ರಹಿಮತ್ ಖಾನ್ ಅವರು ಸಿತಾರ್ ನ ತಂತಿವಿನ್ಯಾಸವನ್ನು ಬದಲಿಸಿದ ಖ್ಯಾತಿಗೆ ಪಾತ್ರರಾದವರು. ಸಿತಾರ್ ನಲ್ಲಿ ರುದ್ರವೀಣೆಯ ನಾದಸುಖವನ್ನು ಅರಸುತ್ತ, ಅವರು ಪ್ರಯೋಗಶೀಲತೆಯತ್ತ ಮುಖಮಾಡಿದರು. ಜನಪದ ಸಂಗೀತ ಉಪಕರಣ ಎನಿಸಿದ್ದ ಸಿತಾರ್ ಗೆ ಶಾಸ್ತ್ರೀಯತೆಯ ಮನ್ನಣೆ ದೊರೆಯಲು ರಹಿಮತ್ ಖಾನ್ ಅವರ ಈ ಆವಿಷ್ಕಾರವೂ ಕಾರಣ. ಶೇಣಿ ಮುರಳಿ ಬರೆದ ಉಸ್ತಾದ್ ರಫೀಕ್ ಖಾನ್ ಜೀವನಚರಿತ್ರೆ ‘ಖಾನ್ ಕಾಂಪೌಂಡ್’ನ ಅಧ್ಯಾಯವೊಂದು, ಈ ಆವಿಷ್ಕಾರದ ವಿವರ ನೀಡುತ್ತದೆ:
ಸುರ್ ಹೀ ಈಶ್ವರ್ ಹೈ
ಸಂಗೀತ ರಥದ ಗಾಲಿಗಳು ಉರುಳಿದವು.
ರಹಿಮತ್ ಖಾನ್ ಸಿತಾರ್ನಲ್ಲಿ ರುದ್ರವೀಣೆಯ ನಾದ ಸುಖ ಬಯಸಿದರು. ಅದಕ್ಕಾಗಿ ಸಿತಾರ್ ತಂತಿ ವಿನ್ಯಾಸವನ್ನೇ ಬದಲಿಸಿಬಿಟ್ಟರು!
ಐದು ತಂತಿಗಳ ಜತೆಗೆ ಹೆಚ್ಚುವರಿ ಎರಡು ತಂತಿಗಳನ್ನು ಜೋಡಿಸಿದರೆ, ಸಿತಾರ್ ರುದ್ರವೀಣೆಯ ಸ್ವರಸುಖ ನೀಡಬಲ್ಲದು ಎಂದು ಮನ ಹೇಳಿತು. ಏಳು ತಂತಿಗಳ ಸಿತಾರ್ ಆವಿಷ್ಕಾರವಾದದ್ದು ಹಾಗೆ. ಹೊಸ ತಂತಿಗಳು ಖರ್ಜ್ ಪಂಚಮ್, ಖರ್ಜ್ ಷಡ್ಜ್ ಎಂಬ ಹೆಸರಿನಿಂದ ಖ್ಯಾತಿ ಪಡೆದವು. ಈ ಎರಡು ತಂತಿಗಳ ಜೋಡಣೆ ರಹಿಮತ್ ಖಾನ್ ಸಿತಾರ್ ಲೋಕಕ್ಕೆ ನೀಡಿದ ಮಹತ್ವದ ಕೊಡುಗೆ ಎಂಬ ನೆಗಳ್ತೆಗೆ ಪಾತ್ರವಾಯಿತು. ಅಲ್ಲಿಯವರೆಗೆ ಜಾನಪದ ಉಪಕರಣವಾಗಿದ್ದ ಸಿತಾರ್, ಮುಂದೆ ಶಾಸ್ತ್ರೀಯ ಮನ್ನಣೆ ಪಡೆಯಿತು.
