ಆ ಕಾಲದಲ್ಲಿ ಇಡೀ ಹಳ್ಳಿಯೆ ಒಂದು ಕುಟುಂಬದಂತೆ ಇತ್ತು. ಹೊಸಬರು ಹಳ್ಳಿಗೆ ಬಂದರೆ ಕಟ್ಟೆಯ ಮೇಲೆ ಕುಳಿತ ಹಿರಿಯರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಎಲ್ಲಿಂದ ಬಂದಿದ್ದಾರೆ, ಯಾರ ಮನೆಗೆ ಹೋಗುತ್ತಿದ್ದಾರೆ. ಬಂದ ಕಾರಣವೇನು, ಅವರ ಕುಲಗೋತ್ರ ಯಾವುದು, ಆ ಆಗಂತುಕರ ಊರಿನಲ್ಲಿ ತಮಗೆ ಪರಿಚಯವಿದ್ದವರ ಕುರಿತು ತಿಳಿದುಕೊಳ್ಳುವುದು, ಆ ಊರಿನ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುವುದು ಮುಂತಾದವು ನಡೆದೇ ಇರುತ್ತಿದ್ದವು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಏಳನೆಯ ಕಂತು.

 

ಹಳ್ಳಿಗರ ಬದುಕಿನಲ್ಲಿ ರಹಸ್ಯ ಎಂಬುದೇ ಇರಲಿಲ್ಲ. ಗಂಡ ಹೆಂಡಿರು ರಸ್ತೆಯ ಮೇಲೆ ಹೋಗುವಾಗ ಗಂಡ ಮುಂದೆ ಮುಂದೆ ಹೋಗುತ್ತ ಮಾತನಾಡುತ್ತಿದ್ದ. ಹೆಂಡತಿ ಹಿಂದೆ ಹಿಂದೆ ಸಾಗುತ್ತ ಮಾತನಾಡುತ್ತಿದ್ದಳು. ಅವರು ತಮ್ಮ ಮನೆಯ ಕಷ್ಟಸುಖವನ್ನು ಎಲ್ಲರಿಗೂ ಕೇಳುವ ಹಾಗೆ ಮಾತನಾಡುತ್ತಿದ್ದರು. ಎಲ್ಲರ ಮನೆಯ ಕಷ್ಟಸುಖಗಳು ಎಲ್ಲರಿಗೂ ಗೊತ್ತಿರುತ್ತಿದ್ದವು.

ಆ ಕಾಲದಲ್ಲಿ ಇಡೀ ಹಳ್ಳಿಯೆ ಒಂದು ಕುಟುಂಬದಂತೆ ಇತ್ತು. ಹೊಸಬರು ಹಳ್ಳಿಗೆ ಬಂದರೆ ಕಟ್ಟೆಯ ಮೇಲೆ ಕುಳಿತ ಹಿರಿಯರು ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಎಲ್ಲಿಂದ ಬಂದಿದ್ದಾರೆ, ಯಾರ ಮನೆಗೆ ಹೋಗುತ್ತಿದ್ದಾರೆ. ಬಂದ ಕಾರಣವೇನು, ಅವರ ಕುಲಗೋತ್ರ ಯಾವುದು, ಆ ಆಗಂತುಕರ ಊರಿನಲ್ಲಿ ತಮಗೆ ಪರಿಚಯವಿದ್ದವರ ಕುರಿತು ತಿಳಿದುಕೊಳ್ಳುವುದು, ಆ ಊರಿನ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುವುದು ಮುಂತಾದವು ನಡೆದೇ ಇರುತ್ತಿದ್ದವು. ಆ ಬಂದವರು ಕೂಡ ಯಾವುದೇ ಬೇಸರವಿಲ್ಲದೆ ಎಲ್ಲ ಪ್ರಶ್ನೆಗಳಿಗೂ ಸಹಜವಾಗಿ ಉತ್ತರಿಸುತ್ತಿದ್ದರು. ಹಾಗೇ ಅವರ ದೋಸ್ತಿಯೂ ಆಗುತ್ತಿತ್ತು.

ಏಕತಾರಸಾಬ ದರ್ಗಾದ ಮುಲ್ಲಾಗಳ ಮನೆ ಬಿಟ್ಟರೆ ನಮ್ಮದೊಂದೇ ಮುಸ್ಲಿಂ ಮನೆ ಇದ್ದ ನೆನಪು. ಅಲ್ಲಿನ ವಿವಿಧ ಜಾತಿಗಳ ಜನರು ಅಜ್ಜಿಗೆ ಬಹಳ ಗೌರವ ಕೊಡುತ್ತಿದ್ದರು. ಕನ್ನಡ, ಉರ್ದು ಮತ್ತು ಮರಾಠಿ ಭಾಷೆಗಳನ್ನು ಅಜ್ಜಿ ಸರಾಗವಾಗಿ ಮಾತನಾಡುತ್ತಿದ್ದಳು.

(ಅಲ್ಲೀಬಾದಿ ಅಜ್ಜಿ)

ಒಬ್ಬ ಹೆಣ್ಣುಮಗಳು ಮದುವೆ ವಯಸ್ಸಿಗೆ ಬಂದರೆ ಎಲ್ಲರ ಮನೆಯ ಹೆಣ್ಣುಮಗಳಾಗುತ್ತಿದ್ದಳು. ಹಳ್ಳಿ ಬಿಟ್ಟು ಹೋಗುವಳಲ್ಲಾ ಎಂಬ ಭಾವ ಮೂಡುತ್ತಿತ್ತು. ಮದುವೆ ಗಟ್ಟಿಯಾದಮೇಲೆ ಹೃದಯಸ್ಪರ್ಶಿ ಭಾವನೆಗಳನ್ನು ಸ್ಫುರಿಸಿದರೂ ಸರಿಯಾದ ವಯಸ್ಸಿಗೆ ಒಳ್ಳೆಯ ಮನೆತನ ಸಿಕ್ಕಿತಲ್ಲಾ ಎಂಬ ಸಮಾಧಾನವೂ ಇರುತ್ತಿತ್ತು.

