ್ಮದಂತಹ ಅಶಾರೀರಿಕ ಕಲ್ಪನೆಯಿಂದ ಬೇರ್ಪಡಿಸಿದವರಲ್ಲೂ ಮೊದಲಿಗನೆನ್ನಬಹುದು. ಹೀಗಾಗಿ, ನನ್ನ ದೃಷ್ಟಿಯಲ್ಲಿ, ನೆನಪಿನ ಶಕ್ತಿಯ ವೈಜ್ಞಾನಿಕ ಅಧ್ಯಯನ ಅರಿಸ್ಟಾಟಲ್‌ ನಿಂದಲೇ ಮೊದಲಾಯಿತೆನ್ನಿಸುತ್ತದೆ.

ನೆನಪಿನ ಕುರಿತು ಅರಿಸ್ಟಾಟಲ್‌ ನ ಚಿಂತನೆಯನ್ನು ಚರ್ಚಿಸುವ ಮುನ್ನ, ಐಂದ್ರಿಯ ಪ್ರಜ್ಞೆ (sense) ಮತ್ತು ಗ್ರಹಿಕೆ (perception)ಗಳ ಕುರಿತು ಅವನ ವಿಚಾರ ಧಾರೆಯ ಬಗೆಗೆ ಸಣ್ಣದೊಂದು ಟಿಪ್ಪಣಿಯ ಅಗತ್ಯವಿದೆ ಎಂದೆನ್ನಿಸುತ್ತದೆ. ಈ “ಐಂದ್ರಿಯ ಪ್ರಜ್ಞೆ” ಎನ್ನುವುದು ಅರಿಸ್ಟಾಟಲ್‌ ನ ದೃಷ್ಟಿಯಲ್ಲಿ ಇಂದ್ರಿಯಗಳು ಉದ್ದೀಪನಗೊಂಡಾಗ ಮೂಡುವ ಚಲನೆ. ಈ ಚಲನೆಗಳನ್ನು ಒಂದಾಗಿಸಿ, ಅವುಗಳನ್ನು ಪ್ರಜ್ಞಾಪೂರ್ವಕವಾಗಿ ತುಲನೆ ಮಾಡಿ ಅದನ್ನು ಅನುಭವವಾಗಿಸುವುದು “ಗ್ರಹಿಕೆ”.

ಇಂದ್ರಿಯಗಳ ಈ “ಸೆನ್ಸ್”ಗಳು, ರಕ್ತದೊಡನೆ ಒಂದುಗೂಡಿ ಚಲಿಸುತ್ತವೆ ಎನ್ನುತ್ತಾನೆ ಅರಿಸ್ಟಾಟಲ್. ಅವನ ಈ ಥಿಯರಿಗೆ, ಈ ಐಂದ್ರಿಯ-ಪ್ರಜ್ಞೆಗಳನ್ನು ಒಂದಾಗಿಸಿ, ಅವನ್ನು “ಗ್ರಹಿಕೆ”ಯನ್ನಾಗಿ ಮಾಡಿಸುವ ಒಂದು ಪ್ರಧಾನ ಇಂದ್ರಿಯದ ಅಗತ್ಯವಿದೆ. ನ್ಯೂರೋಸೈನ್ಸ್‌ ನ ಉಗಮವನ್ನು ನಾವಿಲ್ಲಿ ಕಾಣಬಹುದು. ಆದರೆ, ಅರಿಸ್ಟಾಟಲ್‌ ನ ಪ್ರಕಾರ, ಈ “ಸೆನ್ಸ್”ಗಳನ್ನು ಒಂದುಗೂಡಿಸುವ ಪ್ರಧಾನ ಇಂದ್ರಿಯ ಮಿದುಳಲ್ಲ; ಬದಲಿಗೆ ಹೃದಯ. ಅವನು ಮಿದುಳನ್ನು ರಕ್ತವನ್ನು ತಣ್ಣವಾಗಿಸುವ ಅಂಗವೆಂದಷ್ಟೇ ಗುರುತಿಸುತ್ತಾನೆ. ನಮ್ಮ ಭಾವಗಳ ಬಿಸಿಯನ್ನು ಸಂಸ್ಕರಿಸಲು, ರಕ್ತ ತುಂಬಿದ ಬೆಚ್ಚನೆಯ ಹೃದಯವೇ – ರಕ್ತದ ಹರಿವು ಕಡಿಮೆ ಇರುವ, ತಣ್ಣನೆಯ ಮಿದುಳಿಗಿಂತ – ಸರಿ ಎಂದೆನ್ನಿಸುತ್ತದೆ ಅವನಿಗೆ.

