ಕಾಳಿ ನದಿ ಆಣೆಕಟ್ಟಿನ ಕೆಲಸ ನೋಡಿಕೊಳ್ಳುವ ಅಧಿಕಾರಿಗಳು ರಾತ್ರಿ ಊಟಕ್ಕೆ ಬರುತ್ತಿದ್ದರು. ಅವರಿಗೆ, ‘ಒರಿಜನಲ್ಲೂ ಮತ್ತೆಲ್ಲೂ ಸಿಗದು.ತಾಜಾ ಮಾಲು’ ಎಂದು ಕಳ್ಳು ಮಾರಿ ಹಣ ವಸೂಲಿ ಮಾಡುತ್ತಿದ್ದ. ಅದರ ಅರ್ಧ ಪಾಲು ಸಡಗೋನಿಗೂ ಹೋಗುತ್ತಿತ್ತು.ಇಂತಹುದೆಲ್ಲ ವ್ಯವಹಾರ ಮಾಡುತ್ತಾ ಸಡಗೋ ಕಳ್ಳಿನ ದಾಸನಾದ. ಡಿಸೆಂಬರನಿಂದ ಫೆಬ್ರುವರಿಯವರೆಗು ಬರ್‍ಪೂರ್ ಸಿಗುವ ಕಳ್ಳು ಕುಡಿಯುತ್ತ ಕಾಡಿನ ಯಾವುದೊ ಮರದ ಅಂಚಲ್ಲಿ ಮಲಗುತ್ತಿದ್ದ. ಈ ಕಾಡು, ಚಿರತೆ ಹುಲಿ ಅಡ್ಡಾಡುವ ಜಾಗ ಎಂದು ಅಬ್ಬೋಲಿಗೆ ಭಯವಾಗುತ್ತಿತ್ತು. ಈ ಭಾನುವಾರ ಅಕ್ಷತಾ ಕೃಷ್ಣಮೂರ್ತಿ ಬರೆದ ಭಾನುವಾರದ ಕತೆ ‘ಅಬ್ಬೋಲಿ’.
ಒಂದರ ಬೆನ್ನಿಗೊಂದು ಮರಗಳನ್ನು ಅಂಟಿಸಿಕೊಂಡು ಸಮೃದ್ಧವಾಗಿ ನಿಚ್ಚ ಹಸಿರಾಗಿ ಕಂಗೊಳಿಸುವ ಅಣಶಿ ಊರಲ್ಲಿ ಮಳೆ ಶುರುವಾದರೆ ಸಾಕು ಅದರ ಜೊತೆಗೆ ಕೊರೆಯುವ ಚಳಿಯೂ ಬಂದಪ್ಪುತ್ತದೆ. ವರ್ಷದ ಎಂಟು ತಿಂಗಳು ಮಳೆ ಇರುವ ಈ ಊರಲ್ಲಿ ಗುಡಿಸಲು ಕಟ್ಟಿಕೊಂಡು ಧೈರ್ಯದಿಂದ ಇದ್ದವಳು ಅಬ್ಬೋಲಿ.
ಅಣಶಿ ಊರಿಂದ ತುಸು ದೂರದಲ್ಲಿರುವ ಸಾತೇರಿ ದೇಗುಳದ ಹಿಂದೆ ಅರಣ್ಯ ಇಲಾಖೆಯ ಜಾಗದಲ್ಲಿ, ಅವರಿವರ ಕಾಲಿಗೆ ಬಿದ್ದು ಸದ್ಯಕ್ಕೆ ಉಳಿಯಲು ಸಣ್ಣ ಗುಡಿಸಲು ಕಟ್ಟಿಕೊಳ್ಳುವ ಪರವಾನಿಗೆ ಪಡೆದುಕೊಂಡವಳು ನಮ್ಮ ಅಬ್ಬೋಲಿ. ಮನೆ ಪಕ್ಕದಲ್ಲಿಯೇ ಸಣ್ಣ ಹೊಳೆ. ಮಳೆಗಾಲಕ್ಕೆ ಮಾತ್ರ ತುಂಬಿ ಹರಿದು ಒಮ್ಮೊಮ್ಮೆ ಮನೆ ಬಾಗಿಲು ತನಕ ನೀರು ಬರುತ್ತದೆ. ಅಲ್ಲೆ ತುಸು ಎತ್ತರದ ಜಾಗದಲ್ಲಿ ಗುಡಿಸಲು ನಿಲ್ಲಿಸೋಣಾ ಎಂದರೆ ಇಲಾಖೆಯವರು ಒಪ್ಪರು.
ಅವರದ್ದು ಕೂಡ ತಪ್ಪಲ್ಲ, ಯಾರಾದರೂ ದೊಡ್ಡ ಸಾಹೇಬರು ಬೆಂಗಳೂರು ಬದಿಯಿಂದ ವಿಸಿಟ್‍ಗೆ ಬಂದರೆ ಗುಡಿಸಲು ನೋಡಿ ಕೋಪಗೊಂಡು ಫಾರೆಸ್ಟ್ ಆಫೀಸರ್ ಮಂಜಯ್ಯನಿಗೆ ನೋಟೀಸು ಕೊಟ್ಟರೆ.. ಎಂಬ ಅನುಮಾನ ಸ್ವತಃ ಅಬ್ಬೋಲಿಗೂ ಇದೆ.ಅಬ್ಬೋಲಿಯ ಪರಿಸ್ಥಿತಿಗೆ ಕರಗಿ ಮಂಜಯ್ಯ ಪಾಪ ಹೆಣ್ಣಹೆಂಗ್ಸು ಎಂದು ಮರುಗಿ ತುರ್ತಿಗೆ ಅಂತ ಗುಡಿಸಲು ಕಟ್ಟೋಕೆ ಚೂರು ಜಾಗ ಬಿಟ್ಟುಕೊಟ್ಟಿದ್ದಾರೆ.”ದೊಡ್ಡ ಸಾಹೇಬ್ರು ಬಂದಾಗ ಈ ಕಡೆ ಬರಬ್ಯಾಡ ಮತ್ತೆ. ನನ್ ನೌಕರಿಗೂ ಸಂಚಾಕಾರ ಬರೋ ಸಾಧ್ಯತೆನೂ ಇರತೈತಿ ಹುಷಾರು” ಎಂಬ ಎಚ್ಚರಿಕೆಯ ಮಾತು ಅಬ್ಬೋಲಿಯ ಕಿವಿಯಲ್ಲಿ ಸದಾ ಜಾಗೃತವಾಗಿದೆ.ಹೀಗಾಗಿ ನೆರೆ ಬಂದರೆ ಬರಲಿ, ಸಾತೇರಿಯ ಇಚ್ಛೆ ಇದ್ದಂಗೆ ಬದಿಕೊಳ್ಳೊದು ಎಂದು ಗಟ್ಟಿ ನಿರ್ಧಾರ ಮಾಡಿ ಅಬ್ಬೋಲಿ ಅಲ್ಲಿದ್ದಾಳೆ.
