ರಝುಮಿಖಿನ್ ಸರಿಯಾಗಿ ಒಂಬತ್ತು ಗಂಟೆಗೆ ಬಕಲೇವ್ ವಸತಿಗೃಹಕ್ಕೆ ಬಂದ. ಇಬ್ಬರು ಹೆಂಗಸರೂ ಬಹಳ ಹೊತ್ತಿನಿಂದ ಅವನು ಬರುವುದನ್ನೇ ಕಾಯುತ್ತಾ ತಾಳ್ಮೆ ತಪ್ಪಿ ಹಿಸ್ಟೀರಿಯ ಬಂದವರ ಥರ ಆಗಿದ್ದರು. ಏಳು ಗಂಟೆಗೋ, ಅದಕ್ಕೂ ಮೊದಲೋ ಎದ್ದಿದ್ದರು. ಗುಡುಗು ಹೊತ್ತ ಮೋಡ ಕವಿದಂಥ ಮುಖ ಹೊತ್ತು ಬಂದಿದ್ದವನು ಅಡ್ಡಾದಿಡ್ಡಿಯಾಗಿ ತಲೆ ಬಾಗಿಸಿ ವಂದನೆ ಸಲ್ಲಿಸಿದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ಎರಡನೆಯ ಅಧ್ಯಾಯ
ಮಾರನೆಯ ಬೆಳಿಗ್ಗೆ ಏಳೆಂಟು ಗಂಟೆಯ ಹೊತ್ತಿಗೆ ರಝುಮಿಖಿನ್ ಎದ್ದ. ಮನಸಿನಲ್ಲಿ ಕಳವಳವಿತ್ತು, ಮುಖ ಗಂಭೀರವಾಗಿತ್ತು. ಊಹಿಸಿರದಿದ್ದ ಹೊಸ ಗೋಜಲು ಕಾಡುತ್ತಿದ್ದವು. ಯಾವತ್ತಾದರೂ ಒಂದು ದಿನ ಬೆಳಗ್ಗೆ ಎದ್ದಾಗ ನಾನು ಇಂಥ ಮನಸ್ಥಿತಿಯಲ್ಲಿರತೇನೆ ಅಂದುಕೊಂಡೇ ಇರಲಿಲ್ಲ ಅವನು. ಹಿಂದಿನ ದಿನದ ಒಂದೊಂದೂ ವಿವರ ನೆನಪುಮಾಡಿಕೊಂಡ. ಅಸಾಮಾನ್ಯವಾದದ್ದು ನಿನ್ನೆ ಏನೋ ಆಗಿದೆ ಅನ್ನಿಸುತ್ತಿತ್ತು. ಹಿಂದೆಂದೂ ಅನುಭವಿಸಿರದಂಥ ಭಾವ ಮನಸ್ಸನ್ನು ತುಂಬಿತ್ತು. ಹಾಗೆಯೇ ತಲೆಯಲ್ಲಿ ಕುದಿಯುತ್ತ ಸುಡುತ್ತ ಇದ್ದ ಕನಸು ನಿಜವಾಗದು ಅನ್ನುವುದೂ ಗೊತ್ತಿತ್ತು. ಅವನಿಗೇ ನಾಚಿಕೆಯಾಗುವಷ್ಟು ವಿಚಿತ್ರವಾದ ಕನಸು ಅದು. ‘ನಿನ್ನೆ ಅನ್ನುವುದಕ್ಕೆ ಒಂದೆರಡಲ್ಲ ಮೂರು ಮೂರು ಶಾಪ ಹಾಕಬೇಕು’ ಅಂದುಕೊಳ್ಳುತ್ತ ನಿನ್ನೆಯ ದಿನ ಹುಟ್ಟಿದ್ದ ಹೊಸ ಗೋಜಲು, ಸಮಸ್ಯೆ, ಚಿಂತೆಗಳನ್ನು ಮನಸ್ಸಿಗೆ ತಂದುಕೊಂಡ.
ಕುಡಿದಿದ್ದೆ, ಸರಿ. ಆದರೂ ಎಷ್ಟು ಮರ್ಯಾದೆಗೆಟ್ಟು ಕೆಟ್ಟದಾಗಿ ನಡೆದುಕೊಂಡೆ, ಪಾಪದ ಹುಡುಗಿ ಸಿಕ್ಕಿದಳು ಅಂತ ಹಿಂದೆ ಮುಂದೆ ನೋಡದೆ ಅವಳನ್ನು ಮದುವೆಯಾಗುವ ಗಂಡನ್ನು ಬಾಯಿಗೆ ಬಂದ ಹಾಗೆ ಬೈದೆ, ಅವರಿಬ್ಬರ ಸ್ನೇಹ ಹೇಗಿದೆಯೋ ಗೊತ್ತಿಲ್ಲ, ಮದುವೆಯಾಗುವ ಗಂಡು ಪರಿಚಯವೇ ಇಲ್ಲ, ಹೇಗೆಲ್ಲ ಮಾತಾಡಿದೆನಲ್ಲಾ ನನಗೇನು ಹಕ್ಕಿತ್ತು? ನ್ಯಾಯ ಹೇಳು ಎಂದು ನನ್ನ ಕರೆದಿದ್ದವರು ಯಾರು? ಎಂದು ರಝುಮಿಖಿನ್ ತನ್ನನ್ನೇ ಬೈದುಕೊಳ್ಳುತ್ತಿದ್ದ. ದುನ್ಯಾಳಂಥ ಹುಡುಗಿ ಬರಿಯ ದುಡ್ಡಿಗಾಗಿ ಅಯೋಗ್ಯನೊಬ್ಬನನ್ನು ಮದುವೆಯಾಗುವುದು ಸಾಧ್ಯವೇ? ಅಂದರೆ ಅವನಲ್ಲಿ ಯೋಗ್ಯತೆ ಇರಬೇಕು. ಮತ್ತೆ ಎಂಥ ರೂಮು ಮಾಡಿದ್ದಾನಲ್ಲಾ ಅವರಿಗೆ? ಅವು ಅಂಥ ರೂಮು ಅನ್ನುವುದು ಅವನಿಗೇನು ಗೊತ್ತು? ಹೇಗಿದ್ದರೂ ಅವರಿಗಾಗಿ ಬೇರೆಯ ಅಪಾರ್ಟ್ಮೆಂಟು ಸಿದ್ಧಮಾಡಿಸತಾ ಇದ್ದಾನಲ್ಲಾ… ಥೂ, ಎಷ್ಟು ಕೆಟ್ಟದಾಗಿ ಮಾತಾಡಿದೆ! ಕುಡಿದಿದ್ದೆ ಅನ್ನುವುದು ಕುಂಟು ನೆಪ, ಅವಳ ಕಣ್ಣಿಗೆ ಅವನು ಇನ್ನೂ ಅಸಹ್ಯವಾಗಿ ಕಾಣುವಂತೆ ಮಾಡುವ ಆಸೆ ಇತ್ತು ನನಗೆ. ನನ್ನೊಳಗಿರುವುದು ಬರೀ ಒಡ್ಡತನ, ಹೊಟ್ಟೆಕಿಚ್ಚು, ಕಸ, ಕೊಳೆ! ಇದೇ ಸತ್ಯ!’ ಅಂದುಕೊಂಡ.
‘ಇಂಥಾ ನಾನು ಅಂಥಾ ಕನಸು ಕಾಣುವುದಕ್ಕೆ ಸಾಧ್ಯವೇ? ಅಂಥ ಹುಡುಗಿಯ ಜೊತೆಗೆ ನನ್ನಂಥ ಕುಡುಕ, ಜಗಳಗಂಟ, ಬಾಯಿಬಡಾಯಿ ಆಸಾಮಿ ಸರಿಯಾದ ಜೋಡಿಯೇ?’ ಹೀಗೆ ಯೋಚನೆಮಾಡುತ್ತ ರಝುಮಿಖಿನ್ ನಾಚಿದ. ಆ ಕ್ಷಣದಲ್ಲೇ ನೆನಪಿಗೆ ಬಂದಿತು— ನಿನ್ನೆಯ ದಿನ ಮೆಟ್ಟಿಲ ಮೇಲೆ ನಿಂತು ಓನರಮ್ಮನಿಗೆ ನನ್ನ ಕಾರಣದಿಂದ ದುನ್ಯಾ ಮೇಲೆ ಅಸೂಯೆ ಎಂದು ಹೇಳಿದ್ದು… ಆಡಬಾರದ, ಸಹಿಸಬಾರದ ಮಾತು ಅದು. ಶಕ್ತಿಯೆಲ್ಲಾ ಬಿಟ್ಟು ಅಡುಗೆ ಮನೆಯ ಸ್ಟವ್ ಗೆ ಗುದ್ದಿದ. ಕೈ ನೋವಾಯಿತು, ಒಂದು ಇಟ್ಟಿಗೆ ಕೆಳಗೆ ಬಿತ್ತು.
ತನ್ನನ್ನೇ ಹೀನಾಯ ಮಾಡಿಕೊಳ್ಳುತ್ತಿದ್ದವನು ಸ್ವಲ್ಪ ಹೊತ್ತಾದಮೇಲೆ, ‘ನನ್ನ ಈ ಕೆಟ್ಟ ನಡವಳಿಕೆಗಳಿಗೆ ಈಗ ಸುಣ್ಣಬಣ್ಣ ಮಾಡಕ್ಕೆ ಆಗಲ್ಲ. ಅಂದಮೇಲೆ ಯೋಚನೆ ಮಾಡಿ ಫಲವೇನು? ಸುಮ್ಮನೆ ಅಲ್ಲಿಗೆ ಹೋಗಬೇಕು. ನಾನು ಮಾಡಬೇಕಾದ ಕೆಲಸ ಮಾಡಿ ಮಾತಾಡದೆ ಬಂದುಬಿಡಬೇಕು, ಕ್ಷಮೆ ಕೇಳಬಾರದು ಇನ್ನೇನೋ ಹೇಳಬಾರದು. ಎಲ್ಲಾನೂ ಮುಗಿದ ಹಾಗೆ ಇನ್ನ..’ ಅಂದುಕೊಂಡ.
ಹಾಗಂದುಕೊಂಡರೂ ಬಟ್ಟೆ ತೊಟ್ಟುಕೊಳ್ಳುತ್ತ ಮಾಮೂಲಿಗಿಂತ ಹೆಚ್ಚು ಗಮನ ಕೊಟ್ಟು ಬಟ್ಟೆಗಳನ್ನು ನೋಡಿದ. ಅವನ ಹತ್ತಿರ ಬೇರೆ ಬಟ್ಟೆ ಇರಲಿಲ್ಲ. ಇದ್ದಿದ್ದರೂ ಈಗ ಅವನ್ನು ಬೇಕೆಂದೇ ತೊಡುತ್ತಿರಲಿಲ್ಲ. ಆದರೂ ಸಿನಿಕನ ಹಾಗೆ ಕೊಳಕಾಗಿ ಹೋಗುವ ಮನಸ್ಸಿರಲಿಲ್ಲ ಅವನಿಗೆ. ಅವರು ಅವನ ಸಹಾಯ ಬಯಸಿ ಕಾಯುತ್ತಿರುವಾಗ ಅವರ ಭಾವನೆಗಳನ್ನು ಕೆಡಿಸುವ ಹಕ್ಕು ಅವನಿಗಿರಲಿಲ್ಲ. ಬಟ್ಟೆಗಳನ್ನು ಬ್ರಶ್ಶಿನಲ್ಲಿ ಹುಷಾರಾಗಿ ಒರಸಿದ. ಶರ್ಟು ಪರವಾಗಿಲ್ಲ ಅನ್ನುವ ಹಾಗಿತ್ತು, ತಕ್ಕಮಟ್ಟಿಗೆ ಸ್ವಚ್ಛವಾಗಿತ್ತು.
