ಡಿಜಿಟಲ್ ಕ್ರಾಂತಿಯ ಹುಮ್ಮಸ್ಸಿನ ಗಿಡಕ್ಕೆ ಲಾಕ್ ಡೌನ್ ಎಂಬುದು ಇನ್ನಷ್ಟು ನೀರು ಗೊಬ್ಬರವಾಗಿ ಪರಿಣಮಿಸಿದೆ. ಅದು ಶಿಕ್ಷಣ ಕ್ಷೇತ್ರದಲ್ಲಿ ತಂದ ಬದಲಾವಣೆಗಳಂತೂ ಅಗಾಧವಾದುದು. ಅಷ್ಟೊಂದು ಬದಲಾವಣೆಗಳನ್ನು ಸಮಾಜದ ಎಲ್ಲ ಮಕ್ಕಳೂ ತಾಳಿಕೊಳ್ಳಬಲ್ಲರೇ.. ಅವರಿಗೆ ಪ್ರೀತಿಯಿಂದ ತಿಳಿಹೇಳಬೇಕಾದ ವಿಷಯಗಳೇನು? ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಎದುರು ಇರುವ ಸೂಕ್ಷ್ಮ ಸವಾಲುಗಳ ಬಗ್ಗೆ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

 

ಕಳೆದ ವರ್ಷ ನಡೆದ ಕತೆ ಹೇಳಬೇಕು.

ಕಳೆದ ವರ್ಷ ವಿದ್ಯಾಗಮ ಶಿಕ್ಷಣದ ಅಂಗವಾಗಿ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ವಿದ್ಯಾರ್ಥಿಗಳ ಮನೆಗೆ ಹೋಗಿ ಪಾಠ ಹೇಳುತ್ತಿದ್ದರು. ಜೋಯಿಡಾ ತಾಲ್ಲೂಕಿನ ಅಣಶಿ ಅಭಯಾರಣ್ಯದ ಬಳಿ ಇರುವ ಶಾಲೆಯೊಂದರಲ್ಲಿ ಅವರು ಶಿಕ್ಷಕಿ.

ಬೆಳಿಗ್ಗೆ ಶಾಲೆ ತಲುಪುವ ಶಿಕ್ಷಕಿಯರು ಬೈಕ್ ಇರುವ ಶಿಕ್ಷಕರ ನೆರವಿನೊಂದಿಗೆ ಹಳ್ಳಿಗಳಿಗೆ ಹೋಗಿ, ಅಲ್ಲಿರುವ ಒಂದರಿಂದ ಏಳನೇ ತರಗತಿಯ ಎಲ್ಲ ಮಕ್ಕಳಿಗೂ ಪಾಠ ಮಾಡುತ್ತಾರೆ. ಶಾಲೆಯಲ್ಲಿಯೇ ಇತರ ತರಗತಿಯ ಶಿಕ್ಷಕರು – ಶಿಕ್ಷಕಿಯರಿಂದ ನೋಟ್ಸ್ ಮತ್ತಿತರ ಸಲಕರಣೆ ಮಾಹಿತಿ ಪಡೆದು, ನೋಟ್ಸ್ ಮತ್ತು ವರ್ಕ್ ಶೀಟ್ ಗಳನ್ನು ಆಯಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕೊಟ್ಟು ಬರಬೇಕಾಗಿತ್ತು.

ಅಂದು ಅಕ್ಷತಾ, ಸುವರ್ಣಾ ನಾಯಕ್, ನವೀನ್ ನಾಯಕ್, ಕೃಷ್ಣಮೂರ್ತಿ ನಾಯಕ್ ಎರಡು ಬೈಕ್ ಗಳನ್ನು ಹೊಂದಿಸಿಕೊಂಡು ಕುಂಭಗಾಳ ಎಂಬ ಹಳ್ಳಿಗೆ ಹೊರಟಿದ್ದರು. ಚಿರಿಪಿರಿ ಮಳೆಯಲ್ಲಿ ಅಲ್ಲಲ್ಲಿ ಬೈಕ್ ನಿಲ್ಲಿಸಿ, ಕಾಲುದಾರಿಯನ್ನೇ ಸರಿಪಡಿಸಿಕೊಂಡು ಹೋಗುವುದು ಸುರಳೀತ ಪ್ರಯಾಣವೇನಲ್ಲ.

