ಕೆವೈಎನ್ ಸರ್ ಅವರ ವಿಚಾರ ಲಹರಿ ಮೊದಲೇ ಚೂರುಪಾರು ನನಗೆ ತಿಳಿದಿತ್ತಾದ್ದರಿಂದ ಅದು ಹೇಗೆ ದೃಶ್ಯಗಳಾಗಿ ವಿಂಗಡಿಸಿಕೊಂಡಿದೆ ಎಂದು ಟ್ರೇಸ್ ಮಾಡುತ್ತಾ ಹೋದೆ. ಸಹಜವಾಗಿ ನಾಟಕದಲ್ಲಿ ಕೆವೈಎನ್ ಸರ್ ಅವರ ರಾಜಕೀಯ ಚಿಂತನೆಯ ಧಾಟಿ ಇದೆ. ರಾಜಕಾರಣದ ಒಳ ‘ಸುಳಿ’ಗಳು ಆಗಾಗ ಮಾತ್ರ ‘ಸುಳಿ’ಯುತ್ತವೆ ಎನ್ನುವುದು ಗಮನಕ್ಕೆ ಬರುತ್ತಾ ಹೋಯಿತು. ಅವು ಇಂದಿನ ಸಂಗತಿಗಳಿಗೆ ತಳಿಕೆ ಹಾಕಿಕೊಂಡಾಗ ಜನರಿಂದ ಪ್ರತಿಸ್ಪಂದನ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ನಾಟಕ ವಲಯದಲ್ಲಿ ತಮಗೆ ಕೊಂಚ ಅನುಭವ ಮತ್ತು ಕೊಂಚ ಪರಿಣತಿ ಇದೆ ಅನಿಸಿದರೆ ಸಾಕು, ಒಂದು ರಂಗತಂಡವನ್ನು ‘ಹುಟ್ಟು’ಹಾಕಬಹುದು. ಆದರೆ ನಂತರದಲ್ಲಿ ಅದರ ‘ಹುಟ್ಟುಹಾಕುತ್ತಾ’ ನಡೆಸುವುದು ಕಷ್ಟದ ಕೆಲಸ. ಹಲವು ಪ್ರಯೋಗಗಳನ್ನು ಮಾಡುತ್ತಾ ಹೋಗಬೇಕು. ಎಲ್ಲವೂ ಗೆಲ್ಲುತ್ತವೆ ಎಂದೇನಿಲ್ಲ. ಆದರೂ ಪ್ರಯೋಗಗಳನ್ನು ನಿಲ್ಲಿಸುವಂತಿಲ್ಲ. ಜೊತೆಗೆ ಹಾಕಿದ ಬಂಡವಾಳ ಹೊರತೆಗೆಯುವ ಬಗೆ ತಿಳಿದಿರದಿದ್ದರೆ ತಂಡ ಕಣ್ಮರೆಯಾಗುವ ಸಂಭವ ಇರುತ್ತದೆ. ಆದರೆ ಕೆಲವೊಂದು ರಂಗ ತಂಡಗಳಿಗೆ ಒಂದೊಂದು ನಾಟಕ ಕೈಹಿಡಿದು ಉದ್ದಕ್ಕೂ ನಡೆಸುತ್ತಾ ಬರುತ್ತದೆ. ಅದು ವೃತ್ತಿ ರಂಗಭೂಮಿಯೇ ಇರಲಿ, ಹವ್ಯಾಸಿಯೇ ಇರಲಿ- ಎಲ್ಲ ತಂಡಗಳಿಗೂ ಅಲ್ಲ, ಕೆಲವು ರಂಗತಂಡಗಳಿಗೆ ಒಂದೊಂದು ನಾಟಕ ಕೈಹಿಡಿದಿರುವುದು ಮತ್ತು ಕೈ ಹಿಡಿದು ನಡೆಸುತ್ತಿರುವುದು ನಿಜ.

ಗುಬ್ಬಿ ಕಂಪನಿಗೆ ಹೆಸರು ತಂದುಕೊಟ್ಟದ್ದು ‘ಕುರುಕ್ಷೇತ್ರ’ ನಾಟಕ. ಕೆ. ಹಿರಣ್ಣಯ್ಯ ಮಿತ್ರಮಂಡಳಿಗೆ ‘ದೇವದಾಸಿ’; ಪೀರ್ ಸಾಹೇಬರ ತಂಡದ ಕೈ ಹಿಡಿದದ್ದು ‘ಬುದ್ಧ’. ರಾಮಾಯಣ ಮತ್ತು ಸದಾರಮೆ ಎಲ್ಲ ವೃತ್ತಿರಂಗ ತಂಡಗಳ ಜನಪ್ರಿಯ ನಾಟಕ.

ಇನ್ನು ಹವ್ಯಾಸಿ ರಂಗ ತಂಡಗಳು ದಾಪುಗಾಲಿಟ್ಟು ವರ್ಷಗಳನ್ನು ಪೂರೈಸುವುದು ಸಾಹಸದ ಕೆಲಸ. ‘ಹುಟ್ಟು’ ಹಾಕುವವರ ಕೈಚಳಕದ ಮೇಲೆ ಎಲ್ಲ ಅವಲಂಬಿಸಿರುತ್ತದೆ. ಕೆಲವರು ತಂಡವನ್ನು ಒಂದು ದಶಕ ದಾಟಿಸುತ್ತಾರೆ. ಕೆಲವರು ಎರಡು ದಶಕ. ಆಮೇಲೆ ನಡುವೆ ಬ್ರೇಕ್. ಮತ್ತೆ ಆರಂಭವಾಗುತ್ತದೆ ಪಯಣ. ಆದರೆ ಕಲಾಗಂಗೋತ್ರಿ ತಂಡದ್ದು ಐವತ್ತು ವರ್ಷಗಳ ಪಯಣ. ಹುಟ್ಟುಹಾಕುತ್ತಾ ನಡೆಸುತ್ತಿರುವವರು ಡಾ. ಬಿ. ವಿ ರಾಜಾರಾಮ್ ಸರ್. ಈ ಐವತ್ತು ವರ್ಷಗಳ ಸುದೀರ್ಘ ಪಯಣದಲ್ಲಿ ಕಲಾಗಂಗೋತ್ರಿ ತಂಡ ಹಲವು ಪ್ರಯೋಗಗಳನ್ನ ಮಾಡಿದೆ. ಸೋಲು ಗೆಲುವಿನ ಗ್ರಾಫ್ ಇದ್ದದ್ದೇ. ಆದರೆ ‘ಮುಖ್ಯಮಂತ್ರಿ’ ನಾಟಕ ತಂಡದ ಕೈ ಹಿಡಿದ ನಾಟಕ; ಈವರೆಗೆ ಏಳುನೂರಕ್ಕೂ ಹೆಚ್ಚು ಪ್ರದರ್ಶನಗಳನ್ನ ಕಂಡಿರುವ ನಾಟಕ; ಚಂದ್ರು ಅವರಿಗೆ ಖಾಯಂ ‘ಮುಖ್ಯಮಂತ್ರಿ’ ಪಟ್ಟ ತಂದುಕೊಟ್ಟ ನಾಟಕ.

