ಮಾಮೂಲಿನಂತೆಯೇ ಅತಿಯಾಗಿರುತ್ತಿದ್ದ ಮಡಿ ಇನ್ನು ಹಬ್ಬದ ದಿನಗಳಲ್ಲಂತೂ ಕೇಳುವಂತಿರಲಿಲ್ಲ! ಕೋಳಿ ಕೂಗುವುದಕ್ಕೆ ಮುನ್ನವೇ ಅರೆಬೆತ್ತಲ ಒದ್ದೆ ಬಟ್ಟೆಯ ಸ್ನಾನ ಸಂಧ್ಯಾವಂದನೆಗಳು, ಇಳಿ ಮಧ್ಯಾಹ್ನದವರೆಗೂ ನಡೆಯುತ್ತಿದ್ದ ಸುದೀರ್ಘ ಪೂಜಾಕೈಂಕರ್ಯಗಳು, ಮಡಿಯುಟ್ಟು ಅಡುಗೆಮನೆ ಹೊಕ್ಕರೆ ಸತ್ತರೂ ಹೊರಗೆ ಬರಲಾರದೆ ಬೆವರಿನ ಮುದ್ದೆಯಾಗಿ ಚಡಪಡಿಸುತ್ತಿದ್ದ ಮನೆಯ ಹೆಂಗಸರು, ಅಡುಗೆಯ ಘಮದ ಸುಖ ನೆತ್ತಿಗೇರಿ ಹಸಿವಿನಲ್ಲಿ ಒದ್ದಾಡುತ್ತಾ ಬೆಳಗಿಂದ ಕಾದು ಕಾದು ನಾಲಗೆಯ ಲಾಲಾರಸ ಬತ್ತಿಹೋದ ನಮ್ಮಂತಹ ನಗಣ್ಯ ಪಾತ್ರಗಳು…- ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕದಲ್ಲಿ ಮಡಿಹುಡಿ ವಿಚಾರ.

 

ಮಡಿ-ಮೈಲಿಗೆಗಳನ್ನೂ ಮುಟ್ಟು-ಚಟ್ಟುಗಳನ್ನೂ ಒಂದು ವ್ರತದಂತೆ ಆಚರಿಸುವುದು ಕೇರಿಯಲ್ಲಿ ಸಾಂಕ್ರಾಮಿಕ ಖಾಯಿಲೆಯಾಗಿ ಹರಡಿದ್ದ ಚಟ. ಪಕ್ಕದ ಮನೆಯಲ್ಲಿ ಏನೆಲ್ಲಾ ಮಡಿ-ಹುಡಿ ಮಾಡುವಾಗ ನಾನು ಸುಮ್ಮನಿದ್ದರೆ ಅವರಿಗಿಂತ ಕಡಿಮೆ ದರ್ಜೆಯವನಾಗುವೆನು ಎಂಬ ನಾನತ್ವ ಉಳಿದವರಿಗೆ ಕಾಡುವುದು. ಆಗ ಅವರು ಬ್ರಾಹ್ಮಣರ  ಆಚರಣೆಯಲ್ಲಿ ಮೇಲುಗೈ ಸಾಧಿಸಲು ಮತ್ತು ಆಚರಣೆಗಳಲ್ಲಿ ತಮ್ಮ ಘನ ಪಾಂಡಿತ್ಯ ಮೆರೆಯಲು ಅವರಿಗಿಂತಲೂ ಒಂದು ಕೈ ಹೆಚ್ಚಾದ ಮಡಿ ಮಾಡುವರು. ಒಂದು ಮನೆಯವರು ಅತಿಥಿಗಳಿಗೆ ಕೈ ಒರೆಸಲು ಕೊಟ್ಟ ವಸ್ತ್ರವನ್ನು ಒಗೆದರೆ, ಇನ್ನೊಬ್ಬರು ಅವರು ಕುಳಿತ ಕುರ್ಚಿಯನ್ನೂ ಸೇರಿಸಿ ಅಂಗಳದಲ್ಲಿ ಇಟ್ಟು ತೊಳೆಯುವರು. ಆಗ ಪಕ್ಕದವರ ಕಡೆಗೊಮ್ಮೆ ನೋಡಿ “ಮಡಿ ಮಾಡಿದ್ರೆ ಪೂರ್ತಿ ಮಾಡ್ಬೇಕು ನೋಡಿ.” ಎಂದು ಗೆಲುವಿನ ಮಂದಹಾಸ ಬೀರುವರು.