ಹಳ್ಳಿಗರಿಗೆ ತಮ್ಮ ಹಳ್ಳಿಯೇ ಒಂದು ದೇಶವಾಗಿತ್ತು. ಇನ್ನೊಂದು ಹಳ್ಳಿ 50 ಮೈಲಿಗಿಂತ ದೂರ ಇದ್ದರೆ, ಅವರ ದೃಷ್ಟಿಯಲ್ಲಿ ದೂರದ ದೇಶ ಆಗುತ್ತಿತ್ತು. (ಆ ಕಾಲದಲ್ಲಿ ಕಿಲೋ ಮೀಟರ್ ಬಳಕೆ ಇರಲಿಲ್ಲ ಮೈಲ್ ಅನ್ನುತ್ತಿದ್ದರು. ಐದು ಮೈಲಿಗೆ ಎಂಟು ಕಿಲೊ ಮೀಟರ್ ಆಗುವುದು.)
ಒಬ್ಬ ವ್ಯಕ್ತಿ ನನ್ನ ಅಜ್ಜಿಯ ಬಳಿ ಬಂದು ತನ್ನ ಮಗಳ ಮದುವೆ ಬಗ್ಗೆ ತಿಳಿಸಿದ. ಆತ ತನ್ನ ಮಗಳನ್ನು 50 ಮೈಲಿ ದೂರದ ಹಳ್ಳಿಗೆ ಕೊಟ್ಟಿದ್ದ. ನನ್ನ ಅಜ್ಜಿಗೆ ಸಿಟ್ಟು ಬಂದಿತು. ‘ಮಗಳೀಗಿ ಅಟ್ ದೂರದ ದೇಶಕ್ಕ ಕೊಡಾಕ ನಿಂಗ ಮನಸ್ ಹ್ಯಾಂಗ್ ಬಂತು’ ಎಂದು ಗದರಿಸಿದಳು. ಆತ ಬಿಕ್ಕಿ ಬಿಕ್ಕಿ ಅತ್ತ. ಕೊನೆಗೆ ಅಜ್ಜಿಯೆ ಸಮಾಧಾನಪಡಿಸಿ ‘ಕೊಟ್ಟ ಮಾತು ಮುರಿಬ್ಯಾಡ ಹೋಗು. ಒಳ್ಳೆಯ ಮನೆತನ ಅಂತ ಕೇಳೀನಿ. ಮಗಳ ಕಡೆಗೆ ಧ್ಯಾಸ ಇರ್ಲಿ’ ಎಂದು ಕಣ್ಣಲ್ಲಿ ನೀರು ತಂದಳು.

ಹೆಣ್ಣು ಮಕ್ಕಳನ್ನು ಕರೆತರಲು ಮತ್ತು ಬಿಟ್ಟು ಬರಲು ಹಳ್ಳಿಗರು ಕೊಲ್ಹಾರಿ ಗಾಡಿ (ಸಿಂಗರಿಸಿದ ಕಮಾನು ಬಂಡಿ – ಸವಾರಿ ಗಾಡಿ)ಯನ್ನೇ ಬಳಸುತ್ತಿದ್ದರು. ಒಬ್ಬ ಹುಡುಗಿ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಾಳೆಂದರೆ ನೆರೆಹೊರೆಯ ಜನ ತಮ್ಮ ಮಗಳೇ ಹೋಗುತ್ತಿದ್ದಾಳೆ ಎನ್ನುವ ಹಾಗೆ ಸಂಕಟ ಅನುಭವಿಸುತ್ತಿದ್ದರು. ದೂರದ ಹಳ್ಳಿಗಳು ಅವರ ಮನದಲ್ಲಿ ದೇಶವಾಗಿ ನಿಲ್ಲುತ್ತಿದ್ದವು!

ಸಾಬಣ್ಣನ ಹೆಂಡತಿ ವಿಜಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತಳು. ಕತ್ತಲಾಗುವ ವೇಳೆ ಅಲ್ಲೀಬಾದಿಗೆ ಹೆಣ ತೆಗೆದುಕೊಂಡು ಬಂದು ಪಡಸಾಲೆಯಲ್ಲಿ ಕೂಡಿಸಿ ಸಿಂಗರಿಸಿದರು. ಅವರ ಮನೆ ನಮ್ಮ ಮನೆಯ ಹಿಂದೆ ಸ್ವಲ್ಪ ದೂರದಲ್ಲಿತ್ತು. ದಯಾಮಯಿಯಾಗಿದ್ದ ಆ ಹೆಣ್ಣುಮಗಳು ಗೌರವಾರ್ಹಳಾಗಿದ್ದಳು. ಹಳ್ಳಿಗೆ ಹಳ್ಳಿಯೇ ಗೊಳೊ ಎನ್ನುತ್ತಿತ್ತು. ಮಾನವರು ಜಾತಿ ಧರ್ಮಗಳನ್ನು ಒಪ್ಪಿಕೊಂಡಿದ್ದರೂ ಮಾನವಸಂಬಂಧಗಳು ಎಲ್ಲ ಜಾತಿ ಧರ್ಮಗಳನ್ನು ಮೀರಿ ನಿಲ್ಲುತ್ತಿದ್ದವು.

ನಾನು ಮೊದಲ ಬಾರಿಗೆ ಸಾವನ್ನು ಕಂಡೆ. ಬಹಳ ಕಸಿವಿಸಿಯಾಯಿತು. ಭಯ ಮತ್ತು ಗಾಬರಿಯಿಂದಾಗಿ ರಾತ್ರಿ ಜ್ವರ ಬಂದಿತು. ‘ಅಲ್ಲಿಗೆ ಬರಬೇಡ’ ಎಂದು ಅಜ್ಜಿ ಹೇಳಿದ್ದರೂ ಹಠ ಮಾಡಿ ಹೋಗಿದ್ದೆ.

ರೈತರಿಗೆ ಬೆಳಗಾದ ಕೂಡಲೆ ಹೊಲದ ಕಡೆಗೆ ದನಗಳನ್ನು ಒಯ್ಯುವ ಧಾವಂತ. ಬೆಳಿಗ್ಗೆ ತಂಗಳ ರೊಟ್ಟಿ, ಸೇಂಗಾ ಅಥವಾ ಅಗಸಿ ಹಿಂಡಿ ಮತ್ತು ಮೊಸರು ಅವರ ನ್ಯಾರಿಯ ವಸ್ತುಗಳು. ನ್ಯಾರಿ ಮಾಡಿ ಹೊಲಕ್ಕೆ ಹೋದರೆಂದರೆ ಮಧ್ಯಾಹ್ನ ಹೆಂಡತಿ ಬುತ್ತಿ ತಂದಾಗ ಊಟ. ಸಂಜೆ ಇಬ್ಬರೂ ಗೋಧೂಳಿ ಸಮಯದಲ್ಲಿ ದನಕರುಗಳ ಜೊತೆಗೆ ಮನೆಗೆ ಬರುವುದು ವಾಡಿಕೆ.