ಅವತ್ತು ಬೆಳಗ್ಗೆ ಅವನು ಉತ್ಸಾಹದಿಂದ ಸ್ನಾನ ಮಾಡಿದ—ನಸ್ತಾಸ್ಯ ತುಂಡು ಸೋಪು ಕೊಟ್ಟಿದ್ದಳು. ತಲೆಗೂದಲು ತೊಳೆದುಕೊಂಡ, ಕತ್ತು, ಕೈಗಳನ್ನು ಗಮನವಿಟ್ಟು ಚೆನ್ನಾಗಿ ಸ್ವಚ್ಛಮಾಡಿಕೊಂಡ. ಕುರುಚಲು ಗಡ್ಡವನ್ನು ಕ್ಷೌರ ಮಾಡಿಕೊಳ್ಳಬೇಕೇ ಎಂಬ ಪ್ರಶ್ನೆ ಬಂದಾಗ (ಓನರಮ್ಮನ ಹತ್ತಿರ ಒಳ್ಳೆಯ ಕ್ಷೌರದ ಕತ್ತಿಗಳಿದ್ದವು, ಅವನ್ನು ತೀರಿ ಹೋದ ಗಂಡನ ನೆನಪಿಗೆ ಇರಿಸಿಕೊಂಡಿದ್ದಳು). ‘ಬೇಡ’ ಎಂದು ದೃಢವಾಗಿ ನಿರ್ಧಾರ ಮಾಡಿದ. ‘ಮುಖ ಹೇಗಿದೆಯೋ ಹಾಗಿರಲಿ. ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲಿ ಅಂತ ಕ್ಷೌರ ಮಾಡಿದ್ದೇನೆ. ಅವರು ಅಕಸ್ಮಾತ್ತಾಗಿ ಅಂದುಕೊಂಡರೆ ಏನು ಗತಿ!’ ಅನ್ನಿಸಿತು.
‘ನಾನು ಒರಟ, ವಡ್ಡ, ಕೊಳಕ, ಎಲ್ಲೇ ಇದ್ದರೂ ಹೆಂಡದಂಗಡಿಯಲ್ಲೇ ಇರುವ ಹಾಗೆ ನಡೆದುಕೊಳ್ಳತೇನೆ… ಸ್ವಲ್ಪ ಸಭ್ಯನಾಗಿ ಕಂಡೆ ಅಂದರೂ… ಅದರಿಂದ ಏನಾದ ಹಾಗಾಯಿತು?.. ಎಲ್ಲಾ ಮನುಷ್ಯರೂ ಸಭ್ಯವಾಗೇ ಇರಬೇಕು, ಸಭ್ಯ ಅಂತ ನಾನೇ ಹೆಮ್ಮೆ ಪಡೋದರಲ್ಲಿ ಏನಿದೆ? ಮರೆತಿಲ್ಲ ನಾನು… (ನೆನಪು ಮಾಡಿಕೊಂಡ) ನನ್ನ ಖಾತೆಯಲ್ಲೂ ತಪ್ಪುಗಳು ಒಂದಷ್ಟು ಜಮಾ ಆಗಿವೆ… ಅಪ್ರಾಮಾಣಿಕತೆ ಅಂತಲ್ಲ… ಆದರೂ ತಪ್ಪು ತಪ್ಪೇ.. ಒಂದೊಂದು ಸಾರಿ ಎಂತೆಂಥಾ ಯೋಚನೆ ಬರತವೆ..! ಇವನ್ನೆಲ್ಲ ದುನ್ಯಾ ಪಕ್ಕದಲ್ಲಿ ಇಟ್ಟು ನೋಡಿದರೆ ನನಗೇ ಅಸಹ್ಯ ಅನಿಸತ್ತೆ… ದೆವ್ವ ಹಿಡೀಲಿ! ಯಾರು ಏನಂದುಕೊಂಡರೆ ಏನು? ನಾನು ಇನ್ನೂ ಕೊಳಕ, ಲುಚ್ಚಾ… ಕುಡುಕ!’
ರಝುಮಿಖಿನ್ ಹೀಗೆ ತನಗೆ ತಾನೇ ಮಾತಾಡಿಕೊಳ್ಳುತ್ತಿರುವಾಗ ಝೋಸ್ಸಿಮೋವ್ ಬಂದ. ಅವನು ಓನರಮ್ಮ ಪ್ರಸಕೋವ್ಯ ಪ್ರಾಸ್ಕೋಯಳ ದಿವಾನಖಾನೆಯಲ್ಲಿ ರಾತ್ರಿ ಮಲಗಿದ್ದ.
ಅವನು ಮನೆಗೆ ಹೋಗಬೇಕಾಗಿತ್ತು. ಹೋಗುವ ಆತುರದಲ್ಲಿದ್ದ. ಹೋಗುವ ಮೊದಲು ರೋಗಿಯನ್ನೊಂದು ಸಾರಿ ನೋಡಲು ಬಂದಿದ್ದ.
‘ಮರದ ದಿಮ್ಮಿ ಥರ ಬಿದ್ದುಕೊಂಡು ನಿದ್ದೆ ಹೊಡೆಯುತ್ತಿದ್ದಾನೆ ಅವನು,’ ಎಂದು ರಝುಮಿಖಿನ್ ಹೇಳಿದ. ರೋಗಿಯನ್ನು ಎಬ್ಬಿಸುವುದು ಬೇಡ, ಅವನೇ ಏಳಲಿ. ಹತ್ತು ಗಂಟೆಯಾದಮೇಲೆ ಒಂದು ಸಾರಿ ಬಂದು ಹೋಗತೇನೆ ಎಂದು ಹೇಳಿದ ಝೋಸ್ಸಿಮೋವ್. ‘ಅದೂ ಅವನು ಮನೇಲ್ಲೇ ಇದ್ದರೆ. ಥೂ, ಹೇಳಿದ ಮಾತು ಕೇಳದ ರೋಗಿಗೆ ಡಾಕ್ಟರಾಗೋದು ಯಾವನಿಗೆ ಬೇಕು!’ ಅಂತ ಸೇರಿಸಿದ. ‘ನಿನಗೇನಾದರೂ ಗೊತ್ತಾ? ಇವನೇ ಹೋಗತಾನೋ, ಅವರೇ ಇಲ್ಲಿಗೆ ಬರತಾರೋ?’ ಎಂದು ಕೇಳಿದ ಝೋಸ್ಸಿಮೋವ್.
ಅವನ ಮಾತಿನ ಜಾಡು ಹಿಡಿದು, ‘ಅವರೇ ಬರತಾರೆ ಅನ್ನಿಸತ್ತೆ. ಬಂದವರು ಮನೆ ವಿಚಾರ ಮಾತಾಡಿಕೊಳ್ಳತಾರೆ. ನಾನು ಹೋಗತೇನೆ, ಇಲ್ಲಿರಬಾರದು. ಡಾಕ್ಟರಾಗಿ ಇಲ್ಲಿರುವ ಹಕ್ಕು ನಿನಗಿದೆ,’ ಅಂದ ರಝುಮಿಖಿನ್.
‘ನನ್ನೆದುರಿಗೆ ಮನೆ ಸಮಾಚಾರ ಹೇಳಿಕೊಳ್ಳುವುದಕ್ಕೆ ನಾನೇನು ಪಾದ್ರೀನಾ? ಹೀಗೆ ಬರೋನು, ಹಾಗೆ ಹೋಗೋನು. ನನಗೆ ಇನ್ನೂ ಬೇರೆ ಕೆಲಸ ಬೇಕಾದಷ್ಟಿದೆ.’
‘ಒಂದು ಯೋಚನೆ ಕಾಡತಾ ಇದೆ,’ ರಝುಮಿಖಿನ್ ಹುಬ್ಬು ಗಂಟಿಕ್ಕಿಕೊಂಡು ಹೇಳಿದ. ‘ನಿನ್ನೆ ನಾನು ಕುಡಿದಿದ್ದೆ. ಅವನನ್ನ ಮನೆಗೆ ಕರಕೊಂಡು ಬರೋವಾಗ ದಾರೀಲ್ಲಿ ಏನೇನೋ ಮಾತಾಡಿದೆ. ಅವನಿಗೆ ಹುಚ್ಚು ಹಿಡಿದಿದೆಯೋ ಏನೋ ಅಂತ ನೀನು ಅಂದುಕೊಂಡಿರಬಹುದೇನೋ ಅಂತಲೂ ಹೇಳಿಬಿಟ್ಟೆ. ಪೆದ್ದು ಕೆಲಸ ಮಾಡಿದೆ ಅಂತ ಗೊತ್ತು. ಬೇಕಾದರೆ ಒಂದೇಟು ಹೊಡೆದುಬಿಡು. ಅವನಿಗೆ ಹುಚ್ಚು ಅಂತ ನಿಜವಾಗಲೂ ನಿನಗನ್ನಿಸತ್ತಾ?’
‘ನಾನ್ಸೆನ್ಸ್! ನನಗೆ ನಿಜವಾಗಲೂ ಅನ್ನಿಸೋದಾ? ಎಂಥಾ ಐಡಿಯಾನಯ್ಯಾ! ಅವನನ್ನ ನನ್ನ ಹತ್ತಿರ ಕರಕೊಂಡು ಬಂದಾಗ ನೀನೆ ಹೇಳಿದೆಯಲ್ಲಾ ಅವನಿಗೆ ಮಾನೋಮೇನಿಯಾ ಅಂತ! ಮತ್ತೆ ನಿನ್ನೆ ಇನ್ನೊಂದಷ್ಟು ಎಣ್ಣೆ ಸುರಿದೆ- ಏನೇನೋ ಕತೆ ಬೇರೆ ಹೇಳಿದೆ. ಬಣ್ಣ ಬಳಿಯುವವನ ಕತೆ ಕೇಳಿ ಅವನ ತಲೆ ಕೆಟ್ಟಿರಬಹುದು! ಆಫೀಸಿನಲ್ಲಿ ಏನೇನಾಯಿತು ಅನ್ನೋದು ನನಗೆ ಸರಿಯಾಗಿ ಗೊತ್ತಿದ್ದಿದ್ದರೆ ರಾಸ್ಕೋಲ್ನಿಕೋವ್ ಗೆ ಏನಾಗಿದೆ ಊಹೆ ಮಾಡಬಹುದಾಗಿತ್ತು. ಯಾವನೋ ಪೆಕರ ಅವನ ಮೇಲೆ ಅನುಮಾನಪಟ್ಟಿದ್ದೂ ಈ ಸ್ಥಿತಿಗೆ ಕಾರಣ ಇರಬಹುದು.
ಹ್ಞೂಂ… ನಿನ್ನೆ ಇಂಥ ಮಾತೆಲ್ಲ ಆಡಕ್ಕೆ ನಾನು ಅವಕಾಶ ಕೊಡಬಾರದಾಗಿತ್ತು. ಒಂದು ಹನಿ ಇದ್ದರೆ ಸಮುದ್ರ ಅಂದುಕೊಳ್ಳತಾರೆ ಮಾನೋಮೇನಿಯಾಕ್ ಗಳು. ತಮ್ಮ ಕಿವಿಗೆ ಬಿದ್ದ ಮಾತೆಲ್ಲ ಸತ್ಯ ಅಂದುಕೊಳ್ಳತಾರೆ… ನನಗೆ ನೆನಪು ಇರುವ ಮಟ್ಟಿಗೆ ಅವನ ಕೇಸಿನಲ್ಲಿ ಅರ್ಧದಷ್ಟು ನನಗೆ ಅರ್ಥವಾಗಿದ್ದೇ ನಿನ್ನೆ, ಝೊಮ್ಯೊತೋವ್ ಹೇಳಿದ್ದು ಕೇಳಿದ ಮೇಲೆ. ಈ ಪೇಷೆಂಟಿನ ಕತೆ ಏನೇನೂ ಅಲ್ಲ. ನನಗೊಬ್ಬ ಹೈಪೊಕಾಂಡ್ರಿಯಾಕ್ ಗೊತ್ತಿದ್ದ, ನಲವತ್ತೇಳು ವರ್ಷದವನು. ಊಟಕ್ಕೆ ಕೂತಿದ್ದಾಗ ಎಂಟು ವರ್ಷದ ಹುಡುಗ ಏನೋ ತಮಾಷೆ ಮಾಡಿದ ಅಂತ ಅವನಿಗೆ ಚೂರಿ ಹಾಕಿದ್ದ! ರಾಸ್ಕೋಲ್ನಿಕೋವ್ ಹುಷಾರಿಲ್ಲದ ಮನುಷ್ಯ, ಚಿಂದಿ ಬಟ್ಟೆ ತೊಟ್ಟವನು, ಇನ್ನೊಬ್ಬ ಸೊಕ್ಕಿನ ಪೋಲೀಸು ಲೆಫ್ಟಿನೆಂಟು! ಹೈಪೊಕಾಂಡ್ರಿಯಾಕ್ ಎದುರಿಗೆ ಅಂಥ ಮಾತು! ಲೆಫ್ಟಿನೆಂಟು ಮಾತಾಡಿದ ಆ ಕ್ಷಣದಿಂದ ಮನೋರೋಗ ಶುರುವಾಗಿರಬೇಕು. ಅಂದ ಹಾಗೆ ಝೊಮ್ಯತೋವ್ ಒಳ್ಳೆಯವನು, ನಿನ್ನೆ ಮಾತ್ರ ಹಾಗೆ ಮಾತಾಡಬಾರದಾಗಿತ್ತು, ಬರೀ ಬಾಯಿ ಬುರುಡೆ!’
