ಪಂಜೆಯವರು ಕಹಿಯನ್ನೆಲ್ಲ ಉಂಡು ಸಾಹಿತ್ಯದ ರಸಪಾಕವನ್ನು ಜನತೆಗೆ ನೀಡಿದರು. ಅವರು ಬಾಸೆಲ್ ಮಿಷನಿನವರಿಗಾಗಿ ಕನ್ನಡ ಮೊದಲನೆಯ, ಎರಡನೆಯ ಮತ್ತು ಮೂರನೆಯ ಪದ್ಯಪುಸ್ತಕಗಳನ್ನು ಸಂಪಾದಿಸಿಕೊಟ್ಟರಲ್ಲದೆ ಹೊಸತನವುಳ್ಳ ಕವನಗಳನ್ನು ಸ್ವತಃ ಬರೆದರು. ಮಕ್ಕಳಿಗಾಗಿ ಆಕರ್ಷಕವಾದ ಕಥೆಗಳನ್ನು ಬರೆದರು. ಟ್ರೈನಿಂಗ್ ಶಾಲೆಯಲ್ಲಿದ್ದಾಗ ಸಾವಿರಾರು ಶಿಷ್ಯರನ್ನು ತಯಾರು ಮಾಡಿದರು. ಹರಿಜನರಿಗೆ ಶಾಲಾಪ್ರವೇಶವನ್ನು ಒದಗಿಸಿ ಆ ಬಾಲಕರು ಉಳಿದವರೊಂದಿಗೆ ಸೇರುವಂತೆ ಮಾಡಿದರು.
ಡಾ. ಬಿ. ಜನಾರ್ದನ ಭಟ್ ಬರೆಯುವ ಕಡಲ ತಡಿಯ ಕವಿಶ್ರೇಷ್ಠರ ಕುರಿತ ‘ಕರಾವಳಿಯ ಕವಿರಾಜಮಾರ್ಗʼ ಹೊಸ ಸರಣಿ ಇಂದಿನಿಂದ, ಹದಿನೈದು ದಿನಗಳಿಗೊಮ್ಮೆ ಶುಕ್ರವಾರದಂದು ನಿಮ್ಮ ಕೆಂಡಸಂಪಿಗೆಯಲ್ಲಿ
೧: ಪಂಜೆ ಮಂಗೇಶರಾವ್
ಆಧುನಿಕ ಕನ್ನಡದ ಮೊದಲ ಕವನಗಳನ್ನು, ಮೊದಲನೆಯ ಸಣ್ಣಕತೆಯನ್ನೂ, ಮೊದಲನೆಯ ಅಂಕಣ ಬರಹವನ್ನೂ (ಹರಟೆಮಲ್ಲ) ಬರೆದವರೆಂಬ ಅಪೂರ್ವ ಕೀರ್ತಿಗೆ ಪಾತ್ರರಾಗಿರುವ ಪಂಜೆ ಮಂಗೇಶರಾಯರ ಮುಖ್ಯ ಕಾರ್ಯಕ್ಷೇತ್ರ ಮಂಗಳೂರಾಗಿತ್ತು. ಹೊಸಗನ್ನಡ ನವೋದಯ ಸಾಹಿತ್ಯದ ಮಂಗಳೂರು ಕೇಂದ್ರದ ನಾಯಕರಾಗಿದ್ದವರು ಪಂಜೆ ಮಂಗೇಶರಾಯರು.
ಪಂಜೆ ಮಂಗೇಶರಾಯರು 1874 ರಲ್ಲಿ ಬಂಟವಾಳದಲ್ಲಿ ಜನಿಸಿ 1937 ರಲ್ಲಿ ಹೈದರಾಬಾದಿನಲ್ಲಿ ನಿಧನರಾದರು. ಸಾರಸ್ವತರ ಕ್ರಮದಂತೆ ತಮ್ಮ ಮೂಲಸ್ಥಾನವಾದ ಪುತ್ತೂರು ಸೀಮೆಯ ಪಂಜದ ಹೆಸರನ್ನು ತಮ್ಮ ಹೆಸರಿನ ಜತೆ ಮಂಗೇಶರಾಯರು ಇಟ್ಟುಕೊಂಡಿದ್ದರು. ಬಂಟವಾಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಮಂಗಳೂರಿನ ಕೆನರಾ ಹೈಸ್ಕೂಲು ಮತ್ತು ಸೈಂಟ್ ಅಲಾಶಿಯಸ್ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರಿಸಿದರು. ಬಿ.ಎ. ಪೂರೈಸುವುದರೊಳಗೆ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತ ಕೆಲಸ ಸಿಕ್ಕಿದುದರಿಂದ, ಅಲ್ಲಿಗೆ ಸೇರಿಕೊಂಡರು.
ಈ ಹುದ್ದೆಗೆ ಪಂಜೆಯವರೊಂದಿಗೆ ಸ್ಪರ್ಧಿಸಿದ್ದವರು ಕವಿ ಮುದ್ದಣ ನಾಮಾಂಕಿತ ನಂದಳಿಕೆ ಲಕ್ಷ್ಮೀನಾರ್ಣಪ್ಪಯ್ಯ. ಪಂಜೆಯವರ ಇಂಗ್ಲಿಷ್ ಭಾಷಾಜ್ಞಾನದಿಂದಾಗಿ ಅವರಿಗೆ ಈ ಕೆಲಸ ಸಿಕ್ಕಿತು. ಆಗ ನಂದಳಿಕೆಯವರು ಪಂಜೆಯವರನ್ನು ಅಭಿನಂದಿಸಿ ಪತ್ರ ಬರೆದಿದ್ದರು; ಅದಕ್ಕೆ ಪಂಜೆಯವರು, ತಮಗಿಂತ ನಂದಳಿಕೆಯವರೇ ಶ್ರೇಷ್ಠರೆಂದು ಸೂಚಿಸಿ ಮಾರುತ್ತರ ಬರೆದುದು ಅವರ ನಿರ್ಮತ್ಸರ ಗುಣಗ್ರಾಹಿತ್ವಕ್ಕೆ ಸಾಕ್ಷಿಯಾಗಿದೆ.
ಮಂಗಳೂರು ಸರಕಾರಿ ಕಾಲೇಜಿನಲ್ಲಿ ಗೋವಿಂದ ಪೈಗಳು ಪಂಜೆಯವರ ಶಿಷ್ಯರಾಗಿದ್ದರು. ಮುಂದೆ ಪಂಜೆಯವರಿಗೆ ಹಲವು ಕಡೆ ವರ್ಗಾವಣೆಗಳಾದವು. ಅವರು ಸಬ್ ಅಸಿಸ್ಟೆಂಟ್ ಇನ್ಸ್ಪೆಕ್ಟರಾಗಿ, ಹೈಯರ್ ಎಲಿಮೆಂಟರಿ ಟ್ರೈನಿಂಗ್ ಶಾಲೆಯ ಮುಖ್ಯಸ್ಥರಾಗಿ, ಮಡಿಕೇರಿಯಲ್ಲಿ ಸಹಾಯಕ ಶಾಲಾ ಪರೀಕ್ಷಕರಾಗಿ ಮತ್ತು ಸೆಂಟ್ರಲ್ ಹೈಸ್ಕೂಲಿನ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಕಾಸರಗೋಡು ಮತ್ತು ಕೊಡಗುಗಳಲ್ಲಿದ್ದ ಪಂಜೆಯವರಿಗೆ ಶಿಕ್ಷಣ ಇಲಾಖೆಯ ಸಿಹಿ-ಕಹಿ ಅನುಭವಗಳಾದವು. ಕಹಿ ಅನುಭವಗಳೇ ಹೆಚ್ಚು.
ಆದರೆ ಪಂಜೆಯವರು ಕಹಿಯನ್ನೆಲ್ಲ ಉಂಡು ಸಾಹಿತ್ಯದ ರಸಪಾಕವನ್ನು ಜನತೆಗೆ ನೀಡಿದರು. ಅವರು ಬಾಸೆಲ್ ಮಿಷನಿನವರಿಗಾಗಿ ಕನ್ನಡ ಮೊದಲನೆಯ, ಎರಡನೆಯ ಮತ್ತು ಮೂರನೆಯ ಪದ್ಯಪುಸ್ತಕಗಳನ್ನು ಸಂಪಾದಿಸಿಕೊಟ್ಟರಲ್ಲದೆ ಹೊಸತನವುಳ್ಳ ಕವನಗಳನ್ನು ಸ್ವತಃ ಬರೆದರು. ಮಕ್ಕಳಿಗಾಗಿ ಆಕರ್ಷಕವಾದ ಕಥೆಗಳನ್ನು ಬರೆದರು. ಟ್ರೈನಿಂಗ್ ಶಾಲೆಯಲ್ಲಿದ್ದಾಗ ಸಾವಿರಾರು ಶಿಷ್ಯರನ್ನು ತಯಾರು ಮಾಡಿದರು. ದಲಿತರಿಗೆ ಶಾಲಾಪ್ರವೇಶವನ್ನು ಒದಗಿಸಿ ಆ ಬಾಲಕರು ಉಳಿದವರೊಂದಿಗೆ ಸೇರುವಂತೆ ಮಾಡಿದರು. “ಉಳ್ಳಯ್ಯ ದಯೆಗೊಳ್ಳಯ್ಯ” ಎಂಬ ಪದ್ಯವನ್ನು ದಲಿತರು ನಿವೇದಿಸುವಂತೆ ಬರೆದು ದಲಿತರಿಗೆ ವಿದ್ಯಾರ್ಥಿಗಳಿಂದಲೇ ಹಾಡಿಸಿದರು.
ಪಂಜೆಯವರು ಇಂಗ್ಲಿಷ್ ಕವನಗಳ ಭಾವಾನುವಾದವನ್ನೂ ಮಾಡಿದರು, ಜತೆಗೆ ಸ್ವಂತ ಪದ್ಯಗಳನ್ನೂ ಬರೆದರು. ಈ ಪದ್ಯಗಳಲ್ಲಿ ಆಧುನಿಕ ಕನ್ನಡ, ಹೊಸಮಟ್ಟುಗಳು, ಅಭಿನಯಗುಣಗಳಿದ್ದು ಎಲ್ಲರನ್ನೂ ಅವು ಆಕರ್ಷಿಸಿದವು. ಆಧುನಿಕ ಕನ್ನಡದ ಮೊದಲ ಗೀತೆಗಳು ಹೀಗೆ ಪಂಜೆಯವರಿಂದ ರಚಿತವಾದವು.
‘ನಾಗರಹಾವೇ ಹಾವೊಳು ಹೂವೇ’ ಮುಂತಾದ ಅರ್ಥಪೂರ್ಣ ಸಣ್ಣಕವನಗಳನ್ನೂ, ‘ಡೊಂಬರ ಚೆನ್ನ’, ‘ಕಡೆಕಂಜಿ’ ಮುಂತಾದ ಕಥನ ಕವನಗಳನ್ನೂ ಪಂಜೆಯವರು ಬರೆದರು. ಅವು ತಮ್ಮ ನಾದ, ಲಯ, ಹೊಸತನಗಳಿಂದ ಜನರಿಗೆ ಮೋಡಿ ಮಾಡಿದವು. ಪಂಜೆಯವರ ಕೊಡಗಿನ ವಾಸ ಅಷ್ಟೇನೂ ಹಿತಕರವಾಗಿರಲಿಲ್ಲವಾದರೂ ಅಲ್ಲಿನ ಪ್ರಕೃತಿ, ಜನರನ್ನು ಕಂಡು ಅವರು “ಹುತ್ತರಿ ಹಾಡ”ನ್ನು ಬರೆದರು. ಇಂದಿಗೂ ಅದು ಕೊಡಗಿನ ದೇಶಗೀತೆ ಅನ್ನುವಷ್ಟು ಪ್ರಸಿದ್ಧವಾಗಿದೆ.
ಹುತ್ತರಿ ಹಾಡು
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ,
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ,
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ,
ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆ ಕಳೆ ಕಳೆವಳೋ,
ಅಲ್ಲಿ ಆ ಕಡೆ ನೋಡಲಾ!
ಅಲ್ಲಿ ಕೊಡವರ ನಾಡಲಾ!
ಅಲ್ಲಿ ಕೊಡವರ ಬೀಡಲಾ!
ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು,
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು,
ಸವರಿ ಆನೆಯು ಸೊಂಡಿಲಲಿ ರಣಕೊಂಬನಾರ್ ಭೋರ್ಗರೆದರೋ,
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ,
ಅವರು ಸೋಲ್ ಸಾವರಿಯರು!
ಅವರೆ ಕಡುಗಲಿ ಗರಿಯರು!
ಅವರು ಕೊಡಗಿನ ಹಿರಿಯರು!
ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್,
ಹೆಮ್ಮೆ ಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್,
ಬೊಮ್ಮ ಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮ ದಾನದ ಕಟ್ಟು ಕಟ್ಟಳೆ, ರೀತಿ ನೀತಿಯ ಕೋಶವು!
ನಮ್ಮ ಕೊಡಗಿದು ಜಮ್ಮದು!
ಜಮ್ಮ ಕೊಡಗಿದು ನಮ್ಮದು!
ನಮ್ಮೊಡಲ್ ಬಿಡಲಮ್ಮದು!
ಇದು ಅಗಸ್ತ್ಯನ ತಪದ ಮಣೆ, ಕಾವೇರಿ ತಾಯ ತವರ್ಮನೆ,
ಕದನಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದಿರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು!
ಇದೊ! ಇದೋ! ಇಲ್ಲುರುಳ್ದ ಹಾಲೇರಿಯರ ಬಲಗಿರಿ ಶೃಂಗವು!
ವಿಧಿಯ ಮಾಟದ ಕೊಡಗಿದು!
ಮೊದಲೆ ನಮ್ಮದು, ಕೊಡಗಿದು!
ಕದಲದೆಮ್ಮನು; ಬೆಡಗಿದು!
ಒಮ್ಮತವು, ಒಗ್ಗಟ್ಟು, ಒಂದೇ ಮನವು ಎಲ್ಲಿದೆ ಹೇಳಿರಿ!
ಸುಮ್ಮನಿತ್ತರೊ ದಟ್ಟಿ ಕುಪ್ಪಸ? ಹಾಡು ಹುತ್ತರಿಗೇಳಿರಿ!
ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ,
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!
ನೆಮ್ಮದಿಯನಿದು ತಾಳಲಿ!
ಅಮ್ಮೆಯಾ ಬಲ ತೋಳಲಿ
ನಮ್ಮ ಕೊಡಗಿದು ಬಾಳಲಿ!
ಶಿಕ್ಷಕ ತರಬೇತಿಗಾರರಾಗಿ ಆಕರ್ಷಕವಾಗಿ ಪಾಠ ಮಾಡುವ ಕಲೆಯನ್ನು ಶಿಷ್ಯರಿಗೆ ಕಲಿಸಿದ ಪಂಜೆಯವರು ಕನ್ನಡದಲ್ಲಿ ಬಾಲಸಾಹಿತ್ಯದ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕತೆಗಳ ಶೀರ್ಷಿಕೆಗಳು ಕೂಡ ಆಕರ್ಷಕವಾಗಿರುತ್ತಿದ್ದವು. ‘ಇಲಿಗಳ ಥಕ್ಕಥೈ’, ‘ಗುಡುಗುಡು ಗುಮ್ಮಟದೇವರು’, ‘ಅರ್ಗಣೆ ಮುದ್ದೆ’, ‘ಅಂಗಳ ದುಗ್ಗು’, ‘ಮೆಣಸಿನ ಕಾಳಪ್ಪ’, ‘ಕೊ-ಕ್ಕೋ-ಕೋಳಿ’, ‘ಹೇನು ಸತ್ತು ಕಾಗೆ ಬಡವಾಯಿತು’ – ಇಂಥ ಕತೆಗಳ ಹೆಸರು ಕೇಳಿದರೇ ಮಕ್ಕಳ ಮೈ ನವಿರೇಳುತ್ತದೆ.
ಪಂಜೆಯವರು ಕತೆ ಹೇಳುವ ಶೈಲಿ ಅನನ್ಯವಾದುದು. ಮಕ್ಕಳ ಕತೆಗಳು ಹೇಗಿರಬೇಕು ಎಂದು ಲೇಖನವನ್ನು ಬರೆದಿದ್ದ ಪಂಜೆಯವರು ಶ್ರೇಷ್ಠ ಮಕ್ಕಳ ಕತೆಗಳನ್ನು ಬರೆದು ತೋರಿಸಿದ್ದಾರೆ. ಅವು ಮುಂದೆ ಜಿ.ಪಿ. ರಾಜರತ್ನಂ ಮುಂತಾದವರಿಗೆ ಸ್ಫೂರ್ತಿ ನೀಡಿದವು.
ಪಂಜೆಯವರು 1900ನೇ ಇಸವಿಯಲ್ಲಿ ಮಂಗಳೂರಿನ ‘ಸುವಾಸಿನಿ’ ಪತ್ರಿಕೆಯಲ್ಲಿ ‘ನನ್ನ ಚಿಕ್ಕತಾಯಿ’ ಎಂಬ ಸಣ್ಣಕತೆಯನ್ನು ಬರೆದರು. ಅದು ಆಧುನಿಕ ಕನ್ನಡದ ಮೊದಲನೆಯ ಸಣ್ಣಕತೆಯೆಂದು ಮಾನ್ಯವಾಗಿದೆ. ಪಂಜೆಯವರ ಭಾವ (ಪತ್ನಿಯ ಸಹೋದರ) ಬೆನಗಲ್ ರಾಮರಾಯರು ಸಂಪಾದಿಸುತ್ತಿದ್ದ ‘ಸುವಾಸಿನಿ’ ಮಾಸಪತ್ರಿಕೆಯಲ್ಲಿ ತಿಂಗಳಿಗೊಂದರಂತೆ ಸಣ್ಣಕತೆಗಳನ್ನು ಪಂಜೆಯವರು ಪ್ರಕಟಿಸಿದರು. ‘ನನ್ನ ಚಿಕ್ಕತಾಯಿ’, ‘ನನ್ನ ಚಿಕ್ಕತಂದೆಯವರ ಉಯಿಲ್’, ‘ನನ್ನ ಹೆಂಡತಿ’, ‘ಕಮಲಪುರದ ಹೊಟ್ಲಿನಲ್ಲಿ’, ‘ವೈದ್ಯರ ಒಗ್ಗರಣೆ’ – ಇವು ಕನ್ನಡದ ಮೊದಲ ಸಣ್ಣಕತೆಗಳು. ‘ಸುವಾಸಿನಿ’ ಪತ್ರಿಕೆ ನಿಂತು ಹೋದ ಕಾರಣ ಪಂಜೆಯವರು ಕತೆಗಳನ್ನು ಬರೆಯುವುದನ್ನು ನಿಲ್ಲಿಸಿದರು.
ಅಣ್ಣನ ವಿಲಾಪ
“ಎಲ್ಲಿ ಹೋದನು, ಅಮ್ಮ, ಪುಟ್ಟಣ್ಣನಮ್ಮಾ?
ನಿಲ್ಲದವನನು ಹುಡುಕಿ ತರುವೆ ನಾನಮ್ಮಾ!
ಅಲ್ಲಿಲ್ಲ, ಇಲ್ಲಿಲ್ಲ, ಎಲ್ಲಿಹನು ತಮ್ಮಾ!
ತಲ್ಲಣಿಸುತಿದೆ ಮನವು ಹೇಳು ಸೀತಮ್ಮಾ!
“ಹಸೆಯ ಮಗುವನು ಮೊನ್ನೆ ಬಂದವರು ನೋಡಿ,
ಮಸಕು ಬಿಳಿ ಕಣ್ಣುಗಳ ಕದಗಳನು ಹೂಡಿ,
ಹಸಿ ತುಳಸಿದಳ ನೀರ ಒಣ ಬಾಯೊಳೂಡಿ,
ಬಿಸಿಲು ಕನ್ನಡಿಯನ್ನು ಮಾಡಿನಲಿ ಮಾಡಿ;
“ಸುದ್ದ ನೀರನು ಮೀಸಿ, ಅರಸಿನವ ಪೂಸಿ,
ಗದ್ದೆಗೋರುವ ಹಲಗೆಯಲ್ಲಿ ಎಲೆ ಹಾಸಿ,
ಮುದ್ದು ಪುಟ್ಟನನುಡಿಗೆಯಿಂದ ಸಿಂಗರಿಸಿ,
ಸದ್ದಿಲ್ಲದೆಲ್ಲಿಗೊಯ್ದರು ಹೆಗಲೊಳಿರಿಸಿ?
“ಚೆನ್ನಾಗಿ ಸೇಸೆ ಮಳೆ ಸೂಸುತಿರೆ ಕನ್ನೆ
ನಿನ್ನೊಡನಿರುಳ್ ನಿದ್ದೆಯಲಿ ಕಂಡೆ ನಿನ್ನೆ
‘ಬನ್ನಿ, ಬಾ, ಬಾ!’ ಎಂದು ಮಾಡಿ ಕೈಸನ್ನೆ
ನನ್ನೆದುರು ಬಂದು ಹೋದಾ ಪುಟ್ಟನನ್ನೆ.
“ಮಬ್ಬು ತೆರೆ ಹಿಂದುಗಡೆ ಜಾರಿದುದು ತಾರೆ;
ಹೆಬ್ಬಿಸಿಲ ಉಗುಳುವಂತಿಹುದು ಹೊತ್ತಾರೆ
ಉಬ್ಬಸದಿ ಮೊದಲೆ ಬಾಲನ ಮೈಯು ತಾರೆ,
ಅಬ್ಬೆ, ನಡೆಯುವನೆಂತು? ಬೇಗ ಕರತಾರೆ!
“ಬಳ್ಳಿ ಉಯ್ಯಾಲೆಯಲಿ ಗಿಳಿಯ ಮರಿ ತೂಗಿ,
ಉಳ್ಳಲರ ಜೇನ್‍ಗುಡಿದು ಮರಿದುಂಬಿ ಕೂಗಿ,
ಬೆಳ್ಳಿನೀರ್ ಬಿಸಿಲಲ್ಲಿ ಮುಳುಗಿದಂತಾಗಿ
ಹಳ್ಳಿ ಹಗಲಿರೆ – ಪುಟ್ಟನಾಡುವನೆ ಹೋಗಿ?
“ತಾಯ್ದನದ ಬಳಿ ಹೋಗದೀ ಕರುವು ನಿಂದು,
ಕಾಯ್ದನಂ ಕರೆಯುತಿದೆ ನೆನಸಿ ‘ಮ್ಬೇ’ ಎಂದು,
ನಾಯ್ದುಗುಡದಲಿ ಬಿಡದೆ ಮಗುವಿದ್ದ ಸ್ಥಲವಾ,
ಬಾಯ್ದೆರೆಯದಾಗಾಗ ಮೂಸುತಿದೆ ನೆಲವಾ.
“ಇವನ ಚೆಲುವಿನ ಹುಂಜ ಹೋಯ್ತೆ ಮರಿಯಲ್ಲೇ!
ಸವೆಯಿತೇ ಕಾಲವಂಕುರದ ಪರಿಯಲ್ಲೇ!
ಕುವರನಾ ಬಾಳೆ ಕಂದಿತೆ ಕಂದಿನಲ್ಲೇ
ಸವಿ ಬಂದುಗೇನಾಯ್ತು ನನೆಸಂದಿನಲ್ಲೇ!
“ದೀಪಾವಳಿಯ ದಿನ ಬಲೀಂದ್ರ ಮರ ನೆಡಿಸಿ,
ಕೇಪಳಂಬಳ ಕಾಯಿ ಗುಂಡುಸರ ತೊಡಿಸಿ,
ಆ ಪೂಜೆಯಾಗುತಿರೆ ತಮ್ಮನನು ಬಿಟ್ಟು,
ಕೈಪರೆ ಹೊಡೆವುದೆಂತು? ಬರುವುದೇ ಪುಟ್ಟು?
“ನರಿಮೊಗರು ಜಾತ್ರೆಯಲಿ ನನ್ನನ್ನು ಕಂಡು,
‘ಅರರೆ? ತಮ್ಮನನೇಕೆ ನಾನು ಕರಕೊಂಡು
ಬರಲಿಲ್ಲ?’ ಎಂದಾ ಗೆಳೆಯರೆನ್ನ ಕೇಳೆ,
ಮರುಮಾತು ನಾನೇನು ಕೊಡಲಮ್ಮ ನಾಳೆ?
