ಏವ್‌ಬರಿ ಸುತ್ತಮುತ್ತ ಕ್ರೈಸ್ತ ಜನಾಂಗದವರೆ ಬದುಕುತ್ತಿದ್ದರು, ಯಾರಾದರು ಸತ್ತಾಗ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಮುಗಿಸಿ ಏವ್‌ಬರಿಯ ಚರ್ಚಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಕೆಲವರ ಮನೆಯಲ್ಲಿ ಸತ್ತವರ ಹೆಸರಿನ ಪೂಜೆ ಸಲ್ಲಿಸಿದ ಮೇಲೆಯೂ ಕೂಡ ಆತ್ಮ ಕಾಣಿಸಿದ ಅನುಭವವಾಗಿದೆ. ಅಂಥಹ ಸಮಯದಲ್ಲಿ ಚರ್ಚಿನ ಪಾದ್ರಿಯ ಸಲಹೆಯ ಮೇರೆಗೆ ಒಂದು ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಾಗಿಯೂ ಸುತ್ತ ಮುತ್ತಲಿನ ಕೆಲವು ಊರುಗಳಲ್ಲಿ ಆತ್ಮಗಳು ಕಾಣಿಸಿಕೊಳ್ಳತೊಡಗಿದಾಗ ಪಾದ್ರಿಯು ಬೇರೆ ಒಂದು ದಾರಿಯನ್ನು ಸೂಚಿಸಿದ್ದಾನೆ.
ಪ್ರಶಾಂತ್‌ ಬೀಚಿ ಬರೆಯುವ ಅಂಕಣ

 

“ಎಲ್ಲಿಗಾದರೂ ಹೊರಟಾಗ ಎಲ್ಲಿಗೆ ಎಂದು ಕೇಳಬೇಡ”, ಎಂದು ನಾನು ಚಿಕ್ಕವನಿದ್ದಾಗಿನಿಂದ ಕೇಳಿಸಿಕೊಳ್ಳುತ್ತಿದ್ದೇನೆ. ಯಾರಾದರೂ ಮನೆಯಿಂದ ಹೊರಟಾಗ ಎಲ್ಲಿಗೆ ಎಂದು ಕೇಳಿದ ತಕ್ಷಣ ಒಮ್ಮೆ ದುರುಗುಟ್ಟಿ ನೋಡುತ್ತಾ ಮತ್ತೆ ಕೆಲವು ನಿಮಿಷಗಳು ಕೂತು ಆಮೇಲೆ ಎದ್ದು ಹೋಗುತ್ತಿದ್ದರು.

ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ಹೋದರೆ, ಹಿಂದಕ್ಕೆ ಏಳು ಹೆಜ್ಜೆ ಹೋಗಿ ಮತ್ತೆ ದಾರಿಯನ್ನು ಮುಂದುವರೆಸುತ್ತಿದ್ದೆವು. ಮೂವರು ಹೋದರೆ ಅದು ಅಪಶಕುನ ಎಂದು ಇಬ್ಬರು ಅಥವ ನಾಲ್ಕು ಜನ ಹೋಗುವ ಪರಿಪಾಟ ಇಂದಿಗೂ ಕಾಣಸಿಗುತ್ತದೆ. ಹೀಗೆ ಮೂಢ ನಂಬಿಕೆಯ ಪಟ್ಟಿಯನ್ನು ಮಾಡುತ್ತಾ ಹೋದರೆ ಇಡೀ ದಿನ ಕಳೆದರೂ ಮುಗಿಯದಷ್ಟು ಸಂಗತಿಗಳು ಮೂಡಿಬರುತ್ತದೆ.

