ಅಪ್ಪ ತನ್ನ ಮಗಳನ್ನು ಗಡಂಗಿಗೆ ಪ್ಯಾಕೆಟ್ ತರಲು ಕಳುಹಿಸಲು ಶುರು ಮಾಡಿದ್ದು ಸೀತುವಿನ ಮನಸಿಗೆ ತುಂಬಾ ಕಸಿವಿಸಿಯನ್ನು ಉಂಟು ಮಾಡಿತ್ತು. ದಿನ ಕಳೆದಂತೆ ಗಡಂಗಿನಲ್ಲಿ ಚೋಮನ ದೋಸ್ತುಗಳ ಕಾಟವೂ ಹೆಚ್ಚತೊಡಗಿತು. ದಿನಾ ಸಾರಾಯಿಗೆ ಬರುತ್ತಿದ್ದ ಬೆಳ್ಳಿಯನ್ನು ಚುಡಾಯಿಸುವವರ ಸಂಖ್ಯೆ ಹೆಚ್ಚಿದಾಗ ಸೀತುವಿನ ಮನಸ್ಸು ಅಲ್ಲೋಲ ಕಲ್ಲೋಲವಾಗವಾಗ ತೊಡಗಿತ್ತು. ಸಂಜೆ ಬರುವಾಗಲೇ ಬೊಬ್ಬೆ ಹೊಡೆಯುತ್ತಿದ್ದ ಚೋಮ ಹೇಳದ ಮಾತಿಲ್ಲ. ಎಲ್ಲರೆದುರು ತನ್ನ ಹೆಂಡತಿ, ಮಗಳನ್ನು ತುಚ್ಚವಾಗಿ ಆಡುತ್ತಿದ್ದ ಚೋಮ ಮನೆಗೆ ಬಂದನೆಂದರೆ ಮಕ್ಕಳಾದ ತುಕ್ರ, ತನಿಯ ಓಡಿ ಮೂಲೆ ಸೇರುತ್ತಿದ್ದರು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

 

ವೈದ್ಯನಾದವನಿಗೆ ಸಂಯಮ ಬಹಳ ಮುಖ್ಯ. ನಮ್ಮಲ್ಲಿ ಬರುವ ರೋಗಿಗಳ ಕಷ್ಟ-ಸುಖದ ಮಧ್ಯೆ ಕೆಲವೊಮ್ಮೆ ಅವರ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಸಂಕ್ಷಿಪ್ತ ವಿವರಣೆಗಳು ಕೂಡಾ ಅವರು ಹೇಳುತ್ತಾ ಇರುತ್ತಾರೆ. ಅದರಲ್ಲಿ ಅವರು ಅನುಭವಿಸಿದ, ನೋವು ನಲಿವುಗಳ ವಿವರಣೆಗಳು ಕೂಡ ಕೆಲವೊಮ್ಮೆ ಇರುತ್ತದೆ. ಕೇಳುವವನಿಗೆ “ಕಿವಿ” ಇರಬೇಕು ಮತ್ತು ಅದನ್ನು ಗ್ರಹಿಸಿ ಮನಸ್ಸಿನಲ್ಲಿ ಇಟ್ಟುಕೊಳ್ಳುವ ಸಾಮರ್ಥ್ಯ ಬೇಕು.

ನಾನೊಬ್ಬ ಸ್ನೇಹ ಜೀವಿ. ಹಾಗೆಯೇ ಭಾವ ಜೀವಿಯೂ ಹೌದು. ಯಾವುದೊ ಒಬ್ಬ ತಾಯಿಗೆ ಮಗು ಆದಾಗ ಅವರ ಸಂತಸದಲ್ಲಿ ಭಾಗಿಯಾಗಿದ್ದೇನೆ. ಅಂತೆಯೇ ಅವರ ಮನೆಯ ಸಾವಿಗೆ, ನಾನೂ ಕೂಡಾ ಸಂಕಟ ಪಟ್ಟಿದ್ದೇನೆ. ಹೀಗಿರುವಾಗ ನನ್ನಲ್ಲಿ ಕೆಲವರು ಹೇಳಿರುವ, ಅವರ ಜೀವನದ ಅನೇಕ ಘಟನೆಗಳನ್ನು ಮೆಲುಕು ಹಾಕುತ್ತಾ ಹೋದಾಗ ಅದು ಬೇರೆಯ ರೂಪ ತಾಳಿದರೆ, ಅದು ವಿಶೇಷವೇನಲ್ಲ. ಹಾಗೆಯೇ ನನ್ನಲ್ಲಿಗೆ ಬರುತ್ತಿದ್ದ ಸೀತಮ್ಮ ಎಂಬ ಓರ್ವ ಸಾಮಾನ್ಯ ಮಹಿಳೆ, ಅವಳ ಜೀವನದಲ್ಲಿನ ಆಗುಹೋಗುಗಳು ಮತ್ತು ಅದಕ್ಕೆ ಆಕೆಯ ಸ್ಪಂದನೆ ಎಲ್ಲವನ್ನು ಗ್ರಹಿಸಿದ ನಾನು ಅದನ್ನು ಬರಹ ರೂಪಕ್ಕೆ ಪರಿವರ್ತಿಸಿ ನೋಡಿದಾಗ ಅದು ಒಂದು ಕಥೆಯಾಗಿ ಹೊರ ಹೊಮ್ಮಿದ್ದು ಕಾಕತಾಳಿಯ ಅಷ್ಟೇ. ಇದರಲ್ಲಿ ಇರುವ ವಿಷಯಗಳು ಸತ್ಯಕ್ಕೆ ಹತ್ತಿರವಾಗಿದ್ದು, ವಿವರಗಳು ಇದರ ಅಸ್ಥಿ ಪಂಜರ. ಅದಕ್ಕೆ ಸ್ವಲ್ಪ ರಕ್ತ, ಮಾಂಸಖಂಡ ಹಚ್ಚಿ, ಅದರ ಮೇಲೊಂದು ಕುಲಾವಿ ಹೊಲೆದು, ಬಣ್ಣ ಕೊಟ್ಟಾಗ ಅದು ಬೇರೆಯೇ ಒಂದು ಆಯಾಮ ತಲುಪಿತ್ತು……… ಆ ಕಥೆಯೇ, ಈ ‘ಪರ್ಯಾಯ ದಾರಿ’