“ಒಬ್ಬನೇ ತಿನಿಸುಣಿಸು ನಾ ಬೇಡಲಾರೆ,
ಇಬ್ಬರಿಲ್ಲದೆ ಈಗ ನಾನಾಡಲಾರೆ,
ತಬ್ಬಿಕೊಂಡೆನ್ನ ನೀಂ ಅಳುವುದೇನಿಂತು?
ಅಬ್ಬೆ, ಅಳದಿರು, ಪುಟ್ಟನೆಲ್ಲಿಹನು ನಿಂತು?”
ತಾಯಿ : “ಮುತ್ತಿನಾ ಸರಪಳಿಯೆ! ಮಾತಿನರಗಿಳಿಯೆ!
ಎತ್ತ ಹೋದನು ತಮ್ಮ ಎಂಬುದನು ತಿಳಿಯೆ.
ಇತ್ತವನೆ ಎತ್ತಿದನು! ಕೇಳು, ಪುತ್ಥಳಿಯೆ!
ಬಿತ್ತಿದವ ಒತ್ತರಿಸಿದನು ತನ್ನ ಬಳಿಯೆ!
“ಮಗುವು, ಮುದ್ದಿನ ಮೊಗವು, ಅವನಿಲ್ಲಿ ಬಾರಂ,
ಅಗಲಿ ನಮ್ಮನು ಹೋದ, ಹೋದ ಬಹು ದೂರಂ,
ಜಗದಂಬೆ ತೊಡೆಯಲ್ಲಿ ಲಾಲಿ ಕೇಳುತ್ತ
ಸೊಗನಿದ್ದೆಗೊಂಡವನು ಬರುವನೇ ಇತ್ತ?”
ಮಗು : “ಈಗಲೇ ಹೊರಡುವೆನು, ಕೈ ಬಿಡೌ, ಅಮ್ಮಾ!
ಬೇಗ, ಅಪ್ಪನು ಬರುವ ಮುಂಚೆಯೇ ಅಮ್ಮಾ!
ಹೋಗುವೆನು, ಹೋಗುವೆನು; ಹೊರ ಹೊರಡು, ಅಮ್ಮಾ!
ಕೂಗಿ ಅಳದಿರು, ದಾರಿ ತೋರಿಸೌ, ಅಮ್ಮಾ!”
ತಾಯಿ : “ಚಂದು ಕೇಳ್! ದಾರಿಯಲಿ ನಾಪೋಪೆ ಮುಂದೆ,
ಬಂದಪನು ಬಳಿಕ ನಿನ್ನಯ ಮುದ್ದು ತಂದೆ,
ಮಂದಿ ಮಕ್ಕಳು ಪಡೆದು ಬಾ ನೀನು ಹಿಂದೆ”,
ಎಂದವನ ಬಾಯ ಬಿಗಿದಳು ಮುದ್ದಿನಿಂದೆ.
ಆರಲಿಲ್ಲವು ತಾಯ ಮನದ ಪರಿತಾಪಂ;
ಆರಿದುದು, ಮಾತೆಯಾ ಮನೆಯ ಮಣಿ ದೀಪಂ,
ಆರಲಿಲ್ಲವು ತಾಯ ಕಂಬನಿಯ ಕೂಪಂ,
ಆರಿದುದು ಭಾಗ್ಯಾಬ್ದಿ, ಅಯ್ಯಯ್ಯೊ ಪಾಪಂ!
ಆಧುನಿಕ ಇಂಗ್ಲಿಷ್ ಸಾಹಿತ್ಯವನ್ನು ನಿರಂತರವಾಗಿ ಓದುತ್ತಿದ್ದ ಪಂಜೆಯವರು ಆ ಹೊಸತನವನ್ನು ಕನ್ನಡಕ್ಕೆ ತಂದುಕೊಂಡರು – ಆದರೆ ನಮ್ಮ ಪರಂಪರೆಯ ಸಾಹಿತ್ಯದ ಮಣ್ಣಿನ ಗುಣವನ್ನು ಉಳಿಸಿಕೊಂಡರು. ಹಾಡುಗಳಿಗೆ ಪರಂಪರೆಯ ಮಟ್ಟುಗಳನ್ನು ಬಳಸಿಕೊಂಡರು. ಉದಾಹರಣೆಗೆ ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ’ ಎಂಬ ಹಾಡು ವಾದಿರಾಜರ ‘ಪಾಲಯಾಚ್ಯುತ ಪಾಲಯಾಚ್ಯುತ, ಪಾಲಯಾ ಕಮಲಾಲಯಾ’ ಹಾಡಿನ ಗತಿಯಲ್ಲಿದೆ.
ಪಂಜೆಯವರು ಇಂಗ್ಲಿಷಿನ ‘ಸ್ಟ್ರಾಂಡ್’ ಪತ್ರಿಕೆಯನ್ನು ನಿಯಮಿತವಾಗಿ ಓದುತ್ತಿದ್ದರೆಂದೂ, ಅದರಲ್ಲಿ ಬರುತ್ತಿದ್ದ ಕತೆಗಳ ಮಾದರಿಯಲ್ಲಿ, ಆ ಕಥನಕಲೆಯನ್ನು ಕನ್ನಡಿಸಿ ಕನ್ನಡಿಗರಿಗೆ ನೀಡಿದರೆಂದೂ ಗೋವಿಂದ ಪೈಗಳು ಹೇಳಿದ್ದಾರೆ. ಪಂಜೆಯವರ ಕತೆಗಳ ವಿಷಯ, ಪಾತ್ರಗಳು ಮಂಗಳೂರು ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕಾಣುವಂಥವೇ ಆಗಿದ್ದವು. ಅವರಿಂದಾಗಿ ದಕ್ಷಿಣ ಕನ್ನಡದಲ್ಲಿ ಕತೆಗಾರರ ತಂಡವೇ ಹುಟ್ಟಿಕೊಂಡಿತು.
ಪಂಜೆ ಮಂಗೇಶರಾಯರು ಕೋಟಿ ಚೆನ್ನಯರ ಜೀವನವನ್ನಾಧರಿಸಿ ‘ಕೋಟಿ ಚೆನ್ನಯ’ ಎಂಬ ಕಿರುಕಾದಂಬರಿಯನ್ನು ಬರೆದಿದ್ದಾರೆ. ತುಳು ಪಾಡ್ದನವನ್ನು ಕನ್ನಡದಲ್ಲಿ ನೀಡಿದವರಲ್ಲಿ ಅವರೇ ಮೊದಲನೆಯವರೆನ್ನಬಹುದು. ಅವರು ಕೆಲವು ಐತಿಹಾಸಿಕ ಕಥೆಗಳನ್ನು ಬರೆದಿದ್ದಾರೆ. ಸಂಶೋಧನಾತ್ಮಕ ಬರಹಗಳು, ಸಾಹಿತ್ಯ ವಿವೇಚನೆಯ ಲೇಖನಗಳು ಅವರ ಬರವಣಿಗೆಯಲ್ಲಿ ಸೇರಿವೆ.
ನವೋದಯದ ನಾಯಕರಾದ ಪಂಜೆ ಮಂಗೇಶರಾಯರು ಒಂದು ಕಡೆ ಅಸ್ಪೃಶ್ಯತಾ ನಿವಾರಣೆ ಮುಂತಾದ ಸುಧಾರಣೆಗಳನ್ನು ಬಯಸಿದರೆ, ಇನ್ನೊಂದು ಕಡೆ ನಮ್ಮ ಪರಂಪರೆಯ ಸತ್ವವನ್ನು ಎತ್ತಿಹಿಡಿದು ನಮ್ಮ ಜನರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಿದರು. ಪಂಜೆ ಮಂಗೇಶರಾಯರು ಕನ್ನಡ ನಾಡಿಗೆ ನೀಡಿದ ಸೇವೆಯನ್ನು ಗುರುತಿಸಿ 1934 ರ ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ಅವರಿಗೆ ವಹಿಸಲಾಯಿತು.
ಪಂಜೆಯವರ ಕಾವ್ಯ
ಪಂಜೆ ಮಂಗೇಶರಾಯರು (1874-1937) ಹೊಸಗನ್ನಡದಲ್ಲಿಯೇ ಸರಳ ಭಾಷೆಯ, ಸುಲಭ ಮಟ್ಟುಗಳ ಕಿರುಗವನಗಳನ್ನು ರಚಿಸಿದ ಮೊದಲಿಗರು. ಪಂಜೆಯವರು 1896 ರಿಂದಲೇ ಇಂತಹ ಕವಿತೆಗಳನ್ನು ಬರೆಯುತ್ತಿದ್ದವರು. ಇಂಗ್ಲಿಷ್ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ ಮೊದಲಿಗರಲ್ಲಿ ಪಂಜೆಯವರೂ ಒಬ್ಬರು. 1896ರಲ್ಲಿ ಅವರ `ಮರಳಿ ತಮ್ಮನ ಕರೆಯಪ್ಪಾ’ (ಎಫ್. ಹೆಮಾನ್ಸ್‌ಳ O! call my brother back to me ಎಂಬ ಕವನದ ರೂಪಾಂತರ) `ಸತ್ಯದೀಪಿಕೆ’ಯಲ್ಲಿ ಪ್ರಕಟವಾಗಿತ್ತು. `ನಕ್ಷತ್ರ’, `ಉತ್ತಮರಾಜ್ಯ’ ಎಂಬ ಕವನಗಳನ್ನೂ ಅವರು ಅನುವಾದಿಸಿದ್ದಾರೆ. ಹಲವು ಕವಿತೆಗಳನ್ನು ರೂಪಾಂತರಿಸಿದ್ದಾರೆ ಅಥವಾ ಮರುಸೃಷ್ಟಿಸಿದ್ದಾರೆ.
ಪಂಜೆಯವರ ಕವಿತಾರಚನೆಗೆ ಪ್ರೇರಣೆ ಒದಗಲು ಅವರ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಸನ್ನಿವೇಶಗಳು ಕಾರಣವಾದವು. ದಕ್ಷಿಣಕನ್ನಡದವರಿಗೆ ಸದಾ ಕಿವಿಯ ಮೇಲೆ ಬೀಳುತ್ತಿದ್ದ ಯಕ್ಷಗಾನ ಕವಿಗಳಿಂದ ಮತ್ತು ಹರಿದಾಸರಿಂದಾಗಿ ಅವರಿಗೆ ಕಿರುಗವನಗಳಿಗೆ ಹೊಸಗನ್ನಡವೂ ಸರಳ ಮಟ್ಟುಗಳೂ ಸಹಜ ಸೌಂದರ್ಯವನ್ನು ನೀಡುತ್ತವೆ ಎನ್ನುವುದರ ಅರಿವಾಗಿತ್ತು. ಉದಾಹರಣೆಗೆ ಪಾರ್ತಿಸುಬ್ಬನ (18ನೇ ಶತಮಾನದ ಯಕ್ಷಗಾನದ ಕವಿ) ಒಂದು ಯಕ್ಷಗಾನದ ಹಾಡನ್ನು ನೋಡಿ :
ಕಂಡಿರೇ – ನೀವು ಕಂಡಿರೇ || ಪಲ್ಲವಿ ||
ಕಂಡಿರೇ ಸಮುದ್ರರಾಜ
ಕಂಡೆಮ್ಮ ನುಬ್ಬೇರಿ ನಭೋ
ಮಂಡಲಕ್ಕೆ ಹಾರಿ ಮೀರಿ
ಮೆರೆವುದಾ – ಭೋರ್ಗರೆವುದಾ || 1 ||
ಧರೆಯ ಪುಣ್ಯನದಿಗಳನು
ಬರಿಸಿ ಬೆರೆಸಿಕೊಂಡು ತಾನು
ಹರುಷದ ತೆರೆತೆರೆಯೊಳುಬ್ಬಿ
ಹರಿವುದಾ – ಮೊರೆ ಮೊರೆವುದಾ || 2 ||
ಅಂಬರಕ್ಕೆ ಹಾರಿ ಮಗುಚಿ
ಕಾಂಬವರ್ಗೆ ಬೆರಗುಗೊಳಿಸಿ
ತುಂಬು ನೆರೆ ನೊರೆ ಹೆಚ್ಚಿ
ಹೊಳೆವುದಾ – ಸುತ್ತಿ ಸುಳಿವುದಾ || 3 ||
ಅಗಣಿತಾದ್ರಿಗವರ್ಗಂಗಳ
ನಗಿದು ನುಂಗಲೆಂಬಂತೆ ಬಾ
ಯ್ನೆಗೆದು ಚಿಗಿದು ಮಿಗುವ ಮೀನ
ನಿಕರವಾ – ಭಯ ಪ್ರಕರವಾ || 4 ||
ಹೇಗೆ ದಾಂಟಬೇಹುದೆಂದು
ನಾಗಶಾಯಿ ಬಲ್ಲ ನಮ್ಮಿಂ
ದಾಗದ ಕಾರ್ಯವಿದು ಮುಂದೇಂ
ಮಾಡಲಿ – ಯುಕ್ತಿ ಹೂಡಲಿ || 5 ||
ಈ ಹಾಡುಗಳನ್ನು `ತೆಂಕಣ ಗಾಳಿಯಾಟ’ದ ಜತೆಗೆ ಹೋಲಿಸಿ ನೋಡಿದರೆ ಪಂಜೆಯವರು ನಮ್ಮ ಪರಂಪರೆಯಿಂದಲೇ ಸ್ವೀಕರಿಸಿದುದು ಹೆಚ್ಚೆಂದು ತಿಳಿಯುತ್ತದೆ. (ದ್ವಿತೀಯಾಕ್ಷರ ಪ್ರಾಸವನ್ನು ಬಿಡಬಾರದೆನ್ನುವ ಅವರ ಹಠದಲ್ಲಿಯೂ ಪರಂಪರೆಯ ಒಲವು ಕಾಣಿಸುತ್ತದೆ.)
`ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೊ’ (ಹುತ್ತರಿ ಹಾಡು) – ಈ ಮಟ್ಟು ಹರಿದಾಸರಿಂದ ಪಡೆದುದೆಂದು ಹಾವನೂರರು ತೋರಿಸಿದ್ದಾರೆ. ಪುರಂದರದಾಸರ `ಎಂದು ಕಾಂಬೆನೊ ಎನ್ನ ಸಲಹುವ | ತಂದೆ ಉಡುಪಿಯ ಜಾಣನಾ|’, ವಾದಿರಾಜರ `ಪಾಲಯಾಚ್ಯುತ ಪಾಲಯಾಜಿತ | ಪಾಲಯಾ ಕಮಲಾಲಯಾ’ ಎಂಬ ಸಾಲುಗಳ ಜತೆ ಪಂಜೆಯವರ ಸಾಲನ್ನು ಹೋಲಿಸಬಹುದು.
ಇನ್ನು ಪಂಜೆಯವರಿಗೆ ಹೊಸಕವಿತಾ ಮಾರ್ಗವನ್ನು ಸೃಷ್ಟಿಸುವುದಕ್ಕೆ ಅವಕಾಶ ಮಾಡಿಕೊಟ್ಟ ಚಾರಿತ್ರಿಕ ಕಾರಣವೆಂದರೆ ಪಂಜೆಯವರು ಬಾಸೆಲ್ ಮಿಷನಿನವರ ಕನ್ನಡ ಪಠ್ಯ ಪುಸ್ತಕಗಳನ್ನು ರಚಿಸುವ ಕಾರ್ಯವನ್ನು ನಿರ್ವಹಿಸಿದ್ದು. ಅವರು ಅನುಸರಿಸಬೇಕಾಗಿದ್ದ ಮಾದರಿ ಇಂಗ್ಲೆಂಡಿನ ಪಠ್ಯಪುಸ್ತಕಗಳು. ಅದಕ್ಕಾಗಿ ಅವರು ಇಂಗ್ಲಿಷಿನಲ್ಲಿದ್ದ ಇಂಗ್ಲೆಂಡಿನ ಪಾಠ ಪುಸ್ತಕಗಳನ್ನು ಗಮನಿಸಿಯೇ ಇರುತ್ತಾರೆ. ಆಂಗ್ಲ ಪಠ್ಯ ಪುಸ್ತಕಗಳಲ್ಲಿದ್ದ ಕವಿತೆಗಳಲ್ಲಿದ್ದ ವಸ್ತುವಿನ ಹೊಸತನವನ್ನು ಪಂಜೆಯವರು ಅಳವಡಿಸಿಕೊಂಡರು.
ಕ್ರೈಸ್ತ ಮಿಷನರಿಗಳು, ಪಂಜೆ ಮಂಗೇಶರಾಯರು ಮತ್ತಿತರ ದೇಶೀಯ ಶಿಕ್ಷಣ ತಜ್ಞರ ಸಹಾಯದಿಂದ ತಯಾರಿಸಿದ ಪಠ್ಯಪುಸ್ತಕಗಳಲ್ಲಿ ಗದ್ಯ ಪಾಠಗಳ ಜತೆಗೆ ಇಂತಹ ಪದ್ಯಗಳು ಇದ್ದು ಅವು ಹೊಸ ಕವಿತೆಯ ಕಡೆಗೆ ಒಲವನ್ನು ಹೆಚ್ಚಿಸಿದವು. ಆಗ ಪಠ್ಯಪುಸ್ತಕಗಳಲ್ಲಿ ಬಳಸಿದ ಮತ್ತು ಹೊಸದಾಗಿ ಬರೆದ ಕವನಗಳಿಗೆ ಮಾದರಿಗಳಾಗಿ ಒದಗಿ ಬಂದದ್ದು ನಮ್ಮದೇ ಆದ ದಾಸರ ಪದಗಳು ಮತ್ತು ಯಕ್ಷಗಾನದ ಹಾಡುಗಳು. ಪಂಜೆಯವರ ಸಮಗ್ರ ಕಾವ್ಯದಲ್ಲಿ ಒಂದು ವಿಭಾಗ, ‘ನಡತೆಯ ಗೀತೆಗಳು’. ಈ ಪದವನ್ನು ಬಾಲ ಶಿಕ್ಷಣ ತಜ್ಞರೇ ಬಳಸಿರಬೇಕು ಎನ್ನುವುದನ್ನು ಊಹಿಸಬಹುದು. ಪಂಜೆಯವರ ಇಂತಹ ಗೀತೆಗಳಿಗೆ ನೇರವಾಗಿ ಇಂಗ್ಲಿಷಿನ ಪಠ್ಯ ಪುಸ್ತಕಗಳೇ ಮಾದರಿಗಳಾಗಿದ್ದವು. ‘ಎಂಟು ಬೇಡರು’, ‘ಉದ್ಯಮ’ ಮುಂತಾದ ಪದ್ಯಗಳು ಪಾಠ ಪುಸ್ತಕಗಳಲ್ಲಿ ಮಾತ್ರ ಇರುವಂತಹ ನೀತಿಪಾಠಗಳು. ಇವುಗಳನ್ನು ಪಂಜೆಯವರು ಇಂಗ್ಲಿಷಿನಿಂದಲೇ ಅನುವಾದಿಸಿರಬೇಕು; ಅಥವಾ ಇಂಗ್ಲಿಷ್ ಗೀತೆಗಳ ಪ್ರೇರಣೆಯಿಂದ ಬರೆದಿರಬೇಕು.
ಇಂತಹ ಊಹೆ ಮಾಡುವುದಕ್ಕೆ ಕಾರಣ ಆ ಪದ್ಯಗಳಲ್ಲಿ ಇರುವ ವಿಷಯ. ಪಾಶ್ಚಾತ್ಯರ ‘ಸಪ್ತ ಮಹಾಪಾಪಗಳು’ (ಸೆವೆನ್ ಡೆಡ್ಲೀ ಸಿನ್ಸ್), ಏಳು, ಎಂಟು, ಹತ್ತು ದುರ್ಬುದ್ಧಿಗಳು (vices) ಎಂದೆಲ್ಲ ಇರುತ್ತವಲ್ಲ ಅವುಗಳಲ್ಲಿ ‘ಅಸೂಯೆ’ (jealousy) ಕೂಡ ಒಂದು. ಇದು ಭಾರತದಲ್ಲಿ ‘ಅರಿ ಷಡ್ವರ್ಗ’ ಇತ್ಯಾದಿಗಳಲ್ಲಿ ಪಟ್ಟಿಮಾಡಲ್ಪಡುವ ದುರ್ಬುದ್ಧಿಯಲ್ಲ. ಪಂಜೆಯವರು ಅದನ್ನು ಸೇರಿಸಿರುವುದರಿಂದ (ಮಗುವೆ, ನಿನ್ನಯ ಮೈಗೆ ಗುರಿಯಿಟ್ಟು ಹೊಡೆವ ಎಂಟು ಮಂದಿ ಬೇಡರಿಂದ ದೂರವಾಗು…. ಚಿತ್ತವನು ಕೆಡಿಪ ಹೊಟ್ಟೆಯ ಕಿಚ್ಚು ಬೇಡ…) ಆಂಗ್ಲ ಮೂಲವನ್ನಿಟ್ಟುಕೊಂಡು ಬರೆದಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.
ಪಂಜೆಯವರು ಪಠ್ಯ ಪುಸ್ತಕಗಳಿಗೆ ಕವಿತೆಗಳನ್ನು ಸ್ವತಂತ್ರವಾಗಿ ಸೃಷ್ಟಿಸಿ, ಇಂಗ್ಲಿಷಿನಿಂದ ಅನುವಾದಿಸಿ, ರೂಪಾಂತರಿಸಿ ಮತ್ತು ಇಂಗ್ಲಿಷ್ ಕವಿತೆಗಳ ಪ್ರೇರಣೆಯಿಂದ ಮರುಸೃಷ್ಟಿಸಿ ಬರೆದಿದ್ದಾರೆ. ನೇರ ಅನುವಾದವೇ ಅನಿಸುವ ಒಂದು ಪದ್ಯ ಜೇನ್ ಟೇಲರ್ ಎಂಬ ಕವಯತ್ರಿಯ ಪ್ರಸಿದ್ಧ ಮಕ್ಕಳ ಗೀತೆ ‘ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್’ (Twinkle, Twinkle, Little Star BY JANE TAYLOR). ಅದು ಹೀಗಿದೆ (ಹೋಲಿಕೆ ಸುಲಭವಾಗಲೆಂದು ಚರಣಗಳ ಕೆಳಗೆ ಮೂಲವನ್ನು ವಿಂಗಡಿಸಿ ನೀಡಿದ್ದೇನೆ):
ಮಿನುಗೆಲೆ, ಮಿನುಗೆಲೆ, ನಕ್ಷತ್ರ!
ನನಗಿದು ಚೋದ್ಯವು ಬಹು ಚಿತ್ರ!
ಘನ ಗಗನದಿ ಬಲು ದೂರದಲಿ
ಮಿನುಗುವೆ ವಜ್ರಾಕಾರದಲಿ.
Twinkle, twinkle, little star,
How I wonder what you are!
Up above the world so high,
Like a diamond in the sky
ತೊಳಗುವ ಸೂರ್ಯನು ಮುಳುಗುತಲೆ
ಬೆಳಕದು ಕಾಣದು ಕಳೆಯುತಲೆ,
ಹೊಳಪದು ಕೊಡುತಿಹೆ ನನಗಂದು:
ತಳತಳಸುವೆ ಇರುಳಲಿ ನಿಂದು.
When the blazing sun is gone,
When he nothing shines upon,
Then you show your little light,
Twinkle, twinkle, all the night.
ಅಂದಾ ದಾರಿಗ ಕೆಂಗಿಡಿಗೆ
ವಂದಿಸಿ, ಹೋಗುವನಡಿಗಡಿಗೆ
ಕುಂದಲು ನಿನ್ನಯ ಮಿಣುಕು ಲವಂ
ಮುಂದಿನ ಹಾದಿಯ ಕಾಣಲವಂ
Then the traveler in the dark
Thanks you for your tiny spark,
How could he see where to go,
If you did not twinkle so.
ದೂರದ ಬಾನೊಳು ಹೊಂಚುತಿಹೆ:
ಬಾರಿಗೆ ಬಾರಿಗೆ ಮಿಂಚುತಿಹೆ
ತೋರುತ ತೋರದೆ ಮೂಡುತಿಹೆ,
ದಾರಿಗೆ ಹೊಳಪನು ಮಾಡುತಿಹೆ.
