ರಾಸ್ಕೋಲ್ನಿಕೋವ್ ಭಯಂಕರವಾದ ಕನಸು ಕಂಡ. ಪುಟ್ಟ ಊರಿನಲ್ಲಿ ಮಗುವಾಗಿದ್ದಾಗಿನ ಕನಸು. ಈಗ ಅವನಿಗೆ ಏಳು ವರ್ಷ. ಯಾವುದೋ ಹಬ್ಬದ ದಿನ ಅಪ್ಪನ ಜೊತೆಯಲ್ಲಿ ಸಾಯಂಕಾಲದ ಹೊತ್ತು ಉರಾಚೆ ನಡೆದುಕೊಂಡು ಹೋಗುತ್ತಿದ್ದಾನೆ. ಧಗೆಯ ದಿನದ ಮಂಕು ಸಂಜೆ. ಹಳ್ಳಿ ಅವನ ನೆನಪಿನಲ್ಲಿ ಹೇಗೆ ಉಳಿದಿತ್ತೋ ಕನಸಿನಲ್ಲೂ ತದ್ವತ್ ಹಾಗೇ ಕಾಣುತ್ತಿತ್ತು. ನೆನಪಿನಲ್ಲಿ ಮಸುಕಾಗಿದ್ದ ಊರು ಕನಸಿನಲ್ಲಿ ಸ್ಪಷ್ಟವಾಗಿತ್ತು, ಅಂಗೈಯ ಹಾಗೆ ಚಪ್ಪಟೆ ನೆಲದಮೇಲೆ ಇರುವ ಊರು. ಸುತ್ತ ಒಂದಾದರೂ ವಿಲ್ಲೋ ಮರ ಇಲ್ಲ.
ಪ್ರೊ
. .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಐದನೇಯ ಅಧ್ಯಾಯ

 

‘ರಝುಮಿಖಿನ್ ಹತ್ತಿರ ಹೋಗಬೇಕು, ಏನಾದರೂ ಕೆಲಸ ಕೊಡಿಸು, ಮಕ್ಕಳಿಗೆ ಮನೆ ಪಾಠ… ಇಂಥದ್ದೇನಾದರೂ… ಅಂತ ಕೇಳಬೇಕು,’ ರಾಸ್ಕೋಲ್ನಿಕೋವ್ ಮನಸ್ಸಿನಲ್ಲಿ ಯೋಚನೆಗಳು ಹೆಣೆದುಕೊಳ್ಳುತಿದ್ದವು. ‘ಈಗ ಏನಂತ ಸಹಾಯ ಮಾಡತಾನೆ? ಮನೆ ಪಾಠ ಗೊತ್ತು ಮಾಡಿಕೊಟ್ಟಾ ಅವನ ಹತ್ತಿರ ಕಾಸು ಇದ್ದರೆ ಇರುವ ಕಾಸು ಕೊಟ್ಟಾ ಆ ಕಾಸಿಗೆ ನಾನು ಬೂಟು ಖರೀದಿ ಮಾಡಿದೇ ಪಾಠದ ಮೇಷ್ಟರ ಥರಾ ಸಜ್ಜಾದೇ ಅನ್ನೋಣ… ಸರಿ. ಆಮೇಲೇನು? ನಾಕು ಕಾಸು ಸಂಪಾದನೆ ಮಾಡಿ ಏನು ಸಾಧಿಸಿದ ಹಾಗಾಯಿತು? ಯಾಕೆ ಬೇಕು ನನಗೆ ದುಡ್ಡು? ದುಡ್ಡಾ ನನಗೆ ಈಗ ಬೇಕಾದದ್ದು? ರಝುಮಿಖಿನ್‌ ನ ನೋಡೋದಕ್ಕೆ ಹೋಗೋದು ಅರ್ಥವಿಲ್ಲದ ಹುಚ್ಚು ಕೆಲಸ ಅನ್ನಿಸತ್ತೆ…’

ರಝುಮಿಖಿನ್ ಮನೆಗೆ ಯಾಕೆ ಹೋಗುತ್ತಿದ್ದೇನೆ ಅನ್ನುವ ಪ್ರಶ್ನೆ ಅವನಿಗೇ ಗೊತ್ತಿಲ್ಲದಷ್ಟು ಗಹನವಾಗಿ ಮನಸ್ಸನ್ನು ಕದಡುತ್ತಿತ್ತು. ತೀರ ಸಾಮಾನ್ಯವೆಂದು ತೋರುವ ಕೆಲಸದಲ್ಲೂ ಏನೋ ದುಷ್ಟ ಅರ್ಥವನ್ನು ಹುಡುಕಲು ಪ್ರಯತ್ನಪಡುತ್ತ ಕಳವಳಪಡುತಿದ್ದ.
‘ಹಾಗಾದರೆ, ರಝುಮಿಖಿನ್ ಹತ್ತಿರ ಹೋದರೆ ಎಲ್ಲಾ ಪ್ರಶ್ನೆಗೂ ಉತ್ತರ ಸಿಕ್ಕಿಬಿಡುತ್ತದೆ ಅಂದುಕೊಂಡಿದ್ದೆನಾ?’ ಅನಿಸಿ ರಾಸ್ಕೋಲ್ನಿಕೋವ್ ಆಶ್ಚರ್ಯಪಟ್ಟ.

ಯೋಚನೆ ಮಾಡುತ್ತ ಹಣೆ ಉಜ್ಜಿಕೊಂಡ. ದೀರ್ಘವಾಗಿ ಆಲೋಚನೆ ಮಾಡಿದ ಮೇಲೆ ವಿಚಿತ್ರವಾಗಿ, ಅಕಸ್ಮಾತ್ ಅನ್ನುವ ಹಾಗೆ, ತನ್ನಷ್ಟಕ್ಕೆ ಹೊಳೆಯುತ್ತದಲ್ಲ ಹಾಗೆ, ಅತ್ಯಂತ ಅಸಾಮಾನ್ಯವಾದೊಂದು ಸಂಗತಿ ತಲೆಯಲ್ಲಿ ಮೂಡಿತು.

ತೀರ ಪ್ರಶಾಂತವಾಗಿ, ಇದು ಕೊನೆಯ ತೀರ್ಮಾನ ಅನ್ನುವ ಹಾಗೆ, ‘ಹ್ಞೂಂ. ರಝುಮಿಖಿನ್ ಮನೆಗೆ ಹೋಗತೇನೆ, ಹೋಗೇ ಹೋಗತೇನೆ… ಈಗಲ್ಲ, ಇವತ್ತಲ್ಲ… ನಾಳೆನೂ ಅಲ್ಲ- ನಾಳಿದ್ದು, ‘ಅದನ್ನ’ ಮಾಡಿದ ಮೇಲೆ, ಎಲ್ಲವೂ ಹೊಸದು ಅಂತ ಆಗತ್ತಲ್ಲ ಆಗ…’

ರಾಸ್ಕೋಲ್ನಿಕೋವ್ ತಟ್ಟನೆ ಎಚ್ಚರವಾದ.

‘ಅದನ್ನ ಮಾಡಿದ ಮೇಲೆ,’ ಅಂದುಕೊಳ್ಳುತ್ತ ದಡಕ್ಕನೆ ಎದ್ದ. ‘ಅದು ಆಗುತ್ತದಾ? ನಿಜವಾಗಲೂ?’
ಬೆಂಚು ಬಿಟ್ಟ ನಡೆದ. ಓಡುಹೆಜ್ಜೆ ಹಾಕಿದ. ವಾಪಸ್ಸು ಮನೆಗೆ ಹೋಗಬೇಕು ಅನ್ನಿಸಿತು. ಇದ್ದಕಿದ್ದ ಹಾಗೆ ಮನೆ ಅಸಹ್ಯ ಅನ್ನಿಸಿತು. ಅಲ್ಲೇ, ಇಕ್ಕಟ್ಟಾದ ಬೀರುವಿನಂತ ಆ ಮನೆಯಲ್ಲೇ ಅದು ಒಂದು ತಿಂಗಳಿನಿಂದ ಮನಸ್ಸಿನಲ್ಲೇ ಬೆಳೆದು ಮಾಗಿದ್ದು. ಮನೆಗೆ ಹೋಗದೆ ಸುಮ್ಮನೆ ಹಾಗೇ ಕಾಲು ಒಯ್ದತ್ತ ನಡೆದ.

ಜ್ವರ ಬಂದ ಹಾಗೆ ಮೈ ನಡುಗಿತು. ಅಂಥ ಬಿಸಿಲಲ್ಲೂ ಚಳಿಯಾಗುತ್ತಿತ್ತು. ಒಳಗಿನಿಂದ ಒತ್ತಾಯ ಮೂಡಿತು ಅನ್ನುವ ಹಾಗೆ ಕಣ್ಣೆದುರು ಕಂಡದ್ದೆಲ್ಲವನ್ನೂ ಅರಿವಿಲ್ಲದೆ ದಿಟ್ಟಿಸುತ್ತಿದ್ದ, ಕಾಡುವ ಯೋಚನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಪಡುತ್ತಿದ್ದ. ಆಗಲಿಲ್ಲ. ಪ್ರತಿ ಕ್ಷಣವೂ ಅದೇ ಚಿಂತೆಗೇ ಜಾರುತ್ತಿದ್ದ. ತಲೆ ಕೊಡವಿ ಸುತ್ತಲೂ ನೋಡಿದರೆ ಏನು ಯೋಚನೆ ಮಾಡುತಿದ್ದೆ, ಎಲ್ಲಿಗೆ ಹೋಗುತ್ತಿದ್ದೆ ಅನ್ನುವುದೇ ಮರೆತಿರುತ್ತಿತ್ತು. ಹೀಗೇ ವಾಸಿಲೆವ್ಸ್ಕಿ ಐಲ್ಯಾಂಡಿಗೆ ಹೋದ. ಅಲ್ಲಿ ಲಿಟಲ್ ನೇವಾದ ಸೇತುವೆ ದಾಟಿ, ದ್ವೀಪಗಳತ್ತ ತಿರುಗಿದ. ನಗರದ ಧೂಳು, ಸುಣ್ಣ, ಮೈ ಮನಸ್ಸನ್ನು ಒತ್ತುವಂಥ ಅಗಾಧವಾದ ಕಟ್ಟಡಗಳ ದಟ್ಟಣೆಗೆ ಒಗ್ಗಿದ ಅವನ ಕಣ್ಣಿಗೆ ಅಲ್ಲಿನ ತಾಜಾ ಹಸಿರು ಮೊದಮೊದಲು ಹಿತವಾಗಿತ್ತು. ಇಲ್ಲಿ ದಟ್ಟಣೆ ಇಲ್ಲ, ವಾಸನೆ ಇಲ್ಲ, ಹೆಂಡದಂಗಡಿಗಳಿಲ್ಲ. ಆದರೂ ಬಲು ಬೇಗನೆ ಈ ಹೊಸ ಹಿತವಾದ ಭಾವಗಳೇ ಅವನನ್ನು ನೋಯಿಸುವುದಕ್ಕೆ, ರೇಗಿಸುವುದಕ್ಕೆ ಶುರುಮಾಡಿದವು.