ಈ ರೀತಿಯ ಮೂಢನಂಬಿಕೆಯ ಬಗ್ಗೆ ಮಾತನಾಡುವಾಗಲೆಲ್ಲ ಭಾರತದ ಮತ್ತು ಭಾರತೀಯರ ಬಗ್ಗೆ ಕೇವಲವಾಗಿ ಯೋಚಿಸುತ್ತಿದ್ದೆವು. ಈ ಮೂಢನಂಬಿಕೆ ಎನ್ನುವುದು ಭಾರತದಲ್ಲಿ ಮಾತ್ರ, ಹೊರದೇಶಗಳಲ್ಲಿ ಇದನ್ನೆಲ್ಲ ನಂಬುವುದಿಲ್ಲ, ಭಾರತೀಯರಾದ ನಾವು ಈ ರೀತಿ ಅವೈಜ್ಞಾನಿಕವಾಗಿ ವರ್ತಿಸುತ್ತೇವೆ ಎಂದು ತಿಳಿದಿದ್ದೆವು. ನಂತರದ ದಿನಗಳಲ್ಲಿ ವಿದೇಶಗಳನ್ನು ಸುತ್ತಾಡುತ್ತಾ ಅಲ್ಲಿನ ನಾಗರೀಕರಲ್ಲಿ ಬೆರೆತಾಗ ತಿಳಿದಿದ್ದು, ‘ಮೂಢ ನಂಬಿಕೆಗಳು ಎಲ್ಲಡೆಯೂ ಮನುಷ್ಯನ ಒಂದು ಭಾಗವಾಗಿ ಹಾಸುಹೊಕ್ಕಿದೆ’ ಎಂದು.

ಎರಡು ಸಾವಿದರ ಹದಿನೆಂಟನೆ ಇಸವಿ, ನಾನು ಇಂಗ್ಲೇಂಡ್ ದೇಶದ ಸ್ವಿಂಡನ್ ಎಂಬ ಸಣ್ಣ ಊರಿನಲ್ಲಿದ್ದೆ. ನಾನು ಅಲ್ಲಿಗೆ ಕೇವಲ ಎಂಟು ತಿಂಗಳಿಗೊಸ್ಕರ ಹೋಗಿದ್ದೆ. ನನ್ನ ಇರುವಿಕೆಯ ಅವಧಿ ಕಡಿಮೆ ಇದ್ದುದರಿಂದ ಸುತ್ತಮುತ್ತಲಿನ ಜಾಗಗಳನ್ನು ನೋಡಲು ನನ್ನ ಸ್ನೇಹಿತ ಶಶಿಕಾಂತ ಪ್ರೇರೇಪಿಸುತ್ತಿದ್ದ. ಅವನು ಹತ್ತಾರು ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದ. ನಾನಿದ್ದ ಸ್ವಿಂಡನ್ ಸಣ್ಣ ಊರಾಗಿದ್ದರಿಂದ ಅಲ್ಲಿಯ ಜನರ ಪರಿಚಯ ಮಾಡಿಕೊಳ್ಳತೊಡಗಿದೆ.