ನೆಟ್‌ವರ್ಕ್‌ ಎಂದರೇನೆಂದೇ ಅರಿಯದ ಹಳ್ಳಿಯದು. ಹಳ್ಳಿ ತಲುಪಿ ಮಕ್ಕಳನ್ನೆಲ್ಲ ಕರೆದು ಪಾಠ ಹೇಳಿ, ಮನೆಕೆಲಸಕೊಟ್ಟ ಮೇಲೆ ಮರಳಿ ಹೊರಡುವುದೆಂದಾಯಿತು. ಅಷ್ಟರಲ್ಲಿ ಮಳೆಯೂ ಏರುಶ್ರುತಿ ಹಿಡಿದು ಸುರಿಯುತ್ತಿದ್ದುದರಿಂದ, ಬೈಕ್ ಮತ್ತಷ್ಟು ನಿಧಾನವೇ. ಹೋಗುವಾಗ ಬೈಕ್ ಸಲೀಸಾಗಿ ಹಾದು ಹೋಗುತ್ತಿದ್ದ ಹಳ್ಳದ ದಾರಿಯ ಮೇಲೆ, ಮರಳುವಾಗ ನದಿಯಂತೆ ನೀರು ಹರಿಯುತ್ತಿದೆ. ಮಳೆ ಯಾವಾಗ ನಿಲ್ಲುವುದೋ ಎಂದು ಹಳ್ಳದ ದಂಡೆಯಲ್ಲಿಯೇ ಕಾಯುತ್ತಾ ಸಂಜೆ ಮುಗಿಯುತ್ತ ಬಂದಿತ್ತು. ಅಕ್ಷತಾ ಮತ್ತು ಸುವರ್ಣಾ ಇಬ್ಬರೂ ಮನೆಯಲ್ಲಿ, ‘ಶಾಲೆಗೆ ಹೋಗುತ್ತೇವೆ’ ಎಂದಷ್ಟೇ ಹೇಳಿದ್ದರೇ ಹೊರತು, ಹಳ್ಳಿಗೆ ಹೋಗುವ ವಿಷಯ ಹೇಳಲು ಸಾಧ್ಯವಾಗಿರಲಿಲ್ಲ. ‘ಇಂದೇ ಮರಳುವುದು ಸಾಧ್ಯವೇ, ರಾತ್ರಿ ವಿದ್ಯಾರ್ಥಿಗಳ ಮನೆಯಲ್ಲಿಯೇ ಉಳಿಯಬೇಕಾಗುತ್ತದೆಯೇ..’ ಎಂಬ ಆತಂಕ. ಅಷ್ಟರಲ್ಲಿ ಹಳ್ಳದಲ್ಲಿ ನೀರು ತುಸುವೇ ಕಡಿಮೆಯಾದಂತೆ ಭಾಸವಾಯಿತು.

ಹರಿವ ನೀರಲ್ಲಿ ಕಣ್ಣಲ್ಲಿ ಕಣ್ಣಿಟ್ಟು, ಹಾದಿಯನ್ನು ಅಂದಾಜು ಮಾಡಿಕೊಂಡು, ನೀರಿನಲ್ಲಿ ಎರಡೂ ಬೈಕ್ ಗಳನ್ನು ದೂಡಿ ಮತ್ತೊಂದು ದಡಕ್ಕೆ ಸೇರಿಸುವಷ್ಟರಲ್ಲಿ ಜೀವವೊಂದು ಉಳಿದೀತು ಎಂಬ ಭರವಸೆ ಅಕ್ಷತಾ ಅವರಿಗಿರಲಿಲ್ಲ. ಬೈಕ್‌ನಲ್ಲಿ ಹೇಗೋ ಶಾಲೆಯ ಹತ್ತಿರ ತಲುಪಿದ್ದೇ ಅವರ ಫೋನ್ ರಿಂಗಣಿಸಿತು. ಬೆಳಿಗ್ಗೆಯಷ್ಟೇ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಯ ಮನೆಯವರ ಫೋನ್. ‘ನೀವು ಹೋದ ಸ್ವಲ್ಪ ಹೊತ್ತಿಗೆ ಹಳ್ಳದ ಮೇಲೆ ಎರಡು ಭಾರೀ ಮರಗಳು ಉರುಳಿ ಬಿದ್ದವು. ಮರ ಬಿದ್ದ ಶಬ್ದ ಕೇಳಿ ನಾವೆಲ್ಲ ಹೆದರಿ ಕಂಗಾಲಾಗಿ, ಈ ಬೆಟ್ಟದ ಮೇಲೇರಿ ಫೋನ್ ಮಾಡುತ್ತಿದ್ದೇನೆ ಬಾಯೋರೆ. ಚೆನ್ನಾಗಿದ್ದೀರಲ್ಲ.. ದೇವರು ದೊಡ್ಡವನು..’ ಅಂತ ಫೋನ್ ಇಟ್ಟರು.

ಶಾಲೆ ತಲುಪಿದ ಕೂಡಲೇ, ಅನುಭವಿಸಿದ ಪಡಿಪಾಟಲುಗಳನ್ನು ಹೇಳಿಕೊಳ್ಳಬೇಕೆಂದುಕೊಂಡರು. ಆದರೆ ಅಲ್ಲಿ ಮತ್ತೊಂದು ಪರಿಸ್ಥಿತಿ. ಅಲ್ಲಿದ್ದ ಟೀಚರ್ ಮೊದಲೇ ಕಂಗಾಲಾಗಿದ್ದರು. ‘ಉಳವಿ ನೇಚರ್ ಕ್ಯಾಂಪ್ ಹತ್ತಿರದ ಶಾಲೆಗೆ ಹೋದ ಶುಭಾ ಮತ್ತು ಅರುಣ್ ಸರ್ ಬಂದಿಲ್ಲ.. ಅವರು ಬಾಕೀನದಿ ದಾಟಿ ಬರಬೇಕಾಗಿದೆ.. ಏನಾಗಿದ್ಯೋ ಏನೋ..’

