ಇನ್ನೇನೂ ಭುವಿ ಸಿಡಿದುಬಿಡಬಹುದೆನ್ನುವಷ್ಟು ಬಿಸಿಲು ಸುಡುತಿತ್ತು. ಒಳಗೊಳಗೆ ಒಂದೇ ಸವನೆ ಉರಿಯುತ್ತಿದ್ದರೂ ಕಣ್ಣು, ತಣ್ಣನೆಯ ನೋಟವನ್ನು ಮೈದಾನಕ್ಕೆ ಚೆಲ್ಲಿ ನೆಹರೂ ಮೈದಾನದಂಚಿನ ಸಿಮೆಂಟ್ ಕಟ್ಟೆಯಲ್ಲಿ ಕುಳಿತುಕೊಂಡೆ. ಬದಿಯಲ್ಲಿ ಕೊಡೆಯೆತ್ತಿ ನಿಂತಂತೆ ಕಾಣುವ ಮರದ ಕೆಳಗೆ ಹಲವಾರು ಮಂದಿ ಯರಿಗೂ ಯಾರೆಂದು ಗೊತ್ತಿರದವರು ಉರಿಯುವ ಹಗಲಲ್ಲಿ ಆರಾಮವಾಗಿ ಇಹಗಳ ಚಿಂತೆಯನ್ನು ಬಿಟ್ಟು ನಿದ್ದೆ ಹೋಗಿದ್ದರು. ನಾನು ಅವರ ನಡುವೆ ಒಬ್ಬನಾಗಿ ಕುಳಿತೆ. ನಾನು ಇಲ್ಲಿಯೇ ಕುಳಿತು ಕಳೆದು ಹೋಗುವುದು ಮೊದಲಲ್ಲ. ಲೆಕ್ಕವಿರದಷ್ಟು ಸಲ ಹೀಗೆ ಕುಳಿತು, ಮೈದಾನದ ಮೇಲಿನಿಂದ ತೇಲಿಬರುವ ಗಾಳಿಗೆ ಮನವನ್ನು ಹಾಯಲು ಬಿಟ್ಟು ಬಹಳಷ್ಟು ಸಲ ಕುಳಿತು ಅರೆಗಣ್ಣಾಗಿದ್ದೇನೆ. ಈ ದಿನ ನನಗೊದಗಿ ಬಂದ ಪರಿಸ್ಥಿತಿಗೆ ನನಗೆ ನಾನೇ ಮರುಕಗೊಳ್ಳುತ್ತಾ, ಅನ್ಯಾಯಕ್ಕೆ ಉರಿದು ಕುಳಿತಲ್ಲೇ ಕರಗಿಹೊಗತೊಡಗಿದೆ.
ಒಂದರ ಹಿಂದೆ ಒಂದಾಗಿ ಬಸ್ಸುಗಳು ಬೆನ್ನೆತ್ತಿಕೊಂಡು ಹೋಗುತ್ತಿದ್ದರೆ, ಯಾರೋ ಯಾರನ್ನೋ ಭೇಟಿಯಾಗಲೆಂದು ಹೋಗುತ್ತಿದ್ದರು. ಸದ್ದುಗಳ ಮೆರವಣಿಗೆಯಲ್ಲಿ ನಿಶ್ಯಬ್ದದ ಆತ್ಯಾಚಾರ ನಡೆದಿತ್ತು. ಈ ಸದ್ದುಗಳ ನಡುವೆ ಈ ನಗರ ಕೆಲವೊಮ್ಮೆ ವಿಷಾದದ ಧ್ವನಿಯಾಗಿಯೂ, ಮತ್ತೊಮ್ಮೆ ವಿಸ್ಮಯವಾಗಿಯೂ ನನ್ನ ಮನಸಿನಲ್ಲಿ ಕಾಣಿಸುತ್ತಾ ನನ್ನಲ್ಲಿ ಭ್ರಮೆಗಳನ್ನು ಪೋಷಿಸಿ, ಕಾಲ ಉರುಳು ಹಾಕುವುದರಲ್ಲೆ ಎಲ್ಲವನ್ನು ಕಳಚಿ ಹಾಕಿ ಇಲ್ಲೇನೂ ಇಲ್ಲವೆಂಬತೆ ಅಣಕಿಸುವ ನಗರ ಕೂಡಾ ಇದು ಹೌದು. ಈ ಅವಿಶ್ರಾಂತ ನಗರ ನನಗೆ ಬದುಕಿಗೆ ಬೇಕಾದ ಕೆಟ್ಟ ಧೈರ್ಯವನ್ನು, ಉಡಾಫೆಯನ್ನು ಕಲಿಸಿಕೊಟ್ಟಿದೆ. ಇವೇ ನನ್ನನ್ನು ಕೆಲವೊಮ್ಮೆ ರಕ್ಷಿಸಿದ್ದು ಸುಳ್ಳಲ್ಲ.
