ಶಾಲೆಯ ದಿನಗಳಿಂದಲೇ ದೇಶಭಕ್ತಿ ಹಾಡುಗಳು, ತ್ಯಾಗರಾಜರ ಕೀರ್ತನೆಗಳನ್ನು ಆಲಾಪಿಸುತ್ತಿದ್ದವರು ಕೋಟೇಶ್ವರಮ್ಮ. ಸ್ವಾತಂತ್ರ್ಯಾಭಿಲಾಷೆಯಿಂದ ತಾಯಿ ಚರಕದಿಂದ ನೂಲು ತೆಗೆಯುತ್ತಿದ್ದರು. ಸೋದರಮಾವ ರಾಷ್ಟ್ರೀಯ ಚಳವಳಿಯಲ್ಲಿ ಹೋರಾಟಗಾರ. ಊರಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿ ಇವರ ಹಾಡು ಇದ್ದೇ ಇರುತ್ತಿತ್ತು. ಉಪಾಧ್ಯಾಯರ ಪ್ರೋತ್ಸಾಹದಿಂದ ಹೊಸ ಹೊಸ ದೇಶಭಕ್ತಿ ಗೀತೆಗಳನ್ನು ಖುದ್ದಾಗಿ ರಚಿಸುವಂತಾಗಿದ್ದರು. ಮದುವೆಯ ನಂತರ ಕಮ್ಯೂನಿಷ್ಟ್ ಪಕ್ಷಕ್ಕಾಗಿ ದುಡಿಯುವಾಗ ಸಾಮಾಜಿಕ ಪಿಡುಗುಗಳ ಮೇಲೆ ಬೆಳಕು ಚೆಲ್ಲುವಂತಹ ಕ್ರಾಂತಿಕಾರಿ ಹಾಡುಗಳನ್ನು ಬರೆದರು.
ಸೀಮಾ ಸಮತಲ ಬರೆಯುವ ಪುಸ್ತಕ ದಿನಚರಿಯಲ್ಲಿ ಆಂಧ್ರದ ಕೋಟೇಶ್ವರಮ್ಮನವರ ಆತ್ಮಕಥನ ಕುರಿತು ಓದಿರಿ

 

1931ರಲ್ಲಿ ಗಾಂಧೀಜಿ ಆಂಧ್ರದ ಪಾಮರ್ರು ಎಂಬ ಊರಿಗೆ ಹೋದಾಗ ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಅವರೆಲ್ಲ ತಮ್ಮ ಮೈಮೇಲಿನ ಒಡವೆಗಳನ್ನು ಬಾಪೂಜಿಯವರಿಗೆ ಅರ್ಪಿಸುತ್ತಿದ್ದ ದೃಶ್ಯವನ್ನು ಕಂಡ ಹತ್ತು ವರ್ಷದ ಬಾಲಕಿಯೊಬ್ಬಳು ಸುಲಭವಾಗಿ ಕಳಚಬಹುದಾದ ತನ್ನ ಆಭರಣಗಳನ್ನೂ ಆ ಮಹಾತ್ಮನಿಗೆ ಕೊಟ್ಟಾಗ, ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ. ಆ ಸಣ್ಣ ಹುಡುಗಿ ಕೋಟೇಶ್ವರಮ್ಮ. ಮುಂದೆ ಯುವ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಮದುವೆಯಾಗಿ ಕೊಂಡಪಲ್ಲಿ ಕೋಟೇಶ್ವರಮ್ಮರಾದರು.

