ಸಾಹಿತ್ಯ ಲೋಕದ ನೂರಾರು ಐತಿಹಾಸಿಕ ಘಟನೆಗಳಿಗೆ ಇಲ್ಲಿ ಮರುಜೀವ ಬಂದಿದೆ. ಹಾಗಾಗಿ ಇದು ‘ಮತ್ತೊಂದು ಸಾಹಿತ್ಯ ಚರಿತ್ರೆ’ಯೂ ಆಗಿದೆ. ಹಾಗೇ ಇಲ್ಲಿ ನಾವರಿಯದ, ಆದರೆ ಸ್ವಾರಸ್ಯಕರ ವ್ಯಕ್ತಿಗಳೂ ಹಲವರಿದ್ದಾರೆ. ಹಾಗೇ ಅವರಿದ್ದ ವಲಯಗಳೂ ಹಲವು- ಕಾವ್ಯ ನಾಟಕ ಯಕ್ಷಗಾನ ಹರಿಕಥೆ ಸಂಘಟನೆ ಶಿಕ್ಷಣ ಸಾಮಾಜಿಕ ಹೋರಾಟ ಪ್ರಕಾಶನ ಕೃಷಿ ಇತ್ಯಾದಿ.
ಇದೇ ಭಾನುವಾರ ಬಿಡುಗಡೆಯಾಗಲಿರುವ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಆತ್ಮಕತೆ ‘ಕಾಲದೊಂದೊಂದೇ ಹನಿʼ ಗೆ ಹರೀಶ್‌ ಕೇರ ಬರೆದ ಮುನ್ನುಡಿ ನಿಮ್ಮ ಓದಿಗಾಗಿ

ಸಮಾಧಾನ ಚಿತ್ತದ ಸಹಸ್ರವೀಣೆ

ಚಾರ್ಲ್ಸ್ ಡಿಕನ್ಸ್ ತನ್ನ ಟೇಲ್ ಆಫ್ ಟೂ ಸಿಟೀಸ್ ಕಾದಂಬರಿಯನ್ನು ಹೀಗೆ ಆರಂಭಿಸುತ್ತಾನೆ: It was the best of times, it was the worst of times, it was the age of wisdom, it was the age of foolishness, it was the epoch of belief, it was the epoch of incredulity, it was the season of Light, it was the season of Darkness, it was the spring of hope, it was the winter of despair…, we had nothing before us, we were all going direct to Heaven, we were all going direct the other way..

ಇದು ಚೊಕ್ಕಾಡಿಯವರ ಆತ್ಮಕತೆಗೆ ಅಚ್ಚುಕಟ್ಟಾಗಿ ಹೊಂದಿಕೊಳ್ಳುವಂತಿದೆ. ಚೊಕ್ಕಾಡಿ ಹುಟ್ಟಿ ಬೆಳೆದು ಬದುಕಿ ಬರೆಯುತ್ತ ಇರುವ ಈ ಕಾಲಘಟ್ಟ ಒಂದು ಅಪೂರ್ವ ಸೊಗಸಿನಿಂದಲೂ ಸಾವಿರ ವೈರುಧ್ಯಗಳಿಂದಲೂ ಸೃಜನಶೀಲ ಸಂಕಟಗಳಿಂದಲೂ ಗಿಜಿಗುಡುತ್ತಿರುವಂಥದು. ಅವರ ಆತ್ಮಕತೆಯೆಂದರೆ ಇಂಥ ಮಿಡಿತ ತುಡಿತಗಳಿಂದ ಧ್ವನಿಗೊಡುತ್ತಿರುವ ಸಹಸ್ರವೀಣೆ. ಇಲ್ಲಿ ಸ್ವಾತಂತ್ರ್ಯೋತ್ತರದ ಆಶೆ ಆಶೋತ್ತರಗಳ ದಿನಗಳಂತೆಯೇ ದೇಶ ನಂತರ ಕಂಡ ನಿರಾಶೆಯ ದಿನಗಳೂ, ಕಾವ್ಯನಾಟಕಗಳ ಹುಚ್ಚು ಹುಮ್ಮಸ್ಸಿನ ಜೊತೆಗೇ ಯಾವ ಧ್ವನಿಯೂ ಯಾರನ್ನೂ ತಲುಪುವಂತೆ ಕಾಣೆ ಎನ್ನುವ ನಮ್ಮೀ ದಿನಗಳೂ ಬಿಂಬ ಪಡೆದುಕೊಂಡಿವೆ. ಇಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ ಮಾಡಿದ ಧ್ವಜಾರೋಹಣ ಹಾಗೂ ತಿಂದ ಹೆಸರುಬೇಳೆ ಪಾಯಸದ ಸವಿ ಇರುವಂತೆಯೇ, ತುರ್ತು ಪರಿಸ್ಥಿತಿಯ ವಿರುದ್ಧ ಭೂಗತ ಕಾರ್ಯಾಚರಣೆ ನಡೆಸಿದ ನೆನಪುಗಳೂ ಇವೆ. ಒಂದು ಊರಿನ ಸಾಂಸ್ಕೃತಿಕ ಬನಿಯನ್ನು ಹೆಚ್ಚಿಸಿದ ಉಲ್ಲಾಸ ಇರುವಂತೆಯೇ, ಆ ಊರಿನ ಸಾಮಾಜಿಕ ಸಾಮರಸ್ಯದ ಪತನಕ್ಕೆ ಸಾಕ್ಷಿಯಾದ ನೋವೂ ಇದೆ.