ಅದೀಗ ಇತಿಹಾಸದ ಭಾಗ. ಒಬ್ಬಂಟಿಯಾಗಿದ್ದ ರಹಿಮತ್ ಖಾನ್ ಜೀವಂತಿಕೆಯನ್ನು ಮರಳಿ ಪಡೆದುಕೊಂಡ ಈ ಬಗೆ ಅಸಾಧಾರಣವೇ ಆಗಿತ್ತು. ರುದ್ರವೀಣೆಯಿಂದ ಅವರು ಸಿತಾರ್ ಕಡೆಗೆ ಹೊರಳದೇ ಇರುತ್ತಿದ್ದರೆ, ಈ ಹೆಚ್ಚಿನ ತಂತಿಗಳು ಇರುತ್ತಿರಲಿಲ್ಲ, ಆ ಸ್ವಾದವೂ!. ಇದಕ್ಕೆಲ್ಲ ಕಾರಣ, ಬಂದೇಅಲಿ ಖಾನ್ ಎಂಬ ಗುರು. ಕೈಗೆ ರಕ್ಷೆ ಕಟ್ಟಿದ ಆ ದಿನ ಅವರು ಆಡಿದ್ದ ಮಾತು ನಿಜವಾಗಿ ಕಣ್ಣ ಮುಂದೆ ನಿಂತಿತು. ಸಿತಾರ್ ರಹಿಮತ್ ಅವರನ್ನೇ ಮೇಲಕ್ಕೆತ್ತಿತ್ತು. ಗುರು ಬಂದೇಅಲಿ ಖಾನ್, ರಹಿಮತರ ಪಾಲಿಗೆ ಕೊರಗಿನ ಹೊಳೆ ದಾಟಿಸಿದ ಅಂಬಿಗನಾಗಿದ್ದರು.
ಬಂದೇಅಲಿ ರುದ್ರವೀಣೆಯಲ್ಲಿ ಖಯಾಲ್ ಪದ್ಧತಿ ನುಡಿಸಿದ ಮೊದಲಿಗರು. ಅದು ಅವರ ಕೊಡುಗೆ. ಶಿಷ್ಯ ರಹಿಮತ್ ಖಾನ್ ಏಳು ತಂತಿಗಳ ಸಿತಾರ್ನಲ್ಲಿ ಖಯಾಲ್ ನುಡಿಸಿದ ಮೊದಲಿಗರಾದರು. ಸಿತಾರ್ಗೆ ಒಂದು ಸ್ವತಂತ್ರ ವಾದನೋಪಕರಣದ ಖದರ್ ತಂದುಕೊಟ್ಟದ್ದು ಕೂಡ ರಹಿಮತ್ ಖಾನರ ಅಸಾಮಾನ್ಯ ಕಾಣ್ಕೆಯ ಫಲ. ಜೋಡ್ ಆಲಾಪ್, ಭಡತ, ಝಾಲಾದ ಜತೆಜತೆಗೆ, ಮಸೀತಖಾನಿ, ರಜಾಖಾನಿ ಗತ್ತುಗಳು ಕೂಡ ಈ ಹೊಸ ಸಿತಾರ್ನಲ್ಲಿ ಸಲೀಸಾಗಿ ಹರಿದಾಡಿದವು. ಇಂದು ಶ್ರೇಷ್ಠ ವಾದಕರೆಲ್ಲರೂ ಏಳು ತಂತಿಗಳ ಸಿತಾರನ್ನೇ ಮೀಟುತ್ತಿದ್ದಾರೆ.