ಹಸಿರಿನ ನಡುವೆ ಇದ್ದ ಉಜ್ವಲ ವರ್ಣಗಳ ಸಮರ್ ಹೌಸ್‌ ಗಳ ಮುಂದೆ ಆಗಾಗ ನಿಲ್ಲುತಿದ್ದ. ಬೇಲಿಯಾಚೆಗೆ ಕಣ್ಣಾಡಿಸಿದರೆ ಅಚ್ಚುಕಟ್ಟಾಗಿ ಉಡುಪು ತೊಟ್ಟ ಹೆಂಗಸರು ಅಗೋ ದೂರದಲ್ಲಿ ವೆರಾಂಡದಲ್ಲೋ ಬಾಲ್ಕನಿಯಲ್ಲೋ ಇರುವುದು, ಇಗೋ ಇಲ್ಲಿ ತೋಟದಲ್ಲಿ ಮಕ್ಕಳು ಓಡುವುದು ಕಾಣುತ್ತಿತ್ತು. ಹೂಗಳು ಅವನ ಗಮನ ಸೆಳೆದವು. ಬಹಳ ಹೊತ್ತು ಹೂಗಳನ್ನೇ ನೋಡಿದ. ಐಶಾರಾಮೀ ಸಾರೋಟುಗಳನ್ನ, ಕುದುರೆಯ ಮೇಲೆ ಓಡಾಡುತಿದ್ದ ಗಂಡಸರು, ಹೆಂಗಸರನ್ನ ನೋಡಿದ. ಕಂಡದ್ದೆಲ್ಲ ಕಣ್ಮರೆಯಾಗುವ ಮೊದಲೇ ಮರವೆಗೆ ಸಲ್ಲುತಿದ್ದವು. ನಿಂತು ದುಡ್ಡು ಎಣಿಸಿದ. ಮೂವತ್ತು ಕೊಪೆಕ್ ಇದ್ದವು. ‘ಪೋಲೀಸಿನವನಿಗೆ ಇಪ್ಪತ್ತು, ಪೋಸ್ಟಿನವನಿಗೆ ಕೊಡಲು ನಸ್ತಾಸ್ಯಗೆ ಮೂರು, ಹಾಗಾದರೆ ಮಾರ್ಮೆಲಡೋವ್ ಮನೆಯಲ್ಲಿ ನಲವತ್ತೇಳು ಕೊಪೆಕ್ ಕೊಟ್ಟಿರಬೇಕು ನಾನು,’ ಅಂದುಕೊಂಡ. ಲೆಕ್ಕ ಜ್ಞಾಪಿಸಿಕೊಳ್ಳುವಷ್ಟರಲ್ಲಿ ದುಡ್ಡು ಯಾಕೆ ತೆಗೆದೆ ಅನ್ನುವುದು ಮರೆತಿತ್ತು. ಚಿಕ್ಕದೊಂದು ಹೋಟೆಲು ದಾಟುತ್ತಿರುವಾಗ ಹಸಿವಾಗಿದೆ, ತಿನ್ನಬೇಕು ಅನ್ನಿಸಿತು. ಒಳಕ್ಕೆ ಹೋಗಿ ಒಂದು ಗ್ಲಾಸ್ ವೋಡ್ಕಾ ಕುಡಿದು ಹಣ್ಣಿನ ಹೂರಣ ಇರುವ ಇದ್ದ ಪೈ ತೆಗೆದುಕೊಂಡ. ರಸ್ತೆಯ ಮೇಲೆ ನಡೆಯುತ್ತ ತಿಂದು ಮುಗಿಸಿದ. ವೋಡ್ಕಾ ಕುಡಿದು ಬಹಳ ಕಾಲವಾಗಿತ್ತು. ಈಗ ಕುಡಿದದ್ದು ಚಿಕ್ಕ ಲೋಟದಷ್ಟೇ ಆದರೂ ತಕ್ಷಣವೇ ಅದರ ಪರಿಣಾಮ ಕಂಡಿತು. ಕಾಲು ಭಾರ. ಮಲಗಿ ನಿದ್ದೆಮಾಡಬೇಕು ಅನ್ನಿಸಿತು. ಮನೆಗೆ ಹೊರಟ. ಪೆಟ್ರೊವ್ಸ್ಕಿ ಐಲೆಂಡ್‌ ಗೆ ಬರುವ ಹೊತ್ತಿಗೆ ದಣಿದಿದ್ದ. ರಸ್ತೆ ಬಿಟ್ಟು ಕುರುಚಲು ಪೊದೆಗಳ ಹತ್ತಿರ ಹೋದ. ಹುಲ್ಲಿನ ಮೇಲೆ ಕುಸಿದು ಬೆನ್ನು ನೆಲಕ್ಕೆ ಮುಟ್ಟುತಿದ್ದ ಹಾಗೇ ನಿದ್ದೆ ಬಂದಿತ್ತು.

ಅಸ್ವಸ್ಥ ಸ್ಥಿತಿಯಲ್ಲಿ ಕಾಣುವ ಕೆಲವು ಕನಸು ಗೆರೆಕೊರೆದಷ್ಟು ಖಚಿತವಾಗಿ, ಸ್ಪಷ್ಟವಾಗಿ, ಜೀವಂತ ಅನ್ನಿಸುವ ಹಾಗೆ ಇರುತ್ತವೆ. ಕೆಲವೊಮ್ಮೆ ಭೀಕರ ಬಿಂಬಗಳೂ ಮೂಡಬಹುದು. ಕಾಣುವ ದೃಶ್ಯದಲ್ಲಿ ಅತ್ಯಂತ ಅಸಹಜ ಅಸಂಬದ್ಧ ವಿವರಗಳು ಇರಬಹುದು. ಒಟ್ಟು ಚಿತ್ರಕ್ಕೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವ ಸೂಕ್ಷ್ಮವಾದ ವಿವರಗಳೊಂದಿಗೆ ಎಷ್ಟು ನಿಜ ಅನ್ನಿಸುವ ಹಾಗೆ, ಎಷ್ಟು ಅನಿರೀಕ್ಷಿತವಾಗಿ, ಕಲಾತ್ಮಕವಾಗಿ ಹೊಂದಿಕೊಂಡಿರುತ್ತವೆಂದರೆ ಸ್ವತಃ ಕನಸುಗಾರನೇ ಬಲುದೊಡ್ಡ ಕಲಾವಿದನಾಗಿದ್ದರೂ ಅಂಥ ವಿವರ, ಅಂಥ ದೃಶ್ಯವನ್ನು ಎಚ್ಚರದ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಲಾರ. ಅಂಥ ಅಸ್ವಸ್ಥ ಕನಸು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ, ತಳಮಳಿಸುತ್ತಿರುವ ಉದ್ರಿಕ್ತಗೊಂಡ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ.

ರಾಸ್ಕೋಲ್ನಿಕೋವ್ ಭಯಂಕರವಾದ ಕನಸು ಕಂಡ. ಪುಟ್ಟ ಊರಿನಲ್ಲಿ ಮಗುವಾಗಿದ್ದಾಗಿನ ಕನಸು. ಈಗ ಅವನಿಗೆ ಏಳು ವರ್ಷ. ಯಾವುದೋ ಹಬ್ಬದ ದಿನ ಅಪ್ಪನ ಜೊತೆಯಲ್ಲಿ ಸಾಯಂಕಾಲದ ಹೊತ್ತು ಉರಾಚೆ ನಡೆದುಕೊಂಡು ಹೋಗುತ್ತಿದ್ದಾನೆ. ಧಗೆಯ ದಿನದ ಮಂಕು ಸಂಜೆ. ಹಳ್ಳಿ ಅವನ ನೆನಪಿನಲ್ಲಿ ಹೇಗೆ ಉಳಿದಿತ್ತೋ ಕನಸಿನಲ್ಲೂ ತದ್ವತ್ ಹಾಗೇ ಕಾಣುತ್ತಿತ್ತು. ನೆನಪಿನಲ್ಲಿ ಮಸುಕಾಗಿದ್ದ ಊರು ಕನಸಿನಲ್ಲಿ ಸ್ಪಷ್ಟವಾಗಿತ್ತು, ಅಂಗೈಯ ಹಾಗೆ ಚಪ್ಪಟೆ ನೆಲದಮೇಲೆ ಇರುವ ಊರು. ಸುತ್ತ ಒಂದಾದರೂ ವಿಲ್ಲೋ ಮರ ಇಲ್ಲ. ಬಹಳ ದೂರದಲ್ಲಿ, ಆಕಾಶ ಭೂಮಿ ಸೇರುವ ಎಡೆಯಲ್ಲಿ, ಪುಟ್ಟ ಕಾಡಿನ ವಕ್ರ ರೇಖೆ ಕಾಣುತ್ತಿದೆ. ಊರಿನ ಕೊನೆಯ ಹಿತ್ತಲನ್ನೂ ದಾಟಿ ಸ್ವಲ್ಪ ದೂರ ಹೋದರೆ ಪಡಖಾನೆ ಇದೆ, ದೊಡ್ದದು. ಅಪ್ಪನ ಜೊತೆ ಹೋಗುವಾಗ ಅದನ್ನು ಕಂಡಾಗಲೆಲ್ಲ ಅವನು ಅಸಹ್ಯಪಡುತ್ತಿದ್ದ. ಪಡಖಾನೆ ಭಯ ಹುಟ್ಟಿಸುತ್ತಿತ್ತು. ಅಲ್ಲಿ ಯಾವಾಗಲೂ ಜನ. ಕೂಗಾಡುತಿದ್ದರು, ಜೋರಾಗಿ ನಗುತಿದ್ದರು, ಬೈದಾಡುತಿದ್ದರು, ಕೆಟ್ಟ ದನಿಯಲ್ಲಿ ಹಾಡುತಿದ್ದರು, ಜಗಳವಾಡುತಿದ್ದರು. ಹೆದರಿಕೆ ಆಗುವ ಹಾಗೆ ಒಂದಷ್ಟು ಜನ ಕುಡುಕರು ಅಲ್ಲೇ ಠಳಾಯಿಸುತ್ತಿದ್ದರು… ಅವರು ಕಂಡರೆ ಅವನು ಭಯದಲ್ಲಿ ನಡುಗುತ್ತ ಅಪ್ಪನಿಗೆ ಒತ್ತಿಕೊಳ್ಳುತ್ತಿದ್ದ.

