ಟಿವಿ ಹಚ್ಚಿದರೆ ಯಾವ ಚಾನೆಲ್ ತಿರುಗಿಸಿದರೂ ಮೈಕಲ್ ಜಾಕ್ಸನ್ ನದೇ ಸುದ್ದಿ. ಅವನ ಜೀವನ ವಿಶ್ಲೇಷಣೆ, ಮರಣ ಕಾರಣ ಊಹಾಪೋಹ. ನ್ಯುಯಾರ್ಕ್, ಲಾಸ್ ಏಂಜಲೀಸ್ ಇನ್ನಿತರ ನಗರಗಳ ಬೀದಿಗಳಲ್ಲಿ, ಜನ ಮತ್ತೊಮ್ಮೆ ಅವನ ಹಾಡುಗಳಿಗೆ ಹುಚ್ಚೆದ್ದು ಕುಣಿಯುತ್ತಿದ್ದಾರೆ. ‘I want to be immortal through my music’ ಎಂದ ‘ಕಿಂಗ್ ಆಫ್ ಪಾಪ್’ ನಿಗೆ ತಕ್ಕ ಅಂತಿಮ ನಮನ. ಅವನ ಮೋಡಿಗೊಳಿಸುವ ಹಾಡುಗಳ ಗುಂಗಿಗೆ ನಾನೂ ಹೆಜ್ಜೆ ಹಾಕುತ್ತಿದ್ದಾಗ ಬಂತು ಮಗಳ ಮುಗ್ಧ ಪ್ರಶ್ನೆ, “ಅಮ್ಮ, ಹೂ ಇಸ್ ದಿಸ್ ಮೈಕಲ್ ಜಾಕ್ಸನ್?” ಹೌದಲ್ಲ, ಯಾರಿವನು, ಈ ಮೈಕಲ್ ಜಾಕ್ಸನ್? ಪಾಪ್ ಸಂಗೀತ ಕಂಡ ಶ್ರೇಷ್ಠ ಕಲಾವಿದನೇ? ನೃತ್ಯ ಮಾಂತ್ರಿಕನೇ?ವಿಕ್ಷಿಪ್ತ ಸೆಲೆಬ್ರಿಟಿಯೆ? ವಿಕೃತ ಮನಸ್ಸಿನ ಮಾನಸಿಕ ರೋಗಿಯೇ? ಅಥವಾ, ಅಪ್ಪನ ಬಾರುಕೊಲಿನ ಬರೆಯ ನೋವಿಂದ ಜೀವನವಿಡೀ ನರಳಿ ಕೊನೆಗೂ ಹೊರಬರಲಾರದೆ ಹುದುಗಿ ಹೋದ ಹತ್ತು ವರ್ಷದ ಹುಡುಗನೇ? ಅವನ ಅಕಾಲ ಮರಣ ಎಬ್ಬಿಸುವ ಪ್ರಶ್ನೆ, ನೆನಪು ಹಲವಾರು.
ಮೈಕಲ್ ಜಾಕ್ಸನ್ ಹೆಸರೇ ಅವನ ಅಸಾಮಾನ್ಯ ನೃತ್ಯ ಸಾಮರ್ಥ್ಯಕ್ಕೆ ಅನ್ವರ್ಥಕ. ಪಾಪ್ ಸಂಗೀತದಲ್ಲಿ ಅಬ್ಬರವನ್ನೇ ಎಬ್ಬಿಸಿದ ಅದ್ಭುತ ಹಾಡುಗಾರ. ಅದಕ್ಕಿಂತಲೂ ಹೆಚ್ಚಾಗಿ ಜಗತ್ತನ್ನೇ ಹುಚ್ಚೆಬ್ಬಿಸಿದ ನೃತ್ಯ ಪ್ರಾಕರವನ್ನೇ ಹುಟ್ಟುಹಾಕಿದ ಶ್ರೇಷ್ಠ ಕಲೆಗಾರ, amazing performer. ಹನ್ನೊಂದು ವರ್ಷದ ಪುಟ್ಟ ಕರಿಯ ಹುಡುಗನೊಬ್ಬ ತನ್ನ ಅಣ್ಣಂದಿರ ಜತೆಯಲ್ಲಿ ಹಾಡಲು ಶುರು ಮಾಡಿ “ಕಿಂಗ್ ಆಫ್ ಪಾಪ್” ಆಗಿದ್ದು ಒಂದು ದಂತ ಕತೆಯಾದರೆ, ಅವನ ಜೀವನ ತಿರುಗಿದ ಪ್ರತಿಯೊಂದು ತಿರುವೂ ವಿಚಿತ್ರ ಹಾವು ಏಣಿಯಾಟ. ಅವನ ಸುತ್ತ ಸುತ್ತುತ್ತಿದ್ದ , ಕೊನೆಗೆ ಅವನನ್ನೇ ಸುತ್ತಿ ನುಂಗಿದ ಕತೆಗಳಲ್ಲಿ ಸತ್ಯವೆಷ್ಟೋ, ಸುಳ್ಳೆಷ್ಟೋ ಈಗ ಅವನೊಂದಿಗೆ ಮಣ್ಣು.
ನಾನು ಆಗಿನ್ನೂ ಚಿಕ್ಕ ಹುಡುಗಿ, ಹದಿಹರೆಯಕ್ಕೆ ಕಾಲಿಡುವ ವಯಸ್ಸು, ಮೈಕಲ್ ಜಾಕ್ಸನ್ ನ ” ಡೇಂಜರಸ್ ” ಅಲ್ಬಂ ರಿಲೀಸ್ ಆದ ಕಾಲ. ಜಗತ್ತಿನಾದ್ಯಂತ ಈಗಾಗಲೇ ಅವನ “ಥ್ರಿಲ್ಲರ್” ಹಾಗೂ “ಬ್ಯಾಡ್” ಅಲ್ಬಂ ಗಳು ದಾಖಲೆಯನ್ನೇ ಸೃಷ್ಟಿಸಿದ್ದವು. ನಮ್ಮ ಪುಟ್ಟ ಊರಿನಲ್ಲಿ ಆಗ ಇದ್ದ ಒಂದೇ ಒಂದು ಕ್ಯಾಸೆಟ್ ಅಂಗಡಿಯಲ್ಲಿ ಕೂಡ ಸಿಗುತ್ತಿದ್ದ ಇಂಗ್ಲಿಷ್ ಹಾಡಿನ ಕ್ಯಾಸೆಟ್ ಗಳೆಂದರೆ ಮೈಕಲ್ ಜ್ಯಾಕ್ಸನನವು. ಅವನ “ಬೀಟ್ ಇಟ್” ಹಾಡನ್ನು ಕೇಳದವರೆ ಇಲ್ಲವೆಂದರೂ ತಪ್ಪಾಗಲಾರದು. ಯಾವುದೋ ಪತ್ರಿಕೆಯಲ್ಲಿನ “centrefold”ನಲ್ಲಿ ಬಂದಿದ್ದ ಅವನ ಪೋಸ್ಟರ್ವೊಂದನ್ನು ನನ್ನ ಕೊನೆಯ ಗೋಡೆಗೆ ಅಂಟಿಸಿದಾಗ ಅಮ್ಮ ಕೇಳಿದ್ದಳು, ‘ಅವಳ್ಯಾರೆ?’ ಎಂದು. ನಾನು ಅಮ್ಮನ ಇಗ್ನೋರನ್ಸಿಗೆ ನಕ್ಕು ನಕ್ಕು ಹೇಳಿದ್ದೆ, ‘ಇದು ಅವಳಲ್ಲ, ಅವನು, ಮೈಕಲ್ ಜಾಕ್ಸನ್’ ಎಂದು. ಒತ್ತಾಯ ಮಾಡಿ ಅವನ ಹಾಡಿನ ಟೇಪ್ ಕೇಳಿಸಿದ್ದೆ.