ನೀವು ರಾಮಾಯಣದ ಉಪಕಥೆಯಾದ ‘ಮಂಗಗಳ ಅಮಟೆಕಾಯಿ ಉಪ್ಪಿನಕಾಯಿ’ ಕಥೆಯನ್ನು ಕೇಳಿಯೇ ಇರಬಹುದು. ರಾಮನ ವನವಾಸ ಮುಗಿದು ಅವ ಪಟ್ಟಕ್ಕೆ ಕೂತು ‘ಪಟ್ಟಾಭಿರಾಮ’ನಾಗಿ ಅಯೋಧ್ಯೆಯನ್ನು ಆಳಲು ತೊಡಗಿದಾಗ ಅವನಿಗೆ ಒಂದು ವಿಚಾರ ಮನಸ್ಸಿನೊಳಗೆ ಕೊರೆಯತೊಡಗಿತಂತೆ. ಯುದ್ಧದಲ್ಲಿ ಜೊತೆಯಾದ ಪರಮವೀರ ವಾನರ ಪಡೆಗೆ ತಾನು ಇದುವರೆಗೂ ಏನು ಮಾಡಿಲ್ಲವಲ್ಲ ಎಂದು ಮರುಗಿ ಅವರಿಗಾಗಿ ಭೋಜನಕೂಟವನ್ನು ಏರ್ಪಡಿಸಿದನಂತೆ. ಆಗ ಸಮಸ್ತ ವಾನರ ಸೇನೆಯು ಅಯೋಧ್ಯೆಗೆ ಆಗಮಿಸಿ ತಮಗೆ ಸಲ್ಲುತ್ತಿದ್ದ ಗೌರವಕ್ಕೆ ಭಾಜನರಾದರು. ತನ್ಮಧ್ಯೆ ಊಟದ ಸಮಯವಾಗಿ ವಾನರರೆಲ್ಲಾ ರಾಜಗಾಂಭೀರ್ಯದಿಂದ ಸರತಿಯ ಸಾಲಿನಲ್ಲಿ ಕುಳಿತಿರಲು ಸಾಲಾಗಿ ಎಲೆ ಹರವಿ, ತಯಾರಿಸಿದ್ದ ಷಡ್ರಸೋಪೇತವಾದ ಭಕ್ಷ್ಯ-ಭೋಜ್ಯಗಳನ್ನು ಅರಮನೆಯ ಮಂದಿ ಭಕ್ತಿಭಾವದಿಂದ ಬಡಿಸತೊಡಗಿದರು.

ತೊಂಭತ್ತರಲ್ಲಿ ಒಂಭತ್ತನೇಯದಾಗಿ ಅಮಟೆಕಾಯಿ ಉಪ್ಪಿನಕಾಯಿಯೂ ಬಡಿಸೋಣವಾಯಿತು. ಸಾಲಿನಲ್ಲಿ ಕೂತ ಮಂಗವೊಂದಕ್ಕೆ ಅದು ಯಾವ ಕಾಯಿ ಎಂಬ ಕೆಟ್ಟ ಕುತೂಹಲ ಹುಟ್ಟಿ ಅದನ್ನು ಎಲೆಯಿಂದೆತ್ತಿ ಕೈಲಿ ಹಿಡಿದು ಪಿಚಕ್ಕನೆ ಹಿಚುಕಿತು. ತಕ್ಷಣವೇ ಲಚಕ್ಕನೆ ಹೊರಬಿದ್ದ ಅಮಟೆ ವಾಟೆಯು ಎದುರು ಸಾಲಿನಲ್ಲಿ ಕುಳಿತ ಹಿರಿಮಂಗದ ಕಣ್ಣಿಗೆ ಟಣ್ಣನೆ ಬಡಿಯಿತು. ಅವಮಾನದಿಂದ ಅತ್ತಿತ್ತ ನೋಡಿದ ಹಿರಿ ಮಂಗನಿಗೆ ತನ್ನ ಶಕ್ತಿಯನ್ನು ಯಾರಾದರೂ ಕಡಿಮೆಯೆಂದು ಅಂದಾಜಿಸಬಹುದು ಎಂದು ಭಯವಾಗಿ ತಕ್ಷಣವೇ ತನ್ನ ಎಲೆಯ ಮೇಲಿದ್ದ ಉಪ್ಪಿನಕಾಯಿಯನ್ನು ಹಿಡಿದು ಜೋರಾಗಿ ಹಿಚುಕಿ ವಾಟೆಯನ್ನು ಛಂಗನೆ ದೂರಕ್ಕೆ ಓಡಿಸಿತು. ಅದು ಮೊದಲಿಗಿಂತಲೂ ಎತ್ತರಕ್ಕೆ ಹೋಯಿತು. ಇದನ್ನು ಕಂಡ ನಾಲ್ಕನೇ ಸಾಲಿನ ಮಂಗವೊಂದು ತಾನೇನು ಕಡಿಮೆ ಎಂದು ತನ್ನೆಲ್ಲ ಉಪ್ಪಿನಕಾಯಿಯನ್ನು ಎಲ್ಲರಿಗಿಂತಲೂ ಮೇಲಮೇಲಕ್ಕೆ ಹಾರಿಸಿತು. ಅದರಿಂದ ಇನ್ನೊಂದು ಮತ್ತೊಂದು ಮಗದೊಂದು ಮಂಗಗಳು ಜಾಡಿಗೇ ಕೈ ಹಾಕಿ ವಾಟೆ ಹಾರಿಸಲು ಶುರುಮಾಡಿ ಇಡೀ ಭೋಜನಶಾಲೆಯೇ ರಣರಂಗವಾಗಿ ಹೋಯಿತು. ಮಾಡಿದ ಅಡುಗೆಗಳೆಲ್ಲ ಕಾಲ ಕೆಳಗೆ ಬಿದ್ದು ತೂರಾಡಿ ಅತೀವ ಗಾಂಭೀರ್ಯದಿಂದ ಸಾಗಿದ್ದ ರಾಜನ ಭೋಜನಕೂಟವು ಮಂಗಗಳ ಹುಚ್ಚು ನಾನತ್ವದ ಪಾಲಾಗಿ ಜಿದ್ದಿನ ಸ್ಪರ್ಧೆಗೆ ಯಾರೂ ಹೊರತಲ್ಲ ಅನ್ನುವುದು ಸಾಬೀತಾಯಿತು.