ಆಂಧ್ರದಲ್ಲಿ ಪ್ರಮುಖ ಹೋರಾಟಗಾರರಲ್ಲಿ ಇವರ ಹೆಸರೂ ಬರುತ್ತದೆ. ಭೂಗತ ಜೀವನವನ್ನು ನಡೆಸುತ್ತ ಜನರ ಏಳಿಗೆಗಾಗಿ, ಪಕ್ಷದ ಧ್ಯೇಯಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ ಮಾಹಾತಾಯಿ ಇವರು. ಜೊತೆಯಾಗಿ ಇರುತ್ತಿದ್ದವರು ಒಮ್ಮೆಲೆ ಒಬ್ಬೊಬ್ಬರಾಗಿ ಇವರನ್ನು ಬಿಟ್ಟುಹೋಗತೊಡಗಿದರು. ಆದರೂ ಧೈರ್ಯಗೆಡದೆ ತನ್ನ ಕೊನೆಯ ದಿನಗಳವರೆಗೂ ಹೋರಾಟದ ಸ್ಪೂರ್ತಿಯನ್ನು ಕೈಬಿಡಲಿಲ್ಲ. ಕತೆ, ಕವನ, ದೇಶಭಕ್ತಿ ಗೀತೆಗಳನ್ನು ರಚಿಸುತ್ತ ಕೋಟೇಶ್ವರಮ್ಮ ಎಲ್ಲರ ಮನದಲ್ಲಿ ಉಳಿದುಕೊಂಡಿದ್ದಾರೆ. ಮೊಮ್ಮಕ್ಕಳ ಒತ್ತಾಸೆಯಿಂದ ತೊಂಬತ್ತೆರಡು ವಯಸ್ಸಿನಲ್ಲಿ ತಮ್ಮ ಜೀವನಗಾಥೆಯನ್ನು ಅಕ್ಷರ ರೂಪದಲ್ಲಿ ಇಳಿಸಿದರು.

ಶಾಲೆಯ ದಿನಗಳಿಂದಲೇ ದೇಶಭಕ್ತಿ ಹಾಡುಗಳು, ತ್ಯಾಗರಾಜರ ಕೀರ್ತನೆಗಳನ್ನು ಆಲಾಪಿಸುತ್ತಿದ್ದವರು ಕೋಟೇಶ್ವರಮ್ಮ. ಸ್ವಾತಂತ್ರ್ಯಾಭಿಲಾಷೆಯಿಂದ ತಾಯಿ ಚರಕದಿಂದ ನೂಲು ತೆಗೆಯುತ್ತಿದ್ದರು. ಸೋದರಮಾವ ರಾಷ್ಟ್ರೀಯ ಚಳವಳಿಯಲ್ಲಿ ಹೋರಾಟಗಾರ. ಊರಲ್ಲಿ ನಡೆಯುತ್ತಿದ್ದ ಎಲ್ಲಾ ಕಾರ್ಯಕ್ರಮಗಳಲ್ಲಿ ಇವರ ಹಾಡು ಇದ್ದೇ ಇರುತ್ತಿತ್ತು. ಉಪಾಧ್ಯಾಯರ ಪ್ರೋತ್ಸಾಹದಿಂದ ಹೊಸ ಹೊಸ ದೇಶಭಕ್ತಿ ಗೀತೆಗಳನ್ನು ಖುದ್ದಾಗಿ ರಚಿಸುವಂತಾಗಿದ್ದರು.

ಮದುವೆಯ ನಂತರ ಕಮ್ಯೂನಿಷ್ಟ್ ಪಕ್ಷಕ್ಕಾಗಿ ದುಡಿಯುವಾಗ ಸಾಮಾಜಿಕ ಪಿಡುಗುಗಳ ಮೇಲೆ ಬೆಳಕು ಚೆಲ್ಲುವಂತಹ ಕ್ರಾಂತಿಕಾರಿ ಹಾಡುಗಳನ್ನು ಬರೆದರು. ಅವರ ‘ತೆಲುಗು ದೇಶವಮ್ಮ ನಮ್ಮದು, ತೆಲುಗು ಜಾತಿಯಮ್ಮ ನಮ್ಮದು’ ಎಂಬುದು ಹೆಚ್ಚು ಪ್ರಚಲಿತಗೊಂಡದ್ದು. ಸಹ ಕಾಮ್ರೇಡ್ ರಾಜಮ್ಮನವರಿಗೆ ಬರೆದ ಪತ್ರಗಳನ್ನ ಕತೆಯಾಗಿ ರೂಪಾಂತರಿಸಿ ‘ಅಮ್ಮ ಹೇಳಿದ ಕಥೆ’ ಎಂದು ಹೆಸರಿಟ್ಟು ಆಂಧ್ರಪ್ರಭ ಪತ್ರಿಕೆಯಲ್ಲಿ ಪ್ರಕಟಿಸುತ್ತಾರೆ. ಸುಮಾರು ಕತೆಗಳಿಗೆ ಬಹುಮಾನವೂ ಬರುತ್ತದೆ.