ಕಾಲಚಕ್ರ ಉರುಳುತ್ತ, ರಹಿಮತರಿಗೆ ಪುಣೆಯಲ್ಲಿ ಸಂಗೀತ ತರಗತಿ ಆರಂಭಿಸಬೇಕೆಂಬ ಅಭಿಲಾಷೆ ಮೂಡಿತು. ಗಾಯಕ ಭಾಸ್ಕರಬುವಾ ಬಖಲೆ ಮತ್ತು ಕೆಲ ಸಂಗೀತರಸಿಕರು ಅವರ ಈ ಆಶಯಕ್ಕೆ ಭುಜಕೊಟ್ಟರು. ಎಲ್ಲರ ಸಹಕಾರದಿಂದ ಕೆಲ ತಿಂಗಳಲ್ಲೇ ‘ಭಾರತ ಗಾಯನ ಸಮಾಜ’ ಬಾಗಿಲು ತೆರೆದುಕೊಂಡು, ಅನೇಕ ವಿದ್ಯಾರ್ಥಿಗಳು ಒಳಹೊಕ್ಕರು. ಮಂಗಲಪ್ರಸಾದ್ ಸೇರಿದಂತೆ ಹಲವರು ಇಲ್ಲಿಯೇ ವಿದ್ಯಾಭ್ಯಾಸ ಮುಗಿಸಿ, ಕೊನೆಗೆ ತಮ್ಮದೇ ಆದ ಸಂಗೀತ ಶಾಲೆಗಳನ್ನೂ ತೆರೆದರು. ಸರದಾರ ಆಟಾ ಸಾಹೇಬ ಮಜುಂದಾರ್ ಕೂಡ ರಹಿಮತರ ಗರಡಿಯಲ್ಲೇ ಸಿತಾರ್ ಕಲಾವಿದರಾಗಿ ರೂಪುಗೊಂಡರು.
ಇತ್ತ ಬಂದೇಅಲಿ ಖಾನರ ಧ್ವನಿಯೂ, ಶರೀರವೂ ಕ್ಷೀಣಿಸಿತು. ಮೈ ಹಾಸಿಗೆಗೆ ಅಂಟಿಕೊಂಡಿತು. ಔಷಧ ಕೆಲಸ ಮಾಡುತ್ತಿರಲಿಲ್ಲವೋ, ಬದುಕು ಸಾಕೆನಿಸಿತೋ, ಅಂತೂ ಬಂದೇಅಲಿ ಖಾನ್ ಎಂಬ ಸಿದ್ಧಿಪುರುಷ ಪುಣೆಯ ಪುಣ್ಯಭೂಮಿಯಲ್ಲಿ ಕೊನೆಗೊಂದು ದಿನ ಮಣ್ಣಾದರು. ಸಮಾಧಾನ ಹೇಳುತ್ತಿದ್ದ ಜಾಗ ಬರಿದಾಗಿ, ರಹಿಮತ್ ಖಾನ್ ನಿಂತಲ್ಲೇ ಕುಸಿದರು.
ಮನಸ್ಸು ವಿಚಲಿತವಾದಾಗಲೆಲ್ಲ ಗುರುಗಳ ಸಮಾಧಿ ಮುಂದೆ ರಹಿಮತ್ ಖಾನ್ ತಮ್ಮ ಹೊಸ ಏಳು ತಂತಿಗಳ ಸಿತಾರನ್ನು ತಾಸುಗಟ್ಟಲೆ ಮೀಟುತ್ತಿದ್ದರು, ಮೀಟುತ್ತ ಅಳುತ್ತಿದ್ದರು! ಕಣ್ಣೀರು ಒರೆಸುವವರು ಇಲ್ಲದೆ ರಹಿಮತ್ ಖಾನರ ಮನಸ್ಸು ಹೆಪ್ಪುಗಟ್ಟಿತು. ಖಾನ್ ಎಂಬ ನದಿಯಲ್ಲಿ ‘ಮೀನು’ ಒದ್ದಾಡಿತು. ಗುರುಗಳಲ್ಲಿ ಸಂಗೀತವನ್ನು ಕಂಡಿದ್ದ ರಹಿಮತ್ ಬರಬರುತ್ತ ಸಂಗೀತದಲ್ಲಿ ಗುರುಗಳನ್ನೂ, ದೇವರನ್ನೂ ಕಾಣತೊಡಗಿದರು. ಅನಂತರದ ದಿನಗಳಲ್ಲಿ ಅವರು ತಮ್ಮ ಶಿಷ್ಯರಿಗೆ ‘ಸುರ್ ಹೀ ಈಶ್ವರ್ ಹೈ’ ಎನ್ನುತ್ತಿದ್ದರು. ನಂತರ ಅದು ಪರಿಪಾಠವಾಯಿತು.
