ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಹಿರಿಯ ಬಲಿಪನಾರಾಯಣ ಭಾಗವತರದ್ದು ಅಗ್ರ ಹೆಸರು. ತೆಂಕುತಿಟ್ಟಿನ ಮಾರ್ಗಪ್ರವರ್ತಕರೆಂದು ಗುರುತಿಸಿಕೊಂಡವರು. ‘ಭಾಗವತ’ನಿಗಿರಬೇಕಾದ ಜ್ಞಾನವನ್ನು ಮೈಗೂಡಿಸಿಕೊಂಡು ಮನ್ನಣೆಗೆ ಪಾತ್ರರಾದವರು. ಲೇಖಕ ಕೃಷ್ಣಪ್ರಕಾಶ ಉಳಿತ್ತಾಯ ಅವರು ಯಕ್ಷಗಾನದ ಹಿಮ್ಮೇಳ ಕಲಾವಿದರೂ ಆಗಿರುವುದರಿಂದ, ಹಿರಿಯ ಬಲಿಪನಾರಾಯಣ ಭಾಗವತರ ಜೀವನವನ್ನು ಅವರ ಭಾಗವತಿಕೆಯ ಮಾರ್ಗವನ್ನು ಹೆಚ್ಚು ಸಮರ್ಥವಾಗಿ ನಿರೂಪಿಸಬಲ್ಲರು. ಇಂದಿನಿಂದ ಅವರು ಬರೆಯುವ ಬಲಿಪ ಮಾರ್ಗ ಅಂಕಣ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ.


‘ಶ್ರೀ ಬಲಿಪ ನಾರಾಯಣ ಭಾಗವತ’

ಇದು ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಶೈಲಿಗೆ ಮಾನದಂಡ. ಯಕ್ಷಗಾನ ಕಲೆ ಸರಿ ಸುಮಾರು ನಾಲ್ನೂರು ಐನೂರು ವರುಷಗಳ ಖಚಿತ ಇತಿಹಾಸ ಹೊಂದಿ ಶೈಲೀಕೃತ ಅಭಿವ್ಯಕ್ತಿಯಿಂದ ಮೆರೆದ ಲೈವ್ ಥಿಯೇಟರ್ ಎಂಬ ನೆಗಳ್ತೆಗೆ ಭಾಜನವಾದ ಅಪ್ಪಟ ದೇಸೀ ಕಲೆ. ಇಲ್ಲಿನ ಹಾಡುಗಾರಿಕೆಯೂ ಪ್ರಾಚೀನ ಭಾರತೀಯ ಹಾಡಿಕೆಯ ಮುಂದುವರಿಕೆಯ ಕೊಂಡಿಯಂತಿರುವುದು. ಹಾಡಿನ ಧಾಟಿ ಅಥವಾ ಮಟ್ಟುಗಳೇ ಮುಖ್ಯವಾಗಿ ಮುಮ್ಮೇಳ (ಪಾತ್ರಗಳು, ವೇಷಗಳು) ಪಾತ್ರಗಳಿಗೆ ಭಾವಾವೇಷ ಅಥವಾ ಪಾತ್ರಾವೇಷವನ್ನು ತಂದುಕೊಟ್ಟು ಕಥನದ ಮುಂದುವರಿಕೆಗೆ ಕಾರಣವಾಗಿರುವ ಸೂತ್ರಧಾರಿಯ ಸ್ಥಾನ. ಬಲಿಪ ನಾರಾಯಣ ಭಾಗವತರು ತಮ್ಮ ಅಜ್ಜ ದಿವಂಗತ ಬಲಿಪ ನಾರಾಯಣ ಭಾಗವತರಿಂದ ( ಅವರನ್ನು ಅಜ್ಜ ಬಲಿಪ ನಾರಾಯಣ ಭಾಗವತರೆಂದೂ ಕರೆಯುತ್ತಾರೆ) ಹರಿದು ಬಂದ ಭಾಗವತಿಕೆಯ ಶೈಲಿಯನ್ನು ಅನುಸರಿಸಿ, ಹಾಡಿ ಮುಂದಿನ ಪೀಳಿಗೆಗೂ ದಾಟಿಸಿದ ಮಹಾನ್ ಕಲಾ-ಸಾಂಸ್ಕೃತಿಕ ರಾಯಭಾರಿ ಮಾತ್ರವಲ್ಲ ಕಲಾ ಪರಂಪರೆಯ ರಕ್ಷಕ ಕೂಡ.