ಕೋಟೇಶ್ವರಮ್ಮ ತಮ್ಮ ಆತ್ಮಕತೆಯಲ್ಲಿ ಹಲವು ಸೂಕ್ಷ್ಮ ವಿಚಾರಗಳನ್ನು ಸರಳ ರೂಪದಲ್ಲಿ ವಿಸ್ತರಿಸಿದ್ದಾರೆ. ಆದರೆ ಅವು ಓದುಗರಿಗೆ ಚಿಂತನೆಗೆ ಒಳಪಡಿಸುತ್ತವೆ. ಅಸ್ಪೃಶ್ಯತೆಯನ್ನು ಬಲು ಹತ್ತಿರದಿಂದ ಕಂಡವರು ಅವರು. ಚಿಕ್ಕವರಿದ್ದಾಗ ಬ್ರಾಹ್ಮಣರ ಮನೆಯ ಕಾಮೇಶ್ವರಿ ಎಂಬ ಗೆಳತಿಯ ಮನೆಗೆ ಆಟಕ್ಕೆ ಹೋದಾಗ ಆಕೆಯ ಮುದಿ ಅಜ್ಜಿ ಕೋಟೇಶ್ವರಮ್ಮ ಶೂದ್ರ ಹುಡುಗಿಯೆಂದು, ನೀನು ಮನೆಯೊಳಗೆ ಬರಬಾರದೆಂದು ತಾಕೀತು ಮಾಡಿದ್ದರು. ಕೋಟೇಶ್ವರಮ್ಮ ಹಾಗೂ ಕಾಮೇಶ್ವರಿ ಅಜ್ಜಿ ಇಲ್ಲದ ಸಮಯದಲ್ಲಿ ಮುಸುರೆ ತೊಳೆಯುವುದು, ಬಂಡೆ ಒರೆಸುವುದನ್ನು ಮಾಡುತ್ತಿದ್ದರು. ಒಂದು ದಿನ ಅಡುಗೆಮನೆಯೊಳಗೆ ತೊಳೆದ ಪಾತ್ರೆಗಳನ್ನು ಇಟ್ಟು ಬಾಗಿಲು ಹಾಕುವುವಾಗ ಅಜ್ಜಿ ಬಂದುಬಿಡುತ್ತಾರೆ. ಅಜ್ಜಿಯ ಕೋಪವನ್ನು ತಣ್ಣ ಮಾಡಲು ಗೆಳತಿ ‘ನಾಯಿಯೊಂದು ಬಂದುಬಿಟ್ಟಿತ್ತು, ಅದನ್ನು ಓಡಿಸಲು ಕೋಟೇಶ್ವರಮ್ಮ ಸಹಾಯ ಮಾಡಿದಳು’ ಎಂದು ಸುಳ್ಳು ಹೇಳುತ್ತಾಳೆ. ಆದರೆ ಈ ಸುಳ್ಳು ಕೋಟೇಶ್ವರಮ್ಮನ ಮನಸ್ಸಿಗೆ ನಾಟುತ್ತದೆ. ಬೆಕ್ಕು, ನಾಯಿ ಹೋಗಬಹುದು ಆದರೆ ತಾನು ಹೋಗಬಾರದೆಂಬ ಕಹಿಸತ್ಯ ನುಂಗಲಾರದ ಸ್ಥಿತಿ ಎದುರಾಗುತ್ತದೆ. ಗೆಳತಿಯ ಸುಳ್ಳುಗಳಿಗಿಂತ ಆಡದೆ ಇರುವುದೇ ಲೇಸು ಎಂದು ಇನ್ನು ಮುಂದೆ ಆ ಮನೆಗೇ ಹೋಗಬಾರದು ಎಂದು ನಿರ್ಧಾರಕ್ಕೆ ಬರುತ್ತಾರೆ.