ಜೋ, ಮೇರಿ ಮತ್ತು ಜಾಯ್ ಎನ್ನುವ ಒಂದು ಗುಂಪು ನನಗೆ ಪರಿಚಯವಾಯಿತು. ಎಲ್ಲರೂ ಸುಮಾರು ಐವತ್ತು – ಅರವತ್ತು ವಯಸ್ಸಿನವರು, ತಮ್ಮ ತಮ್ಮ ಜೀವನವನ್ನು ತಮ್ಮಿಷ್ಟದಂತೆ ಜೀವಿಸುತ್ತಿದ್ದರು. ಅವರೊಡನೆ ನಾನು ಬಹಳ ಆತ್ಮೀಯನಾಗಿ ಹೊಂದುಕೊಂಡಿದ್ದರಿಂದ ಅವರ ಬ್ಯಾಂಡ್ ಪ್ರಾಕ್ಟೀಸ್ ಗೆ ನನ್ನನ್ನು ಸೇರಿಸಿಕೊಂಡರು. ಒಮ್ಮೆ ನನ್ನನ್ನು ಜೋ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಳು, ಎದುರಿಗೆ ಕರಿ ಬೆಕ್ಕೊಂದು ಅಡ್ಡ ಹೋಯಿತು. ತಕ್ಷಣ ನನಗೆ ಕೇಳಿದಳು, “ನೀನು ಇದನ್ನು ನಂಬಿತ್ತೀಯ?” ನಾನು ಕೇಳಿದೆ, ಯಾವುದನ್ನು? ಅವಳು ಹೇಳಿದಳು, “ನಾವು ಇಂಗ್ಲೆಂಡಿನವರು ಕರಿ ಬೆಕ್ಕು ಅಡ್ಡ ಹೋದರೆ ಅಪಶಕುನ ಎಂದು ನಂಬುತ್ತೇವೆ, ಹೀಗೆ ಕರಿ ಬೆಕ್ಕು ನಮ್ಮ ದಾರಿಗೆ ಅಡ್ಡ ಬಂದರೆ ಪ್ರಯಾಣವನ್ನು ಮೊಟಕುಗೊಳಿಸುವ ಪರಿಪಾಠ ಇದೆ.” ಎಂದಳು. ನಾನು ನಗುತ್ತಾ ಹೇಳಿದೆ, ‘ನಾವು ಭಾರತೀಯರು ಕರಿ ಹಾಗು ಬೆಳ್ಳಗಿನ ಬೆಕ್ಕುಗಳ ಮಧ್ಯೆ ತಾರತಮ್ಯ ಮಾಡುವುದಿಲ್ಲ, ಯಾವುದೇ ಬೆಕ್ಕು ಅಡ್ಡ ಬಂದರೂ ಅಪಶಕುನ ಎಂದು ತೀರ್ಮಾನಿಸುತ್ತೇವೆ.ʼ ಹಾಗೆ ಮುಂದುವರೆಸುತ್ತಾ ಹೇಳಿದೆ, ಬಹುಶಃ ಈ ಪರಿಪಾಠವನ್ನು ನಾವು ನಿಮ್ಮಿಂದಲೆ ಕಲಿತಿರಬೇಕು. ನೀವು ನಮ್ಮ ದೇಶವನ್ನು ಆಕ್ರಮಿಸಿಕೊಂಡಾಗ ಇಂಥಹ ಮೂಢನಂಬಿಕೆಯನ್ನೂ ಕಲಿಸಿರಬಹುದು ಎಂದು ಹಾಸ್ಯವಾಗಿ ಹೇಳಿದೆ. ಜೋ ಬಹಳ ತಿಳುವಳಿಕೆಯ ಹೆಣ್ಣು, ಪ್ರಪಂಚದ ಎಲ್ಲಾ ಮನುಜರಿಗೆ ಅವರಿಗೆ ಆದ ಸ್ವಾತಂತ್ರ್ಯ ಇರಬೇಕು ಎನ್ನುವುದು ಅವಳ ವಾದ. ಹಾಗಾಗಿ ಬ್ರಿಟೀಷರು ಅನೇಕ ದೇಶಗಳ ಮೇಲೆ ಮಾಡಿದ ದೌರ್ಜನ್ಯವನ್ನು ಅವಳು ಬ್ರಿಟೀಷರಾಗಿಯೂ ಖಂಡಿಸುತ್ತಿದ್ದಳು.

ವಿದೇಶಗಳನ್ನು ಸುತ್ತಾಡುತ್ತಾ ಅಲ್ಲಿನ ನಾಗರೀಕರಲ್ಲಿ ಬೆರೆತಾಗ ತಿಳಿದಿದ್ದು, ‘ಮೂಢ ನಂಬಿಕೆಗಳು ಎಲ್ಲಡೆಯೂ ಮನುಷ್ಯನ ಒಂದು ಭಾಗವಾಗಿ ಹಾಸುಹೊಕ್ಕಿದೆ’ ಎಂದು.