ನೂರಕ್ಕೆ ನೂರು ಪಾಲು ಇದಕ್ಕೆ ಹೊರತಲ್ಲದ ಮಠದ ಕೇರಿಯ ಮಡಿವಂತಿಕೆಯ ಕೆಲವರು ‘ಪ್ರಾಣ ಹೋದರೆ ಹೋಗಲಿ, ಮಡಿ ಹುಡಿ ನಡೀತಿರಲಿ’ ಅನ್ನುವಂತೆ ತಮ್ಮ ಜನ್ಮಕಾರಣವೇ ಮಡಿ ಪಾಲನೆ ಎಂಬಂತೆ ನಡೆದುಕೊಳ್ಳುತ್ತಿದ್ದರು. ಕಾರಣವಿರುತ್ತಿದ್ದ ಸ್ವಚ್ಛತೆಯೇನೋ ಸರಿ, ಆದರೆ ಅಕಾರಣ ಮುಟ್ಟು-ಚಟ್ಟುಗಳು ಒಮ್ಮೊಮ್ಮೆ ಮೈ ಪರಚಿಕೊಳ್ಳುವಷ್ಟು ಅಸಹನೆ ಹುಟ್ಟಿಸುತ್ತಿದ್ದವು. ಮಾಮೂಲಿನಂತೆಯೇ ಅತಿಯಾಗಿರುತ್ತಿದ್ದ ಮಡಿ ಇನ್ನು ಹಬ್ಬದ ದಿನಗಳಲ್ಲಂತೂ ಕೇಳುವಂತಿರಲಿಲ್ಲ! ಕೋಳಿ ಕೂಗುವುದಕ್ಕೆ ಮುನ್ನವೇ ಅರೆಬೆತ್ತಲ ಒದ್ದೆ ಬಟ್ಟೆಯ ಸ್ನಾನ ಸಂಧ್ಯಾವಂದನೆಗಳು, ಇಳಿ ಮಧ್ಯಾಹ್ನದವರೆಗೂ ನಡೆಯುತ್ತಿದ್ದ ಸುದೀರ್ಘ ಪೂಜಾಕೈಂಕರ್ಯಗಳು, ತಿನ್ನುವ ವಸ್ತುಗಳೇ ಆದ ನೈವೇದ್ಯಗಳಲ್ಲೂ ಮಡಿ-ಮುಸುರೆ ವಿಭಾಗಗಳು, ಮಡಿಯುಟ್ಟು ಅಡುಗೆಮನೆ ಹೊಕ್ಕರೆ ಸತ್ತರೂ ಹೊರಗೆ ಬರಲಾರದೆ ಬೆವರಿನ ಮುದ್ದೆಯಾಗಿ ಚಡಪಡಿಸುತ್ತಿದ್ದ ಮನೆಯ ಹೆಂಗಸರು, ಬೆಳಗಿನಿಂದಲೂ ಮಂತ್ರ ಹೇಳಿ ಹೇಳಿ ಹಾಳು ಬಾವಿಯಂತೆ ಒಣಗಿ ಹೋದ ಗಂಟಲಿಗೂ ಸೋಲದ ಗಂಡಸರು, ಅಡುಗೆಯ ಘಮದ ಸುಖ ನೆತ್ತಿಗೇರಿ ಹಸಿವಿನಲ್ಲಿ ಒದ್ದಾಡುತ್ತಾ ಬೆಳಗಿಂದ ಕಾದು ಕಾದು ನಾಲಗೆಯ ಲಾಲಾರಸ ಬತ್ತಿಹೋದ ನಮ್ಮಂತಹ ನಗಣ್ಯ ಪಾತ್ರಗಳು… ದೀಪಾವಳಿ ಸಂಜೆಯ ಪಟಾಕಿ ಹೊಡೆಯುವ ಸಂಭ್ರಮವೊಂದನ್ನು ಬಿಟ್ಟು ಬಹುತೇಕ ಹಬ್ಬಗಳೆಲ್ಲಾ ಷೋಡಶೋಪಚಾರ ಪೂಜೆ, ಅಭಂಗ ಮಡಿ ಕಟ್ಟಳೆ ಹಾಗೂ ತರಹೇವಾರಿ ತಿನಿಸುಗಳ ಪರಿಮಳದ ನೈವೇದ್ಯ ಇಷ್ಟರ ಮಧ್ಯೆ ಮುಗಿದೇ ಹೋಗುತ್ತಿದ್ದವು.