ಈ ಕಷ್ಟ ಅಬ್ಬೋಲಿಗೆ ಅನಿರೀಕ್ಷಿತವಾಗಿ ಬಂದದ್ದು.ಗಂಡ ಸತ್ತು ಮೂರು ವರ್ಷವಾದರೂ ಪರಿಸ್ಥಿತಿ ಹಾಗೆ ಇದೆ. ಎಲ್ಲವೂ ಸರಿಯಾಗುತ್ತದೆ ಎನ್ನುವ ಕಾಲ ಸಮೀಪ ಅಂತೂ ಇಲ್ಲ. ಅಬ್ಬೋಲಿಯ ಮಾತು ಚೂರು ಕೇಳಿಸಿಕೊಳ್ಳಲೂ ಕೂಡ ಯಾರಿಗೂ ಟೈಮಿಲ್ಲ. ಇಂದಿನ ಕಾಲದಲ್ಲಿ ಬಡವರ ಹತ್ತಿರ ಯಾರೂ ಮಾತು ಆಡುದಿಲ್ಲ, ಸಿರಿವಂತರು ತಪ್ಪು ಹೇಳಿದು ಸರಿಸರಿ ಅನ್ನುವ ಕಾಲ ಇದು. ದ್ಯಾವ್ರು-ದಿಂಡರು ನಂಬಿಕೆ ಇಲ್ಲದ ಕಾಲ ಇದು -ಎಂದೆಲ್ಲ ಅಬ್ಬೋಲಿ ತನ್ನಲ್ಲಿಯೇ ಗೊಣಗಿಕೊಳ್ಳುತ್ತಾಳೆ .
ಅದೊಂದು ದೊಡ್ಡ ಕಥೆ.
ಕರ್ನಾಟಕದ ನಕಾಶೆಯಲ್ಲಿ ಹುಲಿ ಸರಂಕ್ಷಿತ ಪ್ರದೇಶವೆಂದು ಗುರ್ತಿಸಿಕೊಂಡ ಅಣಶಿಯಲ್ಲಿ ಅಬ್ಬೋಲಿ ಬಾಳುವೆ ಮಾಡಲು ಶುರು ಮಾಡಿ ಈಗಾಗಲೇ ಏಳೆಂಟು ವರ್ಷವಾಗಿದೆ. ಎರಡು ವರ್ಷಕ್ಕೊಮ್ಮೆ ಬಸಿರಾಗಿ ಒಂದು ಗಂಡು, ಒಂದು ಹೆಣ್ಣು ಮಗುವನ್ನು ಹೆತ್ತ ಅಬ್ಬೋಲಿ ಅಣಶಿಯ ಸಡಗೋ ಕಾಜುಗಾರನ ಹೆಂಡತಿ. ಸಡಗೋ ಕಾಜುಗಾರ ಮತ್ತು ಅಬ್ಬೋಲಿ ವ್ಯವಸಾಯ ಮಾಡಿ ಜೀವನ ಸಾಗಿಸುವವರು. ಅಣಶಿ ಎಂಬ ಹೆಸರಿನ ಈ ಊರು, ಹಳ್ಳಿ ಅನ್ನುವುದಕ್ಕಿಂತ ಕಾಡು ಎಂದರೆ ಸರಿಯಾಗುತ್ತದೆ. ಅಣಶಿಯಲ್ಲಿ ದಿನಸಿ ಸಾಮಾನು ಇರುವ ರಾಜೇಶ ದೇಸಾಯಿ ಅಂಗಡಿ ಹಾಗೂ ದಿನಕರ ಪೆಡ್ನೇಕರನ ಹೋಟೇಲ್ ಬಿಟ್ಟರೆ, ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಅರಣ್ಯ ಇಲಾಖೆ ಆಫೀಸು, ಪ್ರಾಥಮಿಕ ಶಾಲೆ, ಗ್ರಾಮ ಪಂಚಾಯತ್, ಗ್ರಾಮ ಚಾವಡಿ ಇಷ್ಟೇ ಕಟ್ಟಡಗಳು. ಉಳಿದಂತೆ ಕುಣಬಿ ಹಾಗೂ ದೇಸಾಯಿ ಮಂದಿಯ ಸಣ್ಣ ಮನೆಗಳು. ಇನ್ನುಳಿದ ಜಾಗವೆಲ್ಲ ದಟ್ಟಕಾಡು. ಎಲ್ಲರೂ ಕಾಡು ನಂಬಿ ಜೀವನ ಸಾಗಿಸುವವರು. ಅಲ್ಲೆ ಹುಟ್ಟಿ ಬೆಳೆದಿದ್ದಕ್ಕೆ ಅವರಿಗೆ ಅದು ಕಾಡು ಎಂದು ಎನಿಸುವುದೇ ಇಲ್ಲ.
ಅದೇನೆ ಇರಲಿ ಅಬ್ಬೋಲಿಯ ತವರು ಮನೆ ಡೇರಿಯಾ ಎಂಬ ಊರು. ನಾಲ್ಕು ಗಂಡು ಮಕ್ಕಳ ನಂತರ ಹುಟ್ಟಿದ ಮಗಳು ಅಬ್ಬೋಲಿ. ಊಟಕ್ಕೆ ಬಟ್ಟೆಗೆ ಕಮ್ಮಿ ಇರಲಿಲ್ಲ. ವರ್ಷಕ್ಕೆ ಮನೆ ಮಂದಿಗೆಲ್ಲ ಬೇಕಾಗುವಷ್ಟು ರಾಗಿ, ಜೊತೆಗೆ ಗಡ್ಡೆ ಗೆಣಸು ಕಾಡಿಗೆ ಹೋಗಿ ಸಂಗ್ರಹಿಸುವುದು ಇವೇ ನಿತ್ಯದ ಕಾಯಕ. ನೀರು ಹೇರಳವಾಗಿರುವುದರಿಂದ ಅಬ್ಬೋಲಿ ಮನೆಯವರು ಕಬ್ಬು ಕೂಡ ಬೆಳೆಯುತ್ತಾರೆ. ಕಬ್ಬಿನಗಾಣದ ಕೆಲಸ ಬಿಟ್ಟರೆ ಬೇರಾವ ವಿಶೇಷ ಕೆಲಸ ಇವರಿಗಿಲ್ಲ. ಅಬ್ಬೋಲಿ ಹುಟ್ಟಿದ ಕಾಲಕ್ಕೆ ಡೇರಿಯಾದಲ್ಲಿ ಸರ್ಕಾರ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗಿತ್ತು.