*****

ಮಲೆನಾಡಿನಲ್ಲಿ ಮಳೆಗೆ ಯಾರದ್ದೂ, ಯಾವ ಲಗಾಮೂ ಇಲ್ಲಾ. ತನಗೆ ಎತ್ತ ಬೇಕು ಅತ್ತ ಬೀಸಿ ಬೇಡವಾದಲ್ಲಿ ಸುರಿದು, ಮಳೆ ಬೇಕಾದಲ್ಲಿ ಮೋಡ ಬಿರಿಯುವುದು ಇಲ್ಲಿ ಸಾಮಾನ್ಯ. ಒಮ್ಮೆಲೆ ಬಾನೆಲ್ಲಾ ಮೋಡ ತುಂಬಿ ಕಪ್ಪಾಗಿ, ದಿನವೇ ಕತ್ತಲಾಗಿ ಇನ್ನೇನು ಮಳೆ ಬಂತು ಅನ್ನುವಷ್ಟರಲ್ಲಿ ಬೀಸಿದ ಗಾಳಿಯಲ್ಲಿ ಅಲ್ಲಿಂದ ಎಲ್ಲಿಗೋ ದೂರ ಹೋಗಿ ಅಲ್ಲಿ ಸುರಿಯುತ್ತದೆ. ಗಾಳಿ ಸುಯ್ಯೆಂದು ಬೀಸಿ, ಕೆಲವೊಮ್ಮೆ ಬಿರುಗಾಳಿಯಂತಾಗಿ ಬೆಳೆದಿದ್ದ ಮರಗಳನ್ನು ಬುಡಮೇಲು ಮಾಡಿ ಫೋನ್ ಕಂಬದ ಮೇಲೆ, ವಿದ್ಯುತ್ ತಂತಿಯ ಮೇಲೆ ಬೀಳುವುದರೊಂದಿಗೆ ಊರನ್ನೇ ಕತ್ತಲೆ ಮಾಡುವುದು ಇಲ್ಲಿನ ನಿತ್ಯದ ದಿನಚರಿ.

ಇಂತಹದೇ ವಿಚಿತ್ರ ದಿನಚರಿ ನಮ್ಮೂರಿನ ಚೋಮನದ್ದು ಕೂಡಾ. ಕಂಪನಿಯ ತೋಟದಲ್ಲಿ ಹೇಗೊ ಕೆಲಸ ಸಿಕ್ಕಿ, ಮದುವೆಯಾಗಿ ಮೂರು ಮಕ್ಕಳಾದರೂ ದಿನಚರಿ ಬದಲಾಗಲಿಲ್ಲ. ಗುರುವಾರ ವಾರದ ಅಡ್ವಾನ್ಸ್ ಸಿಕ್ಕಿತೆಂದರೆ ಮನೆ ಸೇರುವುದು ಶುಕ್ರವಾರದ ಬೆಳ್ಳಂಬೆಳಗ್ಗೆಯೇ. ತೋಟದಿಂದ ಸ್ವಲ್ಪ ದೂರವಿದ್ದ ಫಿಲೀಪುನ ಸಾರಾಯಿ ಅಂಗಡಿಯಲ್ಲಿ ಚೋಮ ದಿನ ಸಂಜೆಯೂ ಹಾಜರಿ ಹಾಕದಿದ್ದರೆ ಅಂದು ಊರಲ್ಲಿ ಬೆಲ್ಲದ ಮಳೆ ಬರುತ್ತದೆ ಎಂದು ಊರವರು ಆಡಿಕೊಳ್ಳುವುದಿತ್ತು. ಹಾಗೆಲ್ಲಾದರೂ ಬೆಲ್ಲದ ಮಳೆ ಬಂದು ಊರೆಲ್ಲಾ ಅಂಟಾಗಿ ಇರುವೆ ಹೆಚ್ಚಾಗಿ, ಊರಿನ ಜನರಿಗೆ ಯಾಕೆ ತೊಂದರೆ ಎಂದು ಚೋಮ ಗಡಂಗಿಗೆ ಹೋಗುವುದನ್ನು ಬಿಡಲಿಲ್ಲ!