ಡೇನ್ಜರಸ್ ಅಲ್ಬಂ ಬರುವಷ್ಟರಲ್ಲೇ, ಅವನು ಸಾಕಷ್ಟು ಬದಲಾಗಿ ಹೋಗಿದ್ದ. ಥ್ರಿಲ್ಲರ್ ಕರಿಯ ಹುಡುಗ ಡೇನ್ಜರಸ್ನಲ್ಲಿ ಬಿಳಿಯ ಹುಡುಗಿಯನ್ತಾಗಿದ್ದ. ಅವನ ಮೂಗು, ಗಡ್ಡ, ಕೆನ್ನೆಯ ಚಹರೆ ಬದಲಾಗಿತ್ತು, ವರ್ಷ ವರ್ಷವೂ ಬದಲಾಗುತ್ತಲೇ ಹೋಯಿತು. ಕರಿಯ ಹುಡುಗ ಬಿಳಿಯರ ಪ್ರಪಂಚದಲ್ಲಿ ಒಬ್ಬನಾಗಿ ಗುರುತಿಸಿಕೊಳ್ಳಲು ಬದಲಾದ ಎಂದು ಹಲವರು ಬೈದುಕೊಂಡರು, ಕೆಲವರು ಅಯ್ಯೋ ಎಂದರು, ಬಹಳಷ್ಟು ಜನ ಕ್ಯಾರೆ ಎನದೆ ಅವನ ಅನನ್ಯ ಕಲೆಯನ್ನು ಆನಂದಿಸಿದರು. ಕೆಲವೇ ವರ್ಷಗಳಲ್ಲಿ, “ಹಿಪ್-ಹೋಪ್” “ರೆಪ್” ಸಂಗೀತ ಪ್ರಾಕಾರಗಳು, ಬೆನ್ನಲ್ಲೇ ಶುರುವಾದ ಅವನ ಮುಗಿಯದ ಜೀವನ ರಗಳೆಗಳು “ಕಿಂಗ್ ಆಫ್ ಪಾಪ್” ನನ್ನು ಅವನ ಅನಭಿಷಿಕ್ತ ಪಟ್ಟದಿಂದ ಇಳಿಸಿದವು.
ಅಲ್ಲಲ್ಲಿ ಅವನೇ ಹೇಳಿಕೊಂಡಂತೆ ಅವನೊಬ್ಬ “ಮ್ಯಾನ್ ಚೈಲ್ಡ್”. ಪತ್ರಿಕೆಗಳ ಕಣ್ಣಲ್ಲಿ “ವಾಕೋ ಜಾಕೋ”. ಅವನ ೨೭೦೦ ಎಕರೆ ವಿಸ್ತಾರದ ನೆವರ್ಲಂಡ್ ರನ್ಚ್ ಒಂದು ದೊಡ್ಡ ಆಟದ ಅಂಗಳ. ಮನೆ ತುಂಬಾ ಆಟಿಗೆಗಳು, ದೊಡ್ಡ ಆಟದ ರೈಲು, ಬಗೆಬಗೆಯ ಪ್ರಾಣಿಗಳು, ಚಿಕ್ಕ ಮಕ್ಕಳು. ಅಲ್ಲಿಂದ ಶುರುವಾಯ್ತು ಹೊಸ ಆಪಾದನೆಗಳ ಸರಮಾಲೆ. ಅವನೊಬ್ಬ ವಿಕೃತ ಕಾಮಿ, ಮಕ್ಕಳನ್ನು ದುರುಪಯೋಗಪದಿಸಿಕೊಳ್ಳುತ್ತಿರುವ ತಲೆತಿರುಕ ಎಂದವು ಪತ್ರಿಕೆಗಳು. ಮೈಕಲ್ ನದು ಒಂದೇ ಉತ್ತರ. ಬಾಲ್ಯವನ್ನು ಹಿಂಸೆಗೆ ಒಪ್ಪಿಸಿ ನೊಂದ ಬಾಲಕ ತಾನು, ಅವರೊಡನೆ ಕಳೆದ ಬಾಲ್ಯವನ್ನು ಮರಳಿ ಪಡೆಯುವ ಪ್ರಯತ್ನ ಎಂದು. ಆ ಆಪಾದನೆಯಲ್ಲಿ ಖುಲಾಸೆಯೂ ಆಯಿತು. ಮೈಕಲ್ ನ ವಿಚಿತ್ರ ಚಹರೆಗೆ, ಬಣ್ಣಕ್ಕೆ ಕೂಡ ಅವನಲ್ಲಿ ಉತ್ತರ ಸಿದ್ಧವಿತ್ತು. ಹಿಂದೆ ರೆಹರ್ಸಲ್ ನಲ್ಲಿ ಬಿದ್ದು ಮುರಿದ ಮೂಗಿನ ರಿಪೇರಿಗಾಗಿ ಮೂಗನ್ನು ೩ ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಅಂದ. ತನಗೆ ಚರ್ಮರೋಗ “ವಿತಿಲಿಗೋ” ಇದೆಯೆಂದ. ಇದರಿಂದಾಗಿ ತೊನ್ನಿನಂತೆ ಇಡೀ ಚರ್ಮ ಬಣ್ಣ ಕಳೆದುಕೊಂಡು ಬಿಳಿಯಾಗಿದೆ, ಸೂರ್ಯನ ಬೆಳಕಿನಿಂದ ಮರೆಯಾಗಿರಬೇಕು ಎಂದು ಕೊಡೆ ಹಿಡಿದು ಓಡಾಡಿದ. ಪೆಪ್ಸಿ ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲಿ ಬೆಂಕಿ ಆಕಸ್ಮಿಕದಿಂದ ಸುಟ್ಟ ತಲೆಯನ್ನು ಮುಚ್ಚಿಕೊಳ್ಳಲು ಈ ಉದ್ದನೆಯ ಕೂದಲಿನ ವಿಗ್ ಎಂದ.
ಪಾಪರಾಜ್ಜಿಗಳಿಂದ ಮಕ್ಕಳನ್ನು ಮರೆಯಾಗಿಡುತ್ತೇನೆ ಎಂದು ಅವರಿಗೆ ಬುರ್ಖಾ ಹಾಕಿಸಿ ಓಡಾಡಿಸಿದ. ಅವನ ಪುಟ್ಟ ಮಗನನ್ನು ತನ್ನ ಅಭಿಮಾನಿಗಳಿಗೆ ತೋರಿಸಲು ಹೋಗಿ ಎತ್ತರ ಮಹಡಿಯ ಕಿಟಕಿಯಿಂದ ತೂಗಿಸಿದ್ದಕ್ಕಾಗಿ ಮತ್ತೆ ಕೆಂಗಣ್ಣಿಗೆ ಗುರಿಯಾದ. ಒಂದಿಲ್ಲೊಂದು ವಿಚಿತ್ರ ಘಟನೆಗಳಿಂದ ಸುದ್ದಿಯಾಗುತ್ತಲೇ ಇದ್ದ ಅವನ ಸುತ್ತ ಹುಟ್ಟಿದ ಅಂತೆಕಂತೆಗಳೆಷ್ಟೋ. ಜೊತೆಗೆ ಅವನು ಕೂಡ ಗುರುತಿಸಲಾರದಷ್ಟು ಬದಲಾಗುತ್ತ ಹೋದ. ವರ್ಷವರ್ಷವೂ ಅವನ ಮುಖ ಕತ್ತರಿ ಪ್ರಯೋಗಕ್ಕೆ ಒಳಗಾಗುತ್ತಲೆ ಹೋಯಿತು, ದೇಹ ಬಡವಾಗುತ್ತ ಹಂಚಿಕಡ್ಡಿಯಂತಾದ. ಜೊತೆಗೆ ನೋವುನಿವಾರಕ ಗುಳಿಗೆಗಳ ದಾಸನಾದ. ಸಂಗೀತ ಸಾಮ್ರಾಟನಾಗಿದ್ದ ಒಬ್ಬ ಬಡಕುಟುಂಬದ ಸಾಮಾನ್ಯ ಹುಡುಗ, ಇದ್ದಷ್ಟು ದಿನವೂ ಅವನ ಕಲೆಯಿಂದಲೂ , ಕಡೆಗೆ ಕಲೆಭರಿತ ಬದುಕಿಂದಲೂ ಸುದ್ದಿಯಾದ. ಅತಿಯಾದ ಪ್ರಚಾರ, ಕೀರ್ತಿ, ಹಣ, ಇಡೀ ಜಗತ್ತಿನ ಅಭಿಮಾನಿ ಬಳಗವೇ ಇದ್ದರೂ ಅಸುರಕ್ಷಾ ಮನೋಭಾವದಿಂದ ಹೊರಬರಲಾರದೆ ತೊಳಲಾಡಿದ. ತನ್ನ ಕಲೆಯ ಮಾಯೆಯನ್ನೇ, ತನ್ನ ಅಸಂಗತಗಳಿಂದ ಮಸಿಮಾಡಿದ. ಚಿಕ್ಕ ಹುಡುಗನಾಗಿದ್ದಾಗ ಸ್ವಂತ ಅಪ್ಪನಿಂದಲೇ ತೀವ್ರ ಹಿಂಸೆಗೆ ಒಳಗಾದ, ದುಡ್ಡಿಗಾಗಿ ಹಾಡಲು ಪೀಡಿಸುತ್ತಿದ್ದ ಅಪ್ಪನ ದೌರ್ಜನ್ಯಕ್ಕೆ ಸಿಲುಕಿದ ಬಾಲಕ ಕೊನೆಗೂ ಆ ಪೆಟ್ಟಿನಿಂದ ಹೊರಬರಲೇ ಇಲ್ಲ. ಬಾಲ್ಯದಲ್ಲಿ ಕಳೆದುಕೊಂಡ ಪ್ರೀತಿಗಾಗಿ ಜೀವನವಿಡೀ ವ್ಯರ್ಥವಾಗಿ ಹುಡುಕಿದ. ಜಗತ್ತೇ ತನ್ನ ಹೃದಯದಲ್ಲಿ ಜಾಗ ಕೊಟ್ಟರೂ ಅವನ ಹೃದಯದ ಗಾಯ ಮಾಯಲೇ ಇಲ್ಲ.
ಅವನ ಬದುಕು ಏನೇ ಇದ್ದರೂ ಹೇಗೆ ಇದ್ದರೂ ಪಾಶ್ಚಾತ್ಯ ಸಂಗೀತ ಕಂಡ, ಪ್ರಪಂಚವೇ ಅನುಭವಿಸಿದ ಅದ್ಭುತ ಸಂಗೀತ, ನೃತ್ಯ ಅನುಭೂತಿ ಅವನು. “ಗುಣಕ್ಕೆ ಮತ್ಸರವಿಲ್ಲ”. ಅವನ ಮರಣ ಜಗತ್ತಿನ ಸಂಗೀತ ಪ್ರೇಮಿಗಳನ್ನು ಮತ್ತೆ ಗುನುಗುನಿಸಿ ಅವನ ನೆನಪಲ್ಲಿ ಕುಣಿಯುವಂತೆ ಮಾಡಿದೆ. ನಾನೂ ಕುಣಿಯುತ್ತಿದ್ದೇನೆ ಹಲವಾರು ವರ್ಷಗಳ ಬಳಿಕ ಮತ್ತೊಮ್ಮೆ “ಬೀಟ್ ಇಟ್, ಬೀಟ್ ಇಟ್, ಬೀಟ್ ಇಟ್” ಎಂದು.
[ಚಿತ್ರಗಳು-ಸಂಗ್ರಹದಿಂದ]
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.