ಐದನೇ ಕ್ಲಾಸಿನ ನಂತರ ಮುಂದೆ ಶಾಲೆ ಕಲಿಯಲು ಕುಂಬಾರವಾಡಾ ಶಾಲೆಗೆ ಬರಬೇಕಾಯಿತು. ನಾಲ್ಕು ಕಿ.ಮಿ ನಡೆದು ಶಾಲೆಗೆ ಬರುವ ಅವಳ ಸಾಹಸ ಬೇರೆಯವರಿಗೆ ಮಾದರಿ ಆಗಿತ್ತು. ಅಬ್ಬೋಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಎಂಬ ಸರ್ಕಾರಿ ಯೋಜನೆಯಡಿಯಲ್ಲಿ ಹತ್ತನೇ ತರಗತಿಯವರೆಗೆ ಪುಕ್ಕಟ್ಟೆಯಾಗಿ ಕಲಿತಳು. ಅಷ್ಟೇ ಅಲ್ಲ ಹುಷಾರಿ ಹುಡುಗಿಯೂ ಆಗಿದ್ದಳು. ಹೀಗಾಗಿ ಶಿಕ್ಷಕರೆಲ್ಲರ ಪ್ರೀತಿಗೆ ಪಾತ್ರಳಾಗಿದ್ದಳು. ಅಣಶಿ ಕಡೆಯ ಪಾವ್ಣೆಯವರು ಅವಳನ್ನು ನೋಡಿ ಅಣಶಿ ಕಡೆಯಿಂದ ಒಳ್ಳೊಳ್ಳೆ ನೆಂಟಸ್ಥಿಕೆಯೆಲ್ಲ ತಂದರು.ಅಂತೂ ಅಬ್ಬೋಲಿ ಕಾಲೇಜಿಗೆ ಹೋಗುತ್ತೇನೆಂದರೂ ಕೇಳದೆ ಮನೆಯವರೆಲ್ಲಾ ಸೇರಿ ಮದುವೆ ಮಾಡಿಸಿದರು. ಒಂದು ಎಕರೆ ಜಮೀನು ಹೊಂದಿದ ಸಡಗೋ ಕಾಜುಗಾರನ ಹೆಂಡತಿಯಾದಳು. ಚಿಕ್ಕವನಿರುವಾಗಲೇ ಅಪ್ಪ ಅಮ್ಮನನ್ನು ಕಳೆದುಕೊಂಡ ಅವನನ್ನು ಅಜ್ಜಿಯೇ ಸಾಕಿದ್ದಳು. ಎರಡು ತಿಂಗಳ ಹಿಂದಷ್ಟೇ ಅಜ್ಜಿ ಕೂಡ ತೀರಿ ಹೋಗಿ, ಊರಿನ ಹೀರೆಕರೆಲ್ಲ ಹೇಳಿದಂತೆ ಅಜ್ಜಿ ತೀರಿಕೊಂಡ ಒಂದು ವರ್ಷದೊಳಗೆ ಅಬ್ಬೋಲಿಯನ್ನು ಮದುವೆಯಾಗಿದ್ದ ಸಡಗೋ.
ಮದುವೆಯಾದ ಹೊಸತರಲ್ಲಿ ಎರಡು ವರ್ಷವಾಗುವವರೆಗೆ ಎಲ್ಲ ಸುಖವಾಗಿ ನಡೆದಿತ್ತು. ಕೊನೆ ಕೊನೆಗೆ ಅದೇನು ಕೆಟ್ಟಕಾಲ ಬಂತೋ ಗೊತ್ತಿಲ್ಲ ಸಡಗೋ ಮನೆಯಲ್ಲಿರುವುದೇ ಕಡಿಮೆಯಾಗುತ್ತಾ ಬಂತು. ಗೆಳೆಯರು ಹೆಚ್ಚಾದರು. ಗೋವೆ ಕಡೆ ಹೋಗಿ ಒಂದು ವಾರ ದುಡಿದರೆ ಹೆಚ್ಚು ಪಗಾರ ಸಿಗುತ್ತದೆ ಎಂಬ ಗೆಳೆಯರ ಸೂಚನೆ ಪಾಲಿಸಲೆಂಬಂತೆ ವರ್ಷಕ್ಕೆ ಎರಡು ಸಲ ಗೋವೆಯತ್ತ ಮುಖ ಮಾಡುತ್ತಿದ್ದ. ಡಿಸೆಂಬರ ತಿಂಗಳು ಬಂದರೆ ಕಾಡಿಗೆ ಹೋಗಿ ಕಳ್ಳು ಸಂಗ್ರಹಿಸುತ್ತಿದ್ದ. ದೊಡ್ಡ ದೊಡ್ಡ ಬೈಣಿ ಮರಕ್ಕೆ ಎಂದೋ ತಂದ ನೀರಿನ ಬಾಟ್ಲಿ ಅಥವಾ ಸಾರಾಯಿ ಬಾಟ್ಲಿ ಕಟ್ಟಿ ಬರುವುದು, ಹದಿನೈದು ದಿನಕ್ಕೆ ಹೋಗಿ ಸಂಗ್ರಹವಾಯಿತೇ ಎಂದು ನೋಡುವುದು ಮಾಡುತ್ತಿದ್ದ.