ನೋಟವನ್ನು ಮುಂದೆಸೆದು ನೋಡಿದೆ. ಕೆಲವೊಂದು ಮಕ್ಕಳು ಈ ಬಿರು ಬಿಸಿಲಿನಲ್ಲೂ ಕೈ ಕಾಲಿಗೆ ಪ್ಯಾಡ್-ಗ್ಲೌಸ್ ಕಟ್ಟಿಕೊಂಡು ಚೆಂಡನ್ನು ತಟ್ಟಿಮುಟ್ಟಿ ನೋಡುತ್ತಿದ್ದರು. ಮೂರು ಜನ ಸತತವಾಗಿ ಎಸೆಯುತ್ತಿದ್ದ ಚೆಂಡನ್ನು ಬ್ಯಾಟಿನಿಂದ ಅಲ್ಲಿಂದ ಅಲ್ಲಿಗೆ ಅಟ್ಟಿ, ಹೀಗೆ ಆಡಬಹುದಿತ್ತು ಎನ್ನುವ ಹಾವಭಾವವನ್ನು ಮತ್ತೊಮ್ಮೆ ತೋರಿಸುತ್ತಿದುದನ್ನು ನೋಡಿ ಇದೊಂದು ಆಟವೇ ಎಂದನಿಸಿತು. ಯಾವಾಗಲೋ ನಡೆಯಬಹುದಾದ ಆಟಕ್ಕೆ ಬೇಕಾದ ತಯಾರಿ. ಸೋಲುವವರಿಲ್ಲ; ಗೆಲ್ಲುವವರಿಲ್ಲ ; ರೋಚಕತೆಯಂತೂ ಮೊದಲೇ ಇಲ್ಲ. ಎಲ್ಲವು ಯಾಂತ್ರಿಕ. ಎಂದೋ ಸಿಗಬಹುದಾದ ಖುಶಿಗಾಗಿ ಕ್ಷಣದ ಖುಶಿಗಳನ್ನು ಮರೆತೆಬಿಡುವ ಜನ ಒಬ್ಬರನ್ನೊಬ್ಬರು ವಂಚಿಸಲು ಅಥವಾ ಸೋಲಿಸಲು ಯತ್ನಿಸುತ್ತಿರುವಂತೆ ಕಾಣುತ್ತಿದ್ದವರು ಓಟಕ್ಕೆ ನಿಂತಿರುವಂತೆ ಕಾಣಿಸಿದರು ನನಗೆ. ಓಟಕ್ಕೂ ಇಲ್ಲದ ಆಟಕ್ಕೂ ಇಲ್ಲದ ಜನ ಮೈದಾನದಂಚಿನ ಜಗಲಿಯಲ್ಲಿ ಈ ಲೋಕದ ಯಾವ ವ್ಯವಹಾರಕ್ಕೆ ನಾವಿಲ್ಲವೆಂದು ಮಲಗಿದ್ದರು.