ಚೊಕ್ಕಾಡಿಯವರ ಎಂಟು ದಶಕಗಳ ಜೀವನದ ಕತೆಯೆಂಬುದು, ಅವರದೇ ಕಾದಂಬರಿಯ ಶೀರ್ಷಿಕೆಯಲ್ಲಿ ಹೇಳುವುದಾದರೆ ಸಂತೆಮನೆ. ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜದ ಜೀವ ಅವರದು. ಈ ಬದುಕಿನ ಸಂತೆಯ ಶಬ್ದಗಳ ಒಳಗಿನಿಂದಲೇ ತನ್ನ ಕಾವ್ಯಕ್ಕೆ ಬೇಕಾದ ಪಟುವಾದ, ಸೂಕ್ಷ್ಮವಾದ, ಇಂದ್ರಿಯಗಳನ್ನು ತಟ್ಟಿ ಎಚ್ಚರಿಸಬಲ್ಲ ಶಬ್ದಗಳನ್ನು ಅವರು ಹೆಕ್ಕಿಕೊಂಡಿದ್ದಾರೆ ಎನ್ನಲು ಇದರಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ. ಬೆಂದರೆ ಬೇಂದ್ರೆಯಾಗುವಂತೆ, ಒರೆಗಲ್ಲಿಗೆ ತಿಕ್ಕಿ ಚೊಕ್ಕವಾದರೆ ಚೊಕ್ಕಾಡಿ. ಮಾತಿಗೊಂದು ಚಿನಕುರುಳಿ ಸಿಡಿಸುವ ಅವರ ಹಾಸ್ಯಪ್ರಜ್ಞೆ, ಜೀವನಪ್ರೀತಿ ಹೇಗೋ ಹಾಗೇ ಅನ್ಯಜೀವಗಳ ಮೇಲೂ ಪ್ರೀತಿ ಇಟ್ಟುಕೊಂಡವರಿಗೆ ಮಾತ್ರ ಸಾಧ್ಯವಾಗುವಂಥದು.