ಯುವಕ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರೊಂದಿಗೆ ಕೋಟೇಶ್ವರಮ್ಮನ ಸರಳ ವಿವಾಹವಾಗುತ್ತದೆ. ದೇಶಭಕ್ತಳಾದ ಹುಡುಗಿಯನ್ನು ಮದುವೆಯಾದರೆ ಆಕೆ ಚಳವಳಿಗೆ ಉಪಯುಕ್ತಳಾಗುತ್ತಾಳೆ, ಸುಧಾರಣೆಗಳನ್ನು ತರುವುದು, ಆಚರಿಸುವುದು ಚಳವಳಿಗಳ ಭಾಗವೆಂದು ನೆರೆದವರು ಆಶೀರ್ವದಿಸುತ್ತಾರೆ. ‘ಮುತ್ತೈದೆಯಾಗಿ ಬದುಕಲು ವ್ರತಗಳನ್ನು ಮಾಡಬೇಕಿಲ್ಲ. ಗಂಡ ದೇವರೆಂಬ ಮಾತು ಹಳೆಯದು. ಗಂಡಹೆಂಡಿರು ಪ್ರಾಣಸ್ನೇಹಿತರಾಗಿ ಸನ್ನಿಹಿತರಾಗಿ ಬಾಳಬೇಕೆಂಬುದು ಹೊಸತು. ಒಬ್ಬರನ್ನೊಬ್ಬರು ಹೆಸರು ಹಿಡಿದು ಕರೆಯುತ್ತಾ ಪ್ರೀತಿಯಿಂದ, ಸಮಾನಗೌರವದಿಂದ ಬಾಳಬೇಕು’ ಎಂಬ ಮಾತುಗಳನ್ನು ಗಂಡನಿಂದ ಕೇಳಿದಾಗ ಕೋಟೇಶ್ವರಮ್ಮನಿಗೆ ಸಂತೋಷವೆನಿಸಿತು. ಆದರೆ ಈ ಮಾತುಗಳನ್ನು ಆಡಿದ ಇದೇ ಗಂಡ ಮುಂದೊಮ್ಮೆ ಹೇಳದೆ ಕೇಳದೆ ತನ್ನನ್ನು, ತನ್ನ ಮಕ್ಕಳನ್ನು ಬಿಟ್ಟುಹೋಗುತ್ತಾರೆಂಬ ಕನಸೂ ಕಂಡಿರಲಿಲ್ಲ ಬಹುಶಃ. ಮುಂದೆ ಮಕ್ಕಳನ್ನೂ ಬಲವಂತವಾಗಿ ತಮ್ಮ ಹತ್ತಿರ ಇರಿಸಿಕೊಂಡಾಗ ಕೋಟೇಶ್ವರಮ್ಮನವರು ಒಬ್ಬಂಟಿಯಾಗಿ ಜೀವನ ಸಾಗಿಸುವ ಕತೆಯನ್ನು ಓದಿದರೆ ಕಣ್ಣು ತುಂಬಿ ಬರುತ್ತದೆ.