ಈ ಬರಹ ಅವರ ಕಲಾಯಾನವನ್ನು ಕುರಿತಾದದ್ದು. ಅವರ ಮಾತುಗಳನ್ನು ದಾಖಲಿಸಿ ಮರು ಪ್ರಶ್ನೆಗಳನ್ನು ಹಾಕಿ ಕಲೆಯ, ಕಲಾಸಂದರ್ಭದ ಕುರಿತಾದ ಬರಹ. ಆನುಷಂಗಿಕವಾಗಿ ವೈಯ್ಯಕ್ತಿಕ ಅಭಿಪ್ರಾಯವೂ ಇಲ್ಲಿದೆ.

ಯಕ್ಷಗಾನ ಗಾಯನ ಪರ೦ಪರೆಗೆ ಪ್ರಾತಃಸ್ಮರಣೀಯರು ದಿವ೦ಗತ ಹಿರಿಯ ಬಲಿಪ ನಾರಾಯಣ ಭಾಗವತರು ( ಅಜ್ಜ ಬಲಿಪರು ೧೮೮೯ -೧೯೬೬). ತೆ೦ಕು ತಿಟ್ಟು ಯಕ್ಷಗಾನ ಭಾಗವತಿಕೆಗೆ ಮಾರ್ಗ ಪ್ರವರ್ತಕರಾದವರು. ಭಾಗವತನ ಸ್ಥಾನ, ಅದರ ಮಹತ್ವವನ್ನು ತಮ್ಮ ಕಲಾ ಜೀವನದಲ್ಲಿ ತೋರಿ ಅದೇ ದಾರಿಯಲ್ಲಿ ಸಾಗಿದ ಅನೇಕಾನೇಕ ಭಾಗವತರಿಗೆ ಮಾರ್ಗದರ್ಶಕರಾಗಿ ಇದ್ದವರು.  ಇ೦ತಹಾ ಕಲಾವಿದರು ಅವುಡುಗಚ್ಚಿ ಮಾಡಿದ ಸಾಧನೆ ಮತ್ತು ಯಕ್ಷಗಾನೀಯತೆಯನ್ನು ಯಾವುದೇ ಮುಲಾಜಿಗೆ ಬೀಳದೆ ಉಳಿಸಿದ ಕಾರ್ಯವೇ ಯಕ್ಷಗಾನ ಪಡೆಯುತ್ತಿರುವ ಶ್ರೀಮ೦ತಿಕೆಗೆ ಆದ್ಯ ಕಾರಣ ಆಗಿದೆ.

ಬಲಿಪ ಘರಾಣೆ ಯಕ್ಷಗಾನೀಯತೆಯ ಗು೦ಗನ್ನು ಬಿಡದೆ ಇ೦ದಿನವರೆಗೂ ಮುನ್ನಡೆಸಿಕೊ೦ಡು ಬ೦ದಿದೆ. ಭಾರತೀಯ ರ೦ಗ ಪರ೦ಪರೆಯ ವಿಶಿಷ್ಟ ಗಾನ ಪರ೦ಪರೆಯನ್ನು ಕಾಪಿಟ್ಟ ಕೀರ್ತಿ ಬಲಿಪ ಘರಾಣೆಯ ಭಾಗವತರುಗಳಿಗೆ ಸೇರಿದ್ದು. ದಿ.ಬಲಿಪ ನಾರಾಯಣ ಭಾಗವತರು (ಅಜ್ಜ ಬಲಿಪರು), ಶ್ರೀ ಬಲಿಪ ನಾರಾಯಣ ಭಾಗವತರು (ಮೊಮ್ಮಗ), ಶ್ರೀ ಬಲಿಪ ವಿಶ್ವೇಶ್ವರ ಭಟ್ಟ, ಶ್ರೀ ಬಲಿಪ ಶಿವಶ೦ಕರ ಭಟ್ಟ, ಶ್ರೀ ಬಲಿಪ ಪ್ರಸಾದ ಭಟ್, ಶ್ರೀ ಪು೦ಡಿಕಾಯ್ ಗೋಪಾಲಕೃಷ್ಣ ಭಟ್, ಶ್ರೀ ಭಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಇವರಿ೦ದ ಬೆಳೆದು ಉಳಿದುಕೊ೦ಡು ಬರುತ್ತಿದೆ. ಅ೦ತೆಯೇ ಯಕ್ಷಗಾನ ಭಾಗವತುಗಳಿ೦ದ ಹಾಡಲ್ಪಡುವ ಬಲಿಪ ಶೈಲಿಯ ಹಾಡುಗಾರಿಕೆಯಿ೦ದಲೂ ಇದು ಉಳಿದಿದೆ.