‘ಅವನು ಯಾರಿಗೆ ಹೇಳಿದ? ನಿನಗೆ, ನನಗೆ ತಾನೇ?’
‘ತನಿಖೆಯ ಆಫೀಸರು ಪಾರ್ಫಿರಿಗೆ ಕೂಡ.’
‘ಹಾಗಾದರೆ ಪಾರ್ಫಿರಿಗೆ ಹೇಳಿದರೆ ಏನಂತೆ?’
‘ಅಂದ ಹಾಗೆ ಆ ಅಮ್ಮ, ಮಗಳ ಹತ್ತಿರ ನಿನ್ನ ಮಾತು ನಡೆಯುತ್ತಾ? ಇವತ್ತು ಅವರು ಅವನ ಜೊತೆ ತುಂಬ ಹುಷಾರಾಗಿ ನಡಕೊಳ್ಳಬೇಕು.’
‘ಹ್ಞೂ, ನೋಡಿಕೊಳ್ಳತಾರೆ!’ ರಝುಮಿಖಿನ್ ಅರೆಮನಸ್ಸಿನಲ್ಲಿ ಅಂದ.
‘ಅಲ್ಲಾ, ಅವನಿಗೆ ಯಾಕೆ ಪೀಟರ್ ಪೆಟ್ರೊವಿಚ್ ನ ಕಂಡರೆ ಆಗಲ್ಲ? ಅವನು ದುಡ್ಡಸ್ಥ, ಅವಳಿಗೂ ಅವನನ್ನ ಕಂಡರೆ ಆಗಲ್ಲ ಅಂತಿಲ್ಲ. ಮತ್ತೆ ಇವರಿಗೂ ಕಾಸಿಗೆ ಗತಿ ಇಲ್ಲ, ಅಲ್ಲವಾ? ಹೀಗೆ ಯಾಕೆ ಆಡತಾನೆ ಈ ರೋದ್ಯಾ?’
‘ನನ್ನನ್ನ ಏನು ಕೇಳತೀಯ? ಕಾಸಿದೆಯೋ ಇಲ್ಲವೋ ನನಗೇನು ಗೊತ್ತು? ಹೋಗಿ ಅವರನ್ನೇ ಕೇಳು, ತಿಳಿಯತ್ತೆ,’ ರಝುಮಿಖಿನ್ ರೇಗಿದ.
‘ಒಂದೊಂದು ಸಲ ಪೆಕರನ ಥರ ಆಡತೀಯ! ನಿನ್ನೆ ಹಾಕ್ಕೊಂಡಿದ್ದು ಇನ್ನೂ ಇಳಿದಿಲ್ಲವಾ? ಬರತೇನೆ, ಬಾಯ್… ಓನರಮ್ಮ ಪ್ರಸಕೋವ್ಯಾ ಪಾವ್ಲೋವ್ನಾಗೆ ನನ್ನ ಪರವಾಗಿ ಥ್ಯಾಂಕ್ಸ್ ಹೇಳಿಬಿಡು. ಅವಳು ರೂಮಿಗೆ ಹೋಗಿ ಬಾಗಿಲು ಹಾಕ್ಕೊಂಡವಳು ನಾನು ಗುಡ್ ಮಾರ್ನಿಂಗ್ ಹೇಳಿದರೂ ಕಿಮಕ್ ಅನ್ನಲಿಲ್ಲ. ಏಳು ಗಂಟೆಗೆ ಎದ್ದಳು. ಕೆಲಸದವಳು ಅಡುಗೆ ಮನೆಯಿಂದ ಅವಳ ಕೋಣೆಗೆ ಸಮೋವರ್ ತಗೊಂಡು ಹೋದಳು. ಅವಳನ್ನ ನೋಡುವ ಯೋಗ್ಯತೆ ಕೂಡ ಇಲ್ಲ ನನಗೆ ಅನ್ನುವ ಹಾಗಿದ್ದಳು…’
*****
ರಝುಮಿಖಿನ್ ಸರಿಯಾಗಿ ಒಂಬತ್ತು ಗಂಟೆಗೆ ಬಕಲೇವ್ ವಸತಿಗೃಹಕ್ಕೆ ಬಂದ. ಇಬ್ಬರು ಹೆಂಗಸರೂ ಬಹಳ ಹೊತ್ತಿನಿಂದ ಅವನು ಬರುವುದನ್ನೇ ಕಾಯುತ್ತಾ ತಾಳ್ಮೆ ತಪ್ಪಿ ಹಿಸ್ಟೀರಿಯ ಬಂದವರ ಥರ ಆಗಿದ್ದರು. ಏಳು ಗಂಟೆಗೋ, ಅದಕ್ಕೂ ಮೊದಲೋ ಎದ್ದಿದ್ದರು. ಗುಡುಗು ಹೊತ್ತ ಮೋಡ ಕವಿದಂಥ ಮುಖ ಹೊತ್ತು ಬಂದಿದ್ದವನು ಅಡ್ಡಾದಿಡ್ಡಿಯಾಗಿ ತಲೆ ಬಾಗಿಸಿ ವಂದನೆ ಸಲ್ಲಿಸಿದ; ಅಯ್ಯೋ ನಾನು ಸುಮ್ಮನೆ ಏನೇನೋ ಅಂದುಕೊಂಡೆನಲ್ಲಾ ಎಂದು ತಕ್ಷಣವೇ ತನ್ನ ಮೇಲೆಯೇ ಸಿಟ್ಟೂ ಮಾಡಿಕೊಂಡ. ಅವನ ಅಂಜಿಕೆ, ಆತಂಕ ಅನಗತ್ಯವಾಗಿತ್ತು.
ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಅವನತ್ತ ಧಾವಿಸಿ ಬಂದಳು, ಅವನ ಎರಡೂ ಕೈ ಗಬಕ್ಕನೆ ಹಿಡಿದು ಮುತ್ತು ಕೂಡ ಕೊಟ್ಟಳು. ಪುಕ್ಕಲನ ಹಾಗೆ ದುನ್ಯಾಳನ್ನು ಓರೆಗಣ್ಣಿನಲ್ಲಿ ನೋಡಿದ. ಠೀವಿ ತುಂಬಿದ ಅವಳ ಮುಖದಲ್ಲಿ, ಆ ಕ್ಷಣದಲ್ಲಿ ಎಷ್ಟೊಂದು ಕೃತಜ್ಞತೆ, ಎಷ್ಟೊಂದು ಸ್ನೇಹ, ಅವನ ಬಗ್ಗೆ ಪರಿಪೂರ್ಣವಾದ ಅಭಿಮಾನ ತುಂಬಿತ್ತೆಂದರೆ (ಅವನು ಕಲ್ಪಿಸಿಕೊಂಡ ಹಾಗೆ ಅಣಕಿಸುವ ನೋಟ, ಮರೆಮಾಡಲಾಗದಂಥ ತಿರಸ್ಕಾರ ಇರಲೇ ಇಲ್ಲ!) ಅವರು ಸಿಟ್ಟು ಮಾಡಿಕೊಂಡು ಬೈದಿದ್ದರೇ ಚೆನ್ನಾಗಿತ್ತು ಅನಿಸುವುದಕ್ಕೆ ಶುರುವಾಗಿ ಮುಜುಗರಪಟ್ಟ ರಝುಮಿಖಿನ್. ಅದೃಷ್ಟವಶದಿಂದ ಮಾತಿಗೆ ಒದಗುವ ವಸ್ತು ಇತ್ತು, ತಟ್ಟನೆ ಆ ವಿಷಯವನ್ನೇ ಮಾತಾಡಿದ ಅವನು.
‘ಅವನಿಗಿನ್ನೂ ಎಚ್ಚರವಾಗಿಲ್ಲ,’ವೆಂದೂ ‘ಒಟ್ಟಾರೆ ಎಲ್ಲಾ ಚೆನ್ನಾಗಿದೆ’ಯೆಂದೂ ಕೇಳಿದ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ
‘ಒಳ್ಳೆಯದಾಯಿತು, ಯಾಕೆ ಅಂದರೆ ಕೆಲವು ವಿಷಯ ಮೊದಲೇ ಮಾತಾಡಿಕೊಳ್ಳುವುದು ತುಂಬ, ತುಂಬ, ತುಂಬ ಮಖ್ಯ,’ ಅಂದಳು. ಟೀ ಕುಡಿಯುವ ಪ್ರಸ್ತಾಪ ಬಂದಿತು. ರಝುಮಿಖಿನ್ ಬರಲಿ, ಒಟ್ಟಿಗೆ ಕುಡಿಯೋಣವೆಂದು ಕಾಯುತ್ತ ಇದ್ದೆವು ಎಂದರು. ದುನ್ಯಾ ಗಂಟೆ ಬಾರಿಸಿದಳು. ವಸತಿ ಗೃಹದ ಕೆಲಸಗಾರ, ಕೊಳಕು ಚಿಂದಿ ಬಟ್ಟೆ ತೊಟ್ಟವನು ಬಂದ, ಟೀಗೆ ಹೇಳಿದರು. ಟೀ ಬಂದಿತಾದರೂ ಅದನ್ನು ತಂದುಕೊಟ್ಟ ರೀತಿ ಎಷ್ಟು ಅವಮಾನವಾಗುವ ಹಾಗಿತ್ತೆಂದರೆ ಹೆಂಗಸರಿಗೆ ನಾಚಿಕೆಯಾಯಿತು. ರಝುಮಿಖಿನ್ ವಸತಿ ಗೃಹದ ವ್ಯವಸ್ಥೆಯನ್ನು ಕಟುವಾಗಿ ಟೀಕೆ ಮಾಡಿದ. ಪೀಟರ್ ಪೆಟ್ರೋವಿಚ್ ನ ನೆನಪು ಬಂದು ಮಾತು ನಿಲ್ಲಿಸಿ ಮುಜುಗರ ಪಟ್ಟುಕೊಂಡ. ಪುಲ್ಚೇರಿಯ ಅಲೆಕ್ಸಾಂಡ್ರೋವ್ನ ಪುಂಖಾನುಪುಂಖವಾಗಿ ಪ್ರಶ್ನೆ ಕೇಳಿದಾಗ ಸಂತೋಷಪಟ್ಟ.
ಅವನು ಸುಮಾರು ಮುಕ್ಕಾಲು ಗಂಟೆ ಅವರ ಜೊತೆ ಮಾತನಾಡಿದ. ಅವನ ಮಾತಿಗೆ ಪ್ರಶ್ನೆಗಳ ಅಡಚಣೆ ಮತ್ತೆ ಮತ್ತೆ ಎದುರಾಗುತ್ತಿತ್ತು. ಹೇಳಬೇಕಾದ ಅಗತ್ಯ ವಿಷಯಗಳನ್ನು ತಿಳಿಸಿದ. ರಾಸ್ಕೋಲ್ನಿಕೋವ್ ನ ಕಳೆದ ಒಂದು ವರ್ಷದ ಬದುಕಿನ ವಿವರಗಳನ್ನು ತನಗೆ ತಿಳಿದಿರುವಷ್ಟೂ ಹೇಳಿದ. ಅವನ ಕಾಯಿಲೆಯ ವಿಚಾರ ಹೇಳಿದ. ಆದರೂ ಹೇಳಬಾರದ ಕೆಲವು ಸಂಗತಿಗಳನ್ನು ಹೇಳದೆ ಬಚ್ಚಿಟ್ಟ. ಆಫೀಸಿನಲ್ಲಿ ನಡೆದ ಸಂಗತಿಗಳನ್ನೂ ಅವುಗಳ ಪರಿಣಾಮವನ್ನೂ ಹೇಳಲಿಲ್ಲ. ಅವನ ಮಾತನ್ನು ಆಸೆಪಟ್ಟು ಕೇಳಿದರು. ಕೊನೆಗೂ ಹೇಳಬೇಕಾದ್ದೆಲ್ಲ ಹೇಳಿ ಮುಗಿಸಿದೆ, ಕೇಳಿದ ಹೆಂಗಸರಿಗೂ ತೃಪ್ತಿಯಾಯಿತು ಎಂದು ಅವನು ಅಂದುಕೊಂಡರೆ ಮಾತು ಇನ್ನೂ ಶುರುವೇ ಆಗಿಲ್ಲ ಅನ್ನಿಸಿತ್ತು ತಾಯಿ, ಮಗಳಿಗೆ.
‘ಹೇಳು, ಹೇಳು, ನಿನಗೇನನ್ನಿಸತ್ತೆ… ಸಾರಿ, ನಿನ್ನ ಹೆಸರೇ ಗೊತ್ತಿಲ್ಲಪ್ಪಾ, ತಪ್ಪು ತಿಳಕೋಬೇಡ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
‘ದ್ಮಿತ್ರಿ ಪ್ರೊಕೋಫ್ಯಿಚ್.’