‘ಹೊಸ ನಾಟಕ. ಬಂದು ನೋಡಿ’ ಎಂದು ಮೆಸೇಜ್ ಮಾಡಿದರು ರಾಜಾರಾಂ ಸರ್. ಯಾವುದು ಹೊಸ ಪ್ರಯೋಗ ಎಂದು ನೋಡಿದರೆ ‘ಮತ್ತೆ ಮುಖ್ಯಮಂತ್ರಿ’ ಎಂದಿತ್ತು. ‘ಸರ್ ಇದೇನು..?’ ಎಂದು ಕೇಳಿದರೆ ರಾಜಾರಾಂ ಸರ್ ‘ಹೌದು ನಾವು ಮುಖ್ಯಮಂತ್ರಿನ ಬಿಡೋದಿಲ್ಲ’ ಎಂದು ನಕ್ಕರು. ಯಾಕೆಂದರೆ ‘ಮುಖ್ಯಮಂತ್ರಿ’ ‘ಹುಟ್ಟುಹಾಕುವ’ ರಾಜಾರಾಂ ಸರ್ ಅವರ ಜೊತೆ ಹುಟ್ಟುಕಂಡುಕೊಳ್ಳುತ್ತಾ ಸಾಗಿ ಬಂದಿರುವ ನಾಟಕ. ಇಂದಿಗೂ ಹೌಸ್ ಫುಲ್ ಆಗುವ ನಾಟಕ. ಏನಿದೆ ಅದರಲ್ಲಿ ಅಂತ ನೋಡಿದರೆ ರಾಜಕೀಯದ ಒಳಸುಳಿಗಳು, ಮುಖ್ಯಮಂತ್ರಿ ಜಾಣತನದಲ್ಲಿ ನಡೆಸುವ ಗೇಮ್ ಪ್ಲಾನ್, ಇದನ್ನು ಚಂದ್ರು ಸರ್ ಅಭಿನಯಿಸುವ ರೀತಿ ಒಂದೊಂದೂ ಕೌಂಟಬಲ್. ನಾಟಕ ಹಿಂದಿಯ ಮೂಲದ್ದು ಮತ್ತು ಎಪ್ಪತ್ತರ ದಶಕದ್ದು. ಇಂದಿಗೂ ತಾಜಾತನ ಮತ್ತು ಸಮಕಾಲೀನ ಸ್ಪಂದನೆಗಳು ಉಳಿಸಿಕೊಂಡಿರುವ ಕಾರಣದಿಂದಲೇ ಅದು ಚಲಾವಣೆಯಲ್ಲಿದೆ.

ಆದರೂ ರಾಜಾರಾಂ ಸರ್ ಅವರಿಗೆ ಹೊಸತೊಂದರ ಪ್ರಯೋಗಕಕ್ಕೆ ಕೈ ಹಚ್ಚಬೇಕೆನಿಸಿತೋ ಏನೋ. ಆದರೆ ಮುಖ್ಯಮಂತ್ರಿಯನ್ನ ಬಿಟ್ಟುಕೊಡುವ ಮನಸ್ಸಿಲ್ಲ ಎಂಬುದು ಅವರ ನಗುವಿನಲ್ಲೇ ಅರ್ಥವಾಯಿತು. ಸರಿ ಯಾರಪ್ಪ ಈ ‘ಮತ್ತೆ ಮುಖ್ಯಮಂತ್ರಿ’ಯ ಕರ್ತೃ ಎಂದು ನೋಡಿದರೆ ಕೆವೈಎನ್ ಸರ್!

ತಮ್ಮ ಸಂಪರ್ಕಕ್ಕೆ ಬಂದವರನ್ನು ಪ್ರೀತಿಯಲ್ಲಿ ಆವರಿಸಿಕೊಳ್ಳುತ್ತ ವಿಸ್ಮಯ ಹುಟ್ಟುಹಾಕುವ ಮೇಷ್ಟ್ರು. ಯಾರ ಬಗ್ಗೆಯೂ ಅವರು ಎದೆಯಲ್ಲಿ ನಂಜು ಇಟ್ಟುಕೊಂಡು ಮಾತಾಡಿದ್ದನ್ನು ನಾನು ಈವರೆಗೆ ಕಂಡಿಲ್ಲ. ತಮ್ಮ ಶಿಷ್ಯಂದಿರನ್ನ ಕಂಡು ನಗುತ್ತ ಪ್ರೀತಿಯಲ್ಲಿ ‘ಅವಿವೇಕಿಗಳಾ..’ ಎಂದು ಬೈಯುವ ಪ್ರೀತಿಯ ಮೇಷ್ಟ್ರು. ಅವರ ಸಾಮೀಪ್ಯ ದೊರಕಿಸಿಕೊಂಡರೆ ಸಾಕು ಅವರು ನಾಟಕದ ಕಥೆ ಆರಂಭಿಸುತ್ತಾರೆ. ಹಾಗೆ ಹೇಳುತ್ತಾ ಹೇಳುತ್ತಾ ಅದು ಹೇಗೆ ರೂಪುತಳೆಯುತ್ತದೆ ಎಂಬುದರ ಬಗ್ಗೆ ಅವರಿಗೇ ವಿಸ್ಮಯವಿದೆ. ಕೇಳಲು ಕಿವಿ ಇವೆ ಎಂದು ಅವರಿಗೆ ಮನವರಿಕೆ ಮಾಡಿಸಿದರೆ ಸಾಕು ನಮ್ಮೆದುರು ಒಂದು ಸುಂದರಲೋಕದ ಅನಾವರಣ ಅವರಿಂದ ಆಗುತ್ತದೆ.