ಅವರು ಅರ್ಧಕ್ಕೆ ಬಿಟ್ಟ ಓದನ್ನು ಹೈದರಾಬಾದಿನಲ್ಲಿ ವಯಸ್ಕರ ಶಿಕ್ಷಣ ಕೇಂದ್ರದಿಂದ ಮುಂದುವರೆಸುತ್ತಾರೆ. ಹಾಸ್ಟೇಲಿನಲ್ಲಿದ್ದುಕೊಂಡು ಉಳಿದ ಮಹಿಳೆಯರಿಂದ ಪ್ರೀತಿಯಿಂದ ‘ಅಕ್ಕಾ’ ಎಂದು ಕರೆಸಿಕೊಂಡು ಸರಕಾರ ಕೊಡುತ್ತಿದ್ದ ಸ್ಟೈಪೆಂಡ್, ಪತ್ರಿಕೆಗಳಿಗೆ ಕಳುಹಿಸುತ್ತಿದ್ದ ಕತೆಕವನಗಳಿಂದ ಬರುತ್ತಿದ್ದ ಸಂಭಾವನೆಯಿಂದ ಜೀವನ ಸಾಗುತ್ತದೆ. ಮತ್ತೊಬ್ಬರ ಮೇಲೆ ಆಶ್ರಿತರಾಗದೆ ತಮ್ಮ ಕಾಲ ಮೇಲೆ ನಿಂತ ಪರಿ ಎಲ್ಲರಿಗೂ ಮಾದರಿ.

ಒಂದು ದಿನ ಅಡುಗೆಮನೆಯೊಳಗೆ ತೊಳೆದ ಪಾತ್ರೆಗಳನ್ನು ಇಟ್ಟು ಬಾಗಿಲು ಹಾಕುವುವಾಗ ಅಜ್ಜಿ ಬಂದುಬಿಡುತ್ತಾರೆ. ಅಜ್ಜಿಯ ಕೋಪವನ್ನು ತಣ್ಣ ಮಾಡಲು ಗೆಳತಿ ‘ನಾಯಿಯೊಂದು ಬಂದುಬಿಟ್ಟಿತ್ತು, ಅದನ್ನು ಓಡಿಸಲು ಕೋಟೇಶ್ವರಮ್ಮ ಸಹಾಯ ಮಾಡಿದಳು’ ಎಂದು ಸುಳ್ಳು ಹೇಳುತ್ತಾಳೆ.

ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಸರಕಾರ ಕಮ್ಯೂನಿಷ್ಟ್ ಪಕ್ಷದ ಮೇಲೆ ನಿಷೇಧವನ್ನು ಹೇರಿದಾಗೆಲ್ಲ ಸೀತಾರಾಮಯ್ಯನವರು ಭೂಗತರಾಗಬೇಕಾಗುತ್ತಿತ್ತು. ಅವರ ಅನುಪಸ್ಥಿತಿಯಲ್ಲಿ ಕೋಟೇಶ್ವರಮ್ಮ ವಿಜಯವಾಡ, ಮಚಲೀಪಟ್ಟಣ, ಏಲೂರು, ವಿಶಾಖಪಟ್ಟಣ, ರಾಯಪುರ, ಗೋಂದಿಯಾ ಊರುಗಳಲ್ಲಿ ಕಾಮ್ರೇಡ್‍ ಗಳು ತಂಗುವ ಡೆನ್ (ರಹಸ್ಯ ಸ್ಥಳ)ಗಳಲ್ಲಿ ವಾಸವಾಗುತ್ತಿದ್ದರು. ಊರಿಂದ ಊರಿಗೆ ಅಜ್ಞಾತರಾಗಿ ಸಂಚರಿಸಬೇಕಾಗುತ್ತಿತ್ತು. ಕೋಟೇಶ್ವರಮ್ಮ ಧೃತಿಗೆಡದೆ ಧೈರ್ಯದಿಂದ ಒಬ್ಬರೆ ತಮ್ಮ ಚಿಕ್ಕಚಿಕ್ಕ ಮಕ್ಕಳೊಂದಿಗೆ ಹೋಗುತ್ತಿದ್ದರು. ಪಕ್ಷದ ಸದಸ್ಯೆಯಾದ ನಂತರ ಪಕ್ಷದ ಕಾರ್ಯ, ಮಹಿಳಾ ಸಂಘಗಳ ಕೆಲಸಗಳಲ್ಲಿ ಭಾಗವಹಿಸುತ್ತಿದ್ದರು. ಮಾನಿಕೊಂಡ ಸೂರ್ಯವತಿ, ಕಾಟ್ರಗಡ್ಡ ಹನುಮಾಯಮ್ಮ, ಎಲ್ಲಂಕಿ ಅನ್ನಪೂರ್ಣಮ್ಮ, ಜೋಸ್ಯಭಟ್ಲ ಸುಬ್ಬಮ್ಮ, ತಾಪಿ ರಾಜಮ್ಮ, ಡಾಕ್ಟರ್ ಅಚ್ಚಮಾಂಬ ಮುಂತಾದವರು ಒಟ್ಟಾಗಿ ರೈತ ಮಹಿಳೆಯರ ಏಳಿಗೆಗಾಗಿ ಶ್ರಮಿಸುತ್ತಾರೆ.