ಸರಿರಾತ್ರಿ ಮನೆಗೆ ಬರುವ ಚೋಮನ ದಾರಿ ಕಾದು ಸೀತು ದಿನಾಲು ಸುಸ್ತು. ಸಮಯ ಸಂದರ್ಭ ಇಲ್ಲದೆ ಮನೆಗೆ ತಲುಪುವ ಅವನ ದಾರಿ ಕಾಯದೆ ಇದ್ದರೆ ಹೊಡೆತ ತಪ್ಪಿದ್ದಲ್ಲ. ಮನೆಗೆ ಸುಮಾರು ದೂರ ಇದೆ ಎನ್ನುವಾಗಲೇ ಚೋಮನ ಘಂಟಾಘೋಷ ನುಡಿ ಮುತ್ತುಗಳು ಅವಳನ್ನು ಎಚ್ಚರಿಸುತ್ತಿದ್ದವು. ಸದ್ಯಕ್ಕೆ ಮಲೆನಾಡಿನಲ್ಲಿ ಮನೆಗಳು ದೂರದೂರ ಇರುತ್ತಿದ್ದರಿಂದ ಇವನು ಏನು ಬೊಗಳುತ್ತಿದ್ದ ಎಂಬುದು ಕೆಲವರಿಗೆ ಮಾತ್ರ ಗೊತ್ತು. ಅವಳಿಗೆ ಮದುವೆಯಾದ ದಿನದಿಂದ ವಿನಾ ಕಾರಣ ಹೊಡೆತ ತಿಂದೂ ತಿಂದೂ ಅಭ್ಯಾಸ ಆಗಿ ಹೋಗಿಬಿಟ್ಟಿತ್ತು. ಕಟ್ಟಿಕೊಂಡವನನ್ನು ನುಂಗಲೂ ಆಗದೆ, ಉಗಿಯಲೂ ಆಗದೇ ಹಾಗೂ-ಹೀಗೂ ದಿನ ನೂಕುತಿದ್ದಳು. ಶಾಲೆಗೆ ಹೋಗುತ್ತಿದ್ದ, ದೊಡ್ಡ ಮಗಳು ಇತರ ಸಹಪಾಠಿಗಳ ಚುಚ್ಚು ಮಾತಿಗೆ ಕೊರಗುತ್ತಿದ್ದಳು. ಜನ, ಮಕ್ಕಳ ಬಾಯಿಯಲ್ಲಿ ಅದೇ ಒಂದು ಮಾತು. ಇವಳ ಅಪ್ಪ ಮಹಾ ಕುಡುಕ, ಕುಡಿದಾಗ ನೋಡಬೇಕು ಅವನ ಆಟ ಎಂದು.

ಮನೆಯಲ್ಲಿ ತಂದೆಯ ಕಾಟ ಜಾಸ್ತಿಯಾಗಿ ಓದಲು ಆಗದೇ ತಮ್ಮಂದಿರ ಹೊರೆಯೂ ಬಿದ್ದು, ಒಂದೇ ಕ್ಲಾಸಿನಲ್ಲಿ ಮೂರು ವರ್ಷ ಡುಮ್ಕಿ ಹೊಡೆದಾಗ “ಸಾಕಪ್ಪ ಸಾಕು” ಎಂದು ಆ ಹುಡುಗಿ ಓದಿಗೆ ನಮಸ್ಕಾರ ಹೇಳಿದಳು. ಅಪ್ಪ ಒಬ್ಬನೇ ಕೆಲಸಕ್ಕೆ ಹೋಗಿ, ಆ ದುಡ್ಡಲ್ಲಿ ಕುಡಿದು ಹಣ ಖರ್ಚಾಗಿ, ತಾಯಿಗೂ ಶಾಶ್ವತ ಕೆಲಸ ಇಲ್ಲದೆ, ಅಲ್ಲಿ ಇಲ್ಲಿ ಅಪರೂಪಕ್ಕೆ ಕೆಲಸ ಸಿಕ್ಕಿದಾಗ ಬಂದ ಸಂಬಳದಲ್ಲಿ ದಿನ ಸಾಗುತ್ತಿತ್ತು. ಮಗಳು ದೊಡ್ಡವಳಾದಾಗ ಅಪ್ಪನಿಗೆ ಅವಳನ್ನು ಕೆಲಸಕ್ಕೆ ಕಳುಹಿಸುವ ಯೋಚನೆ. ಆದರೆ ಕಂಪೆನಿಯಲ್ಲಿ ಶಾಶ್ವತ ಕೆಲಸದವರನ್ನು ಬಿಟ್ಟು, ಬೇರೆಯವರಿಗೆ ಕೆಲಸ ಇಲ್ಲಾ ಎಂದಾಗ, ಮಗಳನ್ನು ದೂರದ ಊರಿಗೆ ಕೆಲಸಕ್ಕೆ ಕಳುಹಿಸಲು ಮನಸ್ಸು ಬಾರದೆ ಅವಳಿಗೆ ಒಂದು ಒಳ್ಳೆಯ ಕೆಲಸ ಹುಡುಕಿದ!