ಅವಳ ಸೂಚನೆಯಂತೆ ನಾನು ಏವ್‌ಬರಿ ಎನ್ನುವ ಒಂದು ಜಾಗಕ್ಕೆ ಭೇಟಿ ನೀಡಿದೆ. ಸ್ವಿಂಡನ್ ನಿಂದ ಕೇವಲ ಹತ್ತು ಮೈಲಿ ದೂರವಿದ್ದ ಒಂದು ಸಣ್ಣ ಹಳ್ಳಿ ಅದಾಗಿತ್ತು. ಇಂಗ್ಲೆಂಡಿನ ರಾಷ್ಟ್ರೀಯ ನಿಧಿಗಳಲ್ಲಿ ಇದು ಒಂದು. ಇದರ ವಿಶೇಷತೆ ಎಂದರೆ, ಈ ಹಳ್ಳಿಗೆ ಮೂರು ಸುತ್ತುಗಳಲ್ಲಿ ದೊಡ್ಡ ದೊಡ್ಡದಾದ ಕಲ್ಲುಗಳಿಂದ ಸುತ್ತುವರೆದಿದೆ. ಇದು ನೈಸರ್ಗಿಕ ಅಲ್ಲ, ಶತ ಶತಮಾನಗಳ ಹಿಂದೆ ಅನೇಕ ಕಾರಣಗಳಿಗೆ ಜನರು ಕಲ್ಲನ್ನು ನೆಟ್ಟಿದ್ದಾರೆ. ಶಿಲಾಯುಗದ ಕಲ್ಲುಗಳನ್ನು ಇಷ್ಟು ದೊಡ್ಡ ವೃತ್ತಾಕಾರದಲ್ಲಿ ನೆಟ್ಟಿರುವುದು ವಿಶ್ವದಲ್ಲಿಯೆ ಮತ್ತೆಲ್ಲಿಯೂ ಕಾಣಸಿಗದು. ಇದಕ್ಕೆ ಇತಿಹಾಸದ ಅನೇಕ ಕತೆಗಳ ಜೊತೆಗೆ ಮೂಢನಂಬಿಕೆಯ ಕಥೆಯೂ ಸೇರಿದೆ.

ಈ ಹಳ್ಳಿಯಲ್ಲಿ ಈಗಲೂ ಒಂದು ಚರ್ಚ್ ಇದೆ. ಆ ಚರ್ಚ್‌ನ ಪಕ್ಕದಲ್ಲಿರುವ ಅಂಗಡಿಗಳಲ್ಲಿ ಅನೇಕ ದಾರಗಳು, ಮಂತ್ರಿಸಿದ ಯಂತ್ರಗಳು ಮತ್ತು ಶಿಲುಬೆಗಳು ಮಾರಲ್ಪಡುತ್ತವೆ. ಚರ್ಚ್‌ನ ಹಿಂಭಾಗದ ಜಾಗದಲ್ಲಿ ಅನೇಕ ಕಲ್ಲುಗಳು ನೆಟ್ಟಿರುವುದು ಕಾಣಸಿಗುತ್ತದೆ. ಈಗಲೂ ವಿಶ್ವವಿದ್ಯಾಲಯದ ಬಾಲಕ – ಬಾಲಕಿಯರು ಅಲ್ಲಿ ಅನ್ವೇಷಣೆಯಲ್ಲಿ ತೊಡಗಿದ್ದಾರೆ. ಆ ಹಳ್ಳಿಯಲ್ಲಿ ಕ್ರೈಸ್ತಪೂರ್ವದ ಕಲ್ಲುಗಳಿಂದ ಹಿಡಿದು ಹತ್ತೊಂಬತ್ತನೆ ಶತಮಾನದ ಕಲ್ಲುಗಳು ಕಂಡುಬಂದಿದೆ. ಚರ್ಚಿನ ಹಿಂಭಾಗದಲ್ಲಿನ ಕಲ್ಲುಗಳು ಹದಿನೆಂಟನೆ ಶತಮಾನದ ಈಚಿನದ್ದು. ಅದರ ಕಥೆ ಹೀಗೆ ಸಾಗುತ್ತದೆ.

