ಮುಂಜಾವು
ಗಿಳಿಯದರ ಪ್ರಿಯತಮೆಯ ಕರೆಯುವುದು
ಏಳು ರಾಧೇ ಏಳು
ನಿನ್ನ ಹೃದಯದ ನೀಲಮಣಿಗಾತು
ಇನ್ನೆಷ್ಟು ಕಾಲ ನೀನಿಂತು ಮಲಗಬೇಕು?
ಕೇಳು.
ಮುಂಜಾನೆ ಮೂಡಿದೆ
ಸೂರ್ಯನ ಕೆಂಪು ಕಿರಣ ಪುಂಜಗಳು
ನಮ್ಮನ್ನು ಅಂಜಿಸುತ್ತಿವೆ ….
***
ಸರ್ಪವೋಲುವ ಕೊರಳಹಾರ
ಓ ಸುರಸುಂದರಿ ರಮೆ, ಪ್ರಿಯತಮೆಯೆ ಕೇಳು,
ನಿನ್ನ ಕೋಪವ ಶಮನಿಸು.
ನಿನ್ನ ಹೊನ್ನ ಸ್ತನಕಲಶಗಳ ಮೇಲಾಣೆ
ನಿನ್ನ ಸರ್ಪವೋಲುವ ಕೊರಳಹಾರದ ಮೇಲಾಣೆ,
ನನ್ನ ಕೈಯಲ್ಲಿ ಪರಿಗ್ರಹಿಸುವೆನು ಅದನು,
ನಿನ್ನ ಹೊರತು ನಾನೆಂದಾದರೂ
ಯಾರನ್ನಾದರೂ ಮುಟ್ಟಿಟ್ಟಿದ್ದೆನಾದರೆ
ನಿನ್ನ ಸರ್ಪಹಾರವು ನನ್ನ ಕಚ್ಚಲಿ;
ನನ್ನ ಮಾತುಗಳು ನಿಜವಾಗಿರದಿದ್ದರೆ,
ನಾನು ಅರ್ಹನಿರುವಂತೆಯೇ ಶಿಕ್ಷಿಸೆನ್ನನು.
ನಿನ್ನ ತೋಳುಗಳಿಂಣದೆನ್ನ ಬಂಧಿಸು,
ನಿನ್ನ ತೊಡೆಯಿಂದ ನನ್ನ ಹಿಂಸಿಸು,
ನಿಮ್ಮ ಹಾಲ್ದುಂಬಿದ ಸ್ತನಗಳಿಂದ
ನನ್ನ ಹೃದಯವನು ಉಸಿರುಗಟ್ಟಿಸು,
ನಿನ್ನ ಹೃದಯದ ಸೆರೆಮನೆಯಲ್ಲಿ
ನನ್ನನ್ನು ಹಗಲಿರುಳು ಬಂಧಿಸು.
***
ನದಿ ಮತ್ತು ಆಕಾಶ
ಓ ಸಖೀ, ನಾನು ನಿನಗೆ ಹೇಳಲಾರೆ
ಅವನು ಸನಿಹವಿರಲಿ ಅಥವಾ ದೂರದಲ್ಲಿ,
ನಿಜವಾಗಲಿ ಅಥವಾ ಕನಸು.
ಮಿಂಚಿನ ಬಳ್ಳಿಯಂತೆ,
ನಾನು ಶ್ಯಾಮನನ್ನು ಬಂಧಿಸಿದಂತೆ,
ನನ್ನ ಹೃದಯ ಪ್ರವಾಹವೇರಿದ ನದಿಯಂತೆ
ಹೊಳೆಯುವ ಚಂದ್ರನಂತೆ,
ನಾನು ಆ ಕರಗುವ ಮುಖವನ್ನು ಮುಕ್ಕಿತಿನ್ನುತ್ತಿದ್ದೆ.
ನನ್ನ ಸುತ್ತಲೂ ನಕ್ಷತ್ರಗಳು ಉದುರುತ್ತಿವೆ ಎಂಬ ಭಾವ.
ನನ್ನ ಉಡುಪಿನೊಂದಿಗೆ ಆಕಾಶವುರುಳಿತ್ತು,
ನನ್ನ ಹಿಂಡಿ ಹಿಪ್ಪೆಯಾದ ಸ್ತನಗಳನು ತೊರೆದು.
ನಾನು ಭೂಮಿಯಂತೆ ಜೋಕಾಲಿಯಾಡುತ್ತಿದ್ದೆ.
ನನ್ನ ಬಿರುಗಾಳಿಯ ಹೋಲುವ ಉಸಿರಿನಲ್ಲಿ
ಮಧುಕರರ ಗುಂಜಾರವದಂತೆ ಧ್ವನಿಸುತ್ತ.
ನನ್ನ ಪಾದದ ಕಿರುಗೆಜ್ಜೆ ದನಿಯೆನಗೆ ಕೇಳಿಬರುತ್ತಲಿತ್ತು,
ಮಹಾಪ್ರಳಯದ ಜಲರಾಶಿಯಲ್ಲಿ ಮುಳುಗಿದ
ನನಗೆ ಇದು ಅಂತ್ಯವಲ್ಲ ಎಂದು ತಿಳಿದಿತ್ತು.
ವಿದ್ಯಾಪತಿ ಹೇಳುತ್ತಾನೆ:
ಅಂತಹ ಅಸಂಬದ್ಧತೆಯನ್ನು
ನಾ ಹೇಗೆ ನಂಬಬಲ್ಲೆ
ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.
ಅನುವಾದ ಸೊಗಸಾಗಿದೆ. ಕವಿತೆಗಳು ಸುಂದರ ಮತ್ತು ರೊಮ್ಯಾಂಟಿಕ್ ಆಗಿವೆ.ಅನುವಾದಕ ವಿಜಯರಾಘವನ್ ಇವರಿಗೆ ಅಭಿನಂದನೆಗಳು
ವಿದ್ಯಾಪತಿಯ ಕವಿತೆಯ ಸೊಗಸು ಕನ್ನಡಕ್ಕೂ ಬಂದಿದೆ. ಮೈಥಿಲಿ ಧನ್ಯವಾಯಿತು, ಕನ್ನಡಕ್ಕೂ ಕಳೆಯೇರಿತು.
ಮೂಲ ಕನ್ನಡ ಕವಿತೆಯಂತೆ ಸುಂದರ, ಭಾವನಾತ್ಮಕವಾಗಿದೆ. ಸ್ನೇಹರಸ, ಬಾಂಧವ್ಯದ ಮಾಧುರ್ಯ ಮೇಳೈಸಿದ ಕವಿತೆ. ಉತ್ತಮ ಅನುವಾದ ರಾಘವನ್.