‘ನೋಡಪ್ಪಾ ದ್ಮಿತ್ರಿ, ಪ್ಲೀಸ್ ಹೇಳು, ಒಟ್ಟಾರೆ ಅವನು… ಹೇಗೆ ಕಾಣತಾನೆ ಈಗ… ಅಂದರೆ, ಪ್ಲೀಸ್, ಅರ್ಥಮಾಡಿಕೋ, ಹ್ಯಾಗೆ ಹೇಳಲಿ ನಿನಗೆ? ಅಂದರೆ-ಅವನಿಗೆ ಏನು ಇಷ್ಟ ಆಗತ್ತೆ, ಏನು ಇಷ್ಟ ಆಗಲ್ಲ? ಯಾವಾಗಲೂ ರೇಗತಾ ಇರತಾನಾ? ಅದೂ, ಅವನಿಗೇನು ಇಷ್ಟಾನಾ? ಅಂದರೆ ಅವನಿಗೇನು ಬೇಕು, ಅವನ ಕನಸೇನು ಅಂತ ಹೇಳಕ್ಕಾಗತ್ತಾ? ಅವನ ಮೇಲೆ ಈಗ ತುಂಬ ಪ್ರಭಾವ ಬೀರುವಂಥಾದ್ದು ಯಾವುದು? ಅಂದರೆ, ಏನು ಹೇಳತೀನಪ್ಪ ಅಂದರೆ…’
‘ಅಯ್ಯೋ ಅಮ್ಮಾ, ಇಷ್ಟೊಂದು ಪ್ರಶ್ನೆ ಒಟ್ಟಿಗೆ ಕೇಳಿದರೆ ಉತ್ತರ ಹೇಳಕ್ಕೆ ಯಾರಿಗಾಗತ್ತೆ?’ ಅಂದಳು ದುನ್ಯಾ.
‘ಅಯ್ಯೋ ದೇವರೇ, ಅವನನ್ನ ಈ ಅವಸ್ಥೇಲ್ಲಿ ನೋಡತೀನಿ ಅಂದುಕೊಂಡಿರಲಿಲ್ಲ ದ್ಮಿತ್ರಿ.’
‘ಅದು ಸರೀನೇ ಅಮ್ಮಾ,’ ದ್ಮಿತ್ರಿ ರಝುಮಿಖಿನ್ ಹೇಳಿದ. ‘ನಮ್ಮಮ್ಮ ತೀರಿಹೋಗಿದಾರೆ. ನನ್ನನ್ನ ನೋಡಿಕೊಂಡು ಹೋಗಕ್ಕೆ ನಮ್ಮ ಚಿಕ್ಕಪ್ಪ ವರ್ಷಕ್ಕೆ ಒಂದು ಸಾರಿ ಬರತಾರೆ. ತುಂಬ ಬುದ್ಧಿವಂತರು. ಆದರೂ ಪ್ರತೀ ಸಾರಿ ಬಂದಾಗಲೂ ಅವರು ನನ್ನ ಗುರುತೇ ಹಿಡಿಯಲ್ಲ. ನೀವು ನಿಮ್ಮ ಮಗನನ್ನ ನೋಡಿ ಮೂರೂವರೆ ವರ್ಷ ಆಗಿದೆ. ನದೀಲ್ಲಿ ಎಷ್ಟು ನೀರು ಹರಿದುಹೋಗಿರಬಹುದು, ಯೋಚನೆ ಮಾಡಿ. ಒಂದೂವರೆ ವರ್ಷದಿಂದ ಅವನು ನನಗೆ ಪರಿಚಯ. ಮಂಕಾಗಿರತಾನೆ, ಕೊರಗತಾನೆ, ಬಿಗುಮಾನ ಜಾಸ್ತಿ, ಅಭಿಮಾನವೂ ಹೆಚ್ಚು. ಇತ್ತೀಚೆಗೆ (ಬಹಳ ದಿನದಿಂದ ಇದ್ದರೂ ಇರಬಹುದು) ಯಾಕೋ ಕಳವಳ ಪಡತಾನೆ, ತನಗೆ ಏನೋ ಕಾಯಿಲೆ ಅನ್ನುವ ಹಾಗೆ ಆಡತಾನೆ.
ಹೈಪೊಕಾಂಡ್ರಿಯಾಕ್. ತುಂಬ ಧಾರಾಳವಾಗಿರತಾನೆ, ಮರುಕ ತೋರಿಸತಾನೆ. ಮನಸಿನಲ್ಲಿ ಇರೋದನ್ನ ಹೇಳಿಕೊಳ್ಳಲ್ಲ. ಕಷ್ಟ ಸುಖ ಬಾಯಿ ಬಿಟ್ಟು ಹೇಳಿಕೊಳ್ಳುವ ಬದಲು ಕ್ರೂರಿಯಾಗಿರತೇನೆ ಅನ್ನುವ ಥರ ಇರತಾನೆ. ಒಂದೊಂದು ಸಲ ಹೈಪೊಕಾಂಡ್ರಿಯಾಕ್ ಅಲ್ಲ, ಭಾವನೆಗಳೇ ಇಲ್ಲದ ಕಲ್ಲೆದೆಯವನು ಅನಿಸತ್ತೆ. ತೀರ ಬೇರೆ ಬೇರೆ ಥರದ ಇಬ್ಬರು ಮನುಷ್ಯರು ಅವನೊಬ್ಬನೊಳಗೇ ಇದಾರೆ ಅನಿಸತ್ತೆ. ಒಂದೊಂದು ಸಲ ಜಪ್ಪಯ್ಯ ಅಂದರೂ ಮಾತೇ ಆಡಲ್ಲ! ಯಾವಾಗಲೂ ಆತುರ, ಯಾವಾಗಲೂ ಬ್ಯುಸಿ, ಆದರೂ ಏನೂ ಮಾಡದೆ ಸುಮ್ಮನೆ ಬಿದ್ದುಕೊಂಡಿರತಾನೆ. ಅಣಕಿಸೋದು, ತಮಾಷೆ ಮಾಡೋದು ಇಲ್ಲವೇ ಇಲ್ಲ. ಅವನಿಗೆ ಚುರುಕು ಬುದ್ಧಿ ಇಲ್ಲ ಅಂತಲ್ಲ, ಇಂಥ ಚಿಲ್ಲರೆ ಕೆಲಸ ಮಾಡುವುದಕ್ಕೆ ಟೈಮಿಲ್ಲ ಅನ್ನುವ ಥರ ಇರತಾನೆ. ಬೇರೆಯವರು ಮಾತಾಡೋದನ್ನ ಪೂರ್ತಿ ಕೇಳಿಸಿಕೊಳ್ಳೋದೇ ಇಲ್ಲ. ಎಲ್ಲಾರೂ ಇಷ್ಟ ಪಡೋದು ಅವನಿಗೆ ಇಷ್ಟ ಆಗಲ್ಲ. ತನಗೆ ತಾನು ತುಂಬ ಬೆಲೆ ಕಟ್ಟಿಕೊಳ್ಳತಾನೆ. ಹಾಗಂದುಕೊಂಡರೆ ಅದಕ್ಕೆ ಕಾರಣವೂ ಇದೆ. ಮತ್ತೇನು?… ಹ್ಞಾಂ ಈಗ ನೀವು ಬಂದಿರಲ್ಲ, ಅವನಿಗೆ ತುಂಬ ಒಳ್ಳೆಯದಾಗತ್ತೆ, ಸಮಾಧಾನ ಸಿಗತ್ತೆ…’
‘ಅಷ್ಟಾಗಲಪ್ಪಾ ದೇವರೇ!’ ತನ್ನ ರೋದ್ಯಾನ ಬಗ್ಗೆ ರಝುಮಿಖಿನ್ ಹೇಳಿದ ಮಾತು ಕೇಳಿ ಪುಲ್ಚೇರಿಯ ನೋವುಪಟ್ಟುಕೊಂಡು ಅಂದಳು.
ರಝುಮಿಖಿನ್ ಕೊನೆಗೂ ಧೈರ್ಯ ಮಾಡಿ ದುನ್ಯಾಳನ್ನ ನೋಡಿದ. ಮಾತಾಡುತಿದ್ದಷ್ಟೂ ಹೊತ್ತು ಅವಳತ್ತ ಆಗಾಗ ನೋಟ ಹಾಯಿಸುತ್ತಿದ್ದ, ತಟ್ಟನೆ ಬೇರೆಲ್ಲೋ ನೋಡುತ್ತಿದ್ದ. ದುನ್ಯಾ ಟೇಬಲ್ಲಿನ ಹತ್ತಿರ ಕೂತು ಗಮನವಿಟ್ಟು ಮಾತು ಕೇಳಿಸಿಕೊಳ್ಳುತ್ತಿದ್ದಳು. ಎದ್ದು ರೂಮಿನಲ್ಲಿ ಅತ್ತ ಇತ್ತ ಓಡಾಡುತ್ತಿದ್ದಳು, ಅಭ್ಯಾಸವಾಗಿದ್ದ ಹಾಗೆ ಎದೆಯ ಮೇಲೆ ಕೈ ಕಟ್ಟಿಕೊಂಡು, ತುಟಿ ಒತ್ತಿಕೊಂಡು ಹೆಜ್ಜೆ ಹಾಕುತಿದ್ದಳು. ಆಗಾಗ ಏನಾದರೂ ಪ್ರಶ್ನೆ ಕೇಳುತಿದ್ದಳು. ಹೆಜ್ಜೆ ಹಾಕುವುದು ನಿಲ್ಲಿಸುತ್ತಿರಲಿಲ್ಲ. ಮತ್ತೆ ಯೋಚನೆಯಲ್ಲಿ ಮುಳುಗುತ್ತಿದ್ದಳು. ಬೇರೆಯವರ ಮಾತನ್ನು ಪೂರ್ತಿ ಕೇಳುವ ಅಭ್ಯಾಸ ಅವಳಿಗೂ ಇರಲಿಲ್ಲ.
ತೆಳು ಬಟ್ಟೆಯ ಕಪ್ಪು ಉಡುಪು ತೊಟ್ಟಿದ್ದಳು, ಕೊರಳಿಗೆ ಬಿಳಿಯ ಸ್ಕಾರ್ಫು ಸುತ್ತಿಕೊಂಡಿದ್ದಳು. ಇಬ್ಬರು ಹೆಂಗಸರೂ ತೀರ ಬಡತನದ ಬದುಕು ಸಾಗಿಸುತ್ತಿರುವವರು ಅನ್ನುವುದು ರಝುಮಿಖಿನ್ ಗೆ ತಟ್ಟನೆ ಹೊಳೆಯಿತು. ದುನ್ಯಾ ರಾಣಿಯ ಹಾಗೆ ಅಲಂಕಾರ ಮಾಡಿಕೊಂಡಿದ್ದರೆ ರಝುಮಿಖಿನ್ ಗೆ ಅವಳನ್ನು ಕಂಡು ಒಂದಿಷ್ಟೂ ಭಯವಾಗುತ್ತಿರಲಿಲ್ಲ. ಅವಳ ತೀರ ಸಾಮಾನ್ಯ ಉಡುಪು, ಅವಳ ಬಡತನ ಅವನ ಗಮನಕ್ಕೆ ಬಂದದ್ದರಿಂದ ಭಯ ನುಸುಳಿತ್ತು. ಪ್ರತಿಯೊಂದೂ ಮಾತನ್ನು ಎಚ್ಚರದಿಂದ ಆಡಬೇಕು, ಹುಷಾರಾಗಿ ವರ್ತಿಸಬೇಕು ಅನಿಸುವುದಕ್ಕೆ ಶುರುವಾಯಿತು. ಅವನ ಮೇಲೆ ಅವನಿಗೇ ವಿಶ್ವಾಸವಿಲ್ಲದಿರುವಾಗ ಹೀಗೆ ಮಾತಾಡುವುದಕ್ಕೆ ಕಷ್ಟವಾಗುತ್ತಿತ್ತು.
‘ನಮ್ಮಣ್ಣನ ಸ್ವಭಾವದ ಬಗ್ಗೆ ಬಹಳ ಕುತೂಹಲದ ವಿಚಾರ ಹೇಳಿದಿರಿ. ನ್ಯಾಯವಾಗಿ ಮಾತಾಡಿದಿರಿ. ತುಂಬ ಒಳ್ಳೆಯದು. ನಿಮ್ಮನ್ನ ಮೊದಲು ನೋಡಿದಾಗ ನಮ್ಮಣ್ಣನ ಬಗ್ಗೆ ಬಹಳ ಗೌರವ ಇದೆ, ಅವನನ್ನ ಕಂಡರೆ ಭಕ್ತಿ ಅಂದುಕೊಂಡಿದ್ದೆ,’ ನಗುತ್ತಾ ಅಂದಳು ದುನ್ಯಾ. ಸ್ವಲ್ಪ ಹೊತ್ತು ಯೋಚನೆ ಮಾಡಿ, ‘ನನಗನ್ನಿಸತ್ತೆ, ಅಣ್ಣನನ್ನ ನೋಡಿಕೊಳ್ಳುವುದಕ್ಕೆ ಯಾರಾದರೂ ಹೆಂಗಸರು ಇದ್ದಿದ್ದರೆ ಚೆನ್ನಾಗಿರತಿತ್ತು,’ ಅಂದಳು.