ಮಳೆಯ ಸದ್ದು ಬೇರೆ ಪರಸ್ಪರರ ಮತುಗಳೇ ಕೇಳಿಸದಂತೆ ಮಾಡಿದೆ. ಕತ್ತಲು ಕವಿಯುವವಷ್ಟರಲ್ಲಿ ಅವರಿಬ್ಬರೂ ಹೇಗೋ ದಾರಿ ಮಾಡಿಕೊಂಡು ಬಂದರು. ಆಮೇಲೆಯೇ ಎಲ್ಲೂ ಹಗುರಾದುದು. 2020ರ ಆಗಸ್ಟ್ 4ರಿಂದ ಅಕ್ಟೋಬರ್ ಅಂತ್ಯದವರೆಗೆ, ವಿದ್ಯಾಗಮ ಪಾಠ ಮಾಡಿದ ಶಿಕ್ಷಕರ ಅನುಭವಗಳು, ಹೀಗೆ ಪ್ರತಿದಿನವೂ ವಿಭಿನ್ನವಾದವು.

*****

ಸುದರ್ಶನ್ ಮಾಷ್ಟ್ರಿಗೆ ಆನ್ ಲೈನ್ ಎಂದರೆ ಆಗಿಬರುವುದಿಲ್ಲ. ಕಚೇರಿ ವ್ಯವಹಾರಕ್ಕಷ್ಟೇ ಸ್ಮಾರ್ಟ್ ಫೋನ್ ಬಳಸುವ ಸುದರ್ಶನ್ ಕಳೆದ ವರ್ಷ ಹಳಿಯಾಳದ ಗೌಳಿ ಮತ್ತು ಸಿದ್ಧಿ ಸಮುದಾಯದ ಕೇರಿಗಳಿಗೆ ತೆರಳಿ ಪಾಠ ಮಾಡುತ್ತಿದ್ದರು. ಕೇರಿಯಲ್ಲಿ ಐದಾರು ಹುಡುಗಿಯರು, ಒಂದಿಬ್ಬರು ಹುಡುಗರು ಒಂದೇ ಕಡೆ ಸೇರಿ ತರಗತಿ ಮಾಡುವುದು ಎಂದು ನಿಕ್ಕಿಯಾಯಿತು.`ಒಂಭತ್ತನೇ ತರಗತಿಯಾದ್ದರಿಂದ ಪಾಠಗಳು ಬಹುಮುಖ್ಯವಾಗಿರುತ್ತವೆ. ಅದು ಹತ್ತನೇ ತರಗತಿಯ ಓದಿಗೆ ತಳಪಾಯ’ ಎಂದು ಸುದರ್ಶನ್ ಮಕ್ಕಳಿಗೆ ಹೇಳುತ್ತಿದ್ದರು. ಆದರೆ ಕೇರಿಯಲ್ಲಿ ಆಯೋಜಿಸುವ ತರಗತಿಗೆ ಹುಡುಗಿಯರು ಬಂದು ಕುಳಿತರೂ, ಹುಡುಗರು ಬರುತ್ತಿರಲಿಲ್ಲ. ಅವರು ಕಣ್ಣ ಮುಂದೆಯೇ ಟ್ರಾಕ್ಟರ್ ಓಡಿಸುತ್ತ , ಉಳುಮೆಗೆ ಗದ್ದೆ ಹಸನು ಮಾಡುತ್ತಿದ್ದರು. ತನ್ನ ವಿದ್ಯಾರ್ಥಿಗಳಿಬ್ಬರು ಟ್ರಾಕ್ಟರ್ ನಿಲ್ಲಿಸುವುದನ್ನೇ ಸುದರ್ಶನ್ ಮಾಷ್ಟ್ರು ಕಾಯುತ್ತಾ ಕುಳಿತಿದ್ದರು.

ಆನ್ ಲೈನ್ ಎಂಬುದು ಜ್ಞಾನದ ಬಾಗಿಲನ್ನು ಮುಕ್ತವಾಗಿ ತೆರೆದಿದೆ ಎಂಬುದನ್ನು ಒಪ್ಪಿಕೊಳ್ಳಲು ಒಂದಿಷ್ಟೂ ತೊಡಕುಗಳಿಲ್ಲ. ಬೇಕಾದ ವಿಚಾರಗಳು ಬೇಕಾದ ಸ್ವರೂಪದಲ್ಲಿ ಅಂಗೈಯಲ್ಲಿಯೇ ದೊರೆಯುತ್ತವೆ. ಜ್ಞಾನವನ್ನು ಯಾರೂ ಹಿಡಿದಿಡುವುದು ಸಾಧ್ಯವಿಲ್ಲ ಎಂಬುದನ್ನು ಆಗಾಗ ಕೇಳುತ್ತಲೇ ಇದ್ದೇವೆ. ಅದಕ್ಕೆ ಪೂರಕ ಎಂಬಂತೆ ಕಳೆದ ಒಂದು ವರ್ಷದ ಅವಧಿಯಲ್ಲಿ ಡಿಜಿಟಲ್ ಕಂಟೆಂಟ್ ಸಾಗರೋಪಾದಿಯಲ್ಲಿ ಸೃಷ್ಟಿಯಾಯಿತು. ಅವುಗಳ ಪ್ರಯೋಜನ ಪಡೆಯಲು ಹಿಂದೇಟು ಹಾಕುತ್ತಿದ್ದ ಅನೇಕರು ತಮ್ಮ ಮನಸ್ಸು ಬದಲಾಯಿಸಿಕೊಂಡರು. ಜಾಗತಿಕ ಸೋಂಕಿನ ದೆಸೆಯಿಂದ ಸೃಷ್ಟಿಯಾದ ಅನಿವಾರ್ಯತೆಯ ಕಾರಣದಿಂದಾಗಿ, ಡಿಜಿಟಲ್ ಲೋಕಕ್ಕೆ ದೂಡಲ್ಪಟ್ಟವರು ಅನೇಕರು. ಆದರೆ ಒಮ್ಮೆ ಆ ವೇದಿಕೆಯನ್ನು ಏರಿದ ಮೇಲೆ ಅದರಿಂದ ಸಿಗುವ ಫಾಯಿದೆಯನ್ನೂ ಅವರು ಗುರುತಿಸಿದರು.