ನವೀನ ತಂತಿಗಳ ನಾದ ಬಹಳ ಬೇಗ ಹಬ್ಬಿತ್ತು. ಸಿತಾರ್ ಕಛೇರಿಗೆಂದು ಅವರು ಆಗಾಗ ಪರವೂರಿಗೆ ಹೋಗಿ ಬರುವುದಿತ್ತು. ಸಾಕಷ್ಟು ಶ್ರೋತೃಗಳು ಖರ್ಜ್ ಪಂಚಮ್, ಮತ್ತು ಖರ್ಜ್ ಷಡ್ಜದ ನಾದಕ್ಕೆ ಕಿವಿಗೊಡಲು ಕಾತರರಾಗಿದ್ದರು. ಹಾಗೊಮ್ಮೆ ನಾಗ್ಪುರಕ್ಕೆ ಅವರು ಹೋದಾಗ, ಆ ಪರಿಸರ ಅವರನ್ನು ಅದೆಷ್ಟು ಸೆಳೆಯಿತೆಂದರೆ ಕೆಲ ದಿನಗಳ ಮಟ್ಟಿಗಾದರೂ ಅಲ್ಲಿ ತಂಗಲು ಮನ ಹಾತೊರೆಯಿತು.
ಮಡದಿ ಸಕೀನಾ ಬೇಗಂ ಜತೆಗಿದ್ದರೆ, ಇನ್ನೇನು ಬೇಕು?
ಪೇಟೆಯ ಗೌಜಿಯಿಂದ ಅನತಿ ದೂರದ ಹಳೆಯ ಬಾಡಿಗೆ ಮನೆಯಲ್ಲಿ ವಾಸ. ರಹಿಮತ್ ಖಾನರ ಉಪಸ್ಥಿತಿಯನ್ನು ತಿಳಿದ ಊರ ಸಂಗೀತಾಸಕ್ತರೆಲ್ಲ ಅಲ್ಲಿಯ ಅತಿಥಿಗಳಾದರು. ವಿಚಿತ್ರ ಸನ್ನಿವೇಶವನ್ನು ಎದುರಿಸಬೇಕಾಗಿ ಬಂದ ಈ ದಂಪತಿ ಈ ಮನೆ ವಾಸ ಬೇಡ ಎಂದು ಬೀಗದ ಕೀಯನ್ನು ಯಜಮಾನನಿಗಿತ್ತು, ಕಾರಣವನ್ನೂ ತಿಳಿಸದೆ ಪುಣೆಯ ದಾರಿ ಹಿಡಿದರು.
ಬಂದೇಅಲಿ ಖಾನ್ ಎಂಬ ಗುರು. ಕೈಗೆ ರಕ್ಷೆ ಕಟ್ಟಿದ ಆ ದಿನ ಅವರು ಆಡಿದ್ದ ಮಾತು ನಿಜವಾಗಿ ಕಣ್ಣ ಮುಂದೆ ನಿಂತಿತು. ಸಿತಾರ್ ರಹಿಮತ್ ಅವರನ್ನೇ ಮೇಲಕ್ಕೆತ್ತಿತ್ತು. ಗುರು ಬಂದೇಅಲಿ ಖಾನ್, ರಹಿಮತರ ಪಾಲಿಗೆ ಕೊರಗಿನ ಹೊಳೆ ದಾಟಿಸಿದ ಅಂಬಿಗನಾಗಿದ್ದರು.
ಅಲ್ಲಿ ಆಗಿದ್ದಾದರೂ ಏನು?