ಅವರನ್ನು ನೋಡುತ್ತಾ, ನನ್ನ ಬಾಲ್ಯದ ದಿನದ ನೆನಪಿನೊಳಗೆ, ಪಡುವಣದ ಹಿತವಾದ ಗಾಳಿಯೊಂದಿಗೆ ನುಗ್ಗಿಕೊಂಡೆ. ಆ ದಿನಗಳ ಪ್ರತಿ ಕ್ಷಣಗಳು ರೋಚಕವಾದ ದಿನಗಳು. ಪ್ರತಿ ಹೆಜ್ಜೆಗು ವಿಸ್ಮಯ ಹುಟ್ಟಿಸುವ ಅನುಭವಗಳು. ನಗರ ಜೀವನ ನನ್ನ ಮಡಿಲಿಗೆ ಸೇರಿಸಿದಕ್ಕಿಂತ ಹೆಚ್ಚಿನದನ್ನು ಆ ಪಶ್ಚಿಮ ಘಟ್ಟದಲ್ಲಿನ ಕಲೆದ ಬಾಲ್ಯ ನನಗಿತ್ತಿದೆ. ಅದು ಬದುಕನ್ನು ಅನುಭವಿಸಿದನ್ನು ಕಲಿಸಿಕೊಟ್ಟಿದೆ. ಬೆಳಗ್ಗಿನಿಂದ ಸಂಜೆಯವರೆಗೆ ಲೆಕ್ಕವಿರದಷ್ಟು ಆಟಗಳು ನಮ್ಮಲ್ಲಿ ಇರುತ್ತಿದವು. ನಮ್ಮಲ್ಲಿ ಇರುತ್ತಿದ್ದ ಉತ್ಸಾಹ ಈ ಹುಡುಗರಲ್ಲಿ ಕಾಣಸಿಗುವುದು ಕಷ್ಟವೆನಿಸಿತು.
ಈ ನೆಹರೂ ಮೈದಾನ ನನಗೆ ಹೊಸತೇನೂ ಅಲ್ಲ. ಹಿಂದೆಲ್ಲ ಹಸಿವಿನಿಂದ ಕೂಡಿದ ದಿನದಲ್ಲಿ, ಕೆಲಸವಿರದ ದಿನದಲ್ಲಿ ನೀರು ಕುಡಿದು ಹೊಟ್ಟೆಯಲ್ಲಿ, ಹಸಿವನ್ನು ಈ ಮೈದಾನದಲ್ಲೆ ತುಳಿದು ಹಾಕಿ ವಿರಮಿಸುತ್ತಿದ್ದೆ. ಆಗ ನಿದ್ರಿಸುತ್ತಿದ್ದ ಸಿಮೆಂಟ್ ಕಟ್ಟೆ ಈಗ ಒಡೆದು ಹೋಗಿ ರಸ್ತೆ ಅಗಲೀಕರಣಕ್ಕೆ ದಾರಿ ಮಾಡಿಕೊಟ್ಟಿದೆ. ನಾ ಕಂಡ ಹತ್ತು ವರುಷದಲ್ಲಿ, ದಣಿದಾಗ ವಿರಮಿಸಿದ ಮಂಗಳೂರಿನ ಹಲವು ಮರಗಳು ಹೇಳ ಹೆಸರಿಲ್ಲದಂತೆ ಇಲ್ಲವಾಗಿ ಹೋಗಿವೆ. ಕೆಲವೊಮ್ಮೆ ನನಗೆ ನಾನೇ ಅಚ್ಚರಿಗೊಳ್ಳುತ್ತೇನೆ- ನನ್ನ ಬದುಕು ಎಲ್ಲಿಂದಲೋ ಶುರುವಾಗಿ ಎಲ್ಲೆಲ್ಲಿಗೋ ಹರಡಿ ನಿಂತ ಪರಿ ನೋಡಿ. ಸಂಬಂಧವೇ ಇಲ್ಲದ ಊರು, ಗಲ್ಲಿ, ಮರಗಳೊಡನೆ ನನ್ನ ಬದುಕಿನ ಪಲಕುಗಳು ಹಂಚಿಹೋಗಿರುವುದು ನೋಡಿದರೆ ನೆಲದ ಋಣಾನುಬಂದ ಅಂದರೆ ಇದೆಯೆನ್ನುವಂತೆ ಭಾಸವಾಗುತ್ತೆ.