ಹೌದು ಗುರುತಿಸಿದರು.

ಆದರೆ ಈ ಗುರುತಿಸುವಿಕೆ ಸಾಧ್ಯವಾಗದೇ ಇರುವ ದೊಡ್ಡದೊಂದು ಸಮುದಾಯಕ್ಕೆ ಈ ವಿಚಾರವನ್ನು ಹೇಳಿಕೊಡುವುದು ಹೇಗೇ? ಡಿಜಿಟಲ್ ಕ್ರಾಂತಿ ಮತ್ತು ಆನ್‌ಲೈನ್ ಶಿಕ್ಷಣದ ಸಾಧ್ಯತೆಗಳ ಕುರಿತು ಮಾತನಾಡುವ ಮುನ್ನ ಆಫ್‌ಲೈನ್ ಶಿಕ್ಷಣದ ಕತೆಗಳನ್ನು ಪರಾಂಬರಿಸುವುದರಿಂದ ‘ಹೇಳಿಕೊಡುವಿಕೆ’ಯ ಪ್ರಕ್ರಿಯೆಗೆ ಇಂಬು ಸಿಗಬಹುದೇನೋ.

ನೆಟ್‌ವರ್ಕ್ ಸಿಗದೇ ಇರುವ ಕಾರಣಕ್ಕಾಗಿ ಮಕ್ಕಳು ಬೆಟ್ಟದ ಮೇಲೇರಿ ಕ್ಯಾಂಪು ಹಾಕಿರುವ, ಡೇಟಾ ಖರೀದಿ, ಸ್ಮಾರ್ಟ್‌ಫೋನ್ ಖರೀದಿಗಾಗಿ ತ್ರಾಸ ಪಟ್ಟು ಹಣ ಹೊಂದಿಸಿದ ಅನೇಕ ವರದಿಗಳನ್ನು ಕತೆಗಳನ್ನು ನಾವು ಕೇಳಿದ್ದುಂಟು, ಓದಿದ್ದುಂಟು. ಅರಣ್ಯ ಪ್ರದೇಶಗಳ ಆಸುಪಾಸಿನಲ್ಲಿರುವ ಶಾಲೆಗಳ ಮಕ್ಕಳಿಗೆ ಪಾಠಗಳು ತಲುಪುತ್ತಿಲ್ಲ ಎಂಬುದು ಒಂದು ವಿಚಾರವಾದರೆ, ನೆಟ್‌ವರ್ಕ್ ಸಿಗುವ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಅಭ್ಯಾಸ ಹೇಗಾಗುತ್ತಿದೆ ಎಂಬುದನ್ನೂ ಗಮನಿಸಬೇಕು.

‘ನೀವು ಹೋದ ಸ್ವಲ್ಪ ಹೊತ್ತಿಗೆ ಹಳ್ಳದ ಮೇಲೆ ಎರಡು ಭಾರೀ ಮರಗಳು ಉರುಳಿ ಬಿದ್ದವು. ಮರ ಬಿದ್ದ ಶಬ್ದ ಕೇಳಿ ನಾವೆಲ್ಲ ಹೆದರಿ ಕಂಗಾಲಾಗಿ, ಈ ಬೆಟ್ಟದ ಮೇಲೇರಿ ಫೋನ್ ಮಾಡುತ್ತಿದ್ದೇನೆ ಬಾಯೋರೆ. ಚೆನ್ನಾಗಿದ್ದೀರಲ್ಲ.. ದೇವರು ದೊಡ್ಡವನು..’ ಅಂತ ಫೋನ್ ಇಟ್ಟರು.

