ತೆಲುಗಿನ ಪ್ರಸಿದ್ಧ ಲೇಖಕ ಶ್ರೀರಮಣ ಅವರು 2019ರಲ್ಲಿ ಬರೆದ `ನಾಲುಗೋ ಎಕರಂ’ ಎಂಬ ನೀಳ್ಗತೆಯನ್ನು ಯುವಲೇಖಕ  ಅಜಯ್ ವರ್ಮಾ ಅಲ್ಲೂರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀರಮಣ ಅವರ ‘ಮಿಥುನಂ’ ಕಥೆಯನ್ನು ಕಥೆಗಾರ ವಸುಧೇಂದ್ರ ಅವರು ಕನ್ನಡಕ್ಕೆ ತಂದಾಗ, ಅವರ ಕಥನ ಶೈಲಿಯನ್ನು ಕನ್ನಡದ ಓದುಗರು ಬಹಳ ಮೆಚ್ಚಿಕೊಂಡಿದ್ದರು. ಇದೀಗ ಶ್ರೀರಮಣರ ಮತ್ತೊಂದು ನೀಳ್ಗಥೆಯ ಅನುವಾದವನ್ನು ‘ಛಂದ ಪುಸ್ತಕ’ ಪ್ರಕಟಿಸಿದೆ. ‘ನಾಲ್ಕನೇ ಎಕರೆ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಈ ಕೃತಿಯ ಬಗ್ಗೆ ಅನುವಾದಕ ಅಜಯ್ ವರ್ಮಾ ಅಲ್ಲೂರಿ ಬರೆದ ಮಾತುಗಳು ಇಲ್ಲಿವೆ. 

 

`ನಾಲ್ಕನೇ ಎಕರೆ’ ಶ್ರೀರಮಣರು ತೆಲುಗಿನಲ್ಲಿ ತೀರಾ ಇತ್ತೀಚಿಗೆ (2019) ಬರೆದ `ನಾಲುಗೋ ಎಕರಂ’ ಎಂಬ ನೀಳ್ಗತೆಯ ಕನ್ನಡಾನುವಾದ. ಅವರು ಕೆಲವೇ ಕೆಲವು ಕಥೆಗಳನ್ನು ಬರೆದರೂ ತೆಲುಗಿನ ಮುಖ್ಯ ಕಥೆಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಮೊದಲ ಕಥಾ ಸಂಕಲನ `ಮಿಥುನಂ’ (2000) ಪ್ರಕಟವಾದ ಬಳಿಕ, ಎರಡನೆಯ ಕಥಾ ಸಂಕಲನ `ಸಿಂಹಾಚಲಂ ಸಂಪೆಂಗಲು’ (2021) ಪ್ರಕಟವಾಗುವುದಕ್ಕೂ ಮುನ್ನ ಈ ನೀಳ್ಗತೆ ಪ್ರಕಟವಾಗಿದೆ. ಹಾಗೆ ನೋಡಿದರೆ ಅವರು ಬರೆದ ಬಹುಪಾಲು ಕಥೆಗಳು ನೀಳ್ಗಥೆಗಳೇ. `ನೀಳ್ಗತೆ’ಯು ಅತ್ತ ಕಾದಂಬರಿಯೂ ಅಲ್ಲದ, ಇತ್ತ ಸಣ್ಣಕಥೆಯೂ ಅಲ್ಲದ ಮಧ್ಯಮ ಪ್ರಕಾರ. ಹಾಗೆಂದು ನೀಳ್ಗತೆ ಅಂದರೆ ಕಿರುಕಾದಂಬರಿ ಅಲ್ಲ ಎಂಬ ವಾದವೂ ಇದೆ. ಈ ವಾದವನ್ನು ಗಮನಿಸಿದಾಗ `ನೀಳ್ಗತೆಯು ಕಾದಂಬರಿಯೆಂಬ ಒಂಟೆ ಹಾಕಿದ ಚಿಕ್ಕ ಮರಿಯಲ್ಲ, ಸಣ್ಣ ಕತೆಯೆಂಬ ಹಸು ಹಾಕಿದ ದೊಡ್ಡಕರು’ ಎಂಬ ಜನಪ್ರಿಯ ಹೇಳಿಕೆಯು ನೆನಪಾಗುತ್ತದೆ.