ದಿನಗಳು ಕಳೆದು ಹೋಗಿವೆ. ನನ್ನ ಬದುಕಿನ ದಿನಚರಿಗಳು ಬದಲಾಗಿವೆ. ಹೊಸತಾದ ದೃಷ್ಟಿಕೋನ ಬದುಕಿನ ಬಗ್ಗೆ ಮೂಡಿದೆ. ಆದರೆ, ನೆಹರೂ ಮೈದಾನಕ್ಕೆ ಬಂದು ಐದು ನಿಮಿಷವಾದರೂ ಕೂರುವುದು ನಾನು ಮರೆತಿಲ್ಲ. ಹಿಂದೆ ಇಲ್ಲಿಗೆ ಬರುತ್ತಿದ್ದ ನೆಪಗಳು ಬೇರೆ ಈಗ ಬರುತ್ತಿರುವ ನೆಪವೇ ಬೇರೆ. ಒಟ್ಟಾರೆ ನನ್ನ ಜೀವನದ ಏಳು- ಬೀಳು ಈ ಮುಖೇನ ನೋಡುತ್ತಿದ್ದೇನೆ.
ನನ್ನ ಹದಿನೈದನೇ ಅಥವಾ ಹದಿನಾರನೇ ವರುಷದಲ್ಲಿರಬಹುದು. ಸರಿಯಾಗಿ ಕೈಗೆ ಸಿಗದ ಕೆಲಸ, ಸಾಯಿಸುವ ಹಸಿವಿನ ನೋವು ತುಂಬಿದ ದಿನ ಎಲ್ಲಿಗೆ ಹೋಗಬೇಕೆಂದು ತಿಳಿಯದೆ, ಎಲ್ಲಾದರೊಂದೆಡೆ, ನೀರು ಕುಡಿದು ನಡೆದು ಹೋಗುತ್ತಿದ್ದೆ. ಆ ಪಯಣ ಎಲ್ಲಿಗೆಂದೂ ನನಗೂ ಗೊತ್ತಿರುತ್ತಿರಲಿಲ್ಲ. ಸ್ಟೇಟ್ ಬ್ಯಾಂಕಿನಿಂದ ಜ್ಯೋತಿಗೆ ಅಥವಾ ಅದರಿಂದಾಚೆಗೆ, ಮನಸ್ಸು ಎಳೆದೆಡೆಗೆ ನಡೆಯುತ್ತಿದ್ದೆ. ಆಗ ಹಸಿದ ಹೊಟ್ಟೆಯ ಈ ಜೀವ ಆಲೋಶಿಯಸ್ ಕಾಲೇಜಿನಿಂದ ಹಂಪನಕಟ್ಟೆಯ ಕಡೆ ನಡೆದುಬರುವ ಯೌವ್ವನ ತುಂಬಿದ ಜವ್ವನೆಯರ ತುಂಬಿದ ಸ್ತನಗಳನ್ನು ನೋಡುತ್ತಾ, ಪಕ್ಕಾ ಠಪೋರಿಯಂತೆ ಮನಸ್ಸನ್ನು ಉದ್ದೀಪಿಸಿಗೊಳ್ಳುತ್ತಾ ನಡೆಯುತ್ತಿತ್ತು. ಆದರೆ, ಅದೇ ಕಾಲೇಜಿನ ರಾತ್ರಿ ತರಗತಿಯ ವಿದ್ಯಾರ್ಥಿಯಗುತ್ತೇನೆಂದು ಕನಸಿರಲಿಲ್ಲ.
ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡಂತೆ ಆಲೋಚನೆಗಳು ಸಿಕ್ಕಿಕೊಂಡವು. ಯಾವುದಕ್ಕೆ ದಾರಿ ಕೊಡಲಿ ನನಗೆ ಗೊಂದಲವಾಯಿತು. ಉರಿ ಬಿಸಿಲಿದ್ದರೂ ತಣ್ಣಗಿನ ಗಾಳಿ ಬಿಸುತ್ತಿತ್ತು. ಉತ್ತರ ಕನ್ನಡದವನೊಬ್ಬ ನಶೆಗೊಂಡ ಕೆಂಪು ಕಣ್ಣುಗಳನ್ನು ತದೇಕ ಚಿತ್ತವಾಗಿ ಮೋಟು ಬೀಡಿಯಲ್ಲಿಡುತ್ತಾ, ಮುಗಿದಿದ್ದರೂ ಹೊಗೆಯೊಂದನ್ನು ಹುಟ್ಟಿಸುವ ಸಾಹಸಕ್ಕೆ ಇಳಿದಿದ್ದ. ಎಲ್ಲರದ್ದೂ ಒಂದಲ್ಲ ಒಂದು ಸಾಹಸವೇ ಬದುಕಿನಲ್ಲಿ ಇಲ್ಲದಿದ್ದರೆ ನಾನು ಇಲ್ಲಿ ಬಂದು ನಿಲ್ಲುತ್ತಿರಲಿಲ್ಲ ಅನಿಸಿತು.