ಉದಾಹರಣೆಗೆ, ಚಾಮರಾಜನಗರದ ಸಮೀಪ ಸತ್ಯಮಂಗಲ ಅರಣ್ಯದ ಬಳಿಯ ಹಳ್ಳಿಗಳಲ್ಲಿ ನೆಟ್ವರ್ಕ್‌ನ ಸಮಸ್ಯೆಯೇನೂ ಇಲ್ಲ. ಆದರೆ ಆನ್‌ಲೈನ್ ಮಾಧ್ಯಮದಲ್ಲಿ ಪಡೆಯುವ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವುದೇ ಸವಾಲು ಎನ್ನುವುದು ಅಲ್ಲಿನ ಶಿಕ್ಷಕರೊಬ್ಬರ ಅನುಭವದ ಮಾತು. ‘ವಿದ್ಯಾಗಮ ಶಿಕ್ಷಣ, ನಮ್ಮಲ್ಲಿ ಚೆನ್ನಾಗಿಯೇ ನಡೆಯಿತು. ಆದರೆ ಆನ್‌ಲೈನ್ ಶಿಕ್ಷಣವೆಂದರೆ ಮಕ್ಕಳು ಮೊಬೈಲ್ ಗೋಸ್ಕರ ಮನೆಯವರನ್ನು ಅವಲಂಬಿಸಬೇಕಾಗುತ್ತದೆ. ಅಲ್ಲದೆ ಮಕ್ಕಳಲ್ಲಿ ತರಗತಿಯ ಪರಿಕಲ್ಪನೆ ಮೂಡಿಸುವುದು ಆನ್‌ಲೈನ್ ಮಾಧ್ಯಮದಲ್ಲಿ ಸಾಧ್ಯವಿಲ್ಲ. ದೊಡ್ಡ ತರಗತಿಗಳ ಮಕ್ಕಳಿಗೆ ಆ ಮಾದರಿಯು ಹೊಂದಬಹುದೇನೋ. ಆದರೆ ಆಟವಾಡುತ್ತ, ಆಡುತ್ತ ತಮಗೆ ಗೊತ್ತಿಲ್ಲದಂತೆ ಅಂಕಿ ಸಂಖ್ಯೆಗಳನ್ನು ಕಲಿಯುವ ಮಕ್ಕಳಿಗೆ, ಒಂದೇ ಕಡೆ ದೃಷ್ಟಿ ನೆಟ್ಟು ಕೂರುವಂತೆ ಹೇಳುವುದು ಹೇಗೇ..’

‘ಅದಷ್ಟೇ ಅಲ್ಲ, ಸ್ವಾತಂತ್ರ್ಯ ದಿನಾಚರಣೆ, ಶಾಲಾರಂಭಕ್ಕೆ ಸಿಂಗಾರ ಮಾಡುವುದು, ಬೆಳಗ್ಗಿನ ಪ್ರಾರ್ಥನೆ, ದಿನ ಪತ್ರಿಕೆಗಳನ್ನು ಓದುವುದು ಮುಂತಾದ ಚಟುವಟಿಕೆಗಳು ಪರೋಕ್ಷವಾಗಿ ಹತ್ತಾರು ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸುತ್ತವೆ. ಸಾಮಾಜಿಕವಾಗಿ ಹೇಗೆ ವರ್ತಿಸಬೇಕು, ಹಿರಿಯರೊಡನೆ ಹೇಗೆ ಮಾತನಾಡಬೇಕು, ಯಾವುದನ್ನು ಗೌರವಿಸಬೇಕು, ಯಾವುದು ಒಳ್ಳೆಯ ಕೆಲಸ, ಯಾವುದು ಕೆಟ್ಟ ಕೆಲಸ ಎಂಬೆಲ್ಲ ವಿಚಾರಗಳು ತರಗತಿಯಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂವಹನದಲ್ಲಿ ಸೇರಿಹೋಗಿರುತ್ತದೆ. ಆನ್‌ಲೈನ್ ಎನ್ನುವುದು ಪಠ್ಯವನ್ನೂ, ಆಯಾ ಪಾಠದ ಕೊನೆಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವ ವಿಧಾನವನ್ನೂ ಹೇಳಿಕೊಡಬಹುದಷ್ಟೇ.’
ಹೆತ್ತವರಿಗೂ ಮಕ್ಕಳು ದುಡಿದು ನಾಲ್ಕು ಕಾಸು ಸಂಪಾದಿಸಿದರೆ, ಈ ಬಿಕ್ಕಟ್ಟಿನ ಸಮಯವನ್ನು ಹೇಗೋ ದಾಟಿದರೆ ಸಾಕು -ಎನ್ನುವ ಮನೋಭಾವ ಇರುವಾಗ, ಮಕ್ಕಳನ್ನು ಮೊಬೈಲ್ ಮುಂದೆ ಕೂರುವಂತೆ ಅವರು ಒತ್ತಾಯಿಸುವರೇ?

ಆನ್‌ಲೈನ್ ಎಂಬುದು ಅವಕಾಶಗಳ ಮಹಾಪೂರವನ್ನೇ ತಂದು, ಆಕಾಂಕ್ಷಿಯೊಬ್ಬನ ಪುಟ್ಟಬೊಗಸೆಗೆ ಸುರಿಯಬಹುದು. ಉದಾಹರಣೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದನ್ನು ಹೇಳಿಕೊಡುವ ಬೃಹತ್ ಬ್ರಾಂಡ್‌ನ ಸಂಸ್ಥೆಗಳು, ಪ್ರಸಿದ್ಧ ಶಿಕ್ಷಕರ ಹೆಸರನ್ನು ಉಲ್ಲೇಖಿಸಿ, ತರಗತಿಗಳ ಉತ್ಕೃಷ್ಟತೆಯನ್ನು ಪ್ರಚಾರಕ್ಕಾಗಿ ಹೇಳಿಕೊಳ್ಳುವುದಿತ್ತು. ಆದರೆ ಇಂದು, ವಿಜ್ಞಾನ, ಗಣಿತ, ಇತಿಹಾಸದ ನಿರ್ದಿಷ್ಟ ಪರಿಕಲ್ಪನೆಗಳು ಅರ್ಥವಾಗದೇ ಇದ್ದರೆ, ಒಬ್ಬರಲ್ಲದಿದ್ದರೆ ಮತ್ತೊಬ್ಬರು ಶಿಕ್ಷಕರು ನೀಡುವ ವಿವರಣೆಗಳನ್ನೂ ಯುಟ್ಯೂಬ್ ತಂದೊದಗಿಸುತ್ತದೆ.