ಆ ಬಾಡಿಗೆ ಮನೆಗೊಬ್ಬ ಹುಡುಗ ಬರುತ್ತಿದ್ದ. ಯಾರೋ, ಏನೋ! ರಹಿಮತ್ ಖಾನ್ ದಂಪತಿಗೆ ಆಗ ಇನ್ನೂ ಮಕ್ಕಳು ಹುಟ್ಟಿರಲಿಲ್ಲ. ಇಡೀ ದಿನ ಆ ಹುಡುಗ ಮನೆಯಲ್ಲಿರುತ್ತಿದ್ದ. ಪಕ್ಕದ ಮನೆಯವನಿರಬೇಕು ಎಂದೇ ಇವರು ಭಾವಿಸಿದ್ದು, ಆತನ ವರ್ತನೆಯೂ ಅದೇ ತೆರನಾಗಿತ್ತು. ಸಂಶಯಕ್ಕೆ ಎಳ್ಳಿನಷ್ಟು ಎಡೆಯೂ ಇರಲಿಲ್ಲ. ಊಟ, ತಿಂಡಿ ಎಲ್ಲವೂ ಇವರ ಜತೆಗೇ ಆಗುತ್ತಿತ್ತು. ಮನೆ ಕಸ ಗುಡಿಸುವಾಗ ರಹಿಮತರ ಮಡದಿಗೆ ಒಂದು ದಿನ ಚಿನ್ನದ ನಾಣ್ಯ ಸಿಕ್ಕಿತು. ಇದ್ಯಾರದೆಂಬ ಪ್ರಶ್ನೆಗೆ ಹುಡುಕಿದರೂ ಉತ್ತರ ಸಿಗಲಿಲ್ಲ. ಈ ಘಟನೆಯನ್ನು ಮರೆಯುವ ಮುನ್ನವೇ, ಇನ್ನೊಂದು ದಿನವೂ ಮನೆಕಸದಲ್ಲಿ ಚಿನ್ನದ ನಾಣ್ಯ ಪತ್ತೆಯಾಯಿತು. ಅರೆ! ಇದೇನು ಮಾಯೆ? ಯಾರು ಹೀಗೆ ಚಿನ್ನದ ನಾಣ್ಯ ಬಿಟ್ಟು ಹೋಗುತ್ತಿರುವವರು ಎಂಬುದು ಅರ್ಥವಾಗುತ್ತಲೇ ಇರಲಿಲ್ಲ.
ಮೊದಮೊದಲು ಖುಷಿಪಡುತ್ತಿದ್ದ ದಂಪತಿ, ಸ್ವರ್ಣ ನಾಟ್ಯಗಳು ಥೈಲಿ ತುಂಬಿದಾಗ ಬೆವರತೊಡಗಿದರು. ಇದರ ಹಕ್ಕುದಾರರು ಅವರಾಗಿರಲಿಲ್ಲವಲ್ಲ? ಇದನ್ನೆಲ್ಲ ಯಾರಲ್ಲೂ ಹೇಳುವಂತಿರಲಿಲ್ಲ. ಇದರ ಮೂಲ ಶೋಧಿಸುವ ಹಠಕ್ಕೆ ಬಿದ್ದ ದಂಪತಿ ಸೋತರು. ಅದೊಂದು ದಿನ, ಆ ರಹಸ್ಯ ತಾನಾಗಿಯೇ ಬಿಚ್ಚಿಕೊಂಡಾಗ ರಹಿಮತ್ ಖಾನರ ಮಡದಿ ಬೆಚ್ಚಿಬಿದ್ದರು. ರಹಿಮತ್ ಖಾನ್ ಮನೆಯಲ್ಲಿ ಇರಲಿಲ್ಲ. ಆ ಹುಡುಗ ಮನೆಯೊಳಗೆ ಆಡುತ್ತಿದ್ದ. ಚಿಕ್ಕಪುಟ್ಟ ಕೆಲಸಗಳನ್ನು ಖಾನರ ಮಡದಿ ಈ ಬಾಲಕನಿಂದ ಮಾಡಿಸಿಕೊಳ್ಳುತ್ತಿದ್ದರು. ಆ ದಿನ ದೂರದಲ್ಲಿದ್ದ ಒಂದು ವಸ್ತುವನ್ನು ತೋರಿಸಿ, ಬೇಟಾ, ಅದನ್ನಿಲ್ಲಿ ತಂದುಕೊಡು ಎಂದದ್ದಷ್ಟೆ. ಆ ಹುಡುಗನಿಗೆ ಏನಾಯಿತೋ, ಕುಳಿತಲ್ಲಿಂದಲೇ ಉದ್ದಕ್ಕೆ ಕೈಯನ್ನು ಚಾಚಿ ಆ ವಸ್ತುವನ್ನು ನಗುತ್ತ ಅವರ ಕೈಗಿತ್ತ! ಅಸ್ವಾಭಾವಿಕತೆಯ ಉದ್ದನೆಯ ಕೈಯನ್ನು ಕಂಡ ಅವರು ಸಾವರಿಸಿಕೊಳ್ಳಲು ಗಂಟೆಗಳೇ ಕಳೆದವು. ಅಡುಗೆ ಕೋಣೆಗೆ ತೆರಳಿ ನೀರು ಕುಡಿದು, ‘ಬೇಟಾ’ ಎಂದು ಮೆಲ್ಲನೆ ಕೂಗಿದರೆ, ಅಲ್ಲಿ ಆ ಹುಡುಗ ಇರಲಿಲ್ಲ. ಮನೆಗೆ ಬಂದ ರಹಿಮತ್ ಖಾನ್ ವಿವರ ತಿಳಿದು ದಂಗಾದರು.
ಹೀಗೆ, ನಾಗ್ಪುರದ ಬಾಡಿಗೆ ಮನೆಗೆ ಬೀಗ ಬಿತ್ತು!
ನಾಣ್ಯಗಳಿದ್ದ ಆ ಥೈಲಿಯೊಂದಿಗೆ ಮತ್ತದೇ ಪುಣೆಗೆ ಬಂದ ರಹಿಮತ್ ಖಾನ್, ರಾಜ ದರ್ಬಾರಿನ ಸಂಗೀತದಲ್ಲಿ ಮುಳುಗಿದರು. ಆ ದಿನಗಳಲ್ಲಿ ಊರ-ಪರವೂರ ಸಂಗೀತ ವಿದ್ವಾಂಸರು ಆಸ್ಥಾನದ ಅತಿಥಿಗಳಾಗುತ್ತಿದ್ದರು. ಪಲ್ಟನ್ ಎಂಬ ಊರು ಮಹಾರಾಜ ನಿಂಬಾಳ್ಕರನ ಅಧೀನದಲ್ಲಿತ್ತು. ಸಂಗೀತದ ಆಲಾಪನೆಗೆ ಆತ ಮರುಳಾಗುತ್ತಿದ್ದ. ರಹಿಮತ್ ಖಾನರನ್ನೂ ಕರೆಸಿಕೊಂಡ. ಕಛೇರಿ ಬಳಿಕ ದರ್ಬಾರಿನ ಗವಯಿ ಪಟ್ಟವನ್ನೂ ಉಡುಗೊರೆಯಾಗಿ ನೀಡಿದ! ರಹಿಮತ್ ಹೆಸರು ದಕ್ಷಿಣ ಭಾರತದಲ್ಲೂ ಕೇಳಿಬರತೊಡಗಿದ ದಿನಗಳವು. ಮೈಸೂರು, ಜಮಖಂಡಿಗಳಲ್ಲೆಲ್ಲ ಹಬ್ಬದ ದಿನಗಳಲ್ಲಿ ಸಿತಾರ್ ಕಛೇರಿಯನ್ನೇ ಜನ ಬಯಸುತ್ತಿದ್ದರು. ಸಂಘಟಕರು ತಮ್ಮ ಪುಸ್ತಕದ ಹಾಳೆಯಲ್ಲಿ ರಹಿಮತ್ ಖಾನರ ಪುಣೆಯ ವಿಳಾಸ ಬರೆದಿಡುತ್ತಿದ್ದರು. ರಹಿಮತರ ಕಛೇರಿ ಬಯಸದ ಸಂಗೀತಪ್ರಿಯ ರಾಜರುಗಳೇ ಇರಲಿಲ್ಲ. ಅವರ ನುಡಿಸುವಿಕೆಯ ಮೋಹಕ್ಕೆ ಒಳಗಾದವರಲ್ಲಿ ಕರುನಾಡಿನ ಮಹಾರಾಜರೂ ಇದ್ದರು.
