ಇತ್ತೀಚೆಗೆ ತೇಜಸ್ವಿ ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಎನ್.ಎಸ್.ಶಂಕರ್, “ಫ್ರಾಂಜ್ ಕಾಫ್ಕಾನ ‘ದಿ ಟ್ರಯಲ್’ ಕಾದಂಬರಿಯಲ್ಲಿ ಬರುವ ‘ಕೆ’ ಪಾತ್ರಧಾರಿಯನ್ನು ಪೊಲೀಸರು ಇದ್ದಕ್ಕಿದ್ದಂತೆ ಒಂದು ದಿನ, ಯಾವ ಅಪರಾಧವನ್ನು ಮಾಡಿರದಿದ್ದರೂ ಎಳೆದುಕೊಂಡು ಹೋಗುತ್ತಾರೆ. ವಿನಾಕಾರಣ ವಿಚಾರಣೆಗೊಳಪಡಿಸಿ, ಒಂದು ದಿನ ಗುಂಡಿಟ್ಟು ಕೊಲ್ಲುತ್ತಾರೆ… ಇಲ್ಲಿ ಈ ಕಾದಂಬರಿಯನ್ನು ಮತ್ತದರ ಕರ್ತೃ ಕಾಫ್ಕಾನ ಹಿನ್ನೆಲೆಯನ್ನು ಅರಿಯದೆ ಸುಮ್ಮನೆ ಪುಸ್ತಕ ಓದಿದರೆ, ಅದು ಒಂದು ಕತೆಯಷ್ಟೆ. ಆದರೆ ಕಾಫ್ಕಾ ಒಬ್ಬ ಯಹೂದಿಯಾಗಿದ್ದು, ಆತ ಬರೆಯುವ ಕಾಲದ ಸಂದರ್ಭವನ್ನು, ಯಹೂದಿಗಳ ಸ್ಥಿತಿಗತಿಯನ್ನು ಅರಿತಿದ್ದರೆ ಈ ಕಾದಂಬರಿ ಕೊಡುವ ಕಾಣ್ಕೆಯೇ ಬೇರೆ…” ಎಂದರು.
ಈ ಮೇಲಿನ ಪ್ರಸಂಗವನ್ನು ನಾನು ಯಾಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ, ಇತ್ತೀಚೆಗೆ ಅಕಿರ ಕುರುಸೋವಾರ ‘ಐ ಲೀವ್ ಇನ್ ಫಿಯರ್’ ಎಂಬ ಸಿನಿಮಾ ನೋಡಿದೆ. ಈ ಚಿತ್ರವನ್ನು ಒಂದು ಚಿತ್ರವಾಗಿ ನೋಡಿದರೆ, ಬೇಸರ ಹುಟ್ಟಿಸುತ್ತದೆ. ಆದರೆ, ಎರಡನೆ ಮಹಾಯುದ್ಧದಲ್ಲಿ, ಹಿರೋಷಿಮಾ-ನಾಗಸಾಕಿಗಳ ಮೇಲೆ ಬಿದ್ದ ಬಾಂಬ್‌ಗಳಿಂದ ಜಪಾನಿಯರು ಅನುಭವಿಸಿದ ಮಾನಸಿಕ ಯಾತನೆ, ದೈಹಿಕ ದುಷ್ಪರಿಣಾಮಗಳು, ಅವರ ಮನಸ್ಸಿನ ಮೇಲೆ ಅಚ್ಚಳಿಯದೇ ಉಳಿದ ಕಹಿನೆನಪುಗಳ ಅರಿವಿದ್ದರೆ… ಕುರುಸೋವಾನ ಚಿತ್ರ ನಿಮ್ಮ ಚಿತ್ತ ಕೆಡಿಸುತ್ತದೆ.
ಕುರುಸೋವಾ ‘ಐ ಲೀವ್ ಇನ್ ಫಿಯರ್’ ಚಿತ್ರ ಮಾಡಿದ್ದು ೧೯೫೫ರಲ್ಲಿ. ಅಂದರೆ ಎರಡನೆ ಮಹಾಯುದ್ಧವಾಗಿ ಹತ್ತು ವರ್ಷಗಳ ನಂತರ. ಮಹಾಯುದ್ಧದ ಕರಿನೆರಳು ಜಪಾನಿಯರ ಮನಸ್ಸಿನಿಂದ ಇನ್ನೂ ಮರೆಯಾಗಿರಲಿಲ್ಲ. ಕಪ್ಪು ಬಿಳುಪಿನ ಈ ಚಿತ್ರ ಒಂದು ಕುಟುಂಬದ, ಅಪ್ಪ-ಮಕ್ಕಳ ನಡುವಿನ ಆಸ್ತಿ ಹಂಚುವಿಕೆಯ, ಅಪ್ಪನ ಭವಿಷತ್ತಿನ ಭದ್ರ ಬದುಕನ್ನು ಮಕ್ಕಳು ತಿರಸ್ಕರಿಸುವ ಕತೆಯನ್ನು ಹೇಳುತ್ತಲೇ ಇಡೀ ದೇಶದ ಸ್ಥಿತಿಯನ್ನು ಹೇಳುತ್ತದೆ.