ಅರಿಸ್ಟಾಟಲ್‌ ನ ದೃಷ್ಟಿಯಲ್ಲಿ, ಇಂದ್ರಿಯಗಳ ಉದ್ದೀಪನೆ ನಿಂತ ನಂತರವೂ, ಅವುಗಳಿಂದ ಸೃಷ್ಟಿಯಾದ ಚಲನೆ (“ಸೆನ್ಸ್”) ನಮ್ಮ ರಕ್ತದಲ್ಲಿ ಸಂವಹನಗೊಳ್ಳುತ್ತಲೇ ಇರುತ್ತದೆ. ಅವನ ಪ್ರಕಾರ, ಅವೇ ನೆನಪುಗಳು.

ಅರಿಸ್ಟಾಟಲ್, ಈ ಚಲನೆಗೆ ಒಂದು ರೀತಿಯ ಟೈಮ್-ಸ್ಟಾಂಪ್ ಸಹ ನೀಡುತ್ತಾನೆ. ಹಾಗೆಯೇ, ನೆನಪುಗಳು, ವರ್ತಮಾನದ ಪ್ರಜ್ಞೆ ಮತ್ತು ಭಯ-ಆತಂಕ-ಆಶಾವಾದ ಒಳಗೊಂಡಿರುವ ಭವಿಷ್ಯದ ಕಲ್ಪನೆಗಳು ನಮ್ಮ ಶರೀರದಲ್ಲಿ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅವನು ವಿಷದವಾಗಿ ಬರೆಯುತ್ತಾನೆ.

(ಸಿಸೆರೋ)

ಅರಿಸ್ಟಾಟಲ್‌ ನ ಚಿಂತನೆಗಳ ಕುರಿತು ಬರೆಯಲು ಬಹಳಷ್ಟು ವಿಚಾರಗಳಿವೆಯಾದರೂ, ಕಾಲಯಾನದ ಕುರಿತಾದ ಈ ನೆನಪಿನ ಯಾತ್ರೆಯಲ್ಲಿ, ಸದ್ಯಕ್ಕೆ ಅದನ್ನು ಇಲ್ಲಿಯೇ ನಿಲ್ಲಿಸಿ ಮುನ್ನಡೆಯೋಣ.

ಅರಿಸ್ಟಾಟಲ್‌ ನ ಥಿಯರಿಯ ಬಗೆಗೆ ಕಡೆಗೊಂದು ಮಾತು: ನಮಗೆಲ್ಲರಿಗೂ ತಿಳಿದಂತೆ ಅದು ತಪ್ಪಿರುವುದು ನಿಜ. ಮಿದುಳನ್ನು ಕೇವಲ ಒಂದು “ಕೂಲರ್”ನಂತೆ ಕಾಣುವ ಅವನ ಚಿಂತನೆ ನಗೆಪಾಟಲಿಗೆ ಸರಿಯೂ ಎನ್ನಿಸಬಹುದು. ಆದರೆ, ಆ ಥಿಯರಿ (*), ಬಹುಮಟ್ಟಿಗೆ “ಆತ್ಮ” ಇತ್ಯಾದಿ ಅಲೌಕಿಕವನ್ನು ಒಳಗೊಳ್ಳದ ವಾದವಾದ್ದರಿಂದ, ಅದನ್ನು ವೈಜ್ಞಾನಿಕ ಪ್ರಯೋಗಕ್ಕೆ ಒಳಪಡಿಸಿ ಸತ್ಯಾಸತ್ಯತೆಯನ್ನು ಖಚಿತ ಪಡಿಸಿಕೊಳ್ಳಲು ಸಾಧ್ಯವಿರುವಂತಹದು. ಹೀಗಾಗಿಯೇ ಅದು, ನ್ಯೂರೋಸೈನ್ಸಿನ ಉಗಮವೂ ಆಗಿದೆ ಎನ್ನಬಹುದು.