ವೈಣಿಕರಾಗಿದ್ದ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನದಲ್ಲಿ ವೀಣೆ ಶೇಷಣ್ಣ ವಿದ್ವಾಂಸರಾಗಿದ್ದರು. ಅದು ದಿಗ್ಗಜರ ಸಂಗೀತ ಮಂಟಪ, ಅಲ್ಲಿ ಸಿತಾರ್ ನುಡಿಸುವುದು ಪಂಥಾಹ್ವಾನವೂ ಹೌದು. ಕಲಾವಿದ ಅರಮನೆಯ ಷರತ್ತುಗಳನ್ನು ಅನುಸರಿಸಿ ನುಡಿಸಬೇಕು. ದರ್ಬಾರಿನಲ್ಲಿ ಕಛೇರಿ ನೀಡಬೇಕಿದ್ದರೆ, ಆ ಕಲಾವಿದ ವೀಣೆ ಶೇಷಣ್ಣನವರ ಎದುರು ಖಾಸಗಿಯಾಗಿ ಕಛೇರಿ ನೀಡಿ, ಸೈ ಎನಿಸಿಕೊಳ್ಳಬೇಕಾದ ಜರೂರತ್ತೂ ಇರುತ್ತಿತ್ತು. ಅದು ಮೈಸೂರು ಮಹಾರಾಜರ ನಿಯಮವಾದ್ದರಿಂದ ಅದನ್ನು ಮೀರುವಂತಿರಲಿಲ್ಲ! ಖಾಸಗಿ ಕಛೇರಿ ಬಳಿಕ ದರ್ಬಾರಿನ ಕಛೇರಿಯಲ್ಲಿ ನುಡಿಸುವ ಅವಕಾಶ ರಹಿಮತರಿಗೆ ಲಭಿಸಿತು.
ಮೈಸೂರು ಮಹಾರಾಜರಿಗೆ ಸಿತಾರ್ ಕಛೇರಿ ಹೊಸ ಅನುಭವ. ಕರ್ನಾಟಕ ಶೈಲಿಯ ಸಂಗೀತದಲ್ಲಿ ಮುಳುಗಿದ್ದ ಅರಸರಿಗೆ ಹಿಂದುಸ್ತಾನಿ ಶೈಲಿಯ ರುಚಿ ಹತ್ತಿಸಿದ ಮೊದಲ ಕಛೇರಿಯದು. ತಂತಿ ವಾದ್ಯವನ್ನು ಸಮಶ್ರುತಿಗೆ ತರಲು ಆಗ ಹಾರ್ಮೋನಿಯಂನಂತಹ ಮಾಧ್ಯಮಗಳಿರಲಿಲ್ಲ. ಆಗ ಅಂದಾಜಿನ ಮೇಲೆಯೇ ತಂತಿವಾದ್ಯವನ್ನು ಶ್ರುತಿಗೆ ತರುತ್ತಿದ್ದರು. ಆ ನೈಪುಣ್ಯವೂ ಕಲಾವಿದರಲ್ಲಿತ್ತು. ಹಾರ್ಮೋನಿಯಂ ಪರಿಭಾಷೆಯಲ್ಲಿ ಹೇಳುವುದಾದರೆ, ಆ ದಿನದ ಕಛೇರಿಗೆ ರಹಿಮತ್ ಖಾನರು ಕರಿ ೧ ಬಿಳಿ ೧ರ ಶ್ರುತಿಯೊಂದಿಗೆ ದರ್ಬಾರಿನಲ್ಲಿ ಸಜ್ಜಾಗಿದ್ದರು. ಸಪ್ತಸ್ವರಗಳ ಪೈಕಿ ಗಾಂಧಾರ ಮತ್ತು ಧೈವತ ಜೋಕಾಲಿಯಂತೆ ತೇಲಾಡಲಾರಂಭಿಸಿದವು. ಅದು ರಾಗ ದರ್ಬಾರಿ ಕಾನಡ.