ಪಡಖಾನೆಯ ಮುಂದೆ ಧೂಳು ತುಂಬಿದ ದಾರಿ. ಸೊಟ್ಟ ಸೊಟ್ಟಗೆ ಸಾಗುತ್ತಾ ಮುನ್ನೂರು ಹೆಜ್ಜೆ ದೂರದಲ್ಲಿ ಬಲಕ್ಕೆ ತಿರುಗಿ ಸ್ಮಶಾನವನ್ನು ಮುಟ್ಟುತಿತ್ತು. ಸ್ಮಶಾನದ ನಡೂ ಮಧ್ಯೆ ಚರ್ಚಿನ ಕಲ್ಲುಕಟ್ಟಡ ಇತ್ತು. ಅದಕ್ಕೊಂದು ಹಸಿರು ಗೋಪುರ. ಅವನೆಂದೂ ನೋಡಿರದ, ಬಲು ಹಿಂದೆ ಸತ್ತ ಅಜ್ಜಿಯ ಸಲುವಾಗಿ ಪ್ರಾರ್ಥನೆ ಮಾಡಲು ಅಪ್ಪ ಅಮ್ಮನ ಜೊತೆಯಲ್ಲಿ ಆ ಚರ್ಚಿಗೆ ವರ್ಷಕ್ಕೆ ಎರಡು ಸಾರಿ ಹೋಗುತ್ತಿದ್ದ. ಆಗೆಲ್ಲ ಅಕ್ಕಿ, ಜೇನುತುಪ್ಪ ಬೆರೆಸಿ, ದ್ರಾಕ್ಷಿಯಲ್ಲಿ ಶಿಲುಬೆಯ ಆಕಾರ ಮೂಡಿಸಿರುವ ‘ಕುತ್ಯಾ’ ತಿನಿಸನ್ನು ಬಿಳಿಯ ತಟ್ಟೆಯ ಮೇಲೆ ಇಟ್ಟು, ಅದಕ್ಕೊಂದು ಬಟ್ಟೆ ಹೊದಿಸಿ ತೆಗೆದುಕೊಂಡು ಹೋಗುತಿದ್ದರು. ಚರ್ಚು, ಅಲ್ಲಿದ್ದ ಅಲಂಕಾರವಿಲ್ಲದ ಹಳೆಯ ವಿಗ್ರಹಗಳು, ತಲೆ ನಡುಗುತ್ತಿದ್ದ ಮುದುಕ ಪಾದ್ರಿ ಎಲ್ಲವೂ ಅವನಿಗಿಷ್ಟವಾಗುತ್ತಿದ್ದವು. ಅಜ್ಜಿಯ ಸಮಾಧಿಯ ಪಕ್ಕದಲ್ಲಿ ಚಪ್ಪಡಿ ಕಲ್ಲು ಹಾಸಿದ ಇನ್ನೊಂದು ಪುಟ್ಟ ಸಮಾಧಿ ಇತ್ತು. ಅದು ಅವನ ತಮ್ಮನದ್ದು. ಅವನು ಆರು ತಿಂಗಳ ಮಗುವಾಗಿದ್ದಾಗಲೇ ಸತ್ತು ಹೋಗಿದ್ದ. ಅವನನ್ನು ನೋಡಿದ ನೆನಪೂ ಇರಲಿಲ್ಲ. ತನಗೊಬ್ಬ ತಮ್ಮ ಇದ್ದ ಅನ್ನುವುದು ಕೇಳಿ ಗೊತ್ತಿತ್ತು. ಚರ್ಚಿಗೆ ಹೋದಾಗೆಲ್ಲ ಅದರ ಮುಂದೆಯೂ ನಿಂತು, ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡು, ನಮಸ್ಕಾರ ಮಾಡಿ, ಸಮಾಧಿ ಕಲ್ಲಿಗೆ ಮುತ್ತಿಡುತ್ತಿದ್ದ.

ಈಗ ಕನಸಿನಲ್ಲಿ ಅಪ್ಪನ ಜೊತೆ ನಡೆದುಕೊಂಡು, ಹೆಂಡದಂಗಡಿ ದಾಟಿ ಸ್ಮಶಾನದ ಕಡೆ ಹೋಗುತ್ತಿದ್ದಾನೆ. ಅಪ್ಪನ ಕೈ ಭದ್ರವಾಗಿ ಹಿಡಿದು ಪಡಖಾನೆಯತ್ತ ತಿರುತಿರುಗಿ ನೋಡಿ ಹೆದರುತ್ತಿದ್ದಾನೆ. ಏನೋ ಹಬ್ಬ. ಹಳ್ಳಿಯ ಜನವೆಲ್ಲ ಒಳ್ಳೆ ಬಟ್ಟೆ ತೊಟ್ಟು ಬಂದಿದ್ದಾರೆ. ರೈತ ಹೆಂಗಸರು, ಅವರ ಗಂಡಂದಿರು, ಎಲ್ಲಾ ಥರದ ಜನ. ಎಲ್ಲಾರೂ ಕುಡಿದಿದ್ದಾರೆ, ಹಾಡುತಿದ್ದಾರೆ. ಹೆಂಡದಂಗಡಿ ಮುಂದೆ ಗಾಡಿ ನಿಂತಿದೆ. ವಿಚಿತ್ರವಾಗಿದೆ. ದೊಡ್ಡ ಕುದುರೆಗಳನ್ನ ಕಟ್ಟಿರುವ ದೊಡ್ಡ ಗಾಡಿ. ಹೆಂಡದ ಪೀಪಾಯಿ ಸಾಗಿಸುವ ಗಾಡಿ. ದೊಡ್ಡ ಕುದುರೆ ನೋಡುವುದಕ್ಕೆ ಅವನಿಗೆ ಇಷ್ಟ. ಉದ್ದ ಕೂದಲು, ದಪ್ಪ ಕಾಲು, ನಿಧಾನವಾಗಿ ಹೆಜ್ಜೆ ಹಾಕುತ್ತ, ಬೆಟ್ಟದಷ್ಟು ದೊಡ್ಡ ಹೊರೆಯನ್ನು ಆಯಾಸವೇ ಇಲ್ಲದ ಹಾಗೆ, ಹೊರೆ ಇರುವುದರಿಂದ ನಡೆಯುವುದು ಸುಲಭ ಅನ್ನುವ ಹಾಗೆ ದೊಡ್ಡ ಕುದುರೆ ಎಳಕೊಂಡು ಹೋಗುತ್ತಿದ್ದವು. ಈಗ ದೊಡ್ಡ ಗಾಡಿಗೆ ಸಣಕಲು ತಟ್ಟು, ರೈತರ ಮನೆಗೆ ಸೌದೆಯನ್ನೋ ಹುಲ್ಲನ್ನೋ ಹೊತ್ತ ಗಾಡಿಯನ್ನು ಮುಕ್ಕರಿದು ಎಳಕೊಂಡು ಹೋಗುವಂಥ ಬಡಕಲು ತಟ್ಟು ಕಟ್ಟಿದ್ದರು. ಗಾಡಿ ಕೆಸರಿನಲ್ಲೊ ಕೊರಕಲಿನಲ್ಲೊ ಸಿಕ್ಕಿಬಿದ್ದರೆ ರೈತರು ಆ ಬಡಕಲು ಕುದುರೆಗಳಿಗೆ ನೋವಾಗುವ ಹಾಗೆ, ಕಣ್ಣು ಮೂಗಿನ ಮೇಲೆ ಕೂಡ ಹೊಡೆಯುತ್ತಾರಲ್ಲ ಅಂಥ ಕುದುರೆ. ಅದನ್ನು ಕಂಡಾಗ ಅವನು ದುಃಖವಾಗಿ ಅಳುತ್ತಿದ್ದ, ಅಮ್ಮ ಬಂದು ಕಿಟಕಿಯಿಂದ ಕರಕೊಂಡು ಹೋಗುತ್ತಿದ್ದಳು. ಈಗ ಕನಸಿನಲ್ಲಿ ಇದ್ದಕಿದ್ದ ಹಾಗೆ ಗಲಾಟೆ ಎದ್ದಿದೆ. ಕೂಗಾಡುತ್ತ, ಹಾಡುತ್ತ, ಬಲಲೈಕ ತಂತೀವಾದ್ಯ ಬಾರಿಸುತ್ತ ದೊಡ್ಡ ಮೈಯ ರೈತರು, ಕೆಂಪು, ನೀಲಿ ಅಂಗಿ ತೊಟ್ಟವರು, ಭುಜದ ಮೇಲೆ ಕೋಟು ಎಸೆದುಕೊಂಡು ಆಚೆಗೆ ಬಂದರು. ಅವರಲ್ಲೊಬ್ಬ ‘ಎಲ್ಲಾರೂ ಬನ್ನೀ, ಗಾಡೀ ಹತ್ತಿ, ಸವಾರೀ ಹೋಗಣಾ, ಬನ್ನೀ ಬನ್ನೀ’ ಅಂತ ಕೂಗುತ್ತಿದ್ದಾನೆ. ಅವನಿಗೆ ದಪ್ಪ ಕತ್ತು, ಕೊಬ್ಬಿದ ಮುಖ, ಗೆಜ್ಜರಿ ಬಣ್ಣ. ಇದ್ದಕಿದ್ದ ಹಾಗೆ ನಗು, ಮಾತು.

‘ಇಂಥಾ ಬಡಕಲು ಕುದುರೇ!’

‘ನಿನಗೆ ಹುಚ್ಚು ಹಿಡಿದಿದೆಯಾ ಮಿಕೋಲ್ಕಾ-ಇಂಥ ಬಡಕಲು ತಟ್ಟು ಇಷ್ಟು ದೊಡ್ಡ ಗಾಡಿಗೆ ಕಟ್ಟಿದ್ದೀಯಲ್ಲ.’

‘ಏನಿಲ್ಲ ಅಂದರೂ ಈ ಹೆಣ್ಣು ಕುದುರೆಗೆ ಇಪ್ಪತ್ತು ವರ್ಷ ಆಗಿರಬೇಕು!’

‘ಎಲ್ಲಾರೂ ಹತ್ತಿ’ ಅನ್ನುತ್ತಾ ಮಿಕೋಲ್ಕ ಹಾರಿ ಲಗಾಮು ಹಿಡಿದು ನಿಂತುಕೊಳ್ಳತಾನೆ.