ಬಿಸಿಲಿನ ಜಳಕ್ಕೆ ಆವಿಯಾಗಿ ಮೇಲೆರುತ್ತಿದ್ದ ಭುವಿಯ ತೇವಾಂಶದ ತೆರೆಯೊಂದು ಕಣ್ಣಿಗೆ ಕಾಣುತ್ತಿತ್ತು. ಕೊನೆಗೊಂದು ದಿನ ಮನುಷ್ಯನ ಆತ್ಮ ಕೂಡಾ ಹೀಗೆ ಮಾಯವಾಗುವುದು ಏನೇನೂ ಉಳಿಸಿಕೊಳ್ಳದೆ- ಇದು ಬದುಕಿನ ನಶ್ವರತೆಯ ಬಗ್ಗೆ ನನಗೆ ತೋರಿಸುತ್ತಿತ್ತೆ?!
ಬೀದಿಯಿಂದ ಹಾದಿಗೆ ಬಂದರೂ ಮತ್ತೆ ನನ್ನನ್ನು ಬೀದಿಗೆ ಅಥವಾ ತ್ರಿಶಂಕು ಪರಿಸ್ಥಿತಿಗೆ ತಳ್ಳಬಹುದಾದ ಭವಿಷ್ಯದ ದಿನಗಳ ಬಗ್ಗೆ ಯೋಚನೆಗಳು ಹುಟ್ಟಿಕೊಂಡವು. ಮತ್ತೊಂದು ದೃಷ್ಟಿಯಲ್ಲಿ ನೋಡಿದರೆ ಹಣ್ಣೊಂದರಿಂದ ಕಳಚಿ ಬಿದ್ದ ಬೀಜದಂತೆ ಕಾಣತೊಡಗಿದ ಈ ದಿನಗಳಲ್ಲಿ ಯಾವ ಕಡೆ ನಡೆಯಲಿಯೆಂಬ ದ್ವಂದ್ವವೊಂದು ಮನದ ತುಂಬಾ ಓಡಾಡುತ್ತಿತ್ತು.
ಇದು ಸ್ವಂತವಾಗಿ ಯೋಚಿಸುವುದನ್ನು ಕಿತ್ತುಕೊಂಡ ದಿನಗಳು. ಮಾನಸಿಕವಾಗಿ ಜರ್ಜರಿತಗೊಳಿಸಿದ ದಿನಗಳು, ಇನ್ನೂ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ತಲುಪಿಸಿದ ದಿನಗಳು. ಇದೆಲ್ಲಾ ಯಾಕಾಗಿ ನಡೆಯಿತು ನನಗೂ ಅರ್ಥವಾಗಿಲ್ಲ. ಹೌದು. ಪರಿಸ್ಥಿತಿ ಅರ್ಥವಾಗದ ಸ್ಥಿತಿಯಲ್ಲೇ ನಾನು ಪ್ರತಿಸಲ ನೆಹರೂ ಮೈದಾನದ ಮಡಿಲಿಗೆ ಬಂದು ಬೀಳುವುದು. ಅಲ್ಲಿ ದಾರಿ ಕಂಡುಕೊಳ್ಳುವುದು. ನನ್ನ ಬದುಕಿನ ಮಹತ್ತರವಾದ ನಿರ್ಧಾರವನ್ನು ನಾನು ಒಂಟಿಯಾಗಿಯೇ ಈ ಮೈದಾನದಲ್ಲಿ ತೆರೆದುಕೊಂಡಿದ್ದೇನೆ. ಈ ದಿನ ಕೂಡ.