ಅವರ ‘ಮಲ್ಲಿಗೆ’ ನಾಟಕ ಆಗುವ ಪೂರ್ವದಲ್ಲಿ ಅವರನ್ನು ಭೇಟಿಯಾಗಿದ್ದಾಗ ಕೆವೈಎನ್ ಸರ್ ನಾಟಕದ ಬಗ್ಗೆ ಮಾತಾಡಲು ಆರಂಭಿಸಿದ್ದರು. ಅಕ್ಕಮಹಾದೇವಿ ಕುರಿತ ಅವರ ‘ನೀವು ಕಾಣಿರೇ..’ ನಾಟಕ ಪ್ರದರ್ಶನ ಕಾಣುವ ಪೂರ್ವದಲ್ಲಿ ಹೀಗೇ ಒಂದು ಸಂಜೆ ಟೌನ್ ಹಾಲ್ ಪಕ್ಕದ ಕ್ಯಾಂಟೀನ್ ಬಳಿ ಸಿಕ್ಕಾಗ ಅಕ್ಕಮಹಾದೇವಿಯ ಲೋಕದ ಅನಾವರಣ ಅವರ ದರ್ಶನದ ಮುಖೇನ ಮಾಡಿಸಿದ್ದರು. ಅವರ ಮಾತು ಕೇಳುವ ಸಲುವಾಗಿಯೇ ಅವರನ್ನು ಭೇಟಿಯಾಗಲು ತುಡಿಯುವವರಲ್ಲಿ ನಾನೂ ಒಬ್ಬ. ಅವರ ತಲೆಯಲ್ಲಿ ಸದಾ ಹತ್ತಾರು ಯೋಜನೆಗಳಿರುತ್ತದೆ. ನನ್ನಂಥ ರಂಗಾಸಕ್ತರು ಅವರ ಗಮನದಲ್ಲಿದ್ದರೆ ಎಲ್ಲರನ್ನ ಕಲೆಹಾಕಿಕೊಂಡು ಕುಪ್ಪಳಿಗೆ ಹೋಗಿ ಶಿಬಿರ ಮಾಡಿಸಿ ನಾಟಕ ಬರೆಯಲು ಹಚ್ಚುತ್ತಾರೆ. ಸಿನಿಮಾ ಬಗ್ಗೆ ಪ್ರೀತಿ ಇದೆ ಎಂದು ತಿಳಿದರೆ ಮತ್ತೆ ನಮ್ಮನ್ನು ಶ್ರೀರಂಗಪಟ್ಟಣಕ್ಕೆ ಕರೆದುಕೊಂಡು ಹೋಗಿ ಗುಡ್ಡೆ ಹಾಕಿಕೊಂಡು ನಮ್ಮನ್ನು ಯಾವಯಾವುದೋ ಕೆಲಸಗಳಿಗೆ ಹಚ್ಚುತ್ತಾರೆ. ಕುವೆಂಪು ಅವರ ಮನೆ ಮುಂದೆ ಸಂಜೆ ಸಮಯ ಕಳೆದು ಇನ್ನೇನು ಕತ್ತಲು ಆವರಿಸಿಕೊಳ್ಳಲು ಆರಂಭಿಸಿದೆ ಎನ್ನುವ ಹೊತ್ತು ಕೆವೈಎನ್ ಸರ್ ಹಾಡಲು ಆರಂಭಿಸುತ್ತಾರೆ. ಅವರು ಚೆಂದದ ನಾಟಕ ಬರೆಯುತ್ತಾರೆ, ಆದರೆ ಎಂದೂ ನಾಟಕ ಮಾಡಿಲ್ಲವಾದ್ದರಿಂದ ಎಂದಿಗೂ ಅವರು ನನಗೆ ಇಷ್ಟ.

ಮೇಷ್ಟ್ರು ಯಾವಾಗ ಪೊಲಿಟಿಕಲ್ ಡ್ರಾಮಾ ಬರೆದರು ಎನ್ನುವ ಅಚ್ಚರಿಯಲ್ಲಿ ಪೋನ್ ಹಚ್ಚಿ ‘ಸರ್ ಇದೇನು.. ಇದ್ಯಾವಾಗ ಬರೆದ್ರಿ..?’ ಎಂದು ಕೇಳಿದೆ. ‘ರಾಜಾರಾಂ ಅವರು ಬರೆದುಕೊಡಲು ಹೇಳಿದ್ದರು. ನಾನು ಈವರೆಗೆ ರಿಯಲಿಸ್ಟಿಕ್ ಡ್ರಾಮ ಬರೆದಿರಲಿಲ್ಲ. ಈಗ ಬರೆದುಕೊಟ್ಟೆ.. ‘ಬನ್ನಿ ಶೋಗೆʼ ಅಂದರು.