ಏವ್‌ಬರಿ ಸುತ್ತಮುತ್ತ ಕ್ರೈಸ್ತ ಜನಾಂಗದವರೆ ಬದುಕುತ್ತಿದ್ದರು, ಯಾರಾದರು ಸತ್ತಾಗ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಮುಗಿಸಿ ಏವ್‌ಬರಿಯ ಚರ್ಚಿಗೆ ಬಂದು ಪೂಜೆ ಸಲ್ಲಿಸುತ್ತಿದ್ದರು. ಕೆಲವರ ಮನೆಯಲ್ಲಿ ಸತ್ತವರ ಹೆಸರಿನ ಪೂಜೆ ಸಲ್ಲಿಸಿದ ಮೇಲೆಯೂ ಕೂಡ ಆತ್ಮ ಕಾಣಿಸಿದ ಅನುಭವವಾಗಿದೆ. ಅಂಥಹ ಸಮಯದಲ್ಲಿ ಚರ್ಚಿನ ಪಾದ್ರಿಯ ಸಲಹೆಯ ಮೇರೆಗೆ ಒಂದು ಪೂಜಿಸಿದ ಯಂತ್ರವನ್ನು ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದಾಗಿಯೂ ಸುತ್ತ ಮುತ್ತಲಿನ ಕೆಲವು ಊರುಗಳಲ್ಲಿ ಆತ್ಮಗಳು ಕಾಣಿಸಿಕೊಳ್ಳತೊಡಗಿದಾಗ ಪಾದ್ರಿಯು ಬೇರೆ ಒಂದು ದಾರಿಯನ್ನು ಸೂಚಿಸಿದ್ದಾನೆ. ಇನ್ನು ಮುಂದೆ ಯಾರೆ ಸತ್ತರೂ, ನೀವು ಅಂತ್ಯ ಸಂಸ್ಕಾರ ಮಾಡಿದ ನಂತರ ನಿಮ್ಮ ಶಕ್ತಿಗನುಸಾರವಾಗಿ ಒಂದು ಕಲ್ಲನ್ನು ತಂದು ಚರ್ಚಿನ ಹಿಂಬದಿಯಲ್ಲಿ ನೆಡಬೇಕು. ಸತ್ತವರ ಹೆಸರಿನಲ್ಲಿ ನೆಡುವ ಕಲ್ಲು ಚರ್ಚಿನ ಹಿಂಭಾಗದಲ್ಲಿ ಇದ್ದರೆ ಕ್ರೈಸ್ತ ಶಕ್ತಿಯು ಆ ಆತ್ಮವನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ. ಹೀಗೆ ಕಲ್ಲನ್ನು ನೆಟ್ಟವರು, ಚರ್ಚಿನಲ್ಲಿ ಪೂಜಿಸಿದ ಒಂದು ಯಂತ್ರವನ್ನು ಅಥವ ಶಿಲುಬೆಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡಬೇಕು. ಈ ಪದ್ಧತಿಯಿಂದ ಆತ್ಮಗಳು ಹಳ್ಳಿಗಳಲ್ಲಿ ಕಾಣಿಸುವುದು ಕಡಿಮೆಯಾಗಿದೆ ಎಂದಿದ್ದರಂತೆ. ಹಾಗಾಗಿ ಚರ್ಚಿನ ಹಿಂಭಾಗದಲ್ಲಿ ಕಾಣ ಬರುವ ಕಲ್ಲುಗಳು ಕಳೆದ ಎರಡು ಶತಮಾನಗಳದ್ದಾಗಿದೆ.

ಏವ್‌ಬರಿ ಕಲ್ಲಿನಿಂದ ವೃತ್ತಾಕಾರದಲ್ಲಿ ಸುತ್ತುವರಿದಿರುವ ಒಂದು ಸಣ್ಣ ಹಳ್ಳಿ. ಬಹಳ ವಿಶಿಷ್ಟವಾಗಿರುವ ಈ ಹಳ್ಳಿ ನೋಡಲು ಬಹಳ ಮನೋಹರವಾಗಿದೆ. ಚರಿತ್ರೆಯ ಅನೇಕ ಕಥೆಗಳು ಮತ್ತು ಕುರುಹುಗಳು ಈ ಹಳ್ಳಿಯಲ್ಲಿ ಕಾಣಸಿಗುತ್ತದೆ. ಇಂತಹ ಹಳ್ಳಿಯಲ್ಲೂ ಮೂಢನಂಬಿಕೆಯ ಒಂದು ತುಣುಕು ಕಾಣಬರುತ್ತದೆ.