(ಅಜಯ್ ವರ್ಮಾ ಅಲ್ಲೂರಿ)

`ನಾಲ್ಕನೇ ಎಕರೆ’ ತುಂಬಾ ಸರಳವಾಗಿ ಸಾಗುವ ಎರಡು ಕುಟುಂಬಗಳ ಕಥೆ. ಕಾಲ ಓಡುತ್ತಾ ಹೋದಂತೆಲ್ಲಾ ಆಧುನಿಕತೆಯ ಭರಾಟೆಯಲ್ಲಿ ನೆಲದ ನಂಟನ್ನು ಅತಿ ಸುಲಭವಾಗಿ ಕಳೆದುಕೊಳ್ಳುವವರು ಕೆಲವರಾದರೆ, ಅತ್ತ ಹಳೆಯ ಸಂಪ್ರದಾಯಗಳನ್ನು ಬಿಡಲಾಗದೆ, ಇತ್ತ ಆಧುನಿಕತೆಗೆ ಪೂರ್ತಿಯಾಗಿ ತೆರೆದುಕೊಳ್ಳಲಾಗದೆ ಈ ಎರಡರ ನಡುವೆ ಒದ್ದಾಡುವವರು ಇನ್ನೂ ಕೆಲವರು. ಇಂಥವರ ತಾಕಲಾಟವನ್ನು ಚಿತ್ರಿಸಲೆಂದೇ ಈ ಕಥೆಯನ್ನು ಬರೆದಿರುವುದಾಗಿ ಲೇಖಕರು ತಮ್ಮ ಮಾತಿನಲ್ಲಿ ಹೇಳಿದರೂ, ಕಥೆಯನ್ನು ಓದಿದ ಮೇಲೆ ಅದು ಅರ್ಧ ಸತ್ಯವೆನಿಸುತ್ತದೆ. ಏಕಂದರೆ ನಾವಿಂದು ಕಳೆದುಕೊಳ್ಳುತ್ತಿರುವುದು ನೆಲದ ನಂಟನ್ನಷ್ಟೇ ಅಲ್ಲ, ನೆಲದ ಭಾಷೆಯನ್ನೂ ಸಹ. ಅಂಥಾ ನೆಲದ ಭಾಷೆಯನ್ನು ಲೇಖಕರು ಇಲ್ಲಿನ ಸಂಭಾಷಣೆಗಳಲ್ಲಿ, ಸನ್ನಿವೇಶಗಳಲ್ಲಿ ಕಟ್ಟಿಕೊಡಲು ಅದೆಷ್ಟು ಪ್ರಯತ್ನಿಸಿದ್ದಾರೆ ಎಂಬುದು ಕಥೆಯ ಪ್ರತಿ ಸಾಲಲ್ಲೂ ಅರ್ಥವಾಗುತ್ತದೆ. ಜೊತೆಗೆ ಪಲ್ಲಟಗೊಳ್ಳುತ್ತಿರುವ ಗ್ರಾಮ್ಯ ಬದುಕಿನ ಬಗೆಗಿನ ತಾಕಲಾಟದ ಚಿತ್ರಣಕ್ಕಿಂತಲೂ, ಗ್ರಾಮೀಣ ಪರಿಸರದ ದಟ್ಟ ವಿವರಗಳು, ಮರೆಯಾಗುತ್ತಿರುವ ಸಂಪ್ರದಾಯಗಳು, ಹಳೆಯ ವಸ್ತುಗಳು, ನಗರವಾಸಿಗಳಿಗೆ ಗೊತ್ತೇಯಿರದ – ಹಳ್ಳಿಯಲ್ಲಿ ನಡೆವ ಸರ್ವೇಸಾಮಾನ್ಯ ಘಟನೆಗಳನ್ನು ಅತ್ಯಂತ ಸೊಗಸಾಗಿ ಪೋಣಿಸಿದ್ದಾರೆ. ಆ ವಿವರಗಳೇ ಇಲ್ಲಿ ಅಗ್ರಸ್ಥಾನ ಪಡೆದಿವೆ.