ಹಂತಿ ಹೂಡುವುದಕ್ಕಾಗಿ ರೈತರು ದುಂಡನೆಯ ಕಣ ತಯಾರಿಸಿ ಗಟ್ಟಿಗೊಳಿಸುತ್ತಾರೆ. ಕಣದ ಮಧ್ಯೆ ಮೇಟಿಕಂಭ ನೆಡುತ್ತಾರೆ. ಕಣದಲ್ಲಿ ಜೋಳದ ತೆನೆಗಳನ್ನು ಸುರುವಿದ ನಂತರ ಆ ತೆನೆಗಳನ್ನು ತುಳಿಸುವುದಕ್ಕಾಗಿ ಮೇಟಿಕಂಭಕ್ಕೆ ಸಾಲಾಗಿ ಎತ್ತುಗಳನ್ನು ಕಟ್ಟುತ್ತಾರೆ. ಇದಕ್ಕೆ ‘ಹಂತಿಕಟ್ಟುವುದು’ಎನ್ನುತ್ತಾರೆ. ಹೀಗೆ ಒಕ್ಕಣೆಗಾಗಿ, ಅಂದರೆ ತೆನೆಗಳಿಂದ ಕಾಳುಗಳನ್ನು ಬೇರ್ಪಡಿಸುವುದಕ್ಕಾಗಿ ಹಂತಿಕಾರ (ಹಂತಿಹೊಡೆಯುವಾತ) ಕಣದಲ್ಲಿ ಎತ್ತುಗಳನ್ನು ಸುತ್ತುವಾಗ ಕಾಲಾಡಿಸುತ್ತ ತೆನೆಗಳನ್ನು ಮೇಲೆ ಸರಿಸುವ ಮೂಲಕ ಅವು ಚೆನ್ನಾಗಿ ತುಳಿತಕ್ಕೆ ಸಿಗುವ ಹಾಗೆ ಮಾಡುವನು. ಆಗ ತೆನೆಗಳಿಂದ ಕಾಳು ಬಂದನಂತರ ಅವು ಕಂಕಿ (ಖಾಲಿ ತೆನೆ) ಗಳಾಗುವವು. ಆ ಕಂಕಿಗಳನ್ನು ಕಟ್ಟಿಗೆಯಿಂದ ತಯಾರಿಸಿದ ಹಲ್ಲುಗಳುಳ್ಳ ಜಂತಗುಂಟಿಯಿಂದ ಎಳೆದು ಹೊರಗೆ ಗುಂಪಿ ಹಾಕುವರು. ಕಾಳು ಮತು ಸುಂಕದಿಂದ ಕೂಡಿದ ‘ಮದ’ವನ್ನು ‘ಗ್ವಾಡಿ’ ಎಂಬ ಸಾಧನದಿಂದ ಎಳೆದು ಮೇಟಿಯ ಸುತ್ತ ಸರಿಸುವರು. ನಂತರ ಮತ್ತೆ ತೆನೆಗಳ ರಾಶಿಯನ್ನು ಕಣದಲ್ಲಿ ಸುರಿಯುವರು.

(ಕಣದಲ್ಲಿನ ಕಂಕಿಯನ್ನು ಗುಂಪಿ ಹಾಕಲು ಬಳಸುವ ಜಂತಗುಂಟಿ ಮತ್ತು ಜೋಳದ ಕಾಳುಗಳನ್ನು ಕಣದ ಮೇಟಿಯ ಸುತ್ತ ಕೂಡಿಹಾಕಲು ಬಳಸುವ ಗ್ವಾಡಿ.)

ಎತ್ತುಗಳ ತುಳಿತದಿಂದ ತೆನೆಯೊಳಗಿನ ಕಾಳುಗಳು ಸಿಡಿದು ಹೊರಗೆ ಬೀಳದಂತೆ, ಕಣದ ಪರಿಧಿಗೆ ಹೊಂದಿಕೊಂಡು ಒಣಸೊಪ್ಪಿನ ಇಂಡೆ ಕಟ್ಟುತ್ತಾರೆ (ಪರಿಧಿಯ ಸುತ್ತ ಸಾಂದ್ರವಾಗಿ ಒಣಸೊಪ್ಪು ಹಾಕುತ್ತಾರೆ.) ಹೀಗೆ ಹಂತಿಕಾರರು ರಾತ್ರಿ ಹಾಡುತ್ತ ಹಂತಿ ಹೊಡೆಯುವ ಕಾಯಕ ನಡೆಯುತ್ತಿತ್ತು.

ಕಣ ಮಾಡಿದ ರೈತರು ತಮ್ಮ ಎತ್ತುಗಳ ಜೊತೆ ನೆರೆಹೊರೆಯವರ ಎತ್ತುಗಳನ್ನು ತಂದು ಹಂತಿಗೆ ಕಟ್ಟುತ್ತಿದ್ದರು. ಹೀಗೆ ಒಬ್ಬರಿಗೊಬ್ಬರು ಸಹಕರಿಸುವ ಮೂಲಕ ಜೀವನವನ್ನು ಹಗುರು ಮಾಡಿಕೊಂಡಿದ್ದರು. ಪ್ರತಿಹಳ್ಳಿಯೂ ಸ್ವಯಂಪರಿಪೂರ್ಣವಾಗಿತ್ತು. ಎಲ್ಲ ಕಾಯಕದವರು ಹಳ್ಳಿಯಲ್ಲಿ ಇರುತ್ತಿದ್ದರು. ಎಲ್ಲ ಜೀವನಾವಶ್ಯಕ ವಸ್ತುಗಳ ಉತ್ಪನ್ನ ಹಳ್ಳಿಯಲ್ಲೇ ಆಗುತ್ತಿತ್ತು.

ಬೆಳೆ ಬಂದು ಸುಗ್ಗಿಯ ಸಮಯದಲ್ಲಿ ಹಂತಿಕಟ್ಟಿದ ನಂತರ ರಾಶಿ ಮಾಡಿದಾಗ, ರೈತರು ಅಲ್ಲಿಗೆ ಬಂದ ಬಡವರಿಗೆಲ್ಲ ದಾನ ಕೊಡುತ್ತಿದ್ದರು. ತಮ್ಮ ಉತ್ಪನ್ನದಲ್ಲಿ ಪ್ರಾಣಿ, ಪಕ್ಷಿಗಳು ಮತ್ತು ಬಡವರ ಪಾಲೂ ಇದೆ ಎಂಬುದು ರೈತರ ಮನಸ್ಥಿತಿಯಾಗಿತ್ತು. ಸುಗ್ಗಿಯ ಕಾಲದಲ್ಲಿ ಬೇರೆ ಕಡೆಯ ಬಡವರು ಬಂದು ಜೋಳ ಕಾಳುಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ನಮ್ಮ ಹಳ್ಳಿಯ ಬಹುಪಾಲು ಬಡವರು ಹಾಗೆ ಹೋಗುತ್ತಿರಲಿಲ್ಲ. ಕೂಲಿ ಮಾಡಿ ಬದುಕುವುದು ಅವರ ವ್ಯಕ್ತಿತ್ವವಾಗಿತ್ತು.