ಕೆವೈಎನ್ ಸರ್ ಅವರ ಪೊಲಿಟಿಕಲ್ ಥಾಟ್ಸ್ ಬಗ್ಗೆ ನನ್ನಲ್ಲಿ ಅಷ್ಟು ಐಡಿಯಾ ಇರಲಿಲ್ಲ. ನಾವು ಸಂಧಿಸಿದಾಗ ಮಾತಾಡಿದ್ದೆಲ್ಲವೂ ಪ್ಯೂರ್ ಲಿಟರೇಚರ್ ಕುರಿತೇ ಇತ್ತು. ಅಲ್ಲಲ್ಲಿ ರಾಜಕಾರಣದ ಬಗ್ಗೆ ಮಾತುಗಳು ಬರುತ್ತಿದ್ದವಾದರೂ ಇಬ್ಬರ ಗಮನವಿದ್ದದ್ದು ಸಾಹಿತ್ಯದ ಮೇಲೇ ಆದ್ದರಿಂದ ಈ ನಾಟಕ ಕುತೂಹಲ ಹುಟ್ಟಿಸಿತು.

ಸರಿ ಎಂದು ಹೋದೆ, ಕೂತೆ. ರವೀಂದ್ರ ಕಲಾಕ್ಷೇತ್ರ ಫುಲ್. ಕೊರೋನ ಕಂಡರೆ ಸ್ವತಃ ತಾನೇ ತಲೆಚಚ್ಚಿಕೊಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಜನ. ಆ ಅಷ್ಟೂ ಜನರಲ್ಲಿ ಥಿಯೇಟರ್ ಸರ್ಕಲ್ ನವರು ಯಾರು ಮತ್ತು ಹಿರಿ ಕಿರಿಯ ಪ್ರಖರ ಬುದ್ಧಿಜೀವಿಗಳ್ಯಾರು ಎಂದು ಸುತ್ತ ತಿರುಗುತ್ತ ನೋಡುತ್ತಾ ಕೂತೆ. ಪಕ್ಕದಲ್ಲಿ ಗೆಳತಿ. ನಿಸ್ಪೃಹೆ. ಅದು ರಾಜಕೀಯದ ನಾಟಕವೋ ಮತ್ತೊಂದೋ ಆಕೆಗೆ ಅವೆಲ್ಲ ಬೇಡ. ಆಕೆಗೆ ಈ ರಾಜಕೀಯ, ಎಡ ಮತ್ತು ಬಲ, ಮತ್ತು ಯಾರು ಎಡ ಮತ್ತು ಯಾರು ಬಲ, ಅವರ ವಾದ ಮತ್ತು ಹಠ ಇತ್ಯಾದಿಗಳ ಬಗ್ಗೆ ತಿಳುವಳಿಕೆ ಇಲ್ಲದಿದ್ದರೂ ತುಂಬ ಮುಕ್ತವಾಗಿ ಬಂದು ನಾಟಕ ನೋಡಲು ನನ್ನೊಂದಿಗೆ ಜೊತೆಯಾಗಿದ್ದಳು. ನಾನು ಈ ಎಡ, ಬಲ ಎಲ್ಲಕ್ಕೂ ತಲೆಕೊಟ್ಟು ರಾಡಿ ಮಾಡಿಕೊಂಡಿರುವುದು ಸಾಕು, ಈಕೆಯ ತಲೆ ಕೆಡಿಸುವುದು ಬೇಡ ಅನಿಸಿ ಒಳಗೊಳಗೇ ನಗುತ್ತ ಸುಮ್ಮನೆ ಕೂತೆ.

ನಾಟಕ ಆರಂಭವಾಯಿತು. ಕೆವೈಎನ್ ಸರ್ ಅವರ ವಿಚಾರ ಲಹರಿ ಮೊದಲೇ ಚೂರುಪಾರು ನನಗೆ ತಿಳಿದಿತ್ತಾದ್ದರಿಂದ ಅದು ಹೇಗೆ ದೃಶ್ಯಗಳಾಗಿ ವಿಂಗಡಿಸಿಕೊಂಡಿದೆ ಎಂದು ಟ್ರೇಸ್ ಮಾಡುತ್ತಾ ಹೋದೆ. ಸಹಜವಾಗಿ ನಾಟಕದಲ್ಲಿ ಕೆವೈಎನ್ ಸರ್ ಅವರ ರಾಜಕೀಯ ಚಿಂತನೆಯ ಧಾಟಿ ಇದೆ. ರಾಜಕಾರಣದ ಒಳ ‘ಸುಳಿ’ಗಳು ಆಗಾಗ ಮಾತ್ರ ‘ಸುಳಿ’ಯುತ್ತವೆ ಎನ್ನುವುದು ಗಮನಕ್ಕೆ ಬರುತ್ತಾ ಹೋಯಿತು. ಅವು ಇಂದಿನ ಸಂಗತಿಗಳಿಗೆ ತಳಿಕೆ ಹಾಕಿಕೊಂಡಾಗ ಜನರಿಂದ ಪ್ರತಿಸ್ಪಂದನ. ಆದರೆ ಆ ಒಳಸುಳಿಗಳಲ್ಲಿ ಇಂದಿನ ಕಲಸುಮೇಲೋಗರದ ರಾಜಕಾರಣದ ಚಿತ್ರಣಗಳಿಲ್ಲ. ಸಹಜವಾಗಿ ಮುಖ್ಯಮಂತ್ರಿ ಪದವಿಗೆ ಅದೇ ಪಕ್ಷದವರು ಹೇಗೆ ಲಾಬಿ ಮಾಡುತ್ತಾರೆ ಎನ್ನುವ ಚಿತ್ರಣ ಇದೆ.

ಏನಿದೆ ಅದರಲ್ಲಿ ಅಂತ ನೋಡಿದರೆ ರಾಜಕೀಯದ ಒಳಸುಳಿಗಳು, ಮುಖ್ಯಮಂತ್ರಿ ಜಾಣತನದಲ್ಲಿ ನಡೆಸುವ ಗೇಮ್ ಪ್ಲಾನ್, ಇದನ್ನು ಚಂದ್ರು ಸರ್ ಅಭಿನಯಿಸುವ ರೀತಿ ಒಂದೊಂದೂ ಕೌಂಟಬಲ್. ನಾಟಕ ಹಿಂದಿಯ ಮೂಲದ್ದು ಮತ್ತು ಎಪ್ಪತ್ತರ ದಶಕದ್ದು.