ಸ ರಿ ಗ ಮ ಪ ಧ ನಿ
ನಿ ಧ ನಿ ಪ ಮ ಪ ಗ ಮ ರಿ ಸ
ಬಹಳ ವಿಸ್ತಾರಕ್ಕೆ ಆಸ್ಪದ ನೀಡುವ ಈ ರಾಗ ದರ್ಬಾರಿನಲ್ಲೆಲ್ಲ ವಿಹರಿಸಿತು. ತಬಲಾ ಕಲಾವಿದ, ವಿಲಂಬಿತ್ ತೀನ್ತಾಲ್ನಲ್ಲಿ ಸಂಗತ ನೀಡುತ್ತಿದ್ದರು. ಆ ಕಾಲದಲ್ಲಿ ಸಿತಾರ್, ಸರೋದ್ಗೆ ಈ ಹದಿನಾರು ‘ಮಾತ್ರೆಯ ತಾಳವೇ ಹೆಚ್ಚು ಬಳಕೆಯಾಗುತ್ತಿತ್ತು.
ಕಛೇರಿ ಅನಂತರ ರಹಿಮತ್ ಖಾನ್ ಮತ್ತು ವೀಣೆ ಶೇಷಣ್ಣ ಪರಮಾಪ್ತರಾದರು. ಕೃಷ್ಣರಾಜ ಒಡೆಯರ ಭೇಟಿಯಲ್ಲಿ ರಹಿಮತರಿಗೆ ಮೈಸೂರಿನ ಆಸ್ಥಾನ ಸಿತಾರ್ ವಾದಕ ಪಟ್ಟದ ಆಹ್ವಾನವೂ ಲಭಿಸಿತು. ರಾಜವೈಭೋಗಗಳನ್ನು ಶೈಶವದಿಂದಲೇ ನೋಡಿದ್ದ ರಹಿಮತ್ ಖಾನರಿಗೆ ಮತ್ತೆ ಈ ಪಟ್ಟ ಬೇಕಿರಲಿಲ್ಲ. ಮಹಾರಾಜರಿಗೆ ನಮಸ್ಕರಿಸಿ, ಪುಣೆ ಸೇರಿದರು. ವಯಸ್ಸು, ಮನಸ್ಸು ಹೊಸ ಮಣ್ಣನ್ನೂ ಗಾಳಿಯನ್ನೂ ಬಯಸಿತು. ಯೋಚನೆಯ ಬಲೆಯಲ್ಲಿ ಒದ್ದಾಡುತ್ತ, ಕರ್ನಾಟಕವೇ ಸೂಕ್ತ ಎನಿಸಿತು. ಯಾಕೆಂದರೆ ಕರುನಾಡ ಮಣ್ಣಲ್ಲಿ ಸಂಗೀತದ ಸುಗಂಧವಿತ್ತು.
ಪತ್ರಕರ್ತರಾಗಿರುವ ಶೇಣಿ ಮುರಳಿ ಅವರು, ಕಲಾವಲಯದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು. ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ ಆಸಕ್ತಿ. ಮೂರು ಕಲಾತ್ಮಕ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಇರುವ ಅವರು, ಗಾಯನ ಮಾತ್ರವಲ್ಲದೆ ಮೃದಂಗ ಮತ್ತು ಮದ್ದಳೆ ವಾದನದಲ್ಲಿಯೂ ನಿಪುಣರು.