ಕುರುಸೋವಾರ ಹೆಚ್ಚುಗಾರಿಕೆ ಇರುವುದೇ ಕತೆ ಕಟ್ಟುವ ವಿಧಾನದಲ್ಲಿ. ಈತನ ಸೆವನ್ ಸಮುರಾಯ್, ರಶೋಮನ್, ಇಕಿರು ಚಿತ್ರಗಳಾದ ಮೇಲೆ ಬಂದ ಚಿತ್ರ ‘ಐ ಲೀವ್ ಇನ್ ಫಿಯರ್.’ ಸೆವನ್ ಸಮುರಾಯ್ ಮತ್ತು ರಶೋಮನ್ ಚಿತ್ರಗಳು ಪ್ರಪಂಚದ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿದ ಸರ್ವಶ್ರೇಷ್ಠ ಚಿತ್ರಗಳು. ಪ್ರಪಂಚದಾದ್ಯಂತ ಚಿತ್ರಪ್ರೇಮಿಗಳನ್ನು ಪ್ರೇರೇಪಿಸಿದ, ಪ್ರಭಾವಿಸಿದ ಈ ಚಿತ್ರಗಳು ಜಗತ್ತಿನ ಎಲ್ಲಾ ಭಾಷೆಯ ನಿರ್ದೇಶಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಸ್ಫೂರ್ತಿ ನೀಡಿವೆ. ಆ ದಿಸೆಯಲ್ಲಿ ಬಂದ ಚಿತ್ರಗಳಿಗೆ ಲೆಕ್ಕವಿಲ್ಲ. ತಮಿಳಿನ ಅಂದನಾಳ್‌ನಿಂದ ಹಿಡಿದು ಹಿಂದಿಯ ಶೋಲೆಯವರೆಗೆ, ಇಂಗ್ಲಿಷ್‌ನ ದಿ ಔಟ್‌ರೇಜ್‌ನಿಂದ ಹಿಡಿದು ಚೈನಾ ಗೇಟ್‌ವರೆಗೆ ಎಲ್ಲಾ ದೇಶದ ಎಲ್ಲರೂ ಕುರುಸೋವಾರ ಚಿತ್ರಗಳಿಂದ ಪ್ರಭಾವಿತರಾಗಿದ್ದಾರೆ, ಅವರ ಚಿತ್ರಗಳ ಅಂಶಗಳನ್ನು ತಮ್ಮ ನೆಲ ಬಯಸುವ ಬಗೆಯಲ್ಲಿ ಬಳಸಿಕೊಂಡಿದ್ದಾರೆ. ನಮ್ಮ ಕನ್ನಡದ ಗಿರೀಶ್ ಕಾಸರವಳ್ಳಿಯವರ ‘ತಾಯಿ ಸಾಹೇಬ’ ಚಿತ್ರದ ಕೆಲವೊಂದು ದೃಶ್ಯಗಳಲ್ಲೂ ಕುರುಸೋವಾರನ್ನು ಕಾಣಬಹುದು.