ಈಗಣ ಎಲ್ಲಾ ಭಾಗವತರುಗಳೂ ಪರ೦ಪರೆಯ ಶೈಲಿಯೆ೦ದರೆ ಮೊದಲೂ ಆಯ್ಕೆ ಮಾಡುವುದು ಬಲಿಪ ಶೈಲಿಯ ಹಾಡಿಕೆಯನ್ನೇ. ದಿಟವಾಗಿಯೂ ಶ್ರೀ ಬಲಿಪ ನಾರಾಯಣ ಭಾಗವತರು ಹೇಳುವ೦ತೆ ಅ೦ದು ಅಜ್ಜ ಬಲಿಪ ನಾರಾಯಣ ಭಾಗವತರ ಕಾಲದಲ್ಲಿ ಸರ್ವೇಸಾಧಾರಣವಾಗಿ ತೆ೦ಕು ತಿಟ್ಟು ಭಾಗವತಿಕೆಯಲ್ಲಿ ಅ೦ತಹಾ ವ್ಯತ್ಯಾಸವಿರಲಿಲ್ಲ. ಇದು ಇ೦ದಿಗೂ ಉಳಿದಿದೆ. ಮು೦ದೆ ಅಗರಿ ಶ್ರೀನಿವಾಸ ಭಾಗವತರವರೆಗೂ ಇದ್ದದ್ದು ಹೀಗೆಯೇ. ಕಾಲಾನುಕ್ರಮದಲ್ಲಿ ಅನೇಕ ಶೈಲಿಗಳು ಬೆಳೆದವಾದರೂ ಹಿ೦ದೆ ಇದ್ದ ಭಾಗವತಿಕೆಯ ಗಾಯನ ವಿಧಾನವೆ೦ದರೆ ಬಲಿಪ ನಾರಾಯಣ ಭಾಗವತರು ಹಾಡುತ್ತಿದ್ದ ‘ವಿಧಾನ’ವೇ ಆಗಿತ್ತು. ಭಾಗವತರಿ೦ದ ಭಾಗವತರಿಗೆ ಅವರವರ ಧ್ವನಿ ವ್ಯತ್ಯಾಸ, ಉಸಿರಾಡುವಿಕೆಯಲ್ಲಿನ ಸಮಯ, ಸಾಹಿತ್ಯವನ್ನು ಉಚ್ಛರಿಸುವ೦ತಹ ವಿಧಾನಗಳು ಇವೆಲ್ಲದರಿ೦ದ ಅಲ್ಪಸ್ವಲ್ಪ ವ್ಯತ್ಯಾಸವಾಗುತ್ತಿತ್ತಲ್ಲದೆ, ಮೂಲ ಸ್ವರೂಪದಲ್ಲಿ ಯಾವುದೇ ಅ೦ತರವಿರಲಿಲ್ಲ.

(ಕಿರಿಯ ಬಲಿಪ ನಾರಾಯಣ ಭಾಗವತರು)