ಹುಟ್ಟಿನದೋ ಸಾವಿನದೋ ಮನೆಯಾದರೆ ಅದು ಇನ್ನೊಂದು ಅತಿರೇಕ. ಹನ್ನೊಂದನೇ ದಿನದವರೆಗೂ ಬಾಣಂತಿ ಹಾಗೂ ಮಗು ಹೊರ ಪ್ರಪಂಚದ ಗಾಳಿಯನ್ನು ಸೋಕುವುದಿಲ್ಲ. ಹೊರಗಿನವರು ಬಂದು ಮುಟ್ಟಿದರೆ ಎಳೆ ಬಾಣಂತಿ ಮಗುವಿಗೆ ಸೋಂಕು ತಗುಲೀತು ಎಂಬ ವೈಜ್ಞಾನಿಕ ತತ್ವವನ್ನು ಹೊರತುಪಡಿಸಿ ಉಳಿದವೆಲ್ಲ ಅತಿರೇಕದ ಮಡಿಗಳೇ… ಇನ್ನು ಸಾವಿನ ಮನೆಗೊಂದು ಬೇರೆಯದೇ ಬಣ್ಣ. ಮನಸಿನೊಳಗೆ ನಿಜವಾದ ದುಃಖವಿರಲಿ ಬಿಡಲಿ, ‘ಸದ್ಯ ಇನ್ನಾದರೂ ಸತ್ತರಲ್ಲ!’ ಅನ್ನುವಷ್ಟು ವಯೋವೃದ್ಧರಾಗಿರಲಿ, ‘ಅಯ್ಯೋ ಪಾಪ… ಹೋಗುವಷ್ಟು ವಯಸ್ಸೇ ರಾಯರದ್ದು..!?’ ಅನ್ನುವಷ್ಟು ಚಿಕ್ಕವರಿರಲಿ, ಸತ್ತವರ ಬಗೆಗಿನ ಮೋಹ ಅನುಕಂಪಗಳಿಗಿಂತ ಯಾರು ಏನನ್ನೂ ಮುಟ್ಟಿಸಿಕೊಳ್ಳದೇ ಎಷ್ಟರಮಟ್ಟಿಗೆ ಕೈಂಕರ್ಯಗಳನ್ನು, ಮಡಿ ಹುಡಿಯನ್ನು ನಿಭಾಯಿಸುವವರು ಎನ್ನುವುದೇ ದೊಡ್ಡ ಮಾತು! “ಓಹೋ, ಮಾಡ್ಕೋಬೇಡಿ ರಾಯರೇ”,
“ಅಗೋ, ಪಂಚೆ ಚುಂಗು ತಗುಲಿತು!”
“ಅಯ್ಯೋ ಪ್ರಾರಬ್ಧವೇ… ಮುಟ್ಟಬೇಡ ಹೋಗು”
“ಸಂಸ್ಕಾರ ಆಗೋವರೆಗೂ ಹೆಣ ಮುಂದಿಟ್ಕೊಂಡು ಕಾಫಿ ಕೇಳೋಕಾಗುತ್ಯೇ..”
“ಚಳಿ ಮಳೆಗೆ ಹೆದರಿ ನೀರ್ ಮುಳುಗೋದು ಬಿಡೋಕಾಗುತ್ಯೇ..”
“ಅಪರದಲ್ಲಿ ಮೈಲಿಗೆಯಾದರೆ ನಾವು ಸ್ವರ್ಗಕ್ಕೆ ಹೋಗ್ತೀವಾ ಹೇಳಿ..”
“ನಾವು ಮಾಡುವಷ್ಟು ಶ್ರದ್ಧೆಯಿಂದ ಮಡಿ ಮಾಡುವುದು, ಮಿಕ್ಕದ್ದೆಲ್ಲಾ ನಾರಾಯಣನ ಪಾಲು..”

ಹುಟ್ಟಿನದೋ ಸಾವಿನದೋ ಮನೆಯಾದರೆ ಅದು ಇನ್ನೊಂದು ಅತಿರೇಕ. ಹನ್ನೊಂದನೇ ದಿನದವರೆಗೂ ಬಾಣಂತಿ ಹಾಗೂ ಮಗು ಹೊರ ಪ್ರಪಂಚದ ಗಾಳಿಯನ್ನು ಸೋಕುವುದಿಲ್ಲ. ಹೊರಗಿನವರು ಬಂದು ಮುಟ್ಟಿದರೆ ಎಳೆ ಬಾಣಂತಿ ಮಗುವಿಗೆ ಸೋಂಕು ತಗುಲೀತು ಎಂಬ ವೈಜ್ಞಾನಿಕ ತತ್ವವನ್ನು ಹೊರತುಪಡಿಸಿ ಉಳಿದವೆಲ್ಲ ಅತಿರೇಕದ ಮಡಿಗಳೇ…

ಇವೆಲ್ಲಾ ಸಾಧಾರಣವಾಗಿ ಎಲ್ಲಾ ಸಾವಿನ ಮನೆಗಳಲ್ಲಿ ಕೇಳಿ ಬರುತ್ತಿದ್ದ ಮಾತುಗಳು. ತಮ್ಮ ಕೈಲಾದಷ್ಟು ಮಡಿ ಮಾಡಿ ಮಿಕ್ಕಿದ್ದನ್ನು ದೇವರ ತಲೆಗೆ ಕಟ್ಟಿ ನೆಮ್ಮದಿಯಾಗಿ ತಮ್ಮ ತಮ್ಮ ಮನೆಗಳಿಗೆ ಹೋಗುತ್ತಿದ್ದರು. ಎಲ್ಲಾ ಸಂಸ್ಕಾರಗಳಿಗೂ ಆಚರಣೆಗಳಿಗೂ ಹಗಲು-ರಾತ್ರಿಗಳೆನ್ನದೆ, ಬೆಚ್ಚದೆ ಬೆದರದೆ, ಬೆನ್ನೆಲುಬಾಗಿರುತ್ತಿದ್ದ ಮನೆಯ ಹೆಂಗಳೆಯರ ಬಗೆಗೆ ಹೆಚ್ಚಿನ ಯಾವುದೇ ಪ್ರೀತ್ಯಾದರಗಳನ್ನೂ ಎಂದೂ ಯಾರೂ ತೋರಿಸಿದ್ದು ನಾವಂತೂ ಕಾಣಲಿಲ್ಲ. “ಅಯ್ಯೋ ನಮ್ಮಾಕೆ ಮಾಡ್ತಾಳೆ ಬಿಡಿ ರಾಯರೇ, ಅವಳಿಗಿನ್ನೇನು ಕೆಲಸ..” ಹೀಗೆ, ಮಾಡಿಸುವ ಜೀತದಲ್ಲೂ ದೊಡ್ಡಸ್ತಿಕೆಯೇ ಇಣುಕುತ್ತಿತ್ತು. ಒಟ್ಟಿನಲ್ಲಿ ಹದಿನಾಲ್ಕು ದಿನಗಳವರೆಗೂ ಬೇಯಿಸಿ ಹಾಕುವ ಕಾಯಕ, ಪ್ರತಿಷ್ಠೆಯ ಕುರುಹಾಗಿರುತ್ತಿತ್ತೇ ಹೊರತು ಹೊಟ್ಟೆಯ ಮರುಕವಾಗಿರಲಿಲ್ಲ.

ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಅತಿರೇಕದ ಆಗರವೆಂದರೆ ತಿಂಗಳಿಗೆ ಮೂರು ದಿನ ಮುಟ್ಟಿನ ಮೈಲಿಗೆಯಲ್ಲಿ ಕಳೆಯುತ್ತಿದ್ದ ಹೆಂಗಳೆಯರ ಪಾಡು. ಸ್ರಾವ ಶುರುವಾದದ್ದು ತಿಳಿದಾಕ್ಷಣ ತಟ್ಟನೆ ತಲೆಸ್ನಾನ ಮಾಡಿ ಮುಟ್ಟಿನ ದಿನಗಳಿಗೆಂದೇ ನಿಗದಿಯಾಗಿರುತ್ತಿದ್ದ ಜಾಗದಲ್ಲಿ ಬಂದು ಕೂತರೆ, ಮುಂದಿನ ಮೂರು ದಿನಗಳು ಜಾಗಬಿಟ್ಟು ಕದಲುವ ಹಾಗಿಲ್ಲ. ಓಡಾಟವೇನಿದ್ದರೂ ಹಿತ್ತಿಲ ಬಾಗಿಲ ಮೂಲಕವೇ ಹೊರತು ತಲಬಾಗಿಲನ್ನು ಕಣ್ಣೆತ್ತಿಯೂ ನೋಡುವ ಹಾಗಿರಲಿಲ್ಲ.

ಈ ಮೂರು ದಿನದ ಬಿಡಾರವು ಮುಖ್ಯ ಮನೆಯಿಂದ ಸಾಕಷ್ಟು ಹಿಂದೆ, ಕೆಲವೊಮ್ಮೆ ಕೊಟ್ಟಿಗೆಗಳ ಹತ್ತಿರ ಇರುತ್ತಿತ್ತು. ಬೆಳಗ್ಗೆ ಸಂಜೆ ಮಂತ್ರಗಳ ನಿನಾದವು ಮುಟ್ಟಾದವರ ಕಿವಿಗೆ ಬಿದ್ದರೆ ಮಹಾಪಾಪವೆಂಬ ಕಾರಣದಿಂದ ಮನೆಯೊಳಗೆ ಸಂಧ್ಯಾವಂದನೆಯು ಪಿಸು ನುಡಿಗಳಲ್ಲಿ ನಡೆಯುತ್ತಿತ್ತು. ಒಂದು ಚಾಪೆ ಕಂಬಳಿ ತಟ್ಟೆ ಚೊಂಬು ಇವಿಷ್ಟೇ ಆಸ್ತಿಯಲ್ಲಿ ಮೂರು ಹಗಲು ಮೂರು ರಾತ್ರಿಗಳ ನರಕವನ್ನು ದಾಟಬೇಕಿತ್ತು. ತಟ್ಟೆಗೆ ಒಂದಷ್ಟು ಅನ್ನ ಚೊಂಬಿಗೆ ನಾಲ್ಕು ಹನಿ ನೀರು ಬಿದ್ದುಬಿಟ್ಟರೆ ಇನ್ನೇನೂ ಬಯಸುವ ಹಾಗಿರಲಿಲ್ಲ. ಕೊಟ್ಟ ಹೊದಿಕೆ ಹಾಗೂ ಚಾಪೆ, ಎಷ್ಟೇ ಚಳಿಯಾದರೂ ಅವೇ ಗತಿ. ನಾನಂತೂ ಚಳಿಗಾಲಗಳಲ್ಲಿ ನನ್ನ ಮೆಚ್ಚಿನ ಬ್ಲಾಂಕೆಟ್ ಬೇಕು ಎಂದು ಇನ್ನಿಲ್ಲದ ಹಠ ಮಾಡುತ್ತಿದೆ. ಆ ಮೂರು ದಿನಗಳು ವಿಶ್ರಾಂತಿ ಬೇಕು ಎಂಬುದು ಸಹಜ ಸತ್ಯವಾದರೂ ವಿಶ್ರಾಂತಿಯ ನೆವದಲ್ಲಿ ಹೀಗೆ ಅಸಹಜ ಮೈಲಿಗೆಯ ಆಚರಣೆಗೆ ಬಲಿಪಶುವಾಗುತ್ತಿದ್ದದ್ದು ಸಹ ಮತ್ತೆ ಹೆಣ್ಣೇ…