ಈ ಕತೆಯಲ್ಲಿ ‘ತಾನು’ ಮಾತ್ರ ಇಲ್ಲ. ಎಷ್ಟೊಂದು ಜನ ಬರುತ್ತಾರೆ. ಅವರ ವೈವಿಧ್ಯ ವೈಶಾಲ್ಯಗಳು ಕಣ್ಣು ಕೋರೈಸುತ್ತವೆ. ಸಣ್ಣತನ ಕ್ಷುದ್ರತೆಗಳೂ ಬೇಕಾದಷ್ಟಿವೆ. ಆದರೆ ಎಲ್ಲವೂ ಚೊಕ್ಕಾಡಿಯವರ ಕುದಿಯುವ ಕಡಾಯಿಯಲ್ಲಿ ಪಾಕವಾಗಿವೆ. ನವೋದಯದ ವರಕವಿ ಬೇಂದ್ರೆಯವರಿಂದ ಹಿಡಿದು ತನಗಿಂತ ಕಿರಿಯ ಕವಿ ಎಸ್ ಮಂಜುನಾಥರವರೆಗೆ, ಧ್ವನ್ಯಾಲೋಕದ ಸಿಡಿಎನ್ ಅವರಿಂದ ತನ್ನ ಸಹೋದ್ಯೋಗಿಗಳಾಗಿದ್ದ ಮೇಷ್ಟ್ರಗಳವರೆಗೆ, ನವ್ಯದ ನೇತಾರ ಗೋಪಾಲಕೃಷ್ಣ ಅಡಿಗರಿಂದ ಕಡಲತೀರದ ಕಡುಕೋಪಿ ಶಿವರಾಮ ಕಾರಂತರವರೆಗೆ, ಸಣ್ಣಕತೆಯ ಹಿರಿಯ ಮಾಸ್ತಿ ವೆಂಕಟೇಶ ಅಯ್ಯಂಗಾರರಿಂದ ಕಿರಿಯ ಕವಿ ಗೆಳೆಯ ಸತ್ಯನ್ ದೇರಾಜೆವರೆಗೆ ಇವರ ಒಡನಾಟದ ವ್ಯಾಪ್ತಿ ಹಬ್ಬಿದೆ.

ಕಾರಂತರ ಜೊತೆಗೂ ಮೂಕಜ್ಜಿಯ ಕನಸುಗಳು ವಿಚಾರದಲ್ಲಿ ಸಕಾರಣವಾಗಿ ಜಗಳವಾಡಿದ್ದನ್ನು ಅವರು ಉಲ್ಲೇಖಿಸುವಾಗ, ಚೊಕ್ಕಾಡಿಯವರ ವಿಮರ್ಶೆಯ ಧ್ವನಿಯ ರುಚಿಯೊಂದು ಇಲ್ಲಿ ನಮಗೆ ಸಿಗುತ್ತದೆ. ಕನ್ನಡ ಸಾಹಿತ್ಯ ಲೋಕದ ನೂರಾರು ಐತಿಹಾಸಿಕ ಘಟನೆಗಳಿಗೆ ಇಲ್ಲಿ ಮರುಜೀವ ಬಂದಿದೆ. ಹಾಗಾಗಿ ಇದು ‘ಮತ್ತೊಂದು ಸಾಹಿತ್ಯ ಚರಿತ್ರೆ’ಯೂ ಆಗಿದೆ. ಹಾಗೇ ಇಲ್ಲಿ ನಾವರಿಯದ, ಆದರೆ ಸ್ವಾರಸ್ಯಕರ ವ್ಯಕ್ತಿಗಳೂ ಹಲವರಿದ್ದಾರೆ. ಹಾಗೇ ಅವರಿದ್ದ ವಲಯಗಳೂ ಹಲವು- ಕಾವ್ಯ ನಾಟಕ ಯಕ್ಷಗಾನ ಹರಿಕಥೆ ಸಂಘಟನೆ ಶಿಕ್ಷಣ ಸಾಮಾಜಿಕ ಹೋರಾಟ ಪ್ರಕಾಶನ ಕೃಷಿ ಇತ್ಯಾದಿ.

ಈ ಬದುಕಿನ ಸಂತೆಯ ಶಬ್ದಗಳ ಒಳಗಿನಿಂದಲೇ ತನ್ನ ಕಾವ್ಯಕ್ಕೆ ಬೇಕಾದ ಪಟುವಾದ, ಸೂಕ್ಷ್ಮವಾದ, ಇಂದ್ರಿಯಗಳನ್ನು ತಟ್ಟಿ ಎಚ್ಚರಿಸಬಲ್ಲ ಶಬ್ದಗಳನ್ನು ಅವರು ಹೆಕ್ಕಿಕೊಂಡಿದ್ದಾರೆ ಎನ್ನಲು ಇದರಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ.