ಆದರೆ ಮಕ್ಕಳು ಯಾವ ವಯಸ್ಸಿಗೆ ಎಷ್ಟು ಆಯ್ಕೆಗಳನ್ನು ತಾಳಿಕೊಳ್ಳಬಲ್ಲರು.. ಎಂಬುದನ್ನೂ ದೊಡ್ಡವರು ಗಮನಿಸಬೇಕಾಗುತ್ತದೆ. ಒಂದು ಮಗುವಿನ ಮುಂದೆ ಒಂದು ಪುಟ್ಟ ಆಟಿಕೆಯನ್ನು ತೋರಿಸಿದರೆ, ಅದು ಕುತೂಹಲದಿಂದ ಹೆಜ್ಜೆ ಮುಂದಿಡುತ್ತಾ ನಡಿಗೆ ಕಲಿಯುತ್ತದೆ. ಹತ್ತಾರು ಆಟಿಕೆಗಳನ್ನು ದಬಾರನೆ ಸುರಿದು ಬಿಟ್ಟರೆ, ಮಗು ಬೆಚ್ಚಿ ಸುರಕ್ಷತೆಯ ತಾಣಕ್ಕಾಗಿ ಅಳುತ್ತದೆ. ಅಮ್ಮನೇ ಬಂದು ಮಗುವನ್ನು ಸಮಾಧಾನ ಮಾಡಬೇಕಾಗುತ್ತದೆ.

ಶಿಕ್ಷಣವೆಂದರೆ, ಒಂದು ಮಗುವಿಗೆ, ‘ಜೀವನದಲ್ಲಿ ಆಯ್ಕೆಗಳನ್ನು ಹೇಗೆ ಮಾಡಿಕೊಳ್ಳಬೇಕು’ ಎಂಬ ವಿವೇಕವನ್ನು ತಿಳಿಹೇಳುವುದಾಗಿದೆ. ಹೀಗೆ ಅಮ್ಮನಂತೆ ಮಕ್ಕಳಿಗೆ ತಿಳಿಹೇಳುವವರು ಯಾರು ? ಆ ಮೂಲಕ ಅವರನ್ನು ಹೊಸ ಲೋಕಕ್ಕೆ ನಿಧಾನವಾಗಿ ಪರಿಚಯಿಸುವವರು ಯಾರು. ಮಳೆಗಾಳಿಯನ್ನು ಲೆಕ್ಕಿಸದೇ ಹಳ್ಳಿಗೆ ದಾರಿ ಮಾಡಿಕೊಂಡು ಹೋಗುವ ಅಕ್ಷತಾ ಮತ್ತು ಅವರ ತಂಡ, ತನ್ನ ವಿದ್ಯಾರ್ಥಿ ಟ್ರಾಕ್ಟರ್ ನಿಲ್ಲಿಸಿ ತರಗತಿಗೆ ಬರುವುದನ್ನೇ ಕಾಯುವ ಸುದರ್ಶನ್ ಮಾಷ್ಟ್ರು, ಸತ್ಯಮಂಗಲ ಕಾಡಿನ ಬಳಿಯ ಶಾಲೆಯ ಮಕ್ಕಳಿಗೆ ಕಲಿಸುವ, ಹೆಸರು ಹೇಳಬಯಸದ ಮಾಷ್ಟ್ರು.. ಅಮ್ಮನಾಗಿ ಮಕ್ಕಳಿಗೆ ಒಂದೊಂದೇ ವಿಚಾರವನ್ನು ತಿಳಿಹೇಳಬಲ್ಲರೇನೋ.