ಅಪ್ಪ ತನ್ನ ಮಗಳನ್ನು ಗಡಂಗಿಗೆ ಪ್ಯಾಕೆಟ್ ತರಲು ಕಳುಹಿಸಲು ಶುರು ಮಾಡಿದ್ದು ಸೀತುವಿನ ಮನಸಿಗೆ ತುಂಬಾ ಕಸಿವಿಸಿಯನ್ನು ಉಂಟು ಮಾಡಿತ್ತು. ದಿನ ಕಳೆದಂತೆ ಗಡಂಗಿನಲ್ಲಿ ಚೋಮನ ದೋಸ್ತುಗಳ ಕಾಟವೂ ಹೆಚ್ಚತೊಡಗಿತು. ದಿನಾ ಸಾರಾಯಿಗೆ ಬರುತ್ತಿದ್ದ ಬೆಳ್ಳಿಯನ್ನು ಚುಡಾಯಿಸುವವರ ಸಂಖ್ಯೆ ಹೆಚ್ಚಿದಾಗ ಸೀತುವಿನ ಮನಸ್ಸು ಅಲ್ಲೋಲ ಕಲ್ಲೋಲವಾಗವಾಗ ತೊಡಗಿತ್ತು. ಸಂಜೆ ಬರುವಾಗಲೇ ಬೊಬ್ಬೆ ಹೊಡೆಯುತ್ತಿದ್ದ ಚೋಮ ಹೇಳದ ಮಾತಿಲ್ಲ. ಎಲ್ಲರೆದುರು ತನ್ನ ಹೆಂಡತಿ, ಮಗಳನ್ನು ತುಚ್ಚವಾಗಿ ಆಡುತ್ತಿದ್ದ ಚೋಮ ಮನೆಗೆ ಬಂದನೆಂದರೆ ಮಕ್ಕಳಾದ ತುಕ್ರ, ತನಿಯ ಓಡಿ ಮೂಲೆ ಸೇರುತ್ತಿದ್ದರು.

ತೋಟದಿಂದ ಸ್ವಲ್ಪ ದೂರವಿದ್ದ ಫಿಲೀಪುನ ಸಾರಾಯಿ ಅಂಗಡಿಯಲ್ಲಿ ಚೋಮ ದಿನ ಸಂಜೆಯೂ ಹಾಜರಿ ಹಾಕದಿದ್ದರೆ ಅಂದು ಊರಲ್ಲಿ ಬೆಲ್ಲದ ಮಳೆ ಬರುತ್ತದೆ ಎಂದು ಊರವರು ಆಡಿಕೊಳ್ಳುವುದಿತ್ತು.

ಅಪ್ಪ ಉಂಡರೆ ಉಂಡ, ಬಿಟ್ಟರೆ ಬಿಟ್ಟ. ಕೆಲವೊಮ್ಮೆ ಬಳಸಿ ಇಟ್ಟಿದ್ದ ಗಂಜಿ, ಹುರಿದ “ಒಣಕ್ ಮತ್ತಿ” ಇದ್ದ ತಟ್ಟೆ ಹಾರಿ ಹೋಗಿ, ಅಂಗಳದಲ್ಲಿ ಬಿದ್ದು, ಟಾಮಿ ನಾಯಿಯ ಹೊಟ್ಟೆ ಸೇರುತ್ತಿತ್ತು. ಹಾರುವ ತಟ್ಟೆ ಕೆಲವೊಮ್ಮೆ ಹಾದಿ ಬದಲಿಸಿ, ಸೀತು ಬೆಳ್ಳಿಯರ ತಲೆ ಏರಿದ್ದು ಇದೆ. ಬಂದ ಮೂರು ಕಾಸಿನಲ್ಲಿ ತಂದ ಅಕ್ಕಿಯ ಅನ್ನ ನೆಲ ಸೇರಿ, ಮರುದಿನ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ದು ಉಂಟು.

ಇವರೆಲ್ಲರ ಮಧ್ಯೆ ಚೋಮನ ತಾಯಿ ಕಾವೇರಿ. ಇವಳು ಇನ್ನೊಂದು ವಿಚಿತ್ರ ಪ್ರಾಣಿ. ತಾನೂ ಕುಡಿಯುತ್ತಾ, ಮಗನಿಗೆ ಕುಡಿಯಲು ಕಲಿಸಿದವಳು. ಈಗ ಕೈಯಲ್ಲಿ ಕಾಸಿಲ್ಲದೆ ಕುಡಿತ ಸ್ವಲ್ಪ ಕಡಿಮೆಯಾಗಿದೆ. ಆದರೂ ಕೆಲಮೊಮ್ಮೆ ಕಾಡಿನಲ್ಲಿ ಸಿಕ್ಕುವ ಗೆಣಸು, ಕಣಿಲೆ, ಅಂಟುವಾಳ ಕಾಯಿ, ಪುನರ್ಪುಳಿ, ಇನ್ನೂ ಯಾವುದೊ ಕೆತ್ತೆ, ಸೊಪ್ಪುಗಳನ್ನು ಊರಿನಲ್ಲಿನ ಕೆಲವು ಪರಿಚಯದವರ ಮನೆಗೆ ಕೊಟ್ಟು, ಅವರು ಕೊಡುವ ದುಡ್ಡಿನಲ್ಲಿ ತಾನೂ ಕುಡಿಯುತ್ತಾ ಬಂದಾಗ, ಮಗನಿಗೆ ತಕ್ಕ ತಾಯಿಯಾಗುತ್ತಿದ್ದಳು!