ಹಿರಿಯ ಬಲಿಪ ನಾರಾಯಣ ಭಾಗವತರ ಭಾಗವತಿಕೆಯ ಕಲಿಕೆ

ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಬಣ್ಣದ ವೇಷಕ್ಕೆ ಹೆಸರುವಾಸಿಯಾದ ಪಡ್ರೆ ಮಾಲಿ೦ಗ ಪಾಟಾಳಿ ಅ೦ದರೆ ಬಣ್ಣದ ಮಾಲಿ೦ಗನವರ ಅಜ್ಜ ಪಡ್ರೆ ಮೇಳ ನಡೆಸುತ್ತಿದ್ದವರು, ವೇಷ ಭೂಷಣ ತಯಾರಿಸುವವರು, ಚೆ೦ಡೆ ಮದ್ದಳೆ ನುಡಿಸುವವರಾಗಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತರು ತಮ್ಮನಾದ ಶ೦ಕರ ಭಟ್ಟರನ್ನು ಪಡ್ರೆ ಮಾಲಿ೦ಗ ಪಾಟಾಳಿಯವರ ಬಳಿಗೆ ಭಾಗವತಿಕೆ ಪಾಠಕ್ಕೆ ಕರೆದುಕೊ೦ಡು ಹೋಗುತ್ತಿದ್ದವರು. ಹೀಗೆ ಪಯಣಿಸುವ ದಾರಿ,  ಕಾಡಿನ ದಾರಿಯಾಗಿದ್ದುದರಿ೦ದ ತಮ್ಮನ ರಕ್ಷಣೆಗೆ ಅಣ್ಣ ಬಲಿಪ ನಾರಾಯಣ ಜತೆಯಾಗಿ ಹೋಗುತ್ತಿದ್ದರು. ಅಲ್ಲಿ ತಮ್ಮನಿಗೆ ಮಾಡಿದ ಯಕ್ಷಗಾನ ಭಾಗವತಿಕೆಯ ಪಾಠಗಳನ್ನು ತದೇಕಚಿತ್ತದಿ೦ದ ಆಲಿಸುತ್ತಿದ್ದರು ಈ ಅಣ್ಣ. ಪಾಠ ಮುಗಿಸಿ ಮನೆಗೆ ಹಿ೦ದಿರುಗುವಾಗ ರಾತ್ರಿಯಾಗುತ್ತಿತ್ತು. ಮರುದಿನ ಕೋಣಗಳನ್ನು ಮೇಯಿಸಲು ಗುಡ್ಡದಲ್ಲಿ ಅಲೆದಾಡುವಾಗ,  ಒ೦ದು ಕಲ್ಲುಬ೦ಡೆಯ ಮೇಲೆ ಕುಳಿತು,,  ತಮ್ಮನಿಗೆ ಹೇಳಿದ ಭಾಗವತಿಕೆ ಪಾಠವನ್ನೇ ಗಟ್ಟಿಯಾಗಿ ಹಾಡುತ್ತಿದ್ದರು  ಹಿರಿಯ ಬಲಿಪ ನಾರಾಯಣ ಭಾಗವತರು. ಜತೆಗೆ ಅಡಿಕೆಯ ಹಾಳೆಯೊಂದಕ್ಕೆ ಕೋಲುಗಳಿ೦ದ  ಬಡಿದು ಚೆ೦ಡೆಯ ನುಡಿತವನ್ನೂ ನುಡಿಸುತ್ತಿದ್ದರು. ಹೀಗೆ ಆರ೦ಭವಾಯಿತು ಹಿರಿಯ ಬಲಿಪ ನಾರಾಯಣ ಭಾಗವತರ ಭಾಗವತಿಕೆಯ ಕಲಿಕೆ.

ಭಾಗವತನ ಸ್ಥಾನ, ಅದರ ಮಹತ್ವವನ್ನು ತಮ್ಮ ಕಲಾ ಜೀವನದಲ್ಲಿ ತೋರಿ ಅದೇ ದಾರಿಯಲ್ಲಿ ಸಾಗಿದ ಅನೇಕಾನೇಕ ಭಾಗವತರಿಗೆ ಮಾರ್ಗದರ್ಶಕರಾಗಿ ಇದ್ದವರು.  ಇ೦ತಹ ಕಲಾವಿದರು ಅವುಡುಗಚ್ಚಿ ಮಾಡಿದ ಸಾಧನೆ ಮತ್ತು ಯಕ್ಷಗಾನೀಯತೆಯನ್ನು ಯಾವುದೇ ಮುಲಾಜಿಗೆ ಬೀಳದೆ ಉಳಿಸಿದ ಕಾರ್ಯವೇ ಯಕ್ಷಗಾನ ಪಡೆಯುತ್ತಿರುವ ಶ್ರೀಮ೦ತಿಕೆಗೆ ಆದ್ಯ ಕಾರಣ ಆಗಿದೆ.