In the dark blue sky you keep,
Often through my curtains peep
For you never shut your eye,
Till the sun is in the sky.
ನನಗರಿಯದೊಡೇಂ? ಇದು ಚಿತ್ರ!
ಮಿನುಗೆಲೆ, ಮಿನುಗೆಲೆ, ನಕ್ಷತ್ರ!
As your bright and tiny spark
Lights the traveler in the dark,
Though I know not what you are,
Twinkle, twinkle, little star.
1909 ರಿಂದ 1922 ರವರೆಗೆ ಬಾಸೆಲ್ ಮಿಷನಿನವರು ‘ಕನ್ನಡ ಮೊದಲನೆಯ ಪದ್ಯ ಪುಸ್ತಕ’, ‘ಕನ್ನಡ ಎರಡನೆಯ ಪದ್ಯ ಪುಸ್ತಕ’ ಮತ್ತು ‘ಕನ್ನಡ ಮೂರನೆಯ ಪದ್ಯ ಪುಸ್ತಕ’ ಎಂಬ ಪಠ್ಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇವುಗಳ ಸಂಪಾದಕರು ಪಂಜೆ ಮಂಗೇಶರಾಯರೆ. `ಮೂರನೆಯ ಕನ್ನಡ ಪದ್ಯ ಪುಸ್ತಕ’ದಲ್ಲಿ ಪಂಜೆಯವರು “ಕನ್ನಡ ಕವಿತೆಯು ಈ ಕಾಲದಲ್ಲಿ ಹೇಗೆ ಬಹುಮುಖವಾಗಿ ಹರಿಯತೊಡಗಿದೆ” ಎಂಬುದನ್ನು ತೋರಿಸಿಕೊಡಲು ಹಲವು ಬಗೆಯ ಕವನಗಳನ್ನು ಸೇರಿಸಿಕೊಂಡಿದ್ದರು. ಶ್ರೀಯವರ ಇಂಗ್ಲಿಷ್ ಗೀತಗಳಿಂದ ಕೆಲವು ಪದ್ಯಗಳು, ಗೋವಿಂದ ಪೈ, ಎಂ.ಎನ್. ಕಾಮತ್, ಕಡೆಂಗೋಡ್ಲು ಮುಂತಾದವರ ಕವನಗಳು ಇದರಲ್ಲಿ ಸೇರಿದ್ದವು.
ಆಧುನಿಕ ಇಂಗ್ಲಿಷ್ ಸಾಹಿತ್ಯವನ್ನು ನಿರಂತರವಾಗಿ ಓದುತ್ತಿದ್ದ ಪಂಜೆಯವರು ಆ ಹೊಸತನವನ್ನು ಕನ್ನಡಕ್ಕೆ ತಂದುಕೊಂಡರು – ಆದರೆ ನಮ್ಮ ಪರಂಪರೆಯ ಸಾಹಿತ್ಯದ ಮಣ್ಣಿನ ಗುಣವನ್ನು ಉಳಿಸಿಕೊಂಡರು. ಹಾಡುಗಳಿಗೆ ಪರಂಪರೆಯ ಮಟ್ಟುಗಳನ್ನು ಬಳಸಿಕೊಂಡರು.
ಈ ಮೂರು ಪಠ್ಯ ಪುಸ್ತಕಗಳಲ್ಲಿ ಪಂಜೆಯವರ ಇಪ್ಪತ್ತೆರೆಡು ಪದ್ಯಗಳು ಇವೆ. ಅವಲ್ಲದೆಯೂ ಬೇರೆ ಕಡೆ ಪ್ರಕಟವಾಗಿದ್ದ ಅವರ ಕವಿತೆಗಳನ್ನು ಶಿವರಾಮ ಕಾರಂತರು ಬಹಳ ಪರಿಶ್ರಮದಿಂದ ಸಂಗ್ರಹಿಸಿಕೊಟ್ಟಿದ್ದರು. ಪಂಜೆಯವರ ಮಕ್ಕಳ ಬಳಿಯೂ ಕೆಲವು ಪದ್ಯಗಳು ಸಿಕ್ಕಿದ್ದವು. ಅವುಗಳನ್ನೆಲ್ಲ ಸಂಕಲಿಸಿ ಉಳಿಸಿಕೊಟ್ಟವರು, ಪಂಜೆಯವರ ಸುಪುತ್ರ ಶ್ರೀ ಪಂಜೆ ರಾಮ ರಾಯರು. ಓರಿಯೆಂಟ್ ಲಾಂಗ್‌ಮನ್ ಸಂಸ್ಥೆ 1972 ರಲ್ಲಿ ಪಂಜೆಯವರ ಸಮಗ್ರ ಕೃತಿಗಳನ್ನು ಪ್ರಕಟಿಸಿದೆ. ಆಮೇಲೆ ಬೆಂಗಳೂರಿನ ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಮತ್ತು ಪ್ರಭಾ ಕಂಬತ್ತಳ್ಳಿ ದಂಪತಿಗಳು ತಮಗೆ ಪ್ರಿಯರಾಗಿರುವ ಪಂಜೆ ಮಂಗೇಶ ರಾಯರ ಸಮಗ್ರ ಕೃತಿಗಳನ್ನು ಮತ್ತೊಮ್ಮೆ ಪ್ರಕಟಿಸಿ ಕನ್ನಡಿಗರಿಗೆ ಕೊಟ್ಟಿದ್ದಾರೆ.
ಪಂಜೆಯವರು ಸ್ವತಂತ್ರ ಭಾವಗೀತೆಗಳನ್ನು, ಪ್ರಕೃತಿ ಗೀತೆಗಳನ್ನು, ಕಥನ ಕವನಗಳನ್ನು, ಇಂಗ್ಲಿಷ್ ಕವಿತೆಗಳ ಭಾವಾನುವಾದಗಳನ್ನು ರಚಿಸಿ ಅವುಗಳನ್ನು ಪಠ್ಯ ಪುಸ್ತಕಗಳಲ್ಲಿ ಸೇರಿಸಿದ್ದಾರೆ.
ಅನುವಾದಗಳು – ಮರುಸೃಷ್ಟಿಗಳು
ಪಂಜೆಯವರ ಕವನಗಳು ಇಂಗ್ಲಿಷ್ ಕವಿತೆಗಳ ಪ್ರೇರಣೆಯಿಂದ ರಚಿಸಿದ ಭಾವಾನುವಾದಗಳು, ಕೆಲವು ಮರುಸೃಷ್ಟಿಗಳು ಆಗಿರುವುದರಿಂದ ಪಂಜೆಯವರ ಕವಿತೆಗಳನ್ನು ಕುರಿತು ಹೇಳುವಾಗ ಬಿ.ಎಂ.ಶ್ರೀಯವರು ನೆನಪಾಗುತ್ತಾರೆ. ಕವಿತೆಗಳಿಗೆ ಬಳಸಿದ ಹೊಸ ಮಟ್ಟುಗಳು ಮತ್ತು ಅತ್ಯಂತ ಸರಳವಾದ ಕನ್ನಡ ಶಬ್ದಗಳ ಬಳಕೆಯ ಸೊಗಸು – ಇವೆರಡರಲ್ಲಿಯೂ ಪಂಜೆಯವರು ಶ್ರೀಯವರಿಗೆ ಸಮನಾಗಿ ನಿಲ್ಲುತ್ತಾರೆ.
ಬಿ.ಎಂ.ಶ್ರೀ.ಯವರ ‘ಇಂಗ್ಲಿಷ್ ಗೀತಗಳು’ (1921 – 1924 – 1926 ಮೂರು ಹಂತಗಳಲ್ಲಿ 12 – 24 – 60 ಕವಿತೆಗಳನ್ನೊಳಗೊಂಡು ವಿಸ್ತೃತಗೊಳ್ಳುತ್ತಾ ಸಾಗಿ ಪ್ರಕಟವಾದ ಕೃತಿ) ಕನ್ನಡ ಕಾವ್ಯಕ್ಕೆ ಕ್ರಾಂತಿಕಾರಕವಾದ ಹೊಸದಾರಿಯನ್ನು ತೋರಿಸಿ ಯುಗಪ್ರವರ್ತಕ ಕೃತಿ ಎನಿಸಿಕೊಂಡಿದೆ. ಈ ಗೀತೆಗಳ ಪ್ರಭಾವಕ್ಕೆ ಬಿ.ಎಂ.ಶ್ರೀ.ಯವರ ಸ್ಥಾನ ಮಾನವೂ, ಆ ಕೃತಿಗೆ ಸಿಕ್ಕಿದ ಪ್ರಸಾರಭಾಗ್ಯವೂ ಕಾರಣವಾಯಿತು. ಹಾಗೆ ಆದುದು ಕನ್ನಡದ ಪುಣ್ಯವೇ. ಪಂಜೆ ಮಂಗೇಶ ರಾಯರು ಅಂತಹದೇ ಗೀತೆಗಳನ್ನು, ಹೊಸ ಮಟ್ಟುಗಳಲ್ಲಿ, ಅದಕ್ಕಿಂತಲೂ ಹತ್ತು ಹದಿನೈದು ವರ್ಷಗಳ ಮುಂಚೆಯೇ ಬರೆದಿದ್ದರು. ಅವು ಈ ಭಾಗದ ಪಠ್ಯ ಪುಸ್ತಕಗಳಲ್ಲಿ ಇದ್ದು ವ್ಯಾಪಕವಾದ ಪ್ರಸಾರ ಭಾಗ್ಯವನ್ನೂ ಪಡೆದಿದ್ದವು. ಅವರ ‘ಎಲ್ಲಿ ಭೂರಮೆ ದೇವ ಸನ್ನಿಧಿ..’ (ಹುತ್ತರಿ ಹಾಡು) ಕೊಡಗು ಮಾತ್ರವಲ್ಲ ಕನ್ನಡಿಗರ ದೇಶಭಕ್ತಿ ಗೀತೆಯಂತೆ ಇದ್ದು ಅಂದಿನಿಂದ ಇಂದಿನವರೆಗೂ ಜನಪ್ರಿಯತೆಯನ್ನು ಕಳೆದುಕೊಂಡದ್ದಿಲ್ಲ. ಹಾಗೆಯೇ ‘ತೆಂಕಣ ಗಾಳಿಯಾಟ’ವೂ ಕೂಡ.
ಪಂಜೆಯವರು ಶಿಕ್ಷಣ ಇಲಾಖೆಯ ಅಧಿಕಾರಿಯಾಗಿ ಇದ್ದುದರಿಂದ ಮತ್ತು ಪಠ್ಯ ಪುಸ್ತಕಗಳ ರಚನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದುದರಿಂದ ಅವರ ಗೀತೆಗಳ ಪ್ರಸಾರಕ್ಕೆ ಪಾಠ ಪುಸ್ತಕಗಳ ನೆರವು ಸಿಕ್ಕಿದೆ. ಆದರೆ ಅವರ ಇಲಾಖೆಯ ಶಿಕ್ಷಕರೆಲ್ಲ ಪ್ರಾಥಮಿಕ ಶಾಲೆಯ ಶಿಕ್ಷಕರು. ಕವಿಗಳಾಗಿ ಅವರ ದಾರಿಯಲ್ಲಿ ಸಾಗಿದವರು ಗೋವಿಂದ ಪೈಗಳೊಬ್ಬರೇ. ವಿದ್ಯಾರ್ಥಿ ಸಮೂಹ ಪಂಜೆಯವರ ಕವಿತೆಗಳನ್ನು ಇಷ್ಟಪಟ್ಟ ಕಾರಣ ‘ಡೊಂಬರ ಚೆನ್ನೆ’, ‘ಕಡೆಕಂಜಿ’, ‘ತೆಂಕಣ ಗಾಳಿಯಾಟ’, ‘ಹುತ್ತರಿ ಹಾಡು’ ಮುಂತಾದ ಕವಿತೆಗಳು ಈ ಪ್ರದೇಶದ ವಿದ್ಯಾವಂತರು ಸದಾ ಬಯಸಿ ಓದುತ್ತಿದ್ದ ಕವನಗಳಾಗಿದ್ದವು. ಶ್ರೀಯವರ ಶಿಷ್ಯರು ಕಾಲೇಜು ಅಧ್ಯಾಪಕರು ಮತ್ತು ನಾಡಿನ ಶ್ರೇಷ್ಠ ಸಾಹಿತಿಗಳು. ಶ್ರೀಯವರು ಹಾಕಿಕೊಟ್ಟ ದಾರಿಯಲ್ಲಿ ಬಹುದೂರ ಸಾಗಿದವರು.