ಕೆವೈಎನ್ ಸರ್ ಇಂದಿನ ಡೋಲಾಯಮಾನ ರಾಜಕೀಯ ಸಂದರ್ಭದಲ್ಲಿ ನಾಟಕ ಬರೆದಿದ್ದರೂ ಮತ್ತು ಸುಡುವ ವಾಸ್ತವಗಳ ಮಧ್ಯೆ ಕೂತು ನಾಟಕ ಬರೆದಿದ್ದರೂ ಯಾಕೋ ಅವುಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿಲ್ಲ. ಲಾಬಿ ಮಾಡುವುದು ಇಂದು ನೆನ್ನೆಯದಲ್ಲ. ಯಾವತ್ತಿನ ಕಾಲದ್ದು ಅದು. ಆದರೆ ಅದೂ ಮಾಡಿಫೈ ಆಗಿರುವ ಕಾಲದಲ್ಲಿ ಕೆವೈಎನ್ ಸರ್ ಅದಕ್ಕೆ ರಂಜಕತೆ ಕಲ್ಪಿಸಲು ಹೋಗಿಲ್ಲ. ಅವರ ತಾದ್ಯಾತ್ಮ ಇರುವುದು ಬೇರೆ ಕಡೆ. ಇಪ್ಪತ್ತು ವರ್ಷ ಮುಖ್ಯಮಂತ್ರಿಯಾಗಿ ಒಳ್ಳೆ ಹೆಸರು ಗಳಿಸಿರುವ ಮುಖ್ಯಮಂತ್ರಿ; ಜನಾನುರಾಗಿ ಎಂದು ಹೆಸರು ತೆಗೆದುಕೊಂಡಿರುವ ಮುಖ್ಯಮಂತ್ರಿ; ಮತ್ತೆ ತಮ್ಮ ಪಕ್ಷ ಚುನಾಯಿತವಾಗಿ ಬಂದಾಗ ಮುಖ್ಯಮಂತ್ರಿ ಹುದ್ದೆ ಬೇಡ ಎಂದು ನಿರ್ಧರಿಸಿರುವ ಮುಖ್ಯಮಂತ್ರಿ; ತನ್ನ ಜನಪರ ಯೋಜನೆಗಳು ಮತ್ತು ತನ್ನ ಬಗೆಗಿನ ನಂಬಿಕೆಯನ್ನ ಹಲವರು ಒಡೆದಾಗ ತಾನು ಹೇಗೆ ‘ಬಂಧಿ’ ಮುಖ್ಯಮಂತ್ರಿಯಾಗಿದ್ದೆ ಎನ್ನುವುದು ಅರಿವಿಗೆ ಬರುತ್ತದೆ. ತನ್ನ ಪ್ರಾಮಾಣಿಕತೆಯನ್ನ ತನ್ನ ಸುತ್ತಲಿರುವವರ ಜೊತೆ ಸಾಬೀತುಪಡಿಸುವುದು ಮುಖ್ಯವಲ್ಲ, ತನ್ನವರಲ್ಲದವರಿಂದಲೂ ಸಾಬೀತು ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ ಎಂದು ನಂಬಿ ಆಯೋಗ ರಚಿಸುವ ಕಾರ್ಯ ನಡೆಯುತ್ತದೆ. ಇದು ಕಥಾಹಂದರ ಮತ್ತು ಇವುಗಳ ನಡುವೆ ಲಾಬಿಯ ಸುಳಿಗಳು.

ಉಸಿರುಕಟ್ಟಿ ನೋಡಿದರೆ ನಾಟಕ ಚೆಂದ. ಆದರೆ ಗಂಭೀರವಾಯಿತು ಎಂದು ಆರೋಪಿಸೋಣ ಅಂದುಕೊಂಡರೆ ಈಗಿರುವ ಕನ್ನಡ ರಂಗಭೂಮಿಯ ವಲಯ ಆ ಮಾತನ್ನು ವಿರೋಧಿಸುತ್ತದೆ. ಹಾಗಾಗಿ ಗಂಭೀರವಾಯಿತು ಎನ್ನಬಾರದು. ಕಾಮಿಕ್ ಆಗಿ ನೋಡಬಹುದಿತ್ತು ಅಂದರೆ, ಕಾಮಿಡಿಯಾಗಿ ಕಾಣಿಸಬಹುದಿತ್ತು ಅಂದರೆ ಕಾಮಿಡಿಗಳ ವಿರುದ್ಧ ಯೂಟೂಬ್ ನಲ್ಲಿ ಒಂದು ಪಡೆ ಕಟ್ಟಿಕೊಂಡು ಒಂದು ಸಂಘಟನಾತ್ಮಕ ತಂಡ ತೊಡೆ ತಟ್ಟಿ ನಿಲ್ಲುತ್ತದೆ.

ಈ ನಾಟಕದಲ್ಲಿನ ಮುಖ್ಯಮಂತ್ರಿಯ ಆತ್ಮಾವಲೋಕನ, ತನ್ನ ವಿರುದ್ಧ ತಾನೇ ಆಯೋಗ ರಚಿಸಿಕೊಳ್ಳುವ ಪ್ರಾಮಾಣಿಕತೆ ಎಲ್ಲವೂ ನಾಟಕದ ಟೆಕ್ಸ್ಟ್ ನಲ್ಲಿ ಚೆಂದವೇ. ಆದರೆ ಕಾಲದ ಚಿತ್ರಣದ ಲೆಕ್ಕ ತೆಗೆದುಕೊಂಡರೆ ಈ ಮುಖ್ಯಮಂತ್ರಿಯನ್ನ ಎಪ್ಪತ್ತು ಎಂಬತ್ತರ ದಶಕದಲ್ಲಿ ನಿಲ್ಲಿಸಬಹುದೇನೋ. ಯಾಕೆಂದರೆ ಈ ಬಗೆಯ ಪ್ರಾಮಾಣಿಕತೆಯನ್ನ ಆ ಕಾಲದವರಲ್ಲಿ ನಿರೀಕ್ಷಿಸಬಹುದಿತ್ತು. ಈ ನಾಟಕ ಆ ಕಾಲಕ್ಕೆ ಸಲ್ಲುತ್ತದೆ ಅನಿಸಿತು.