ಇಂತಹ ಪ್ರೀತಿಯ ಉಣಿಸುವಿಕೆ ಇದ್ದಾಗಲೇ ಡಿಜಿಟಲ್ ಕ್ರಾಂತಿ ಎನ್ನುವುದು ನೈಜವಾಗಿ ಜನರ ಜೀವನದಲ್ಲಿ ಬದಲಾವಣೆ ತರಬಹುದು. ಇಲ್ಲವಾದಲ್ಲಿ ಸುಮಾರು ಮೂರು ದಶಕಗಳ ಹಿಂದೆ ನಮ್ಮ ಸಮಾಜದಲ್ಲಿ ಭಾಷೆಯ ಆಯ್ಕೆಗೆ ಸಂಬಂಧಿಸಿದಂತೆ ಆದ ‘ವಿಭಜನೆ’ಯ ಪ್ರಕ್ರಿಯೆ ಮತ್ತೆ ಇನ್ನೊಂದು ರೂಪದಲ್ಲಿ ಆರಂಭವಾಗುವ ಅಪಾಯವಿದೆ. ಅದನ್ನು ವಿವರಿಸಬೇಕೆಂದರೆ – ಶಿಕ್ಷಣವು ಖಾಸಗಿಯತ್ತ ವಾಲಿದಂತೆ ಆಂಗ್ಲ ಮಾಧ್ಯಮವೇ ಮುನ್ನೆಲೆಗೆ ಬಂತು. ಅದರ ಪರಿಣಾಮವೆಂಬಂತೆ, ಆಂಗ್ಲ ಮಾಧ್ಯಮವು ಯಾರ ಕೈಗೆಟುಕಿತೋ ಅವರು ಮುಂದುವರೆದವರೆಂದೂ, ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಲಾಗದ ಕನ್ನಡ ಮಾಧ್ಯಮದ ಮಕ್ಕಳು ತುಸು ಬಡವರೆಂದೂ ಅಘೋಷಿತವಾದ ಉಡಾಫೆಯೊಂದು ಎಲ್ಲೆಡೆ ಕಾಣಿಸಿಕೊಳ್ಳಲಾರಂಭಿಸಿತು. ಇಂಗ್ಲಿಷ್ ಕಲಿತವರಿಗೆ ಅವಕಾಶಗಳ ಹೆಬ್ಬಾಗಿಲು ದೊರೆಯುತ್ತಿರುವುದನ್ನು ನೋಡುತ್ತ ಕನ್ನಡ ಮಾಧ್ಯಮದವರು ಸುಮ್ಮನೆ ನಿಲ್ಲಬೇಕಾಯಿತು. “ಕನ್ನಡ ಮಾಧ್ಯಮವಾದರೂ ಇಷ್ಟೊಂದು ಸಾಧನೆ ಮಾಡಿದ್ದಾರೆ ನೋಡಿ”- ಎಂಬ ವಿಸ್ಮಯದ ಹೊಗಳಿಕೆಯಲ್ಲಿ ಯಾವ ಗ್ರಹಿಕೆಯಿದೆ !.

ಡಿಜಿಟಲ್ ಕ್ರಾಂತಿಯ ಸಂಭ್ರಮದಲ್ಲಿಯೂ ಇಂತಹುದೊಂದು ಅಪಾಯದ ಸುಳಿವು ಇದೆ. ಡಿಜಿಟಲ್ ವೇದಿಕೆಯನ್ನೇರಿದ ವ್ಯಕ್ತಿ ಜ್ಞಾನದ ಬಾಗಿಲುಗಳನ್ನು ದಾಟುತ್ತ ವೇಗವಾಗಿ ಸಾಗಿಬಿಡಬಹುದು. ಈ ವೇದಿಕೆಯನ್ನೇರುವುದಕ್ಕೆ ಸೌಕರ್ಯಗಳಿಲ್ಲದವರು, ವೇದಿಕೆ ಏರುವ ಏಣಿಯನ್ನು ಹುಡುಕಾಡುವುದಕ್ಕಾಗಿಯೇ ಬಹಳಷ್ಟು ಸಮಯ ವ್ಯಯಿಸಬೇಕಲ್ಲವೇ…

ಸತ್ಯಮಂಗಲ ಕಾಡಂಚಿನ ಮೇಷ್ಟ್ರು ಹೇಳಿದಂತೆ, ಮೇಲು ಕೀಳು, ದೈಹಿಕ ತೊಂದರೆಗಳ ಅಳುಕು, ಜಾತಿಯ ತೊಡಕು, ಅಂತಸ್ತಿನ ಬಿರುಕು ಎಲ್ಲವನ್ನೂ ತೂಗಿಸಿಕೊಂಡು ಹೋಗುವ ‘ತರಗತಿ’ ಎಂಬ ಕೊಠಡಿಯು ಪರೋಕ್ಷವಾಗಿ ಹೇಳುವ ಪಾಠಗಳೆಷ್ಟು ಎಂಬುದನ್ನು ಮರೆಯಬಾರದು. ಅಂಕಗಳೇ ಬದುಕು ಎಂದು ನಿರ್ಧರಿಸುವ ಶಕ್ತಿಗಳು ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬುಡಸಮೇತ ಬಗ್ಗು ಬಡಿದು ತಮಗೆ ಬೇಕಾದ ಹಾಗೆ ಬೆಳೆಸಿಕೊಳ್ಳುವ ಸಾಧ್ಯತೆಗಳಿಲ್ಲದಿಲ್ಲ.