ಇಲ್ಲಿ ಹಳೆಯ ಬೇಸಾಯ ಪದ್ಧತಿಗಳ ಅವಸಾನದ ಜೊತೆಜೊತೆಗೆ ದೇವಾಲಯಗಳ ಅವಸಾನವನ್ನೂ ಲೇಖಕರು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೇನೋ ಎಂದು ಕೆಲವಡೆ ಅನಿಸುತ್ತದೆ. `ಪೆದಕಾಪು’ ಪಾತ್ರವು ಬೇಸಾಯ ಪದ್ಧತಿಗಳ ಅವಸಾನಕ್ಕೆ ಸಾಕ್ಷಿಯಾದರೆ, `ಕೃಷ್ಣಸ್ವಾಮಿ’ ಪಾತ್ರವು ದೇವಾಲಯಗಳ ಅವಸಾನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಪ್ರಶಾಂತವಾಗಿದ್ದ ಗ್ರಾಮದೊಳಗೆ ನಗರೀಕರಣ, ಗೋಳೀಕರಣಗಳು ಏಕಾಏಕಿ ಲಗ್ಗೆಯಿಟ್ಟಾಗ, ಅದರ ಪರಿಣಾಮವಾಗಿಯೇ ಸುಶಿಕ್ಷಿತನಾದ ಕಥೆಯ ನಿರೂಪಕ ಮಾಧವಸ್ವಾಮಿ ತನ್ನದೇ ನೆಲಕ್ಕೆ ಮರಳಿದರೆ, ತನ್ನ ನೆಲವನ್ನು ಬಿಟ್ಟಿರಲಾರದೆ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟು ಬಂದ ಸಾಂಬಶಿವರಾವು ತನ್ನ ನೆಲವನ್ನೇ ಕಳೆದುಕೊಳ್ಳುತ್ತಾನೆ. ನೀಳ್ಗತೆಯ ಮೊದಮೊದಲ ಪುಟಗಳಲ್ಲಿ ಕಾಣಸಿಗುವ ಹಾವು-ಹದ್ದುಗಳು, ನಗರೀಕರಣ ಹಾಗೂ ಗೋಳೀಕರಣದ ದುರಂತ ರೂಪಕಗಳಾಗಿ ಪೆದಕಾಪಿನ ಕಣ್ಣ ಬೆಳಕಿನ ಮೂಲಕ ಕೊನೆಯಲ್ಲಿ ಮತ್ತೊಮ್ಮೆ ಕಾಣಸಿಗುತ್ತವೆ.

ಮೇಲಿನ ಎಲ್ಲ ಮಾತುಗಳಿಗಾಚೆ ಈ ನೀಳ್ಗತೆಯಲ್ಲಿ ಮುಖ್ಯವಾಗಿ ಎದ್ದು ಕಾಣುವ ತೊಡಕೆಂದರೆ ನಿರೂಪಣಾ ತಂತ್ರ. ಬಹುಪಾಲು ಭಾಗಗಳಲ್ಲಿ ಉಪನ್ಯಾಸಕನಾದ ಮಾಧವಸ್ವಾಮಿಯೇ ಕಥೆಯನ್ನು ನಿರೂಪಿಸಿದರೆ, ಎರಡು-ಮೂರು ಕಡೆ ಲೇಖಕ ನಡುವೆ ನುಸುಳಿ ಕಥೆ ನಿರೂಪಣೆಯನ್ನು ತಮ್ಮ ನೆತ್ತಿಗೆ ಎತ್ತಿಕೊಳ್ಳುತ್ತಾರೆ. ಅದಲ್ಲದೆ ಕಥೆಯು ಕೆಲವು ಕಡೆ ನೇರಾನೇರ ಕಥನದಂತೆ ಸಾಗಿದರೆ, ಇನ್ನೂ ಕೆಲವಡೆ ತೀರಾ ಲಲಿತಪ್ರಬಂಧದ ಮಾದರಿಯಲ್ಲಿ ಸಾಗುತ್ತದೆ. ಪಾತ್ರಗಳ ಮನಸ್ಥಿತಿಯನ್ನು ಇನ್ನಷ್ಟು ಸಾವಧಾನದಿಂದ ಚಿತ್ರಿಸಬಹುದಿತ್ತು ಎನಿಸುತ್ತದೆ. ಚಿಟ್ಟೆಮ್ಮ, ಪೆದಕಾಪಮ್ಮ, ಕೃಷ್ಟಸ್ವಾಮಿಯ ಮಡದಿಯ ಬಗೆಗಿನ ಹೆಚ್ಚಿನ ವಿವರುಗಳು ಕಥೆಯಲ್ಲಿ ಅಲಭ್ಯವಾಗಿವೆ. ಆ ಒಳವಿವರಗಳು ಇದ್ದಲ್ಲಿ ಈ ಪಾತ್ರಗಳನ್ನು ಮತ್ತಷ್ಟು ಆಳಕ್ಕಿಳಿದು ನೋಡಲು ಸಾಧ್ಯವಾಗುತ್ತಿತ್ತು.