ನಮಗಿರುವ ಈ ಕಟ್ಟಳೆ ಗಂಡಸರಿಗೆ ಯಾಕೆ ಇಲ್ಲ ಎಂದು ನಾನಂತೂ ಮನೆಯಲ್ಲಿ ದೊಡ್ಡ ರಗಳೆಯನ್ನೇ ಮಾಡುತ್ತಿದ್ದೆ. ಏನಾದರೂ ಕೊಡಬೇಕೆಂದರೆ ಮೇಲಿನಿಂದ ಎತ್ತಿ ಸುರಿಯುವುದು, ಆಕೆಯ ನೆರಳೂ ಸೋಕದಂತೆ ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡುವುದು, ಯಾವುದೇ ವಾತಾವರಣಕ್ಕೂ ಕೇವಲ ಒಂದು ಚಾಪೆಯಲ್ಲಿ ಹಗಲು ರಾತ್ರಿಗಳನ್ನು ಕಳೆಸುವುದು, ವಿಶ್ರಾಂತಿಯಿರಲಿ, ನಾಲ್ಕು ಮಮತೆಯ ಮಾತುಗಳಿಗೆ ಸಹ ಅವಳು ಅರ್ಹಳಲ್ಲ ಎಂಬಂತೆ ಕಡೆಗಣಿಸುವುದು, ವಯಸ್ಸಿನ ಅಂತರವಿಲ್ಲದೆ ಪುಟ್ಟ ಹೆಣ್ಣು ಮಗುವಾದರೂ ಕಠಿಣವಾದ ಮಡಿಯ ಕಟ್ಟಳೆಗಳಿಗೆ ಹೊಂದಿಕೊಳ್ಳುವಂತೆ ಮಾಡುವುದು.. ಇವೆಲ್ಲಾ ಸರ್ವೇಸಾಮಾನ್ಯ. ಕೆಲವೊಂದು ಮನೆಗಳಲ್ಲಂತೂ ಮುಟ್ಟಿನ ಯಮಯಾತನೆಯ ಹೊಟ್ಟೆ ನೋವಿನಿಂದ ಕಮರಿ ಹೋಗಿರುತ್ತಿದ್ದ ಹೆಣ್ಣುಮಕ್ಕಳ ಕೈಲಿ ಒಂದು ಬಂಡಿ ಬಟ್ಟೆ ಒಗೆಸಿ, ಇಡೀ ಮನೆಯ ಪಾತ್ರೆಯನ್ನೆಲ್ಲಾ ತೊಳೆಸಿ ಕಡೆಗೆ ಒಗೆದ ಬಟ್ಟೆಗೂ ತೊಳೆದ ಪಾತ್ರೆಗೂ ತೀರ್ಥದ ನೀರು ಚುಮುಕಿಸಿ, ಅವಳು ಮುಟ್ಟಿದ ಮೈಲಿಗೆ ಮಾಡಿಯಾಯಿತು ಎಂದು ಪರಿಗಣಿಸಿ ಒಳಗೆ ತೆಗೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಅಕ್ಕಂದಿರು ನಮ್ಮೊಂದಿಗೆ “ನೋಡು ನಾನು ಮಾಡುವ ಕೆಲಸ ಬೇಕು, ನಾನು ಬೇಡ. ಮೂರು ದಿನವೂ ಒಂದು ನಿಮಿಷ ಕೂರಲು ಬಿಡದಂತೆ ಕತ್ತೆ ಕೆಲಸ ಮಾಡಿಸುತ್ತಾರೆ. ರಾತ್ರಿ ಹೊತ್ತಿಗೆ ಒಂದು ತುತ್ತು ಉಣ್ಣಲೂ ಉಸಿರು ಉಳಿದಿರುವುದಿಲ್ಲ.” ಎಂದು ಕಣ್ಣೀರು ಸುರಿಸಿದ್ದನ್ನು ಕಣ್ಣಾರೆ ಕಂಡಿದ್ದೇವೆ.