ಹೀಗನಿಸಲಿಕ್ಕೆ ಇಂದಿನ ರಾಜಕಾರಣದ ಚಿತ್ರ ಕಾರಣ. ನಾಟಕ ಎಂದಿಗೂ ಅಂದಂದಿನ ವಿದ್ಯಮಾನದ ರಾಜಕಾರಣದ ಸುಳಿಗಳನ್ನ ಕೊರಳಿಗೆ ಹಾಕಿಕೊಳ್ಳುವ ಮಾಂತ್ರಿಕತೆ ಹೊಂದಿರಬೇಕು. ದಿನಕ್ಕೊಂದು ಚಿತ್ರ ಬದಲಿಸುವ ರಾಜಕಾರಣವನ್ನೂ ಯಾವ ನಾಟಕವೂ ನಿತ್ಯ ಹಿಡಿಯಲಾಗದು. ಆದರೆ ಎಷ್ಟು ಹಿಂದೆ ಬರೆದರೂ ಇಂದಿಗೂ ಅದರ ಪ್ರಸ್ತುತತೆ ಉಳಿಸಿಕೊಳ್ಳುವ ಚಿತ್ರಗಳನ್ನ ತರಬೇಕು. ಆಗ ನಾಟಕ ಅಂತರಂಗದ ಸೈದ್ಧಾಂತಿಕ ತುಮುಲದ ಆಚೆಗೆ ಪ್ರಸ್ತುತವಾಗಲು ಆರಂಭಿಸುತ್ತದೆ.

ಇಷ್ಟಕ್ಕೂ ರಾಜಕೀಯ ಎಂದರೆ ಏನು ಎಂದು ನನ್ನನ್ನು ಯಾರಾದರೂ ಕೇಳಿದರೆ ನನಗೆ ಇಂದಿಗೂ ಮಾರಿಯೋ ಪೂಜೊನ ಮಾತು ನೆನಪಾಗುತ್ತದೆ: : Finance is a gun. Politics is knowing when to pull the trigger. ಇಂದು ರಾಜಕೀಯದ ಎಲೆಕ್ಷನ್ ಗಳಲ್ಲಿ ಮುಖ್ಯ ಪಾತ್ರ ವಹಿಸುವುದೇ ಹಣ. ಅದಿಲ್ಲದಿದ್ದರೆ ಏನೂ ನಡೆಯುವುದಿಲ್ಲ. ಆದರ್ಶ ನಾವು ನೀವು ಮಾತಾಡಿದರೂ ಅದರ ಜೊತೆಜೊತೆಗೆ ಓಟಿಗೆಷ್ಟು ದುಡ್ಡು ಕೊಟ್ಟರು ಎಂದು ಬೀಡುಬೀಸಾಗಿ ಮಾತಾಡುವ ಕಾಲದಲ್ಲಿದ್ದೇವೆ. ಈ ಹಿನ್ನೆಲೆಯಲ್ಲಿ ಮೇಲಿನ ಮಾತು ಮೋಸ್ಟ್ ರಿಲೆವೆಂಟ್. ಈ ಎಳೆ ಇಟ್ಟುಕೊಂಡು ನಾಟಕ ಬರೆದಿದ್ದರೆ ಹೆಚ್ಚು ಕನೆಕ್ಟ್ ಆಗುತ್ತಿತ್ತು. ಯಾಕೆಂದರೆ ವಾಸ್ತವ ಹಾಗೇ ಇದೆ. ವಿಲ್ ರೋಜರ್ಸ್ ಎನ್ನುವವರು ‘Politics has become so expensive that it takes a lot of money even to be defeated..’ ಎಂದಿದ್ದಾರೆ.

‘ಲಂಚಾವತಾರ’ ನಾಟಕವೇ ಅಲ್ಲ, ಅದು ಒನ್ ಮ್ಯಾನ್ ಶೋ ಎಂದು ಎಷ್ಟು ಮಂದಿ ಬುದ್ಧಿಜೀವಿಗಳು ಬಾಯಿ ಬಡಕೊಂಡರೂ ಜನ ಮುಗಿಬಿದ್ದು ನೋಡಿದ್ದು ಅದೇ ನಾಟಕವನ್ನೇ. ಯಾಕೆಂದರೆ ಅದರಲ್ಲಿ ಅಂದಂದಿನ ರಾಜಕೀಯದ ಅಪ್ ಡೇಟ್ಸ್ ಗಳಿರುತ್ತಿದ್ದವು. ವಿಡಂಬನೆ ಇರುತ್ತಿತ್ತು. ಮನರಂಜನೆ ಜೊತೆ ಮನೋವಿಕಾಸವೂ ಇರುತ್ತಿತ್ತು. ಮತ್ತು ಸೀರಿಯಸ್ ಕ್ರಿಟಿಕ್ ಗಳು ಬಯಸದ ರೀತಿಯ ಮನೋವಿಕಾಸ ಇರುತ್ತಿತ್ತು.

‘ಮತ್ತೆ ಮುಖ್ಯಮಂತ್ರಿ’ ಒಟ್ಟು ಆಶಯದಲ್ಲಿ ಚೆನ್ನಾಗಿದ್ದರೂ ಇಂದಿನ ಸಂಗತಿಗಳ ಜೊತೆ ಮತ್ತು ರಾಜಕೀಯದ ಸಾರ್ವಕಾಲಿಕ ಹಸಿತನ ಮತ್ತು ಹಪಹಪಿಗಳ ಜೊತೆ ಯಾಕೆ ತಳುಕು ಹಾಕಿಕೊಳ್ಳಲಿಲ್ಲ ಎಂದು ಯೋಚಿಸುತ್ತಾ ಕೂತೆ.