ಇರಲಿ, ಅದು ಕುರುಸೋವಾರ ತಾಖತ್ತಿಗೆ ಸಂಬಂಧಿಸಿದ ವಿಚಾರ. ಇಲ್ಲಿ, ‘ಐ ಲೀವ್ ಇನ್ ಫಿಯರ್’ ಚಿತ್ರದಲ್ಲಿ, ಕಲ್ಲಿದ್ದಲು ಕಾರ್ಖಾನೆಯ ವಯಸ್ಸಾದ ಮಾಲೀಕ ಬಾಂಬ್ ಭಯದಿಂದ ನರಳುತ್ತಿದ್ದಾನೆ. ತಾನು ಮತ್ತು ತನ್ನ ಕುಟುಂಬ ಈ ಬಾಂಬ್ ದಾಳಿಗೆ ಸಿಕ್ಕದೆ, ಸುರಕ್ಷಿತವಾಗಿ ಉಳಿಯಬೇಕಾದರೆ ಬ್ರೆಜಿಲ್‌ಗೆ ವಲಸೆ ಹೋಗುವುದೊಂದೇ ದಾರಿ ಎಂದು ನಿರ್ಧರಿಸಿದ್ದಾನೆ. ಹುಟ್ಟಿದವನು ಸಾಯಲೇಬೇಕು ನಿಜ, ಆದರೆ ಕೊಲ್ಲಲ್ಪಡಬಾರದು ಎಂಬುದು ಆತನ ವಾದ. ಆದರೆ ಮಕ್ಕಳು, ಅಪ್ಪ ಬಾಂಬ್ ಭ್ರಮೆಗೊಳಗಾಗಿರುವ ಹುಚ್ಚ ಎಂದು ಸಾಬೀತುಪಡಿಸಲು ಫ್ಯಾಮಿಲಿ ಕೋರ್ಟಿನ ಮೊರೆ ಹೋಗುತ್ತಾರೆ. ವಾದ-ಪ್ರತಿವಾದಗಳ ನಂತರ ಕೋರ್ಟು, ವಲಸೆ ವಾದದಲ್ಲಿ ಹುರುಳಿಲ್ಲ ಎಂದು ನಿರ್ಧರಿಸಿ, ಮಕ್ಕಳ ಪರವಾಗಿ ತೀರ್ಪು ನೀಡುತ್ತದೆ.
ವಯಸ್ಸಾದ ಕಲ್ಲಿದ್ದಲು ಕಾರ್ಖಾನೆ ಮಾಲೀಕ, ಕುಟುಂಬವನ್ನು ಕಾಪಾಡಲಿಕ್ಕಾಗದೆ ಕಸಿವಿಸಿಗೊಳಗಾಗುತ್ತಾನೆ. ಅದಕ್ಕಿಂತಲೂ ಹೆಚ್ಚಾಗಿ ಅಂತರ್ಮುಖಿಯಾಗುತ್ತಾನೆ. ಮನೆಯ ಮೇಲೆ ಏರೋಪ್ಲೇನ್ ಹಾರಾಟ ನಡೆಸಿದರೆ, ಭಯದಿಂದ ಅಡಗಿಕೊಳ್ಳಲು ಓಡುತ್ತಾನೆ. ಆಡುವ ಚಿಕ್ಕ ಮಗುವನ್ನು ಅವುಚಿಕೊಂಡು, ಬಾಂಬ್‌ನಿಂದ ರಕ್ಷಿಸಿದೆ ಎಂದು ಭ್ರಮಿಸುತ್ತಾನೆ. ಒಬ್ಬೊಬ್ಬನೆ ಹುಚ್ಚನಂತೆ ಅಲೆಯುತ್ತಾನೆ.
ಈ ಮಧ್ಯೆ ಕೋರ್ಟಿನಲ್ಲಿ ತೀರ್ಪಿತ್ತವರಲ್ಲಿ ಒಬ್ಬನಾದ ಹಲ್ಲಿನ ಡಾಕ್ಟರ್‌ಗೆ, ತಾನು ತಪ್ಪು ಮಾಡಿದ್ದೇನೆ ಎಂಬ ಪಾಪಪ್ರಜ್ಞೆ ಕಾಡಲಾರಂಭಿಸುತ್ತದೆ. ದಾರಿ ಮಧ್ಯೆ ಹುಚ್ಚನಂತೆ ಅಲೆಯುವ ಆ ಮುದುಕನನ್ನು ಅಚಾನಕ್ಕಾಗಿ ಕಂಡು ಗಾಬರಿಗೊಳಗಾಗುತ್ತಾನೆ. ಯಾಕೆಂದರೆ, ಕೋರ್ಟಿನಲ್ಲಿ ಈತ ಆ ಮುದುಕನಿಗೆ, ‘ನಿನಗೆ ಭಯವೆ’ ಎಂದು ಪ್ರಶ್ನಿಸಿರುತ್ತಾನೆ. ಇವತ್ತು ಆತ ಎದುರಿಗೆ ಸಿಕ್ಕಾಗ ಮಾತು ಬಾರದೆ, ದಿಗ್ಭ್ರಮೆಗೊಳಗಾದವನಂತೆ ನಿಲ್ಲುತ್ತಾನೆ. ಅಷ್ಟೇ ಅಲ್ಲ, ಆ ಮುದುಕ, ‘ಮೊದಲು ಭಯವಿರಲಿಲ್ಲ, ಈಗ ಭಯದಿಂದ ನರಳುತ್ತಿದ್ದೇನೆ’ ಎಂದದ್ದು ಇವನನ್ನು ಖಿನ್ನತೆಗೆ ದೂಡುತ್ತದೆ.