ಇನ್ನು ಶಾಲೆ ಕಾಲೇಜಿಗೆ ಹೋಗುವ ಮಕ್ಕಳ ಪರಿಸ್ಥಿತಿಯಂತೂ ಕರುಣಾಜನಕ. ಅವರಿಗೆ ಎರಡೇ ಮಾರ್ಗ, ಒಂದೋ ಮೂರು ದಿನವೂ ರಜೆ ಹಾಕಿ ಮನೆಯಲ್ಲಿರಬೇಕು, ಇಲ್ಲವೋ ಇವರು ಕೊಟ್ಟ ಬಟ್ಟೆ ತೊಟ್ಟು ಹೇಗೆ ಹೇಳಿದರೆ ಹಾಗೆ ಹೋಗಿ ಬರಬೇಕು. ಬಂದು ಹಿತ್ತಿಲಿನಲ್ಲಿ ತಣ್ಣೀರು ಸುರುವಿಕೊಂಡು ಮುಟ್ಟಿದ ಬಟ್ಟೆಗಳನ್ನೆಲ್ಲಾ ಒಗೆದು ಹಣ್ಣಾಗಿ ಒಳಗೆ ಬರಬೇಕು. ಮೂರು ದಿನಕ್ಕೆ ಬೇರೆಯದೇ ಶಾಲೆಯ ಚೀಲ ಸಿಗುತ್ತಿದ್ದುದರಿಂದ ಅವರು ಕೊಟ್ಟಷ್ಟು ಪುಸ್ತಕ ತೆಗೆದುಕೊಳ್ಳುವಾಗ ಒಂದು ಪುಸ್ತಕ ಸಿಕ್ಕರೆ ಮತ್ತೊಂದು ಸಿಗದು, ಪೆನ್ನು ಪೆನ್ಸಿಲು ದಿಕ್ಕಾಪಾಲು, ಶಾಲೆಯಲ್ಲಿ ಟೀಚರ್ ಹತ್ತಿರ ವಾಚಾಮಗೋಚರ ಬೈಗುಳ. ಯಾಕೆ ಪುಸ್ತಕ ತಂದಿಲ್ಲ ಎಂದರೆ ಎಲ್ಲರೆದುರು ನಮ್ಮಲ್ಲಿ ಉತ್ತರವಿಲ್ಲ. ಮಾತಿಲ್ಲದೆ ನಿಂತರೆ ಕೈಗೆ ಒಂದೊಂದರಂತೆ ಏಟು. ಬಾಕಿ ದಿನಗಳಲ್ಲಿ ಓದಿನಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವ ನಾವು ಆ ದಿನಗಳು ಮಾತ್ರ ದೆವ್ವ ಹಿಡಿದವರಂತೆ ಮಾತು ಕಳೆದುಕೊಂಡು ಕೊಟ್ಟ ಶಿಕ್ಷೆ ಅನುಭವಿಸುತ್ತ ತೆಪ್ಪಗಿರುತ್ತಿದ್ದೆವು.

ಕೇರಿಯ ಒಂದಷ್ಟು ಹೆಣ್ಣು ಮಕ್ಕಳಂತೂ ಈ ಕಷ್ಟ ಪಡಲಾರದೆ ಮೂರು ದಿನ ರಜೆ ಜಡಿದು ಮನೆಯಲ್ಲೇ ಕೂರುತ್ತಿದ್ದರು. ಮೊದಮೊದಲು ಇದೆಲ್ಲಾ ಹೊರಗೆ ಹೇಳಿಕೊಳ್ಳಲು ಭಯವಾಗುತ್ತಿತ್ತು. ಆದರೆ ಕಾಲೇಜಿಗೆ ಬಂದ ಮೇಲೆ ಆಪ್ತವೆನಿಸುವ ಕೆಲವು ಮಹಿಳಾ ಲೆಕ್ಚರರ್‌ಗಳ ಹತ್ತಿರ ಮನಸ್ಸು ಬಿಚ್ಚಿ ಮಾತನಾಡುವ ಅವಕಾಶ ದೊರಕಿತು. ಅಷ್ಟು ಹೊತ್ತಿಗಾಗಲೇ ಮನೆಯ ಪರಿಸರವೂ ಸ್ವಲ್ಪ ಸುಧಾರಿಸಿತು. ಬೇರೆ ಮನೆಗಳಿಂದ ಬಂದ ಸೊಸೆಯಂದಿರು ಮಠದ ಕೇರಿಯ ಕೆಲವು ಕಟ್ಟುಪಾಡಿಗೆ ಒಗ್ಗಿಕೊಳ್ಳಲು ಮುಂದಾಗಲಿಲ್ಲ. ಅವರಿಂದ ಹೊಸತಲೆಮಾರಿನ ಬದಲಾವಣೆಯ ಗಾಳಿ ಬೀಸಿದ್ದನ್ನು ನಾವು ಕಣ್ಣಾರೆ ಕಂಡೆವು. ನಮ್ಮ ಮನೆಗೆ ಸೊಸೆ ಬಂದು ಬದಲಾವಣೆ ತರದಿದ್ದರೂ ಬೆಳೆಯುತ್ತ ಹೋದಂತೆ ನಾನೇ ಹಲವು ಕಟ್ಟುಪಾಡುಗಳನ್ನು ಮುರಿಯುತ್ತ ಬಂದೆ. ಆರೋಗ್ಯಕ್ಕೆ ಸ್ವಚ್ಛತೆಗೆ ಅಗತ್ಯವೆನಿಸಿದಷ್ಟು ಮಡಿಯನ್ನು ಮಾತ್ರ ಉಳಿಸಿಕೊಂಡು ಕೆಲಸಕ್ಕೆ ಬಾರದ ಪ್ರತಿಷ್ಠೆಯ ಮಡಿಗಳನ್ನು ಕೈಬಿಟ್ಟೆ.

ನಾನು ಹೀಗೆ ಬದಲಾದದ್ದು ನನ್ನಮ್ಮನಿಗೆ ಹೇಳತೀರದಷ್ಟು ನೋವು ಕೊಟ್ಟಿತೆಂದು ಗೊತ್ತಿದ್ದರೂ ಅವಳನ್ನು ಹೊಸ ಕಾಲಮಾನಕ್ಕೆ ತಿದ್ದಿಕೊಳ್ಳುವ ಪ್ರಯತ್ನ ಮಾಡಿದ್ದೇನೆಯೇ ಹೊರತು ನಾನು ಆ ಪ್ರತಿಷ್ಠೆಯ ಚಕ್ರಕ್ಕೆ ಸಿಲುಕಲಿಲ್ಲ. ಬದಲಾವಣೆ ತರುವುದು ಅಷ್ಟು ಸುಲಭದ ಮಾತಲ್ಲ. ಮತ್ತು ಈ ಬದಲಾವಣೆಯ ಹಾದಿಯಲ್ಲಿ ಯಾವುದೇ ಜನಾಂಗದಲ್ಲೂ ಹೆಣ್ಣೇ ಅತಿ ಹಿಂದುಳಿದ ತುಳಿತಕ್ಕೊಳಗಾದ ಹಾಗೂ ದುರ್ಬಲ ಪಂಗಡ ಎಂಬುದರ ಸ್ಪಷ್ಟ ಅರಿವಾಗುತ್ತದೆ. ಯಾವ ಹೆಣ್ಣನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿರುತ್ತಾರೋ, ನೀನು ದೇವತೆಯ ಸಮಾನ ಎಂದು ಹೆಜ್ಜೆಹೆಜ್ಜೆಗೂ ಪೂಜಿಸುತ್ತಾರೋ, ನೀನು ಸಹನಾಮೂರ್ತಿ ಭೂಮಿಯಷ್ಟು ತಾಳ್ಮೆಯವಳು ಎಂದು ಎಲ್ಲಿ ಅತೀವ ಅಕ್ಕರೆಯಿಂದ ಹೇಳಿರುತ್ತಾರೋ ಅಲ್ಲಿ ಅವಳು ಅತಿ ಹೆಚ್ಚು ತುಳಿಯಲ್ಪಡುತ್ತಿದ್ದಾಳೆ ಎಂದರ್ಥ.

ಇದು ಸಾಕ್ಷಾತ್ ನಾವು ಚಿಕ್ಕಂದಿನಿಂದ ನೋಡುತ್ತಾ ಬೆಳೆದ ಪರಿಸರ. ಮೈಲಿಗೆ ಮನೆಯಲ್ಲಿ ಇರಬೇಕಾಗಿ ಬರುತ್ತಿದ್ದ ತಿಂಗಳ ಆ ಮೂರು ದಿನಗಳು ನರಕ ಸದೃಶವೆಂಬಂತೆ ಎಳಕಿನಲ್ಲಿಯೇ ಮನಸ್ಸಿನಲ್ಲಿ ಅಚ್ಚೊತ್ತಿವೆ. ಇಡೀ ಕೇರಿಯೇ ಹೀಗಿತ್ತು ಎಂದು ಹೇಳಲಾಗುವುದಿಲ್ಲ. ಆದರೆ ಭಾಗಶಃ ಎಲ್ಲರೂ ಮಡಿವಂತರೇ ಎನ್ನಲು ಅಡ್ಡಿಯಿಲ್ಲ. ಕಾಲ ಕಳೆಯುತ್ತಾ ಕೆಲವು ಕುಟುಂಬಗಳಲ್ಲಿ ಅತಿಯಾದ ಮಡಿಯ ಪರಿಸರವು ಕಳೆದು ಪರಿಸ್ಥಿತಿಯನ್ನು ಇದ್ದಹಾಗೆ ಸ್ವೀಕರಿಸುವ ಶುಭ್ರ ಮನಸ್ಥಿತಿ ಕಂಡುಬಂತು. ಸ್ಯಾನಿಟರಿ ಪ್ಯಾಡ್ ಗಳನ್ನು ತಾವೇ ಕೊಂಡುತರುವ, ‘ಅವಳು ಒಳಗಿರಲಿ ಬಿಡಮ್ಮ, ಅಡುಗೆಮನೆಗೆ ಬರದಿದ್ದರೆ ಸಾಕು’ ಎನ್ನುವ ಗಂಡಸರು ಮಠದ ಕೇರಿಯಲ್ಲಿ ಈಗ ಕಂಡುಬರುವುದು ಕಾಲಕ್ಕೆ ಬಿಟ್ಟ ಸೋಜಿಗ!

ಅದರೊಂದಿಗೆ ಹೆಣ್ಣುಗಳ ಬದುಕು ಕೂಡ ಸ್ವಲ್ಪಮಟ್ಟಿಗೆ ಸಹನೀಯ. ಆದರೂ ಇಂದಿಗೂ ಎಷ್ಟೋ ಕುಟುಂಬಗಳು ಇನ್ನೂ ಬದಲಾಗದೆ 400 ವರುಷಗಳ ಹಿಂದೆ ಇದ್ದಂತೆಯೇ ಇಪ್ಪತ್ತೆರಡನೇ ಶತಮಾನಕ್ಕೂ ಇರುವೆವು ಎಂಬ ಪಣ ತೊಟ್ಟಂತೆ ಬದುಕಿವೆ. ಮಠದ ಕೇರಿಯ ಬಣ್ಣಬಣ್ಣದ ಬದುಕುಗಳಲ್ಲಿ ಮಡಿ-ಮೈಲಿಗೆಯ ಮುಖವೂ ಒಂದು. ಇದಕ್ಕೆ ತದ್ವಿರುದ್ಧವಾದ ಹಲವು ಕಥೆಗಳನ್ನು ಮುಂಬರುವ ದಿನಗಳಲ್ಲಿ ಹೇಳುವೆ.