ಈ ಆತ್ಮಕತೆ ಬರೆದಿದ್ದಲ್ಲ, ಹೇಳಿ ಬರೆಸಿದ್ದು. ಬರೆಯುವಾಗ ನಡೆದದ್ದನ್ನೂ ಭಾವಿಸಿದ್ದನ್ನೂ ಕೆಲವೇ ಪದಗಳ ವ್ಯತ್ಯಾಸದಿಂದ ಪಾಲಿಶ್ ಮಾಡುವುದು ಸಾಧ್ಯ; ಮನಸ್ಸು ತನ್ನಿಂತಾನೇ ಇಂಥ ಮ್ಯಾನಿಪ್ಯುಲೇಶನ್‌ ಗಳಿಗೆ ಮಾರುಹೋಗುತ್ತದೆ. ಆದರೆ ಇಲ್ಲಿ ಆತ್ಮಕತೆ ಇಂಥ ಬರಹದ ಹಂಗನ್ನು, ಬರಹಕ್ಕೆ ಮಾತ್ರ ಸಾಧ್ಯವಿರುವ ಕೆಲವು ವಿಲಾಸಗಳನ್ನು ಕಳಚಿಕೊಂಡಿದೆ. ಇನ್ನೊಬ್ಬರಿಗೆ ಹೇಳುತ್ತ ಹೋದದ್ದರಿಂದ ಜೀವನದ ಎಲ್ಲ ಘಟನೆಗಳಿಂದ ಒಂದು ಅಂತರ ಕಾಯ್ದುಕೊಳ್ಳುವುದು ಸಾಧ್ಯವಾಗಿದೆ.

ಚೊಕ್ಕಾಡಿ ಯಾರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ ಎಂಬುದರಲ್ಲಿ ಅವರ ಜೀವನ ದರ್ಶನ ಏನು ಎಂಬುದೂ ಕಾಣಿಸುತ್ತದೆ. ತಮ್ಮ ಬಡತನದ ಕಾರಣದಿಂದ ಸಾಹಿತ್ಯದ ತಿರುಗಾಟಗಳ ನಡುವೆ ಮಡದಿಯನ್ನು ಎಲ್ಲಿಗೂ ಕರೆದೊಯ್ಯಲಾಗದ ವಿಷಾದವನ್ನು ದಾಖಲಿಸುವ ಜೊತೆಗೇ ಅವರನ್ನು ಕರೆದೊಯ್ದ ಉಲ್ಲಾಸದ ಕ್ಷಣಗಳನ್ನೂ ದಾಖಲಿಸುತ್ತಾರೆ. ಸುಮನಸಾ ವಿಚಾರ ವೇದಿಕೆಯನ್ನು ಕಟ್ಟಿ ಬೆಳೆಸಿ ಹತ್ತಾರು ಉತ್ತಮ ಕೃತಿಗಳನ್ನು ಪ್ರಕಟಿಸಿದ ಸಾರ್ಥಕ ಕ್ಷಣಗಳ ಜೊತೆಗೆ, ತಮ್ಮ ಮನೆಯೇ ಒಡೆದು ಚೂರಾದ ವಿಷಾದದ ಕ್ಷಣಗಳನ್ನೂ ಮಮಕಾರವಿಲ್ಲದೆ ಸಮಾಧಾನದಿಂದ ದಾಖಲಿಸುತ್ತಾರೆ. ಹಾಗೆ ನೋಡಿದರೆ ಸಮಾಧಾನಚಿತ್ತವೊಂದು ಈ ಕೃತಿಯಲ್ಲಿ ಅಂತರ್ವಾಹಿನಿಯಾಗಿ ಹರಿಯುತ್ತಿದೆ. ಕವಿಯ ಒಳನೋಟ ಮತ್ತು ಸ್ಥಿತಪ್ರಜ್ಞತೆಯೇ ಇಲ್ಲಿನ ಸ್ಥಾಯಿಭಾವ. ಬಾಳಿನ ಕಹಿ ಅನುಭವಗಳನ್ನು ದಾಟಿ ಎಷ್ಟೋ ದೂರ ಬಂದ ನಂತರ, ನೆನಪಿಸಿಕೊಂಡಾಗ ಮೂಡುವ ನಿಟ್ಟುಸಿರು ಹಾಗೂ ಸಣ್ಣ ವಿಷಾದ ಇಲ್ಲಿ ನಿಮ್ಮನ್ನು ತಾಕದೆ ಇರದು.

ಹಾಗೇ ಅವರು ಮತ್ತೆ ಮತ್ತೆ ನೆನಪಿನಲ್ಲಿ ಮುಖಾಮುಖಿಯಾಗುವ ಒಬ್ಬ ವ್ಯಕ್ತಿ ಎಂದರೆ ಅವರ ತಂದೆ ಅಜ್ಜನಗದ್ದೆ ಗಣಪಯ್ಯ ಭಾಗವತರು. ವ್ಯಕ್ತಿಯ ಜೀವನದ ನಾನಾ ಘಟ್ಟಗಳಲ್ಲಿ ಆತನ ತಂದೆ ಅಥವಾ ತಾಯಿ ಮತ್ತೆ ಮತ್ತೆ ಎದುರಾಗುತ್ತಲೇ ಇರುತ್ತಾರೆ; ಅವರ ಭೌತಿಕ ದೇಹ ಇಲ್ಲದೆ ಹೋದರೂ ಕಿವಿಯಲ್ಲಿ ನುಡಿಯಾಗಿ, ಕಣ್ಣಲ್ಲಿ ಬೆಳಕಾಗಿ ಕುಳಿತೇ ಇರುತ್ತಾರೆ. ಹೀಗೆ ತಂದೆಗೆ ಮುಖಾಮುಖಿಯಾಗುವ ಮೂಲಕ ಬಾಳಿಗೆ ಬೇಕಾದ ಚೈತನ್ಯವನ್ನು ಚೊಕ್ಕಾಡಿ ಮತ್ತೆ ಮತ್ತೆ ಪಡೆಯುತ್ತಾರೆ. ಇದು ನನಗೆ ವಿಶಿಷ್ಟವೆನಿಸಿದೆ. ಇದು ಎಲ್ಲ ಮನುಷ್ಯರ ಪಾಡೂ ಇರಬಹುದು. ತಂದೆಯ ಭಾಗವತಿಕೆಯ ಪ್ರಸಿದ್ಧಿ, ಅವರ ಕೊನೆಯ ದಿನಗಳ ಮನೋವೈಕಲ್ಯದ ಪಾಡು, ಯಕ್ಷಗಾನಕ್ಕೆ ತಾನು ಹೋಗದೆ ಇರುವುದರ ಕಾರಣ, ಅವರು ತಂದೆ ‘ಚೆಂಡೆಮದ್ದಳೆ’ಯ ಮೂಲಕ ನವ್ಯಕಾವ್ಯಕ್ಕೆ ತಾನು ಪ್ರವೇಶ ಪಡೆದ ಬಗೆ- ಎಲ್ಲವನ್ನೂ ಅವರು ಒಂದು ದೂರದಲ್ಲಿ ನಿಂತು ನೆನೆಯುತ್ತ, ಅದು ತನ್ನನ್ನು ರೂಪಿಸಿದ್ದನ್ನು ಬರೆಯುವಾಗ ನಮ್ಮ ಕಣ್ಣುಗಳು ಮಂಜಾಗುತ್ತವೆ.

(ಹರೀಶ್‌ ಕೇರ)

ಚೊಕ್ಕಾಡಿ ನನ್ನಂತ ಕಿರಿಯನಿಂದ ಮುನ್ನುಡಿ ಯಾಕೆ ಅಪೇಕ್ಷಿಸಿದರೋ ಗೊತ್ತಿಲ್ಲ. ನಾನು ಈ ಮಾಮರದ ಮಾಗಿದ ಹಣ್ಣುಗಳ ರುಚಿಯನ್ನಷ್ಟೇ ನೋಡಿದವನು. ಅವರ ಸುಮನಸಾ ವಿಚಾರ ವೇದಿಕೆಯ ವೈಭವದ ದಿನಗಳು ಮುಗಿದಿದ್ದವು. ಇಂಥ ಹೊತ್ತಿನಲ್ಲಿ ನಾನು ಮತ್ತು ದಿನೇಶ ಕುಕ್ಕುಜಡ್ಕ ಅವರಲ್ಲಿಗೆ ಹೋಗಿ ಕಾವ್ಯದ ಪಾಠ ಹೇಳಿಸಿಕೊಳ್ಳುವುದಕ್ಕೆ ತೊಡಗಿದೆವು. ನಮ್ಮ ಮೊದಲ ಪಾಠವೇ ಅಡಿಗರ ಭೂಮಿಗೀತ. ಅವರ ಮನೆಯಲ್ಲಿ ಪಾಠ ಹೇಳಿಸಿಕೊಂಡ ಗುರುಕುಲವಾಸಿ ನಾನು. ಅಡಿಗರಂತೆಯೇ ಅವರೂ ಕಾವ್ಯದಲ್ಲಾಗಲೀ ವಿಮರ್ಶೆಯಲ್ಲಾಗಲೀ ಬದುಕಿನಲ್ಲಾಗಲೀ ಸರಳ ಉಡಾಫೆಯ ಮಾತುಗಳನ್ನು ಒಪ್ಪಿಕೊಳ್ಳುವವರಲ್ಲ. ‘ಕಲಿಸು ಬಾಗದೆ ಸೆಟೆವುದನ್ನು’ ಎಂಬ ಜೊತೆಗೇ ‘ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ’ ಎಂಬುದೂ ಅವರಿಗೆ ಇಷ್ಟವೇ. ಅವರಿಂದ ಕಲಿತ ಕಾವ್ಯ ಹಾಗೂ ವಿಮರ್ಶೆಯ ಪ್ರಾಥಮಿಕ ಪಾಠಗಳು ನನಗೆ ಮುಂದೆ ದಾರಿದೀಪವಾಗಿವೆ.