ಅದೇ ವೇಳೆ ನಾನು ಈ ಹಿಂದೆ ಕಂಡು ಕೇಳಿದ ಕೆಲವು ರಾಜಕಾರಣದ ಕುರಿತ ನಾಟಕಗಳು ನನ್ನ ಸ್ಮೃತಿಪಟಲದಲ್ಲಿ ತೆರೆದುಕೊಳ್ಳಲು ಆರಂಭಿಸಿದವು. ಅದು 2019ರ ಸಮಯ. ವಿಶ್ವರಂಗಭೂಮಿಯ ದಿನ. ಅಹಮದಾಬಾದ್ ನಲ್ಲಿ ಒಂದು ನಾಟಕ ಪ್ರದರ್ಶಿಸಲಾಯಿತು. ಹೆಸರು ‘ಗಿರಗಿಟ್’. ಇದು ಹಿಂದಿ ಪದ. ಅದರ ಅರ್ಥ ‘ಊಸರವಳ್ಳಿ’ ಅಂತ. ನನ್ನ ಪ್ರೀತಿಯ ನಾಟಕಕಾರ ಆ್ಯಂಟನ್ ಚೆಕಾವ್ ನ ‘Chameleon’ ಕಥೆ ಆಧರಿಸಿದ ರಂಗರೂಪ. ರಾಜಕಾರಣದಲ್ಲಿ ಕ್ಷಣಕ್ಕೊಂದು ಬಣ್ಣ ಬದಲಿಸುವ, ಬದಲಾಗುವ ಚಿತ್ರಣಗಳನ್ನ ಒಳಗೊಂಡ ನಲವತ್ತು ನಿಮಿಷದ ಒಂದು ಸಮಾಜೋ ರಾಜಕೀಯ ವಿಡಂಬನಾ ನಾಟಕ. ‘ಚಪಟ್ ರಂಗ್ ಬದಲ್ ಲೊ ಭಾಯ್, ಚಪಟ್ ರಂಗ್ ಬದಲ್ ಲೊ ಭಾಯ್, ಏಕ್ ರಂಗ್ ಸೆ ಕಾಮ್ ನಹಿ ಚಲ್ತಾ, ಚಪಟ್ ರಂಗ್ ಬದಲ್ ಲೊ ಭಾಯ್…’ ಎಂಬ ಹಾಡಿನೊಂದಿಗೆ ಆರಂಭವಾಗುವ ನಾಟಕ ರಾಜಕೀಯ ಬಣ್ಣಬದಲಾಯಿಸುವ ಬಗೆಯನ್ನ ಹಾಸ್ಯದಲ್ಲಿ ಕಟ್ಟಿಕೊಡುತ್ತದೆ. ನಮ್ಮಲ್ಲಿ ಹಾಸ್ಯಕ್ಕೆ ಮಡಿವಂತಿಕೆ ಇದೆಯಲ್ಲ! ಏನ್ಮಾಡೋಣ… ಇದು ಸಮಸ್ಯೆ…

ನಂತರದಲ್ಲಿ ನನಗೆ ನೆನಪಿರುವಂತೆ ಸಮಹಾರ ಥಿಯೇಟರ್ ನವರು ಎರಡು ತೆಲುಗು ರಾಜಕೀಯ ಕಾಮಿಡಿಗಳನ್ನ ಪ್ರಸ್ತುತಪಡಿಸಿದ್ದರು. ತನಿಕೆಲ ಭರಣಿ ಅವರ ‘ಗಾರ್ದಭ ಅಂಡಂ’ ( ಕತ್ತೆ ಮೊಟ್ಟೆ) ಹಾಗೂ ಪಾರ್ಥಸಾರಥಿ ಅವರ ‘ಅಬೇ ಏಮ್ಲೇದು…’. ಈ ಎರಡೂ ಪೊಲಿಟಿಕಲ್ ಸಟೈರ್ ಗಳು. ನಕ್ಕುನಗಿಸಿದವು. ಇವು ಕುಟುಂಬ ರಾಜಕಾರಣ ಮಾಡುವವರನ್ನ ಕುರಿತದ್ದಾಗಿತ್ತು. ಇವು ತೆಲುಗಿನ ರಾಜಕಾರಣ ಚಿತ್ರಣ ಹೊಂದಿದ್ದರೂ ನಾನು ಕರ್ನಾಟಕದ ರಾಜಕಾರಣದ ಚಿತ್ರ ನೆನೆಸಿಕೊಳ್ಳುತ್ತ ಮತ್ತು ತಾಳೆ ಹಾಕಿಕೊಳ್ಳುತ್ತ ಎಂಜಾಯ್ ಮಾಡುತ್ತಿದ್ದೆ…

ಮತ್ತೂ ಉದಾಹರಿಸುವುದಾದರೆ ಕೃಷ್ಣ ಚಂದರ್ 1945-47ರಲ್ಲಿ ಬರೆದ ‘ಪರಮಾತ್ಮ’ ಹಾಗೂ ಅನೀಸ್ ಅಜ್ಮಿ ಬರೆದ ‘ಎ ದಾಗ್ ದಾಗ್ ಉಜಾಲ..’ ನಾಟಕಗಳ ವಿವರಣೆ ಚೆಂದ. ‘ಪರಮಾತ್ಮ’ದಲ್ಲಿ ನಾರದ ಮುನಿಗಳು ರಾಜಕಾರಣಿಗಳು ಹೇಗೆ ವ್ಯವಸ್ಥೆಗಳನ್ನ ಭ್ರಷ್ಟಗೊಳಿಸುತ್ತಾರೆ ಎನ್ನುವುದನ್ನ ಮನಗಾಣಿಸುತ್ತಾರೆ. ಮತ್ತು ‘ಎ ದಾಗ್ ದಾಗ್ ಉಜಾಲ್..’ ಭಾರತೀಯ ರಾಜಕಾರಣದ ತೀವ್ರತರವಾದ ವಿಡಂಬನೆಯಾಗಿತ್ತು…