ಜನರು ಸ್ವಾಭಿಮಾನಿಗಳಾಗಿದ್ದರು. ದುಡಿದು ತಿನ್ನುವ ಛಲ ಇತ್ತು. ನಾನೊಮ್ಮೆ ಅದಕ್ಕೂ ಹೆಚ್ಚಿನದನ್ನು ಕಂಡೆ. ನೆರೆಹೊರೆಯವರು ನನ್ನ ಅಜ್ಜಿಯ ಕಡೆಗೆ ಆಗಾಗ ಸಲಹೆ ಕೇಳಲು ಬರುತ್ತಿದ್ದರು. ಚೆನ್ನಾಗಿ ಮಳೆ ಬೆಳೆ ಬಂದ ಕಾರಣ ಒಬ್ಬ ರೈತನ ಹೊಲ ಜಾಸ್ತಿ ಬೆಳೆದಿತ್ತು. ‘ದೇವರು ದರಸಲಕ್ಕಿಂತ ಜಾಸ್ತಿ ಕೊಟ್ಟಾನ. ಏನು ಮಾಡಲಿ’ ಎಂದು ಅಜ್ಜಿಗೆ ಕೇಳಿದ. ‘ಹೊಲೇರು, ಮಾದರು ಕಷ್ಟಾ ಪಡತಾರ. ಕೆಲಸ ಇದ್ದಾಗ ಕರದ್ರ ಬಂದ್ ಮಾಡ್ತಾರ್. ಅವರಿಗಿಷ್ಟು ಹಂಚು. ಉಳದರ ಬೀರಪ್ಪನ ಗುಡಿಗಿ ಕೊಡು’ ಎಂದು ಸಲಹೆ ನೀಡಿದಳು. ಆತ ದೊಡ್ಡ ಭಾರ ಇಳಿದವರ ಹಾಗೆ ಖುಷಿಯಿಂದ ಹೋದ. ಅವನಿಗೆ ಅಡತಿ ಅಂಗಡಿ ಗೊತ್ತಿದ್ದಿಲ್ಲ ಎಂದಲ್ಲ. ‘ದೇವರು ಹೆಚ್ಚಿಗೆ ಕೊಟ್ಟದ್ದು ನನ್ನದಲ್ಲ’ ಎಂಬ ಭಾವ ಆತನದಾಗಿತ್ತು.

ನಮ್ಮ ಹಳ್ಳಿಯ ರೈತನೊಬ್ಬನಿಗೆ ಎರಡು ಕೂರಿಗೆ (ಎಂಟು ಎಕರೆ) ಹೊಲ ಇತ್ತು. ಆತ ಒಂದು ಕೂರಿಗೆ ಹೊಲದಲ್ಲಿ ಮಾತ್ರ ಬಿತ್ತನೆ ಮಾಡುತ್ತಿದ್ದ. ಉಳಿದ ಒಂದು ಕೂರಿಗೆಯನ್ನು ಹಾಗೇ ಬಿಡುತ್ತಿದ್ದ. ಗಾಳಿ, ಬಿಸಿಲು ಮತ್ತು ಮಳೆಯಿಂದ ಫಡಾ ಬಿದ್ದ (ಉಳಿಮೆ ಮಾಡದೆ ಬಿಟ್ಟ) ಹೊಲ ಫಲವತ್ತಾಗುವುದು ಎಂದು ಹೇಳುತ್ತಿದ್ದ. ಹೀಗೆ ನೈಸರ್ಗಿಕವಾಗಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ವಿಧಾನ ಅವನದಾಗಿತ್ತು. ಬಿತ್ತಿದ ಹೊಲವನ್ನು ಮರುವರ್ಷ ಫಡಾ ಬಿಟ್ಟು. ಆ ನೈಸರ್ಗಿಕವಾಗಿ ಫಲವತ್ತಾದಂಥ ಇನ್ನರ್ಧ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ. ಹೀಗೆ ಬಿತ್ತುವ ಭೂಮಿಯನ್ನು ಪ್ರತಿವರ್ಷ ಬದಲಾಯಿಸುತ್ತಿದ್ದ!

ಅಲ್ಲೀಬಾದಿಯ ತಳವಾರ ರಾಮಪ್ಪ ಮತ್ತು ಗೌರಜ್ಜಿ ನನ್ನ ಮನದಲ್ಲಿದ್ದು ಮಾನವೀಯತೆ ಮತ್ತು ಆತ್ಮಗೌರವದ ಬಗ್ಗೆ ಎಚ್ಚರಿಸುತ್ತಲೇ ಇರುತ್ತಾರೆ. ನನ್ನ ಅಜ್ಜಿ ಕೂಲಿಗೆ ಹೋಗುವಾಗ ನಾನೂ ಅವಳ ಜೊತೆ ಹೋಗುತ್ತಿದ್ದೆ. ಒಂದು ಸಲ ಸೇಂಗಾ ಸುಗ್ಗಿಯಲ್ಲಿ ಸೇಂಗಾ ಆರಿಸುವ ಕೆಲಸಕ್ಕಾಗಿ ತಳವಾರ ರಾಮಪ್ಪನ ಹೊಲಕ್ಕೆ ಹೋದೆವು. ಎಲ್ಲ ಕೂಲಿ ಹೆಣ್ಣುಮಕ್ಕಳು ಸೇಂಗಾ ಆರಿಸುತ್ತಿದ್ದರು. ಗೆಜ್ಜಿ ಸೇಂಗಾದ ಪುಟ್ಟ ಗಿಡಗಳನ್ನು ಕೀಳುತ್ತ ಅವುಗಳ ಬೇರಿಗೆ ಅಂಟಿಕೊಂಡಿರುವ ಸೇಂಗಾ ಬಿಡಿಸುತ್ತ ಒಂದು ಡಬ್ಬದಲ್ಲೋ ಬುಟ್ಟಿಯಲ್ಲೋ ತುಂಬಿಕೊಳ್ಳುವುದು. ಅದು ತುಂಬಿದ ಮೇಲೆ ಹೊಲದ ದಂಡೆಗೆ ತಂದು ಗುಂಪಿ ಹಾಕುವುದು. ಹೀಗೆ ಏಳು ಬಾರಿ ಒಂದು ಕಡೆ ಹಾಕಿದ ನಂತರ ಎಂಟನೆಯ ಬಾರಿ ಪಕ್ಕದ ಇನ್ನೊಂದು ಗುಂಪನ್ನು ಸೃಷ್ಟಿಸುವುದು. ದೊಡ್ಡ ಗುಂಪಿ ಹೊಲದ ಮಾಲೀಕನಿಗೆ; ಎಂಟನೇ ಸಲ ಪ್ರತ್ಯೇಕವಾಗಿ ಹಾಕುವುದರಿಂದ ಉಂಟಾಗುವ ಸಣ್ಣ ಗುಂಪಿ ಸೇಂಗಾ ಆರಿಸಿದವರಿಗೆ ಕೂಲಿ ರೂಪದಲ್ಲಿ ಸಿಗುತ್ತಿತ್ತು.

(ಸೇಂಗಾ ಆರಿಸುವ ಹೆಣ್ಣುಮಕ್ಕಳು)

ಸಂಜೆಯಾಗುವುದರೊಳಗಾಗಿ ಪ್ರತಿಯೊಬ್ಬರು ಹೀಗೆ ಎರಡು ಸೇಂಗಾ ರಾಶಿ ಹಾಕುತ್ತಿದ್ದರು. ದೊಡ್ಡ ರಾಶಿ ಹೊಲದೊಡನೆಯನಿಗಾಗಿ ಇದ್ದು, ಸಣ್ಣ ರಾಶಿ ಕೂಲಿಕಾರರ ಪಾಲಾಗುತ್ತಿತ್ತು. ನಾನು ನನ್ನ ಅಜ್ಜಿಯ ಜೊತೆಯಲ್ಲಿ ಚಿಕ್ಕ ಡಬ್ಬಿಯಲ್ಲಿ ಸೇಂಗಾ ಸಂಗ್ರಹಿಸಿ ದೊಡ್ಡ ಮತ್ತು ಸಣ್ಣ ಗುಂಪು ಮಾಡುತ್ತಿದ್ದೆ. ನನ್ನ ದೊಡ್ಡ ಗುಂಪೇ ಸಣ್ಣದಾಗುವುದರಿಂದ ಸಣ್ಣ ಗುಂಪು ಅತಿ ಸಣ್ಣದಾಗಿರುತ್ತಿತ್ತು.