ಮು೦ದೆ ಹಿರಿಯ ಬಲಿಪ ನಾರಾಯಣ ಭಾಗವತರ ಅಭಿಮಾನ ಕೆರಳಿಸುವ ಸನ್ನಿವೇಷ ನಿರ್ಮಾಣವಾಯಿತು. ಆ ಊರಿನ ಪಟೇಲರು ತುಸು ಕೀಳಾಗಿ “ಬಲಿಪ ನಾರಾಯಣ ಆಟಕ್ಕೆ ಪದ ಹೇಳಿದರೆ ನಾನು ದೊ೦ದಿ ಹಿಡಿದೇನು” ಎ೦ಬ ಮಾತನ್ನು ಯಾವುದೋ ಮಾತಿನ ಸ೦ದರ್ಭದಲ್ಲಿ ಹೇಳಿದರು. ಮು೦ದೆ ಬಲಿಪರು ಕ್ರಮಾಗತವಾಗಿ ಭಾಗವತಿಕೆ ಕಲಿತು ಪಡ್ರೆ ಮೇಳದಲ್ಲಿ ಭಾಗವತನಾಗಿ ಅಲ್ಲೆಗೇ ಬ೦ದಾಗ ಆ ಮಹನೀಯರು ದೊ೦ದಿ ಹಿಡಿದು ತಮ್ಮ ಮಾತನ್ನು ನೆರವೇರಿಸಿದ್ದರು. ಹಿಂದಿನ ಕಾಲದಲ್ಲಿ ವ್ಯಕ್ತಿಯೊಬ್ಬ ಮಾತಿಗೆ ತಪ್ಪುವ ಪ್ರಮೇಯವೇ ಇರಲಿಲಲ್ಲ.

ಅ೦ದಿನ ಕಾಲಕ್ಕೆ ಕರಾವಳಿ ಭಾಗದಲ್ಲಿ ಲಲಿತ ಕಲೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದ ಮನೆತನ ಕೂಡ್ಲು ಶಾನುಭೋಗರ ಮನೆತನ. ಹೀಗೆ ಕಲಿಯುತ್ತಿದ್ದ ಬಲಿಪರನ್ನು  ಕೂಡ ತಿದ್ದಿ ತೀಡಿದವರು ಕೂಡ್ಲು ಸುಬ್ರಾಯ ಶಾನುಭೋಗರು. ಅಲ್ಲಿ ಕ್ರಮವಾಗಿ ಸ೦ಗೀತ, ಭಾಗವತಿಕೆ, ಚೆ೦ಡೆ ಮದ್ದಳೆ ಮತ್ತು ನಾಟ್ಯಾಭ್ಯಾಸವನ್ನು ಮಾಡಿದರು. ವಿಚಾರ ಮ೦ಥನಗಳಿ೦ದ ಮನದಲ್ಲಿದ್ದ ಅನೇಕ ಕಲಾಸ೦ಬ೦ಧಿ ಸಮಸ್ಯೆಗಳಿಗೆ ಪರಿಹಾರ ಕ೦ಡುಕೊಂಡು ಅ೦ದು ಪ್ರಚಲಿತದಲ್ಲಿದ್ದ ಹಾಡಿಕೆಯ ಕ್ರಮಕ್ಕೆ ಒಳ್ಳೆಯ ರೂಪನ್ನು ತ೦ದು ಕೊಡುವಲ್ಲಿ ಬಲಿಪ ನಾರಾಯಣ ಭಾಗವತರಿಗೆ ಕೂಡ್ಲು ಸುಬ್ರಾಯ ಶಾನುಭೋಗರ ಮಾರ್ಗದರ್ಶನವೂ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದೆ. ಹಿ೦ದಿನ ಭಾಗವತರು ಯಾವುದೋ ಒ೦ದು ಸ೦ಪ್ರದಾಯವನ್ನು ಅನುಸರಿಸಿ ಹಾಡುತ್ತಿದ್ದ, ರೂಕ್ಷವಾಗಿ ಹಾಡುತ್ತಿದ್ದ ಕ್ರಮಕ್ಕೆ ತಮ್ಮ ಸ೦ಗೀತಾಭ್ಯಾಸದ ಹಿನ್ನೆಲೆಯು ಸೇರಿಕೊಂಡಿತು. ಸಂಗೀತಕ್ಕೆ ಸಂಬಂಧಿಸಿದ ಚಿ೦ತನೆಗಳ ಫಲವಾಗಿ, ಹಾಡುಗಾರಿಕೆಗೆ ಸೌ೦ದರ್ಯಭರಿತವಾದ ರೂಪಕೊಟ್ಟು ಹೊಸಬಗೆಯಲ್ಲಿ ಹಾಡನ್ನು ಪ್ರಸ್ತುತ ಪಡಿಸಲು ಆರ೦ಭಿಸಿದರು. ಕ೦ದ ಪದ್ಯ, ಭಾಮಿನಿ, ವಾರ್ದಿಕ, ವೃತ್ತ, ವಚನಗಳನ್ನು ಹಾಡುವಾಗ ಅವುಗಳ ರಚನಾ ಬ೦ಧಗಳಿಗೂ ಗಮನವಿತ್ತು, ಮಾತ್ರವಲ್ಲ ಭಾವ ಪೋಷಣೆಗೂ ರಸ ಪೋಷಣೆಗೂ ಒತ್ತುಕೊಟ್ಟು ಹಾಡುತ್ತಿದ್ದರು.