ಕುಡಿತಕ್ಕೆ ಕಾಸು ಸಿಕ್ಕದೇ, ಇವಳನ್ನು ಯಾರೂ ಕ್ಯಾರೇ ಎನ್ನುವುದಿಲ್ಲವೆಂದಾಗ ಇವಳಲ್ಲಿ ಶುರುವಾಗಿತ್ತು ಇನ್ನೊಂದು ವಿಚಿತ್ರ ಭ್ರಮಣೆ. ಅದುವೇ ಇವಳ ಮೈ ಮೇಲೆ ಬರುವ ದೇವಿ. ಚಿಕ್ಕಂದಿನಿಂದಲೇ ಇದ್ದ ಕುಡಿತದಿಂದ ಮೆದುಳು, ನರ ಎಲ್ಲವೂ ಅದರ ಶಕ್ತಿಯನ್ನು ಕಳೆದುಕೊಂಡು ಅವಳಲ್ಲಿ ಈ ಒಂದು ವಿಚಿತ್ರ ಮಾನಸಿಕ ರೋಗ ಶುರುವಾಗಿತ್ತು. ಸರಿಯಾಗಿ ವಾರದಲ್ಲಿ ಒಮ್ಮೆಯೂ ಸ್ನಾನ ಮಾಡದ ಕಾವೇರಿ ಅಮಾವಾಸ್ಯೆ ಬಂತೆಂದರೆ, ಅಂದು ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಮೈ ಎಲ್ಲ ಬೂದಿಯನ್ನು ಬಳಿದುಕೊಳ್ಳುತ್ತಿದ್ದಳು. ಸಂಜೆಯಾಗುತ್ತಾ ಹೋದಂತೆ ಅವಳ ನಡವಳಿಕೆಯಲ್ಲಿ ವ್ಯತ್ಯಾಸ ಆಗುತ್ತಾ ಹೋಗುತ್ತಿತ್ತು. ರಾತ್ರಿ ಒಮ್ಮೆಲೆ ಕಿರುಚಿಕೊಂಡು ಮೈಯನ್ನೆಲ್ಲ ಅದುರಿಸಿ, ತನ್ನ ಕೂದಲನ್ನೆಲ್ಲಾ ಎಳೆದು ಅಗಲವಾಗಿ ಹರಡಿಕೊಳ್ಳುತ್ತಿದ್ದಳು. ಹಾಂ, ಹೂಂ ಹ್ರೀಂ ಎನ್ನುತ್ತಾ ತಲೆಯನ್ನು ಅತ್ತಿತ್ತ, ಮೇಲೆ ಕೆಳಗೇ ತಿರುಗಿಸುತ್ತಾ ಮನೆಯ ಸುತ್ತ ಓಡುತಿದ್ದಳು. ಇದನ್ನೆಲ್ಲಾ ಕಂಡ ಕೆಲವು ಹಳ್ಳಿಯ ಮುಗ್ಧ ಜನರು ಇವಳ ಮೈಯಲ್ಲಿ ನಿಜವಾಗಲೂ ದೇವರ ಆವಾಹನೆಯಾಗಿದೆ ಎಂದು ಭಾವಿಸುತ್ತಿದ್ದರು. ಹಾಗೆಯೇ ಒಮ್ಮೊಮ್ಮೆ ಇವಳ ಮನೆಗೆ ಬಂದು ಹಣ್ಣು ಕಾಯಿ ಒಡೆದು ತಮ್ಮ ಕಷ್ಟ-ಸುಖಗಳನ್ನು ಇವಳಲ್ಲಿ ಹೇಳಿಕೊಂಡು, ಪ್ರಶ್ನೆ ಕೇಳುತ್ತಿದ್ದರು. ಇದನ್ನು ಕೇಳಿದ ಕಾವೇರಿ ತನ್ನ ಬಾಯಿಗೆ ಬಂದಂತೆ ಯಾವುದೋ ಒಂದು ಉತ್ತರವನ್ನು ಅಸ್ಪಷ್ಟವಾಗಿ ಅಲ್ಲಿ ಇಲ್ಲಿ ಕೇಳಿದ ಕೆಲವು ಮಲಯಾಳ ಭಾಷೆಯ ಶಬ್ದಗಳಲ್ಲಿ ಅಚಾನಕ್ಕಾಗಿ ಹೇಳುತ್ತಿದ್ದಳು.

ಚಿಕ್ಕಂದಿನಲ್ಲಿ ಅವಳು ಒಂದು ಮಲಯಾಳಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದವಳು. ಅಲ್ಲಿ ಕೇಳುತ್ತಿದ್ದ ಕೆಲವು ಶಬ್ದಗಳು ಅವಳ ಮನಸ್ಸಿನ ಯಾವುದೋ ಮೂಲೆಯಲ್ಲಿ ಉಳಿದುಹೋಗಿ ಈಗ ಪಟ ಪಟನೆ ಹೊರಬರುತ್ತಿತ್ತು. ನಾನು ದೇವಿ, ಪಾಷಾಣ ಮೂರ್ತಿ, ಕಲ್ಲುರ್ಟಿ, ಗುಳಿಗ ಎಂದೆಲ್ಲಾ ಒಮ್ಮೊಮ್ಮೆ ಹೇಳುತ್ತಿದ್ದಳು. ಇದನ್ನು ಕೇಳಿಸಿಕೊಂಡ ಮುಗ್ಧ ಹೆಂಗಸರು ಅಷ್ಟೊ, ಇಷ್ಟು ದಕ್ಷಿಣೆಯನ್ನು ಅವಳಿಗೆ ಕೊಟ್ಟು ಹೋಗುತ್ತಿದ್ದರು. ಕೆಲವೊಮ್ಮೆ ಪುನಃ ಬರುವಾಗ ಕೋಳಿಯನ್ನು ತಂದು ದೇವಿಗೆ ಅರ್ಪಿಸಬೇಕು ಎಂದು ಕೂಡ ಗರ್ಜಿಸುತಿದ್ದಳು.