ಒಟ್ಟಾರೆ ಇಡೀ ಅಣಶಿ ಊರಲ್ಲಿ ಅತಿ ಹೆಚ್ಚು ಕಳ್ಳು ಸಂಗ್ರಹಿಸುವವ ಸಡಗೋ ಎಂದು ಅವನ ಕುಡುಕರ ಬಳಗದಲ್ಲಿ ಹೆಸರಾಗಿದ್ದ. ಕದ್ರಾದ ಜಯರಾಮನಿಗೂ ಕೂಡ ಕಳ್ಳು ಬಾಟ್ಲಿ ಸಫೈ ಮಾಡುತ್ತಿದ್ದ.ಜಯರಾಮ ಕದ್ರಾದಲ್ಲಿ ಹೋಟೇಲು ನಡೆಸುತ್ತಿದ್ದ. ಕಾಳಿ ನದಿ ಆಣೆಕಟ್ಟಿನ ಕೆಲಸ ನೋಡಿಕೊಳ್ಳುವ ಅಧಿಕಾರಿಗಳು ರಾತ್ರಿ ಊಟಕ್ಕೆ ಬರುತ್ತಿದ್ದರು. ಅವರಿಗೆ, ‘ಒರಿಜನಲ್ಲೂ ಮತ್ತೆಲ್ಲೂ ಸಿಗದು.ತಾಜಾ ಮಾಲು” ಎಂದು ಮಾರಿ ಹಣ ವಸೂಲಿ ಮಾಡುತ್ತಿದ್ದ. ಅದರ ಅರ್ಧ ಪಾಲು ಸಡಗೋನಿಗೂ ಹೋಗುತ್ತಿತ್ತು. ಇಂತಹುದೆಲ್ಲ ವ್ಯವಹಾರ ಮಾಡುತ್ತಾ ಸಡಗೋ ಕಳ್ಳಿನ ದಾಸನಾದ. ಡಿಸೆಂಬರನಿಂದ ಫೆಬ್ರುವರಿಯವರೆಗು ಬರ್‍ಪೂರ್ ಸಿಗುವ ಕಳ್ಳು ಕುಡಿಯುತ್ತ ಕಾಡಿನ ಯಾವುದೊ ಮರದ ಅಂಚಲ್ಲಿ ಮಲಗುತ್ತಿದ್ದ. ಈ ಕಾಡು ಚಿರತೆ ಹುಲಿ ಅಡ್ಡಾಡುವ ಜಾಗ ಎಂದು ಅಬ್ಬೋಲಿಗೆ ಭಯವಾಗುತ್ತಿತ್ತು. ಕುಡುಕ ಗಂಡನನ್ನು ಸಂಭಾಳಿಸುವುದು ಕಷ್ಟ ಆಯಿತು.
ಹೀಗೆ ಒಂದು ದಿನ ಕಳ್ಳು ತೆಗೆಯುವ ಸೀಜನ್ ಸಮಯದಲ್ಲಿ ಕಾಡಿಗೆ ಹೋದವನು ಬರಲೇ ಇಲ್ಲ. ಅಬ್ಬೋಲಿ ಕೂಗಾಡಿ ಫಾರೆಸ್ಟು ಆಫೀಸರ್ ಕೈ ಕಾಲು ಹಿಡಿದು ಅರಣ್ಯ ಇಲಾಖೆಯವರ ಸಹಾಯದಿಂದ ಕಾಡು ಹುಡುಕಿದರೆ ಅವನು ಹೆಣವಾಗಿ ಸಿಕ್ಕಿದ್ದ. ಕರಡಿಯೊಂದು ಸಡಗೋ ಮೇಲೆ ದಾಳಿ ಮಾಡಿತ್ತು. ಇಷ್ಟೇ ಆದರೆ ಅಬ್ಬೋಲಿ ದುಃಖ ತಡೆಯುತ್ತಿದ್ದಳೋ ಏನೋ. ಆದರೆ ಸಡಗೋ ಕುಡಿದು ಸಿಕ್ಕಾಪಟ್ಟೆ ಸಾಲವನ್ನು ಕೂಡ ಮಾಡಿಟ್ಟಿದ್ದ. ಸೊಸೈಟಿಯವರು ಬಂದು ಇದ್ದ ಒಂದು ಎಕರೆ ಜಮೀನನ್ನು ಜಪ್ತಿ ಮಾಡಿದ್ದರು. ಕಂತಿನಲ್ಲಿ ಹಣ ಕಟ್ಟಿ ಬಿಡಿಸಿಕೋ ಎಂದು ಸೊಸೈಟಿ ಮ್ಯಾನೇಜರ ಹೇಳಿದ್ದ. ಈಗ ಇದ್ದ ಒಂದೇ ಆಸರೆ ರೇಷನ್ ಕೊಡುವ ಕೂಪನ್ನು. ಅದಕ್ಕೆ ಸಿಗುವ ಅಕ್ಕಿ ತೊಗರಿಬೇಳೆ ತಿಂಗಳ ಹೊಟ್ಟೆ ತುಂಬುತ್ತಿತ್ತು ಅಷ್ಟೆ.
ಒಂದು ದಿನ ರಾತ್ರಿ ಮಲಗಿದಾಗ ಅಬ್ಬೋಲಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಯಾರೋ ಬಾಗಿಲು ತಟ್ಟಿ ಸಣ್ಣಕ್ಕೆ ಹೆಸರು ಹಿಡಿದು ಕರೆದಂತಾಯಿತು. ಮಣ್ಣಿನ ಗೋಡೆಯ ಸಣ್ಣ ಕಿಟಕಿಯಿಂದ ಇಣುಕಿ ನೋಡಿದರೆ ಊರ ಮಿರಾಶಿ ನಿಂತಿದ್ದ. “ಖರ್ಚಿಗೆ ಹೆದರಬ್ಯಾಡ ಅಬ್ಬೋಲಿ. ಬಾಗಿಲು ತೆಗಿ. ಒಂದ್ ರಾತ್ರಿಗೆ ಬರೊಬ್ಬರಿ ನಾನೂರು ಕೊಡತಿನಿ”ಎಂದೆಲ್ಲ ಒದರುತ್ತಿದ್ದ. ಅವನ ಮುಖದ ಮೇಲೆ ಉಗುಳಿ ಕಿಟಕಿ ಮುಚ್ಚಿದ್ದಳು. ರಾತ್ರಿಯೀಡಿ ನಿದ್ದೆ ಬರಲಿಲ್ಲ ಅವಳಿಗೆ. ಅಬ್ಬೋಲಿ ಶಾಲೆ ಕಲಿತವಳು.ಡೇರಿಯಾದ ದೊಡ್ಡ ಕೂಡು ಕುಟುಂಬದಿಂದ ಬಂದ ಹೆಣ್ಣುಮಗಳು. ಬೆಳಗಾಗುತ್ತಿದ್ದಂತೆ ಅದೆಲ್ಲಿಂದ ಅಬ್ಬೋಲಿಗೆ ಧೈರ್ಯ ಬಂತೋ ಗೊತ್ತಿಲ್ಲ ಮಿರಾಶಿಯ ಗುಣಗಾನವನ್ನು ಊರ ಪಂಚರ ಮುಂದೆ ಬಿಚ್ಚಿಟ್ಟಳು. ಆದುದ್ದೆಲ್ಲ ಒಳ್ಳೆಯದ್ದಕ್ಕೆ. ಈ ಘಟನೆ ನಂತರ ಮತ್ತ್ಯಾವ ಕೆಟ್ಟ ಕಣ್ಣುಗಳು ಕೂಡ ಅವಳತ್ತ ನೋಡುವ ಧೈರ್ಯ ಮಾಡಲಿಲ್ಲ. “ಅವಳೇ ರಾತ್ರಿ ಬಾ ಎಂದು ಕರೆದು ಮೋಸ ಮಾಡಿದಳು, ಶಾಲಿ ಕಲಿತ ಹೆಣ್ಣು ತಾನು ಸಾಚಾ ಎಂದು ತೋರಿಸಿಕೊಳ್ಳಲು ನಾಟಕ ಮಾಡಿದಳು” ಎಂದೆಲ್ಲ ಮಿರಾಶಿ ಬೆನ್ನ ಹಿಂದೆ ಆಡಿಕೊಳ್ಳುತ್ತಿರುವುದು ಅಬ್ಬೋಲಿಯ ಕಿವಿಗೂ ಬಿತ್ತು.ಪಂಚಾಯತಿ ಪಿ,ಡಿ.ಓ ಮಾತ್ರ “ಬಹಳ ಗಟ್ಟಿ ಹೆಣ್ಣು ನೀನು. ಹಾಗೆ ಇರಬೇಕು ಇಲ್ಲದಿದ್ರೆ ಜೀವ ತಿಂದು ಬಿಡತಾರೆ ಜನ” ಎಂದು ನಾಲ್ಕು ಒಳ್ಳೆ ಮಾತಾಡಿದ್ರು.