ಇಷ್ಟಾದರೂ ಆ ಮುದುಕ ತನ್ನ ಕುಟುಂಬವನ್ನು ಬಾಂಬ್‌ನಿಂದ ರಕ್ಷಿಸಲು, ಬ್ರೆಜಿಲ್‌ನಲ್ಲಿ ಭೂಮಿ ಖರೀದಿಸಿ ನೆಮ್ಮದಿಯಿಂದ ಬದುಕಲು ಮುಂದಾಗುತ್ತಾನೆ. ಸಾಧ್ಯವಾಗದಿದ್ದಾಗ ಕೊನೆಗೊಂದು ದಿನ, ತನ್ನ ಕಣ್ಣೆದುರೆ ತನ್ನ ಕುಟುಂಬ ನಾಶವಾಗುವುದನ್ನು ನೆನೆದು, ಮಕ್ಕಳ ಮನಸ್ಸು ಇದರಿಂದಲಾದರೂ ಬದಲಾಗಬಹುದು ಎಂಬ ಭ್ರಮೆಯಲ್ಲಿ ತಾನೆ ಕಟ್ಟಿ ಬೆಳೆಸಿದ್ದ ಕಾರ್ಖಾನೆಗೆ ಬೆಂಕಿ ಹಾಕುತ್ತಾನೆ.
ಅಲ್ಲಿಯವರೆಗೂ ಆ ಮುದುಕ, ಅವನ ಕುಟುಂಬ, ಬಾಂಬ್ ಭಯ… ಅಷ್ಟಕ್ಕೇ ಸೀಮಿತವಾಗಿ ಅವುಗಳ ಸುತ್ತಲೇ ಸುತ್ತುತ್ತಿದ್ದ ಕತೆ, ಬೆಂಕಿಯಲ್ಲಿ ಬೆಂದು ಬೂದಿಯಾದ ಕಾರ್ಖಾನೆಯೆದುರು ನಿಂತ ಕಾರ್ಮಿಕ, ‘ನೀನೇನೋ ಬೆಂಕಿ ಹಾಕಿದೆ, ಮುಂದೆ ನಮ್ಮ ಗತಿ ಏನು’ ಎಂದಾಕ್ಷಣ, ಆ ಮುದುಕನಿಗೆ ಮಿಂಚು ಹೊಳೆದಂತಾಗುತ್ತದೆ. ಹಾಗೆಯೇ ಕತೆಗೆ ಹೊಸ ವಿಸ್ತಾರ ಸಿಕ್ಕಿ, ಚಿತ್ರ ಕುತೂಹಲದ ಕಡಲಾಗುತ್ತದೆ.
ಅತ್ತ ವಿಮೆ ಹಣದ ಆಸೆಗಾಗಿ ಕಾರ್ಖಾನೆಗೆ ಬೇಕಂತಲೇ ಬೆಂಕಿ ಹಾಕಿದ್ದಾನೆ ಎಂಬ ಆಪಾದನೆ ಹೊತ್ತ ಮುದುಕ ಜೈಲು ಪಾಲಾಗುತ್ತಾನೆ. ಜೈಲಿನಲ್ಲಿ ಖೈದಿಗಳು ಇವನನ್ನು ನೋಡಿ, ‘ಬ್ರೆಜಿಲ್‌ಗೆ ಬಾಂಬ್ ಬೀಳುವುದಿಲ್ಲವೆ, ಬಾಂಬ್‌ನಿಂದ ಪಾರಾಗಬೇಕೆಂದರೆ ಪರಲೋಕವಾಸಿಯಾಗುವುದೊಂದೇ ದಾರಿ’ ಎಂದು ಗೇಲಿ ಮಾಡುತ್ತಾರೆ. ಆ ನಂತರ ಮಕ್ಕಳು ಮುದುಕನನ್ನು ಜೈಲಿನಿಂದ ಹುಚ್ಚಾಸ್ಪತ್ರೆಗೆ ವರ್ಗಾಯಿಸುತ್ತಾರೆ.