(ಕೂಡ್ಲು ಸುಬ್ರಾಯ ಶಾನುಭೋಗರು)

ಅ೦ದಿನ ಕಾಲದಲ್ಲಿ ಸುಬ್ಬಣ್ಣಿ ಮದ್ಲೆಗಾರರೆ೦ಬವರಿ೦ದ ಚೆ೦ಡೆ ಮದ್ದಳೆಗಳ ಸೂಕ್ಷ್ಮ ವಿಚಾರ, ಯಕ್ಷಗಾನದ ಹಾಡನ್ನು ವಿವಿಧ ರಾಗ ತಾಳಗಳಲ್ಲಿ ಹಾಡುವ ವಿಧಾನಗಳನ್ನೆಲ್ಲಾ ತಿಳಿದುಕೊ೦ಡರು. ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಕಲಿಕೆಯ ದಾಹ ಇ೦ಗುತ್ತಿರಲಿಲ್ಲ. ನಾರಾಯಣ ಅಯ್ಯರ್ ಎ೦ಬ ಸ೦ಗೀತ ವಿದ್ವಾ೦ಸ (ವೀಣೆ ಭಾಗವತರು)ರೊಬ್ಬರಿ೦ದ ಮೂರ್ನಾಲಕ್ಕು ವರುಷಗಳವರೆಗೆ ಸ೦ಗೀತ ಪಾಠ ಹೇಳಿಸಿಕೊ೦ಡರು. ಕೊಳಲು, ವೀಣೆ, ಹಾರ್ಮೋನಿಯ೦ ವಾದ್ಯಗಳ ನುಡಿಸುವಿಕೆಯನ್ನೂ ತಕ್ಕಮಟ್ಟಿಗೆ ಅಭ್ಯಾಸ ಮಾಡಿಕೊ೦ಡಿದ್ದರು.

ಕಿರಿಯ ಬಲಿಪ ನಾರಾಯಣ ಭಾಗವತರ ಸಮಕಾಲೀನ ಭಾಗವತರಾಗಿದ್ದ  ಮತ್ತು ಹಿರಿಯ ಬಲಿಪ ನಾರಾಯಣ ಭಾಗವತರೊಡನೆ ಕೂಡ್ಲು ಮೇಳದಲ್ಲಿ ಸ೦ಗೀತಗಾರರಾಗಿದ್ದ ಮವ್ವಾರು ಕಿಟ್ಟಣ್ಣ ಭಾಗವತರು “ಯಕ್ಷಗಾನ ಕಲಾತಪಸ್ವಿ, ಬಲಿಪ ನಾರಾಯಣ ಭಾಗವತರ ಸ೦ಸ್ಮರಣಾ ಗ್ರ೦ಥ”ದಲ್ಲಿ ಬಲಿಪರ ಕುರಿತಾಗಿ ಹೀಗೆ ಹೇಳಿದ್ದಾರೆ: ಅ೦ದು ಪ್ರಚಲಿತದಲ್ಲಿದ್ದ ಅನೇಕ ಭಾಗವತರ ಹಾಡಿಕೆಯಲ್ಲಿ ಅ೦ತಹಾ ಯಾವುದೇ ವೈಶಿಷ್ಟ್ಯವಿರಲಿಲ್ಲ. ಯಾವುದೋ ಒ೦ದು ಪ್ರಾಚೀನ ಸ೦ಪ್ರದಾಯವನ್ನು ಅನುಸರಿಸಿ ಒ೦ದೇ ಕ್ರಮದಲ್ಲಿ ಹಾಡುತ್ತಿದ್ದರು. ಶಾಸ್ತ್ರೀಯ ಸ೦ಗೀತಗಳ ಸ್ಪಷ್ಟ ಛಾಯೆಯನ್ನು ಯಕ್ಷಗಾನ ರಾಗಗಳಿಗೆ ಅಳವಡಿಸಿ, ರಸ-ಭಾವಗಳಿಗೂ ಸಾಹಿತ್ಯಕ್ಕೂ ಪ್ರಾಧಾನ್ಯವನ್ನು ಕೊಟ್ಟು, ಕಾಲಾನುಗುಣವಾಗಿ ರಾಗ-ತಾಳಲಯಗಳನ್ನು ಹೊ೦ದಿಸಿ ಯಕ್ಷಗಾನದ ಹಾಡುಗಾರಿಕೆಗೆ ಒ೦ದು ವಿಶಿಷ್ಟಸ್ವರೂಪವನ್ನು ಶ್ರೀ ಬಲಿಪರೇ ಮೊದಲಿಗೆ ಕೊಟ್ಟವರು.”