ಎಲ್ಲವೂ ಸರಿಯಾಗುತ್ತದೆ ಎನ್ನುವ ಕಾಲ ಸಮೀಪ ಅಂತೂ ಇಲ್ಲ. ಅಬ್ಬೋಲಿಯ ಮಾತು ಚೂರು ಕೇಳಿಸಿಕೊಳ್ಳಲೂ ಕೂಡ ಯಾರಿಗೂ ಟೈಮಿಲ್ಲ. ಇಂದಿನ ಕಾಲದಲ್ಲಿ ಬಡವರ ಹತ್ತಿರ ಯಾರೂ ಮಾತು ಆಡುದಿಲ್ಲ, ಸಿರಿವಂತರು ತಪ್ಪು ಹೇಳಿದು ಸರಿಸರಿ ಅನ್ನುವ ಕಾಲ ಇದು.
ಆದರೂ ಊರ ಬಾವಿಯಲ್ಲಿ ನೀರು ಸೇದಲು ಹೋದಾಗ, ರೇಷನ್ ಅಂಗಡಿ ಅಕ್ಕಿ ತೊಗರಿಬೇಳೆ ತರಲು ಹೋದಾಗ, ಮನೆ ಮುಂದೆ ಬಿದ್ದ ಬೊಕುಳದ ಹೂ ಹೆಕ್ಕಿ ಮಾಲೆ ಮಾಡಿ ಮಾರಲು ರಸ್ತೆ ಬದಿಗೆ ನಿಂತಾಗಲೆಲ್ಲ ಮಂದಿ ಒಂಥರಾ ಸಂಶಯದಿಂದ ನೋಡುವುದು, ಕಳ್ಳ ನಗೆ ನಗುವುದು ಅಬ್ಬೋಲಿಗೆ ಒಂಥರಾ ಹಿಂಸೆ ಅನಿಸಲು ಶುರುವಾಯಿತು. ಚಿಮಣಿಎಣ್ಣೆ ತಗೊಳ್ಳಲು ಸಾಲಲ್ಲಿ ಬಂದು ನಿಂತರೆ ಒಂದು ಮಾರು ದೂರ ಉಳಿದ ಹೆಂಗಸರು ಮೈಲಿಗೆಯಾದಂತೆ ನಿಲ್ಲುತ್ತಿದ್ದರು. ಅಣಶಿಯ ಘಾಡಿಯ ( ಮಾಟ ಮಂತ್ರ ಮಾಡುವವ)ನ ಹೆಂಡತಿ ಮಾಯಾ ಬಂದರೆ ಹೆಂಗಸರಾದಿಯಾಗಿ ಗಂಡಸರು ಮೈ ತಾಗಿಸಿ ಒತ್ತಿ ನಿಲ್ಲುತ್ತಿದ್ದವರೇ. ನಾಲ್ಕು ಕಾಸು ಇದೆಯೆಂದು ವ್ಯಾನಿಟಿ ಬ್ಯಾಗ್ ಹಿಡಿದು ವಯ್ಯಾರ ತೋರುವ ಅವಳು ರಾತ್ರಿ ರಾಣಿ ಎಂಬುದು ಊರಿಗೆಲ್ಲ ಗೊತ್ತಿದ್ದ ವಿಚಾರವೇ ಆಗಿತ್ತು. ಇವೆಲ್ಲ ನೋಡಿ ಅಬ್ಬೋಲಿಗೆ ಮೈ ಉರಿದುಹೋಗುತ್ತಿತ್ತು. ಆದರೇನು ಮಾಡಲಾಗುತ್ತದೆ. ಅವಳು ಬಡವಳು. ಇದ್ದ ಕುಡುಕ ಗಂಡನೂ ಸತ್ತು ಸಣ್ಣಗಾಗಿದ್ದಳು ಅಬ್ಬೋಲಿ.
ಚುನಾವಣೆ ಸಮೀಪಿಸುತ್ತಿರುವಾಗ ಮನೆ ಗಣತಿ ಮಾಡಲು ಬಂದ ಅರುಣ ಮಾಸ್ತರರು ಮನೆ ಮನೆ ತಿರುಗುತ್ತಾ ಅಬ್ಬೋಲಿ ಮನೆಗೂ ಬಂದ್ದಿದ್ದರು. ಅರುಣ ಮಾಸ್ತರರು ಅಬ್ಬೋಲಿಗೆ ಎಸ್,ಎಸ್.ಎಲ್.ಸಿ ಓದುವಾಗ ಸಮಾಜ ವಿಷಯ ಕಲಿಸುತ್ತಿದ್ದರು. ಅಬೋಲಿಯನ್ನು ಮನೆಯಲ್ಲಿ ನೋಡಿ, ಹುಷಾರಿ ಇದ್ದ ಹುಡುಗಿಯ ಬದುಕು ಹಿಂಗೆಲ್ಲ ಆಯಿತಲ್ಲ ಎಂದು ಮರುಗಿದರು. ಅಷ್ಟೇ ಅಲ್ಲ ಅವಳಲ್ಲಿ ಹುದುಗಿರುವ ಹೋರಾಟದ ಕಿಚ್ಚನ್ನು ನೆನಪಿಸಿ ಅಬ್ಬೋಲಿಗೆ ಧೈರ್ಯ ತುಂಬಿದರು. ಹೆಣ್ಣು ಮಕ್ಕಳ ಹೋರಾಟದ ಕಥನವಿರುವ ಪುಸ್ತಕಗಳನ್ನೆಲ್ಲ ಶಾಲೆ ಕಲಿಯುವಾಗಲೇ ಅಬ್ಬೋಲಿ ಓದಿದ್ದಳು. ಅಷ್ಟೇ ಬೇಗ ಅವನ್ನೆಲ್ಲ ಮರೆತಿದ್ದಳು ಕೂಡ.ಅರುಣ ಸರ್ ಅವೆಲ್ಲವನ್ನು ನೆನಪಿಸಿ “ಬದುಕು ಎನ್ನುವುದೇ ಒಂದು ಹೋರಾಟ. ಒಬ್ಬಬ್ಬರಿಗೆ ಒಂದೊಂದು ತರ”ಎಂದು ಹೇಳಿ ಹೋದರು. ಅದೇನೋ ಗೊತ್ತಿಲ್ಲ ಅಂದಿನಿಂದ ಅಬ್ಬೋಲಿ ಪೂರ್ತಿ ಬದಲಾಗಿಯೇ ಹೋಗಿದ್ದಳು.