‘ಹಾಗಲ್ಲ ನಾನು ಹೇಳಿದ್ದು… ಅಲ್ಲಾ, ನೀವು ಹೇಳಿದ್ದೂ ಸರೀನೇ… ಆದರೇ….’
‘ಏನು?’
‘ಅವನು ಯಾರನ್ನೂ ಪ್ರೀತಿ ಮಾಡಿಲ್ಲ, ಯಾವತ್ತೂ ಮಾಡೋದೂ ಇಲ್ಲ,’ ರಝುಮಿಖಿನ್ ಖಡಾಖಂಡಿತವಾಗಿ ಹೇಳಿದ’
‘ಅಂದರೆ, ಪ್ರೀತಿ ಮಾಡಕ್ಕೆ ಆಗಲ್ಲ ಅಂತಲಾ ಅವನಿಗೆ?’
‘ನೋಡಿ, ನೀವು ಎಲ್ಲಾ ವಿಚಾರದಲ್ಲೂ ನಿಮ್ಮಣ್ಣನ ಹಾಗೇ…’ ರಝುಮಿಖಿನ್ ಅವನಿಗೇ ಆಶ್ಚರ್ಯವಾಗುವಷ್ಟು ತಟ್ಟನೆ ಅಂದ. ಅನ್ನುತಿದ್ದ ಹಾಗೇ ಅವಳಣ್ಣನ ಬಗ್ಗೆ ತಾನೇ ಹೇಳಿದ ಮಾತೆಲ್ಲವೂ ನೆನಪಾಗಿ ನಾಚಿ, ಮುಖ ಕೆಂಪಾಗಿ, ಮುಜುಗರ ಪಟ್ಟ.. ಅವನನ್ನ ನೋಡಿದ ದುನ್ಯಾಗೆ ನಗು ತಡೆಯಲಾಗಲಿಲ್ಲ. ‘ರೋದ್ಯಾ ಬಗ್ಗೆ ನೀವಿಬ್ಬರೂ ತಪ್ಪು ತಿಳಿದಿದ್ದೀರಿ,’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ. ಅವಳಿಗೆ ಸ್ವಲ್ಪ ಅಸಮಾಧಾನವಾಗಿತ್ತು. ‘ನಾನು ಈವಾಗಿನ ವಿಚಾರ ಹೇಳತಾ ಇಲ್ಲ, ದುನ್ಯಾ. ಪೀಟರ್ ಪೆಟ್ರೊವಿಚ್ ಕಾಗದದಲ್ಲಿ ಬರೆದಿದ್ದನಲ್ಲ ಅದು.. ಅದನ್ನ ಓದಿ ನಾನು ನೀನು ಏನಂದುಕೊಂಡಿದ್ದೆವೋ ಅದು ನಿಜ ಅಲ್ಲ ಅನ್ನಿಸತ್ತೆ. ದ್ಮಿತ್ರಿ, ನಿನಗೆ ಗೊತ್ತಿಲ್ಲ, ಅವನು ಯಾವಾಗಲೂ ಕನಸಿನಲ್ಲಿದ್ದ ಹಾಗೆ ಇರತಿದ್ದ, ಮನಸಿಗೆ ಬಂದ ಹಾಗೆ ಮಾಡತಿದ್ದ, ಅವನಿಗೆ ಹದಿನೈದು ವರ್ಷವಾಗಿದ್ದಾಗಲೇ ‘ಇವನನ್ನ ನಂಬುವುದು ಕಷ್ಟ,’ ಅಂದುಕೊಳ್ಳತಿದ್ದೆ. ಈಗಲೂ ಅಷ್ಟೇ, ಬೇರೆಯವರು ಯೋಚನೆ ಕೂಡ ಮಾಡಕ್ಕಾಗದಂಥ ಕೆಲಸಾನ ಅವನು ತಟಕ್ಕಂತ ಮಾಡಿಬಿಡಬಹುದು….
ಈಗ ಒಂದೂವರೆ ವರ್ಷಕ್ಕೆ ಮೊದಲು ನನಗೆ ಆಶ್ಚರ್ಯ ಆಗಿ, ಶಾಕ್ ಆಗೋಹಾಗೆ ಮಾಡಿದ್ದನಲ್ಲಾ… ಅದೇ, ಯಾರು ಅವಳ ಹೆಸರು, ಅವನ ಮನೆ ಓನರ್ ಮಗಳು, ಹ್ಞಾ… ಝಾರ್ನಿತ್ಸ್ನಾ, ಅವಳನ್ನ ಮದುವೆ ಆಗತೀನಿ ಅಂದಿದ್ದನಲ್ಲಾ…’
‘ಆ ಕಥೆಯ ವಿವರ ಗೊತ್ತೇ?’ ದುನ್ಯಾ ಕೇಳಿದಳು.
‘ನಾನು ಕಣ್ಣೀರಿಟ್ಟಿದ್ದು, ನನಗೆ ಕಾಯಿಲೆ ಆಗಿದ್ದು, ನಾನು ಸಾಯಬಹುದಾಗಿತ್ತು ಅನ್ನುವುದು, ನಮ್ಮ ಬಡತನ, ಇವು ಯಾವುದೂ ರೋದ್ಯಾನ ತಡೆಯುತ್ತಿರಲಿಲ್ಲ, ಗೊತ್ತಾ. ಈ ಅಡ್ಡಿಗಳನ್ನೆಲ್ಲ ತಣ್ಣಗೆ ದಾಟಿಬಿಡತಾ ಇದ್ದ. ಅವನಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಅನ್ನತೀಯಾ?’
‘ಆ ಕಥೆ ನನಗೆ ಹೇಳಿರಲಿಲ್ಲ ಅವನು,’ ರಝುಮಿಖಿನ್ ಹುಷಾರಾಗಿ ಹೇಳಿದ. ‘ಓನರಮ್ಮ ಒಂದಿಷ್ಟು ಹೇಳಿದ್ದರು. ಅವರೂ ಜಾಸ್ತಿ ಮಾತಾಡುವವರಲ್ಲ. ವಿಚಿತ್ರ ಕಥೆ.’
‘ಏನು ಕಥೆ ಅದು?’ ಇಬ್ಬರೂ ಹೆಂಗಸರು ಒಟ್ಟಿಗೆ ಕೇಳಿದರು.
ಅವರು ಅವನ ಸಹಾಯ ಬಯಸಿ ಕಾಯುತ್ತಿರುವಾಗ ಅವರ ಭಾವನೆಗಳನ್ನು ಕೆಡಿಸುವ ಹಕ್ಕು ಅವನಿಗಿರಲಿಲ್ಲ. ಬಟ್ಟೆಗಳನ್ನು ಬ್ರಶ್ಶಿನಲ್ಲಿ ಹುಷಾರಾಗಿ ಒರಸಿದ. ಶರ್ಟು ಪರವಾಗಿಲ್ಲ ಅನ್ನುವ ಹಾಗಿತ್ತು, ತಕ್ಕಮಟ್ಟಿಗೆ ಸ್ವಚ್ಛವಾಗಿತ್ತು.
‘ಅಂಥಾ ವಿಶೇಷ ಏನಿಲ್ಲ. ನಾನು ಕೇಳಿದ ಹಾಗೆ ಮದುವೆ ಪಕ್ಕಾ ಅಂತ ಆಗಿತ್ತು, ಮದುವೆ ಹೆಣ್ಣು ತೀರಿಹೋದಳು ಅಂತ ನಿಂತು ಹೋಯಿತು ಅಷ್ಟೇ. ಅದು ಓನರಮ್ಮನಿಗೆ ಇಷ್ಟ ಆಗಲಿಲ್ಲ. ಹೆಣ್ಣೂ ಸಾಧಾರಣ ಇದ್ದಳು, ಅಂಥ ಚೆನ್ನಾಗಿರಲಿಲ್ಲ ಅಂತ ಕೇಳಿದೇನೆ. ಆದರೂ ಒಳ್ಳೆಯವಳು, ಸ್ವಲ್ಪ ಕಾಯಿಲೆ ಇತ್ತು ಅಂತಾರೆ. ವರದಕ್ಷಿಣೆ ಕೂಡಾ ಇರಲಿಲ್ಲ. ಅವಳಲ್ಲಿ ನಿಜವಾಗಲೂ ಏನೋ ವಿಶೇಷ ಇದ್ದಿರಬಹುದು. ಇಲ್ಲದೆ ಇದ್ದರೆ ಇವನು ಯಾಕೆ ಮದುವೆಗೆ ಒಪ್ಪತಾ ಇದ್ದ. ಅಲ್ಲ, ರೋದ್ಯ ಏನೂ ವರದಕ್ಷಿಣೆ ನಂಬಿಕೊಂಡು ಇರುವವನಲ್ಲ… ಒಟ್ಟು ಇಂಥ ವಿಚಾರದಲ್ಲಿ ಹೀಗೇ ಅಂತ ಹೇಳುವುದು ಕಷ್ಟ.’
‘ತುಂಬಾ ಯೋಗ್ಯಳೇ ಇರಬೇಕು,’ ದುನ್ಯಾ ಸಿಡುಕಿದಳು.
‘ನನ್ನ ತಪ್ಪಿದ್ದರೆ ದೇವರು ಕ್ಷಮಿಸಲಿ, ಅವಳು ಸತ್ತಳು ಅನ್ನುವ ಸುದ್ದಿ ಕೇಳಿ ನನಗಂತೂ ಸಂತೋಷ ಆಗಿತ್ತು. ಮದುವೆ ಆಗಿದ್ದರೆ ಅವಳಿಂದ ನನ್ನ ಮಗ ಹಾಳಾಗತಿದ್ದನೋ, ಅವನಿಂದ ಅವಳು ಹಾಳಾಗತಿದ್ದಳೋ ಗೊತ್ತಿಲ್ಲ.’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ. ಮಾತಿನ ಮಧ್ಯ ಬಿಡುವು ಕೊಡುತ್ತ, ಹಿಂಜರಿಯುತ್ತ, ಮತ್ತೆ ಮತ್ತೆ ದುನ್ಯಾಳನ್ನು ನೋಡುತ್ತ, (ಅದೆಲ್ಲ ದುನ್ಯಾಗೆ ಇಷ್ಟವಾಗಿರಲಿಲ್ಲ) ಹುಷಾರಾಗಿ ಮಾತಾಡಿದಳು. ಹಿಂದಿನ ದಿನ ರೋದ್ಯ-ಪೀಟರ್ ಪೆಟ್ರೊವಿಚ್ ರ ನಡುವೆ ನಡೆದ ಮಾತು ಕತೆಯ ಬಗ್ಗೆ ಕೇಳಿದಳು. ಆ ಸುದ್ದಿ ಕೇಳಿ ಆಕೆ ವಿಚಲಿತಳಾಗಿರುವುದು, ಹೆದರಿರುವುದು ಯಾರಿಗೂ ತಿಳಿಯುವ ಹಾಗಿತ್ತು. ರಝುಮಿಖಿನ್ ಇಡೀ ಕಥೆಯನ್ನು ಮತ್ತೆ ವಿವರವಾಗಿ ಹೇಳಿದ. ಈ ಬಾರಿ ಹೇಳಿದ ಕಥೆಯಲ್ಲಿ ಅವನ ಸ್ವಂತ ತೀರ್ಮಾನವೂ ಇತ್ತು: ಪೀಟರ್ ಪೆಟ್ರೊವಿಚ್ ನನ್ನು ರಾಸ್ಕೋಲ್ನಿಕೋವ್ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಅಂದ, ಅವನ ವರ್ತನೆಗೆ ಕಾಯಿಲೆ ಕಾರಣ ಅನ್ನುವ ನೆಪವನ್ನೂ ಒಡ್ಡಲಿಲ್ಲ.
‘ಕಾಯಿಲೆ ಬರುವುದಕ್ಕೆ ಮೊದಲೇ ಆ ಮಾತೆಲ್ಲ ಯೋಚನೆ ಮಾಡಿಟ್ಟುಕೊಂಡಿದ್ದ ಅನಿಸತ್ತೆ,’ ಎಂದು ಸೇರಿಸಿದ.