ಪಂಜೆಯವರ ಮಾದರಿ ದಕ್ಷಿಣ ಕನ್ನಡದಿಂದ ಹೊರಗೆ ಅಷ್ಟಾಗಿ ಪ್ರಸಿದ್ಧಿಗೆ ಬರಲಿಲ್ಲ. ಅದೇ ವೇಳೆಗೆ ಶ್ರೀಯವರ ಪ್ರಭಾವವೂ ಈ ಜಿಲ್ಲೆಯಲ್ಲಿ ಇತರ ಪ್ರದೇಶಗಳಲ್ಲಿ ಆದಷ್ಟು ಆಗಲಿಲ್ಲ. (ಇಲ್ಲಿನ ಕಾವ್ಯ ಪಂಜೆಯವರ ಶಿಷ್ಯ ಗೋವಿಂದ ಪೈ, ಕಡೆಂಗೋಡ್ಲು, ಸೇಡಿಯಾಪು ಮುಂತಾದವರಲ್ಲಿ ಬಹುಮಟ್ಟಿಗೆ ತನ್ನದೇ ಆದ ದಾರಿಯಲ್ಲಿ ಸಾಗಿತು.)
ಪಂಜೆಯವರನ್ನು ಮತ್ತು ಶ್ರೀಯವರನ್ನು ಹೋಲಿಸುವಾಗ ನನಗೆ ಇಬ್ಬರು ಕೂಡ ಪ್ರಾತಃಸ್ಮರಣೀಯರು ಮತ್ತು ಕನ್ನಡವನ್ನು ಕಟ್ಟಿದ ಶ್ರೇಷ್ಠ ಸಾಹಿತಿಗಳು ಎಂಬ ಗೌರವಭಾವವಲ್ಲದೆ ಬೇರೇನೂ ಇಲ್ಲ. ಕವಿಯಾಗಿ ಪಂಜೆ ಮಂಗೇಶ ರಾಯರ ಶಕ್ತಿ ಒಂದು ಗುಲಗಂಜಿ ತೂಕ ಹೆಚ್ಚಿನದೆಂದೇ ಭಾವಿಸಬಹುದು. ಒಂದು ಸಣ್ಣ ವಿವರಣೆಯನ್ನು ಕೊಡುವುದಿದ್ದರೆ, ಪಂಜೆಯವರ ‘ಕಡೆಕಂಜಿ’, ಮತ್ತು ‘ಡೊಂಬರ ಚೆನ್ನೆ’ ಕಥನ ಕವನಗಳು ಶ್ರೀಯವರ ಇಂಗ್ಲಿಷ್ ಗೀತಗಳಲ್ಲಿ ಇದ್ದರೆ ಇವು ಅವರಲ್ಲವೆಂದು ಕಂಡುಹುಡುಕಲು ಕಷ್ಟವಿದೆ! ನೋಡಿ:
ದಾಟಿ ಪಡುಹೊಳೆ ಜನರ ಸಂದಣಿ ಆಟ ನೋಡಲು ಕೂಡಿತು;
ಕೋಟೆ, ಕೊತ್ತಳ, ಮಾಡು, ಮನೆ, ಮರ, ಕೊಂಬೆಗಳ ಮೇಲಿದ್ದರು.
ಗುಲ್ಲು ಮಾಡರು ಸೊಲ್ಲನಾಡರು ಎಳ್ಳು ಬಿದ್ದರೆ ಬೊಬ್ಬೆಯು.
ಅಲ್ಲಿ ಜನಗಳ ನುಗ್ಗು ನುಗ್ಗಿಗೆ ಇಲ್ಲ ಸಾಸಿವೆ ಹಾಕಲು.
(‘ಡೊಂಬರ ಚೆನ್ನೆ’ – ಯಿಂದ)
ತುಳುವ ನಾಡೊಳು ಹೊಳಲು ಮೆರೆವುದು
ಹಳೆಯ ಕಾರ್ಕಳ ಎಂಬುದು
ಕೊಳಲು ಕುಂಟೆಯು ಪೈರು ಪಚ್ಚೆಯು
ತಳೆದ ಮನೆ ಅಲ್ಲಿದ್ದವು.
*****
ದಿಟ್ಟ ಕೈಯಲಿ ಪುಟ್ಟ ಕರುವನು
ಕಟ್ಟಿಕೊಂಡಿಹ ಸೆಟ್ಟಿಯು,
“ಕೆಟ್ಟೆನಯ್ಯೋ ! ಕೆಟ್ಟೆನಯ್ಯೋ !
ಕೆಟ್ಟೆ !” ಎಂದಳುತಿದ್ದನು. (ಕಡೆಕಂಜಿ – ಕವಿತೆಯಿಂದ)
ಪಂಜೆಯವರದೆಂದು ಗುರುತು ಹಿಡಿವವರಿಗೆ ತಿಳಿಯುವ ಮೊದಲನೆಯ ಸುಳಿವೇ ಅವರು ಬಳಸುವ ಆದಿಪ್ರಾಸ. ಮುಂದೆ ಅವರ ಶಿಷ್ಯ ಮಂಜೇಶ್ವರ ಗೋವಿಂದ ಪೈಗಳು ಪ್ರಾಸ ತ್ಯಾಗ ಮಾಡುವವರೆಗೆ ಕನ್ನಡ ಕವಿತೆಗೆ ಅದು ಲಕ್ಷ್ಮಣ ರೇಖೆಯಾಗಿದ್ದಿತಷ್ಟೆ! ಆ ಕಟ್ಟುಪಾಡಿನೊಳಗೆ ಪಂಜೆಯವರು ಕನ್ನಡ ಕವಿತೆಗೆ ನೀಡಿದ ಹೊಸತನ ಆಶ್ಚರ್ಯಕರವಾದುದು. ಪಂಜೆಯವರ ಇನ್ನೊಂದು ವೈಶಿಷ್ಟ್ಯ ಎಂದರೆ ಅವರು ಬಳಸುತ್ತಿದ್ದ ಅನುರಣನ ಶಬ್ದಗಳು, ದ್ವಿರುಕ್ತಿಗಳು, ತಾಳವನ್ನು ಕುಟ್ಟಿ ತೋರಿಸುವ ಲಯ ಇತ್ಯಾದಿ ಅಭಿಜಾತ ಕಾವ್ಯಶಕ್ತಿ.
ಪಂಜೆಯವರ ಪ್ರಸಿದ್ಧ ಕವನ `ತೆಂಕಣ ಗಾಳಿಯಾಟ’ ಒಂದು ಮರುಸೃಷ್ಟಿ. ಅದರ ಮೂಲ ಹೊವಿಟ್ ಕವಿಯ ‘Frolic in the wind’. ಪಂಜೆಯವರು ಹೊವಿಟ್‌ನ ಕವನದಿಂದ ಸ್ಫೂರ್ತಿ ಪಡೆದಿರಬಹುದಾದರೂ `ತೆಂಕಣ ಗಾಳಿಯಾಟ’ ಕನ್ನಡದ ಸ್ವತಂತ್ರ ಕವನ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರಮಟ್ಟಿಗೆ ಈ ಕವಿತೆ ನಮ್ಮ ಕರಾವಳಿಯ ಮಳೆಗಾಳಿಯ ಚಿತ್ರಣವಾಗಿದೆ. ಕವಿತೆಗೆ ಪ್ರೇರಣೆ ಮಾತ್ರ ಹೊವಿಟ್ ಕವಿಯದು. ಈ ಕವಿತೆಯನ್ನು ಓದಿ:
ತೆಂಕಣ ಗಾಳಿಯಾಟ
ಬರಲಿದೆ! ಅಹಹಾ! ದೂರದಿ ಬರಲಿದೆ –
ಬುಸುಗುಟ್ಟುವ ಪಾತಾಳದ ಹಾವೋ?
ಹಸಿವಿನ ಭೂತದ ಕೂಯುವ ಕೂವೋ?
ಹೊಸತಿದು! ಕಾಲನ ಕೋಣನ, ಓ! ಓ!
– ಉಸುರಿನ ಸುಯ್ಯೋ? ಸೂಸೂಕರಿಸುತ.
ಬರುವುದು! ಬರಬರ ಭರದಲಿ ಬರುವುದು!-
ಬೊಬ್ಬೆಯ ಹಬ್ಬಿಸಿ ಒಂದೇ ಬಾರಿಗೆ,
ಉಬ್ಬರ ಎಬ್ಬಿಸಿ ಕಡಲಿನ ನೀರಿಗೆ,
ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ,
ಅಬ್ಬರದಲಿ ಭೋರ್-ಭೋರನೆ ಗುಮ್ಮಿಸಿ
ಬರುತದೆ! ಮೈತೋರದೆ ಬರುತದೆ, ಅದೆ!-
ನಡು ಮುರಿಯುತ ನಗ ನಾವೆಗೆ, ಕೂವೆಗೆ
ಉಡಿಸಿದ ಹಾಯಿಯ ಹರಿಯುತ ಬಿರಿಯುತ,
ಹಡಗನು ಕೀಲಿಸಿ, ತುಮುರನು ತೇಲಿಸಿ,
ದಡದಲಿ ಝಾಡಿಸಿ, ದೋಣಿಯನಾಡಿಸಿ,
ಇದೆ ಇದೆ! ಬರುತಿದೆ! ಇದೆ ಇದೆ, ಬರುತಿದೆ!-
ಹಕ್ಕಿಯ ಕಣ್ಣಿಗೆ ಧೂಳಿನ ಕಾಡಿಗೆ
ಇಕ್ಕುತ, ಹೊಲದೆತ್ತಿಗೆ ದನಕಾಡಿಗೆ
ಫಕ್ಕನೆ ಹಟ್ಟಿಗೆ ಅಟ್ಟಿಸಿ, ಕಾಡಿಗೆ
ಸಿಕ್ಕಿದ ಕಿಚ್ಚನು ಊದಲು ಹಾರುತ
ಬರುತಿದೆ! ಇದೆ ಇದೆ, ಬರುತಿದೆ!-
ಸಡಲಿಸಿ ಮಡದಿಯರುಡಿಯನು ಮುಡಿಯನು,
ಬಡ ಮುದುಕರ ಕೊಡೆ ಗರಿ ಹರಿದಾಡಿಸಿ,
ಹುಡುಗರ ತಲೆ ತಲೆ ಟೊಪ್ಪಿಯ ಆಟವ
ದಡಬಡನಾಡಿಸಿ, ಮನೆ ಮನೆ ತೋಟವ
ಅಡಿಮೇಲಾಗಿಸಿ, ತೆಂಗನು ಲಾಗಿಸಿ,
ಅಡಕೆಯ ಬಾಗಿಸಿ, ಪನೆ ಇಬ್ಭಾಗಿಸಿ,
ಬುಡದೂಟಾಡಿಸಿ, ತಲೆತಾಟಾಡಿಸಿ,
ಗುಡಿಸಲ ಮಾಡನು ಹುಲುಹುಲು ಮಾಡಿಸಿ
ಬಂತೈ! ಬಂತೈ! ಇದೆ ಇದೆ! ಬಂತೈ!
ಗಿಡಗಿಡದಿಂ ಚೆಲು ಗೊಂಚಲು ಮಿಂಚಲು,
ಮಿಡಿಯನು, ಹಣ್ಣನು ಉದುರಿಸಿ ಕೆದರಿಸಿ,
ಎಡದಲಿ ಬಲದಲಿ, ಕೆಲದಲಿ ನೆಲದಲಿ,
ಪಡುವಣ ಮೋಡವ ಬೆಟ್ಟಕೆ ಘಟ್ಟಕೆ
ಹೊಡೆದಟ್ಟುತ ಕೋಲ್ ಮಿಂಚನು ಮಿರುಗಿಸಿ,
ಗುಡುಗನು ಗುಡುಗಿಸಿ, ನೆಲವನು ನಡುಗಿಸಿ,
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ,
ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್
ಕುಡಿನೀರನು ಒಣಗಿದ ನೆಲಕೆರೆವೋಲ್-
ಬಂತೈ ಬೀಸುತ, ಬೀಸುತ ಬಂತೈ!