ಈಗ್ಗೆ ಮೂರು-ನಾಲ್ಕು ತಿಂಗಳಿನ ಹಿಂದೆ ವಸುಧೇಂದ್ರರು ಈ ಪುಸ್ತಕದ ಬಗ್ಗೆ ಹೇಳಿ, ಅದನ್ನು `ಛಂದ ಪುಸ್ತಕ’ಕ್ಕಾಗಿ ಅನುವಾದಿಸಲು ಸಾಧ್ಯವೇ ಎಂದು ಕೇಳಿದಾಗ, ನನಗೆ ಉತ್ತರ ನೀಡಲು ಅನೇಕ ದಿನಗಳೇ ಹಿಡಿಯಿತು. ಈ ಹಿಂದೆ ಅವರೇ ಕನ್ನಡೀಕರಿಸಿದ ಶ್ರೀರಮಣರ `ಮಿಥುನ’ ಕೃತಿಯು ಕನ್ನಡದಲ್ಲಿ ಆರೇಳು ಮುದ್ರಣಗಳನ್ನು ಕಂಡಿತಲ್ಲದೆ, ನಾಲ್ಕು ಬೇರೆ ಬೇರೆ ತಂಡಗಳಿಂದ ನಾಟಕವಾಗಿಯೂ ಪ್ರದರ್ಶನಗೊಂಡು ದೊಡ್ಡ ಯಶಸ್ಸನ್ನೇ ಪಡೆಯಿತು. ಅಂಥಾ `ಮಿಥುನ’ದ ಕಥೆಗಳೆದರು ಈ ನೀಳ್ಗತೆಯು ನನಗೆ ಸ್ವಲ್ಪ ಸಪ್ಪೆಯಾಗಿ ತೋರಿತಾದರೂ ಕಥೆಯ ಭಾಷೆ ನನ್ನನ್ನು ಬಹುವಾಗಿ ಸೆಳೆಯಿತು. ದಟ್ಟವಾದ ಗ್ರಾಮ್ಯ ಭಾಷೆಯೊಂದಿಗೆ, ತಿಳಿಹಾಸ್ಯ ಬೆರೆಸಿ ಹೇಳುವ ಶ್ರೀರಮಣರ ಶೈಲಿ ವಿಭಿನ್ನವಾದುದು. ಇದಲ್ಲದೆ ನಮ್ಮದೂ ರೈತಾಪಿ ಕುಟುಂಬವೇ ಆದ್ದರಿಂದ ಕಥೆಯಲ್ಲಿ ಬರುವ ಹಲವಾರು ವಿವರಗಳು ನನ್ನನ್ನು ಕಥೆಯ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದವು.

(ಶ್ರೀರಮಣ)

ಹೀಗಿದ್ದೂ ನಾನಿದನ್ನು ಕನ್ನಡಕ್ಕೆ ಸಶಕ್ತವಾಗಿ ಅನುವಾದಿಸಬಲ್ಲೆನೆ ಎಂಬ ಭಯ ಅನುವಾದ ಮಾಡಿ ಮುಗಿಸುವವರೆಗೂ ನನ್ನನ್ನು ತೀವ್ರವಾಗಿ ಕಾಡುತ್ತಲೇಯಿತ್ತು. ಭಯಕ್ಕೆ ಕಾರಣ ಈ ಕೃತಿಯ ಅನುವಾದಾತೀತ ಅಂಶಗಳು. ಯಾವುದೇ ಅನುವಾದಕ ಭಾಷಿಕ ಅನುವಾದಾತೀತತೆ ಹಾಗೂ ಸಾಂಸ್ಕೃತಿಕ ಅನುವಾದಾತೀತತೆಗಳ ವಿರುದ್ಧ ಸೆಣಸಾಡಲೇಬೇಕು. ಈ ಸೆಣಸಾಟ ಕೃತಿಯಿಂದ ಕೃತಿಗೆ, ಅನುವಾದಕನಿಂದ ಅನುವಾದಕನಿಗೆ ಬೇರೆ-ಬೇರೆಯೇ ಆಗಿರುವುದು. ಈ ಅನುವಾದಾತೀತತೆಯನ್ನು ಹಂತಹಂತವಾಗಿ ಜಯಿಸುತ್ತಾ ಹೋದಾಗ ಮನಸ್ಸು ಹಗುರಾಗತೊಡಗಿತು.

ಈ ನೀಳ್ಗತೆಯ ಉದ್ದಕ್ಕೂ ಬರುವ `ಪೆದಕಾಪು’ ಎಂಬ ಪಾತ್ರದ ನಿಜನಾಮ ರಾಘವಯ್ಯ. `ಪೆದಕಾಪು’ ಪದದ ಪದಶಃ ಅನುವಾದ ದೊಡ್ಡರೈತ. ಕನ್ನಡದಲ್ಲಿ `ಹಿರೇಗೌಡ’ ಇದ್ದ ಹಾಗೆ. ಅದೊಂದು ಅಂಕಿತ ನಾಮವೇನೋ ಎನ್ನುವಷ್ಟರ ಮಟ್ಟಿಗೆ ಲೇಖಕರು ಆ ಹೆಸರನ್ನು ಕಥೆಯಲ್ಲಿ ಬಳಸಿದ್ದಾರೆ. ಕನ್ನಡ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು `ಪೆದಕಾಪು’ ಪದವನ್ನು `ಹಿರೇಗೌಡ’ ಮಾಡಿಬಿಟ್ಟರೆ, `ರಾಘವಯ್ಯ’ ಎಂಬ ಹೆಸರೇ ಅರ್ಥಹೀನವಾಗುತ್ತದೆ. ಆಗ ರಾಘವಯ್ಯ ಹೆಸರನ್ನು, ರಾಘೇಗೌಡವೆಂದೂ, ಸಾಂಬಶಿವರಾವು ಹೆಸರನ್ನು ಶಿವನಗೌಡ ಎಂದೂ ಬದಲಿಸಬೇಕಾಗುತ್ತದೆ. ಈ ಹಿಂದೆ ತೇಜಸ್ವಿಯವರ `ಕೃಷ್ಣೇಗೌಡನ ಆನೆ’ಯನ್ನು ತೆಲುಗಿಗೆ ಅನುವಾದಿಸಿದ ಶಾಖಮೂರಿ ರಾಮಗೋಪಾಲರು `ಗೌಡ’ ಪದವನ್ನು `ರೆಡ್ಡಿ’ಯಾಗಿಸಿ `ಕೃಷ್ಣಾರೆಡ್ಡಿಗಾರಿ ಏನುಗು’ ಎಂದು ಶೀರ್ಷಿಕೆ ಕೊಟ್ಟಿದ್ದರು. ಅದು ಅವರಿಗೆ ಬಿಟ್ಟಿದ್ದು. ಆದರೆ ಮೂಲ ಕೃತಿಯೊಳಗಿನ ನಾಮಪದಗಳನ್ನು ಅನುವಾದಿಸುವುದೋ, ಬದಲಿಸುವುದೋ ನನಗೆ ಇಷ್ಟವಿಲ್ಲ. ಹಾಗಾಗಿ ಪೆದಕಾಪನ್ನು ಅನುವಾದಲ್ಲಿಯೂ `ಪೆದಕಾಪು’ ಎಂದೇ ಉಳಿಸಿಕೊಂಡಿದ್ದೇನೆ.

ಈ ಕೃತಿಯಲ್ಲಿ ಶ್ರೀರಮಣರು ಬಳಸಿದ ಭಾಷೆ ಗುಂಟೂರು ಸೀಮೆಯ ತೆನಾಲಿ ಪ್ರಾಂತದ್ದು. ನಾನು ಅನುವಾದದಲ್ಲಿ ನನ್ನ ನೆಲದ ಭಾಷೆಯಾದ ರಾಯಚೂರು ಪ್ರಾಂತದ ಆಡುಮಾತನ್ನು ಬಳಸಿದ್ದೇನೆ. ಒಂದು ವೇಳೆ ನಾನಲ್ಲದೆ ಕರ್ನಾಟದ ಬೇರೆ ಬೇರೆ ಪ್ರಾಂತದವರು ಇದನ್ನು ಅನುವಾದಿಸಿದರೆ, ಇದೇ ಕಥೆಯು ನಮಗೆ ಮಲೆನಾಡು ಕನ್ನಡ, ಮೈಸೂರು-ಮಂಡ್ಯದ ಕನ್ನಡ, ಕೋಲಾರ ಕನ್ನಡ, ಕಲ್ಬುರ್ಗಿ ಕನ್ನಡ – ಹೀಗೆ ಬೇರೆ ಬೇರೆ ಉಪಭಾಷೆಗಳಲ್ಲಿ ಓದಲು ಸಿಗುತ್ತದೆ. ಆಗ ಈ ಪಠ್ಯಗಳ `ತೌಲನಿಕ ಅನುವಾದ’ ಎಷ್ಟೊಂದು ಕುತೂಹಲಕಾರಿ.

`ನಾಲ್ಕನೇ ಎಕರೆ’ ನನ್ನ ನಾಲ್ಕನೇ ಅನುವಾದ. ನಾನು ಇದುವರೆಗೂ ಮಾಡಿದ ಅನುವಾದಗಳಿಗಿಂತ ಈ ಅನುವಾದ ಸುಲಭವಾಗಿರಲಿಲ್ಲ. ಹಾಗೆ ನೋಡಿದರೆ ಅನುವಾದದ ಕೆಲಸವೇ ಸುಲಭವಲ್ಲ. ಎಡ್‌ವರ್ಡ್ ಫಿಟ್’ಜೆರಾಲ್ಡ್, ಪರ್ಷಿಯನ್ ಕವಿ ಉಮರ್ ಖಯ್ಯಾಮಿನ ರುಬಾಯಿಗಳನ್ನು ಇಂಗ್ಲೀಷಿಗೆ ಅನುವಾದಿಸಿ, ಅದಕ್ಕೆ ಬರೆದ ಪ್ರಸಿದ್ಧ ಮುನ್ನುಡಿಯಲ್ಲಿ `ಸತ್ತ ಹದ್ದಿಗಿಂತಲೂ, ಜೀವಂತ ಗುಬ್ಬಿ ಮೇಲು’ ಎಂದು ಅಭಿಪ್ರಾಯಪಟ್ಟಿದ್ದಾನೆ. ನನ್ನ ಅನುವಾದ ನಿಮಗೆ ಜೀವಂತ ಗುಬ್ಬಿಯಾಗಿ ತೋರಿದರೆ ಖುಷಿಯೇ. ಒಂದು ವೇಳೆ ಸತ್ತ ಹದ್ದಿನ ಹಾಗೆ ತೋರಿದರೆ, ಅದಕ್ಕೆ ಮರಳಿ ಜೀವ ತುಂಬುವ ಕಲೆಯೂ ಈ ಅನುವಾದಕನ ಕೈಯಲ್ಲೇ ಇದೆ.

(ಕೃತಿ: ‘ನಾಲ್ಕನೇ ಎಕರೆ’ (ಅನುವಾದಿತ ನೀಳ್ಗತೆ), ಮೂಲ ಲೇಖಕರು: ಶ್ರೀರಮಣ, ಕನ್ನಡಕ್ಕೆ: ಅಜಯ್ ವರ್ಮಾ ಅಲ್ಲೂರಿ, ಪ್ರಕಾಶಕರು: ಛಂದ ಪ್ರಕಾಶನ, ಬೆಲೆ: 100/-)