‘ನನಗೂ ಹಾಗೇ ಅನಿಸತ್ತೆ,’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ. ಸೋತು ಹೋದವರ ಭಾವವಿತ್ತು ಅವಳ ಮುಖದಲ್ಲಿ. ಈ ಬಾರಿ ರಝುಮಿಖಿನ್ ತುಂಬ ಹುಷಾರಾಗಿ ಪೀಟರ್ ಪೆಟ್ರೊವಿಚ್ ಬಗ್ಗೆ ಮಾತಾಡಿದ, ದನಿಯಲ್ಲಿ ಗೌರವವೂ ಇತ್ತು, ಯಾಕೆ ಎಂದು ತಾಯಿ ಆಶ್ಚರ್ಯವನ್ನೂ ಪಟ್ಟಳು. ಈ ಸಂಗತಿ ದುನ್ಯಾಳ ಗಮನಕ್ಕೂ ಬಂದಿತ್ತು.
‘ಪೀಟರ್ ಪೆಟ್ರೋವಿಚ್ ಬಗ್ಗೆ ನಿನಗೇನು ಅನಿಸತ್ತೆ?’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳಿಗೆ ಪ್ರಶ್ನೆ ಕೇಳದೆ ಸುಮ್ಮನಿರಲು ಆಗಲಿಲ್ಲ.
‘ನಿಮ್ಮ ಮಗಳ ಭಾವೀ ಪತಿಯ ಬಗ್ಗೆ ಮತ್ತೆ ಇನ್ನು ಯಾವ ಅಭಿಪ್ರಾಯ ಇರುವುದಕ್ಕೆ ಸಾಧ್ಯ?’ ರಝುಮಿಖಿನ್ ತವಕಪಡುತ್ತ ಮಾತಾಡಿದ.
‘ಸುಮ್ಮನೇ ಸೌಜನ್ಯಕ್ಕೇ ಅಂತ ಹೇಳತಾ ಇಲ್ಲ, ಯಾಕೇಂದರೆ… ಯಾಕೆ ಅಂದರೆ… ಅವದೋತ್ಯ ರೊಮನೊವ್ನಾ ಅವರು ಸ್ವತಃ ತಮ್ಮ ಇಚ್ಛೆಯಿಂದ ಒಪ್ಪಿರುವ ಗಂಡು ಅವರು ಅನ್ನುವ ಒಂದು ಕಾರಣ ಸಾಕು. ನಿನ್ನೆ ಯಾಕೆ ಬೈದೆ ಅಂದರೆ. ನಾನು ಕುಡಿದಿದ್ದೆ. ಹುಚ್ಚ ಕೂಡ ಆಗಿದ್ದೆ.. ಹ್ಞೂಂ, ಹುಚ್ಚ ನನ್ನ ತಲೆ ಕೆಟ್ಟಿತ್ತು, ಪೂರಾ… ಅದಕ್ಕೇ ಹಾಗೆಲ್ಲ ಮಾತಾಡಿದೆ. ಅದನ್ನೆಲ್ಲ ನೆನೆಸಿಕೊಂಡು ಇವತ್ತು ನಾಚಿಕೆ ಪಡತಾ ಇದೇನೆ,’ ಅಂದ. ದುನ್ಯಾ ಕೂಡ ನಾಚಿ ಕೆಂಪಾದಳು, ಆದರೂ ತನ್ನ ಮೌನ ಮುರಿದು ಮಾತಾಡಲಿಲ್ಲ. ಅವರು ಪೀಟರ್ ಪೆಟ್ರೊವಿಚ್ ಬಗ್ಗೆ ಮಾತು ಶುರುಮಾಡಿದ ಕ್ಷಣದಿಂದ ಅವಳು ಒಂದೂ ಮಾತಾಡಿರಲಿಲ್ಲ.
ಮಗಳ ಬೆಂಬಲವಿಲ್ಲದೆ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಹಿಂಜರಿದಳು. ಮಗಳನ್ನೇ ದಿಟ್ಟಿಸಿ ನೋಡುತ್ತಾ ‘ಒಂದು ಸಂಗತಿ ಮನಸ್ಸನ್ನ ಸದ್ಯದಲ್ಲಿ ತುಂಬ ಕೊರೆಯುತ್ತಿದೆ… ದ್ಮಿತ್ರಿ… ದ್ಮಿತ್ರಿ ಜೊತೆ ಹೇಳಿಕೊಳ್ಳಬಹುದಾ…?’ ಎಂದು ತಡವರಿಸಿ ಕೇಳಿದಳು ಮಗಳನ್ನು.
‘ಧಾರಾಳವಾಗಿ…’ ಯಾವ ಸಂಕೋಚವೂ ಇಲ್ಲದೆ ದುನ್ಯಾ ಹೇಳಿದಳು.
ತನ್ನ ದುಃಖ ಹೇಳಿಕೊಳ್ಳುವುದಕ್ಕೆ ಮಗಳ ಅನುಮತಿ ದೊರೆತದ್ದರಿಂದ ಎದೆಯ ಮೇಲಿದ್ದ ಬೆಟ್ಟದಂಥ ಭಾರ ಇಳಿಸಿದ ಹಾಗನ್ನಿಸಿ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಮಾತಾಡಿದಳು: ‘ಏನಂದರೆ, ನಾವು ಬರತಾ ಇದೀವಿ ಅಂತ ನಿನ್ನೆ ನಾವು ಕಳಿಸಿದ್ದ ಪತ್ರಕ್ಕೆ ಇವತ್ತು, ಬೆಳಕು ಹರಿಯುವ ಹೊತ್ತಿಗೇ, ಪೀಟರ್ ಪೆಟ್ರೊವಿಚ್ ಕಾಗದ ಕಳಿಸಿದ್ದರು. ನೋಡಪ್ಪಾ, ಅವರು ನಿನ್ನೆನೇ ನಮ್ಮನ್ನ ನೋಡಕ್ಕೆ ಬರಬೇಕಾಗಿತ್ತು. ಹೊರಟಾಗ ಸ್ಟೇಶನ್ನಿನಲ್ಲೇ ಹಾಗಂತ ಮಾತುಕೊಟ್ಟಿದ್ದರು. ಅವರು ಬರಲಿಲ್ಲ, ಬದಲಾಗಿ ಯಾರೋ ಆಳನ್ನ ಕಳಿಸಿದ್ದರು-ವಸತಿ ಗೃಹಕ್ಕೆ ನಮಗೆ ದಾರಿ ತೋರಿಸುವುದಕ್ಕೆ. ನಾಳೆ ಬೆಳಗ್ಗೆ, ಅಂದರೆ ಇವತ್ತು ಅವರನ್ನ ಬಂದು ನೋಡತೇನೆ ಅಂತ ಹೇಳು ಅಂತ ಅವನ ಕೈಯಲ್ಲಿ ಹೇಳಿಕಳಿಸಿದ್ದರು. ಇವತ್ತು ಕೂಡ ಬರುವ ಬದಲಾಗಿ ಇಗೋ ಈ ಕಾಗದ ಕಳಿಸಿದಾರೆ.. ಇದನ್ನ ನೀನೇ ಓದಿಕೊಂಡರೆ ಒಳ್ಳೆಯದು. ಅದರಲ್ಲಿರೋ ಒಂದು ವಿಷಯಾ ನನ್ನ ಮನಸ್ಸಿಗೆ ತೊಂದರೆ ಕೊಡತಾ ಇದೆ. ಅದೇನು ಅಂತ ಓದಿದರೆ ನಿನಗೇ ತಿಳಿಯತ್ತೆ. ನಿನಗೇನನ್ನಿಸತ್ತೆ, ನಿಜ ಹೇಳು ದ್ಮಿತ್ರಿ.. ನಮ್ಮ ರೋದ್ಯಾನ ಮನ್ಸು ಹೇಗೆ ಅನ್ನೋದು ನಿನಗೆ ಚೆನ್ನಾಗಿ ಗೊತ್ತಿದೆ. ನಾವೇನು ಮಾಡಬೇಕು ಅಂತ ಹೇಳುವುದಕ್ಕೆ ನೀನೇ ಸರಿಯಾದವನು. ನಮ್ಮ ದುನ್ಯಾ ಆಗಲೇ ತೀರ್ಮಾನಕ್ಕೆ ಬಂದುಬಿಟ್ಟಿದಾಳೆ. ನನಗೇ ತೋಚತಾ ಇಲ್ಲ ಏನು ಮಾಡಬೇಕು ಅಂತ.. ನೀನು ಬರಲಿ ಅಂತಲೇ ಕಾಯುತ್ತಿದ್ದೆ,’ ಅಂದಳು..
ಹಿಂದಿನ ದಿನದ ದಿನಾಂಕವಿದ್ದ ಪತ್ರವನ್ನು ಬಿಡಿಸಿ ರಝುಮಿಖಿನ್ ಓದಿದ. ಅದರಲ್ಲಿ ಹೀಗೆ ಬರೆದಿತ್ತು:
ಪ್ರಿಯ ಶ್ರೀಮತಿ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ಅವರೇ,
ದುರ್ದೈವ ವಶದಿಂದ ಏಕಕಾಲಕ್ಕೆ ಸಂಭವಿಸಿದ ಹಲವು ವಿಳಂಬಗಳಿಂದಾಗಿ ನಾನು ಸ್ವತಃ ಸ್ಟೇಶನ್ನಿಗೆ ಬಂದು ಎದುರುಗೊಳ್ಳಲು ಆಗಲಿಲ್ಲ ಎಂದು ತಿಳಿಸಲಿಚ್ಚಿಸುತ್ತೇನೆ. ನಿಮ್ಮ ಸಹಾಯಕ್ಕೆ ಒದಗಲೆಂದು ಸಮರ್ಥನಾದ ವ್ಯಕ್ತಿಯೊಬ್ಬನನ್ನು ಕಳಿಸಿರುತ್ತೇನೆ. ಸನೇಟಿನಲ್ಲಿ ನಡೆಯಲಿರುವ ಬಹು ಮುಖ್ಯ ಸಭೆಯ ಕಾರಣದಿಂದ ನಾಳೆ ಬೆಳಿಗ್ಗೆಯೂ ನಿಮ್ಮನ್ನು ನೋಡಲು ಆಗದಿರುವುದು ನನ್ನ ದುರ್ದೈವ. ಅಲ್ಲದೆ ಬಹು ದೀರ್ಘ ಕಾಲದ ನಂತರ ನಡೆಯುತ್ತಿರುವ ನಿಮ್ಮ ಕೌಟುಂಬಿಕ ಮಿಲನಕ್ಕೂ ಅಡಚಣೆಯಾಗಬಾರದೆಂಬ ಅಭಿಪ್ರಾಯ ನನ್ನದು. ಇಂದು ಬೆಳಗಿಗೇ ಬಂದು ತಮ್ಮನ್ನು ಭೇಟಿಯಾಗಿ ನನ್ನ ಗೌರವವನ್ನು ನಿಮಗೆ ಸಲ್ಲಿಸುವ ಸದವಕಾಶ ದೊರೆಯದೆಂಬ ವ್ಯಥೆ ನನಗಿದೆ.