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ! ಬಂತೈ! ಬಂತೈ! ಬಂತೈ!
*****
ಈ ಕವಿತೆಗೆ ಪ್ರೇರಣೆ ನೀಡಿದ ಕವಿತೆ ಕೆಳಗಿದೆ:
THE WIND IN A FROLIC
By William Howitt
The wind one morning sprang up from sleep,
Saying, “Now for a frolic! now for a leap!
Now for a madcap, galloping chase!
I’ll make a commotion in every place!”
So it swept with a bustle right through a great town,
Creaking the signs, and scattering down
The shutters, and whisking, with merciless squalls,
Old women’s bonnets and gingerbread stalls.
There never was heard a much lustier shout
As the apples and oranges tumbled about;
And urchins, that stand with their thievish eyes
Forever on watch, ran off each with a prize.
Then away to the fields it went blustering and humming,
And the cattle all wondered whatever was coming.
It plucked by their tails the grave matronly cows,
And tossed the colts’ manes all about their brows,
Till offended at such a familiar salute,
They all turned their backs and stood silently mute.
So on it went, capering and playing its pranks;
Whistling with reeds on the broad river banks;
Puffing the birds, as they sat on a spray,
Or the travelers grave on the king’s highway.
It was not too nice to bustle the bags
Of the beggar, and flutter his dirty rags.
’Twas so bold that it feared not to play its joke
With the doctor’s wig, and the gentleman’s cloak.
Through the forest it roared, and cried gayly, “Now,
You sturdy old oaks, I’ll make you bow!”
And it made them bow without more ado,
Or it cracked their great branches through and through.
Then it rushed like a monster o’er cottage and farm,
Striking their inmates with sudden alarm;
And they ran out like bees in a midsummer swarm.
There were dames with kerchiefs tied over their caps,
To see if their poultry were free from mishaps.
The turkeys they gobbled, the geese screamed aloud,
And the hens crept to roost in a terrified crowd;
There was rearing of ladders, and logs laying on,
Where the thatch from the roof threatened soon to be gone.
But the wind had passed on, and had met in a lane
With a schoolboy, who panted and struggled in vain,
For it tossed him, and twirled him, then passed, and he stood
With his hat in a pool and his shoe in the mud.
ಪಂಜೆಯವರು ಶಬ್ದಗಳ ಬಳಕೆಯಲ್ಲಿ, ಛಂದಸ್ಸಿನ ಬಳಕೆಯಲ್ಲಿ ಬಹಳ ಜಾಗರೂಕರಾಗಿದ್ದರು; ಅವುಗಳ ಪರಿಣಾಮವನ್ನು ಬಲ್ಲವರಾಗಿದ್ದರು. ಒಂದು ವಿಷಮ ಗಣ ತರುವುದಿದ್ದರೂ ಅದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದರು. ಉದಾಹರಣೆಗೆ `ತೆಂಕಣ ಗಾಳಿಯಾಟ’ದ ‘ಬೊಬ್ಬುಳಿ ತೆರೆಯನು ದಡಕ್ಕೆ ಹೊಮ್ಮಿಸಿ’ ಎಂಬ ಸಾಲನ್ನು ಗಮನಿಸಿ. `ದಡಕ್ಕೆ’ ಎನ್ನುವಲ್ಲಿ ವಿಷಮಗಣ (ಜ ಗಣ) ಬಂದಿದೆ. ಆದರೆ ಅದು ತೆರೆಯು ಕಡಲ ತೀರಕ್ಕೆ ಬಡಿದು ನೀರು ಮೇಲಕ್ಕೆ ಚಿಮ್ಮುವುದನ್ನು ಅಭಿನಯಿಸಿ ತೋರಿಸಲು ಬಂದಿದೆ.
ಗಾಳಿಯ ಪ್ರವೇಶದ ಸೂಚನೆಯೊಂದಿಗೆ ಪ್ರಾರಂಭವಾಗುವ ಕವನ ಗಾಳಿಯ ಅಟ್ಟಹಾಸವನ್ನು, ಆಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ. “ನಿಜವಾಗಿ ಇದು ಛಂದ, ಕುಣಿತ ಮೋಹಕರ. ಮೂರ್ತವಾಗಿ ಶಬ್ದಾರ್ಥ ಸಂಪತ್ತಿನಿಂದ ಬೆರಗುಗೊಳಿಸುವ ಕೃತಿ. ಯಾರು ಇಂತಹ ಜಾಲವನ್ನು ನಿರ್ಮಾಣ ಮಾಡುತ್ತಾರೆಯೊ ಅವರು ನಿಜವಾಗಿಯೂ ಐಂದ್ರಜಾಲಿಕರೇ ಎನ್ನಬೇಕು” ಎಂದು ವಿ. ಸೀತಾರಾಮಯ್ಯನವರು ಇದನ್ನು ಶ್ಲಾಘಿಸಿದ್ದಾರೆ.
ಪಂಜೆಯವರ ಅಣ್ಣನ ವಿಲಾಪ ಕವಿತೆಯ ಮೇಲೆ ಹೆಮಾನ್ಸ್ (Felicia Hemans) ಕವಯತ್ರಿಯ ‘O, Call My Brother Back to Me ಕವಿತೆಯ ಪ್ರಭಾವ ಹೆಚ್ಚೇ ಇದೆ. ಅದನ್ನು ಭಾವಾನುವಾದ ಎನ್ನಬಹುದು. ಪಂಜೆಯವರ `ಡೊಂಬರ ಚೆನ್ನೆ’ ಮತ್ತು `ಕಡೆಕಂಜಿ’ ಕಥನ ಕವನಗಳು ಪ್ರಸಿದ್ಧವಾಗಿವೆ. ‘ಕಡೆಕಂಜಿ’ ಒಂದು ಸುಂದರ ಮರುಸೃಷ್ಟಿ. ವರ್ಡ್ಸ್‌ವರ್ತ್ ಕವಿಯʼ `The last of the Flock” ಕವನ ಇದಕ್ಕೆ ಸ್ಫೂರ್ತಿ. ಇದು ಕೂಡ ‘ತೆಂಕಣ ಗಾಳಿಯಾಟ’ದಂತೆ ಪಂಜೆಯವರ ಸ್ವಂತಿಕೆಯ ಛಾಪುಳ್ಳ ಕವನ.
`ಉದಯರಾಗ’ ದಂತಹ ಸಣ್ಣ ನಿಸರ್ಗಗೀತೆಯಲ್ಲಿ ಕೂಡ ಕವಿ ಪಂಜೆಯವರ ಕಲ್ಪನಾಶಕ್ತಿ, ಸೂರ್ಯನ ಕೆಲಸಗಳನ್ನು ಒಂದೊಂದಾಗಿ ಚಿತ್ರಿಸಿ ಅವನ ದೈನಂದಿನ ಸಾಧನೆಯನ್ನು ತೋರಿಸಿ ಒಂದು ನೀತಿಯನ್ನು ಹೇಳಿ ಸಾರ್ಥಕಗೊಳಿಸುವ ಕವಿತ್ವವನ್ನು ಕಾಣಬಹುದು.
ಉದಯರಾಗ
ಮೂಡುವನು ರವಿ ಮೂಡುವನು; ಕತ್ತಲೊಡನೆ ಜಗಳಾಡುವನು;
ಮೂಡಣ ರಂಗಸ್ಥಳದಲಿ ನೆತ್ತರು ಮಾಡುವನು; ಕುಣಿದಾಡುವನು.
ಬೆಳಕಿನ ಕಣ್ಣುಗಳಿಂದಾ ಸೂರ್ಯನು ನೋಡುವನು, ಬಿಸಿಲೂಡುವನು;
ಚಿಳಿಪಿಳಿ ಹಾಡನು ಹಾಡಿಸಿ, ಹಕ್ಕಿಯ ಗೂಡಿನ ಹೊರ ಹೊರದೂಡುವನು.
ಬಂಗಾರದ ಚೆಲು ಬಿಸಿಲ ಕಿರಿಟದ ಶೃಂಗಾರದ ತಲೆ ಎತ್ತುವನು;
ತೆಂಗಿನ, ಕಂಗಿನ, ತಾಳೆಯ, ಬಾಳೆಯ ಅಂಗಕೆ ರಂಗನು ಮೆತ್ತುವನು.
ಮಾಡಿನ ಹುಲ್ಲಲಿ ಚಿನ್ನದ ಗೆರೆಯನು ಎಳೆಯುವನು ರವಿ ಹೊಳೆಯುವನು;
ಕೂಡಲೆ ಕೋಣೆಯ ಕತ್ತಲೆ ಕೊಳೆಯನು ತೊಳೆಯುವನು, ರವಿ ಹೊಳೆಯುವನು.
ಮಲಗಿದ ಕೂಸಿನ ನಿದ್ದೆಯ ಕಸವನು ಗುಡಿಸುವನು, ಕಣ್ ಬಿಡಿಸುವನು;
ಹುಲು, ಗಿಡ, ಹೂವಿಗೆ ಪರಿಪರಿ ಬಣ್ಣವ ಉಡಿಸುವನು, ರವಿ ತೊಡಿಸುವನು.
ಏರುವನು, ರವಿ, ಏರುವನು, ಬಾನೊಳು ಸಣ್ಣಗೆ ತೋರುವನು;
“ಏರಿದವನು ಚಿಕ್ಕವನಿರಬೇಕೆಲೆ” ಎಂಬಾ ಮಾತನು ಸಾರುವನು.
ಪಂಜೆಯವರ ಮತ್ತೊಂದು ಪ್ರಸಿದ್ಧ ಕವನ `ಹೊಲೆಯನ ಹಾಡು’. ಅಸ್ಪೃಶ್ಯರು ಮೇಲುವರ್ಗದವರನ್ನುದ್ದೇಶಿಸಿ ತಮ್ಮನ್ನು ಕೀಳಾಗಿ ನಡೆಸಿಕೊಳ್ಳುವುದನ್ನು ಖಂಡಿಸಿ ತಮ್ಮ ಹಕ್ಕನ್ನು ಕಿತ್ತುಕೊಳ್ಳುವೆವೆಂದು ಆತ್ಮವಿಶ್ವಾಸದಿಂದ ಘೋಷಿಸುವ ಈ ಹಾಡಿನಲ್ಲಿ ಪಂಜೆಯವರ ರಾಜಕೀಯ ನಿಲುವನ್ನು ಕಾಣಬಹುದು. ಸರಕಾರಿ ಕೆಲಸದಲ್ಲಿದ್ದ ಅವರು ಆಳರಸರನ್ನು ಎದುರು ಹಾಕಿಕೊಳ್ಳದೆ, ಸಮಾಜದ ದೋಷಗಳನ್ನು ಮೊದಲು ನಿವಾರಿಸಬೇಕೆಂಬ ನಿಲುವನ್ನು ವ್ಯಕ್ತ ಪಡಿಸುತ್ತಾರೆ.
ಅರರೆ! ಕಾಲಡಿಯ ಕುಂಬಳಕ್ಕೆ ಕಣ್ಮುಚ್ಚಿ,
ಪರದೇಶ ಕಾಯಿದೆ ಸಾಸಿವೆ ಕಾಳು ಹೆಚ್ಚಿ,
ಹಿರಿದು ಹಬ್ಬಿಸುವ ಬೊಬ್ಬೆಯದೇಕೆ ಹೇಳು?
ಹೊರದಬ್ಬು ಮೊದಲು ನಿನ್ನಂಗಳ ದೂಳು!
ನೋಡು ಸ್ವರಾಜ್ಯಕ್ಕೆ ನಾವೂರುಗೋಲು!
ನೀಡಣ್ಣ! ದಮ್ಮಯ್ಯ ! ಕೊಡು ಸರಿ ಸಾಲು!
ಬೇಡಿದಾಗಲೆ ಬಿಟ್ಟುಕೊಡುವುದೆ ಮೇಲು!
ಬೇಡ ನಾಂ ಸೆಳೆದು ಕೊಂಬೆವು ನಮ್ಮ ಪಾಲು!