******

ಪುರಾತನ ಗ್ರೀಕ್ ತತ್ವಶಾಸ್ತ್ರಜ್ಞರಾದ ಪ್ಲೇಟೋ ಮತ್ತು ಅರಿಸ್ಟಾಟಲ್ ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ “ಮೆಮರಿ”ಯ ಬಗೆಗೆ ತಮ್ಮ ಥಿಯರಿಗಳನ್ನು ಮಂಡಿಸಿದ್ದರೆ, ನಂತರದ ಶತಮಾನಗಳಲ್ಲಿ ಅದರ ಬಗೆಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿದ್ದವರೆಂದರೆ ಪುರಾತನ ರೋಮನ್ನರು. ಇದಕ್ಕೆ ಕಾರಣವೂ ಇತ್ತು. ಅಂದಿನ ರೋಮನ್ ಸೆನೆಟ್‌ ನಲ್ಲಿ ಆ ಕಾಲದ ರಾಜಕಾರಣಿಗಳು ಭಾಷಣಗಳನ್ನು ಬಿಗಿಯ ಬೇಕಾಗಿತ್ತು – ಇಂದಿನ ನಮ್ಮ ಪಾರ್ಲಿಮೆಂಟುಗಳಂತೆ. ಆದರೆ, ಯಾವುದೇ ಬರಹದ ಸಹಾಯವಿಲ್ಲದೆ. ಹೀಗಾಗಿ, ತಾವು ಭಾಷಣದಲ್ಲಿ ಹೇಳಬೇಕೆಂದಿದ್ದ ವಿಚಾರಗಳನ್ನು ಅವರು ಪೂರ್ಣವಾಗಿ ತಮ್ಮ ತಲೆಯಲ್ಲೇ ಇಟ್ಟುಕೊಂಡಿರಬೇಕಿತ್ತು.