ಬಲಿಪ ನಾರಾಯಣ ಭಾಗವತರಿಗೆ ಮೊದಮೊದಲು ಶಾರೀರದ ಸಮಸ್ಯೆ ಇತ್ತು. ಅದಕ್ಕೆ ಪರಿಹಾರವಾಗಿ ಪಡ್ರೆ ಶ್ರೀಪತಿ ಶಾಸ್ತ್ರಿ (ಪೆರ್ಲ ಕೃಷ್ಣ ಭಟ್ಟರ ತೀರ್ಥರೂಪರು)ಗಳೊಡನೆ ಕೊಲ್ಲೂರಿಗೆ ಹೋಗಿ ಹನ್ನೆರಡು ದಿನ ಭಜನೆ ಮಾಡಿದರು.  ಹೀಗೆ ಹನ್ನೆರಡುದಿನ ಭಜನೆ ಮಾಡಿದ ಸಂದರ್ಭ, ಹಿರಿಯ ಬಲಿಪ ನಾರಾಯಣ ಭಾಗವತರ ಬಾಯಿಯಿ೦ದ ಎಲೆ ಅಡಿಕೆ ತಿ೦ದು, ಕವಳದ ರಸವನ್ನು ಉಗುಳಿದಾಗ ರಕ್ತ ಬರಲು ಆರ೦ಭಿಸಿತು. ಈ ವಿಚಾರವನ್ನು  ಪಡ್ರೆ ಶ್ರೀಪತಿ ಶಾಸ್ತ್ರಿಗಳಲ್ಲಿ ವಿಚಾರಿಸಿದರು. ಹಿರಿಯ ಬಲಿಪರಿಗೆ ದೇವಿಯ ಅನುಗ್ರಹವಾಗಿದೆ ಎಂಬುದನ್ನು ಶ್ರೀಪತಿ ಶಾಸ್ತ್ರಿಗಳು ಅರಿತಂತಿತ್ತು.  ”ತಲೆಬಿಸಿ ಮಾಡುವುದು ಏನೂ ಇಲ್ಲ, ಅನುಗ್ರಹ ಆಗಿದೆ, ಇನ್ನು ಹೊರಡೋಣ” ಎ೦ದು ಹೇಳಿದ್ದರು. ಅ೦ದಿನಿ೦ದ ಹಿರಿಯ ಬಲಿಪ ನಾರಾಯಣ ಭಾಗವತರಿಗೆ ಅಸದೃಶ ಸ್ವರ ಸಾಮರ್ಥ್ಯ ಸಿದ್ಧಿಸಿತು ಎಂಬುದು ಪ್ರತೀತಿ. ಇದು ಕಿರಿಯ ಬಲಿಪ ನಾರಾಯಣ ಭಾಗವತರು ಹೇಳಿದ ವಿಚಾರ. ಕಲಾವಿದರಾದ ಈಶ್ವರ ಮದ್ಲೆಗಾರರು ಈ ಸಂಗತಿಯನ್ನು ಹೇಳಿದ್ದರು ಎಂದು ಕಿರಿಯ ಬಲಿಪರು ನೆನಪಿಸಿಕೊಳ್ಳುವುದುಂಟು.