ಅಲ್ಲಿ ವಾಸವಿದ್ದ ದಿನಗಳಲ್ಲಿ ಬ್ರಿಷ್ಟಾಲ್ ಎನ್ನುವ ಇಂಗ್ಲೆಂಡ್‌ನ ಇನ್ನೊಂದು ನಗರಕ್ಕೆ ಹೋಗಿದ್ದೆ. ರಾಜಾರಾಮ್ ಮೋಹನ್ ರಾಯ್ ಅವರ ಸಮಾಧಿ ಆ ಊರಿನಲ್ಲಿದೆ. ಅದನ್ನು ನೋಡಿಕೊಂಡು ಬ್ರಿಷ್ಟಾಲ್ ನಗರವನ್ನು ಸುತ್ತಾಡುತ್ತಿರಬೇಕಾದರೆ ಒಂದು ಸಣ್ಣದಾದ ಸೇತುವೆ ಕಾಣಿಸಿತು. ಕಾಲುವೆ ದಾಟಲು ಕಟ್ಟಿರುವ ಸಣ್ಣ ಸೇತುವೆ ಅದಾಗಿತ್ತು. ದೂರದಿಂದ ನೋಡಲು ಬಹಳ ಸುಂದರವಾಗಿ ಕಾಣುತ್ತಿದ್ದ ಆ ಸೇತುವೆಯ ಹತ್ತಿರ ಹೋಗಿ ನೋಡಿದರೆ ಬೀಗವೋ ಬೀಗ. ಸೇತುವೆ ದಾಟುವಾಗ ತೊಂದರೆಯಾಗದಿರಲೆಂದು ಸರಪಳಿಗಳಿಂದ ಸೇತುವೆಯನ್ನು ಸುರಕ್ಷಿತಗೊಳಿಸಿದ್ದಾರೆ, ಆದರೆ ಮೂಢನಂಬಿಕೆಯ ಜನ ಆ ಸರಪಳಿಗೆ ಎಲ್ಲಿ ನೋಡಿದರಲ್ಲಿ ಬೀಗವನ್ನು ಜಡಿದಿದ್ದಾರೆ. ಅಲ್ಲಿಯ ಜನರ ನಂಬಿಕೆಯ ಪ್ರಕಾರ ತಮ್ಮ ಇಷ್ಟಗಳು ಫಲಿಸುವ ಸಲುವಾಗಿ ಬೀಗವನ್ನು ಸರಪಳಿಗೆ ಜಡಿದು ಅದರ ಕೀಲಿಯನ್ನು ಕಾಲುವೆಗೆ ಎಸೆದು ಹೋಗುತ್ತಾರಂತೆ. ಹೀಗೆ ಮಾಡಿದರೆ ಅವರ ಆಸೆಗಳು ಫಲಿಸುತ್ತದೆ ಎನ್ನುವ ಒಂದು (ಮೂಢ)ನಂಬಿಕೆ ಅಲ್ಲಿಯ ಜನರಿಗೆ.

ಹೀಗೆ ಪ್ರಪಂಚದ ಎಲ್ಲಾ ಭಾಗದ ಜನರಲ್ಲೂ ಮೂಢನಂಬಿಕೆಗಳು ಗಾಢವಾಗಿ ಬೇರೂರಿದೆ. ‘ದೇವರಿರುವುದು ದಿಟವಾದರೆ, ದೆವ್ವವಿರುವುದೂ ದಿಟವೆ’ ಎನ್ನುವ ಹಾಗೆ ‘ನಂಬಿಕೆಯು ನಿಜವಾದರೆ, ಮೂಢನಂಬಿಕೆಯೂ ನಿಜವೆ’ ಎನ್ನಬಹುದೆ?