ಹೆಣ್ಣುಮಕ್ಕಳು ಜನಪದ ಹಾಡುಗಳನ್ನು ಒಟ್ಟಾಗಿ ಹಾಡುತ್ತ ಸೇಂಗಾ ಬಿಡಿಸುತ್ತಿದ್ದರು. ನನ್ನ ಅಜ್ಜಿಯ ಪಕ್ಕದಲ್ಲಿದ್ದು ಸೇಂಗಾ ಬಿಡಿಸುತ್ತಿದ್ದ ಹೆಣ್ಣುಮಗಳು ಗಂಭಿರವಾಗಿ ಇರುತ್ತಿದ್ದಳು. ಪ್ರಾಮಾಣಿಕವಾಗಿ ರಾಶಿ ಹಾಕುತ್ತಿದ್ದಿಲ್ಲ. ಹೊಲದೊಡೆಯನ ರಾಶಿಗೆ ಕೇವಲ ನಾಲ್ಕೈದು ಬಾರಿ ಸೇಂಗಾ ಸುರಿಯುತ್ತಿದ್ದಳು. ನಂತರ ಸಂಗ್ರಹಿಸಿದ್ದನ್ನು ತನ್ನ ರಾಶಿಗೆ ಹಾಕಿಕೊಳ್ಳುತ್ತಿದ್ದಳು. ಅಜ್ಜಿಗೆ ಇದು ಹಿಡಿಸಲಿಲ್ಲ. ಸಮೀಪದ ಮರದ ನೆರಳಲ್ಲಿ ಚುಟ್ಟಾ ಸೇದುತ್ತ ಕುಳಿತಿದ್ದ ಹೊಲದೊಡೆಯ ತಳವಾರ ರಾಮಪ್ಪನಿಗೆ ಈ ಮೋಸದ ವಿರುದ್ಧ ಹೇಳಲು ಹೊರಟಳು. ನಾನೂ ಹಿಂಬಾಲಿಸಿದೆ.

ತಳವಾರ ರಾಮಪ್ಪ ಅನ್ಯಾಯವನ್ನು ಕೇಳಿಯೂ ಶಾಂತಚಿತ್ತನಾಗಿ ಅಜ್ಜಿಗೆ ಹೇಳಿದ: ‘ಅಕಿ ಹಂಗ ಮಾಡೂದು ನೋಡ್ತಾ ಇದೀನಿ. ಅವಳ ಗಂಡ ಸತ್ತಾನ. ಕಷ್ಟಾಪಟ್ಟು ನಾಲ್ಕ ಮಕ್ಕಳಗಿ ಸಾಕ್ತಾಳ. ಅವಳ ಮನಸ್ ನೋಯ್ಸೂದು ಬ್ಯಾಡ. ಅಕಿ ತನಗ ತಿಳದಂಗ ಮಾಡಲಿ. ನೀ ತಿಳದೂ ತಿಳಿಲಾರದಂಗ ಇರು’ ಎಂದ. ನನ್ನ ಅಜ್ಜಿ ಏನೂ ಮಾತಾಡದೆ ಹಿಂದಿರುಗಿದಳು.

‘ಹೊಲೇರು, ಮಾದರು ಕಷ್ಟಾ ಪಡತಾರ. ಕೆಲಸ ಇದ್ದಾಗ ಕರದ್ರ ಬಂದ್ ಮಾಡ್ತಾರ್. ಅವರಿಗಿಷ್ಟು ಹಂಚು. ಉಳದರ ಬೀರಪ್ಪನ ಗುಡಿಗಿ ಕೊಡು’ ಎಂದು ಸಲಹೆ ನೀಡಿದಳು.

ಈ ಕ್ಷಣದಲ್ಲಿ ನನಗೆ ಗೌರವದ ಪ್ರತೀಕವಾಗಿ ಗೌರವ್ವಜ್ಜಿ ನೆನಪಾಗುತ್ತಾಳೆ. ಆ ಅಜ್ಜಿ, ನನ್ನ ಅಜ್ಜಿ ಮತ್ತು ಇತರೆ ಹೆಣ್ಣುಮಕ್ಕಳು ಬೇರೆಯವರ ತೋಟವೊಂದರಲ್ಲಿ ಕಸ ತೆಗೆಯಲು ಹೋಗುತ್ತಿದ್ದರು. ನಾನೂ ಅಜ್ಜಿಯ ಜೊತೆ ಹೋಗುತ್ತಿದ್ದೆ. ಬೆಳಿಗ್ಗೆ ಬುತ್ತಿಯನ್ನು ತಲೆಯ ಮೇಲಿಟ್ಟು, ಅದರ ಮೇಲೆ ಕಳೆ (ಕಸ) ತೆಗೆಯುವ ಕುರ್ಪಿಯನ್ನು ಸಿಗಿಸಿ, ತೋಟದ ಕಡೆಗೆ ಧಾವಿಸುವ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ.

(ಕಸದಂತೆ ಬೆಳೆಯುವ ಗೋಳಿಪಲ್ಲೆ)

ಹೀಗೆ ಕಳೆ ತೆಗೆಯಲು ಗುಂಪಾಗಿ ತೋಟಕ್ಕೆ ಹೋದ ಹೆಂಗಸರು ಸಂಜೆ ಮನೆಗೆ ಮರಳುವಾಗ ಆ ತೋಟದಲ್ಲಿನ ಕಾಯಿಪಲ್ಲೆ (ಸೊಪ್ಪು ತರಕಾರಿ)ಗಳನ್ನು ಸ್ವಲ್ಪ ಪ್ರಮಾಣದಲ್ಲಿ ಒಯ್ಯಬಹುದಿತ್ತು. ಇದು ವಾಡಿಕೆಯಾಗಿತ್ತು. ಹೆಂಗಸರು ತಮಗೆ ಬೇಕೆನಿಸಿದ ಕಾಯಿಪಲ್ಲೆ ತೆಗೆದುಕೊಳ್ಳುತ್ತಿದ್ದರು. ಸ್ವಲ್ಪ ಹೆಚ್ಚಿಗೆ ತೆಗೆದುಕೊಂಡರೆ ಮಾಲೀಕ ಏನು ತಿಳಿದುಕೊಂಡಾನು ಎಂಬ ಅಳುಕು ಅವರಿಗಿತ್ತು. ಆದರೆ ಗೌರವ್ವಜ್ಜಿ ಈ ಅಳುಕಿನಿಂದ ಮುಕ್ತಳಾಗಿದ್ದಳು. ಏಕೆಂದರೆ ಅವಳು ಯಾವುದೇ ತೆರನಾದ ಕಾಯಿಪಲ್ಲೆಗಳನ್ನು ಮುಟ್ಟುತ್ತಿರಲಿಲ್ಲ. ಅವಳು ಬಡವರೊಳಗಿನ ಬಡವಿ. ಆದರೆ ಅವಳ ಸ್ವಾಭಿಮಾನಕ್ಕೆ ಎಲ್ಲರೂ ಒಳಗಿನಿಂದಲೇ ನಮಿಸುತ್ತಿದ್ದರು. ಅವಳಿಗೆ ಒಂದು ಮಾತು ಹೇಳುವಾಗಲೂ ಎಚ್ಚರಿಕೆ ವಹಿಸುತ್ತಿದ್ದರು.