ಮತ್ತು ನಾನು ಈಚೆಗೆ ಕೇಳಿದ ಮಹತ್ವದ ಪ್ರಯೋಗ ಚೆನ್ನೈನದ್ದು. ಫೈನ್ ಆರ್ಟ್ಸ್ ನವರು ತಮ್ಮ ಎಂದಿನ ಶೈಲಿಯ ನಾಟಕಗಳನ್ನ ಬಿಟ್ಟು ಒಂದು ಪೂರ್ಣಪ್ರಮಾಣದ ಪೊಲಿಟಿಕಲ್ ಸಟೈರ್ ನಾಟಕ ಆರಿಸಿಕೊಂಡು ಆಡಿದ್ದರು. ಅದರ ಹೆಸರು ‘ಡೆಮೊ ಕ್ರೇಜಿ..’ ಇದರ ಕಥಾಹಂದರ ಚೆನ್ನಾಗಿದೆ. ಬಡವನೊಬ್ಬ ವೈದ್ಯನೊಬ್ಬನ ನಿರ್ಲಕ್ಷ್ಯದಿಂದ ಸಾವನ್ನಪ್ಪುತ್ತಾನೆ. ಆದರೆ ಆ ವೈದ್ಯ, ರಾಜಕಾರಣಿಗೆ ಲಂಚ ಕೊಟ್ಟಿದ್ದರಿಂದ ಆ ಪ್ರಕರಣ ಬೆಳಕು ಕಾಣದೆ ರಾಜಕಾರಣದ ಹೊದಿಕೆ ಅಡಿ ಮರೆಯಾಗುತ್ತದೆ.

ಆದರೆ ಒಬ್ಬ ಮಹತ್ವಾಕಾಂಕ್ಷೆಯ ವಿರೋಧಪಕ್ಷದ ರಾಜಕಾರಣಿ ಇದನ್ನು ಪತ್ತೆಹಚ್ಚಿ ಸರ್ಕಾರ ಉರುಳಿಸಲು ನೋಡುತ್ತಾನೆ. ಆದರೆ ಪ್ರಕರಣ ಮುಚ್ಚಿಹಾಕಿರುವ ಭ್ರಷ್ಟ ರಾಜಕಾರಣಿಗೆ Status quo ಬಗ್ಗೆ ಚೆನ್ನಾಗಿ ಗೊತ್ತು. ಮತ್ತು ತಾನೇ ಕಟ್ಟಕಡೆಗೆ ಆರಿಸಿ ಬರುತ್ತೇನೆ ಎನ್ನುವುದೂ ಗೊತ್ತು. ಸ್ಟೇಟಸ್ ಕೋ ಅಂದರೆ ‘ಜನರು ಯಥಾ ಸ್ಥಿತಿಯಲ್ಲಿ ಮುಂದುವರೆಯಲು ಬಯಸುತ್ತಾರೆ’ ಎನ್ನುವುದು. ಯಾಕೆಂದರೆ ಭ್ರಷ್ಟತೆ ಅವರ ಬದುಕನ್ನು ಸುಗಮಗೊಳಿಸಿದೆ ಎಂದು ಅವನಿಗೆ ಗೊತ್ತು.

ಹಾಗಾಗಿ ‘ಡೆಮೊ ಕ್ರೇಜಿ..’ ನಾಟಕ ವ್ಯಕ್ತಪಡಿಸುವ ಆಶಯದ ಒನ್ ಲೈನ್ ಹೀಗಿದೆ: The people- for the corruption of the politicians..

ಕಟ್ಟಕಡೆಗೆ ಖುದ್ದಾಗಿ ದೇವರೇ ನೋಡಿಬಿಡುವ ಎಂದು ಚುನಾವಣೆಗೆ ಸ್ಪರ್ಧಿಸುತ್ತಾನೆ. ಆದರೆ ಸೋಲುತ್ತಾನೆ. ಇಷ್ಟನ್ನು ನಾಟಕವಾಗಿ ಕಟ್ಟಿದ್ದ ಬಗೆಯಲ್ಲಿ ಚಿಂತನೆಯೂ ಇತ್ತು, ನಗುವೂ ತರಿಸುತ್ತಿತ್ತು. ನಗುವಿನ ಮೂಲಕವೂ ಚಿಂತಿಸಲಿಕ್ಕೆ ಮತ್ತೆ ಪ್ರೇರೇಪಿಸುತ್ತಿತ್ತು.


ನಮ್ಮಲ್ಲಿ ರಾಜಕಾರಣವೋ ಮತ್ತೊಂದೋ ನಗಿಸುತ್ತೇವೆಂದರೆ ಮಡಿ ಶುರುವಾಗುತ್ತದೆ. ಇದು ಸರಿಯೋ ತಪ್ಪೋ ಒತ್ತಟ್ಟಿಗಿರಲಿ. ಇಂದಿನ ರಾಜಕಾರಣ ಮತ್ತು ರಾಜಕಾರಣಿಗಳ ಚಿತ್ರಗಳನ್ನು ಉಸಿರುಕಟ್ಟಿ ನೋಡಬೇಕೆ ಎನ್ನುವುದು ನನ್ನ ಪ್ರಶ್ನೆ. ಇದು ಅರ್ಥವಾದರೆ ಅಜ್ಜ ಮಾಸ್ಟರ್ ಹಿರಣ್ಣಯ್ಯನವರು, ಚೊ. ರಾಮಸ್ವಾಮಿಗಳು ಅರ್ಥವಾಗುತ್ತಾರೆ. ಅವರ ವಿಡಂಬನೆಯೂ ಅರ್ಥವಾಗುತ್ತದೆ.