ರೋಮನ್ ರಾಜಕಾರಣಿ ಮತ್ತು ತತ್ವಶಾಸ್ತ್ರಜ್ಞ ಸಿಸೆರೋ ಮತ್ತು ಅವನ ಜೊತೆಗಾರರು, ನೆನಪಿನ ಶಕ್ತಿಯನ್ನು ವಿವರಿಸಲು ಪ್ಲೇಟೋನ “ಮೇಣ”ದ ಸ್ಲೇಟನ್ನೇ ಮೊರೆಹೋಗುತ್ತಾರಾದರೂ, ಆ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ವಿಧಾನದ ಕುರಿತು ಚಿಂತನೆ ನಡೆಸುತ್ತಾರೆ. ಉತ್ತಮ ನೆನಪಿನ ಶಕ್ತಿಗೆ, ಉತ್ತಮ ಆರೋಗ್ಯ ಮತ್ತು ವಿಶ್ರಾಂತಿಯ ಅವಶ್ಯಕತೆಯನ್ನು ಅವರು ಗುರುತಿಸುತ್ತಾರೆ. ಹಾಗೆಯೇ, ಅಭ್ಯಾಸ ಮತ್ತು ಪರಿಶ್ರಮಗಳಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದೆನ್ನುತ್ತಾರೆ. ಪಂಚೇಂದ್ರಿಯಗಳಲ್ಲಿ ದೃಷ್ಟಿಗೆ ಪ್ರಾಮುಖ್ಯತೆ ನೀಡುವ ಅವರು, ಏನನ್ನಾದರೂ ನೆನಪಿನಲ್ಲಿಟ್ಟುಕೊಳ್ಳಬೇಕಿದ್ದರೆ, ಅದನ್ನು ನಮ್ಮ ಮನದಲ್ಲಿ ದೃಶ್ಯೀಕರಿಸುವಂತೆ ಸಲಹೆ ನೀಡುತ್ತಾರೆ. ಉದಾಹರಣೆಗೆ, ನೀವು ದಿನಸಿ ಪದಾರ್ಥಗಳ ಪಟ್ಟಿಯೊಂದನ್ನು (ಅಕ್ಕಿ, ಉದ್ದಿನ ಬೇಳೆ, ಉಪ್ಪು, ಸಾಸಿವೆ, ಜೀರಿಗೆ, ಮೆಣಸಿನ ಪುಡಿ…) ನೆನಪಿನಲ್ಲಿಟ್ಟುಕೊಳ್ಳಬೇಕಿದ್ದರೆ, ಆ ಪಟ್ಟಿಯಲ್ಲಿನ ಪ್ರತಿ ವಸ್ತುವನ್ನು ನಿಮ್ಮ ಮನದೊಳಗೇ ನಿಮಗೆ ಚೆನ್ನಾಗಿ ಪರಿಚಿತವಾದ ಸ್ಥಳಗಳಲ್ಲಿ ಇಡುತ್ತಾ ನಡೆಯಿರಿ. (ಕಾಂಪೌಂಡು ಗೇಟಿನ ಬಳಿ ಅಕ್ಕಿ, ವೆರಾಂಡಾದ ಬಾಗಿಲ ಬಳಿ ಉದ್ದಿನ ಬೇಳೆ, ವೆರಾಂಡದಲ್ಲಿರುವ ಕುರ್ಚಿಯ ಮೇಲೆ ಉಪ್ಪು, ಹಾಲ್‌ ನ ಬಾಗಿಲ ಬಳಿ ಸಾಸಿವೆ, ಹಾಲ್‌ ನಲ್ಲಿರುವ ಸೋಫಾದ ಮೇಲೆ ಜೀರಿಗೆ… ಹೀಗೆ…) ನೀವು ಆ ಪಟ್ಟಿಯನ್ನು ನೆನೆಪಿಸಿಕೊಳ್ಳಲು, ಮನದಲ್ಲೇ ಆ ಪರಿಚಿತ ಸ್ಥಳದಲ್ಲಿ ಮತ್ತೆ ನಡೆದಾಡಿದರೇ ಸಾಕು.

ಈ ವಿಧಾನವನ್ನು, ಸಿಸೆರೋನ “ಮೆಥಡ್ ಆಫ್ ಲೋಕೈ” ಅಥವಾ “ಮೆಮರಿ ಪ್ಯಾಲೆಸ್” ಎಂದು ಕರೆಯುತ್ತಾರೆ. ಇಂದೂ ಸಹ, ವರ್ಲ್ಡ್ ಮೆಮರಿ ಚಾಂಪಿಯನ್‌ಷಿಪ್‌ ನಲ್ಲಿ ಚಿನ್ನದ ಪದಕ ಪಡೆಯುವವರೂ ಈ ವಿಧಾನವನ್ನೇ ಅನುಸರಿಸುತ್ತಾರೆ.