1952ರಲ್ಲಿ ಉತ್ತರಾಂಧ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪಕ್ಷವು ಮಹಿಳಾ ಮಂಡಲಿಯನ್ನು ಹಳ್ಳಿಹಳ್ಳಿಗೆ ಕಳುಹಿಸುತ್ತಿತ್ತು. ಒಂದು ಗ್ರಾಮದಲ್ಲಿ ರವಿಕೆ ತೊಡದ ಮಹಿಳೆಯರಿಗೆ ಹಿಂದಿನಿಂದಲೂ ಬಂದ ಕುಲಾಚಾರವನ್ನು ಹೋಗಲಾಡಿಸಿ ಅವರು ಕುಪ್ಪಸ ತೊಡುವಂತೆ ಮಾಡಿದರು. ಮುಂದಿನ ಸಭೆಗಳಲ್ಲಿ ಬರುಬರುತ್ತಾ ಗ್ರಾಮದ ಮಹಿಳೆಯರು ರವಿಕೆ ತೊಟ್ಟು ಬಂದಾಗ ಕೋಟೇಶ್ವರಮ್ಮ ಹರ್ಷಿಸಿದರು.

ತಮ್ಮ ನಲವತ್ತನೆ ವಯಸ್ಸಿನಲ್ಲಿ ಕಾಕಿನಾಡದಲ್ಲಿ ಹಾಸ್ಟೇಲ್ ಒಂದರಲ್ಲಿ ಖಾಯಂ ಮೇಟ್ರನ್ ಹುದ್ದೆಗೆ ಸೇರಿಕೊಂಡು ಸ್ವಾವಲಂಬಿ ಜೀವನ ನಡೆಸತೊಡಗಿದರು. ಈ ನಡುವೆ ಬೆಳೆದು ಬಂದ ಮಗ ಚಂದು ತಂದೆತಾಯಿಯಂತೆ ಗುಪ್ತ ಹೋರಾಟಗಳಲ್ಲಿ ಭಾಗವಹಿಸಿ ನಿಗೂಢ ಸಾವನ್ನಪ್ಪುತ್ತಾರೆ. ಡಾಕ್ಟರ್ ಆಗಿದ್ದ ಮಗಳು ಕರುಣ ಮತ್ತು ಅಳಿಯ ರಮೇಶ್ ಕೂಡ ತಮ್ಮ ಎಳೆಯ ಮಕ್ಕಳನ್ನು ಹಿಂದೆ ಬಿಟ್ಟು ಮರಣಹೊಂದುತ್ತಾರೆ. ತಮ್ಮೆಲ್ಲಾ ಕಷ್ಟಗಳಲ್ಲಿ ಜೊತೆ ನಿಂತ ಕೋಟೇಶ್ವರಮ್ಮನ ತಾಯಿ ಅಂಜಮ್ಮ “ನೀನು ಜೀವನವಿಡೀ ದುಃಖಿಸಲೆಂದೇ ಹುಟ್ಟಿದಂತಿರುವೆ” ಎನ್ನುತ್ತ ಲೋಕವನ್ನು ಬಿಟ್ಟುಹೋಗುತ್ತಾರೆ.