ಒಂದಲ್ಲ ಒಂದು ದಿನ ನಾವು ಇಂತಹ ಬದಲಾವಣೆಗಳಿಗೆ ತೆರೆದುಕೊಳ್ಳಲೇಬೇಕಾಗಿದೆ ಎಂಬುದನ್ನು ಒಪ್ಪಬಹುದು. ಆದರೆ ಹೊಸ ವ್ಯವಸ್ಥೆಗಳಿಗೆ ಒಗ್ಗಿಕೊಳ್ಳುವ ಸಂದರ್ಭದಲ್ಲಿ ಇಂತಹ ಏರುಪೇರುಗಳನ್ನು ಕೂಡ ಗುರುತಿಸಬೇಕಾಗುತ್ತದೆ. ಇಲ್ಲವಾದಲ್ಲಿ ಹೊಸ ವ್ಯವಸ್ಥೆಗಳಿಂದ ದೇಶದ ವ್ಯಕ್ತಿಯ ಜೀವನ ವಿಕಾಸವಾಗುವ ಬದಲು, ವರ್ಗಗಳ ನಡುವೆ ಅಂತರವೇ ಹೆಚ್ಚುತ್ತ ಹೋಗುತ್ತದೆ. ಇನ್ನು ಅಂಕಿ ಅಂಶಗಳನ್ನು ಗಮನಿಸುವುದಾದರೆ, 2025ರ ವೇಳೆಗೆ ಇಂಟರ್ನೆಟ್ ಬಳಕೆದಾರರ ಪ್ರಮಾಣ ಶೇ 45ರಷ್ಟು ಹೆಚ್ಚಳವಾಗಲಿದೆ ಎಂದು ಐಎಎಂಎಐ ಕ್ಯಾಂಟರ್ ಕ್ಯೂಬ್ ವರದಿ ಹೇಳುತ್ತದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶದಲ್ಲಿಯೇ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ.

2025ರ ವೇಳೆಗೆ ಇಂಟರ್ ನೆಟ್ ಬಳಕೆದಾರರ ಸಂಖ್ಯೆ ತೊಂಭತ್ತು ಕೋಟಿ ತಲುಪಲಿದೆ ಎಂಬ ನಿರೀಕ್ಷೆ ಇದೆ. ಇಷ್ಟೊಂದು ಪ್ರಮಾಣದಲ್ಲಿ ಇಂಟರ್ ನೆಟ್ ಬಳಕೆಯು ಯಾವ ರೀತಿಯಲ್ಲಿ ಇರಲಿದೆ, ಅದರಿಂದ ನಮ್ಮ ಜೀವನ ಶೈಲಿಯು ಎಷ್ಟು ಸುಸ್ಥಿರವಾಗಬಹುದು ಮತ್ತು ನೆಮ್ಮದಿಯಿಂದ ಕೂಡಿರಬಹುದು ಎಂಬೆಲ್ಲ ವಿಚಾರಗಳು ಸಾಮಾಜಿಕ ಹಿನ್ನೆಲೆಯನ್ನಿಟ್ಟುಕೊಂಡು ನಡೆಸಬೇಕಾದ ಅಧ್ಯಯನಗಳು. ಅಂತಹ ಪರಿಣಾಮಗಳ ಆರಂಭ ಇರುವುದು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ.

ಬಿಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಅವಕಾಶಗಳನ್ನು ಹುಡುಕುವುದು ಮಾರುಕಟ್ಟೆ ಕ್ಷೇತ್ರದ ಒಂದು ಪ್ರಮುಖ ಲಕ್ಷಣ. ಸದ್ಯಕ್ಕೆ ಜಗತ್ತಿನಲ್ಲಿಯೇ ಅತೀ ಕಡಿಮೆ ಬೆಲೆಗೆ ಡೇಟಾ ನೀಡುವ ದೇಶಗಳ ಪೈಕಿ ಭಾರತವೂ ಮುಂದಿದೆ. ಹಾಗಾಗಿಯೇ ಬಳಕೆದಾದರರ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಡೇಟಾ ಬೆಲೆಯೇರಿಕೆಯ ಸುಳಿವನ್ನೂ ಸೇವಾ ಪೂರೈಕೆದಾರ ಕಂಪೆನಿಗಳು ನೀಡಿವೆ.

ಹಾಗಿದ್ದರೆ, ಸ್ಮಾರ್ಟ್ ಫೋನ್ ಗಾಗಿ ಅಪ್ಪ ಕೂಲಿ ಕೆಲಸ ಮುಗಿಸಿ ಬರುವುದನ್ನೇ ಕಾಯುತ್ತ ಕುಳಿತಿರುವ ವಿದ್ಯಾರ್ಥಿಗಳು ಅಥವಾ ಸರ್ಕಾರ ನೀಡುವ ಉಚಿತ ಸ್ಮಾರ್ಟ್ ಫೋನ್ ನ ಖುಷಿಯಲ್ಲಿರುವ ವಿದ್ಯಾರ್ಥಿಗಳಿಗೆ ಡೇಟಾ ಒದಗಿಸುವ ಯೋಜನೆಯೊಂದರ ಅಗತ್ಯವೂ ಇದೆ ಅಲ್ಲವೇ. ದುಡಿಮೆಯ ಅವಕಾಶಗಳು ಕ್ಷೀಣಿಸಿರುವ ಈ ಸಂದರ್ಭದಲ್ಲಿಈ ಪ್ರಶ್ನೆ ಹೆಚ್ಚು ಮಹತ್ವದ್ದು. ಮೊಬೈಲ್ ನಲ್ಲಿ ‘5ಜಿಇ’ ಎಂದು ಕಾಣಿಸಿಕೊಳ್ಳುವ ಹಾಗೆ ಮಾಡುವ ಮುನ್ನವೇ, ಮಾಡಿಕೊಳ್ಳಬೇಕಾದ ತಯಾರಿಗಳ ಪಟ್ಟಿಯೇ ದೊಡ್ಡದಿದೆ.