ಸಿಸೆರೋನ ನಂತರದ ಶತಮಾನಗಳಲ್ಲಿ, ರೋಮನ್ ಸಾಮ್ರಾಜ್ಯ ಕ್ರೈಸ್ತ ಮತಕ್ಕೆ ಮತಾಂತರವಾದ ನಂತರದಲ್ಲಿ ಬಂದ, ಸಂತ ಅಗಸ್ಟೀನ್ ಸಹ ಜ್ಞಾಪಕ ಶಕ್ತಿಯ ಕುರಿತು ವಿಶ್ಲೇಷಿಸುತ್ತಾನೆ. “ನೆನಪು” ಮತ್ತು “ಕಾಲ”ಗಳ ಸಂಬಂಧದ ಕುರಿತು ಆಲೋಚಿಸುವ ಅವನು, ಒಂದು ನಿರ್ಧಾರಕ್ಕೆ ಬರುತ್ತಾನೆ: ದೇವರಿಗೆ ನೆನಪುಗಳಿಲ್ಲ!

(ಸಂತ ಅಗಸ್ಟೀನ್)

ಭೂತ, ವರ್ತಮಾನ, ಭವಿಷ್ಯ ಎಲ್ಲವೂ ದೇವರಿಗೆ ಒಂದೇ ಆಗಿರುವುದರಿಂದ, ಕಾಲದ ಗತಿಯ ಮೇಲೆಯೇ ಅವಲಂಬಿತವಾಗಿರುವ ನೆನಪುಗಳು ಇರುವುದಾದರೂ ಹೇಗೆ?!

ಸಿಸೆರೋ, ಮರೆಯುವಿಕೆಯ ಬಗೆಗೂ ವಿಶ್ಲೇಷಿಸುತ್ತಾನೆ. ನಾವು ನೆನಪಿಸಿಕೊಳ್ಳದ ವಿಷಯಗಳು ದಿನದಿಂದ ದಿನಕ್ಕೆ ಕ್ಷಯಿಸುತ್ತಾ ನಮಗೇ ತಿಳಿಯದಂತೆ ಮರೆಯಾಗುವ ಪರಿಯನ್ನು ಅವನು ಚಿಂತಿಸುತ್ತಾನೆ. (ಉದಾಹರಣೆಗೆ, ನನ್ನ ಒಂಬತ್ತನೆಯ ತರಗತಿಯ ರೆಜಿಸ್ಟರ್ ನಂಬರ್. ಪ್ರತಿ ದಿನ, ಪ್ರತಿ ಪೀರಿಯಡ್‌ ನಲ್ಲೂ ಅದನ್ನು ಕರೆದಾಗ “ಪ್ರೆಸೆಂಟ್ ಸರ್” ಎನ್ನುತ್ತಿದ್ದ ನಾನು, ನನ್ನ ಹೆಸರಿಗೇ ಅನ್ವರ್ಥಕವಾಗಿದ್ದ ಆ ನಂಬರ್ ಅನ್ನು ಎಂದು ಮರೆತೆನೋ ಅದು ನನಗೇ ತಿಳಿಯದು)