ಹೀಗೆ ಕೈಹಿಡಿದು ನಡೆಸಿದ ಹಿರಿಯ ಜೀವದ ಆತ್ಮಕತೆಯ ಭಾಗವಾಗುವ ಸಂತೋಷ ನನ್ನದು. ವಾಸ್ತವವಾಗಿ ಆತ್ಮಕತೆ ಎಂಬುದೇ ನನ್ನುಡಿ. ಅದಕ್ಕೆ ಇನ್ನೊಂದು ನುಡಿ ಅಸಂಗತ. ಅವರು ದೇವಾಲಯದ ಎದುರು ಶತಮಾನಗಳಿಂದ ಮಳೆ ಚಳಿ ಗಾಳಿ ಅನುಭವಿಸುತ್ತ ನಿಂತ ಗರುಡಗಂಬ. ನಾನು ಆ ಗರುಡಗಂಬಕ್ಕೆ ಈ ಸಲದ ಜಾತ್ರೆಯಲ್ಲಿ ಕಟ್ಟಿದ ಅಡಕೆ ಗೊನೆಯ ಒಂದು ಗೊಂಚಲು!

ಚೊಕ್ಕಾಡಿಯವರ ಆತ್ಮಕಥನ ಕೊನೆಗೂ ನಮಗೆ ನೀಡುವ ಒಂದು ದರ್ಶನ ಎಂದರೆ- ಬದುಕಿನಲ್ಲಿ ಬರುವ ಎಲ್ಲ ನೋವು ನಲಿವುಗಳಲ್ಲೂ ತನ್ಮಯನಾಗಿ ಭಾಗವಹಿಸು; ಆದರೆ ಅದರಿಂದ ದೂರದಲ್ಲೂ ನಿಂತು ನೋಡು ಎಂಬುದು. ಇದು ಅವರೇ ಆಗಾಗ ಉಲ್ಲೇಖಿಸುವ ಪುತಿನ ಅವರ ‘ಭವನಿಮಜ್ಜನ ಚಾತುರ್ಯ’ ಮತ್ತು ‘ಲಘಿಮಾ ಕೌಶಲ’ ಎಂಬ ವಿಮರ್ಶನ ಸೂತ್ರಕ್ಕೆ ಸಂವಾದಿಯಾಗಿದೆ. ಈ ಸಮಾಧಾನಚಿತ್ತ ಮಾಸ್ತಿ, ಪುತಿನ ಮುಂತಾದ ಹಿರಿಜೀವಗಳಲ್ಲಿ ನಾವು ಕಂಡಂಥದು.


(ಕೃತಿ: ಕಾಲದೊಂದೊಂದೇ ಹನಿ(ಆತ್ಮಕತೆ), ಲೇಖಕರು: ಸುಬ್ರಾಯ ಚೊಕ್ಕಾಡಿ, ಪ್ರಕಾಶಕರು: ವಿಕಾಸ ಪ್ರಕಾಶನ, ಬೆಂಗಳೂರು)