ಅದರ ಫಲವೇ ಆಕೆ ಮುಂದೆ ಕೈಗೊಂಡ ನಿರ್ಧಾರ. ಹೇಗಾದರು ಮಾಡಿ ದುಡಿದು ಸ್ವಲ್ಪ ಹಣ ಗಳಿಸಬೇಕು. ಯಾರ ಹಂಗಿನಲ್ಲಿಯೂ ಇರಬಾರದು ಎಂದುಕೊಂಡಳು. ಅಣಶಿಗೆ ಹೊಸದಾಗಿ ವರ್ಗವಾಗಿ ಬಂದು ಕನ್ನಡ ಶಾಲಿ ಮಾಸ್ತರ ಬಾಡಿಗೆ ಮನೆ ಹುಡುಕುತ್ತಿದ್ದಾನೆ ಎಂಬ ವಿಷ್ಯ ಅವಳ ಕಿವಿಗೂ ಬಿದ್ದಿತ್ತು. ಇಲ್ಲಿ ಮನೆ ಸಿಗುವುದೇ ಕಡಿಮೆ. ಬಾಡಿಗೆಗೆ ಎಂದು ಯಾರೂ ಮನೆ ಕಟ್ಟಿರುವುದಿಲ್ಲ. ಇದೆಲ್ಲ ಯೋಚಿಸಿ ಅವಳೊಂದು ಉಪಾಯ ಮಾಡಿದಳು. ಹೊತ್ತಿಗೆ ಮುಂಚೆ ಎದ್ದು ಮನೆಯಲ್ಲಿದ್ದ ನಾಕು ಅಡಿಗೆ ಪಾತ್ರೆ ಹಿಡಿದುಕೊಂಡು, ತನ್ನ ಮಕ್ಕಳನ್ನು ಕಟ್ಟಿಕೊಂಡು ಹೊಳೆ ಹತ್ತಿರ ಇರುವ ಸಣ್ಣ ಜಾಗದಲ್ಲಿ ತಾನೇ ನಿಂತು ಒಂದು ಗುಡಿಸಲು ಕಟ್ಟಿದಳು. ತಾನಿದ್ದ ಮಣ್ಣಿನ ಮನೆಯನ್ನು, ಶಾಲೆಗೆ ಹೊಸತಾಗಿ ಬಂದಿದ್ದ ಸರ್‍ಗೆ ತಿಂಗಳಿಗೆ ಆರು ನೂರು ರೂಪಾಯಿಗೆ ಬಾಡಿಗೆ ಕೊಟ್ಟಳು. ಇದಕ್ಕೂ ಊರಿನ ಮಿರಾಶಿ ತಕರಾರು ಮಾಡಿದ್ದ. ಆದರೆ ಫಾರೆಸ್ಟರ್ ಮಂಜಯ್ಯ ಅಬ್ಬೋಲಿಯ ಒಳ್ಳೆಯ ಗುಣ ತಿಳಿದವನಾದ ಕಾರಣಕ್ಕೆ ಮಿರಾಶಿಯ ಬಾಯಿ ಕಟ್ಟಿದ್ದ.
ಇವಿಷ್ಟು ನಡೆದ ಕಥೆ.
ಅಬ್ಬೋಲಿ ಮಕ್ಕಳೊಂದಿಗೆ ಗುಡಿಸಲಿನಲ್ಲಿ ಪಡಬಾರದ ಕಷ್ಟ ಪಡುತ್ತಿದ್ದರೂ ಒಳಗೊಳಗೆ ಸೊಸೈಟಿ ಸಾಲ ತೀರುತ್ತಿದ್ದ ವಿಷಯ ಹೆಚ್ಚೆಚ್ಚು ಆತ್ಮವಿಶ್ವಾಸ ಬೆಳೆಸುತ್ತಿತ್ತು. ಕಾಡಿಗೆಹೋಗಿ ಯಾವುದ್ಯಾವುದೋ ಗಡ್ಡೆ ಸಂಗ್ರಹಿಸುತ್ತ ಶಾಲೆಗೆ ರಜಾ ಇದ್ದ ದಿನ ಮಗನನ್ನು ಮಾರಲು ಕುಳ್ಳಿರಿಸುತ್ತಾಳೆ. ಮಗಳನ್ನು ರಾಮನಗರದಲ್ಲಿರುವ ಕಿತ್ತೂರು ಚನ್ನಮ್ಮ ವಸತಿ ಶಾಲೆಗೆ ಸೇರಿಸಿದ್ದಾಳೆ. ಅಮ್ಮ ಮಗ ಕಾಡಿನಲ್ಲಿ ಸಿಗುವ ಹಣ್ಣು ಸಂಗ್ರಹಿಸಿ ಹೆಚ್ಚು ದಿನ ಅದರಲ್ಲಿಯೇ ಹೊಟ್ಟೆ ತುಂಬಿಕೊಳ್ಳುತ್ತಾರೆ.ಪಿ.ಡಿ.ಓ ಸಾಹೇಬರು ವಿಧವಾ ವೇತನ ಬರುವ ಹಾಗೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಜೀವನ ಹೇಗೋ ನಡೆಯುತ್ತಿದೆ.