‘ಮಟ್ವೆ ಇದಾನಲ್ಲ ಅವನ ಜೊತೆ ಹೋಗಿದೆ ನನ್ನ ಗಂಡು ಕುದುರೆ. ಈ ಗಿಡ್ಡ ತಟ್ಟು ನೋಡಿದರೆ ಬೇಜಾರಾಗತ್ತೆ, ಸಾಯಿಸಿಹಾಕೋದೇ ವಾಸಿ. ಇದಕ್ಕೆ ಹುಲ್ಲು ಹುರುಳಿ ದಂಡ. ಹತ್ತೀ ನೀವು, ಹೇಳತೇನೆ… ಇವಳು ಓಡತಾಳೆ, ಓಡದೆ ಇದ್ದರೆ ಇದೆಯಲ್ಲಾ’ ಅನ್ನುತ್ತ ಕೈಯಲ್ಲಿನ ಚಾವಟಿ ಬೀಸುತ್ತಾನೆ. ಕುದುರೆಯನ್ನು ಹೊಡೆಯುವ ಕಲ್ಪನೆಯೇ ಅವನಿಗೆ ಸುಖ ಕೊಡುತ್ತಾ ಇದೆ.

‘ಹತ್ತೀ, ನೋಡಣ, ಓಡತಾಳಂತೆ, ಗೊತ್ತಾ?’

‘ಓಡಿ ಆಗಲೇ ಹತ್ತು ವರ್ಷ ಆಗಿರಬೇಕು.’

‘ಈಗ ಓಡತಾಳೆ.’

‘ಓಡದೆ ಇದ್ದರೆ ಬಿಡಬೇಡಿ, ಎಲ್ಲಾ ಚಾವಟಿ ಹಿಡೀರಿ, ರೆಡೀನಾ!’

‘ಬಾರಿಸೀ ಈಗಾ!’

ತಮಾಷೆ ಮಾಡತಾ ಗಲಾಟೆ ಮಾಡತಾ ಎಲ್ಲರೂ ಮಿಕೋಲ್ಕನ ಗಾಡಿ ಹತ್ತುತ್ತಾರೆ. ಆರು ಜನ. ಇನ್ನೂ ಜಾಗ ಇದೆ. ದಪ್ಪನೆ ಕೆಂಪನೆ ಹೆಂಗಸನ್ನ ಹತ್ತಿಸಿಕೊಂಡರು. ಕೆಂಪು ಬಣ್ಣದ ಒರಟು ಕ್ಯಾಲಿಕೊ ಬಟ್ಟೆ ತೊಟ್ಟಿದಾಳೆ. ಮದುವೆಯಾದ ಹೆಂಗಸರು ತೊಡುವಂಥ ಎರಡು ತುದಿಗಳಿರುವ, ಮಣಿಯ ಅಂಚು ಕಟ್ಟಿದ್ದ ಕಿಚ್ಕಾ ಹ್ಯಾಟು ತಲೆಯ ಮೇಲಿದೆ, ಕಾಲಲ್ಲಿ ಬೂಟಿದೆ. ಅವಳು ಕಾಯಿ ಸುಲಿಯುತ್ತಾ ತಮಾಷೆ ಮಾಡಿ ನಗತಾ ಇದಾಳೆ. ಸುತ್ತಲೂ ಇರುವ ಜನ ಕೂಡ ನಗತಾ ಇದಾರೆ. ನಗದೆ ಇರಲಾಗದು. ಅಂಥಾ ಸಣಕಲು ತಟ್ಟು ಇಷ್ಟು ಜನ ಕೂತಿರುವ ಗಾಡಿ ಎಳಕೊಂಡು ಓಡುತ್ತದೆ! ಗಾಡಿಯಲ್ಲಿರುವ ಇಬ್ಬರು ಚಾಟಿ ಹಿಡಿದು ಮಿಕೋಲ್ಕನಿಗೆ ಸಹಾಯಮಾಡುವುದಕ್ಕೆ ನಿಲ್ಲುತ್ತಾರೆ—ಹೇಯ್ ಹೇಯ್ ಅಂದಾಗ ಕುದುರೆ ಶಕ್ತಿಯೆಲ್ಲಾ ಬಿಟ್ಟು ಹೆಣಗಿದರೂ ಓಡುವುದಿರಿಲಿ ಮುಂದೆ ಹೆಜ್ಜೆ ಹಾಕುವುದೇ ಕಷ್ಟವಾಗುತ್ತದೆ. ಸುಮ್ಮನೆ ಕಾಲು ಕೆದರಿ, ಕೆನೆದು, ಮೂರು ಚಾವಟಿಗಳು ಸುರಿಸುವ ಏಟಿನ ಮಳೆಯಲ್ಲಿ ಮೈ ಕುಗ್ಗಿಸುತ್ತದೆ. ಗಾಡಿಯೊಳಗೆ ನಗು ಹೆಚ್ಚುತ್ತದೆ. ಮಿಕೋಲ್ಕನಿಗೆ ಸಿಟ್ಟು. ಕುದುರೆಯನ್ನು ಇನ್ನೂ ಇನ್ನೂ ಹೊಡೆಯುತ್ತಾನೆ—ಕುದುರೆ ನಿಜವಾಗಲೂ ಓಡುತ್ತದೆ ಅನ್ನುವ ನಂಬಿಕೆ ಇರುವವನ ಹಾಗೆ.

‘ಅಣ್ಣಾ ನನ್ನೂ ಹತ್ತಿಸಿಕೊಳ್ಳಿ’ ಗುಂಪಿನಲ್ಲಿ ಯಾರೋ ಒಬ್ಬ ಕೂಗುತ್ತಾನೆ.

‘ಹತ್ತಿರೀ, ಎಲ್ಲಾ ಹತ್ತಿರಿ!’ ಮಿಕೋಲ್ಕಾ ಚೀರುತ್ತಾನೆ. ‘ಎಲ್ಲಾರನ್ನೂ ಎಳಕೊಂಡು ಹೋಗತಾಳೆ. ಇಲ್ಲಾ ಅಂದರೆ ಹೊಡೆದು ಸಾಯಿಸತೇನೆ!’ ಚಾವಟಿ ಬೀಸಿ ಬೀಸಿ ಹೊಡೆಯುತ್ತಾನೆ. ಯಾಕೆ ಹೊಡೆಯುತ್ತಿದ್ದೇನೆ ಅನ್ನುವುದು ಕೂಡ ಅವನಿಗೆ ಗೊತ್ತಿಲ್ಲ.

‘ಅಪ್ಪಾ, ಅಪ್ಪಾ ಏನು ಮಾಡತಾ ಇದಾರೆ? ಅಪ್ಪಾ, ಕುದುರೇನ ಹೊಡೀತಾ ಇದಾರೆ, ಪಾಪ!’ ಅನ್ನತಾನೆ.

‘ಬಾ, ಬಾ. ಅವರು ಕುಡಿದಿದಾರೆ. ಅವರಿಗೆ ತಮಾಷೆ. ಮೂರ್ಖರು. ಬಾ, ನೋಡಬೇಡ, ಬಾ,’ ಅನ್ನತಾನೆ ಅಪ್ಪ. ಎಳೀತಾನೆ. ಅಪ್ಪನ ಕೈಯಿಂದ ತಪ್ಪಿಸಿಕೊಂಡು ಕುದುರೆ ಹತ್ತಿರ ಓಡತಾನೆ. ಭಯ ಆಗಿದೆ. ಕುದುರೆ ದಣಿದಿದೆ. ಏದುಸಿರು. ನಿಲ್ಲುತ್ತದೆ, ಎಳೆಯುತ್ತದೆ, ಬೀಳುತ್ತದೆ.

‘ಸಾಯೊ ಹಾಗೆ ಬಾರಿಸಿ!’ ಮಿಕೋಲ್ಕಾ ಚೀರುತ್ತಾನೆ.

‘ನಿನಗೆ ದೇವರ ಭಯ ಇಲ್ಲವಾ, ಸೈತಾನ ನೀನು!’ ಗುಂಪಿನಿಂದ ಯಾರೋ ಮುದುಕ ಕೂಗತಾನೆ.

‘ಇಂಥ ಬಡಕಲು ಕುದುರೆ ಇಷ್ಟು ಜನ ಇರುವ ಗಾಡಿಯನ್ನ ಎಳೆದಿದ್ದು ಯಾರಾದರೂ ನೋಡಿದೀರಾ?’ ಯಾರೋ ಕೇಳಿದರು.

‘ಸತ್ತು ಹೋಗತ್ತೆ,’ ಅನ್ನತಾನೆ ಇನ್ನೊಬ್ಬ.

‘ದೂರ ಹೋಗಿ! ನನ್ನ ಕುದುರೆ, ನನ್ನಿಷ್ಟ! ಇನ್ನೂ ಬೇಕಾದವರು ಹತ್ತಿ. ಎಲ್ಲಾರೂ ಬನ್ನಿ. ಎಳಕೊಂಡು ಸ್ಪೀಡಾಗಿ ಓಡತಾಳೆ!…’

ಜೋರು ನಗು. ಕುದುರೆ ಕಾಲು ಜಾಡಿಸುತ್ತದೆ. ಮುದುಕ ಕೂಡ ನಗತಾನೆ. ಇಂಥಾ ಬಡಕಲು ಕುದುರೆ ಕೂಡ ಇನ್ನೂ ಜೀವಂತವಾಗಿ ಕಾಲು ಜಾಡಿಸುತ್ತಾ ಇದೆಯಲ್ಲಾ!
ಜನದ ಗುಂಪಿನಿಂದ ಇಬ್ಬರು ಇನ್ನೂ ಎರಡು ಚಾಟಿ ತಂದು ಒಬ್ಬೊಬ್ಬರೂ ಕುದುರೆಯ ಒಂದೊಂದು ಪಕ್ಕ ನಿಂತು ಹೊಡೆಯುತ್ತಾರೆ.

‘ಮೂತಿ ಮೇಲೆ ಹಾಕಿ, ಕಣ್ಣಿನ ಮೇಲೆ ಹಾಕಿ, ಕಣ್ಣಿನ ಮೇಲೆ!’ ಮಿಕೋಲ್ಕಾ ಕೂಗತಾನೆ.

‘ಹಾಡು ಹೇಳಾಣಾ!’ ಗಾಡಿಯಲ್ಲಿ ಯಾರೋ ಅನ್ನತಾರೆ. ಎಲ್ಲರೂ ಹಾಡತಾರೆ. ಡಪ್ಪು ಬಾರಿಸತಾರೆ, ಸಿಳ್ಳೆ ಹಾಕತಾರೆ. ರೈತರ ಹೆಂಗಸು ಸಿಪ್ಪೆ ಸುಲೀತಾ ಕಿಲಕಿಲ ನಗತಾಳೆ.

ಅವನು ಕದುರೆಯನ್ನ ದಾಟಿ ಮುಂದೆ ಓಡತಾನೆ. ಕುದುರೆಯ ಕಣ್ಣಿನ ಮೇಲೆ ಹೇಗೆ ಹೊಡೆಯುತ್ತಾರೆ ನೋಡತಾನೆ. ಸೀದಾ ಕಣ್ಣಿನ ಮೇಲೇ ಏಟು! ಅಳತಾನೆ. ಎದೆ ಬಾಯಿಗೆ ಬರತ್ತೆ. ಕಣ್ಣಲ್ಲಿ ನೀರು. ಯಾರೋ ಬೀಸಿದ ಚಾವಟಿ ಅವನ ಮುಖಕ್ಕೆ ತಾಗುತ್ತದೆ. ಅವನಿಗೆ ಗೊತ್ತಾಗುವುದೇ ಇಲ್ಲ. ಕೈ ಹಿಸುಕಿಕೊಳ್ಳತಾನೆ, ಚೀರತಾನೆ, ಬಿಳಿಯ ಗಡ್ಡದ ಮುದುಕನ ಹತ್ತಿರ ಓಡತಾನೆ. ಇದೆಲ್ಲಾ ತಪ್ಪು ಅನ್ನುವ ಹಾಗೆ ಮುದಕ ತಲೆ ಆಡಿಸತಾ ಇದಾನೆ. ಹೆಂಗಸು ಅವನ ಕೈ ಹಿಡಿದು ಕರಕೊಂಡು ಹೋಗುವುದಕ್ಕೆ ನೊಡತಾಳೆ. ಅವನು ತಪ್ಪಿಸಿಕೊಂಡು ಮತ್ತೆ ಕುದುರೆ ಹತ್ತಿರ ಬರತಾನೆ. ಕೊನೆಯ ಉಸಿರು ಎಳೆಯುತ್ತಾ ಇದೆ. ಕಾಲು ಜಾಡಿಸುತ್ತಾ ಇದೆ.

ನಗರದ ಧೂಳು, ಸುಣ್ಣ, ಮೈ ಮನಸ್ಸನ್ನು ಒತ್ತುವಂಥ ಅಗಾಧವಾದ ಕಟ್ಟಡಗಳ ದಟ್ಟಣೆಗೆ ಒಗ್ಗಿದ ಅವನ ಕಣ್ಣಿಗೆ ಅಲ್ಲಿನ ತಾಜಾ ಹಸಿರು ಮೊದಮೊದಲು ಹಿತವಾಗಿತ್ತು. ಇಲ್ಲಿ ದಟ್ಟಣೆ ಇಲ್ಲ, ವಾಸನೆ ಇಲ್ಲ, ಹೆಂಡದಂಗಡಿಗಳಿಲ್ಲ. ಆದರೂ ಬಲು ಬೇಗನೆ ಈ ಹೊಸ ಹಿತವಾದ ಭಾವಗಳೇ ಅವನನ್ನು ನೋಯಿಸುವುದಕ್ಕೆ, ರೇಗಿಸುವುದಕ್ಕೆ ಶುರುಮಾಡಿದವು.

‘ದೆವ್ವಾ ಹಿಡೀಲೀ!’ ಮಿಕೋಲ್ಕಾ ಕೋಪದಲ್ಲಿ ಕೂಗಾಡತಾನೆ. ಚಾವಟಿ ಕೆಳಗೆಸೆದು, ಬಗ್ಗಿ, ಗಾಡಿಯ ಕೆಳಗೆ ಇದ್ದ ಬಾರುಕೋಲು ತೆಗೆಯುತಾನೆ. ಎರಡೂ ಕೈಯಲ್ಲಿ ಹಿಡಿದು ಗಾಳಿಯಲ್ಲಿ ಬೀಸತಾನೆ.

‘ಹೊಡೆದು ಸಾಯಿಸತಾನೆ!’ ಜನ ಕೂಗತಾರೆ.

‘ಸಾಯಿಸತಾನೆ!’

‘ನನ್ನ ಕುದುರೆ! ನನ್ನಿಷ್ಟ!’ ಅಂತ ಕೂಗತಾ ಬಾರುಕೋಲಿನಲ್ಲಿ ಹೊಡೀತಾನೆ. ಧಫ್ ಶಬ್ದ ಕೇಳತ್ತೆ.

‘ಬಾರಿಸು, ಬಾರಿಸು! ಯಾಕೆ ನಿಲ್ಲಿಸಿದೆ!’ ಜನ ಕೂಗತಾರೆ.

ಮಿಕೋಲ್ಕಾ ಇನ್ನೊಂದು ಸಾರಿ ಕೋಲು ಬೀಸತಾನೆ. ಕುದುರೆಯ ಬೆನ್ನಿಗೆ ಏಟು ಬೀಳತ್ತೆ. ಹಿಂದಿನ ಕಾಲು ಕುಸಿಯತ್ತೆ. ತಕ್ಷಣ ನೆಗೆದು ಎದ್ದು ಇರುವ ಶಕ್ತಿಯೆಲ್ಲಾ ಕೂಡಿಸಿಕೊಂಡು, ಆ ಕಡೆ, ಈ ಕಡೆ ವಾಲಾಡತಾ ಗಾಡಿ ಎಳೆಯಕ್ಕೆ ಹೆಣಗತ್ತೆ. ಎಲ್ಲಾ ದಿಕ್ಕಿನಿಂದ ಆರು ಚಾವಟಿ ಏಟು. ಕೋಲಿನಲ್ಲಿ ಇನ್ನೂ ಒಂದು ಸಾರಿ, ಮತ್ತೂ ಒಂದು ಸಾರಿ ಜೋರಾಗಿ ಲಯಬದ್ಧವಾಗಿ ಏಟು ಬೀಳತ್ತೆ. ಒಂದೇ ಏಟಿಗೆ ಸಾಯಿಸಕ್ಕೆ ಆಗಲಿಲ್ಲವಲ್ಲಾ ಅಂತ ಮಿಕೋಲ್ಕಾನಿಗೆ ಸಿಟ್ಟು ಹೆಚ್ಚಾಗತ್ತೆ.

‘ಗಟ್ಟಿ ಕುದರೇ!’ ಯಾರೋ ಕೂಗತಾರೆ.

‘ಈಗ ಸಾಯತ್ತೆ, ನೋಡತಾ ಇರಿ!’ ಇನ್ನು ಯಾರೋ ಉತ್ಸಾಹದಲ್ಲಿ ಚೀರತಾನೆ.

‘ಕೊಡಲಿ ತಗೊಂಡು ಕತ್ತರಿಸಿ ಹಾಕು, ಹೇಳತೀನಿ,’ ಇನ್ನೊಂದು ಕೂಗು ಕೇಳತ್ತೆ.

‘ಮಾಡತೀನಿ ನಿನಗೆ! ದೂರ ಸರೀರಿ!’ ಹುಚ್ಚನ ಹಾಗೆ ಚೀರತಾ ಮಿಕೋಲ್ಕಾ ಬಾರು ಕೋಲು ಎಸೆದು ಮತ್ತೆ ಗಾಡಿ ಕೆಳಕ್ಕೆ ಬಗ್ಗಿ ಕಬ್ಬಿಣದ ಸಲಾಕೆ ತೆಗೀತಾನೆ. ಶಕ್ತಿಯೆಲ್ಲಾ ಬಿಟ್ಟು ಕುದುರೆಗೆ ಹೊಡೀತಾನೆ. ನಾಲ್ಕು ಕಾಲೂ ಕತ್ತರಿಸಿ ಹೋದವು ಅನ್ನುವ ಹಾಗೆ ಕುದುರೆ ಕುಸಿಯತ್ತೆ.

‘ಬಾರಿಸಿ ಈಗ!’ ಮಿಕೋಲ್ಕಾ ಚೀರತಾನೆ. ಮೈ ಮೇಲೆ ಪ್ರಜ್ಞೆ ಇಲ್ಲದವನ ಹಾಗೆ. ಎಷ್ಟೊಂದು ಜನ, ಎಲ್ಲಾ ಕುಡಿದಿದ್ದವರು, ಚಾಟಿ, ಕೋಲು, ಹಗ್ಗ, ಕೈ ಸಿಕ್ಕಿದ್ದು ಹಿಡಿದು ಬರತಾರೆ. ಮಿಕೋಲ್ಕಾ ಕುದುರೆ ಪಕ್ಕ ನಿಂತು ಅದರ ಬೆನ್ನ ಮೇಲೆ ಸಲಾಕೆಯಲ್ಲಿ ಸುಮ್ಮನೆ ಹೊಡೀತಾ ಇರತಾನೆ ಇನ್ನೂ. ಕುದುರೆ ಮೂತಿ ಚಾಚಿ, ಉಸಿರು ಎಳಕೊಂಡು, ಬಿಟ್ಟು, ಸಾಯತ್ತೆ.

‘ಮುಗಿಸಿಬಿಟ್ಟಾ!’ ಕೂಗತಾರೆ.

‘ಎಷ್ಟು ಹೇಳಿದರೂ ಯಾಕೆ ಓಡಲಿಲ್ಲ ಮತ್ತೆ!’

‘ನನ್ನ ಕುದುರೆ, ನನ್ನ ಆಸ್ತಿ!’ ಸಲಾಕೆ ಹಿಡಿದು, ಕಣ್ಣೆಲ್ಲ ಕೆಂಪಾಗಿ, ಹೊಡೆಯುವುದಕ್ಕೆ ಇನ್ನೇನೂ ಇಲ್ಲ ಅಂತ ಬೇಜಾರಿನಲ್ಲಿದ್ದ ಮಿಕೋಲ್ಕಾ ಚೀರಾಡತಾನೆ.

‘ನಿನಗೆ ದೇವರ ಭಯ ಇಲ್ಲ!’ ಗುಂಪಿನಲ್ಲಿದ್ದವರು ಯಾರೋ ಹೇಳತಾರೆ.