ನಮ್ಮ ಮನಸ್ಸಿನಲ್ಲಿ ನಮ್ಮ ಅರಿವಿಲ್ಲದೆಯೇ ಆಗುವ ಬದಲಾವಣೆಗಳನ್ನು ಗುರುತಿಸಿದ ಮೊದಲಿಗರಲ್ಲಿ ಸಂತ ಅಗಸ್ಟೀನ್ ಒಬ್ಬ. ಹಾಗೆಯೇ ನೆನಪು ಮತ್ತು ಬುದ್ಧಿಶಕ್ತಿಯ ಸಂಬಂಧವನ್ನು ವಿಶ್ಲೇಷಿಸಿದವನೂ ಕೂಡ. ನೆನಪಿನ ಶಕ್ತಿಯ ಮಹಾನತೆಯನ್ನು ಕೊಂಡಾಡುವರಲ್ಲಿ ಅಗಸ್ಟೀನ್‌ ನನ್ನು ಮೀರುವವರು ಇಲ್ಲವೆನ್ನಬಹುದು: “ಓಹ್! ಎಂತಹ ಮಹಾನ್ ಶಕ್ತಿ! ತಳವಿಲ್ಲದ ಕೊಡ!!” ಎನ್ನುತ್ತಾನೆ. ಎಂದೋ ಕಂಡ ಪರ್ವತ ಶಿಖರಗಳು, ಇನ್ನೆಂದೋ ಕೇಳಿದ ಸಾಗರದ ಅಲೆಗಳ ಭೋರ್ಗೆರೆತ… ಎಲ್ಲವನ್ನೂ ಕ್ಷಣಮಾತ್ರದಲ್ಲಿ ಮನದಂಗಳಕ್ಕೆ ವಾಪಸು ತರಬಲ್ಲ ಈ ಶಕ್ತಿಯ ಸೋಜಿಗ ಅವನನ್ನು ಒಂದು ರೀತಿಯ ಎಕ್ಸ್‌ಸ್ಟಸಿಗೆ ಕೊಂಡೊಯ್ಯುತ್ತದೆ. ಆತನ “ಕನ್‌ಫೆಷನ್ಸ್” ಕೃತಿಯ ಹಲವಾರು ಭಾಗಗಳು, ತಮ್ಮ ತರ್ಕ ಮತ್ತು ಚಿಂತನೆಗಳ ಮೂಲಕ ಆಧುನಿಕ ಮನಃಶಾಸ್ತ್ರದ ಪುಸ್ತಕಗಳಂತೆ ಓದಿಸಿಕೊಳ್ಳುತ್ತವೆ.

ಅವನ ಬರಹದಲ್ಲಿನ ತರ್ಕ ಮತ್ತು ಯೋಚನಾ ಲಹರಿಯ ಮಧ್ಯೆ ಅದರ ಮಿತಿಯನ್ನೂ ಮರೆಯುವಂತಾಗುತ್ತದೆ. ಅಗಸ್ಟೀನ್, ನೆನಪು ಮತ್ತು ನಮ್ಮ ಭೌತಿಕ ಶರೀರದ ಸಂಬಂಧಗಳನ್ನು ವಿಶ್ಲೇಷಿಸುವುದಿಲ್ಲ. ಪ್ಲೇಟೋನ “ಮೇಣ”ವಾಗಲಿ, ಅರಿಸ್ಟಾಟಲನ “ಹೃದಯ”ವಾಗಲಿ ಅಲ್ಲಿಲ್ಲ.

ನೆನಪಿನಂಗಳದ ಕಾಲಯಾತ್ರೆಯಲ್ಲಿ ಮುಂದಿನ ವಾರ ಮಧ್ಯಯುಗದಲ್ಲಿ ಸುತ್ತಾಡಿ ಆಧುನಿಕತೆಯೆಡೆಗೆ ಹೆಜ್ಜೆಹಾಕೋಣ.

******

(ಮುಂದುವರೆಯುವುದು)

 

(*) ಅರಿಸ್ಟಾಟಲ್, ನಾವು ಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಳ್ಳುವುದನ್ನು, “ಆತ್ಮ”ದಿಂದಲೇ ಪ್ರಾರಂಭವಾಗಿ, ಇಂದ್ರಿಯಗಳ ಕಡೆಗೆ ಹೋಗುತ್ತದೆ ಎನ್ನುತ್ತಾನೆ. ಇಂತಹ ವಿಚಾರಗಳಿಂದಾಗಿ ಅವನ ಚಿಂತನೆಗಳನ್ನು ಸಂಪೂರ್ಣ ವೈಜ್ಞಾನಿಕ ಥಿಯರಿಯೆಂದು ಹೇಳಲು ಬರುವುದಿಲ್ಲ.
(+) ಮತ್ತಷ್ಟು ವಿಷಯಗಳಿಗೆ ಕೆಳಗಿನ ಲಿಂಕ್‌ಗಳನ್ನು ಬಳಸಿ
https://en.wikipedia.org/wiki/Method_of_loci
https://en.wikipedia.org/wiki/World_Memory_Championships