– ಈ ಸಾಲುಗಳಲ್ಲಿ ನಾವು ಹೋರಾಡಬೇಕಾದುದು ಮೊದಲು ನಮ್ಮ ದೋಷಗಳ ವಿರುದ್ಧ; ಸ್ವಾತಂತ್ರ್ಯ ಹೋರಾಟ ಇದರೆದುರು ಅಷ್ಟು ಮುಖ್ಯವಲ್ಲ ಎಂಬ ಧ್ವನಿಯಿದೆ.
ಆದರೆ ಪಂಜೆಯವರಲ್ಲೂ ವಸಾಹತುಶಾಹಿಯನ್ನು ವಿರೋಧಿಸುವ ಪ್ರವೃತ್ತಿ ಸುಪ್ತವಾಗಿತ್ತೆಂದು ಕಾಣುತ್ತದೆ. 1908ರಲ್ಲಿ ಪಂಜೆಯವರು `ತೂಕಡಿಕೆಯ ಕಳೆ’ ಎಂಬ ಕವನವನ್ನು ಬರೆದು ಗೋವಿಂದ ಪೈಗಳ ಮನೆಯಲ್ಲಿ ಕಿಟಕಿ ಬಾಗಿಲು ಮುಚ್ಚಿ ಓದಿದರಂತೆ. ಪಂಜೆಯವರ `ನಾಗರಹಾವು’ ಕವನವು ಬ್ರಿಟಿಷರನ್ನೇ ಅನ್ಯೋಕ್ತಿಯ ಮೂಲಕ ಕುರಿತಿದೆಯೆಂದು ಹೇಳುವವರಿದ್ದಾರೆ.
ಪಂಜೆಯವರ ಸಮಕಾಲೀನನೂ ಪತ್ರ ವ್ಯವಹಾರದ ಗೆಳೆಯನೂ ಆದ ಮುದ್ದಣನು ರಾಮಾಯಣ, ಶೇಷ ರಾಮಾಯಣ ಮುಂತಾದ ಮೂಲಗಳಿಂದ ಕತೆಗಳನ್ನು ಪಡೆದು ಸೃಜನಶೀಲ ಪ್ರತಿಸೃಷ್ಟಿ ಮಾಡಿದಂತೆ ಪಂಜೆಯವರು ಪಾಶ್ಚಾತ್ಯರಿಂದ ಪಡೆದು ಮರುಸೃಷ್ಟಿ ಮಾಡಿದರೆನ್ನುವುದೇ ಸರಿಯಾದ ಮಾತು. ಭಾರತೀಯ ಪರಂಪರೆಯಲ್ಲಿ ಕತೆ ಅಥವಾ ವಸ್ತುವಿಗೊಂದು ಕಾಪಿರೈಟ್ ಅಂತ ಇರಲಿಲ್ಲ. ಕವಿ ತನ್ನ ಪ್ರತಿಭಾವಿಶೇಷದಿಂದ ಯಾವುದೇ ವಸ್ತುವನ್ನು ಸ್ವೋಪಜ್ಞ ಕೃತಿಯೆಂಬಂತೆ ಪುನರ್ ನಿರ್ಮಿಸಬಲ್ಲ.
ಒಟ್ಟಿನಲ್ಲಿ, ಪಂಜೆ ಮಂಗೇಶರಾಯರು ತಮ್ಮ ಪಠ್ಯಪುಸ್ತಕಗಳು, ಸ್ವಂತ ರಚನೆಗಳು ಮತ್ತು ಉಪನ್ಯಾಸಗಳ ಮೂಲಕ ಹೊಸಗನ್ನಡ ಕವಿತೆಯ ಬಗ್ಗೆ ಜನರಿಗೆ ಆಕರ್ಷಣೆ ಹುಟ್ಟುವಂತೆ ಮಾಡಿದರು. ಇನ್ನೊಂದು ಕಡೆ ತಮ್ಮ ಶಿಷ್ಯ ವರ್ಗದವರು ಹೊಸ ಸೃಷ್ಟಿಯಲ್ಲಿ ತೊಡಗುವಂತೆ ಸ್ಫೂರ್ತಿ ನೀಡಿದರು. ಪಂಜೆಯವರನ್ನು 1934ರ ರಾಯಚೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸುವ ಮೂಲಕ ಕನ್ನಡನಾಡು ಅವರನ್ನು ಗೌರವಿಸಿತು. ರಾಯಚೂರು ಸಮ್ಮೇಳನ ಮುಗಿಸಿ ಮಕ್ಕಳೊಂದಿಗೆ ಕೆಲದಿನಗಳನ್ನು ಕಳೆಯಲು ಪಾಟ್ನಾ, ಹೈದರಾಬಾದ್, ಮೈಸೂರುಗಳಿಗೆ ಹೋದ ಪಂಜೆಯವರು ಕೊನೆಗೆ ಹೈದರಾಬಾದಿಗೆ ಹೋಗಿ ತಮ್ಮ ಕೊನೆಯ ದಿನಗಳನ್ನು ಕಳೆದರು.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.
ಒಳ್ಳೆಯದಾದ ಮಾಲಿಕೆ. ಸಂಪೂರ್ಣವಾಗಿ ಓದಿ ತಿಳಿಯುವುದಕ್ಕೆ ಖುಶಿಯಾಯಿತು. ಯಾವ ಹೊತ್ತಲ್ಲೂ ಲಿಂಕ್ ನಿಂದ ಓದಬಹುದು. ಡಾ.ಬಿ.ಜನಾರ್ದನ ಭಟ್ ಅವರಿಗೆ ಹಾಗೂ ಕೆಂಡ ಸಂಪಿಗೆ.ಕಾಂ ಗೆ ಅಭಿನಂದನೆಗಳು
ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಅಭಿನಂದನೆಗಳು
ಕನ್ನಡ ನಾಡಿನ ನಿತ್ಯವೂ ಹಚ್ಚ ಹಸಿರಾಗಿಯೇ ಇರುವ ಖ್ಯಾತ ಸಾಹಿತಿ, ಪಂಜೆ ಮಂಗೇಶರಾಯರ ಕುರಿತು ಲೇಖಕ ಬಿ ಜನಾರ್ದನ ಭಟ್ ಅವರು ಬರೆದ ಲೇಖನ ಅವರ ಕುರಿತು ಸಮಗ್ರ ಬೆಳಕನ್ನು ಚಲ್ಲಿದೆ. ಬಹುಶಃ ಇಷ್ಟು ವಿಸ್ತೃತವಾದ ಲೇಖನ ಇತ್ತೀಚಿನ ದಿನಗಳಲ್ಲಿ ಬಂದಿರಲಿಕ್ಕಿಲ್ಲ.
ಪಂಜೆಯವರ ಕುರಿತ ಸಮಗ್ರ ಮಾಹಿತಿಯ ಜತೆಗೆ ಬರವಣಿಗೆಯಲ್ಲಿ ಅವರು ಅನುಸರಿದಿದ ಕ್ರಮ, ಮಾಡಿದ ಅಧ್ಯಯನ, ಇತರ ಸಾಹಿತ್ಯದ ನೆರವು, ಅವುಗಳ ಭಾವಾನುವಾದ ಮೊದಲಾದ ವಿಷಯಗಳ ಕುರಿತೂ ಮಾಹಿತಿ ಒದಗಿಸಿದೆ. ಪಂಜೆಯವರು ಬತೆದ ಕನಪ್ರಿಯ ಕವನಗಳನ್ನೂ ಉಲ್ಲೇಖಿಸಿರುವುದರಿಂದ ಇದೊಂದು ಅಧ್ಯಯನಪೂರ್ಣ ಪ್ರಬಂಧವಾಗಿ ಹೊರಹೊಮ್ಮಿದೆ. ಸರಣಿಯ ಮೊದಲ ಲೇಖನದಲ್ಲಿ ನಮ್ಮಂಥ ಆಸಕ್ತ ಓದುಗರ ಮನ ಸೆಳೆದಿದೆ. ಅಭಿನಂದನೆಗಳು ಲೇಖಕರು ಮತ್ತು ಕೆಂಡ ಸಂಪಿಗೆಗೆ.
ಪಂಜೆಯವರು ಕಥೆಗಳನ್ನೂ, ಕವನಗಳನ್ನೂ ಆರೆದು ಕುಡಿದು ಬಾಲ್ಯದಲ್ಲಿ ಅವು ಆಂಗ್ಲ ಸಾಹಿತ್ಯದಿಂದ ಪ್ರೇರಿತವಾಗೀರ ಬಹುದೆಂಬ ಕಲ್ಪನೆಯೂ ಇರಲಿಲ್ಲ. ಬಾಯಿಪಾಠ ವಾಗಿದ್ದ ಕಡೆಕಂಜಿ ಇತ್ತೀಚೆಗೆ ನೂರಾರು ಸ್ಮರಣೆಗೆ ಬರೆದಾಗಿದೆ.
ಸರ್, ಬಾಲ್ಯವೇ ಮರುಕಳಿಸಿದಂತಾಯ್ತು. ವಂದನೆ.
ಉಪಯುಕ್ತ ಲೇಖನ ಮಾಲಿಕೆ. ಸರಳ, ಸುಂದರ, ಸಮಗ್ರ, ಅರ್ಥಪೂರ್ಣ ಲೇಖನ. ಪ್ರಿಯ ಜನಾರ್ದನ ಭಟ್ಟರಿಗೆ ಅಭಿನಂದನೆಗಳು ಹಾಗೂ ಧನ್ಯವಾದಗಳು
ಕನ್ನಡನಾಡಿನ ಹಿರಿಯ ತಲೆಮಾರಿನ ಕವಿ, ಸಾಹಿತಿಗಳನ್ನು ಪರಿಚಯ ಮಾಡಿಸುವ ಈ ಮಾಲಿಕೆ ಬರೆಯುತ್ತಿರುವ ಜನಾರ್ದನ ಭಟ್ ರವರಿಗೆ ನನ್ನ ನಮಸ್ಕಾರಗಳು ಮತ್ತು ಅಭಿನಂದನೆಗಳು.
ಪಂಜೆಯವರ ಬಗ್ಗೆ ಕೊಡಬಹುದಾದ ಎಲ್ಲಾ ಮಾಹಿತಿಗಳನ್ನೂ ಇಲ್ಲಿ ಕೊಟ್ಟು ಸಾಹಿತ್ಯಾಸಕ್ತರಿಗೆ ಮಹದುಪಕಾರ ಮಾಡಿದ್ದಾರೆ.
ಪಂಜೆ ಮಂಗೇಶರಾಯರ ಸಾಹಿತ್ಯ ಪರಿಚಾರಿಕೆಯನ್ನು ಬಹಳ ಸೊಗಸಾಗಿ ಅನಾವರಣಗೊಳಿಸಿದ್ದೀರಿ. ಸರಳ ಸುಂದರ ಬರಹ ಆಪ್ತವಾಗಿ ಮೂಡಿಬಂದಿದೆ. ಅಭಿನಂದನೆಗಳು ಹಾಗೂ ಧನ್ಯವಾದಗಳು ಸರ್.
ಅತ್ಯಂತ ಹೃದಯಂಗಮ ಬರಹ. ಪಂಜೆ-ಪೈ-ಮುದ್ದಣ ಕರಾವಳಿಯ ತ್ರಿಮೂರ್ತಿ ನವೋದಯದ ಬೆಳಕುಗಳು. ಅವರ ಬಗೆಯ ಈ ಬರಹ ನಮಗಂತೂ ಹೊಸ ಬೆಳಕನ್ನು ಕೊಡುವಂತಿದೆ. ಕಾವ್ಯದ ಸೊಬಗೇ! ಅವುಗಳ ಔಚಿತ್ಯವೇ! ಶಬ್ದಗುಣವೇ!! ಇವನ್ನೆಲ್ಲ ಅಷ್ಟಷ್ಟು ಸೊಗಸಾಗಿ ಕಟ್ಟಿಕೊಟ್ಟ ಜನಾರ್ದನ ಭಟ್ ರಿಗೆ ಮತ್ತು ಪ್ರಕಟಿಸಿದ ಕೆಂಡಸಂಪಿಗೆಗೆ ಅಭಿನಂದನೆಗಳು.