ಅಬ್ಬೋಲಿ ಕೈಯಲ್ಲಿ ನಾಲ್ಕು ಕಾಸು ಈಗ ಅಡ್ಡಾಡುತ್ತಿದೆ. ಸೊಸೈಟಿ ಸಾಲವೂ ತೀರಿ ಸಡಗೋ ಅಡವಿಟ್ಟ ಒಂದು ಎಕರೆ ಜಾಗದ ಕಾಗದ ಪತ್ರ ಕೂಡ ಅವಳ ಕೈ ಸೇರಿದೆ. ಅಬ್ಬೋಲಿ ಮುಂದಿನ ಮಳೆಗಾಲ ಕಳಿಯುವುದರೊಳಗೆ ಪುನಃ ಕೇರಿಯಲ್ಲಿರುವ ತನ್ನ ಮನೆಗೆ ಬಂದು ಸೇರಿಕೊಂಡಿದ್ದಾಳೆ.ಅವಳ ಏಳಿಗೆ ಕಂಡು ಊರ ಹೆಂಗಸರೆಲ್ಲ ಒಬ್ಬೊಬ್ಬರೆ ಬಂದು ಮಾತಿಗೆ ನಿಲ್ಲುತ್ತಾರೆ. ಮಿರಾಶಿ ಕೂಡ ನಿಂಗೆ ಒಳ್ಳೆದಾಗಲಿ ತಾಯಿ ಎಂದು ಪಂಢರಾಪುರದಿಂದ ತಂದ ಪ್ರಸಾದವನ್ನು ಅವಳ ಮನೆಗೆ ಮುಟ್ಟಿಸಿದ್ದಾನೆ.ಮಗಳ ಮದುವೆಗೆ ಒಂದಿಷ್ಟು ಹಣ ಕೂಡಿಡಬೇಕೆಂಬ ಆಸೆ ಆಗಿದೆ ಅಬ್ಬೋಲಿಗೆ.ಒಳ್ಳೆ ಕಡೆ ಮಗಳ ಮದುವೆ ಮಾಡಬೇಕು.ಯಾವ ಕಾರಣಕ್ಕೂ ಮಗಳು ತನ್ನಷ್ಟು ಕಷ್ಟ ಪಡಬಾರದು ಎಂದೆಲ್ಲ ಯೋಚಿಸುತ್ತಾಳೆ.
ಕಾಡಿನಲ್ಲಿ ಹುಡು ಹುಡುಕಿ ತೆಗೆಯುತ್ತಿದ್ದ ನಾಗರಕೋನಾ, ಚುರ್ನ, ಕಣಗಾ, ದವಾ, ವೃತಾಳಿ, ದುಕ್ರಕೋನಾ ಮುಂತಾದ ಗಡ್ಡೆ ಗೆಣಸುಗಳನ್ನು ತಾನೇ ಬೆಳೆದು ಮಾರಿದರೇ ಹೇಗೆ ಎಂದು ಯೋಚಿಸುತ್ತಾಳೆ. ತಾಯಿ ಮಗಾ ಇಬ್ಬರೇ ಸೇರಿ ತಮ್ಮ ಜಾಗ ಹಸನುಗೊಳಿಸಿ ವಿವಿಧ ಜಾತಿಯ ಗಡ್ಡೆಯ ಗಿಡ ನೆಡುತ್ತಾರೆ. ಒಂದು ಬದಿಗೆ ತರಕಾರಿ ಓಳಿ ಮಾಡುತ್ತಾರೆ. ಈಗ ಅಣಶಿ ಊರಿನಲ್ಲಿ ದಿನಾ ಬೆಳಿಗ್ಗೆ ಎಲ್ಲರ ಮನೆಗೆ, ಶಾಲೆಯ ಬಿಸಿಯೂಟ ಯೋಜನೆಗೆ, ಮೊನ್ನೆ ತಾನೇ ತೆರೆದ ಹುಡುಗರ ಹಾಸ್ಟೇಲಿಗೆ ಬೇಕಾದ ತರಕಾರಿ ಅಬ್ಬೋಲಿಯ ಮನೆಯಿಂದಲೇ ಹೋಗುತ್ತದೆ. ಅವಳ ಕೆಲಸಕ್ಕೆ ಈಗ ಸಹಾಯ ಮಾಡಲು ಊರಿನ ಕೆಲವು ಹೆಂಗಸರೂ ಸೇರಿಕೊಂಡಿದ್ದಾರೆ. ಅವರಿಗೆಲ್ಲ ದಿನ ಕೂಲಿ ಕೊಡುವಷ್ಟು ಲಾಭ ಗಳಿಸುತ್ತಾಳೆ ಅಬ್ಬೋಲಿ.ಅದರ ಜೊತೆಗೆ ಜೋಯಿಡಾದಲ್ಲಿ ಮಾತ್ರ ಬೆಳೆಯಬಹುದಾದ ಕೆಲವು ಗಡ್ಡೆ ಗೆಣಸುಗಳ ತಳಿ ಅಬ್ಬೋಲಿ ಬೆಳೆಯುತ್ತಾಳೆ. ಹೀಗಾಗಿ ಗುಡ್ಡಗಾಡಿನ ಗಡ್ಡೆ ಗೆಣಸು ಮೇಳದಲ್ಲಿ ಬರೊಬ್ಬರಿ ನಲವತ್ತೊಂಬತ್ತು ತಳಿಗಳನ್ನು ಪ್ರದರ್ಶಿಸುತ್ತಾಳೆ. ಹೀಗಾಗಿ ಕಳೆದ ತಿಂಗಳು ಸಸ್ಯ ತಳಿಗಳು ಹಾಗೂ ರೈತರ ಹಕ್ಕು ಪ್ರಾಧಿಕಾರವು “ಸಸ್ಯ ವಂಶವಾಹಿ ಸಂರಕ್ಷಣಾ ಪ್ರಶಸ್ತಿಯನ್ನು ಹತ್ತು ಲಕ್ಷ ನಗದು ಪುರಸ್ಕಾರದೊಂದಿಗೆ ಅಬ್ಬೋಲಿಯ ತಂಡಕ್ಕೆ ನೀಡಿದೆ.
ಈಗೀಗಂತೂ ಅವಳು ಬೆಳೆದ ಗಡ್ಡೆ ಗೆಣಸುಗಳನ್ನು ಹುಡುಕಿಕೊಂಡು ಬೇರೆ ಬೇರೆ ರಾಜ್ಯದಿಂದ ಜನ ಬರುತ್ತಾರೆ.ಅವರೊಟ್ಟಿಗೆ ವ್ಯವಹರಿಸಿ ಚೂರು ಹಿಂದಿ ಭಾಷೆ ಮಾತಾಡುವುದನ್ನು ಕೂಡ ಕಲಿತುಕೊಂಡಿದ್ದಾಳೆ. ಅಬ್ಬೋಲಿ ಮ್ಯಾಡಂ ಎಂದು ಗೌರವ ಕೊಟ್ಟೆ ಜನ ಮಾತಾಡುತ್ತಿದ್ದಾರೆ. ಸಸ್ಯ ತಳಿ ರಕ್ಷಣಾ ಸಂಘದಿಂದ ಊರ ಹೆಂಗಸರೆಲ್ಲ ತಮಗೆ ಲಭ್ಯವಿದ್ದ ಜಮೀನಿನಲ್ಲಿಯೇ ವಿವಿಧ ತಳಿ ಬೆಳೆಯುವಂತೆ ಪ್ರೋತ್ಸಾಹಿಸುತ್ತಿದ್ದಾಳೆ.
ಹೆಂಗಸರಿಗೆಲ್ಲ ಕೆಲಸ ಹಚ್ಚಿ ತಮ್ಮನ್ನೆಲ್ಲ ಮೂಲೆಗೆ ಸೇರಿಸುತ್ತಿದ್ದಾಳೆ ಎಂದು ಊರ ಗಂಡಸರೆಲ್ಲ ರಸ್ತೆ ಬದಿಯಲ್ಲಿ, ಸಾರಾಯಿ ಅಂಗಡಿಯಲ್ಲಿ ನಿಂತು ಮಾತಾಡುತ್ತಿದ್ದಾರೆ. ಅಬ್ಬೋಲಿ ತನ್ನ ಸಂಘದ ಮೂಲಕವಾಗಿ ಅಣಶಿಯ ಸಾರಾಯಿ ಅಂಗಡಿ ಮುಚ್ಚಿಸುವ ಅರ್ಜಿಯನ್ನು ತಾಲೂಕಾ ಆಫೀಸಿಗೆ ಕೊಟ್ಟಿದ್ದಾಳೆ. ಅಣಶಿಯಿಂದ ಕುಂಬಾರವಾಡಾದವರೆಗೆ ಸಾರಾಯಿ ವಿರೋಧಿ ಹೋರಾಟದಲ್ಲಿ ತೊಡಗಿಕೊಂಡಿದ್ದಾಳೆ. ದಿನಂಪ್ರತಿ ಒಂದಲ್ಲ ಒಂದು ಕಾರಣಕ್ಕೆ ಪತ್ರಿಕೆಯಲ್ಲಿ ಅವಳ ಹೆಸರು ಅಚ್ಚಾಗುತ್ತಲೇ ಇರುತ್ತದೆ. ದೊಡ್ಡ ಸಮಾಜಸೇವಕಿಯಾಗಿ ಗುರ್ತಿಸಿಕೊಂಡಿದ್ದಾಳೆ.
ಗಡ್ಡೆ ಗೆಣಸು ವ್ಯವಹಾರವೂ ಜಬರ್‍ದಸ್ತ ನಡೆಯುತ್ತಿದೆ. ಮಗಳ ಮದುವೆಗೆ ಒಂದಿಷ್ಟು ಕಾಸು ಸೇರುತ್ತಿದೆ. ಅಬ್ಬೋಲಿ ಮ್ಯಾಡಂ ಮುಖದಲ್ಲಿ ದಿನದಿನವು ತರಕಾರಿಗಳ ತಾಜಾತನ ತುಂಬಿಕೊಳ್ಳುತ್ತಿದೆ. ಮೊನ್ನೆ ಮೊನ್ನೆ ಕೃಷಿ ಮಹಿಳೆ ಎಂಬ ಪ್ರಶಸ್ತಿಯೂ ಅವಳಿಗೆ ದೊರೆತದ್ದು ಪತ್ರಿಕೆಯಲ್ಲಿ ಬಂದು ಈಗಂತೂ ಮತ್ತಷ್ಟು ಫೇಮಸ್ಸು ಆಗಿದ್ದಾಳೆ. ಪತ್ರಿಕೆ ಓದಿದ ಮಿರಾಶಿ ಮಾತ್ರ ಒಳಗೊಳಗೆ ಹೊಟ್ಟೆಕಿಚ್ಚು ಬೆಳೆಸಿಕೊಳ್ಳುತ್ತಿರುವ ವಿಷ್ಯ ಮನೆ ದಾಟಿ ಅಂಗಡಿಯ ಕಡೆಗೆಲ್ಲ ಹರಿದಾಡುತ್ತಿದೆ. ಅಬ್ಬೋಲಿ ಇನ್ನಷ್ಟು ಗಟ್ಟಿಯಾಗುತ್ತಿದ್ದಾಳೆ.
ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ
It is like a energy booster for mind and spirit soul of every living being perticularly helpless ladies of village where basic infrastructure and proper education is not available
ತುಂಬಾ ಒಳ್ಳೆಯ ಕಥೆ ಅಕ್ಷತಾ. ಕಥೆಯ ಅಂತ್ಯ ಮನಸ್ಸಿಗೆ ಅತ್ಯಂತ ಸಮಾಧಾನ ನೀಡಿತು. ಸಿದ್ಧ ಮಾದರಿಯ ದುರಂತ ಅಂತ್ಯಕ್ಕೆ ಬದಲಾಗಿ ಅಬ್ಬೋಲಿಯ ಬದುಕು, ಭವಿಷ್ಯ ಹಸನಾದದ್ದು ಓದಿ ನಾವೇ ಏನೋ ಮಹತ್ತರವಾದ ಸಾಧನೆ ಮಾಡಿದ ತೃಪ್ತಿ ಆಯ್ತು.
ಅಬ್ಬೋಲಿ ಹೋರಾಟದ ಹೆಣ್ಣು…ಸಾಧಿಸಿ ನಿಂತ ಹೆಣ್ಣು ಮಗಳು…ಶಿಕ್ಷಣ ಸಣ್ಣ ಸಾಧನೆಗೆ ದೊಡ್ಡ ಮೆಟ್ಟಿಲು
ಧನ್ಯವಾದಗಳು ಸರ್
ಕಥೆ ಚೆನ್ನಾಗಿ ಮೂಡಿ ಬಂದಿದೆ.
ಧನ್ಯವಾದ ಸರ್
ಅಬ್ಭೋಲಿಯ ಜೀವನ ಕಥೆ ಎಷ್ಟೋ ಹೆಣ್ಣು ಮಕ್ಕಳಿಗೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಲು ಮಾದರಿ. ಟೀಚರ ಕಥೆ ತುಂಬ ಚೆನ್ನಾಗಿ ಮೂಡಿ ಬಂದಿದೆ. ನಿಮ್ಮ ಇ ಸ್ಕೂಲ್ ಲೇಖನ ಇಲ್ಲಿ ಮೂಡಿ ಬರಲಿ.. ಅದು ಬಹಳಷ್ಟು ಓದುಗರಿಗೆ ತಲಪುತ್ತದೆ.
Abboli teally irbeku! Kathe chennagide!.