ಬಹಳ ಕಾಲದ ನಂತರ ನೀವು ನಿಮ್ಮ ಸುಪುತ್ರನನ್ನೂ ಅವದೋತ್ಯ ರೊಮನೋವ್ನಾರವರು ತಮ್ಮ ಪ್ರೀತಿಪಾತ್ರ ಸಹೋದರನನ್ನೂ ಭೇಟಿಯಾಗಲಿದ್ದೀರಿ. ಅದಕ್ಕೆ ತೊಂದರೆಯಾಗದಂತ ಸಂಜೆ ಎಂಟು ಗಂಟೆಗೆ ಬಂದು ನಿಮ್ಮನ್ನು ಕಾಣುತ್ತೇನೆ. ಇದರ ಜೊತೆಗೆ ಇನ್ನೊಂದು ಮಾತನ್ನು ಸೇರಿಸುವ ಸಾಹಸ ಮಾಡುತ್ತಿದ್ದೇನೆ. ನಮ್ಮ ಭೇಟಿಯ ಸಂದರ್ಭದಲ್ಲಿ ರೋಡಿಯೋನ್ ರೋಮನೋವಿಚ್ ಹಾಜರಿರಬಾರದೆಂದು ಪ್ರಾಮಾಣಿಕವಾಗಿಯೂ ಒತ್ತಾಯಪೂರ್ವಕವಾಗಿಯೂ ನನ್ನ ಬೇಡಿಕೆಯನ್ನು ಮಂಡಿಸುತ್ತಿದ್ದೇನೆ. ನಿನ್ನೆಯ ದಿನ ನಿಮ್ಮ ಸುಪುತ್ರರ ಆರೋಗ್ಯ, ಕ್ಷೇಮ ಸಮಾಚಾರವನ್ನು ವಿಚಾರಿಸುವ ಸಲುವಾಗಿ ರುಗ್ಣಶಯ್ಯೆಯಲ್ಲಿರುವ ಅವರನ್ನು ಭೇಟಿಮಾಡಲು ನಾನು ಹೋದಾಗ ಅವರು ಅತ್ಯಂತ ಅಹಿತಕರವಾಗಿ ವರ್ತಿಸಿ ಅಪಮಾನ ಮಾಡಿದ್ದಾರೆ. ಅಲ್ಲದೆ ನಿರ್ದಿಷ್ಟವಾದೊಂದು ವಿಷಯದ ಬಗ್ಗೆ ನಾನು ನಿಮ್ಮೊಂದಿಗೆ ಕೂಲಂಕುಷವಾಗಿ ಚರ್ಚಿಸಿ ಆ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನೂ ನಾನು ತಿಳಿಯಬೇಕಾಗಿದೆ. ಹಾಗಾಗಿ ನಮ್ಮ ಭೇಟಿಯ ಸಂದರ್ಭದಲ್ಲಿ ನಾನು ರೋಡಿಯನ್ ರೊಮಾನೊವಿಚ್ ಅವರನ್ನು ನನ್ನ ಅಪೇಕ್ಷೆಗೆ ವಿರುದ್ಧವಾಗಿ ನಿಮ್ಮ ಕೋಣೆಯಲ್ಲಿ ಕಂಡುದಾದರೆ ನಾನು ತಕ್ಷಣವೇ ಅಲ್ಲಿಂದ ಹೊರಟುಬಿಡುತ್ತೇನೆ ಮತ್ತು ಹೀಗಾದಲ್ಲಿ ಮುಂದಿನೆಲ್ಲ ಘಟನೆಗಳಿಗೆ ತಾವೇ ಸಂಪೂರ್ಣವಾಗಿ ಹೊಣೆಗಾರರಾಗಿರುತ್ತೀರಿ ಎಂದು ವಿನಯಪೂರ್ವಕವಾಗಿ ಮುನ್ನೆಚ್ಚರಿಕೆಯನ್ನು ನೀಡಲು ಆಶಿಸುತ್ತೇನೆ.
ನಾನು ಅವರಲ್ಲಿಗೆ ಹೋದಾಗ ಅಷ್ಟೊಂದು ರೋಗಪೀಡಿತರಂತೆ ಕಾಣುತಿದ್ದ ರೋಡಿಯನ್ ರೊಮೊನೊವಿಚ್ ಅವರು ಒಂದೇ ಗಂಟೆ ಹೊತ್ತಿನಲ್ಲೇ ಚೇತರಿಸಿಕೊಂಡು ಓಡಾಡುತ್ತಿದ್ದುದರಿಂದ ನಿಮ್ಮಲ್ಲಿಗೂ ಅವರು ಬಂದಾರೆಂದು ಊಹಿಸುತ್ತೇನೆ. ಈ ಸಂಗತಿಗೆ ನನ್ನ ಸ್ವಂತ ಕಣ್ಣುಗಳೇ ಸಾಕ್ಷಿಯಾಗಿವೆ. ಸಾರೋಟಿನ ಕುದುರೆಯ ಗಾಲಿಗೆ ಸಿಕ್ಕಿ ಮರಣಸಿದ ಕುಡಕನೊಬ್ಬನ ಮನೆಯಲ್ಲಿ ನಿಮ್ಮ ಪುತ್ರನನ್ನು ನಾನೇ ಕಂಡಿರುತ್ತೇನೆ. ಅವನ ಮಗಳಿಗೆ, ಒಂದಿಷ್ಟೂ ಮರ್ಯಾದಸ್ಥಳಂತೆ ಕಾಣದ ಹೆಂಗಸಿಗೆ, ನಿಮ್ಮ ಮಗ ಅಂತ್ಯ ಸಂಸ್ಕಾರದ ನೆಪದಲ್ಲಿ ಇಪ್ಪತ್ತೈದು ರೂಬಲ್ ಗಳಷ್ಟು ಹಣವನ್ನು ನೀಡಿದ್ದನ್ನು ನೋಡಿದ್ದೇನೆ. ಆ ಹಣವನ್ನು ಒಟ್ಟುಗೂಡಿಸಲು ತಾವು ಎಷ್ಟು ಕಷ್ಟಪಟ್ಟಿದ್ದೀರೆಂಬುದನ್ನು ಬಲ್ಲ ನನಗೆ ಇದರಿಂದ ಆಶ್ಚರ್ಯಾಘಾತಗಳುಂಟಾದವು. ಗೌರವಾನ್ವಿತ ಅವ್ದೋತ್ಯ ರೊಮಾನೊವಿಚ್ ಅವರಿಗೆ ನನ್ನ ಗೌರವಪೂರ್ವಕ ವಂದನೆಗಳನ್ನು ತಲುಪಿಸಬೇಕೆಂದು ಕೋರುತ್ತಾ ತಾವೂ ನನ್ನ ಭಕ್ತಿಪೂರ್ವಕ ಪ್ರಣಾಮಗಳನ್ನು ಒಪ್ಪಿಸಿಕೊಳ್ಳಬೇಕೆಂದು ಕೋರುವ
ತಮ್ಮ ವಿಧೇಯ ಸೇವಕ
ಪೀಟರ್ ಪೆಟ್ರೊವಿಚ್ ಲುಷಿನ್
‘ಈಗ ನಾನೇನು ಮಾಡಲಿ, ದ್ಮಿತ್ರೀ? ಬರಬೇಡವೆಂದು ನಮ್ಮ ರೋದ್ಯಾಗೆ ಹೇಗೆ ಹೇಳಲಿ? ನಾವು ಪೀಟರ್ ಪೆಟ್ರೊವಿಚ್ ನ ಮದುವೆಯ ಪ್ರಸ್ತಾಪವನ್ನು ಒಪ್ಪಬಾರದೆಂದು ಅವನು ಅಷ್ಟು ದೃಢವಾಗಿ ಒತ್ತಾಯ ಮಾಡಿ ಹೇಳಿದ್ದಾನೆ. ನನ್ನ ಮಗನನ್ನು ಭೇಟಿಯಾಗಬಾರದೆಂದು ಈಗ ಪೀಟರ್ ಪೆಟ್ರೋವಿಚ್ ಹೇಳುತ್ತಿದ್ದಾನೆ. ಅವನಿರುವಾಗಲೇ ನನ್ನ ಮಗ ಬಂದರೆ ಏನಾಗಬಹುದು! ಏನು ಮಾಡಲಿ ನಾನು?’ ಹೀಗೆ ಕೇಳುವಾಗ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾಳ ಕಣ್ಣು ತುಂಬಿದ್ದವು.
‘ನಿಮ್ಮ ಮಗಳು ಹೇಗೆ ತೀರ್ಮಾನ ಮಾಡಿದ್ದಾರೋ ಹಾಗೆ ನಡೆದುಕೊಳ್ಳಿ,’ ಎಂದು ರಝುಮಿಖಿನ್ ಶಾಂತವಾದ ದನಿಯಲ್ಲಿ ತಟ್ಟನೆ ಉತ್ತರಿಸಿದ.
‘ಅಯ್ಯೋ ದೇವರೇ! ಅವಳು ಹೇಳತಾಳೆ, ಏನಂದರೆ… ಯಾಕೋ ಏನೋ ಗೊತ್ತಿಲ್ಲ… ಅವಳೂ ವಿವರವಾಗಿ ಹೇಳಲಿಲ್ಲ… ಹೇಳತಾಳೆ, ನಾಳೆ ರೋದ್ಯ ಕೂಡ ಬರೋದು ವಾಸಿ, ಅಷ್ಟೇ ಅಲ್ಲ, ಬಂದೇ ಬರಬೇಕು, ಅವರಿಬ್ಬರ ಭೇಟಿ ಆಗಲೇಬೇಕು ಅನ್ನತಾಳೆ. ನನಗಂತೂ ಈ ಕಾಗದವನ್ನ ಮಗನಿಗೆ ತೋರಿಸುವುದಕ್ಕೂ ಇಷ್ಟ ಇಲ್ಲ. ನಿನ್ನ ಕೇಳಿ, ನಿನ್ನ ಜೊತೆ ಸೇರಿಕೊಂಡು ಏನಾದರೂ ಉಪಾಯ ಮಾಡಿ ಅವನು ಬರದೆ ಇರುವ ಹಾಗೆ ನೋಡಿಕೊಳ್ಳಣ ಅಂತಿದ್ದೆ. ಯಾಕೆ ಅಂದರೆ ಅವನಿಗೆ ಸಿಟ್ಟು ಜಾಸ್ತಿ. ಅಲ್ಲದೇನೇ ನನಗೆ ಅರ್ಥ ಆಗಿಲ್ಲದೇ ಇರೋದು ಏನು ಅಂದರೆ ಅದ್ಯಾವನೋ ಕುಡುಕನ ಮಗಳಿಗೆ ದುಡ್ಡು ಯಾಕೆ ಕೊಟ್ಟ ಅದೂ ನಮ್ಮ ಹತ್ತಿರ ಇದ್ದದ್ದು ಅಷ್ಟೇ ದುಡ್ಡು…’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
‘ಅದೂ ನೀನು ಎಷ್ಟು ಕಷ್ಟಪಟ್ಟು ಹೊಂದಿಸಿದ ದುಡ್ಡು ಅಮ್ಮಾ!’ ಅಂದಳು ದುನ್ಯಾ.
‘ನಿನ್ನೆ ಅವನಿಗೆ ಮೈ ಮೇಲೆ ಪೂರ ಎಚ್ಚರ ಇರಲಿಲ್ಲ. ನಿನ್ನೆ ಸಾಯಂಕಾಲ ಹೆಂಡದಂಗಡಿಯಲ್ಲಿ ಅವನು ಏನೇನು ಮಾತಾಡಿದ ಅಂತ ನಿಮಗೆ ಗೊತ್ತಿಲ್ಲ. ಜಾಣ ಮಾತು ಸರೀನೇ, ಆದರೂ ಅವನ ತಲೆ ಎಲ್ಲೆಲ್ಲೋ ಓಡತಾ ಇತ್ತು, ಹ್ಞೂಂ! ನಿನ್ನೆ ನಾವು ಮನೆಗೆ ಹೋಗತಾ ಇರುವಾಗ ಅವನು ಯಾರೋ ಕುಡುಕ ಸತ್ತ ವಿಚಾರ, ಅವನ ಮಗಳ ವಿಚಾರ ಹೇಳತಾ ಇದ್ದ. ಒಂದು ಮಾತೂ ನನಗೆ ತಿಳೀಲಿಲ್ಲ. ನಾನೂ ಕುಡಿದಿದ್ದೆ ಅನ್ನೀ…’ ರಝುಮಿಖಿನ್ ಯೋಚನೆ ಮಾಡುತ್ತ ಹೇಳಿದ.
‘ಬೆಸ್ಟ್ ಅಂದರೆ ಏನು ಗೊತ್ತಾಮ್ಮಾ… ನಾವೇ ಅಣ್ಣನ ರೂಮಿಗೆ ಹೋಗಣ, ಎಲ್ಲಾ ಸೇರಿ ಮುಂದೆ ಏನು ಮಾಡಬೇಕು ತೀರ್ಮಾನ ಮಾಡಣ. ಅಲ್ಲದೇನೇ, ಈಗ ಟೈಮಾಯಿತು… ಅಯ್ಯೋ ದೇವರೇ, ಆಗಲೇ ಹತ್ತು ಗಂಟೇ!’ ಕೊರಳಿಗೆ ವೆನೀಶಿಯನ್ ಸರಪಣಿಯಲ್ಲಿ ನೇತು ಹಾಕಿಕೊಂಡಿದ್ದ ಬಂಗಾರದ ಗಡಿಯಾರ ನೋಡುತ್ತ ದುನ್ಯಾ ಉದ್ಗಾರ ಮಾಡಿದಳು. ಆ ಗಡಿಯಾರ ಅವಳ ಮಿಕ್ಕ ಉಡುಪು, ಅಲಂಕಾರಗಳ ಜೊತೆ ಒಂದಿಷ್ಟೂ ಹೊಂದುತ್ತಿರಲಿಲ್ಲ. ‘ಭಾವೀ ಪತಿ ಕೊಟ್ಟಿರುವ ಉಡುಗೊರೆ,’ ಅಂದುಕೊಂಡ ರಝುಮಿಖಿನ್.