ಹುಡುಗ ಮೈ ಮೇಲೆ ಎಚ್ಚರವಿಲ್ಲದವನ ಹಾಗೆ ಜನರ ಗುಂಪಿನಲ್ಲಿ ನುಗ್ಗಿ ಸತ್ತ ಕುದುರೆಯ ರಕ್ತ ಮೆತ್ತಿರುವ ಕಣ್ಣು, ಮೂಗು, ಬಾಯಿಗೆ ಮುತ್ತಿಡತಾನೆ. ತಟ್ಟನೆ ಎದ್ದು ಪುಟ್ಟ ಮುಷ್ಠಿ ಬಿಗಿದು ಮಿಕೋಲ್ಕನ ಮೇಲೆ ಏರಿ ಹೋಗತಾನೆ. ಹುಡುಗನ ಬೆನ್ನು ಹತ್ತಿ ಬಂದ ಅಪ್ಪ ಆ ಹೊತ್ತಿಗೆ ಅವನನ್ನು ಹಿಡಿದು ಗುಂಪಿನಿಂದ ದೂರ ಕರಕೊಂಡು ಹೋಗತಾನೆ.

‘ಬಾ, ಹೋಗಣ, ಬಾ, ಮನೆಗೆ ಹೋಗಣ!’ ಅನ್ನತಾನೆ.

‘ಅಪ್ಪಾ, ಕುದುರೇನ ಕೊಂದರು, ಯಾಕೆ ಅಪ್ಪಾ!’ ಮಗು ಬಿಕ್ಕಳಿಸತಾನೆ, ಉಸಿರು ಕಟ್ಟತ್ತೆ, ಮಾತು ಕಷ್ಟಪಟ್ಟು ಆಡತಾನೆ.

‘ಅವರು ಕುಡಿದಿದಾರೆ. ತಮಾಷೆ ಮಾಡತಿದಾರೆ. ನಮಗೂ ಅದಕ್ಕೂ ಸಂಬಂಧ ಇಲ್ಲ, ಬಾ!’ ಅನ್ನತಾರೆ ಅಪ್ಪ. ಅಪ್ಪನನ್ನ ತಬ್ಬಿಕೊಂಡ. ಎದೆ ಒತ್ತುತ್ತಾ ಇದೆ, ಎದೆ ಭಾರ, ಉಸಿರಾಡುವುದು ಕಷ್ಟ, ಕೂಗಬೇಕು, ಅಳಬೇಕು. ಎಚ್ಚರವಾಯಿತು.

ಏದುಸಿರು ಬಿಡುತ್ತ ಎದ್ದ. ಮೈ ಬೆವರಿತ್ತು. ಕೂದಲೆಲ್ಲ ವದ್ದೆಯಾಗಿದ್ದವು. ಭಯವಾಗಿತ್ತು.

‘ಸದ್ಯ, ದೇವರೇ, ಕನಸು!’ ಮರಕ್ಕೆ ಒರಗಿ, ದೀರ್ಘವಾಗಿ ಉಸಿರು ಎಳೆದುಕೊಳ್ಳುತ್ತ, ‘ಜ್ವರ ಬರುತ್ತೋ? ಬಂದಿದೆಯೋ? ಎಂಥಾ ಕೆಟ್ಟ ಕನಸು!’ ಅಂದುಕೊಂಡ. ಇಡೀ ಮೈ ನೋಯುತ್ತಿತ್ತು. ಮನಸ್ಸಿಗೆ ಕತ್ತಲು ಕವಿದಿತ್ತು. ಕಳವಳವಾಗುತ್ತಿತ್ತು. ಮೊಳಕಾಲಮೇಲೆ ಕೈ ಗಳನ್ನು ಮಡಿಸಿಕೊಂಡು, ಕೈ ಮೇಲೆ ತಲೆ ಇಟ್ಟು ಕೂತ.

‘ದೇವರೇ! ಹಾಗೆ ಆಗುತ್ತದೆಯಾ! ನಾನು ನಿಜವಾಗಲೂ ಕೊಡಲಿ ತಗೊಂಡು ಅವಳ ತಲೆಗೆ ಹೊಡೆದು, ಅವಳ ಬುರುಡೆ ಚೂರಾಗಿ, ನಾನು ರಕ್ತದಲ್ಲಿ, ಬಿಸೀ ರಕ್ತದಲ್ಲಿ ಕಾಲಿಟ್ಟು ಹೋಗಿ, ಬೀಗ ಮುರಿದು, ದುಡ್ಡು ಕದ್ದು, ರಕ್ತ ಮೆತ್ತಿದ ಕೊಡಲಿಯ ಜೊತೆ ದುಡ್ಡೂ ಬಚ್ಚಿಟ್ಟುಕೊಂಡು, ನಡುಗುತ್ತಾ… ದೇವರೇ, ಹೀಗೇ ಆಗತ್ತಾ?’

ಎಲೆಯ ಹಾಗೆ ತರಗುಟ್ಟುತಿದ್ದ.
ಏನಾಗಿದೆ ನನಗೆ ಅಂದುಕೊಳ್ಳುತ್ತ ನೆಟ್ಟಗೆ ಕೂತ. ಬೆರಗಾಯಿತು. ‘ನನ್ನ ಕೈಯಲ್ಲಿ ಆಗಲ್ಲ ಅನ್ನುವುದು ಚೆನ್ನಾಗಿ ಗೊತ್ತು. ಆದರೂ ಯಾಕೆ ಹೀಗೆ ಹಿಂಸೆ ಮಾಡಿಕೊಳ್ಳುತಿದ್ದೇನೆ? ನಿನ್ನೆ, ನಿನ್ನೆ ದಿನ ಕೂಡ, ಅದನ್ನು ಮಾಡುವುದಕ್ಕೆ ಹೊರಟೆ… ಟ್ರಯಲ್ ನೋಡುವುದಕ್ಕೆ. ನನ್ನ ಕೈಯಲ್ಲಿ ಆಗಲ್ಲ ಅನ್ನುವುದು ನಿನ್ನೆ ಕೂಡ ಸ್ಪಷ್ಟವಾಗಿ ಗೊತ್ತಾಯಿತು… ಈಗ ಇದೇನಿದು ಹೀಗೆ? ಯಾಕೆ ಇಂಥ ಅನುಮಾನ? ನಿನ್ನೆ ತಾನೇ ಮೆಟ್ಟಿಲು ಇಳಿಯುತ್ತಾ ‘ಇದು ನೀಚ, ದುಷ್ಟ, ಕೆಟ್ಟ ಕೆಲಸ,’ ಅಂತ ಹೇಳಿಕೊಂಡಿದ್ದೆ. ಕಲ್ಪಿಸಿಕೊಂಡರೇ ಸಾಕು ನಿಜವಾಗಿ ವಾಂತಿ ಬರತ್ತೆ, ಭಯವಾಗತ್ತೆ…’

‘ನನ್ನ ಕೈಯಲ್ಲಿ ಆಗಲ್ಲ, ಆಗಲ್ಲ! ಮಾಡಲಾರೆ! ನಾನು ಹಾಕಿದ ಲೆಕ್ಕಾಚಾರದಲ್ಲಿ ಏನೂ ತಪ್ಪಿಲ್ಲದೆ ಇರಬಹುದು, ನನ್ನ ಯೋಜನೆ ಗಣಿತದಷ್ಟು ಕರಾರುವಾಕ್ಕಾಗಿರಬಹುದು, ಅದೆಲ್ಲ ಹೋದ ತಿಂಗಳೇ ನನಗೆ ಸೂರ್ಯನಷ್ಟು ಸ್ಪಷ್ಟವಾಗಿದೆ. ದೇವರೇ! ಹಾಗೆ ಎಲ್ಲ ಸರಿಯಾಗಿದ್ದರೂ ನನಗೆ ಧೈರ್ಯ ಇಲ್ಲ, ನನ್ನ ಕೈಯಲ್ಲಿ ಆಗಲ್ಲ!… ಹಾಗಿದ್ದರೂ ಇನ್ನೂ ಯಾಕೆ ನಾನು ಇದನ್ನೆಲ್ಲಾ…’
ಎದ್ದು ನಿಂತ. ನಾನು ಹೇಗೆ ಇಲ್ಲಿಗೆ ಬಂದೆ ಅನ್ನುವ ಹಾಗೆ ಸುತ್ತಲೂ ನೋಡಿದ. ಟಿ—ವಿ ಬ್ರಿಜ್‌ ನತ್ತ ನಡೆದ. ಬಿಳಿಚಿದ್ದ. ಕಣ್ಣು ಉರಿಯುತಿದ್ದವು. ಸುಸ್ತಾಗಿದ್ದ. ಆದರೂ ಉಸಿರಾಡುವುದು ಸಲೀಸಾಯಿತು. ಇಷ್ಟು ಕಾಲದಿಂದ ಮನಸ್ಸಿನಲ್ಲಿ ಕೂತಿದ್ದ ಭಾರವನ್ನು ಬಿಸಾಕಿದ ಹಾಗೆ ಹಗುರ ಅನ್ನಿಸಿತು, ಸಮಾಧಾನ ಅನ್ನಿಸಿತು. ‘ದೇವರೇ! ನನಗೆ ದಾರಿ ತೋರಿಸು. ಈ..ಈ ಶಾಪದ ಹಾಗಿರುವ ಕನಸನ್ನು ಒರೆಸಿಬಿಡುತ್ತೇನೆ!’

ಸೇತುವೆ ದಾಟುತ್ತ ನೆವಾ ನದಿಯನ್ನು, ಮುಳುಗುತ್ತಿರುವ ಪ್ರಖರ ಸೂರ್ಯನನ್ನು ಸುಮ್ಮನೆ ನೋಡಿದ. ಸುಸ್ತಾಗಿದ್ದರೂ ತನಗೆ ದಣಿವಾಗಿದೆ ಅನ್ನುವುದೇ ಗೊತ್ತಿರಲಿಲ್ಲ ಅವನಿಗೆ. ಕಳೆದೊಂದು ತಿಂಗಳಿಂದ ಹೃದಯದಲ್ಲಿದ್ದು ಕೀವು ತುಂಬಿದ್ದ ಕುರು ತಟ್ಟನೆ ಒಡೆದು ಆರಾಮ ಅನ್ನಿಸಿದ ಹಾಗಿತ್ತು. ಆ ಮಾಟ, ಆ ಗೀಳು, ತೊಲಗಿತು, ನಾನಿನ್ನು ಸ್ವತಂತ್ರ ಅನ್ನಿಸಿತು!