ಏತನ್ಮಧ್ಯೆ ಪಾಪಪ್ರಜ್ಞೆಯಿಂದ ನರಳುತ್ತಿರುವ ಹಲ್ಲಿನ ಡಾಕ್ಟರ್ ಮುದುಕನನ್ನು ನೋಡಲು ಹುಚ್ಚಾಸ್ಪತ್ರೆಗೂ ಬರುತ್ತಾನೆ. ಆಸ್ಪತ್ರೆಯಲ್ಲಿ ಆ ಮುದುಕನ ಸ್ಥಿತಿ, ಅವನ ತೊಳಲಾಟ ಕಂಡು ಕಲ್ಲಿನಂತಾಗುತ್ತಾನೆ. ಆಗ ಆ ಮುದುಕ, ‘ನಿಮ್ಮ ಲೋಕ ಸುರಕ್ಷಿತವಾಗಿದೆಯೆ, ಸದ್ಯ ನಾನು ಅಲ್ಲಿಂದ ತಪ್ಪಿಸಿಕೊಂಡು ಬಂದುಬಿಟ್ಟೆ’ ಎಂದು ನಿರಾಳದ ನಿಟ್ಟುಸಿರು ಬಿಡುತ್ತಾನೆ. ಅಷ್ಟಾದರೂ ಹಲ್ಲಿನ ಡಾಕ್ಟರ್‌ಗೆ ಮಾತೇ ಹೊರಡುವುದಿಲ್ಲ.
ಇಬ್ಬರ ನಡುವೆ ದೊಡ್ಡದಾದ ಕಿಟಕಿ. ಆ ಕಿಟಕಿಯನ್ನು ದಾಟಿ ಹೊರಗಿನಿಂದ ಸೂರ್ಯನ ಪ್ರಖರವಾದ ಕಿರಣಗಳು ಕೋಣೆಯನ್ನು ತುಂಬುತ್ತಿವೆ. ಹೊರಗಿನ ಸೂರ್ಯ ಮುದುಕನ ಕಣ್ಣಿಗೆ ಬೆಂಕಿಯುಂಡೆಯಂತೆ ಕಾಣತೊಡಗುತ್ತಾನೆ. ಮತಿಭ್ರಮಣೆಗೊಳಗಾದ ಮುದುಕ, ‘ಅಯ್ಯೋ ಭೂಮಿ ಸುಟ್ಟು ಹೋಯಿತೆ?’ ಎಂದು ಹಲ್ಲಿನ ಡಾಕ್ಟರನ್ನು ಪ್ರಶ್ನಾರ್ಥಕವಾಗಿ ನೋಡುತ್ತಾನೆ. ಆ ಮುದುಕ ನೋಡುವ ನೋಟಕ್ಕೆ ಪಾಪಪ್ರಜ್ಞೆಯಿಂದ ನರಳುತ್ತಿರುವ ಹಲ್ಲಿನ ಡಾಕ್ಟರ್‌ನಲ್ಲಿ ಉತ್ತರವೇ ಇರುವುದಿಲ್ಲ…
ಬಾಂಬ್ ಭಯದಲ್ಲಿ ಬಿದ್ದು ಒದ್ದಾಡುವ ಆ ಮುದುಕ- ಕುರುಸೋವಾನ ಚಿತ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಲಾವಿದ- ತೊಶಿರೊ ಮಿಫುನೆ. ಈತ ಮುದುಕ ಕಿಚಿ ನಕಜಿಮಾನ ಪಾತ್ರದಲ್ಲಿ ನಟಿಸಿಲ್ಲ; ಪಾತ್ರವೇ ಅವನಾಗಿ ಜೀವಿಸಿಬಿಟ್ಟಿದ್ದಾನೆ. ಮಿಕ್ಕವರೂ ಕೂಡ ಆ ಮುದುಕನ ಜೊತೆ ಬದುಕಿದ್ದಾರೆ.
ಕುರುಸೋವಾರ ಚಿತ್ರಕಶಕ್ತಿ ಕಾಣುವುದೇ ಇಂತಹ ಸರಳ, ಸೂಕ್ಷ್ಮ ಸಂಗತಿಗಳನ್ನು ತೆರೆಗೆ ತರುವ ಜಾಣ್ಮೆಯಲ್ಲಿ. ಯುದ್ಧ ತರುವ ತಳಮಳ, ಬಾಂಬ್ ಹುಟ್ಟಿಸುವ ಭಯ, ಅವೆಲ್ಲವನ್ನೂ ಒಂದು ಕುಟುಂಬಕ್ಕೆ ಕಟ್ಟಿಹಾಕಿ ಕತೆ ಕಟ್ಟಿಕೊಡುವ ಕುರುಸೋವಾ… ಜಸ್ಟ್ ಐ ಲೀವ್ ಇನ್ ಕುರುಸೋವಾ!
ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು.