ಹೀಗೆಲ್ಲ ನಡೆಯದಿದ್ದರೆ ನಿತ್ಯ ಬದುಕು ಏಕತಾನವಾಗುತ್ತೇನೊ. ಆ ದಿನ ಅದೆಷ್ಟು ಸುಡು ಬಿಸಿಲು ಇತ್ತೆಂದರೆ, ವಾರದಿಂದ ಕರಿ ಮೋಡ, ಆಗೀಗ ಮಳೆ, ಜಡತ್ವ ಹುಟ್ಟಿಸಿದ ಹವೆಯಿತ್ತು ಅಂದರೆ ನಂಬಲು ಸಾಧ್ಯವಿರಲಿಲ್ಲ. ಬಿಸಿಲ ಬೇಗೆಯಿದ್ದಾಗ ಹನಿ ಮಳೆ ಬಿದ್ದರೆ, ದಿನಗಟ್ಟಲೆ ಕವಿದ ಕಪ್ಪು ಮೋಡ, ಸುರಿವ ಮಳೆಗೆ ಬಿಡುವು ನೀಡುವಂತೆ ಒಂದು ರೇಖೆ ಬಿಸಿಲು ಮೂಡಿದರೂ ನಮಗೆ ಹೊಸ ಚೇತನ ಮೂಡಿದಂತಾಗುತ್ತದೆ. ಹಾಗೆಯೇ ಆಯಿತು ಆ ದಿನ. ಲಗುಬಗೆಯಿಂದ ಕೆಲಸಗಳನ್ನು ಮುಗಿಸಿ, ಎರಡನೆ ಮಹಡಿಯಿಂದ ಕೆಳಗೆ ರಸ್ತೆಯ ಬದಿಗಳಲ್ಲಿ ಬೆಳೆದಿರುವ ಹೆಮ್ಮರಗಳನ್ನು ನೋಡುತ್ತಿದ್ದೆ. ಹೀಗೆ ಬಿಸಿಲು ಮಳೆಗಳ ಆಟ ನಡೆಯುತ್ತಿರುವಾಗ ರಸ್ತೆ ನೋಡುತ್ತಾ ನಿಲ್ಲುವುದು ನನಗೆ ಬಹಳ ಪ್ರಿಯವಾದ ಕೆಲಸ. ಮಳೆಯಿಂದ ತೊಯ್ದ ಮರಗಿಡಗಳು ಆಗತಾನೆ ಮಿಂದು ಬಂದಂತೆ ಶುಭ್ರವಾಗಿದ್ದವು. ನಮ್ಮ ಹಿತ್ತಲಿನ ಮೂಲೆಯಲ್ಲಿರುವ ಪುಟ್ಟ ಸೀಬೆಮರದಲ್ಲಿ ಕಾಯಿಗಳು ಬಿಟ್ಟಿದ್ದವು. ನಾಲ್ಕೈದು ಕಾಯಿಗಳು ಬಲಿತಿದ್ದವು. ಇನ್ನೂ ಅವು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಬಿದ್ದಿದ್ದರೆ ಇರುತ್ತಿರಲಿಲ್ಲ, ಬಿಡಿ. ಅವನ್ನು ಕಿತ್ತರೆ ಹೇಗೆ ಎಂದು ಅನಿಸಿತು. ಸೀಬೆಗಿಡಕ್ಕೆ ನೀರು-ಗೊಬ್ಬರದ ಉಪಚಾರ ಮಾಡುವವರು ನೆಲ ಹಂತದ ಮನೆಯವರು. ಸುಮ್ಮನಾದೆ.

ದೂರದಲ್ಲಿ ಯಾರೋ ಕೂಗುತ್ತಿರುವುದು ಕೇಳಿತು. ಕಿವಿಗೊಟ್ಟು ಆಲಿಸಿದೆ. ಒಂದು ಕ್ಷಣ ಕೂಗು, ಮತ್ತೊಂದು ಕ್ಷಣ ಮೌನ ನಡೆದೇ ಇತ್ತು. ಹತ್ತು -ಹದಿನೈದು ನಿಮಿಷದಲ್ಲಿ ಧ್ವನಿ ಹತ್ತಿರದಲ್ಲೆ ಕೇಳಿಸಿತು. ನಾಲ್ಕು ಹುಡುಗರು ಒಟ್ಟಾಗಿ ಕೂಗಿಕೊಂಡು ಅಪಾರ್ಟುಮೆಂಟುಗಳ ಎದುರು ನಿಲ್ಲುತ್ತಿದ್ದರು. ಅವರು ಏನು ಹೇಳುತ್ತಿದ್ದರು ಎಂದು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಅಪಾರ್ಟುಮೆಂಟಿನ ಎದುರಿಗೂ ಬಂದರು. ಹುಡುಗರು ಹತ್ತು ವರ್ಷ ವಯಸ್ಸಿನೊಳಗಿನವರು. ಅವರ ಮುಖ ಬಾಡಿದಂತೆ ಕಾಣುತ್ತಿತ್ತು. ನಾನು ನೋಡುತ್ತಿರುವುದು ಅವರಿಗೆ ಕಾಣುತ್ತಿರಲಿಲ್ಲ. ರಸ್ತೆ ಬದಿಯ ಮರ ಅಡ್ಡವಿತ್ತು. ತುಂಬ ಹಸಿವೆ, ಏನಾದರು ತಿನ್ನಲು ಕೊಡುವಂತೆ ಹುಡುಗರು ಕೇಳುತ್ತ ಅಪಾರ್ಟುಮೆಂಟನ್ನು ನೋಡುತ್ತ ನಿಂತರು.

ಹುಡುಗರಿಗೆ ಎಲ್ಲೂ ಏನೂ ಸಿಕ್ಕಿರಲಿಲ್ಲವಿರಬೇಕು. ಸ್ವಲ್ಪ ಹಟದಲ್ಲಿಯೇ ನಿಂತಿರುವಂತೆ ಕಾಣುತ್ತಿತ್ತು. ಎಲ್ಲರೂ ಒಟ್ಟಿಗೆ ಒಂದೇ ರಾಗದಲ್ಲಿ ‘ತಿನ್ನಕ್ಕೆ ಏನಾದ್ರು ಕೊಡಿ… ಅಸಿವಾಯ್ತಿದೆ…’ ಎಂದು ಅಪಾರ್ಟುಮೆಂಟನ್ನೆ ಕೇಳುತ್ತಿರುವಂತೆ ಕೂಗುತ್ತಿದ್ದರು. ಹೀಗೆ ಕೇಳುವ ನೆಪದಲ್ಲಿ ನಿಂತುಕೊಂಡು, ಮತ್ತೇನಾದರು ಕದ್ದುಕೊಂಡು ಹೋದರೆ ಎಂಬ ಸಂಶಯದಿಂದ, ನಾನು ಅವರಿಗೆ ಅಲ್ಲಿಂದ ಹೋಗಲು ಹೇಳಿದೆ. ಧ್ವನಿ ಎಲ್ಲಿಂದ ಬರುತ್ತಿದೆ ಎಂದು ಬಗ್ಗಿ, ಎದ್ದು ನೋಡಿ, ಕೊನೆಗೆ ನನ್ನನ್ನು ಕಂಡಾಗ ಮಕ್ಕಳು ಹೊಟ್ಟೆ ಹಸಿಯುತ್ತಿದೆ ಎಂದು ಕೈ ಸನ್ನೆ ಮಾಡಿ, ಏನಾದರು ತಿನ್ನಲು ಕೊಡುವಂತೆ ಮತ್ತೆ ರಾಗ ಎಳೆದರು. ಈ ನಾಲ್ಕು ಹುಡುಗರಿಗೂ ಒಂದೊಂದು ಮುಷ್ಟಿ ಕೊಡುವಷ್ಟು ನನ್ನ ಮನೆಯಲ್ಲಿ ಅನ್ನವಿತ್ತು. ಕೊಡುವ ಆಲೋಚನೆಯೇನೊ ಥಟ್ಟನೆ ಮೂಡಿತು. ಆದರೂ ನಾನು ಅಲುಗಾಡದೆ ನಿಂತಿದ್ದೆ. ಏನು ಅನಿಸಿತೊ, ನನಗೇ ಗೊತ್ತಾಗಲಿಲ್ಲ. ಬಡಬಡಿಸಿದೆ: ‘ಹೀಗೆ ಊಟದ ಹೊತ್ತಿಗೆ ಬಂದು ಭಿಕ್ಷೆ ಬೇಡಬಾರದು. ಯಾವತ್ತೂ ಕಷ್ಟಪಟ್ಟು ಕೆಲಸ ಮಾಡಬೇಕು. ನಾವು ತಿನ್ನುವ ಅನ್ನದಲ್ಲಿ ನಮ್ಮ ಶ್ರಮವಿರಬೇಕು. ಎಲ್ಲಾದರು ಕೆಲಸ ಮಾಡಿ, ಹೋಗಿ’ ಅವರಿಗೆ ಒಂದು ಮಾತು ಅರ್ಥವಾದದ್ದು ಸ್ಪಷ್ಟವಾಗಿತ್ತು. ‘ನೀವು ಕೆಲಸ ಕೊಡಿ ಮಾಡ್ತೀವಿ. ನಮ್ಗೆ ಅಸಿವು….’ ದೀನತೆಯಿಂದ ಕೇಳಿದರು. ನನಗೆ ಏನು ಹೇಳಲು ಗೊತ್ತಾಗಲಿಲ್ಲ.

ಹಿಂದೆ ಹೀಗೆ ಬಂದಿದ್ದ ಹುಡುಗರಿಗೆ ಸಣ್ಣ ಕೆಲಸ ಹೇಳಿ, ಕಾಫಿ-ತಿಂಡಿ ಕೊಟ್ಟಿದ್ದೆ. ಮರು ದಿನ ಬೆಳಿಗ್ಗೆ ನಮ್ಮ ನೀರಿನ ಮೀಟರು ಮಾಯವಾಗಿತ್ತು. ಪೊಲೀಸರಿಗೆ ದೂರು ನೀಡಿ, ಹೊಸ ಮೀಟರು ಕೊಡುವಂತೆ ಜಲಮಂಡಲಿಗೆ ಅರ್ಜಿ ಕೊಟ್ಟು, ರೂ. ೮೫೦ ಕಟ್ಟಿ ಬಂದದ್ದು ನೆನಪಾಯಿತು. ನಾನು ಏನಾದರು ಕೆಲಸ ಹೇಳಬಹುದು ಎನ್ನುವ ನಿರೀಕ್ಷೆಯಲ್ಲಿ ಹುಡುಗರು ಕತ್ತು ಎತ್ತಿ ನನ್ನನ್ನೆ ನೋಡುತ್ತಿದ್ದರು. ಹಿತ್ತಲಲ್ಲಿ ಬೆಳಿದಿದ್ದ ಕಳೆ ಗಿಡಗಳನ್ನು ಕಿತ್ತು ಕೊಡುವುದಾಗಿ ಹೇಳಿದರು. ನಾನು ಮುಂದೆ ಹೋಗಲು ಹೇಳಿದೆ. ಹುಡುಗರು ನಿಂತೇ ಇದ್ದರು. ಸೀಬೆಕಾಯಿ ಕೊಯ್ದು ಕೊಳ್ಳಲು ಹೇಳಿದರೆ… ಹುಡುಗರು ಗಿಡವನ್ನೆ ಬೋಳಿಸಿ ಇಟ್ಟಾರು! ನಾನೇ ಹೋಗಿ ಆ ದೋರಗಾಯಿಗಳನ್ನು ಕಿತ್ತು ಮಕ್ಕಳಿಗೆ ಕೊಟ್ಟರೆ…ಕೆಳಗಿನ ಮನೆಯವರು ನನಗೆ ಏನೂ ಹೇಳುವುದಿಲ್ಲ… ಅದೂ ಗೊತ್ತು. ಆದರೂ ನಾನು ಹೆಜ್ಜೆ ಕದಲಿಸಲಿಲ್ಲ. ಕೃಷ್ಣಾಷ್ಟಮಿ ಎಂದು ಪಕ್ಕದ ಮನೆಯವರು ಕೊಟ್ಟಿದ್ದ ತಿಂಡಿ ಪ್ಯಾಕೇಟು ಹಾಗೇ ಇತ್ತು. ಮಕ್ಕಳು ತಿಂದುಕೊಳ್ಳಲಿ, ಏನೂ ಕೊಡದೆ ಇರುವುದಕ್ಕಿಂತ ವಾಸಿ ಅನಿಸಿತಾದರೂ ಸುಮ್ಮನೆ ನಿಂತೆ.

ಮಕ್ಕಳು ಆಸೆಯಿಂದ ನನ್ನನ್ನೆ ನೋಡುತ್ತಿದ್ದರು. ಇದು ಹಸಿವೆಯ ನಾಟಕವಲ್ಲ ಎಂದು ನನಗೆ ಸ್ಪಷ್ಟವಾಗುತ್ತಿತ್ತು. ಒಬ್ಬ ಹುಡುಗನಂತು ದುಃಖದಿಂದ ಏನಾದರು ತಿನ್ನಲು ಕೊಡುವಂತೆ ಯಾಚಿಸಿದ. ಕೈ ಅಳತೆ ದೂರದಲ್ಲೆ ನಮ್ಮ ಎರಡು ಬೀದಿ ನಾಯಿಗಳಿಗೆ ಸಂಜೆಗೆ ಕೊಡಲೆಂದು ತಂದ ಒಂದು ಪೌಂಡು ಬ್ರೆಡ್ಡು ಇತ್ತು. ಅದನ್ನೆ ಕೊಟ್ಟರಾಯಿತು ಅಂದುಕೊಂಡೆ. ಅದ್ಯಾಕೊ ನಾನು ಒಳಗೇ ಕ್ರೂರವಾಗುತ್ತಿದ್ದೆ. ಬ್ರೆಡ್ ಕಡೆ ಕೈ ಸರಿಯುವುದು ಹೋಗಲಿ, ಅತ್ತ ತಿರುಗಿಯೂ ನೋಡಲಿಲ್ಲ. ಹದಿನೈದು- ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿ ನೀರಿಗೆ ಕಷ್ಟವಿದ್ದಾಗ, ಕೂಲಿ ಹುಡುಗರಿಬ್ಬರು ಕೆಳಗೆ ಕೊಳವೆ ಬಾವಿಯಿಂದ ಹತ್ತು ರೂಪಾಯಿಗೆ ಹತ್ತು ಬಿಂದಿಗೆ ನೀರು ತಂದು ಕೊಟ್ಟಿದ್ದರು. ಹೋಗುವಾಗ ನಾನು ಮೇಜಿನ ಮೇಲೆ ಇಟ್ಟಿದ್ದ ಪರ್ಸ್ ಹಾರಿಸಿಬಿಟ್ಟಿದ್ದರು. ಈಗಲೂ ಕೆಲಸ ಕೊಟ್ಟು ಹೀಗೆ ಏನಾದರು ಸಂಭವಿಸಿದರೆ…. ನನ್ನ ಧ್ವನಿಯೂ ಒರಟಾಗುತ್ತಿತ್ತು. ‘ಕೆಲಸವೂ ಇಲ್ಲ, ಏನೂ ಇಲ್ಲ; ಹೋಗಿ’ ಜೋರಾಗಿಯೇ ಹೇಳಿದೆ. ನನ್ನ ಒರಟು ಧ್ವನಿಗೆ ನಾನೇ ತಬ್ಬಿಬ್ಬಾದೆ. ಹುಡುಗರು ನಿಧಾನವಾಗಿ ಮುಂದೆ ಹೋದರು. ಯಾಚಿಸುತ್ತಿದ್ದ  ಹುಡುಗ ಅಳುತ್ತಿದ್ದ. ನಾನು ಕಲ್ಲಿನಂತೆ ನಿಂತು ಹುಡುಗರು ಎತ್ತ ಹೋಗುವರೆಂದು ನೋಡುತ್ತಿದ್ದೆ. ನಮ್ಮ ಪಕ್ಕದ ಅಪಾರ್ಟುಮೆಂಟಿನಲ್ಲೂ ಹೀಗೆ ಆಗಿರಬೇಕು. ಏನೂ ಸಿಗದ ಹುಡುಗರು ಅಲ್ಲಿಂದಲೂ ಮುಂದೆ ಹೋದರು. ರಸ್ತೆ ತುದಿಯಲ್ಲಿ ತುಂಬಿದ್ದ ಕಸದ ತೊಟ್ಟಿಯ ಎದುರು ನಿಂತು, ಒಳಗಿದ್ದ ನಾಯಿಗಳನ್ನು ಓಡಿಸುತ್ತಿದ್ದರು.

ನನಗೆ ಬಹಳವೇ ಆಯಾಸವಾಗುತ್ತಿತ್ತು. ವಿಷಣ್ಣತೆ ಆವರಿಸಿಕೊಳ್ಳತೊಡಗಿತು. ಮೂವತ್ತೆರಡು ವರ್ಷಗಳ ಹಿಂದೆ ನಾನು ಕಚೇರಿ ಕೆಲಸದ ಮೇಲೆ ಪರ ಊರಿಗೆ ಹೋದಾಗ, ಆಕಸ್ಮಿಕವಾಗಿ ಕೈಯಲ್ಲಿ ಕಾಸಿಲ್ಲದೆ ಹಸಿವೆಯ ಕ್ರೌರ್ಯವನ್ನು ಅನುಭವಿಸಿದ ಘಟನೆ ನೆನಪಾಯಿತು. ನಾಲ್ಕು ದಿನಗಳ ಸತತ ಉಪವಾಸದಿಂದ ನರಳಿ ಹೋಗಿದ್ದ ನನಗೆ, ಆ ಹೊತ್ತಿನಲ್ಲಿ ಯಾವ ವಾದ(ಇಸಂ)ಗಳು, ಆದರ್ಶ, ಸಿದ್ಧಾಂತಗಳು ಮುಖ್ಯವೆನಿಸಲೇ ಇಲ್ಲ. ಮೊದಲು ಹೊಟ್ಟೆಗೆ ಏನಾದರು ಬೇಕು ಎಂದು ತಡಕಾಡಿದ್ದಾಯಿತು. ಅಲ್ಲಿನ ಕಚೇರಿಯ ಕಸದ ತೊಟ್ಟಿಯಲ್ಲಿ ಕಾಗದ ಚೂರುಗಳು, ಬೇಡದ ಪೇಪರುಗಳು ಬಿಟ್ಟರೆ ಏನೂ ಇರಲಿಲ್ಲ. ಸಣ್ಣದೊಂದು ಆಸೆಯಿಂದ ಕಸದ ತೊಟ್ಟಿಯೊಳಗಿದ್ದ ಕಾಗದಗಳನ್ನೆಲ್ಲ ಎಳೆದು ಹಾಕಿದಾಗ ಸಿಕ್ಕಿದ್ದು ಒಣಗಿ ಕಲ್ಲಿನಂತಿದ್ದ ಒಂದು ಬನ್ನು. ಅದನ್ನು ಎತ್ತಿ, ತೊಳೆದು ನೀರಿನಲ್ಲಿ ನೆನಸಿಟ್ಟು ತಿಂದಿದ್ದೆ. ಹಸಿವೆ ಅಂದರೆ ಕ್ರೌರ್ಯ ಎಂದು ಅನಿಸಿಹೋಗಿತ್ತು. ಕಸದ ತೊಟ್ಟಿಗೆ ಇಳಿದ ಹುಡುಗ ಸ್ವಲ್ಪ ಹೊತ್ತಿಗೆ ಕೈಯಲ್ಲಿ ಪ್ಲಾಸ್ಟಿಕ್ ಕವರು ಹಿಡಿದು ಹೊರಗೆ ಬಂದ. ಉಳಿದ ಮೂವರು ಅವನನ್ನು ಸುತ್ತುವರೆದಿದ್ದರು.

ನನಗೆ ಮತ್ತೆ ಅತ್ತ ನೋಡಲಾಗಲಿಲ್ಲ. ಕುರ್ಚಿಯಲ್ಲಿ ಕುಸಿದೆ. ನಾಲ್ವರು ಸಣ್ಣ ಹುಡುಗರು. ಅವರಿಗೆ ಹೊಟ್ಟೆ ತುಂಬುವಷ್ಟು ಅಲ್ಲದಿದ್ದರೂ ಸ್ವಲ್ಪವಾದರು ಕೊಡುವ ಶಕ್ತಿ ನನಗಿತ್ತು. ಕೊಡಲಿಲ್ಲ. ಕೊಡಲಿಲ್ಲ ಯಾಕೆಂದು ಸಮರ್ಥಿಸಿಕೊಳ್ಳಲೂ ನನ್ನಲ್ಲಿ ಉತ್ತರವಿತ್ತು. ಸಮರ್ಥನೆಯ ನಡು-ನಡುವೆ ನನ್ನ ಉದಾರತೆಯನ್ನು ಹೇಳಿಕೊಳ್ಳಲು ಧಾರಾಳ ಅವಕಾಶವಿತ್ತು. ಮನಸ್ಸಲ್ಲಿ ನಾನು ಮಾಡಿದ್ದು ಇದೇ ಆಗಿತ್ತು. ನನ್ನನ್ನು ನುಂಗಿ ಹಾಕುವಂತೆ ವಿಷಣ್ಣತೆ ಗಾಢವಾಗುತ್ತಿತ್ತು. ವಿಷಣ್ಣತೆಯನ್ನು ಸ್ವಲ್ಪ ಕೆದಕಿದರೂ ಸತ್ಯ ಇಣುಕುತ್ತಿತ್ತು!

[ಚಿತ್ರಗಳು-ಸಂಗ್ರಹದಿಂದ]