ಸಿಕ್ಕಿದ ಪುಡಿ ಕಾಸು ಮರುದಿನ ಹೋಗಿ ಸೇರುತ್ತಿದ್ದದ್ದು ಗಡಂಗಿನಲ್ಲಿ. ಕೆಲವು ಅಮಾವಾಸ್ಯೆಯ ಮರುದಿನ ಮನೆಯಲ್ಲಿ ಮಕ್ಕಳಿಗೆ ಕೋಳಿ ಸಾರು, ಕಡುಂಬಿಟ್ಟು. ಇಷ್ಟೆಲ್ಲಾ ದೇವಿ ಮೈ ಮೇಲೆ ಬಂದು, ಕಾಸು ಇಲ್ಲದಿದ್ದರೂ ಕೆಲವೊಮ್ಮೆ ಕುಡಿಯುತ್ತಿದ್ದ ಅವಳಿಗೆ ತನ್ನ ಮಗ ಚೋಮನ ಮೇಲೆ ಬಹಳ ಮಮಕಾರ. ದೇವಿ ಮೈಮೇಲೆ ಬಂದಾಗ ಮಗನನ್ನು ಕರೆದು, ತಲೆ ನೇವರಿಸಿಕೊಂಡು “ನಾನು ನಿನ್ನ ತಾಯಿ ಪಾಷಾಣ ಮೂರ್ತಿ, ನಿನ್ನ ಬೆಂಬಲಕ್ಕೆ ಇದ್ದೇನೆ. ನಿನ್ನ ಕೂದಲಿಗೂ ಏನೂ ಸೋಕದಂತೆ ನಾನು ನೋಡಿಕೊಳ್ಳುತ್ತೇನೆ. ನೀನು ಎಲ್ಲವನ್ನೂ ಜೈಸಿ ಬರುತ್ತೀಯಾ” ಎನ್ನುತ್ತಿದ್ದಳು. ಆವಾಹನೆಯಾದ ತಾಯಿ ಪಂಜುರ್ಲಿ, ಗುಳಿಗ ಕೊಟ್ಟ ಆಶ್ವಾಸನೆಯನ್ನು ಬಲವಾಗಿ ನಂಬಿದ್ದ. ಸದಾ ಅಮಲಿನಲ್ಲಿ ಇರುತ್ತಿದ್ದ ಚೋಮ ಇದನ್ನು ಕೇಳಿದಾಗ ಅಟ್ಟಕ್ಕೇರುತ್ತಿದ್ದ. ತಾನು ಏನು ಮಾಡಿದರೂ ನಡೆಯುತ್ತದೆ, ತನಗೆ ಯಾರೂ ಸಾಟಿ ಇಲ್ಲ ಎಂದು ಉಬ್ಬುತ್ತಿದ್ದ. ಆ ಸಮಯದಲ್ಲಿ ಹೆಂಡತಿ ಮಕ್ಕಳಿಗೆ ಬಯ್ಯುತ್ತಿದ್ದ ಅವನ ಸ್ವರ ಇನ್ನೂ ತಾರಕಕ್ಕೆ ಏರುತ್ತಿತ್ತು.

ದಿನಗಳು ಉರುಳಿದವು, ಮಳೆಯೂ ಹೆಚ್ಚಿತು. ಮೋಡ ಕವಿದ ಬಾನಿನಲ್ಲಿ ಅಲ್ಲೊಂದು ಇಲ್ಲೊಂದು ಮಿಂಚು ಬಂದು ಕವಿದಿದ್ದ ಕತ್ತಲಲ್ಲೂ ಬೆಳಕು ಕಾಣ ತೊಡಗಿತ್ತು.