“ಹಣವಿಲ್ಲದಿದ್ದರೆ ಕೋರ್ಸ್ ಬಿಟ್ಟು ಹೋಗು, ಇಲ್ಲಿಗೆ ಯಾಕೆ ಸೇರಿದ್ದು” ಎಂದು ಶೈಕ್ಷಣಿಕ ಸಾಲಕ್ಕಾಗಿ ಒದ್ದಾಡುತ್ತಿದ್ದ ದಿನಗಳಲ್ಲಿ ವಿಭಾಗ ಮುಖ್ಯಸ್ಥನ ಬಾಯಿಯಿಂದ ಈ ಮಾತು ಕೇಳಿಬಂದ ಮಾತು ಉನ್ನತ ಶಿಕ್ಷಣವೆನ್ನುವುದು ಹಣವಂತರಿಗೆ ಮಾತ್ರವೆಂಬ ನನ್ನ ಭಾವನೆ ಬಲಗೊಂಡಿತು. ಬ್ಯಾಂಕಿನಿಂದ ಸಾಲ ಪಡೆಯಲು ನೀಡಬೇಕಾಗಿದ್ದ ಪತ್ರವನ್ನು ನಿರಾಕರಿಸಿದನ್ನು ಪ್ರಶ್ನಿಸಿದ್ದು ನನ್ನ ಎರಡು ವರ್ಷದ ಶಿಕ್ಷಣದ ಅವಧಿಯಲ್ಲಿ ಅವರಿಗೆ ನನ್ನನ್ನು ಕಾಡಿಸಲು ಕಾರಣವಾಯಿತು. ಕೊನೆಗೆ ಪ್ರತಿಭಾವಂತನೆಂದು ಗುರುತಿಸಲ್ಪಟ್ಟರೂ ಕೊನೆಯಲ್ಲಿ ಫೇಲ್ ಮಾಡಲೇ ಬೇಕೆಂದು ನಿಂತ ಉಪನ್ಯಾಸಕರ ಎದುರು ಬದುಕು ದುಸ್ತರಗೊಂಡಿದೆ. ಅಹಂ, ದರ್ಪಗಳು ನನ್ನ ಸಾಹಸದ ಬದುಕಿಗೆ ತೆರೆಯೆಳೆದಿದೆ. ರಕ್ಕಸನಂತೆ ಬೆಳೆದು ನಿಂತ ಸಂಸ್ಥೆಯೊಳಗೆ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಸಂಸ್ಥೆಗೆ ಸಂಸ್ಥೆ ಮುಖ್ಯವಾಗಿ ವ್ಯಕ್ತಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಂಡಿದ್ದಾನೆ. ನಾನೇನು ಪಾಕಿಸ್ತಾನದಲ್ಲಿರುವೆನೋ? ಅಥವಾ ಅಫ್ಘಾನಿಸ್ತಾದಲ್ಲಿರುವೆನೋ?
ಹೌದು. ನಾನು ನೋಡುತ್ತಿದ್ದೇನೆ, ಈ ನಗರದ ಜನರು ಕ್ರೂರವಾದ ಮನಸ್ಸೊಂದನ್ನು ಹೊಂದುತ್ತಿದ್ದಾರೆ. ಹತ್ತು ವರುಷದಲ್ಲಿ ಜನರ ಮನಸ್ಥಿತಿ ಬದಲಾಗುತ್ತಿದೆ. ಒಬ್ಬರನ್ನು ಒಬ್ಬರು ಮೆಟ್ಟಿ ನಿಲ್ಲಲು ತೊಡಗಿದ್ದಾರೆ. ಕೆಲವರು ಮೂಲೆಯನ್ನೆ ಬದುಕು ಎನ್ನುತ್ತಿದ್ದಾರೆ. ನನ್ನ ಕಣ್ಣಿನ ಮುಂದೆ ವಿಶಾಲವಾಗಿ ತೆರೆದುಕೊಂಡ ಬಯಲಿದೆ ಮನಸನ್ನು ಹರಡಿಕೊಳ್ಳುವೆ ಅದರ ಹಾಗೆ. ಇಷ್ಟಕ್ಕೂ ಬದುಕೆಂದರೆ ಒಂಟಿ ದಾರಿಯ ಪಯಣವಲ್ಲವಲ್ಲ.
ಕವಿ, ಕಥೆಗಾರ, ಸಿನೆಮಾಗಳಿಗೂ ಚಿತ್ರ ಕಥೆಗಾರ.
ಮೂಲತಃ ಉಡುಪಿಯವರು.