ಎಲ್ಲ ಹೆಂಗಳೆಯರು ಕಾಯಿಪಲ್ಲೆ ತೆಗೆದುಕೊಂಡರೆ ಅವಳು ಗೋಳಿಪಲ್ಲೆ ತೆಗೆದುಕೊಳ್ಳುತ್ತಿದ್ದಳು. ಆ ಗೋಳಿಪಲ್ಲೆ ಕಳೆಯ ಒಂದು ಭಾಗವಾಗಿತ್ತು. (ರೈತರು ಅದನ್ನು ಇತರ ಕಳೆಗಳಿಂದ ಬೇರ್ಪಡಿಸಿ ಹಸುವಿಗೆ ಹಾಕುತ್ತಿದ್ದರು. ಗೋಳಿಪಲ್ಲೆ ತಿಂದರೆ ಹಸುಗಳು ಹೆಚ್ಚಿಗೆ ಹಾಲು ಕೊಡುವವು.) ಗೋಳಿಪಲ್ಲೆ ತೆಗೆದುಕೊಳ್ಳಲು ಯಾರ ಅನುಮತಿಯೂ ಬೇಕಿರಲಿಲ್ಲ. ಅಂತೆಯೆ ಗೌರಜ್ಜಿ ಅದನ್ನು ತೆಗೆದುಕೊಳ್ಳುತ್ತಿದ್ದಳು. ಮಧ್ಯಾಹ್ನ ಎಲ್ಲರೂ ಮಟ್ಟಿಬಾರಿಯ ಹೌದಿನ (ನೀರಿನ ತೊಟ್ಟಿಯ) ಬಳಿಯ ಗಿಡದ ನೆರಳಲ್ಲಿ ಬುತ್ತಿ ಬಿಚ್ಚಿದಾಗ ಆಕೆ ಹೌದಿನ ಇನ್ನೊಂದು ಬದಿಯಲ್ಲಿ ಒಬ್ಬಳೇ ಊಟಕ್ಕೆ ಕೂಡುತ್ತಿದ್ದಳು. ಕಾರಣವಿಷ್ಟೇ; ಎಲ್ಲರೂ ಬುತ್ತಿ ಬಿಚ್ಚಿದಾಗ ತಮ್ಮ ತಮ್ಮ ವಣಗಿ (ತರಕಾರಿಯಿಂದ ಮಾಡಿದ ಪದಾರ್ಥ) ಹಂಚಿಕೊಳ್ಳುತ್ತಿದ್ದರು. ಗೌರವ್ವಜ್ಜಿಯ ವಣಗಿ ಬರಿ ಗೋಳಿಪಲ್ಲೆಯಿಂದ ಮಾಡಿದ್ದಾಗಿದ್ದರಿಂದ ಅದು ಕೊಡುಕೊಳ್ಳುವಿಕೆಗೆ ತಕ್ಕುದಲ್ಲ ಎಂಬುದು ಆಕೆಯ ಭಾವನೆಯಾಗಿತ್ತು.

ಇಂಥ ಸನ್ನಿವೇಶದಲ್ಲಿ ಆ ಬಡ ಕೂಲಿ ಹೆಂಗಸರು ಗೌರವ್ವಜ್ಜಿಯನ್ನು ತಮ್ಮ ಜೊತೆ ಊಟಕ್ಕೆ ಕರೆಯುವ ಧೈರ್ಯ ಮಾಡುತ್ತಿರಲಿಲ್ಲ. ನಂತರ ಎಲ್ಲ ಸಹಜಸ್ಥಿತಿಗೆ ಬರುತ್ತಿತ್ತು. ಅವಳ ಗಾಂಭೀರ್ಯ, ಸ್ವಾಭಿಮಾನ ಮತ್ತು ಕರ್ತವ್ಯನಿಷ್ಠೆ ಇಂದಿಗೂ ಆದರ್ಶಗಳಾಗಿ, ಮೌಲ್ಯಗಳಾಗಿ ಎಚ್ಚರಿಸುತ್ತಿವೆ.

(ಕರ್ಚಿಕಾಯಿ)

ಕಸ ತೆಗೆಯಲು ಹೋಗುವಾಗ ನನ್ನ ಗಮನ ಹೆಚ್ಚಾಗಿ ಕರ್ಚಿಕಾಯಿಯ ಮೇಲೆ ಇರುತ್ತಿತ್ತು. ಅದು ಕೂಡ ಹತ್ತರಕಿ ಪಲ್ಲೆಯ ಹಾಗೆ ತಾನೇ ಬೆಳೆಯುವಂತದ್ದು. ಅದಕ್ಕೆ ಮಸಾಲೆ ಹಚ್ಚಿ ಹುರಿದರೆ ವಿಶಿಷ್ಟವಾದ ರುಚಿ ಕೊಡುವುದು. ಪಲ್ಲೆ ಮಾಡಿಯೂ ತಿನ್ನಬಹುದು. ಅದರೊಳಗಿನ ಬೀಜ ಕಹಿ ಅನಿಸಿದರೂ ಖುಷಿ ಕೊಡುವಂಥದ್ದು. ಅವುಗಳನ್ನು ಆಯ್ದುಕೊಳ್ಳುವುದೇ ನನ್ನ ಕೆಲಸವಾಗಿತ್ತು.

ಮಟ್ಟಿ ಹೊಡೆಯುವುದನ್ನು ನೋಡುವುದೇ ಒಂದು ಆನಂದ. ತೋಟಕ್ಕೆ ನೀರುಣಿಸಲು ಬಾವಿಯಿಂದ ನೀರು ಎತ್ತುವ ವ್ಯವಸ್ಥೆ ಇದು. ಬಾವಿಯಿಂದ ನೀರು ಎತ್ತಲು ತೊಗಲಿನಿಂದ ನಿರ್ಮಿಸಿದ ದೊಡ್ಡ ಸೈಜಿನ ಜೋಳಿಗೆಯಂಥ ವಸ್ತುವಿಗೆ ‘ಕಪಲಿ’ ಎನ್ನುತ್ತಾರೆ. ನೀರನ್ನು ಹೊರಹಾಕಲು ತಳದಲ್ಲಿ ಚರ್ಮದ ಕೊಳವೆ ಇರುತ್ತದೆ.