ಮುಂದೊಂದು ಕಾಲದಲ್ಲಿ ಅವನು ತನಗೆ ಈ ದಿನಗಳ ಪ್ರತಿ ನಿಮಿಷವೂ ಏನೇನಾಯಿತು ಅನ್ನುವುದನ್ನು ವಿವರ ವಿವರವಾಗಿ ಜ್ಞಾಪಿಸಿಕೊಳ್ಳುವಾಗ ತನ್ನಷ್ಟಕ್ಕೇ ಅಸಾಮಾನ್ಯವೇನೂ ಅಲ್ಲದಿದ್ದ ಒಂದು ಸಂದರ್ಭ ಮಾತ್ರ ತನ್ನ ವಿಧಿಯನ್ನು ನಿರ್ಣಯಿಸಿತು ಅನಿಸುತ್ತಿತ್ತು. ಅದೇನೆಂದರೆ—
ತಾನು ಅಷ್ಟು ದಣಿದು ಸೋತಿದ್ದರೂ ಮನೆಗೆ ಹೋಗಲು ಅತ್ಯಂತ ಹತ್ತಿರದ ನೇರವಾದ ದಾರಿ ಹಿಡಿಯದೆ ಅದೇಕೆ ಹೇ ಮಾರ್ಕೆಟ್ಟಿನ ಕಡೆಗೆ ಹೋದೆ, ಆ ದಿಕ್ಕಿಗೆ ಹೋಗುವ ಅಗತ್ಯವೇ ಇಲ್ಲದಿದ್ದರೂ ಯಾಕೆ ಹೋದೆ ಅನ್ನುವುದು ಅವನಿಗೆ ಅರ್ಥವೂ ಅಗಿರಲಿಲ್ಲ, ಹಾಗೆ ಮಾಡಿದ್ದಕ್ಕೆ ವಿವರಣೆ ಕೊಟ್ಟುಕೊಳ್ಳಲೂ ಆಗಲಿಲ್ಲ. ಅದು ತೀರ ದೂರದ ಬಳಸು ದಾರಿಯಲ್ಲದಿದ್ದರೂ ಅತ್ತ ಹೋಗುವುದು ಖಂಡಿತ ಬೇಡವಾಗಿತ್ತು. ‘ಮನೆಗೆ ಹೋಗುವ ದಾರಿ ಅಲ್ಲದಿದ್ದರು ಹೇ ಮಾರ್ಕೆಟ್‍ ಕಡೆ ಯಾಕೆ ಹೋದೆ? ಅಲ್ಲಿ ಅಂಥ ಮುಖ್ಯವಾದ, ನಿರ್ಣಾಯಕವಾದ ಭೇಟಿ ಅಕಸ್ಮಾತ್ತಾಗಿ ನಡೆಯಿತು? ಅದೂ ನನಗಾಗಿ ಹೊಂಚಿ ಕಾಯುತ್ತಿತ್ತು ಅನ್ನುವ ಹಾಗೆ ಬದುಕಿನ ಆ ಗಳಿಗೆಯಲ್ಲಿ, ಆ ಹೊತ್ತಿನಲ್ಲಿ, ನನ್ನ ಮನಸ್ಸು ಅಂಥ ಸ್ಥಿತಿಯಲ್ಲಿರುವಾಗ, ಬದುಕಿನ ವಿಧಿಯನ್ನು ನಿರ್ಧರಿಸುವ ಭೇಟಿ ನಡೆಯಿತು!’ ಎಂದು ಅವನು ಮುಂದಿನ ದಿನಗಳಲ್ಲಿ ಕೇಳಿಕೊಳ್ಳುತ್ತಿದ್ದ.

ಅವನು ಹೇ ಮಾರ್ಕೆಟ್ಟಿನಲ್ಲಿ ನಡೆದು ಹೋಗುತ್ತಿರುವಾಗ ಸುಮಾರು ಒಂಬತ್ತು ಗಂಟೆಯಾಗಿತ್ತು. ದೊಡ್ಡ, ಸಣ್ಣ ಅಂಗಡಿಗಳ ಮುಂದೆ ಟೇಬಲ್ಲನ್ನೋ ಟ್ರೆಯನ್ನೋ ಇಟ್ಟುಕೊಂಡು ವ್ಯಾಪಾರ ಮಾಡುತಿದ್ದವರು ತಮ್ಮ ಸಾಮಗ್ರಿಗಳನ್ನೆಲ್ಲ ಗಂಟು ಕಟ್ಟಿ ಮನೆಗೆ ಹೊರಡುತಿದ್ದರು. ಗಿರಾಕಿಗಳೂ ಅಷ್ಟೇ. ಹಣ್ಣಂಗಡಿಯವರು, ಬೀದಿ ತಿರುಗುತ್ತ ಸಣ್ಣಪುಟ್ಟ ವಸ್ತು ಮಾರುವವರು, ಎಲ್ಲ ಥರದ ಚಿಂದಿ ಆಯುವ ಜನ ಹೇ ಮಾರ್ಕೆಟ್ಟಿನ ಮನೆಗಳ ಕೊಳಕು ಅಂಗಳಗಳಲ್ಲಿದ್ದ ಪುಟ್ಟ ತಿಂಡಿ ಅಂಗಡಿಗಳ ಮುಂದೆ ಗುಂಪು ಸೇರಿದ್ದರು. ಹೆಂಡದಂಗಡಿಗಳ ಮುಂದೆ ಇನ್ನೂ ದೊಡ್ಡ ಗುಂಪು ಇತ್ತು. ಗೊತ್ತು ಗುರಿ ಇಲ್ಲದೆ ಅಲೆಯುವುದಕ್ಕೆ ಈ ಜಾಗ, ಮತ್ತೆ ಅಕ್ಕಪಕ್ಕದ ಗಲ್ಲಿಗಳನ್ನು ರಾಸ್ಕೋಲ್ನಿಕೊವ್ ಬಹಳ ಇಷ್ಟಪಡುತ್ತಿದ್ದ. ಅವನ ಹಳೆಯ ಚಿಂದಿ ಬಟ್ಟೆ ಇಲ್ಲಿ ಯಾರಲ್ಲೂ ಕುತೂಹಲ, ಸಂಶಯ ಕೆರಳಿಸುತ್ತಿರಲಿಲ್ಲ. ಇಲ್ಲಿ ಯಾರು ಯಾವ ತರದ ಬಟ್ಟೆ ಹಾಕಿಕೊಂಡರೂ ಕೇಳುವವರಿರಲಿಲ್ಲ.
ಕೆ–ನಿ ಬೀದಿಯ ಮೂಲೆಯಲ್ಲಿ ಒಬ್ಬ ವ್ಯಾಪಾರಿ ಮತ್ತವನ ಹೆಂಡತಿ ಎರಡು ಮೇಜುಗಳ ಮೇಲೆ ದಾರ, ಹತ್ತಿಯ ಕರ್ಚೀಫು, ಅಳತೆ ಟೇಪು, ಬಟ್ಟೆಗಳಿಗೆ ಸೇರಿಸಿ ಹೊಲೆಯಬಹುದಾದ ಕಸೂತಿಯ ಅಂಚು ಇಂಥವನ್ನು ಮಾರುತ್ತಿದ್ದರು. ಅಂಗಡಿ ಮುಚ್ಚಲು ತಯಾರಾಗುತ್ತ ಪರಿಚಯದ ಹೆಂಗಸು ಬರುತ್ತಿರುವದನ್ನು ಕಂಡು ಕಾಯುತ್ತಿದದರು. ಆ ಹೆಂಗಸು ಲಿಝವೆಟ ಇವಾನೋವ್ನ; ಅಥವಾ ಎಲ್ಲರೂ ಕರೆಯುತಿದ್ದ ಹಾಗೆ ಲಿಝವೆಟ. ಹಿಂದಿನ ದಿನ ಗಡಿಯಾರವನ್ನು ಅಡವಿಡಲು, ಆ ಕೆಲಸದ ‘ಟ್ರಯಲ್ ನೋಡಲು’ ರಾಸ್ಕೋಲ್ನಿಕೋವ್ ಹೋಗಿದ್ದನಲ್ಲ ಆ ವಿಧವೆ ಅಲ್ಯೋನ ಇವಾನೋವ್ನಳ ತಂಗಿ. ಲಿಝವೆಟಳನ್ನು ಅವನು ಚೆನ್ನಾಗಿ ಬಲ್ಲ, ಅವಳಿಗೂ ಅವನ ಪರಿಚಯ ಸ್ವಲ್ಪ ಇತ್ತು. ಆಕೆ ಸುಮಾರು ಮೂವತ್ತೊಂದು ವರ್ಷದ, ಎತ್ತರವಾಗಿದ್ದ, ಅಸಡ್ಡಾಳ ಅನಿಸುತ್ತಿದ್ದ, ತೀರ ಪುಕ್ಕಲು ಸ್ವಭಾವದ, ತೀರ ದೀನಳು ಅನ್ನಿಸುವಂಥ ಹೆಂಗಸು. ಮದುವೆಯಾಗಿರದ ಆಕೆ ಬಹಳ ಮಟ್ಟಿಗೆ ಮಂದಬುದ್ಧಿಯವಳ ಹಾಗಿದ್ದಳು. ತನ್ನಕ್ಕನ ಗುಲಾಮಳಂತೆ ಬದುಕುತ್ತಾ ಹಗಲೂ ರಾತ್ರಿ ಅವಳ ಸೇವೆ ಮಾಡುತ್ತ, ಅವಳು ಕಂಡರೆ ಹೆದರಿ ನಡುಗುತ್ತ, ಅವಳ ಕೈಯಲ್ಲಿ ಆಗಾಗ ಏಟು ತಿನ್ನುತ್ತ ಬದುಕಿದ್ದಳು.

ವ್ಯಾಪಾರಿ ಮತ್ತವನ ಹೆಂಡತಿಯ ಮುಂದೆ ಹಿಂಜರಿಯುತ್ತ ನಿಂತಳು. ಕೈಯಲಿದ್ದ ಗಂಟು ಭದ್ರವಾಗಿ ಹಿಡಿದು ಅವರ ಮಾತು ಗಮನವಿಟ್ಟು ಕೇಳುತ್ತಿದ್ದಳು. ತೀರ ಉತ್ಸಾಹದಿಂದ ಅವರೇನೋ ವಿವರಿಸುತ್ತಿದ್ದರು. ಅವಳನ್ನು ರಾಸ್ಕೋಲ್ನಿಕೋವ್ ತಟ್ಟನೆ ಕಂಡಾಗ ಗಾಢವಾದ ಆಶ್ಚರ್ಯಕ್ಕೆ ಸಮನಾದ ವಿಚಿತ್ರವಾದ ಭಾವ ಅವನಲ್ಲಿ ಮೂಡಿತ್ತು.

‘ನೀವು ಮನಸ್ಸು ಮಾಡಬೇಕು, ಲಿಝಾವೆಟಾ ಇವಾನೋವ್ನಾ, ನಾಳೆ ಆರೇಳುಗಂಟೆಯ ಹಾಗೆ ಬನ್ನಿ. ಅವರೂ ಬರತಾರೆ,’ ಅಂದ ವ್ಯಾಪಾರಿ.