ಮೂವತ್ತೆಂಟು ವರ್ಷಗಳ ನಂತರ ಗಂಡ ಸೀತಾರಾಮಯ್ಯನವರು ಅಂತಿಮ ಕ್ಷಣಗಳನ್ನು ಎಣಿಸುತ್ತಿರುವಾಗ ಗಟ್ಟಿ ಹೃದಯ ಮಾಡಿಕೊಂಡು ಒಲ್ಲದ ಮನಸ್ಸಿನಿಂದ ಕೊನೆಯಾಗಿ ನೋಡಿಕೊಂಡು ಬರುತ್ತಾರೆ. ಮೊಮ್ಮಕ್ಕಳು ಮನೆಗೆ ಹಿಂದಿರುಗುವಂತೆ ಒತ್ತಾಯಿಸಿದರೂ ತಾವು ವೃದ್ಧಾಶ್ರಮದಲ್ಲಿ ಪುಸ್ತಕಗಳ ಓದು, ದೃಷ್ಟಿಯಿಲ್ಲದವರಿಗೆ ಪೇಪರ್ ಓದಿ ಹೇಳುವುದು, ತೋಟದ ಕೆಲಸ ಮಾಡುವವರಿಗೆ ನೆರವಾಗುವಂತಹ ಕೆಲಸಗಳನ್ನು ಮಾಡತೊಡಗುತ್ತಾರೆ.

ಊರುಗೋಲಿಲ್ಲದೆ ನಡೆಯಲು ಆಗದಂತಹ ಸಮಯದಲ್ಲಿ ಮೊಮ್ಮಕ್ಕಳು ಹಠ ಮಾಡಿ ತಮ್ಮ ಜೊತೆಗೆ ವಿಶಾಖಪಟ್ಟಣಕ್ಕೆ ಕರೆದುಕೊಂಡು ಹೋದರು. ಅನೇಕ ಯುವಜನರು ಕೊಂಡಪಲ್ಲಿ ಕೋಟೇಶ್ವರಮ್ಮನವರನ್ನು ‘ದೇಶಕ್ಕಾಗಿ, ಕ್ರಾಂತಿಗಾಗಿ ಎರಡೂ ಬದಿಯಲ್ಲಿ ಕರಗಿದ ಮೇಣದ ಬತ್ತಿ, ಕೋಟೇಶ್ವರಮ್ಮ’, ‘ಮೂರು ತಲೆಮಾರುಗಳ ದೇಶಭಕ್ತರಿಗೆ ಪ್ರತಿನಿಧಿ ಕೋಟೇಶ್ವರಮ್ಮ’ ಎಂದು ಹೇಳುತ್ತಲೇ ಇರುತ್ತಾರೆ.


ಮೂಲತಃ ತೆಲುಗು ಮೂಲದಲ್ಲಿರುವ ಈ ಆತ್ಮಕತೆಯನ್ನು ಕನ್ನಡಕ್ಕೆ ಸ. ರುಘುನಾಥನವರು ಅನುವಾದಿಸಿದ್ದಾರೆ. ಚಳವಳಿಗಾಗಿ ಒಬ್ಬ ಮಹಿಳೆ ಎಷ್ಟೆಲ್ಲಾ ತ್ಯಾಗ ಮಾಡಬಲ್ಲಳು ಎಂಬುದಕ್ಕೆ ಕೋಟೇಶ್ವರಮ್ಮ ಸಾರ್ವಕಾಲಿಕ ಉದಾಹರಣೆ.