ಆ ಗುರುವಾರ ತಿಂಗಳ ಮೊದಲ ದಿನವು ಹೌದು. ಅಡ್ವಾನ್ಸ್ ಎಂದು ತಿಂಗಳ ಸಂಬಳ ಜೇಬಿಗೆ ಸೇರಿದ ಕೂಡಲೇ ಚೋಮ ಚುರುಕಾದ. ಗಡಂಗಿಗೆ ಹೋಗಿ ಕಂಠಪೂರ್ತಿ ಕುಡಿದು ಅಲ್ಲೆಲ್ಲಾ ಬಾಯಿಗೆ ಬಂದಂತೆ ಒದರಿ, ಮನೆಯ ಕಡೆಗೆ ಕಾಲು ಹಾಕಿದ. ಕಾಡು ದಾರಿಯಲ್ಲಿ, ಕಾಲು ಎಲ್ಲೆಂದರಲ್ಲಿ ಅಲೆದು, ಕೊನೆಗೆ ಮನೆಯ ಹತ್ತಿರದ ತೋಡಿನ ಬಳಿ ಬಂತು. ಅಂದು ಸುರಿದ ಧಾರಾಕಾರ ಮಳೆಗೆ ತೋಡಿನಲ್ಲಿ ನೀರು ತುಂಬಿದ ಕಾರಣ, ಆತ, ತೋಡು ದಾಟಲು ಹಾಕಿದ್ದ ಬಿದಿರಿನ ಪಾಲವನ್ನೇ ಹತ್ತಬೇಕಾಯ್ತು. ಆ ಪಾಲಕ್ಕೆ, ಇವನ ದಿನದ ಓಲಾಡುವಿಕೆ ಕೂಡಾ ಅಭ್ಯಾಸವಾಗಿ ಬಿಟ್ಟಿತ್ತು. ಅಂದು ಕೂಡಾ ತೂರಾಡುತ್ತಾ, ಓಲಾಡುತ್ತ ಪಾಲದ ಕೊನೆ ತಲುಪಿದ ಚೋಮ. ಕಪ್ಪನೆಯ ಕತ್ತಲಿನ ಮದ್ಯೆ ದೂರದಲ್ಲಿ ಇದ್ದ ಮನೆಯ ಬೆಳಕನ್ನು ಕಂಡ ಅವನ ಧ್ವನಿ ಜೋರಾಯಿತು. “ಯಾರದು ಅಲ್ಲಿ” ಎಂದು ಘರ್ಜಿಸಿದ.

ಮಿಂಚೊಂದು ಆಗಸದ ಕೊನೆಯಿಂದ ತೂರಿ ಬಂದು ಓಲಾಡುವ ಚೋಮನನ್ನು ತಳ್ಳಿದಂತಾಯ್ತು. ಕಿರುಚಿಕೊಂಡ ಚೋಮ ಬಿದ್ದದ್ದು ತೊರೆಯ ಪಕ್ಕದಲ್ಲಿದ್ದ ಕಲ್ಲಿನ ಮೇಲೆ. ಮಳೆಯ ಆರ್ಭಟ, ತೊರೆಯ ಭೋರ್ಗರೆತದ ಮಧ್ಯೆ ಇವನ ಕಿರುಚಾಟ ಯಾರಿಗೂ ಕೇಳದಾಯ್ತು.

ಮಳೆ ಬಿಟ್ಟಿತು, ಸೀತುವಿನ ಒತ್ತಾಯಕ್ಕೆ, ಅಪ್ಪನನ್ನು ಹುಡುಕಲು, ಅಮ್ಮನ ಜೊತೆಗೆ ಟಾರ್ಚ್ ಹಿಡಿದು ಹೊರಟಳು ಬೆಳ್ಳಿ. ಹುಡುಕಲು ಬಂದವರಿಗೆ ಕಂಡದ್ದು ಕಲ್ಲಿನ ಮೇಲೆ ಅಂಗಾತ ಬಿದ್ದಿದ್ದ ಚೋಮನನ್ನು. ತಾಯಿ ಮಗಳು ಹಾಗೂ ಹೀಗೂ ಅವನನ್ನು ಕಷ್ಟಪಟ್ಟು ಎತ್ತಿ ತಂದು ಮನೆಯಲ್ಲಿ ಮಲಗಿಸಿದರು. ಮರು ದಿನ ಬೆಳಿಗ್ಗೆ ಕುಡಿದದ್ದು ಇಳಿದು, ಕಾಲು ಆಡಿಸ ಹೊರಟ ಚೋಮನಿಗೆ ಕಾಲುಗಳಲ್ಲಿ ಶಕ್ತಿ ಇಲ್ಲದ್ದು ಗೊತ್ತಾಯ್ತು. ಅಮಲು ಪೂರಾ ಹೋಗಿ ಬೊಬ್ಬೆ ಹೊಡೆಯಲು ಶುರಮಾಡಿದ. ಮಲಗಿದ್ದಲ್ಲಿಗೆ ಸೀತು ಊಟವನ್ನು ತಂದುಕೊಟ್ಟರೂ ಅವಳನ್ನು ಬಯ್ಯುವುದು ನಿಲ್ಲಿಸಲಿಲ್ಲ.

ದಿನ ಕಳೆದಂತೆ ಸೊಂಟದ ಮೂಳೆ ಮುರಿದಿರುವುದು ಖಾತರಿಯಾದಾಗ ಮೂಳೆ ಕಟ್ಟುವ ನಾಟಿ ವೈದ್ಯರು ಬಂದರು. ಎಣ್ಣೆ ಹಾಕಿ, ಪಟ್ಟಿ ಕಟ್ಟಿ, ಕಷಾಯ ಕುಡಿಸಿದರೂ ಚೋಮ ಮಲಗಿದ್ದಲ್ಲಿಂದ ಏಳಲೇ ಇಲ್ಲ. ಎರಡೂ ಕಾಲಿಗೂ ಲಕ್ವ ಹೊಡೆದಿತ್ತು. ಕುಡಿಯಲು ಶರಾಬು ಕೊಡುವುದೊಂದನ್ನು ಬಿಟ್ಟು, ಬಾಕಿ ತನ್ನ ಕೈಲಾದ ಸೇವೆ ಮಾಡುತ್ತಿದ್ದಳು, ಸೀತೆ. ನೋವು ಕಡಿಮೆಯಾದರೂ, ಬೆನ್ನು ಹುರಿ ಮುರಿದು ಕಾಲಲ್ಲಿ ಶಕ್ತಿ ಇಲ್ಲದ ಚೋಮ ಈಗ ಜೀವಂತ ಶವವಾಗಿದ್ದ.