(ಕಪಲಿ)

ಕಪಲಿಯನ್ನು ಹಗ್ಗಕ್ಕೆ ಕಟ್ಟಿರುತ್ತಾರೆ. ಅದರ ಹಗ್ಗದ ಮೊತ್ತೊಂದು ತುದಿಯನ್ನು ರಾಟೆ ಮೂಲಕ ನೊಗಕ್ಕೆ ಕಟ್ಟಿರುತ್ತಾರೆ. ನೀರು ಚೆಲ್ಲುವ ಕೊಳವೆಯ ತುದಿಗೆ ಮತ್ತೊಂದು ಹಗ್ಗವನ್ನು ಕಟ್ಟಿ, ಬಾವಿಕಟ್ಟೆಯ ಅಟ್ಟಲಿನಲ್ಲಿ (ಅಂಗಳದಲ್ಲಿ) ಇರುವ ಉರುಳು ಕೊರಡಿನ ಮೇಲೆ ಹಾಯಿಸಿ, ಅದರ ಇನ್ನೊಂದು ತುದಿಯನ್ನು ನೊಗಕ್ಕೆ ಬಿಗಿಯುತ್ತಾರೆ.

ಬಾವಿ ಕಟ್ಟೆಯ ಅಟ್ಟಲಿಗೆಯ ಎದುರುಗಡೆಯ ಸಮತಟ್ಟಾದ ಇಳಿಜಾರಿನ ಜಾಗಕ್ಕೆ ‘ಬಾರಿ’ ಎಂದು ಕರೆಯುತ್ತಾರೆ. ಎತ್ತುಗಳು ಹಿಂದೆ ಸರಿದು ಮುಂದೆ ಹೋಗಲು ಅವಕಾಶವಿರುವಷ್ಟು ಅದು ಉದ್ದವಾಗಿರುತ್ತದೆ. ಬಾರಿಯ ಮೇಲೆ ಎತ್ತುಗಳು ಹಿಂದೆ ಚಲಿಸಿದಾಗ ಕಪಲಿ ನೀರಲ್ಲಿ ಮುಳಗಿ ತುಂಬುತ್ತದೆ. ಮುಂದೆ ಚಲಿಸುತ್ತ ಬಾವಿಕಟ್ಟೆಯ ಅಟ್ಟಲಿಗೆ ಬಂದಾಗ ಹಗ್ಗಕ್ಕೆ ಕಟ್ಟಿದ ಚಿಣಿ (ಕಟ್ಟಿಗೆ ತುಂಡು) ರಾಟಿಗೆ ತಗುಲುವುದು. ಆಗ ಬ್ರೇಕ್ ಹಾಕಿದಂತಾಗಿ ಎತ್ತುಗಳು ನಿಲ್ಲುವವು. ಆಗ ನೀರು ಕಪಲಿಯಿಂದ ಹೊರಬರುತ್ತದೆ.

ಬಾವಿಕಟ್ಟೆಯಿಂದ ಬಾವಿಯ ನೀರು ಸುಮಾರು 25 ಮೀಟರ್ ಆಳದಲ್ಲಿರುತ್ತದೆ. ಆದ್ದರಿಂದ ಇಳಿಜಾರಾದ ಬಾರಿ ಕೂಡ ಅದಕ್ಕೆ ತಕ್ಕಂತೆ ಉದ್ದವಾಗಿರುತ್ತದೆ.

(ಮಟ್ಟಿಯ ಪಳೆಯುಳಿಕೆ)

ಕಪಲಿಯ ಬದಲಿಗೆ ನೀರು ಎತ್ತುವ ಕಬ್ಬಿಣದ ಚೌಕಾಕಾರದ ದೊಡ್ಡ ಸಾಧನಕ್ಕೆ ‘ಮಟ್ಟಿ’ ಎಂದು ಕರೆಯುತ್ತಾರೆ. ಅದರ ಬಾಯಿ ಹೆಚ್ಚು ಅಗಲವಾಗಿರುತ್ತದೆ. ತಳದ ಮಧ್ಯಭಾಗದಲ್ಲಿ ಆಯತಾಕಾರದ ಕಿಂಡಿ ಇರುತ್ತದೆ. ಅದರ ಮೇಲೆ ಮುಚ್ಚಳವಿರುತ್ತದೆ. ಮಟ್ಟಿ ನೀರಲ್ಲಿ ಮುಳುಗಿದಾಗ ಮುಚ್ಚಳ ತೆಗೆದುಕೊಳ್ಳುವುದು. ತುಂಬಿದ ಮೇಲೆ ಎತ್ತುಗಳು ಜಗ್ಗಿದಾಗ ಮಟ್ಟಿ ಮೇಲೆ ಬರುವುದು. ಆಗ ಮಟ್ಟಿಯ ಒಳಗಿರುವ ನೀರಿನ ಭಾರಕ್ಕೆ ಕಿಂಡಿಯ ಮೇಲಿನ ತಗಡಿನ ಮುಚ್ಚಳ ಮುಚ್ಚಿಕೊಳ್ಳುವುದು. ಈ ಮಟ್ಟಿಯಿಂದಾಗಿ ‘ಬಾರಿ’ಗೆ ‘ಮಟ್ಟಿಬಾರಿ’ ಎಂದು ಕರೆಯುತ್ತಾರೆ.

ಕಪಲಿ ಅಥವಾ ಮಟ್ಟಿಯಿಂದ ಸುರಿದ ನೀರು ಹೌದಿಗೆ (ನೀರಿನ ತೊಟ್ಟಿಗೆ) ಬಂದು ಅಲ್ಲಿಂದ ಕಾಲುವೆಗೆ ಹೋಗುವುದು. ಆ ಕಾಲುವೆ ಮೂಲಕ ತೋಟದ ಮಡಿ (ಪಾತಿ)ಗಳಿಗೆ ನೀರುಣಿಸುವರು. ಮಟ್ಟಿ ಹೊಡೆಯುವಾತ ಖುಷಿಯಿಂದ ಜನಪದ ಹಾಡುಗಳನ್ನು ಹಾಡುತ್ತಿರುತ್ತಾನೆ. ಈಗ ಆ ಕಪಲಿ, ಮಟ್ಟಿ ಮತ್ತು ಆ ಮಟ್ಟಿ ಹೊಡೆಯುವಾಗಿನ ಜನಪದ ಹಾಡುಗಳೆಲ್ಲ ಕಾಲಗರ್ಭ ಸೇರಿ ಅದೆಷ್ಟೋ ದಶಕಗಳಾಗಿವೆ.