‘ನಾಳೆ?’ ಇನ್ನೂ ತೀರ್ಮಾನ ಮಾಡಲು ಆಗಿಲ್ಲ ಅನ್ನುವ ಹಾಗೆ ನಿಧಾನವಾಗಿ, ಮಂಕಾಗಿ ಅಂದಳು ಲಿಝಾವೆಟಾ.

‘ನೋಡಿ ನಿಮ್ಮಕ್ಕ ನಿಮ್ಮನ್ನ ಹೆದರಿಸಿಬಿಟ್ಟಿದಾಳೆ, ನೀವು ಪುಟ್ಟ ಮಗು ಥರ ಇದೀರಿ. ಅವಳು ನಿಮ್ಮ ನಿಜವಾದ ಅಕ್ಕ ಕೂಡ ಅಲ್ಲ, ಹಾಗಿದ್ದರೂ ನಿಮ್ಮನ್ನ ಅವಳಿಷ್ಟದ ಹಾಗೆ ನಡೆಸಿಕೊಳ್ಳತಾಳೆ,’ ಅಂದಳು ವ್ಯಾಪಾರಿಯ ಲವಲವಿಕೆಯ ಹರಟೆಮಲ್ಲಿ ಹೆಂಡತಿ.

‘ಈ ಸಾರಿ ಅವರು ನಿಮ್ಮ ಅಕ್ಕನವರಿಗೆ ಏನೂ ಹೇಳಲ್ಲ—ನನ್ನ ಮಾತು ಕೇಳಿ. ಅಕ್ಕನಿಗೆ ಏನೂ ಹೇಳಬೇಡಿ, ಸುಮ್ಮನೆ ಬಂದುಬಿಡಿ. ಒಳ್ಳೆ ಫಾಯದೆ ಇದೆ. ನಿಮ್ಮಕ್ಕನಿಗೆ ಆಮೇಲೆ ಹೇಗೂ ಗೊತ್ತಾಗತ್ತೆ,’ ಅಂದ ವ್ಯಾಪಾರಿ.

‘ಬರಲೇಬೇಕಾ?’

‘ನಾಳೆ ಆರು ಗಂಟೆ-ಏಳು ಗಂಟೆ ಹೊತ್ತಿಗೆ ಬನ್ನಿ. ಅವರ ಕಡೆಯವನು ಒಬ್ಬ ಬಂದಿರತಾನೆ. ನೀವೇ ನೇರವಾಗಿ ವ್ಯವಹಾರ ಮಾಡಬಹುದು.

‘ಸಮೋವರ್ ಹತ್ತಿರ ಟೀ ಕುಡಿಯುತ್ತ ಮಾತಾಡಬಹುದು,’ ಅಂದಳು ಹೆಂಡತಿ.

‘ಸರಿ, ಬರತೇನೆ,’ ಅಂದಳು ಲಿಝಾವೆಟ. ಇನ್ನೂ ಸಂಕೋಚವಿತ್ತು, ಹಿಂಜರಿಕೆಯಿತ್ತು. ನಿಧಾನವಾಗಿ ಹೊರಟಳು.
ನಿಧಾನವಾಗಿ, ಅವರ ಒಂದೂ ತಪ್ಪಬಾರದು ಅನ್ನುವ ಹಾಗೆ, ಯಾರ ಗಮನವನ್ನೂ ಸೆಳೆಯದೆ ಮಾಮೂಲಾಗಿ ಹೆಜ್ಜೆ ಹಾಕುತ್ತಿದ್ದ ರಾಸ್ಕೋಲ್ನಿಕೋವ್ ಅವರನ್ನು ದಾಟಿ ಹೋಗಿದ್ದ. ಅವರ ಮುಂದಿನ ಮಾತು ಕೇಳಿಸಲಿಲ್ಲ. ಮೊದಲು ಆಶ್ಚರ್ಯ ಹುಟ್ಟಿತು, ಅದರ ಜಾಗದಲ್ಲಿ ನಿಧಾನವಾಗಿ ಭಯ ತುಂಬಿಕೊಂಡಿತು. ಬೆನ್ನುಹುರಿಯಲ್ಲಿ ಚಳಕು ಹರಿದ ಹಾಗಿತ್ತು. ಲಿಝಾವೆಟಾ, ಮುದುಕಿಯ ತಂಗಿ, ಮುದುಕಿಯ ಏಕೈಕ ಜೊತೆಗಾತಿ, ನಾಳೆ ಸಂಜೆ ಏಳು ಗಂಟೆಗೆ ಅವಳ ಜೊತೆ ಇರುವುದಿಲ್ಲ,. ಅಂದರೆ ನಾಳೆ ಸಾಯಂಕಾಲ ಏಳುಗಂಟೆಯ ಹೊತ್ತಿಗೆ ಮನೆಯಲ್ಲಿ ಮುದುಕಿ ಒಬ್ಬಳೇ ಇರುತ್ತಾಳೆ ಅನ್ನುವುದು ಅನಿರೀಕ್ಷಿತವಾಗಿ, ತಟ್ಟನೆ ತಿಳಿದುಹೋಯಿತು.

ಹತ್ತಾರು ಹೆಜ್ಜೆ ದೂರವಿತ್ತು ಅವನ ಮನೆ. ಮರಣದಂಡನೆಗೆ ಗುರಿಯಾದವನ ಹಾಗೆ ಹೆಜ್ಜೆ ಹಾಕಿದ. ಯಾವ ವಿಚಾರವನ್ನೂ ಮಾಡುತ್ತಿರಲಿಲ್ಲ. ವಿಚಾರ ಮಾಡುವುದೇ ಅಸಾಧ್ಯವಾಗಿತ್ತು. ಈ ಜೀವಕ್ಕೆ ಇನ್ನು ಸ್ವತಂತ್ರವಾಗಿ ಯೋಚನೆ ಮಾಡುವ, ನಿರ್ಧಾರ ಮಾಡುವ ಅವಕಾಶ ಇಲ್ಲವೇ ಇಲ್ಲ, ಎಲ್ಲಾ ಆಗಲೇ ನಿರ್ಧಾರವಾಗಿದೆ ಅನ್ನಿಸುತ್ತಿತ್ತು.

ತನ್ನ ಮನಸ್ಸಿನಲ್ಲಿದ್ದ ಯೋಚನೆಯನ್ನು ಯಶಸ್ವಿಯಾಗಿ ಕಾರ್ಯ ರೂಪಕ್ಕೆ ತರುವುದಕ್ಕಾಗಿ ತಾಳ್ಮೆಯಿಂದ ಇನ್ನೆಷ್ಟು ವರ್ಷ ಕಾದಿದ್ದರೂ ಈಗ ಅಕಸ್ಮಾತ್ತಾಗಿ ಸಿಕ್ಕಂತ ಅವಕಾಶ ಸಿಕ್ಕುತ್ತಿರಲಿಲ್ಲ. ತಾನು ಕೊಲ್ಲಬೇಕೆಂದಿರುವ ಇಂಥಾ ಮುದುಕಿ ಮಾರನೆಯ ದಿನ ಇಷ್ಟು ಗಂಟೆಯ ಹೊತ್ತಿಗೆ ಮನೆಯಲ್ಲಿ ಒಬ್ಬಳೇ ಇರುತ್ತಾಳೆ ಅನ್ನುವ ಖಚಿತ ಮಾಹಿತಿ ಯಾವ ಅಪಾಯಕ್ಕೂ ಅವಕಾಶವಿಲ್ಲದೆ, ಯಾರ ಸಂಶಯಕ್ಕೂ ಕಾರಣವಾಗದೆ, ಪತ್ತೇದಾರಿಕೆ ಮಾಡುವ ಅಗತ್ಯವಿಲ್ಲದೆ ದೊರೆತೀತು ಎಂದು ಅವನು ನಿರೀಕ್ಷೆ ಕೂಡ ಮಾಡಿರಲಿಲ್ಲ.

(ಸಾರಾಂಶ: ದುಃಸ್ವಪ್ನ, ಕಿವಿಗೆ ಬಿದ್ದ ಸುದ್ದಿ)

ರಾಸ್ಕೋಲ್ನಿಕೋವ್ ತಾನು ಆ ಕೆಲಸ ಮಾಡಿದ ಮೇಲೆ ಗೆಳೆಯ ರಝುಮಿಖಿನ್‍ನ ಭೇಟಿ ಮಾಡಬೇಕು, ಅಲ್ಲಿಯವರೆಗೆ ಬೇಡ ಅಂದುಕೊಳ್ಳುತ್ತಾನೆ. ಬ್ರಾಂದಿ ಕುಡಿದು ಊರ ಹೊರಗೆ ಪೊದೆಗಳ ನಡುವೆ ಮಲಗಿ ನಿದ್ದೆ ಹೋಗುತ್ತಾನೆ. ಚಿಕ್ಕಂದಿನಲ್ಲಿ ಅವನು ಕಂಡ ದೃಶ್ಯ ಕನಸಾಗಿ ಕಾಡುತ್ತದೆ. ರೈತರ ಗುಂಪೊಂದು ಬಡಕಲು ಕುದುರೆಯನ್ನು ನಿಷ್ಕರುಣೆಯಿಂದ ಹೊಡೆದು ಸಾಯಿಸಿದ ಕನಸು ಹಿಂಸೆಯಲ್ಲಿ ಮನುಷ್ಯನು ಪಡುವ ಆನಂದದ ಚಿತ್ರದಂತೆ ತೋರುತ್ತದೆ. ಮನೆಗೆ ಮರಳುವಾಗ ರಾಸ್ಕೋಲ್ನಿಕೋವ್ ಹೇ ಮಾರ್ಕೆಟ್ಟಿನಲ್ಲಿ ಅಕಸ್ಮಾತ್ ಒಂದು ವಿಷಯ ತಿಳಿಯುತ್ತಾನೆ. ಮುದುಕಿ ಅಮಾಲಿಯಳ ತಂಗಿ ಲಿಝವೆಟ ಮಾರನೆಯ ದಿನ ಸಂಜೆ ಏಳುಗಂಟೆಗೆ ಮನೆಯಲ್ಲಿರುವುದಿಲ್ಲ, ಮುದುಕಿ ಒಬ್ಬಳೇ ಇರುತ್ತಾಳೆ ಅನ್ನುವುದನ್ನು ತಿಳಿದು, ತಾನು ಅಂದುಕೊಂಡಿರುವ ಕೆಲಸ ಮಾಡುವುದಕ್ಕೆ ನಾಳೆಯೇ ತಕ್ಕ ಸಮಯ ಅಂದುಕೊಳ್ಳುತ್ತಾನೆ.