ಚೋಮನ ಅಂಗ ವಿಕಲತೆಯನ್ನು ಕಂಡ ಕಂಪನಿಯವರು ಅವನ ಕೆಲಸವನ್ನು ಸೀತೆಗೆ ಶಾಶ್ವತವಾಗಿ ಕೊಟ್ಟರು. ವಾರದ ಅಡ್ವಾನ್ಸ್ ನಲ್ಲಿ ಮನೆಗೆ ಸಾಮಾನುಗಳು ಬಂದು, ಇದ್ದ ಸಾಲವನ್ನು ತೀರಿಸಲು ಹೆಣಗಿದಳು ಸೀತೆ. ಸಂಜೆ ಮನೆಗೆ ಬಂದ ಕೂಡಲೇ ಮಗಳು ಮಾಡದೇ ಬಿಟ್ಟಿದ್ದ ಕೆಲಸವನ್ನು ಮಾಡಿ ಚೋಮನನ್ನು ಸ್ನಾನಮಾಡಿಸಿ, ಅವನಿಗೆ ಊಟ ಕೊಟ್ಟು ಅವನ ಆರೈಕೆ ಮಾಡುವುದರಲ್ಲಿ ದಿನ ಕಳೆಯುತ್ತಿತ್ತು. ಮತ್ತೆ ಬೆಳಿಗ್ಗೆ ಎದ್ದು ತೋಟದ ಕಡೆಗೆ ಪಯಣ. ಹಾಗೂ ಹೀಗೂ ದಿನ ಕಳೆದು ಮತ್ತೆ ಆ ಮನೆಯಲ್ಲಿ ಶಾಂತಿ ಕಾಣಲು ತೊಡಗಿತು. ತುಕ್ರ, ತನಿಯ ಶಾಲೆಗೆ ಹೋಗುವುದನ್ನು ಪುನಃ ಶುರುಮಾಡಿದರು.

ಮಗನಿಗೆ ಆದ ತೊಂದರೆಯನ್ನು ಕಂಡ ಕಾವೇರಿಗೆ ಜ್ಞಾನೋದಯ ಆಗಿಬಿಟ್ಟಿತ್ತು. ತಾನು ಇನ್ನೂ ಕುಡಿಯುತ್ತಾ, ಏನಾದರೂ ಆದರೆ ತನ್ನನ್ನು ನೋಡ ಬೇಕಾಗಿದ್ದ ಮಗನ ಜೊತೆಗೆ ತಾನೂ ಹಾಸಿಗೆ ಹಿಡಿದು, ಹಾಗೆಯೇ ದಿನ ಕಳೆಯ ಬೇಕಾದೀತು ಎಂಬ ಕಟು ಸತ್ಯದ ಅರಿವು ಮೂಡಿ, ಕುಡಿಯುವುದನ್ನು ನಿಲ್ಲಿಸಿ ಸಣ್ಣ ಪುಟ್ಟ ಕೆಲಸಕ್ಕೆ ಹೋಗಲು ತೊಡಗಿದಳು.

ಇದೆಲ್ಲಾ ಮನಃಶಾಂತಿಯ ಮಧ್ಯೆ ಒಮ್ಮೊಮ್ಮೆ ಮಧ್ಯರಾತ್ರಿ ಹೊಡೆದೆಬ್ಬಿಸಿದಂತೆ, ಬೆವರುವ ಮೈಯೊಂದಿಗೆ, ಸೀತೆ ಎಚ್ಚರಗೊಳ್ಳುತ್ತಿದ್ದಳು. ಕತ್ತಲು ತುಂಬಿದ ಆ ರಾತ್ರಿ, ಕೋಲ್ಮಿಂಚು ಬೆಳಕಿನಲ್ಲಿ ತೂರಾಡುತ್ತಾ ಬಂದ ಚೋಮನನ್ನು ಅವಳು ಕಾಣುತ್ತಿದ್ದಳು.

ಆಗ ಅವಳಿಗೆ ತಾನು ಅವನನ್ನು ಪಾಲದಿಂದ ಕೆಳಗೆ ತಳ್ಳಿದ್ದು ಸರಿಯೇ ಎಂಬ ತಪ್ಪಿತಸ್ಥ ಭಾವನೆ ಬಂದು ಮೈ ನಡುಕ ಶುರುವಾಗುತಿತ್ತು.


ಇಲ್ಲಾ…. ತನ್ನ ಮತ್ತು ಮಕ್ಕಳ ಹಿತಕ್ಕಾಗಿ, ಅವನನ್ನು ಸರಿ ಹಾದಿಗೆ ತರಲು, ಅದೊಂದೇ ಪರ್ಯಾಯ ದಾರಿ ಇದ್ದದ್ದು ಎಂದು ಮನಸ್ಸಿಗೆ ತೋಚಿದಾಗ ಮತ್ತೆ ನೆಮ್ಮದಿಯಿಂದ ನಿದ್ರಿಸುತ್ತಿದ್ದಳು……