ಹಳ್ಳಿಗರ ಪ್ರತಿಯೊಂದು ಕಾಯಕದ ಜೊತೆಗೆ ಹಾಡುಗಳು ಇಲ್ಲವೆ ಸಂಗೀತ ಸಾಧನಗಳಿವೆ. ಕುಟ್ಟುವ, ಬೀಸುವ, ಮಟ್ಟಿ ಹೊಡೆಯುವ, ಹಂತಿಯ ಹಾಡುಗಳು, ಬೆಳೆ ಹಾಳು ಮಾಡುವ ಕಾಡು ಪ್ರಾಣಿಗಳನ್ನು ಓಡಿಸಲು ಬಳಸುವ ಕರಡಿಮಜಲಿನಂಥ ವಾದ್ಯಗಳು, ರಣಭೇರಿಗಳು, ರಣಕಹಳೆಗಳು, ಬಾಲಕಿಯರು ಮೈನೆರೆದಾಗ, ಮದುವೆಯನ್ನು ಗಟ್ಟಿ (ನಿಶ್ಚಿತಾರ್ಥ)ಗೊಳಿಸುವಾಗ ಮದುವೆಯಾಗುವಾಗ, ಗರ್ಭಿಣಿಯಾದಾಗ, ಕೂಸಿಗೆ ಹೆಸರಿಡುವಾಗ ಮುಂತಾದ ಸಂದರ್ಭಗಳಲ್ಲಿ ಹಾಡುವ ಹಾಡುಗಳು ಕ್ರಮೇಣ ಮರೆಯಾಗುತ್ತಿವೆ. ಜನನದಿಂದ ಮರಣದವರೆಗೆ ಎಲ್ಲ ಘಟ್ಟಗಳಲ್ಲಿಯೂ ಹಾಡುಗಳು ಮತ್ತು ಅವುಗಳಿಗೆ ತಕ್ಕ ಸಂಗೀತ ಪರಿಕರಗಳಿದ್ದವು. ಸತ್ತಾಗ ಕೂಡ ನಮ್ಮ ಹಳ್ಳಿಯ ಹೆಣ್ಣುಮಕ್ಕಳು ರಾಗಬದ್ಧವಾಗಿ ಅಳುತ್ತಿದ್ದರು. ನಮ್ಮ ಹಳ್ಳಿಗರಲ್ಲಿ ಬಹಳಷ್ಟು ಜನರು ಬಡವರೇ ಆಗಿದ್ದರು. ಆದರೆ ಗ್ರಾಮೀಣ ಜನಜೀವನದ ನೆನಪಿನಂಗಳ ಬಹಳ ಶ್ರೀಮಂತವಾಗಿದೆ.

(ಕಟ್ಟಿಗೆ ಮಾರಲು ಹಳ್ಳಿಯಿಂದ ನಗರಕ್ಕೆ ಹೋಗುವ ಲಂಬಾಣಿ ಮಹಿಳೆಯರು)

ನನ್ನ ಮನಸ್ಸು ಬಹಳ ಘಾಸಿಗೊಳ್ಳುತ್ತಿದ್ದುದು ನಮ್ಮ ಹಳ್ಳಿ ಬಳಿಯ ತಾಂಡಾದ ಲಂಬಾಣಿ ಮಹಿಳೆಯರ ಕಷ್ಟವನ್ನು ನೋಡಿದಾಗ, ಅವರು ಕುರುಚಲು ಅಡವಿಯಿಂದ ಉರುವಲು ಕಟ್ಟಿಗೆ ಕಡಿದು ಹೊರೆ ಕಟ್ಟಿಕೊಂಡು ಹತ್ತು ಕಿಲೋ ಮೀಟರ್ ದೂರದ ವಿಜಾಪುರಕ್ಕೆ ಹೋಗುತ್ತಿದ್ದರು. ಸಮಯದ ಅಭಾವದಿಂದಾಗಿ ಸುಟ್ಟ ಒಣ ಬಂಗಡೆ ಮೀನು ಮತ್ತು ಭಜಿ ಮುಂತಾದವುಗಳನ್ನು ರೊಟ್ಟಿಯ ಮೇಲೆ ಇಟ್ಟುಕೊಂಡು ರಸ್ತೆಯ ಮೇಲೆ ತಿನ್ನುತ್ತಲೇ ರಭಸದಿಂದ ನಡೆಯುತ್ತಿದ್ದರು. ತಲೆಯ ಮೇಲೆ ಭಾರಹೊತ್ತು ಹೀಗೆ ಅವರು ತುತ್ತಿನಚೀಲ ತುಂಬುತ್ತ ಹೋಗುವುದನ್ನು ನೋಡಿದಾಗ ನನ್ನ ಕಣ್ಣುಗಳಲ್ಲಿ ನೀರಾಡುತ್ತಿತ್ತು.

ಅವರು ನಗರಕ್ಕೆ ಹೋಗಿ ಕಟ್ಟಿಗೆ ಮಾರಿ ಬಂದ ಹಣದಿಂದ ಜೋಳ ಖರೀದಿಸಿ ಬಜಾರದ ಒಂದು ಮೂಲೆಯಲ್ಲಿರುವ ಹಿಟ್ಟಿನ ಗಿರಣಿಯಲ್ಲಿ ತಾಸುಗಟ್ಟಲೆ ಪಾಳಿ ಹಚ್ಚಿ ಬೀಸಿಕೊಂಡು ಗಡಿಬಿಡಿಯಿಂದ ತಾಂಡಾಗೆ ಹೋಗಿ ರೊಟ್ಟಿ ಬಡಿದು, ಮಲಗಿದ ಮಕ್ಕಳನ್ನು ಎಬ್ಬಿಸಿ ಊಟ ಮಾಡಿಸುತ್ತಿದ್ದರು.

ಅಜ್ಜಿಯ ಜೊತೆಗೆ ವಿಜಾಪುರಕ್ಕೆ ಹೋಗುವ ಸಂದರ್ಭಗಳಲ್ಲಿ ಒಂದುಸಲ ಹಿಟ್ಟಿನ ಗಿರಣಿಯಲ್ಲಿ ಇದೇ ರೀತಿಯ ಫಜೀತಿ ಅಗಿತ್ತು. ಆಗ ಲಂಬಾಣಿ ಮಹಿಳೆಯರು ಬಹಳ ವಿಷಾದದಿಂದ ಇದನ್ನೆಲ್ಲ ನನ್ನ ಅಜ್ಜಿಗೆ ಹೇಳುತ್ತಿದ್ದರು. ರಾತ್ರಿಯಾಗಿದ್ದರಿಂದ ಆ ದಿನ ನಾವು ವಿಜಾಪುರದಲ್ಲೇ ನನ್ನ ತಾಯಿಯ ಮನೆಯಲ್ಲಿ ಉಳಿದು ಬೆಳಿಗ್ಗೆ ಎದ್ದು ಹೊರಟೆವು. ನನ್ನ ಅಜ್ಜಿ ಎಲ್ಲಿ ಈ “ಅಪರಿಚಿತರ” ಮನೆಯಲ್ಲಿ ಬಿಟ್ಟು ಹೋಗುತ್ತಾಳೋ ಎಂಬ ಭಯದಿಂದ ನಾನು ನಿದ್ದೆಗಣ್ಣಲ್ಲೇ ಎದ್ದು ಅವಳನ್ನು ನೋಡುತ್ತಿದ್ದೆ. ಆದರೆ ಅಂಥದ್ದೇನೂ ನಡೆಯಲಿಲ್ಲ. ನಾವು ಬೆಳಿಗ್ಗೆ ಬಿಸಿಲೇರುವುದರೊಳಗಾಗಿ ಅಲ್ಲೀಬಾದಿಗೆ ಹೊರಟು ಹೋದೆವು.

(ಚಿತ್ರಗಳು: ಸುನೀಲಕುಮಾರ ಸುಧಾಕರ)