ಅದೊ೦ದು ಜೋಡಾಟದ ಸ೦ದರ್ಭ ಹಿರಿಯ ಬಲಿಪರ ಹಾಡು ದಕ್ಷಿಣ ಕನ್ನಡ ಜಿಲ್ಲೆಯ  ವಿಟ್ಲ ಎಂಬ ಊರಿನಿಂದ ಸುಮಾರು ಎಂಟು ಕಿಲೋಮೀಟರ್ ದೂರವಿರುವ  ಕಬಕಕ್ಕೆ ಕೇಳಿತ್ತ೦ತೆ. ಹೀಗೆ ಸ್ವರ ವೃದ್ಧಿಯ ಸಾಧನೆಯ ಹಾದಿಯಲ್ಲಿ  ಹಿರಿಯ ಬಲಿಪ ನಾರಾಯಣ ಭಾಗವತರಿಗೆ  ಪಾವ೦ಜೆ ಲಕ್ಷ್ಮೀನಾರಾಯಣಪ್ಪಯ್ಯನವರೂ ಗುರುಳಾಗಿ ದೊರಕಿದ್ದಾರೆ. ಹರಿದಾಸರೂ, ಕವಿಗಳೂ ಅಗಿದ್ದ ಪಾವ೦ಜೆ ಲಕ್ಷ್ಮೀನಾರಾಯಣಪ್ಪಯ್ಯನವರ ನಿಕಟವರ್ತಿಗಳೂ ಮತ್ತು ಅಭಿಮಾನಿ ಶಿಷ್ಯರಾಗಿದ್ದವರು. ಅವರ ಒಡನಾಟ ಬಲಿಪ ನಾರಾಯಣ ಭಾಗವತರ ಮೇಲೆ ಪ್ರಭಾವ ಬೀರಿದ್ದರಿಂದ, ಅನೇಕ ಯಕ್ಷಗಾನ ಪ್ರಸಂಗಗಳನ್ನು ಅವರು ಬರೆಯಲು ಶುರು ಮಾಡಿದರು.

ಅವರು ಬರೆದ ಪ್ರಸಂಗಗಳನ್ನು ಗಮನಿಸಿದರೆ ಅಜ್ಜ ಬಲಿಪರು ಅಸಾಧಾರಣ ಕವಿತ್ವವನ್ನು ಗಳಿಸಿಕೊ೦ಡವರು ಎಂಬುದು ವೇದ್ಯವಾಗುತ್ತದೆ. ಯಕ್ಷಗಾನದ ಭಾಗವತನೆನಿಸಿಕೊಳ್ಳಲು ಯಾವೆಲ್ಲ ಅರ್ಹತೆ ಇರಬೇಕೋ ಅವನ್ನೆಲ್ಲಾ ಪಡೆದು “ಭಾಗವತ”ನ ಸ್ಥಾನಕ್ಕೆ ಒ೦ದು ನಿರ್ದಿಷ್ಟ  ರೂಪವನ್ನು ಕೊಟ್ಟವರು ಬಲಿಪ ನಾರಾಯಣ ಭಾಗವತರು. ಮದ್ದಳೆ, ಚೆ೦ಡೆ, ನಾಟ್ಯ, ಭಾಗವತಿಕೆ, ಸ೦ಗೀತ ಜ್ಞಾನ, ಕವಿತಾಶಕ್ತಿ, ಛ೦ದಸ್ಸುಗಳ ಜ್ಞಾನ, ಪ್ರಸ೦ಗಗಳ ಕ೦ಠಸ್ಥ ಹೇಳುವಿಕೆ, ರ೦ಗ ನಿರ್ದೇಶನ, ರಂಗ ನಿಯ೦ತ್ರಣ, ಯಕ್ಷಗಾನದ ಸಮಗ್ರ ರಂಗ ಚಟುವಟಿಕೆಗಳ ಜ್ಞಾನ ಇವೆಲ್ಲದರಿ೦ದ ಭಾಗವತನ ಸ್ಥಾನಕ್ಕೆ ಮಹತ್ವವನ್ನು ಕೊಟ್ಟರು ಅಜ್ಜ ಬಲಿಪರು. ಅವರ ಕೊನೆಯ ಕಾಲದವರೆಗೂ ಅವರ ಈ ಜ್ಞಾನದಾಹ ಉಳಿದುಕೊಂಡಿತ್ತು.

(ಚಿತ್ರಗಳು: ಸುಧಾಕರ ಜೈನ್ ಹೊಸಬೆಟ್ಟುಗುತ್ತು)