‘ಹೊತ್ತಾಯಿತು, ಹೊತ್ತಾಯಿತು, ದುನ್ಯಾ ಹೊತ್ತಾಯಿತು. ನಾನು ಹೊರಡಬೇಕು. ತಡವಾದರೆ ನಾವಿನ್ನೂ ನಿನ್ನೆಯ ವಿಚಾರಕ್ಕೆ ಸಿಟ್ಟುಮಾಡಿಕೊಂಡೇ ಇದೇವೆ ಅಂದುಕೊಳ್ಳತಾನೆ. ನಡಿ, ನಡಿ, ಹೊರಡು!’ ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ ದಡಬಡಿಸಿದಳು.
ಮಾತಾಡುತ್ತಲೇ ಭುಜದ ಮೇಲೆ ಕೇಪ್ ಎಸೆದುಕೊಂಡಳು, ತಲೆಗೆ ಹ್ಯಾಟು ಇಟ್ಟುಕೊಂಡಳು. ದುನ್ಯಾ ಕೂಡ ಸಿದ್ಧವಾದಳು. ಅವಳ ಗ್ಲೌಸ್ ಹಳೆಯದಷ್ಟೇ ಅಲ್ಲ ಹರಿದೂ ಹೋಗಿವೆ ಎಂದು ರಝುಮಿಖಿನ್ ಗಮನಿಸಿದ. ಹಳೆಯ ಉಡುಪನ್ನು ಹೇಗೆ ಧರಿಸಬೇಕು ಎಂದು ಬಲ್ಲವರ ವಿಚಾರದಲ್ಲಿ ಆಗುವ ಹಾಗೆ ಈ ಇಬ್ಬರು ಹೆಂಗಸರಿಗೆ ಬಡತನವೂ ಕೂಡ ವಿಶೇಷ ಘನತೆಯನ್ನು ತಂದುಕೊಂಟ್ಟಂತಿತ್ತು.
ರಝುಮಿಖಿನ್ ದುನ್ಯಾಳನ್ನು ಭಯ ಭಕ್ತಿಗಳಿಂದ ನೋಡುತ್ತ ಅವಳ ಕಾವಲಿನವನಾಗಿ ಹೋಗುವುದೇ ಮಹಾ ಭಾಗ್ಯ ಅಂದುಕೊಂಡ. ‘ಸೆರೆಮನೆಯಲ್ಲಿದ್ದ ಆ ರಾಣಿ ವೈಭವದ ಉಡುಪು ಧರಿಸಿದ ರಾಣಿಯಲ್ಲ, ಸೆರೆಮನೆಯಲ್ಲಿ ತನ್ನ ಕಾಲು ಚೀಲಕ್ಕೆ ತಾನೇ ತೇಪೆ ಹಾಕುತ್ತಿರುವ ನಿಜವಾದ ರಾಣಿಯ ಹಾಗೆ ಕಾಣುತ್ತಿದ್ದಳು,’ ಅಂದುಕೊಂಡ.
‘ಅಯ್ಯೋ ದೇವರೇ, ನನ್ನ ಸ್ವಂತ ಮಗನನ್ನು ನೋಡುವುದಕ್ಕೇ ಹೆದರಿಕೊಳ್ಳುವ ಕಾಲ ಬರತ್ತೆ ಅಂದುಕೊಂಡಿರಲಿಲ್ಲ! ಭಯ ಆಗತಿದೆ ದ್ಮಿತ್ರೀ!’ ಅಂದಳು ಪುಲ್ಚೇರಿಯ ಅಲೆಕ್ಸಾಂಡ್ರೋವ್ನಾ.
ಅಮ್ಮನಿಗೆ ಮುತ್ತಿಡುತ್ತಾ ‘ಹೆದರಿಕೋಬೇಡಮ್ಮಾ, ನೀನೂ ನನ್ನ ಹಾಗೆ ಅವನ ಮೇಲೆ ನಂಬಿಕೆ ಇಡು,’ ಅಂದಳು ದುನ್ಯಾ.
‘ಅಯ್ಯೋ ದೇವರೇ, ನಂಬತೀನಮ್ಮಾ. ಇಡೀ ರಾತ್ರಿ ನಿದ್ದೇನೇ ಬರಲಿಲ್ಲ,’ ಅಂದಳು ಅಮ್ಮ.
ರಸ್ತೆಗೆ ಬಂದರು. ಹೆಜ್ಜೆ ಹಾಕಿದರು.
‘ಗೊತ್ತಾ ದುನ್ಯಾ, ಬೆಳಗಿನಜಾವದ ಹೊತ್ತಿಗೆ, ಸ್ವಲ್ಪ ಕಣ್ಣು ಹತ್ತಿದಾಗ, ಇದ್ದಕಿದ್ದ ಹಾಗೆ ಮಾರ್ಫಾ ಪಟ್ರೋವ್ನಾ ಕನಸಿನಲ್ಲಿ ಬಂದಿದ್ದಳು. ಪೂರಾ ಬಿಳೀ ಬಟ್ಟೆ ತೊಟ್ಟಿದ್ದಳು. ನನ್ನ ಹತ್ತಿರ ಬಂದು ಕೈ ಹಿಡಿದುಕೊಂಡಳು. ನಾನು ಮಾಡುತಾ ಇರೋದು ಒಪ್ಪಿಗೆ ಇಲ್ಲ ಅನ್ನುವ ಹಾಗೆ ತಲೆ ಆಡಿಸಿದಳು. ಇದೇನು ಒಳ್ಳೇ ಕನಸೊ, ಕೆಟ್ಟ ಕನಸೊ? ಆಹ್, ದ್ಮಿತ್ರಿ, ನಿನಗೆ ಮಾರ್ತಾ ಮಾರ್ಫಾ ಗೊತ್ತಾ? ಅವಳು ಸತ್ತು ಹೋಗಿದಾಳೆ.’
‘ಇಲ್ಲ, ಯಾರು ಅದು, ಮಾರ್ಫಾ ಪೆಟ್ರೋವ್ನಾ?’
‘ಇದ್ದಕಿದ್ದ ಹಾಗೆ ಸತ್ತು ಹೋದಳು. ಇವತ್ತು ಬೆಳಗಿನ ಜಾವ…’
‘ಅಮ್ಮಾ, ಅದೆಲ್ಲಾ ಆಮೇಲೆ. ಮಾರ್ತಾ ಯಾರು ಅಂತ ಅವರಿಗೆ ಗೊತ್ತೇ ಇಲ್ಲ,’ ಅನ್ನುತ್ತಾ ದುನ್ಯಾ ತಾಯಿಯ ಮಾತನ್ನು ತಡೆದಳು.
‘ಅಯ್ಯೋ, ನಿನಗೆ ಗೊತ್ತಿಲ್ಲವಾ? ನಿನಗೆ ಎಲ್ಲಾನೂ ಗೊತ್ತಿದೆ ಅಂದುಕೊಂಡಿದ್ದೆ. ತಪ್ಪು ತಿಳಕೋಬೇಡಪ್ಪ. ದ್ಮಿತ್ರೀ, ಅಯ್ಯೋ, ನನ್ನ ತಲೆ ಕೆಟ್ಟಿದೆ. ನೀನು ನಮ್ಮೂರಿನವನೇ, ನಮ್ಮನೆಯವನೇ ಎಲ್ಲಾ ವಿಚಾರ ನಿನಗೂ ತಿಳಿದಿದೆ ಅಂತ ಹಾಗಂದೆ… ನಮ್ಮನೆಯವನೇ ಅಂದಿದ್ದಕ್ಕೆ ಸಿಟ್ಟಿಲ್ಲ ತಾನೇ. ಅಯ್ಯೋ ದೇವರೇ, ನಿನ್ನ ಬಲಗೈಗೆ ಏನಾಗಿದೆ? ಏಟಾಯಿತಾ?’
ಅತೀ ಖುಷಿಪಟ್ಟ ರಝುಮಿಖಿನ್, ‘ಹೌದು, ಏಟಾಯಿತು,’ ಅಂದ.
‘ಒಂದೊಂದು ಸಾರಿ ಮನಸಿನಲ್ಲಿ ಇರೋದೆಲ್ಲ ಹೇಳಿಬಿಡತೇನೆ, ನಮ್ಮ ದುನ್ಯಾ ತಡೀತಾಳೆ… ಅಲ್ಲಾ, ಅಷ್ಟು ಗುಬ್ಬಚ್ಚಿಗೂಡಿನ ಹಾಗಿರುವ ಕೋಣೆಯಲ್ಲಿ ಹ್ಯಾಗಿದಾನೆ ಅವನು! ಇಷ್ಟು ಹೊತ್ತಿಗೆ ಎದ್ದಿರತಾನಾ? ಆ ಓನರಮ್ಮ ಬಿಲದ ಹಾಗಿರುವ ಜಾಗನ ರೂಮು ಅಂತ ಕರೆದು ಬಾಡಿಗೆ ತಗೋತಾಳಲ್ಲಾ? ಅವನು ಮನಸಿನಲ್ಲಿರೋದು ಹೇಳಿಕೊಳ್ಳಲ್ಲ ಅಂದೆ. ಅವನಿಗೆ ನನ್ನ ಮನಸು ವೀಕು ಅಂತ ಅನಿಸಿ ಹಾಗೆ ಮಾಡತಾನಾ? ನಾನು ಅವನ ಜೊತೆ ಹ್ಯಾಗಿರಲಿ, ಹೇಳೂ ದ್ಮಿತ್ರಿ. ನನಗೆ ಏನೂ ತಿಳೀತಿಲ್ಲ. ದಿಕ್ಕು ತಪ್ಪಿದ ಹಾಗಾಗಿದೆ.’
‘ಅವನ ಆರೋಗ್ಯದ ಬಗ್ಗೆ ಏನೂ ಕೇಳಬೇಡಿ, ಅವನಿಗೆ ಇಷ್ಟ ಆಗಲ್ಲ. ಅವನೇನಾದರೂ ಮುಖ ಹಿಂಡಿಕೊಂಡರೆ ಯಾವ ವಿಚಾರಾನೂ ಕೇಳಬೇಡಿ. ಅದರಲ್ಲೂ ಆರೋಗ್ಯ ಮಾತ್ರ ಹೇಗಿದೆ ಅನ್ನಲೇ ಬೇಡಿ.’
‘ಅಯ್ಯೋ ದ್ಮಿತ್ರೀ, ಹೆತ್ತ ತಾಯಿಗೆ ಎಷ್ಟು ಕಷ್ಟ ಆಗತ್ತೆ ಗೊತ್ತಾ ನಿನಗೆ? ಇಗೋ ಮೆಟ್ಟಿಲು… ಎಷ್ಟು ದರಿದ್ರವಾಗಿವೆ…’
‘ಅಮ್ಮಾ.. ನಿನ್ನ ಮುಖ ನೋಡು ಹ್ಯಾಗಾಗಿದೆ. ಟೆನ್ಶನ್ ತಗೋಬೇಡ, ಸಮಾಧಾನವಾಗಿರು. ನಿನ್ನ ನೋಡಿ ಅವನಿಗೆ ಖುಷಿ ಆಗಬೇಕು. ನೀನು ಸುಮ್ಮನೆ ಇಲ್ಲದ್ದೆಲ್ಲ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳತೀಯ,’ ಅನ್ನುತ್ತ ದುನ್ಯಾ ಕಣ್ಣು ಮಿಂಚಿಸಿದಳು.
‘ಸ್ವಲ್ಪ ತಾಳಿ. ಎದ್ದಿದಾನಾ? ಹೋಗಿ ನೋಡಿಕೊಂಡು ಬರತೇನೆ.’
ರಝುಮಿಖಿನ್ ಮೊದಲು ಮೆಟ್ಟಿಲು ಹತ್ತಿದ. ಹೆಂಗಸರು ಅವನ ಹಿಂದೆ ನಡೆದರು.
ಅವರು ನಾಲ್ಕನೆಯ ಮಹಡಿಯ ತಿರುವಿಗೆ ಬಂದರು. ಓನರಮ್ಮನ ಮನೆಯ ಬಾಗಿಲು ಸ್ವಲ್ಪವೇ ತೆರೆದಿತ್ತು. ಚುರುಕಾದ ಜೋಡಿ ಕಪ್ಪುಕಣ್ಣು ಅವರನ್ನ ಪರೀಕ್ಷಿಸುವ ಹಾಗೆ ಇಣುಕಿನೋಡುತ್ತಿದ್ದವು. ಅವರ ದೃಷ್ಟಿಗಳು ಕಲೆತಾಗ ಬಾಗಿಲು ದಢಾರನೆ ಮುಚ್ಚಿಕೊಂಡಿತು. ಆ ಸದ್ದಿಗೆ ಪುಲ್ಚೇರಿಯ ಅಲೆಕ್ಸಾಂಡ್ರಿಯ ಬೆದರಿದಳು.
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.